ಕನ್ನಡನಾಡು ಕಂಡ ಪ್ರಖರ ಪ್ರಗತಿಪರ ಚಿಂತಕ, ರೈತ ನಾಯಕ ಪ್ರೊಫೆಸರ್
ಎಂ.ಡಿ. ನಂಜುಂಡಸ್ವಾಮಿಯವರು ಹುಟ್ಟಿದ್ದು ಫೆಬ್ರವರಿ 13, 1936 ರಂದು, ಇಹಲೋಕ ತ್ಯಜಿಸಿದ್ದು
ಫೆಬ್ರವರಿ 3, 2004ರಲ್ಲಿ. ಕೇಂದ್ರದ ಮೋದಿ ನೇತೃತ್ವದ ಸರಕಾರ ಭೂ ಸ್ವಾಧೀನ ಕಾಯ್ದೆಗೆ
ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಗೆ ರಾಷ್ಟ್ರಾಧ್ಯಕ್ಷರ ಅಂಗೀಕಾರ ಪಡೆದಿದೆ. ರೈತರನ್ನು ಒಕ್ಕಲೆಬ್ಬಿಸುವ
ಈ ಕರಾಳ ಕಾಯ್ದೆ ತರುತ್ತಿರುವ ಸಂದರ್ಭದಲ್ಲಿ ಪ್ರೊಫೆಸರ್ ಇದ್ದಿದ್ದರೆ…
ಕೇವಲ ಒಂಬತ್ತು ತಿಂಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ
ಸರಕಾರ, ಆಡಳಿತದುದ್ದಕ್ಕೂ
ಸುಗ್ರೀವಾಜ್ಞೆಗಳಲ್ಲೇ ಸುದ್ದಿಯಾಯಿತು. ಅದರಲ್ಲೂ ಅತ್ಯಂತ ಮುಖ್ಯವಾದದ್ದು, ಯುಪಿಎ ಸರಕಾರ 2013ರಲ್ಲಿ ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ಹೊರಡಿಸಿರುವ ಸುಗ್ರೀವಾಜ್ಞೆ. ಇದಕ್ಕೆ ಡಿಸೆಂಬರ್ 31ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕಾರ ನೀಡಿದ್ದಾರೆ.ಅಸಲಿಗೆ ಈ ಕಾಯ್ದೆ ಜಾರಿಗೆ ತರಲು ಯುಪಿಎ ಸರಕಾರ ಸುಮಾರು 7 ವರ್ಷಗಳ ಕಾಲ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚಿಸಿತ್ತು. ಈ ಕಾಯ್ದೆಯನ್ನು 2007 ಮತ್ತು 2009 ರಲ್ಲಿ ಎರಡು ಸಂಸದೀಯ ಸಮಿತಿಗಳಿಂದ ಪರಿಶೀಲಿಸಿ, ಸರ್ವಾನುಮತದಿಂದ ಜಾರಿಗೆ ತಂದಿತ್ತು. ಕುತೂಹಲಕರ ಸಂಗತಿ ಎಂದರೆ, ಇವೆರಡೂ ಸಮಿತಿಗಳಿಗೆ ಬಿಜೆಪಿಯ ಹಿರಿಯ ಮುಖಂಡರಾದ ಕಲ್ಯಾಣ್ ಸಿಂಗ್ ಮತ್ತು ಸುಮಿತ್ರಾ ಮಹಾಜನ್ ರನ್ನೇ ಅಧ್ಯಕ್ಷರನ್ನಾಗಿಸಿತ್ತು. ಇದರಲ್ಲಿ ಹಾಲಿ ಮೋದಿ ಸರಕಾರದಲ್ಲಿ ಹಿರಿಯ ಸಚಿವರಾಗಿರುವ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಮಂಡಿಸಿದ್ದ ತಿದ್ದುಪಡಿಗಳನ್ನೂ ಅಳವಡಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ಎಲ್ಲ ಪಕ್ಷಗಳಿಗೂ ಈ ಕಾಯ್ದೆ ಒಪ್ಪಿತವಾಗಿತ್ತು.
ಆದರೆ ನರೇಂದ್ರ ಮೋದಿ ಸರಕಾರ, ಸುಧಾರಣೆಯ ನೆಪವೊಡ್ಡಿ ಈ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯ ಮೂಲಕ ಕಾರ್ಯರೂಪಕ್ಕೆ ಮುಂದಾಗಿದೆ. ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಅತ್ಯಂತ ಮಹತ್ವದ ವಿಚಾರವಾಗಿದ್ದು ಈ ಬಗ್ಗೆ ಚುನಾಯಿತ ಜನಪ್ರತಿನಿಧಿಗಳಿಂದ ಕೂಡಿದ ಲೋಕಸಭೆ ಮತ್ತು ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರತಿಭಾವಂತರಿರುವ ರಾಜ್ಯಸಭೆಗಳಲ್ಲಿ ವಿವರವಾಗಿ ಚರ್ಚೆ ನಡೆಯಬೇಕಾಗಿತ್ತು. ಅದು ಪ್ರಜಾಪ್ರಭುತ್ವದ ರೀತಿ ನೀತಿಯಾಗಿತ್ತು. ಆದರೆ ಸಂಸತ್ತಿಗೂ ಬರದೆ, ಚರ್ಚೆಯೂ ಆಗದೆ ಈ ಸುಗ್ರೀವಾಜ್ಞೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.
ಅಷ್ಟಕ್ಕೂ ಈ ಕಾಯ್ದೆಯಲ್ಲಿ ಏನಿದೆ ಎಂದು ನೋಡುವುದಾದರೆ, ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 5 ವರ್ಷಗಳೊಳಗೆ ಕೈಗಾರಿಕೆಯನ್ನು ಸ್ಥಾಪಿಸದಿದ್ದರೆ ಆ ಭೂಮಿ ಮತ್ತೆ ಮೂಲ ಮಾಲಕನಿಗೆ ವಾಪಸ್ ನೀಡಬೇಕು ಎಂಬ ಅಂಶವನ್ನು ಮೋದಿ ಸರಕಾರ ಜಾರಿ ಮಾಡಿರುವ ಹೊಸ ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ ಕೈಬಿಟ್ಟಿದೆ. ಇದು ಕೃಷಿ ಕ್ಷೇತ್ರ ಮತ್ತು ರೈತ ಸಮುದಾಯಕ್ಕೆ ಮಾಡುವ ಮಹಾ ದ್ರೋಹ.
ಸಿಎಜಿ ವರದಿ ಪ್ರಕಾರ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿದ್ದ ಒಟ್ಟಾರೆ ಭೂಮಿಯ ಪೈಕಿ ಶೇ. 38ರಷ್ಟು ಭೂಮಿ ಹಲವು ವರ್ಷಗಳಿಂದ ಯಾವುದೇ ರೀತಿ ಬಳಕೆಯಾಗದೆ ಹಾಗೇ ಉಳಿದಿದೆ. ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ನೆಪದಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಅಡವಿಟ್ಟು, ಕೆಲವು ಕಂಪನಿಗಳು ನೂರಾರು ಕೋಟಿ ರೂ. ಸಾಲ ಪಡೆದಿವೆಯೆಂದೂ ವರದಿ ಹೇಳಿದೆ. ಇಂತಹ ಅಕ್ರಮಗಳನ್ನು ತಡೆಯುವ ಸಲುವಾಗಿಯೇ ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ ಹೊಸ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು.
ಆದರೆ ಮೋದಿ ಸರಕಾರ ಅದಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಈ ಹೊಸ ಕಾಯ್ದೆಯ ಅಧಿನಿಯಮದನ್ವಯ ಭೂಮಿಯನ್ನು 5 ರೀತಿಯ ಅನುಕೂಲಕ್ಕಾಗಿ ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಅವುಗಳೆಂದರೆ ರಕ್ಷಣೆ, ಕೈಗಾರಿಕಾ ಕಾರಿಡಾರುಗಳು, ಗ್ರಾಮೀಣ ಮೂಲ ಸೌಕರ್ಯ, ಬಡವರಿಗೆ ವಸತಿ ಸೇರಿದಂತೆ ಕೈಗೆಟುಕುವ ದರದಲ್ಲಿ ವಸತಿ ಯೋಜನೆಗಳು ಮತ್ತು ಯಾವುದೇ ತರಹದ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ.
ಹೊಟ್ಟೆಬಾಕ ಗುತ್ತಿಗೆದಾರರು, ಅವಕಾಶವಾದಿ ಅಧಿಕಾರಿಗಳು ಮತ್ತು ಸ್ವಾರ್ಥ ರಾಜಕಾರಣಿಗಳ ಗುಂಪು ಈ ಯೋಜನೆಯ ಫಲಾನುಭವಿಗಳು. ಅದರಲ್ಲೂ ಕಾರ್ಪೊರೇಟ್ ವಲಯದ ಧಣಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳಿಗೆ ಅತಿ ಹೆಚ್ಚಿನ ಲಾಭದಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಇವರ ಪಂಚತಾರಾ ಹೋಟೆಲ್ಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಐಷಾರಾಮಿ ರೆಸಾರ್ಟ್ ಗಳು, ಮೇಲ್ವರ್ಗದವರ ಭಾರೀ ಮಾಲ್ ಗಳು, ಪ್ರತಿಷ್ಠಿತ ಕಾಲೇಜುಗಳು ತಲೆ ಎತ್ತಲಿವೆ. ಹೀಗಾಗಿ ಈ ಕಾಯ್ದೆ ಬಡವರ ವಿರುದ್ಧ ಎಂಬುದಂತೂ ಸ್ಪಷ್ಟ. ಈ ಸುಗ್ರೀವಾಜ್ಞೆಯಿಂದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟಂತಾಗುತ್ತದೆ ಎಂದು ದೇಶದ ಎಲ್ಲ ವಿರೋಧ ಪಕ್ಷಗಳು ಒಕ್ಕೊರಲಿನಿಂದ ವಿರೋಧಿಸಿವೆ. ಬಿಜೆಪಿಯೇತರ ರಾಜ್ಯ ಸರಕಾರಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೂ ನರೇಂದ್ರ ಮೋದಿ ಸರಕಾರ ಎಲ್ಲರ ವಿರೋಧದ ನಡುವೆಯೂ ಕರಾಳ ಕಾಯ್ದೆಯನ್ನು ಕಾರ್ಯರೂಪಕ್ಕಿಳಿಸಲು, ಅನ್ನ ನೀಡುವ ಮಣ್ಣಿನ ಮಗನಿಗೆ ಮಣ್ಣು ಮುಕ್ಕಿಸಲು ಮುಂದಾಗಿದೆ.
ಈ ಕ್ಷಣದಲ್ಲಿ ನನಗೆ ನೆನಪಾದದ್ದು ನಮ್ಮ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು.
ಎಂಬತ್ತರ ದಶಕದಲ್ಲಿ ರೈತ ಸಂಘ ಕಟ್ಟಿದ, ನಾಡಿನ ರೈತರ ರಟ್ಟೆಗೆ ಬುದ್ಧಿಗೆ ಬಲ ತುಂಬಿದ, ಸ್ವಾಭಿಮಾನದ ಪಾಠ ಹೇಳಿದ ಪ್ರೊಫೆಸರ್, ಕುಗ್ಗಿಹೋಗಿದ್ದ ರೈತನನ್ನು ಎದ್ದುನಿಲ್ಲಿಸಿ ಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿದ ಮಹಾನುಭಾವ. ತಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದು, ಸರಕಾರಿ ಅಧಿಕಾರಿಗಳ ಜಪ್ತಿಯ ವಿರುದ್ಧ ಮರು ಜಪ್ತಿ ಮಾಡುವಂತೆ ಪ್ರೇರೇಪಿಸಿದ್ದು, ಜನಸೇವೆಯ ಹೆಸರಲ್ಲಿ ದರ್ಬಾರು ನಡೆಸುತ್ತಿದ್ದ ಜನಪ್ರತಿನಿಧಿಗಳ ಚಳಿ ಬಿಡಿಸಿದ್ದು, ನಗುವ ಚಳವಳಿ, ಉಗಿವ ಚಳವಳಿಗಳಂತಹ ಪ್ರತಿ ಸಂದರ್ಭಕ್ಕೂ ಒಂದೊಂದು ವಿಶಿಷ್ಟ ಬಗೆಯ ಹೋರಾಟಗಳನ್ನು ಹುಟ್ಟುಹಾಕಿದ್ದು… ಒಂದಾ ಎರಡಾ. ನೂರಾರು ಚಳವಳಿಗಳ ಮೂಲಕ ರೈತರನ್ನು ಜಾಗೃತರನ್ನಾಗಿಸಿದರು. ರೈತ ಹೋರಾಟಕ್ಕೊಂದು ಹೊಸ ವ್ಯಾಖ್ಯಾನ ನೀಡಿ ಬೇಸಾಯದ ಬದುಕಿಗೆ ಬೆಲೆ ತಂದರು.
ಇದೆಲ್ಲಕ್ಕಿಂತಲೂ ಮುಖ್ಯವಾಗಿದ್ದು, ಪ್ರೊ. ನಂಜುಂಡಸ್ವಾಮಿಯವರು ಜಾಗತೀಕರಣ ತಂದೊಡ್ಡುವ ಅಪಾಯಗಳನ್ನು ಕುರಿತು ಹೇಳಿದ್ದು. ಅದು ದೇಶದ ಜನರ ಜೀವನದ ಮೇಲೆ ಬೀರುವ ಪರಿಣಾಮವನ್ನು ಕುರಿತು ಕರಾರುವಾಕ್ಕಾಗಿ ಕಂಡಿರಿಸಿದ್ದು. ಜಾಗತೀಕರಣದಿಂದ ವಿಶ್ವದ ಇತರ ದೇಶಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲಾಗಿರುವ ದುಷ್ಪರಿಣಾಮಗಳನ್ನು ಬಿಡಿಸಿಟ್ಟಿದ್ದು. ಜಾಗತಿಕ ಬುದ್ಧಿಜೀವಿ ವಲಯವೂ ಬೆಚ್ಚುವಂತೆ ವಿಚಾರ ಮಂಡಿಸಿದ್ದು.
ಇದರ ಜೊತೆಗೆ ಮಲ್ಟಿ ನ್ಯಾಷನಲ್ ಕಂಪನಿಗಳು, ವಿದೇಶಿ ಬಂಡವಾಳ ಮತ್ತು ವಿದೇಶಿ ವಸ್ತುಗಳ ಅವ್ಯಾಹತ ಆಮದುಗಳಿಂದ ನಮ್ಮ ದೇಶಿ ಕುಲಕಸುಬುಗಳಿಗೆ ಆಗುವ ಅಪಾಯವನ್ನು ತರ್ಕಬದ್ಧವಾಗಿ ವಿವರಿಸಿದ್ದು. ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಮತ್ತು ರೈತ ಸಮುದಾಯವನ್ನು ಕಾರ್ಪೊರೇಟ್ ದುರಾಕ್ರಮಣದಿಂದ ರಕ್ಷಿಸಲು ಮಾನ್ಸಾಂಟೋ, ಕೆಂಟಕಿ ಫ್ರೈಡ್ ಚಿಕನ್, ಗ್ಯಾಟ್, ಡಂಕೆಲ್ ಗಳ ವಿರುದ್ಧ ವಿಶಿಷ್ಟ ಬಗೆಯ ಹೋರಾಟಗಳನ್ನು ರೂಪಿಸಿ ರೈತರನ್ನು ಸಜ್ಜುಗೊಳಿಸಿದ್ದು. ಇಡೀ ರೈತ ಸಂಕುಲಕ್ಕೆ ಧೈರ್ಯ ತುಂಬಿದ್ದು.
ಇಂತಹ ಅಪರೂಪದ ಚಿಂತಕ, ಹೋರಾಟಗಾರ, ಸಂತ ಇವತ್ತಿಲ್ಲ. ಅಕಸ್ಮಾತ್ ಇದ್ದಿದ್ದರೆ ದೇಶದ ರೈತರನ್ನು ಸಂಘಟಿಸಿ ಸಂಸತ್ತಿಗೆ ಮುತ್ತಿಗೆ ಹಾಕುತ್ತಿದ್ದರು. ರೈತರು ಏನು ಎನ್ನುವುದನ್ನು; ಭೂಮಿಯ ಮಹತ್ವವನ್ನು ಮೋದಿಯ ಮರ್ಮಕ್ಕೆ ತಾಕುವಂತೆ ಮಾಡುತ್ತಿದ್ದರು. ಹಾಗೆಯೇ ಮನೆಹಾಳು ಕಾಯ್ದೆಯನ್ನು ಕೈಬಿಡುವಂತೆ ನೋಡಿಕೊಳ್ಳುತ್ತಿದ್ದರು.
ಪ್ರೊಫೆಸರ್ ನಂಜುಂಡಸ್ವಾಮಿಯವರೇ ಎಲ್ಲ ಕಾಲಕ್ಕೂ, ಎಲ್ಲದಕ್ಕೂ ಇರಬೇಕಾಗಿತ್ತು ಎಂಬುದು ಕೊಂಚ ದುರಭಿಮಾನವಾಗಬಹುದು. ಹಾಗೆಯೇ ಅದು ಹೊಸಬರು ಬರದಂತೆ, ಬೆಳೆಯದಂತೆಯೂ ಕಾಣಬಹುದು. ಹಾಗಾಗಿ ಅವರ ಮಾರ್ಗದಲ್ಲಿಯೇ ನಡೆಯುತ್ತಿರುವ ಸಮಾನ ಮನಸ್ಕರು, ಬಂಡವಾಳಶಾಹಿಯಿಂದಲೇ ಭಾರತ ಮುಂದಕ್ಕೆ ಬರಬೇಕೆ, ಭಾರತ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತ ರಾಷ್ಟ್ರವಾಗಿಬಿಡುತ್ತದೆಯೆ, ಇದರಿಂದ ಭಾರತದ ಕೃಷಿಗೆ ಕೈಗಾರಿಕೆ ಮತ್ತು ಜನತೆಗೆ ಒಳಿತಾಗುತ್ತದೆಯೆ ಎಂದು ಯೋಚಿಸಬೇಕಾದ ತುರ್ತಿದೆ.
ಹೀಗೆ ಯೋಚಿಸಿ ಕಾರ್ಯರೂಪಕ್ಕೆ ಇಳಿಯಬೇಕಾದ ಸಮಾಜಮುಖಿ ಚಿಂತಕರು, ಜನಪರ ನಿಲುವಿನ ವ್ಯಕ್ತಿಗಳು ಬೇಕಾದಷ್ಟು ಜನರಿದ್ದಾರೆ. ಇರುವ ಕಾರಣಕ್ಕೆ ಇರುವಿಕೆಯನ್ನು ಸಾಬೀತುಪಡಿಸುವುದಕ್ಕಾದರೂ, ಕಾಲಕಾಲಕ್ಕೆ ಎದುರಾಗುವ ಪ್ರಭುತ್ವದ ಸವಾಲುಗಳಿಗೆ ಉತ್ತರ ನೀಡಬೇಕಾಗಿದೆ. ಅದಕ್ಕೆ ಸಹಕಾರಿಯಾಗಿ ಪ್ರೊಫೆಸರ್ ಕಟ್ಟಿ ಬೆಳೆಸಿದ ರೈತ ಸಂಘದೊಂದಿಗೆ ಗುರುತಿಸಿಕೊಂಡವರು; ಹೋರಾಟ, ಚಳವಳಿ, ಮುಷ್ಕರ, ಧರಣಿಗಳಲ್ಲಿ ಅವರೊಂದಿಗೆ ಹೆಜ್ಜೆ ಹಾಕಿದವರು; ಬದಲಾವಣೆ ಬಯಸುವ ಹೊಸ ತಲೆಮಾರಿನವರಿದ್ದಾರೆ. ಇವರೆಲ್ಲರೂ ಸ್ವಲ್ಪ ಸ್ವಪ್ರತಿಷ್ಠೆ, ಸ್ವಹಿತಾಸಕ್ತಿ, ಸ್ವಾರ್ಥವನ್ನು ಬಿಟ್ಟು ಒಂದಾದರೆ, ಒಕ್ಕೊರಲಿನಿಂದ ಭೂ ಕಾಯ್ದೆಯನ್ನು ವಿರೋಧಿಸಿದರೆ, ಅದಕ್ಕೆ ಕರ್ನಾಟಕವೇ ಮುಖ್ಯ ಭೂಮಿಕೆಯಾದರೆ- ಪ್ರೊಫೆಸರ್ ಜೀವಂತ, ಎಂದೆಂದಿಗೂ.