ಚಿತ್ರ: ಗುಜ್ಜಾರ್ |
ಸಿದ್ದರಾಮಯ್ಯನವರ ಈ ‘ಅಹಿಂದ ಶೈಲಿ’ಗೆ ಲೋಕಸಭಾ ಚುನಾವಣೆಯ ಮೋದಿ ಅಲೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲು, ಮುಖ್ಯಮಂತ್ರಿ ಆಕಾಂಕ್ಷಿಯ ರೇಸ್‌ನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು ಕೂಡ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಶಕ್ತಿ ತುಂಬಿದೆ.
ಇದರ ಲಾಭ ಪಡೆದ ಸಿದ್ದರಾಮಯ್ಯನವರು, ಡಾ. ಜಿ. ಪರಮೇಶ್ವರ್ ಅವರನ್ನು ರಾಜ್ಯಸಭೆಗೆ ಬಡ್ತಿ ನೀಡಲು ನೋಡಿದರು. ಹೈಕಮಾಂಡ್ ಒಪ್ಪದಿದ್ದಾಗ ಗೆಳೆಯ ಸಿ.ಎಂ. ಇಬ್ರಾಹಿಂ, ಮೈಸೂರಿನ ರಿಯಲ್ ಎಸ್ಟೇಟ್ ಕುಳ ಚನ್ನಾರೆಡ್ಡಿಯವರ ಹೆಸರನ್ನು ರಾಜ್ಯಸಭೆಗೆ ತೇಲಿಬಿಟ್ಟರು ಎಂಬುದು ಸುದ್ದಿಯಾಯಿತು. ಇದನ್ನು ಸಿದ್ದರಾಮಯ್ಯನವರು ಗಾಳಿ ಸುದ್ದಿ ಎಂದು ಸಿಟ್ಟಾದರು. ಆದರೆ ವಿಧಾನ ಪರಿಷತ್ತಿಗೆ ತಮ್ಮದೇ ಜಾತಿಯ, ತಮ್ಮ ಹಿಂದೆ ಮುಂದೆ ಓಡಾಡುವ ಎಚ್.ಎಂ. ರೇವಣ್ಣರನ್ನು ಎಂಎಲ್ಸಿಯಾಗುವಂತೆ ನೋಡಿಕೊಂಡಿದ್ದರ ಬಗ್ಗೆ ವೌನ ವಹಿಸಿದರು. ನಾಲ್ವರು ಪರಿಷತ್ ಸದಸ್ಯರಲ್ಲಿ ಒಕ್ಕಲಿಗ, ಲಿಂಗಾಯತ ಜಾತಿಯ ಜನರಿಲ್ಲದಂತೆ ನೋಡಿಕೊಳ್ಳುವ ಮೂಲಕ ಸಿದ್ದರಾಮಯ್ಯನವರು ಮೇಲುಗೈ ಸಾಧಿಸಿದರು.
ಅಷ್ಟೇ ಅಲ್ಲ, ಕಾಂಗ್ರೆಸ್ಸಿನ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿಸುವ ಬಗ್ಗೆ ‘ಹೈಕಮಾಂಡ್ ಆಯ್ಕೆಯೇ ಅಂತಿಮ’ ಅಂತ ಉದ್ದಕ್ಕೂ ಹೇಳಿಕೊಂಡು ಬಂದವರು, ಕಡೆ ಗಳಿಗೆಯಲ್ಲಾದ ಕ್ಷಿಪ್ರ ಕಾರ್ಯಾಚರಣೆಗೂ ‘ಹೈಕಮಾಂಡ್ ಆಯ್ಕೆಯೇ ಅಂತಿಮ’ ಅಂದು ಸುಮ್ಮನಾಗಿಬಿಟ್ಟರು. ಆ ಮೂಲಕ, ಹಿರಿಯ ಒಕ್ಕಲಿಗ ನಾಯಕನನ್ನು ಹಿಂದಕ್ಕೆ ಸರಿಸಿ, ಮಾತು ಕೇಳುವ ಕಿರಿಯ ಗೌಡನಿಗೆ ಸ್ಥಾನ ನೀಡಿ, ಚಾಣಾಕ್ಷತನ ಮೆರೆದರು. ತಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಕೃಷ್ಣರ ‘ಋಣ’ ತೀರಿಸಿದರು!
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ, ಮೊದಲಿನಿಂದಲೂ ಎಸ್.ಎಂ. ಕೃಷ್ಣರನ್ನು ಕಂಡರಾಗದು. ಈಗ ಕೃಷ್ಣರಿಗೆ ರಾಜ್ಯಸಭಾ ಟಿಕೆಟ್ ತಪ್ಪಿರುವ ಹೊತ್ತಿನಲ್ಲಿ, ದೇವೇಗೌಡರು ದೆಹಲಿಯಲ್ಲಿ ಸಿದ್ದರಾಮಯ್ಯನವರ ಕೈ ಕುಲುಕಿದ್ದಾರೆ. ಕೈ ಕುಲುಕಾಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲವಾದರೂ, ಮೂಲ ಕಾಂಗ್ರೆಸ್ಸಿಗರಿಗೆ ಮತ್ತು ಕೃಷ್ಣರ ಹಿಂಬಾಲಕರಿಗೆ ಇದು ಇರುಸು ಮುರುಸುಂಟು ಮಾಡಿದೆ.
ಇವೆಲ್ಲವುಗಳ ಒಟ್ಟು ಮೊತ್ತ ಬಂಡಾಯದ ರೂಪದಲ್ಲಿ ಕೆಂಪಯ್ಯನವರ ನೇಮಕಾತಿ ವಿಚಾರದಲ್ಲಿ ಸ್ಫೋಟಗೊಂಡಿದೆ.
ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯನವರನ್ನು ಮುಖ್ಯಮಂತ್ರಿಗಳ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲು, ಸಂಪುಟದರ್ಜೆಯ ಸ್ಥಾನಮಾನ ನೀಡಲು ಮುಂದಾಗಿರುವ ಸಿದ್ದರಾಮಯ್ಯನವರ ಕ್ರಮದ ವಿರುದ್ಧ ಕೆಲ ಬೆಂಗಳೂರು ನಗರ ಸಚಿವರು ಮತ್ತು 15 ಕ್ಕೂ ಹೆಚ್ಚು ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್‌ರಿಗೆ ಪತ್ರ ಬರೆಯುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಂಪಯ್ಯ ಕುರುಬ ಜಾತಿಗೆ ಸೇರಿದವರು. ನಕಲಿ ಜಾತಿಪತ್ರ ನೀಡಿಕೆ ಮತ್ತು ಲೋಕಾಯುಕ್ತ ತನಿಖೆಗೆ ಒಳಗಾಗಿದ್ದವರು. ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಗುರುತರ ಆರೋಪ ಹೊತ್ತವರು. ಇಂಥವರಿಗೆ ಸಂಪುಟದರ್ಜೆಯ ಸ್ಥಾನಮಾನ ನೀಡುವುದು ಅನಗತ್ಯ ಖರ್ಚಿಗೆ, ಸ್ವಜನಪಕ್ಷಪಾತಕ್ಕೆ ಮತ್ತು ಆ ಮೂಲಕ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುವುದಿಲ್ಲವೇ ಎನ್ನುವ ವಿಚಾರವನ್ನು ಈಗ ಹೈಕಮಾಂಡಿನ ಗಮನಕ್ಕೆ ತಂದಿದ್ದಾರೆ. ‘ಶಕ್ತಿವಂತ’ ಸಿದ್ದಣ್ಣ ಕೊಂಚ ಕೋಪಗೊಂಡಿದ್ದಾರೆ!
No comments:
Post a Comment