Monday, April 28, 2014

ಮತ್ತೆ ಕಾಣಸಿಗದ ಕನ್ನಡದ ಈ ಮಂದಹಾಸ

ರಾಜ್‌ಕುಮಾರ್‌
ಮೊನ್ನೆ 24ಕ್ಕೆ (ಹುಟ್ಟಿದ್ದು 24-4-1929) ಕನ್ನಡದ ರಾಜಕುಮಾರನಿಗೆ 85 ವರ್ಷಗಳು. ಕನ್ನಡಿಗರಿಗೆ ಇವತ್ತಿಗೂ ‘ತಮ್ಮವನೆಂಬುವ’ ಒಬ್ಬ ರಾಜನಿಲ್ಲ; ಇದ್ದರೆ ಅದು ಕನ್ನಡದ ಅಸ್ಮಿತೆಯನ್ನು ಹರಡಿದ ರಾಜಕುಮಾರನೊಬ್ಬನೇ. ಕನ್ನಡಿಗರ ಮೇಲೆ ರಾಜ್ ಬೀರಿರುವ ಪ್ರಭಾವ; ಆವರಿಸಿರುವ ಪರಿ ಅಂಕೆಗೂ, ಊಹೆಗೂ ಸಿಗಲಾರದ್ದು. ಕೆಲವು ವ್ಯಕ್ತ, ಇನ್ನು ಕೆಲವು ಅವ್ಯಕ್ತ.
ಹೀಗೆಂದ ಕೂಡಲೆ ನನ್ನ ಮನಸ್ಸು ನನ್ನೂರಿನ ನಲಿದಾಟದ ದಿನಗಳತ್ತ ಓಡುತ್ತದೆ. ನನ್ನೂರಿನ ಸಂತೆಮಾಳದ ಬಾಗಿಲಿಗೇ ಆತುಕೊಂಡಂತೆ ಒಂದು ಹೋಟೆಲ್- ಇಂದ್ರಾಭವನ್ ಅಂತಿತ್ತು. ಅದರ ಮಾಲೀಕರು ಶುಭ್ರ ಬಿಳಿ ಬಟ್ಟೆ ತೊಟ್ಟ ಶಿಸ್ತಿನ ವ್ಯಕ್ತಿ. ಆ ಹೋಟೆಲ್ ರುಚಿಗೆ, ಶಿಸ್ತುಬದ್ಧ ವ್ಯಾಪಾರಕ್ಕೆ ಹೇಳಿಮಾಡಿಸಿದಂತಿತ್ತು. ಅಂತಹ ಹೋಟೆಲ್‌ನಲ್ಲೊಬ್ಬ ಸಪ್ಲೈಯರ್ ಇದ್ದ- ಹೆಸರು ಮರೆತುಹೋಗಿದೆ ಕ್ಷಮಿಸಿ. ಅವನಿಗೆ ಆ ಕಾಲಕ್ಕೆ ಬರುತ್ತಿದ್ದ ಸಂಬಳ ತಿಂಗಳಿಗೆ 200 ರೂಪಾಯಿ ಇದ್ದಿರಬಹುದು. ಆತ ಅದಷ್ಟನ್ನೂ ರಾಜ್‌ಕುಮಾರ್‌ಗಾಗಿಯೇ ಮೀಸಲಿಟ್ಟಿದ್ದ. ಮೈ ಮನಗಳಲ್ಲಿ ರಾಜ್‌ರನ್ನು ತುಂಬಿಕೊಂಡಿದ್ದ; ರಾಜ್‌ಗೆ ಪ್ರಾಣ ಕೊಡಲೂ ಸಿದ್ಧನಿದ್ದ.
ಆತ ಬರುವ ಅಷ್ಟೂ ಸಂಬಳವನ್ನು ದಿನಪತ್ರಿಕೆಗಳು, ವಾರಪತ್ರಿಕೆಗಳು, ಕ್ಯಾಲೆಂಡರ್‌ಗಳು, ಸಿನಿಮಾ ಪುಸ್ತಕಗಳನ್ನು ಖರೀದಿಸಲು ವಿನಿಯೋಗಿಸುತ್ತಿದ್ದ. ಮತ್ತು ಬಿಡುವಿನ ವೇಳೆಯಲ್ಲಿ ರಾಜ್‌ಕುಮಾರ್ ಇರುವ ಭಾಗವನ್ನು ಅತ್ಯಂತ ಶ್ರದ್ಧೆಯಿಂದ ಕಟ್ ಮಾಡಿ, ಒಳಕೋಣೆಯಲ್ಲಿ, ಅವನು ಮಲಗುವ ಜಾಗದಲ್ಲಿ ಅಂಟಿಸುತ್ತಿದ್ದ. ಹೋಟೆಲ್ ಒಳಭಾಗ ಒಂದು ರೀತಿಯಲ್ಲಿ ತಾರಾಮಂಡಲದಂತಿತ್ತು.
ಒಂದು ದಿನ ಒಬ್ಬ ಸಪ್ಲೈಯರ್ ಈ ಅಭಿಮಾನಿಯನ್ನು ರೇಗಿಸಬೇಕೆಂದು, ಆತ ಕಟ್ ಮಾಡಿ ಅಂಟಿಸಿದ್ದ ರಾಜ್ ಕಟೌಟ್‌ಗೆ ತನ್ನ ಪೆನ್ನಿನಿಂದ ಮಾರ್ಕ್ ಮಾಡಿದ. ಅಷ್ಟೇ, ಅವನನ್ನು ಆತ ಹೇಗೆ ಹಣ್ಣುಗಾಯಿ ನೀರುಗಾಯಿ ಮಾಡಿದ್ದನೆಂದರೆ, ಮಾಲೀಕರು ಬಂದು ಬಿಡಿಸುವವರೆಗೂ ಬಿಟ್ಟಿರಲಿಲ್ಲ.
ಹೆಚ್ಚು ಮಾತನಾಡದ, ಮೌನಿಯಾದ, ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಆ ಸಪ್ಲೈಯರ್‌ಗೆ ಅಂದಿನಿಂದ ಯಾರೂ ತೊಂದರೆ ಕೊಡದಂತೆ ಮಾಲೀಕರೇ ಫತ್ವಾ ಹೊರಡಿಸಿಬಿಟ್ಟಿದ್ದರು. ಇದು ನಮ್ಮ ತಂಟೆಕೋರ ತಂಡಕ್ಕೆ ಆತನ ಸಹೋದ್ಯೋಗಿಗಳಿಂದ ಗೊತ್ತಾಯಿತು. ಒಂದು ದಿನ ಅವನ ಸ್ನೇಹ ಸಂಪಾದಿಸಿ, ಪುಸಲಾಯಿಸಿ, ಬಾಲಾಜಿ ಟೆಂಟಿಗೆ ಬಂದಿದ್ದ ‘ಜಗ ಮೆಚ್ಚಿದ ಮಗ’ ಚಿತ್ರಕ್ಕೆ ನಾವೇ ಟಿಕೆಟ್ ಹಾಕಿ ಕರೆದುಕೊಂಡು ಹೋದೆವು.
ಆ ಅಭಿಮಾನಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ನಾವು ಕಂಡಿದ್ದು- ರಾಜ್ ತೆರೆಯ ಮೇಲೆ ಅಭಿನಯಿಸುತ್ತಿದ್ದರೆ, ಈತ ಕೂತಲ್ಲಿಯೇ ಅದನ್ನೆಲ್ಲ ವ್ಯಕ್ತಪಡಿಸುತ್ತಿದ್ದ ಪರಿ ನಮ್ಮನ್ನು ದಿಗ್ಮೂಢರನ್ನಾಗಿಸಿತ್ತು. ಸೆಂಟಿಮೆಂಟ್ ಸೀನ್ ಬಂದಾಗ ಧಾರಾಕಾರವಾಗಿ ಅಳುವ, ಪ್ರಣಯದ ಸೀನ್‌ನಲ್ಲಿ ಮೈ ಮರೆತು ಕಣ್ಣು ಮುಚ್ಚಿಕೊಳ್ಳುವ, ಫೈಟಿಂಗ್ ಸೀನ್‌ನಲ್ಲಿ- ಇದಂತೂ ರೋಚಕ. ಕೂತಿದ್ದವನು ಎದ್ದು ನಿಂತೇಬಿಡುತ್ತಿದ್ದ. ದೇಹ ಅಕ್ಷರಶಃ ಕಬ್ಬಿಣ. ಈತನಿಂದ ಮಜಾ ತೆಗೆದುಕೊಳ್ಳಲಿಕ್ಕಾಗಿಯೇ ಕರೆದುಕೊಂಡುಬಂದಿದ್ದ ನಮ್ಮ ತಂಟೆಕೋರ ತಂಡದ ಸದಸ್ಯನೊಬ್ಬ, ಫೈಟಿಂಗ್ ಸೀನ್‌ನಲ್ಲಿ, ‘ಕೂತ್ಗಳಲೇ... ಕಂಡಿದಿನಿ...’ ಅಂದ. ಅಷ್ಟೇ, ತೆರೆಯ ಮೇಲಿಟ್ಟ ನೋಟವನ್ನು ಅಲುಗಾಡಿಸದೆ, ಆತನ ಕಡೆಗೆ ನೋಡದೆ, ಸೊಂಟದ ಮೇಲಿಟ್ಟ ಕೈನಿಂದ ಸುಮ್ಮನೆ ತಳ್ಳಿದ. ತಳ್ಳಿದ ರಭಸಕ್ಕೆ ಆತ ಅಷ್ಟು ದೂರ ಹೋಗಿ ಬಿದ್ದಿದ್ದ. ಕಬ್ಬಿಣದ ರುಚಿ ಉಂಡಿದ್ದ. ಅವತ್ತಿನಿಂದ ರಾಜ್ ಅಂದರೆ ಏನು ಎನ್ನುವುದು ಅರಿವಾಗತೊಡಗಿತ್ತು. ನಮಗೇ ಗೊತ್ತಿಲ್ಲದಂತೆ ಮನಸ್ಸು ರಾಜ್ ಪ್ರಭಾವಲಯ ಪ್ರವೇಶಿಸಿತ್ತು.

ಹಾಗೆ ಪ್ರಭಾವಿಸುವ ಗುಣ ರಾಜ್‌ರಲ್ಲಿತ್ತು. ಅವರು ನಿರ್ವಹಿಸಿದ ಪಾತ್ರಗಳಲ್ಲಿತ್ತು. ಆ ಪಾತ್ರಗಳು ನಮ್ಮವೇ ಎನ್ನುವಷ್ಟು ಆಪ್ತತೆಯಿತ್ತು. ಆ ಪಾತ್ರಗಳೇ ಅವರಾಗಿ ನಟಿಸುತ್ತಿದ್ದ ರೀತಿ ಕನ್ನಡಿಗರ ಮನ ಗೆದ್ದಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಬೆಳ್ಳಿತೆರೆಯ ಆಚೆಗೂ ಅವರ ವಿನಯವಂತಿಕೆ, ಸಜ್ಜನಿಕೆ, ಸೌಜನ್ಯಪೂರಿತ ನಡವಳಿಕೆ, ಬುದ್ಧಿವಂತಿಕೆ ಅವರನ್ನು ಮೇಲ್‌ಸ್ತರಕ್ಕೆ ಕೊಂಡೊಯ್ದಿತ್ತು. ಅದು ನಾಟಕೀಯತೆಯಲ್ಲ, ರೂಢಿಗತ ಬದುಕೇ ಆಗಿತ್ತು.
ಅವರಲ್ಲೊಂದು ವಿಶೇಷ ಗುಣವಿತ್ತು. ಸರಳವಾಗಿ ಬಿಳಿ ಪಂಚೆ, ಶರಟಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಯಾರಾದರೂ ಎದುರಾದರೆ, ಅದರಲ್ಲೂ ಮಹಿಳೆಯರು ಎದುರುಗೊಂಡರೆ, ಒಡಲಾಳದಿಂದ ಹೊಮ್ಮಿದ ಪೂಜ್ಯ ಭಾವನೆಯಿಂದ ಕೈ ಮುಗಿಯುತ್ತಿದ್ದರು. ಎದುರಿಗಿದ್ದವರು ಪರಿಚಿತರೋ, ಅವರು ಇವರನ್ನು ಗುರುತು ಹಿಡಿದಿದ್ದರೋ ಇಲ್ಲವೋ ಯಾವುದನ್ನೂ ರಾಜ್ ಗಮನಿಸುತ್ತಿರಲಿಲ್ಲ. ಆದರೆ ಕೈ ಮುಗಿಸಿಕೊಂಡವರು ಆಮೇಲೆ, ಕಳೆದುಹೋದ ಗಳಿಗೆಗಾಗಿ ಪರಿತಪಿಸುವಂತೆ, ತಮ್ಮ ಬದುಕಿನುದ್ದಕ್ಕೂ ಸ್ಮರಿಸಿಕೊಳ್ಳುತ್ತಿದ್ದರು. 
ರಾಜ್ ಚಿತ್ರರಂಗ ಪ್ರವೇಶಿಸಿದ್ದೇ ನಾಯಕನಟನಾಗಿ, ಮೊಟ್ಟ ಮೊದಲ ಚಿತ್ರದಲ್ಲಿಯೇ ರಾಜಕುಮಾರನಾಗಿ. ಎಚ್‌ಎಲ್‌ಎನ್ ಸಿಂಹರವರು ತಮ್ಮ ನಿರ್ದೇಶನದ ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ನಾಯಕನನ್ನು ಹುಡುಕುತ್ತಿದ್ದಾಗ ಸಿಕ್ಕ ಮುತ್ತುರಾಜ್‌ಗೆ ರಾಜಕುಮಾರ್ ಎಂದು ಹೆಸರಿಟ್ಟರು, ನಾಯಕನಟನನ್ನಾಗಿಸಿ ರಂಗಕ್ಕಿಳಿಸಿದರು. ಬೇಡರ ಕಣ್ಣಪ್ಪ ಚಿತ್ರದ ಪಾತ್ರ ರಾಜ್‌ರ ಅಭಿನಯ ಸಾಮರ್ಥ್ಯಕ್ಕೆ ಸವಾಲಿನಂತಿತ್ತು. ನವರಸಗಳನ್ನು ಅಭಿವ್ಯಕ್ತಿಸುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಕಲಾವಿದರಾಗಬೇಕೆನ್ನುವವರಿಗೆ ಇವತ್ತಿಗೂ ಆ ಪಾತ್ರ ಅಧ್ಯಯನಯೋಗ್ಯ.  
ಅಂದಿನಿಂದ ಇಂದಿನವರೆಗೆ, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಸಮಾಜದ ಎಲ್ಲ ಸ್ತರದ ಪಾತ್ರಗಳನ್ನೂ ನಿರ್ವಹಿಸಿ, ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಂತ ಸಾರ್ವಕಾಲಿಕ ನಾಯಕ. ಬೇಡರ ಕಣ್ಣಪ್ಪನ ರಾಜಸುಲೋಚನರಿಂದ ಹಿಡಿದು ಹಾವಿನ ಹೆಡೆಯ ಸುಲಕ್ಷಣ ರವರೆಗೆ, ಸುಮಾರು ನಲವತ್ಮೂರು ನಾಯಕಿಯರೊಂದಿಗೆ ಕುಣಿದು ಕುಪ್ಪಳಿಸಿದ ಇತಿಹಾಸಪುರುಷ. ದಶಕಗಟ್ಟಲೆ ಸ್ಟಾರ್ ಹಾದಿ ಸವೆಸಿ, ಕನ್ನಡಿಗರ ಮನದಲ್ಲಿ ರಾಜನಾಗಿ, ನಿಜನಾಯಕನಾಗಿ, ದಂತಕತೆಯಾಗಿ ಅಚ್ಚಳಿಯದೆ ಉಳಿದು, ಕನ್ನಡವೆಂದರೆ ರಾಜ್ ಎನ್ನುವಂತಾಗಿದ್ದೇ ಒಂದು ಅದ್ಭುತ ಕಥಾನಕ.
ರಾಜ್ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರಲ್ಲ, ಶಾಲೆಗೆ ಹೋದವರಲ್ಲ, ಓದು-ಬರಹ ಕಲಿತವರಲ್ಲ. ಬದುಕಿನಲ್ಲಿ ಕಂಡುಂಡ ಅನುಭವಗಳನ್ನೇ ಪಠ್ಯವನ್ನಾಗಿಸಿಕೊಂಡವರು. ನಾನು ಎಲ್ಲರಿಗಿಂತ ಚಿಕ್ಕವನು, ಕಲಿಯುವುದು ಇನ್ನೂ ಇದೆ ಎಂಬ ಸಜ್ಜನಿಕೆಯನ್ನು ಕಡೆಯವರೆಗೂ ಕಾಪಾಡಿಕೊಂಡು ಬಂದವರು. ಕೋಟಿಗಟ್ಟಲೆ ವ್ಯವಹಾರದ ಕನ್ನಡ ಚಿತ್ರೋದ್ಯಮದ ಹಣೆಬರಹವನ್ನೇ ಬದಲಿಸಿದವರು. ಕನ್ನಡ ಚಿತ್ರರಂಗದ ಅಂಬರದಲ್ಲಿ ಧ್ರುವತಾರೆಯಂತೆ ಬೆಳಗಿದವರು.
ಸಹಜವಾಗಿಯೇ ರಾಜ್‌ಗೆ ನಾಡಿನಾದ್ಯಂತ ಅಭಿಮಾನಿಗಳಿದ್ದರು. ರಾಜ್ ತಮ್ಮ ಅಭಿಮಾನಿಗಳನ್ನು ದೇವರಿಗೆ ಹೋಲಿಸುತ್ತಿದ್ದರು. ಸಾಮಾನ್ಯ ಅಭಿಮಾನಿ ಮತ್ತು ರಾಜ್ ನಡುವೆ ಇಂತಹ ಒಂದು ಭಾವನಾತ್ಮಕ ಸಂಬಂಧ ಅಂತರಗಂಗೆಯಂತೆ ಹರಿಯುತ್ತಲೇ ಇತ್ತು. ಕೊನೆ ಕೊನೆಗೆ ಅಭಿಮಾನಿಗಳಿಗಾಗಿ, ಇಮೇಜಿಗಾಗಿ ಚಿತ್ರಗಳನ್ನು ಮಾಡುವತ್ತ ಗಮನ ಹರಿಸಿ, ವೃತ್ತಿಬದುಕಿನಲ್ಲಿ ಏರಿಳಿತಗಳನ್ನೂ ಅನುಭವಿಸಿದರು. ಅದೇ ಸಮಯಕ್ಕೆ ಸರಿಯಾಗಿ ರಾಜ್ ಸುತ್ತ ಇದ್ದ ಕೆಲ ಸ್ವಾರ್ಥಿಗಳು, ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿಮಾನಿ ಸಂಘವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು. ಆ ನಂತರ ಆ ಸಂಘ ರಾಜ್‌ರ ಹಿಡಿತಕ್ಕೆ ಸಿಗದಿದ್ದುದು, ಇತರೆ ಸಂಘ ಸಂಸ್ಥೆಗಳಂತೆ ಹಾದಿ ತಪ್ಪಿದ್ದು, ಕೆಟ್ಟ ಹೆಸರು ತಂದಿದ್ದು, ರಾಜ್ ಮೌನ ವಹಿಸಿದ್ದು... ಸುದ್ದಿ ಮಾಧ್ಯಮಗಳಿಗೆ ಸುಗ್ರಾಸ ಭೋಜನವನ್ನೊದಗಿಸಿತು.

ನಟನೆಯಿಂದ ಪ್ರೇಕ್ಷಕರ ಮನಗೆದ್ದ, ಕನ್ನಡಪರ ಹೋರಾಟದಿಂದ ಬುದ್ಧಿಜೀವಿಗಳ ಪ್ರಶಂಸೆಗೆ ಪಾತ್ರರಾದ ರಾಜ್, ತಮಗೆ ಅನಗತ್ಯವಾಗಿ ಅಂಟಿಕೊಂಡ ಅಪವಾದಗಳಿಗೆ ಉತ್ತರ ಕೊಟ್ಟಿದ್ದು ನಟನೆಯಿಂದಲೂ ಅಲ್ಲ, ಹೋರಾಟದಿಂದಲೂ ಅಲ್ಲ; ಸಹಜ ಮೌನದಿಂದ. ಅಂತಹ ಚೇತನ ಇವತ್ತು ಕನ್ನಡದ ಸಂಕೇತ. ನಮ್ಮ ನಡುವೆಯೇ ಇದ್ದು ಇಲ್ಲದಾದ ನಕ್ಷತ್ರ.

Saturday, April 19, 2014

ಈ ನೆಲದ, ನನ್ನ ಜನರ ಘನತೆಯನ್ನು ಉಳಿಸುವ ಸಲುವಾಗಿ ಕಣಕ್ಕಿಳಿದಿದ್ದೇನೆ: ಕೋಟಿಗಾನಹಳ್ಳಿ ರಾಮಯ್ಯ

ಕೋಟಿಗಾನಹಳ್ಳಿ ರಾಮಯ್ಯ
ಮಾಜಿ ಬ್ಯಾಂಕ್ ಉದ್ಯೋಗಿ, ಪತ್ರಕರ್ತ, ಕವಿ, ನಾಟಕಕಾರ, ಹೋರಾಟಗಾರ ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ತಲೆಗೆ ಟೋಪಿ ಹಾಕಿಕೊಂಡು, ಕೈಯಲ್ಲಿ ಪೊರಕೆ ಹಿಡಿದುಕೊಂಡು, ಒಂದಷ್ಟು ಯುವಕ-ಯುವತಿಯರನ್ನು ಕಟ್ಟಿಕೊಂಡು ಮತ ಯಾಚಿಸುತ್ತಿದ್ದಾರೆ. ಕೆಲವು ಚಲನಚಿತ್ರಗಳಿಗೆ, ಟಿವಿ ಧಾರಾವಾಹಿಗಳಿಗೆ ಸಂಭಾಷಣೆ ಮತ್ತು ಗೀತರಚನೆಕಾರರಾಗಿಯೂ ದುಡಿದಿರುವ ರಾಮಯ್ಯ, ಸದ್ಯಕ್ಕೆ ಕೋಲಾರದ ಹತ್ತಿರದ ಅಂತರಗಂಗೆ ಬೆಟ್ಟದಲ್ಲಿ ನೆಲಮೂಲ ಸಂಸ್ಕೃತಿಯನ್ನು ಸಾರುವ ‘ಆದಿಮ’ ಸಂಸ್ಥೆ ಕಟ್ಟಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಆ ಮೂಲಕ ದೇಸಿ ಸಂಸ್ಕೃತಿಯನ್ನು ಉಳಿಸುವ ವಿಸ್ತರಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ‘ಈ ನೆಲದ, ನನ್ನ ಜನರ ಘನತೆಯನ್ನು ಉಳಿಸುವ ಸಲುವಾಗಿ ಈ ಚುನಾವಣಾ ರಾಜಕಾರಣಕ್ಕೆ ಇಳಿದಿದ್ದೇನೆ’ ಎನ್ನುವ ರಾಮಯ್ಯ, ಆಪ್ ಪಕ್ಷದ ಕೇಜ್ರಿವಾಲರನ್ನು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಹೋಲಿಸಿದ್ದಾರೆ. ಹಾಗೆಯೇ ಮೋದಿಯನ್ನು ಕಾರ್ಪೋರೇಟ್ ಮತ್ತು ಮಾಧ್ಯಮ ವಲಯದ ಸೃಷ್ಟಿ ಎಂದಿದ್ದಾರೆ. ಇಂತಹ ಅಪರೂಪದ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯನವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
* ನೀವು ದಲಿತ ಹೋರಾಟಗಾರರಾಗಿ, ಚಿಂತಕರಾಗಿ ಗುರುತಿಸಿಕೊಂಡವರು, ಎಪಿಪಿಯನ್ನು ಆಯ್ಕೆ ಮಾಡಿಕೊಂಡಿದ್ದೇಕೆ?
ರಾಮಯ್ಯ: ಎಪಿಪಿ ನಮ್ಮ ದೇಶದ ಹೊಸ ಆಶಾವಾದ. ಇದು ಭ್ರಷ್ಟಾಚಾರವಿರೋದಿ, ಮತಾಂಧತೆಯ ವಿರೋಧಿ ಹಾಗೂ ಜಾತಿ ಪದ್ಧತಿ ವಿರೋಧಿಯಾಗಿದೆ. ಇದು ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯನ್ನು ಪ್ರೇರೇಪಿಸುತ್ತಿದೆ. ನನ್ನನ್ನು ಅರವಿಂದ್ ಕೇಜ್ರಿವಾಲ್ ಅಪಾರವಾಗಿ ಪ್ರಭಾವಿಸಿದ್ದಾರೆ. ನನಗೆ ಅವರು ಲಾಲ್ ಬಹದ್ದೂರ್ ಶಾಸ್ತ್ರಿಯಂತೆ ಕಾಣುತ್ತಿದ್ದಾರೆ. ಕೇಜ್ರಿವಾಲ್ ರಾಹುಲ್ ಗಾಂಧಿಯಂತಲ್ಲ. ಅವರಂತೆ ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ನಮ್ಮ ನಿಮ್ಮಂತೆ ಶ್ರೀಸಾಮಾನ್ಯರು. ಅಂಥವರೆ ನಮಗೆ ಇವತ್ತು ಬೇಕಾಗಿರುವುದು. 
* ಕಾನ್ಶಿರಾಂ ಕಟ್ಟಿದ ಬಿಎಸ್‌ಪಿ ಇತ್ತಲ್ಲ?
ರಾಮಯ್ಯ: ಅಂಬೇಡ್ಕರ್ ಒಂದು ತಾತ್ವಿಕತೆಯನ್ನು ನೀಡಿದರು. ಅದು ಸ್ವಾತಂತ್ರ್ಯದತ್ತ ತುಡಿಯುವ ತಾತ್ವಿಕ ಸಿದ್ಧಾಂತವಾಗಿತ್ತು. ಇದು ಬಹಳ ಮುಖ್ಯವಾದದ್ದು. ಆ ಪಕ್ಷ ತಾತ್ವಿಕ ವಿಸ್ತರಣೆಯತ್ತ ಚಿಂತಿಸುವುದಿಲ್ಲ.
* ನಾಟಕ, ಸಂಸ್ಕೃತಿ ಅಂತಿದ್ದವರು, ಈ ಚುನಾವಣಾ ರಾಜಕಾರಣಕ್ಕೆ ಇಳಿಯಲು ಪ್ರೇರಣೆ ಏನು?
ರಾಮಯ್ಯ: ಹೊಸ ಪರಿಭಾಷೆಯೊಂದರ ಅನ್ವೇಷಣೆಗಾಗಿ, ವ್ಯಕ್ತಿ ಘನತೆ ಮತ್ತು ನೆಲದ ಘನತೆ ಮುಖ್ಯವಾದದ್ದು. ಇವು ಸಮಾನತೆಯ ನೆಲೆಗಟ್ಟುಗಳು. ಇವು ಅಪಮಾನಿಸಲ್ಪಟ್ಟಲ್ಲಿ ಬಾಯಿ ಮುಚ್ಚಿಕೊಂಡು ಸುಮ್ಮನಿರಲಾಗದು. ಎಲ್ಲಾ ಪಕ್ಷಗಳೂ ಜನರನ್ನು ಆತ್ಮವಂಚಕ ಸ್ಥಿತಿಯತ್ತ ತಳ್ಳುವತ್ತ ಕಾರ್ಯನಿರತವಾಗಿವೆ. ಇದು ಅನೈತಿಕ ಮತ್ತು ಸಂವಿಧಾನಬಾಹಿರ. ಗುಜರಾತಿನ ಪಾನನಿಷೇಧ ಸಹ ಅನೈತಿಕ. ಇದು ಚಿತ್ತಸ್ವಾಸ್ಥವಿರುವ ಜನ ಮಾಡುವ ಕೆಲಸವಲ್ಲ. ಇದು ಅಸಹ್ಯ. ಇದು ಮುಂದಿನ ಪೀಳಿಗೆಯನ್ನು ಭಯಾನಕಗೊಳಿಸುತ್ತದೆ. ಮತ್ತು ಪ್ರತಿಗಾಮಿಗಳನ್ನಾಗಿಸುತ್ತದೆ. ಕರ್ನಾಟಕದಲ್ಲಿ ಒಂದೆಡೆ ಒಂದು ರೂಪಾಯಿಗೆ ಕೇಜಿ ಅಕ್ಕಿ ಕೊಡುತ್ತಾ ಮತ್ತೊಂದೆಡೆ ಮದ್ಯದ ಬೆಲೆಯನ್ನು ಏರಿಸಿರುವುದು ಒಂದು ಅನೈತಿಕ ಪಿತೂರಿ. ನಮ್ಮದು ಬಹು ಸ್ತರಗಳ ದೇಶ. ನನ್ನ ಪ್ರಕಾರ ದೇಶದ ಊಳಿಗಮಾನ್ಯ ಭಗ್ನಾವಶೇಷಗಳ ವಿರುದ್ಧ ಹೋರಾಡುವ ಸ್ಥಿರತೆಯನ್ನು ತಳಮಟ್ಟದಿಂದಲೇ ಕಟ್ಟಬೇಕಿದೆ.
* ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಇದೆಯೇ?
ರಾಮಯ್ಯ: ಇಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಮೋದಿ ಕಾರ್ಪೊರೇಟ್ ರಾಜಕಾರಣಿ ಮತ್ತು ಮಾಧ್ಯಮಗಳಿಂದ ನಿರ್ವಹಿಸಲ್ಪಡುತ್ತಿರುವ ವ್ಯಕ್ತಿ ಮಾತ್ರ. ಅವರು ಇದಕ್ಕಿಂತ ಹೆಚ್ಚೇನೂ ಅಲ್ಲ.
* ನಿಮ್ಮ ಎದುರಾಳಿ ಮುನಿಯಪ್ಪ, ಆರು ಬಾರಿ ಗೆದ್ದವರು, ಅವರನ್ನು ಹೇಗೆ ಎದುರಿಸುತ್ತೀರಾ?
ರಾಮಯ್ಯ: ಕೋಲಾರದಲ್ಲಿ ನೀರಿನದೇ ದೊಡ್ಡ ಸಮಸ್ಯೆ. ಈ ಜಿಲ್ಲೆಯಲ್ಲಿ ಒಂದೇ ಒಂದು ಉನ್ನತ ಗುಣಮಟ್ಟದ ಶಿಕ್ಷಣ ಸಂಸ್ಥೆ ಇಲ್ಲ. ಹೀಗಿದ್ದಾಗ ನೀವು ಬೌದ್ಧಿಕವಾಗಿ ಬೆಳೆಯಲು ಹೇಗೆ ಸಾಧ್ಯ? ಮುನಿಯಪ್ಪ ಕಳೆದ 23 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ. ಈತ ಸಹಕಾರಿ ಕೃಷಿಯನ್ನು ಉತ್ತೇಜಿಸಲಿಲ್ಲ, ಸುಸ್ಥಿರ ಆರ್ಥಿಕತೆಯ ಬಗ್ಗೆ ಗಮನ ಕೊಡಲಿಲ್ಲ. ಎಷ್ಟು ದಿನಾ ಅಂತ ಜನರನ್ನು ವಂಚಿಸುತ್ತಾ ಹೋಗುವುದು? ಈ ಬಾರಿ ಸಾಧ್ಯವಿಲ್ಲ. ಅವರಿಗೆ ಸೋಲು ಖಚಿತ.
 * ನಿಮ್ಮ ಚುನಾವಣಾ ಪ್ರಚಾರ ಮತ್ತು ಜನರನ್ನು ತಲುಪುವ ಬಗೆ ಹೇಗೆ?
ರಾಮಯ್ಯ: ನಾನು ಶೂನ್ಯದಿಂದ ಎದ್ದು ಬಂದವನು. ನನ್ನ ಬಳಿ ಹಣವಿಲ್ಲ. ಆದರೆ ಜನರ ಸುಪ್ತ ಪ್ರಜ್ಞೆಯನ್ನು ಮುಟ್ಟುವುದು ತಿಳಿದಿದೆ. ನಾನು ಈಗಾಗಲೇ ಪುರಾಣದಂತೆ ಅವರನ್ನು ತಲುಪಿದ್ದೇನೆ. ನಾನು ಅವರಿಗೆ ಗೊತ್ತು. ಕಳೆದ ನಲವತ್ತು ವರ್ಷಗಳಿಂದ ಅವರೊಂದಿಗಿದ್ದೇನೆ. ನಾನು ನನಗೆ ಗೊತ್ತಿರುವ ಹಾಡು, ಸಂಗೀತ, ನೃತ್ಯ, ನಾಟಕಗಳ ಮೂಲಕ ಜನರನ್ನು ತಲುಪುತ್ತೇನೆ. ನಾನು ಓಟು ಕೇಳುವುದಿಲ್ಲ. ಬದಲಾಗಿ ಅವರನ್ನು ಜಾಗೃತಗೊಳಿಸುತ್ತೇನೆ. ಅವರ ಆತ್ಮವನ್ನು ಮುಟ್ಟುತ್ತೇನೆ.
* ಕಣದಲ್ಲಿರುವವರ ಪೈಕಿ ಯಾರು ನಿಮ್ಮ ನಿಜವಾದ ಪ್ರತಿಸ್ಪರ್ಧಿ?
ರಾಮಯ್ಯ: ಎದುರಾಳಿಗಳಾದವರಿಗೆ ಹೋರಾಡುವ ಘನತೆ ಇರಬೇಕಾಗುತ್ತದೆ. ನನ್ನ ಎದುರಿಗೆ ನಿಂತಿರುವವರೆಲ್ಲಾ ಅನೈತಿಕ ಹಾಗೂ ವಿರೂಪಿ ಪ್ರತಿಸ್ಫರ್ಧಿಗಳು.
* ಇವತ್ತಿನ ಸಂದರ್ಭದಲ್ಲಿ ಬದಲಾವಣೆ, ಕ್ರಾಂತಿ ಸಾಧ್ಯವೆ?
ರಾಮಯ್ಯ: ನಾನು ಇಲ್ಲಿಯೇ ಬೇರು ಬಿಟ್ಟವನು. ಈ ನೆಲದ ಘಮಲು ನನಗೆ ಗೊತ್ತಿದೆ. ಬದಲಾವಣೆ, ಕ್ರಾಂತಿ ಅಂತೆಲ್ಲ ಮಾತನಾಡಲ್ಲ, ಮಾಡಿ ತೋರಿಸುತ್ತೇನೆ.
(ವಾರ್ತಾ ಭಾರತಿ, ಏಪ್ರಿಲ್ 16ರಲ್ಲಿ ಪ್ರಕಟಿತ)

Monday, April 7, 2014

ಬಿಸಿಲು ಕೋಲಿನ ಮಾಂತ್ರಿಕ ವಿ.ಕೆ. ಮೂರ್ತಿ

ವಿ.ಕೆ. ಮೂರ್ತಿ
ಸರಿಸುಮಾರು ಎರಡು ತಿಂಗಳ ಹಿಂದೆ, ಹಿಂದಿ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ನಿರ್ಮಾಪಕ ಗುರುದತ್ ಗುಂಗಿ ಹುಳದಂತೆ ಕಾಡತೊಡಗಿದ್ದರು. ಅವರ ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಂ, ಕಾಗಜ್ ಕೇ ಫೂಲ್... ಇನ್ನು ಮುಂತಾದ ಚಿತ್ರಗಳನ್ನು ಮತ್ತೆ ನೋಡಬೇಕೆನಿಸಿತು. ಹುಡುಕಿ ತಂದಿಟ್ಟುಕೊಂಡು ನೋಡಲು ಕೂತೆ. ಆ ಕಾಲಕ್ಕೇ ಮೊಟ್ಟ ಮೊದಲ ಬಾರಿಗೆ ಸಿನಿಮಾಸ್ಕೋಪ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕಾಗಜ್ ಕೇ ಫೂಲ್’ ಚಿತವನ್ನು ನೋಡಿ ಮುಗಿಸುವಷ್ಟರಲ್ಲಿ ಮನಸ್ಸು ‘ವಕ್ತ್ ನೇ ಕಿಯಾ...’ ಹಾಡಿನಲ್ಲಿ ನೆಲೆ ನಿಂತಿತ್ತು. ಆ ಹಾಡಿನ ಉದ್ದಕ್ಕೂ ಬಂದುಹೋಗುವ ಕ್ಯಾಮರಾಮನ್ ವಿ.ಕೆ. ಮೂರ್ತಿಯವರ ಅದ್ಭುತ ಸೃಷ್ಟಿಯಾದ ಬಿಸಿಲು ಕೋಲು ಇನ್ನಿಲ್ಲದಂತೆ ಕಾಡತೊಡಗಿತು. ಗುರುದತ್‌ರ ಖಾಸಾ ದೋಸ್ತ್ ಆಗಿದ್ದ, ಅವರ ಚಿತ್ರಗಳ ಖಾಯಂ ಕ್ಯಾಮರಾಮನ್ ಆಗಿದ್ದ ಕನ್ನಡಿಗ ವಿ.ಕೆ. ಮೂರ್ತಿಯವರನ್ನು ನೋಡಬೇಕೆನಿಸಿತು. ಬೆಂಗಳೂರಿನಲ್ಲಿಯೇ ನೆಲೆಸಿದ್ದರಿಂದ ಅದು ಇನ್ನಷ್ಟು ಹೆಚ್ಚಾಗಿ ಕಾಡತೊಡಗಿತು.  
ವಿ.ಕೆ. ಮೂರ್ತಿ ಅಂದಾಕ್ಷಣ ನೆನಪಾಗಿದ್ದು ಉಮಾ ರಾವ್. ಮೂರ್ತಿಯವರನ್ನು ಮೊದಲು ಸಂದರ್ಶಿಸಿದ, ಲೋಕಕ್ಕೆ ಪರಿಚಯಿಸಿದ, ಅವರ ಬಗ್ಗೆ 2005 ರಲ್ಲಿ ‘ಬಿಸಿಲು ಕೋಲು’ ಎಂಬ ಪುಸ್ತಕ ಬರೆದು ಖ್ಯಾತಿ ಗಳಿಸಿದ  ಉಮಾ ರಾವ್, ಅವರಿಗೇ ಗೊತ್ತಿಲ್ಲದಂತೆ ಮೂರ್ತಿಯವರ ಬಗ್ಗೆ ಪೇಟೆಂಟ್ ಪಡೆದುಕೊಂಡವರು.
‘ಮೇಡಂ, ಮೂರ್ತಿಯವರನ್ನು ನೋಡಬೇಕಲ್ಲ, ಭೇಟಿ ಮಾಡುವುದು ಹೇಗೆ?’ ಫೋನ್ ಮಾಡಿ ಕೇಳಿದೆ.
‘ಇನ್‌ಫ್ಯಾಕ್ಟ್... ನಾನೂ ನೋಡಿ ತುಂಬಾ ದಿನಾನೇ ಆಯ್ತು ಬಸುರಾಜ್, ಫೋನ್ ಮಾಡಿ ಕನ್‌ಫರ್ಮ್ ಮಾಡಿಕೊಂಡು ನಿಮಗೆ ತಿಳಿಸುತ್ತೇನೆ’ ಎಂದವರು, ಸ್ವಲ್ಪ ಹೊತ್ತಿನ ನಂತರ, ‘ಬಸುರಾಜ್, ನಾಳೆ ಸಂಜೆ ನಾಲ್ಕೂವರೆಗೆ ಫ್ರೀಯಾಗಿರ್ತಾರಂತೆ, ನಾನೂ ಬರ್ತೇನೆ, ಬನ್ನಿ ಹೋಗಿಬರೋಣ’ ಎಂದರು.
ಉಮಾ ರಾವ್‌ಗಿಂತ ಮುಂಚೆಯೇ ಅವರ ಬೆಂಗಳೂರಿನ ಶಂಕರಪುರಂನಲ್ಲಿರುವ ‘ಪಂಡಿತ್ ಹೌಸ್’ ತಲುಪಿದ ನಾನು, ಮನೆ ಮುಂದಿನ ವರಾಂಡದಲ್ಲಿ ಕುರ್ಚಿ ಹಾಕಿಕೊಂಡು ಒಬ್ಬರೇ ಕೂತಿದ್ದ ಮೂರ್ತಿಯವರನ್ನು ನೋಡಿ ನಮಸ್ಕರಿಸಿದೆ. ಉಮಾ ರಾವ್ ಮೊದಲೇ ತಿಳಿಸಿದ್ದರಿಂದ, ‘ಉಮಾ ಬಂದ್ರಾ, ಬನ್ನಿ, ಇಫ್ ಯೂ ಡೋಂಟ್ ಮೈಂಡ್.. ಒಳಗಿನಿಂದ ಒಂದು ಕುರ್ಚಿ ತಂದು  ಕೂತ್ಕೊಳಿ’ ಎಂದರು.
ಮೂರ್ತಿಯವರಿದ್ದದ್ದೆ ಸಣ್ಣಗೆ. ಈಗ ಇನ್ನಷ್ಟು ವಯಸ್ಸಾಗಿ ಕೃಶಗೊಂಡಿದ್ದರು, ಮಗುವಿನಂತಾಗಿದ್ದರು. ಆದರೆ ಮುಖದಲ್ಲಿ ಲವಲವಿಕೆಯಿತ್ತು. ಆರೋಗ್ಯವಾಗಿದ್ದರು. ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡಿದ್ದರು. ಅವರ ಪಕ್ಕಕ್ಕೆ ಕುರ್ಚಿ ಹಾಕಿಕೊಂಡು ಕೂತು ಪರಿಚಯ ಹೇಳಿಕೊಂಡೆ. ಮೂರ್ತಿಯವರು, ‘ನಿಮಗೆ ಗುರುದತ್ ಗೊತ್ತಾ?’ ಎಂದರು. ಗುರುದತ್, ಅವರ ಚಿತ್ರಗಳು, ಮೂರ್ತಿಯವರ ವಕ್ತ್ ನೇ ಕಿಯಾ ಹಾಡಿನ ಅದ್ಭುತ ಲೈಟಿಂಗ್... ಎಲ್ಲವನ್ನು ಹೇಳಿದ ಮೇಲೆ, ‘ಪರವಾಗಿಲ್ಲ, ಸಿನಿಮಾ ಬಗ್ಗೆ ಸ್ವಲ್ಪ ತಿಳಕೊಂಡಿದ್ದೀರಾ’ ಎಂದರು.
ಮುಂದುವರೆದು, ‘ಸಾರ್, ವಕ್ತ್ ನೇ ಕಿಯಾ ಹಾಡಿನ ಲೈಟಿಂಗ್ ಮಾಡಿದ್ದು ಹೇಗೆ?’ ಎಂದೆ.
‘ಅದೊಂದು ದೊಡ್ಡ ಕತೆ. ಕಾಗಜ್ ಕೇ ಫೂಲ್ ಚಿತ್ರದ ಶೂಟಿಂಗ್ ನಡೀತಿತ್ತು. ಅದೊಂದು ಹಳೇ ಸ್ಟುಡಿಯೋ. ಒಂದು ದಿನ ಮಧ್ಯಾಹ್ನ ಊಟದ ಬಿಡುವಿನಲ್ಲಿ ಎಲ್ಲರೂ ಕೂತು ಹರಟುತ್ತಿದ್ದೆವು. ನನ್ನ ಪಕ್ಕದಲ್ಲಿ ಕೂತಿದ್ದ ಚಿತ್ರದ ನಟ, ನಿರ್ದೇಶಕ ಗುರುದತ್, ಹೆಂಚಿನ ಸಂದಿನಿಂದ ಸೂರ್ಯನ ಕಿರಣಗಳು ನಾವು ಕೂತಿದ್ದ ಜಾಗಕ್ಕೆ ಬೀಳುತ್ತಿದ್ದುದನ್ನು ತೋರಿಸಿ, ‘ನನಗೆ  ಈ ರೀತಿ ಲೈಟಿಂಗ್ ಬೇಕು, ಏನ್ಮಾಡ್ತಿರೋ ಗೊತ್ತಿಲ್ಲ’ ಎಂದು ಹೇಳಿ, ಎದ್ದು ಹೋಗಿಯೇಬಿಟ್ಟ. ಗುರು ಏನೋ ಹೇಳಿದ, ಮಾಡುವುದು ಹೇಗೆ. ಮಾಡಬೇಕೆಂದರೆ ಸೂರ್ಯನ ಬೆಳಕಿರಬೇಕು. ಸೂರ್ಯನನ್ನು ಒಂದೇ ಕಡೆ ನಿಲ್ಲಿಸಲಾಗುತ್ತದೆಯೇ, ಆ ಲೈಟು ಒಂದೇ ರೀತಿ ಇರುತ್ತದಾ? ಹಾಗೆ ಕೂತು ಯೋಚಿಸುತ್ತಿರುವಾಗ, ಸೆಟ್ ಹುಡುಗನೊಬ್ಬ ನಿಲುವುಗನ್ನಡಿಯೊಂದನ್ನು ಹಿಡಿದುಕೊಂಡು ಹೋಗುತ್ತಿದ್ದ. ಆ ಕನ್ನಡಿ ಮೇಲೆ ಬಿದ್ದ ಸೂರ್ಯನ ಬೆಳಕು ಮತ್ತೊಂದು ಬದಿಗೆ ಪ್ರತಿಪಲನಗೊಂಡು ಆ ಜಾಗವನ್ನು ಬೆಳಗಿತು. ನನಗೆ ತಕ್ಷಣ ಏನೋ ಹೊಳೆಯಿತು. ಅದನ್ನು ಕಾರ್ಯರೂಪಕ್ಕೆ ತಂದೆ. ಅದೇ ವಕ್ತ್ ನೇ ಕಿಯಾ ಹಾಡಿನ ಬಿಸಿಲು ಕೋಲು. ಚಿತ್ರ ಬಿಡುಗಡೆಯಾದ ಮೇಲೆ ಇಡೀ ಹಿಂದಿ ಚಿತ್ರರಂಗವೇ ಅದನ್ನು ಹಾಡಿ ಹೊಗಳಿತು. ಮಾಧ್ಯಮಗಳು ನನ್ನನ್ನು ಮೊಟ್ಟ ಮೊದಲ ಬಾರಿಗೆ ಹುಡುಕಿಕೊಂಡು ಬಂದವು. ದೇಶ ವಿದೇಶಗಳಲ್ಲೂ ಅದು ಚರ್ಚೆಯ ವಿಷಯವಾಯಿತು. ಅದು ಅಷ್ಟು ಜನಪ್ರಿಯವಾಗುತ್ತದೆ ಎಂದು ನನಗೇ ಅನ್ನಿಸಿರಲಿಲ್ಲ.’ ಎಂದು ಮಾತು ಮುಗಿಸುವ ಹೊತ್ತಿಗೆ ಸರಿಯಾಗಿ ಉಮಾ ಮತ್ತವರ ಪತಿ ರಾವ್ ಬಂದರು.
ಅವರು ಬರ್ತಿದ್ದಹಾಗೆ, ‘ಉಮಾ ಹೇಗಿದಿರಾ, ನಿಮ್ಮನ್ನೆಲ್ಲ ನೋಡಿ ಎಷ್ಟು ದಿನ ಆಗಿಹೋಯಿತು, ಬನ್ನಿ ಬನ್ನಿ’ ಎಂದು ಸುಮಾರು ಹೊತ್ತು ಅವರೊಂದಿಗೆ ಕೂತು ಮಾತನಾಡಿದರು. ಆತ್ಮೀಯರನ್ನು ನೋಡಿ  ಖುಷಿಗೊಂಡು ಬಜ್ಜಿ, ಕಾಫಿ ತರಿಸಿಕೊಟ್ಟರು.
ಅಲ್ಲೂ ಅಷ್ಟೇ, ‘ಉಮಾ ನೋಡಲ್ಲಿ, ಎಷ್ಟು ಚೆನ್ನಾಗಿದೆ ಈವನಿಂಗ್ ಲೈಟ್’ ಎಂದು ಎದುರುಗಡೆ ಬಿಲ್ಡಿಂಗ್ ಮೇಲೆ ಬಿದ್ದ ಸಂಜೆ ಸೂರ್ಯನ ಬೆಳಕಿನ ಬಗ್ಗೆ ಪುಟ್ಟ ಬಾಲಕನಂತೆ ಬೆರಗಿನಿಂದ ಮಾತನಾಡತೊಡಗಿದರು. ತಕ್ಷಣ ಉಮಾ ರಾವ್ ತಮ್ಮ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿದು, ಮೂರ್ತಿಯವರಿಗೆ ತೋರಿಸಿದರು.


‘ಏನಪ್ಪಾ ಇದು, ಮಾಡರ್ನ್ ಟೆಕ್ನಾಲಜಿಯಲ್ಲಿ ಏನೇನೆಲ್ಲ ಬಂದುಬಿಟ್ಟಿದೆ’ ಎಂದ ಮೂರ್ತಿಯವರು ತಮ್ಮ ಗತಕಾಲದ ಶೂಟಿಂಗನ್ನು ನೆನಪಿಗೆ ತಂದುಕೊಂಡರು. ‘ಈಗ ಕ್ಲಿಕ್ ಮಾಡಿದ ತಕ್ಷಣ ಫೋಟೋ ನೋಡಬಹುದು. ಅದು ಸರಿ ಇಲ್ಲಾಂದ್ರೆ ಮತ್ತೊಂದು ತೆಗೀಬಹುದು. ನಮ್ಮ ಕಾಲದ್ದು ಕಣ್ಣಾಮುಚ್ಚಾಲೆಯಾಟ. ಒಂದು ಫ್ರೇಮ್ ಹೀಗಿರಬೇಕು ಅಂದುಕೊಂಡು, ಲೈಟಿಂಗ್ ಮಾಡಿ, ಆರ್ಟಿಸ್ಟ್ ನಿಲ್ಲಿಸಿ ಶೂಟ್ ಮಾಡಿದರೆ, ಅದರ ರಿಸಲ್ಟ್ ನೋಡಬೇಕಾದರೆ ಕಡಿಮೆ ಎಂದರೂ ಹದಿನೈದು ದಿನಗಳಾಗುತ್ತಿತ್ತು. ನೆಗಟಿವ್ ರೋಲು ತೊಳೆಸಬೇಕು. ಫಿಲ್ಮ್ ಪ್ರಿಂಟಾಗಿ ಬಂದ ಮೇಲೆ ಎಡಿಟಿಂಗ್ ಟೇಬಲ್ ಮೇಲೆ ನೋಡಬೇಕು. ಅದು ಸರಿ ಬರಲಿಲ್ಲ ಎಂದರೆ ಮತ್ತದೇ ಪ್ರೋಸಸ್, ಡಬಲ್ ಖರ್ಚು... ಅದಕ್ಕೂ ಇದಕ್ಕೂ ಅಜಗಜಾಂತರ’ ಎಂದು ಅತ್ಯಾಧುನಿಕ ವ್ಯವಸ್ಥೆ  ಮತ್ತು ಕ್ಯಾಮರಾಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ವಿ.ಕೆ.ಮೂರ್ತಿಯವರು ಹುಟ್ಟಿದ್ದು ಮೈಸೂರಿನಲ್ಲಿ, ನವೆಂಬರ್ 23, 1923 ರಂದು. ಬಡತನದಲ್ಲಿಯೇ ಬೆಳೆದ ಮೂರ್ತಿಯವರು ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಛಾಯಾಗ್ರಹಣ ವಿಭಾಗದ ಮೊದಲ ತಂಡದ ವಿದ್ಯಾರ್ಥಿಗಳಲ್ಲಿ  ಒಬ್ಬರಾಗಿದ್ದರು. ಕಲಿತ ನಂತರ ಮುಂಬೈಗೆ ತೆರಳಿ, ರಂಗಭೂಮಿಯಲ್ಲಿ ತೊಡಗಿಕೊಂಡರು. ಆ ನಂತರ ಚಿತ್ರಜಗತ್ತಿಗೆ ಕಾಲಿಟ್ಟು ಕಾಗಜ್ ಕೇ ಫೂಲ್, ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ್, ಲವ್ ಇನ್ ಟೋಕಿಯೋ, ಜಿದ್ದಿ, ಬಾಜಿಯಂತಹ ಹಲವಾರು ಸೂಪರ್ ಹಿಟ್ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದು ಇತಿಹಾಸದ ಪುಟಗಳಲ್ಲಿ ದಾಖಲಾಗಿಹೋದರು. ಹಾಗೆಯೇ ತಮ್ಮ ಇಳಿವಯಸ್ಸಿನಲ್ಲಿ, 1986 ರಲ್ಲಿ ಗೋವಿಂದ್ ನಿಹಲಾನಿಯವರ ‘ತಮಸ್’, 1988 ರಲ್ಲಿ ಶ್ಯಾಂ ಬೆನಗಲ್‌ರ ‘ಡಿಸ್ಕವರಿ ಆಫ್ ಇಂಡಿಯಾ’ ಎಂಬ ಟಿವಿ ಧಾರಾವಾಹಿಗಳಿಗೆ ಹಾಗೂ 1992 ರಲ್ಲಿ ‘ಹೂವು ಹಣ್ಣು’ ಎಂಬ ಕನ್ನಡ ಚಿತ್ರಕ್ಕೆ  ಕ್ಯಾಮರಾ ಹಿಡಿದು, ಕತ್ತಲು ಬೆಳಕಿನಾಟದ ಮೇಲಿನ ತಮ್ಮ ಪ್ರೀತಿಯನ್ನು ಜೀವಂತವಿರಿಸಿಕೊಂಡಿದ್ದರು.  
ಅಸಾಧಾರಣ ಪ್ರತಿಭೆಯ ಮೂರ್ತಿಯವರ ಕ್ಯಾಮರಾ ಕಣ್ಣಲ್ಲಿ ಮಧುಬಾಲ, ವಹೀದಾ ರೆಹಮಾನ್‌ರಂತಹ ನಟಿಯರು ನಕ್ಷತ್ರಗಳಾಗಿ ಮಿಂಚಿದರು, ಮೆರೆದರು. ಹಿಂದಿ ಚಿತ್ರರಂಗವನ್ನು ದಶಕಗಟ್ಟಲೆ ಆಳಿದರು. ಛಾಯಾಗ್ರಹಣ ಕ್ಷೇತ್ರಕ್ಕೆ ಘನತೆ, ಜನಪ್ರಿಯತೆ ಮತ್ತು ಮನ್ನಣೆ ತಂದ ಮೂರ್ತಿಯವರು, ‘ಮೂರ್ತಿ ಮಾಡೆಲ್’ ಎಂಬ ಹೊಸ ಮಾರ್ಗವನ್ನೇ ಹುಟ್ಟುಹಾಕಿದರು. ಹಿಂದಿ ಚಿತ್ರರಂಗದ ಮಹಾನ್ ಕಲಾಕಾರ ಗುರುದತ್, ಮೂರ್ತಿಯವರ ಒಡನಾಡಿಯಾಗಿದ್ದರೂ, ಲೋಕವೇ ಕೊಂಡಾಡುವ ಸಾಧನೆ ಮಾಡಿದ್ದರೂ, ನನಗೂ ಅದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ತಣ್ಣಗಿದ್ದವರು. ಮೂರ್ತಿ ಮೂಲತಃ ಮೆದು ಮಾತಿನ ಸಾಧು ಸ್ವಭಾವದ ಸರಳ ಸಜ್ಜನರು. ಇಡೀ ಹಿಂದಿ ಚಿತ್ರರಂಗವೇ ಇವರನ್ನು ಅಪಾರ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿತ್ತು. ಅದರ ದ್ಯೋತಕವೆಂಬಂತೆ 2005 ರಲ್ಲಿ ಉಮಾ ರಾವ್ ಬರೆದ ‘ಬಿಸಿಲು ಕೋಲು’ ಪುಸ್ತಕ ಬಿಡುಗಡೆ ಸಮಾರಂಭದಂದು ಹಿಂದಿ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಗೋವಿಂದ್ ನಿಹಲಾನಿ (ಮೂರ್ತಿಯವರ ಆಪ್ತ ಶಿಷ್ಯ) ಮೂರ್ತಿಯವರ ಮೇಲೊಂದು ಶಾರ್ಟ್ ಫಿಲಂ ತಯಾರಿಸಿ, ಪ್ರದರ್ಶಿಸಿದ್ದರು. ನಿರ್ದೇಶಕ, ನಿರ್ಮಾಪಕ ಶ್ಯಾಂ ಬೆನಗಲ್‌ರು  ಮುಖ್ಯ ಅತಿಥಿಗಳಾಗಿ ಆ ಸಮಾರಂಭಕ್ಕೆ ಬಂದು ಮೂರ್ತಿಯವರಿಗೆ ಗೌರವಾರ್ಪಣೆ ಸಲ್ಲಿಸಿದ್ದರು.
ಭಾರತೀಯ ಚಿತ್ರರಂಗದಲ್ಲಿ ಅಪರೂಪ ಮತ್ತು ಅನನ್ಯ ಸಾಧನೆ ಮಾಡಿದ, ಅಪ್ಪಟ ಕನ್ನಡಿಗ ಮೂರ್ತಿಯವರಿಗೆ ಕಾಗಜ್ ಕೇ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್ ಚಿತ್ರಗಳಿಗೆ, ಪ್ರಥಮ ಬಾರಿಗೆ ಛಾಯಾಗ್ರಹಣ ಕ್ಷೇತ್ರಕ್ಕೆ ಫಿಲಂಫೇರ್ ಪ್ರಶಸ್ತಿ ದೊರಕಿದೆ. ಐಐಎಫ್‌ಎ ಸಂಸ್ಥೆ ಕೊಡಮಾಡುವ ಜೀವಮಾನದ ಸಾಧನೆ ಪ್ರಶಸ್ತಿಯ ಜೊತೆಗೆ ಹಿಂದಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಸಂದಿದೆ.
ಇಂತಹ ಮೂರ್ತಿ ಈಗಿಲ್ಲ, ಆದರೆ ಅವರ ಬಿಸಿಲು ಕೋಲು ಅಜರಾಮರ. ಕತ್ತಲೆ ಬೆಳಕಿನಾಟದ ಚಿತ್ರಗಳು ನಿರಂತರ. ಮೂರ್ತಿ ಕೂಡ.

Saturday, April 5, 2014

‘ಇಂತಿ ನಮಸ್ಕಾರಗಳು’ ಮೊದಲ ಓದಿಗೆ ದಕ್ಕಿದ್ದು...


ಲಂಕೇಶ್ ಮತ್ತು ಡಿಆರ್ ನಾಗರಾಜ್
ಕನ್ನಡ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ ಪಿ.ಲಂಕೇಶ್ ಮತ್ತು ಡಿ.ಆರ್. ನಾಗರಾಜ್, ಇಪ್ಪತ್ತನೆಯ ಶತಮಾನದ ಕನ್ನಡದ ಶ್ರೇಷ್ಠ ಚಿಂತಕರು. ಇವರಿಬ್ಬರ ಬಗೆಗೆ ಅಪಾರ ಪ್ರೀತಿಯಿಟ್ಟುಕೊಂಡೇ ಶಿಸ್ತು ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿರುವ, ಇಬ್ಬರೊಂದಿಗೂ ಆಪ್ತವಾಗಿ ಒಡನಾಡಿರುವ ಡಾ. ನಟರಾಜ್ ಹುಳಿಯಾರ್, ‘ಇಂತಿ ನಮಸ್ಕಾರಗಳು’ ಎಂಬ ಕೃತಿಯ ಮೂಲಕ ಈ ಎರಡು ದೈತ್ಯಪ್ರತಿಭೆಗಳನ್ನು ಕನ್ನಡದ ಮನಸ್ಸುಗಳ ಮುಂದಿಟ್ಟಿದ್ದಾರೆ.
‘ಮೇಲುನೋಟಕ್ಕೆ ಭಿನ್ನವಾಗಿ ಕಾಣುವ, ಬೇರೆ ಬೇರೆ ತಲೆಮಾರುಗಳಿಗೆ ಸೇರಿದ ಡಿಆರ್ ಹಾಗೂ ಲಂಕೇಶರನ್ನು ಜೊತೆಗಿಟ್ಟು ನೋಡುವುದು ಸಾಹಿತ್ಯ ವಿಮರ್ಶೆಯ ವಿದ್ಯಾರ್ಥಿಗಳಿಗೆ ಅಸಂಗತವಾಗಿ ಕಾಣಬಹುದು. ಆದರೂ ನಾನು ಅದೃಷ್ಟವಶಾತ್ ಒಡನಾಡಿದ ಕನ್ನಡದ ಎರಡು ದೊಡ್ಡ ಪ್ರತಿಭೆಗಳನ್ನು ಹೊರಳಿ ನೋಡುವ ಹಾಗೂ ನನ್ನಂಥ ಒಬ್ಬ ಓದುಗನೊಳಗೆ, ಬರಹಗಾರನೊಳಗೆ ಇಪ್ಪತ್ತನೆಯ ಶತಮಾನದ ಇಬ್ಬರು ಶ್ರೇಷ್ಠ ಕನ್ನಡ ಲೇಖಕರು ಅಂತರ್‌ಪಠ್ಯೀಯವಾಗಿ ಬೆರೆತುಹೋಗಿರುವ ರೀತಿಯನ್ನು ಗ್ರಹಿಸುವ ನಿರೂಪಣೆಯಿದು’ ಎಂದು ನಟರಾಜ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿರುವುದು, ಇನ್ನಷ್ಟು ಲೇಖಕರಿಗೆ, ಭಿನ್ನ ಮಾದರಿಯ ಬರವಣಿಗೆಗೆ ಪ್ರೇರೇಪಿಸಿದರೂ ಆಶ್ಚರ್ಯವಿಲ್ಲ.
ಲಂಕೇಶ್ ಮತ್ತು ಡಿಆರ್ ಅವರನ್ನು ನಟರಾಜ್, ತಮ್ಮ ಭಾವ ಭಿತ್ತಿಯೊಳಕ್ಕೆ ಇಳಿಸಿಕೊಂಡ ಬಗೆಯನ್ನು ವಿವರಿಸುತ್ತಾ, ‘ನಾನು ಲಂಕೇಶರ ಆಪ್ತವಲಯಕ್ಕೆ ಹೋಗುವ ಮೊದಲೇ ಎಂಬತ್ತರ ದಶಕದ ಕೊನೆಗೆ ಡಿಆರ್ ಜೊತೆಗಿನ ನನ್ನ ಸಂಶೋಧನೆಯ ಒಡನಾಟ ಶುರುವಾಯಿತು. ‘ಲಂಕೇಶ್ ಪತ್ರಿಕೆ’ಯ ಮೂಲಕ ಮಾನವ ವರ್ತನೆ, ಸಮಾಜ, ರಾಜಕಾರಣವನ್ನು ಗ್ರಹಿಸಲು ಕಲಿಯತೊಡಗಿದ್ದ ನನಗೆ ಡಿಆರ್ ವಸಾಹತುವಿರೋಧಿ ಸಿದ್ಧಾಂತಗಳನ್ನು, ನಿರ್ವಸಾಹತೀಕರಣ ಸಿದ್ಧಾಂತಗಳನ್ನು ಮೊದಲ ಬಾರಿಗೆ ಪರಿಚಯಿಸತೊಡಗಿದ್ದರು. ಗಾಂಧೀಜೀ, ಫ್ರಾಂಟ್ಜ್ ಫ್ಯಾನನ್, ಮನೋನ್, ಅಶೀಶ್ ನಂದಿ ಮುಂತಾದ ಚಿಂತಕರ ಬಗ್ಗೆ ಮಾತನಾಡುತ್ತಾ, ವಸಾಹತೀಕರಣ ತೃತೀಯ ಜಗತ್ತಿಗೆ ತಂದ ಚಲನೆ ಹಾಗೂ ಆಘಾತಗಳನ್ನು ವಿವರಿಸುತ್ತಾ, ನಾನು ಆವರೆಗೆ ಕಾಣದ ಬೌದ್ಧಿಕ ಲೋಕವೊಂದನ್ನು ತೆರೆಯತೊಡಗಿದರು. ಆಸೆಯಿಂದ, ಗೊಂದಲದಿಂದ, ಉನ್ನತ ಸಿದ್ಧಾಂತಗಳನ್ನು ಕುರಿತ ಪುಳಕ ಹಾಗೂ ಅವುಗಳ ಎದುರು ಹುಟ್ಟುವ ಅಧೀರತೆಯಿಂದ ಅವನ್ನೆಲ್ಲ ಮುಟ್ಟಲೆತ್ನಿಸಿದೆ. ‘ಲಂಕೇಶ್ ಪತ್ರಿಕೆ’ಯಂತೆಯೇ ಡಿಆರ್ ರೂಪಿಸಿಕೊಡುತ್ತಿದ್ದ ಅಧ್ಯಯನವಿಧಾನ ಕೂಡ ನನ್ನೊಳಗೆ ಮೆಲ್ಲಗೆ ಪ್ರವೇಶಿಸತೊಡಗಿತು’ ಎಂದಿರುವುದು ಅವರ ಸೃಜನಶೀಲ ಮನಸ್ಸು ಅರಳಿದ ಬಗೆಯನ್ನು ಅನಾವರಣಗೊಳಿಸುತ್ತದೆ.
ಪುಸ್ತಕದ ಟೈಟಲ್ ‘ಇಂತಿ ನಮಸ್ಕಾರಗಳು’ ...ತುಟಿಯ ಮೇಲೆ ಪದಗಳು ಸುಳಿದಾಡುತ್ತಿದ್ದಂತೆಯೇ ನೆನಪಾದದ್ದು ಕಿರಂ. ಲಂಕೇಶರು ಜನವರಿ 25, 2000 ರಂದು ಇಹಲೋಕ ತ್ಯಜಿಸಿದಾಗ, ಆ ವಾರ ಅವರಿಲ್ಲದ ‘ಲಂಕೇಶ್ ಪತ್ರಿಕೆ’ಯನ್ನು ರೂಪಿಸುವ ಮಹತ್ವದ ಜವಾಬ್ದಾರಿ ಪತ್ರಿಕೆಯ ಬಳಗದ ಮೇಲೆ ಬಿತ್ತು. ಶ್ರದ್ಧಾಂಜಲಿ ಅರ್ಪಿಸುವ ಸಂಚಿಕೆಯನ್ನಾಗಿ ಹೊರತರಲು ಯೋಚಿಸಿದೆವು. ಓದುಗರು, ಲೇಖಕರು, ಅಭಿಮಾನಿಗಳು ಎಲ್ಲರೂ ಸ್ಪಂದಿಸಿದರು. ಸಂಚಿಕೆ ಸಮೃದ್ಧವಾಗಿ ರೂಪುಗೊಳ್ಳತೊಡಗಿತು. ಮುಖಪುಟ ಸಿದ್ಧವಾಗುವ  ಸಮಯದಲ್ಲಿ ಎದುರಾದದ್ದು- ಆ ಸಂಚಿಕೆಯ ಮಹತ್ವವನ್ನು ಹೇಳಬಲ್ಲ, ಕ್ಯಾಚಿ ಟೈಟಲ್. ಆ ತಕ್ಷಣವೇ ಕಿರಂ, ‘ಇಂತಿ ನಮಸ್ಕಾರಗಳು’ ಅಂತಿರಲಿ ಎಂದರು. ನಟರಾಜ್ ಸೇರಿದಂತೆ ಎಲ್ಲರಿಂದಲೂ ಸೂಪರ್ ಎನ್ನುವ ಉದ್ಗಾರ. ಆ ಸಂಚಿಕೆ ಇವತ್ತು ಇತಿಹಾಸ, ಇರಲಿ.
ನಟರಾಜರ ‘ಇಂತಿ ನಮಸ್ಕಾರಗಳು’ ಪುಸ್ತಕ ನೋಡುತ್ತಿದ್ದಂತೆ ಮತ್ತದೇ ನೆನಪು ಸುಳಿದುಹೋಯಿತು. ಪುಸ್ತಕದ ಮುಖಪುಟದಲ್ಲಿದ್ದ ಲಂಕೇಶ್ ಮತ್ತು ಡಿಆರ್ ಅವರ ಕಪ್ಪು ಬಿಳುಪಿನ ಚಿತ್ರಗಳನ್ನು ಬಹಳ ಪ್ರೀತಿಯಿಂದ ತಡವಿದೆ. ಅಲ್ಲಿದ್ದವರು ನನಗೂ ಗೊತ್ತಿದ್ದವರಾದ್ದರಿಂದ ಆಸ್ಥೆಯಿಂದ ಓದಿದೆ. ಮತ್ತೆ ಮತ್ತೆ ಓದಿದೆ. ಮೊದಲ ಓದಿಗೆ ದಕ್ಕಿದ್ದನ್ನು ನಟರಾಜರಿಗೆ ಹೇಳಬೇಕೆನಿಸಿತು. ಒಂದು ಮಿಂಚಂಚೆಯ ಪತ್ರ ಬರೆದೆ. ಅದು ಇಂತಿದೆ...
 ಪ್ರಿಯ ನಟರಾಜ್,
ಲಂಕೇಶರನ್ನು ಹತ್ತಿರದಿಂದ ಬಲ್ಲಂತಹ ಎಲ್ಲರಿಗೂ ಹೊಟ್ಟೆಕಿಚ್ಚಾಗುವಂತೆ ಬರೆದಿದ್ದೀರಿ. ಎರಡು ಮೂರು ದಿನ ಮತ್ತೆ ಮತ್ತೆ ಓದಿದೆ. ಲಂಕೇಶರು ತೀರಿಹೋದ ಈ  ಹದಿಮೂರು ವರ್ಷಗಳ ಕಾಲ, ಲಂಕೇಶರ ಒಡನಾಟವಿಲ್ಲದೆ ವಿಚಿತ್ರ ವೇದನೆಯಲ್ಲಿ ನರಳುತ್ತಿದ್ದ ನನಗೆ, ಪುಸ್ತಕ ಓದುತ್ತಿದ್ದಂತೆ ಲಂಕೇಶರೊಂದಿಗೆ ಮತ್ತೆ ಬದುಕಿದಂತಾಯಿತು. ಅದರಲ್ಲೂ ಕೊನೆಯ ‘ಇಂತಿ ನಮಸ್ಕಾರಗಳು’ ಅಧ್ಯಾಯವನ್ನು ಓದುತ್ತಿದ್ದಂತೆ, ನನಗೇ ಗೊತ್ತಿಲ್ಲದೆ ಕಣ್ಣಲ್ಲಿ ನೀರೂ ಬಂತು. ಲಂಕೇಶ್ ಮೇಸ್ಟ್ರನ್ನ ಹಿಡಿದು ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಇನ್ನು ಡಿಆರ್ ಬಗ್ಗೆ ನಿಮ್ಮದೇ ಅಕಡಮಿಕ್ ಶೈಲಿಯಲ್ಲಿ ಕಂಡಿರಿಸಿರುವುದು ಕೂಡ ಸರಿಯಾಗಿದೆ. ಆದರೆ ನನಗೆ ಮಾತ್ರ ಲಂಕೇಶರ ಭಾಗ ಇಷ್ಟವಾಯಿತು. ಅಷ್ಟೇ ಅಲ್ಲ, ನೇರವಾಗಿ ಕರುಳಿಗೆ ಇಳಿಯಿತು.
ಒಟ್ಟಿನಲ್ಲಿ ನಿಮ್ಮ ಬದುಕಿನಲ್ಲಿ ಮಾಡಲೇಬೇಕಾಗಿದ್ದ ಮಹತ್ವದ ಕೆಲಸವೊಂದನ್ನು ನೀವು ಮಾಡಿದ್ದೀರಿ- ಬನ್ನಿ ಒಂದು ಡ್ರಿಂಕ್ ಕೊಡುತ್ತೇನೆ.
ನಿಮ್ಮ
ಬಸು

Tuesday, April 1, 2014

ಸಾಮಾಜಿಕ ನ್ಯಾಯಪರ ಹೋರಾಟಗಾರ- ಸಂಗಯ್ಯ ರಾಚಯ್ಯ ಹಿರೇಮಠ್‌

ಎಸ್.ಆರ್. ಹಿರೇಮಠ
ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಿಬಿಐ ದಾಳಿಗೊಳಗಾದ ಮುಖ್ಯಮಂತ್ರಿಯೆಂಬ ಅಪಖ್ಯಾತಿಗೆ ಬಿ.ಎಸ್. ಯಡಿಯೂರಪ್ಪನವರು ಗುರಿಯಾಗಿದ್ದರೆ, ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದು ಜೈಲು ವಾಸ ಅನುಭವಿಸಿದ್ದರೆ, ಕೋರ್ಟು, ಕಚೇರಿ, ಬಂಧನಗಳ ಭೀತಿಯಲ್ಲಿ ಬದುಕುತ್ತ ಮತ್ತೆ ಬಿಜೆಪಿಯನ್ನು ಬಿಗಿದಪ್ಪಿಕೊಂಡಿದ್ದರೆ, ಅದರ ಹಿಂದೆ ಎಸ್.ಆರ್. ಹಿರೇಮಠರ ಸತತ ಶ್ರಮ ಮತ್ತು ಪ್ರಾಮಾಣಿಕ ಹೋರಾಟವಿದೆ.
ಕರ್ನಾಟಕ-ಆಂಧ್ರಪ್ರದೇಶ ರಾಜ್ಯ ಸರ್ಕಾರಗಳನ್ನು ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಿದ್ದ ಬಳ್ಳಾರಿಯ ಗಣಿಧಣಿಗಳ ಸದ್ದಡಗಿದ್ದರೆ, ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಪ್ರವಾಸೋದ್ಯಮ ಮಂತ್ರಿಯಾಗಿ ಮೆರೆದ ಜನಾರ್ದನ ರೆಡ್ಡಿ ಇವತ್ತು ಜೈಲು ವಾಸಿಯಾಗಿದ್ದರೆ, ಗಣಿರೆಡ್ಡಿ ಸಾಮ್ರಾಜ್ಯ ಪತನದ ಅಂಚಿಗೆ ಸರಿದಿದ್ದರೆ ಅದರ ಹಿಂದೆ ಹಿರೇಮಠರ ಸಾಮಾಜಿಕ ಕಳಕಳಿ ಇದೆ.
2009ರಿಂದ 2010ರವರೆಗೆ 17 ತಿಂಗಳ ಅವಧಿಯಲ್ಲಿ ಸುಮಾರು 37 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಬೇಲೆಕೇರಿ ಬಂದರಿನಿಂದ ನಾಪತ್ತೆಯಾದ ಪ್ರಕರಣದಲ್ಲಿ ಮಾಜಿ ಸಚಿವರಾದ ಆನಂದ್ ಸಿಂಗ್, ಸಂತೋಷ್ ಲಾಡ್, ಶ್ರೀರಾಮುಲು ಮತ್ತು ಶಾಸಕರಾದ ಸತೀಶ್ ಸೈಲ್ ಭಾಗಿಯಾಗಿರುವುದನ್ನು ದಾಖಲೆಗಳ ಸಮೇತ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ, ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುವಂತೆ ಮಾಡಿದ್ದರ ಹಿಂದೆ, ಹಿರೇಮಠರ ಸಮಾಜವನ್ನು ಎಚ್ಚರಿಸುವ ಇರಾದೆ ಇದೆ.
ಕಾಂಗ್ರೆಸ್ಸಿನ ಪ್ರಭಾವಿ ಒಕ್ಕಲಿಗ ನಾಯಕರಾದ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಳಿಯ ಸಿದ್ಧಾರ್ಥ್‌ರ ಅವ್ಯವಹಾರಗಳನ್ನು, ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರವರ ಅಕ್ರಮ ಭೂ ಒತ್ತುವರಿಯನ್ನು ದಾಖಲೆ ಸಮೇತ ಬಿಚ್ಚಿಡುತ್ತಿರುವುದರ ಹಿಂದೆ ಹಿರೇಮಠರ ನ್ಯಾಯಪರ ಹೋರಾಟವಿದೆ.
ಮತ್ತು ಈಗ, ಚುನಾವಣಾ ಸಂದರ್ಭದಲ್ಲಿ, ಐವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ, ಕಣದಲ್ಲಿರುವ ಒಟ್ಟು ಹನ್ನೊಂದು ಭ್ರಷ್ಟ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ, ‘ಭ್ರಷ್ಟರೆ ಸಾರ್ವಜನಿಕ ಜೀವನ ಬಿಟ್ಟು ತೊಲಗಿ’ ಎಂಬ ಹಿರೇಮಠರ ಆಂದೋಲನದ ಹಿಂದೆ ದೇಶದ ಹಿತಕಾಯುವ ಕಳಕಳಿ ಇದೆ.
ಇವು ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನ ಕಂಡ, ಕೇಳಿದ ಕೆಲವು ಹಗರಣಗಳು. ಕರ್ನಾಟಕದ ಚಹರೆಯನ್ನು ಬದಲಿಸಿದ ಘಟನೆಗಳು. ದೇಶದಲ್ಲಿರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ನಂಬಿಯೇ ಬದಲಾವಣೆಯನ್ನು ತರಬಹುದು; ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಮುಖ್ಯಮಂತ್ರಿಯಂತಹ ಬಲಾಢ್ಯನನ್ನೂ ಕುರ್ಚಿಯಿಂದ ಕೆಳಗಿಳಿಸಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡುತ್ತಿದ್ದಾರೆ. ಭಂಡರ, ಬಲಾಢ್ಯರ, ಭ್ರಷ್ಟರ ಮುಖದಲ್ಲಿ ಆತಂಕದ ಗೆರೆಗಳನ್ನು ಮೂಡಿಸುತ್ತಿದ್ದಾರೆ.
ಹಾಗಾದರೆ ಈ ಹಿರೇಮಠರು ಯಾರು, ಎಂತಹವರು, ಅವರು ಮಾಡಿದ್ದೇನು, ಮಾಡುತ್ತಿರುವುದೇನು?
ಹುಟ್ಟಿದ್ದು ಹಳ್ಳಿಯಲ್ಲಿ, ಬಡ ಕುಟುಂಬದಲ್ಲಿ
ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದ ರಾಚಯ್ಯ ಹಿರೇಮಠ್ ಕೃಷಿಕರು, ಸಹಕಾರಿ ಕ್ಷೇತ್ರದ ಮುಖಂಡರು ಮತ್ತು ಸ್ವಾತಂತ್ರ್ಯ ಹೋರಾಟಗಾರರು. ಆ ಕಾಲಕ್ಕೇ ರಾಚಯ್ಯನವರು ಹಳ್ಳಿಯ ಬಡವರ ಪರವಾಗಿ ಹೋರಾಟ ಮಾಡುವ ನಾಯಕರಾಗಿದ್ದರು. ಜನಗಳಿಗೆ ಸಹಕಾರಿ ತತ್ವ ಸಾರುವುದು, ಖಾದಿ ನೂಲುವ ಮಹತ್ವ ತಿಳಿಸುವುದು, ಆ ಮೂಲಕ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ರಾಚಯ್ಯನವರ ಹೋರಾಟದ ಮುಖ್ಯ ಉದ್ದೇಶವಾಗಿತ್ತು.
ಹೀಗೆ ಬಡವರ ಪರವಾಗಿ ಹೋರಾಡುತ್ತಿದ್ದಾಗ, ಸಹಕಾರಿ ಸಂಘದ ಕೇಸೊಂದರಲ್ಲಿ ರಾಚಯ್ಯನವರು ಜಯ ಪಡೆದಿದ್ದರು. ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ಪೊಲೀಸರು ಮುಂದಾದಾಗ, ಊರಿನ ಶ್ರೀಮಂತರು ರಾಚಯ್ಯನವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಆಗ ರಾಚಯ್ಯನವರು ತಲೆಮರೆಸಿಕೊಂಡು ತಾಯಿಯ ತವರೂರಾದ ಬಿಜಾಪುರಕ್ಕೆ ತೆರಳಿದ್ದರು. ಅಲ್ಲಿ ಕಟ್ಟಡ ಕೆಲಸದ ಕಂಟ್ರಾಕ್ಟರ್ ಕೆಲಸ ನಿರ್ವಹಿಸುವಾಗ ಕ್ಷಯ ರೋಗಕ್ಕೆ ತುತ್ತಾಗಿ ಇಹಲೋಹ ತ್ಯಜಿಸಿದರು.
ಇಂತಹ ಸ್ವಾತಂತ್ರ್ಯ ಹೋರಾಟಗಾರ ರಾಚಯ್ಯ ಹಿರೇಮಠರ ಮಗನಾಗಿ ನವೆಂಬರ್ 5, 1944ರಲ್ಲಿ ಹುಟ್ಟಿದ ಸಂಗಯ್ಯ ರಾಚಯ್ಯ ಹಿರೇಮಠ್, ತಮ್ಮ 5 ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ತಾಯಿ ರಾಚವ್ವರ ಆರೈಕೆಯಲ್ಲಿ ಬೆಳೆಯುತ್ತಿದ್ದ ಬಾಲಕನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆಡುವ ವಯಸ್ಸಲ್ಲಿ ಶೇಂಗ ಆರಿಸುವ, ಖಾದಿ ನೂಲುವ ದಿನಗೂಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಆದರೂ ಕೆಲಸ ಮಾಡಿಕೊಂಡೇ ಶಾಲೆಗೆ ಹೋಗುತ್ತಿದ್ದ ಹಿರೇಮಠ್, ಓದಿನಲ್ಲಿ ಸದಾ ಮುಂದಿದ್ದರು. ಬಸ್ ಕಂಡಕ್ಟರ್ ಆಗಿದ್ದ ಸಹೋದರ ಮನೆಯನ್ನು ನಿಭಾಯಿಸಿದರೆ, ದಿನಗೂಲಿಯಿಂದ ಶಾಲೆಯ ಖರ್ಚು ವೆಚ್ಚವನ್ನೆಲ್ಲ ಹಿರೇಮಠರು ಸಂಭಾಳಿಸಿದರು.  
ಮೆರಿಟ್ ಸ್ಟೂಡೆಂಟ್‌
ಬಿಜಾಪುರದ ಶಾಲೆಯ ವಿದ್ಯಾಭ್ಯಾಸದಲ್ಲಿ ತರಗತಿಗೆ ಮೊದಲಿಗನಾಗಿದ್ದ ಬಾಲಕ ಹಿರೇಮಠರು, ಅಲ್ಲಿಂದ ಕಲಿತದ್ದು ಅಪಾರ.
ಹಿರೇಮಠರು ಹೈಸ್ಕೂಲ್ ಓದುವಾಗಲೇ, ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಪ್ರವಚನಗಳ ಸಾರವನ್ನು ಲೇಖನವನ್ನಾಗಿ ಬರೆದು ಬಹುಮಾನಗಳನ್ನು ಗಳಿಸಿದ್ದರು. ಇಲ್ಲಿ ಓದುತ್ತಿರುವಾಗಲೇ, ಕನ್ನಡದ ಹೆಸರಾಂತ ಸಾಹಿತಿ ಶಿವರಾಮ ಕಾರಂತರು ಶಾಲೆಯ ಕಾರ್ಯಕ್ರಮವೊಂದಕ್ಕೆ ಬಂದು, ‘ನಾವು ತಂದೆ-ತಾಯಿಗಳ ಋಣ, ಗುರು-ಹಿರಿಯರ ಋಣ ತೀರಿಸುವ ಬಗೆಗೆ ಮಾತನಾಡುತ್ತಿದ್ದೇವೆ. ಆದರೆ ಸಮಾಜದ ಋಣ ತೀರಿಸುವ ಬಗೆಗೆ ಚಿಂತಿಸುವುದಿಲ್ಲ’ ಎಂದು ಹೇಳಿದ್ದು ಬಾಲಕ ಹಿರೇಮಠರನ್ನು ಚಿಂತನೆಯ ಹಾದಿಗೆ ಹಚ್ಚಿತು.
ಆ ಕಾಲಕ್ಕೇ ಹಿರೇಮಠರು ನ್ಯಾಷನಲ್ ಮೆರಿಟ್ ಸ್ಟೂಡೆಂಟ್ ಎಂದು ಹೆಸರು ಗಳಿಸಿದ್ದರು. ಎಸ್‌ಎಸ್‌ಸಿ(1961)ಯಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿದ್ದರು. ಆಗ ಸಹಜವಾಗಿಯೇ ಸಮಾಜದ ಗಣ್ಯರ ಗಮನ ಹಿರೇಮಠರತ್ತ ಹರಿಯಿತು. ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ, ಮುಖ್ಯಮಂತ್ರಿಗಳಾಗಿದ್ದ ಬಿ.ಡಿ. ಜತ್ತಿಯವರು ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಬಂದು ಹಿರೇಮಠರನ್ನು ಬಾಯ್ತುಂಬ ಹೊಗಳಿ, ಪ್ರೋತ್ಸಾಹಿಸಿದ್ದರು. ಆ ನಂತರ ಪಿಯೂಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ತೇರ್ಗಡೆಯಾದರು. ಪಿಯೂಸಿ ಮುಗಿಸಿ ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜ್‌ಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಗೆ ಸೇರಿ, ತರಗತಿಗೇ ಮೊದಲನೆಯರಾಗಿ ಉತ್ತೀರ್ಣರಾದರು.
1967ರಲ್ಲಿ ಬಿಇ ಪದವಿ ಮುಗಿಸಿದ ಹಿರೇಮಠರು, ಒಂದು ವರ್ಷ ಕಾಲ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್ ಪಾಸು ಮಾಡಿದ್ದ ಹಿರೇಮಠರಿಗೆ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದಲ್ಲಿದ್ದ ಸ್ನೇಹಿತರಿಂದ ಒತ್ತಡ ಹೆಚ್ಚಾಗತೊಡಗಿತು. ಆ ಕಾಲಕ್ಕೇ ಅಮೆರಿಕಾದಲ್ಲಿ ವಾಸವಾಗಿದ್ದ ಶರಣ ನಂದಿ ಎಂಬ ಸ್ನೇಹಿತರ ಸಹಕಾರದಿಂದ ಹಿರೇಮಠರು, ಅಮೆರಿಕಾದ ಮ್ಯಾನ್ ಹಟನ್‌ನ ಕ್ಯಾನ್‌ಸಾಸ್ ಸ್ಟೇಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಪರೀಕ್ಷೆಯನ್ನು ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.
ಮುಂದೆ ಶಿಕಾಗೋದಲ್ಲಿ ಇಲಿನಾಯ್ಸ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಬಿಎ ಮಾಡಿದರು.ಅಮೆರಿಕಾದಲ್ಲಿ ಎಂಎಸ್ ಮುಗಿಸುವ ಮುಂಚೆಯೇ ಹಿರೇಮಠರನ್ನು ಮೂರು ಕೆಲಸಗಳು ಅರಸಿ ಬಂದವು. ಅವುಗಳನ್ನು ಆರಿಸಿಕೊಂಡ ಹಿರೇಮಠರು ಆಪರೇಷನ್ಸ್ ರೀಸರ್ಚ್ ಅನಲಿಸ್ಟ್, ಇಲಿನಾಯ್ಸ್ ಬ್ಯಾಂಕ್ ಟ್ರಸ್ಟ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್‌ನ ಮ್ಯಾನೇಜರ್- ಹೀಗೆ ಮೂರು ಉನ್ನತ ಹುದ್ದೆಯ ಕೆಲಸಗಳಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ನ್ಯೂಸ್ ಮೇಕರ್ಸ್ ಇನ್ ಅಮೆರಿಕಾ
ಹಿರೇಮಠರು ಅಮೆರಿಕಾದಲ್ಲಿ ಎಂಎಸ್ ಮತ್ತು ಎಂಬಿಎ ಮಾಡಿ, ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿಯೇ, ಸ್ನೇಹಿತರು ಒಟ್ಟುಗೂಡಿದಾಗ ಚಿಂತನೆಗೆ ಒಳಗಾಗುತ್ತಿದ್ದ ಭಾರತೀಯ ಗ್ರಾಮೀಣ ಬಡಜನರ ಬಗೆಗಿನ ಕಳಕಳಿ 1974ರಲ್ಲಿ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’ ಸಂಸ್ಥೆಯಾಗಿ ರೂಪುಗೊಳ್ಳಲು ಕಾರಣವಾಯಿತು. 1975ರಲ್ಲಿ, ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಇಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಸೋಷಲಿಸ್ಟ್ ಪಾರ್ಟಿಯ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದರೆ, ಅತ್ತ ಅಮೆರಿಕಾದಲ್ಲಿ ಭಾರತದ ಮೇಲೆ ವಿಧಿಸಿದ ಕರಾಳ ಕಾನೂನಿನ ವಿರುದ್ಧ ಧ್ವನಿಯೆತ್ತಿ ನ್ಯೂಸ್ ಮೇಕರ್‌ಗಳಾದವರು ಇದೇ ಹಿರೇಮಠ್ ಮತ್ತವರ ಗೆಳೆಯರು. ಇವರ ಪ್ರತಿಭಟನೆಯಿಂದಾಗಿ ನಾಲ್ಕು ಜನರ ಪಾಸ್‌ಪೋರ್ಟ್ ಕಿತ್ತುಕೊಂಡಿದ್ದರು. ಒಟ್ಟು 12 ನಗರಗಳಲ್ಲಿ ಇವರು ನ್ಯೂಸ್ ಮೇಕರ್ಸ್ ಆಗಿ ಖ್ಯಾತಿ ಗಳಿಸಿದ್ದರು.
ಆ ಸಂದರ್ಭದಲ್ಲಿಯೇ ಹಿರೇಮಠರೊಂದಿಗೆ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರಾದ ರಾಮ್ ಜೇಠ್ಮಲಾನಿ, ಸುಬ್ರಹ್ಮಣ್ಯಂಸ್ವಾಮಿ, ಎಚ್.ವಿ. ಕಾಮತ್, ರಾಮಧನ್, ನಾಗಾ ಘೋರೆ, ಚಂದ್ರಶೇಖರ್, ಜಯಪ್ರಕಾಶ್ ನಾರಾಯಣ್‌ರ ಜೊತೆ ಸಂಪರ್ಕ ಬೆಳೆದಿತ್ತು. 1977ರಲ್ಲಿ ಜಯಪ್ರಕಾಶ್ ನಾರಾಯಣ್ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಬಂದಾಗ, ಅವರನ್ನು ಮುಖತಃ ಭೇಟಿಯಾಗಿ ಭಾರತದ ಗ್ರಾಮೀಣಾಭಿವೃದ್ಧಿಯ ಬಗ್ಗೆ ಚರ್ಚಿಸಿದ್ದು, ಮುಂದೆ ಭಾರತದಲ್ಲಿ ಬಡವರ ಬಗ್ಗೆ ಕೆಲಸ ಮಾಡಲಿಕ್ಕೆ ಭದ್ರಬುನಾದಿ ಹಾಕಿಕೊಟ್ಟಿತ್ತು.
ಇದೇ ಸಮಯದಲ್ಲಿ, ಭಾರತದ ಗ್ರಾಮೀಣ ಬಡಜನರ ಬಗ್ಗೆ ಚಿಂತಿಸುತ್ತಿದ್ದಾಗ, ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾಗ, ಆ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದ ಅಮೆರಿಕಾ ಮತ್ತು ಇಂಗ್ಲೆಂಡ್‌ನ ಕೆಲ ಎನ್ಜಿಓ ಸಂಸ್ಥೆಗಳು ಇವರ ಸಂಪರ್ಕಕ್ಕೆ ಬಂದವು. ಹಾಗೆಯೇ ಹಿರೇಮಠರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ, ಭಾರತದಲ್ಲಿದ್ದ ಕೆಲ ಐಐಟಿ ಗೆಳೆಯರು ಬಡವರ ಬಗ್ಗೆ ಕೆಲಸ ಮಾಡುತ್ತಿದ್ದರು. ಅವರಿಗೆ ಹಿರೇಮಠರು ಧನಸಹಾಯ ಮಾಡುತ್ತಿದ್ದರು. ಭಾರತಕ್ಕೆ ಬರುವ ಮುಂಚೆ ಹಿರೇಮಠರು ಈ ಐಐಟಿ ಗೆಳೆಯರನ್ನು ಸಂಪರ್ಕಿಸಿದರು. ಅವರು ಭಾರತದ ನಿರುದ್ಯೋಗದ ಬಗ್ಗೆ ಸವಿಸ್ತಾರ ವಿವರಣೆ ನೀಡಿ, ಆ ಬಗ್ಗೆ ಪ್ರಕಟವಾಗಿದ್ದ ಲೇಖನವೊಂದನ್ನು ಕೊಟ್ಟರು. ಆ ಲೇಖನದ ಮೂಲ ಹಿಡಿದು ಹೋದಾಗ ಸಿಕ್ಕಿದ್ದು, ಆ ಕಾಲಕ್ಕೇ ಎಕಲಾಜಿಕಲ್ ಚೇಂಜಸ್ ಬಗ್ಗೆ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂಬ ಪುಸ್ತಕ ಬರೆದು ಖ್ಯಾತಿ ಗಳಿಸಿದ್ದ ಲಂಡನ್ ಮೂಲದ ಲೇಖಕ ಡಾ. ಇ.ಎಫ್. ಷೂಮೇಕರ್. ನಂತರ ಅವರ ಪರಿಚಯವಾಯಿತು. ಅವರ ಪ್ರಭಾವ ಹಿರೇಮಠರ ಮೇಲೆ ಎಷ್ಟರಮಟ್ಟಿಗೆ ಆಯಿತೆಂದರೆ, ಭಾರತದ ಬಗೆಗಿನ ಅವರ ಕನಸಿಗೆ ಆ ಪುಸ್ತಕ ಕಣ್ಣಾಯಿತು.
ಮಾವಿಸ್ ಮಡದಿಯಾದದ್ದು
1975-77ರಲ್ಲಿ ಶಿಕಾಗೋದಲ್ಲಿ ಫೆಡರಲ್ ರಿಸರ್ವ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಭಾರತದಿಂದ ಹೋದವರು, ಅಲ್ಲಿ ಪರಿಚಯವಾದವರು ಆಗಾಗ ಒಂದು ಕಡೆ ಕಲೆಯುವುದು ರೂಢಿಯಾಗಿತ್ತು. ಹೀಗೆಯೇ ಒಂದು ಸಲ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ಹೋದಾಗ, ಅಲ್ಲಿ ಅಮೆರಿಕಾದ ಹುಡುಗಿ ಮಾವಿಸ್ ಸಿಗ್ವಾಲ್ಟ್ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬೆಳೆದು ಮದುವೆಯ ಹಂತಕ್ಕೆ ಮುಟ್ಟಿತು. ಆ ಮುಂಚೆ ಕುಮಾರಿ ಮಾವಿಸ್ ಆಗಿದ್ದವರು ಎಸ್.ಆರ್. ಹಿರೇಮಠರನ್ನು ಮದುವೆಯಾದ ನಂತರ, ತಮ್ಮ ಹೆಸರುನ್ನು ಶ್ಯಾಮಲಾ ಹಿರೇಮಠ್ ಎಂದು ಬದಲಿಸಿಕೊಂಡರು.
ಮಾವಿಸ್ ಮೂಲತಃ ಅಮೆರಿಕಾದವರು, ಸಮಾಜಪರ ಚಿಂತನೆಯ ಒಲವುಳ್ಳವರು, ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಶಾಂತಿಸೇನೆಯಲ್ಲಿ ಸ್ವಯಂಸೇವಕಿಯಾಗಿ ಪಶ್ಚಿಮ ಆಫ್ರಿಕಾದ ಸಿರಿಲಿಯೋನಾ ದೇಶದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ ಬಂದಿದ್ದರು. ಸಮಾನ ಮನಃಸ್ಥಿತಿಯುಳ್ಳವರಾದ್ದರಿಂದ ಸಹಜವಾಗಿಯೆ ಬೆರೆತರು, ಸಮಾಜಪರ ಹೋರಾಟಗಳಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತರು. ಈ ಸಂದರ್ಭದಲ್ಲಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಹುಟ್ಟಿದರು. ಮಗ- ರಾಜ್, ಮಗಳು-ಶೀಲಾ.
ಭಾರತದಿಂದ ಅಮೆರಿಕಾಕ್ಕೆ ಹೋಗುವಾಗಲೇ ಹಿರೇಮಠರು ತಿರುಗಿ ಬರುವ ಯೋಚನೆಯನ್ನೂ ಮಾಡಿದ್ದರು. ಆ ಕಾರಣದಿಂದಾಗಿಯೇ ಭಾರತಕ್ಕೆ ವಾಪಸಾಗಿ ಕೆಲ ಸ್ನೇಹಿತರ ಜೊತೆಗೂಡಿ ಉದ್ಯಮ ಸ್ಥಾಪಿಸುವ, ಆ ಮೂಲಕ ಕೆಲವು ಜನಕ್ಕೆ ಉದ್ಯೋಗ ಕಲ್ಪಿಸುವ ಚಿಂತನೆಯೂ ಇತ್ತು. ಆದರೆ ಹಿರೇಮಠರಿಗೆ ಇದು ಒಂದಷ್ಟು ಜನಕ್ಕೆ ಉದ್ಯೋಗ ನೀಡುವ ಸೀಮಿತ ಉದ್ದೇಶದಂತೆ ಕಂಡು ಕೈಬಿಟ್ಟರು. ಬದಲಿಗೆ ಭಾರತದ ಕಡುಬಡವರು, ಅವರ ಕರುಣಾಜನಕ ಸ್ಥಿತಿ, ಶೋಷಣೆ, ಆರ್ಥಿಕ-ಸಾಮಾಜಿಕ ಅಸಮತೋಲನಗಳೆಲ್ಲ ಕಣ್ಮುಂದೆ ಬಂದು, ಆ ನಿಟ್ಟಿನಲ್ಲಿ ಮಹತ್ವದ್ದಾದ ಏನಾದರೂ ಮಾಡಬೇಕೆಂಬ ಮಹದಾಸೆ ಹುಟ್ಟಿತು. ಅದನ್ನೇ ತಲೆ ತುಂಬಿಕೊಂಡು ಅಮೆರಿಕಾ ತೊರೆದು ತಾಯ್ನಿಡಿಗೆ ಬಂದರು.
ಮರಳಿ ಮಣ್ಣಿಗೆ, ಮೆಡ್ಲೇರಿಗೆ
ಜುಲೈ 1, 1979 ರಂದು ಹಿರೇಮಠರ ಸಂಸಾರ ಅಮೆರಿಕಾ ತೊರೆದು ತಾಯ್ನಿಡಿಗೆ ಕಾಲಿಟ್ಟಿತು. ಜೊತೆಯಲ್ಲಿ ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್ ಎಂಬ ಸಂಸ್ಥೆಯಿತ್ತು. ಇದಲ್ಲದೆ ಹಿರೇಮಠರ ಚಿಂತನೆಗೆ ಬೆಂಬಲವಾಗಿ ನಿಂತ ಅಮೆರಿಕಾದ ಸ್ನೇಹಿತರು ಕೊಟ್ಟ 33 ಸಾವಿರ ಡಾಲರ್‌ನಷ್ಟು ಭಾರಿ ಮೊತ್ತದ ಫಂಡಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಏನಾದರೂ ಸಾಧನೆ ಮಾಡಿಯೇ ತೀರಬೇಕೆಂಬ ಛಲವಿತ್ತು.
ಮೊದಲಿಗೆ ಧಾರವಾಡಕ್ಕೆ ಬಂದ ಹಿರೇಮಠರು, ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರದ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡರು. ಆ ಹಳ್ಳಿಯಲ್ಲಿಯೇ 90 ರೂಪಾಯಿಗೆ ಪುಟ್ಟ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸಿಸತೊಡಗಿದರು. ತಮ್ಮ ಮಕ್ಕಳನ್ನು ಅಲ್ಲಿನ ಸರ್ಕಾರಿ ಶಾಲೆಗೆ ಸೇರಿಸಿದರು. ಆನಂತರ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’ (ಅಂತರರಾಷ್ಟ್ರೀಯ) ಎಂಬ ಸಂಸ್ಥೆ ಸ್ಥಾಪಿಸಿದರು. ಈ ಸೇವಾ ಸಂಸ್ಥೆಯ ಮುಖ್ಯ ಗುರಿ ಗ್ರಾಮೀಣಾಭಿವೃದ್ಧಿ, ಮಹಿಳಾ ಸಶಕ್ತಿಕರಣ. ಮೊದಲಿಗೆ ಸಂಸ್ಥೆಯ ಕಾರ್ಯಕ್ಷೇತ್ರಕ್ಕಾಗಿ ಮೆಡ್ಲೇರಿ ಸುತ್ತಮುತ್ತಲ 30 ಹಿಂದುಳಿದ ಹಳ್ಳಿಗಳನ್ನು ಆರಿಸಿಕೊಂಡು ಕೆಲಸ ಪ್ರಾರಂಭಿಸಿದರು. ಆ ನಂತರ ಸಮಾಜದ ಎಲ್ಲ ಕ್ಷೇತ್ರಗಳ ಜನರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿದರು, ಅವರ ಸಲಹೆ, ಸಹಕಾರ ಪಡೆದರು.
‘ನಾವು ಹಳ್ಳಿಗೆ ಹೋಗದೆ, ಸಿಟಿಯಲ್ಲಿದ್ದುಕೊಂಡು ಗ್ರಾಮೀಣ ಜನರನ್ನು ಉದ್ಧಾರ ಮಾಡುತ್ತೇವೆಂದರೆ, ಅದು ಆಗದ ಕೆಲಸ. ಅಭಿವೃದ್ಧಿ ಕಾರ್ಯ ಮಾಡಬೇಕೆನ್ನುವವರು ಗ್ರಾಮೀಣ ಜನರ ಜೊತೆಗೇ ಇದ್ದು ಪರಿಸ್ಥಿತಿಯ ನೈಜತೆಯನ್ನು ಅರಿಯಬೇಕು. ಆ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ಆ ಕಾರಣಕ್ಕಾಗಿಯೇ ನಾನು, ನನ್ನ ಹೆಂಡತಿ ಮಕ್ಕಳು ಆ ಹಳ್ಳಿಗೇ ಹೋಗಿ ನೆಲೆಸಿದೆವು. ಅಮೆರಿಕಾ ದೇಶದ ಮಹಿಳೆ ತನ್ನ ಮಕ್ಕಳೊಂದಿಗೆ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸಿಸುತ್ತ, ತಮ್ಮೆಲ್ಲರ ಜೊತೆಗೆ ಬೆರೆತು ಬದುಕುತ್ತಿರುವುದನ್ನು ನೋಡಿ ಗ್ರಾಮಸ್ಥರಲ್ಲಿ, ಅದರಲ್ಲೂ ಹಳ್ಳಿಯ ಮಹಿಳೆಯರಲ್ಲಿ ನಮ್ಮ ಬಗ್ಗೆ ವಿಶ್ವಾಸ ಬೆಳೆಯಿತು, ಅವರು ನಮ್ಮೊಂದಿಗೆ ಬೆರೆಯುವುದಕ್ಕೆ ಸುಲಭವಾವಾಯಿತು. ಅವರಲ್ಲಿ ಹೊಸ ಬದುಕಿಗೆ, ಬದಲಾವಣೆಗೆ ಕಾರಣವಾಯಿತು. ಹಳ್ಳಿಗರು ಸ್ವಾವಲಂಬಿಗಳಾಗಿದ್ದು ನಮಗೂ ಸಮಾಧಾನ ತಂದಿತು’ ಎನ್ನುತ್ತಾರೆ ಹಿರೇಮಠರು.
ಸ್ನೇಹಿತರು ಕೊಟ್ಟ ಫಂಡಿನಿಂದ ಮೆಡ್ಲೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರಿಗೆ ಉಪಯುಕ್ತವಾಗುವಂತಹ ಅನೇಕ ಕಾರ್ಯಗಳು- ಗ್ರಾಮ ನೈಮರ್ಲೀಕರಣ, ಹೈನುಗಾರಿಕೆ, ಆರೋಗ್ಯ ಯೋಜನೆ, ಗ್ರಾಮೀಣ ಕೈಗಾರಿಕೆ, ವಯಸ್ಕರ ಶಿಕ್ಷಣ, ಕುರಿ ಸಾಕಾಣಿಕೆ, ಪರಿಸರ ಯೋಜನೆ, ಒಣ ಬೇಸಾಯ ಮತ್ತು ತೋಟಗಾರಿಕೆಗಳನ್ನು ಹಮ್ಮಿಕೊಂಡರು. ಈ ಎಲ್ಲ ಕಾರ್ಯಕ್ರಮಗಳನ್ನು ಮಹಿಳೆಯರೇ ಮಾಡುವಂಥದ್ದು ವಿಶೇಷವಾಗಿತ್ತು.
ಹಿರೇಮಠರ ಕುಟುಂಬ ಮತ್ತು ಸೇವಾ ಸಂಸ್ಥೆಯ ಪರಿಶ್ರಮದ ಫಲವಾಗಿ ಪ್ರಾಜೆಕ್ಟ್‌ಗೆ ಮೀಸಲಿರಿಸಿದ್ದ ಮೂರು ವರ್ಷಗಳಲ್ಲಿ ಐಡಿಎಸ್‌ಗೆ ದುಡಿಯಲು ಹಲವು ಸ್ವಯಂಸೇವಕರು ಮುಂದೆ ಬಂದರು. ಸಂಸ್ಥೆಯ ಕೆಲಸಗಳು ಜನರಲ್ಲಿ ವಿಶ್ವಾಸ ಹುಟ್ಟಿಸತೊಡಗಿದವು. ನಿಧಾನವಾಗಿ ಹಳ್ಳಿಯ ಜನ ಸ್ವಾವಲಂಬಿಗಳಾಗತೊಡಗಿದರು. 1982 ರಲ್ಲಿ ನೆದರ್‌ಲ್ಯಾಂಡ್ ದೇಶದ ಹಿವೋಸ್ (Hivos) ಸಂಸ್ಥೆ ಅಂತರರಾಷ್ಟ್ರೀಯ ಪ್ರಶಸ್ತಿಯಾದ ‘ಜಾಪ್ ವ್ಯಾನ್ ಪ್ರಾಗ್’ (Jaap Van Praag) ಬಹುಮಾನ ನೀಡಿ, ಸಂಸ್ಥೆಯ ಕೆಲಸವನ್ನು ಹೊಗಳಿತು. ಪ್ರಜಾವಾಣಿ ಸಂಸ್ಥೆಯ ‘ಸುಧಾ’ ಕನ್ನಡ ವಾರಪತ್ರಿಕೆ ‘ಶಿಕಾಗೋದಿಂದ ಮೆಡ್ಲೇರಿಗೆ’ ಎಂಬ ಕವರ್ ಸ್ಟೋರಿ ಮಾಡಿ, ಹಿರೇಮಠರ ಸಮಾಜ ಕಲ್ಯಾಣ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿತು.
ಜನಪರ ಹೋರಾಟಕ್ಕೆ ಧುಮುಕಿದ್ದು
ಮೂರು ವರ್ಷಗಳ ಫಂಡಿಂಗ್ ಮುಗಿದು, ಹಳ್ಳಿಗಳ ಜನ ಸ್ವಶಕ್ತಿಯಿಂದ ಬದುಕು ಸಾಗಿಸುತ್ತಿದ್ದಂತೆ, ಹಿರೇಮಠರು ನೈರ್ಮಲ್ಯ ಕುರಿತ ಜನಪರ ಹೋರಾಟವನ್ನು ಕೈಗೆತ್ತಿಕೊಂಡರು. 1983ರಲ್ಲಿ ತುಂಗಭದ್ರಾ ನದಿಗೆ ಹರಿಹರ ಪಾಲಿಫೈಬರ್ ಕಾರ್ಖಾನೆ ಮಾಲಿನ್ಯಪೂರಿತ ನೀರನ್ನು ಬಿಡುತ್ತಿತ್ತು. ಅದರಿಂದ ಸಾವಿರಾರು ಸಂಖ್ಯೆಯ ಮೀನುಗಳು ಸತ್ತು ಬೀಳುತ್ತಿದ್ದವು. ಹರಿಹರ ಮತ್ತು ರಾಣೆಬೆನ್ನೂರಿನ 16 ಹಳ್ಳಿಗಳು ಕಲುಷಿತ ನೀರಿನಿಂದ ತೊಂದರೆಗೊಳಗಾಗಿದ್ದವು. ಕಾರ್ಖಾನೆಯ ವಿರುದ್ಧ ಹೋರಾಟಕ್ಕಿಳಿದಿದ್ದ ‘ತುಂಗಭದ್ರಾ ನದಿಮಾಲಿನ್ಯ ಸಮಿತಿ’ಯವರ ಜೊತೆ ಸೇರಿದ ಹಿರೇಮಠರು, ಹೋರಾಟಕ್ಕೊಂದು ಹೊಸ ತಿರುವು ಕೊಟ್ಟರು. ಅಷ್ಟೇ ಅಲ್ಲದೆ, ದೇಶದ ಶ್ರೀಮಂತರ ಪೈಕಿ ಒಬ್ಬರಾದ ಬಿರ್ಲಾರನ್ನು ಎದುರು ಹಾಕಿಕೊಂಡು, ಅವರ ಒಡೆತನದ ಹರಿಹರ ಪಾಲಿಫೈಬರ್ ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದರು. ಇದು ನಿಜಕ್ಕೂ ಕರ್ನಾಟಕದಲ್ಲಾದ ಬಹಳ ದೊಡ್ಡ ಜನಪರ ಹೋರಾಟಗಳಲ್ಲೊಂದು.
ಆ ನಂತರ, 1984 ರಲ್ಲಿ, ಹಿರೇಮಠರು ಸಮಾನಮನಸ್ಕ ಗೆಳೆಯರೊಂದಿಗೆ ಸೇರಿ ಧಾರವಾಡದಲ್ಲಿ ‘ಸಾಮಾಜಿಕ ಪರಿವರ್ತನಾ ಸಮುದಾಯ’ವನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ಭಾರತದಾದ್ಯಂತ ಅನೇಕರು ಸ್ವಯಂಸೇವಕರಾಗಿ ಕೆಲಸ ಮಾಡಲು ಮುಂದೆ ಬಂದರು. ಈ ಸಂಸ್ಥೆಯ ಮೂಲಕ ಹಿರೇಮಠರು ಕರ್ನಾಟಕದಲ್ಲಿ ಪರಿಸರ ಮಾಲಿನ್ಯ, ಸಾಮೂಹಿಕ ಭೂ ಸಂರಕ್ಷಣೆ, ಉದ್ಯೋಗಖಾತ್ರಿ ಯೋಜನೆ, ಪುನರ್ವಸತಿ ಇತ್ಯಾದಿ ಜನಪರ ಸಮಸ್ಯೆಗಳ ಬಗೆಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದರು. ಈ ಜನಪರ ಹೋರಾಟಗಳಿಗಾಗಿ ‘ಸಮಾಜ ಪರಿವರ್ತನಾ ಸಮುದಾಯ’ ಸಂಸ್ಥೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಯಿತು. ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ 1989 ರಲ್ಲಿ ‘ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ’ ನೀಡಿ ಗೌರವಿಸಿತು.
ಕುಸ್ನೂರು ಸತ್ಯಾಗ್ರಹ
ಹರಿಹರ ಪಾಲಿಫೈಬರ್ ಕಾರ್ಖಾನೆಯ ವಿರುದ್ಧ ಹೋರಾಡುವಾಗ ಹಿರೇಮಠರಿಗೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಾದ ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತರು, ಚಿಪ್ಕೋ ಚಳುವಳಿಯ ನೇತಾರ ಚಂಡಿಪ್ರಸಾದ್ ಭಟ್, ಮಾಜಿ ಸಿಎಂ ಕಡಿದಾಳು ಮಂಜಪ್ಪ, ನ್ಯಾಯಮೂರ್ತಿಗಳಾದ ಡಿ.ಎಂ. ಚಂದ್ರಶೇಖರ್, ಜಸ್ಟೀಸ್ ವಿ.ಎಂ. ತಾರ್ಕುಂಡೆ, ಪತ್ರಕರ್ತ ಕುಲದೀಪ ನಯ್ಯರ್ ಅವರುಗಳ ಪರಿಚಯವಾಯಿತು. ಇವರೊಡಗೂಡಿ ಪಶ್ಚಿಮ ಘಟ್ಟ ಉಳಿಸಿ ಚಳುವಳಿಯನ್ನು ಕೈಗೆತ್ತಿಕೊಂಡರು.
ಸಾಮೂಹಿಕ ಒಡೆತನದ ಅರಣ್ಯ ಭೂಯಿಯನ್ನು ಸರ್ಕಾರ ಉದ್ಯಮಿಗಳಿಗೆ ಕೊಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದರಲ್ಲದೆ, 1992 ರಲ್ಲಿ ‘ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸಸ್’ ಎಂಬ ಸಮಿತಿಯನ್ನು ಸಂಘಟಿಸಿದರು. ಈ ಸಮಿತಿ ಪ್ರಕೃತಿ ಸಂಪನ್ಮೂಲಗಳ ಕಾಯಿದೆ, ಅರಣ್ಯನೀತಿ ರೂಪಿಸುವಲ್ಲಿ ಮತ್ತು ಜನರ ಪುನರ್ವಸತಿ ಕಲ್ಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಈ ಸಮಿತಿಯಲ್ಲಿ ಹಿರೇಮಠರು ಮುಂಚೂಣಿಯ ನಾಯಕರಾಗಿದ್ದರು.
ಧಾರವಾಡ ಜಿಲ್ಲೆಯ ಕುಸ್ನೂರು ಗ್ರಾಮದ ಹತ್ತಿರದಲ್ಲಿರುವ 30 ಸಾವಿರ ಎಕರೆ ಸಾಮೂಹಿಕ ಭೂಮಿಯನ್ನು ಕರ್ನಾಟಕ ಸರ್ಕಾರ ‘ಕರ್ನಾಟಕ ಪಲ್ಪ್‌ವುಡ್’ ಕಂಪನಿಯೊಂದಿಗೆ ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡು, ನೀಲಗಿರಿ ಗಿಡಗಳನ್ನು ಬೆಳೆಸಲು ಅನುಮತಿ ನೀಡಿತ್ತು. ನೀಲಗಿರಿ ನೆಡುವುದರಿಂದ ಭೂಮಿ ಹಾಳಾಗುತ್ತಿತ್ತು ಮತ್ತು ನೀಲಗಿರಿ ಮರದಿಂದ ರೇಯಾನ್ ದಾರ ತೆಗೆಯುವ ಕಾರ್ಖಾನೆಯಿಂದ ಜನರ ಆರೋಗ್ಯ ಕೆಡುವ ಕ್ರಿಮಿನಾಶಕ ತಯಾರಿಕೆಯಿಂದ ಜನರ ಪ್ರಾಣಕ್ಕೇ ಹಾನಿಯಾಗುತ್ತಿತ್ತು. ಇದನ್ನು ವಿರೋಧಿಸಿ ಎಸ್ಪಿಎಸ್ ಸಂಸ್ಥೆ ಸ್ಥಳೀಯ ಜನರನ್ನು ಸಂಘಟಿಸಿ, ‘ಕಿತ್ತಿಕೋ, ಹಚ್ಚಿಕೋ’ (pluck and plant satyagraha) ಚಳುವಳಿ ಹಮ್ಮಿಕೊಂಡಿತು. ಉದ್ಯಮಪತಿಗಳು ನೆಟ್ಟ ನೀಲಗಿರಿ ಗಿಡಗಳನ್ನು 100 ಜನ ಯುವ ಹೋರಾಟಗಾರರು ಕಿತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಅಹಿಂಸಾತ್ಮಕ ಹೋರಾಟಕ್ಕೆ ನಾಂದಿ ಹಾಡಿದರು. ದಿನದಿಂದ ದಿನಕ್ಕೆ ಚಳುವಳಿ ತೀವ್ರಗೊಳ್ಳತೊಡಗಿತು. ಜೊತೆಗೆ ಶ್ರೀಮಂತ ಉದ್ಯಮಿ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸಿ, 1991 ರಲ್ಲಿ ಗೆದ್ದಿದ್ದೂ ಆಯಿತು.
ಈ ಜನಪರ ಹೋರಾಟದ ಗೆಲುವನ್ನು, ದೇಶಕ್ಕೆ ಆಗತಾನೆ ಕಾಲಿಡುತ್ತಿದ್ದ ದೂರದರ್ಶನದ ನ್ಯಾಷನಲ್ ನೆಟ್‌ವರ್ಕ್‌ನವರು ‘ಕುಸ್ನೂರು ಸತ್ಯಾಗ್ರಹ’ ಎಂಬ ಹೆಸರಿನಲ್ಲಿ ಅರ್ಧಗಂಟೆಯ ಕಾರ್ಯಕ್ರಮವಾಗಿ ಪ್ರಚಾರಪಡಿಸಿದರು. ಆ ನಂತರ ಇಂಗ್ಲೆಂಡಿನ ಚಾನಲ್ 4, ಡಿಸ್ಕವರಿ ಚಾನಲ್ಗಳು 90 ನಿಮಿಷಗಳ ವಿಶೇಷ ಕಾರ್ಯಕ್ರಮವನ್ನಾಗಿಸಿ ಪ್ರಪಂಚದಾದ್ಯಂತ ಪ್ರಸಾರ ಮಾಡಿದವು. ಇದು ಚಳುವಳಿನಿರತ ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಯಿತು. ಇಂಥವೇ ಇನ್ನಷ್ಟು ಹೋರಾಟಗಳನ್ನು ಮಾಡಲು ಪ್ರೇರೇಪಿಸಿತು.
ಜೆವಿಎ ಮತ್ತು ಜಿಜಿವಿ
ಜನವಿಕಾಸ ಆಂದೋಲನ ಹಾಗೂ ಗ್ರಾಮ ಗಣರಾಜ್ಯ ವೇದಿಕೆ- ಇವೆರಡು ಹಿರೇಮಠರು ಭಾಗವಹಿಸಿದ ಜನಪರ ಹೋರಾಟಗಳು. ಜನವಿಕಾಸ ಆಂದೋಲನವು ‘ಆಜಾದಿ ಸೇ ಸ್ವರಾಜ್’ ಎನ್ನುವ ಪರಿಕಲ್ಪನೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಜನರ ಒಡೆತನವನ್ನು ಪ್ರತಿಪಾದಿಸುವ ವೇದಿಕೆಯಾಯಿತು. ಜೊತೆಗೆ ಗ್ರಾಮಸಭಾ, ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲಗೊಳಿಸುವ ಜನಾಂದೋಲನವಾಗಿತ್ತು.
ಗ್ರಾಮ ಗಣರಾಜ್ಯ ವೇದಿಕೆಯು ರಾಜ್ಯಮಟ್ಟದ ಜನಪರ ಚಳುವಳಿಯ ವೇದಿಕೆಯಾಗಿತ್ತು. ಈ ವೇದಿಕೆಯ ಮುಖ್ಯ ಕೆಲಸವೆಂದರೆ ಕರ್ನಾಟಕದಲ್ಲಿ ‘ಪಂಚಾಯತಿ ರಾಜ್ ಆಕ್ಟ್-1993’ಕ್ಕೆ ಅನೇಕ ಬದಲಾವಣೆಗಳನ್ನು ತಂದು ‘ಪಂಚಾಯತ್ ರಾಜ್ ಅಮೆಂಡ್ಮೆಂಟ್ ಆಕ್ಟ್-2003’ ಅನ್ನು ಜಾರಿಗೆ ತರುವಂತೆ ಮಾಡಿದುದಾಗಿದೆ. ಅಲ್ಲದೆ ಐತಿಹಾಸಿಕವಾದ ಕುಸ್ನೂರು ಸತ್ಯಾಗ್ರಹದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದುದಾಗಿದೆ.
ಮಾಲಿಕ್ ಮಖಬೂಜ ಸ್ಕ್ಯಾಂಡಲ್‌
ಮಧ್ಯಪ್ರದೇಶ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿ ಹುಟ್ಟಿದ ಆದಿವಾಸಿ ಹೋರಾಟವಿದು. ಬಸ್ತರ್ ಜಿಲ್ಲೆ ಈಗ ಛತ್ತಿಸ್‌ಗಡ್ ರಾಜ್ಯಕ್ಕೆ ಸೇರಿದೆ. ಅಲ್ಲಿಯ ಕಲೆಕ್ಟರ್ ಆದಿವಾಸಿಗಳ ಶೋಷಣೆ ಮತ್ತು ಅರಣ್ಯನಾಶದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಬಸ್ತರ್ ಜಿಲ್ಲೆಯಲ್ಲಿದ್ದವರು ಹಿಂದುಳಿದ ಆದಿವಾಸಿಗಳು. ಇವರಲ್ಲಿಯೇ ಕೆಲವರು ಸಮಾಜದ ದುಷ್ಟಶಕ್ತಿಗಳೊಂದಿಗೆ ಕೈ ಜೋಡಿಸಿ ಬೆಲೆಬಾಳುವ ತೇಗ, ಹೊನ್ನೆ, ಬೀಟೆ ಮರಗಳನ್ನು ಕಡಿದು ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಇದಕ್ಕೆ ಬೆಂಬಲವಾಗಿ ನಿಂತಿದ್ದು ಟಿಂಬರ್ ಮಾಫಿಯಾ.
ಕಲೆಕ್ಟರ್ ಕೊಟ್ಟ ದೂರಿಗೆ, ಮಾಡಿಕೊಂಡ ಮನವಿಗೆ ಸರ್ಕಾರದ ಮಟ್ಟದಲ್ಲಿ ಮನ್ನಣೆ ಸಿಗಲಿಲ್ಲ. ಆಗ ಅಲ್ಲಿಯ ಕೆಲವರು ಸಮಾಜ ಪರಿವರ್ತನಾ ಸಮುದಾಯ ಈ ಹೋರಾಟವನ್ನು ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಇದೇ ಹಿರೇಮಠರು ಛತ್ತೀಸ್‌ಗಡ್‌ಗೆ ಹೋಗಿ ಅಲ್ಲಿಯ ಮೂಲನಿವಾಸಿಗಳೊಂದಿಗೆ ಒಡನಾಡಿ, ಅವರಲ್ಲಿ ಅರಿವು ಮೂಡಿಸುವ, ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸದಲ್ಲಿ ನಿರತರಾದರು. ಮುಂದುವರೆದು ಸಾಮೂಹಿಕ ಅರಣ್ಯನಾಶದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದರು. ಆ ದಾವೆಯ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಸಿಬಿಐ ತನಿಖೆ ಆದೇಶಿಸಿತು. ಕೊನೆಗೆ ಗೆಲುವು ಆದಿವಾಸಿಗಳ ಪರವಾಯಿತು. ಅದರ ಪರಿಣಾಮವಾಗಿ ಮರ ಕಡಿಯುವುದಕ್ಕೆ ಮೂರು ವರ್ಷಗಳ ನಿಷೇಧ ಹೇರಲಾಯಿತು. ಮರಗಳನ್ನು ಕಡಿಯುವುದು ನಿಂತು ಅರಣ್ಯ ಸಂಪತ್ತು ಜನರ ಸ್ವತ್ತಾಯಿತು.
‘ಈ ಅನುಭವ ಇದೆಯಲ್ಲ, ಇದು ನಮಗೆ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ಧದ ಹೋರಾಟಕ್ಕೆ ತುಂಬಾ ಸಹಕಾರಿಯಾಯಿತು. ಜನರನ್ನು ಸಂಘಟಿಸುವುದು, ಚಳುವಳಿ ರೂಪಿಸುವುದು, ಬಲಾಢ್ಯರ ವಿರುದ್ಧ ಹೋರಾಡುವುದಕ್ಕೆ ಇದು ಮೊದಲ ಮೆಟ್ಟಿಲಾಯಿತು. ಇದ್ದ, ಬೇಕಾದ ಕಾನೂನು ಕ್ರಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಈ ಹಿಂದಿನ ಹೋರಾಟಗಳೆಲ್ಲ ಒಂದೊಂದು ರೀತಿಯ ಅನುಭವ ನೀಡಿ, ನೆರವಿಗೆ ಬಂದವು’ ಎಂದು ನೆನಪಿಸಿಕೊಳ್ಳುವ ಹಿರೇಮಠರು ಆ ನಂತರ ಕೈಗೆತ್ತಿಕೊಂಡಿದ್ದು ಕರ್ನಾಟಕದ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಗಣಿಮಾಫಿಯಾ ವಿರುದ್ಧದ ಹೋರಾಟ.
ಗಣಿಗಾರಿಕೆಯ ವಿರುದ್ಧ ಹೋರಾಟ
ಬಿಜೆಪಿ ಸರ್ಕಾರ ಬಂದ ನಂತರ, ಗಣಿರಾಜಕಾರಣದಿಂದಾಗಿ ಪ್ರಕೃತಿ ಸಂಪತ್ತಿನ ಲೂಟಿ ಎಲ್ಲೆ ಮೀರಿ ಹೋಗಿತ್ತು. ಅಕ್ರಮ ಗಣಿಗಾರಿಕೆಯ ಬಗ್ಗೆ ರಾಜಕೀಯ ಪಕ್ಷಗಳಿಂದ ಆರೋಪ ಪ್ರತ್ಯಾರೋಪ, ಮಾಧ್ಯಮಗಳಲ್ಲಿ ಕಂಡೂ ಕಾಣದಂತಹ ವರದಿಗಳಷ್ಟೇ ಕಾಣಸಿಗುತ್ತಿದ್ದವು. ಒಂದು ಗಟ್ಟಿ ಧ್ವನಿ ಯಾರಿಂದಲೂ ಕೇಳಿಬರುತ್ತಿರಲಿಲ್ಲ. ಗಣಿ ಧೂಳು ಬಿಜೆಪಿಗಿಂತಲೂ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಮೆತ್ತಿಕೊಂಡಿತ್ತು. ಈ ಪಕ್ಷಗಳಿಗೆ ಗಣಿ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇರಲಿಲ್ಲ. ಗಣಿಧಣಿ ಜನಾರ್ದನ ರೆಡ್ಡಿಯ ಲೂಟಿಯನ್ನು ಖಂಡಿಸಿ ಬರೆಯುವ ಪತ್ರಕರ್ತರಿಗಿಂತ, ಬರೆಯದೆ ಉಳಿದ ಪತ್ರಕರ್ತರೇ ಹೆಚ್ಚಾಗಿದ್ದರು. ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳು, ಪ್ರಗತಿಪರರು ಟೋಕನ್ ಪ್ರೊಟೆಸ್ಟ್ ಮಾಡಿ ಸುಮ್ಮನಾಗಿದ್ದರು. ಕೆಲವರು ಅದನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಒಗ್ಗಿಸಿಕೊಂಡು, ಲಾಭದ ಮಾರ್ಗ ಕಂಡುಕೊಂಡಿದ್ದರು.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನಾರ್ದನ ರೆಡ್ಡಿಗೆ ಕಾನೂನು ಹೋರಾಟದ ಮೂಲಕ ಪಾಠ ಕಲಿಸಲು ಹೊರಟವರು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್. 2002ರಿಂದಲೇ ಅಕ್ರಮ ಗಣಿಗಾರಿಕೆಯ ಬಗೆಗೆ ಕ್ಷೇತ್ರಕಾರ್ಯ, ಅಧ್ಯಯನದಲ್ಲಿ ತೊಡಗಿ ದಾಖಲೆಗಳನ್ನು ಸಂಗ್ರಹಿಸತೊಡಗಿದರು. 2009ರಲ್ಲಿ ಖ್ಯಾತ ವಕೀಯ ಪ್ರಶಾಂತ್ ಭೂಷಣ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಅದರೊಂದಿಗೆ 1274 ಪುಟಗಳಷ್ಟು ದಾಖಲೆ, ಪುರಾವೆಗಳನ್ನು ಕೋರ್ಟಿನ ಮುಂದಿಟ್ಟರು. ಎಲ್ಲವನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ‘ಕೇಂದ್ರ ಉನ್ನತಾಧಿಕಾರ ಸಮಿತಿ’ಯನ್ನು ರಚಿಸಿ ವಸ್ತುಸ್ಥಿತಿಯ ಪರಾಮರ್ಶೆ ಮತ್ತು ಸಾಕ್ಷ್ಯಗಳ ಸಂಗ್ರಹಣೆಗೆ ಆದೇಶ ನೀಡಿತು.
ಆದರೆ, ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳೇ ಮೈನಿಂಗ್ ಮಾಫಿಯಾ ಜೊತೆ ಕೈಜೋಡಿಸಿದ್ದರಿಂದ ಹಿರೇಮಠರ ಪ್ರಯತ್ನಕ್ಕೆ ಹಿನ್ನಡೆಯಾಯಿತು. ಛಲ ಬಿಡದ ಹಿರೇಮಠ್, ರೆಡ್ಡಿಗೆ ನೀಡಿರುವ ಮೈನಿಂಗ್ ಪರವಾನಗಿಯನ್ನು ರದ್ದು ಮಾಡಬೇಕೆಂದು 499 ಪುಟಗಳ ಕಾರಣಸಹಿತ ಮನವಿಯನ್ನು ಮತ್ತೆ ಸುಪ್ರೀಂ ಕೋರ್ಟಿನ ಮುಂದಿಟ್ಟರು. ಕರ್ನಾಟಕ-ಆಂಧ್ರ ಗಡಿ ಕುರುಹುನಾಶ, ಸುಗ್ಗುಲಮ್ಮ ದೇವಾಲಯವನ್ನೇ ಇಲ್ಲದಂತೆ ಮಾಡಿದ್ದು, ಸರ್ಕಾರಿ ಯಂತ್ರದ ದುರುಪಯೋಗ, ಅಧಿಕಾರ ದುರ್ಬಳಕೆ ಇವೆಲ್ಲವನ್ನು ಪುರಾವೆ ಸಮೇತ ಕೋರ್ಟಿಗೆ ಸಲ್ಲಿಸಿದರು. ಕೊನೆಗೆ ಕೇಂದ್ರ ಉನ್ನತಾಧಿಕಾರ ಸಮಿತಿ ಹಿರೇಮಠರ ಸಾಕ್ಷ್ಯಗಳಿಗೆ ತಲೆದೂಗಿ ಪರವಾನಗಿ ರದ್ದಿಗೆ ಶಿಫಾರಸು ಮಾಡಿತು. ಜನಾರ್ದನ ರೆಡ್ಡಿ ಮತ್ತವರ ಸಹೋದರರ ಮೈನಿಂಗ್ ಲೈಸೆನ್ಸ್ ರದ್ದಾಯಿತು. ರೆಡ್ಡಿ ಮನೆ ಮೇಲೆ ಸಿಬಿಐ ದಾಳಿಯಾಗಿ, ರೆಡ್ಡಿಯ ಬಂಧನವಾಯಿತು. ಚಂಚಲಗುಡ ಜೈಲು ಸೇರುವಂತಾಯಿತು. ಅದರ ಮುಂದುವರೆದ ಭಾಗವಾಗಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕುರ್ಚಿಯಿಂದ ಕೆಳಗಿಳಿದು ಜೈಲಿಗೆ ಹೋಗುವಂತಾಯಿತು.
ಸ್ಫೂರ್ತಿ ಮತ್ತು ಪ್ರೇರಣೆ
ಅಮೆರಿಕಾದಲ್ಲಿ ಎಂಎಸ್, ಎಂಬಿಎಗಳಂತಹ ಉನ್ನತ ವ್ಯಾಸಂಗ ಮಾಡಿ ಪ್ರತಿಷ್ಠಿತ ಹುದ್ದೆಗಳನ್ನು ನಿರ್ವಹಿಸಿದವರು ಮತ್ತೆ ಭಾರತಕ್ಕೆ ಬರುತ್ತಾರೆ, ಬಂದು ಗ್ರಾಮೀಣ ಬಡಜನರ ಅಭಿವೃದ್ಧಿಗಾಗಿ, ಸಾಮಾಜಿಕ ನ್ಯಾಯಪರ ಹೋರಾಟಗಳಿಗಾಗಿ ಈ ಕಾಲದಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಡುತ್ತಾರೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಹಿರೇಮಠರು ಅದನ್ನು ಮಾಡಿ ತೋರಿಸಿದ್ದಾರೆ. ತೋರುತ್ತಲೂ ಇದ್ದಾರೆ. ಸರಳವಾಗಿ ಬದುಕುವ, ಜನಶಕ್ತಿಯಲ್ಲಿ ನಂಬಿಕೆ ಇಟ್ಟಿರುವ, ನ್ಯಾಯ ವ್ಯವಸ್ಥೆಯನ್ನು ಅಸ್ತ್ರದಂತೆ ಬಳಸಿಕೊಂಡಿರುವ, ಭ್ರಷ್ಟರ ವಿರುದ್ಧ ಸಮರ ಸಾರಿರುವ ಈ ಹಿರೇಮಠರು ಮೆದುಮಾತಿನ ಸಜ್ಜನರು. ಇವರ ಇಂತಹ ನಿಸ್ವಾರ್ಥ ಸಮಾಜಸೇವೆಗೆ ಸ್ಫೂರ್ತಿಯಾದವರು, ಸಮಾಜ ಕಲ್ಯಾಣ ಕಾರ್ಯಗಳಿಗೆ ಪ್ರೇರಣೆಯಾದವರು ಯಾರು? ಎಂದರೆ, ಅವರು ಹಲವು ವ್ಯಕ್ತಿಗಳನ್ನು, ಪುಸ್ತಕಗಳನ್ನು, ಘಟನೆಗಳನ್ನು, ಭಾಷಣಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
‘‘ಮೊದಲಿಗೆ ನನ್ನ ತಾಯಿ. ನಮ್ತಂದೆ ಸತ್ತಾಗ ನಮ್ಮ ಕುಟುಂಬವನ್ನು ನಿಭಾಯಿಸಿದ ಆಕೆಯ ಧೈರ್ಯ ನನ್ನನ್ನು ಪ್ರಭಾವಿಸಿತು. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು ಎಂಬುದನ್ನು ನನ್ನ ತಾಯಿ ತೋರಿಸಿಕೊಟ್ಟಳು. ಆಮೇಲೆ ನನ್ನ ಹಳ್ಳಿಯ ಜನ, ನನ್ನ ವಿದ್ಯಾಭ್ಯಾಸಕ್ಕೆ ನೆರವಾದ ರೀತಿ. ಆ ನಂತರ ಬಾಲ್ಯದಲ್ಲಿಯೇ ಶಿವರಾಮ ಕಾರಂತರು, ‘ನಾವು ಹುಟ್ಟಿದ್ದು ಬೆಳೆದದ್ದು, ಪಡೆದದ್ದು ಸಮಾಜದಿಂದ, ಹಾಗಾಗಿ ಈ ಸಮಾಜದ ಬಗ್ಗೆ ಕಾಳಜಿ ವಹಿಸಬೇಕು, ವಹಿಸದಿದ್ದರೆ ಅದರ ಆರೋಗ್ಯ ಕೆಡುತ್ತದೆ, ಆಗ ದೇಶ ಕೆಡುತ್ತದೆ. ಹಾಗಾಗಿ ಸ್ವಸ್ಥ ಸಮಾಜಕ್ಕಾಗಿ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು’ ಎಂಬ ಮಾತು ನನ್ನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿತು. ಯಾಕೆಂದರೆ ನಾನು ಬೆಳೆದು ಬಂದಿದ್ದೇ ಈ ಸಮಾಜದಿಂದ. ಹಾಗಾಗಿ ಈ ಮಾತು ನನ್ನನ್ನು ಕುರಿತೇ ಹೇಳಿದಂತಿತ್ತು.
‘‘ಆಮೇಲೆ ಜಯಪ್ರಕಾಶ್ ನಾರಾಯಣ ಮತ್ತು ಎಚ್.ವಿ. ಕಾಮತ್‌ರ ಜನಪರ ಚಿಂತನೆಗಳು, ಭಾರತದ ಬಡವರಿಗಾಗಿ ಕೆಲಸ ಮಾಡುತ್ತಿದ್ದ ನನ್ನ ಐಐಟಿ ಗೆಳೆಯರು, ಷೂ ಮೇಕರ್ ಅವರ ಸ್ಮಾಲ್ ಈಸ್ ಬ್ಯೂಟಿಫುಲ್ ಪುಸ್ತಕ, ನ್ಯೂಟನ್‌ನ ಫಾರ್ಮುಲಾ, ಗಾಂಧೀಜಿಯವರ ‘ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ, ಸರ್ವಜ್ಞನ ವಚನಗಳು, ಜಾಮ್ಖೇಡ್‌ನ ಡಾ. ರಜನೀಕಾಂತ್ ದಂಪತಿಗಳು ಹಳ್ಳಿ ಹೆಂಗಸರ ಆರೋಗ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಬಗೆ, ಕೇರಳದಲ್ಲಿ ಕಂಡುಬಂದ ಮಾದರಿ ಕೃಷಿ... ಇವೆಲ್ಲವೂ ನನಗೆ ಸ್ಫೂರ್ತಿ ನೀಡಿವೆ.‘‘ಇವೆಲ್ಲಕ್ಕಿಂತಲೂ ಮುಖ್ಯವಾಗಿ ನನ್ನನ್ನು ಆಳವಾಗಿ ಕಲಕಿದ್ದು, ಪ್ರಭಾವಿಸಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರು ನವಂಬರ್ 26, 1949 ರಂದು ಮಾಡಿದ ಕೊನೆಯ ಭಾಷಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆ ಅವರಿಗಿದ್ದ ಕಾಳಜಿ, ಕಳಕಳಿ ಮತ್ತು ಪ್ರೀತಿ ನನ್ನನ್ನು ಮತ್ತೆ ಗ್ರಾಮಗಳತ್ತ ಮುಖ ಮಾಡಲು ಪ್ರೇರೇಪಿಸಿತು.

‘‘ಜನಪರ ಹೋರಾಟಗಳಲ್ಲಿ ತತ್ವ-ಸಿದ್ಧಾಂತಗಳಿಗಿಂತಲೂ ನಂಬಿಕೆ, ಪ್ರಾಮಾಣಿಕತೆ ಬಹಳ ಮುಖ್ಯ. ಅದಿದ್ದರೆ ಜನ ತಾನೇ ತಾನಾಗಿ ನಮ್ಮ ಬೆನ್ನ ಹಿಂದೆ ಇರುತ್ತಾರೆ. ನಮ್ಮ ಹೋರಾಟಗಳನ್ನು ಬೆಂಬಲಿಸುತ್ತಾರೆ. ಇಷ್ಟಿದ್ದರೆ, ಯಾವ ಬಲಾಢ್ಯ ಶಕ್ತಿಗಳಿಗೂ ಹೆದರಬೇಕಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದು ಹಾಗೂ ಕೆಟ್ಟದು- ಏನು ಬೇಕಾದರೂ ಆಗಬಹುದು. ಸಮಾಜದಲ್ಲಿ ಮೌಲ್ಯ, ನೈತಿಕತೆ ಇನ್ನೂ ಇದೆ. ಒಳ್ಳೆಯವರು, ಮಾನವಂತರು, ಪ್ರಾಮಾಣಿಕರು ಈಗಲೂ ಇದ್ದಾರೆ. ಅವರಿಂದಲೇ ನಮ್ಮ ಹೋರಾಟಗಳಿಗೆ ಜಯ ದೊರಕುತ್ತಿರುವುದು. ನಾನು-ನಮ್ಮ ಸಂಸ್ಥೆ ಇಲ್ಲಿ ನೆಪಮಾತ್ರವಷ್ಟೆ. ಸಮಾಜದ ಸಲುವಾಗಿ ಮಾಡುವ ಕೆಲಸಗಳಿಂದ ಸಂತೃಪ್ತಿ, ಸಮಾಧಾನ ಸಿಕ್ಕಿದೆ. ನ್ಯಾಯ ನೀತಿ ಧರ್ಮಗಳಿಗೆ ಬೆಲೆ ಬಂದಿದೆ. ಇದಕ್ಕಿಂತ ಇನ್ನೇನೂ ಬೇಕಿಲ್ಲ’’ ಎನ್ನುವ ಎಸ್.ಆರ್. ಹಿರೇಮಠರನ್ನು ಮುಂದಿನ ಪೀಳಿಗೆ ಮಾದರಿಯಾಗಿಟ್ಟುಕೊಂಡರೆ, ಆರೋಗ್ಯವಂತ ಸಮಾಜ ಮತ್ತು ಅಭಿವೃದ್ಧಿಶೀಲ ರಾಷ್ಟ್ರದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ, ಅಲ್ಲವೆ?