ಮೆಹಬೂಬ್ ಪಾಷ |
ಅಂಗಡಿ ಅಂದರೆ ಅದು ಅಂಗಡಿಯಲ್ಲ, ಅದಕ್ಕೊಂದು ನಿರ್ದಿಷ್ಟ ಜಾಗವೇ ಇಲ್ಲ. ಅಂಗಡಿಯ ಮಾಲೀಕನಿಗೆ ಕೂರಲು ಒಂದು ಕುರ್ಚಿಯಿರಲಿ, ನಿಲ್ಲಲು ನಿಸೂರಾದ ಜಾಗವೂ ಇಲ್ಲ. ಪಕ್ಕದ ಸುಸಜ್ಜಿತ ಟಿಪ್ ಟಾಪ್ ಲೆದರ್ ಬ್ಯಾಗ್ ಅಂಗಡಿ ಮಳಿಗೆಯ ಹೊರಗೋಡೆಗೆ ಒಂದು ಸ್ಲ್ಯಾಟೆಡ್ ಆ್ಯಂಗಲ್ ಫಿಟ್ ಮಾಡಿ, ಅದರೊಳಗೆ ಹಳೆಯ ಪುಸ್ತಕಗಳನ್ನು ಜೋಡಿಸಿಡಲಾಗಿತ್ತು.
ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ತೆಲುಗು... ಹೀಗೆ ಎಲ್ಲಾ ಭಾಷೆಗಳ, ಎಲ್ಲೂ ಸಿಗದ ಹಳೆಯ, ಹರಿದ ಸಾವಿರಾರು ಪುಸ್ತಕಗಳು, ಕವರ್‌ಪೇಜ್ ಕಳೆದುಕೊಂಡ ನೂರಾರು ಮ್ಯಾಗಜಿನ್‌ಗಳು ಅಲ್ಲಿದ್ದವು. ಸ್ವಲ್ಪ ಕತ್ತೆತ್ತಿ ನೋಡಿದರೆ, ಮಿಣುಕಾಡುವ ಬಲ್ಬು ಹಳೆಯ ಪುಸ್ತಕಗಳಿಗೆ ಬೆಳಕು ಬೀರುತ್ತಿತ್ತು. ಆ ಒಂದು ಅಡಿ ಅಗಲ ಅಳತೆಯ ಸ್ಲ್ಯಾಟೆಡ್ ಆ್ಯಂಗಲ್‌ಗೆ ರೋಲಿಂಗ್ ಶೆಟ್ಟರ್ಸು, ಅದಕ್ಕೊಂದು ಬೀಗ ಎಲ್ಲವೂ ಇತ್ತು. ಆ ಸ್ಲ್ಯಾಟೆಡ್ ಆ್ಯಂಗಲ್‌ನ ಮೇಲೆ ಗೋಡೆಯಲ್ಲಿ ‘ಅಮೀನಾ ಬಿ ಬುಕ್ ಸ್ಟಾಲ್’ ಅಂತ ಬೋರ್ಡ್ ಕೂಡ ಇತ್ತು.
ಹೇಳಿ ಕೇಳಿ ಅದು ಬಳೇಪೇಟೆ. ಕಿಷ್ಕಿಂಧೆಯಂತಹ ಜಾಗ. ಆ ಅಂಗಡಿಯೋ ಬೀದಿಯಲ್ಲಿಯೇ ಇದೆ. ಅಂಗಡಿಯ ಮುಂದೆ ಗುಂಡಿ, ಹೊಂಡಗಳು. ಅದರೊಳಗೆ ಮಳೆ ನೀರೋ ಅಥವಾ ಮನುಷ್ಯರ ನೀರೋ ತುಂಬಿ ಹರಿಯುತ್ತಿದೆ. ಅವುಗಳನ್ನೆಲ್ಲ ದಾಟಿಕೊಂಡು ಆ ಅಂಗಡಿಯ ಬಳಿ ಹೋದೆ. ಕುರುಚಲು ಗಡ್ಡ ಬಿಟ್ಟುಕೊಂಡು, ಶರ್ಟಿನ ತೋಳನ್ನು, ಮಂಡಿವರೆಗೆ ಪ್ಯಾಂಟನ್ನು ಮಡಚಿಕೊಂಡು ನಡುಗುತ್ತಾ ನಿಂತಿದ್ದ ವ್ಯಕ್ತಿ ಕಸಿವಿಸಿಯ ಮುಖಭಾವದಲ್ಲಿ ‘ಏನು’ ಎನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿದರು. ಅವರಿದ್ದ ಸ್ಥಿತಿ ನೋಡಿ, ಇವರು ಈ ಹಳೆ ಅಂಗಡಿಯನ್ನು ನೋಡಿಕೊಳ್ಳುವ ಕೆಲಸಗಾರನಿರಬೇಕು ಎಂದು ಭಾವಿಸಿ, ಮಾತನಾಡಿಸುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದೆ.
ಆಗ ಅವರೇ ‘ಏನ್ ಬೇಕಣ್ಣ’ ಎಂದರು.
ಅವರ ಮಾತಿನಲ್ಲಿಯೇ ಅವರು ಮುಸ್ಲಿಂ ಎಂಬುದು ಗೊತ್ತಾಯಿತು. ಮಂಡಿಯವರೆಗೂ ಮಡಿಚಿದ್ದ ಪ್ಯಾಂಟು ಅದನ್ನು ಖಾತ್ರಿಪಡಿಸಿತ್ತು. ನನಗಿಂತ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಿದ್ದವರು ‘ಅಣ್ಣ’ ಅಂದಾಕ್ಷಣ ಕೊಂಚ ಕಸಿವಿಸಿಯಾಯಿತು, ತಗ್ಗಿದ ದನಿಯಲ್ಲಿ ‘ಪತ್ತೇದಾರಿ ಪುಸ್ತಕಗಳು ಬೇಕಾಗಿತ್ತು’ ಎಂದೆ.
‘ಅಣ್ಣಾ... ಇದಾವೆ, ಬೆಳಗ್ಗೆ ಬಂದ್ರೆ ಕೊಡ್ತೀನಿ’ ಒಂಥರಾ ದಯನೀಯ ದನಿಯಲ್ಲಿ ಬೇಡಿಕೊಂಡರು.
‘ಪತ್ತೇದಾರಿ ಎನ್. ನರಸಿಂಹಯ್ಯನವರ ಪುಸ್ತಕಗಳಿವೆಯಾ?’ ಎಂದೆ.
‘ಹುಡುಕ್ಬೇಕು, ಈಗ ನೋಡಿ ಹೆಂಗಿದೀನಿ, ಬೆಳಗ್ಗೆ ಕೊಡ್ತೀನಿ ಬಾರಣ್ಣ’ ಅಂದರು. ಆ ದನಿಯಲ್ಲಿ ಗಿರಾಕಿಯನ್ನು ಮತ್ತೆ ಬರುವಂತೆ ಕರೆಯುವ ಕೋರಿಕೆಯಿತ್ತು.
ಸಿಗುತ್ತೆ ಅನ್ನುವುದು ಗ್ಯಾರಂಟಿ ಆಗುತ್ತಿದ್ದಂತೆ, ಅವರ ವ್ಯಾಪಾರ-ವ್ಯವಹಾರ, ಸ್ಥಿತಿ-ಗತಿ ತಿಳಿಯುವ ಕುತೂಹಲದಿಂದ ಹೆಸರು, ಹಿನ್ನೆಲೆ ಬಗ್ಗೆ ವಿಚಾರಿಸತೊಡಗಿದೆ. ಮಳೆಗೆ ಮೇಲ್ಛಾವಣಿಯಾಗಲಿ, ಚಳಿಗೆ ಸ್ವೆಟರ್, ಜರ್ಕೀನ್ ಆಗಲಿ ಹಾಕಿಕೊಳ್ಳದೆ, ನೆನೆಯುತ್ತ, ನಡುಗುತ್ತ ರೇಜಿಗೆ ಮುಖಭಾವ ಹೊದ್ದು ನಿಂತಿದ್ದವರು,
‘ಅಣ್ಣ, ನನ್ನ ಹೆಸರು ಮೆಹಬೂಬ್ ಪಾಷ, ನಲವತ್ತೆಂಟ್ ವರ್ಷ, ನಾಳೆ ಬನ್ನಿ, ನೋಡನ?’ ಎಂದು ಮಾತು ತುಂಡರಿಸಿ, ಮಳೆಗೆ ಶಾಪ ಹಾಕುತ್ತ, ಪುಸ್ತಕಗಳನ್ನು ಎತ್ತಿಡುತ್ತ ಅಂಗಡಿ ಬಾಗಿಲು ಹಾಕುವುದಕ್ಕೆ ಸಿದ್ಧ ಮಾಡಿಕೊಳ್ಳತೊಡಗಿದರು. ಅವರ ಸ್ಥಿತಿ ನೋಡಿ ಮಾತು ಮುಂದುವರೆಸುವ ಮನಸ್ಸಾಗದೆ ಬಂದುಬಿಟ್ಟೆ.
ಮಾರನೆ ದಿನ, ನರಸಿಂಹಯ್ಯನವರ ಪತ್ತೇದಾರಿ ಪುಸ್ತಕಗಳನ್ನು ಹುಡುಕಿಕೊಂಡು ಬೇರೆ ಕಡೆ ಹೋಗಿದ್ದರಿಂದ, ಅಲ್ಲಿ ಸಿಕ್ಕಿದ್ದರಿಂದ ಮೆಹಬೂಬ್ ಪಾಷಾರ ಅಂಗಡಿ ಮರೆತೇಹೋಯಿತು.
ಮತ್ತೊಂದು ಸಲ ಬಳೇಪೇಟೆಗೆ ಹೋಗಬೇಕಾಗಿ ಬಂದಾಗ, ಹತ್ತಿರದಲ್ಲಿಯೇ ಇದ್ದ ಹಳೆ ಪುಸ್ತಕಗಳ ಅಂಗಡಿ ಮಾಲೀಕ ಮೆಹಬೂಬ್ ಪಾಷ ನೆನಪಾದರು. ಅಂಗಡಿ ಮುಂದೆ ಹೋಗಿ ನಿಂತೆ, ನೋಡುತ್ತಿದ್ದ ಹಾಗೆ, ‘ಅವತ್ತು ಕೇಳಿಕೊಂಡು ಹೋದೋರು ಬರ್ಲೇ ಇಲ್ಲ, ಆ ಕಡೆ ಇಟ್ಟಿದೀನಲ್ಲ, ಅವೆಲ್ಲ ಪತ್ತೇದಾರಿ ಕಾದಂಬ್ರಿಗಳೆ, ನೋಡಿ’ ಎಂದರು.
ಅವರು ನನ್ನ ನೋಡಿದ್ದು ಒಂದೇ ಸಲ, ಆದರೂ ನನಗಾಗಿ ಕಾದಿದ್ದು, ಪುಸ್ತಕಗಳನ್ನು ಎತ್ತಿಟ್ಟಿದ್ದರು. ಆ ಕ್ಷಣಕ್ಕೆ ಅವರಲ್ಲಿ ವ್ಯವಹಾರಕ್ಕಿಂತ, ‘ನನ್ನ ಅಂಗಡೀಲಿ ಸಿಕ್ಕತ್ತೆ ಅಂತ ಹುಡುಕಿಕೊಂಡು ಬಂದಿದ್ದೀರ, ಕೊಡದೆ ಹೋದ್ರೆ ತಪ್ಪಾಗುತ್ತೆ’ ಎಂಬ ಭಾವವಿತ್ತು. ಅವರಲ್ಲಿದ್ದ ಪುಸ್ತಕ ಪ್ರೀತಿ ಎದ್ದು ಕಾಣುತ್ತಿತ್ತು.
ಅವರ ಮಾತನ್ನು ಅರ್ಧಕ್ಕೇ ತಡೆದು, ‘ನೋಡಿ ಇಲ್ಲಿ, ಎಷ್ಟು ಟೈಟ್ಲು ಬೇಕು?’ ಎಂದು ಎಚ್. ನರಸಿಂಹಯ್ಯನವರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನಕ್ಕೆ ಬಳಸಿದ್ದ ಫೋಟೋ ತೋರಿಸಿದೆ. ನರಸಿಂಹಯ್ಯನವರ ಮಗ ರವೀಂದ್ರರನ್ನು ಹುಡುಕಿಕೊಂಡು ಹೋಗಿ, ಅವರಲ್ಲಿದ್ದ ಪುಸ್ತಕಗಳನ್ನೆಲ್ಲ ಒಪ್ಪವಾಗಿ ಜೋಡಿಸಿಟ್ಟು ತೆಗೆದ ಫೋಟೋ ಅದಾಗಿತ್ತು.
ನರಸಿಂಹಯ್ಯನವರ ಫೋಟೋ, ಅವರ ಪುಸ್ತಕಗಳ ಕವರ್ ಪೇಜ್ ಚಿತ್ರಗಳನ್ನು ನೋಡುತ್ತಿದ್ದಂತೆ, ಮೆಹಬೂಬ್ ಜಮಾನಕ್ಕೆ ಜಾರಿದರು. ಮುಖ ಹೂವಿನಂತೆ ಅರಳಿತು, ‘ಚಿನ್ನ.. ಚಿನ್ನ.. ಅಣ್ಣ’ ಎಂದು ಒಂದೊಂದೇ ಕವರ್ ಪೇಜ್‌ಗಳನ್ನು ಕಣ್ತುಂಬಿಕೊಳ್ಳುತ್ತಿದ್ದವರು ಒಮ್ಮೆಲೆ ಖಿನ್ನರಾಗಿ, ‘ಹೋಯ್ತು, ಆ ಕಾಲ ಎಲ್ಲಾ ಹೋಯ್ತು ಅಣ್ಣ’ ಅಂದರು.
ಅವರು ಇದ್ದಕ್ಕಿದ್ದಂತೆ ಖುಷಿಯಾಗಿದ್ದು, ಖಿನ್ನರಾಗಿದ್ದು ನನಗೆ ಕುತೂಹಲ ಕೆರಳಿಸಿತು.
‘ಯಾಕೆ, ಏನಾಯ್ತು?’ ಅಂದೆ. ಅವರಿಗೆ ನಾನು ಪತ್ರಕರ್ತ ಅನ್ನುವುದು ಖಾತ್ರಿಯಾಗಿತ್ತು. ಮಾತಾಡಲಿಕ್ಕೆ ಕೊಂಚ ಹಿಂಜರಿಯತೊಡಗಿದರು. ‘ಅಯ್ಯೋ ಅದೆಲ್ಲ ಯಾಕೆ ಬಿಡಣ್ಣ’ ಅಂದರು. ನಡುವೆ ಬಂದ ಗಿರಾಕಿ ಅಟೆಂಡ್ ಮಾಡಿ, ಪುಸ್ತಕ ಕೊಟ್ಟು ಕಳುಹಿಸಿದರು. ನಂತರ ಪೋಟೋ ಇದ್ದ ಪತ್ರಿಕೆಯನ್ನು ಕೈಗೆತ್ತಿಕೊಂಡು ನರಸಿಂಹಯ್ಯನವರ ಫೋಟೋಗೆ ಒಂದು ಫ್ಲೈಯಿಂಗ್ ಕಿಸ್ ಕೊಟ್ಟ ಮೆಹಬೂಬ್, ‘ಹ್ಯಂಗ್ ಹೋಗ್ತಿತ್ತು ಗೊತ್ತಾ ಅಣ್ಣ, ಒಂದೊಂದ್ ಟೈಟ್ಲು ಒಂದೇ ದಿನಕ್ಕೆ ನೂರು ಇನ್ನೂರ್ ಮಾರಿದೀನಿ, ರಾಜ ರಾಜ ಥರ ಇದ್ದೇ ಆಗ, ನನ್ ಮನೆ ನಡ್ಸಿದ್ದೇ ಇವ್ರಣ್ಣ?’ ಎಂದರು.
ಎಲ್ಲಿಯ ಮೆಹಬೂಬ್ ಎಲ್ಲಿಯ ನರಸಿಂಹಯ್ಯ? ಯೋಚನೆ ತಲೆಯಲ್ಲಿ ತೇಲಿಹೋಯಿತು. ‘ಎಷ್ಟು ವರ್ಷಗಳ ಹಿಂದೆ ಅದು?’ ಅಂದೆ.
‘ಮೂವತ್ತು ವರ್ಷ... ಹೆಚ್ಚೂಕಡಿಮೆ ನಲವತ್ತು ವರ್ಷದಿಂದ ಇಲ್ಲಿರೋದು, ಚೆಡ್ಡಿ ಹಾಕೊಳ್ತಿದ್ದ ಕಾಲದಿಂದಾನೂ ಇಲ್ಲೇ. ನಾನು ಚಿಕ್ಕವನಾಗಿದ್ದಾಗ ನಮ್ ಫಾದರ್ ಹೋಗ್ಬಿಟ್ರು. ನಾನು ಇಸ್ಕೂಲ್ ಗಿಸ್ಕೂಲ್ ಕಲ್ತವನಲ್ಲ, ಸೈನ್ ಮಾಡೋಕು ಬರಲ್ಲ, ಎಂಟು ವರ್ಷದವನಿದ್ದಾಗ ಈ ಗಲ್ಲಿಗೆ ಬಿದ್ದೆ. ಯಾವ ಕೆಲಸ ಮಾಡಿಲ್ಲ ಹೇಳಿ?’ ಎಂದು ತಂದೆಯಿಲ್ಲದ ತಬ್ಬಲಿತನದ ಬಾಲ್ಯಕಾಲವನ್ನು ಮತ್ತು ಬವಣೆಯ ಬದುಕನ್ನು ಬಿಚ್ಚಿಡತೊಡಗಿದರು.
‘ವಲ್ಡ್ ನಲ್ಲಿ ನನ್ನಂಗೆ ಯಾರೂ ಕಷ್ಟ ಬಿದ್ದಿಲ್ಲ ಬುಡಣ್ಣ’ ಅಂದರು. ವಲ್ಡ್ ಅಂದರೆ ಜಗತ್ತು. ಅರ್ಥವಾಗಬೇಕಾದರೆ ಸ್ವಲ್ಪಸಮಯ ಹಿಡಿಯಿತು. ಚಿಕ್ಕಂದಿನಲ್ಲಿ ಕೈಗೆ ಸಿಕ್ಕಿದ ಕೂಲಿ ಕೆಲಸ ಮಾಡಿ, ಸಂಜೆಯ ಹೊತ್ತಿಗೆ ಜೇಬಿನಲ್ಲಿ ಚಿಲ್ಲರೆ ದುಡ್ಡು ಇದ್ದರೆ ಮನೆ, ಇಲ್ಲದಿದ್ದರೆ ಇಲ್ಲೇ ಯಾವುದಾದರೂ ಅಂಗಡಿ ಮುಂದೆ ಕಾರ್ಟೂನ್ ಬಾಕ್ಸ್ ಹಾಸಿಕೊಂಡು, ಅದನ್ನೇ ಹೊದ್ದುಕೊಂಡು ಮಲಗೋದು. ಅರ್ಧರಾತ್ರಿಯಲ್ಲಿ ಪೊಲೀಸ್ನೋರ ಕಾಟ, ಬೆತ್ತದ ರುಚಿ.
‘ಡಿಸೆಂಬರ್ ಚಳಿ ಗೊತ್ತಲ್ಲ... ನಡುಗುತ್ತ ಮಲಗಿದ್ದಾಗ ಪೊಲೀಸ್ನೋರು ಬಂದು ಬಾರಸೋರು. ಮೈ ಬಿಸಿಯಾಗೋದು. ಅದೂ ಒಂಥರಾ ಒಳ್ಳೇದೆ.. ಬೆಳಗ್ಗೆವರೆಗೆ ಚಳಿ ಕಾಣ್ತಿರಲಿಲ್ಲ. ಲಾಠಿ ಏಟೇ ಸ್ವೆಟರ್ ಥರ’ ಎಂದು ನಗಾಡತೊಡಗಿದರು.
‘ಹಾಗಿದ್ದವರು, ಇಂಥ ಅಂಗಡಿ ಮಾಡಿದ್ದು ಹೇಗೆ?’ ಎಂದೆ.
‘ಅಯ್ಯೋ ಅದು ಇನ್ನೊಂದು ದೊಡ್ ಸ್ಟೋರಿ. ಇವತ್ತಿಗೆ ಮುಗಿಯದಲ್ಲ. ಭಿಕಾರಿ ನನ್ಮಗನಿಗೆ ಬಳೇಪೇಟೆ ಗಲ್ಲಿನಲ್ಲಿ ಅಂಗಡಿ ಅಂದರೆ ಯಾರೂ ನಂಬಲ್ಲ ಅಣ್ಣ... ಕೂಲಿ ನಾಲಿ ಮಾಡ್ತಿದ್ನಲ್ಲ, ಅದರ ಜೊತೆಗೇನೆ ಸಂತೋಷ್, ನರ್ತಕಿ ಥೇಟರ್ ಮುಂದೆ ಬನೀನು ಮಾರಾಟ ಮಾಡ್ತಿದ್ದೆ, ಸ್ವಲ್ಪ ಸ್ವಲ್ಪ ಕಾಸು ಕೂಡಿಸಿಕೊಂಡು ಒಂದೊಂದೇ ಜೋಡಿಸಿಕೊಂಡು, ಈ ಗಲ್ಲಿನಲ್ಲಿ ಅಂಗಡಿ ಶುರು ಮಾಡದೆ. ಇವತ್ತು ಇಷ್ಟು ದೊಡ್ಡ ಅಂಗಡಿ ಆಗಿದೆ’ ಎಂದು ಗೋಡೆ ಕಡೆ ಒಂದು ಗತ್ತಿನ ನೋಟ ಬೀರಿದರು. ಆ ಗೋಡೆಯೇ ಅವರ ಪಾಲಿಗೆ ಭಾರೀ ಮಳಿಗೆ.
‘ಈ ಅಂಗಡಿಗೆ ದಿನಕ್ಕೆ ನೂರು ರೂಪಾಯಿ ಬಾಡಿಗೆ. ಅದಿದೆಯಲ್ಲ, ಆ ಗೂಡು, ಅದು ಕಾರ್ಪೊರೇಷನ್‌ದು, ಅದಕ್ಕೆ ದಿನಕ್ಕೆ ಐವತ್ತು ರೂಪಾಯ್ ಬಾಡಿಗೆ. ಎರಡೂ ಸೇರಿ ತಿಂಗಳಿಗೆ ನಾಲ್ಕೂವರೆ ಸಾವ್ರ ಬಾಡಿಗೆ ಕಟ್ಟಿ, ಮಿಕ್ಕದ್ದರಲ್ಲಿ ನಾನು ನನ್ನ ಸಂಸಾರ ಬದುಕ್ಬೇಕು ಅಣ್ಣ. ಇಲ್ಲೇ ಕಾಟನ್ ಪೇಟೆ ಮೂರನೇ ಕ್ರಾಸ್ ನಲ್ಲಿರುವ ತವಕ್ಕಲ್ ಮಸ್ತಾನ್ ದರ್ಗಾ ಹತ್ರ ಮನೆ, ಎರಡು ಮಕಕ್ಳಿವೆ, ಓದ್ತಾಯಿದಾರೆ. ಶೀಟ್ ಮನೆ, ಮೂರ್ ಸಾವ್ರ ಬಾಡಿಗೆ.. ಅದರ್ದು ಇದರಿಂದ್ಲೇ ನಡೀಬೇಕು...
‘ಇವತ್ತು ಈ ಅಂಗಡಿ ಉಳಸ್ಕೋಬೇಕು ಅಂತಂದ್ರೆ ಏನೆಲ್ಲಾ ಕಷ್ಟಪಟ್ಟಿದೀನಿ ಗೊತ್ತಾ ಸಾರ್? ಒಂದ್ ಸಲ ಕಾರ್ಪೋರೇಷನ್ನೋರು ಲಾರಿ ತಂದು ನನ್ನ ಪುಸ್ತಕಾನೆಲ್ಲ ತುಂಬಿಕೊಂಡು ಹೋಗುಬುಟ್ರು... ಅವರ ಕಾಲಿಡಕಂಡೆ, ಕೈ ಮುಗಿದೆ, ಬೀದಿಲಿ ಬಿದ್ದು ಗೋಳಾಡುಬುಟ್ಟೆ... ಯಾರು ಕೇಳತರೆ ಬಡವರ ಗೋಳು. ಒಳ್ಳೇರ್‌ಗೆ ಕಾಲ ಇಲ್ಲ, ಆದರೆ ಪರಮಾತ್ಮನ ಹತ್ರ ಐತೆ, ಜನರತ್ರ ಇಲ್ಲ...
‘ಎಷ್ಟೋ ವರ್ಷಗಳಿಂದ ಕೂಲಿ ನಾಲಿ ಮಾಡಿ ಜೋಡಿಸಿದ ಅಂಗಡೀನಾ ಒಂದೇ ಕ್ಷಣದಲ್ಲಿ ಇಲ್ಲ ಅನ್ನಿಸಬುಟ್ರು...
ಏನೋ ನೆನಪು ಮಾಡಿಕೊಂಡಂತೆ...
`ವಿಜಯ ಸಾಸನೂರ್ ಹೆಸ್ರು ಕೇಳಿದೀರ.. ಒಳ್ಳೊಳ್ಳೆ ಪುಸ್ತಕ ಬರೆದವ್ರೆ. ದೇವ್ರು ಅಣ್ಣ ಅವ್ರು, ಅವ್ರು ನನ್ ಬುಕ್‌ಸ್ಟಾಲ್ಗೆ ಆಗಾಗ ಬರೋರು, ಆಗ ಪರಿಚಯ ಆಗಿತ್ತು. ಅವರತ್ರ ಹೋದೆ, ಆಗವರು ದೊಡ್ಡ ಪೊಲೀಸ್ ಆಫೀಸರ್ ಆಗಿದ್ರು, ಅವರು ಕಾರ್ಪೋರೇಷನ್ನೋರಿಗೆ ಹೇಳಿ, ನನ್ನ ಮೇಲೆ ಕೈ ಹಾಕ್ದಂಗೆ ಆಯ್ತು ಅಣ್ಣ...
‘ಕಾರ್ಪೋರೇಷನ್ದು ಏನೋ ಆಯ್ತು, ಪೊಲೀಸ್ನೋರದು ಶುರುವಾಯ್ತು, ದಿನಾ ಕಾಟ ಕೊಡೋರು, ಹೊಡೆಯೋರು, ಒಳಕ್ಕಾಗ್ತೀನಿ ಅನ್ನೋರು, ಅಂಗಡಿ ಎತ್ತು ಅನ್ನೋರು. ಅದೇನ್ ಕಷ್ಟ ಬಿದ್ದಿದೀನೋ, ಆ ದೇವರ್ಗೇ ಗೊತ್ತು. ನನ್ನ ಅದೃಷ್ಟಕ್ಕೆ ಈಗ ಅದೂ ಇಲ್ಲ. ಸದ್ಯಕ್ಕೆ ಯಾವ ಕಾಟವೂ ಇಲ್ಲ, ಆದ್ರೆ ವ್ಯಾಪಾರಾನೆ ಇಲ್ಲ.
‘ನಾನು ಈ ಪುಸ್ತಕದಂಗಡಿ ಶುರು ಮಾಡ್ದಾಗ ಚಂದಮಾಮ 75 ಪೈಸೆ ಇತ್ತು. ಫ್ಯಾಂಟಮ್ ಕಾಮಿಕ್ಸ್ ಒಂದು ರೂಪಾಯಿ. ರನ್ ಅಂಡ್ ಮಾರ್ಟಿನ್ ಡಿಕ್ಷನರಿ- ಒಳ್ಳೆ ಟ್ರೈನ್ ಥರ ಹೋಗದು. ಎಷ್ಟು ಐದು ರೂಪಾಯಿ...’ ಎಂದು ಹುಬ್ಬು ಹಾರಿಸಿದರು.
‘ಈಗ ಟಿವಿ ಬಂದು ಎಲ್ಲ ಹೋಯ್ತಣ್ಣ, ವ್ಯಾಪಾರಾನೇ ಇಲ್ಲ. ಪುಸ್ತಕ ಓದೋರು ಹೋದ್ರು... ಒಳ್ಳೆ ವ್ಯಾಪಾರ ಅಂತ ನೋಡಿ ಐದು ವರ್ಷ ಆಯ್ತು. ದಿನಕ್ಕೆ ಐನೂರು ಆಗದು ಕಷ್ಟ ಐತೆ. ಚಿಕ್ಕಂದಿನಿಂದ ಇದೇ ಕೆಲ್ಸ ಮಾಡಕೊಂಡ್ ಬಂದಿದೀನಿ, ಬಿಡಕ್ಕಾಗ್ತಿಲ್ಲ, ಬೇರೇದು ಗೊತ್ತಿಲ್ಲ. ಮದುವೆ, ಹಬ್ಬ, ಸತ್ರೆ, ಕೆಟ್ರೆ, ಮಳೆ ಹಿಡಕೊಂಡ್ರೆ, ಹೆಲ್ತ್ ಕೈ ಕೊಟ್ರೆ ಬಾಗಲ್ ಹಾಕ್ಬೇಕು, ಒಬ್ನೆ ಕಷ್ಟ, ಹ್ಯೆಂಗೋ ನಡೀತಿದೆ?
‘ನನ್ ಮಕ್ಳಿಗೆ ನನ್ ಲೈನ್ ಬೇಡ ಅಣ್ಣ, ಈ ಮಳೆ ಗಾಳಿ ಬಿಸಿಲ್ನಲ್ಲಿ ಯಾರ್ ಸಾಯ್ತರೆ, ಚೆನ್ನಾಗಿ ಓದಿ, ಏನಾದ್ರು ಒಳ್ಳೆ ಕೆಲ್ಸಕ್ಕೆ ಹೋಗ್ಲಿ, ಕಂಪ್ಯೂಟರ್ ಗಿಂಪ್ಯೂಟರ್ ಏನಾದ್ರು ಮಾಡ್ಲಿ, ಅದಕ್ಕೆ ಅವ್ರಿಗೆ ಒಳ್ಳೆ ಸ್ಕೂಲ್ ನಲ್ಲಿ ಓದಿಸ್ತಿದೀನಿ, ನನ್ಗೇ ಇದು ಕೊನೆ ಆಗ್ಲಿ, ಸಾಕಾಗಿ ಹೋಗಿದೆ...’
ನಲವತ್ತು ವರ್ಷಗಳ ಕಾಲ ನಿರಂತರವಾಗಿ ಒಂದೇ ಜಾಗದಲ್ಲಿ ನಿಂತು, ಒಂದೇ ವ್ಯಾಪಾರ ಮಾಡಿದರೂ, ಅವರ ಆರ್ಥಿಕ ಸ್ಥಿತಿಯೇನೂ ಬದಲಾಗಿರಲಿಲ್ಲ. ಕೊನೆಪಕ್ಷ ನೆಮ್ಮದಿಯಾದರೂ ಸಿಕ್ಕಿದೆಯಾ ಎಂದರೆ, ಸಂಸಾರ ಸಾಗುತ್ತಿದೆ, ಅಷ್ಟಕ್ಕೇ ಸಂತೃಪ್ತ. ಆ ಮೂಡಿನಿಂದ ಅವರನ್ನು ಹೊರ ತರಲು ‘ಯಾವ ಪುಸ್ತಕ ಈಗ ಜಾಸ್ತಿ ಹೋಗ್ತಿದೆ?’ ಎಂದೆ.
‘ಚೇತನ್ ಭಗತ್, ಅದು ಬಿಟ್ರೆ ರವಿ ಬೆಳಗೆರೆ, ಯಂಡಮೂರಿ, ಪಾಲ್ ಕ್ಹೋಲೋ, ರಾಬರ್ಟ್ ಲಡ್ಲುಮ್, ಚೇಸ್, ಸಿಡ್ನಿ ಸೆಲ್ಡಾನ್, ಅಲಿಸ್ಟರ್ ಮ್ಯಾಕ್ಲೀನ್, ಹ್ಯಾರಿ ಪಾಟರ್, ಪಿಜಿ ವುಡೋಸ್... ಪುಸ್ತಕದ ಲೋಕಕ್ಕೆ ಬರಬ್ಯಾಡ, ಬೇರೆ ಕೇಳಬ್ಯಾಡ.’ ಖಡಕ್ ಮಾತಿಗೆ, ನನ್ನ ಮಾತೇ ನಿಂತುಹೋಯಿತು.
ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಿ, ಉರ್ದು... ಇವಿಷ್ಟೂ ಭಾಷೆಗಳ, ಸುಮಾರು ನಲವತ್ತು ವರ್ಷಗಳಿಂದ ಇಲ್ಲಿಯವರೆಗೆ, ಹಿಂದೆ ಬರೆದಿರುವ, ಈಗ ಬರೆಯುತ್ತಿರುವ, ಜನಪ್ರಿಯರಾಗಿರುವ, ಕಡ್ಲೇಪುರಿಯಂತೆ ಖರ್ಚಾಗುವ, ಖರ್ಚೇ ಆಗದೆ ಕೊಳೆಯುವ... ಇಡೀ ಜಗತ್ತಿನ ಅಷ್ಟೂ ಲೇಖಕರ ಹೆಸರುಗಳು, ಸಾವಿರಾರು ಕೃತಿಗಳ ಟೈಟಲ್‌ಗಳು, ಲೆಕ್ಕಕ್ಕಿಡಲಾಗದಷ್ಟು ಮ್ಯಾಗಜಿನ್ ಗಳು ಮೆಹಬೂಬ್ ಪಾಷಾರ ನಾಲಗೆಯ ಮೇಲಿವೆ. ತಲೆ ತುಂಬಿಕೊಂಡಿವೆ. ಜೀವಂತ ಲೈಬ್ರರಿಯೇ ಅವರಾಗಿದ್ದಾರೆ. ಬರಹಲೋಕವನ್ನೇ ಬದುಕಾಗಿಸಿಕೊಂಡಿದ್ದಾರೆ. ಆದರೆ, ತಮ್ಮ ಬದುಕನ್ನು ಆ ಪುಸ್ತಕದಂಗಡಿಯಲ್ಲಿಯೇ ಕಳೆದರೂ ಮೆಹಬೂಬ್‌ರ ಬದುಕಿನ ಬವಣೆ ಮಾತ್ರ ನೀಗಿಲ್ಲ. ಕುಟುಂಬದ ಸ್ಥಿತಿಯೂ ಸುಧಾರಿಸಿಲ್ಲ. ನೆಮ್ಮದಿಯನ್ನಂತೂ ಕಂಡೇ ಇಲ್ಲ. ಪ್ರತಿನಿತ್ಯವೂ ಹೋರಾಟ. ಅದೇ ಜಂಜಾಟ.
ಆ ಕ್ಷಣಕ್ಕೆ, ನನಗೆ ಯಾಕೋ ಎರಡನೇ ಕ್ಲಾಸ್ ಓದಿ ಐನೂರೈವತ್ತು ಕನ್ನಡ ಪತ್ತೇದಾರಿ ಕಾದಂಬರಿಗಳನ್ನು ಬರೆದ ಎನ್. ನರಸಿಂಹಯ್ಯನವರು ನೆನಪಾದರು. ನರಸಿಂಹಯ್ಯ ಮತ್ತು ಮೆಹಬೂಬ್ ಪಾಷ ಇಬ್ಬರೂ ಬಡವರು, ಹೆಚ್ಚಿಗೆ ಓದದ ಅನಕ್ಷರಸ್ಥರು, ಸ್ವಾವಲಂಬಿ ಬದುಕಿನ ಶ್ರಮಜೀವಿಗಳು. ಹೊಟ್ಟೆಪಾಡಿಗಾಗಿ ಒಬ್ಬರು ಪುಸ್ತಕ ಬರೆದರು, ಇನ್ನೊಬ್ಬರು ಪುಸ್ತಕ ಮಾರಿದರು.
ಇಬ್ಬರೂ ಅವರಿಗೇ ಗೊತ್ತಿಲ್ಲದಂತೆ ಪುಸ್ತಕ ಸಂಸ್ಕೃತಿಯನ್ನು ಪೊರೆದು ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ್ದಾರೆ. ಅಕ್ಷರಸ್ಥರ ಓದಿನ ಹಸಿವನ್ನು ಇಂಗಿಸಿದ್ದಾರೆ, ಅರಿವಿನ ಲೋಕವನ್ನು ವಿಸ್ತರಿಸಿದ್ದಾರೆ. ಹಾಗೆಯೇ ಮರೆಯಲ್ಲಿದ್ದು ಮರೆತುಹೋಗುವ ಮನುಷ್ಯರ ಸಾಲಿಗೂ ಸೇರಿಹೋಗಿದ್ದಾರೆ.
ಮೆಹಬೂಬ್ ಪಾಷ |
Fantastic, Pasha ji avarige nanna namaskaaragalu- Puttaswamy K
ReplyDelete