Thursday, December 25, 2014

ಹೊಸ ಅಲೆಯ ಹರಿಕಾರ ಕೆ. ಬಾಲಚಂದರ್‌

ಕೆ. ಬಾಲಚಂದರ್
ಎಪ್ಪತ್ತರ ದಶಕದಲ್ಲಿ ತಮಿಳು ಚಿತ್ರರಂಗದ ದಿಕ್ಕು ದೆಸೆಗಳನ್ನೇ ಬದಲಿಸಿದ ಹೊಸ ಅಲೆಯ ಹರಿಕಾರ, ಬಣ್ಣದ ಲೋಕದ ಮಾಂತ್ರಿಕ ಕೆ. ಬಾಲಚಂದರ್‌ ಇನ್ನಿಲ್ಲ. 84 ವರ್ಷಗಳ ಬಾಲಚಂದರ್‌ ಕಳೆದ 3ರಂದು ಅನಾರೋಗ್ಯದ ನೆಪದಲ್ಲಿ ಚನ್ನೈನ ಖಾಸಗಿ ಆಸ್ಪತ್ರೆ ಸೇರಿದವರು ಹಿಂತಿರುಗಿ ಬರಲಿಲ್ಲ. ಅಸಂಖ್ಯಾತ ಅಭಿಮಾನಿಗಳ ಹಾರೈಕೆಯೂ ಫಲ ಕೊಡಲಿಲ್ಲ. 
ಬಾಲಚಂದರ್‌ ಸಾವು ತುಂಬಲಾರದ ನಷ್ಟ ಎಂದರೆ ಅದು ತುಂಬಾ ಸರಳವಾದ ಮಾತಾಗುತ್ತದೆ, ಕ್ಲೀಷೆಯಾಗುತ್ತದೆ. ಅವರನ್ನು ಅವರ ಉತ್ಕೃಷ್ಟ ಚಿತ್ರಗಳ ಮಟ್ಟದಲ್ಲಿಟ್ಟು ಅಳೆಯಬೇಕು. ಅವರು ಕೊಟ್ಟ ಕೊಡುಗೆಯನ್ನೇ ಅಳತೆಗೋಲಾಗಿಟ್ಟುಕೊಂಡು ಪರಾಮರ್ಶಿಸಬೇಕು. ದಕ್ಷಿಣ ಭಾರತದ ಚಿತ್ರಗಳನ್ನು ‘ಮದ್ರಾಸಿ’ ಎಂದು ಹೀಗಳೆಯುತ್ತಿದ್ದ ಸಂದರ್ಭದಲ್ಲಿ, ದಕ್ಷಿಣದ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ಇಡೀ ಇಂಡಿಯಾದ ಜನ ಬೆಕ್ಕಸ ಬೆರಗಿನಿಂದ ನೋಡುವಂತೆ ಮಾಡಿದ, ದಕ್ಷಿಣದ ಚಿತ್ರಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಕಲ್ಪಿಸಿಕೊಟ್ಟ ಕಲಾತಪಸ್ವಿ.
ಇಂತಹ ಬಾಲಚಂದರ್‌ ಹುಟ್ಟಿದ್ದು ತಮಿಳುನಾಡಿನ ನನ್ನಿಲಂ ಎಂಬ ಪುಟ್ಟ ಹಳ್ಳಿಯಲ್ಲಿ, ಬಡ ಬ್ರಾಹ್ಮಣ ಕುಟುಂಬದಲ್ಲಿ. ಜುಲೈ 9, 1930ರಲ್ಲಿ ಜನಿಸಿದ ಬಾಲಚಂದರ್‌, ಚಲನಚಿತ್ರ ಲೋಕದ ಮಹಾನ್‌ ವ್ಯಕ್ತಿ ಎನಿಸಿಕೊಳ್ಳಲು ಸವೆಸಿದ ದಾರಿ ಸಾಮಾನ್ಯದ್ದಲ್ಲ. ಅರಗಿಸಿಕೊಂಡ ಅರಿವು ಅಷ್ಟಿಷ್ಟಲ್ಲ. 
ಓದಿದ್ದು ಬಿಎಸ್ಸಿ, ಮಾಡಿದ್ದು ಅಕೌಂಟೆಂಟ್‌ ಜನರಲ್‌ ಕಚೇರಿಯಲ್ಲಿ ಗುಮಾಸ್ತ ಮತ್ತು ಕೆಲವು ಕಾಲ ಶಿಕ್ಷಕನ ವೃತ್ತಿ. ಈ ಕೆಲಸಗಳ ಬಿಡುವಿನಲ್ಲಿ ರಂಗಭೂಮಿಯ ಸೆಳೆತಕ್ಕೆ ಒಳಗಾದ ಬಾಲಚಂದರ್‌, ಹವ್ಯಾಸಿ ನಾಟಕಕಾರರಾಗಿ ‘ಮೇಜರ್‌ ಚಂದ್ರಕಾಂತ್‌’, ‘ಸರ್ವರ್‌ ಸುಂದರಂ’, ‘ನಾನಾಲ್‌’ ಇನ್ನು ಮುಂತಾದ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದರು. ಇವರ ನಾಟಕ ರಚನೆ, ನಿರ್ದೇಶನ ಜನರನ್ನು ಮುಟ್ಟಿ ಮಾತನಾಡಿಸಿದವು, ಪತ್ರಿಕೆಗಳಿಂದ ಪ್ರಶಂಸೆಗೊಳಪಟ್ಟವು, ಜನಪ್ರಿಯತೆ ಗಳಿಸಿದವು.  
ರಂಗಭೂಮಿಯಲ್ಲಿ ಪಳಗಿದ ಕೈ ಎನ್ನಿಸಿಕೊಳ್ಳುತ್ತಿದ್ದಂತೆ, 1964 ರಲ್ಲಿ, ತಮಿಳುನಾಡಿನ ಅಂದಿನ ಕಾಲದ ಖ್ಯಾತ ನಟ ಎಂ.ಜಿ. ರಾಮಚಂದ್ರನ್ ಅವರ ‘ದೈವ ತಾಯ್‌’ ಎಂಬ ಚಿತ್ರಕ್ಕೆ ಸಂಭಾಷಣೆ ಬರೆಯುವ ಅವಕಾಶ ಹುಡುಕಿಕೊಂಡು ಬಂದಿತು.
ಇಲ್ಲಿಂದ ಮುಂದಿನದು ಇತಿಹಾಸ- ಇವರ ವೈಯಕ್ತಿಕ ಬದುಕಿನಲ್ಲೂ, ತಮಿಳುನಾಡಿನ ಚಿತ್ರೋದ್ಯಮದಲ್ಲೂ.
ಅಲ್ಲಿಯವರೆಗೆ ಎಂಜಿಆರ್‌ ಮತ್ತು ಶಿವಾಜಿ ಗಣೇಶನ್‌ರ ಒಂದೇ ರೀತಿಯ ಸ್ಟೀರಿಯೋಟೈಪ್‌ ನಟನೆ ಮತ್ತು ಸಂಭಾಷಣೆಗಳನ್ನು ನೋಡಿ ಬೇಸತ್ತಿದ್ದ ತಮಿಳು ಚಿತ್ರೀದ್ಯಮ ಹೊಸ ಕಳೆಗೆ ಕಾತರಿಸಿತ್ತು. ತಮಿಳು ಚಿತ್ರರಸಿಕರು ಹೊಸ ಮುಖಗಳಿಗಾಗಿ ಹಾತೊರೆಯುತ್ತಿದ್ದರು. ಸಹಜವಾಗಿಯೇ ಹೊಸತನದಿಂದ ಕೂಡಿದ್ದ, ತಮ್ಮದೇ ಆದ ವಿಭಿನ್ನ ಧಾಟಿಗೆ ಹೆಸರಾಗಿದ್ದ, ವಿಶಿಷ್ಟ ಅಭಿರುಚಿ ಹೊಂದಿದ್ದ ಬಾಲಚಂದರ್‌ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಕತೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತು ಮೊದಲಿಗೆ ತಮ್ಮದೇ ನಾಟಕಗಳನ್ನು ಸಿನಿಮಾಗಳಿಗೆ ಅಳವಡಿಸಿ, 1965 ರಲ್ಲಿ ‘ನೀರ್ಕುಮಿಜಿ’ ಎಂಬ ಚಿತ್ರ ಮಾಡಿ ಯಶಸ್ವಿಯಾದರು.
ಆನಂತರ ‘ಅರಂಗೇಟ್ರಂ’ ಎಂಬ ಚಿತ್ರ ಮಾಡಿದರು. ಈ ಚಿತ್ರ ತಮಿಳುನಾಡಿನಲ್ಲಲ್ಲ, ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಿತು. ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹುಡುಗಿಯೊಬ್ಬಳು ಮನೆಯ ನಿರ್ವಹಣೆಗೋಸ್ಕರ ವೇಶ್ಯಾವೃತ್ತಿಗಿಳಿಯುವ ಕಥಾಹಂದರವುಳ್ಳ, ಮಹಿಳೆಯನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ಚಿತ್ರಿಸಿದ ಅರಂಗೇಟ್ರಂ, ತಮಿಳು ಚಿತ್ರರಂಗದಲ್ಲಿ ಕ್ರಾಂತಿಯ ಅಲೆಗಳನ್ನೆಬ್ಬಿಸಿತು. ನಮ್ಮ ಸುತ್ತಲಿನ ಪಾತ್ರಗಳನ್ನೇ ಪರದೆ ಮೇಲೆ ತಂದು ಬೆಚ್ಚಿ ಬೀಳಿಸಿ, ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆಶ್ಚರ್ಯಕರ ಸಂಗತಿ ಎಂದರೆ, ಹಣ ಗಳಿಕೆಯಲ್ಲಿ ಯಶಸ್ವಿ ಚಿತ್ರವಾಗಿ ಪ್ರಶಸ್ತಿಯನ್ನೂ ಗಳಿಸಿತು.
ಅಲ್ಲಿಂದ ಮುಂದಕ್ಕೆ ಬಾಲಚಂದರ್‌ ಅಪೂರ್ವ ರಾಗಂಗಳ್‌, ಅವರ್ಗಳ್‌, ಮನ್ಮಥ ಲೀಲೈ, ವರುಮಯಿನ್‌ ನಿರುಂ ಸಿವಪ್ಪು, ಸಿಂಧು ಭೈರವಿ, ಮರೋಚರಿತ್ರ, ಏಕ್‌ ದುಜೆ ಕೆ ಲಿಯೆ, ಅವಳ್‌ ಒರು ತೊಡರ್‌ ಕಥೈ, ತೂಂಗಾದೆ ತಂಬಿ ತೂಂಗಾದೆ, ತಣ್ಣೀರ್‌ ತಣ್ಣೀರ್‌, ಅಚ್ಚಮಿಲ್ಲೆ ಅಚ್ಚಮಿಲ್ಲೆ, ರುದ್ರವೀಣಾ ಹೀಗೆ ಹಲವಾರು ಅತ್ಯದ್ಭುತ ಚಿತ್ರಗಳನ್ನು ನಿರ್ಮಿಸಿದರು.
ಸಿನಿಮಾ ಎಂದರೆ ಲಾರ್ಜರ್‌ ದ್ಯಾನ್‌ ಲೈಫ್‌ ಎಂಬ ಮಾತಿದೆ. ಆದರೆ ಬಾಲಚಂದರ್‌ ಅವರ ಚಿತ್ರಗಳು ಅದಲ್ಲ. ಮಧ್ಯಮವರ್ಗವನ್ನು, ನಮ್ಮ ನಡುವಿನ ಪಾತ್ರಗಳನ್ನು ಬೆಳ್ಳಿಪರದೆಗೆ ತಂದು ನಮ್ಮನ್ನೇ ಬೆಚ್ಚಿ ಬೀಳಿಸುವಂಥವು. ಕೌಟುಂಬಿಕ ಕತೆ ಹೇಳುತ್ತಲೇ ಸಾಮಾಜಿಕ ಪರಿವರ್ತನೆಗೆ ಪ್ರೇರೇಪಿಸುವಂಥವು. ಒಂದೊಂದು ಚಿತ್ರಗಳು ಒಂದೊಂದು ಲೋಕವನ್ನೇ ತೆರೆದಿಡುವ, ನೋಡುಗರ ನರನಾಡಿಗಳಿಗೆ ಇಳಿದು ಭಾವಕೋಶವನ್ನು ಅಲ್ಲಾಡಿಸುವ, ಬುದ್ಧಿಗೆ ಸಾಣೆ ಹಿಡಿಯುವ, ಭಾವಭಿತ್ತಿಯಲ್ಲಿ ಶಾಶ್ವತವಾಗಿ ನೆಲೆಯೂರುವ ಚಿತ್ರಗಳು. ಈ ಚಿತ್ರಗಳು ಅಲ್ಲಿಯವರೆಗಿದ್ದ ಸಿನಿಮಾ ನೋಡುವ ಸ್ಥಾಪಿತ ನೋಟವನ್ನು, ಗ್ರಹಿಸುವ ಕ್ರಮವನ್ನು ಬದಲಿಸಿದವು. 
ಸೂಕ್ಷ್ಮಸಂವೇದನೆಯ ಬಾಲಚಂದರ್‌ ಸ್ತ್ರೀಕೇಂದ್ರಿತ ಕತೆಗಳನ್ನು, ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಚಿತ್ರ ಮಾಡಿ ಗೆದ್ದವರು. ಕಾಮ-ಪ್ರೇಮದ ಕತೆ ಹೇಳುತ್ತಲೇ ನೈತಿಕ-ಅನೈತಿಕ ಗೆರೆಯನ್ನು ತೆಳುಗೊಳಸಿ ಜಿಜ್ಞಾಸೆಗೊಳಪಡಿಸಿದವರು. ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳೆಂಬ ಸಿದ್ಧಸೂತ್ರವನ್ನು ಕಿತ್ತೆಸೆದು, ಜನರ ಮನಸ್ಸಿಗೆ ಮುಟ್ಟುವ ತಟ್ಟುವ ಚಿತ್ರಗಳಿಗೆ ನಾಂದಿ ಹಾಡಿದವರು. 
ಇವರ ಚಿತ್ರಗಳ ಮೂಲಕ ಪರಿಚಯವಾದ ನಟನಟಿಯರಾದ ಕಮಲ್‌ ಹಾಸನ್‌, ರಜನೀಕಾಂತ್‌, ಜಯಸುಧಾ, ಸರಿತಾ, ಗೀತಾ, ಸುಹಾಸಿನಿ, ಮಾಧವಿ, ಎಸ್‌.ಪಿ. ಬಾಲಸುಬ್ರಮಣ್ಯಂ, ವಿವೇಕ್‌, ಪ್ರಕಾಶ್‌ ರೈ, ರಮೇಶ್‌ ಅರವಿಂದ್‌ ಸ್ಟಾರ್‌ಗಳಾಗಿ ಮೆರೆದು, ಚಿತ್ರರಂಗವನ್ನೇ ಆಳಿದರು. ಅದರಲ್ಲೂ ಕಮಲ್‌ ಹಾಸನ್‌, ರಜನೀಕಾಂತ್‌, ಪ್ರಕಾಶ್‌ ರೈ ಎಲ್ಲಾ ಕಾಲಕ್ಕೂ ಎಲ್ಲರೂ ಇಷ್ಟಪಡುವ ನಟರಾಗಿ ಈಗಲೂ ಚಾಲ್ತಿಯಲ್ಲಿದ್ದಾರೆ. ಒಂದು ರೀತಿಯಲ್ಲಿ ಕೆಬಿ, ಹಲವಾರು ನಕ್ಷತ್ರಗಳನ್ನು ಸೃಷ್ಟಿಸಿ, ಮೆರೆಸಿ ತಾನು ಮಾತ್ರ ತಣ್ಣಗಿದ್ದ ಬಾಲ ಚಂದಿರ.
ಕಮಲ್‌ ಹಾಸನ್‌, ರಜನೀಕಾಂತ್‌, ಪ್ರಕಾಶ್‌ ರೈರಂತಹ ನಟರನ್ನು, ಆ ಕಲಾವಿದರ ಪ್ರತಿಭೆಯನ್ನು ಪರಿಚಯಿಸಿದ್ದನ್ನು ಯಾರಾದರೂ ಹೊಗಳಿದರೆ, ಬಾಲಚಂದರ್‌, ‘‘ಅವರು ನಿಜವಾದ ಪ್ರತಿಭಾವಂತರು, ನನಗೆ ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’’ ಎನ್ನುವ ಸರಳ ಸೌಮ್ಯ ಸಜ್ಜನ.
ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಬಾಲಚಂದರ್‌, ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂ, ಸುಂದರ ಸ್ವಪ್ನಗಳು, ಎರಡು ರೇಖೆಗಳು ಸೇರಿದಂತೆ ಐದು ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ ಮನಸ್ಸನ್ನೂ ಗೆದ್ದರು. ಕವಿತಾಲಯ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಿಂದ ಹಲವಾರು ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ, ಮಣಿರತ್ನಂ, ಎ.ಆರ್‌. ರಹಮಾನ್‌ರನ್ನು ಸ್ಟಾರ್‌ಗಳನ್ನಾಗಿಸಿದರು. ಅಷ್ಟೇ ಅಲ್ಲ, ಮದ್ರಾಸಿ ಎಂದು ಮೂಗು ಮುರಿಯುತ್ತಿದ್ದ ಉತ್ತರದವರ ಮುಂದೆ ‘ಏಕ್‌ ದುಜೆ ಕೆ ಲಿಯೆ’ ಎಂಬ ಹದಿವಯದವರ ಹಸಿ ಹಸಿ ಪ್ರೇಮ ಚಿತ್ರ ಮಾಡಿ ಅಭೂತಪೂರ್ವ ಯಶಸ್ಸು ಕಂಡರು. ಆ ಮೂಲಕ ಕಮಲ್, ಮಾಧವಿ ಮತ್ತು ಎಸ್‌.ಪಿ. ಬಾಲಸುಬ್ರಮಣ್ಯಂರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದರು.
ಇವರ ಸಾಧನೆಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಫಾಲ್ಕೆ ಪ್ರಶಸ್ತಿ ಬಾಲಚಂದರ್‌ರನ್ನು ಹುಡುಕಿಕೊಂಡು ಬಂದಿತ್ತು. ತಮಿಳುನಾಡಿನ ಅತ್ಯುನ್ನತ ಪ್ರಶಸ್ತಿಯಾದ ಕಲೈಮಾಮಣಿ ಪ್ರಶಸ್ತಿಯ ಜೊತೆಗೆ ಒಂಬತ್ತು ರಾಷ್ಟ್ರೀಯ ಪ್ರಶಸ್ತಿಗಳು, ಲೆಕ್ಕವಿಲ್ಲದಷ್ಟು ಫಿಲಂಫೇರ್‌ ಪ್ರಶಸ್ತಿಗಳು ಅರಸಿ ಬಂದು, ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.
ಚಲನಚಿತ್ರ ನಿರ್ದೇಶನ, ನಿರ್ಮಾಣ, ಚಿತ್ರಸಾಹಿತ್ಯ, ಟಿವಿ ಧಾರಾವಾಹಿ ನಿರ್ಮಾಣ ಹೀಗೆ ವಿವಿಧ ಚಿತ್ರ ಮಾಧ್ಯಮ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಸುಮಾರು 45 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕೆ. ಬಾಲಚಂದರ್‌, ಭಾರತೀಯ ಚಿತ್ರೋದ್ಯಮ ಕಂಡ ಸೃಜನಶೀಲ ವ್ಯಕ್ತಿತ್ವದ, ವೈಚಾರಿಕ ಚಿಂತನೆಯ ಅಪರೂಪದ ಚಿತ್ರಜೀವಿ.
ಕಮಲ್, ಕೆಬಿ ಮತ್ತು ರಜನಿ



Thursday, December 18, 2014

ಶತಮಾನೋತ್ಸವದ ಸಂಭ್ರಮದಲ್ಲಿ ಬಿ.ಕೆ. ಮರಿಯಪ್ಪ ವಸತಿ ನಿಲಯ

ಬಿ.ಕೆ. ಮರಿಯಪ್ಪನವರು ಮತ್ತವರ ಉಚಿತ ವಿದ್ಯಾರ್ಥಿ ನಿಲಯ
ಅದು ಸ್ವಾತಂತ್ರ್ಯಪೂರ್ವ ಕಾಲ, 1914. ಆಗ ವಿದ್ಯೆ ಎನ್ನುವುದು ಉಳ್ಳವರ ಸ್ವತ್ತಾಗಿತ್ತು, ಬಡವರಿಗೆ ಕೈಗೆಟುಕದ ಕುಸುಮವಾಗಿತ್ತು. ಅಂತಹ ದಿನಗಳಲ್ಲಿ ಬಡವರ ಬಗ್ಗೆ, ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಿ, ಅವರಿಗೆ ಉಚಿತ ವಿದ್ಯಾರ್ಥಿ ನಿಲಯವೊಂದನ್ನು ಸ್ಥಾಪಿಸಲು ಮುಂದಾದವರು ಸಾಮಾನ್ಯರಲ್ಲಿ ಸಾಮಾನ್ಯರಾದ ಬಿ.ಕೆ. ಮರಿಯಪ್ಪನವರು.
ಬೆಂಗಳೂರಿನ ಚಾಮರಾಜಪೇಟೆಯ ನಗರ್ತ ಲಿಂಗಾಯತ ಜಾತಿಗೆ ಸೇರಿದ, ವ್ಯಾಪಾರವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ, 35 ವರ್ಷ ವಯಸ್ಸಿನ ಬಿ.ಕೆ. ಮರಿಯಪ್ಪನವರು, ಆ ಕಾಲಕ್ಕೇ ಭಾರೀ ಮೊತ್ತ ಎನ್ನಬಹುದಾದ ತಮ್ಮ ಆಸ್ತಿಯನ್ನೆಲ್ಲ ಬಡ ಮಕ್ಕಳ ವಿದ್ಯಾರ್ಥಿ ನಿಲಯಕ್ಕಾಗಿ ಉದಾರವಾಗಿ ದಾನ ಮಾಡಿದರು. ಜಾತಿ ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಎಲ್ಲ ಜನಾಂಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟರು. ಇದರ ಫಲವಾಗಿ 1921ರ ಜುಲೈನಲ್ಲಿ 30 ವಿದ್ಯಾರ್ಥಿಗಳೊಂದಿಗೆ ಬಿ.ಕೆ. ಮರಿಯಪ್ಪ ವಿದ್ಯಾರ್ಥಿ ನಿಲಯ ವಿದ್ಯುಕ್ತವಾಗಿ ಕಾರ್ಯಾರಂಭಿಸಿತು.
ಈಗ ಆ ವಿದ್ಯಾರ್ಥಿ ನಿಲಯ ಶತಮಾನೋತ್ಸವದ ಸಂಭ್ರಮದಲ್ಲಿದೆ.   
ಸಾರ್ಥಕ ಸಾಧನೆಯ ಹಾದಿಯನ್ನೊಮ್ಮೆ ಹಿಂತಿರುಗಿ ನೋಡುವುದಾದರೆ, ಹಳೆಯ ಬೆಂಗಳೂರಿನ ಕುರುಹುಗಳನ್ನು ಈಗಲೂ ಉಳಿಸಿಕೊಂಡಿರುವ ಚಾಮರಾಜಪೇಟೆಯ ಜನನಿಬಿಡ ವ್ಯಾಪಾರ ವಹಿವಾಟುಗಳ ನಡುವೆಯೇ ಪುಟ್ಟ ಕಟ್ಟಡದಲ್ಲಿ 1914 ರಲ್ಲಿ ಆರಂಭವಾದ ವಿದ್ಯಾರ್ಥಿ ನಿಲಯ ಇಂದು ಬೆಟ್ಟದಂತೆ ಬೆಳೆದು, ನೂರು ವರ್ಷಗಳ ಪುಣ್ಯಕಾರ್ಯದ ಹಾದಿಯಲ್ಲಿ ಸಾವಿರಾರು ಬಡ ಬುದ್ಧಿವಂತ ವಿದ್ಯಾರ್ಥಿಗಳ ಬದುಕನ್ನು ಬಂಗಾರವನ್ನಾಗಿಸಿದೆ. ಬಡಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಬಿ.ಕೆ.ಮರಿಯಪ್ಪನವರ ಈ ಹೃದಯವಂತಿಕೆಯನ್ನು, ಸ್ವಾರ್ಥರಹಿತ ಸೇವಾಕಾರ್ಯವನ್ನು ಸ್ಮರಿಸುವ ಕಾಲದಲ್ಲಿ ಅವರಿಲ್ಲ. ಆದರೆ ಅವರು ಬಿಟ್ಟುಹೋದ ವಿದ್ಯಾರ್ಥಿ ನಿಲಯವಿದೆ. ಅಲ್ಲಿಂದ ಕಲಿತ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಇವತ್ತು ಅವರೆಲ್ಲ ಸಮಾಜದ ಉನ್ನತ ಸ್ಥಾನಕ್ಕೇರಿ ವಿದ್ಯಾರ್ಥಿ ನಿಲಯಕ್ಕೆ ಕೀರ್ತಿ ತಂದಿದ್ದಾರೆ. ತಮ್ಮನ್ನು ಪೊರೆದ, ಪೋಷಿಸಿದ ವಿದ್ಯಾರ್ಥಿ ನಿಲಯವನ್ನು ಮರೆಯದೆ, ಮತ್ತದೇ ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನು ಮನ ಧನವನ್ನು ಧಾರೆ ಎರೆಯುತ್ತ ಮರಿಯಪ್ಪನವರ ಸಾಮಾಜಿಕ ಸೇವೆಯನ್ನು ಮುಂದುವರೆಸುತ್ತ ಅವರ ಕನಸನ್ನು ಸಾಕಾರಗೊಳಿಸಿದ್ದಾರೆ. ಮರಿಯಪ್ಪನವರನ್ನು ಜನಮಾನಸದಲ್ಲಿ ಜೀವಂತವಾಗಿಟ್ಟಿದ್ದಾರೆ.
ಒಂದು ಸಂಸ್ಥೆ, ಅದರಲ್ಲೂ ಶೈಕ್ಷಣಿಕ ರಂಗದಲ್ಲಿಯ ದತ್ತಿ ಸಂಘಟನೆಯೊಂದು ಯಶಸ್ವಿ ನೂರು ವರ್ಷಗಳನ್ನು ಪೂರೈಸುವುದು ಹುಡುಗಾಟಿಕೆಯ ವಿಷಯವಲ್ಲ. ಸರಕಾರದ ನೆರವು ಅಪೇಕ್ಷಿಸದೇ ವಿವಾದವೂ ಇಲ್ಲದೇ ಶತಮಾನ ಪೂರೈಸಿದೆ ಬಿ.ಕೆ. ಮರಿಯಪ್ಪ ವಸತಿಗೃಹದ ಸೇವಾಕಾರ್ಯ ಸಾಮಾನ್ಯದ್ದಲ್ಲ. ವ್ಯಾವಹಾರಿಕ ಜಗತ್ತಿನಿಂದ ಬಂದ ಮರಿಯಪ್ಪನವರು ಬಡಮಕ್ಕಳಿಗೆ ಮಾಡಿದ ಅನ್ನದಾನದ ಹಿಂದೆ ಮಾನವೀಯ ಮಿಡಿತವಿದೆ. ಪ್ರತಿಫಲಾಪೇಕ್ಷೆ ನಿರೀಕ್ಷಿಸದ ನಿಸ್ವಾರ್ಥ ಸೇವೆ ಇದೆ. ಇಲ್ಲಿಂದ ಕಲಿತು ಹೋದವರು ಸಮಾಜಕ್ಕೆ ನೀಡಿದ ಸೇವೆ ಸಾರ್ಥಕತೆ ಕಂಡಿದೆ, ಕಾಣುತ್ತಲಿದೆ.
ಆ ಕಾರಣಕ್ಕಾಗಿಯೇ ಮಹದಾನಿ ಮರಿಯಪ್ಪನವರೆಂದೇ ಜನಜನಿತರಾಗಿರುವ ಇವರ ವಿದ್ಯಾರ್ಥಿ ನಿಲಯದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬಂದ, ಎಲ್ಲ ಜಾತಿಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಉಚಿತ ಊಟ, ವಸತಿಯ ಜೊತೆಗೆ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಷ್ಟೇ ಅಲ್ಲ, ಆಂಧ್ರ, ತಮಿಳುನಾಡಿನ ವಿದ್ಯಾರ್ಥಿಗಳೂ ಇದ್ದು ಅವರವರ ಆರ್ಥಿಕ ಸ್ಥಿತಿ ಹಾಗೂ ಪಡೆದ ಅಂಕಗಳ ಆಧಾರದ ಮೇಲೆ ಅರ್ಹರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಿಜವಾದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದೇ ಇದರ ಉದ್ದೇಶವಾಗಿದೆ.
ಇಲ್ಲಿಗೆ ಭೌತಿಕವಾಗಿ ಬಡವರಾಗಿ ಬಂದವರು ಬೌದ್ಧಿಕವಾಗಿ ಶ್ರೀಮಂತರಾಗಿ ಸಮೃದ್ಧರಾಗಿ ಹೋದವರು ಲೆಕ್ಕವಿಲ್ಲದಷ್ಟು. ಅವರಲ್ಲಿ ಬಹಳ ಮುಖ್ಯರಾದವರು ಗಾಂಧಿವಾದಿ ಎಚ್. ನರಸಿಂಹಯ್ಯನವರು. ಇವರು ಮರಿಯಪ್ಪನವರ ವಿದ್ಯಾರ್ಥಿ ನಿಲಯದ ಮೊದಲ ಬ್ಯಾಚಿನ ವಿದ್ಯಾರ್ಥಿ. ಕಡು ಬಡತನದಲ್ಲಿ ಹುಟ್ಟಿದ ನರಸಿಂಹಯ್ಯನವರು ವಿದ್ಯಾಭ್ಯಾಸಕ್ಕಾಗಿ ಗೌರಿಬಿದನೂರಿನಿಂದ ಬೆಂಗಳೂರಿಗೆ ಬರಿಗಾಲಲ್ಲಿ ಕಾಲ್ನಡಿಗೆಯಲ್ಲಿ ಬಂದಿದ್ದರಂತೆ. ಇಲ್ಲಿ ಕಲಿತು ದೊಡ್ಡವರಾದ ನರಸಿಂಹಯ್ಯನವರು ಮುಂದೆ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ಲಕ್ಷಾಂತರ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಬದುಕಿದ್ದಷ್ಟು ದಿನವೂ ಸರಳ ಸಜ್ಜನಿಕೆಗೆ ಹೆಸರಾಗಿ, ತಾವು ಕಲಿತ ವಸತಿಗೃಹಕ್ಕೆ ಕೀರ್ತಿ ತಂದರು.
ಇದೇ ವಸತಿಗೃಹದ ಮತ್ತೊಬ್ಬ ವಿದ್ಯಾರ್ಥಿ, 88 ವರ್ಷದ ಎನ್. ಪುಟ್ಟರುದ್ರರು ಕೆಇಬಿ ನಿವೃತ್ತ ಅಧೀಕ್ಷಕ ಎಂಜಿನಿಯರ್. ನಿವೃತ್ತ ಜೀವನವನ್ನು ಹಾಯಾಗಿ ಕಳೆದು ಹಾಳು ಮಾಡಬಾರದೆಂದು ಈ ವಯಸ್ಸಿನಲ್ಲೂ ಹಾಸ್ಟೆಲ್‌ನ ವ್ಯವಸ್ಥಾಪಕ ಟ್ರಸ್ಟಿ ಆಗಿ, ಇಡೀ ವಸತಿಗೃಹದ ಉಸ್ತುವಾರಿ ಹೊತ್ತುಕೊಂಡು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲದೆ ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ವೈ.ಜಿ. ಕೃಷ್ಣಮೂರ್ತಿ, ರಾಜಸ್ತಾನ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಅಡಿವೆಪ್ಪ, ಮಾಜಿ ಮಂತ್ರಿಗಳಾದ ಟಿ. ಸಿದ್ದಲಿಂಗಯ್ಯ, ಯುನೆಸ್ಕೊದಲ್ಲಿ ಕಾರ್ಯನಿರ್ವಹಿಸಿದ ಟಿ.ಆರ್. ರಾಮಯ್ಯ ಸೇರಿದಂತೆ ಹಲವು ಖ್ಯಾತನಾಮರು ಮರಿಯಪ್ಪ ಹಾಸ್ಟೆಲ್‌ನ ಹಳೆಯ ವಿದ್ಯಾರ್ಥಿಗಳು.
‘ನಮ್ಮಲ್ಲಿ ಓದಿದವರಲ್ಲಿ ಬಹುತೇಕರು ಡಾಕ್ಟರ್ ಇಲ್ಲವೆ ಎಂಜಿನಿಯರ್‌ಗಳಾಗಿದ್ದು ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳ ಪೈಕಿ ಒಬ್ಬರು ಐಎಎಸ್ ಅಧಿಕಾರಿಯೂ ಆಗಿದ್ದಾರೆ’ ಎನ್ನುವ ಎನ್. ಪುಟ್ಟರುದ್ರರು, ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ 1946 ರಲ್ಲಿ ಸಂಘ ರಚಿಸಿಕೊಂಡಿದ್ದು, ಅವರೆಲ್ಲ ನಿಯಮಿತವಾಗಿ ವಸತಿಗೃಹಕ್ಕೆ ಬಂದುಹೋಗುವುದು, ವಾರ್ಷಿಕೋತ್ಸವದಂದು ಎಲ್ಲರೂ ಒಟ್ಟಾಗಿ ಕಲೆಯುವುದು, ಎಲ್ಲವನ್ನೂ ಅತಿ ಉತ್ಸಾಹದಿಂದ ಬಣ್ಣಿಸುತ್ತಾರೆ. ಹಾಗೆಯೇ ವಿದ್ಯಾರ್ಥಿನಿಲಯದ ಮತ್ತೊಬ್ಬ ಹಳೆಯ ವಿದ್ಯಾರ್ಥಿ ಕೆ. ದಿನೇಶರ ಕೊಡುಗೆಯನ್ನು ಬಾಯ್ತುಂಬ ಹಾಡಿ ಹೊಗಳುತ್ತಾರೆ.
ಹಳೆಯ ವಿದ್ಯಾರ್ಥಿಗಳ ಪೈಕಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಕೆ. ದಿನೇಶ್, ತಾವು ಕಲಿತ ವಸತಿಗೃಹದ ಋಣ ತೀರಿಸಲು, ಸುಮಾರು ಒಂದು ಕೋಟಿ ರೂಪಾಯಿಗಳನ್ನು ವಿದ್ಯಾರ್ಥಿನಿಲಯಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಇದರಿಂದ ಮರಿಯಪ್ಪನವರ ವಿದ್ಯಾರ್ಥಿನಿಲಯ ಅಲ್ಲಿಯವರೆಗೆ ಬರೀ ಗಂಡು ಮಕ್ಕಳ ವಿದ್ಯಾಭ್ಯಾಸ, ವಸತಿ, ಊಟಕ್ಕೆ ನೆರವಾಗುತ್ತಿದ್ದುದು, ಈ ಬೃಹತ್ ಮೊತ್ತದ ದೇಣಿಗೆಯಿಂದ ವಿದ್ಯಾರ್ಥಿನಿಯರ ವಸತಿಗೃಹ ನಿರ್ಮಾಣದತ್ತ ಗಮನ ಹರಿಸುವಂತಾಯಿತು. ಈ ಬಗ್ಗೆ ಮಾತನಾಡಿದ ವಸತಿನಿಲಯದ ಹಳೆಯ ವಿದ್ಯಾರ್ಥಿಗಳು ಮತ್ತು ಈಗ ಟ್ರಸ್ಟಿಗಳಲ್ಲೊಬ್ಬರಾದ ರಾಜಶೇಖರ್, ‘ವಿದ್ಯಾರ್ಥಿನಿಯರಿಗಾಗಿ ವಸತಿನಿಲಯ ಆರಂಭಿಸಬೇಕೆಂದುಕೊಂಡಾಗ ಅದಕ್ಕೆ ದಿನೇಶ್ ಹಣಕಾಸಿನ ನೆರವು ನೀಡಿದರು. ಮೊದಲಿಗೆ ಬಾಡಿಗೆ ಕಟ್ಟಡದಲ್ಲಿ 10 ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಟ್ಟೆವು. ಆ ನಂತರ ನಮ್ಮದೇ ಸ್ವಂತ ಕಟ್ಟಡ ಕಟ್ಟಿದೆವು. ಅದೀಗ 45 ವಿದ್ಯಾರ್ಥಿನಿಯರನ್ನು ಒಳಗೊಂಡ ಬಹುದೊಡ್ಡ ವಸತಿಗೃಹವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ’ ಎನ್ನುತ್ತಾರೆ.
ಹಾಗೆಯೇ ಶತಮಾನೋತ್ಸವ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲು ಮಕ್ಕಳಿಂದ, ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ವೃದ್ಧರಿಗೆ ಸಾಮಾಜಿಕ ಭದ್ರತೆ ಒದಗಿಸುವ, ವೃದ್ಧಾಶ್ರಮ ಸ್ಥಾಪಿಸುವುದು ಸಂಸ್ಥೆಯ ಮಹದಾಸೆಯಾಗಿತ್ತು. ಇದರ ಸೇವಾಕಾರ್ಯಕ್ಕೆ ಒತ್ತಾಸೆಯಾಗಿ ನಿಂತವರು ಇದೇ ವಿದ್ಯಾರ್ಥಿನಿಲಯದ ಹಳೆಯ ವಿದ್ಯಾರ್ಥಿ ಡಾ. ರಾಮಯ್ಯ. ಇವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ಜಾಲ ಎಂಬಲ್ಲಿ ಸುಮಾರು ಅರ್ಧ ಎಕರೆ ಜಮೀನನ್ನು ವೃದ್ಧಾಶ್ರಮಕ್ಕಾಗಿ ಉದಾರವಾಗಿ ನೀಡಿದ್ದಾರೆ. ‘ಇದೇ ಜಾಗದಲ್ಲಿ ಎರಡು ಕೋಟಿ ವೆಚ್ಚದಲ್ಲಿ 20 ವೃದ್ಧರಿಗೆ ವೃದ್ಧಾಶ್ರಮ ಆರಂಭಿಸುವ ಉದ್ದೇಶ ಹೊಂದಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ, ಆರು ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ರಾಜಶೇಖರ್.
ಮುಂದುವರೆದು, ‘ಇಲ್ಲಿಯವರೆಗೆ ಸುಮಾರು ಎರಡು ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಈ ವಸತಿನಿಲಯದ ಅನುಕೂಲ ಪಡೆದವರಿದ್ದಾರೆ. ಇವರಲ್ಲಿ 700ರಿಂದ 800 ಜನ ಈಗಲೂ ಈ ವಿದ್ಯಾರ್ಥಿನಿಲಯದ ಸಂಪರ್ಕದಲ್ಲಿದ್ದಾರೆ. ಮಿಕ್ಕ ಒಂದು ಸಾವಿರದಷ್ಟು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ತಿಳಿಯದು. ಇಲ್ಲಿ ಪದವಿ, ಸ್ನಾತಕೋತ್ತರ, ಎಂಬಿಎ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ನಮಗೆ ರೂಮುಗಳ ಮಿತಿ ಇರುವುದರಿಂದ ವರ್ಷಕ್ಕೆ 75 ಹುಡುಗರು, 45 ಹುಡುಗಿಯರನ್ನಷ್ಟೇ ತೆಗೆದುಕೊಳ್ಳುತ್ತೇವೆ. ಅದರಲ್ಲೂ ತೀರಾ ಬಡ ವಿದ್ಯಾರ್ಥಿ ಎಂದು ಕಂಡುಬಂದರೆ, ಅವರಿಗೆ ಫೀ ಕೂಡ ನಮ್ಮ ವಸತಿನಿಲಯದಿಂದಲೇ ಭರಿಸುತ್ತೇವೆ. ಕೆಲ ಬ್ರೈಟ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಕೊಡಮಾಡುತ್ತೇವೆ. ನನ್ನ ಪ್ರಕಾರ ಮರಿಯಪ್ಪನವರು ಸ್ವಾತಂತ್ರ್ಯಪೂರ್ವದ ಜಾತ್ಯತೀತ ಮನಸ್ಸುಳ್ಳ, ಅದನ್ನು ಕಾರ್ಯರೂಪಕ್ಕೆ ತಂದ ಬಹಳ ಅಪರೂಪದ ವ್ಯಕ್ತಿ. ಬೆಂಗಳೂರಿನಲ್ಲಿ ಆಯಾಯ ಜಾತಿ ಜನರ ಉಚಿತ ವಸತಿ ನಿಲಯಗಳುಂಟು. ಆದರೆ ಎಲ್ಲ ಜಾತಿಯ ಬಡವರಿಗೆ ಇರುವುದು ಇದೊಂದೇ ಹಾಸ್ಟೆಲ್’ ಎಂದು ಮರಿಯಪ್ಪನವರ ಗುಣಗಾನಕ್ಕೆ ಇಳಿಯುತ್ತಾರೆ ರಾಜಶೇಖರ್.
ಹಣ ಗಳಿಸುವ ಹಾದಿಗೆ ಬಿದ್ದು ಆಸ್ತಿ ವೃದ್ಧಿಸುವುದೇ ಮಹದುದ್ದೇಶವೆನ್ನುವ ವ್ಯಾಪಾರಸ್ಥರು ಸಾಮಾನ್ಯವಾಗಿ ಸಾಮಾಜಿಕ ಸಮಸ್ಯೆಗಳತ್ತ ಗಮನ ಹರಿಸುವುದು ಕಡಿಮೆ. ಅದರಲ್ಲೂ ಬಡವರು, ಅಸಹಾಯಕರು, ಶೋಷಿತರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಕಳಕಳಿ ಮತ್ತು ಪ್ರೀತಿಯನ್ನಿಟ್ಟುಕೊಳ್ಳುವುದು ಇನ್ನೂ ವಿರಳ. ಆದರೆ ಚಾಮರಾಜಪೇಟೆಯ ವ್ಯಾಪಾರಿ ಬಿ.ಕೆ. ಮರಿಯಪ್ಪನವರು ಇದಕ್ಕೆ ಅಪವಾದ. ಮದುವೆಯಾಗಿ ಮಡದಿಯನ್ನು ಕಳೆದುಕೊಂಡಿದ್ದ, ಮಕ್ಕಳಿಲ್ಲದ ಮರಿಯಪ್ಪನವರು 8.3.1914 ರಂದು ತಮ್ಮ ಸಮಸ್ತ ಆಸ್ತಿಯನ್ನು ವಿದ್ಯಾರ್ಥಿ ನಿಲಯಕ್ಕಾಗಿ ವಿಲ್ ಮಾಡಿದರು. ಕುತೂಹಲಕರ ಸಂಗತಿ ಎಂದರೆ ಆ ವಿಲ್ ಮಾಡಿ ನಾಲ್ಕೇ ದಿನಕ್ಕೆ, 12.3.1914 ರಂದು ಮರಿಯಪ್ಪನವರು ಇಹಲೋಕ ತ್ಯಜಿಸಿದ್ದರು.
ಸಾವನ್ನು ಮೊದಲೇ ಗ್ರಹಿಸಿದ, ಸತ್ತ ನಂತರವೂ ಜನರ ಮನದಲ್ಲಿ ಬದುಕಿದ, ನೂರು ವರ್ಷಗಳ ನಂತರವೂ ಸ್ಮರಣಿಕೆಯ ವ್ಯಕ್ತಿಯಾದ ಮರಿಯಪ್ಪನವರು ನೂರ್ಕಾಲ ನೆನಪಿನಲ್ಲುಳಿಯುವ ಕೆಲಸವನ್ನೇ ಮಾಡಿಹೋದರು. ತಮ್ಮನ್ನು ಸಾಕಿದ ಸಲಹಿದ ಸಮಾಜಕ್ಕೆ ಋಣ ತೀರಿಸಿದರು. ಮರಿಯಪ್ಪನವರ ಸಾಮಾಜಿಕ ಕಳಕಳಿ, ಕಾಳಜಿ, ಬಡವರ ಬಗೆಗಿನ ಪ್ರೀತಿ ಮತ್ತೊಂದಿಷ್ಟು ಜನರಿಗೆ ಮಾದರಿಯಾಗಲಿ. ಇಂತಹವರ ಸಂತತಿ ಇನ್ನಷ್ಟು ಹೆಚ್ಚಾಗಲಿ. ಒಳ್ಳೆಯವರು ಇನ್ನೂ ಇದ್ದಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗಲಿ.

  




Saturday, November 8, 2014

ಕಲರ್‌ಫುಲ್ ಕಸ್ತೂರಿ ನಿವಾಸ

‘ಕಸ್ತೂರಿ ನಿವಾಸ’ ಚಿತ್ರದಲ್ಲಿ ರಾಜ್
ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಎಂದಾಕ್ಷಣ ರಂಗುರಂಗಿನ ಜಗತ್ತು ಕಣ್ಮುಂದೆ ಕುಣಿಯುತ್ತದೆ. ಕಪ್ಪುಬಿಳುಪಿನ ಚಿತ್ರಗಳ ಕಾಲವೂ ಒಂದಿತ್ತು ಎನ್ನುವುದನ್ನು ಮರೆ ಮಾಚಿಸುವಷ್ಟರಮಟ್ಟಿಗೆ ಇವತ್ತು ಬೆಳ್ಳಿಪರದೆಯನ್ನು ಬಣ್ಣ ತುಂಬಿಕೊಂಡಿದೆ. ಇಂತಹ ಬಣ್ಣದ ಬೆರಗಿನ ಕಾಲದಲ್ಲಿಯೇ ಹಾಲಿವುಡ್‌ ಚಿತ್ರಲೋಕ ಕಪ್ಪುಬಿಳುಪಿನ ಕಾಲಕ್ಕೆ ಜಾರಿತ್ತು. 1927ರ ಕಾಲಘಟ್ಟದ ಚಿತ್ರರಂಗದ ಜನಪ್ರಿಯ ನಾಯಕನಟನ ದುರಂತ ಕಥಾನಕವನ್ನೇ ವಸ್ತುವನ್ನಾಗಿಸಿಕೊಂಡು, 2011 ರಲ್ಲಿ ‘ದಿ ಆರ್ಟಿಸ್ಟ್’ ಎಂಬ ಚಿತ್ರವನ್ನು, ಅದೂ ಆ ಕಾಲದ ಅಪ್ಪಟ ಕಪ್ಪುಬಿಳುಪಿನಲ್ಲಿಯೇ ನಿರ್ಮಿಸಿತ್ತು. ಆ ಮೂಲಕ ಚಿತ್ರರಸಿಕರನ್ನು ಮತ್ತೆ ಆ ಕಾಲಕ್ಕೆ ಕರೆದೊಯ್ದಿತ್ತು. ಚಕಿತಗೊಳಿಸುವ ಕಪ್ಪುಬಿಳುಪಿನ ಚೆಲುವನ್ನು ಆಸ್ವಾದಿಸಲು ಅವಕಾಶ ಮಾಡಿಕೊಟ್ಟಿತ್ತು.
ಹೊಸ ಪ್ರಯೋಗಕ್ಕೆ ಸದಾ ತೆರೆದುಕೊಳ್ಳುವ ಹಾಲಿವುಡ್‌ ಚಿತ್ರರಂಗ ಈ ಕಾಲದಲ್ಲಿ ನಿಂತು ಆ ಕಾಲವನ್ನು ಧ್ಯಾನಿಸಿತ್ತು, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನೂ ದಕ್ಕಿಸಿಕೊಂಡಿತ್ತು. ಆದರೆ, ಇಲ್ಲಿ, ಕನ್ನಡ ಚಿತ್ರರಂಗದಲ್ಲಿ ಅದು ತಿರುಗು ಮುರುಗಾಗಿದೆ. ಕಪ್ಪುಬಿಳುಪಿನ ಕಾಲದ ಚಿತ್ರವನ್ನು ಬಣ್ಣಕ್ಕೆ ಪರಿವರ್ತಿಸುವ ಪ್ರಯತ್ನ ಕನ್ನಡದಲ್ಲಾಗುತ್ತಿದೆ. ಹಾಗಂತ ಇಲ್ಲಿ ಹೊಸ ಚಿತ್ರ ನಿರ್ಮಾಣವಲ್ಲ, ಹಳೆಯ ಅಪರೂಪದ ಕಪ್ಪುಬಿಳುಪಿನ ಚಿತ್ರಕ್ಕೆ ವರ್ಣ ಸ್ಪರ್ಶ ನೀಡುವ ಕೆಲಸ ನಡೆದಿದೆ.
ಕಪ್ಪುಬಿಳುಪಿನಲ್ಲಿ ತಯಾರಾದ ರಾಜ್‌ಕುಮಾರ್‌ ಅಭಿನಯದ ‘ಸತ್ಯ ಹರಿಶ್ಚಂದ್ರ’ ಸಿನಿಮಾವನ್ನು ಕನ್ನಡಿಗರು ಕಣ್ತುಂಬಿಕೊಂಡಿದ್ದಾಗಿದೆ. ಈಗ ‘ಕಸ್ತೂರಿ ನಿವಾಸ’ ಚಿತ್ರದ ಸರದಿ. 1971ರಲ್ಲಿ ತೆರೆಕಂಡ ರಾಜ್‌ ಜಯಂತಿ, ಆರತಿ, ಅಶ್ವಥ್‌ ಅಭಿನಯದ ಈ ಚಿತ್ರ, 43 ವರ್ಷಗಳ ನಂತರ ಬಣ್ಣದಲ್ಲಿ ಬಿಡುಗಡೆಯಾಗಿದೆ.
‘ಕಸ್ತೂರಿ ನಿವಾಸ’ ಚಿತ್ರವು ಬೆಂಕಿಪೊಟ್ಟಣ (ಡವ್‌ ಬ್ರ್ಯಾಂಡ್ ಮ್ಯಾಚ್ ಬಾಕ್ಸ್) ಉದ್ಯಮಿಯ ದುರಂತ ಪ್ರೇಮದ ಕಥಾವಸ್ತುವನ್ನು ಒಳಗೊಂಡ, ದೊರೈ-ಭಗವಾನ್‌ ಜೋಡಿಯ ಸಮರ್ಥ ನಿರ್ದೇಶನದ, ರಾಜ್‌ ಅವರ ಅಮೋಘ ಅಭಿನಯದ ಅದ್ಭುತ ಚಿತ್ರ.
ಕಸ್ತೂರಿ ನಿವಾಸದ ಸಂಕ್ಷಿಪ್ತ ಕಥೆ ಹೀಗಿದೆ... ಚಿತ್ರದ ಕಥಾನಾಯಕ ರವಿ ಅಮೆರಿಕಾದಲ್ಲಿ ಬಿಜಿನೆಸ್‌ ಕೋರ್ಸ್‌ ಮುಗಿಸಿ ಸ್ವದೇಶಕ್ಕೆ ಹಿಂತಿರುಗುತ್ತಾನೆ. ಡವ್‌ ಬ್ರ್ಯಾಂಡ್ ಮ್ಯಾಚ್ ಬಾಕ್ಸ್ ಫ್ಯಾಕ್ಟರಿ ಸ್ಥಾಪಿಸುತ್ತಾನೆ. ತನಗರಿವಿಲ್ಲದೆ ತನ್ನ ಕಾರ್ಯದರ್ಶಿ ಲೀಲಾಳ (ಜಯಂತಿ) ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಆದರೆ ಆಕೆ ಕಾರಣಾಂತರಗಳಿಂದ ರವಿಯ ಮಿತ್ರ ಚಂದ್ರುನನ್ನು ವರಿಸುತ್ತಾಳೆ. ರವಿ ಸಹ ಬೇರೊಬ್ಬರನ್ನು ವಿವಾಹವಾಗಿ, ಅಪಘಾತವೊಂದರಲ್ಲಿ ಹೆಂಡತಿ, ಮಗಳನ್ನು ಕಳೆದುಕೊಂಡಿರುತ್ತಾನೆ. ಈ ನಡುವೆ ಅವರ ಬೆಂಕಿಪೊಟ್ಟಣ ಕಾರ್ಖಾನೆ ನಷ್ಟಕ್ಕೆ ಸಿಲುಕುತ್ತದೆ. ಇದಕ್ಕೆ ಚಂದ್ರು ಸಹ ಪರೋಕ್ಷವಾಗಿ ಸಹಕರಿಸುತ್ತಾನೆ. ಇಂತಹ ಒಂದು ಸಂದಿಗ್ಧ ಸಮಯದಲ್ಲಿ ಲೀಲಾ ಮತ್ತೊಮ್ಮೆ ರವಿ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಬಹಳ ಹಚ್ಚಿಕೊಳ್ಳುತ್ತಾನೆ. ಏರಿಳಿತಗಳಲ್ಲಿ ಸಾಗುವ ರವಿಯ ಬದುಕು ಕೊನೆಗೆ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.
ಈ ಚಿತ್ರದ ಕತೆಯ ಕತೆಯೇ ಕುತೂಹಲಕರವಾಗಿದೆ. ಅಂದಿನ ತಮಿಳು ಸೂಪರ್‌ ಸ್ಟಾರ್ ಶಿವಾಜಿ ಗಣೇಶನ್‌ರನ್ನು ಮನಸ್ಸಿನಲ್ಲಿಟ್ಟುಕೊಂಡು ಬಾಲಸುಬ್ರಹ್ಮಣ್ಯಂ ಒಂದು ಕಥೆ ರಚಿಸಿದ್ದರು. ಆ ಕಥೆಗೆ ಕಸ್ತೂರಿ ನಿವಾಸಂ ಎಂದು ಹೆಸರಿಟ್ಟಿದ್ದರು. ಈ ಕಥೆಯ ಹಕ್ಕನ್ನು  ನೂರ್‌ ಸಾಬ್‌ ಖರೀದಿಸಿ, ಶಿವಾಜಿ ಗಣೇಶನ್‌ರನ್ನು ಕೇಳಿದಾಗ, ದುರಂತ ನಾಯಕನ ಈ ಕಥೆಯನ್ನು ತಮಿಳುನಾಡು ಜನತೆ ಸ್ವೀಕರಿಸುವುದು ಕಷ್ಟವೆಂದು ಭಾವಿಸಿ ನಿರಾಕರಿಸಿದರು. ಆ ನಂತರ ಆ ಕತೆ ಚಿತ್ರಸಾಹಿತಿ ಚಿ. ಉದಯಶಂಕರ್‌ ಮತ್ತು ರಾಜ್‌ ಸೋದರ ವರದರಾಜ್‌ ಅವರ ಕಿವಿಗೆ ಬಿದ್ದು, ದೊರೈ-ಭಗವಾನ್‌ರೊಂದಿಗೆ ಪ್ರಸ್ತಾಪವಾಗಿ, ರಾಜ್‌ ನಟಿಸಲು ಒಪ್ಪುವುದಾದರೆ ತಾವು ಚಿತ್ರ ಮಾಡಲು ಸಿದ್ಧ ಎನ್ನುವಲ್ಲಿಗೆ ಬಂದು ನಿಂತಿತು. ರಾಜ್‌ ಕಥೆ ಕೇಳಿ, ಇದು ಶಿವಾಜಿ ಗಣೇಶನ್‌ರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಮೊದಲಿಗೆ ಹಿಂಜರಿದವರು, ಆ ನಂತರ ವರದರಾಜ್‌ರ ಒತ್ತಡಕ್ಕೆ ಮಣಿದು, ನಟಿಸಲು ಒಪ್ಪಿದರು. ತಮಿಳಿನ ಕಸ್ತೂರಿ ನಿವಾಸಂ ಕನ್ನಡದ ‘ಕಸ್ತೂರಿ ನಿವಾಸ’ವಾಯಿತು. ಕನ್ನಡ ಚಿತ್ರರಂಗದಲ್ಲಿ ಎಂದೆಂದೂ ಮರೆಯದ ಮಹೋನ್ನತ ಚಿತ್ರವಾಗಿ ಅಜರಾಮರವಾಗಿ ಉಳಿಯಿತು.
ಆಶ್ಚರ್ಯವೆಂದರೆ, ಕಸ್ತೂರಿ ನಿವಾಸ ಕನ್ನಡದಲ್ಲಿ ಸೂಪರ್‌ ಹಿಟ್‌ ಚಿತ್ರವೆನ್ನಿಸಿಕೊಂಡ ಮೇಲೆ ಶಿವಾಜಿ ಗಣೇಶನ್‌ರಿಗೆ ಜ್ಞಾನೋದಯವಾಯಿತು. ತಮಿಳಿಗೆ ಹಕ್ಕು ಖರೀದಿಸಿ, ‘ಅವನ್‌ದಾನ್‌ ಮನಿದನ್‌’ ಚಿತ್ರ ಮಾಡಿ ಯಶಸ್ವಿಯೂ ಆದರು. ಆನಂತರ ಅದು ಹಿಂದಿಯಲ್ಲಿ, ಸಂಜೀವ್‌ಕುಮಾರ್‌ ನಾಯಕನಟನಾಗಿ ‘ಶಾಗಿರ್ದ್‌’ ಆಗಿ, ಕನ್ನಡದ ಕಸ್ತೂರಿ ಅಲ್ಲಿಯೂ ಪಸರಿಸಿತು.
‘ಕಸ್ತೂರಿ ನಿವಾಸ’ ಚಿತ್ರ ಎಷ್ಟು ಜನಪ್ರಿಯವೋ, ಅದರ ಹಾಡುಗಳಿಗೂ ಅಷ್ಟೇ ಜನಪ್ರಿಯ. ಜಿ.ಕೆ. ವೆಂಕಟೇಶ್‌ ಸಂಗೀತ ನಿರ್ದೇಶನದಲ್ಲಿ, ಚಿ. ಉದಯಶಂಕರ್‌, ಆರ್‌.ಎನ್‌. ಜಯಗೋಪಾಲ್, ವಿಜಯ ನಾರಸಿಂಹ ಅವರ ಸಾಹಿತ್ಯದಲ್ಲಿ, ಪಿ.ಬಿ. ಶ್ರೀನಿವಾಸ್‌, ಪಿ. ಸುಶೀಲಾರವರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದ ‘ಆಡಿಸಿ ನೋಡು ಬೀಳಿಸಿ ನೋಡು...’, ‘ನೀ ಬಂದು ನಿಂತಾಗ...’, ‘ಎಲ್ಲೇ ಇರು ಹೇಗೇ ಇರು...’, ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ...’, ‘ಆಡೋಣ ನೀನು ನಾನು...’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ.
ಆ ಕಾಲದ ಚಿತ್ರರಸಿಕರನ್ನು ಮೋಡಿ ಮಾಡಿದ್ದ ಈ ಚಿತ್ರದಲ್ಲಿ ರಾಜಕುಮಾರ್‌, ಜಯಂತಿ, ಅಶ್ವತ್ಥ್ ಅಭಿನಯಿಸಿದ್ದಲ್ಲ, ಜೀವಿಸಿದ್ದರು. ಅನುಪಮ್ ಮೂವೀಸ್‌ ಲಾಂಛನದಡಿಯಲ್ಲಿ ತಯಾರಾದ ಚಿತ್ರಕ್ಕೆ ದೊರೈ-ಭಗವಾನ್‌ ಜೋಡಿ ತಮ್ಮ ಬುದ್ಧಿಯನ್ನೆಲ್ಲ ಬಸಿದು, ಆ ಕಾಲಕ್ಕೇ ಹೊಸದೆನ್ನಿಸುವ ರೀತಿಯಲ್ಲಿ ಚಿತ್ರವನ್ನು ನಿರೂಪಿಸಿ ಮಹಾನ್‌ ಕಲಾಕೃತಿಯನ್ನಾಗಿಸಿತ್ತು. ಕತೆ, ನಿರೂಪಣೆ, ಅಭಿನಯ, ಸಂಗೀತ, ಹಾಡುಗಳಿಂದ ಚಿತ್ರ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಕನ್ನಡ ಚಿತ್ರೀದ್ಯಮದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದು ದಾಖಲೆ ನಿರ್ಮಿಸಿತ್ತು. ಅದರಲ್ಲೂ ಡಾ.ರಾಜ್‌ ಅಭಿನಯ ಕನ್ನಡಿಗರ ಕಣ್ಣಲ್ಲಿ ನೀರು ತರಿಸಿತ್ತು.
ಇಂತಹ ಅಪರೂಪದ ಕಸ್ತೂರಿ ನಿವಾಸ ಎಂಬ ಕಪ್ಪುಬಿಳುಪಿನ ಚಿತ್ರವನ್ನು ಬಣ್ಣಕ್ಕೆ ಬದಲಿಸಿ ಬಿಡುಗಡೆ ಮಾಡುತ್ತಿರುವವರು ಕೆ.ಸಿ.ಎನ್‌ ಮೋಹನ್‌. ಈ ಕುರಿತು ಮಾತನಾಡುತ್ತ, ‘ನನ್ನ ತಂದೆ, ನಿರ್ಮಾಪಕರಾದ ಕೆ.ಸಿ.ಎನ್‌. ಗೌಡರಿಗೆ ಕಸ್ತೂರಿ ನಿವಾಸ ಸೇರಿದಂತೆ ಕೆಲವು ಕ್ಲಾಸಿಕ್ ಕನ್ನಡ ಸಿನಿಮಾಗಳನ್ನು ಕಲರ್‌ನಲ್ಲಿ ನೋಡಬೇಕೆಂಬ ಆಸೆ ಇತ್ತು. ಅವರ ಆಸೆಯಂತೆ ಚಿತ್ರವನ್ನು ವರ್ಣದಲ್ಲಿ ಸಿದ್ಧ ಮಾಡಿದ್ದೇವೆ. ಯಾವುದಾವುದೋ ಕಾರಣಕ್ಕೆ ತಡವಾಗಿ, ನಾವು ಅಂದುಕೊಂಡ ದಿನಗಳಲ್ಲಾಗದೆ ಈಗ ಬಿಡುಗಡೆ ಮಾಡುತ್ತಿದ್ದೇವೆ. ಸತ್ಯ ಹರಿಶ್ಚಂದ್ರ ಸಿನಿಮಾ ಕಲರ್‌ನಲ್ಲಿ ಬಂದಾಗ ಕನ್ನಡಿಗರು ಖುಷಿ ಪಟ್ಟಿದ್ದರು. ಈ ಚಿತ್ರವನ್ನೂ ಹಾಗೆಯೇ ಮೆಚ್ಚಿಕೊಳ್ಳುತ್ತಾರೆ’ ಎನ್ನುತ್ತಾರೆ.
ಮುಂದುವರೆದು, ‘ಇದು ಒರಿಜಿನಲ್‌ ಚಿತ್ರದ ಕಾರ್ಬನ್‌ ಕಾಪಿ ಅಲ್ಲ. ಹಾಡುಗಳು ಚಿತ್ರದ ಪ್ರಮುಖ ಹೈಲೈಟ್‌. ಹಾಡುಗಳು ಹಾಗೂ ಸಂಭಾಷಣೆಗೆ ಡಿಟಿಎಸ್‌ ಅಳವಡಿಸಲಾಗಿದ್ದು ಪ್ರೇಕ್ಷಕರಿಗೆ ಸಮೃದ್ಧ ಅನುಭವ ನೀಡಲಿದೆ’ ಎನ್ನುವುದನ್ನು ಮರೆಯಲಿಲ್ಲ.
ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಕಪ್ಪುಬಿಳುಪಿನ ಚಿತ್ರವನ್ನು ಕಲರ್‌ ಮಾಡುವುದು ಸುಲಭವೆನ್ನಿಸಬಹುದು. ಆದರೆ ಅದು ಅಷ್ಟು ಸುಲಭವಲ್ಲ. ಪ್ರತಿ ಫ್ರೇಮಿಗೂ ಬಣ್ಣ ತುಂಬಿ, ಜೀವ ಕೊಟ್ಟು ಕುಣಿಸಬೇಕಾಗುತ್ತದೆ. ಹೊಸ ಸಿನಿಮಾವೊಂದನ್ನು ನಿರ್ಮಾಣ ಮಾಡಿದಷ್ಟೇ ಕೋಟ್ಯಂತರ ರೂ.ಗಳ ಖರ್ಚು ತಗಲುತ್ತದೆ. ಆ ಖರ್ಚನ್ನೂ ಲೆಕ್ಕಿಸದೆ, ಅದರಿಂದ ಬರುವ ಲಾಭವನ್ನೂ ಗುಣಿಸದೆ ಕೆಸಿಎನ್‌ ಗೌಡರ ಆಸೆಯನ್ನು ಕಾರ್ಯರೂಪಕ್ಕಿಳಿಸಿರುವ ಅವರ ಮಕ್ಕಳ ಚಿತ್ರಪ್ರೀತಿ ನಿಜಕ್ಕೂ ಶ್ಲಾಘನೀಯ.
ಆದರೆ ಸದ್ಯದ ಪ್ರಶ್ನೆ ಎಂದರೆ, 70ರ ದಶಕದ ಚಿತ್ರಪ್ರೇಮಿಗಳ ಅಭಿರುಚಿಯೇ ಬೇರೆ ಮತ್ತು 2014ರ ವೇಗೋತ್ಕರ್ಷಗಳ ಈ ಹೊಸಗಾಲದ ವೀಕ್ಷಕರ ಬೇಡಿಕೆಯೇ ಬೇರೆ. ಆಶ್ಚರ್ಯವೆಂದರೆ, ಎರಡೂ ಬಗೆಯ ಪ್ರೇಕ್ಷಕರಿಗೆ ‘ಕಸ್ತೂರಿ ನಿವಾಸ’ ಚಿತ್ರದಲ್ಲೊಂದು ಸಂದೇಶವಿದೆ. ಮನುಷ್ಯನ ಆಸೆಗೆ, ಅಹಂಕಾರಕ್ಕೆ, ನಂಬಿಕೆಗೆ, ನಿಷ್ಠೆಗೆ, ಪ್ರತಿಷ್ಠೆಗೆ ಚಿತ್ರದಲ್ಲಿ ಮದ್ದಿದೆ. ಹಾಗಾಗಿ ಮನುಷ್ಯರು ನೋಡಬೇಕಾದ ಚಿತ್ರ.
‘ಕಸ್ತೂರಿ ನಿವಾಸ’ ಚಿತ್ರದಲ್ಲಿ ರಾಜ್


Thursday, September 4, 2014

ಅರಿವನ್ನು ಹಂಚಿದ ಅನಕ್ಷರಸ್ಥ- ಮೆಹಬೂಬ್‌ ಪಾಷ

ಮೆಹಬೂಬ್‌ ಪಾಷ
ಸಂಜೆ ಏಳರ ಸಮಯ. ಮಳೆ ಮತ್ತು ಕತ್ತಲು ಬೆಂಗಳೂರನ್ನು ಕವುಚಿಕೊಳ್ಳಲು ಕಾತರಿಸುತ್ತಿದ್ದವು. ಅಂತಹ ಹೊತ್ತಿನಲ್ಲಿ  ಎನ್‌. ನರಸಿಂಹಯ್ಯನವರ ಪತ್ತೇದಾರಿ ಪುಸ್ತಕಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದೆ. ಹಳೇ ಪತ್ತೇದಾರಿ ಪುಸ್ತಕಗಳು ಬೆಂಗಳೂರಿನ ಕಾಟನ್‌ ಪೇಟೆ, ಅವಿನ್ಯೂ ರೋಡ್‌, ಬಳೇಪೇಟೆ ಗಲ್ಲಿಗಳು ಖಾತರಿಯಾಗಿ ಸಿಗುವ ಜಾಗಗಳು. ಅಚಾನಕ್ಕಾಗಿ ಬೆಂಗಳೂರಿನ ಬಳೇಪೇಟೆ ಸರ್ಕಲ್ಲಿಗೆ ಅಂಟಿಕೊಂಡಂತಿರುವ ಕಿಲಾರಿ ರಸ್ತೆಯ ಕಾರ್ನರ್‌ನಲ್ಲೊಂದು ಹಳೆ ಪುಸ್ತಕದ ಅಂಗಡಿ ಕಣ್ಣಿಗೆ ಬಿತ್ತು.
ಅಂಗಡಿ ಅಂದರೆ ಅದು ಅಂಗಡಿಯಲ್ಲ, ಅದಕ್ಕೊಂದು ನಿರ್ದಿಷ್ಟ ಜಾಗವೇ ಇಲ್ಲ. ಅಂಗಡಿಯ ಮಾಲೀಕನಿಗೆ ಕೂರಲು ಒಂದು ಕುರ್ಚಿಯಿರಲಿ, ನಿಲ್ಲಲು ನಿಸೂರಾದ ಜಾಗವೂ ಇಲ್ಲ. ಪಕ್ಕದ ಸುಸಜ್ಜಿತ ಟಿಪ್‌ ಟಾಪ್‌ ಲೆದರ್‌ ಬ್ಯಾಗ್ ಅಂಗಡಿ ಮಳಿಗೆಯ ಹೊರಗೋಡೆಗೆ ಒಂದು ಸ್ಲ್ಯಾಟೆಡ್ ಆ್ಯಂಗಲ್‌ ಫಿಟ್‌ ಮಾಡಿ, ಅದರೊಳಗೆ ಹಳೆಯ ಪುಸ್ತಕಗಳನ್ನು ಜೋಡಿಸಿಡಲಾಗಿತ್ತು.
ಇಂಗ್ಲಿಷ್‌, ಹಿಂದಿ, ಕನ್ನಡ, ತಮಿಳು, ತೆಲುಗು... ಹೀಗೆ ಎಲ್ಲಾ ಭಾಷೆಗಳ, ಎಲ್ಲೂ ಸಿಗದ  ಹಳೆಯ, ಹರಿದ ಸಾವಿರಾರು ಪುಸ್ತಕಗಳು, ಕವರ್‌ಪೇಜ್‌ ಕಳೆದುಕೊಂಡ ನೂರಾರು ಮ್ಯಾಗಜಿನ್‌ಗಳು ಅಲ್ಲಿದ್ದವು. ಸ್ವಲ್ಪ ಕತ್ತೆತ್ತಿ ನೋಡಿದರೆ, ಮಿಣುಕಾಡುವ ಬಲ್ಬು ಹಳೆಯ ಪುಸ್ತಕಗಳಿಗೆ ಬೆಳಕು ಬೀರುತ್ತಿತ್ತು. ಆ ಒಂದು ಅಡಿ ಅಗಲ ಅಳತೆಯ ಸ್ಲ್ಯಾಟೆಡ್ ಆ್ಯಂಗಲ್‌ಗೆ ರೋಲಿಂಗ್‌ ಶೆಟ್ಟರ್ಸು, ಅದಕ್ಕೊಂದು ಬೀಗ ಎಲ್ಲವೂ ಇತ್ತು. ಆ ಸ್ಲ್ಯಾಟೆಡ್ ಆ್ಯಂಗಲ್‌ನ  ಮೇಲೆ ಗೋಡೆಯಲ್ಲಿ ‘ಅಮೀನಾ ಬಿ ಬುಕ್‌ ಸ್ಟಾಲ್’ ಅಂತ ಬೋರ್ಡ್‌ ಕೂಡ ಇತ್ತು.
ಹೇಳಿ ಕೇಳಿ ಅದು ಬಳೇಪೇಟೆ. ಕಿಷ್ಕಿಂಧೆಯಂತಹ ಜಾಗ. ಆ ಅಂಗಡಿಯೋ ಬೀದಿಯಲ್ಲಿಯೇ ಇದೆ. ಅಂಗಡಿಯ ಮುಂದೆ ಗುಂಡಿ, ಹೊಂಡಗಳು. ಅದರೊಳಗೆ ಮಳೆ ನೀರೋ ಅಥವಾ ಮನುಷ್ಯರ ನೀರೋ ತುಂಬಿ ಹರಿಯುತ್ತಿದೆ. ಅವುಗಳನ್ನೆಲ್ಲ ದಾಟಿಕೊಂಡು ಆ ಅಂಗಡಿಯ ಬಳಿ ಹೋದೆ. ಕುರುಚಲು ಗಡ್ಡ ಬಿಟ್ಟುಕೊಂಡು, ಶರ್ಟಿನ ತೋಳನ್ನು, ಮಂಡಿವರೆಗೆ ಪ್ಯಾಂಟನ್ನು ಮಡಚಿಕೊಂಡು ನಡುಗುತ್ತಾ ನಿಂತಿದ್ದ ವ್ಯಕ್ತಿ ಕಸಿವಿಸಿಯ ಮುಖಭಾವದಲ್ಲಿ ‘ಏನು’ ಎನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿದರು. ಅವರಿದ್ದ ಸ್ಥಿತಿ ನೋಡಿ, ಇವರು ಈ ಹಳೆ ಅಂಗಡಿಯನ್ನು ನೋಡಿಕೊಳ್ಳುವ ಕೆಲಸಗಾರನಿರಬೇಕು ಎಂದು ಭಾವಿಸಿ, ಮಾತನಾಡಿಸುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದೆ.
ಆಗ ಅವರೇ ‘ಏನ್‌ ಬೇಕಣ್ಣ’ ಎಂದರು.
ಅವರ ಮಾತಿನಲ್ಲಿಯೇ ಅವರು ಮುಸ್ಲಿಂ ಎಂಬುದು ಗೊತ್ತಾಯಿತು. ಮಂಡಿಯವರೆಗೂ ಮಡಿಚಿದ್ದ ಪ್ಯಾಂಟು ಅದನ್ನು ಖಾತ್ರಿಪಡಿಸಿತ್ತು. ನನಗಿಂತ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಿದ್ದವರು ‘ಅಣ್ಣ’ ಅಂದಾಕ್ಷಣ ಕೊಂಚ ಕಸಿವಿಸಿಯಾಯಿತು, ತಗ್ಗಿದ ದನಿಯಲ್ಲಿ ‘ಪತ್ತೇದಾರಿ ಪುಸ್ತಕಗಳು ಬೇಕಾಗಿತ್ತು’ ಎಂದೆ.
‘ಅಣ್ಣಾ... ಇದಾವೆ, ಬೆಳಗ್ಗೆ ಬಂದ್ರೆ ಕೊಡ್ತೀನಿ’ ಒಂಥರಾ ದಯನೀಯ ದನಿಯಲ್ಲಿ ಬೇಡಿಕೊಂಡರು.
‘ಪತ್ತೇದಾರಿ ಎನ್‌. ನರಸಿಂಹಯ್ಯನವರ ಪುಸ್ತಕಗಳಿವೆಯಾ?’ ಎಂದೆ.
‘ಹುಡುಕ್ಬೇಕು, ಈಗ ನೋಡಿ ಹೆಂಗಿದೀನಿ, ಬೆಳಗ್ಗೆ ಕೊಡ್ತೀನಿ ಬಾರಣ್ಣ’ ಅಂದರು. ಆ ದನಿಯಲ್ಲಿ ಗಿರಾಕಿಯನ್ನು ಮತ್ತೆ ಬರುವಂತೆ ಕರೆಯುವ ಕೋರಿಕೆಯಿತ್ತು.
ಸಿಗುತ್ತೆ ಅನ್ನುವುದು ಗ್ಯಾರಂಟಿ ಆಗುತ್ತಿದ್ದಂತೆ, ಅವರ ವ್ಯಾಪಾರ-ವ್ಯವಹಾರ, ಸ್ಥಿತಿ-ಗತಿ ತಿಳಿಯುವ ಕುತೂಹಲದಿಂದ ಹೆಸರು, ಹಿನ್ನೆಲೆ ಬಗ್ಗೆ ವಿಚಾರಿಸತೊಡಗಿದೆ. ಮಳೆಗೆ ಮೇಲ್ಛಾವಣಿಯಾಗಲಿ, ಚಳಿಗೆ ಸ್ವೆಟರ್‌, ಜರ್ಕೀನ್‌ ಆಗಲಿ ಹಾಕಿಕೊಳ್ಳದೆ, ನೆನೆಯುತ್ತ, ನಡುಗುತ್ತ ರೇಜಿಗೆ ಮುಖಭಾವ ಹೊದ್ದು ನಿಂತಿದ್ದವರು,
‘ಅಣ್ಣ, ನನ್ನ ಹೆಸರು ಮೆಹಬೂಬ್‌ ಪಾಷ, ನಲವತ್ತೆಂಟ್‌ ವರ್ಷ, ನಾಳೆ ಬನ್ನಿ, ನೋಡನ?’ ಎಂದು ಮಾತು ತುಂಡರಿಸಿ, ಮಳೆಗೆ ಶಾಪ ಹಾಕುತ್ತ, ಪುಸ್ತಕಗಳನ್ನು ಎತ್ತಿಡುತ್ತ ಅಂಗಡಿ ಬಾಗಿಲು ಹಾಕುವುದಕ್ಕೆ ಸಿದ್ಧ ಮಾಡಿಕೊಳ್ಳತೊಡಗಿದರು. ಅವರ ಸ್ಥಿತಿ ನೋಡಿ ಮಾತು ಮುಂದುವರೆಸುವ ಮನಸ್ಸಾಗದೆ ಬಂದುಬಿಟ್ಟೆ.
ಮಾರನೆ ದಿನ, ನರಸಿಂಹಯ್ಯನವರ ಪತ್ತೇದಾರಿ ಪುಸ್ತಕಗಳನ್ನು ಹುಡುಕಿಕೊಂಡು ಬೇರೆ ಕಡೆ ಹೋಗಿದ್ದರಿಂದ, ಅಲ್ಲಿ ಸಿಕ್ಕಿದ್ದರಿಂದ ಮೆಹಬೂಬ್‌ ಪಾಷಾರ ಅಂಗಡಿ ಮರೆತೇಹೋಯಿತು.
ಮತ್ತೊಂದು ಸಲ ಬಳೇಪೇಟೆಗೆ ಹೋಗಬೇಕಾಗಿ ಬಂದಾಗ, ಹತ್ತಿರದಲ್ಲಿಯೇ ಇದ್ದ ಹಳೆ ಪುಸ್ತಕಗಳ ಅಂಗಡಿ ಮಾಲೀಕ ಮೆಹಬೂಬ್‌ ಪಾಷ ನೆನಪಾದರು. ಅಂಗಡಿ ಮುಂದೆ ಹೋಗಿ ನಿಂತೆ, ನೋಡುತ್ತಿದ್ದ ಹಾಗೆ, ‘ಅವತ್ತು ಕೇಳಿಕೊಂಡು ಹೋದೋರು ಬರ್ಲೇ ಇಲ್ಲ, ಆ ಕಡೆ  ಇಟ್ಟಿದೀನಲ್ಲ, ಅವೆಲ್ಲ ಪತ್ತೇದಾರಿ ಕಾದಂಬ್ರಿಗಳೆ, ನೋಡಿ’ ಎಂದರು.
ಅವರು ನನ್ನ ನೋಡಿದ್ದು ಒಂದೇ ಸಲ, ಆದರೂ ನನಗಾಗಿ ಕಾದಿದ್ದು, ಪುಸ್ತಕಗಳನ್ನು ಎತ್ತಿಟ್ಟಿದ್ದರು. ಆ ಕ್ಷಣಕ್ಕೆ ಅವರಲ್ಲಿ ವ್ಯವಹಾರಕ್ಕಿಂತ, ‘ನನ್ನ ಅಂಗಡೀಲಿ ಸಿಕ್ಕತ್ತೆ ಅಂತ ಹುಡುಕಿಕೊಂಡು ಬಂದಿದ್ದೀರ, ಕೊಡದೆ ಹೋದ್ರೆ ತಪ್ಪಾಗುತ್ತೆ’ ಎಂಬ ಭಾವವಿತ್ತು. ಅವರಲ್ಲಿದ್ದ ಪುಸ್ತಕ ಪ್ರೀತಿ ಎದ್ದು ಕಾಣುತ್ತಿತ್ತು.
ಅವರ ಮಾತನ್ನು ಅರ್ಧಕ್ಕೇ ತಡೆದು, ‘ನೋಡಿ ಇಲ್ಲಿ, ಎಷ್ಟು ಟೈಟ್ಲು ಬೇಕು?’ ಎಂದು ಎಚ್‌. ನರಸಿಂಹಯ್ಯನವರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನಕ್ಕೆ ಬಳಸಿದ್ದ ಫೋಟೋ ತೋರಿಸಿದೆ. ನರಸಿಂಹಯ್ಯನವರ ಮಗ ರವೀಂದ್ರರನ್ನು ಹುಡುಕಿಕೊಂಡು ಹೋಗಿ, ಅವರಲ್ಲಿದ್ದ ಪುಸ್ತಕಗಳನ್ನೆಲ್ಲ ಒಪ್ಪವಾಗಿ ಜೋಡಿಸಿಟ್ಟು ತೆಗೆದ ಫೋಟೋ ಅದಾಗಿತ್ತು.
ನರಸಿಂಹಯ್ಯನವರ ಫೋಟೋ, ಅವರ ಪುಸ್ತಕಗಳ ಕವರ್‌ ಪೇಜ್‌ ಚಿತ್ರಗಳನ್ನು ನೋಡುತ್ತಿದ್ದಂತೆ, ಮೆಹಬೂಬ್‌ ಜಮಾನಕ್ಕೆ ಜಾರಿದರು. ಮುಖ ಹೂವಿನಂತೆ ಅರಳಿತು, ‘ಚಿನ್ನ.. ಚಿನ್ನ.. ಅಣ್ಣ’ ಎಂದು ಒಂದೊಂದೇ ಕವರ್‌ ಪೇಜ್‌ಗಳನ್ನು ಕಣ್ತುಂಬಿಕೊಳ್ಳುತ್ತಿದ್ದವರು ಒಮ್ಮೆಲೆ ಖಿನ್ನರಾಗಿ, ‘ಹೋಯ್ತು, ಆ ಕಾಲ ಎಲ್ಲಾ ಹೋಯ್ತು ಅಣ್ಣ’ ಅಂದರು.
ಅವರು ಇದ್ದಕ್ಕಿದ್ದಂತೆ ಖುಷಿಯಾಗಿದ್ದು, ಖಿನ್ನರಾಗಿದ್ದು ನನಗೆ ಕುತೂಹಲ ಕೆರಳಿಸಿತು.
‘ಯಾಕೆ, ಏನಾಯ್ತು?’ ಅಂದೆ. ಅವರಿಗೆ ನಾನು ಪತ್ರಕರ್ತ ಅನ್ನುವುದು ಖಾತ್ರಿಯಾಗಿತ್ತು. ಮಾತಾಡಲಿಕ್ಕೆ ಕೊಂಚ ಹಿಂಜರಿಯತೊಡಗಿದರು. ‘ಅಯ್ಯೋ ಅದೆಲ್ಲ ಯಾಕೆ ಬಿಡಣ್ಣ’ ಅಂದರು. ನಡುವೆ ಬಂದ ಗಿರಾಕಿ ಅಟೆಂಡ್‌ ಮಾಡಿ, ಪುಸ್ತಕ ಕೊಟ್ಟು ಕಳುಹಿಸಿದರು. ನಂತರ ಪೋಟೋ ಇದ್ದ ಪತ್ರಿಕೆಯನ್ನು ಕೈಗೆತ್ತಿಕೊಂಡು ನರಸಿಂಹಯ್ಯನವರ ಫೋಟೋಗೆ ಒಂದು ಫ್ಲೈಯಿಂಗ್‌ ಕಿಸ್‌ ಕೊಟ್ಟ ಮೆಹಬೂಬ್‌, ‘ಹ್ಯಂಗ್‌ ಹೋಗ್ತಿತ್ತು ಗೊತ್ತಾ ಅಣ್ಣ, ಒಂದೊಂದ್‌ ಟೈಟ್ಲು ಒಂದೇ ದಿನಕ್ಕೆ ನೂರು ಇನ್ನೂರ್‌ ಮಾರಿದೀನಿ, ರಾಜ ರಾಜ ಥರ ಇದ್ದೇ ಆಗ, ನನ್‌ ಮನೆ ನಡ್ಸಿದ್ದೇ ಇವ್ರಣ್ಣ?’ ಎಂದರು.
ಎಲ್ಲಿಯ ಮೆಹಬೂಬ್‌ ಎಲ್ಲಿಯ ನರಸಿಂಹಯ್ಯ? ಯೋಚನೆ ತಲೆಯಲ್ಲಿ ತೇಲಿಹೋಯಿತು. ‘ಎಷ್ಟು ವರ್ಷಗಳ ಹಿಂದೆ ಅದು?’ ಅಂದೆ.
‘ಮೂವತ್ತು ವರ್ಷ... ಹೆಚ್ಚೂಕಡಿಮೆ ನಲವತ್ತು ವರ್ಷದಿಂದ ಇಲ್ಲಿರೋದು, ಚೆಡ್ಡಿ ಹಾಕೊಳ್ತಿದ್ದ ಕಾಲದಿಂದಾನೂ ಇಲ್ಲೇ. ನಾನು ಚಿಕ್ಕವನಾಗಿದ್ದಾಗ ನಮ್‌ ಫಾದರ್‌ ಹೋಗ್ಬಿಟ್ರು. ನಾನು ಇಸ್ಕೂಲ್ ಗಿಸ್ಕೂಲ್ ಕಲ್ತವನಲ್ಲ, ಸೈನ್‌ ಮಾಡೋಕು ಬರಲ್ಲ, ಎಂಟು ವರ್ಷದವನಿದ್ದಾಗ ಈ ಗಲ್ಲಿಗೆ ಬಿದ್ದೆ. ಯಾವ ಕೆಲಸ ಮಾಡಿಲ್ಲ ಹೇಳಿ?’ ಎಂದು ತಂದೆಯಿಲ್ಲದ ತಬ್ಬಲಿತನದ ಬಾಲ್ಯಕಾಲವನ್ನು ಮತ್ತು ಬವಣೆಯ ಬದುಕನ್ನು ಬಿಚ್ಚಿಡತೊಡಗಿದರು.
‘ವಲ್ಡ್ ನಲ್ಲಿ ನನ್ನಂಗೆ ಯಾರೂ ಕಷ್ಟ ಬಿದ್ದಿಲ್ಲ ಬುಡಣ್ಣ’ ಅಂದರು. ವಲ್ಡ್ ಅಂದರೆ ಜಗತ್ತು. ಅರ್ಥವಾಗಬೇಕಾದರೆ ಸ್ವಲ್ಪಸಮಯ ಹಿಡಿಯಿತು. ಚಿಕ್ಕಂದಿನಲ್ಲಿ ಕೈಗೆ ಸಿಕ್ಕಿದ ಕೂಲಿ ಕೆಲಸ ಮಾಡಿ, ಸಂಜೆಯ ಹೊತ್ತಿಗೆ ಜೇಬಿನಲ್ಲಿ ಚಿಲ್ಲರೆ ದುಡ್ಡು ಇದ್ದರೆ ಮನೆ, ಇಲ್ಲದಿದ್ದರೆ ಇಲ್ಲೇ ಯಾವುದಾದರೂ ಅಂಗಡಿ ಮುಂದೆ ಕಾರ್ಟೂನ್‌ ಬಾಕ್ಸ್ ಹಾಸಿಕೊಂಡು, ಅದನ್ನೇ ಹೊದ್ದುಕೊಂಡು ಮಲಗೋದು. ಅರ್ಧರಾತ್ರಿಯಲ್ಲಿ ಪೊಲೀಸ್ನೋರ ಕಾಟ, ಬೆತ್ತದ ರುಚಿ.
‘ಡಿಸೆಂಬರ್‌ ಚಳಿ ಗೊತ್ತಲ್ಲ... ನಡುಗುತ್ತ ಮಲಗಿದ್ದಾಗ ಪೊಲೀಸ್ನೋರು ಬಂದು ಬಾರಸೋರು. ಮೈ ಬಿಸಿಯಾಗೋದು. ಅದೂ ಒಂಥರಾ ಒಳ್ಳೇದೆ.. ಬೆಳಗ್ಗೆವರೆಗೆ ಚಳಿ ಕಾಣ್ತಿರಲಿಲ್ಲ. ಲಾಠಿ ಏಟೇ ಸ್ವೆಟರ್‌ ಥರ’ ಎಂದು ನಗಾಡತೊಡಗಿದರು.
‘ಹಾಗಿದ್ದವರು, ಇಂಥ ಅಂಗಡಿ ಮಾಡಿದ್ದು ಹೇಗೆ?’ ಎಂದೆ.
‘ಅಯ್ಯೋ ಅದು ಇನ್ನೊಂದು ದೊಡ್‌ ಸ್ಟೋರಿ. ಇವತ್ತಿಗೆ ಮುಗಿಯದಲ್ಲ. ಭಿಕಾರಿ ನನ್ಮಗನಿಗೆ ಬಳೇಪೇಟೆ ಗಲ್ಲಿನಲ್ಲಿ ಅಂಗಡಿ ಅಂದರೆ ಯಾರೂ ನಂಬಲ್ಲ ಅಣ್ಣ... ಕೂಲಿ ನಾಲಿ ಮಾಡ್ತಿದ್ನಲ್ಲ, ಅದರ ಜೊತೆಗೇನೆ ಸಂತೋಷ್‌, ನರ್ತಕಿ ಥೇಟರ್‌ ಮುಂದೆ ಬನೀನು ಮಾರಾಟ ಮಾಡ್ತಿದ್ದೆ, ಸ್ವಲ್ಪ ಸ್ವಲ್ಪ ಕಾಸು ಕೂಡಿಸಿಕೊಂಡು ಒಂದೊಂದೇ ಜೋಡಿಸಿಕೊಂಡು, ಈ ಗಲ್ಲಿನಲ್ಲಿ ಅಂಗಡಿ ಶುರು ಮಾಡದೆ. ಇವತ್ತು ಇಷ್ಟು ದೊಡ್ಡ ಅಂಗಡಿ ಆಗಿದೆ’ ಎಂದು ಗೋಡೆ ಕಡೆ ಒಂದು ಗತ್ತಿನ ನೋಟ ಬೀರಿದರು. ಆ ಗೋಡೆಯೇ ಅವರ ಪಾಲಿಗೆ ಭಾರೀ ಮಳಿಗೆ.
‘ಈ ಅಂಗಡಿಗೆ ದಿನಕ್ಕೆ ನೂರು ರೂಪಾಯಿ ಬಾಡಿಗೆ. ಅದಿದೆಯಲ್ಲ, ಆ ಗೂಡು, ಅದು ಕಾರ್ಪೊರೇಷನ್‌ದು, ಅದಕ್ಕೆ ದಿನಕ್ಕೆ ಐವತ್ತು ರೂಪಾಯ್‌ ಬಾಡಿಗೆ. ಎರಡೂ ಸೇರಿ ತಿಂಗಳಿಗೆ ನಾಲ್ಕೂವರೆ ಸಾವ್ರ ಬಾಡಿಗೆ ಕಟ್ಟಿ, ಮಿಕ್ಕದ್ದರಲ್ಲಿ ನಾನು ನನ್ನ ಸಂಸಾರ ಬದುಕ್ಬೇಕು ಅಣ್ಣ. ಇಲ್ಲೇ ಕಾಟನ್‌ ಪೇಟೆ ಮೂರನೇ ಕ್ರಾಸ್ ನಲ್ಲಿರುವ ತವಕ್ಕಲ್ ಮಸ್ತಾನ್ ದರ್ಗಾ ಹತ್ರ ಮನೆ, ಎರಡು ಮಕಕ್ಳಿವೆ, ಓದ್ತಾಯಿದಾರೆ. ಶೀಟ್‌ ಮನೆ, ಮೂರ್‌ ಸಾವ್ರ ಬಾಡಿಗೆ..  ಅದರ್ದು ಇದರಿಂದ್ಲೇ ನಡೀಬೇಕು...
‘ಇವತ್ತು ಈ ಅಂಗಡಿ ಉಳಸ್ಕೋಬೇಕು ಅಂತಂದ್ರೆ ಏನೆಲ್ಲಾ ಕಷ್ಟಪಟ್ಟಿದೀನಿ ಗೊತ್ತಾ ಸಾರ್‌? ಒಂದ್‌ ಸಲ ಕಾರ್ಪೋರೇಷನ್ನೋರು ಲಾರಿ ತಂದು ನನ್ನ ಪುಸ್ತಕಾನೆಲ್ಲ ತುಂಬಿಕೊಂಡು ಹೋಗುಬುಟ್ರು... ಅವರ ಕಾಲಿಡಕಂಡೆ, ಕೈ ಮುಗಿದೆ, ಬೀದಿಲಿ ಬಿದ್ದು ಗೋಳಾಡುಬುಟ್ಟೆ... ಯಾರು ಕೇಳತರೆ ಬಡವರ ಗೋಳು. ಒಳ್ಳೇರ್‌ಗೆ ಕಾಲ ಇಲ್ಲ, ಆದರೆ ಪರಮಾತ್ಮನ ಹತ್ರ ಐತೆ, ಜನರತ್ರ ಇಲ್ಲ...
‘ಎಷ್ಟೋ ವರ್ಷಗಳಿಂದ ಕೂಲಿ ನಾಲಿ ಮಾಡಿ ಜೋಡಿಸಿದ ಅಂಗಡೀನಾ ಒಂದೇ ಕ್ಷಣದಲ್ಲಿ ಇಲ್ಲ ಅನ್ನಿಸಬುಟ್ರು...
ಏನೋ ನೆನಪು ಮಾಡಿಕೊಂಡಂತೆ...
`ವಿಜಯ ಸಾಸನೂರ್‌ ಹೆಸ್ರು ಕೇಳಿದೀರ.. ಒಳ್ಳೊಳ್ಳೆ ಪುಸ್ತಕ ಬರೆದವ್ರೆ. ದೇವ್ರು ಅಣ್ಣ ಅವ್ರು, ಅವ್ರು ನನ್‌ ಬುಕ್‌ಸ್ಟಾಲ್ಗೆ ಆಗಾಗ ಬರೋರು, ಆಗ ಪರಿಚಯ ಆಗಿತ್ತು. ಅವರತ್ರ ಹೋದೆ, ಆಗವರು ದೊಡ್ಡ ಪೊಲೀಸ್ ಆಫೀಸರ್ ಆಗಿದ್ರು, ಅವರು ಕಾರ್ಪೋರೇಷನ್ನೋರಿಗೆ ಹೇಳಿ, ನನ್ನ ಮೇಲೆ ಕೈ ಹಾಕ್ದಂಗೆ ಆಯ್ತು ಅಣ್ಣ...
‘ಕಾರ್ಪೋರೇಷನ್ದು ಏನೋ ಆಯ್ತು, ಪೊಲೀಸ್ನೋರದು ಶುರುವಾಯ್ತು, ದಿನಾ ಕಾಟ ಕೊಡೋರು, ಹೊಡೆಯೋರು, ಒಳಕ್ಕಾಗ್ತೀನಿ ಅನ್ನೋರು, ಅಂಗಡಿ ಎತ್ತು ಅನ್ನೋರು. ಅದೇನ್‌ ಕಷ್ಟ ಬಿದ್ದಿದೀನೋ, ಆ ದೇವರ್ಗೇ ಗೊತ್ತು. ನನ್ನ ಅದೃಷ್ಟಕ್ಕೆ ಈಗ ಅದೂ ಇಲ್ಲ. ಸದ್ಯಕ್ಕೆ ಯಾವ ಕಾಟವೂ ಇಲ್ಲ, ಆದ್ರೆ ವ್ಯಾಪಾರಾನೆ ಇಲ್ಲ.
‘ನಾನು ಈ ಪುಸ್ತಕದಂಗಡಿ ಶುರು ಮಾಡ್ದಾಗ ಚಂದಮಾಮ 75 ಪೈಸೆ ಇತ್ತು. ಫ್ಯಾಂಟಮ್ ಕಾಮಿಕ್ಸ್ ಒಂದು ರೂಪಾಯಿ. ರನ್‌ ಅಂಡ್‌ ಮಾರ್ಟಿನ್‌ ಡಿಕ್ಷನರಿ- ಒಳ್ಳೆ ಟ್ರೈನ್ ಥರ ಹೋಗದು. ಎಷ್ಟು ಐದು ರೂಪಾಯಿ...’  ಎಂದು ಹುಬ್ಬು ಹಾರಿಸಿದರು.
‘ಈಗ ಟಿವಿ ಬಂದು ಎಲ್ಲ ಹೋಯ್ತಣ್ಣ, ವ್ಯಾಪಾರಾನೇ ಇಲ್ಲ. ಪುಸ್ತಕ ಓದೋರು ಹೋದ್ರು... ಒಳ್ಳೆ ವ್ಯಾಪಾರ ಅಂತ ನೋಡಿ ಐದು ವರ್ಷ ಆಯ್ತು. ದಿನಕ್ಕೆ ಐನೂರು ಆಗದು ಕಷ್ಟ ಐತೆ. ಚಿಕ್ಕಂದಿನಿಂದ ಇದೇ ಕೆಲ್ಸ ಮಾಡಕೊಂಡ್ ಬಂದಿದೀನಿ, ಬಿಡಕ್ಕಾಗ್ತಿಲ್ಲ, ಬೇರೇದು ಗೊತ್ತಿಲ್ಲ. ಮದುವೆ, ಹಬ್ಬ, ಸತ್ರೆ, ಕೆಟ್ರೆ, ಮಳೆ ಹಿಡಕೊಂಡ್ರೆ, ಹೆಲ್ತ್ ಕೈ ಕೊಟ್ರೆ ಬಾಗಲ್ ಹಾಕ್ಬೇಕು, ಒಬ್ನೆ ಕಷ್ಟ, ಹ್ಯೆಂಗೋ ನಡೀತಿದೆ?
‘ನನ್‌ ಮಕ್ಳಿಗೆ ನನ್‌ ಲೈನ್‌ ಬೇಡ ಅಣ್ಣ, ಈ ಮಳೆ ಗಾಳಿ ಬಿಸಿಲ್ನಲ್ಲಿ ಯಾರ್‌ ಸಾಯ್ತರೆ, ಚೆನ್ನಾಗಿ ಓದಿ, ಏನಾದ್ರು ಒಳ್ಳೆ ಕೆಲ್ಸಕ್ಕೆ ಹೋಗ್ಲಿ, ಕಂಪ್ಯೂಟರ್‌ ಗಿಂಪ್ಯೂಟರ್‌ ಏನಾದ್ರು ಮಾಡ್ಲಿ, ಅದಕ್ಕೆ ಅವ್ರಿಗೆ ಒಳ್ಳೆ ಸ್ಕೂಲ್ ನಲ್ಲಿ ಓದಿಸ್ತಿದೀನಿ, ನನ್ಗೇ ಇದು ಕೊನೆ ಆಗ್ಲಿ, ಸಾಕಾಗಿ ಹೋಗಿದೆ...’
ನಲವತ್ತು ವರ್ಷಗಳ ಕಾಲ ನಿರಂತರವಾಗಿ ಒಂದೇ ಜಾಗದಲ್ಲಿ ನಿಂತು, ಒಂದೇ ವ್ಯಾಪಾರ ಮಾಡಿದರೂ, ಅವರ ಆರ್ಥಿಕ ಸ್ಥಿತಿಯೇನೂ ಬದಲಾಗಿರಲಿಲ್ಲ. ಕೊನೆಪಕ್ಷ ನೆಮ್ಮದಿಯಾದರೂ ಸಿಕ್ಕಿದೆಯಾ ಎಂದರೆ, ಸಂಸಾರ ಸಾಗುತ್ತಿದೆ, ಅಷ್ಟಕ್ಕೇ ಸಂತೃಪ್ತ. ಆ ಮೂಡಿನಿಂದ ಅವರನ್ನು ಹೊರ ತರಲು ‘ಯಾವ ಪುಸ್ತಕ ಈಗ ಜಾಸ್ತಿ ಹೋಗ್ತಿದೆ?’ ಎಂದೆ.
‘ಚೇತನ್‌ ಭಗತ್‌, ಅದು ಬಿಟ್ರೆ ರವಿ ಬೆಳಗೆರೆ, ಯಂಡಮೂರಿ, ಪಾಲ್‌ ಕ್ಹೋಲೋ, ರಾಬರ್ಟ್‌ ಲಡ್ಲುಮ್‌, ಚೇಸ್‌, ಸಿಡ್ನಿ ಸೆಲ್ಡಾನ್, ಅಲಿಸ್ಟರ್‌ ಮ್ಯಾಕ್ಲೀನ್, ಹ್ಯಾರಿ ಪಾಟರ್‌, ಪಿಜಿ ವುಡೋಸ್‌...  ಪುಸ್ತಕದ ಲೋಕಕ್ಕೆ ಬರಬ್ಯಾಡ, ಬೇರೆ ಕೇಳಬ್ಯಾಡ.’ ಖಡಕ್‌ ಮಾತಿಗೆ, ನನ್ನ ಮಾತೇ ನಿಂತುಹೋಯಿತು.
ಇಂಗ್ಲಿಷ್‌, ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಿ, ಉರ್ದು... ಇವಿಷ್ಟೂ ಭಾಷೆಗಳ, ಸುಮಾರು ನಲವತ್ತು ವರ್ಷಗಳಿಂದ ಇಲ್ಲಿಯವರೆಗೆ, ಹಿಂದೆ ಬರೆದಿರುವ, ಈಗ ಬರೆಯುತ್ತಿರುವ, ಜನಪ್ರಿಯರಾಗಿರುವ, ಕಡ್ಲೇಪುರಿಯಂತೆ ಖರ್ಚಾಗುವ, ಖರ್ಚೇ ಆಗದೆ ಕೊಳೆಯುವ... ಇಡೀ ಜಗತ್ತಿನ ಅಷ್ಟೂ ಲೇಖಕರ ಹೆಸರುಗಳು, ಸಾವಿರಾರು ಕೃತಿಗಳ ಟೈಟಲ್‌ಗಳು, ಲೆಕ್ಕಕ್ಕಿಡಲಾಗದಷ್ಟು ಮ್ಯಾಗಜಿನ್ ಗಳು ಮೆಹಬೂಬ್‌ ಪಾಷಾರ ನಾಲಗೆಯ ಮೇಲಿವೆ. ತಲೆ ತುಂಬಿಕೊಂಡಿವೆ. ಜೀವಂತ ಲೈಬ್ರರಿಯೇ ಅವರಾಗಿದ್ದಾರೆ. ಬರಹಲೋಕವನ್ನೇ ಬದುಕಾಗಿಸಿಕೊಂಡಿದ್ದಾರೆ. ಆದರೆ, ತಮ್ಮ ಬದುಕನ್ನು ಆ ಪುಸ್ತಕದಂಗಡಿಯಲ್ಲಿಯೇ ಕಳೆದರೂ ಮೆಹಬೂಬ್‌ರ ಬದುಕಿನ ಬವಣೆ ಮಾತ್ರ ನೀಗಿಲ್ಲ. ಕುಟುಂಬದ ಸ್ಥಿತಿಯೂ ಸುಧಾರಿಸಿಲ್ಲ. ನೆಮ್ಮದಿಯನ್ನಂತೂ ಕಂಡೇ ಇಲ್ಲ. ಪ್ರತಿನಿತ್ಯವೂ ಹೋರಾಟ. ಅದೇ ಜಂಜಾಟ.
ಆ ಕ್ಷಣಕ್ಕೆ, ನನಗೆ ಯಾಕೋ ಎರಡನೇ ಕ್ಲಾಸ್ ಓದಿ ಐನೂರೈವತ್ತು ಕನ್ನಡ ಪತ್ತೇದಾರಿ ಕಾದಂಬರಿಗಳನ್ನು ಬರೆದ ಎನ್‌. ನರಸಿಂಹಯ್ಯನವರು ನೆನಪಾದರು. ನರಸಿಂಹಯ್ಯ ಮತ್ತು ಮೆಹಬೂಬ್‌ ಪಾಷ ಇಬ್ಬರೂ ಬಡವರು, ಹೆಚ್ಚಿಗೆ ಓದದ ಅನಕ್ಷರಸ್ಥರು, ಸ್ವಾವಲಂಬಿ ಬದುಕಿನ ಶ್ರಮಜೀವಿಗಳು. ಹೊಟ್ಟೆಪಾಡಿಗಾಗಿ ಒಬ್ಬರು ಪುಸ್ತಕ ಬರೆದರು, ಇನ್ನೊಬ್ಬರು ಪುಸ್ತಕ ಮಾರಿದರು.
ಇಬ್ಬರೂ ಅವರಿಗೇ ಗೊತ್ತಿಲ್ಲದಂತೆ ಪುಸ್ತಕ ಸಂಸ್ಕೃತಿಯನ್ನು ಪೊರೆದು ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ್ದಾರೆ. ಅಕ್ಷರಸ್ಥರ ಓದಿನ ಹಸಿವನ್ನು ಇಂಗಿಸಿದ್ದಾರೆ, ಅರಿವಿನ ಲೋಕವನ್ನು ವಿಸ್ತರಿಸಿದ್ದಾರೆ. ಹಾಗೆಯೇ ಮರೆಯಲ್ಲಿದ್ದು ಮರೆತುಹೋಗುವ ಮನುಷ್ಯರ ಸಾಲಿಗೂ ಸೇರಿಹೋಗಿದ್ದಾರೆ.

ಮೆಹಬೂಬ್‌ ಪಾಷ


Thursday, August 14, 2014

ಜನಪದ ಕೋಗಿಲೆ ದರೋಜಿ ಈರಮ್ಮ


ಎಲೆ ಅಡಿಕೆ ಜಿಗಿತದಿಂದ ಬಂದ ಗಂಟಲು ಬೇನೆಗೆ ತುತ್ತಾಗಿದ್ದ, ಕಳೆದ ಹತ್ತು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಜನಪದ ಕಥನ ಕಾವ್ಯಗಳ ಅಪ್ರತಿಮ ಗಾಯಕಿ ಬುರ್ರಕಥಾ ದರೋಜಿ ಈರಮ್ಮ (83), ಮಂಗಳವಾರ (12.8.14) ಮಧ್ಯಾಹ್ನ12.30 ರ ಸುಮಾರಿನಲ್ಲಿ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ದರೋಜಿ ಎಂಬ ಪುಟ್ಟ ಗ್ರಾಮದ ಈರಮ್ಮ, ಅಲೆಮಾರಿ ಸಮುದಾಯದಲ್ಲಿ ಹುಟ್ಟಿದ ಅಪರೂಪದ ಅಪ್ರತಿಮ ಕಲಾವಿದೆ. ತಳ ಸಮುದಾಯದಲ್ಲಿ ಹುಟ್ಟಿದ, ಕಡು ಕಷ್ಟದಲ್ಲಿ ಬೆಳೆದ, ಅಕ್ಷರಲೋಕವನ್ನೇ ಪ್ರವೇಶಿಸದ ಈರಮ್ಮ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಳಿಲ್ಲದೆ ಜಾನಪದ ಕಾವ್ಯ ಸಂಪತ್ತನ್ನು ಕರುಳಿಗಿಳಿಸಿಕೊಂಡು ಉಳಿಸಿ ಬೆಳಸಿದ ಮಹಾನ್‌ ಪ್ರತಿಭಾವಂತೆ.
ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ ಬಹಳ ಜನಪ್ರಿಯವಾಗಿದ್ದ ತೆಲುಗು-ಕನ್ನಡ ಕಥನ ಕಾವ್ಯಗಳನ್ನು ಹಾಡುಗಾರಿಕೆಯ ಮೂಲಕ ಜನರ ಎದೆಗೆ ದಾಟಿಸುತ್ತಿದ್ದ, ಆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದ ಈರಮ್ಮ, ಜನಪದ ಕ್ಷೇತ್ರಕ್ಕೆ ಬುರ್ರಕಥಾ ಪ್ರಕಾರವನ್ನು ಕೊಡುಗೆಯಾಗಿ ಕೊಟ್ಟ ವಿಶಿಷ್ಟ ಕಥನಗಾರ್ತಿ.  
ಸಾಮಾನ್ಯವಾಗಿ ಹೈದರಾಬಾದ್‌-ಕರ್ನಾಟಕದ ಜನರಾಡುವ ಭಾಷೆ ಉರ್ದು, ಇಲ್ಲವೇ ಕನ್ನಡ. ಆದರೆ ದರೋಜಿ ಈರಮ್ಮ ತೆಲುಗು ಮತ್ತು ಕನ್ನಡದಲ್ಲಿ, ತೆಲುಗಿನ ಜನಪ್ರಿಯ ಕಥನ ಕಾವ್ಯಗಳಾದ ‘ಬಾಲ ನಾಗಮ್ಮ’, ‘ನ್ಯಾಸಿ ಚಿನ್ನಮ್ಮ’, ‘ಎಲ್ಲಮ್ಮನ ಕತೆ’, ‘ಗಂಗಿ ಗೌರಿ’, ‘ಕುಮಾರ ರಾಮ’, ‘ಕೃಷ್ಣಗೊಲ್ಲ’, ‘ಬಬ್ಬುಲಿ ನಾಗಿರೆಡ್ಡಿ’, ‘ಆದೋನಿ ಲಕ್ಷ್ಮಮ್ಮ', ‘ಬಲಿ ಚಕ್ರವರ್ತಿ’, ‘ಮಾರವಾಡಿ ಸೇಠಿ’, ‘ಜೈಸಿಂಗ್‌ ರಾಜ’ ಮತ್ತು ‘ಮಹಮ್ಮದ್‌ ಖಾನ್‌ ಕಾವ್ಯ’ ... ಹೀಗೆ ಸುಮಾರು ಹನ್ನೊಂದು ಮಹಾಕಾವ್ಯಗಳನ್ನು ಹಾಡುತ್ತಿದ್ದರು. ಪ್ರತಿ ಸಾಲೂ ಈಕೆಗೆ ಬಾಯಿಪಾಠವಾಗಿತ್ತು. ಜನಪದ ಸಂಸ್ಕೃತಿ ಸಾರುವ ಸುಮಾರು ಏಳು ಸಾವಿರ ಪುಟಗಳು, ಎರಡು ಲಕ್ಷ ಸಾಲುಗಳು ದರೋಜಿ ಈರಮ್ಮ ಅವರ ನಾಲಗೆಯ ತುದಿಯಲ್ಲಿ ನಲಿದಾಡುತ್ತಿದ್ದವು.
ಜನಪದ ಕಲೆ, ಸಾಹಿತ್ಯ ಬೆಳವಣಿಗೆಗೆ ಅಕ್ಷರ ಜ್ಞಾನಕಿಂತ ಮೌಖಿಕ ಪರಂಪರೆಯ ಜ್ಞಾನಶಕ್ತಿಯೇ ಮುಖ್ಯ ಎನ್ನುವುದನ್ನು ದರೋಜಿ ಈರಮ್ಮ ಸಾರಿದ್ದರು, ಸಾಬೀತುಪಡಿಸಿದ್ದರು. ನಡೆದಾಡುವ ಜನಪದ ಜಗತ್ತೇ ಅವರಾಗಿದ್ದರು.
ಈರಮ್ಮನವರಿಗೆ ವಯಸ್ಸಾಗಿತ್ತು, ದೇಹ ದಣಿದಿತ್ತು. ಆದರೆ ಹಾಡುವ ಕೋಗಿಲೆಯ ಮನಸ್ಸು ಮಾತ್ರ ಚಿರಯೌವನದಿಂದ ಪುಟಿದೇಳುತ್ತಿತ್ತು. ಸುಮ್ಮನೆ ಕೂರುವ ಜಾಯಮಾನ ಅವರದಲ್ಲವಾಗಿತ್ತು. ತಮ್ಮ ಒಡಲಲ್ಲಿ ಅಡಗಿರುವ ಅಗಾಧ ಜನಪದ ಸಂಪತ್ತನ್ನು ಮುಂದಿನ ಪೀಳಿಗೆಗೂ ಹಂಚುವ ಅವಸರ ಅವರಲ್ಲಿತ್ತು. ಆ ಕಾರಣದಿಂದಾಗಿಯೇ ತಮ್ಮ ಹಳ್ಳಿಯ ಮನೆಯಲ್ಲಿ ಹಳ್ಳಿಯ ಮಕ್ಕಳಿಗಾಗಿಯೇ ಜನಪದ ಹಾಡು, ಕಲೆಯ ಕುರಿತು ಪ್ರಾಯೋಗಿಕ ಪಾಠಶಾಲೆ ಆರಂಭಿಸಿದ್ದರು. ತಮಗೆ ಒಲಿದಿದ್ದ ಹಾಡುಗಾರಿಕೆಯನ್ನು ಹಂಚುತ್ತಿದ್ದರು. ಅದನ್ನು ಮುಗ್ಧ ಮಕ್ಕಳಲ್ಲಿ ಕಾಣುವ ಮೂಲಕ ಆನಂದ ಅನುಭವಿಸುತ್ತಿದ್ದರು.
ಯಾರಾದರೂ, ಈ ವಯಸ್ಸಿನಲ್ಲಿ ಇದೆಲ್ಲ ಯಾಕಜ್ಜಿ ಎಂದು ಪ್ರಶ್ನಿಸಿದರೆ, ‘‘ಅಜ್ಜಿ ನೀ ಹಾಡೋದನ್ನ ಇಂದಿನ ಪೀಳಿಗೆಗೆ ಕಲಿಸಬೇಕು ಅಂತ ದೊಡ್ಡ ದೊಡ್ಡ ಸಭೆ, ಸಮಾರಂಭದಲ್ಲಿ ಎಲ್ಲರೂ ಹೇಳ್ತಾರಪ್ಪ. ಅದಕ್ಕ ನಾ ದಿನಾ ಸಂಜಿ ಮುಂದ ಬುರ್ರಕಥಾ ಹಾಡಿ ತೋರ್ಸಿತೀನಿ. ತಂಬೂರಿ, ಡಿಮ್ಕಿ, ಗಗ್ಗರಿ ಬಾರಿಸುವುದನ್ನು ಹಳ್ಳಿ ಮಕಕ್ಳಿಗೆ ಕಲಿಸಿಕೊಡ್ತೀನಿ. ಎಂಟು ವರ್ಷಗಳಿಂದ ಪುಕ್ಕಟೆಯಾಗಿ ಪಾಠ ಹೇಳುತ್ತ, ಅದರಲ್ಲೇ ಖುಷಿ ಕಾಣಾಕ ಹತ್ತೀನಿ. ನನ್ನಂಗ ಚಲೋ ಹಾಡೋರನ್ನ ಕಣ್ಣಾರೆ ನೋಡಬೇಕು ಅಂಬ ಆಸೆ ನಂದು. ಇಳಿ ವಯಸ್ಸಿನಾಗೂ ಹಾಡಾಕ ನನಗ ಯಾವ ತೊಂದ್ರಿ ಇಲ್ಲ’’ ಎಂದು ಬೊಚ್ಚು ಬಾಯಿ ತುಂಬ ನಗುತ್ತಿದ್ದರು.
ಇಂತಹ ದರೋಜಿ ಈರಮ್ಮನವರ ಹಳ್ಳಿಯ ಸಂಗೀತ ಪಾಠಶಾಲೆಯಲ್ಲಿ ಸದ್ಯ ಹದಿನೈದು ಮಕ್ಕಳು ಈರಮ್ಮನವರ ಜನಪದ ಹಾಡಿನ ಮೋಡಿಗೆ ಒಳಗಾಗಿ, ಜನಪದ ಜಗತ್ತನ್ನು ತಮ್ಮ ಅಂತರಂಗಕ್ಕೆ ಇಳಿಸಿಕೊಳ್ಳುತ್ತಿದ್ದಾರೆ.
ಜನಪದ ಕಲಾವಿದೆ ದರೋಜಿ ಈರಮ್ಮ ಹಾಡಿದ ಕಾವ್ಯಗಳಲ್ಲಿ ಅರ್ಧದಷ್ಟು ಭಾಗವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಸಂಗ್ರಹಿಸಿ, ಪುಸ್ತಕರೂಪದಲ್ಲಿ ಪ್ರಕಟಿಸಿದೆ. ಉಳಿದ ಅರ್ಧಭಾಗವನ್ನು ಸಂಗ್ರಹಿಸಲಾಗುತ್ತಿದೆ.
ಅಜ್ಜಿಯ ಅರವತ್ತು ವರ್ಷಗಳ ಅವಿಶ್ರಾಂತ ಹಾಡುಗಾರಿಕೆಗೆ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ದಕ್ಕಿವೆ. ಅಜ್ಜಿಯ ಅಗಾಧ ಪ್ರೌಢಿಮೆ ಕಂಡು 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, 2003ರಲ್ಲಿ ಅಂಬೇಡ್ಕರ್ ಪ್ರಶಸ್ತಿ ಹಾಗೂ ಜನಪದಶ್ರೀ ಪ್ರಶಸ್ತಿ ಲಭಿಸಿವೆ. ಹಂಪಿ ಕನ್ನಡ ವಿವಿ ದರೋಜಿ ಈರಮ್ಮ ಅವರ ಜನಪದ ಕಲೆಗೆ 1999ರಲ್ಲಿ ‘ನಾಡೋಜ’ ಕಿರೀಟ ತೊಡಿಸಿದೆ. ರಾಜ್ಯ ಸೇರಿ ನೆರೆಯ ಆಂಧ್ರಪ್ರದೇಶದ ನಾನಾ ಸಂಘ ಸಂಸ್ಥೆಗಳು ಅವರನ್ನು ಹುಡುಕಿಕೊಂಡು ಬಂದು ಗೌರವಿಸಿವೆ.
ಆದರೆ ಅಜ್ಜಿಗೆ ಮುಂದಿನ ಪೀಳಿಗೆಗೂ ಜನಪದ ಕಲೆ ಜೀವಂತವಾಗಿರಬೇಕು ಎಂಬ ಉತ್ಕಟ ಇಚ್ಛೆಯೇ ಹೊರತು, ಆ ಯಾವ ಪ್ರಶಸ್ತಿ, ಪುರಸ್ಕಾರಗಳ ಹಂಗಿಲ್ಲ. ಹಳ್ಳಿಯ ಮಕ್ಕಳಿಗಾಗಿ ಸಂಗೀತ ಪಾಠಶಾಲೆ ಆರಂಭಿಸಿರುವ ಈರಮ್ಮ, ಕೇಂದ್ರ ಸರಕಾರ ಕೊಡುವ ಕಲಾವಿದರ ಮಾಸಾಶನವನ್ನೆಲ್ಲ ಅದಕ್ಕೇ ವಿನಿಯೋಗಿಸುವ ಉದಾರಿ. ಇಂತಹ ಮಹಾನ್‌ ಕಲಾವಿದೆಯನ್ನು ಕಳೆದುಕೊಂಡು ಜನಪದ ಜಗತ್ತು, ನಾಡು ನಿಜಕ್ಕೂ ಬಡಪಾಯಿ.

Monday, July 28, 2014

ಕನ್ನಡದ ಅಪ್ರತಿಮ ಕಲಾವಿದ ನರಸಿಂಹರಾಜು

ನರಸಿಂಹರಾಜು
ಬಾಬು ರಾಜೇಂದ್ರಪ್ರಸಾದ್ ವೆಂಕಟಗಿರಿಜಾರಮಣ ತಿಪಟೂರು ಎಂದು ರೈಲಿನ ಬೋಗಿಗೆ ಅಂಟಿಸಿರುವ ಪ್ರಯಾಣಿಕರ ಪಟ್ಟಿಯಲ್ಲಿ ಹೆಸರನ್ನು ಓದುವ, ತರಾತುರಿಯಲ್ಲಿ ಹದಿನೇಳು ಲಗೇಜುಗಳನ್ನಿಟ್ಟುಕೊಂಡು ರೈಲು ಹತ್ತುವ, ಲಗೇಜುಗಳು ಸರಿಯಾಗಿವೆಯೇ ಎಂದು ಲೆಕ್ಕಹಾಕಲು ಒದ್ದಾಡುವ, ಲೆಕ್ಕ ಹಾಕಿದ ಮೇಲೆ ಕೂಲಿ ಕೊಡಲು ಕೂಲಿಯ ಆಳಿನೊಂದಿಗೆ ಚೌಕಾಸಿಗೆ ಬೀಳುವ, ಎದುರಿದ್ದವರು ಹೇಳಿದ ಮೇಲೂ ಮೊದಲು ಕೊಟ್ಟ ರೂಪಾಯಿಯನ್ನೇ ಕೊಡಲು ಹೋಗುವ, ಕೂಲಿ ಹೊಡೆಯಲು ಕೈ ಎತ್ತಿದಾಗ ಬೆದರಿ ಮುಖ ಮುಚ್ಚಿಕೊಳ್ಳುವ ದೃಶ್ಯ- ೧೯೬೮ ರಲ್ಲಿ ತೆರೆ ಕಂಡಬೆಂಗಳೂರು ಮೈಲ್ಎಂಬ ಆಕ್ಷನ್ ಪ್ಲಸ್ ಸಸ್ಪೆನ್ಸ್ ಚಿತ್ರದ್ದು.
ಸಾಮಾನ್ಯವಾಗಿ ಚಿತ್ರದ ಆರಂಭಕ್ಕೆ ನಾಯಕನಟನ ಅದ್ದೂರಿ ಎಂಟ್ರಿ ಇರುತ್ತದೆ. ಅದೂ ವಿಭಿನ್ನ ಶೈಲಿಯಲ್ಲಿ. ಆದರೆ ಇಲ್ಲಿ, ಚಿತ್ರದಲ್ಲಿ ನರಸಿಂಹರಾಜು ಅವರದೇ ಚಿತ್ರದ ಮೊದಲ ದೃಶ್ಯ. ಚಿತ್ರದಲ್ಲಿ ನರಸಿಂಹರಾಜು ತಿಪಟೂರಿನ ಶ್ರೀಮಂತ ಕುಟುಂಬಕ್ಕೆ ಸೇರಿದ ಯುವಕ. ಐವರು ಅಣ್ಣತಮ್ಮಂದಿರ ಮುದ್ದಿನ ಒಬ್ಬನೇ ಮಗ- ಬಾಬು ರಾಜೇಂದ್ರಪ್ರಸಾದ್ ವೆಂಕಟಗಿರಿಜಾರಮಣ. ರೈಲಿಗೆ ಹತ್ತಿದಾಕ್ಷಣ ಎದುರಾಗುವ ನಗರದ ಆಧುನಿಕ ವೈಯಾರದ ಯುವತಿ. ಆಕೆಯೊಂದಿಗೆ ಸಲುಗೆಯಿಂದ ಮಾತನಾಡಬೇಕೆಂಬ ಆಸೆ ಜೊತೆಗೆ ಅಳುಕು. ಅಂತಹ ಸ್ಥಿತಿಯಲ್ಲಿಯೇ ಆಕೆಯೊಂದಿಗೆ ಮಾತಿಗಿಳಿದು, ಆಕೆ ಬೀಸುವ ಮೋಹದ ಬಲೆಗೆ ಬಿದ್ದು ಅನಾಯಾಸವಾಗಿ ಅನಾಹುತ ಆಹ್ವಾನಿಸಿಕೊಳ್ಳುವ, ಆತಂಕದಲ್ಲಿ ಒದ್ದಾಡುವ ಪಾತ್ರ. ಹಾಗೆ ಒದ್ದಾಡುತ್ತಲೇ ಚಿತ್ರದ ಬಹುಮುಖ್ಯ ತಿರುವಿಗೆ ಕಾರಣವಾಗುವ ಪಾತ್ರ. ಚಿತ್ರದ ಆರಂಭದ ದೃಶ್ಯದಲ್ಲಿಯೇ ನರಸಿಂಹರಾಜು, ತಮ್ಮ ಸಹಜಾಭಿನಯದಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸುತ್ತಾರೆ.
ಇಂತಹ ಒಂದಲ್ಲ, ನೂರಾರು ಚಿತ್ರಗಳಲ್ಲಿ, ಸಾವಿರಾರು ಪಾತ್ರಗಳಲ್ಲಿ ಸರಿಸುಮಾರು ೨೫ ವರ್ಷಗಳ ಕಾಲ ಕನ್ನಡಿಗರನ್ನು ರಂಜಿಸಿದ ನರಸಿಂಹರಾಜು, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಇವರು ಮೂಲತಃ ತಿಪಟೂರಿನವರು, ಮಧ್ಯಮವರ್ಗಕ್ಕೆ ಸೇರಿದ ಬಡವರು. ಬಾಲ್ಯದಲ್ಲಿ ಮಕ್ಕಳು ಸಾಮಾನ್ಯವಾಗಿ ಅಕ್ಷರಾಭ್ಯಾಸ, ಕಲಿಕೆಗಾಗಿ ಶಾಲೆ ಸೇರುವುದು ಸಹಜ. ಆದರೆ ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿಗೆ ಸೇರಿದ್ದು ರಂಗಭೂಮಿಯನ್ನು. ಅದೇ ಅವರಿಗೆ ಆಟ-ಪಾಠ ಕಲಿಸಿತು. ಬದುಕನ್ನು ಬಣ್ಣಿಸಿತು. ಬಣ್ಣದ ಬದುಕಿನ ಬೆರಗಿಗೆ ಬಿದ್ದ ನರಸಿಂಹರಾಜು ರಂಗಭೂಮಿಯನ್ನು ಮೈ ಮನಗಳಲ್ಲಿ ಅರಗಿಸಿಕೊಂಡರು. ಅದರ ಸಮೃದ್ಧತೆ, ಸೊಗಡು, ಸೊಗಸನ್ನು ಅಭಿನಯದ ಮೂಲಕ ಅರಳಿಸಿದರು. ನಂತರ ಚಿತ್ರರಂಗಕ್ಕೆ ಧುಮುಕಿ, ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಲೇ ಕನ್ನಡ ಚಿತ್ರರಂಗದ ಬುಡ ಭದ್ರ ಮಾಡಿದರು. ಚಿತ್ರರಂಗವನ್ನು ಸದೃಢವಾಗಿ ಬೆಳೆಸಿದರು, ಬೆಳಗಿಸಿದರು. ಸಾಂಸ್ಕೃತಿಕ ರಂಗವನ್ನು ಶ್ರೀಮಂತಗೊಳಿಸಿದರು. ಮಹಾನುಭಾವರ ಪಾಲಿಗೆ ಸೇರಿಹೋದರು. ಅಳಿದ ಮೇಲೂ ಕನ್ನಡಿಗರ ಮನೆ-ಮನಗಳಲ್ಲಿ ಉಳಿದ, ಹೊಳೆದ ಅಪರೂಪದ ತಾರೆಯಾದರು
ಹುಟ್ಟಿದ್ದು ಬಡತನದಲ್ಲಿ, ಕಲಿತದ್ದು ಕಂಪನಿ ನಾಟಕದಲ್ಲಿ
ನರಸಿಂಹರಾಜುರವರ ತಾಯಿ ವೆಂಕಟಲಕ್ಷ್ಮಯ್ಯ, ತಂದೆ ರಾಮರಾಜು. ತಂದೆ ತಿಪಟೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಕೆಲಸದಲ್ಲಿದ್ದರು. ಊರಿನ ಕೋಟೆಯಲ್ಲಿ, ಚಿಕ್ಕ ಮನೆಯಲ್ಲಿ ವಾಸವಾಗಿದ್ದರು. ಇವರ ಪೂರ್ವಿಕರು ಮೂಲತಃ ತಿಪಟೂರಿನ ಹತ್ತಿರದ ಹಾಲ್ಕುರಿಕೆಯವರು. ರಾಮರಾಜು ಅವರ ಐವರು ಮಕ್ಕಳಲ್ಲಿ ನರಸಿಂಹರಾಜು ಎಲ್ಲರಿಗಿಂತ ಹಿರಿಯರು. ಬಾಲ್ಯದಲ್ಲಿಯೇ ಚುರುಕುಬುದ್ಧಿಯ ಚೂಟಿ ಹುಡುಗ ಎಂಬ ಹೆಸರು ಪಡೆದಿದ್ದ ನರಸಿಂಹರಾಜು ನಾಲ್ಕನೇ ವಯಸ್ಸಿನಲ್ಲಿ, ಸ್ಕೂಲಿಗೆ ಸೇರಿ ವಿದ್ಯಾಭ್ಯಾಸ ಶುರು ಮಾಡಬೇಕಾದ ಸಂದರ್ಭದಲ್ಲಿ, ಚಿಕ್ಕಪ್ಪ ಲಕ್ಷ್ಮೀಪತಿರಾಜು ಅವರ ಒತ್ತಾಯಕ್ಕೆ ಮಣಿದು ನಾಟಕದ ಕಂಪನಿ ಸೇರಿದರು.
ನರಸಿಂಹರಾಜು ಅವರ ಚಿಕ್ಕಪ್ಪ ಲಕ್ಷ್ಮೀಪತಿರಾಜು ಆಗ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾದ ಹೆಸರಾಂತ ನಟರಾಗಿದ್ದರು. ಅವರು ನಿರ್ವಹಿಸುತ್ತಿದ್ದ ಪಾತ್ರಗಳು ಜನಪ್ರಿಯತೆ ಗಳಿಸಿದ್ದವು. ಕಂಪನಿಯ ಮಾಲೀಕರೊಂದಿಗೆ ಉತ್ತಮ ಸಂಬಂಧವಿದ್ದ ಚಿಕ್ಕಪ್ಪ, ತಾವು ನಿರ್ವಹಿಸುವ ಪಾತ್ರಕ್ಕೆ ಪುತ್ರನ ಪಾತ್ರ ಮಾಡುವ ಬಾಲನಟನ ಅಗತ್ಯವನ್ನು ವಿವರಿಸಿ, ಒಬ್ಬ ಬಾಲನಟನನ್ನು ಕರೆತರುವುದಾಗಿ ತಿಳಿಸಿದರು. ಅದಕ್ಕೆ ನಾಟಕ ಕಂಪನಿಯ ಮಾಲೀಕರು ಒಪ್ಪಿದರು. ಆಗ ಲಕ್ಷ್ಮೀಪತಿರಾಜು ಅವರಿಗೆ ನೆನಪಾದದ್ದು ಚುರುಕು ಬುದ್ಧಿಯ ಅಣ್ಣನ ಮಗ ನರಸಿಂಹರಾಜು. ಅಣ್ಣ-ಅತ್ತಿಗೆಯನ್ನು ಕೇಳಿದರು. ವಯಸ್ಸಿಗೇ ನಾಟಕ ಕಂಪನಿಗೆ ಕಳುಹಿಸಲು ಯಾವ ತಂದೆ ತಾಯಿ ಒಪ್ಪುತ್ತಾರೆ? ಅದೂ ಸರ್ಕಾರಿ ನೌಕರಿಯಲ್ಲಿರುವವರು. ಅವರು ಒಪ್ಪದಿದ್ದಾಗ, ವಿದ್ಯಾವಂತನನ್ನಾಗಿ, ಜನಪ್ರಿಯ ನಟನನ್ನಾಗಿ ಮಾಡುವ ಜವಾಬ್ದಾರಿ ನನ್ನದು ಎಂಬ ಮಾತು ಕೊಟ್ಟು, ಮನವೊಲಿಸಿ ಬಾಲಕ ನರಸಿಂಹರಾಜುವನ್ನು ನಾಟಕದ ಕಂಪನಿಗೆ ಕರೆತಂದರು. ಅಷ್ಟೇ ಅಲ್ಲ, ಹೇಳಿದಂತೆ ಪುತ್ರನ ಪಾತ್ರ ಕೊಟ್ಟು ರಂಗಜಗತ್ತನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಹೆಜ್ಜೆ ಹಾಕಿದರು
ನಾಟಕದಲ್ಲಿ ಚಿಕ್ಕಪ್ಪ ಹಾಕುತ್ತಿದ್ದ ಪಾರ್ಟುಗಳನ್ನು, ಆಡುತ್ತಿದ್ದ ನಾಟಕಗಳನ್ನು ಬಾಲಕ ನರಸಿಂಹರಾಜು ಅಪಾರ ಆಸಕ್ತಿಯಿಂದ ಗಮನಿಸುತ್ತಿದ್ದರು. ನಾಟಕ ನೋಡುವಲ್ಲಿ ತನ್ಮಯತೆಯಿಂದ ತಲ್ಲೀನನಾಗುತ್ತಿದ್ದರು. ನೋಡಿದ್ದನ್ನು ಅಷ್ಟೇ ಆತ್ಮವಿಶ್ವಾಸದಿಂದ ಅನುಕರಣೆ ಮಾಡುತ್ತಿದ್ದರು. ಪುಟ್ಟ ಬಾಲಕನ ಬುದ್ಧಿಗೆ ಸಾಣೆ ಹಿಡಿಯುವಂತೆ ಚಿಕ್ಕಪ್ಪ ಲಕ್ಷ್ಮೀಪತಿರಾಜು, ಸಂಸ್ಕೃತ ಶ್ಲೋಕಗಳನ್ನು, ವೇದೋಪನಿಷತ್ತುಗಳನ್ನು, ಪುರಾಣದ ನೀತಿ ಕತೆಗಳನ್ನು ತಿಳಿಸಿಕೊಟ್ಟರು. ಬೆಳೆದಂತೆ ಬಾಲಕ ನರಸಿಂಹರಾಜು ಸಿ.ಬಿ. ಮಲ್ಲಪ್ಪನವರ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾದ ಭಾಗವಾದರು. ಬಾಲಕಲಾವಿದನಾಗಿ ರೂಪುಗೊಂಡರು. ಮುಖಕ್ಕೆ ಬಣ್ಣ ಹಚ್ಚಿದ ಬಾಲಕನಿಗೆ ನಟನೆಯೊಂದಿಗೆ ಓದಿನ, ಬದುಕಿನ ಪಾಠವೂ ಕರಗತವಾಯಿತು.
ರಂಗದ ಮೇಲೆ ಬಂದರೆ, ಜನ ನಗುತ್ತಿದ್ದರು
ಕಂಪನಿ ನಾಟಕದಲ್ಲಿ ಸಿಕ್ಕ ಪ್ರಹ್ಲಾದ, ಲೋಹಿತಾಶ್ವ, ಬಾಲಕೃಷ್ಣ, ಮಕರಂದ ಪಾತ್ರಗಳನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಿದ್ದ, ಕಲಿತ ನಂತರ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ರೀತಿಗೆ ನಾಟಕದ ಕಂಪನಿಯ ಮಾಲೀಕರಾದ ಮಲ್ಲಪ್ಪನವರು ಶಹಬ್ಬಾಶ್ ಗಿರಿ ಕೊಟ್ಟರು. ಅಷ್ಟೇ ಅಲ್ಲ, ನರಸಿಂಹರಾಜು ಅವರಿಗೆ ಕಂಪನಿಯ ನಾಟಕಗಳಲ್ಲಿ ಎಲ್ಲಾ ಥರದ ಪಾತ್ರಗಳನ್ನೂ ನೀಡಿ ಪ್ರೋತ್ಸಾಹಿಸಿದರು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಹುಬ್ಬಲ್ಲು, ಕಿಚಾಯಿಸುವ ಕಣ್ಣುಗಳು, ಕುಳ್ಳಗಿನ ಪೀಚು ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ದೈವದತ್ತವಾಗಿಯೇ ದಕ್ಕಿತ್ತು. ರಂಗದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರ ನಗು ಮುಗಿಲು ಮುಟ್ಟುತ್ತಿತ್ತು.
ಮುಂದೆ ಬೆಳೆದಂತೆ, ತಮ್ಮ ಹದಿನಾರನೇ ವಯಸ್ಸಿನಲ್ಲಿಕರ್ನಾಟಕ ನಾಟಕ ಸಭಾಎಂಬ ಹೆಸರಿನ ಸ್ವಂತ ನಾಟಕದ ಕಂಪನಿ ತೆರೆದರು. ಮೊದ ಮೊದಲು ಗೋರಕುಂಬಾರ, ಹರಿಶ್ಚಂದ್ರ ಮುಂತಾದ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದವರು, ವಿಶ್ವಾಮಿತ್ರ, ರಾಮ, ರಾವಣ, ಭರತ, ಲಕ್ಷ್ಮಣರ ಪಾತ್ರಗಳನ್ನು ನಿರ್ವಹಿಸುತ್ತಿದ್ದವರು, ನಂತರ ಹಾಸ್ಯ ಪಾತ್ರಗಳತ್ತ ಮುಖ ಮಾಡಿದರು. ಅನುಭವದ ಕೊರತೆಯೋ, ಆರ್ಥಿಕ ಸಂಕಷ್ಟವೋ ನಾಟಕ ಕಂಪನಿಯ ನೊಗವನ್ನು ಎಳೆಯಲು ಶಕ್ತಿ ಸಾಲದೆ ಸ್ವಂತ ಕಂಪನಿಯನ್ನು ಮುಚ್ಚಿದರು. ಆಮೇಲೆ, ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಎಡತೊರೆ ಕಂಪನಿಯ ಆಹ್ವಾನವನ್ನು ಮನ್ನಿಸಿ, ಕಂಪನಿಯ ಭಾಗವಾದರು. ಅಲ್ಲಿ ಜನಪ್ರಿಯ ನಟನಾಗಿ ಹೊರಹೊಮ್ಮಿದರು. ಕಂಪನಿಯಬೇಡರ ಕಣ್ಣಪ್ಪನಾಟಕವಂತೂ ಸಾವಿರಾರು ಪ್ರದರ್ಶನಗಳನ್ನು ಕಂಡ ಜನಪ್ರಿಯ ನಾಟಕವಾಗಿತ್ತು. ಅದರಲ್ಲಿ ಕಾಶಿ ಪಾತ್ರ ನಿರ್ವಹಿಸುತ್ತಿದ್ದ ನರಸಿಂಹರಾಜು ಅವರ ಅಭಿನಯವಂತೂ ಕಲಾರಸಿಕರ ಮನದಲ್ಲಿ ಮನೆಮಾಡಿತು.
ಕಲಾವಿದರ ದುರದೃಷ್ಟವೋ ಏನೋ ಆರ್ಥಿಕವಾಗಿ ಸದೃಢವಾಗಿದ್ದ ಎಡತೊರೆ ಕಂಪನಿಯೂ ಸಂಕಷ್ಟಕ್ಕೆ ಸಿಲುಕಿ, ಕಲಾವಿದರನ್ನು ಸಾಕಲಾಗದೆ ಮುಚ್ಚಿಕೊಂಡಿತು. ಇದೇ ವೇಳೆಗೆ ಸರಿಯಾಗಿ ನರಸಿಂಹರಾಜುಗೆ ಶಾರದಮ್ಮನವರೊಂದಿಗೆ ಮದುವೆಯಾಗಿತ್ತು. ನರಸಿಂಹರಾಜು ಸಂಸಾರ ಬೀದಿಗೆ ಬಿದ್ದಿತ್ತು. ಆದರೆಬೇಡರ ಕಣ್ಣಪ್ಪನಾಟಕದ ಅರ್ಚಕನ ಪುತ್ರ ಕಾಶಿ ಪಾತ್ರ ಸೃಷ್ಟಿಸಿದ್ದ ಸಂಚಲನ ಗುಬ್ಬಿ ಕಂಪನಿಯ ವೀರಣ್ಣನವರ ಗಮನಕ್ಕೆ ಬಂದಿತ್ತು. ಪಾತ್ರದ ಜನಪ್ರಿಯತೆ ಮತ್ತು ಪಾತ್ರವನ್ನು ನಿರ್ವಹಿಸಿದ ನರಸಿಂಹರಾಜು ಅವರ ನಟನಾ ಕೌಶಲ್ಯಕ್ಕೆ ಬೆರಗಾಗಿದ್ದ ಗುಬ್ಬಿ ವೀರಣ್ಣನವರು, ತಮ್ಮ ಕಂಪನಿಗೆ ಬರುವಂತೆ ಆಹ್ವಾನಿಸಿದರು. ತಮ್ಮ ಕಂಪನಿಯ ಜನಪ್ರಿಯ ನಾಟಕಗಳಾದ ಸದಾರಮೆ, ಸಾಹುಕಾರ, ಅಡ್ಡದಾರಿ, ಧರ್ಮ ರತ್ನಾಕರ ನಾಟಕಗಳಲ್ಲಿ ಬಹುಮುಖ್ಯವಾದ ಪಾತ್ರಗಳನ್ನು ನೀಡಿ ಪ್ರೋತ್ಸಾಹಿಸಿದರು. ಅಲ್ಲದೆ ಲಕ್ಷ್ಮಿ ಎಂಬ ಸ್ತ್ರೀ ಪಾತ್ರ ಮಾಡಲು ಅನುವು ಮಾಡಿಕೊಟ್ಟರು. ಅವರ ನಟನೆಗೆ ಮನಸೋತು ಹಾಡಿ ಹೊಗಳಿದರು. ಹೀಗೆ ಎಲ್ಲಾ ರೀತಿ ಪಾತ್ರಗಳನ್ನು ಮಾಡುತ್ತಲೇ ಕರ್ನಾಟಕದ ಹೆಸರಾಂತ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತಾ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪನಿಯ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ ೨೭ ವರ್ಷಗಳನ್ನು ನರಸಿಂಹರಾಜು ಕಳೆದಿದ್ದರು. ಅಪಾರ ಅನುಭವವನ್ನು ಗಳಿಸಿದ್ದರು.

ಮಾಯಾಲೋಕಕ್ಕೆ ಪ್ರವೇಶ
ಅದೇ ಸಂದರ್ಭದಲ್ಲಿಬೇಡರಕಣ್ಣಪ್ಪನಾಟಕವನ್ನು ಚಲನಚಿತ್ರವನ್ನಾಗಿ ಬೆಳ್ಳಿತೆರೆಗೆ ತರುವ ಪ್ರಯತ್ನ ನಡೆಯುತ್ತಿತ್ತು. ಅಂದಿನ ದಿನಗಳಲ್ಲಿ ಮದರಾಸು ಚಲನಚಿತ್ರಗಳ ನಿರ್ಮಾಣದ ಕೇಂದ್ರವಾಗಿತ್ತು. ಎಚ್.ಎಲ್.ಎನ್. ಸಿಂಹ
ಬೇಡರ ಕಣ್ಣಪ್ಪಚಿತ್ರದ ನಿರ್ದೇಶಕರಾಗಿ ಆಯ್ಕೆಯಾದರು. ಗುಬ್ಬಿ ಕಂಪನಿಯಲ್ಲಿ ಜಿ.ವಿ. ಅಯ್ಯರ್, ಬಾಲಕೃಷ್ಣರ ಜೊತೆಗೆ ನಾಟಕದಲ್ಲಿ ಕಾಶಿ ಪಾತ್ರ ಮಾಡಿ ಜನಪ್ರಿಯತೆ ಗಳಿಸಿದ್ದ ನರಸಿಂಹರಾಜು ಅವರನ್ನೇ ಸಿನಿಮಾಕ್ಕೂ ಆಯ್ಕೆ ಮಾಡಿಕೊಳ್ಳಲಾಯಿತು. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿದ್ದ ರಾಜಕುಮಾರ್ ಅವರನ್ನು ನಾಯಕನಟನ ಪಾತ್ರಕ್ಕೆ ಆರಿಸಿಕೊಳ್ಳಲಾಯಿತು. ೧೯೫೪ ರಲ್ಲಿ ತೆರೆಕಂಡಬೇಡರಕಣ್ಣಪ್ಪಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತು. ಚಿತ್ರನಿರ್ಮಾಣಕ್ಕೆ ಧೈರ್ಯ ತುಂಬಿತು. ಇಲ್ಲಿಂದ ಪ್ರಾರಂಭಗೊಂಡ ನರಸಿಂಹರಾಜು ಅವರ ಚಿತ್ರಯಾನ, ಅವರು ಸಾಯುವ ಕಡೆ ದಿನದವರೆಗೂ ನಡೆದೇ ಇತ್ತು.
೧೯೫೪ ರಿಂದ ೧೯೭೯ ರವರೆಗಿನ ಅವಧಿಯಲ್ಲಿ ನರಸಿಂಹರಾಜು ಸುಮಾರು ೨೫೬ ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಭಿಜಾತ ಹಾಸ್ಯ ಪ್ರತಿಭೆಯನ್ನು ಕನ್ನಡಿಗರಿಗೆ ಉಣಬಡಿಸಿದ್ದರು, ಮಹಾನ್ ನಟನಾಗಿ ಮಾರ್ಪಾಡಾಗಿದ್ದರು. ೧೯೫೪ ರಿಂದ ೧೯೬೭ ರವರೆಗೆ, ೧೩ ವರ್ಷಗಳ ಅಂತರದಲ್ಲಿ ತಯಾರಾದ ಸುಮಾರು ೧೬೮ ಚಿತ್ರಗಳಲ್ಲಿ, ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನರಸಿಂಹರಾಜು ನಟಿಸಿದ್ದರು. ಚಿತ್ರಗಳೆಲ್ಲವೂ ಯಶಸ್ವಿಯಾಗಿದ್ದವು. ಕನ್ನಡ ಚಿತ್ರರಂಗದ ಕಪ್ಪು ಬಿಳುಪಿನ ಕಾಲವನ್ನು ನೆನೆದರೆ, ನರಸಿಂಹರಾಜು ಕಣ್ಮುಂದೆ ಕುಣಿಯುತ್ತಾರೆ. ಮೈ ಮನಗಳನ್ನು ಕುಣಿಸುತ್ತಾರೆ.
ಕುಣಿದರು, ಕುಣಿಸಿದರು
ಯಾರು ಯಾರು ನೀ ಯಾರು,
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಯಾರು ಬರರು
ಬಂದವರು ಬದುಕಲಾರ್ರು?”
-ಇದು ನರಸಿಂಹರಾಜು ಮತ್ತು ಎಂ.ಎನ್. ಲಕ್ಷ್ಮಿದೇವಿಯವರ ಜೋಡಿಗಾಗಿ ಕಣಗಾಲ್ ಪ್ರಭಾಕರಶಾಸ್ತ್ರಿಯವರು ರಚಿಸಿದ ಹಾಡು, ೧೯೫೭ ರಲ್ಲಿ ಬಿ.ಆರ್. ಪಂತುಲು ನಿರ್ಮಿಸಿ, ನಿರ್ದೇಶಿಸಿದರತ್ನಗಿರಿ ರಹಸ್ಯಚಿತ್ರದ್ದು. ಹಾಡೊಂದೇ ಅಲ್ಲ, ಇಂತಹ ನೂರಾರು ಹಾಡುಗಳಿಗೆ ಕುಣಿದಿದ್ದಾರೆ, ಪ್ರೇಕ್ಷಕರನ್ನು ಕುಣಿಸಿದ್ದಾರೆ. ಕಾಲದ ಕಪ್ಪು ಬಿಳುಪಿನ ಚಿತ್ರಗಳಲ್ಲಿ ನರಸಿಂಹರಾಜು ಅವರಿಗಾಗಿಯೇ ಹಾಡುಗಳು ರಚಿಸಲ್ಪಡುತ್ತಿದ್ದವು. ಅವರಿಗಾಗಿಯೇ ಹಾಸ್ಯದ ಟ್ರ್ಯಾಕ್ಗಳನ್ನು ವಿಶೇಷವಾಗಿ ರೂಪಿಸಲಾಗುತ್ತಿತ್ತು. ಕಾಲದ ಚಿತ್ರಗಳಲ್ಲಿ, ಚಿತ್ರಗಳ ಯಶಸ್ಸಿನಲ್ಲಿ ನರಸಿಂಹರಾಜು ಅವರ ಪಾಲು ಮಹತ್ವದ ಪಾತ್ರ ವಹಿಸಿತ್ತು. ಅದು ಗೊತ್ತಿದ್ದ ಪಂತುಲು, ಅವರ ಚಿತ್ರಗಳಲ್ಲಿ ನರಸಿಂಹರಾಜು ಶಾಶ್ವತ ನಗೆನಟರಾಗಿ ಇದ್ದೇ ಇರಬೇಕೆಂಬ ಅಲಿಖಿತ ಒಪ್ಪಂದವನ್ನು ಮಾಡಿಕೊಂಡಿದ್ದರು. ಹಾಗಾಗಿಯೇ ನರಸಿಂಹರಾಜು, ರಾಜಕುಮಾರ್ ಅವರೊಂದಿಗೆ ನಟಿಸಿದ ಚಿತ್ರಗಳು ಯಶಸ್ವಿ ಚಿತ್ರಗಳಾದವು, ಅವರ ಜೋಡಿ ಜನಪ್ರಿಯ ಜೋಡಿಯಾಗಿ ದಾಖಲೆ ಬರೆಯಿತು. ರಾಜಕುಮಾರ್ ಅಷ್ಟೇ ಅಲ್ಲ, ಉದಯಕುಮಾರ್, ಕಲ್ಯಾಣಕುಮಾರ್, ರಾಜೇಶ್, ಗಂಗಾಧರ್, ಉಮೇಶ್- ಎಲ್ಲರೊಂದಿಗೂ ನಟಿಸಿದ್ದಾರೆ. ಹಾಗೆಯೇ ಮುಂದುವರೆದು ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ನರಸಿಂಹರಾಜು ಅವರ ಚಿತ್ರಬದುಕಿನಲ್ಲಿ ೬೦ ದಶಕ ಸುವರ್ಣಯುಗವೆಂದೇ ಹೇಳಬೇಕು. ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಯಶಸ್ವಿ ಚಿತ್ರಗಳನ್ನು ನೀಡಿದ್ದು, ವೃತ್ತಿಬದುಕಿನ ಉತ್ತುಂಗ ತಲುಪಿದ್ದು ಆಗಲೇ.  
ಆಗಿನ ಕಾಲದಲ್ಲಿ, ಮದ್ರಾಸು ಚಿತ್ರ ತಯಾರಿಕೆಯ ಕೇಂದ್ರಸ್ಥಳವಾಗಿತ್ತು. ಕನ್ನಡ ಚಿತ್ರರಂಗ ದುಃಸ್ಥಿತಿಯಲ್ಲಿದ್ದಾಗ, ತಮಿಳು-ತೆಲುಗು ಚಿತ್ರಗಳ ಚಿತ್ರೀಕರಣವಾದ ನಂತರ, ಅದೇ ಸೆಟ್ ಗಳನ್ನು ಬಳಸಿಕೊಂಡು ರಾತ್ರಿ ವೇಳೆ ಚಿತ್ರೀಕರಣ ನಡೆಸಲಾಗುತ್ತಿತ್ತು. ಅಂತಹ ಸಮಯದಲ್ಲಿ ಕನ್ನಡದ ಕಲಾವಿದರಿಗೆ ಸಿಗುತ್ತಿದ್ದ ಸಂಭಾವನೆ ಬಹಳ ಕಡಿಮೆ ಮೊತ್ತವಾಗಿತ್ತು. ಆದರೆ ನರಸಿಂಹರಾಜು ವಿಷಯದಲ್ಲಿ ಅದು ಬೇರೆಯಾಗಿತ್ತು. ನರಸಿಂಹರಾಜು ಅವರಿಗೆ ಒಂದು ಚಿತ್ರಕ್ಕೆ ೫೦೦ ರೂಪಾಯಿಯಿಂದ ೧೫ ಸಾವಿರದವರೆಗೆ ಸಂಭಾವನೆ ಸಿಗುತ್ತಿತ್ತು. ಕೆಲವೊಂದು ಸಲ ನಾಯಕನಟನಿಗಿಂತ ಮೊದಲು ಹಾಸ್ಯನಟ ನರಸಿಂಹರಾಜು ಅವರನ್ನು ಬುಕ್ ಮಾಡಲಾಗುತ್ತಿತ್ತು. ಇಡೀ ಚಿತ್ರದ ಕತೆ, ಸಂಭಾಷಣೆಗೆ ಕೊಡುವಷ್ಟೇ ಆದ್ಯತೆಯನ್ನು ನರಸಿಂಹರಾಜು ಅವರಿಗೂ ಕೊಡಲಾಗುತ್ತಿತ್ತು. ನಾಯಕನಟ-ನಟಿಗೆ ಮೂರು ಹಾಡುಗಳಿದ್ದರೆ, ಹಾಸ್ಯನಟ ನರಸಿಂಹರಾಜುಗೂ ಮೂರು ಹಾಡುಗಳು ಕಡ್ಡಾಯವಾಗಿರುತ್ತಿದ್ದವು. ನರಸಿಂಹರಾಜು ಅವರಿಗೆ ಪಾಪಮ್ಮ, ಮೈನಾವತಿ, ರಮಾದೇವಿ, ಲಕ್ಷ್ಮಿದೇವಿ, ಕುಳ್ಳಿ ಜಯ ಅವರುಗಳು ಪರ್ಮನೆಂಟ್ ಜೋಡಿಯಾಗಿ ಚಿತ್ರದುದ್ದಕ್ಕೂ ಸಾಥ್ ನೀಡುತ್ತಿದ್ದರು. ಮತ್ತು ಜೋಡಿಗಳು ಜನಪ್ರಿಯ ಜೋಡಿಗಳಾಗಿ ಜನಮನದಲ್ಲಿ ಮನೆ ಮಾಡಿದ್ದವು. ಇನ್ನು ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೆ, ನರಸಿಂಹರಾಜು ಇಲ್ಲದ ಸಿನಿಮಾವನ್ನು ಆತ ವಿತರಕರು ಖರೀದಿಸಲು ಮುಂದೆ ಬರುತ್ತಿರಲಿಲ್ಲ. ಅದಕ್ಕಾಗಿ ಚಿತ್ರವೆಲ್ಲ ಮುಗಿದ ಮೇಲೆ ನರಸಿಂಹರಾಜು ಅವರನ್ನು ಹಾಕಿಕೊಂಡು ಪ್ರತ್ಯೇಕವಾಗಿ ಚಿತ್ರೀಕರಣ ಮಾಡಿ ಸೇರ್ಪಡೆಗೊಳಿಸಿದ ಉದಾಹರಣೆಗಳೂ ಉಂಟು.
ಇದು ಸಾಮಾನ್ಯ ಸಂಗತಿಯಲ್ಲ. ಒಬ್ಬ ಸಾಮಾನ್ಯ ಹಾಸ್ಯನಟನ ಅಸಾಮಾನ್ಯ ಸಾಧನೆ.  
ನರಸಿಂಹರಾಜು ನಟಿಸಿದ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ಆಯಾಯ ಕಾಲಘಟ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದವು. ಸಂದೇಶ ಸಾರುವ, ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ, ಅಭಿರುಚಿ, ಮನರಂಜನೆಯನ್ನು ಮುಖ್ಯವಾಗಿಟ್ಟುಕೊಂಡು ತಯಾರಿಸಿದ ಚಿತ್ರಗಳಾಗಿದ್ದವು. ಚಿತ್ರಗಳಲ್ಲಿ ನರಸಿಂಹರಾಜು ಅವರ ಶುದ್ಧ ಹಾಸ್ಯವಿರುತ್ತಿತ್ತು. ಮನೆ ಮಂದಿಯೆಲ್ಲ ಕೂತು ನೋಡುವಂತಹ ಚಿತ್ರಗಳಾಗಿದ್ದವು. ಅಂತಹ ಚಿತ್ರಗಳೆಂದರೆ ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ, ಲಗ್ನಪತ್ರಿಕೆ, ಸಂಧ್ಯಾರಾಗ, ರತ್ನಗಿರಿರಹಸ್ಯ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ್ಣ, ದೇವರು ಕೊಟ್ಟ ತಂಗಿ, ಗಂಗೆಗೌರಿ, ದುಡ್ಡೇ ದೊಡ್ಡಪ್ಪ, ಗಂಡೊಂದು ಹೆಣ್ಣಾರು, ಭೂಪತಿರಂಗ, ಭಾಗ್ಯದೇವತೆ, ಶ್ರೀಕೃಷ್ಣದೇವರಾಯ, ನ್ಯಾಯವೇ ದೇವರು, ಜೇಡರಬಲೆ, ಹಸಿರುತೋರಣ, ಬೇಡರಕಣ್ಣಪ್ಪ, ಸತ್ಯಹರಿಶ್ಚಂದ್ರ, ಗುಂಡಾಜೋಯಿಸ, ತೆನಾಲಿರಾಮ- ಹೆಸರು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಹೀಗೆ ಇನ್ನೂರೈವತ್ತಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳು, ಪಾತ್ರಗಳು ಚಿತ್ರ ರಸಿಕರ ಮನಗೆದ್ದಿವೆ. ತಾವು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಆಯಾ ಪಾತ್ರಗಳಿಗೆ ಜೀವತುಂಬಿ ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ ನರಸಿಂಹರಾಜು ಎಂದಾಕ್ಷಣ ಕಿರುನಗೆಯೊಂದನ್ನು ಮೂಡಿಸುವ ನಗೆರಾಜರಾಗಿ ಅಜರಾಮರರಾಗಿದ್ದಾರೆ.
ಕನ್ನಡದ ಚಾಪ್ಲಿನ್
ಚಾರ್ಲಿ ಚಾಪ್ಲಿನ್ ವಿಶ್ವವನ್ನೇ ನಗಿಸಿದ ನಟ. ಕುಳ್ಳಗೆ, ತೆಳ್ಳಗಿದ್ದು ತನ್ನನ್ನೇ ತಾವು ಗೇಲಿ ಮಾಡಿಕೊಂಡು ಪ್ರೇಕ್ಷಕರನ್ನು ನಗಿಸುತ್ತಿದ್ದ. ಹೆಚ್ಚೂಕಡಿಮೆ ಹೀಗೆಯೇ ಇದ್ದ ನಮ್ಮ ಕನ್ನಡದ ನರಸಿಂಹರಾಜು ಕೂಡ ಅವರಂತೆಯೇ ಪ್ರೇಕ್ಷಕರನ್ನು ನಗಿಸಿದ್ದಾರೆ. ಚಾಪ್ಲಿನ್ ತನ್ನ ಐದನೇ ವರ್ಷಕ್ಕೆ ಬಣ್ಣ ಹಚ್ಚಿ ನಟಿಸಲು ಪ್ರಾರಂಭಿಸಿದರೆ, ನರಸಿಂಹರಾಜು ಕೂಡ ತಮ್ಮ ನಾಲ್ಕನೇ ವಯಸ್ಸಿಗೇ ಬಣ್ಣ ಹಚ್ಚಿ ರಂಗಭೂಮಿಯಲ್ಲಿ ನಟಿಸಲು ಶುರು ಮಾಡಿದ್ದರು. ಆತ ತನ್ನ ಹದಿಮೂರನೇ ವಯಸ್ಸಿನಲ್ಲಿ ಓದಿಗೆ ಗುಡ್ ಬೈ ಹೇಳಿದರೆ, ನರಸಿಂಹರಾಜು ಶಾಲೆಯ ಮೆಟ್ಟಿಲನ್ನೇ ಹತ್ತಲಿಲ್ಲ. ಚಾಪ್ಲಿನ್ ೬೭ ವರ್ಷಗಳ ಕಾಲ ನಟಿಸಿದರೆ, ನರಸಿಂಹರಾಜು ನಟಿಸಿದ್ದು, ನಗಿಸಿದ್ದು ಸುಮಾರು ಐವತ್ತು ವರ್ಷಗಳ ಕಾಲ. ಬದುಕಿದ್ದರೆ ಚಾಪ್ಲಿನ್ನನ್ನು ಮೀರಿಸುತ್ತಿದ್ದರೋ ಏನೋ.
ಹಾಸ್ಯನಟ ಚಾಪ್ಲಿನ್ ವಿಶ್ವವಿಖ್ಯಾತರಾದರೆ, ಹಾಸ್ಯನಟ ನರಸಿಂಹರಾಜು ಕನ್ನಡಿಗರ ಚಾಪ್ಲಿನ್ ಆಗಿ ಮೆರೆದರು. ಹಾಗೆಯೇ ಹಾಲಿವುಡ್ ನಲ್ಲಿ ಲಾರೆಲ್-ಹಾರ್ಡಿಯಂತೆ ಕನ್ನಡದಲ್ಲೂ ಬಾಲಣ್ಣ-ನರಸಿಂಹರಾಜು ಜೋಡಿ ಚಿತ್ರರಸಿಕರನ್ನು ಮೋಡಿ ಮಾಡಿತ್ತು. ನರಸಿಂಹರಾಜು ಅವರ ಅಭಿನಯವನ್ನು ಹಲವು ಭಾಷೆಯ ಹಾಸ್ಯನಟರು ಅನುಕರಣೆ ಮಾಡಲು ಪ್ರಯತ್ನಿಸಿ ಸೋತಿದ್ದುಂಟು. ಹಾಗೆಯೇ ತಮಿಳಿನ ತಾಯ್ ನಾಗೇಶ್, ತೆಲುಗಿನ ಪದ್ಮನಾಭ ಕೂಡ ಮದ್ರಾಸಿನಲ್ಲಿರುವಷ್ಟು ದಿನವೂ ನರಸಿಂಹರಾಜು ಅವರ ಮನೆಗೆ ಬಂದು, ಅವರಿಂದ ಅಭಿನಯದ ಮಟ್ಟುಗಳನ್ನು ಕೇಳಿ ಕಲಿಯುತ್ತಿದ್ದರು ಎಂದು ಪತ್ನಿ ಶಾರದಮ್ಮನವರು ನೆನಪಿಸಿಕೊಳ್ಳುವುದುಂಟು.
ಹಾಸ್ಯವೆಂದರೆ ಸಾಮಾನ್ಯವಲ್ಲ
ಮತ್ತೊಬ್ಬರನ್ನು ನಗಿಸುವ ಕ್ಲಿಷ್ಟವಾದ ಕಲೆ ಹಾಸ್ಯ. ವಿಶೇಷ ಪ್ರತಿಭೆಯುಳ್ಳ ನಟರು ಕನ್ನಡ ಚಿತ್ರರಂಗದಲ್ಲಿ ಕೆಲವರಲ್ಲಿ ಕೆಲವೇ ಜನ. ಅವರಲ್ಲಿ ನರಸಿಂಹರಾಜು ಅವರೂ ಒಬ್ಬರು ಮತ್ತು ಅಗ್ರಗಣ್ಯರು. ಹಾಗೆಯೇ ಹಾಸ್ಯವೂ ಕೂಡ. ಹಾಸ್ಯವನ್ನು ಮೂರು ಬಗೆಯಾಗಿ ವಿಂಗಡಿಸಬಹುದು. ಅಪಹಾಸ್ಯ, ತಿಳಿಹಾಸ್ಯ ಮತ್ತು ವಿಡಂಬನೆ.
ಅಪಹಾಸ್ಯದ ಸ್ವರೂಪ ಸಾಮಾನ್ಯವಾಗಿ ಅನ್ಯರನ್ನು ಅಣಕಿಸುವ, ಮತ್ತೊಬ್ಬರ ಅಂಗಹೀನತೆಯನ್ನೋ, ಇಲ್ಲ ಬುದ್ಧಿಮಾಂದ್ಯವನ್ನೋ ಬಳಸಿಕೊಂಡು ಸೃಷ್ಟಿಯಾಗುವಂಥಾದ್ದು. ತಿಳಿಹಾಸ್ಯವೆನ್ನುವುದು ಮನರಂಜನೆ, ಮನೋಲ್ಲಾಸಗಳ ಪ್ರಕ್ರಿಯೆ. ಇಲ್ಲಿ ವಿಚಾರ ಮುಖ್ಯವಲ್ಲ, ನಗುವಷ್ಟೇ. ನಕ್ಕು ಮನಸ್ಸನ್ನು ಹಗುರಾಗಿಸಿಕೊಳ್ಳುವುದಷ್ಟಕ್ಕೇ ಸೀಮಿತವಾದುದು.
ವಿಡಂಬನೆಯೇ ಹಾಸ್ಯದ ಅತ್ಯುತ್ತಮ ಹಾಗೂ ಅತ್ಯಗತ್ಯವಾದ ಪ್ರಾಕಾರ. ಇದು ಎಲ್ಲರೂ ಉಪಯೋಗಿಸುವ ಪ್ರಾಕಾರ. ಗಹನವಾದ, ಉಪಯುಕ್ತವಾದ ಮತ್ತು ವಿವೇಕಪೂರ್ಣ ವಿಚಾರಗಳನ್ನು ಪ್ರೇಕ್ಷಕರಿಗೆ ಕಿರಿಕಿರಿಯಾಗದ ರೀತಿಯಲ್ಲಿ ಮನರಂಜನೆಯ ಮೂಲಕ ದಾಟಿಸುವ ವಿಧಾನ. ಮನರಂಜನೆಗಾಗಿಯೇ ದುಡ್ಡು ತೆತ್ತು ಬರುವ ಪ್ರೇಕ್ಷಕರಿಗೆ ಬೋಧನೆಯ ಜೊತೆಗೆ ಬುದ್ಧಿಗೆ ಸಾಣೆ ಹಿಡಿಯುವ ಸಾಧನವಾಗಿಯೂ ಬಳಕೆಯಾಗಬೇಕೆಂಬುದೇ ಇದರ ಮುಖ್ಯ ಉದ್ದೇಶವಾಗಿರುತ್ತದೆ
ಇಂತಹ ಹಾಸ್ಯಕ್ಕೆ ನರಸಿಂಹರಾಜು ಅತ್ಯುತ್ತಮ ಉದಾಹರಣೆ ಎಂದು ಮಾಸ್ಟರ್ ಹಿರಣ್ಣಯ್ಯನವರು ಒಂದು ಕಡೆ ದಾಖಲಿಸಿರುವುದುಂಟು. ನರಸಿಂಹರಾಜು ಅವರಿಗೆ ರಂಗಭೂಮಿಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಇಂಥದೇ ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದವು. ಉದಾಹರಣೆಗೆ ತೆನಾಲಿರಾಮ, ಬೀರ್ಬಲ್ ಪಾತ್ರಗಳನ್ನು ನೆನೆಯಬಹುದು. ಈಗಿನ ತಲೆಮಾರಿನ ಜನಕ್ಕೆ ತೆನಾಲಿರಾಮ ಹೇಗಿರಬಹುದು ಎಂಬ ಕಲ್ಪನೆ ಬಂದಾಗ ಕಣ್ಮುಂದೆ ನಿಲ್ಲುವ ವ್ಯಕ್ತಿ ಹುಟ್ಟು ವಿನೋದಗಾರ ನರಸಿಂಹರಾಜು ಎನ್ನುವುದರಲ್ಲಿ ಎರಡು ಮಾತಿಲ್ಲ
ಸಭ್ಯ ನಡವಳಿಕೆಯ, ಹಸನ್ಮುಖಿ ಹಾಸ್ಯ ಎಲ್ಲರಿಗೂ ಸಾಧ್ಯವಿಲ್ಲ. ಹಾಸ್ಯವೆಂದರೆ ಅಸಹ್ಯ ನಡವಳಿಕೆಯಲ್ಲ, ಹಾಸ್ಯ ಹೊರಹೊಮ್ಮಿಸಲು ಅಸಹ್ಯ ಮಾತುಗಳು ಬೇಕಿಲ್ಲ ಎಂದು ಸಾಬೀತುಪಡಿಸಿ ಸುಮಾರು ಐವತ್ತು ವರ್ಷಗಳ ಕಾಲ ಚಿತ್ರರಸಿಕರ ಮನ ಮನರಂಜಿಸಿದ ನರಸಿಂಹರಾಜು ಅವರ ನಗಿಸುವ ಕಲೆ ಇಂದಿನ ಹಾಗೂ ಮುಂದಿನ ಕಾಲಕ್ಕೂ ಮಾದರಿಯಾಗಿ ನಿಲ್ಲುವಂಥಾದ್ದು.
ಎಲ್ಲದರಲ್ಲೂ ಮೊದಲಿಗರು

ನರಸಿಂಹರಾಜು ಎಲ್ಲದರಲ್ಲೂ ಮೊದಲಿಗರು. ದೂರದ ತಮಿಳುನಾಡಿನ ಮದ್ರಾಸಿನಲ್ಲಿ ನೆಲೆ ನಿಲ್ಲುವುದೇ ಕಷ್ಟವಾಗಿದ್ದ ದಿನಗಳಲ್ಲಿ ಮೊದಲಿಗೆ ಮನೆ ಮಾಡಿದ್ದು, ಕಾಲಕ್ಕೆ ಐಷಾರಾಮಿ ಜೀವನದ ಸಂಕೇತವೆಂದೇ ಭಾವಿಸಿದ್ದ ಕಾರ್ ಖರೀದಿಸಿದ್ದು, ಮನೆಯಲ್ಲಿ ಫೋನ್ ಸೌಲಭ್ಯವಿದ್ದದ್ದು, ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಹಾಸ್ಯ ನಟ ಎಂದು ಹೆಸರಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನೂರು ಚಿತ್ರಗಳ ಗಡಿ ದಾಟಿದ್ದು, ಕನ್ನಡದ ಕಲಾವಿದರ ಪೈಕಿ ಮೊದಲು ತೆರಿಗೆ ಕಟ್ಟಿದ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ತಮ್ಮ ವಾರಿಗೆಯ ನಟರ ಪೈಕಿ ಮೊದಲು ಮಗಳ ಮದುವೆ ಮಾಡಿದ್ದು, ಹಾಗೆಯೇ ಅವರ ವಾರಿಗೆಯವರು ಇನ್ನೂ ಗಟ್ಟಿಮುಟ್ಟಾಗಿದ್ದ ಕಾಲದಲ್ಲಿಯೇ ಎಲ್ಲರಿಗಿಂತ ಮುಂಚೆ ಇಹಲೋಕ ತ್ಯಜಿಸಿದ್ದು- ಎಲ್ಲದರಲ್ಲೂ ಮೊದಲಿಗರಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಹೋಗಿದ್ದಾರೆ.
(ನರಸಿಂಹರಾಜು ಹುಟ್ಟಿದ್ದು ಜುಲೈ 24,1923, ಇಹಲೋಕ ತ್ಯಜಿಸಿದ್ದು ಜುಲೈ 21,1979)