Thursday, August 14, 2014

ಜನಪದ ಕೋಗಿಲೆ ದರೋಜಿ ಈರಮ್ಮ


ಎಲೆ ಅಡಿಕೆ ಜಿಗಿತದಿಂದ ಬಂದ ಗಂಟಲು ಬೇನೆಗೆ ತುತ್ತಾಗಿದ್ದ, ಕಳೆದ ಹತ್ತು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಜನಪದ ಕಥನ ಕಾವ್ಯಗಳ ಅಪ್ರತಿಮ ಗಾಯಕಿ ಬುರ್ರಕಥಾ ದರೋಜಿ ಈರಮ್ಮ (83), ಮಂಗಳವಾರ (12.8.14) ಮಧ್ಯಾಹ್ನ12.30 ರ ಸುಮಾರಿನಲ್ಲಿ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ದರೋಜಿ ಎಂಬ ಪುಟ್ಟ ಗ್ರಾಮದ ಈರಮ್ಮ, ಅಲೆಮಾರಿ ಸಮುದಾಯದಲ್ಲಿ ಹುಟ್ಟಿದ ಅಪರೂಪದ ಅಪ್ರತಿಮ ಕಲಾವಿದೆ. ತಳ ಸಮುದಾಯದಲ್ಲಿ ಹುಟ್ಟಿದ, ಕಡು ಕಷ್ಟದಲ್ಲಿ ಬೆಳೆದ, ಅಕ್ಷರಲೋಕವನ್ನೇ ಪ್ರವೇಶಿಸದ ಈರಮ್ಮ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಳಿಲ್ಲದೆ ಜಾನಪದ ಕಾವ್ಯ ಸಂಪತ್ತನ್ನು ಕರುಳಿಗಿಳಿಸಿಕೊಂಡು ಉಳಿಸಿ ಬೆಳಸಿದ ಮಹಾನ್‌ ಪ್ರತಿಭಾವಂತೆ.
ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ ಬಹಳ ಜನಪ್ರಿಯವಾಗಿದ್ದ ತೆಲುಗು-ಕನ್ನಡ ಕಥನ ಕಾವ್ಯಗಳನ್ನು ಹಾಡುಗಾರಿಕೆಯ ಮೂಲಕ ಜನರ ಎದೆಗೆ ದಾಟಿಸುತ್ತಿದ್ದ, ಆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದ ಈರಮ್ಮ, ಜನಪದ ಕ್ಷೇತ್ರಕ್ಕೆ ಬುರ್ರಕಥಾ ಪ್ರಕಾರವನ್ನು ಕೊಡುಗೆಯಾಗಿ ಕೊಟ್ಟ ವಿಶಿಷ್ಟ ಕಥನಗಾರ್ತಿ.  
ಸಾಮಾನ್ಯವಾಗಿ ಹೈದರಾಬಾದ್‌-ಕರ್ನಾಟಕದ ಜನರಾಡುವ ಭಾಷೆ ಉರ್ದು, ಇಲ್ಲವೇ ಕನ್ನಡ. ಆದರೆ ದರೋಜಿ ಈರಮ್ಮ ತೆಲುಗು ಮತ್ತು ಕನ್ನಡದಲ್ಲಿ, ತೆಲುಗಿನ ಜನಪ್ರಿಯ ಕಥನ ಕಾವ್ಯಗಳಾದ ‘ಬಾಲ ನಾಗಮ್ಮ’, ‘ನ್ಯಾಸಿ ಚಿನ್ನಮ್ಮ’, ‘ಎಲ್ಲಮ್ಮನ ಕತೆ’, ‘ಗಂಗಿ ಗೌರಿ’, ‘ಕುಮಾರ ರಾಮ’, ‘ಕೃಷ್ಣಗೊಲ್ಲ’, ‘ಬಬ್ಬುಲಿ ನಾಗಿರೆಡ್ಡಿ’, ‘ಆದೋನಿ ಲಕ್ಷ್ಮಮ್ಮ', ‘ಬಲಿ ಚಕ್ರವರ್ತಿ’, ‘ಮಾರವಾಡಿ ಸೇಠಿ’, ‘ಜೈಸಿಂಗ್‌ ರಾಜ’ ಮತ್ತು ‘ಮಹಮ್ಮದ್‌ ಖಾನ್‌ ಕಾವ್ಯ’ ... ಹೀಗೆ ಸುಮಾರು ಹನ್ನೊಂದು ಮಹಾಕಾವ್ಯಗಳನ್ನು ಹಾಡುತ್ತಿದ್ದರು. ಪ್ರತಿ ಸಾಲೂ ಈಕೆಗೆ ಬಾಯಿಪಾಠವಾಗಿತ್ತು. ಜನಪದ ಸಂಸ್ಕೃತಿ ಸಾರುವ ಸುಮಾರು ಏಳು ಸಾವಿರ ಪುಟಗಳು, ಎರಡು ಲಕ್ಷ ಸಾಲುಗಳು ದರೋಜಿ ಈರಮ್ಮ ಅವರ ನಾಲಗೆಯ ತುದಿಯಲ್ಲಿ ನಲಿದಾಡುತ್ತಿದ್ದವು.
ಜನಪದ ಕಲೆ, ಸಾಹಿತ್ಯ ಬೆಳವಣಿಗೆಗೆ ಅಕ್ಷರ ಜ್ಞಾನಕಿಂತ ಮೌಖಿಕ ಪರಂಪರೆಯ ಜ್ಞಾನಶಕ್ತಿಯೇ ಮುಖ್ಯ ಎನ್ನುವುದನ್ನು ದರೋಜಿ ಈರಮ್ಮ ಸಾರಿದ್ದರು, ಸಾಬೀತುಪಡಿಸಿದ್ದರು. ನಡೆದಾಡುವ ಜನಪದ ಜಗತ್ತೇ ಅವರಾಗಿದ್ದರು.
ಈರಮ್ಮನವರಿಗೆ ವಯಸ್ಸಾಗಿತ್ತು, ದೇಹ ದಣಿದಿತ್ತು. ಆದರೆ ಹಾಡುವ ಕೋಗಿಲೆಯ ಮನಸ್ಸು ಮಾತ್ರ ಚಿರಯೌವನದಿಂದ ಪುಟಿದೇಳುತ್ತಿತ್ತು. ಸುಮ್ಮನೆ ಕೂರುವ ಜಾಯಮಾನ ಅವರದಲ್ಲವಾಗಿತ್ತು. ತಮ್ಮ ಒಡಲಲ್ಲಿ ಅಡಗಿರುವ ಅಗಾಧ ಜನಪದ ಸಂಪತ್ತನ್ನು ಮುಂದಿನ ಪೀಳಿಗೆಗೂ ಹಂಚುವ ಅವಸರ ಅವರಲ್ಲಿತ್ತು. ಆ ಕಾರಣದಿಂದಾಗಿಯೇ ತಮ್ಮ ಹಳ್ಳಿಯ ಮನೆಯಲ್ಲಿ ಹಳ್ಳಿಯ ಮಕ್ಕಳಿಗಾಗಿಯೇ ಜನಪದ ಹಾಡು, ಕಲೆಯ ಕುರಿತು ಪ್ರಾಯೋಗಿಕ ಪಾಠಶಾಲೆ ಆರಂಭಿಸಿದ್ದರು. ತಮಗೆ ಒಲಿದಿದ್ದ ಹಾಡುಗಾರಿಕೆಯನ್ನು ಹಂಚುತ್ತಿದ್ದರು. ಅದನ್ನು ಮುಗ್ಧ ಮಕ್ಕಳಲ್ಲಿ ಕಾಣುವ ಮೂಲಕ ಆನಂದ ಅನುಭವಿಸುತ್ತಿದ್ದರು.
ಯಾರಾದರೂ, ಈ ವಯಸ್ಸಿನಲ್ಲಿ ಇದೆಲ್ಲ ಯಾಕಜ್ಜಿ ಎಂದು ಪ್ರಶ್ನಿಸಿದರೆ, ‘‘ಅಜ್ಜಿ ನೀ ಹಾಡೋದನ್ನ ಇಂದಿನ ಪೀಳಿಗೆಗೆ ಕಲಿಸಬೇಕು ಅಂತ ದೊಡ್ಡ ದೊಡ್ಡ ಸಭೆ, ಸಮಾರಂಭದಲ್ಲಿ ಎಲ್ಲರೂ ಹೇಳ್ತಾರಪ್ಪ. ಅದಕ್ಕ ನಾ ದಿನಾ ಸಂಜಿ ಮುಂದ ಬುರ್ರಕಥಾ ಹಾಡಿ ತೋರ್ಸಿತೀನಿ. ತಂಬೂರಿ, ಡಿಮ್ಕಿ, ಗಗ್ಗರಿ ಬಾರಿಸುವುದನ್ನು ಹಳ್ಳಿ ಮಕಕ್ಳಿಗೆ ಕಲಿಸಿಕೊಡ್ತೀನಿ. ಎಂಟು ವರ್ಷಗಳಿಂದ ಪುಕ್ಕಟೆಯಾಗಿ ಪಾಠ ಹೇಳುತ್ತ, ಅದರಲ್ಲೇ ಖುಷಿ ಕಾಣಾಕ ಹತ್ತೀನಿ. ನನ್ನಂಗ ಚಲೋ ಹಾಡೋರನ್ನ ಕಣ್ಣಾರೆ ನೋಡಬೇಕು ಅಂಬ ಆಸೆ ನಂದು. ಇಳಿ ವಯಸ್ಸಿನಾಗೂ ಹಾಡಾಕ ನನಗ ಯಾವ ತೊಂದ್ರಿ ಇಲ್ಲ’’ ಎಂದು ಬೊಚ್ಚು ಬಾಯಿ ತುಂಬ ನಗುತ್ತಿದ್ದರು.
ಇಂತಹ ದರೋಜಿ ಈರಮ್ಮನವರ ಹಳ್ಳಿಯ ಸಂಗೀತ ಪಾಠಶಾಲೆಯಲ್ಲಿ ಸದ್ಯ ಹದಿನೈದು ಮಕ್ಕಳು ಈರಮ್ಮನವರ ಜನಪದ ಹಾಡಿನ ಮೋಡಿಗೆ ಒಳಗಾಗಿ, ಜನಪದ ಜಗತ್ತನ್ನು ತಮ್ಮ ಅಂತರಂಗಕ್ಕೆ ಇಳಿಸಿಕೊಳ್ಳುತ್ತಿದ್ದಾರೆ.
ಜನಪದ ಕಲಾವಿದೆ ದರೋಜಿ ಈರಮ್ಮ ಹಾಡಿದ ಕಾವ್ಯಗಳಲ್ಲಿ ಅರ್ಧದಷ್ಟು ಭಾಗವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಸಂಗ್ರಹಿಸಿ, ಪುಸ್ತಕರೂಪದಲ್ಲಿ ಪ್ರಕಟಿಸಿದೆ. ಉಳಿದ ಅರ್ಧಭಾಗವನ್ನು ಸಂಗ್ರಹಿಸಲಾಗುತ್ತಿದೆ.
ಅಜ್ಜಿಯ ಅರವತ್ತು ವರ್ಷಗಳ ಅವಿಶ್ರಾಂತ ಹಾಡುಗಾರಿಕೆಗೆ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ದಕ್ಕಿವೆ. ಅಜ್ಜಿಯ ಅಗಾಧ ಪ್ರೌಢಿಮೆ ಕಂಡು 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, 2003ರಲ್ಲಿ ಅಂಬೇಡ್ಕರ್ ಪ್ರಶಸ್ತಿ ಹಾಗೂ ಜನಪದಶ್ರೀ ಪ್ರಶಸ್ತಿ ಲಭಿಸಿವೆ. ಹಂಪಿ ಕನ್ನಡ ವಿವಿ ದರೋಜಿ ಈರಮ್ಮ ಅವರ ಜನಪದ ಕಲೆಗೆ 1999ರಲ್ಲಿ ‘ನಾಡೋಜ’ ಕಿರೀಟ ತೊಡಿಸಿದೆ. ರಾಜ್ಯ ಸೇರಿ ನೆರೆಯ ಆಂಧ್ರಪ್ರದೇಶದ ನಾನಾ ಸಂಘ ಸಂಸ್ಥೆಗಳು ಅವರನ್ನು ಹುಡುಕಿಕೊಂಡು ಬಂದು ಗೌರವಿಸಿವೆ.
ಆದರೆ ಅಜ್ಜಿಗೆ ಮುಂದಿನ ಪೀಳಿಗೆಗೂ ಜನಪದ ಕಲೆ ಜೀವಂತವಾಗಿರಬೇಕು ಎಂಬ ಉತ್ಕಟ ಇಚ್ಛೆಯೇ ಹೊರತು, ಆ ಯಾವ ಪ್ರಶಸ್ತಿ, ಪುರಸ್ಕಾರಗಳ ಹಂಗಿಲ್ಲ. ಹಳ್ಳಿಯ ಮಕ್ಕಳಿಗಾಗಿ ಸಂಗೀತ ಪಾಠಶಾಲೆ ಆರಂಭಿಸಿರುವ ಈರಮ್ಮ, ಕೇಂದ್ರ ಸರಕಾರ ಕೊಡುವ ಕಲಾವಿದರ ಮಾಸಾಶನವನ್ನೆಲ್ಲ ಅದಕ್ಕೇ ವಿನಿಯೋಗಿಸುವ ಉದಾರಿ. ಇಂತಹ ಮಹಾನ್‌ ಕಲಾವಿದೆಯನ್ನು ಕಳೆದುಕೊಂಡು ಜನಪದ ಜಗತ್ತು, ನಾಡು ನಿಜಕ್ಕೂ ಬಡಪಾಯಿ.