Monday, March 24, 2014

ನೀಟ್ ಅಂಡ್ ಥಾಟ್- ಯಶವಂತ ಚಿತ್ತಾಲ

ಆಗಸ್ಟ್ ಮೂರು ಸಾವಿರದ ಒಂಬೈನೂರ ಇಪ್ಪತ್ತೆಂಟರಂದು ಹುಟ್ಟಿದ ಯಶವಂತ ಚಿತ್ತಾಲರೀಗ ಹಣ್ಣಾಗಿದ್ದಾರೆ, ಮಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತಾಲೂಕಿನ ಹನೇಹಳ್ಳಿಯ ಬಾಲ್ಯವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಲೇ ಇದ್ದಾರೆ. ಆಶ್ಚರ್ಯವೆಂದರೆ, ಚಿತ್ತಾಲರ ಮನೆ ಮಾತು ಕೊಂಕಣಿ. ಕುಮಟಾ, ಕಾರವಾರ, ಧಾರವಾಡ, ಮುಂಬೈ, ನ್ಯೂಜರ್ಸಿಗಳಲ್ಲಿ ಓದಿದ್ದು ಇಂಗ್ಲಿಷಿನಲ್ಲಿ. ಆದರೆ ಊರಿನ ನೆನಪು, ಬೀದಿಯಲ್ಲಿ ಆಡಿ ಬೆಳೆವಾಗ ಕಲಿತ ಕನ್ನಡ ಭಾಷೆ ಮೈ ಮನವನ್ನೆಲ್ಲ ಆವರಿಸಿದೆ. ಕತೆ, ಕಾದಂಬರಿಗಳಲ್ಲೆಲ್ಲ ತುಂಬಿಕೊಂಡಿದೆ. ಚಿಕ್ಕಂದಿನಲ್ಲಿ ಕಂಡುಂಡ ಸಾವು, ನೋವು, ನಲಿವು, ನಿರಾಸೆಗಳು ಈಗಲೂ ಬರವಣಿಗೆಯಲ್ಲಿ ಬೆಳಕು ಕಾಣುತ್ತಲೇ ಇವೆ.
ಚಿತ್ತಾಲರು ಚಿಕ್ಕವರಿದ್ದಾಗ ಚಿತ್ರಕಲೆಯ ಬಗ್ಗೆ ಬೆರಗುಗೊಂಡು, ಅದನ್ನೇ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಮುಂಬೈಗೆ ಹೋದವರು. ಆದರೆ ಅಲ್ಲಿ ಎಂ.ಎನ್.ರಾಯ್ರವರ ಪ್ರಭಾವಕ್ಕೊಳಗಾಗಿ ಸಾಹಿತ್ಯದ ಸೆಳೆತಕ್ಕೆ ಸಿಕ್ಕಿ ಬದುಕಿನ ದಿಕ್ಕನ್ನೇ ಬದಲಿಸಿಕೊಂಡರು. ವಿಜ್ಞಾನದ ವಿದ್ಯಾರ್ಥಿಯಾಗಿ, ತಂತ್ರಜ್ಞಾನದ ಪರಿಣಿತನಾಗಿ, ಪದವಿಯಲ್ಲಿ ಸುವರ್ಣ ಪದಕ ಪಡೆದು ಪ್ರತಿಷ್ಠಿತ ಕಂಪನಿಯಲ್ಲಿ ಅತ್ಯುನ್ನತ ಹುದ್ದೆಗೇರಿ ನೆಮ್ಮದಿಯ ಬದುಕನ್ನು ಬದುಕುತ್ತಿದ್ದರೂ, ಮನಸ್ಸು ಮಾತ್ರ ಸಾಹಿತ್ಯದ ಭಾವ ಪ್ರಪಂಚದಲ್ಲಿ ವಿಹರಿಸುತ್ತಿತ್ತು.
ಹನೇಹಳ್ಳಿ ಅವರ ಮಟ್ಟಿಗೆ ಅದೊಂದು ನೆಲದ ಹೆಸರಲ್ಲ, ಅವರ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾಗಿ ಜೀವಸೆಲೆಯಾದದ್ದು. ಹಾಗಾಗಿಯೇ ಅವರ ಕತೆ-ಕಾದಂಬರಿಗಳ ಪಾತ್ರಗಳಲ್ಲಿ ಹನೇನಳ್ಳಿ ಹಾಸುಹೊಕ್ಕಾಗಿದೆ. ಅವರು ಕಂಡ ಅಂದಿನ ಹನೇನಳ್ಳಿಯ ಭೂತವನ್ನು ವರ್ತಮಾನದೊಂದಿಗೆ ಥಳಕು ಹಾಕುತ್ತ, ಅದನ್ನು ಮಾನವನ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ ಪರಿವರ್ತಿಸುವಲ್ಲಿ ಚಿತ್ತಾಲರು ಯಶಸ್ವಿಯೂ ಆಗಿದ್ದಾರೆ.
ಚಿತ್ತಾಲರು ಒಂದು ಕಡೆ, ‘ನಾನು ಸಾಹಿತ್ಯಲೋಕಕ್ಕೆ ಬರಲು ಪ್ರೇರಣೆ ಅಣ್ಣ ಗಂಗಾಧರ ಚಿತ್ತಾಲ, ಶಾಂತಿನಾಥ ದೇಸಾಯಿ ಮತ್ತು ಗೌರೀಶ ಕಾಯ್ಕಿಣಿಯವರೆ. ಅವರ ಪ್ರಭಾವ ನನ್ನ ಮೇಲೆ ಬಹಳವಿದೆಎಂದಿದ್ದಾರೆ. ಹಾಗೆ ನೋಡಿದರೆಬೊಮ್ಮಿಯ ಹುಲ್ಲು ಹೊರೆಚಿತ್ತಾಲರ ಮೊದಲ ಕತೆ. ದಿನಕರ ದೇಸಾಯಿಯವರು ಸಂಪಾದಿಸುತ್ತಿದ್ದಜನಸೇವಕಪತ್ರಿಕೆಯಲ್ಲಿ ಪ್ರಕಟವಾದ ಕತೆ ಅವರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸಿತು. ಅಲ್ಲಿಂದ ಒಂದಾದ ಮೇಲೊಂದರಂತೆ, ಏಳು ಕಥಾ ಸಂಕಲನಗಳನ್ನು, ಐದು ಕಾದಂಬರಿಗಳನ್ನು, ಪ್ರಬಂಧ ಸಾಹಿತ್ಯವನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡುತ್ತಲೇ ಬಂದವರು. ಬರೆದು ಬೇಸರಗೊಂಡಾಗ ಕವಿತೆಯ ಬಂಧವಿರುವ, ಕಾವ್ಯದ ಗಂಧವಿಲ್ಲದಲಬಸಾಗಳನ್ನೂ ಬರೆದು ಮನಸ್ಸಿಗೆ, ಬರವಣಿಗೆಗೆ ಹೊಸ ಚೈತನ್ಯವನ್ನು ತಮಗೆ ತಾವೇ ತಂದುಕೊಂಡವರು.
ಸಣ್ಣಕತೆಗೆ, ಕನ್ನಡ ಗದ್ಯಕ್ಕೆ ಹೊಸ ಆಯಾಮ ತಂದುಕೊಟ್ಟ ಚಿತ್ತಾಲರು ಕನ್ನಡದ ಶ್ರೇಷ್ಠ ಕತೆಗಾರರಲ್ಲೊಬ್ಬರು. ವಿಮರ್ಶಕ ಜಿ.ಎಸ್. ಆಮೂರರ ಪ್ರಕಾರಶಿಕಾರಿಕಾದಂಬರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲೊಂದು. ಕನ್ನಡನಾಡಿನಿಂದ ದೂರವಿದ್ದು, ಸೆಮಿನಾರು-ಪ್ರಶಸ್ತಿ-ಪ್ರಚಾರಗಳಿಂದ ದೂರವೇ ಉಳಿದು, ದೂರದ ಮುಂಬೈನಲ್ಲಿ ಕಡಲಿನಂತೆ ಆಗಾಗ ಬರವಣಿಗೆಯ ಮೂಲಕ ಭೋರ್ಗರೆದವರು. ಕನ್ನಡ ಕಥಾಲೋಕವನ್ನು ವಿಸ್ತರಿಸಿದವರು. ಕನ್ನಡ ಓದುಗ ವಲಯಕ್ಕೆ ನಿರಂತರವಾಗಿ ಬರವಣಿಗೆಯ ಭೋಜನವನ್ನು ಬಡಿಸುತ್ತಲೇ ಬಂದವರು. ತಾವಾಯಿತು ತಮ್ಮ ಶಿಸ್ತುಬದ್ಧ ಬದುಕು ಮತ್ತು ಸಾಹಿತ್ಯ ಕೃಷಿಯಾಯಿತು ಎಂದು ತಣ್ಣಗಿರುವವರು. ಬೆಂಗಳೂರಿನ ಸಾಹಿತಿಗಳ ಗುಂಪುಗಳಿಂದ ಬಹಳ ದೂರವೇ ಉಳಿದವರು.
ಚಿತ್ತಾಲರ ಕಥೆ ಕಟ್ಟುವ ಕಲೆಯೇ ಅದ್ಭುತವಾದುದು. ಮನುಷ್ಯ ಸೂಕ್ಷ್ಮಗಳನ್ನು ಅರಿಯುವ, ಮನದೊಳಗಿನ ತುಮುಲಗಳನ್ನು ಅಕ್ಷರಕ್ಕಿಳಿಸುವ, ಧ್ಯಾನಿಸುವ ಚಿತ್ತಾಲರ ಕಥನ ತಂತ್ರದ ಅದ್ಭುತವಿರುವುದೇ ಅವರ ವಸ್ತುವಿನ ಆಯ್ಕೆಯಲ್ಲಿ. ದೂರದ ಊರುಗಳಿಗೆ ಪ್ರಯಾಣಿಸುವಾಗ, ಕಾರ್ಪೊರೇಟ್ ಜಗತ್ತಿನ ಸಂದರ್ಭವನ್ನು ಗ್ರಹಿಸಿ ಬರೆದಶಿಕಾರಿ ವಸ್ತು ಇದಕ್ಕೊಂದು ಉತ್ತಮ ಉದಾಹರಣೆ. ಕಥನ ಕಲೆಯ ಬಗ್ಗೆ ಒಲವಿರುವ, ತಿಳಿಯಬೇಕೆಂಬ ತವಕವಿರುವ ಹೊಸ ತಲೆಮಾರಿನ ಬರಹಗಾರರು ಬಿಡದೆ ಓದಬೇಕಾದ ಲೇಖಕ ಚಿತ್ತಾಲರು.
೫೦ ರ್ಷಗಳ ಕಾಲ ಬರವಣಿಗೆಯ ಕೃಷಿ ಮಾಡಿರುವ ಚಿತ್ತಾಲರಿಗೆ ಸಲ್ಲಬೇಕಾದ ಪ್ರತಿಷ್ಠಿತ ಪ್ರಶಸ್ತಿಗಳೆಲ್ಲ ಸಂದಿವೆ. ಅವರಶಿಕಾರಿಕಾದಂಬರಿ ಮರಾಠಿಗೆ ಅನುವಾದಗೊಂಡಿದೆ. ಅವರ ಆಯ್ದ ಕತೆಗಳನ್ನು ಪದ್ಮಾ ಶರ್ಮ ಮತ್ತು ರಾಮಚಂದ್ರ ಶರ್ಮರು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಅವರ ಜನಪ್ರಿಯ ಕಥಾ ಸಂಕಲನಕತೆಯಾದಳು ಹುಡುಗಿಕೊಂಕಣಿ, ತೆಲುಗು, ತಮಿಳಿಗೆ ಅನುವಾದಗೊಂಡಿದೆ.
ನಾವು ಮನುಷ್ಯರಾಗಿ ಹುಟ್ಟಿದವರಲ್ಲ, ಮನುಷ್ಯರಾಗಲು ಹುಟ್ಟಿದವರು ಎನ್ನುವ ಪ್ರಜ್ಞೆ ಇದ್ದವರಿಗೆ ಸಾಹಿತ್ಯ ಬಹಳಷ್ಟನ್ನು ಕೊಡಬಲ್ಲದುಎನ್ನುವ ಯಶವಂತ ಚಿತ್ತಾಲರು ಕನ್ನಡಕ್ಕೆ ಸಾಕಷ್ಟು ಕೊಟ್ಟಿದ್ದಾರೆ, ಕನ್ನಡದಿಂದ ಮನುಷ್ಯರಾಗಿದ್ದಾರೆ. ತುಂಬು ಜೀವನವನ್ನು ತುಂಬಿದ ಕೊಡದಂತೆ ಅನುಭವಿಸಿದ್ದಾರೆ. ಇಂತಹ ಅಪರೂಪದ ಅಪ್ಪಟ ಪ್ರತಿಭಾವಂತ ಚಿತ್ತಾಲರು ಇರಲಿ ಇನ್ನಷ್ಟು ದಿನ ನಮ್ಮ ನಡುವೆ...
***
ಮೇಲಿನ ಬರೆಹವನ್ನು ನಾನುವಿಕ್ರಾಂತ ಕರ್ನಾಟಕವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದಾಗ ಬರೆದದ್ದು. ೨೦೦೯ ರಲ್ಲಿ. ‘ಪರಿಚಯಎಂಬ ಕಾಲಂನಡಿ ವಾರಕ್ಕೊಬ್ಬ ಸಾಹಿತಿಯ ಬಗ್ಗೆ ಪುಟ್ಟ ಪರಿಚಯ ಮತ್ತು ಒಂದು ಪೇಜಿನ ದೊಡ್ಡ ಫೋಟೋ ಪ್ರಕಟಿಸುತ್ತಿದ್ದೆವು. ಅದು ಪ್ರಕಟವಾದ ಮೇಲೆ, ವಿಕ್ರಾಂತ ಕರ್ನಾಟಕದ ಸಂಚಿಕೆಯನ್ನು ಅವರಿಗೆ ಕಳುಹಿಸಿಕೊಡಬೇಕೆನ್ನಿಸಿತು. ಚಿತ್ತಾಲರನ್ನು ಬಹಳ ಹತ್ತಿರದಿಂದ ಬಲ್ಲವರು ಮತ್ತು ಬೆಂಗಳೂರಿಗೆ ಬಂದ ನಂತರವೂ ಅವರ ಸಂಪರ್ಕವನ್ನಿಟ್ಟುಕೊಂಡವರು ನಮ್ಮುಮಾ ರಾವ್ ಮತ್ತು ಜಯಂತ್ ಕಾಯ್ಕಿಣಿಯವರು. ಉಮಾ ರಾವ್ಗೆ ಫೋನ್ ಮಾಡಿ ವಿಳಾಸ ಪಡೆದು ಎರಡು ಸಂಚಿಕೆಗಳನ್ನು ಪೋಸ್ಟ್ ಮಾಡಿದೆ. ಮರೆತೆ. 
ಒಂದು ದಿನ ಪತ್ರಿಕೆಯ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಮೊಬೈಲ್ ರಿಂಗಾಯಿತು. ‘ಬಸುರಾಜು ಅವರಹೌದು ಅಂದೆ
ನಾನು ಯಾರು ಅಂತ ಗೊತ್ತಾಯಿತಾ?’ ಎಂದರು. ನೆನಪಿನಾಳಕ್ಕೆ ಇಳಿಯುವುದಕ್ಕೆ ಸಮಯವಿರಲಿಲ್ಲ. ನಂಬರ್ ಕೂಡ ಗಮನಿಸಿರಲಿಲ್ಲ. ಹಾಗಾಗಿ ಇಲ್ಲ, ಕ್ಷಮಿಸಿ ಎಂದೆ
`ನಾನಪ್ಪ ಚಿತ್ತಾಲ, ಮುಂಬೈನಿಂದಎಂದರು. ನನಗೆ ಮಾತೇ ನಿಂತುಹೋಯಿತು. ನನ್ನ ಕಿವಿಯನ್ನು ನಾನೇ ನಂಬದಾದೆ
ಅವರೇ ಮುಂದುವರೆಸಿ, ‘ನೀನು ಕಳುಹಿಸಿಕೊಟ್ಟ ವಿಕ್ರಾಂತ ಕರ್ನಾಟಕ ಬಂತು. ಪತ್ರಿಕೆ ಚೆನ್ನಾಗಿದೆಯಪ್ಪ. ನನ್ನ ಬಗ್ಗೆ ಚೆನ್ನಾಗಿ ಬರೆದಿದ್ದೀರಾ ಥ್ಯಾಂಕ್ಸ್ಎಂದರು. ಅವರು ಅಷ್ಟೆಲ್ಲ ಮಾತನಾಡಿದರೂ ನಾನು ಸುಮ್ಮನೇ ಇದ್ದೆ.  
ಅವರೆ, ‘ನನಗೆ ನಿಮ್ಮ ಬರವಣಿಗೆ ಇಷ್ಟವಾಯ್ತು. ಆದರೆ ಇಷ್ಟು ದಿನ ಯಾಕೆ ತಡವಾಯಿತು?’ ಎಂದರು. ಅದಕ್ಕೂ ನಾನು ಮಾತಾಡಲಿಲ್ಲ. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದರಲ್ಲಷ್ಟೇ ಒಂಥರದ ಹೇಳಿಕೊಳ್ಳಲಾಗದ ಖುಷಿ ಇತ್ತು
ಸರಿ, ಸಿಗೋಣಎಂದು ಫೋನ್ ಇಟ್ಟರು.
ಯಾವತ್ತೂ, ಯಾವುದನ್ನೂ ಟಿಪ್ಪಣಿ ಮಾಡಿಡದ ನಾನು ಅವತ್ತು ಹೋಗಿ ಡೈರಿಯಲ್ಲಿ ದಿನಾಂಕ (೩೧..೨೦೦೯) ಮತ್ತು ಸಂಭಾಷಣೆಯನ್ನು ರಫ್ ಆಗಿ ಬರೆದಿಟ್ಟೆ.
ಅವರಿಲ್ಲದ ಹೊತ್ತಿನಲ್ಲಿ ಅದನ್ನು ನೋಡುತ್ತ, ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ...

Wednesday, March 19, 2014

ಈಗಲೂ ಇದ್ದಾರೆ... ಗೋಪಾಲಗೌಡರು

ಶಾಂತವೇರಿ ಗೋಪಾಲಗೌಡ
ಸೈದ್ಧಾಂತಿಕ ರಾಜಕಾರಣವನ್ನು, ಸಮಾಜವಾದಿ ಹೋರಾಟವನ್ನು ಕರ್ನಾಟಕಕ್ಕೆ ಪರಿಚಯಿಸಿದ ಶಾಂತವೇರಿ ಗೋಪಾಲಗೌಡರು ನಾಡು ಕಂಡ ಮಹಾನ್ ವ್ಯಕ್ತಿ.  ಜನಪರ ಹೋರಾಟಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾನುಭಾವ. ಇಂತಹ ಗೋಪಾಲಗೌಡರು ಚುನಾವಣಾ ಸಮಯದಲ್ಲಿ ನೆನಪಾಗುವುದು ಸಹಜ, ನೆನಪು ಮಾಡಿಕೊಳ್ಳಬೇಕಾದ್ದು ಸೂಕ್ತವೂ ಕೂಡ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆರಗದ ರೈತ ಕುಟುಂಬದಲ್ಲಿ, ಮಾರ್ಚ್ 14, 1923 ರಂದು ಜನಿಸಿದ ಗೋಪಾಲಗೌಡರದು ಬಡ ಕುಟುಂಬ. ಕಡು ಕಷ್ಟದ ಬದುಕು. ಆದರೆ ಅವರೊಳಗಿದ್ದ ಅರಿವಿನ ಹಸಿವು ಅವರನ್ನು ವಿದ್ಯಾವಂತರನ್ನಾಗಿ, ಹೋರಾಟಗಾರರನ್ನಾಗಿ, ಜನಪರ ವ್ಯಕ್ತಿಯನ್ನಾಗಿ, ರಾಜಕಾರಣಿಯನ್ನಾಗಿ, ಮನನೀಯ ವ್ಯಕ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಮಾಡಿತು.
ಗಂಭೀರ ಮುಖಭಾವದ ಗೋಪಾಲಗೌಡರು ಬಿಳಿ ಖಾದಿ ಜುಬ್ಬ, ಕಚ್ಚೆಪಂಚೆ ಧರಿಸುತ್ತಿದ್ದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ. ಆದರೆ ಸಮಾಜ, ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಆಡಳಿತ, ಆರ್ಥಿಕತೆಯಂತಹ ಹಲವು ವಿಷಯಗಳನ್ನು ಆಳವಾಗಿ ಓದಿಕೊಂಡಿದ್ದರು. ಅವುಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಖಚಿತ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು. ಸತ್ಯ ಹೇಳುವುದರಲ್ಲಿ ಸಂಕೋಚವಿರದ ಗೌಡರ ಮಾತಿಗೆ ಮಾಂತ್ರಿಕ ಶಕ್ತಿಯಿತ್ತು. ಆಳುವ ಸರಕಾರವನ್ನು ಅಲ್ಲಾಡಿಸುವಂತಹ, ವೈರಿಯೂ ಒಪ್ಪುವಂತಹ ವಿಚಾರಧಾರೆ ಗೌಡರದಾಗಿತ್ತು.
ಸ್ವಾತಂತ್ರ್ಯ ಹೋರಾಟದ ಕಿಚ್ಚು ಮತ್ತು ಕೆಚ್ಚನ್ನು ತುಂಬಿಕೊಂಡಿದ್ದ ಶಾಂತವೇರಿ ಗೋಪಾಲಗೌಡರು ಸಹಜವಾಗಿಯೇ ಸಮಾಜವಾದದ ಬಗ್ಗೆ ಒಲವುಳ್ಳವರಾಗಿದ್ದರು. ಜೆಪಿ, ಲೋಹಿಯಾರ ಪ್ರಭಾವಕ್ಕೊಳಗಾದ ಗೋಪಾಲಗೌಡರು ಹೊಸ ಹುರುಪನ್ನು, ಪ್ರಖರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಕಾಗೋಡು ಸತ್ಯಾಗ್ರಹ, ರೈತ ಸಂಘಟನೆಗಳಂತಹ ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಗೌಡರನ್ನು ಬೆಂಬಲಿಸಲು, ಅವರ ಜನಪರ ಹೋರಾಟಕ್ಕೆ ಶಕ್ತಿ ತುಂಬಲು ಜೆಪಿ, ಲೋಹಿಯಾರಂತಹ ಸಮಾಜವಾದಿ ಹಿರಿಯ ನಾಯಕರು ಕರ್ನಾಟಕಕ್ಕೂ ಬಂದರು.
ನೋಡು ನೋಡುತ್ತಿದ್ದಂತೆ ನಾಯಕರಾಗಿ ಬೆಳೆದ ಗೋಪಾಲಗೌಡರನ್ನು ರಾಜಕೀಯ ರಂಗ ಕೈಬೀಸಿ ಕರೆಯಿತು. ದೇಶಕ್ಕೆ ಸ್ವಾತಂತ್ರ ಬಂದ ಮೇಲೆ ರಾಜಕೀಯ ಚಟುವಟಿಕೆಗಳು ಚುರುಕಾದಂತೆ, ಸಮಾಜವಾದಿಗಳು ಸಹ ರಾಜಕೀಯ ರಂಗದಲ್ಲಿ ಗುರುತಿಸಿಕೊಳ್ಳತೊಡಗಿದರು.
ಗೋಪಾಲಗೌಡರು ಬದುಕಿದ್ದು ಕೇವಲ ನಲವತ್ತೊಂಬತ್ತು ವರ್ಷಗಳು ಮಾತ್ರ. ಚುನಾವಣೆಗೆ ಸ್ಪರ್ಧಿಸಿದ್ದು ನಾಲ್ಕು ಬಾರಿ. ಅದರಲ್ಲೂ ಮೂರು ಬಾರಿ ಗೆದ್ದು ಒಂದು ಸಲ ಸೋತಿದ್ದರು. ಈ ನಾಲ್ಕೂ ಸಲವೂ ಅವರ ಬಳಿ ಠೇವಣಿ ತುಂಬಲು ಸಹ ಹಣವಿರಲಿಲ್ಲ. ಮತದಾರರೇ ಮುಂದಾಗಿ ದೇಣಿಗೆ ಸಂಗ್ರಹಿಸಿ ಚುನಾವಣಾ ವೆಚ್ಚವನ್ನು ಭರಿಸುತ್ತಿದ್ದರು.
ಗೋಪಾಲಗೌಡರು ಕೇವಲ ಜನಬೆಂಬಲದಿಂದಲೇ ಬಲಾಢ್ಯರ ವಿರುದ್ಧ ಸ್ಪರ್ಧಿಸಿ ಮೂರು ಬಾರಿ ಗೆದ್ದಿದ್ದರು. ಅವರ ಆ ಕಾಲದ ಚುನಾವಣೆ, ಖರ್ಚಾಗುತ್ತಿದ್ದ ಹಣ, ಅವರ ಭಾಷಣ, ಪ್ರಚಾರ ಶೈಲಿ ಇಂದಿಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮನೆಮಾತಾಗಿದೆ. 
ಗೋಪಾಲಗೌಡರೆಂದೂ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಲಿಲ್ಲ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಭಾಷಣ ಮಾಡಲಿಲ್ಲ. ಮೂರು ಬಾರಿ ಗೆದ್ದರೂ ಯಾವುದೇ ಸನ್ಮಾನ ಸ್ವೀಕರಿಸಲಿಲ್ಲ. ಅನ್ಯಾಯವನ್ನು ಸಹಿಸುವ ಜಾಯಮಾನ ಅವರದ್ದಲ್ಲವೇ ಅಲ್ಲ.
ಬದಲಿಗೆ ಸಮಾಜಪ್ರಜ್ಞೆಯ ತರುಣ ಸಮೂಹವನ್ನು ತಮ್ಮ ವಿಚಾರಧಾರೆಯತ್ತ ಸೆಳೆದರು. ಕರ್ನಾಟಕದಲ್ಲಿ ರಾಮಮನೋಹರ ಲೋಹಿಯಾ ಸಮಾಜವಾದಿ ಪಕ್ಷವನ್ನು ಸಂಘಟಿಸಿದರು. ಆ ಮೂಲಕ ಸಮಾಜದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ಮುಂದಾದರು. ಜನತೆಯ ಆಶೋತ್ತರಗಳ ಈಡೇರಿಕೆಗಾಗಿ ಪ್ರತಿಭಟನೆ, ಚಳುವಳಿ, ಸತ್ಯಾಗ್ರಹಗಳನ್ನು ನಡೆಸಿದರು. ಸೆರೆಮನೆ ವಾಸವನ್ನೂ ಅನುಭವಿಸಿದರು.
ಸಾಹಿತಿಗಳ ಒಡನಾಟ, ಆಳವಾದ ಅಧ್ಯಯನದಿಂದ ಉತ್ತಮ ಭಾಷಣಕಾರರಾಗಿದ್ದ ಗೋಪಾಲಗೌಡರಿಗೆ ಹಿಂದಿ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿತ್ತು. ಹಿಂದಿಯಲ್ಲಿ ಸೊಗಸಾಗಿ ಭಾಷಣ ಮಾಡುತ್ತಿದ್ದ ಗೋಪಾಲಗೌಡರು ಉತ್ತರ ಭಾರತದಲ್ಲಿಯೂ ಪ್ರಸಿದ್ಧಿ ಪಡೆದಿದ್ದರು.
1972 ರವರೆಗೆ ವಿಧಾನಸಭಾ ಸದಸ್ಯರಾಗಿದ್ದ ಗೋಪಾಲಗೌಡರು ವಿಧಾನಸಭೆಯಲ್ಲಿ ನಿಷ್ಠುರವಾದಿಗಳ ಅಗ್ರಪಂಕ್ತಿಯಲ್ಲಿದ್ದರು. ತಮ್ಮ ಪ್ರಖರ ಮಾತುಗಳಿಂದ ವಿಧಾನ ಮಂಡಲದ ಕಲಾಪಗಳಲ್ಲಿ ಯಾರೂ ಅಳಿಸದ ಇತಿಹಾಸವನ್ನೇ ನಿರ್ಮಿಸಿದರು. ಆ ನಂತರ ಆರೋಗ್ಯ ಕೈ ಕೊಟ್ಟಿದ್ದರಿಂದ ತಮ್ಮ ಸ್ಪರ್ಧಾಕ್ಷೇತ್ರವನ್ನು ಕೋಣಂದೂರು ಲಿಂಗಪ್ಪನವರಿಗೆ ಬಿಟ್ಟುಕೊಟ್ಟು, ಸಮಾಜ ಚಿಂತನೆಯಲ್ಲಿಯೇ 1972ರಲ್ಲಿ ತೀರಿಕೊಂಡರು.
ಆಶ್ಚರ್ಯವೆಂದರೆ, ಗೋಪಾಲಗೌಡರ ಸಮಾಜವಾದಿ ನೆಲೆಯಾದ ಶಿವಮೊಗ್ಗದಿಂದ ಇಂದು ಆಮ್ ಆದ್ಮಿ ಪಕ್ಷದಿಂದ ಶ್ರೀಧರ್ ಕಲ್ಲಹಳ್ಳಿ ಎಂಬುವವರು ಸ್ಪರ್ಧಿಸುತ್ತಿದ್ದಾರೆ. ಅದೇ ಸರಳತೆ, ಸಜ್ಜನಿಕೆಯ ಶ್ರೀಧರ್‌ಗೆ ರೈತಸಂಘ ಬೆಂಬಲಿಸಿದೆ. ಮತದಾರರು ಮುಂದೆ ಬಂದು ಓಟು-ನೋಟು ನೀಡುತ್ತಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳಿಗೆ ಜೀವ ತುಂಬುತ್ತಿದ್ದಾರೆ.
ಶಾಂತವೇರಿ ಗೋಪಾಲಗೌಡರು ಶಿವಮೊಗ್ಗದಲ್ಲಷ್ಟೇ ಅಲ್ಲ, ಕರ್ನಾಟಕದಲ್ಲಿ ಇನ್ನೂ ಜೀವಂತಜ್ವಾಲೆಯಾಗಿ ಉರಿಯುತ್ತಲೇ ಇದ್ದಾರೆ. ಅದರ ದ್ಯೋತಕವಾಗಿ ಈ ಕೆಟ್ಟ ಭ್ರಷ್ಟ ವ್ಯವಸ್ಥೆಯಲ್ಲಿಯೂ ಒಳ್ಳೆಯವರು, ಯೋಗ್ಯರು, ಮಾನವಂತರು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬರುತ್ತಿದ್ದಾರೆ.  ಗೋಪಾಲಗೌಡರನ್ನೂ ಜೀವಂತವಾಗಿಟ್ಟಿದ್ದಾರೆ

Saturday, March 15, 2014

ಬೀದಿಯಲಿ ಸಿಕ್ಕವನು ಬರಿಯ ಬಾಲಕನೋ, ನಗುವ ಬುದ್ಧನೋ?ಮೊಬೈಲ್ ರಿಂಗಾಯಿತು. ಡಿಸ್ಪ್ಲೇ ಆದ ನಂಬರ್ ಪರಿಚಿತರದ್ದಲ್ಲ. ಯಾವುದೋ ಕಾಯಿನ್ ಬೂತ್ನಿಂದ ಬಂದದ್ದು. ಹಲೋ ಅಂದೆ, ಅತ್ತ ಕಡೆಯಿಂದ ಕ್ರಿಕೆಟ್ ಆಡಲು ಹೋಗಿದ್ದ ಮಗ, ‘ಅಪ್ಪ, ಅಮ್ಮನ ಸ್ಕೂಟಿ ಪಂಕ್ಚರ್ ಆಗಿದೆ, ಗಾಡಿ ವೈಎಂಸಿಎ ಗ್ರೌಂಡ್ ಹತ್ರ ಇದೆ, ಬಂದು ಪಂಕ್ಚರ್ ಹಾಕಿಸಿಕೊಡಬೇಕಂತೆ, ಅಮ್ಮನ ಮೊಬೈಲ್ನಲ್ಲಿ ಕರೆನ್ಸಿ ಇಲ್ಲ, ಅದಕ್ಕೆ ನಾನು ಕಾಯಿನ್ ಬೂತ್ನಿಂದ ಮಾಡ್ತಿದೀನಿಅಂತೇಳಿ ಫೋನಿಟ್ಟ. ತಕ್ಷಣ ವೈಎಂಸಿಎ ಸುತ್ತಮುತ್ತ ಇರಬಹುದಾದ ಪಂಕ್ಚರ್ ಹಾಕುವ ಅಂಗಡಿಗಳ ಬಗ್ಗೆ ಗಮನ ಹರಿಯಿತು. ಅಲ್ಲಿ-ಇಲ್ಲಿ ತಲೆಯಲ್ಲಿ ತೇಲಾಡಿತು. ಕೊನೆಗೆ ಹಡ್ಸನ್ ಸರ್ಕಲ್ ಬಳಿಯ ಒಕ್ಕಲಿಗರ ಸಂಘದ ಕಟ್ಟಡದ ಪಕ್ಕ ರಸ್ತೆ ಬದಿಯಲ್ಲಿದ್ದ ಒಂದು ಪಂಕ್ಚರ್ ಅಂಗಡಿ ಕಣ್ಣಿಗೆ ಬಿತ್ತು. ಅದರ ಮಾಲೀಕ- ಇಪ್ಪತ್ತೈದರ ಹರೆಯದ ಮುಸ್ಲಿಂ ಯುವಕ- ನನ್ನು ಕೇಳಿದಾಗ, ಆತ ಕ್ಷಣದಲ್ಲಿಯೇ ನನ್ನ ಬೈಕ್ ಹತ್ತಿದ, ಟೈರ್ ಬಿಚ್ಚಿಕೊಂಡು ಬಂದು ಚೆಕ್ ಮಾಡಿ, ‘ಟ್ಯೂಬ್ ಹೋಗಿದೆ, ಬೇರೆ ಹಾಕ್ಬೇಕು..’ ಅಂದ. ಸರಿ ಹಾಕಪ್ಪ ಅಂದೆ. ಆತ ಹಾಕಿ, ಅಲ್ಲೇ ಇದ್ದ ಚಿಕ್ಕ ಹುಡುಗನಿಗೆ, ‘ ಆರೆ ಇದರ್, ಫಿಟ್ ರ್ಕು ಹಾ..’ ಅಂತೇಳಿ, ನನ್ನತ್ತ ತಿರುಗಿ, ‘ಅವನಿಗೊಂದು ಇಪ್ಪತ್ತು ರೂಪಾಯಿ ಕೊಟ್ಬುಡಿ ಸಾರ್...’ ಅಂದ.
ಸರಿ ಅಂತ, ಹದಿನಾಲ್ಕರ ಟೀನೇಜ್ ಹುಡುಗ- ಬಿಳಿ ಟೀ ಶರ್ಟು, ಮೂಲಂಗಿ ಥರದ ಟೈಟ್ ಜೀನ್ಸ್ ಪ್ಯಾಂಟ್ ತೊಟ್ಟಿದ್ದವ- ನನ್ನು ನನ್ನ ಬೈಕ್ನಲ್ಲಿ ಕೂರಿಸಿಕೊಂಡು ಹೊರಟೆ. ಟ್ರಾಫಿಕ್ ಟೆನ್ಷನ್ ಕಳೆದು, ಕಬ್ಬನ್ ಪಾರ್ಕಿಗೆ ಎಂಟ್ರಿ ಆಗ್ತಿದ್ದಹಾಗೆ, ನನ್ನ ಹಳೆ ಚಾಳಿ- ಸ್ಕೂಲ್ಗೆ ಹೋಗುವ ಹುಡುಗರು ಕೈ ತೋರಿಸಿದ್ರೆ ಬಿಡೋದು, ಅವರ ಬಗ್ಗೆ ಉದ್ದಕ್ಕೂ ಅದೂ ಇದೂ ಕೇಳೋದು- ಛಾಲ್ತಿಗೆ ಬಂತು.
ಏನಪ್ಪ ನಿನ್ನೆಸ್ರು?’ ಅಂದೆ.
ಶಾಹಿದ್ ಸಾರ್...’
ಇದೇ ಕೆಲ್ಸಾನ ಅಥವಾ ಬೇರೆಯೇನಾದ್ರು...’
ಟೆಂಪೋದಲ್ಲಿ ಕ್ಲೀನರ್ ಆಗಿ ಕೆಲ್ಸ ಮಾಡ್ತೀನಿ, ಇವತ್ತು ನಮ್ಮ ಟೆಂಪೋ ಓನರ್ರು ಗಾಡಿ ನಿಲ್ಸಿ, ರೆಸ್ಟ್ ಅಂದ್ರು, ಅದಕ್ಕೆ ಇಲ್ಲೇ ಓಡಾಡಿಕೊಂಡಿದ್ದೆ... ಇವರು ಕರೆದ್ರು ಬಂದೆ ಸಾರ್...’ ಮುಸ್ಲಿಂ ಹುಡುಗರಂತೆ ಕನ್ನಡವನ್ನು ತೊದಲಿಸದೆ, ಕನ್ನಡದ ಹುಡುಗರು ಸ್ಪಷ್ಟವಾಗಿ ಮಾತನಾಡುವ ಹಾಗೆ ಮಾತನಾಡದೆ, ಅವೆರಡರ ನಡುವಿನ ನಡುಗನ್ನಡದ ಶೈಲಿಯಲ್ಲಿ ಹೇಳಿದ.
ನನಗೆ ಅವನು ಕ್ಲೀನರ್ ಕೆಲಸ ಅಂದಾಕ್ಷಣ, ‘ಸ್ಕೂಲ್ಗೆ ಹೋಗಲ್ವಾ...’ ಅಂದೆ.
ಇಲ್ಲ ಸಾರ್, ಸ್ಕೂಲು ಅಂದ್ರೆ ಏನು ಅಂತಾನೇ ಗೊತ್ತಿಲ್ಲ, ನನ್ ವಯಸ್ನ ಹುಡುಗ್ರು ಸ್ಕೂಲಿಗೆ ಹೋಗ್ತಿದ್ದಾಗ, ಒಂದಿನ ಸುಮ್ನೆ ಕೇಳ್ದೆ, ಸ್ಕೂಲ್ನಲ್ಲಿ ಏನ್ ಹೇಳ್ಕೊಡ್ತರೋ ಅಂತ, ಅವ್ನು ಪಾಠ, ಹಾಡು, ಆಟ ಆಡಸ್ತರೆ, ಊಟಾನೂ ಕೊಡ್ತರೆ ಕಣೋ ಅಂದ.. ನಾನು ಅಷ್ಟೇನಾ ಅಂದು ಹೋಗ್ಲಿಲ್ಲ ಸಾರ್...’
ನಿಮ್ಮಪ್ಪ ಅಮ್ಮನಾದ್ರೂ ಹೇಳಿ ಕಳಿಸಲಿಲ್ವಾ...?’
ನನ್ಗೆ ನಮ್ಮಪ್ಪಾಮ್ಮ ಯಾರೂಂತ್ಲೆ ಗೊತ್ತಿಲ್ಲ ಸಾರ್... ಯಾರ್ ಹೇಳ್ತರೆ?’
ಹೀಗಂದಾಕ್ಷಣ ನನಗೆ ನನ್ ಮಗ ನೆನಪಾದ. ಅವನ ಆಟ-ಪಾಠ, ಸವಲತ್ತು-ಸೌಕರ್ಯಗಳೆಲ್ಲ ಕಣ್ಮುಂದೆ ಬಂದು, ನನ್ನ ಮಗನಷ್ಟೇ ವಯಸ್ಸಿನ ಹುಡುಗನಭಾಗ್ಯಕಂಡು, ಒಂದು ಕ್ಷಣ ಮಾತೇ ಬರದ ಮೂಕನಾದೆ. ಆಗ ಅವನೇ...
ನಾನು ಚಿಕ್ ವಯಸ್ಸಿರುವಾಗ್ಲೆ ನಮ್ಮಮ್ಮ ಬಿಟ್ ಹೋಗ್ಬುಟ್ರಂತೆ, ಸಿಕ್ಕದೋರು ಎತ್ಕೊಂಡ್ ಹೋಗಿ ಸಾಕಿದಾರೆ, ಸದ್ಯಕ್ಕೆ ಅವರೇ ನಮ್ಮಪ್ಪಾಮ್ಮ...’
ಅದು ಹೇಗೆ ಗೊತ್ತಾಯಿತು ನಿನಗೆ?’
ಅದು ಗೊತ್ತಾಗ್ತಿರಲಿಲ್ಲ, ನಮ್ಮಪ್ಪಾಮ್ಮನೂ ಹೇಳಿಲ್ಲ, ಅವರೂ ನಮ್ ಮಗ ಅಂತಾನೇ ಸಾಕ್ತಿದಾರೆ... ಒಂದ್ ದಿನ ನನ್ ತಂಗಿನ ಎತ್ಕೊಂಡ್ ಆಟ ಆಡಸ್ತಿದ್ದೆ, ಕೈ ಜಾರಿ ಬೀಳಸ್ಬುಟ್ಟೆ, ಅವ್ಳು ಜೋರಾಗಿ ಅಳೋಕ್ ಶುರು ಮಾಡದ್ಲು. ಅಳ್ತಿರೋದ್ ನೋಡಿ ಓಡಿ ಬಂದ ನಮ್ಮಪ್ಪ, ತಲೆ ಮೇಲೆ ಒಂದು ಏಟ್ ಕೊಟ್ಟು, ಅವ್ಳಿಗೊಂದು ಮುತ್ತು ಕೊಟ್ಟು, ಎತ್ಕೊಂಡ್ರು... ಆಮೇಲೆಎಷ್ಟೇ ಆದ್ರು ನಮ್ ಮಕ್ಳು ನಮ್ ಮಕ್ಳೆ... ಮಕ್ಳನ್ನ ಯಾರ್ ಯಾರ್ ಕೈಗೋ ಯಾಕ್ ಕೊಡ್ತಿಯಾಅಂತ ನಮ್ಮಮ್ಮನಿಗೆ ಬೈಯ್ದ್ರು.. ನಮ್ಮಮ್ಮ ನಮ್ಮಪ್ಪನ ಮುಖ ನೋಡಿ ಏನೇನೋ ಸನ್ನೆ ಮಾಡಿದ್ರು ನಮ್ಮಪ್ಪ ಬೈಯ್ತಾನೆ ಇದ್ರು... ನನ್ಗೆ ಯಾಕೋ ಅನುಮಾನ ಶುರುವಾಯ್ತು... ಆಮೇಲೆ ನಾನು ನಂದೇ ವಯಸ್ನ ಪಕ್ಕದ್ಮನೆ ಹುಡುಗನ್ನ ಕೇಳ್ದೆ, ಅದಕ್ಕೆ ಅವನು ಹೂಂ ಕಣೋ, ನಮ್ಮಮ್ಮಾನು ಹೇಳ್ತಿದ್ರು... ನೀನು ಅವರ ಮಗ ಅಲ್ವಂತೆ, ಯಾರೋ ಬಿಟ್ಟೋಗಿದ್ರಂತೆ, ಎತ್ಕೊಂಡ್ ಬಂದು ಇವರು ಸಾಕ್ಕಂಡ್ರಂತೆ... ಅಂತ ಅಂದ.’
ಮತ್ತೆ ಈಗೆಲ್ಲಿದೀಯಾ?’
ಅಲ್ಲೆ, ಅವ್ರ ಮನೇನಲ್ಲೆ, ಅದು ಅವತ್ತಷ್ಟೇ ಸಾರ್, ಇವತ್ತಿಗೂ ಅವ್ರು ನನ್ನ ಮಗನ್ ಥರಾನೇ ನೋಡ್ಕೋತಿದಾರೆ, ಹಬ್ಬ ಬಂದ್ರೆ ಬಟ್ಟೆ ಕೊಡುಸ್ತರೆ, ನಿಮ್ಗೆ ಇನ್ನೊಂದ್ ಗೊತ್ತ ಸಾರ್, ಮೊನ್ನೆ ರಂಜಾನ್ ಹಬ್ಬ ಆಯ್ತಲ್ಲ... ಅವರೊಬ್ರೆ ಅಲ್ಲ, ನಮ್ ಬೀದಿನಲ್ಲಿ ಎಲ್ರೂ ನನ್ಗೆ ಬಟ್ಟೆ ಕೊಡಸಿದ್ರು... ಈಗ ಹಾಕ್ಕೊಂಡಿದಿನಲ್ಲ ಡ್ರೆಸ್ಸು... ಜೈನ್ ಸಂಘದೋರು ಕೊಟ್ಟಿದ್ದು, ನಾನೂ ಅಷ್ಟೆ ಸಾರ್, ಯಾರ್ ಕರದ್ರು ಇಲ್ಲ ಅನ್ನಲ್ಲ, ಯಾವ ಕೆಲ್ಸ ಕೊಟ್ರು ಮಾಡಲ್ಲ ಅನ್ನಲ್ಲ... ಸುಳ್ ಹೇಳಲ್ಲ, ಒಬ್ರಿಗೆ ಕೆಟ್ಟದ್ ಮಾಡಲ್ಲ, ದೇವ್ರು ನಂಗೆ ಕೈ ಬಿಟ್ಟಿಲ್ಲ ಸಾರ್...?’
ಅವನ ಮಾತು ಕೇಳಿ ನನಗ್ಯಾಕೋ ಮಾತೇ ಬರಲಿಲ್ಲ. ಸುಮ್ಮನಾಗಿಬಿಟ್ಟೆ.
ಅವನೇ ಮುಂದುವರೆಸಿ, ‘ನನ್ಗೇ ಗೊತ್ತಿಲ್ಲ ಸಾರ್, ನಾನ್ ಹಿಂದೂನೋ, ಮುಸ್ಲಿಮೋ ಅಂತ. ಆದ್ರೂ ಪ್ರತೀ ಶುಕ್ರವಾರ ದರ್ಗಾಕ್ಕೆ ಹೋಗ್ತೀನಿ, ಕಾಟನ್ಪೇಟೆ ಹತ್ರ ಇದಿಯಲ್ಲ, ದರ್ಗಾಗೆ, ಅವತ್ತು ನಮ್ ಟೆಂಪೋಗೆ ರಜ. ಸ್ನಾನ ಮಾಡ್ಕೊಂಡು, ಒಗದಿರೋ ಬಟ್ಟೆ ಹಾಕ್ಕೊಂಡು ಬೆಳಗ್ಗೆ ಒಂಭತ್ತು ಗಂಟೆಗೆ ಹೋದ್ರೆ ಹನ್ನೊಂದೂವರೆ ವರೆಗೆ ಅಲ್ಲಿರ್ತೀನಿ. ಆಮೇಲೆ, ಹಿಂಗೆ, ನಿಮ್ ಕೆಲ್ಸಕ್ಕೆ ಬರ್ಲಿಲ್ವಾ ಹಂಗೆ, ಅವರಿವರ ಅಂಗಡಿ ಹತ್ರ ಓಡಾಡಕ್ಕೊಂಡ್ ಇರ್ತೀನಿ, ಸಂಜೆಯಷ್ಟೊತ್ತಿಗೆ ಒಂದ್ ನೂರು ರೂಪಾಯ್ ಮಾಡ್ಕೊತೀನಿ...’
ನಾನ್ ಹಿಂದೂನೋ ಮುಸ್ಲಿಮೋ ಅಂತ ಯಾಕ್ ಹೇಳಿದನೋ ಗೊತ್ತಿಲ್ಲ. ನಾನೇನೂ ಅವನಿಗೆ ಕೇಳ್ಲಿಲ್ಲ, ಅವನಾಗೆ ಹೇಳ್ದ. ಅಥವಾ ಅವನಿಗೂ ಅನುಮಾನ ಕಾಡ್ತಿರಬಹುದು. ಮೂಡ್ನಿಂದ ಆತನನ್ನು ಹೊರಗೆಳೆಯಲು, ಇಷ್ಟು ವಯಸ್ಸಾದ್ರು ನನ್ನ ಬದುಕನ್ನೇ ನನಗೆ ನೇರ ಮಾಡಿಕೊಳ್ಳಲಾಗದಿದ್ದರೂ, ‘ಟೆಂಪೋ ಕ್ಲೀನರ್ಗೆ ಎಷ್ಟು ಕೊಡ್ತರಪ್ಪ, ಅದನ್ನೆ ಎಷ್ಟು ದಿನಾಂತ ಮಾಡ್ತೀಯಾಅಂದೆ.
ಟೆಂಪೋನಲ್ಲಿ ಒಳ್ಳೆ ದುಡ್ಡಿದೆ ಸಾರ್, ನಿಮಗ್ಗೊತ್ತಿಲ್ಲ. ಈಗಿರೋ ನಮ್ ಯಜಮಾನ್ರು ಇನ್ನ ಸ್ವಲ್ಪ ವರ್ಷ ಇರಬಹುದು, ಆಮೇಲೆ ಗಾಡಿ ನನ್ಗೇನೆ ಅಂತ ಹೇಳಿದಾರೆ ಸಾರ್, ಡ್ರೈವರ್ ಆಗ್ಬೇಕು, ಒಳ್ಳೆ ಡ್ರೈವರ್ ಆಗ್ಬೇಕು, ಎಲ್ಲ ಗಾಡೀನೂ ಓಡಸ್ಬೇಕು ಅಂತ ಆಸೆ ಸಾರ್, ನಿಮಗ್ಗೊತ್ತಿಲ್ಲ ಸಾರ್, ಮಾರ್ಕೆಟ್ನಿಂದ ಪೀಣ್ಯಾಗೆ ಒಂದ್ ಟ್ರಿಪ್ ಹೊಡುದ್ರೆ ಒಂದ್ ಸಾವ್ರೂಪಾಯಿ ಸಾರ್...’
ಇದ್ದಕ್ಕಿದ್ದಂತೆ ಸುಮ್ಮನಾಗಿ, ಆಮೇಲೆಯಾಕ್ಸಾರ್ ಇದ್ನೆಲ್ಲ ಕೇಳ್ತಿರದು?’ ಅಂದ.
ಏನಿಲ್ಲಪ್ಪ ಸುಮ್ನೆ ಕೇಳ್ದೆಅಂದು ಅವನು ಟೈರ್ ಫಿಟ್ ಮಾಡೋದನ್ನೇ ನೋಡ್ತಾ ಕೂತೆ. ‘ಅನ್ಮಾನ ಪಡಬೇಡಿ ಸಾರ್, ದೊಡ್ ದೊಡ್ ಗಾಡಿಗಳ್ನೆ ಬಿಚ್ಚಿದೀನಿ..’ ಫಿಟ್ ಮಾಡಿ ಆದಮೇಲೆ, ‘ಒಂದ್ಸಲ ಟ್ರಯಲ್ ನೋಡಿ ಸಾರ್, ಸರಿಗಿದಿಯಾಅಂದ. ಗಾಡಿ ಸರಿಯಾದ ಮೇಲೆ, ನಾನು ಅಲ್ಲೇ ಇದ್ದ ಫುಟ್ಪಾತ್ ಅಂಗಡಿಯ ಬಳಿ ಹೋಗಿ ಬಿಸ್ಕೆಟ್ಟು-ಟೀ ಕೊಡಿಸಿ, ಕೈಗೆ ಇಪ್ಪತ್ತು ರೂಪಾಯಿ ಕೊಟ್ಟೆ. ‘ಥ್ಯಾಂಕ್ಸ್ ಸಾರ್ಅಂದೋನು,
ದೇವ್ರನ್ನ ನಂಬೇಕು ಸಾರ್, ನನಗೊತ್ತಿರೋದು ಇಷ್ಟೆ- ಕಷ್ಟಪಟ್ಟ ಕೆಲ್ಸ ಮಾಡ್ತೀನಿ, ನಿಮ್ಮಂಥೋರು ದುಡ್ ಕೊಡ್ತೀರಾ, ಹೊಟ್ಟೆ ತುಂಬ ತಿಂತೀನಿ, ಕಣ್ತುಂಬ ನಿದ್ದೆ ಮಾಡ್ತೀನಿ, ಸಾಕಲ್ವಾ ಸಾರ್...’ ಅಂದ.
ಅವನಲ್ಲಿ ಅನಾಥಪ್ರಜ್ಞೆ ಕಾಡಿದ್ದಾಗಲಿ, ಸದ್ಯದ ಸ್ಥಿತಿ ಬಗ್ಗೆ ಕೊರಗಿದ್ದಾಗಲಿ, ಅಪ್ಪಾಮ್ಮ ಇಲ್ಲ ಅಂತ ದುಃಖವಾಗಲಿ ಕಾಣಲಿಲ್ಲ; ಬೇರೆಯವರಿಗಿರುವ ಸವಲತ್ತು-ಸೌಕರ್ಯ-ಸಂಪತ್ತಿನ ಬಗ್ಗೆ ಕರುಬಿದ್ದಾಗಲಿ, ಮರುಗಿದ್ದಾಗಲಿ ಕೂಡ ಇರಲಿಲ್ಲ. ಬದಲಿಗೆ ಮಾತಿನುದ್ದಕ್ಕೂ ನಗುಮುಖವೇ ಎದ್ದು ಕಾಣುತ್ತಿತ್ತು. ನಡತೆಯಲ್ಲಿ ಸಜ್ಜನಿಕೆ, ಬದುಕಿನ ಬಗ್ಗೆ ಪ್ರೀತಿ ಇತ್ತು. ಒಳ್ಳೆಯವರಿಗೆ ಕಾಲವಿದೆ ಎಂಬುದನ್ನು ಬಲವಾಗಿ ನಂಬಿದಂತಿತ್ತು.
ಬೀದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಬಾಲಕನ ಬದುಕಿನ ಫಿಲಾಸಫಿ ಕೇಳಿ, ಇವನು ಬಾಲಕನೋ, ನಗುವ ಬುದ್ಧನೋ ಅನ್ನಿಸಲಿಕ್ಕೆ ಶುರುವಾಯಿತು.