ನರಸಿಂಹರಾಜು |
ಬಾಬು ರಾಜೇಂದ್ರಪ್ರಸಾದ್ ವೆಂಕಟಗಿರಿಜಾರಮಣ ತಿಪಟೂರು ಎಂದು ರೈಲಿನ ಬೋಗಿಗೆ ಅಂಟಿಸಿರುವ ಪ್ರಯಾಣಿಕರ ಪಟ್ಟಿಯಲ್ಲಿ ಹೆಸರನ್ನು ಓದುವ, ತರಾತುರಿಯಲ್ಲಿ ಹದಿನೇಳು ಲಗೇಜುಗಳನ್ನಿಟ್ಟುಕೊಂಡು ರೈಲು ಹತ್ತುವ, ಲಗೇಜುಗಳು ಸರಿಯಾಗಿವೆಯೇ ಎಂದು ಲೆಕ್ಕಹಾಕಲು ಒದ್ದಾಡುವ, ಲೆಕ್ಕ ಹಾಕಿದ ಮೇಲೆ ಕೂಲಿ ಕೊಡಲು ಕೂಲಿಯ ಆಳಿನೊಂದಿಗೆ ಚೌಕಾಸಿಗೆ ಬೀಳುವ, ಎದುರಿದ್ದವರು ಹೇಳಿದ ಮೇಲೂ ಮೊದಲು ಕೊಟ್ಟ ರೂಪಾಯಿಯನ್ನೇ ಕೊಡಲು ಹೋಗುವ, ಕೂಲಿ ಹೊಡೆಯಲು ಕೈ ಎತ್ತಿದಾಗ ಬೆದರಿ ಮುಖ ಮುಚ್ಚಿಕೊಳ್ಳುವ ಈ ದೃಶ್ಯ- ೧೯೬೮ ರಲ್ಲಿ ತೆರೆ ಕಂಡ ‘ಬೆಂಗಳೂರು ಮೈಲ್’ ಎಂಬ ಆಕ್ಷನ್ ಪ್ಲಸ್ ಸಸ್ಪೆನ್ಸ್ ಚಿತ್ರದ್ದು.
ಸಾಮಾನ್ಯವಾಗಿ ಚಿತ್ರದ ಆರಂಭಕ್ಕೆ ನಾಯಕನಟನ ಅದ್ದೂರಿ ಎಂಟ್ರಿ ಇರುತ್ತದೆ. ಅದೂ ವಿಭಿನ್ನ ಶೈಲಿಯಲ್ಲಿ. ಆದರೆ ಇಲ್ಲಿ, ಈ ಚಿತ್ರದಲ್ಲಿ ನರಸಿಂಹರಾಜು ಅವರದೇ ಚಿತ್ರದ ಮೊದಲ ದೃಶ್ಯ. ಆ ಚಿತ್ರದಲ್ಲಿ ನರಸಿಂಹರಾಜು ತಿಪಟೂರಿನ ಶ್ರೀಮಂತ ಕುಟುಂಬಕ್ಕೆ ಸೇರಿದ ಯುವಕ. ಐವರು ಅಣ್ಣತಮ್ಮಂದಿರ ಮುದ್ದಿನ ಒಬ್ಬನೇ ಮಗ- ಬಾಬು ರಾಜೇಂದ್ರಪ್ರಸಾದ್ ವೆಂಕಟಗಿರಿಜಾರಮಣ. ರೈಲಿಗೆ ಹತ್ತಿದಾಕ್ಷಣ ಎದುರಾಗುವ ನಗರದ ಆಧುನಿಕ ವೈಯಾರದ ಯುವತಿ. ಆಕೆಯೊಂದಿಗೆ ಸಲುಗೆಯಿಂದ ಮಾತನಾಡಬೇಕೆಂಬ ಆಸೆ ಜೊತೆಗೆ ಅಳುಕು. ಅಂತಹ ಸ್ಥಿತಿಯಲ್ಲಿಯೇ ಆಕೆಯೊಂದಿಗೆ ಮಾತಿಗಿಳಿದು, ಆಕೆ ಬೀಸುವ ಮೋಹದ ಬಲೆಗೆ ಬಿದ್ದು ಅನಾಯಾಸವಾಗಿ ಅನಾಹುತ ಆಹ್ವಾನಿಸಿಕೊಳ್ಳುವ, ಆತಂಕದಲ್ಲಿ ಒದ್ದಾಡುವ ಪಾತ್ರ. ಹಾಗೆ ಒದ್ದಾಡುತ್ತಲೇ ಚಿತ್ರದ ಬಹುಮುಖ್ಯ ತಿರುವಿಗೆ ಕಾರಣವಾಗುವ ಪಾತ್ರ. ಚಿತ್ರದ ಆರಂಭದ ಈ ದೃಶ್ಯದಲ್ಲಿಯೇ ನರಸಿಂಹರಾಜು, ತಮ್ಮ ಸಹಜಾಭಿನಯದಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸುತ್ತಾರೆ.
ಇಂತಹ ಒಂದಲ್ಲ, ನೂರಾರು ಚಿತ್ರಗಳಲ್ಲಿ, ಸಾವಿರಾರು ಪಾತ್ರಗಳಲ್ಲಿ ಸರಿಸುಮಾರು ೨೫ ವರ್ಷಗಳ ಕಾಲ ಕನ್ನಡಿಗರನ್ನು ರಂಜಿಸಿದ ನರಸಿಂಹರಾಜು, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಇವರು ಮೂಲತಃ ತಿಪಟೂರಿನವರು, ಮಧ್ಯಮವರ್ಗಕ್ಕೆ ಸೇರಿದ ಬಡವರು. ಬಾಲ್ಯದಲ್ಲಿ ಮಕ್ಕಳು ಸಾಮಾನ್ಯವಾಗಿ ಅಕ್ಷರಾಭ್ಯಾಸ, ಕಲಿಕೆಗಾಗಿ ಶಾಲೆ ಸೇರುವುದು ಸಹಜ. ಆದರೆ ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿಗೆ ಸೇರಿದ್ದು ರಂಗಭೂಮಿಯನ್ನು. ಅದೇ ಅವರಿಗೆ ಆಟ-ಪಾಠ ಕಲಿಸಿತು. ಬದುಕನ್ನು ಬಣ್ಣಿಸಿತು. ಬಣ್ಣದ ಬದುಕಿನ ಬೆರಗಿಗೆ ಬಿದ್ದ ನರಸಿಂಹರಾಜು ರಂಗಭೂಮಿಯನ್ನು ಮೈ ಮನಗಳಲ್ಲಿ ಅರಗಿಸಿಕೊಂಡರು. ಅದರ ಸಮೃದ್ಧತೆ, ಸೊಗಡು, ಸೊಗಸನ್ನು ಅಭಿನಯದ ಮೂಲಕ ಅರಳಿಸಿದರು. ನಂತರ ಚಿತ್ರರಂಗಕ್ಕೆ ಧುಮುಕಿ, ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಲೇ ಕನ್ನಡ ಚಿತ್ರರಂಗದ ಬುಡ ಭದ್ರ ಮಾಡಿದರು. ಚಿತ್ರರಂಗವನ್ನು ಸದೃಢವಾಗಿ ಬೆಳೆಸಿದರು, ಬೆಳಗಿಸಿದರು. ಸಾಂಸ್ಕೃತಿಕ ರಂಗವನ್ನು ಶ್ರೀಮಂತಗೊಳಿಸಿದರು. ಮಹಾನುಭಾವರ ಪಾಲಿಗೆ ಸೇರಿಹೋದರು. ಅಳಿದ ಮೇಲೂ ಕನ್ನಡಿಗರ ಮನೆ-ಮನಗಳಲ್ಲಿ ಉಳಿದ, ಹೊಳೆದ ಅಪರೂಪದ ತಾರೆಯಾದರು.
ಹುಟ್ಟಿದ್ದು ಬಡತನದಲ್ಲಿ, ಕಲಿತದ್ದು ಕಂಪನಿ ನಾಟಕದಲ್ಲಿ
ನರಸಿಂಹರಾಜುರವರ ತಾಯಿ ವೆಂಕಟಲಕ್ಷ್ಮಯ್ಯ, ತಂದೆ ರಾಮರಾಜು. ತಂದೆ ತಿಪಟೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಕೆಲಸದಲ್ಲಿದ್ದರು. ಊರಿನ ಕೋಟೆಯಲ್ಲಿ, ಚಿಕ್ಕ ಮನೆಯಲ್ಲಿ ವಾಸವಾಗಿದ್ದರು. ಇವರ ಪೂರ್ವಿಕರು ಮೂಲತಃ ತಿಪಟೂರಿನ ಹತ್ತಿರದ ಹಾಲ್ಕುರಿಕೆಯವರು. ರಾಮರಾಜು ಅವರ ಐವರು ಮಕ್ಕಳಲ್ಲಿ ನರಸಿಂಹರಾಜು ಎಲ್ಲರಿಗಿಂತ ಹಿರಿಯರು. ಬಾಲ್ಯದಲ್ಲಿಯೇ ಚುರುಕುಬುದ್ಧಿಯ ಚೂಟಿ ಹುಡುಗ ಎಂಬ ಹೆಸರು ಪಡೆದಿದ್ದ ನರಸಿಂಹರಾಜು ನಾಲ್ಕನೇ ವಯಸ್ಸಿನಲ್ಲಿ, ಸ್ಕೂಲಿಗೆ ಸೇರಿ ವಿದ್ಯಾಭ್ಯಾಸ ಶುರು ಮಾಡಬೇಕಾದ ಸಂದರ್ಭದಲ್ಲಿ, ಚಿಕ್ಕಪ್ಪ ಲಕ್ಷ್ಮೀಪತಿರಾಜು ಅವರ ಒತ್ತಾಯಕ್ಕೆ ಮಣಿದು ನಾಟಕದ ಕಂಪನಿ ಸೇರಿದರು.
ನರಸಿಂಹರಾಜು ಅವರ ಚಿಕ್ಕಪ್ಪ ಲಕ್ಷ್ಮೀಪತಿರಾಜು ಆಗ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾದ ಹೆಸರಾಂತ ನಟರಾಗಿದ್ದರು. ಅವರು ನಿರ್ವಹಿಸುತ್ತಿದ್ದ ಪಾತ್ರಗಳು ಜನಪ್ರಿಯತೆ ಗಳಿಸಿದ್ದವು. ಕಂಪನಿಯ ಮಾಲೀಕರೊಂದಿಗೆ ಉತ್ತಮ ಸಂಬಂಧವಿದ್ದ ಚಿಕ್ಕಪ್ಪ, ತಾವು ನಿರ್ವಹಿಸುವ ಪಾತ್ರಕ್ಕೆ ಪುತ್ರನ ಪಾತ್ರ ಮಾಡುವ ಬಾಲನಟನ ಅಗತ್ಯವನ್ನು ವಿವರಿಸಿ, ಒಬ್ಬ ಬಾಲನಟನನ್ನು ಕರೆತರುವುದಾಗಿ ತಿಳಿಸಿದರು. ಅದಕ್ಕೆ ನಾಟಕ ಕಂಪನಿಯ ಮಾಲೀಕರು ಒಪ್ಪಿದರು. ಆಗ ಲಕ್ಷ್ಮೀಪತಿರಾಜು ಅವರಿಗೆ ನೆನಪಾದದ್ದು ಚುರುಕು ಬುದ್ಧಿಯ ಅಣ್ಣನ ಮಗ ನರಸಿಂಹರಾಜು. ಅಣ್ಣ-ಅತ್ತಿಗೆಯನ್ನು ಕೇಳಿದರು. ಆ ವಯಸ್ಸಿಗೇ ನಾಟಕ ಕಂಪನಿಗೆ ಕಳುಹಿಸಲು ಯಾವ ತಂದೆ ತಾಯಿ ಒಪ್ಪುತ್ತಾರೆ? ಅದೂ ಸರ್ಕಾರಿ ನೌಕರಿಯಲ್ಲಿರುವವರು. ಅವರು ಒಪ್ಪದಿದ್ದಾಗ, ವಿದ್ಯಾವಂತನನ್ನಾಗಿ, ಜನಪ್ರಿಯ ನಟನನ್ನಾಗಿ ಮಾಡುವ ಜವಾಬ್ದಾರಿ ನನ್ನದು ಎಂಬ ಮಾತು ಕೊಟ್ಟು, ಮನವೊಲಿಸಿ ಬಾಲಕ ನರಸಿಂಹರಾಜುವನ್ನು ನಾಟಕದ ಕಂಪನಿಗೆ ಕರೆತಂದರು. ಅಷ್ಟೇ ಅಲ್ಲ, ಹೇಳಿದಂತೆ ಪುತ್ರನ ಪಾತ್ರ ಕೊಟ್ಟು ರಂಗಜಗತ್ತನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಹೆಜ್ಜೆ ಹಾಕಿದರು.
ನಾಟಕದಲ್ಲಿ ಚಿಕ್ಕಪ್ಪ ಹಾಕುತ್ತಿದ್ದ ಪಾರ್ಟುಗಳನ್ನು, ಆಡುತ್ತಿದ್ದ ನಾಟಕಗಳನ್ನು ಬಾಲಕ ನರಸಿಂಹರಾಜು ಅಪಾರ ಆಸಕ್ತಿಯಿಂದ ಗಮನಿಸುತ್ತಿದ್ದರು. ನಾಟಕ ನೋಡುವಲ್ಲಿ ತನ್ಮಯತೆಯಿಂದ ತಲ್ಲೀನನಾಗುತ್ತಿದ್ದರು. ನೋಡಿದ್ದನ್ನು ಅಷ್ಟೇ ಆತ್ಮವಿಶ್ವಾಸದಿಂದ ಅನುಕರಣೆ ಮಾಡುತ್ತಿದ್ದರು. ಆ ಪುಟ್ಟ ಬಾಲಕನ ಬುದ್ಧಿಗೆ ಸಾಣೆ ಹಿಡಿಯುವಂತೆ ಚಿಕ್ಕಪ್ಪ ಲಕ್ಷ್ಮೀಪತಿರಾಜು, ಸಂಸ್ಕೃತ ಶ್ಲೋಕಗಳನ್ನು, ವೇದೋಪನಿಷತ್ತುಗಳನ್ನು, ಪುರಾಣದ ನೀತಿ ಕತೆಗಳನ್ನು ತಿಳಿಸಿಕೊಟ್ಟರು. ಬೆಳೆದಂತೆ ಬಾಲಕ ನರಸಿಂಹರಾಜು ಸಿ.ಬಿ. ಮಲ್ಲಪ್ಪನವರ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾದ ಭಾಗವಾದರು. ಬಾಲಕಲಾವಿದನಾಗಿ ರೂಪುಗೊಂಡರು. ಮುಖಕ್ಕೆ ಬಣ್ಣ ಹಚ್ಚಿದ ಬಾಲಕನಿಗೆ ನಟನೆಯೊಂದಿಗೆ ಓದಿನ, ಬದುಕಿನ ಪಾಠವೂ ಕರಗತವಾಯಿತು.
ರಂಗದ ಮೇಲೆ ಬಂದರೆ, ಜನ ನಗುತ್ತಿದ್ದರು
ಕಂಪನಿ ನಾಟಕದಲ್ಲಿ ಸಿಕ್ಕ ಪ್ರಹ್ಲಾದ, ಲೋಹಿತಾಶ್ವ, ಬಾಲಕೃಷ್ಣ, ಮಕರಂದ ಪಾತ್ರಗಳನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಿದ್ದ, ಕಲಿತ ನಂತರ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ರೀತಿಗೆ ನಾಟಕದ ಕಂಪನಿಯ ಮಾಲೀಕರಾದ ಮಲ್ಲಪ್ಪನವರು ಶಹಬ್ಬಾಶ್ ಗಿರಿ ಕೊಟ್ಟರು. ಅಷ್ಟೇ ಅಲ್ಲ, ನರಸಿಂಹರಾಜು ಅವರಿಗೆ ಕಂಪನಿಯ ನಾಟಕಗಳಲ್ಲಿ ಎಲ್ಲಾ ಥರದ ಪಾತ್ರಗಳನ್ನೂ ನೀಡಿ ಪ್ರೋತ್ಸಾಹಿಸಿದರು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಹುಬ್ಬಲ್ಲು, ಕಿಚಾಯಿಸುವ ಕಣ್ಣುಗಳು, ಕುಳ್ಳಗಿನ ಪೀಚು ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ದೈವದತ್ತವಾಗಿಯೇ ದಕ್ಕಿತ್ತು. ರಂಗದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರ ನಗು ಮುಗಿಲು ಮುಟ್ಟುತ್ತಿತ್ತು.
ಮುಂದೆ ಬೆಳೆದಂತೆ, ತಮ್ಮ ಹದಿನಾರನೇ ವಯಸ್ಸಿನಲ್ಲಿ ‘ಕರ್ನಾಟಕ ನಾಟಕ ಸಭಾ’ ಎಂಬ ಹೆಸರಿನ ಸ್ವಂತ ನಾಟಕದ ಕಂಪನಿ ತೆರೆದರು. ಮೊದ ಮೊದಲು ಗೋರಕುಂಬಾರ, ಹರಿಶ್ಚಂದ್ರ ಮುಂತಾದ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದವರು, ವಿಶ್ವಾಮಿತ್ರ, ರಾಮ, ರಾವಣ, ಭರತ, ಲಕ್ಷ್ಮಣರ ಪಾತ್ರಗಳನ್ನು ನಿರ್ವಹಿಸುತ್ತಿದ್ದವರು, ಆ ನಂತರ ಹಾಸ್ಯ ಪಾತ್ರಗಳತ್ತ ಮುಖ ಮಾಡಿದರು. ಅನುಭವದ ಕೊರತೆಯೋ, ಆರ್ಥಿಕ ಸಂಕಷ್ಟವೋ ನಾಟಕ ಕಂಪನಿಯ ನೊಗವನ್ನು ಎಳೆಯಲು ಶಕ್ತಿ ಸಾಲದೆ ಸ್ವಂತ ಕಂಪನಿಯನ್ನು ಮುಚ್ಚಿದರು. ಆಮೇಲೆ, ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಎಡತೊರೆ ಕಂಪನಿಯ ಆಹ್ವಾನವನ್ನು ಮನ್ನಿಸಿ, ಆ ಕಂಪನಿಯ ಭಾಗವಾದರು. ಅಲ್ಲಿ ಜನಪ್ರಿಯ ನಟನಾಗಿ ಹೊರಹೊಮ್ಮಿದರು. ಆ ಕಂಪನಿಯ ‘ಬೇಡರ ಕಣ್ಣಪ್ಪ’ ನಾಟಕವಂತೂ ಸಾವಿರಾರು ಪ್ರದರ್ಶನಗಳನ್ನು ಕಂಡ ಜನಪ್ರಿಯ ನಾಟಕವಾಗಿತ್ತು. ಅದರಲ್ಲಿ ಕಾಶಿ ಪಾತ್ರ ನಿರ್ವಹಿಸುತ್ತಿದ್ದ ನರಸಿಂಹರಾಜು ಅವರ ಅಭಿನಯವಂತೂ ಕಲಾರಸಿಕರ ಮನದಲ್ಲಿ ಮನೆಮಾಡಿತು.
ಕಲಾವಿದರ ದುರದೃಷ್ಟವೋ ಏನೋ ಆರ್ಥಿಕವಾಗಿ ಸದೃಢವಾಗಿದ್ದ ಎಡತೊರೆ ಕಂಪನಿಯೂ ಸಂಕಷ್ಟಕ್ಕೆ ಸಿಲುಕಿ, ಕಲಾವಿದರನ್ನು ಸಾಕಲಾಗದೆ ಮುಚ್ಚಿಕೊಂಡಿತು. ಇದೇ ವೇಳೆಗೆ ಸರಿಯಾಗಿ ನರಸಿಂಹರಾಜುಗೆ ಶಾರದಮ್ಮನವರೊಂದಿಗೆ ಮದುವೆಯಾಗಿತ್ತು. ನರಸಿಂಹರಾಜು ಸಂಸಾರ ಬೀದಿಗೆ ಬಿದ್ದಿತ್ತು. ಆದರೆ ‘ಬೇಡರ ಕಣ್ಣಪ್ಪ’ ನಾಟಕದ ಅರ್ಚಕನ ಪುತ್ರ ಕಾಶಿ ಪಾತ್ರ ಸೃಷ್ಟಿಸಿದ್ದ ಸಂಚಲನ ಗುಬ್ಬಿ ಕಂಪನಿಯ ವೀರಣ್ಣನವರ ಗಮನಕ್ಕೆ ಬಂದಿತ್ತು. ಆ ಪಾತ್ರದ ಜನಪ್ರಿಯತೆ ಮತ್ತು ಆ ಪಾತ್ರವನ್ನು ನಿರ್ವಹಿಸಿದ ನರಸಿಂಹರಾಜು ಅವರ ನಟನಾ ಕೌಶಲ್ಯಕ್ಕೆ ಬೆರಗಾಗಿದ್ದ ಗುಬ್ಬಿ ವೀರಣ್ಣನವರು, ತಮ್ಮ ಕಂಪನಿಗೆ ಬರುವಂತೆ ಆಹ್ವಾನಿಸಿದರು. ತಮ್ಮ ಕಂಪನಿಯ ಜನಪ್ರಿಯ ನಾಟಕಗಳಾದ ಸದಾರಮೆ, ಸಾಹುಕಾರ, ಅಡ್ಡದಾರಿ, ಧರ್ಮ ರತ್ನಾಕರ ನಾಟಕಗಳಲ್ಲಿ ಬಹುಮುಖ್ಯವಾದ ಪಾತ್ರಗಳನ್ನು ನೀಡಿ ಪ್ರೋತ್ಸಾಹಿಸಿದರು. ಅಲ್ಲದೆ ಲಕ್ಷ್ಮಿ ಎಂಬ ಸ್ತ್ರೀ ಪಾತ್ರ ಮಾಡಲು ಅನುವು ಮಾಡಿಕೊಟ್ಟರು. ಅವರ ನಟನೆಗೆ ಮನಸೋತು ಹಾಡಿ ಹೊಗಳಿದರು. ಹೀಗೆ ಎಲ್ಲಾ ರೀತಿ ಪಾತ್ರಗಳನ್ನು ಮಾಡುತ್ತಲೇ ಕರ್ನಾಟಕದ ಹೆಸರಾಂತ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತಾ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪನಿಯ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ ೨೭ ವರ್ಷಗಳನ್ನು ನರಸಿಂಹರಾಜು ಕಳೆದಿದ್ದರು. ಅಪಾರ ಅನುಭವವನ್ನು ಗಳಿಸಿದ್ದರು.
ಮಾಯಾಲೋಕಕ್ಕೆ ಪ್ರವೇಶ
ಅದೇ ಸಂದರ್ಭದಲ್ಲಿ ‘ಬೇಡರಕಣ್ಣಪ್ಪ’ ನಾಟಕವನ್ನು ಚಲನಚಿತ್ರವನ್ನಾಗಿ ಬೆಳ್ಳಿತೆರೆಗೆ ತರುವ ಪ್ರಯತ್ನ ನಡೆಯುತ್ತಿತ್ತು. ಅಂದಿನ ದಿನಗಳಲ್ಲಿ ಮದರಾಸು ಚಲನಚಿತ್ರಗಳ ನಿರ್ಮಾಣದ ಕೇಂದ್ರವಾಗಿತ್ತು. ಎಚ್.ಎಲ್.ಎನ್. ಸಿಂಹ
‘ಬೇಡರ ಕಣ್ಣಪ್ಪ’ ಚಿತ್ರದ ನಿರ್ದೇಶಕರಾಗಿ ಆಯ್ಕೆಯಾದರು. ಗುಬ್ಬಿ ಕಂಪನಿಯಲ್ಲಿ ಜಿ.ವಿ. ಅಯ್ಯರ್, ಬಾಲಕೃಷ್ಣರ ಜೊತೆಗೆ ನಾಟಕದಲ್ಲಿ ಕಾಶಿ ಪಾತ್ರ ಮಾಡಿ ಜನಪ್ರಿಯತೆ ಗಳಿಸಿದ್ದ ನರಸಿಂಹರಾಜು ಅವರನ್ನೇ ಸಿನಿಮಾಕ್ಕೂ ಆಯ್ಕೆ ಮಾಡಿಕೊಳ್ಳಲಾಯಿತು. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿದ್ದ ರಾಜಕುಮಾರ್ ಅವರನ್ನು ನಾಯಕನಟನ ಪಾತ್ರಕ್ಕೆ ಆರಿಸಿಕೊಳ್ಳಲಾಯಿತು. ೧೯೫೪ ರಲ್ಲಿ ತೆರೆಕಂಡ ‘ಬೇಡರಕಣ್ಣಪ್ಪ’ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತು. ಚಿತ್ರನಿರ್ಮಾಣಕ್ಕೆ ಧೈರ್ಯ ತುಂಬಿತು. ಇಲ್ಲಿಂದ ಪ್ರಾರಂಭಗೊಂಡ ನರಸಿಂಹರಾಜು ಅವರ ಚಿತ್ರಯಾನ, ಅವರು ಸಾಯುವ ಕಡೆ ದಿನದವರೆಗೂ ನಡೆದೇ ಇತ್ತು.
೧೯೫೪ ರಿಂದ ೧೯೭೯ ರವರೆಗಿನ ಅವಧಿಯಲ್ಲಿ ನರಸಿಂಹರಾಜು ಸುಮಾರು ೨೫೬ ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಭಿಜಾತ ಹಾಸ್ಯ ಪ್ರತಿಭೆಯನ್ನು ಕನ್ನಡಿಗರಿಗೆ ಉಣಬಡಿಸಿದ್ದರು, ಮಹಾನ್ ನಟನಾಗಿ ಮಾರ್ಪಾಡಾಗಿದ್ದರು. ೧೯೫೪ ರಿಂದ ೧೯೬೭ ರವರೆಗೆ, ೧೩ ವರ್ಷಗಳ ಅಂತರದಲ್ಲಿ ತಯಾರಾದ ಸುಮಾರು ೧೬೮ ಚಿತ್ರಗಳಲ್ಲಿ, ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನರಸಿಂಹರಾಜು ನಟಿಸಿದ್ದರು. ಈ ಚಿತ್ರಗಳೆಲ್ಲವೂ ಯಶಸ್ವಿಯಾಗಿದ್ದವು. ಕನ್ನಡ ಚಿತ್ರರಂಗದ ಕಪ್ಪು ಬಿಳುಪಿನ ಕಾಲವನ್ನು ನೆನೆದರೆ, ನರಸಿಂಹರಾಜು ಕಣ್ಮುಂದೆ ಕುಣಿಯುತ್ತಾರೆ. ಮೈ ಮನಗಳನ್ನು ಕುಣಿಸುತ್ತಾರೆ.
ಕುಣಿದರು, ಕುಣಿಸಿದರು
“ಯಾರು ಯಾರು ನೀ ಯಾರು,
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಯಾರು ಬರರು
ಬಂದವರು ಬದುಕಲಾರ್ರು?”
-ಇದು ನರಸಿಂಹರಾಜು ಮತ್ತು ಎಂ.ಎನ್. ಲಕ್ಷ್ಮಿದೇವಿಯವರ ಜೋಡಿಗಾಗಿ ಕಣಗಾಲ್ ಪ್ರಭಾಕರಶಾಸ್ತ್ರಿಯವರು ರಚಿಸಿದ ಹಾಡು, ೧೯೫೭ ರಲ್ಲಿ ಬಿ.ಆರ್. ಪಂತುಲು ನಿರ್ಮಿಸಿ, ನಿರ್ದೇಶಿಸಿದ ‘ರತ್ನಗಿರಿ ರಹಸ್ಯ’ ಚಿತ್ರದ್ದು. ಈ ಹಾಡೊಂದೇ ಅಲ್ಲ, ಇಂತಹ ನೂರಾರು ಹಾಡುಗಳಿಗೆ ಕುಣಿದಿದ್ದಾರೆ, ಪ್ರೇಕ್ಷಕರನ್ನು ಕುಣಿಸಿದ್ದಾರೆ. ಆ ಕಾಲದ ಕಪ್ಪು ಬಿಳುಪಿನ ಚಿತ್ರಗಳಲ್ಲಿ ನರಸಿಂಹರಾಜು ಅವರಿಗಾಗಿಯೇ ಹಾಡುಗಳು ರಚಿಸಲ್ಪಡುತ್ತಿದ್ದವು. ಅವರಿಗಾಗಿಯೇ ಹಾಸ್ಯದ ಟ್ರ್ಯಾಕ್ಗಳನ್ನು ವಿಶೇಷವಾಗಿ ರೂಪಿಸಲಾಗುತ್ತಿತ್ತು. ಆ ಕಾಲದ ಚಿತ್ರಗಳಲ್ಲಿ, ಚಿತ್ರಗಳ ಯಶಸ್ಸಿನಲ್ಲಿ ನರಸಿಂಹರಾಜು ಅವರ ಪಾಲು ಮಹತ್ವದ ಪಾತ್ರ ವಹಿಸಿತ್ತು. ಅದು ಗೊತ್ತಿದ್ದ ಪಂತುಲು, ಅವರ ಚಿತ್ರಗಳಲ್ಲಿ ನರಸಿಂಹರಾಜು ಶಾಶ್ವತ ನಗೆನಟರಾಗಿ ಇದ್ದೇ ಇರಬೇಕೆಂಬ ಅಲಿಖಿತ ಒಪ್ಪಂದವನ್ನು ಮಾಡಿಕೊಂಡಿದ್ದರು. ಹಾಗಾಗಿಯೇ ನರಸಿಂಹರಾಜು, ರಾಜಕುಮಾರ್ ಅವರೊಂದಿಗೆ ನಟಿಸಿದ ಚಿತ್ರಗಳು ಯಶಸ್ವಿ ಚಿತ್ರಗಳಾದವು, ಅವರ ಜೋಡಿ ಜನಪ್ರಿಯ ಜೋಡಿಯಾಗಿ ದಾಖಲೆ ಬರೆಯಿತು. ರಾಜಕುಮಾರ್ ಅಷ್ಟೇ ಅಲ್ಲ, ಉದಯಕುಮಾರ್, ಕಲ್ಯಾಣಕುಮಾರ್, ರಾಜೇಶ್, ಗಂಗಾಧರ್, ಉಮೇಶ್- ಎಲ್ಲರೊಂದಿಗೂ ನಟಿಸಿದ್ದಾರೆ. ಹಾಗೆಯೇ ಮುಂದುವರೆದು ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ನರಸಿಂಹರಾಜು ಅವರ ಚಿತ್ರಬದುಕಿನಲ್ಲಿ ೬೦ ರ ದಶಕ ಸುವರ್ಣಯುಗವೆಂದೇ ಹೇಳಬೇಕು. ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಯಶಸ್ವಿ ಚಿತ್ರಗಳನ್ನು ನೀಡಿದ್ದು, ವೃತ್ತಿಬದುಕಿನ ಉತ್ತುಂಗ ತಲುಪಿದ್ದು ಆಗಲೇ.
ಆಗಿನ ಕಾಲದಲ್ಲಿ, ಮದ್ರಾಸು ಚಿತ್ರ ತಯಾರಿಕೆಯ ಕೇಂದ್ರಸ್ಥಳವಾಗಿತ್ತು. ಕನ್ನಡ ಚಿತ್ರರಂಗ ದುಃಸ್ಥಿತಿಯಲ್ಲಿದ್ದಾಗ, ತಮಿಳು-ತೆಲುಗು ಚಿತ್ರಗಳ ಚಿತ್ರೀಕರಣವಾದ ನಂತರ, ಅದೇ ಸೆಟ್ ಗಳನ್ನು ಬಳಸಿಕೊಂಡು ರಾತ್ರಿ ವೇಳೆ ಚಿತ್ರೀಕರಣ ನಡೆಸಲಾಗುತ್ತಿತ್ತು. ಅಂತಹ ಸಮಯದಲ್ಲಿ ಕನ್ನಡದ ಕಲಾವಿದರಿಗೆ ಸಿಗುತ್ತಿದ್ದ ಸಂಭಾವನೆ ಬಹಳ ಕಡಿಮೆ ಮೊತ್ತವಾಗಿತ್ತು. ಆದರೆ ನರಸಿಂಹರಾಜು ವಿಷಯದಲ್ಲಿ ಅದು ಬೇರೆಯಾಗಿತ್ತು. ನರಸಿಂಹರಾಜು ಅವರಿಗೆ ಒಂದು ಚಿತ್ರಕ್ಕೆ ೫೦೦ ರೂಪಾಯಿಯಿಂದ ೧೫ ಸಾವಿರದವರೆಗೆ ಸಂಭಾವನೆ ಸಿಗುತ್ತಿತ್ತು. ಕೆಲವೊಂದು ಸಲ ನಾಯಕನಟನಿಗಿಂತ ಮೊದಲು ಹಾಸ್ಯನಟ ನರಸಿಂಹರಾಜು ಅವರನ್ನು ಬುಕ್ ಮಾಡಲಾಗುತ್ತಿತ್ತು. ಇಡೀ ಚಿತ್ರದ ಕತೆ, ಸಂಭಾಷಣೆಗೆ ಕೊಡುವಷ್ಟೇ ಆದ್ಯತೆಯನ್ನು ನರಸಿಂಹರಾಜು ಅವರಿಗೂ ಕೊಡಲಾಗುತ್ತಿತ್ತು. ನಾಯಕನಟ-ನಟಿಗೆ ಮೂರು ಹಾಡುಗಳಿದ್ದರೆ, ಹಾಸ್ಯನಟ ನರಸಿಂಹರಾಜುಗೂ ಮೂರು ಹಾಡುಗಳು ಕಡ್ಡಾಯವಾಗಿರುತ್ತಿದ್ದವು. ನರಸಿಂಹರಾಜು ಅವರಿಗೆ ಪಾಪಮ್ಮ, ಮೈನಾವತಿ, ರಮಾದೇವಿ, ಲಕ್ಷ್ಮಿದೇವಿ, ಕುಳ್ಳಿ ಜಯ ಅವರುಗಳು ಪರ್ಮನೆಂಟ್ ಜೋಡಿಯಾಗಿ ಚಿತ್ರದುದ್ದಕ್ಕೂ ಸಾಥ್ ನೀಡುತ್ತಿದ್ದರು. ಮತ್ತು ಆ ಜೋಡಿಗಳು ಜನಪ್ರಿಯ ಜೋಡಿಗಳಾಗಿ ಜನಮನದಲ್ಲಿ ಮನೆ ಮಾಡಿದ್ದವು. ಇನ್ನು ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೆ, ನರಸಿಂಹರಾಜು ಇಲ್ಲದ ಸಿನಿಮಾವನ್ನು ಆತ ವಿತರಕರು ಖರೀದಿಸಲು ಮುಂದೆ ಬರುತ್ತಿರಲಿಲ್ಲ. ಅದಕ್ಕಾಗಿ ಚಿತ್ರವೆಲ್ಲ ಮುಗಿದ ಮೇಲೆ ನರಸಿಂಹರಾಜು ಅವರನ್ನು ಹಾಕಿಕೊಂಡು ಪ್ರತ್ಯೇಕವಾಗಿ ಚಿತ್ರೀಕರಣ ಮಾಡಿ ಸೇರ್ಪಡೆಗೊಳಿಸಿದ ಉದಾಹರಣೆಗಳೂ ಉಂಟು.
ಇದು ಸಾಮಾನ್ಯ ಸಂಗತಿಯಲ್ಲ. ಒಬ್ಬ ಸಾಮಾನ್ಯ ಹಾಸ್ಯನಟನ ಅಸಾಮಾನ್ಯ ಸಾಧನೆ.
ನರಸಿಂಹರಾಜು ನಟಿಸಿದ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ಆಯಾಯ ಕಾಲಘಟ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದವು. ಸಂದೇಶ ಸಾರುವ, ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ, ಅಭಿರುಚಿ, ಮನರಂಜನೆಯನ್ನು ಮುಖ್ಯವಾಗಿಟ್ಟುಕೊಂಡು ತಯಾರಿಸಿದ ಚಿತ್ರಗಳಾಗಿದ್ದವು. ಆ ಚಿತ್ರಗಳಲ್ಲಿ ನರಸಿಂಹರಾಜು ಅವರ ಶುದ್ಧ ಹಾಸ್ಯವಿರುತ್ತಿತ್ತು. ಮನೆ ಮಂದಿಯೆಲ್ಲ ಕೂತು ನೋಡುವಂತಹ ಚಿತ್ರಗಳಾಗಿದ್ದವು. ಅಂತಹ ಚಿತ್ರಗಳೆಂದರೆ ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ, ಲಗ್ನಪತ್ರಿಕೆ, ಸಂಧ್ಯಾರಾಗ, ರತ್ನಗಿರಿರಹಸ್ಯ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ್ಣ, ದೇವರು ಕೊಟ್ಟ ತಂಗಿ, ಗಂಗೆಗೌರಿ, ದುಡ್ಡೇ ದೊಡ್ಡಪ್ಪ, ಗಂಡೊಂದು ಹೆಣ್ಣಾರು, ಭೂಪತಿರಂಗ, ಭಾಗ್ಯದೇವತೆ, ಶ್ರೀಕೃಷ್ಣದೇವರಾಯ, ನ್ಯಾಯವೇ ದೇವರು, ಜೇಡರಬಲೆ, ಹಸಿರುತೋರಣ, ಬೇಡರಕಣ್ಣಪ್ಪ, ಸತ್ಯಹರಿಶ್ಚಂದ್ರ, ಗುಂಡಾಜೋಯಿಸ, ತೆನಾಲಿರಾಮ- ಹೆಸರು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಹೀಗೆ ಇನ್ನೂರೈವತ್ತಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳು, ಪಾತ್ರಗಳು ಚಿತ್ರ ರಸಿಕರ ಮನಗೆದ್ದಿವೆ. ತಾವು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಆಯಾ ಪಾತ್ರಗಳಿಗೆ ಜೀವತುಂಬಿ ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ ನರಸಿಂಹರಾಜು ಎಂದಾಕ್ಷಣ ಕಿರುನಗೆಯೊಂದನ್ನು ಮೂಡಿಸುವ ನಗೆರಾಜರಾಗಿ ಅಜರಾಮರರಾಗಿದ್ದಾರೆ.
ಕನ್ನಡದ ಚಾಪ್ಲಿನ್
ಚಾರ್ಲಿ ಚಾಪ್ಲಿನ್ ವಿಶ್ವವನ್ನೇ ನಗಿಸಿದ ನಟ. ಕುಳ್ಳಗೆ, ತೆಳ್ಳಗಿದ್ದು ತನ್ನನ್ನೇ ತಾವು ಗೇಲಿ ಮಾಡಿಕೊಂಡು ಪ್ರೇಕ್ಷಕರನ್ನು ನಗಿಸುತ್ತಿದ್ದ. ಹೆಚ್ಚೂಕಡಿಮೆ ಹೀಗೆಯೇ ಇದ್ದ ನಮ್ಮ ಕನ್ನಡದ ನರಸಿಂಹರಾಜು ಕೂಡ ಅವರಂತೆಯೇ ಪ್ರೇಕ್ಷಕರನ್ನು ನಗಿಸಿದ್ದಾರೆ. ಚಾಪ್ಲಿನ್ ತನ್ನ ಐದನೇ ವರ್ಷಕ್ಕೆ ಬಣ್ಣ ಹಚ್ಚಿ ನಟಿಸಲು ಪ್ರಾರಂಭಿಸಿದರೆ, ನರಸಿಂಹರಾಜು ಕೂಡ ತಮ್ಮ ನಾಲ್ಕನೇ ವಯಸ್ಸಿಗೇ ಬಣ್ಣ ಹಚ್ಚಿ ರಂಗಭೂಮಿಯಲ್ಲಿ ನಟಿಸಲು ಶುರು ಮಾಡಿದ್ದರು. ಆತ ತನ್ನ ಹದಿಮೂರನೇ ವಯಸ್ಸಿನಲ್ಲಿ ಓದಿಗೆ ಗುಡ್ ಬೈ ಹೇಳಿದರೆ, ನರಸಿಂಹರಾಜು ಶಾಲೆಯ ಮೆಟ್ಟಿಲನ್ನೇ ಹತ್ತಲಿಲ್ಲ. ಚಾಪ್ಲಿನ್ ೬೭ ವರ್ಷಗಳ ಕಾಲ ನಟಿಸಿದರೆ, ನರಸಿಂಹರಾಜು ನಟಿಸಿದ್ದು, ನಗಿಸಿದ್ದು ಸುಮಾರು ಐವತ್ತು ವರ್ಷಗಳ ಕಾಲ. ಬದುಕಿದ್ದರೆ ಚಾಪ್ಲಿನ್ನನ್ನು ಮೀರಿಸುತ್ತಿದ್ದರೋ ಏನೋ.
ಆ ಹಾಸ್ಯನಟ ಚಾಪ್ಲಿನ್ ವಿಶ್ವವಿಖ್ಯಾತರಾದರೆ, ಈ ಹಾಸ್ಯನಟ ನರಸಿಂಹರಾಜು ಕನ್ನಡಿಗರ ಚಾಪ್ಲಿನ್ ಆಗಿ ಮೆರೆದರು. ಹಾಗೆಯೇ ಹಾಲಿವುಡ್ ನಲ್ಲಿ ಲಾರೆಲ್-ಹಾರ್ಡಿಯಂತೆ ಕನ್ನಡದಲ್ಲೂ ಬಾಲಣ್ಣ-ನರಸಿಂಹರಾಜು ಜೋಡಿ ಚಿತ್ರರಸಿಕರನ್ನು ಮೋಡಿ ಮಾಡಿತ್ತು. ನರಸಿಂಹರಾಜು ಅವರ ಅಭಿನಯವನ್ನು ಹಲವು ಭಾಷೆಯ ಹಾಸ್ಯನಟರು ಅನುಕರಣೆ ಮಾಡಲು ಪ್ರಯತ್ನಿಸಿ ಸೋತಿದ್ದುಂಟು. ಹಾಗೆಯೇ ತಮಿಳಿನ ತಾಯ್ ನಾಗೇಶ್, ತೆಲುಗಿನ ಪದ್ಮನಾಭ ಕೂಡ ಮದ್ರಾಸಿನಲ್ಲಿರುವಷ್ಟು ದಿನವೂ ನರಸಿಂಹರಾಜು ಅವರ ಮನೆಗೆ ಬಂದು, ಅವರಿಂದ ಅಭಿನಯದ ಮಟ್ಟುಗಳನ್ನು ಕೇಳಿ ಕಲಿಯುತ್ತಿದ್ದರು ಎಂದು ಪತ್ನಿ ಶಾರದಮ್ಮನವರು ನೆನಪಿಸಿಕೊಳ್ಳುವುದುಂಟು.
ಹಾಸ್ಯವೆಂದರೆ ಸಾಮಾನ್ಯವಲ್ಲ
ಮತ್ತೊಬ್ಬರನ್ನು ನಗಿಸುವ ಕ್ಲಿಷ್ಟವಾದ ಕಲೆ ಹಾಸ್ಯ. ಈ ವಿಶೇಷ ಪ್ರತಿಭೆಯುಳ್ಳ ನಟರು ಕನ್ನಡ ಚಿತ್ರರಂಗದಲ್ಲಿ ಕೆಲವರಲ್ಲಿ ಕೆಲವೇ ಜನ. ಅವರಲ್ಲಿ ನರಸಿಂಹರಾಜು ಅವರೂ ಒಬ್ಬರು ಮತ್ತು ಅಗ್ರಗಣ್ಯರು. ಹಾಗೆಯೇ ಹಾಸ್ಯವೂ ಕೂಡ. ಹಾಸ್ಯವನ್ನು ಮೂರು ಬಗೆಯಾಗಿ ವಿಂಗಡಿಸಬಹುದು. ಅಪಹಾಸ್ಯ, ತಿಳಿಹಾಸ್ಯ ಮತ್ತು ವಿಡಂಬನೆ.
ಅಪಹಾಸ್ಯದ ಸ್ವರೂಪ ಸಾಮಾನ್ಯವಾಗಿ ಅನ್ಯರನ್ನು ಅಣಕಿಸುವ, ಮತ್ತೊಬ್ಬರ ಅಂಗಹೀನತೆಯನ್ನೋ, ಇಲ್ಲ ಬುದ್ಧಿಮಾಂದ್ಯವನ್ನೋ ಬಳಸಿಕೊಂಡು ಸೃಷ್ಟಿಯಾಗುವಂಥಾದ್ದು. ತಿಳಿಹಾಸ್ಯವೆನ್ನುವುದು ಮನರಂಜನೆ, ಮನೋಲ್ಲಾಸಗಳ ಪ್ರಕ್ರಿಯೆ. ಇಲ್ಲಿ ವಿಚಾರ ಮುಖ್ಯವಲ್ಲ, ನಗುವಷ್ಟೇ. ನಕ್ಕು ಮನಸ್ಸನ್ನು ಹಗುರಾಗಿಸಿಕೊಳ್ಳುವುದಷ್ಟಕ್ಕೇ ಸೀಮಿತವಾದುದು.
ವಿಡಂಬನೆಯೇ ಹಾಸ್ಯದ ಅತ್ಯುತ್ತಮ ಹಾಗೂ ಅತ್ಯಗತ್ಯವಾದ ಪ್ರಾಕಾರ. ಇದು ಎಲ್ಲರೂ ಉಪಯೋಗಿಸುವ ಪ್ರಾಕಾರ. ಗಹನವಾದ, ಉಪಯುಕ್ತವಾದ ಮತ್ತು ವಿವೇಕಪೂರ್ಣ ವಿಚಾರಗಳನ್ನು ಪ್ರೇಕ್ಷಕರಿಗೆ ಕಿರಿಕಿರಿಯಾಗದ ರೀತಿಯಲ್ಲಿ ಮನರಂಜನೆಯ ಮೂಲಕ ದಾಟಿಸುವ ವಿಧಾನ. ಮನರಂಜನೆಗಾಗಿಯೇ ದುಡ್ಡು ತೆತ್ತು ಬರುವ ಪ್ರೇಕ್ಷಕರಿಗೆ ಬೋಧನೆಯ ಜೊತೆಗೆ ಬುದ್ಧಿಗೆ ಸಾಣೆ ಹಿಡಿಯುವ ಸಾಧನವಾಗಿಯೂ ಬಳಕೆಯಾಗಬೇಕೆಂಬುದೇ ಇದರ ಮುಖ್ಯ ಉದ್ದೇಶವಾಗಿರುತ್ತದೆ.
ಇಂತಹ ಹಾಸ್ಯಕ್ಕೆ ನರಸಿಂಹರಾಜು ಅತ್ಯುತ್ತಮ ಉದಾಹರಣೆ ಎಂದು ಮಾಸ್ಟರ್ ಹಿರಣ್ಣಯ್ಯನವರು ಒಂದು ಕಡೆ ದಾಖಲಿಸಿರುವುದುಂಟು. ನರಸಿಂಹರಾಜು ಅವರಿಗೆ ರಂಗಭೂಮಿಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಇಂಥದೇ ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದವು. ಉದಾಹರಣೆಗೆ ತೆನಾಲಿರಾಮ, ಬೀರ್ಬಲ್ ಪಾತ್ರಗಳನ್ನು ನೆನೆಯಬಹುದು. ಈಗಿನ ತಲೆಮಾರಿನ ಜನಕ್ಕೆ ತೆನಾಲಿರಾಮ ಹೇಗಿರಬಹುದು ಎಂಬ ಕಲ್ಪನೆ ಬಂದಾಗ ಕಣ್ಮುಂದೆ ನಿಲ್ಲುವ ವ್ಯಕ್ತಿ ಹುಟ್ಟು ವಿನೋದಗಾರ ನರಸಿಂಹರಾಜು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಭ್ಯ ನಡವಳಿಕೆಯ, ಹಸನ್ಮುಖಿ ಹಾಸ್ಯ ಎಲ್ಲರಿಗೂ ಸಾಧ್ಯವಿಲ್ಲ. ಹಾಸ್ಯವೆಂದರೆ ಅಸಹ್ಯ ನಡವಳಿಕೆಯಲ್ಲ, ಹಾಸ್ಯ ಹೊರಹೊಮ್ಮಿಸಲು ಅಸಹ್ಯ ಮಾತುಗಳು ಬೇಕಿಲ್ಲ ಎಂದು ಸಾಬೀತುಪಡಿಸಿ ಸುಮಾರು ಐವತ್ತು ವರ್ಷಗಳ ಕಾಲ ಚಿತ್ರರಸಿಕರ ಮನ ಮನರಂಜಿಸಿದ ನರಸಿಂಹರಾಜು ಅವರ ನಗಿಸುವ ಕಲೆ ಇಂದಿನ ಹಾಗೂ ಮುಂದಿನ ಕಾಲಕ್ಕೂ ಮಾದರಿಯಾಗಿ ನಿಲ್ಲುವಂಥಾದ್ದು.
ಎಲ್ಲದರಲ್ಲೂ ಮೊದಲಿಗರು
ನರಸಿಂಹರಾಜು ಎಲ್ಲದರಲ್ಲೂ ಮೊದಲಿಗರು. ದೂರದ ತಮಿಳುನಾಡಿನ ಮದ್ರಾಸಿನಲ್ಲಿ ನೆಲೆ ನಿಲ್ಲುವುದೇ ಕಷ್ಟವಾಗಿದ್ದ ದಿನಗಳಲ್ಲಿ ಮೊದಲಿಗೆ ಮನೆ ಮಾಡಿದ್ದು, ಆ ಕಾಲಕ್ಕೆ ಐಷಾರಾಮಿ ಜೀವನದ ಸಂಕೇತವೆಂದೇ ಭಾವಿಸಿದ್ದ ಕಾರ್ ಖರೀದಿಸಿದ್ದು, ಮನೆಯಲ್ಲಿ ಫೋನ್ ಸೌಲಭ್ಯವಿದ್ದದ್ದು, ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಹಾಸ್ಯ ನಟ ಎಂದು ಹೆಸರಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನೂರು ಚಿತ್ರಗಳ ಗಡಿ ದಾಟಿದ್ದು, ಕನ್ನಡದ ಕಲಾವಿದರ ಪೈಕಿ ಮೊದಲು ತೆರಿಗೆ ಕಟ್ಟಿದ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ತಮ್ಮ ವಾರಿಗೆಯ ನಟರ ಪೈಕಿ ಮೊದಲು ಮಗಳ ಮದುವೆ ಮಾಡಿದ್ದು, ಹಾಗೆಯೇ ಅವರ ವಾರಿಗೆಯವರು ಇನ್ನೂ ಗಟ್ಟಿಮುಟ್ಟಾಗಿದ್ದ ಕಾಲದಲ್ಲಿಯೇ ಎಲ್ಲರಿಗಿಂತ ಮುಂಚೆ ಇಹಲೋಕ ತ್ಯಜಿಸಿದ್ದು- ಎಲ್ಲದರಲ್ಲೂ ಮೊದಲಿಗರಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಹೋಗಿದ್ದಾರೆ.
(ನರಸಿಂಹರಾಜು ಹುಟ್ಟಿದ್ದು ಜುಲೈ 24,1923, ಇಹಲೋಕ ತ್ಯಜಿಸಿದ್ದು ಜುಲೈ 21,1979)
No comments:
Post a Comment