‘ಕಸ್ತೂರಿ ನಿವಾಸ’ ಚಿತ್ರದಲ್ಲಿ ರಾಜ್ |
ಹೊಸ ಪ್ರಯೋಗಕ್ಕೆ ಸದಾ ತೆರೆದುಕೊಳ್ಳುವ ಹಾಲಿವುಡ್ ಚಿತ್ರರಂಗ ಈ ಕಾಲದಲ್ಲಿ ನಿಂತು ಆ ಕಾಲವನ್ನು ಧ್ಯಾನಿಸಿತ್ತು, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನೂ ದಕ್ಕಿಸಿಕೊಂಡಿತ್ತು. ಆದರೆ, ಇಲ್ಲಿ, ಕನ್ನಡ ಚಿತ್ರರಂಗದಲ್ಲಿ ಅದು ತಿರುಗು ಮುರುಗಾಗಿದೆ. ಕಪ್ಪುಬಿಳುಪಿನ ಕಾಲದ ಚಿತ್ರವನ್ನು ಬಣ್ಣಕ್ಕೆ ಪರಿವರ್ತಿಸುವ ಪ್ರಯತ್ನ ಕನ್ನಡದಲ್ಲಾಗುತ್ತಿದೆ. ಹಾಗಂತ ಇಲ್ಲಿ ಹೊಸ ಚಿತ್ರ ನಿರ್ಮಾಣವಲ್ಲ, ಹಳೆಯ ಅಪರೂಪದ ಕಪ್ಪುಬಿಳುಪಿನ ಚಿತ್ರಕ್ಕೆ ವರ್ಣ ಸ್ಪರ್ಶ ನೀಡುವ ಕೆಲಸ ನಡೆದಿದೆ.
ಕಪ್ಪುಬಿಳುಪಿನಲ್ಲಿ ತಯಾರಾದ ರಾಜ್ಕುಮಾರ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಸಿನಿಮಾವನ್ನು ಕನ್ನಡಿಗರು ಕಣ್ತುಂಬಿಕೊಂಡಿದ್ದಾಗಿದೆ. ಈಗ ‘ಕಸ್ತೂರಿ ನಿವಾಸ’ ಚಿತ್ರದ ಸರದಿ. 1971ರಲ್ಲಿ ತೆರೆಕಂಡ ರಾಜ್ ಜಯಂತಿ, ಆರತಿ, ಅಶ್ವಥ್ ಅಭಿನಯದ ಈ ಚಿತ್ರ, 43 ವರ್ಷಗಳ ನಂತರ ಬಣ್ಣದಲ್ಲಿ ಬಿಡುಗಡೆಯಾಗಿದೆ.
‘ಕಸ್ತೂರಿ ನಿವಾಸ’ ಚಿತ್ರವು ಬೆಂಕಿಪೊಟ್ಟಣ (ಡವ್ ಬ್ರ್ಯಾಂಡ್ ಮ್ಯಾಚ್ ಬಾಕ್ಸ್) ಉದ್ಯಮಿಯ ದುರಂತ ಪ್ರೇಮದ ಕಥಾವಸ್ತುವನ್ನು ಒಳಗೊಂಡ, ದೊರೈ-ಭಗವಾನ್ ಜೋಡಿಯ ಸಮರ್ಥ ನಿರ್ದೇಶನದ, ರಾಜ್ ಅವರ ಅಮೋಘ ಅಭಿನಯದ ಅದ್ಭುತ ಚಿತ್ರ.
ಕಸ್ತೂರಿ ನಿವಾಸದ ಸಂಕ್ಷಿಪ್ತ ಕಥೆ ಹೀಗಿದೆ... ಚಿತ್ರದ ಕಥಾನಾಯಕ ರವಿ ಅಮೆರಿಕಾದಲ್ಲಿ ಬಿಜಿನೆಸ್ ಕೋರ್ಸ್ ಮುಗಿಸಿ ಸ್ವದೇಶಕ್ಕೆ ಹಿಂತಿರುಗುತ್ತಾನೆ. ಡವ್ ಬ್ರ್ಯಾಂಡ್ ಮ್ಯಾಚ್ ಬಾಕ್ಸ್ ಫ್ಯಾಕ್ಟರಿ ಸ್ಥಾಪಿಸುತ್ತಾನೆ. ತನಗರಿವಿಲ್ಲದೆ ತನ್ನ ಕಾರ್ಯದರ್ಶಿ ಲೀಲಾಳ (ಜಯಂತಿ) ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಆದರೆ ಆಕೆ ಕಾರಣಾಂತರಗಳಿಂದ ರವಿಯ ಮಿತ್ರ ಚಂದ್ರುನನ್ನು ವರಿಸುತ್ತಾಳೆ. ರವಿ ಸಹ ಬೇರೊಬ್ಬರನ್ನು ವಿವಾಹವಾಗಿ, ಅಪಘಾತವೊಂದರಲ್ಲಿ ಹೆಂಡತಿ, ಮಗಳನ್ನು ಕಳೆದುಕೊಂಡಿರುತ್ತಾನೆ. ಈ ನಡುವೆ ಅವರ ಬೆಂಕಿಪೊಟ್ಟಣ ಕಾರ್ಖಾನೆ ನಷ್ಟಕ್ಕೆ ಸಿಲುಕುತ್ತದೆ. ಇದಕ್ಕೆ ಚಂದ್ರು ಸಹ ಪರೋಕ್ಷವಾಗಿ ಸಹಕರಿಸುತ್ತಾನೆ. ಇಂತಹ ಒಂದು ಸಂದಿಗ್ಧ ಸಮಯದಲ್ಲಿ ಲೀಲಾ ಮತ್ತೊಮ್ಮೆ ರವಿ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಬಹಳ ಹಚ್ಚಿಕೊಳ್ಳುತ್ತಾನೆ. ಏರಿಳಿತಗಳಲ್ಲಿ ಸಾಗುವ ರವಿಯ ಬದುಕು ಕೊನೆಗೆ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.
ಈ ಚಿತ್ರದ ಕತೆಯ ಕತೆಯೇ ಕುತೂಹಲಕರವಾಗಿದೆ. ಅಂದಿನ ತಮಿಳು ಸೂಪರ್ ಸ್ಟಾರ್ ಶಿವಾಜಿ ಗಣೇಶನ್ರನ್ನು ಮನಸ್ಸಿನಲ್ಲಿಟ್ಟುಕೊಂಡು ಬಾಲಸುಬ್ರಹ್ಮಣ್ಯಂ ಒಂದು ಕಥೆ ರಚಿಸಿದ್ದರು. ಆ ಕಥೆಗೆ ಕಸ್ತೂರಿ ನಿವಾಸಂ ಎಂದು ಹೆಸರಿಟ್ಟಿದ್ದರು. ಈ ಕಥೆಯ ಹಕ್ಕನ್ನು ನೂರ್ ಸಾಬ್ ಖರೀದಿಸಿ, ಶಿವಾಜಿ ಗಣೇಶನ್ರನ್ನು ಕೇಳಿದಾಗ, ದುರಂತ ನಾಯಕನ ಈ ಕಥೆಯನ್ನು ತಮಿಳುನಾಡು ಜನತೆ ಸ್ವೀಕರಿಸುವುದು ಕಷ್ಟವೆಂದು ಭಾವಿಸಿ ನಿರಾಕರಿಸಿದರು. ಆ ನಂತರ ಆ ಕತೆ ಚಿತ್ರಸಾಹಿತಿ ಚಿ. ಉದಯಶಂಕರ್ ಮತ್ತು ರಾಜ್ ಸೋದರ ವರದರಾಜ್ ಅವರ ಕಿವಿಗೆ ಬಿದ್ದು, ದೊರೈ-ಭಗವಾನ್ರೊಂದಿಗೆ ಪ್ರಸ್ತಾಪವಾಗಿ, ರಾಜ್ ನಟಿಸಲು ಒಪ್ಪುವುದಾದರೆ ತಾವು ಚಿತ್ರ ಮಾಡಲು ಸಿದ್ಧ ಎನ್ನುವಲ್ಲಿಗೆ ಬಂದು ನಿಂತಿತು. ರಾಜ್ ಕಥೆ ಕೇಳಿ, ಇದು ಶಿವಾಜಿ ಗಣೇಶನ್ರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಮೊದಲಿಗೆ ಹಿಂಜರಿದವರು, ಆ ನಂತರ ವರದರಾಜ್ರ ಒತ್ತಡಕ್ಕೆ ಮಣಿದು, ನಟಿಸಲು ಒಪ್ಪಿದರು. ತಮಿಳಿನ ಕಸ್ತೂರಿ ನಿವಾಸಂ ಕನ್ನಡದ ‘ಕಸ್ತೂರಿ ನಿವಾಸ’ವಾಯಿತು. ಕನ್ನಡ ಚಿತ್ರರಂಗದಲ್ಲಿ ಎಂದೆಂದೂ ಮರೆಯದ ಮಹೋನ್ನತ ಚಿತ್ರವಾಗಿ ಅಜರಾಮರವಾಗಿ ಉಳಿಯಿತು.
ಆಶ್ಚರ್ಯವೆಂದರೆ, ಕಸ್ತೂರಿ ನಿವಾಸ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರವೆನ್ನಿಸಿಕೊಂಡ ಮೇಲೆ ಶಿವಾಜಿ ಗಣೇಶನ್ರಿಗೆ ಜ್ಞಾನೋದಯವಾಯಿತು. ತಮಿಳಿಗೆ ಹಕ್ಕು ಖರೀದಿಸಿ, ‘ಅವನ್ದಾನ್ ಮನಿದನ್’ ಚಿತ್ರ ಮಾಡಿ ಯಶಸ್ವಿಯೂ ಆದರು. ಆನಂತರ ಅದು ಹಿಂದಿಯಲ್ಲಿ, ಸಂಜೀವ್ಕುಮಾರ್ ನಾಯಕನಟನಾಗಿ ‘ಶಾಗಿರ್ದ್’ ಆಗಿ, ಕನ್ನಡದ ಕಸ್ತೂರಿ ಅಲ್ಲಿಯೂ ಪಸರಿಸಿತು.
‘ಕಸ್ತೂರಿ ನಿವಾಸ’ ಚಿತ್ರ ಎಷ್ಟು ಜನಪ್ರಿಯವೋ, ಅದರ ಹಾಡುಗಳಿಗೂ ಅಷ್ಟೇ ಜನಪ್ರಿಯ. ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ, ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್, ವಿಜಯ ನಾರಸಿಂಹ ಅವರ ಸಾಹಿತ್ಯದಲ್ಲಿ, ಪಿ.ಬಿ. ಶ್ರೀನಿವಾಸ್, ಪಿ. ಸುಶೀಲಾರವರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದ ‘ಆಡಿಸಿ ನೋಡು ಬೀಳಿಸಿ ನೋಡು...’, ‘ನೀ ಬಂದು ನಿಂತಾಗ...’, ‘ಎಲ್ಲೇ ಇರು ಹೇಗೇ ಇರು...’, ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ...’, ‘ಆಡೋಣ ನೀನು ನಾನು...’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ.
ಆ ಕಾಲದ ಚಿತ್ರರಸಿಕರನ್ನು ಮೋಡಿ ಮಾಡಿದ್ದ ಈ ಚಿತ್ರದಲ್ಲಿ ರಾಜಕುಮಾರ್, ಜಯಂತಿ, ಅಶ್ವತ್ಥ್ ಅಭಿನಯಿಸಿದ್ದಲ್ಲ, ಜೀವಿಸಿದ್ದರು. ಅನುಪಮ್ ಮೂವೀಸ್ ಲಾಂಛನದಡಿಯಲ್ಲಿ ತಯಾರಾದ ಚಿತ್ರಕ್ಕೆ ದೊರೈ-ಭಗವಾನ್ ಜೋಡಿ ತಮ್ಮ ಬುದ್ಧಿಯನ್ನೆಲ್ಲ ಬಸಿದು, ಆ ಕಾಲಕ್ಕೇ ಹೊಸದೆನ್ನಿಸುವ ರೀತಿಯಲ್ಲಿ ಚಿತ್ರವನ್ನು ನಿರೂಪಿಸಿ ಮಹಾನ್ ಕಲಾಕೃತಿಯನ್ನಾಗಿಸಿತ್ತು. ಕತೆ, ನಿರೂಪಣೆ, ಅಭಿನಯ, ಸಂಗೀತ, ಹಾಡುಗಳಿಂದ ಚಿತ್ರ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಕನ್ನಡ ಚಿತ್ರೀದ್ಯಮದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದು ದಾಖಲೆ ನಿರ್ಮಿಸಿತ್ತು. ಅದರಲ್ಲೂ ಡಾ.ರಾಜ್ ಅಭಿನಯ ಕನ್ನಡಿಗರ ಕಣ್ಣಲ್ಲಿ ನೀರು ತರಿಸಿತ್ತು.
ಇಂತಹ ಅಪರೂಪದ ಕಸ್ತೂರಿ ನಿವಾಸ ಎಂಬ ಕಪ್ಪುಬಿಳುಪಿನ ಚಿತ್ರವನ್ನು ಬಣ್ಣಕ್ಕೆ ಬದಲಿಸಿ ಬಿಡುಗಡೆ ಮಾಡುತ್ತಿರುವವರು ಕೆ.ಸಿ.ಎನ್ ಮೋಹನ್. ಈ ಕುರಿತು ಮಾತನಾಡುತ್ತ, ‘ನನ್ನ ತಂದೆ, ನಿರ್ಮಾಪಕರಾದ ಕೆ.ಸಿ.ಎನ್. ಗೌಡರಿಗೆ ಕಸ್ತೂರಿ ನಿವಾಸ ಸೇರಿದಂತೆ ಕೆಲವು ಕ್ಲಾಸಿಕ್ ಕನ್ನಡ ಸಿನಿಮಾಗಳನ್ನು ಕಲರ್ನಲ್ಲಿ ನೋಡಬೇಕೆಂಬ ಆಸೆ ಇತ್ತು. ಅವರ ಆಸೆಯಂತೆ ಚಿತ್ರವನ್ನು ವರ್ಣದಲ್ಲಿ ಸಿದ್ಧ ಮಾಡಿದ್ದೇವೆ. ಯಾವುದಾವುದೋ ಕಾರಣಕ್ಕೆ ತಡವಾಗಿ, ನಾವು ಅಂದುಕೊಂಡ ದಿನಗಳಲ್ಲಾಗದೆ ಈಗ ಬಿಡುಗಡೆ ಮಾಡುತ್ತಿದ್ದೇವೆ. ಸತ್ಯ ಹರಿಶ್ಚಂದ್ರ ಸಿನಿಮಾ ಕಲರ್ನಲ್ಲಿ ಬಂದಾಗ ಕನ್ನಡಿಗರು ಖುಷಿ ಪಟ್ಟಿದ್ದರು. ಈ ಚಿತ್ರವನ್ನೂ ಹಾಗೆಯೇ ಮೆಚ್ಚಿಕೊಳ್ಳುತ್ತಾರೆ’ ಎನ್ನುತ್ತಾರೆ.
ಮುಂದುವರೆದು, ‘ಇದು ಒರಿಜಿನಲ್ ಚಿತ್ರದ ಕಾರ್ಬನ್ ಕಾಪಿ ಅಲ್ಲ. ಹಾಡುಗಳು ಚಿತ್ರದ ಪ್ರಮುಖ ಹೈಲೈಟ್. ಹಾಡುಗಳು ಹಾಗೂ ಸಂಭಾಷಣೆಗೆ ಡಿಟಿಎಸ್ ಅಳವಡಿಸಲಾಗಿದ್ದು ಪ್ರೇಕ್ಷಕರಿಗೆ ಸಮೃದ್ಧ ಅನುಭವ ನೀಡಲಿದೆ’ ಎನ್ನುವುದನ್ನು ಮರೆಯಲಿಲ್ಲ.
ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಕಪ್ಪುಬಿಳುಪಿನ ಚಿತ್ರವನ್ನು ಕಲರ್ ಮಾಡುವುದು ಸುಲಭವೆನ್ನಿಸಬಹುದು. ಆದರೆ ಅದು ಅಷ್ಟು ಸುಲಭವಲ್ಲ. ಪ್ರತಿ ಫ್ರೇಮಿಗೂ ಬಣ್ಣ ತುಂಬಿ, ಜೀವ ಕೊಟ್ಟು ಕುಣಿಸಬೇಕಾಗುತ್ತದೆ. ಹೊಸ ಸಿನಿಮಾವೊಂದನ್ನು ನಿರ್ಮಾಣ ಮಾಡಿದಷ್ಟೇ ಕೋಟ್ಯಂತರ ರೂ.ಗಳ ಖರ್ಚು ತಗಲುತ್ತದೆ. ಆ ಖರ್ಚನ್ನೂ ಲೆಕ್ಕಿಸದೆ, ಅದರಿಂದ ಬರುವ ಲಾಭವನ್ನೂ ಗುಣಿಸದೆ ಕೆಸಿಎನ್ ಗೌಡರ ಆಸೆಯನ್ನು ಕಾರ್ಯರೂಪಕ್ಕಿಳಿಸಿರುವ ಅವರ ಮಕ್ಕಳ ಚಿತ್ರಪ್ರೀತಿ ನಿಜಕ್ಕೂ ಶ್ಲಾಘನೀಯ.
ಆದರೆ ಸದ್ಯದ ಪ್ರಶ್ನೆ ಎಂದರೆ, 70ರ ದಶಕದ ಚಿತ್ರಪ್ರೇಮಿಗಳ ಅಭಿರುಚಿಯೇ ಬೇರೆ ಮತ್ತು 2014ರ ವೇಗೋತ್ಕರ್ಷಗಳ ಈ ಹೊಸಗಾಲದ ವೀಕ್ಷಕರ ಬೇಡಿಕೆಯೇ ಬೇರೆ. ಆಶ್ಚರ್ಯವೆಂದರೆ, ಎರಡೂ ಬಗೆಯ ಪ್ರೇಕ್ಷಕರಿಗೆ ‘ಕಸ್ತೂರಿ ನಿವಾಸ’ ಚಿತ್ರದಲ್ಲೊಂದು ಸಂದೇಶವಿದೆ. ಮನುಷ್ಯನ ಆಸೆಗೆ, ಅಹಂಕಾರಕ್ಕೆ, ನಂಬಿಕೆಗೆ, ನಿಷ್ಠೆಗೆ, ಪ್ರತಿಷ್ಠೆಗೆ ಚಿತ್ರದಲ್ಲಿ ಮದ್ದಿದೆ. ಹಾಗಾಗಿ ಮನುಷ್ಯರು ನೋಡಬೇಕಾದ ಚಿತ್ರ.
‘ಕಸ್ತೂರಿ ನಿವಾಸ’ ಚಿತ್ರದಲ್ಲಿ ರಾಜ್ |