ಸಾವಿತ್ರಿಬಾಯಿ ಫುಲೆ |
ಇಂತಹ ಮಹಾನ್ ಚೇತನ ಸಾವಿತ್ರಿಬಾಯಿ ಫುಲೆಯವರು ಹುಟ್ಟಿದ್ದು ಜನವರಿ 3, 1831ರಂದು, ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ ಎಂಬ ಗ್ರಾಮದಲ್ಲಿ. ಆಗಿನ ಕಾಲದ ಸಂಪ್ರದಾಯದಂತೆ ಆಡುವ ವಯಸ್ಸಿನಲ್ಲಿಯೇ- ಒಂಬತ್ತನೇ ವಯಸ್ಸಿನಲ್ಲಿಯೇ ಬಾಲಕಿ ಸಾವಿತ್ರಿಬಾಯಿಯ ಮದುವೆ 13ನೇ ವಯಸ್ಸಿನ ಜ್ಯೋತಿಬಾ ಫುಲೆಯೊಂದಿಗೆ ನೆರವೇರಿತು. ಆಗ ಮಹಾರಾಷ್ಟ್ರದಲ್ಲಿ ಪೇಶ್ವೆಯವರ ಆಡಳಿತವಿತ್ತು. ಫುಲೆ ಕುಟುಂಬ ಪೇಶ್ವೆಯವರಿಂದ ಸ್ವಲ್ಪ ಜಮೀನನ್ನು ದಾನವಾಗಿ ಪಡೆದು, ಆ ಜಮೀನಿನಲ್ಲಿ ಹೂವಿನ ತೋಟ ಮಾಡಿ, ಹೂವಿನ (ಫೂಲ್) ವ್ಯಾಪಾರ ಮಾಡುತ್ತಿದ್ದರಿಂದ ಇವರಿಗೆ ಫುಲೆ ಹೆಸರು ಅಂಟಿಕೊಂಡಿತು.
ಮದುವೆಯಾಗಿ ಬಂದ ಸಾವಿತ್ರಿಬಾಯಿಗೆ ಅಕ್ಷರ, ಪುಸ್ತಕ, ಶಾಲೆಯ ಪರಿಚಯವಿರಲಿಲ್ಲ. ಆದರೆ ವಿದ್ಯೆ ಕಲಿಯಬೇಕೆಂಬ ಆಸೆ ಇತ್ತು. ಇವರ ಆಸೆಗೆ ಒತ್ತಾಸೆಯಾಗಿ ನಿಂತವರು ಆ ಕಾಲಕ್ಕೇ ಪ್ರಗತಿಪರ ಚಿಂತನೆಯ ಪತಿ ಜ್ಯೋತಿಬಾ ಫುಲೆಯವರು. ಇವರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಶಿಕ್ಷಣ ಪಡೆದ ಸಾವಿತ್ರಿಯವರು, ಆಗಿನ ಕಾಲದಲ್ಲಿಯೇ, ಅಂದರೆ ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಮೊದಲ ಶಿಕ್ಷಕಿಯ ತರಬೇತಿ ಪಡೆದು 17 ನೇ ವಯಸ್ಸಿಗೆ ಶಿಕ್ಷಕಿಯಾದರು. ಮಹಿಳೆ ಸಬಲಳಾಗಬೇಕೆಂದರೆ ಅವಳಿಗೆ ಶಿಕ್ಷಣವೆಂಬುದು ಅಗತ್ಯ ಸಾಧನವೆಂಬುದನ್ನು ಅನುಭವದಿಂದ ಅರಿತರು. ಆ ನಂತರ ಅದನ್ನು ಜಾರಿಗೆ ತಂದರು. ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆ ಬರೆದು, ಇತಿಹಾಸವನ್ನೇ ನಿರ್ಮಿಸಿದರು.
ಜ್ಯೋತಿಬಾ ಫುಲೆಯವರ ಜನಪರ ಕೆಲಸಗಳ ಜೊತೆ ಜೊತೆಗೇ ಹೆಜ್ಜೆ ಹಾಕಿದ ಸಾವಿತ್ರಿಬಾಯಿಯವರಿಗೆ ಮಕ್ಕಳಿಲ್ಲ ಎಂಬ ಕೊರಗು ಕಾಡಲೇ ಇಲ್ಲ. ಅದರ ಬದಲಿಗೆ ಅವರು ಸಮಾಜ ಸುಧಾರಣೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ, 1948 ರಲ್ಲಿ ಬಿಡೇವಾಡದಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ನಿರ್ಲಕ್ಷಿತ ಬಾಲಕಿಯರಿಗಾಗಿ `ಫೀಮೇಲ್ ನೇಟಿವ್ ಸ್ಕೂಲ್' ಎಂಬ ಶಾಲೆ ಆರಂಭಿಸಿದರು. ಈ ಶಾಲೆ ಕೂಡ ಅವಕಾಶವಂಚಿತ ಹೆಣ್ಣುಮಕ್ಕಳಿಗಾಗಿ, ದಿಕ್ಕೆಟ್ಟ ಸ್ತ್ರೀಯರ ಸುಧಾರಣೆಗಾಗಿ.
ಭಾರತೀಯ ಸಮಾಜವನ್ನು ಹಿಂದಕ್ಕೂ ಹೋಗದೆ, ಮುಂದಕ್ಕೂ ಹೋಗದೆ ಹಿಡಿದಿಟ್ಟುಕೊಂಡಿರುವ ಪಟ್ಟಭದ್ರರಿಗೆ, ಸಂಪ್ರದಾಯಸ್ಥರಿಗೆ ಸಾವಿತ್ರಿ ಬಾಯಿಯವರ ಸಮಾಜ ಸೇವಾ ಕಾರ್ಯಗಳು ಸಹಿಸಲಸಾಧ್ಯವಾದ ಸಂಕಟವನ್ನುಂಟುಮಾಡಿದವು. ಅದರಲ್ಲೂ ಹೆಣ್ಣುಮಕ್ಕಳಿಗೆ ಅಕ್ಷರಾಭ್ಯಾಸ, ಶಾಲೆ ಎಂದಾಕ್ಷಣ ಅವರ ಮೇಲ್ಜಾತಿಯ ವಿಕೃತ ಮನಸ್ಸು ಜಾಗೃತವಾಯಿತು. ಅದರ ಫಲವಾಗಿ ಸಾವಿತ್ರಿಬಾಯಿಯವರಿಗೆ ಹತ್ತು ಹಲವು ಕಷ್ಟ ಕೋಟಲೆಗಳು ಎದುರಾದವು. ಹೆಣ್ಣುಮಕ್ಕಳು ಶಾಲೆ ಕಲಿಯುವುದೇ ಕಷ್ಟವಾಗಿದ್ದ ಸಮಯದಲ್ಲಿ, ಆರಂಭದಲ್ಲಿ ಕೇವಲ 9 ಬಾಲಕಿಯರಿಂದ ಶುರುವಾದ ಶಾಲೆಗಳಿಗೆ ಶಿಕ್ಷಕಿಯರೇ ಸಿಗದಂತಾಗುತ್ತದೆ. ಸಾವಿತ್ರಿಬಾಯಿಯವರೇ ಶಿಕ್ಷಕಿಯಾಗಿ, ಅದನ್ನೂ ನಿಭಾಯಿಸಲು ಯತ್ನಿಸಿದಾಗ, ಅವರು ಶಾಲೆಗೆ ಹೋಗಿಬರುವ ಹಾದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸುವುದು ಶುರುವಾಯಿತು. ಕೊಳೆತ ಮೊಟ್ಟೆ, ಸಗಣಿಯಿಂದ ಹೊಡೆಯುವುದು ದಿನನಿತ್ಯದ ಕಾಯಕವಾಯಿತು.
ಎದೆಗುಂದದ ಸಾವಿತ್ರಿಬಾಯಿ ಅದಕ್ಕೂ ಒಂದು ಮಾರ್ಗ ಕಂಡುಕೊಂಡರು. ಶಾಲೆಗೆ ಹೋಗುವಾಗ ಚೀಲದಲ್ಲಿ ಸೀರೆ ಇಟ್ಟುಕೊಂಡು, ಹಳೆ ಸೀರೆ ಉಟ್ಟುಕೊಂಡು ಹೋಗುತ್ತಿದ್ದರು. ಶಾಲೆಗೆ ಹೋದ ನಂತರ ಸೀರೆ ಬದಲಾಯಿಸಿಕೊಂಡು ಶೋಷಿತ ಸಮುದಾಯದ ಹೆಣ್ಣು ಮಕ್ಕಳಿಗೆ ಪಾಠ ಪ್ರವಚನದ ಕೆಲಸ ಮುಗಿಸಿದ ನಂತರ ಮತ್ತೆ ಸೀರೆ ಬಿಚ್ಚಿ ಚೀಲದಲ್ಲಿಟ್ಟುಕೊಂಡು, ಕೊಳೆಯಾದ ಸೀರೆಯನ್ನುಟ್ಟು ಮನೆಗೆ ಹಿಂದಿರುಗುತ್ತಿದ್ದರು. ಇದನ್ನೂ ಸಹಿಸದ ಮೇಲ್ಜಾತಿ ಜನ ಸಾವಿತ್ರಿಬಾಯಿಯವರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಿದರು. ಇಂತಹ ಕಷ್ಟ ಕೋಟಲೆಗಳನ್ನು ಸಹಿಸಿದ, ಕಠಿಣ ಹಾದಿಯನ್ನು ಸವೆಸಿದ ಸಾವಿತ್ರಿಬಾಯಿ ಶೋಷಿತ ಸಮುದಾಯದವರಿಗೆ ಶಿಕ್ಷಣ ನೀಡಿ ಆದರ್ಶಪ್ರಾಯರಾದರು.
ಹಲವಾರು ಕಡೆಗಳಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಶಾಲೆಗಳನ್ನು ಆರಂಭಿಸುತ್ತಾ, ಶಿಕ್ಷಣದ ಮಹತ್ವವನ್ನು ಸಾರುತ್ತಾ ಸಾಗಿದ ಫುಲೆ ದಂಪತಿಗಳ ಸಮಾಜಮುಖಿ ಶೈಕ್ಷಣಿಕ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರಕಾರ 1852 ರಲ್ಲಿ, ಈ ದಂಪತಿಗಳ ಕಾರ್ಯವನ್ನು ಶ್ಲಾಘಿಸಿ, ಸನ್ಮಾನಿಸಿತು. ಇದರಿಂದ ಇನ್ನಷ್ಟು ಉತ್ತೇಜಿತರಾದ ಸಾವಿತ್ರಿಬಾಯಿಯವರು, ಶಿಕ್ಷಣದ ಜೊತೆಗೆ `ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಆರಂಭಿಸಿದರು. ದುಡಿಯುವ ಮಹಿಳೆಯರಿಗಾಗಿ `ಮಹಿಳಾ ಸೇವಾ ಮಂಡಳಿ’ಯನ್ನು ಆರಂಭಿಸಿದರು. ಜಾತಿ ತಾರತಮ್ಯವನ್ನು ಹೋಗಲಾಡಿಸಲು `ಎಳ್ಳು ಬೆಲ್ಲ ಹಂಚುವ ಕಾರ್ಯಕ್ರಮ’ ಎಂಬ ಎಲ್ಲರೂ ಒಂದಾಗಿ ಬೆರೆಯುವ ಕಾರ್ಯಕ್ರಮ ರೂಪಿಸಿದರು. ಅಷ್ಟೇ ಅಲ್ಲದೆ ಆಗಿನ ಅರ್ಥವಿಲ್ಲದ ಅನಿಷ್ಟ ಪದ್ಧತಿಗಳಾದ ಸತಿಸಹಗಮನ ಪದ್ಧತಿ, ವಿಧವೆಯರ ಕೇಶಮುಂಡನ, ದೇವದಾಸಿ ಪದ್ಧತಿ, ಅಸ್ಪೃಶ್ಯತೆ ಆಚರಣೆ ಮುಂತಾದವುಗಳನ್ನು ಸಮಾಜದಿಂದ ಶಾಶ್ವತವಾಗಿ ಉಚ್ಛಾಟಿಸಲು ದಂಪತಿಗಳಿಬ್ಬರೂ ಕಂಕಣಬದ್ದರಾಗಿ ಹಗಲಿರುಳು ದುಡಿದರು. ಧಾರ್ಮಿಕ ಮೌಢ್ಯಾಚರಣೆಯಿಂದ ಸಮಾಜವನ್ನು ಮುಕ್ತಗೊಳಿಸಿದರು. ಜನರನ್ನು ಜಾಗೃತರನ್ನಾಗಿಸಿದರು.
ನಂತರ ಸಾವಿತ್ರಿಬಾಯಿಯವರು 1963ರಲ್ಲಿ `ಬಾಲಹತ್ಯಾ ಪ್ರತಿಬಂಧಕ ಗೃಹ’ಗಳನ್ನು ಆರಂಭಿಸಿದರು. ಈ ಗೃಹಗಳ ಮೂಲ ಉದ್ದೇಶ, ಅನೈತಿಕವಾಗಿ ಹುಟ್ಟಿದ ಮಕ್ಕಳ ಪಾಲನೆ ಪೋಷಣೆಯಾಗಿತ್ತು. ಆಗಿನ ಕಾಲದಲ್ಲಿ, ಭಾರತೀಯ ಭವ್ಯ ಸಂಸ್ಕೃತಿಯಲ್ಲಿ ಗಂಡ ಸತ್ತ ಮಹಿಳೆಯರು ಮರು ಮದುವೆಯಾಗುವಂತಿರಲಿಲ್ಲ. ಗಂಡನ ಚಿತೆಯೊಂದಿಗೆ ಸುಟ್ಟುಬಿಡುವ ಸತಿ ಪದ್ಧತಿ ಜಾರಿಯಲ್ಲಿತ್ತು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳಿಗೆ ವಯಸ್ಸಾದ ಗಂಡಸರ ಜೊತೆಗಿನ ವಿವಾಹ ಮಾಮೂಲಾಗಿತ್ತು. ಗಂಡಸರು ಕಾಯಿಲೆಯಾಗಿ, ವಯಸ್ಸಾಗಿ ಬೇಗ ಸಾಯುತ್ತಿದ್ದರು. ಲೋಕವನ್ನೇ ನೋಡದ ಹದಿಹರೆಯದ ಹೆಣ್ಣುಮಕ್ಕಳು ವಿಧವೆಯರಾಗುತ್ತಿದ್ದರು.
ಅದರಲ್ಲೂ ಬ್ರಾಹ್ಮಣ ಜಾತಿಯಲ್ಲಿ ವಿಧವೆಯರಾದರೆ ತಲೆ ಬೋಳಿಸಿಕೊಂಡು, ಹಲವರಿಂದ ನಿಂದನೆಗೊಳಗಾಗಿ ಕಣ್ಣೀರಿನಲ್ಲಿ ಕಾಲ ದೂಡಬೇಕಾಗಿತ್ತು. ಅವರ ಕಷ್ಟಗಳು ಅಲ್ಲಿಗೇ ಮುಗಿಯುತ್ತಿರಲಿಲ್ಲ. ಅವರ ಹತ್ತಿರದ ಸಂಬಂಧಿಗಳ, ಕುಟುಂಬದ ಸದಸ್ಯರ ಲೈಂಗಿಕ ತೃಷೆಗೆ ಈ ಅಮಾಯಕ ವಿಧವೆಯರು ಬಲಿಯಾಗುತ್ತಿದ್ದರು. ಬಲಾತ್ಕಾರಕ್ಕೊಳಗಾಗುತ್ತಿದ್ದರು. ಆ ಸಂಬಂಧದಲ್ಲಿ ಹುಟ್ಟಿದ ಮಕ್ಕಳು ಮುಂದೆ ಸಮಸ್ಯೆಯಾದಾಗ, ಆ ಮಕ್ಕಳ ಅಪ್ಪನಾಗಲು ಯಾರೂ ಒಪ್ಪದಿದ್ದಾಗ, ಅನಾಥವಾದಾಗ, ಸಮಾಜಕ್ಕೆ ಹೆದರಿ ಮುಗ್ಧ ಮಕ್ಕಳನ್ನು ಕೊಲ್ಲಲಾಗುತ್ತಿತ್ತು. ಇಂತಹ ಮಕ್ಕಳಿಗಾಗಿಯೇ ಸಾವಿತ್ರಿಬಾಯಿಯವರು ಬಾಲಹತ್ಯಾ ಪ್ರತಿಬಂಧಕ ಗೃಹಗಳನ್ನು ಸ್ಥಾಪಿಸಿ, ಆ ಮಕ್ಕಳ ಲಾಲನೆ ಪಾಲನೆಗಿಳಿದರು. ಅಷ್ಟೇ ಅಲ್ಲ, ಸಮಾಜದ ತಿರಸ್ಕಾರಕ್ಕೊಳಗಾದ 35 ಜನ ಬ್ರಾಹ್ಮಣ ಸ್ತ್ರೀಯರ ಬಾಣಂತನವನ್ನೂ ಮಾಡಿದರು. ಇಂತಹ ಸಂಬಂಧದಲ್ಲಿ ಹುಟ್ಟಿ ಅನಾಥನಾದ ಒಂದು ಮಗುವನ್ನು ದತ್ತುಪುತ್ರನನ್ನಾಗಿ ಸ್ವೀಕರಿಸಿ, ಆತನಿಗೆ ವಿದ್ಯೆ ಬುದ್ಧಿ ಕಲಿಸಿ ವೈದ್ಯನನ್ನಾಗಿಸಿದರು.
ಸಮಾಜದಲ್ಲಿದ್ದ ಜಾತಿ ತಾರತಮ್ಯವನ್ನು ಹೋಗಲಾಡಿಸಲು, ಮೇಲು-ಕೀಳು ಎಂಬ ಅಸಮಾನತೆಯನ್ನು ಅಳಿಸಿ, ಸಮಸಮಾಜ ನಿರ್ಮಿಸಲು ಅಂತರಜಾತಿ ವಿವಾಹಗಳನ್ನು ಬೆಂಬಲಿಸಿದರು. ಮರಾಠಿ ಭಾಷೆಯ ಮೊದಲ ಕವಯಿತ್ರಿ ಸಾವಿತ್ರಿಬಾಯಿಯವರು ಮಹಿಳೆಯರಿಗಾಗಿಯೇ `ಗೃಹಿಣಿ’ ಎಂಬ ಪತ್ರಿಕೆ ಹೊರತಂದು ಮಹಿಳೆಯ ಸಬಲೀಕರಣಕ್ಕಾಗಿ ಶ್ರಮಿಸಿದರು. 1876 ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಬಂದಾಗ, ಬರಪೀಡಿತ ಬಡವರಿಗಾಗಿ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿ, ಅನ್ನ ಆಹಾರ ನೀಡಿ ಸತ್ಕರಿಸಿದರು. 1897 ರಲ್ಲಿ ಮಹಾಮಾರಿ ಪ್ಲೇಗ್ ರೋಗ ಬಂದೆರಗಿದಾಗ ಎರಡು ಸಾವಿರ ಮಕ್ಕಳಿಗೆ ಶುಶ್ರೂಷೆ ನೀಡಿ ಸಂತೈಸಿದರು. ಆ ಮಕ್ಕಳ ಪಾಲನೆ ಪೋಷಣೆಯಲ್ಲಿ ಸ್ವತಃ ಸಾವಿತ್ರಿಯವರಿಗೇ ಪ್ಲೇಗ್ ತಗುಲಿತು. ಕೊನೆಗೆ ಮಾರ್ಚ್ 10, 1897ರಂದು ಆ ಮಹಾಮಾರಿ ರೋಗಕ್ಕೆ ಬಲಿಯಾದರು.
ಸಾವಿತ್ರಿಬಾಯಿ ಫುಲೆಯವರು ಮೇಲ್ಜಾತಿಯಲ್ಲಿ ಜನಿಸಿದವರಲ್ಲ, ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ಆದರೂ ಶೋಷಿತ ಮಹಿಳೆಯರಿಗಾಗಿ, ಮಾನವೀಯ ಸಮಾಜ ನಿರ್ಮಾಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಸಬಲೀಕರಣ ಸಾಧ್ಯ ಎನ್ನುವುದನ್ನು ಸ್ವಾನುಭವದಿಂದ ಅರಿತಿದ್ದ ಅವರು ಆ ಹಾದಿಯಲ್ಲಿ ಯಶಸ್ಸನ್ನೂ ಕಂಡರು. ಹಾಗಾಗಿಯೇ ಇವತ್ತಿಗೂ ಮಹಾರಾಷ್ಟ್ರದಲ್ಲಿ ಸಾವಿತ್ರಿಬಾಯಿ ಫುಲೆ ಎಂದರೆ ಕ್ರಾಂತಿಯ ಕಿಡಿ ಹೊತ್ತಿಸಿದ ಮಹಾಮಾತೆ ಎಂದು ನೆನೆಯುತ್ತಾರೆ.
ಇದೆಲ್ಲ ನಡೆದದ್ದು ಕೇವಲ 150 ವರ್ಷಗಳ ಹಿಂದೆ. ದೇವರು ಧರ್ಮದ ಮೌಢ್ಯಾಚರಣೆ ಹೆಚ್ಚಾಗಿದ್ದ ಸಂದರ್ಭದಲ್ಲಿ. ಪಕ್ಕದ ಮಹಾರಾಷ್ಟ್ರದಲ್ಲಿ.
ನಿಸ್ವಾರ್ಥ ಸೇವೆ ಸಲ್ಲಿಸಿದ, ಸರಳವಾಗಿ ಬದುಕಿದ, ಸಾಮಾನ್ಯರಾಗಿದ್ದುಕೊಂಡೇ ಅಸಾಮಾನ್ಯ ಸಾಧನೆ ಮಾಡಿದ ಇಂತಹವರು ಇವತ್ತಿಗೆ ನಮ್ಮ ಮಾದರಿಗಳಾಗಬೇಕು. ಇವರ ಜೀವನಗಾಥೆ ಶಾಲಾ ಕಾಲೇಜುಗಳ ಪಠ್ಯವಾಗಬೇಕು. ಅದು ಹೊಸ ಪೀಳಿಗೆಗೆ ಪ್ರೇರಕಶಕ್ತಿಯಾಗಬೇಕು. ಆ ಮೂಲಕ ದೇಶದ ಅಭಿವೃದ್ಧಿಯಾಗಬೇಕು.
ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ |