ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಯನ್ನು ಮಾಡಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರವಂತೂ ಕ್ಷಣಕ್ಕೊಂದು ಕಂಪನಿ ಕಣ್ಮುಚ್ಚುವ ಸ್ಥಿತಿಗೆ ತಲುಪಿ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಎಲ್ಲಾ ಕಾಲದಲ್ಲೂ ಜನರ ನಂಬಿಕೆಗೆ ಪಾತ್ರವಾಗಿದ್ದ ಬ್ಯಾಂಕಿಂಗ್, ಇನ್ಶೂರೆನ್ಸ್ ಕ್ಷೇತ್ರಗಳು ಮೊಟ್ಟಮೊದಲ ಬಾರಿಗೆ ಪಲ್ಲಟಕ್ಕೊಳಕ್ಕಾಗಿ ಪತರಗುಡುತ್ತಿವೆ. ಇನ್ನು ಇದ್ದಕ್ಕಿದ್ದಂತೆ ಆಕಾಶಕ್ಕೆ ಏರಿದ್ದ ಷೇರ್ ಮಾರ್ಕೆಟ್, ರಿಯಲ್ ಎಸ್ಟೇಟ್ ವಲಯಗಳ ವ್ಯವಹಾರವಂತೂ ಏರಿದ್ದಷ್ಟೇ ವೇಗವಾಗಿ ಇಳಿದು, ಆ ವಲಯಗಳನ್ನು ಅವಲಂಬಿಸಿದ್ದ ಅಪಾರ ಜನರನ್ನು ಚಿಂತಾಕ್ರಾಂತರನ್ನಾಗಿ ಮಾಡಿಬಿಟ್ಟಿದೆ. ಆಶ್ಚರ್ಯಕರ ಸಂಗತಿ ಎಂದರೆ, ಇವೆಲ್ಲವನ್ನೂ ಸುದ್ದಿಯನ್ನಾಗಿ ಮಾಡಿ ಮಾರುತ್ತಿದ್ದ, ಅವುಗಳಿಂದ ಹರಿದು ಬರುತ್ತಿದ್ದ ಕೋಟ್ಯಂತರ ರೂಪಾಯಿಗಳ ಜಾಹಿರಾತನ್ನು ಅವಲಂಬಿಸಿಯೇ ಬದುಕುತ್ತಿದ್ದ, ಓದುಗರನ್ನು ಮರೆತು ಜಾಹಿರಾತೇ ಅಂತಿಮ ಎಂದು ನಿರ್ಧರಿಸಿದ್ದ ಸುದ್ದಿ ಮಾಧ್ಯಮ ಕ್ಷೇತ್ರ ಕೂಡ ಇವತ್ತು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕು ಒದ್ದಾಡುತ್ತಿದೆ. ಕಾರ್ಪೋರೇಟ್ ಕಂಪನಿಗಳಿಂದ ಜಾಹಿರಾತಿನ ಮೂಲಕ ಹರಿದು ಬರುತ್ತಿದ್ದ ಹಣ ನಿಂತಿದ್ದರಿಂದ ನಷ್ಟಕ್ಕೊಳಗಾಗಿ ನೆಲ ಹಿಡಿದು ಮಲಗುವಂತಾಗಿದೆ. ![]() ಇದು ವಿದೇಶಿ ಸುದ್ದಿ ಸಂಸ್ಥೆಗಳ ಸುದ್ದಿಯಾಯಿತು; ದೇಸಿ ಸುದ್ದಿ ಸಂಸ್ಥೆಗಳ ಕತೆ? ಅವುಗಳ ಮೇಲೆ ಬಿದ್ದ ಪರಿಣಾಮ, ಇವುಗಳ ಮೇಲೆ ಬೀಳದೇ ಇರುತ್ತದೆಯೇ? ಜಾಗತೀಕರಣಕ್ಕೆ ಭಾರತ ಬಾಗಿಲು ತೆರೆದ ತಕ್ಷಣ, ಮಾಧ್ಯಮ ಕ್ಷೇತ್ರ ಪರ-ವಿರೋಧಗಳ ಮಾತುಗಳನ್ನಾಡುತ್ತಲೇ ಮುಕ್ತ ಮಾರುಕಟ್ಟೆಯ ಮಂತ್ರದಂಡಕ್ಕೆ ತಲೆಬಾಗಿತು. ಅಭಿವೃದ್ಧಿ ಪತ್ರಿಕೋದ್ಯಮ ಹಲವರ ಆಸೆಗಳನ್ನು ಗರಿಗೆದರಿಸಿತು. ಅನಂತ ಸಾಧ್ಯತೆಗಳತ್ತ ಕೈಚಾಚಿತು. ಅದರ ಪರಿಣಾಮವಾಗಿ ‘ಹೌ ಟು ಸೆಲ್ ಮೈ ರೈಟಿಂಗ್ಸ್’ ಎಂಬ ತತ್ವ ಈಗ ಇಲ್ಲೂ ಚಾಲ್ತಿಯಲ್ಲಿದೆ. ಸಂಬಳಕ್ಕಾಗಿ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸಕ್ಕಿಂತ ಇದೇನು ಭಿನ್ನ ಎಂಬ ತರ್ಕ ತಾಂಡವವಾಡುತ್ತಿದೆ. ಎಲ್ಲ ಕೆಲಸವೂ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸವೇ. ಆದರೆ ಅಲ್ಲೂ, ಅಲ್ಪಸ್ವಲ್ಪವಾದರೂ ನೀತಿ-ನಿಯತ್ತು, ತತ್ವ-ಸಿದ್ಧಾಂತ, ದೇಶ-ಭಾಷೆ ಇರಬೇಕಲ್ಲವೇ? ಜನರಿಟ್ಟ ನಂಬಿಕೆಗೆ ದ್ರೋಹ ಬಗೆಯಬಾರದಲ್ಲವೆ? ಬದ್ಧತೆ ಎನ್ನುವುದು ಇವತ್ತು ಬರಿ ಮಾತಿನ ಬದನೆಕಾಯಿ ಆಗಿದೆ. ಅಭಿವೃದ್ಧಿ, ಹಣವೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಲವಾರು ಸುದ್ದಿ ಸಂಸ್ಥೆಗಳು ನಮ್ಮಲ್ಲೂ ಇವೆ. ಜಾಗತಿಕ ಆರ್ಥಿಕ ಹಿಂಜರಿತ, ವಿದೇಶಿ ಸುದ್ದಿ ಮಾಧ್ಯಮಗಳಿಗಷ್ಟೇ ಬಿಸಿ ಮುಟ್ಟಿಸಿಲ್ಲ, ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಇಲ್ಲಿನ ಸುದ್ದಿ ಸಂಸ್ಥೆಗಳಿಗೂ ನಷ್ಟದ ಕಷ್ಟ ಕೊಡುತ್ತಿದೆ. ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಎನ್‌ಡಿಟಿವಿ, ಅದನ್ನೇ ಅನುಕರಿಸುತ್ತಿರುವ ಸಿಎನ್‌ಎನ್ ಐಬಿಎನ್ ಸುದ್ದಿ ಸಂಸ್ಥೆಗಳು ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವುದಾಗಿ ಲೆಕ್ಕಪತ್ರ ಸಲ್ಲಿಸಿವೆ. ಇತ್ತೀಚೆಗೆ ಶುರುವಾದ, ಕನ್ನಡದ ಕಂಪನ್ನು ಸೂಸುವ ಕನ್ನಡದ ಏಕೈಕ ಟಿವಿ ಚಾನಲ್ ಒಟ್ಟಿಗೇ ೮೦ ನೌಕರರ ಪಟ್ಟಿ ತಯಾರಿಸಿ, ಕೆಲಸದಿಂದ ತೆಗೆಯಲು ಸಿದ್ಧವಾಗಿದೆ. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕಾ ಸಮೂಹ ಪತ್ರಕರ್ತರು ಮತ್ತು ಸಿಬ್ಬಂದಿಯ ಸಂಬಳದಲ್ಲಿ ಶೇಕಡಾ ೩೦ ಕಡಿತಗೊಳಿಸಲು ತೀರ್ಮಾನಿಸಿದ ಸುದ್ದಿ ಹೊರಬಿದ್ದಿದೆ. ಕನ್ನಡದ ಅಷ್ಟೂ ಚಾನೆಲ್‌ಗಳು ಖರ್ಚು ಕಡಿಮೆ ಮಾಡಲು ‘ನಿಷ್ಪ್ರಯೋಜಕರ ಪಟ್ಟಿ’ ತಯಾರಿಸಿಟ್ಟುಕೊಂಡು, ಕೆಲಸಗಾರರಲ್ಲಿ ದಿಗಿಲು ಹುಟ್ಟಿಸಿವೆಯಂತೆ. ![]() ಇತ್ತೀಚಿನ ದಿನಗಳಲ್ಲಿ ‘ಟೈಮ್ಸ್’ ರಿಯಲ್ ಎಸ್ಟೇಟ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಪುರವಣಿಗಳಲ್ಲಿ ಜಾಹಿರಾತುಗಳೇ ಇಲ್ಲದೆ, ಹಳೆಯ ಜಾಹಿರಾತುಗಳನ್ನೇ ಮತ್ತೆ ಮುದ್ರಿಸಿ, ಈಗಲೂ ಆ ಜಗತ್ತು ಹಾಗೆಯೇ ಇದೆ ಎಂಬ ಭ್ರಮೆ ಬಿತ್ತಿ, ಆ ಮೂಲಕ ಇತರರನ್ನು ಸೆಳೆಯುವ ಕೆಟ್ಟ ತಂತ್ರಕ್ಕೂ ಕೈ ಹಾಕಿದೆ. ಜಾಹಿರಾತು ದರವನ್ನೂ ಇಳಿಸಿದೆ. ಒಂದು ಜಾಹಿರಾತು ನೀಡಿದರೆ- ಒಂದಕ್ಕೆ ನಾಲ್ಕು (ಎಕಾನಾಮಿಕ್ ಟೈಮ್ಸ್, ಕನ್ನಡ ಟೈಮ್ಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ, ಬೆಂಗಳೂರು ಮಿರರ್) ಉಚಿತ ಎಂದು ಜಾಹಿರಾತು ನೀಡಿ ಜಾಹಿರಾತುದಾರರನ್ನೂ ಆಕರ್ಷಿಸುತ್ತಿದೆ. ಇಲ್ಲಿ ಟೈಮ್ಸ್ ಆಫ್ ಇಂಡಿಯಾವನ್ನೇ ಯಾಕೆ ಮುಖ್ಯವಾಗಿಟ್ಟುಕೊಂಡು ಇಷ್ಟೆಲ್ಲ ಹೇಳಲಾಗುತ್ತಿದೆ ಎಂದರೆ, ಟೈಮ್ಸ್ ಪತ್ರಿಕೆಯಿಂದ ಕರ್ನಾಟಕದ ಪತ್ರಿಕೋದ್ಯಮದಲ್ಲಾದ ಬದಲಾವಣೆಗಳು ಅಷ್ಟಿಷ್ಟಲ್ಲ. ಟೈಮ್ಸ್‌ನ ಮಾಲೀಕರು ಉತ್ತರದ ಮಾರ್ವಾಡಿಗಳು. ಪತ್ರಿಕೋದ್ಯಮವನ್ನು ಉದ್ಯಮವನ್ನಾಗಿ ನೋಡಿದವರು ಮತ್ತು ಅದನ್ನು ಅಭಿವೃದ್ಧಿಪಡಿಸಲು ಬೇಕಾದ ತಂತ್ರಗಳನ್ನು, ಗಿಲೀಟುಗಳನ್ನು ಜಾಣ್ಮೆಯಿಂದ ಜಾರಿಗೆ ತಂದವರು. ಸ್ಥಳೀಯ ಪತ್ರಕರ್ತರನ್ನು ಅನುಕೂಲಕ್ಕೆ ತಕ್ಕ ಅಸ್ತ್ರಗಳನ್ನಾಗಿ ಬಳಸಿದವರು. ಆದರೆ ಆ ಪತ್ರಿಕೆಯ ಒಲವು-ನಿಲುವುಗಳೇ ಬೇರೆ. ಉದ್ದೇಶ-ವ್ಯಾಪ್ತಿಗಳೇ ಬೇರೆ. ಅದರ ಸಹಜ ವ್ಯಾವಹಾರಿಕ ಬುದ್ಧಿಯಂತೆ ಅದು ಒತ್ತು ನೀಡಿದ್ದು ಕಾರ್ಪೋರೇಟ್ ಕಲ್ಚರ್‌ಗೆ. ಆ ಕಲ್ಚರ್‌ನ ಶ್ರೀಮಂತ ಜನ, ಆ ಕಲ್ಚರ್‌ನಲ್ಲಿ ಕಾಣಿಸಿಕೊಳ್ಳಲು ಹಾತೊರೆಯುವ ಮೇಲ್‌ಮಧ್ಯಮ ವರ್ಗ, ಅವರ ಪಾರ್ಟಿಗಳು, ತೆವಲುಗಳು, ಮೋಜುಗಳು- ಅದಕ್ಕೇ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿತು. ಅದಕ್ಕೆ ತಕ್ಕಂತೆ ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿ, ರಿಯಲ್ ಎಸ್ಟೇಟ್ ಸಿಟಿಯಾಗಿ ಜನರ ಕೈಯಲ್ಲಿ ಕಾಸು ಚೆಲ್ಲಾಡತೊಡಗಿದಾಗ, ಟೈಮ್ಸ್ ಎಲ್ಲರ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು. ಹಾಗಂತ ಟೈಮ್ಸ್‌ನಲ್ಲಿ ಬರೀ ಪೇಜ್ ತ್ರೀ ಕಲ್ಚರಷ್ಟೇ ಇರುತ್ತೆ ಎಂದಲ್ಲ, ಅಲ್ಲಿ ಸೀನಿಯರ್ ರೈಟರ್‌ಗಳ ಸೀರಿಯಸ್ಸಾದ ರೈಟಪ್‌ಗಳೂ ಪ್ರಕಟವಾಗುತ್ತವೆ. ಆಧ್ಯಾತ್ಮಿಕ, ಆರೋಗ್ಯದ ಚಿಂತನೆಗಳಿಗೂ ಜಾಗ ಕಲ್ಪಿಸಿಕೊಡಲಾಗುತ್ತದೆ. ಜಾತ್ಯತೀತ, ಪ್ರಗತಿಪರ, ವೈಚಾರಿಕ ನೀತಿ, ನಿಲುವುಗಳಿಗೂ ಪ್ರಾಶಸ್ತ್ಯವಿರುತ್ತದೆ. ವಿಜ್ಞಾನ-ವಿವೇಕಕ್ಕೂ ಅವಕಾಶವಿದೆ. ಬಡವರು, ಅಸಹಾಯಕರು, ಮಹಿಳೆಯರು, ರೋಗಿಗಳಿಗೆ ಕರಗುವ, ಮರುಗುವ ಮಾನವೀಯ ವರದಿಗಳೂ ಬರುತ್ತವೆ. ಆದರೆ ಇವೆಲ್ಲ ಎಷ್ಟು ಬೇಕೋ ಅಷ್ಟು ಮಾತ್ರ. ಇಷ್ಟೆಲ್ಲ ಕಾರಣಗಳಿಂದ ಟೈಮ್ಸ್ ಇವತ್ತು ನಂಬರ್ ಒನ್ ಪತ್ರಿಕೆಯಾಗಿ ರಾರಾಜಿಸುತ್ತಿದೆ. ಅತ್ಯಲ್ಪ ಕಾಲದಲ್ಲಿಯೇ ಅಷ್ಟೂ ವಲಯಗಳನ್ನು ಆಕ್ರಮಿಸಿಕೊಂಡು, ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರನಂತೆ ವಿಜೃಂಭಿಸುತ್ತಿದೆ. ಇದು ಸಹಜವಾಗಿಯೇ ದಿಢೀರ್ ದುಡ್ಡು ಮಾಡಲು ಹಾತೊರೆವ ಪತ್ರಿಕೆಗಳನ್ನು, ಬೇಲಿ ಮೇಲೆ ಕೂತ ಪತ್ರಕರ್ತರನ್ನು ಆಕರ್ಷಿಸಿದೆ. ಟೈಮ್ಸ್ ಅನ್ನು ಮಾಡೆಲ್ ಆಗಿ ಸ್ವೀಕರಿಸಿದ್ದಾಗಿದೆ. ಕೆಲವು ಪತ್ರಿಕೆಗಳು ಈಗಾಗಲೇ ಪತ್ರಕರ್ತರನ್ನೇ ಜಾಹಿರಾತು ತರುವ ಏಜೆಂಟರನ್ನಾಗಿ ಪರಿವರ್ತಿಸಿ, ೨೫% ಕಮಿಷನ್‌ನ ತುಪ್ಪವನ್ನು ಮೂಗಿಗೆ ಸವರಿವೆ. ಇನ್ನು ಕೆಲವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಾಯೋಜಿತ ಪುರವಣಿಗಳನ್ನು ಪ್ರಕಟಿಸುತ್ತ ವರದಿಗೂ ಜಾಹಿರಾತಿಗೂ ಇದ್ದ ಅಂತರವನ್ನೇ ಅಳಿಸಿಹಾಕಿವೆ. ಅಷ್ಟೇ ಅಲ್ಲ, ಪ್ರತಿ ಶಾಸಕನಿಂದಲೂ ಜಾಹಿರಾತು ತರುವಂತೆ ಬಲವಂತದ ಒತ್ತಾಯ, ಒತ್ತಡ ಹಾಕುತ್ತಿವೆ. ಪತ್ರಕರ್ತರ ಹಲ್ಲುಗಿಂಜುವಿಕೆ... ಕಾಸು ಕೊಟ್ಟರೆ ಮಾಧ್ಯಮಗಳನ್ನೂ ಖರೀದಿಸಬಹುದು ಎನ್ನುವಂತಹ ವಾತಾವರಣ ನಿರ್ಮಾಣ ಮಾಡುತ್ತಿದೆ. ಇದು ಅಧಿಕಾರವಿರುವ ಶಾಸಕನಲ್ಲಿ ಇನ್ನೆಂತಹ ಉಡಾಳತನಕ್ಕೆ ಕಾರಣವಾಗಬಹುದು, ಅಂತಹ ಶಾಸಕ ಜನರನ್ನು ಇನ್ನೆಂತಹ ಪರಿ ಸುಲಿಯಬಹುದು? ಅವರಿಗಿನ್ನೆಲ್ಲಿಯ ಭಯ-ಅಳುಕು-ಅಂಜಿಕೆ ಉಳಿದೀತು? ಇದು ಭವಿಷ್ಯತ್ತಿನ ಚಿಂತೆಯಲ್ಲ; ಇವತ್ತಿನ ದಿನಮಾನಗಳಲ್ಲಿ ಮಾಧ್ಯಮ ವಲಯದಲ್ಲಿ ನಡೆಯುತ್ತಿರುವ ಕತೆ. ಇಷ್ಟಾದರೂ ಪತ್ರಿಕೆಗಳು ಬಲವಾಗಿ ಬೇರುಬಿಟ್ಟು ಬೆಳೆದು ನಿಲ್ಲಲಾಗಿಲ್ಲ; ಆದರೆ ಕೆಲ ಪತ್ರಕರ್ತರಂತೂ ಪೊಗದಸ್ತಾಗಿ ಬೆಳೆದಿದ್ದಾರೆ! ![]() ಸುದ್ದಿ ಮಾಧ್ಯಮಗಳು ನಿಲ್ಲಬೇಕಾದ್ದು, ಗೆಲ್ಲಬೇಕಾದ್ದು, ಬೆಳೆಯಬೇಕಾದ್ದು ಜನರಿಂದ. ಹಾಗೆಯೇ ಜಾಹಿರಾತುಗಳು ಸುದ್ದಿ ಮಾಧ್ಯಮಗಳ ಬದುಕಿಗೆ ಬೇಕಾದ ಪ್ರಾಣವಾಯುವಾಗಬೇಕೆ ಹೊರತು; ಅದೇ ಮುಖ್ಯವಾಗಬಾರದು. ಜನ ಸುಮ್ಮನಿದ್ದಾರೆಂದು ಏನು ಬೇಕಾದರೂ ಮಾಡಬಹುದು; ಹಣವೊಂದಿದ್ದರೆ ಎಲ್ಲವನ್ನೂ ಗೆಲ್ಲಬಹುದು ಎಂಬ ಧೋರಣೆ ಮತ್ತು ಧಾರ್ಷ್ಟ್ಯವುಳ್ಳ ಸುದ್ದಿ ಮಾಧ್ಯಮದವರಿಗೆ ಹಾಗೂ ಆ ರೀತಿ ಯೋಚಿಸುವ ಎಲ್ಲರಿಗೂ ಇದು ಪಾಠವಾಗಬಹುದೆ? (ಡಿಸೆಂಬರ್ 2008- ಕೆಂಡಸಂಪಿಗೆ) | ||||
Monday, December 7, 2009
ಜಾಗತಿಕ ರಿಸೆಷನ್ ಗರ: ಸುದ್ದಿ ಮಾಧ್ಯಮಗಳೂ ಆಪತ್ತಿನಲ್ಲಿ
Subscribe to:
Posts (Atom)