Friday, June 5, 2015

ಪುಟ್ಟಣ್ಣ ಕಣಗಾಲ್ ಇಲ್ಲವಾಗಿ ಇಂದಿಗೆ 30 ವರ್ಷ: ಒಂದು ನೆನಪು

ಪುಟ್ಟಣ್ಣ ಕಣಗಾಲ್
ಜೂನ್ 5, ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕಣ್ಮರೆಯಾದ ದಿನ. ಅವರು ಬದುಕಿದ್ದು ಕೇವಲ 53 ವರ್ಷಗಳು. ಹಾಗೆ ನೋಡಿದರೆ ಅದು ಸಾಯುವ ವಯಸ್ಸಲ್ಲ. ಆದರೆ ಭಾವಜೀವಿ ಪುಟ್ಟಣ್ಣ ಬದುಕನ್ನು ಕೂಡ ಭಾವನಾತ್ಮಕ ನೆಲೆಯಲ್ಲಿಯೇ ನೋಡಿ ನವೆದು ನೀಗಿಕೊಂಡರು. ತಮ್ಮ ಬದುಕನ್ನೆ ‘ಮಾನಸ ಸರೋವರ’ ಚಿತ್ರವನ್ನಾಗಿಸಿ, ಒಳ ತುಮುಲವನ್ನೇ ತೆರೆದಿಟ್ಟು ತಿಳಿಯಾದರು.  
ಇಂತಹ ವಿಭಿನ್ನ ವ್ಯಕ್ತಿತ್ವದ ಪುಟ್ಟಣ್ಣ ಕಣಗಾಲ್ ಇಲ್ಲವಾಗಿ ಇವತ್ತಿಗೆ ಮೂವತ್ತು ವರ್ಷಗಳಾದವು. ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಇಂದು ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ನೆನಪಿನ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ರಾಜೇಂದ್ರಸಿಂಗ್ ಬಾಬು, ಅಂಬರೀಷ್, ಬಿ. ಸರೋಜಾದೇವಿ, ಜಯಂತಿ, ಲೀಲಾವತಿ, ಭಾರತಿ, ಶ್ರೀನಾಥ್ ರಂತಹ  ಕನ್ನಡ ಚಿತ್ರರಂಗದ ಹಿರಿಯ ಕಲಾವಿದರೆಲ್ಲ ಒಂದೆಡೆ ಸೇರಿ, ಪುಟ್ಟಣ್ಣನವರನ್ನು ಸ್ಮರಿಸಲಿದ್ದಾರೆ.
ಪುಟ್ಟಣ್ಣ ಎಂದಾಕ್ಷಣ ನೆನಪಿಗೆ ಬರುವುದು ಬೆಳ್ಳಿಮೋಡ, ಗೆಜ್ಜೆಪೂಜೆ, ನಾಗರಹಾವು ಚಿತ್ರಗಳು. 1967 ರಲ್ಲಿ ಬಂದ 'ಬೆಳ್ಳಿಮೋಡ' ಚಿತ್ರ ತ್ರಿವೇಣಿಯವರ ಕಾದಂಬರಿಯನ್ನು ಆಧರಿಸಿತ್ತು. ಕವಿ ಬೇಂದ್ರೆಯವರ ‘ಮೂಡಣ ಮನೆಯ ಮುತ್ತಿನ ತೇರಿನ…’ ಕವನವನ್ನು ಒಳಗೊಂಡಿತ್ತು. ಕಲ್ಪನಾರ ನೈಜ ಅಭಿನಯ ಅನಾವರಣಗೊಂಡಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲರ ಅಭಿರುಚಿಯನ್ನು ತೆರೆಯ ಮೇಲೆ ತೆರೆದಿಟ್ಟಿತ್ತು. ಈ ಚಿತ್ರ ಅವರ ಮೊದಲ ಚಿತ್ರವಾಗಿದ್ದು, ಸಿನಿಮಾ ತಯಾರಿಕೆಯ ಕುಸುರಿ ಕೆಲಸದಿಂದ ಗೆದ್ದಿತ್ತು. ಹೊಸ ಭರವಸೆಯನ್ನು ಹುಟ್ಟುಹಾಕಿತ್ತು. ಬಹುಕಾಲ ನೆನಪಿಸಿಕೊಳ್ಳುವಂತಹ ಚಿತ್ರಗಳ ಸಾಲಿಗೆ ಸೇರಿತ್ತು.
ಇಂತಹ ಪುಟ್ಟಣ್ಣ ನಿರ್ದೇಶಿಸಿದ ಚಿತ್ರಗಳು ಹಲವಾರು, ಸೃಷ್ಟಿಸಿದ ಪಾತ್ರಗಳು ನೂರಾರು. ಅವರ ರಾಮಾಚಾರಿ, ಜಲೀಲ್, ಚಾಮಯ್ಯ ಮೇಸ್ಟ್ರು… ಇವತ್ತಿಗೂ ಚಿತ್ರರಸಿಕರ ಭಾವಭಿತ್ತಿಯಲ್ಲಿ ಅಚ್ಚಳಿಯದೇ ಉಳಿದಿವೆ. ಶುಭಮಂಗಳದ ಈ ಶತಮಾನದ ಹೆಣ್ಣು, ಎಡಕಲ್ಲು ಗುಡ್ಡದ ಮೇಲಿನ ವಿರಹಿ ಜಯಂತಿ, ರಂಗನಾಯಕಿಯ ಆರತಿ, ಮಾನಸ ಸರೋವರದ ಶ್ರೀನಾಥ್ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಂತಕತೆಗಳಾಗಿ ದಾಖಲಾಗಿಹೋಗಿದ್ದಾರೆ.
ಮೇಲಿನ ಅಷ್ಟೂ ಚಿತ್ರಗಳು ಮತ್ತು ಪಾತ್ರಗಳನ್ನು ಅವಲೋಕಿಸಿದರೆ, ಪುಟ್ಟಣ್ಣನವರ ಶಕ್ತಿ ಇರುವುದು ಕೌಟುಂಬಿಕ ಕಥನಗಳಲ್ಲಿ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೆಯೇ ಭಾವನಾತ್ಮಕ ಎಳೆಯನ್ನು ವೈಯಕ್ತಿಕ ನೆಲೆಯನ್ನು ತೆರೆಯ ಮೇಲೆ ತರುವುದರಲ್ಲಿರುವ ಅವರ ಅಸಾಧಾರಣ ಪ್ರತಿಭೆ ಎದ್ದು ಕಾಣುತ್ತದೆ. ಆದರೆ ಇವರ ಈ ಪ್ರತಿಭೆ ಮಧ್ಯಮವರ್ಗವನ್ನು ಮೀರಿ ಹೋಗಲಿಲ್ಲ ಎನ್ನುವುದೂ ಗಮನಕ್ಕೆ ಬರುತ್ತದೆ.    
ಬಿ.ಆರ್. ಪಂತುಲು ಗರಡಿಯಲ್ಲಿ ಪಳಗಿದ ಪುಟ್ಟಣ್ಣ, ಚಿತ್ರ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲಿಯೂ ಪರಿಣತಿ ಪಡೆದಿದ್ದರು. ಸಿನಿಮಾಗಳ ಕಡುಮೋಹಿಯಾಗಿದ್ದರು. ಚಿತ್ರ ನಿರ್ಮಾಣದಲ್ಲಿ ಶಾಸ್ತ್ರೀಯ ಕಲಿಕೆಯನ್ನು ಕರಗತ ಮಾಡಿಕೊಂಡಿದ್ದರು. ತಮ್ಮ ಚಿತ್ರಗಳ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಟ್ಟುಕೊಂಡಿದ್ದರು. ನಿರ್ದೇಶಕನಿಗೆ ಘನತೆ ಗೌರವ ತಂದು, ಸಿನಿಮಾ ಎನ್ನುವುದು ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಸಾಧಿಸಿ ತೋರಿದವರು.  
ಇಂತಹ ಪುಟ್ಟಣ್ಣ ವೈಯಕ್ತಿಕ ಬದುಕಿನಲ್ಲಿ ತಮ್ಮ ಚಿತ್ರಗಳ ಪಾತ್ರಗಳಂತೆಯೇ ಭಾವುಕರಾಗಿದ್ದರು. ತಮ್ಮ ಅಂತಿಮ ದಿನಗಳಲ್ಲಿ ತಾವೇ ಕಟ್ಟಿಸಿದ ತಮ್ಮ ಹೊಸ ಮನೆಯ ಗೃಹಪ್ರವೇಶದಂದು ಇಟ್ಟಿಗೆಯ ಮೇಲೆ ತಲೆ ಇಟ್ಟು, ತಮ್ಮ ಆತ್ಮೀಯ ಗೆಳೆಯ ವಿಜಯನಾರಸಿಂಹರಿಂದ ‘ನೀನೇ ಸಾಕಿದ ಗಿಣಿ…’ ಹಾಡು ಬರೆಸಿದ್ದರು. ಆ ಮೂಲಕ ಯಾರಿಗೆ ಸಂದೇಶ ರವಾನಿಸಬೇಕೋ ಅವರಿಗೆ ತಲುಪಿಸಿ ಭಾವನಾತ್ಮಕತೆಗೇ ಬ್ರಾಂಡ್ ಆಗಿದ್ದರು.
ಪುಟ್ಟಣ್ಣ ಕಣಗಾಲರು ತೀರಿಹೋದಾಗ ಪಿ. ಲಂಕೇಶರು, ‘ಪುಟ್ಟಣ್ಣ, ಕಲ್ಪನಾ ಮುಂತಾದ ಕಲಾವಿದರು ಒಂದು ರೀತಿಯಲ್ಲಿ ಮರ್ಲಿನ್ ಮನ್ರೋ, ಮೀನಾಕುಮಾರಿಗಳು; ಅವರೇ ಸೃಷ್ಟಿಸಿಕೊಂಡ ಕಲಾಲೋಕದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಸಾವನ್ನು ಜೊತೆಗೇ ಕರೆದುಕೊಂಡು ಓಡಾಡುವ ಕೀಟ್ಸ್, ಶೆಲ್ಲಿ, ಬೋದಿಲೇರ್ ಗಳು.’ ಎಂದಿದ್ದರು.
ಇಂತಹ ಅಪರೂಪದ ವ್ಯಕ್ತಿತ್ವಗಳನ್ನು ಆಗಾಗ್ಗೆ ನೆನೆಯುವುದು, ನೆನೆಯುತ್ತಲೇ ಅವರ ಶಕ್ತಿ ಮತ್ತು ದೌರ್ಬಲ್ಯಗಳನ್ನು ಆರೋಗ್ಯಕರ ಚರ್ಚೆಯ ಮೂಲಕ ತೂಗಿ ನೋಡುವುದು ಮುಂದಿನ ಪೀಳಿಗೆಗೆ ಉಪಯುಕ್ತವಾಗಬಹುದಲ್ಲವೆ?
ಪುಟ್ಟಣ್ಣ

No comments:

Post a Comment