ಬಿ.ಎಸ್. ಯಡಿಯೂರಪ್ಪ |
ಇವರೇ ಬಿ.ಎಸ್. ಯಡಿಯೂರಪ್ಪ. ಇವರ ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಕ್ಕೊಂದು ಉತ್ತಮ ಉದಾಹರಣೆ.
ಇಂತಹ ಯಡಿಯೂರಪ್ಪನವರು ಬೆಳೆದು ಬಂದ ಬಗೆಯನ್ನು, ಸವೆಸಿದ ಹಾದಿಯನ್ನು, ಸಹಿಸಿದ ಸಂಕಟಗಳನ್ನು, ಅನುಭವಿಸಿದ ಅಧಿಕಾರವನ್ನು, ಆ ಅಧಿಕಾರ ತಂದಿಡುವ ಅನಾಹುತವನ್ನು, ಅವಮಾನವನ್ನು... ಈಗ ಮೆಲುಕು ಹಾಕುವ ಕಾಲ ಬಂದಿದೆ.
ಜನರ ನಡುವೆಯಿಂದ ಎದ್ದುಬಂದ ಯಡಿಯೂರಪ್ಪನವರು ಜನರನ್ನು ಬಳಸಿಕೊಂಡು ಮುಖ್ಯಮಂತ್ರಿಯಾದರು, ಯಡಿಯೂರಪ್ಪನವರನ್ನು ಬಳಸಿಕೊಂಡ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಮೂಲಕ ದಕ್ಷಿಣ ಭಾರತದಲ್ಲಿ ಖಾತೆ ತೆರೆಯಿತು. ಯಡಿಯೂರಪ್ಪನವರು ಬಳಸಿಕೊಂಡ ಕರ್ನಾಟಕದ ಜನ ಮರೆತರು. ಆದರೆ ಯಡಿಯೂರಪ್ಪನವರನ್ನು ಬಳಸಿಕೊಂಡ ಬಿಜೆಪಿ, ಅವರನ್ನೇ ಮರೆಯಿತು. ಯಡಿಯೂರಪ್ಪನವರು ಬಿಜೆಪಿ ಪಾಲಿಗೆ ಬಾಳೆ ಎಲೆಯಂತಾದರು, ಬಳಸಿ ಬಿಸಾಡಲ್ಪಟ್ಟರು.
ಯಡಿಯೂರಪ್ಪನವರ ಇವತ್ತಿನ ಈ ಸ್ಥಿತಿಗೆ ಬೇರೆಯವರ ಕೊಡುಗೆಗಿಂತ ಸ್ವಯಂಕೃತಪರಾಧವೇ ಹೆಚ್ಚಿದೆ. ತಳಮಟ್ಟದಿಂದ ಉನ್ನತ ಪದವಿಗೇರಿದ ರಾಜಕೀಯ ನಾಯಕನಿಗೆ ಇಂತಹ ಏಳು-ಬೀಳುಗಳು ಬದುಕಿನ ಅವಿಭಾಜ್ಯ ಅಂಗವಾದರೂ, ಯಡಿಯೂರಪ್ಪನವರು ಸವೆದದ್ದು ಮತ್ತು ಸವೆಸಿದ್ದು ನಿಜಕ್ಕೂ ಕುತೂಹಲಕರವಾದದ್ದು. ಅಧ್ಯಯನಕ್ಕೆ ಯೋಗ್ಯವಾದದ್ದು.
1983 ರಲ್ಲಿ ಭಾರತೀಯ ಜನತಾ ಪಕ್ಷದಿಂದ ಮೊಟ್ಟ ಮೊದಲ ಬಾರಿಗೆ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆಯಾದ ಯಡಿಯೂರಪ್ಪನವರು, 1983 ರಿಂದ 2006 ರವರೆಗೆ, 24 ವರ್ಷಗಳವರೆಗೆ ಅಧಿಕಾರದ ಸ್ಥಾನದಿಂದ ದೂರವೇ ಉಳಿದಿದ್ದರು. ವಿರೋಧಪಕ್ಷದ ನಾಯಕನ ಸ್ಥಾನವೇ ಆವರೆಗಿನ ಅವರ ಅತಿ ದೊಡ್ಡ ಸ್ಥಾನವಾಗಿತ್ತು. ಹೋರಾಟವೇ ಬದುಕಾಗಿತ್ತು. ಅಧಿಕಾರ ಅನ್ನುವುದು ದೂರವೇ ಉಳಿದಿತ್ತು.
ಆದರೆ 2006 ರಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ಕ್ಷಿಪ್ರ ಕಾರ್ಯಾಚರಣೆಗೆ ಕೈ ಜೋಡಿಸಿದ ಯಡಿಯೂರಪ್ಪನವರು ದಿನ ಬೆಳಗಾಗುವುದರೊಳಗೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸಿದರು. ಉಪಮುಖ್ಯಮಂತ್ರಿಯಾದರು. ಆ ಮೂಲಕ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದರು. ತಮಗಿಂತ ಕಿರಿಯರಾದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ತಮ್ಮ ಸುದೀರ್ಘ ಸಂಘರ್ಷಮಯ ಬದುಕನ್ನು ಬಳಸಿಕೊಳ್ಳಲು ಕುಮಾರಸ್ವಾಮಿಗೆ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲ, ಒಪ್ಪಂದದಂತೆ 20 ತಿಂಗಳ ನಂತರ ಅಧಿಕಾರ ಹಸ್ತಾಂತರವಾಗದಿದ್ದಾಗ, ಇದೇ ಯಡಿಯೂರಪ್ಪನವರು ಬಳಸಿ ಬಿಸಾಡಿದ ಬಾಳೆ ಎಲೆಯಂತಾಗಿದ್ದರು.
ಇದಾದ ನಂತರ, ಜೆಡಿಎಸ್‌ನ ವಚನಭ್ರಷ್ಟತೆಯನ್ನೇ ಮುಂದುಮಾಡಿಕೊಂಡು ಚುನಾವಣೆ ಎದುರಿಸಿದ ಯಡಿಯೂರಪ್ಪನವರು ಮತ್ತವರ ಬಿಜೆಪಿಗೆ ಕರ್ನಾಟಕದ ಜನ ಆಶೀರ್ವದಿಸಿದ್ದರು. ಯಡಿಯೂರಪ್ಪ ಲಿಂಗಾಯತ ನಾಯಕನಾಗಿ ಹೊರಹೊಮ್ಮಿದ್ದರು. 2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೂ ಏರಿದರು. ಸರಕಾರ ರಚಿಸುವ ಸಂದರ್ಭದಲ್ಲಿ ಶಾಸಕರ ಸಂಖ್ಯೆ ಕಡಿಮೆ ಬಿದ್ದಾಗ ಬಳ್ಳಾರಿಯ ಗಣಿಧಣಿಗಳಾದ ರೆಡ್ಡಿ ಸಹೋದರರ ಸಹಾಯಕ್ಕೆ ಕೈಚಾಚಿದರು. ಅವರ ಋಣ ಯಡಿಯೂರಪ್ಪನವರ ತಲೆ ಮೇಲಿತ್ತು. ತಮ್ಮನ್ನು, ತಮ್ಮ ಸರಕಾರವನ್ನು ರೆಡ್ಡಿಗಳ ಬಳಕೆಗೆ ಬಿಟ್ಟರು. ಅವರು ಆಡಿಸಿದಂತೆ ಆಡಿದರು. ಅಪಖ್ಯಾತಿಗೊಳಗಾದರು. ಕೊನೆಗೆ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದರು. ಸಿಬಿಐ ಕೇಸು ಹೆಗಲೇರಿತು, ಜೈಲು ಪಾಲಾದರು. ಇವರಿಂದ ಅಧಿಕಾರವನ್ನು ಕಂಡ ಬಿಜೆಪಿ, ಇವರನ್ನೇ ಬಳಸಿಕೊಂಡು ಬಿಸಾಡಿತು.
ತಳಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದ್ದ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ಪಕ್ಷದ ವರಿಷ್ಠರು ಪಕ್ಷದ ಅಧ್ಯಕ್ಷಗಾದಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕುರ್ಚಿಯಿಂದ ಕೆಳಗಿಳಿದ ನಂತರ ಯಾವ ಸ್ಥಾನವನ್ನೂ ನೀಡದೆ ಅವಮಾನಿಸಿದರು. ಪಕ್ಷದಿಂದ ಹೊರನಡೆಯುವಂತೆ ನೋಡಿಕೊಂಡರು.
ಬಿಜೆಪಿಯಿಂದ ಹೊರಬಿದ್ದ ಯಡಿಯೂರಪ್ಪನವರು ತಮ್ಮದೇ ಸ್ವಂತ ಪಕ್ಷ ಕೆಜೆಪಿ ಕಟ್ಟಿ, ಬಿಜೆಪಿ ವಿರುದ್ಧ ಸಮರ ಸಾರಿದರು. ಇಂತಹ ಸಂದರ್ಭಕ್ಕಾಗಿಯೇ ಕಾದಿದ್ದ ಕಾಂಗ್ರೆಸ್, ಸಿಬಿಐ ಕೇಸ್ ಖುಲಾಸೆಯ ಆಸೆ ತೋರಿಸಿ, ಯಡಿಯೂರಪ್ಪನವರನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆಗೇರಿತು. ಯಡಿಯೂರಪ್ಪನವರು ತಾವೂ ಸೋತು ಬಿಜೆಪಿಯನ್ನೂ ಸೋಲಿಸಿದ್ದರು. ತಮಗರಿವಿಲ್ಲದಂತೆಯೇ ಕಾಂಗ್ರೆಸ್‌ಗೆ ಸಹಕರಿಸಿದ್ದರು. ಮತ್ತೊಮ್ಮೆ ಬಾಳೆ ಎಲೆಯಾಗಿದ್ದರು, ಬಳಸಿ ಬಿಸಾಡಲ್ಪಟ್ಟಿದ್ದರು.
ಕಾಂಗ್ರೆಸ್ ಕೊಟ್ಟ ಹೊಡೆತದಿಂದ ಎಚ್ಚೆತ್ತುಕೊಂಡ, ಮಾಡಿದ ತಪ್ಪನ್ನು ತಿದ್ದಿಕೊಂಡ ಯಡಿಯೂರಪ್ಪ ಮತ್ತೆ ಬಿಜೆಪಿ ಬಾಗಿಲು ತಟ್ಟಿದರು. ಅದಕ್ಕೆ ಸರಿಯಾಗಿ ಬಿಜೆಪಿಯಲ್ಲಿ ತಮ್ಮ ಆಪ್ತ ಮೋದಿ ಮುಂಚೂಣಿಗೆ ಬಂದಿದ್ದರು, ರಾಜ್ಯ ಬಿಜೆಪಿಯವರೂ ಸೋತು ಸುಣ್ಣಾಗಿದ್ದರು. ಯಡಿಯೂರಪ್ಪನವರು ಮೋದಿಯವರನ್ನು ಮುಂದಿಟ್ಟುಕೊಂಡು ಮತ್ತೆ ಬಿಜೆಪಿಗೆ ಬಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದರು. ಅದರಲ್ಲೂ 7 ಜನ ಲಿಂಗಾಯತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದರು.
ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಸಂಖ್ಯಾಬಲವನ್ನು ಹೆಚ್ಚಿಸಿದ, ಅವರ ಆಪ್ತ ವಲಯಕ್ಕೆ ಸೇರಿದ ಯಡಿಯೂರಪ್ಪನವರು ಕರ್ನಾಟಕದಿಂದ, ಲಿಂಗಾಯತರ ಕೋಟಾದಡಿ ಮಂತ್ರಿಗಳಾಗುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಆಗಿದ್ದೇ ಬೇರೆ. ಯಡಿಯೂರಪ್ಪನವರಿಗೂ ಇಲ್ಲ, ಅವರೇಳಿದವರಿಗೂ ಇಲ್ಲ. ಆದರೆ ಪಕ್ಷದೊಳಗಿದ್ದುಕೊಂಡೇ ತಮ್ಮ ವಿರುದ್ಧ ಪಿತೂರಿ ಮಾಡಿದ ಅನಂತಕುಮಾರ್ ಮಂತ್ರಿಯಾಗಿದ್ದರು.
ಯಡಿಯೂರಪ್ಪನವರು ಮಂತ್ರಿಯಾಗಲಿಕ್ಕೆ ಅಡ್ಡಿಯಾದ ಕಾರಣವೇ ಅನಂತಕುಮಾರ್‌ಗೂ ಅಪ್ಲೆಯಾಗುವಂತಿದ್ದರೂ, ಅನಂತ್ ಮಂತ್ರಿಯಾದರು, ಯಡ್ಡಿ ಮನೆಗೆ ಬಂದರು. ಅಂದರೆ ಯಡಿಯೂರಪ್ಪನವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಬಳಸಿಕೊಂಡು ಬೆಳೆದದ್ದಕ್ಕಿಂತ ಹೆಚ್ಚಾಗಿ ಬಾಳೆ ಎಲೆಯಾಗಿ ಬಿಸಾಡಿಸಲ್ಪಟ್ಟಿದ್ದೇ ಹೆಚ್ಚು, ಅಲ್ಲವೇ?
No comments:
Post a Comment