|
ಎಸ್.ಎಂ. ಕೃಷ್ಣ |
ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆಗೆ ಟಿಕೆಟ್ ನಿರಾಕರಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿ ಟಿಕೆಟ್ ನಿರಾಕರಣೆಗೆ ಒಳಗಾಗಿರುವವರು ಇವರೊಬ್ಬರೇ ಅಲ್ಲ. ಕಾಂಗ್ರೆಸ್ ಪಕ್ಷದ ಇತಿಹಾಸ ಬಲ್ಲವರಿಗೆ ಗೊತ್ತಿದ್ದೇ ಎಲ್ಲ. ಆದರೂ ಕೃಷ್ಣರ ಬೆಂಬಲಿಗರು, ಹಿತೈಷಿಗಳು ಬೆಂಗಳೂರಿನ ಸದಾಶಿವನಗರದ ಅವರ ಮನೆ ಮುಂದೆ ಜಮಾಯಿಸಿ, ‘ನೂರಾರು ಜನರಿಗೆ ಅವಕಾಶ ಕಲ್ಪಿಸಿಕೊಟ್ಟ ಕೃಷ್ಣರಿಗೇ ಇವತ್ತು ಅವಕಾಶವಿಲ್ಲ ಎಂದರೆ ಏನು?’ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಪ್ರಶ್ನೆಗೆ ಉತ್ತರಿಸಬೇಕಾದ ಹೈಕಮಾಂಡ್ ಮಾತ್ರ ವೌನಕ್ಕೆ ಶರಣಾಗಿದೆ. ಅಂದರೆ ಕೃಷ್ಣರ ರಾಜಕೀಯ ಬದುಕಿಗೆ ಫುಲ್‌ಸ್ಟಾಪ್ ಇಟ್ಟಿದೆ. ಜೊತೆಗೆ ಕೃಷ್ಣರ ವಯಸ್ಸು ಮತ್ತು ಆರೋಗ್ಯ ಅದಕ್ಕೆ ಪುಷ್ಟಿ ನೀಡಿದೆ.
ಮೇ 1, 1932 ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಮಲ್ಲಯ್ಯರ ಮಗನಾಗಿ ಹುಟ್ಟಿದ ಕೃಷ್ಣ, ತಮ್ಮ 82 ವರ್ಷಗಳ ಬದುಕಿನಲ್ಲಿ, 52 ವರ್ಷಗಳನ್ನು ರಾಜಕೀಯ ರಂಗದಲ್ಲಿ ಕಳೆದಿದ್ದಾರೆ. ತಮ್ಮ ಬದುಕಿನ ಮುಕ್ಕಾಲು ಭಾಗವನ್ನು ಸಾರ್ವಜನಿಕ ಬದುಕಿಗೆ ಮೀಸಲಿಟ್ಟಿದ್ದಾರೆ. ಅರವತ್ತರ ದಶಕದಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ತೆರಳಿದ ಕೃಷ್ಣ ಅವರು ಫುಲ್ಬ್ರೈಟ್ ಸ್ಕಾಲರ್‌ಶಿಪ್ ಪಡೆದು ಟೆಕ್ಸಾಸ್‌ನಲ್ಲಿ ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭಾರತಕ್ಕೆ ಮರಳಿ ಬಂದ ಮೇಲೆ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದವರು.
ಮಂಡ್ಯದ ಪ್ರತಿಷ್ಠಿತ ಕುಟುಂಬದ ಜೊತೆಗೆ ಬಹುಸಂಖ್ಯಾತ ಮತ್ತು ಬಲಾಢ್ಯ ಒಕ್ಕಲಿಗ ಜಾತಿಗೆ ಸೇರಿದ ಕೃಷ್ಣ ಅವರು, ಅರವತ್ತರ ದಶಕದಲ್ಲಿಯೇ ಫಾರಿನ್ ರಿಟರ್ನ್ ಎಂಬ ಕಾರಣಕ್ಕಾಗಿಯೇ ಸಹಜವಾಗಿ ರಾಜಕೀಯ ಕ್ಷೇತ್ರದತ್ತ ಆಕರ್ಷಿತರಾದರು. 1962ರಲ್ಲಿ ಮೊದಲ ಬಾರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ, ಪ್ರಜಾ ಸೋಷಲಿಸ್ಟ್ ಪಾರ್ಟಿಯ (ಪಿಎಸ್ಪಿ) ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಆ ಕಾಲಕ್ಕೇ ಭಾರೀ ಹೆಸರು ಗಳಿಸಿದ್ದ ಎಚ್.ಕೆ. ವೀರಣ್ಣಗೌಡರ ವಿರುದ್ಧ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಆನಂತರ 1971 ರಲ್ಲಿ ಇಂದಿರಾಗಾಂಧಿಯವರ ಕಾಂಗ್ರೆಸ್ ಪಾರ್ಟಿ ಸೇರಿದರು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷದ ನಿಷ್ಠಾವಂತ ಸೇವಕರಾದರು.
ಅಲ್ಲಿಂದ ಇಲ್ಲಿಯವರೆಗೆ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ವರ್ಚಸ್ವಿ ನಾಯಕನವರೆಗೆ ಹಂತ ಹಂತವಾಗಿ ಬೆಳೆದರು. ಮಹತ್ವದ ಹುದ್ದೆಗಳಾದ ವಿಧಾನಸಭಾ ಸ್ಪೀಕರ್, ಉಪಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ, ಕರ್ನಾಟಕದ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ, ಕೇಂದ್ರದ ಕ್ಯಾಬಿನೆಟ್‌ನಲ್ಲಿ ವಿದೇಶಾಂಗ ಖಾತೆ ಸಚಿವ ಸ್ಥಾನ ಹೀಗೆ ಹತ್ತು ಹಲವಾರು ಹುದ್ದೆಗಳನ್ನು ಅಲಂಕರಿಸಿ, ಆ ಸ್ಥಾನಗಳಿಗೆ ಗೌರವ ತಂದರು. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದರು.
ವಿದ್ವತ್ತು, ಹಿರಿತನ, ಅನುಭವ, ಪ್ರಭಾವ ಮತ್ತು ಉತ್ತಮ ನಡವಳಿಕೆ ಹೊಂದಿರುವ ಎಸ್.ಎಂ. ಕೃಷ್ಣ ಅವರ ‘ಭಿನ್ನ ವ್ಯಕ್ತಿತ್ವ’ ಸಹಜವಾಗಿಯೇ ಸುದ್ದಿ ಮಾಧ್ಯಮಗಳು ಮತ್ತು ಜನರನ್ನು ಸೆಳೆಯುವಂಥಾದ್ದು. ಇಂತಹ ಕೃಷ್ಣರಿಗೆ ಕಾಂಗ್ರೆಸ್ ಕಲ್ಚರ್ ಗೊತ್ತು. ರಾಜಕಾರಣದಲ್ಲಿರಬೇಕಾದ ಡಿಪ್ಲಮೆಸಿ ಗೊತ್ತು. ಇವತ್ತಿನ ರಾಜಕಾರಣ ಗೊತ್ತು. ಗೊತ್ತಿರುವುದರಿಂದಲೇ ಹೈಕಮಾಂಡ್ ಹೇಳಿದ ತಕ್ಷಣ ವಿದೇಶಾಂಗ ಖಾತೆಗೆ ರಾಜೀನಾಮೆ ಕೊಟ್ಟು (28-10-2012) ಕರ್ನಾಟಕಕ್ಕೆ ಬಂದರು. ರಾಜ್ಯಸಭೆಗೆ ಪಕ್ಷ ಟಿಕೆಟ್ ಕೊಡದಿದ್ದಾಗ, ‘ಟಿಕೆಟ್ ನಿರಾಕರಿಸಿದ್ದಕ್ಕೆ ಬೇಸರವಿದೆ, ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದು ಪ್ರಬುದ್ಧತೆ ಮರೆದರು.
ಕೃಷ್ಣರೇನೋ ಪ್ರಬುದ್ಧತೆ ಮೆರೆದು ವೌನವಾಗಬಹುದು. ಆದರೆ ಈ ವೌನ ಕೃಷ್ಣರ ಪೊಲಿಟಿಕಲ್ ಕೆರಿಯರ್ ಮುಗಿಯಿತೆ, ಇವತ್ತಿನ ರಾಜಕೀಯ ಸಂದರ್ಭಕ್ಕೆ ಕೃಷ್ಣ ಔಟ್‌ಡೇಟೆಡ್ ಆದರೆ, ಕೃಷ್ಣರ ಆರೋಗ್ಯ ಕೈ ಕೊಟ್ಟಿತೆ, ಕುಟುಂಬದ ಕಾಳಜಿಗೆ ಮಣಿದರೆ, ಕಾಂಗ್ರೆಸ್ ಪಕ್ಷದೊಳಗಿನ ವಿರೋಧಿ ಗುಂಪುಗಳ ಕೈ ಮೇಲಾಯಿತೆೆ ಎಂಬ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಹೌದು, ಇವಿಷ್ಟೂ ಕಾರಣಗಳು ಕೃಷ್ಣರನ್ನು ರಾಜಕೀಯ ನಿವೃತ್ತಿಯ ಹಿಂದೆ ಕೆಲಸ ಮಾಡಿವೆ.
ಎರಡು ದಶಕಗಳಿಂದ ದೇಶದ ಚುನಾವಣೆ ಮತ್ತು ಮತದಾರರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಚುನಾವಣಾ ಸರ್ವೇ ಕಾರ್ಯದಲ್ಲಿ ತೊಡಗಿರುವ ಮತ್ತು ನಿಷ್ಪಕ್ಷಪಾತ ವರದಿಗಳಿಗೆ ಹೆಸರಾಗಿರುವ ಸಿ ಓಟರ್ ಸಂಸ್ಥೆ ಫೆಬ್ರುವರಿ 2013 ರಲ್ಲಿ ಒಂದು ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷೆಯಲ್ಲಿ ಕರ್ನಾಟಕದ ಮತದಾರರಿಗೆ ‘ವಯಸ್ಸಿನ ಆಧಾರದ ಮೇಲೆ ಎಸ್.ಎಂ. ಕೃಷ್ಣ ನಿವೃತ್ತರಾಗಬೇಕೆ ಅಥವಾ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಬೇಕೆ’ ಎಂಬ ಪ್ರಶ್ನೆ ಕೇಳಿತ್ತು. ಸಮೀಕ್ಷೆಯ ನಂತರ ಬಂದ ವರದಿ ಪ್ರಕಾರ, ಶೇ. 71.28 ರಷ್ಟು ಜನ ನಿವೃತ್ತಿ ಪಡೆಯುವುದು ಒಳ್ಳೆಯದು ಎಂದು, ಶೇ. 11.8 ರಷ್ಟು ಜನ ಮತ್ತೆ ರಾಜಕೀಯಕ್ಕೆ ಬರಬೇಕು ಎಂದು ಮತ ನೀಡಿದ್ದರು ಎಂಬುದಾಗಿತ್ತು.
ಆಶ್ಚರ್ಯಕರ ಸಂಗತಿ ಎಂದರೆ, ಈ ವರದಿಗೆ ಪೂರಕವಾಗಿ, ಕೇಂದ್ರ ಗುಪ್ತಚರ ಇಲಾಖೆ ಕೂಡ ಕೃಷ್ಣರಿಗೆ ವಿರುದ್ಧವಾದ ವರದಿಯನ್ನು ನೀಡಿತ್ತು. ಈ ಎರಡೂ ವರದಿಗಳನ್ನು ಮುಂದಿಟ್ಟುಕೊಂಡ ಕಾಂಗ್ರೆಸ್ ಹೈಕಮಾಂಡ್, ಕೃಷ್ಣರಿಗೆ ಕರ್ನಾಟಕದ ನೇತೃತ್ವ ವಹಿಸಿದರೆ ಆಗುವ ಅನುಕೂಲಗಳು ಮತ್ತು ಅನನುಕೂಲಗಳನ್ನು ಅಳೆದು ತೂಗಿ, ವಿದೇಶಾಂಗ ಸಚಿವ ಖಾತೆಯಿಂದ ನಿಯುಕ್ತಿಗೊಳಿಸಿ, ಅವರಿಗೆ ಯಾವ ಜವಾಬ್ದಾರಿಯನ್ನೂ ವಹಿಸದೆ, ತಟಸ್ಥವಾಗಿರಲು ಸೂಚಿಸಿತ್ತು. 2013ಕ್ಕೇ ಫಿಟ್ಟಲ್ಲ ಎನಿಸಿದ್ದವರು, 2014 ರಲ್ಲಿ ಬಳಕೆಗೆ ಬರುವುದುಂಟೆ?
ಇನ್ನು ಕೃಷ್ಣರ ಕಟ್ಟಾ ಬೆಂಬಲಿಗರೆಂದು ಗುರುತಿಸಿಕೊಳ್ಳುವ, ಅವರಿಂದ ಬೆಳೆದು ಬಲಾಢ್ಯರಾದ ಡಿ.ಕೆ. ಶಿವಕುಮಾರ್, ಆರ್.ವಿ.ದೇಶಪಾಂಡೆಗೆ ಸಿದ್ದರಾಮಯ್ಯನವರು ಸಚಿವ ಸ್ಥಾನ ನೀಡಿ ಬಾಯ್ಮುಚ್ಚಿಸಿದ್ದಾರೆ. ಇನ್ನೊಬ್ಬ ಶಿಷ್ಯ ಡಾ. ಜಿ. ಪರಮೇಶ್ವರ್‌ಗೆ ಪರಿಷತ್ತಿಗೆ ಆಯ್ಕೆಯಾಗುವಂತೆ ನೋಡಿಕೊಂಡು ಸಚಿವ ಸ್ಥಾನ ನೀಡುತ್ತಿದ್ದಾರೆ. ಇನ್ನು ಬಿ.ಎಲ್. ಶಂಕರ್, ಬಿ.ಕೆ. ಚಂದ್ರಶೇಖರ್, ಆರ್.ವಿ. ದೇವರಾಜ್ ಹೈಕಮಾಂಡ್ ವಿರುದ್ಧ ದನಿ ಎತ್ತಲಾಗದೆ ಏದುಸಿರುಬಿಡುತ್ತಿದ್ದಾರೆ.
ಆದರೆ ಕೃಷ್ಣರ ವಿರೋಧಿ ಬಲ ಹಿಂದೆಂದಿಗಿಂತಲೂ ಇಂದು ಹೆಚ್ಚು ಚುರುಕಾಗಿದೆ, ಶಕ್ತಿಯುತವಾಗಿದೆ, ರಾಜಕೀಯವಾಗಿ ಅನುಕೂಲವನ್ನೂ ಪಡೆಯುತ್ತಿದೆ. ಕೃಷ್ಣರ ವಿರೋಧಿ ಗುಂಪಿನಲ್ಲಿ ಮೊದಲ ಪಂಕ್ತಿಯಲ್ಲಿ ರಾಜ್ಯದ ಲಿಂಗಾಯತ ನಾಯಕರಿದ್ದರೆ, ಅವರ ನಂತರದ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಮಾರ್ಗರೆಟ್ ಆಳ್ವ, ರೆಹಮಾನ್ ಖಾನ್, ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್‌ಗಳಿದ್ದಾರೆ. ಇವರೆಲ್ಲ ಇಂದು ದಿಲ್ಲಿಯ ಹೈಕಮಾಂಡ್ ಮಟ್ಟದಲ್ಲಿ ವಿಜೃಂಭಿಸುತ್ತಿದ್ದಾರೆ. ಇನ್ನು ಸ್ಥಳೀಯವಾಗಿ ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ, ಜಾಫರ್ ಶರೀಫ್, ಶ್ಯಾಮನೂರು ಶಿವಶಂಕರಪ್ಪ, ಕಾಗೋಡು ತಿಮ್ಮಪ್ಪರಿದ್ದಾರೆ. ಇವರಲ್ಲಿ ತಿಮ್ಮಪ್ಪ, ಶಿವಶಂಕರಪ್ಪ ಅಧಿಕಾರದ ಕುರ್ಚಿಯಲ್ಲಿ ಕೂತಿದ್ದಾರೆ. ಇದು ಸದ್ಯದ ಸ್ಥಿತಿಯಲ್ಲಿ ಕೃಷ್ಣರನ್ನು ರೇಸ್‌ನಲ್ಲಿ ಹಿಂದಿಕ್ಕಿವೆ. ಸುಮ್ಮನಾಗುವ ಸ್ಥಿತಿಯನ್ನು ತಂದಿಟ್ಟಿವೆ.
ಅಷ್ಟೇ ಅಲ್ಲ, ಕೃಷ್ಣರಿಗೆ ಈಗ 82 ವರ್ಷ. ಆರೋಗ್ಯ ಕೈ ಕೊಟ್ಟಿದೆ. ಮಡದಿ ಮಕ್ಕಳಿಗೂ ರಾಜಕೀಯ ಸಾಕೆನಿಸಿ, ವಿಶ್ರಾಂತಿ ಬೇಕೆನಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹೋರಾಟ ಮಾಡಬೇಕು, ಸೆಣಸಾಡಬೇಕು, ಅಧಿಕಾರ ಹೊಂದಲೇಬೇಕು ಎಂಬ ಹಟ ಇಲ್ಲವಾಗಿದೆ. 1999ರಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಮೊದಲ ಬಾರಿಗೆ ಕೂತಾಗ ಅವರು ಹೊಂದಿದ್ದ ‘ಕ್ಲೀನ್ ಇಮೇಜ್’ ಈಗಿಲ್ಲವಾಗಿದೆ.
ಆದರೆ, ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಹತ್ತು ಹಲವು ಕಾರ್ಯಕ್ರಮಗಳು, ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇವೆಲ್ಲವುಗಳ ಜೊತೆಗೆ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಜಾತಿ ಬಲಾಬಲವನ್ನು ಅವಲೋಕಿಸಿದರೆ, ಕೃಷ್ಣ ಅವರು ಪ್ರಶ್ನಾತೀತ ಒಕ್ಕಲಿಗ ನಾಯಕರಲ್ಲದೆ ಇದ್ದರೂ ಆ ಕೆಲಸವನ್ನು ತಮ್ಮ ಮಿತಿಯಲ್ಲಿಯೇ ಅವರು ಮಾಡಬಲ್ಲರು. ಆದರೆ ಕೃಷ್ಣ ತಂದುಕೊಡುವ ಒಕ್ಕಲಿಗರ ಮತಗಳಿಗಿಂತ ಇವತ್ತು ಹೆಚ್ಚಿನ ಪ್ರಮಾಣದಲ್ಲಿ ದಲಿತ-ಹಿಂದುಳಿದ ಜಾತಿಗಳ ಮತಗಳು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು ಕೂರಿಸಿರುವುದರಿಂದ, ಕೃಷ್ಣ ಮತ್ತವರ ಒಕ್ಕಲಿಗ ಜಾತಿ ಕೂಡ ಸದ್ಯಕ್ಕೆ ಕಾಂಗ್ರೆಸ್‌ಗೆ ಬೇಡವಾಗಿದೆ.
ಈ ಎಲ್ಲ ಕಾರಣಗಳಿಂದಾಗಿಯೇ ಒಂದು ಕೋನದಲ್ಲಿ ರಾಜ್ಯ ಕಾಂಗ್ರೆಸ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರದಂತೆ ಕಾಣುವ ಎಸ್.ಎಂ. ಕೃಷ್ಣ ಇನ್ನೊಂದು ಕೋನದಲ್ಲಿ ಸಮಸ್ಯೆಯಂತೆ ಕಾಣುತ್ತಿದ್ದಾರೆ. ಅನುಕೂಲಗಳಿಗಿಂತ ಅನನುಕೂಲಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಹೀಗಾಗಿ ದಿಲ್ಲಿಯ ಕಾಂಗ್ರೆಸ್ ಹೈಕಮಾಂಡ್ ಕೃಷ್ಣರನ್ನು ನಿವೃತ್ತಿ ಬದುಕಿಗೆ ತಳ್ಳಿದೆ. ಟೆನ್ನಿಸ್ ಖ್ಯಾತಿಯ ಕೃಷ್ಣರ ರಾಜಕೀಯ ಆಟ ಮುಗಿದಂತಾಗಿದೆ.