Thursday, June 12, 2014

‘ಶಕ್ತಿವಂತ’ ಸಿದ್ದಣ್ಣ

 ಚಿತ್ರ: ಗುಜ್ಜಾರ್
ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಒಂದು ವರ್ಷ ಪೂರೈಸಿದ ನಂತರ ‘ಶಕ್ತಿವಂತ’ರಾಗಿದ್ದಾರೆ. ಕುಸ್ತಿ ಪೈಲ್ವಾನರಂತೆ ಕಾಣುತ್ತಿದ್ದಾರೆ. ಅಡ್ಡ ಬಂದವರನ್ನು ಅಹಿಂದ ಶೈಲಿಯಲ್ಲಿಯೇ ಮಟ್ಟ ಹಾಕುತ್ತಿದ್ದಾರೆ.
ಸಿದ್ದರಾಮಯ್ಯನವರ ಈ ‘ಅಹಿಂದ ಶೈಲಿ’ಗೆ ಲೋಕಸಭಾ ಚುನಾವಣೆಯ ಮೋದಿ ಅಲೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲು, ಮುಖ್ಯಮಂತ್ರಿ ಆಕಾಂಕ್ಷಿಯ ರೇಸ್‌ನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು ಕೂಡ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಶಕ್ತಿ ತುಂಬಿದೆ.
ಇದರ ಲಾಭ ಪಡೆದ ಸಿದ್ದರಾಮಯ್ಯನವರು, ಡಾ. ಜಿ. ಪರಮೇಶ್ವರ್ ಅವರನ್ನು ರಾಜ್ಯಸಭೆಗೆ ಬಡ್ತಿ ನೀಡಲು ನೋಡಿದರು. ಹೈಕಮಾಂಡ್ ಒಪ್ಪದಿದ್ದಾಗ ಗೆಳೆಯ ಸಿ.ಎಂ. ಇಬ್ರಾಹಿಂ, ಮೈಸೂರಿನ ರಿಯಲ್ ಎಸ್ಟೇಟ್ ಕುಳ ಚನ್ನಾರೆಡ್ಡಿಯವರ ಹೆಸರನ್ನು ರಾಜ್ಯಸಭೆಗೆ ತೇಲಿಬಿಟ್ಟರು ಎಂಬುದು ಸುದ್ದಿಯಾಯಿತು. ಇದನ್ನು ಸಿದ್ದರಾಮಯ್ಯನವರು  ಗಾಳಿ ಸುದ್ದಿ ಎಂದು ಸಿಟ್ಟಾದರು. ಆದರೆ ವಿಧಾನ ಪರಿಷತ್ತಿಗೆ ತಮ್ಮದೇ ಜಾತಿಯ, ತಮ್ಮ ಹಿಂದೆ ಮುಂದೆ ಓಡಾಡುವ ಎಚ್.ಎಂ. ರೇವಣ್ಣರನ್ನು ಎಂಎಲ್ಸಿಯಾಗುವಂತೆ ನೋಡಿಕೊಂಡಿದ್ದರ ಬಗ್ಗೆ ವೌನ ವಹಿಸಿದರು. ನಾಲ್ವರು ಪರಿಷತ್ ಸದಸ್ಯರಲ್ಲಿ ಒಕ್ಕಲಿಗ, ಲಿಂಗಾಯತ ಜಾತಿಯ ಜನರಿಲ್ಲದಂತೆ ನೋಡಿಕೊಳ್ಳುವ ಮೂಲಕ ಸಿದ್ದರಾಮಯ್ಯನವರು ಮೇಲುಗೈ ಸಾಧಿಸಿದರು.
ಅಷ್ಟೇ ಅಲ್ಲ, ಕಾಂಗ್ರೆಸ್ಸಿನ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿಸುವ ಬಗ್ಗೆ ‘ಹೈಕಮಾಂಡ್ ಆಯ್ಕೆಯೇ ಅಂತಿಮ’ ಅಂತ ಉದ್ದಕ್ಕೂ ಹೇಳಿಕೊಂಡು ಬಂದವರು, ಕಡೆ ಗಳಿಗೆಯಲ್ಲಾದ ಕ್ಷಿಪ್ರ ಕಾರ್ಯಾಚರಣೆಗೂ ‘ಹೈಕಮಾಂಡ್ ಆಯ್ಕೆಯೇ ಅಂತಿಮ’ ಅಂದು ಸುಮ್ಮನಾಗಿಬಿಟ್ಟರು. ಆ ಮೂಲಕ, ಹಿರಿಯ ಒಕ್ಕಲಿಗ ನಾಯಕನನ್ನು ಹಿಂದಕ್ಕೆ ಸರಿಸಿ, ಮಾತು ಕೇಳುವ ಕಿರಿಯ ಗೌಡನಿಗೆ ಸ್ಥಾನ ನೀಡಿ, ಚಾಣಾಕ್ಷತನ ಮೆರೆದರು. ತಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಕೃಷ್ಣರ ‘ಋಣ’ ತೀರಿಸಿದರು!
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ, ಮೊದಲಿನಿಂದಲೂ ಎಸ್.ಎಂ. ಕೃಷ್ಣರನ್ನು ಕಂಡರಾಗದು. ಈಗ ಕೃಷ್ಣರಿಗೆ ರಾಜ್ಯಸಭಾ ಟಿಕೆಟ್ ತಪ್ಪಿರುವ ಹೊತ್ತಿನಲ್ಲಿ, ದೇವೇಗೌಡರು ದೆಹಲಿಯಲ್ಲಿ ಸಿದ್ದರಾಮಯ್ಯನವರ ಕೈ ಕುಲುಕಿದ್ದಾರೆ. ಕೈ ಕುಲುಕಾಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲವಾದರೂ, ಮೂಲ ಕಾಂಗ್ರೆಸ್ಸಿಗರಿಗೆ ಮತ್ತು ಕೃಷ್ಣರ ಹಿಂಬಾಲಕರಿಗೆ ಇದು ಇರುಸು ಮುರುಸುಂಟು ಮಾಡಿದೆ.
ಇವೆಲ್ಲವುಗಳ ಒಟ್ಟು ಮೊತ್ತ ಬಂಡಾಯದ ರೂಪದಲ್ಲಿ ಕೆಂಪಯ್ಯನವರ ನೇಮಕಾತಿ ವಿಚಾರದಲ್ಲಿ ಸ್ಫೋಟಗೊಂಡಿದೆ.
ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯನವರನ್ನು ಮುಖ್ಯಮಂತ್ರಿಗಳ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲು, ಸಂಪುಟದರ್ಜೆಯ ಸ್ಥಾನಮಾನ ನೀಡಲು ಮುಂದಾಗಿರುವ ಸಿದ್ದರಾಮಯ್ಯನವರ ಕ್ರಮದ ವಿರುದ್ಧ ಕೆಲ ಬೆಂಗಳೂರು ನಗರ ಸಚಿವರು ಮತ್ತು 15 ಕ್ಕೂ ಹೆಚ್ಚು ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್‌ರಿಗೆ ಪತ್ರ ಬರೆಯುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಂಪಯ್ಯ ಕುರುಬ ಜಾತಿಗೆ ಸೇರಿದವರು. ನಕಲಿ ಜಾತಿಪತ್ರ ನೀಡಿಕೆ ಮತ್ತು ಲೋಕಾಯುಕ್ತ ತನಿಖೆಗೆ ಒಳಗಾಗಿದ್ದವರು. ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಗುರುತರ ಆರೋಪ ಹೊತ್ತವರು. ಇಂಥವರಿಗೆ ಸಂಪುಟದರ್ಜೆಯ ಸ್ಥಾನಮಾನ ನೀಡುವುದು ಅನಗತ್ಯ ಖರ್ಚಿಗೆ, ಸ್ವಜನಪಕ್ಷಪಾತಕ್ಕೆ ಮತ್ತು ಆ ಮೂಲಕ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುವುದಿಲ್ಲವೇ ಎನ್ನುವ ವಿಚಾರವನ್ನು ಈಗ ಹೈಕಮಾಂಡಿನ ಗಮನಕ್ಕೆ ತಂದಿದ್ದಾರೆ. ‘ಶಕ್ತಿವಂತ’ ಸಿದ್ದಣ್ಣ ಕೊಂಚ ಕೋಪಗೊಂಡಿದ್ದಾರೆ! 

Tuesday, June 10, 2014

ಆಟ ಮುಗಿಸಿದ ಕೃಷ್ಣ

ಎಸ್.ಎಂ. ಕೃಷ್ಣ
ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆಗೆ ಟಿಕೆಟ್ ನಿರಾಕರಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿ ಟಿಕೆಟ್ ನಿರಾಕರಣೆಗೆ ಒಳಗಾಗಿರುವವರು ಇವರೊಬ್ಬರೇ ಅಲ್ಲ. ಕಾಂಗ್ರೆಸ್ ಪಕ್ಷದ ಇತಿಹಾಸ ಬಲ್ಲವರಿಗೆ ಗೊತ್ತಿದ್ದೇ ಎಲ್ಲ. ಆದರೂ ಕೃಷ್ಣರ ಬೆಂಬಲಿಗರು, ಹಿತೈಷಿಗಳು ಬೆಂಗಳೂರಿನ ಸದಾಶಿವನಗರದ ಅವರ ಮನೆ ಮುಂದೆ ಜಮಾಯಿಸಿ, ‘ನೂರಾರು ಜನರಿಗೆ ಅವಕಾಶ ಕಲ್ಪಿಸಿಕೊಟ್ಟ ಕೃಷ್ಣರಿಗೇ ಇವತ್ತು ಅವಕಾಶವಿಲ್ಲ ಎಂದರೆ ಏನು?’ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಪ್ರಶ್ನೆಗೆ ಉತ್ತರಿಸಬೇಕಾದ ಹೈಕಮಾಂಡ್ ಮಾತ್ರ ವೌನಕ್ಕೆ ಶರಣಾಗಿದೆ. ಅಂದರೆ ಕೃಷ್ಣರ ರಾಜಕೀಯ ಬದುಕಿಗೆ ಫುಲ್‌ಸ್ಟಾಪ್ ಇಟ್ಟಿದೆ. ಜೊತೆಗೆ ಕೃಷ್ಣರ ವಯಸ್ಸು ಮತ್ತು ಆರೋಗ್ಯ ಅದಕ್ಕೆ ಪುಷ್ಟಿ ನೀಡಿದೆ.
ಮೇ 1, 1932 ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಮಲ್ಲಯ್ಯರ ಮಗನಾಗಿ ಹುಟ್ಟಿದ ಕೃಷ್ಣ, ತಮ್ಮ 82 ವರ್ಷಗಳ ಬದುಕಿನಲ್ಲಿ, 52 ವರ್ಷಗಳನ್ನು ರಾಜಕೀಯ ರಂಗದಲ್ಲಿ ಕಳೆದಿದ್ದಾರೆ. ತಮ್ಮ ಬದುಕಿನ ಮುಕ್ಕಾಲು ಭಾಗವನ್ನು ಸಾರ್ವಜನಿಕ ಬದುಕಿಗೆ ಮೀಸಲಿಟ್ಟಿದ್ದಾರೆ. ಅರವತ್ತರ ದಶಕದಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ತೆರಳಿದ ಕೃಷ್ಣ ಅವರು ಫುಲ್ಬ್ರೈಟ್ ಸ್ಕಾಲರ್‌ಶಿಪ್ ಪಡೆದು ಟೆಕ್ಸಾಸ್‌ನಲ್ಲಿ ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭಾರತಕ್ಕೆ ಮರಳಿ ಬಂದ ಮೇಲೆ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದವರು.
ಮಂಡ್ಯದ ಪ್ರತಿಷ್ಠಿತ ಕುಟುಂಬದ ಜೊತೆಗೆ ಬಹುಸಂಖ್ಯಾತ ಮತ್ತು ಬಲಾಢ್ಯ ಒಕ್ಕಲಿಗ ಜಾತಿಗೆ ಸೇರಿದ ಕೃಷ್ಣ ಅವರು, ಅರವತ್ತರ ದಶಕದಲ್ಲಿಯೇ  ಫಾರಿನ್ ರಿಟರ್ನ್ ಎಂಬ ಕಾರಣಕ್ಕಾಗಿಯೇ ಸಹಜವಾಗಿ ರಾಜಕೀಯ ಕ್ಷೇತ್ರದತ್ತ ಆಕರ್ಷಿತರಾದರು. 1962ರಲ್ಲಿ ಮೊದಲ ಬಾರಿಗೆ ಮದ್ದೂರು ವಿಧಾನಸಭಾ ಕ್ಷೇತ್ರದಿಂದ, ಪ್ರಜಾ ಸೋಷಲಿಸ್ಟ್ ಪಾರ್ಟಿಯ (ಪಿಎಸ್ಪಿ) ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಆ ಕಾಲಕ್ಕೇ ಭಾರೀ ಹೆಸರು ಗಳಿಸಿದ್ದ ಎಚ್.ಕೆ. ವೀರಣ್ಣಗೌಡರ ವಿರುದ್ಧ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಆನಂತರ 1971 ರಲ್ಲಿ ಇಂದಿರಾಗಾಂಧಿಯವರ ಕಾಂಗ್ರೆಸ್ ಪಾರ್ಟಿ ಸೇರಿದರು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷದ ನಿಷ್ಠಾವಂತ ಸೇವಕರಾದರು.
ಅಲ್ಲಿಂದ ಇಲ್ಲಿಯವರೆಗೆ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ವರ್ಚಸ್ವಿ ನಾಯಕನವರೆಗೆ ಹಂತ ಹಂತವಾಗಿ ಬೆಳೆದರು. ಮಹತ್ವದ ಹುದ್ದೆಗಳಾದ ವಿಧಾನಸಭಾ ಸ್ಪೀಕರ್, ಉಪಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ, ಕರ್ನಾಟಕದ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ, ಕೇಂದ್ರದ ಕ್ಯಾಬಿನೆಟ್‌ನಲ್ಲಿ ವಿದೇಶಾಂಗ ಖಾತೆ ಸಚಿವ ಸ್ಥಾನ ಹೀಗೆ ಹತ್ತು ಹಲವಾರು ಹುದ್ದೆಗಳನ್ನು ಅಲಂಕರಿಸಿ, ಆ ಸ್ಥಾನಗಳಿಗೆ ಗೌರವ ತಂದರು. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದರು.
ವಿದ್ವತ್ತು, ಹಿರಿತನ, ಅನುಭವ, ಪ್ರಭಾವ ಮತ್ತು ಉತ್ತಮ ನಡವಳಿಕೆ ಹೊಂದಿರುವ ಎಸ್.ಎಂ. ಕೃಷ್ಣ ಅವರ ‘ಭಿನ್ನ ವ್ಯಕ್ತಿತ್ವ’ ಸಹಜವಾಗಿಯೇ ಸುದ್ದಿ ಮಾಧ್ಯಮಗಳು ಮತ್ತು ಜನರನ್ನು ಸೆಳೆಯುವಂಥಾದ್ದು. ಇಂತಹ ಕೃಷ್ಣರಿಗೆ ಕಾಂಗ್ರೆಸ್ ಕಲ್ಚರ್ ಗೊತ್ತು. ರಾಜಕಾರಣದಲ್ಲಿರಬೇಕಾದ ಡಿಪ್ಲಮೆಸಿ ಗೊತ್ತು. ಇವತ್ತಿನ ರಾಜಕಾರಣ ಗೊತ್ತು. ಗೊತ್ತಿರುವುದರಿಂದಲೇ ಹೈಕಮಾಂಡ್ ಹೇಳಿದ ತಕ್ಷಣ ವಿದೇಶಾಂಗ ಖಾತೆಗೆ ರಾಜೀನಾಮೆ ಕೊಟ್ಟು (28-10-2012) ಕರ್ನಾಟಕಕ್ಕೆ ಬಂದರು. ರಾಜ್ಯಸಭೆಗೆ ಪಕ್ಷ ಟಿಕೆಟ್ ಕೊಡದಿದ್ದಾಗ, ‘ಟಿಕೆಟ್ ನಿರಾಕರಿಸಿದ್ದಕ್ಕೆ ಬೇಸರವಿದೆ, ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದು ಪ್ರಬುದ್ಧತೆ ಮರೆದರು.
ಕೃಷ್ಣರೇನೋ ಪ್ರಬುದ್ಧತೆ ಮೆರೆದು ವೌನವಾಗಬಹುದು. ಆದರೆ ಈ ವೌನ ಕೃಷ್ಣರ ಪೊಲಿಟಿಕಲ್ ಕೆರಿಯರ್ ಮುಗಿಯಿತೆ, ಇವತ್ತಿನ ರಾಜಕೀಯ ಸಂದರ್ಭಕ್ಕೆ ಕೃಷ್ಣ  ಔಟ್‌ಡೇಟೆಡ್ ಆದರೆ, ಕೃಷ್ಣರ ಆರೋಗ್ಯ ಕೈ ಕೊಟ್ಟಿತೆ, ಕುಟುಂಬದ ಕಾಳಜಿಗೆ ಮಣಿದರೆ, ಕಾಂಗ್ರೆಸ್ ಪಕ್ಷದೊಳಗಿನ ವಿರೋಧಿ ಗುಂಪುಗಳ ಕೈ ಮೇಲಾಯಿತೆೆ ಎಂಬ  ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
ಹೌದು, ಇವಿಷ್ಟೂ ಕಾರಣಗಳು ಕೃಷ್ಣರನ್ನು ರಾಜಕೀಯ ನಿವೃತ್ತಿಯ ಹಿಂದೆ ಕೆಲಸ ಮಾಡಿವೆ.
ಎರಡು ದಶಕಗಳಿಂದ ದೇಶದ ಚುನಾವಣೆ ಮತ್ತು ಮತದಾರರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಚುನಾವಣಾ ಸರ್ವೇ ಕಾರ್ಯದಲ್ಲಿ ತೊಡಗಿರುವ ಮತ್ತು ನಿಷ್ಪಕ್ಷಪಾತ ವರದಿಗಳಿಗೆ ಹೆಸರಾಗಿರುವ ಸಿ ಓಟರ್ ಸಂಸ್ಥೆ ಫೆಬ್ರುವರಿ 2013 ರಲ್ಲಿ ಒಂದು ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷೆಯಲ್ಲಿ ಕರ್ನಾಟಕದ ಮತದಾರರಿಗೆ ‘ವಯಸ್ಸಿನ ಆಧಾರದ ಮೇಲೆ ಎಸ್.ಎಂ. ಕೃಷ್ಣ ನಿವೃತ್ತರಾಗಬೇಕೆ ಅಥವಾ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಬೇಕೆ’ ಎಂಬ ಪ್ರಶ್ನೆ ಕೇಳಿತ್ತು. ಸಮೀಕ್ಷೆಯ ನಂತರ ಬಂದ ವರದಿ ಪ್ರಕಾರ, ಶೇ. 71.28 ರಷ್ಟು ಜನ ನಿವೃತ್ತಿ ಪಡೆಯುವುದು ಒಳ್ಳೆಯದು ಎಂದು, ಶೇ. 11.8 ರಷ್ಟು ಜನ ಮತ್ತೆ ರಾಜಕೀಯಕ್ಕೆ ಬರಬೇಕು ಎಂದು ಮತ ನೀಡಿದ್ದರು ಎಂಬುದಾಗಿತ್ತು.   
ಆಶ್ಚರ್ಯಕರ ಸಂಗತಿ ಎಂದರೆ, ಈ ವರದಿಗೆ ಪೂರಕವಾಗಿ, ಕೇಂದ್ರ ಗುಪ್ತಚರ ಇಲಾಖೆ ಕೂಡ ಕೃಷ್ಣರಿಗೆ ವಿರುದ್ಧವಾದ ವರದಿಯನ್ನು ನೀಡಿತ್ತು. ಈ ಎರಡೂ ವರದಿಗಳನ್ನು ಮುಂದಿಟ್ಟುಕೊಂಡ ಕಾಂಗ್ರೆಸ್ ಹೈಕಮಾಂಡ್, ಕೃಷ್ಣರಿಗೆ ಕರ್ನಾಟಕದ ನೇತೃತ್ವ ವಹಿಸಿದರೆ ಆಗುವ ಅನುಕೂಲಗಳು ಮತ್ತು ಅನನುಕೂಲಗಳನ್ನು ಅಳೆದು ತೂಗಿ, ವಿದೇಶಾಂಗ ಸಚಿವ ಖಾತೆಯಿಂದ ನಿಯುಕ್ತಿಗೊಳಿಸಿ, ಅವರಿಗೆ ಯಾವ ಜವಾಬ್ದಾರಿಯನ್ನೂ ವಹಿಸದೆ, ತಟಸ್ಥವಾಗಿರಲು ಸೂಚಿಸಿತ್ತು. 2013ಕ್ಕೇ ಫಿಟ್ಟಲ್ಲ ಎನಿಸಿದ್ದವರು, 2014 ರಲ್ಲಿ ಬಳಕೆಗೆ ಬರುವುದುಂಟೆ?
ಇನ್ನು ಕೃಷ್ಣರ ಕಟ್ಟಾ ಬೆಂಬಲಿಗರೆಂದು ಗುರುತಿಸಿಕೊಳ್ಳುವ, ಅವರಿಂದ ಬೆಳೆದು ಬಲಾಢ್ಯರಾದ ಡಿ.ಕೆ. ಶಿವಕುಮಾರ್, ಆರ್.ವಿ.ದೇಶಪಾಂಡೆಗೆ ಸಿದ್ದರಾಮಯ್ಯನವರು ಸಚಿವ ಸ್ಥಾನ ನೀಡಿ ಬಾಯ್ಮುಚ್ಚಿಸಿದ್ದಾರೆ. ಇನ್ನೊಬ್ಬ ಶಿಷ್ಯ ಡಾ. ಜಿ. ಪರಮೇಶ್ವರ್‌ಗೆ ಪರಿಷತ್ತಿಗೆ ಆಯ್ಕೆಯಾಗುವಂತೆ ನೋಡಿಕೊಂಡು ಸಚಿವ ಸ್ಥಾನ ನೀಡುತ್ತಿದ್ದಾರೆ. ಇನ್ನು ಬಿ.ಎಲ್. ಶಂಕರ್, ಬಿ.ಕೆ. ಚಂದ್ರಶೇಖರ್, ಆರ್.ವಿ. ದೇವರಾಜ್ ಹೈಕಮಾಂಡ್ ವಿರುದ್ಧ ದನಿ ಎತ್ತಲಾಗದೆ ಏದುಸಿರುಬಿಡುತ್ತಿದ್ದಾರೆ.
ಆದರೆ ಕೃಷ್ಣರ ವಿರೋಧಿ ಬಲ ಹಿಂದೆಂದಿಗಿಂತಲೂ ಇಂದು ಹೆಚ್ಚು ಚುರುಕಾಗಿದೆ, ಶಕ್ತಿಯುತವಾಗಿದೆ, ರಾಜಕೀಯವಾಗಿ ಅನುಕೂಲವನ್ನೂ ಪಡೆಯುತ್ತಿದೆ. ಕೃಷ್ಣರ ವಿರೋಧಿ ಗುಂಪಿನಲ್ಲಿ ಮೊದಲ ಪಂಕ್ತಿಯಲ್ಲಿ ರಾಜ್ಯದ ಲಿಂಗಾಯತ ನಾಯಕರಿದ್ದರೆ, ಅವರ ನಂತರದ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಮಾರ್ಗರೆಟ್ ಆಳ್ವ, ರೆಹಮಾನ್ ಖಾನ್, ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್‌ಗಳಿದ್ದಾರೆ. ಇವರೆಲ್ಲ ಇಂದು ದಿಲ್ಲಿಯ ಹೈಕಮಾಂಡ್ ಮಟ್ಟದಲ್ಲಿ ವಿಜೃಂಭಿಸುತ್ತಿದ್ದಾರೆ. ಇನ್ನು ಸ್ಥಳೀಯವಾಗಿ ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ, ಜಾಫರ್ ಶರೀಫ್, ಶ್ಯಾಮನೂರು ಶಿವಶಂಕರಪ್ಪ, ಕಾಗೋಡು ತಿಮ್ಮಪ್ಪರಿದ್ದಾರೆ. ಇವರಲ್ಲಿ ತಿಮ್ಮಪ್ಪ, ಶಿವಶಂಕರಪ್ಪ ಅಧಿಕಾರದ ಕುರ್ಚಿಯಲ್ಲಿ ಕೂತಿದ್ದಾರೆ. ಇದು ಸದ್ಯದ ಸ್ಥಿತಿಯಲ್ಲಿ ಕೃಷ್ಣರನ್ನು ರೇಸ್‌ನಲ್ಲಿ ಹಿಂದಿಕ್ಕಿವೆ. ಸುಮ್ಮನಾಗುವ ಸ್ಥಿತಿಯನ್ನು ತಂದಿಟ್ಟಿವೆ.
ಅಷ್ಟೇ ಅಲ್ಲ, ಕೃಷ್ಣರಿಗೆ ಈಗ 82 ವರ್ಷ. ಆರೋಗ್ಯ ಕೈ ಕೊಟ್ಟಿದೆ. ಮಡದಿ ಮಕ್ಕಳಿಗೂ ರಾಜಕೀಯ ಸಾಕೆನಿಸಿ, ವಿಶ್ರಾಂತಿ ಬೇಕೆನಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹೋರಾಟ ಮಾಡಬೇಕು, ಸೆಣಸಾಡಬೇಕು, ಅಧಿಕಾರ ಹೊಂದಲೇಬೇಕು ಎಂಬ ಹಟ ಇಲ್ಲವಾಗಿದೆ. 1999ರಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಮೊದಲ ಬಾರಿಗೆ ಕೂತಾಗ ಅವರು ಹೊಂದಿದ್ದ ‘ಕ್ಲೀನ್ ಇಮೇಜ್’ ಈಗಿಲ್ಲವಾಗಿದೆ.
ಆದರೆ, ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಹತ್ತು ಹಲವು ಕಾರ್ಯಕ್ರಮಗಳು, ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ.
ಇವೆಲ್ಲವುಗಳ ಜೊತೆಗೆ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಜಾತಿ ಬಲಾಬಲವನ್ನು ಅವಲೋಕಿಸಿದರೆ, ಕೃಷ್ಣ ಅವರು ಪ್ರಶ್ನಾತೀತ ಒಕ್ಕಲಿಗ ನಾಯಕರಲ್ಲದೆ ಇದ್ದರೂ ಆ ಕೆಲಸವನ್ನು ತಮ್ಮ ಮಿತಿಯಲ್ಲಿಯೇ ಅವರು ಮಾಡಬಲ್ಲರು. ಆದರೆ ಕೃಷ್ಣ ತಂದುಕೊಡುವ ಒಕ್ಕಲಿಗರ ಮತಗಳಿಗಿಂತ ಇವತ್ತು ಹೆಚ್ಚಿನ ಪ್ರಮಾಣದಲ್ಲಿ ದಲಿತ-ಹಿಂದುಳಿದ ಜಾತಿಗಳ ಮತಗಳು ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದು ಕೂರಿಸಿರುವುದರಿಂದ, ಕೃಷ್ಣ ಮತ್ತವರ ಒಕ್ಕಲಿಗ ಜಾತಿ ಕೂಡ ಸದ್ಯಕ್ಕೆ ಕಾಂಗ್ರೆಸ್‌ಗೆ ಬೇಡವಾಗಿದೆ.
ಈ ಎಲ್ಲ ಕಾರಣಗಳಿಂದಾಗಿಯೇ ಒಂದು ಕೋನದಲ್ಲಿ ರಾಜ್ಯ ಕಾಂಗ್ರೆಸ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರದಂತೆ ಕಾಣುವ ಎಸ್.ಎಂ. ಕೃಷ್ಣ ಇನ್ನೊಂದು ಕೋನದಲ್ಲಿ ಸಮಸ್ಯೆಯಂತೆ ಕಾಣುತ್ತಿದ್ದಾರೆ. ಅನುಕೂಲಗಳಿಗಿಂತ ಅನನುಕೂಲಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಹೀಗಾಗಿ ದಿಲ್ಲಿಯ ಕಾಂಗ್ರೆಸ್ ಹೈಕಮಾಂಡ್ ಕೃಷ್ಣರನ್ನು ನಿವೃತ್ತಿ ಬದುಕಿಗೆ ತಳ್ಳಿದೆ. ಟೆನ್ನಿಸ್ ಖ್ಯಾತಿಯ ಕೃಷ್ಣರ ರಾಜಕೀಯ ಆಟ ಮುಗಿದಂತಾಗಿದೆ.
          

Monday, June 9, 2014

ಬಾಳೆ ಎಲೆ ಮತ್ತು ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ
ಬೂಕನಕೆರೆಯ ಸಾಮಾನ್ಯ ವ್ಯಕ್ತಿಯೊಬ್ಬ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟು, ಸಂಘಟನೆ, ಹೋರಾಟ, ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡು, ಅಲ್ಲಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿ ಹಂತ ಹಂತವಾಗಿ ಬೆಳೆಯುತ್ತ ಬಂದು ಈ ರಾಜ್ಯದ ಅತ್ಯುನ್ನತ ಪದವಿಯಾದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು.
ಇವರೇ ಬಿ.ಎಸ್. ಯಡಿಯೂರಪ್ಪ. ಇವರ ಈ ಬೆಳವಣಿಗೆ ಪ್ರಜಾಪ್ರಭುತ್ವದ ಆಶಯಕ್ಕೊಂದು ಉತ್ತಮ ಉದಾಹರಣೆ. 
ಇಂತಹ ಯಡಿಯೂರಪ್ಪನವರು ಬೆಳೆದು ಬಂದ ಬಗೆಯನ್ನು, ಸವೆಸಿದ ಹಾದಿಯನ್ನು, ಸಹಿಸಿದ ಸಂಕಟಗಳನ್ನು, ಅನುಭವಿಸಿದ ಅಧಿಕಾರವನ್ನು, ಆ ಅಧಿಕಾರ ತಂದಿಡುವ ಅನಾಹುತವನ್ನು, ಅವಮಾನವನ್ನು... ಈಗ ಮೆಲುಕು ಹಾಕುವ ಕಾಲ ಬಂದಿದೆ.
ಜನರ ನಡುವೆಯಿಂದ ಎದ್ದುಬಂದ ಯಡಿಯೂರಪ್ಪನವರು ಜನರನ್ನು ಬಳಸಿಕೊಂಡು ಮುಖ್ಯಮಂತ್ರಿಯಾದರು, ಯಡಿಯೂರಪ್ಪನವರನ್ನು ಬಳಸಿಕೊಂಡ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಮೂಲಕ ದಕ್ಷಿಣ ಭಾರತದಲ್ಲಿ ಖಾತೆ ತೆರೆಯಿತು. ಯಡಿಯೂರಪ್ಪನವರು ಬಳಸಿಕೊಂಡ ಕರ್ನಾಟಕದ ಜನ ಮರೆತರು. ಆದರೆ ಯಡಿಯೂರಪ್ಪನವರನ್ನು ಬಳಸಿಕೊಂಡ ಬಿಜೆಪಿ, ಅವರನ್ನೇ ಮರೆಯಿತು. ಯಡಿಯೂರಪ್ಪನವರು ಬಿಜೆಪಿ ಪಾಲಿಗೆ ಬಾಳೆ ಎಲೆಯಂತಾದರು, ಬಳಸಿ ಬಿಸಾಡಲ್ಪಟ್ಟರು.
ಯಡಿಯೂರಪ್ಪನವರ ಇವತ್ತಿನ ಈ ಸ್ಥಿತಿಗೆ ಬೇರೆಯವರ ಕೊಡುಗೆಗಿಂತ ಸ್ವಯಂಕೃತಪರಾಧವೇ ಹೆಚ್ಚಿದೆ. ತಳಮಟ್ಟದಿಂದ ಉನ್ನತ ಪದವಿಗೇರಿದ ರಾಜಕೀಯ ನಾಯಕನಿಗೆ ಇಂತಹ ಏಳು-ಬೀಳುಗಳು ಬದುಕಿನ ಅವಿಭಾಜ್ಯ ಅಂಗವಾದರೂ, ಯಡಿಯೂರಪ್ಪನವರು ಸವೆದದ್ದು ಮತ್ತು ಸವೆಸಿದ್ದು ನಿಜಕ್ಕೂ ಕುತೂಹಲಕರವಾದದ್ದು. ಅಧ್ಯಯನಕ್ಕೆ ಯೋಗ್ಯವಾದದ್ದು. 
1983 ರಲ್ಲಿ ಭಾರತೀಯ ಜನತಾ ಪಕ್ಷದಿಂದ ಮೊಟ್ಟ ಮೊದಲ ಬಾರಿಗೆ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆಯಾದ ಯಡಿಯೂರಪ್ಪನವರು, 1983 ರಿಂದ 2006 ರವರೆಗೆ, 24 ವರ್ಷಗಳವರೆಗೆ ಅಧಿಕಾರದ ಸ್ಥಾನದಿಂದ ದೂರವೇ ಉಳಿದಿದ್ದರು. ವಿರೋಧಪಕ್ಷದ ನಾಯಕನ ಸ್ಥಾನವೇ ಆವರೆಗಿನ ಅವರ ಅತಿ ದೊಡ್ಡ ಸ್ಥಾನವಾಗಿತ್ತು. ಹೋರಾಟವೇ ಬದುಕಾಗಿತ್ತು. ಅಧಿಕಾರ ಅನ್ನುವುದು ದೂರವೇ ಉಳಿದಿತ್ತು.
ಆದರೆ 2006 ರಲ್ಲಿ  ಎಚ್.ಡಿ. ಕುಮಾರಸ್ವಾಮಿಯವರ ಕ್ಷಿಪ್ರ ಕಾರ್ಯಾಚರಣೆಗೆ ಕೈ ಜೋಡಿಸಿದ ಯಡಿಯೂರಪ್ಪನವರು ದಿನ ಬೆಳಗಾಗುವುದರೊಳಗೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸಿದರು. ಉಪಮುಖ್ಯಮಂತ್ರಿಯಾದರು. ಆ ಮೂಲಕ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದರು. ತಮಗಿಂತ ಕಿರಿಯರಾದ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ತಮ್ಮ ಸುದೀರ್ಘ ಸಂಘರ್ಷಮಯ ಬದುಕನ್ನು  ಬಳಸಿಕೊಳ್ಳಲು ಕುಮಾರಸ್ವಾಮಿಗೆ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲ, ಒಪ್ಪಂದದಂತೆ 20 ತಿಂಗಳ ನಂತರ ಅಧಿಕಾರ ಹಸ್ತಾಂತರವಾಗದಿದ್ದಾಗ, ಇದೇ ಯಡಿಯೂರಪ್ಪನವರು ಬಳಸಿ ಬಿಸಾಡಿದ ಬಾಳೆ ಎಲೆಯಂತಾಗಿದ್ದರು. 
ಇದಾದ ನಂತರ, ಜೆಡಿಎಸ್‌ನ ವಚನಭ್ರಷ್ಟತೆಯನ್ನೇ ಮುಂದುಮಾಡಿಕೊಂಡು ಚುನಾವಣೆ ಎದುರಿಸಿದ ಯಡಿಯೂರಪ್ಪನವರು ಮತ್ತವರ ಬಿಜೆಪಿಗೆ ಕರ್ನಾಟಕದ ಜನ ಆಶೀರ್ವದಿಸಿದ್ದರು. ಯಡಿಯೂರಪ್ಪ ಲಿಂಗಾಯತ ನಾಯಕನಾಗಿ ಹೊರಹೊಮ್ಮಿದ್ದರು. 2008ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೂ ಏರಿದರು. ಸರಕಾರ ರಚಿಸುವ ಸಂದರ್ಭದಲ್ಲಿ ಶಾಸಕರ ಸಂಖ್ಯೆ ಕಡಿಮೆ ಬಿದ್ದಾಗ ಬಳ್ಳಾರಿಯ ಗಣಿಧಣಿಗಳಾದ ರೆಡ್ಡಿ ಸಹೋದರರ ಸಹಾಯಕ್ಕೆ ಕೈಚಾಚಿದರು. ಅವರ ಋಣ ಯಡಿಯೂರಪ್ಪನವರ ತಲೆ ಮೇಲಿತ್ತು. ತಮ್ಮನ್ನು, ತಮ್ಮ ಸರಕಾರವನ್ನು ರೆಡ್ಡಿಗಳ ಬಳಕೆಗೆ ಬಿಟ್ಟರು. ಅವರು ಆಡಿಸಿದಂತೆ ಆಡಿದರು. ಅಪಖ್ಯಾತಿಗೊಳಗಾದರು. ಕೊನೆಗೆ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದರು. ಸಿಬಿಐ ಕೇಸು ಹೆಗಲೇರಿತು, ಜೈಲು ಪಾಲಾದರು. ಇವರಿಂದ ಅಧಿಕಾರವನ್ನು ಕಂಡ ಬಿಜೆಪಿ, ಇವರನ್ನೇ ಬಳಸಿಕೊಂಡು ಬಿಸಾಡಿತು.
ತಳಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದ್ದ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ಪಕ್ಷದ ವರಿಷ್ಠರು ಪಕ್ಷದ ಅಧ್ಯಕ್ಷಗಾದಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕುರ್ಚಿಯಿಂದ ಕೆಳಗಿಳಿದ ನಂತರ ಯಾವ ಸ್ಥಾನವನ್ನೂ ನೀಡದೆ ಅವಮಾನಿಸಿದರು. ಪಕ್ಷದಿಂದ ಹೊರನಡೆಯುವಂತೆ ನೋಡಿಕೊಂಡರು.
ಬಿಜೆಪಿಯಿಂದ ಹೊರಬಿದ್ದ ಯಡಿಯೂರಪ್ಪನವರು ತಮ್ಮದೇ ಸ್ವಂತ ಪಕ್ಷ ಕೆಜೆಪಿ ಕಟ್ಟಿ, ಬಿಜೆಪಿ ವಿರುದ್ಧ ಸಮರ ಸಾರಿದರು. ಇಂತಹ ಸಂದರ್ಭಕ್ಕಾಗಿಯೇ ಕಾದಿದ್ದ ಕಾಂಗ್ರೆಸ್, ಸಿಬಿಐ ಕೇಸ್ ಖುಲಾಸೆಯ ಆಸೆ ತೋರಿಸಿ, ಯಡಿಯೂರಪ್ಪನವರನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆಗೇರಿತು. ಯಡಿಯೂರಪ್ಪನವರು ತಾವೂ ಸೋತು ಬಿಜೆಪಿಯನ್ನೂ ಸೋಲಿಸಿದ್ದರು. ತಮಗರಿವಿಲ್ಲದಂತೆಯೇ ಕಾಂಗ್ರೆಸ್‌ಗೆ ಸಹಕರಿಸಿದ್ದರು. ಮತ್ತೊಮ್ಮೆ ಬಾಳೆ ಎಲೆಯಾಗಿದ್ದರು, ಬಳಸಿ ಬಿಸಾಡಲ್ಪಟ್ಟಿದ್ದರು.
ಕಾಂಗ್ರೆಸ್ ಕೊಟ್ಟ ಹೊಡೆತದಿಂದ ಎಚ್ಚೆತ್ತುಕೊಂಡ, ಮಾಡಿದ ತಪ್ಪನ್ನು ತಿದ್ದಿಕೊಂಡ ಯಡಿಯೂರಪ್ಪ ಮತ್ತೆ ಬಿಜೆಪಿ ಬಾಗಿಲು ತಟ್ಟಿದರು. ಅದಕ್ಕೆ ಸರಿಯಾಗಿ ಬಿಜೆಪಿಯಲ್ಲಿ ತಮ್ಮ ಆಪ್ತ ಮೋದಿ ಮುಂಚೂಣಿಗೆ ಬಂದಿದ್ದರು, ರಾಜ್ಯ ಬಿಜೆಪಿಯವರೂ ಸೋತು ಸುಣ್ಣಾಗಿದ್ದರು. ಯಡಿಯೂರಪ್ಪನವರು ಮೋದಿಯವರನ್ನು ಮುಂದಿಟ್ಟುಕೊಂಡು ಮತ್ತೆ ಬಿಜೆಪಿಗೆ ಬಂದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದರು. ಅದರಲ್ಲೂ 7 ಜನ ಲಿಂಗಾಯತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದರು.  
ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಸಂಖ್ಯಾಬಲವನ್ನು ಹೆಚ್ಚಿಸಿದ, ಅವರ ಆಪ್ತ ವಲಯಕ್ಕೆ ಸೇರಿದ ಯಡಿಯೂರಪ್ಪನವರು ಕರ್ನಾಟಕದಿಂದ, ಲಿಂಗಾಯತರ ಕೋಟಾದಡಿ ಮಂತ್ರಿಗಳಾಗುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ಆಗಿದ್ದೇ ಬೇರೆ. ಯಡಿಯೂರಪ್ಪನವರಿಗೂ ಇಲ್ಲ, ಅವರೇಳಿದವರಿಗೂ ಇಲ್ಲ. ಆದರೆ ಪಕ್ಷದೊಳಗಿದ್ದುಕೊಂಡೇ ತಮ್ಮ ವಿರುದ್ಧ ಪಿತೂರಿ ಮಾಡಿದ ಅನಂತಕುಮಾರ್ ಮಂತ್ರಿಯಾಗಿದ್ದರು.
ಯಡಿಯೂರಪ್ಪನವರು ಮಂತ್ರಿಯಾಗಲಿಕ್ಕೆ ಅಡ್ಡಿಯಾದ ಕಾರಣವೇ ಅನಂತಕುಮಾರ್‌ಗೂ ಅಪ್ಲೆಯಾಗುವಂತಿದ್ದರೂ, ಅನಂತ್ ಮಂತ್ರಿಯಾದರು, ಯಡ್ಡಿ ಮನೆಗೆ ಬಂದರು. ಅಂದರೆ ಯಡಿಯೂರಪ್ಪನವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಬಳಸಿಕೊಂಡು ಬೆಳೆದದ್ದಕ್ಕಿಂತ ಹೆಚ್ಚಾಗಿ ಬಾಳೆ ಎಲೆಯಾಗಿ ಬಿಸಾಡಿಸಲ್ಪಟ್ಟಿದ್ದೇ ಹೆಚ್ಚು, ಅಲ್ಲವೇ?