ಎಸ್.ಆರ್. ಹಿರೇಮಠ |
ಕರ್ನಾಟಕ-ಆಂಧ್ರಪ್ರದೇಶ ರಾಜ್ಯ ಸರ್ಕಾರಗಳನ್ನು ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಿದ್ದ ಬಳ್ಳಾರಿಯ ಗಣಿಧಣಿಗಳ ಸದ್ದಡಗಿದ್ದರೆ, ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಪ್ರವಾಸೋದ್ಯಮ ಮಂತ್ರಿಯಾಗಿ ಮೆರೆದ ಜನಾರ್ದನ ರೆಡ್ಡಿ ಇವತ್ತು ಜೈಲು ವಾಸಿಯಾಗಿದ್ದರೆ, ಗಣಿರೆಡ್ಡಿ ಸಾಮ್ರಾಜ್ಯ ಪತನದ ಅಂಚಿಗೆ ಸರಿದಿದ್ದರೆ ಅದರ ಹಿಂದೆ ಹಿರೇಮಠರ ಸಾಮಾಜಿಕ ಕಳಕಳಿ ಇದೆ.
2009ರಿಂದ 2010ರವರೆಗೆ 17 ತಿಂಗಳ ಅವಧಿಯಲ್ಲಿ ಸುಮಾರು 37 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಬೇಲೆಕೇರಿ ಬಂದರಿನಿಂದ ನಾಪತ್ತೆಯಾದ ಪ್ರಕರಣದಲ್ಲಿ ಮಾಜಿ ಸಚಿವರಾದ ಆನಂದ್ ಸಿಂಗ್, ಸಂತೋಷ್ ಲಾಡ್, ಶ್ರೀರಾಮುಲು ಮತ್ತು ಶಾಸಕರಾದ ಸತೀಶ್ ಸೈಲ್ ಭಾಗಿಯಾಗಿರುವುದನ್ನು ದಾಖಲೆಗಳ ಸಮೇತ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ, ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುವಂತೆ ಮಾಡಿದ್ದರ ಹಿಂದೆ, ಹಿರೇಮಠರ ಸಮಾಜವನ್ನು ಎಚ್ಚರಿಸುವ ಇರಾದೆ ಇದೆ.
ಕಾಂಗ್ರೆಸ್ಸಿನ ಪ್ರಭಾವಿ ಒಕ್ಕಲಿಗ ನಾಯಕರಾದ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಳಿಯ ಸಿದ್ಧಾರ್ಥ್‌ರ ಅವ್ಯವಹಾರಗಳನ್ನು, ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರವರ ಅಕ್ರಮ ಭೂ ಒತ್ತುವರಿಯನ್ನು ದಾಖಲೆ ಸಮೇತ ಬಿಚ್ಚಿಡುತ್ತಿರುವುದರ ಹಿಂದೆ ಹಿರೇಮಠರ ನ್ಯಾಯಪರ ಹೋರಾಟವಿದೆ.
ಮತ್ತು ಈಗ, ಚುನಾವಣಾ ಸಂದರ್ಭದಲ್ಲಿ, ಐವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ, ಕಣದಲ್ಲಿರುವ ಒಟ್ಟು ಹನ್ನೊಂದು ಭ್ರಷ್ಟ ಅಭ್ಯರ್ಥಿಗಳನ್ನು ಪಟ್ಟಿ ಮಾಡಿ, ‘ಭ್ರಷ್ಟರೆ ಸಾರ್ವಜನಿಕ ಜೀವನ ಬಿಟ್ಟು ತೊಲಗಿ’ ಎಂಬ ಹಿರೇಮಠರ ಆಂದೋಲನದ ಹಿಂದೆ ದೇಶದ ಹಿತಕಾಯುವ ಕಳಕಳಿ ಇದೆ.
ಇವು ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನ ಕಂಡ, ಕೇಳಿದ ಕೆಲವು ಹಗರಣಗಳು. ಕರ್ನಾಟಕದ ಚಹರೆಯನ್ನು ಬದಲಿಸಿದ ಘಟನೆಗಳು. ದೇಶದಲ್ಲಿರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ನಂಬಿಯೇ ಬದಲಾವಣೆಯನ್ನು ತರಬಹುದು; ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಮುಖ್ಯಮಂತ್ರಿಯಂತಹ ಬಲಾಢ್ಯನನ್ನೂ ಕುರ್ಚಿಯಿಂದ ಕೆಳಗಿಳಿಸಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡುತ್ತಿದ್ದಾರೆ. ಭಂಡರ, ಬಲಾಢ್ಯರ, ಭ್ರಷ್ಟರ ಮುಖದಲ್ಲಿ ಆತಂಕದ ಗೆರೆಗಳನ್ನು ಮೂಡಿಸುತ್ತಿದ್ದಾರೆ.
ಹಾಗಾದರೆ ಈ ಹಿರೇಮಠರು ಯಾರು, ಎಂತಹವರು, ಅವರು ಮಾಡಿದ್ದೇನು, ಮಾಡುತ್ತಿರುವುದೇನು?
ಹುಟ್ಟಿದ್ದು ಹಳ್ಳಿಯಲ್ಲಿ, ಬಡ ಕುಟುಂಬದಲ್ಲಿ
ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದ ರಾಚಯ್ಯ ಹಿರೇಮಠ್ ಕೃಷಿಕರು, ಸಹಕಾರಿ ಕ್ಷೇತ್ರದ ಮುಖಂಡರು ಮತ್ತು ಸ್ವಾತಂತ್ರ್ಯ ಹೋರಾಟಗಾರರು. ಆ ಕಾಲಕ್ಕೇ ರಾಚಯ್ಯನವರು ಹಳ್ಳಿಯ ಬಡವರ ಪರವಾಗಿ ಹೋರಾಟ ಮಾಡುವ ನಾಯಕರಾಗಿದ್ದರು. ಜನಗಳಿಗೆ ಸಹಕಾರಿ ತತ್ವ ಸಾರುವುದು, ಖಾದಿ ನೂಲುವ ಮಹತ್ವ ತಿಳಿಸುವುದು, ಆ ಮೂಲಕ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ರಾಚಯ್ಯನವರ ಹೋರಾಟದ ಮುಖ್ಯ ಉದ್ದೇಶವಾಗಿತ್ತು.
ಹೀಗೆ ಬಡವರ ಪರವಾಗಿ ಹೋರಾಡುತ್ತಿದ್ದಾಗ, ಸಹಕಾರಿ ಸಂಘದ ಕೇಸೊಂದರಲ್ಲಿ ರಾಚಯ್ಯನವರು ಜಯ ಪಡೆದಿದ್ದರು. ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ಪೊಲೀಸರು ಮುಂದಾದಾಗ, ಊರಿನ ಶ್ರೀಮಂತರು ರಾಚಯ್ಯನವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಆಗ ರಾಚಯ್ಯನವರು ತಲೆಮರೆಸಿಕೊಂಡು ತಾಯಿಯ ತವರೂರಾದ ಬಿಜಾಪುರಕ್ಕೆ ತೆರಳಿದ್ದರು. ಅಲ್ಲಿ ಕಟ್ಟಡ ಕೆಲಸದ ಕಂಟ್ರಾಕ್ಟರ್ ಕೆಲಸ ನಿರ್ವಹಿಸುವಾಗ ಕ್ಷಯ ರೋಗಕ್ಕೆ ತುತ್ತಾಗಿ ಇಹಲೋಹ ತ್ಯಜಿಸಿದರು.
ಇಂತಹ ಸ್ವಾತಂತ್ರ್ಯ ಹೋರಾಟಗಾರ ರಾಚಯ್ಯ ಹಿರೇಮಠರ ಮಗನಾಗಿ ನವೆಂಬರ್ 5, 1944ರಲ್ಲಿ ಹುಟ್ಟಿದ ಸಂಗಯ್ಯ ರಾಚಯ್ಯ ಹಿರೇಮಠ್, ತಮ್ಮ 5 ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ತಾಯಿ ರಾಚವ್ವರ ಆರೈಕೆಯಲ್ಲಿ ಬೆಳೆಯುತ್ತಿದ್ದ ಬಾಲಕನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆಡುವ ವಯಸ್ಸಲ್ಲಿ ಶೇಂಗ ಆರಿಸುವ, ಖಾದಿ ನೂಲುವ ದಿನಗೂಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಆದರೂ ಕೆಲಸ ಮಾಡಿಕೊಂಡೇ ಶಾಲೆಗೆ ಹೋಗುತ್ತಿದ್ದ ಹಿರೇಮಠ್, ಓದಿನಲ್ಲಿ ಸದಾ ಮುಂದಿದ್ದರು. ಬಸ್ ಕಂಡಕ್ಟರ್ ಆಗಿದ್ದ ಸಹೋದರ ಮನೆಯನ್ನು ನಿಭಾಯಿಸಿದರೆ, ದಿನಗೂಲಿಯಿಂದ ಶಾಲೆಯ ಖರ್ಚು ವೆಚ್ಚವನ್ನೆಲ್ಲ ಹಿರೇಮಠರು ಸಂಭಾಳಿಸಿದರು.
ಮೆರಿಟ್ ಸ್ಟೂಡೆಂಟ್
ಬಿಜಾಪುರದ ಶಾಲೆಯ ವಿದ್ಯಾಭ್ಯಾಸದಲ್ಲಿ ತರಗತಿಗೆ ಮೊದಲಿಗನಾಗಿದ್ದ ಬಾಲಕ ಹಿರೇಮಠರು, ಅಲ್ಲಿಂದ ಕಲಿತದ್ದು ಅಪಾರ.
ಹಿರೇಮಠರು ಹೈಸ್ಕೂಲ್ ಓದುವಾಗಲೇ, ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರ ಪ್ರವಚನಗಳ ಸಾರವನ್ನು ಲೇಖನವನ್ನಾಗಿ ಬರೆದು ಬಹುಮಾನಗಳನ್ನು ಗಳಿಸಿದ್ದರು. ಇಲ್ಲಿ ಓದುತ್ತಿರುವಾಗಲೇ, ಕನ್ನಡದ ಹೆಸರಾಂತ ಸಾಹಿತಿ ಶಿವರಾಮ ಕಾರಂತರು ಶಾಲೆಯ ಕಾರ್ಯಕ್ರಮವೊಂದಕ್ಕೆ ಬಂದು, ‘ನಾವು ತಂದೆ-ತಾಯಿಗಳ ಋಣ, ಗುರು-ಹಿರಿಯರ ಋಣ ತೀರಿಸುವ ಬಗೆಗೆ ಮಾತನಾಡುತ್ತಿದ್ದೇವೆ. ಆದರೆ ಸಮಾಜದ ಋಣ ತೀರಿಸುವ ಬಗೆಗೆ ಚಿಂತಿಸುವುದಿಲ್ಲ’ ಎಂದು ಹೇಳಿದ್ದು ಬಾಲಕ ಹಿರೇಮಠರನ್ನು ಚಿಂತನೆಯ ಹಾದಿಗೆ ಹಚ್ಚಿತು.
ಆ ಕಾಲಕ್ಕೇ ಹಿರೇಮಠರು ನ್ಯಾಷನಲ್ ಮೆರಿಟ್ ಸ್ಟೂಡೆಂಟ್ ಎಂದು ಹೆಸರು ಗಳಿಸಿದ್ದರು. ಎಸ್‌ಎಸ್‌ಸಿ(1961)ಯಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿದ್ದರು. ಆಗ ಸಹಜವಾಗಿಯೇ ಸಮಾಜದ ಗಣ್ಯರ ಗಮನ ಹಿರೇಮಠರತ್ತ ಹರಿಯಿತು. ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ, ಮುಖ್ಯಮಂತ್ರಿಗಳಾಗಿದ್ದ ಬಿ.ಡಿ. ಜತ್ತಿಯವರು ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಬಂದು ಹಿರೇಮಠರನ್ನು ಬಾಯ್ತುಂಬ ಹೊಗಳಿ, ಪ್ರೋತ್ಸಾಹಿಸಿದ್ದರು. ಆ ನಂತರ ಪಿಯೂಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ತೇರ್ಗಡೆಯಾದರು. ಪಿಯೂಸಿ ಮುಗಿಸಿ ಹುಬ್ಬಳ್ಳಿಯ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜ್‌ಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಗೆ ಸೇರಿ, ತರಗತಿಗೇ ಮೊದಲನೆಯರಾಗಿ ಉತ್ತೀರ್ಣರಾದರು.
1967ರಲ್ಲಿ ಬಿಇ ಪದವಿ ಮುಗಿಸಿದ ಹಿರೇಮಠರು, ಒಂದು ವರ್ಷ ಕಾಲ ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್ ಪಾಸು ಮಾಡಿದ್ದ ಹಿರೇಮಠರಿಗೆ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದಲ್ಲಿದ್ದ ಸ್ನೇಹಿತರಿಂದ ಒತ್ತಡ ಹೆಚ್ಚಾಗತೊಡಗಿತು. ಆ ಕಾಲಕ್ಕೇ ಅಮೆರಿಕಾದಲ್ಲಿ ವಾಸವಾಗಿದ್ದ ಶರಣ ನಂದಿ ಎಂಬ ಸ್ನೇಹಿತರ ಸಹಕಾರದಿಂದ ಹಿರೇಮಠರು, ಅಮೆರಿಕಾದ ಮ್ಯಾನ್ ಹಟನ್‌ನ ಕ್ಯಾನ್‌ಸಾಸ್ ಸ್ಟೇಟ್ ವಿವಿಯಲ್ಲಿ ಮಾಸ್ಟರ್ ಆಫ್ ಸೈನ್ಸ್ ಪರೀಕ್ಷೆಯನ್ನು ಇಂಡಸ್ಟ್ರಿಯಲ್ ಎಂಜಿನಿಯರಿಂಗ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸು ಮಾಡಿದರು.
ಮುಂದೆ ಶಿಕಾಗೋದಲ್ಲಿ ಇಲಿನಾಯ್ಸ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಬಿಎ ಮಾಡಿದರು.ಅಮೆರಿಕಾದಲ್ಲಿ ಎಂಎಸ್ ಮುಗಿಸುವ ಮುಂಚೆಯೇ ಹಿರೇಮಠರನ್ನು ಮೂರು ಕೆಲಸಗಳು ಅರಸಿ ಬಂದವು. ಅವುಗಳನ್ನು ಆರಿಸಿಕೊಂಡ ಹಿರೇಮಠರು ಆಪರೇಷನ್ಸ್ ರೀಸರ್ಚ್ ಅನಲಿಸ್ಟ್, ಇಲಿನಾಯ್ಸ್ ಬ್ಯಾಂಕ್ ಟ್ರಸ್ಟ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್‌ನ ಮ್ಯಾನೇಜರ್- ಹೀಗೆ ಮೂರು ಉನ್ನತ ಹುದ್ದೆಯ ಕೆಲಸಗಳಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ನ್ಯೂಸ್ ಮೇಕರ್ಸ್ ಇನ್ ಅಮೆರಿಕಾ
ಹಿರೇಮಠರು ಅಮೆರಿಕಾದಲ್ಲಿ ಎಂಎಸ್ ಮತ್ತು ಎಂಬಿಎ ಮಾಡಿ, ಹಲವಾರು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿಯೇ, ಸ್ನೇಹಿತರು ಒಟ್ಟುಗೂಡಿದಾಗ ಚಿಂತನೆಗೆ ಒಳಗಾಗುತ್ತಿದ್ದ ಭಾರತೀಯ ಗ್ರಾಮೀಣ ಬಡಜನರ ಬಗೆಗಿನ ಕಳಕಳಿ 1974ರಲ್ಲಿ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’ ಸಂಸ್ಥೆಯಾಗಿ ರೂಪುಗೊಳ್ಳಲು ಕಾರಣವಾಯಿತು. 1975ರಲ್ಲಿ, ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದರು. ಇಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಸೋಷಲಿಸ್ಟ್ ಪಾರ್ಟಿಯ ಜಯಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದರೆ, ಅತ್ತ ಅಮೆರಿಕಾದಲ್ಲಿ ಭಾರತದ ಮೇಲೆ ವಿಧಿಸಿದ ಕರಾಳ ಕಾನೂನಿನ ವಿರುದ್ಧ ಧ್ವನಿಯೆತ್ತಿ ನ್ಯೂಸ್ ಮೇಕರ್‌ಗಳಾದವರು ಇದೇ ಹಿರೇಮಠ್ ಮತ್ತವರ ಗೆಳೆಯರು. ಇವರ ಪ್ರತಿಭಟನೆಯಿಂದಾಗಿ ನಾಲ್ಕು ಜನರ ಪಾಸ್‌ಪೋರ್ಟ್ ಕಿತ್ತುಕೊಂಡಿದ್ದರು. ಒಟ್ಟು 12 ನಗರಗಳಲ್ಲಿ ಇವರು ನ್ಯೂಸ್ ಮೇಕರ್ಸ್ ಆಗಿ ಖ್ಯಾತಿ ಗಳಿಸಿದ್ದರು.
ಆ ಸಂದರ್ಭದಲ್ಲಿಯೇ ಹಿರೇಮಠರೊಂದಿಗೆ ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರಾದ ರಾಮ್ ಜೇಠ್ಮಲಾನಿ, ಸುಬ್ರಹ್ಮಣ್ಯಂಸ್ವಾಮಿ, ಎಚ್.ವಿ. ಕಾಮತ್, ರಾಮಧನ್, ನಾಗಾ ಘೋರೆ, ಚಂದ್ರಶೇಖರ್, ಜಯಪ್ರಕಾಶ್ ನಾರಾಯಣ್‌ರ ಜೊತೆ ಸಂಪರ್ಕ ಬೆಳೆದಿತ್ತು. 1977ರಲ್ಲಿ ಜಯಪ್ರಕಾಶ್ ನಾರಾಯಣ್ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ಬಂದಾಗ, ಅವರನ್ನು ಮುಖತಃ ಭೇಟಿಯಾಗಿ ಭಾರತದ ಗ್ರಾಮೀಣಾಭಿವೃದ್ಧಿಯ ಬಗ್ಗೆ ಚರ್ಚಿಸಿದ್ದು, ಮುಂದೆ ಭಾರತದಲ್ಲಿ ಬಡವರ ಬಗ್ಗೆ ಕೆಲಸ ಮಾಡಲಿಕ್ಕೆ ಭದ್ರಬುನಾದಿ ಹಾಕಿಕೊಟ್ಟಿತ್ತು.
ಇದೇ ಸಮಯದಲ್ಲಿ, ಭಾರತದ ಗ್ರಾಮೀಣ ಬಡಜನರ ಬಗ್ಗೆ ಚಿಂತಿಸುತ್ತಿದ್ದಾಗ, ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾಗ, ಆ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದ ಅಮೆರಿಕಾ ಮತ್ತು ಇಂಗ್ಲೆಂಡ್‌ನ ಕೆಲ ಎನ್ಜಿಓ ಸಂಸ್ಥೆಗಳು ಇವರ ಸಂಪರ್ಕಕ್ಕೆ ಬಂದವು. ಹಾಗೆಯೇ ಹಿರೇಮಠರು ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದಾಗ, ಭಾರತದಲ್ಲಿದ್ದ ಕೆಲ ಐಐಟಿ ಗೆಳೆಯರು ಬಡವರ ಬಗ್ಗೆ ಕೆಲಸ ಮಾಡುತ್ತಿದ್ದರು. ಅವರಿಗೆ ಹಿರೇಮಠರು ಧನಸಹಾಯ ಮಾಡುತ್ತಿದ್ದರು. ಭಾರತಕ್ಕೆ ಬರುವ ಮುಂಚೆ ಹಿರೇಮಠರು ಈ ಐಐಟಿ ಗೆಳೆಯರನ್ನು ಸಂಪರ್ಕಿಸಿದರು. ಅವರು ಭಾರತದ ನಿರುದ್ಯೋಗದ ಬಗ್ಗೆ ಸವಿಸ್ತಾರ ವಿವರಣೆ ನೀಡಿ, ಆ ಬಗ್ಗೆ ಪ್ರಕಟವಾಗಿದ್ದ ಲೇಖನವೊಂದನ್ನು ಕೊಟ್ಟರು. ಆ ಲೇಖನದ ಮೂಲ ಹಿಡಿದು ಹೋದಾಗ ಸಿಕ್ಕಿದ್ದು, ಆ ಕಾಲಕ್ಕೇ ಎಕಲಾಜಿಕಲ್ ಚೇಂಜಸ್ ಬಗ್ಗೆ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂಬ ಪುಸ್ತಕ ಬರೆದು ಖ್ಯಾತಿ ಗಳಿಸಿದ್ದ ಲಂಡನ್ ಮೂಲದ ಲೇಖಕ ಡಾ. ಇ.ಎಫ್. ಷೂಮೇಕರ್. ನಂತರ ಅವರ ಪರಿಚಯವಾಯಿತು. ಅವರ ಪ್ರಭಾವ ಹಿರೇಮಠರ ಮೇಲೆ ಎಷ್ಟರಮಟ್ಟಿಗೆ ಆಯಿತೆಂದರೆ, ಭಾರತದ ಬಗೆಗಿನ ಅವರ ಕನಸಿಗೆ ಆ ಪುಸ್ತಕ ಕಣ್ಣಾಯಿತು.
ಮಾವಿಸ್ ಮಡದಿಯಾದದ್ದು
1975-77ರಲ್ಲಿ ಶಿಕಾಗೋದಲ್ಲಿ ಫೆಡರಲ್ ರಿಸರ್ವ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಭಾರತದಿಂದ ಹೋದವರು, ಅಲ್ಲಿ ಪರಿಚಯವಾದವರು ಆಗಾಗ ಒಂದು ಕಡೆ ಕಲೆಯುವುದು ರೂಢಿಯಾಗಿತ್ತು. ಹೀಗೆಯೇ ಒಂದು ಸಲ ಸ್ನೇಹಿತರೊಬ್ಬರ ಮನೆಗೆ ಊಟಕ್ಕೆ ಹೋದಾಗ, ಅಲ್ಲಿ ಅಮೆರಿಕಾದ ಹುಡುಗಿ ಮಾವಿಸ್ ಸಿಗ್ವಾಲ್ಟ್ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬೆಳೆದು ಮದುವೆಯ ಹಂತಕ್ಕೆ ಮುಟ್ಟಿತು. ಆ ಮುಂಚೆ ಕುಮಾರಿ ಮಾವಿಸ್ ಆಗಿದ್ದವರು ಎಸ್.ಆರ್. ಹಿರೇಮಠರನ್ನು ಮದುವೆಯಾದ ನಂತರ, ತಮ್ಮ ಹೆಸರುನ್ನು ಶ್ಯಾಮಲಾ ಹಿರೇಮಠ್ ಎಂದು ಬದಲಿಸಿಕೊಂಡರು.
ಮಾವಿಸ್ ಮೂಲತಃ ಅಮೆರಿಕಾದವರು, ಸಮಾಜಪರ ಚಿಂತನೆಯ ಒಲವುಳ್ಳವರು, ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಶಾಂತಿಸೇನೆಯಲ್ಲಿ ಸ್ವಯಂಸೇವಕಿಯಾಗಿ ಪಶ್ಚಿಮ ಆಫ್ರಿಕಾದ ಸಿರಿಲಿಯೋನಾ ದೇಶದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿ ಬಂದಿದ್ದರು. ಸಮಾನ ಮನಃಸ್ಥಿತಿಯುಳ್ಳವರಾದ್ದರಿಂದ ಸಹಜವಾಗಿಯೆ ಬೆರೆತರು, ಸಮಾಜಪರ ಹೋರಾಟಗಳಲ್ಲಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತರು. ಈ ಸಂದರ್ಭದಲ್ಲಿ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಹುಟ್ಟಿದರು. ಮಗ- ರಾಜ್, ಮಗಳು-ಶೀಲಾ.
ಭಾರತದಿಂದ ಅಮೆರಿಕಾಕ್ಕೆ ಹೋಗುವಾಗಲೇ ಹಿರೇಮಠರು ತಿರುಗಿ ಬರುವ ಯೋಚನೆಯನ್ನೂ ಮಾಡಿದ್ದರು. ಆ ಕಾರಣದಿಂದಾಗಿಯೇ ಭಾರತಕ್ಕೆ ವಾಪಸಾಗಿ ಕೆಲ ಸ್ನೇಹಿತರ ಜೊತೆಗೂಡಿ ಉದ್ಯಮ ಸ್ಥಾಪಿಸುವ, ಆ ಮೂಲಕ ಕೆಲವು ಜನಕ್ಕೆ ಉದ್ಯೋಗ ಕಲ್ಪಿಸುವ ಚಿಂತನೆಯೂ ಇತ್ತು. ಆದರೆ ಹಿರೇಮಠರಿಗೆ ಇದು ಒಂದಷ್ಟು ಜನಕ್ಕೆ ಉದ್ಯೋಗ ನೀಡುವ ಸೀಮಿತ ಉದ್ದೇಶದಂತೆ ಕಂಡು ಕೈಬಿಟ್ಟರು. ಬದಲಿಗೆ ಭಾರತದ ಕಡುಬಡವರು, ಅವರ ಕರುಣಾಜನಕ ಸ್ಥಿತಿ, ಶೋಷಣೆ, ಆರ್ಥಿಕ-ಸಾಮಾಜಿಕ ಅಸಮತೋಲನಗಳೆಲ್ಲ ಕಣ್ಮುಂದೆ ಬಂದು, ಆ ನಿಟ್ಟಿನಲ್ಲಿ ಮಹತ್ವದ್ದಾದ ಏನಾದರೂ ಮಾಡಬೇಕೆಂಬ ಮಹದಾಸೆ ಹುಟ್ಟಿತು. ಅದನ್ನೇ ತಲೆ ತುಂಬಿಕೊಂಡು ಅಮೆರಿಕಾ ತೊರೆದು ತಾಯ್ನಿಡಿಗೆ ಬಂದರು.
ಮರಳಿ ಮಣ್ಣಿಗೆ, ಮೆಡ್ಲೇರಿಗೆ
ಜುಲೈ 1, 1979 ರಂದು ಹಿರೇಮಠರ ಸಂಸಾರ ಅಮೆರಿಕಾ ತೊರೆದು ತಾಯ್ನಿಡಿಗೆ ಕಾಲಿಟ್ಟಿತು. ಜೊತೆಯಲ್ಲಿ ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್ ಎಂಬ ಸಂಸ್ಥೆಯಿತ್ತು. ಇದಲ್ಲದೆ ಹಿರೇಮಠರ ಚಿಂತನೆಗೆ ಬೆಂಬಲವಾಗಿ ನಿಂತ ಅಮೆರಿಕಾದ ಸ್ನೇಹಿತರು ಕೊಟ್ಟ 33 ಸಾವಿರ ಡಾಲರ್‌ನಷ್ಟು ಭಾರಿ ಮೊತ್ತದ ಫಂಡಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಏನಾದರೂ ಸಾಧನೆ ಮಾಡಿಯೇ ತೀರಬೇಕೆಂಬ ಛಲವಿತ್ತು.
ಮೊದಲಿಗೆ ಧಾರವಾಡಕ್ಕೆ ಬಂದ ಹಿರೇಮಠರು, ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರದ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡರು. ಆ ಹಳ್ಳಿಯಲ್ಲಿಯೇ 90 ರೂಪಾಯಿಗೆ ಪುಟ್ಟ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸಿಸತೊಡಗಿದರು. ತಮ್ಮ ಮಕ್ಕಳನ್ನು ಅಲ್ಲಿನ ಸರ್ಕಾರಿ ಶಾಲೆಗೆ ಸೇರಿಸಿದರು. ಆನಂತರ ‘ಇಂಡಿಯಾ ಡೆವಲಪ್ಮೆಂಟ್ ಸರ್ವಿಸ್’ (ಅಂತರರಾಷ್ಟ್ರೀಯ) ಎಂಬ ಸಂಸ್ಥೆ ಸ್ಥಾಪಿಸಿದರು. ಈ ಸೇವಾ ಸಂಸ್ಥೆಯ ಮುಖ್ಯ ಗುರಿ ಗ್ರಾಮೀಣಾಭಿವೃದ್ಧಿ, ಮಹಿಳಾ ಸಶಕ್ತಿಕರಣ. ಮೊದಲಿಗೆ ಸಂಸ್ಥೆಯ ಕಾರ್ಯಕ್ಷೇತ್ರಕ್ಕಾಗಿ ಮೆಡ್ಲೇರಿ ಸುತ್ತಮುತ್ತಲ 30 ಹಿಂದುಳಿದ ಹಳ್ಳಿಗಳನ್ನು ಆರಿಸಿಕೊಂಡು ಕೆಲಸ ಪ್ರಾರಂಭಿಸಿದರು. ಆ ನಂತರ ಸಮಾಜದ ಎಲ್ಲ ಕ್ಷೇತ್ರಗಳ ಜನರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿದರು, ಅವರ ಸಲಹೆ, ಸಹಕಾರ ಪಡೆದರು.
‘ನಾವು ಹಳ್ಳಿಗೆ ಹೋಗದೆ, ಸಿಟಿಯಲ್ಲಿದ್ದುಕೊಂಡು ಗ್ರಾಮೀಣ ಜನರನ್ನು ಉದ್ಧಾರ ಮಾಡುತ್ತೇವೆಂದರೆ, ಅದು ಆಗದ ಕೆಲಸ. ಅಭಿವೃದ್ಧಿ ಕಾರ್ಯ ಮಾಡಬೇಕೆನ್ನುವವರು ಗ್ರಾಮೀಣ ಜನರ ಜೊತೆಗೇ ಇದ್ದು ಪರಿಸ್ಥಿತಿಯ ನೈಜತೆಯನ್ನು ಅರಿಯಬೇಕು. ಆ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ಆ ಕಾರಣಕ್ಕಾಗಿಯೇ ನಾನು, ನನ್ನ ಹೆಂಡತಿ ಮಕ್ಕಳು ಆ ಹಳ್ಳಿಗೇ ಹೋಗಿ ನೆಲೆಸಿದೆವು. ಅಮೆರಿಕಾ ದೇಶದ ಮಹಿಳೆ ತನ್ನ ಮಕ್ಕಳೊಂದಿಗೆ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸಿಸುತ್ತ, ತಮ್ಮೆಲ್ಲರ ಜೊತೆಗೆ ಬೆರೆತು ಬದುಕುತ್ತಿರುವುದನ್ನು ನೋಡಿ ಗ್ರಾಮಸ್ಥರಲ್ಲಿ, ಅದರಲ್ಲೂ ಹಳ್ಳಿಯ ಮಹಿಳೆಯರಲ್ಲಿ ನಮ್ಮ ಬಗ್ಗೆ ವಿಶ್ವಾಸ ಬೆಳೆಯಿತು, ಅವರು ನಮ್ಮೊಂದಿಗೆ ಬೆರೆಯುವುದಕ್ಕೆ ಸುಲಭವಾವಾಯಿತು. ಅವರಲ್ಲಿ ಹೊಸ ಬದುಕಿಗೆ, ಬದಲಾವಣೆಗೆ ಕಾರಣವಾಯಿತು. ಹಳ್ಳಿಗರು ಸ್ವಾವಲಂಬಿಗಳಾಗಿದ್ದು ನಮಗೂ ಸಮಾಧಾನ ತಂದಿತು’ ಎನ್ನುತ್ತಾರೆ ಹಿರೇಮಠರು.
ಸ್ನೇಹಿತರು ಕೊಟ್ಟ ಫಂಡಿನಿಂದ ಮೆಡ್ಲೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಜನರಿಗೆ ಉಪಯುಕ್ತವಾಗುವಂತಹ ಅನೇಕ ಕಾರ್ಯಗಳು- ಗ್ರಾಮ ನೈಮರ್ಲೀಕರಣ, ಹೈನುಗಾರಿಕೆ, ಆರೋಗ್ಯ ಯೋಜನೆ, ಗ್ರಾಮೀಣ ಕೈಗಾರಿಕೆ, ವಯಸ್ಕರ ಶಿಕ್ಷಣ, ಕುರಿ ಸಾಕಾಣಿಕೆ, ಪರಿಸರ ಯೋಜನೆ, ಒಣ ಬೇಸಾಯ ಮತ್ತು ತೋಟಗಾರಿಕೆಗಳನ್ನು ಹಮ್ಮಿಕೊಂಡರು. ಈ ಎಲ್ಲ ಕಾರ್ಯಕ್ರಮಗಳನ್ನು ಮಹಿಳೆಯರೇ ಮಾಡುವಂಥದ್ದು ವಿಶೇಷವಾಗಿತ್ತು.
ಹಿರೇಮಠರ ಕುಟುಂಬ ಮತ್ತು ಸೇವಾ ಸಂಸ್ಥೆಯ ಪರಿಶ್ರಮದ ಫಲವಾಗಿ ಪ್ರಾಜೆಕ್ಟ್‌ಗೆ ಮೀಸಲಿರಿಸಿದ್ದ ಮೂರು ವರ್ಷಗಳಲ್ಲಿ ಐಡಿಎಸ್‌ಗೆ ದುಡಿಯಲು ಹಲವು ಸ್ವಯಂಸೇವಕರು ಮುಂದೆ ಬಂದರು. ಸಂಸ್ಥೆಯ ಕೆಲಸಗಳು ಜನರಲ್ಲಿ ವಿಶ್ವಾಸ ಹುಟ್ಟಿಸತೊಡಗಿದವು. ನಿಧಾನವಾಗಿ ಹಳ್ಳಿಯ ಜನ ಸ್ವಾವಲಂಬಿಗಳಾಗತೊಡಗಿದರು. 1982 ರಲ್ಲಿ ನೆದರ್‌ಲ್ಯಾಂಡ್ ದೇಶದ ಹಿವೋಸ್ (Hivos) ಸಂಸ್ಥೆ ಅಂತರರಾಷ್ಟ್ರೀಯ ಪ್ರಶಸ್ತಿಯಾದ ‘ಜಾಪ್ ವ್ಯಾನ್ ಪ್ರಾಗ್’ (Jaap Van Praag) ಬಹುಮಾನ ನೀಡಿ, ಸಂಸ್ಥೆಯ ಕೆಲಸವನ್ನು ಹೊಗಳಿತು. ಪ್ರಜಾವಾಣಿ ಸಂಸ್ಥೆಯ ‘ಸುಧಾ’ ಕನ್ನಡ ವಾರಪತ್ರಿಕೆ ‘ಶಿಕಾಗೋದಿಂದ ಮೆಡ್ಲೇರಿಗೆ’ ಎಂಬ ಕವರ್ ಸ್ಟೋರಿ ಮಾಡಿ, ಹಿರೇಮಠರ ಸಮಾಜ ಕಲ್ಯಾಣ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿತು.
ಜನಪರ ಹೋರಾಟಕ್ಕೆ ಧುಮುಕಿದ್ದು
ಮೂರು ವರ್ಷಗಳ ಫಂಡಿಂಗ್ ಮುಗಿದು, ಹಳ್ಳಿಗಳ ಜನ ಸ್ವಶಕ್ತಿಯಿಂದ ಬದುಕು ಸಾಗಿಸುತ್ತಿದ್ದಂತೆ, ಹಿರೇಮಠರು ನೈರ್ಮಲ್ಯ ಕುರಿತ ಜನಪರ ಹೋರಾಟವನ್ನು ಕೈಗೆತ್ತಿಕೊಂಡರು. 1983ರಲ್ಲಿ ತುಂಗಭದ್ರಾ ನದಿಗೆ ಹರಿಹರ ಪಾಲಿಫೈಬರ್ ಕಾರ್ಖಾನೆ ಮಾಲಿನ್ಯಪೂರಿತ ನೀರನ್ನು ಬಿಡುತ್ತಿತ್ತು. ಅದರಿಂದ ಸಾವಿರಾರು ಸಂಖ್ಯೆಯ ಮೀನುಗಳು ಸತ್ತು ಬೀಳುತ್ತಿದ್ದವು. ಹರಿಹರ ಮತ್ತು ರಾಣೆಬೆನ್ನೂರಿನ 16 ಹಳ್ಳಿಗಳು ಕಲುಷಿತ ನೀರಿನಿಂದ ತೊಂದರೆಗೊಳಗಾಗಿದ್ದವು. ಕಾರ್ಖಾನೆಯ ವಿರುದ್ಧ ಹೋರಾಟಕ್ಕಿಳಿದಿದ್ದ ‘ತುಂಗಭದ್ರಾ ನದಿಮಾಲಿನ್ಯ ಸಮಿತಿ’ಯವರ ಜೊತೆ ಸೇರಿದ ಹಿರೇಮಠರು, ಹೋರಾಟಕ್ಕೊಂದು ಹೊಸ ತಿರುವು ಕೊಟ್ಟರು. ಅಷ್ಟೇ ಅಲ್ಲದೆ, ದೇಶದ ಶ್ರೀಮಂತರ ಪೈಕಿ ಒಬ್ಬರಾದ ಬಿರ್ಲಾರನ್ನು ಎದುರು ಹಾಕಿಕೊಂಡು, ಅವರ ಒಡೆತನದ ಹರಿಹರ ಪಾಲಿಫೈಬರ್ ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಗೆದ್ದರು. ಇದು ನಿಜಕ್ಕೂ ಕರ್ನಾಟಕದಲ್ಲಾದ ಬಹಳ ದೊಡ್ಡ ಜನಪರ ಹೋರಾಟಗಳಲ್ಲೊಂದು.
ಆ ನಂತರ, 1984 ರಲ್ಲಿ, ಹಿರೇಮಠರು ಸಮಾನಮನಸ್ಕ ಗೆಳೆಯರೊಂದಿಗೆ ಸೇರಿ ಧಾರವಾಡದಲ್ಲಿ ‘ಸಾಮಾಜಿಕ ಪರಿವರ್ತನಾ ಸಮುದಾಯ’ವನ್ನು ಸ್ಥಾಪಿಸಿದರು. ಈ ಸಂಸ್ಥೆಗೆ ಭಾರತದಾದ್ಯಂತ ಅನೇಕರು ಸ್ವಯಂಸೇವಕರಾಗಿ ಕೆಲಸ ಮಾಡಲು ಮುಂದೆ ಬಂದರು. ಈ ಸಂಸ್ಥೆಯ ಮೂಲಕ ಹಿರೇಮಠರು ಕರ್ನಾಟಕದಲ್ಲಿ ಪರಿಸರ ಮಾಲಿನ್ಯ, ಸಾಮೂಹಿಕ ಭೂ ಸಂರಕ್ಷಣೆ, ಉದ್ಯೋಗಖಾತ್ರಿ ಯೋಜನೆ, ಪುನರ್ವಸತಿ ಇತ್ಯಾದಿ ಜನಪರ ಸಮಸ್ಯೆಗಳ ಬಗೆಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡಿದರು. ಈ ಜನಪರ ಹೋರಾಟಗಳಿಗಾಗಿ ‘ಸಮಾಜ ಪರಿವರ್ತನಾ ಸಮುದಾಯ’ ಸಂಸ್ಥೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಯಿತು. ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆ 1989 ರಲ್ಲಿ ‘ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ’ ನೀಡಿ ಗೌರವಿಸಿತು.
ಕುಸ್ನೂರು ಸತ್ಯಾಗ್ರಹ
ಹರಿಹರ ಪಾಲಿಫೈಬರ್ ಕಾರ್ಖಾನೆಯ ವಿರುದ್ಧ ಹೋರಾಡುವಾಗ ಹಿರೇಮಠರಿಗೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಾದ ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತರು, ಚಿಪ್ಕೋ ಚಳುವಳಿಯ ನೇತಾರ ಚಂಡಿಪ್ರಸಾದ್ ಭಟ್, ಮಾಜಿ ಸಿಎಂ ಕಡಿದಾಳು ಮಂಜಪ್ಪ, ನ್ಯಾಯಮೂರ್ತಿಗಳಾದ ಡಿ.ಎಂ. ಚಂದ್ರಶೇಖರ್, ಜಸ್ಟೀಸ್ ವಿ.ಎಂ. ತಾರ್ಕುಂಡೆ, ಪತ್ರಕರ್ತ ಕುಲದೀಪ ನಯ್ಯರ್ ಅವರುಗಳ ಪರಿಚಯವಾಯಿತು. ಇವರೊಡಗೂಡಿ ಪಶ್ಚಿಮ ಘಟ್ಟ ಉಳಿಸಿ ಚಳುವಳಿಯನ್ನು ಕೈಗೆತ್ತಿಕೊಂಡರು.
ಸಾಮೂಹಿಕ ಒಡೆತನದ ಅರಣ್ಯ ಭೂಯಿಯನ್ನು ಸರ್ಕಾರ ಉದ್ಯಮಿಗಳಿಗೆ ಕೊಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದರಲ್ಲದೆ, 1992 ರಲ್ಲಿ ‘ನ್ಯಾಷನಲ್ ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ನ್ಯಾಚುರಲ್ ರಿಸೋರ್ಸಸ್’ ಎಂಬ ಸಮಿತಿಯನ್ನು ಸಂಘಟಿಸಿದರು. ಈ ಸಮಿತಿ ಪ್ರಕೃತಿ ಸಂಪನ್ಮೂಲಗಳ ಕಾಯಿದೆ, ಅರಣ್ಯನೀತಿ ರೂಪಿಸುವಲ್ಲಿ ಮತ್ತು ಜನರ ಪುನರ್ವಸತಿ ಕಲ್ಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಈ ಸಮಿತಿಯಲ್ಲಿ ಹಿರೇಮಠರು ಮುಂಚೂಣಿಯ ನಾಯಕರಾಗಿದ್ದರು.
ಧಾರವಾಡ ಜಿಲ್ಲೆಯ ಕುಸ್ನೂರು ಗ್ರಾಮದ ಹತ್ತಿರದಲ್ಲಿರುವ 30 ಸಾವಿರ ಎಕರೆ ಸಾಮೂಹಿಕ ಭೂಮಿಯನ್ನು ಕರ್ನಾಟಕ ಸರ್ಕಾರ ‘ಕರ್ನಾಟಕ ಪಲ್ಪ್‌ವುಡ್’ ಕಂಪನಿಯೊಂದಿಗೆ ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡು, ನೀಲಗಿರಿ ಗಿಡಗಳನ್ನು ಬೆಳೆಸಲು ಅನುಮತಿ ನೀಡಿತ್ತು. ನೀಲಗಿರಿ ನೆಡುವುದರಿಂದ ಭೂಮಿ ಹಾಳಾಗುತ್ತಿತ್ತು ಮತ್ತು ನೀಲಗಿರಿ ಮರದಿಂದ ರೇಯಾನ್ ದಾರ ತೆಗೆಯುವ ಕಾರ್ಖಾನೆಯಿಂದ ಜನರ ಆರೋಗ್ಯ ಕೆಡುವ ಕ್ರಿಮಿನಾಶಕ ತಯಾರಿಕೆಯಿಂದ ಜನರ ಪ್ರಾಣಕ್ಕೇ ಹಾನಿಯಾಗುತ್ತಿತ್ತು. ಇದನ್ನು ವಿರೋಧಿಸಿ ಎಸ್ಪಿಎಸ್ ಸಂಸ್ಥೆ ಸ್ಥಳೀಯ ಜನರನ್ನು ಸಂಘಟಿಸಿ, ‘ಕಿತ್ತಿಕೋ, ಹಚ್ಚಿಕೋ’ (pluck and plant satyagraha) ಚಳುವಳಿ ಹಮ್ಮಿಕೊಂಡಿತು. ಉದ್ಯಮಪತಿಗಳು ನೆಟ್ಟ ನೀಲಗಿರಿ ಗಿಡಗಳನ್ನು 100 ಜನ ಯುವ ಹೋರಾಟಗಾರರು ಕಿತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಅಹಿಂಸಾತ್ಮಕ ಹೋರಾಟಕ್ಕೆ ನಾಂದಿ ಹಾಡಿದರು. ದಿನದಿಂದ ದಿನಕ್ಕೆ ಚಳುವಳಿ ತೀವ್ರಗೊಳ್ಳತೊಡಗಿತು. ಜೊತೆಗೆ ಶ್ರೀಮಂತ ಉದ್ಯಮಿ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸಿ, 1991 ರಲ್ಲಿ ಗೆದ್ದಿದ್ದೂ ಆಯಿತು.
ಈ ಜನಪರ ಹೋರಾಟದ ಗೆಲುವನ್ನು, ದೇಶಕ್ಕೆ ಆಗತಾನೆ ಕಾಲಿಡುತ್ತಿದ್ದ ದೂರದರ್ಶನದ ನ್ಯಾಷನಲ್ ನೆಟ್‌ವರ್ಕ್‌ನವರು ‘ಕುಸ್ನೂರು ಸತ್ಯಾಗ್ರಹ’ ಎಂಬ ಹೆಸರಿನಲ್ಲಿ ಅರ್ಧಗಂಟೆಯ ಕಾರ್ಯಕ್ರಮವಾಗಿ ಪ್ರಚಾರಪಡಿಸಿದರು. ಆ ನಂತರ ಇಂಗ್ಲೆಂಡಿನ ಚಾನಲ್ 4, ಡಿಸ್ಕವರಿ ಚಾನಲ್ಗಳು 90 ನಿಮಿಷಗಳ ವಿಶೇಷ ಕಾರ್ಯಕ್ರಮವನ್ನಾಗಿಸಿ ಪ್ರಪಂಚದಾದ್ಯಂತ ಪ್ರಸಾರ ಮಾಡಿದವು. ಇದು ಚಳುವಳಿನಿರತ ಹೋರಾಟಗಾರರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಯಿತು. ಇಂಥವೇ ಇನ್ನಷ್ಟು ಹೋರಾಟಗಳನ್ನು ಮಾಡಲು ಪ್ರೇರೇಪಿಸಿತು.
ಜೆವಿಎ ಮತ್ತು ಜಿಜಿವಿ
ಜನವಿಕಾಸ ಆಂದೋಲನ ಹಾಗೂ ಗ್ರಾಮ ಗಣರಾಜ್ಯ ವೇದಿಕೆ- ಇವೆರಡು ಹಿರೇಮಠರು ಭಾಗವಹಿಸಿದ ಜನಪರ ಹೋರಾಟಗಳು. ಜನವಿಕಾಸ ಆಂದೋಲನವು ‘ಆಜಾದಿ ಸೇ ಸ್ವರಾಜ್’ ಎನ್ನುವ ಪರಿಕಲ್ಪನೆಯಲ್ಲಿ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಜನರ ಒಡೆತನವನ್ನು ಪ್ರತಿಪಾದಿಸುವ ವೇದಿಕೆಯಾಯಿತು. ಜೊತೆಗೆ ಗ್ರಾಮಸಭಾ, ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲಗೊಳಿಸುವ ಜನಾಂದೋಲನವಾಗಿತ್ತು.
ಗ್ರಾಮ ಗಣರಾಜ್ಯ ವೇದಿಕೆಯು ರಾಜ್ಯಮಟ್ಟದ ಜನಪರ ಚಳುವಳಿಯ ವೇದಿಕೆಯಾಗಿತ್ತು. ಈ ವೇದಿಕೆಯ ಮುಖ್ಯ ಕೆಲಸವೆಂದರೆ ಕರ್ನಾಟಕದಲ್ಲಿ ‘ಪಂಚಾಯತಿ ರಾಜ್ ಆಕ್ಟ್-1993’ಕ್ಕೆ ಅನೇಕ ಬದಲಾವಣೆಗಳನ್ನು ತಂದು ‘ಪಂಚಾಯತ್ ರಾಜ್ ಅಮೆಂಡ್ಮೆಂಟ್ ಆಕ್ಟ್-2003’ ಅನ್ನು ಜಾರಿಗೆ ತರುವಂತೆ ಮಾಡಿದುದಾಗಿದೆ. ಅಲ್ಲದೆ ಐತಿಹಾಸಿಕವಾದ ಕುಸ್ನೂರು ಸತ್ಯಾಗ್ರಹದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದುದಾಗಿದೆ.
ಮಾಲಿಕ್ ಮಖಬೂಜ ಸ್ಕ್ಯಾಂಡಲ್
ಮಧ್ಯಪ್ರದೇಶ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿ ಹುಟ್ಟಿದ ಆದಿವಾಸಿ ಹೋರಾಟವಿದು. ಬಸ್ತರ್ ಜಿಲ್ಲೆ ಈಗ ಛತ್ತಿಸ್‌ಗಡ್ ರಾಜ್ಯಕ್ಕೆ ಸೇರಿದೆ. ಅಲ್ಲಿಯ ಕಲೆಕ್ಟರ್ ಆದಿವಾಸಿಗಳ ಶೋಷಣೆ ಮತ್ತು ಅರಣ್ಯನಾಶದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಬಸ್ತರ್ ಜಿಲ್ಲೆಯಲ್ಲಿದ್ದವರು ಹಿಂದುಳಿದ ಆದಿವಾಸಿಗಳು. ಇವರಲ್ಲಿಯೇ ಕೆಲವರು ಸಮಾಜದ ದುಷ್ಟಶಕ್ತಿಗಳೊಂದಿಗೆ ಕೈ ಜೋಡಿಸಿ ಬೆಲೆಬಾಳುವ ತೇಗ, ಹೊನ್ನೆ, ಬೀಟೆ ಮರಗಳನ್ನು ಕಡಿದು ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಇದಕ್ಕೆ ಬೆಂಬಲವಾಗಿ ನಿಂತಿದ್ದು ಟಿಂಬರ್ ಮಾಫಿಯಾ.
ಕಲೆಕ್ಟರ್ ಕೊಟ್ಟ ದೂರಿಗೆ, ಮಾಡಿಕೊಂಡ ಮನವಿಗೆ ಸರ್ಕಾರದ ಮಟ್ಟದಲ್ಲಿ ಮನ್ನಣೆ ಸಿಗಲಿಲ್ಲ. ಆಗ ಅಲ್ಲಿಯ ಕೆಲವರು ಸಮಾಜ ಪರಿವರ್ತನಾ ಸಮುದಾಯ ಈ ಹೋರಾಟವನ್ನು ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಇದೇ ಹಿರೇಮಠರು ಛತ್ತೀಸ್‌ಗಡ್‌ಗೆ ಹೋಗಿ ಅಲ್ಲಿಯ ಮೂಲನಿವಾಸಿಗಳೊಂದಿಗೆ ಒಡನಾಡಿ, ಅವರಲ್ಲಿ ಅರಿವು ಮೂಡಿಸುವ, ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸದಲ್ಲಿ ನಿರತರಾದರು. ಮುಂದುವರೆದು ಸಾಮೂಹಿಕ ಅರಣ್ಯನಾಶದ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದರು. ಆ ದಾವೆಯ ಪರಿಣಾಮವಾಗಿ ಸುಪ್ರೀಂ ಕೋರ್ಟ್ ಸಿಬಿಐ ತನಿಖೆ ಆದೇಶಿಸಿತು. ಕೊನೆಗೆ ಗೆಲುವು ಆದಿವಾಸಿಗಳ ಪರವಾಯಿತು. ಅದರ ಪರಿಣಾಮವಾಗಿ ಮರ ಕಡಿಯುವುದಕ್ಕೆ ಮೂರು ವರ್ಷಗಳ ನಿಷೇಧ ಹೇರಲಾಯಿತು. ಮರಗಳನ್ನು ಕಡಿಯುವುದು ನಿಂತು ಅರಣ್ಯ ಸಂಪತ್ತು ಜನರ ಸ್ವತ್ತಾಯಿತು.
‘ಈ ಅನುಭವ ಇದೆಯಲ್ಲ, ಇದು ನಮಗೆ ಕರ್ನಾಟಕ-ಆಂಧ್ರ ಗಡಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ವಿರುದ್ಧದ ಹೋರಾಟಕ್ಕೆ ತುಂಬಾ ಸಹಕಾರಿಯಾಯಿತು. ಜನರನ್ನು ಸಂಘಟಿಸುವುದು, ಚಳುವಳಿ ರೂಪಿಸುವುದು, ಬಲಾಢ್ಯರ ವಿರುದ್ಧ ಹೋರಾಡುವುದಕ್ಕೆ ಇದು ಮೊದಲ ಮೆಟ್ಟಿಲಾಯಿತು. ಇದ್ದ, ಬೇಕಾದ ಕಾನೂನು ಕ್ರಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಈ ಹಿಂದಿನ ಹೋರಾಟಗಳೆಲ್ಲ ಒಂದೊಂದು ರೀತಿಯ ಅನುಭವ ನೀಡಿ, ನೆರವಿಗೆ ಬಂದವು’ ಎಂದು ನೆನಪಿಸಿಕೊಳ್ಳುವ ಹಿರೇಮಠರು ಆ ನಂತರ ಕೈಗೆತ್ತಿಕೊಂಡಿದ್ದು ಕರ್ನಾಟಕದ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಗಣಿಮಾಫಿಯಾ ವಿರುದ್ಧದ ಹೋರಾಟ.
ಗಣಿಗಾರಿಕೆಯ ವಿರುದ್ಧ ಹೋರಾಟ
ಬಿಜೆಪಿ ಸರ್ಕಾರ ಬಂದ ನಂತರ, ಗಣಿರಾಜಕಾರಣದಿಂದಾಗಿ ಪ್ರಕೃತಿ ಸಂಪತ್ತಿನ ಲೂಟಿ ಎಲ್ಲೆ ಮೀರಿ ಹೋಗಿತ್ತು. ಅಕ್ರಮ ಗಣಿಗಾರಿಕೆಯ ಬಗ್ಗೆ ರಾಜಕೀಯ ಪಕ್ಷಗಳಿಂದ ಆರೋಪ ಪ್ರತ್ಯಾರೋಪ, ಮಾಧ್ಯಮಗಳಲ್ಲಿ ಕಂಡೂ ಕಾಣದಂತಹ ವರದಿಗಳಷ್ಟೇ ಕಾಣಸಿಗುತ್ತಿದ್ದವು. ಒಂದು ಗಟ್ಟಿ ಧ್ವನಿ ಯಾರಿಂದಲೂ ಕೇಳಿಬರುತ್ತಿರಲಿಲ್ಲ. ಗಣಿ ಧೂಳು ಬಿಜೆಪಿಗಿಂತಲೂ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಮೆತ್ತಿಕೊಂಡಿತ್ತು. ಈ ಪಕ್ಷಗಳಿಗೆ ಗಣಿ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇರಲಿಲ್ಲ. ಗಣಿಧಣಿ ಜನಾರ್ದನ ರೆಡ್ಡಿಯ ಲೂಟಿಯನ್ನು ಖಂಡಿಸಿ ಬರೆಯುವ ಪತ್ರಕರ್ತರಿಗಿಂತ, ಬರೆಯದೆ ಉಳಿದ ಪತ್ರಕರ್ತರೇ ಹೆಚ್ಚಾಗಿದ್ದರು. ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳು, ಪ್ರಗತಿಪರರು ಟೋಕನ್ ಪ್ರೊಟೆಸ್ಟ್ ಮಾಡಿ ಸುಮ್ಮನಾಗಿದ್ದರು. ಕೆಲವರು ಅದನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಒಗ್ಗಿಸಿಕೊಂಡು, ಲಾಭದ ಮಾರ್ಗ ಕಂಡುಕೊಂಡಿದ್ದರು.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನಾರ್ದನ ರೆಡ್ಡಿಗೆ ಕಾನೂನು ಹೋರಾಟದ ಮೂಲಕ ಪಾಠ ಕಲಿಸಲು ಹೊರಟವರು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ್. 2002ರಿಂದಲೇ ಅಕ್ರಮ ಗಣಿಗಾರಿಕೆಯ ಬಗೆಗೆ ಕ್ಷೇತ್ರಕಾರ್ಯ, ಅಧ್ಯಯನದಲ್ಲಿ ತೊಡಗಿ ದಾಖಲೆಗಳನ್ನು ಸಂಗ್ರಹಿಸತೊಡಗಿದರು. 2009ರಲ್ಲಿ ಖ್ಯಾತ ವಕೀಯ ಪ್ರಶಾಂತ್ ಭೂಷಣ್ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಅದರೊಂದಿಗೆ 1274 ಪುಟಗಳಷ್ಟು ದಾಖಲೆ, ಪುರಾವೆಗಳನ್ನು ಕೋರ್ಟಿನ ಮುಂದಿಟ್ಟರು. ಎಲ್ಲವನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್ ‘ಕೇಂದ್ರ ಉನ್ನತಾಧಿಕಾರ ಸಮಿತಿ’ಯನ್ನು ರಚಿಸಿ ವಸ್ತುಸ್ಥಿತಿಯ ಪರಾಮರ್ಶೆ ಮತ್ತು ಸಾಕ್ಷ್ಯಗಳ ಸಂಗ್ರಹಣೆಗೆ ಆದೇಶ ನೀಡಿತು.
ಆದರೆ, ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳೇ ಮೈನಿಂಗ್ ಮಾಫಿಯಾ ಜೊತೆ ಕೈಜೋಡಿಸಿದ್ದರಿಂದ ಹಿರೇಮಠರ ಪ್ರಯತ್ನಕ್ಕೆ ಹಿನ್ನಡೆಯಾಯಿತು. ಛಲ ಬಿಡದ ಹಿರೇಮಠ್, ರೆಡ್ಡಿಗೆ ನೀಡಿರುವ ಮೈನಿಂಗ್ ಪರವಾನಗಿಯನ್ನು ರದ್ದು ಮಾಡಬೇಕೆಂದು 499 ಪುಟಗಳ ಕಾರಣಸಹಿತ ಮನವಿಯನ್ನು ಮತ್ತೆ ಸುಪ್ರೀಂ ಕೋರ್ಟಿನ ಮುಂದಿಟ್ಟರು. ಕರ್ನಾಟಕ-ಆಂಧ್ರ ಗಡಿ ಕುರುಹುನಾಶ, ಸುಗ್ಗುಲಮ್ಮ ದೇವಾಲಯವನ್ನೇ ಇಲ್ಲದಂತೆ ಮಾಡಿದ್ದು, ಸರ್ಕಾರಿ ಯಂತ್ರದ ದುರುಪಯೋಗ, ಅಧಿಕಾರ ದುರ್ಬಳಕೆ ಇವೆಲ್ಲವನ್ನು ಪುರಾವೆ ಸಮೇತ ಕೋರ್ಟಿಗೆ ಸಲ್ಲಿಸಿದರು. ಕೊನೆಗೆ ಕೇಂದ್ರ ಉನ್ನತಾಧಿಕಾರ ಸಮಿತಿ ಹಿರೇಮಠರ ಸಾಕ್ಷ್ಯಗಳಿಗೆ ತಲೆದೂಗಿ ಪರವಾನಗಿ ರದ್ದಿಗೆ ಶಿಫಾರಸು ಮಾಡಿತು. ಜನಾರ್ದನ ರೆಡ್ಡಿ ಮತ್ತವರ ಸಹೋದರರ ಮೈನಿಂಗ್ ಲೈಸೆನ್ಸ್ ರದ್ದಾಯಿತು. ರೆಡ್ಡಿ ಮನೆ ಮೇಲೆ ಸಿಬಿಐ ದಾಳಿಯಾಗಿ, ರೆಡ್ಡಿಯ ಬಂಧನವಾಯಿತು. ಚಂಚಲಗುಡ ಜೈಲು ಸೇರುವಂತಾಯಿತು. ಅದರ ಮುಂದುವರೆದ ಭಾಗವಾಗಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕುರ್ಚಿಯಿಂದ ಕೆಳಗಿಳಿದು ಜೈಲಿಗೆ ಹೋಗುವಂತಾಯಿತು.
ಸ್ಫೂರ್ತಿ ಮತ್ತು ಪ್ರೇರಣೆ
ಅಮೆರಿಕಾದಲ್ಲಿ ಎಂಎಸ್, ಎಂಬಿಎಗಳಂತಹ ಉನ್ನತ ವ್ಯಾಸಂಗ ಮಾಡಿ ಪ್ರತಿಷ್ಠಿತ ಹುದ್ದೆಗಳನ್ನು ನಿರ್ವಹಿಸಿದವರು ಮತ್ತೆ ಭಾರತಕ್ಕೆ ಬರುತ್ತಾರೆ, ಬಂದು ಗ್ರಾಮೀಣ ಬಡಜನರ ಅಭಿವೃದ್ಧಿಗಾಗಿ, ಸಾಮಾಜಿಕ ನ್ಯಾಯಪರ ಹೋರಾಟಗಳಿಗಾಗಿ ಈ ಕಾಲದಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಡುತ್ತಾರೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಹಿರೇಮಠರು ಅದನ್ನು ಮಾಡಿ ತೋರಿಸಿದ್ದಾರೆ. ತೋರುತ್ತಲೂ ಇದ್ದಾರೆ. ಸರಳವಾಗಿ ಬದುಕುವ, ಜನಶಕ್ತಿಯಲ್ಲಿ ನಂಬಿಕೆ ಇಟ್ಟಿರುವ, ನ್ಯಾಯ ವ್ಯವಸ್ಥೆಯನ್ನು ಅಸ್ತ್ರದಂತೆ ಬಳಸಿಕೊಂಡಿರುವ, ಭ್ರಷ್ಟರ ವಿರುದ್ಧ ಸಮರ ಸಾರಿರುವ ಈ ಹಿರೇಮಠರು ಮೆದುಮಾತಿನ ಸಜ್ಜನರು. ಇವರ ಇಂತಹ ನಿಸ್ವಾರ್ಥ ಸಮಾಜಸೇವೆಗೆ ಸ್ಫೂರ್ತಿಯಾದವರು, ಸಮಾಜ ಕಲ್ಯಾಣ ಕಾರ್ಯಗಳಿಗೆ ಪ್ರೇರಣೆಯಾದವರು ಯಾರು? ಎಂದರೆ, ಅವರು ಹಲವು ವ್ಯಕ್ತಿಗಳನ್ನು, ಪುಸ್ತಕಗಳನ್ನು, ಘಟನೆಗಳನ್ನು, ಭಾಷಣಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
‘‘ಮೊದಲಿಗೆ ನನ್ನ ತಾಯಿ. ನಮ್ತಂದೆ ಸತ್ತಾಗ ನಮ್ಮ ಕುಟುಂಬವನ್ನು ನಿಭಾಯಿಸಿದ ಆಕೆಯ ಧೈರ್ಯ ನನ್ನನ್ನು ಪ್ರಭಾವಿಸಿತು. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲಳು ಎಂಬುದನ್ನು ನನ್ನ ತಾಯಿ ತೋರಿಸಿಕೊಟ್ಟಳು. ಆಮೇಲೆ ನನ್ನ ಹಳ್ಳಿಯ ಜನ, ನನ್ನ ವಿದ್ಯಾಭ್ಯಾಸಕ್ಕೆ ನೆರವಾದ ರೀತಿ. ಆ ನಂತರ ಬಾಲ್ಯದಲ್ಲಿಯೇ ಶಿವರಾಮ ಕಾರಂತರು, ‘ನಾವು ಹುಟ್ಟಿದ್ದು ಬೆಳೆದದ್ದು, ಪಡೆದದ್ದು ಸಮಾಜದಿಂದ, ಹಾಗಾಗಿ ಈ ಸಮಾಜದ ಬಗ್ಗೆ ಕಾಳಜಿ ವಹಿಸಬೇಕು, ವಹಿಸದಿದ್ದರೆ ಅದರ ಆರೋಗ್ಯ ಕೆಡುತ್ತದೆ, ಆಗ ದೇಶ ಕೆಡುತ್ತದೆ. ಹಾಗಾಗಿ ಸ್ವಸ್ಥ ಸಮಾಜಕ್ಕಾಗಿ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು’ ಎಂಬ ಮಾತು ನನ್ನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿತು. ಯಾಕೆಂದರೆ ನಾನು ಬೆಳೆದು ಬಂದಿದ್ದೇ ಈ ಸಮಾಜದಿಂದ. ಹಾಗಾಗಿ ಈ ಮಾತು ನನ್ನನ್ನು ಕುರಿತೇ ಹೇಳಿದಂತಿತ್ತು.
‘‘ಆಮೇಲೆ ಜಯಪ್ರಕಾಶ್ ನಾರಾಯಣ ಮತ್ತು ಎಚ್.ವಿ. ಕಾಮತ್‌ರ ಜನಪರ ಚಿಂತನೆಗಳು, ಭಾರತದ ಬಡವರಿಗಾಗಿ ಕೆಲಸ ಮಾಡುತ್ತಿದ್ದ ನನ್ನ ಐಐಟಿ ಗೆಳೆಯರು, ಷೂ ಮೇಕರ್ ಅವರ ಸ್ಮಾಲ್ ಈಸ್ ಬ್ಯೂಟಿಫುಲ್ ಪುಸ್ತಕ, ನ್ಯೂಟನ್‌ನ ಫಾರ್ಮುಲಾ, ಗಾಂಧೀಜಿಯವರ ‘ಫ್ರೀಡಂ ಅಟ್ ಮಿಡ್ ನೈಟ್’ ಪುಸ್ತಕ, ಸರ್ವಜ್ಞನ ವಚನಗಳು, ಜಾಮ್ಖೇಡ್‌ನ ಡಾ. ರಜನೀಕಾಂತ್ ದಂಪತಿಗಳು ಹಳ್ಳಿ ಹೆಂಗಸರ ಆರೋಗ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಬಗೆ, ಕೇರಳದಲ್ಲಿ ಕಂಡುಬಂದ ಮಾದರಿ ಕೃಷಿ... ಇವೆಲ್ಲವೂ ನನಗೆ ಸ್ಫೂರ್ತಿ ನೀಡಿವೆ.‘‘ಇವೆಲ್ಲಕ್ಕಿಂತಲೂ ಮುಖ್ಯವಾಗಿ ನನ್ನನ್ನು ಆಳವಾಗಿ ಕಲಕಿದ್ದು, ಪ್ರಭಾವಿಸಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರು ನವಂಬರ್ 26, 1949 ರಂದು ಮಾಡಿದ ಕೊನೆಯ ಭಾಷಣ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬಗ್ಗೆ ಅವರಿಗಿದ್ದ ಕಾಳಜಿ, ಕಳಕಳಿ ಮತ್ತು ಪ್ರೀತಿ ನನ್ನನ್ನು ಮತ್ತೆ ಗ್ರಾಮಗಳತ್ತ ಮುಖ ಮಾಡಲು ಪ್ರೇರೇಪಿಸಿತು.
‘‘ಜನಪರ ಹೋರಾಟಗಳಲ್ಲಿ ತತ್ವ-ಸಿದ್ಧಾಂತಗಳಿಗಿಂತಲೂ ನಂಬಿಕೆ, ಪ್ರಾಮಾಣಿಕತೆ ಬಹಳ ಮುಖ್ಯ. ಅದಿದ್ದರೆ ಜನ ತಾನೇ ತಾನಾಗಿ ನಮ್ಮ ಬೆನ್ನ ಹಿಂದೆ ಇರುತ್ತಾರೆ. ನಮ್ಮ ಹೋರಾಟಗಳನ್ನು ಬೆಂಬಲಿಸುತ್ತಾರೆ. ಇಷ್ಟಿದ್ದರೆ, ಯಾವ ಬಲಾಢ್ಯ ಶಕ್ತಿಗಳಿಗೂ ಹೆದರಬೇಕಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದು ಹಾಗೂ ಕೆಟ್ಟದು- ಏನು ಬೇಕಾದರೂ ಆಗಬಹುದು. ಸಮಾಜದಲ್ಲಿ ಮೌಲ್ಯ, ನೈತಿಕತೆ ಇನ್ನೂ ಇದೆ. ಒಳ್ಳೆಯವರು, ಮಾನವಂತರು, ಪ್ರಾಮಾಣಿಕರು ಈಗಲೂ ಇದ್ದಾರೆ. ಅವರಿಂದಲೇ ನಮ್ಮ ಹೋರಾಟಗಳಿಗೆ ಜಯ ದೊರಕುತ್ತಿರುವುದು. ನಾನು-ನಮ್ಮ ಸಂಸ್ಥೆ ಇಲ್ಲಿ ನೆಪಮಾತ್ರವಷ್ಟೆ. ಸಮಾಜದ ಸಲುವಾಗಿ ಮಾಡುವ ಕೆಲಸಗಳಿಂದ ಸಂತೃಪ್ತಿ, ಸಮಾಧಾನ ಸಿಕ್ಕಿದೆ. ನ್ಯಾಯ ನೀತಿ ಧರ್ಮಗಳಿಗೆ ಬೆಲೆ ಬಂದಿದೆ. ಇದಕ್ಕಿಂತ ಇನ್ನೇನೂ ಬೇಕಿಲ್ಲ’’ ಎನ್ನುವ ಎಸ್.ಆರ್. ಹಿರೇಮಠರನ್ನು ಮುಂದಿನ ಪೀಳಿಗೆ ಮಾದರಿಯಾಗಿಟ್ಟುಕೊಂಡರೆ, ಆರೋಗ್ಯವಂತ ಸಮಾಜ ಮತ್ತು ಅಭಿವೃದ್ಧಿಶೀಲ ರಾಷ್ಟ್ರದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ, ಅಲ್ಲವೆ?
ನಮ್ಮ ಬೆಳವಣಿಕೆಯ ರಾಚಯ್ಯಜ್ಜ ನನ್ನನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟರು ಸರ್. ಚಲೋ ಬರೆದಿದ್ದಿರಿ.
ReplyDeleteಸನ್ಮಾನ್ಯ ಹಿರೇಮಠರನ್ನು ಹತ್ತಿರದಿಂದ ನೋಡಿದ್ದೇನೆ, ಮಾತನಾಡಿದ್ದೇನೆ, ಅವರ ಹಲವಾರು ಪತ್ರಿಕಾಗೊಷ್ಟಿಗಳಲ್ಲಿ ಪಾಲ್ಗೊಂಡಿದ್ದೇನೆ. ಎರಡು ಬಾರಿ ಜಗಳ ಕೂಡ ಮಾಡಿದ್ದೇನೆ ಅದು ತಾತ್ವಿಕ ಕಾರಣಗಳಿಗೆ. ವಿಶೇಷವೇನೂ ಇಲ್ಲ. ಅವರ ಸಾಮಾಜಿಕ ಕಳಕಳಿಗೆ ಬೆರಗಾಗಿದ್ದೇನೆ. ಇಂಥವರೂ ಇರ್ತಾರ ಅನ್ನೋ ಪ್ರಶ್ನೆನು ನನಗೆ ಬಂದದ್ದು ಉಂಟು. ಇಂದಿನ ಪರಿಸ್ಥಿತಿಯಲ್ಲಿ ಇಂಥವರನ್ನೂ ಅನುಮಾನದ ದೃಷ್ಟಿಯಿಂದ ನೋಡಿದ ನನಗೆ ನಾಚಿಕೆಯು ಆಗಿತ್ತು. ಅದನ್ನ ಅವರಿಗೆ ನೇರವಾಗಿ ಹೇಳಿಕೊಂಡಿದ್ದೆ. ಅವರ ಸಾತ್ವಿಕ ಕೋಪ, ಭ್ರಷ್ಟರ ವಿರುಧ್ಧದ ಆಕ್ರೋಶ, ಎಲ್ಲವನ್ನೂ ನೇರವಾಗಿ ನೋಡಿದ್ದೇನೆ. ಗಂಟೆಗಟ್ಟಲೆ ಹರಟಿದ್ದೇನೆ. ಆಕ್ರಮ ಗಣಿಗಾರಿಕೆಯ ವಿವಿಧ ಮಗ್ಗಲುಗಳನ್ನು ಪರಿಚಯ ಮಾಡಿಕೊತ್ತವರೂ ಅವರೇ. ಅವರಿಗೆ ನಾವು ಚಿರ ಋಣಿ ಆಗಿರಬೇಕು. ಇಲ್ಲದಿದ್ದಲ್ಲಿ, ಬಳ್ಳಾರಿ ಜಿಲ್ಲೆಯ ಅಪಾರ ಮೌಲ್ಯದ ನೈಸರ್ಗಿಕ ಸಂಪತ್ತು ಹೇಳ ಹೆಸರಿಲ್ಲದೆ ಬರಿದಾಗುತ್ತಿತ್ತು..
ReplyDeleteಧನ್ಯವಾದ ಬಸುರಾಜ್ ಅವರೇ.. ನಮ್ಮ ಸಮಕಾಲೀನ ಮಹಾನ್ ವ್ಯಕ್ತಿಯೊಬ್ಬರ ಜೀವನದ ಅನೇಕ ನಗ್ಗಳುಗಳನ್ನು ಪರಿಚಯ ಮಾಡಿಕೊಟ್ಟದ್ದಕ್ಕೆ..
ಎಂ.ಮುರಳಿ ಕೃಷ್ಣ, ಬಳ್ಳಾರಿ.
ಮಗ್ಗುಲು ಅನ್ನೋದು ಟೈಪಿಂಗ್ ತಪ್ಪಿನಿಂದ ನಗ್ಗಳು ಆಗಿದೆ..
ReplyDeleteನಮ್ಮ ರಾಜ್ಯಕ್ಕೆ ಇವರೆಂತಹಾ ಕೊಡುಗೆ! ಒಂದು ಪಕ್ಷ ಇವರಿಲ್ಲದಿದ್ದರೆ..... ಕರ್ನಾಟಕ ರಾಜಕೀಯ ಏನಾದರೂ ಆಗಿಬಿಡುತ್ತಿತ್ತು! ದುರಂತವಂದರೆ, ಎಷ್ಟು ಜನಕ್ಕೆ ಇವರ ಬಗ್ಗೆ ತಿಳಿದಿದೆ? ಅದರಲ್ಲೂ ಇವರು ನಮಗೆಷ್ಟು ಪ್ರಾಮುಖ್ಯ ಎಂಬುದೂ ಸಹ ಜನಸಾಮಾನ್ಯರಿಗೆ ತಿಳಿದಿಲ್ಲ. ಅವರ ರಕ್ಷಣೆ ಸಹಾ ನಮಗೆ ಅಷ್ಟೇ ಮುಖ್ಯ!
ReplyDeleteIntha adbhuta vyakti yannnu parichayisiddakke tumba thanks!
ReplyDeleteMany more thanks for this inspiring article. He deserves Bharatha Ratna
ReplyDelete