ಲಂಕೇಶ್ ಮತ್ತು ಡಿಆರ್ ನಾಗರಾಜ್ |
‘ಮೇಲುನೋಟಕ್ಕೆ ಭಿನ್ನವಾಗಿ ಕಾಣುವ, ಬೇರೆ ಬೇರೆ ತಲೆಮಾರುಗಳಿಗೆ ಸೇರಿದ ಡಿಆರ್ ಹಾಗೂ ಲಂಕೇಶರನ್ನು ಜೊತೆಗಿಟ್ಟು ನೋಡುವುದು ಸಾಹಿತ್ಯ ವಿಮರ್ಶೆಯ ವಿದ್ಯಾರ್ಥಿಗಳಿಗೆ ಅಸಂಗತವಾಗಿ ಕಾಣಬಹುದು. ಆದರೂ ನಾನು ಅದೃಷ್ಟವಶಾತ್ ಒಡನಾಡಿದ ಕನ್ನಡದ ಎರಡು ದೊಡ್ಡ ಪ್ರತಿಭೆಗಳನ್ನು ಹೊರಳಿ ನೋಡುವ ಹಾಗೂ ನನ್ನಂಥ ಒಬ್ಬ ಓದುಗನೊಳಗೆ, ಬರಹಗಾರನೊಳಗೆ ಇಪ್ಪತ್ತನೆಯ ಶತಮಾನದ ಇಬ್ಬರು ಶ್ರೇಷ್ಠ ಕನ್ನಡ ಲೇಖಕರು ಅಂತರ್‌ಪಠ್ಯೀಯವಾಗಿ ಬೆರೆತುಹೋಗಿರುವ ರೀತಿಯನ್ನು ಗ್ರಹಿಸುವ ನಿರೂಪಣೆಯಿದು’ ಎಂದು ನಟರಾಜ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿರುವುದು, ಇನ್ನಷ್ಟು ಲೇಖಕರಿಗೆ, ಭಿನ್ನ ಮಾದರಿಯ ಬರವಣಿಗೆಗೆ ಪ್ರೇರೇಪಿಸಿದರೂ ಆಶ್ಚರ್ಯವಿಲ್ಲ.
ಲಂಕೇಶ್ ಮತ್ತು ಡಿಆರ್ ಅವರನ್ನು ನಟರಾಜ್, ತಮ್ಮ ಭಾವ ಭಿತ್ತಿಯೊಳಕ್ಕೆ ಇಳಿಸಿಕೊಂಡ ಬಗೆಯನ್ನು ವಿವರಿಸುತ್ತಾ, ‘ನಾನು ಲಂಕೇಶರ ಆಪ್ತವಲಯಕ್ಕೆ ಹೋಗುವ ಮೊದಲೇ ಎಂಬತ್ತರ ದಶಕದ ಕೊನೆಗೆ ಡಿಆರ್ ಜೊತೆಗಿನ ನನ್ನ ಸಂಶೋಧನೆಯ ಒಡನಾಟ ಶುರುವಾಯಿತು. ‘ಲಂಕೇಶ್ ಪತ್ರಿಕೆ’ಯ ಮೂಲಕ ಮಾನವ ವರ್ತನೆ, ಸಮಾಜ, ರಾಜಕಾರಣವನ್ನು ಗ್ರಹಿಸಲು ಕಲಿಯತೊಡಗಿದ್ದ ನನಗೆ ಡಿಆರ್ ವಸಾಹತುವಿರೋಧಿ ಸಿದ್ಧಾಂತಗಳನ್ನು, ನಿರ್ವಸಾಹತೀಕರಣ ಸಿದ್ಧಾಂತಗಳನ್ನು ಮೊದಲ ಬಾರಿಗೆ ಪರಿಚಯಿಸತೊಡಗಿದ್ದರು. ಗಾಂಧೀಜೀ, ಫ್ರಾಂಟ್ಜ್ ಫ್ಯಾನನ್, ಮನೋನ್, ಅಶೀಶ್ ನಂದಿ ಮುಂತಾದ ಚಿಂತಕರ ಬಗ್ಗೆ ಮಾತನಾಡುತ್ತಾ, ವಸಾಹತೀಕರಣ ತೃತೀಯ ಜಗತ್ತಿಗೆ ತಂದ ಚಲನೆ ಹಾಗೂ ಆಘಾತಗಳನ್ನು ವಿವರಿಸುತ್ತಾ, ನಾನು ಆವರೆಗೆ ಕಾಣದ ಬೌದ್ಧಿಕ ಲೋಕವೊಂದನ್ನು ತೆರೆಯತೊಡಗಿದರು. ಆಸೆಯಿಂದ, ಗೊಂದಲದಿಂದ, ಉನ್ನತ ಸಿದ್ಧಾಂತಗಳನ್ನು ಕುರಿತ ಪುಳಕ ಹಾಗೂ ಅವುಗಳ ಎದುರು ಹುಟ್ಟುವ ಅಧೀರತೆಯಿಂದ ಅವನ್ನೆಲ್ಲ ಮುಟ್ಟಲೆತ್ನಿಸಿದೆ. ‘ಲಂಕೇಶ್ ಪತ್ರಿಕೆ’ಯಂತೆಯೇ ಡಿಆರ್ ರೂಪಿಸಿಕೊಡುತ್ತಿದ್ದ ಅಧ್ಯಯನವಿಧಾನ ಕೂಡ ನನ್ನೊಳಗೆ ಮೆಲ್ಲಗೆ ಪ್ರವೇಶಿಸತೊಡಗಿತು’ ಎಂದಿರುವುದು ಅವರ ಸೃಜನಶೀಲ ಮನಸ್ಸು ಅರಳಿದ ಬಗೆಯನ್ನು ಅನಾವರಣಗೊಳಿಸುತ್ತದೆ.
ಪುಸ್ತಕದ ಟೈಟಲ್ ‘ಇಂತಿ ನಮಸ್ಕಾರಗಳು’ ...ತುಟಿಯ ಮೇಲೆ ಪದಗಳು ಸುಳಿದಾಡುತ್ತಿದ್ದಂತೆಯೇ ನೆನಪಾದದ್ದು ಕಿರಂ. ಲಂಕೇಶರು ಜನವರಿ 25, 2000 ರಂದು ಇಹಲೋಕ ತ್ಯಜಿಸಿದಾಗ, ಆ ವಾರ ಅವರಿಲ್ಲದ ‘ಲಂಕೇಶ್ ಪತ್ರಿಕೆ’ಯನ್ನು ರೂಪಿಸುವ ಮಹತ್ವದ ಜವಾಬ್ದಾರಿ ಪತ್ರಿಕೆಯ ಬಳಗದ ಮೇಲೆ ಬಿತ್ತು. ಶ್ರದ್ಧಾಂಜಲಿ ಅರ್ಪಿಸುವ ಸಂಚಿಕೆಯನ್ನಾಗಿ ಹೊರತರಲು ಯೋಚಿಸಿದೆವು. ಓದುಗರು, ಲೇಖಕರು, ಅಭಿಮಾನಿಗಳು ಎಲ್ಲರೂ ಸ್ಪಂದಿಸಿದರು. ಸಂಚಿಕೆ ಸಮೃದ್ಧವಾಗಿ ರೂಪುಗೊಳ್ಳತೊಡಗಿತು. ಮುಖಪುಟ ಸಿದ್ಧವಾಗುವ ಸಮಯದಲ್ಲಿ ಎದುರಾದದ್ದು- ಆ ಸಂಚಿಕೆಯ ಮಹತ್ವವನ್ನು ಹೇಳಬಲ್ಲ, ಕ್ಯಾಚಿ ಟೈಟಲ್. ಆ ತಕ್ಷಣವೇ ಕಿರಂ, ‘ಇಂತಿ ನಮಸ್ಕಾರಗಳು’ ಅಂತಿರಲಿ ಎಂದರು. ನಟರಾಜ್ ಸೇರಿದಂತೆ ಎಲ್ಲರಿಂದಲೂ ಸೂಪರ್ ಎನ್ನುವ ಉದ್ಗಾರ. ಆ ಸಂಚಿಕೆ ಇವತ್ತು ಇತಿಹಾಸ, ಇರಲಿ.
ನಟರಾಜರ ‘ಇಂತಿ ನಮಸ್ಕಾರಗಳು’ ಪುಸ್ತಕ ನೋಡುತ್ತಿದ್ದಂತೆ ಮತ್ತದೇ ನೆನಪು ಸುಳಿದುಹೋಯಿತು. ಪುಸ್ತಕದ ಮುಖಪುಟದಲ್ಲಿದ್ದ ಲಂಕೇಶ್ ಮತ್ತು ಡಿಆರ್ ಅವರ ಕಪ್ಪು ಬಿಳುಪಿನ ಚಿತ್ರಗಳನ್ನು ಬಹಳ ಪ್ರೀತಿಯಿಂದ ತಡವಿದೆ. ಅಲ್ಲಿದ್ದವರು ನನಗೂ ಗೊತ್ತಿದ್ದವರಾದ್ದರಿಂದ ಆಸ್ಥೆಯಿಂದ ಓದಿದೆ. ಮತ್ತೆ ಮತ್ತೆ ಓದಿದೆ. ಮೊದಲ ಓದಿಗೆ ದಕ್ಕಿದ್ದನ್ನು ನಟರಾಜರಿಗೆ ಹೇಳಬೇಕೆನಿಸಿತು. ಒಂದು ಮಿಂಚಂಚೆಯ ಪತ್ರ ಬರೆದೆ. ಅದು ಇಂತಿದೆ...
ಪ್ರಿಯ ನಟರಾಜ್,
ಲಂಕೇಶರನ್ನು ಹತ್ತಿರದಿಂದ ಬಲ್ಲಂತಹ ಎಲ್ಲರಿಗೂ ಹೊಟ್ಟೆಕಿಚ್ಚಾಗುವಂತೆ ಬರೆದಿದ್ದೀರಿ. ಎರಡು ಮೂರು ದಿನ ಮತ್ತೆ ಮತ್ತೆ ಓದಿದೆ. ಲಂಕೇಶರು ತೀರಿಹೋದ ಈ ಹದಿಮೂರು ವರ್ಷಗಳ ಕಾಲ, ಲಂಕೇಶರ ಒಡನಾಟವಿಲ್ಲದೆ ವಿಚಿತ್ರ ವೇದನೆಯಲ್ಲಿ ನರಳುತ್ತಿದ್ದ ನನಗೆ, ಪುಸ್ತಕ ಓದುತ್ತಿದ್ದಂತೆ ಲಂಕೇಶರೊಂದಿಗೆ ಮತ್ತೆ ಬದುಕಿದಂತಾಯಿತು. ಅದರಲ್ಲೂ ಕೊನೆಯ ‘ಇಂತಿ ನಮಸ್ಕಾರಗಳು’ ಅಧ್ಯಾಯವನ್ನು ಓದುತ್ತಿದ್ದಂತೆ, ನನಗೇ ಗೊತ್ತಿಲ್ಲದೆ ಕಣ್ಣಲ್ಲಿ ನೀರೂ ಬಂತು. ಲಂಕೇಶ್ ಮೇಸ್ಟ್ರನ್ನ ಹಿಡಿದು ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಇನ್ನು ಡಿಆರ್ ಬಗ್ಗೆ ನಿಮ್ಮದೇ ಅಕಡಮಿಕ್ ಶೈಲಿಯಲ್ಲಿ ಕಂಡಿರಿಸಿರುವುದು ಕೂಡ ಸರಿಯಾಗಿದೆ. ಆದರೆ ನನಗೆ ಮಾತ್ರ ಲಂಕೇಶರ ಭಾಗ ಇಷ್ಟವಾಯಿತು. ಅಷ್ಟೇ ಅಲ್ಲ, ನೇರವಾಗಿ ಕರುಳಿಗೆ ಇಳಿಯಿತು.
ಒಟ್ಟಿನಲ್ಲಿ ನಿಮ್ಮ ಬದುಕಿನಲ್ಲಿ ಮಾಡಲೇಬೇಕಾಗಿದ್ದ ಮಹತ್ವದ ಕೆಲಸವೊಂದನ್ನು ನೀವು ಮಾಡಿದ್ದೀರಿ- ಬನ್ನಿ ಒಂದು ಡ್ರಿಂಕ್ ಕೊಡುತ್ತೇನೆ.
ನಿಮ್ಮ
ಬಸು
ಹೌದು ಬಸು... ಹೇಳದೆ ಕೇಳದೆ ಹೋಗಿದ್ದ ಲಂಕೇಶರನ್ನು ಯಾರದರೂ ಹಿಡಿದುಕೊಂಡು ಬರಬಾರದೆ ಎಂದು ಸಾವಿರ ಸಲ ಅನಿಸಿದ್ದಿದೆ...ಹೀಗಾದರೂ ಸಿಕಿದ್ದಾರಲ್ಲ ಅಂತ ಸಮಾಧಾನ ಮಾಡಿಕೊಳ್ಳೋಣ ಬಿಡು!!!
ReplyDelete