ಮೊಬೈಲ್ ರಿಂಗಾಯಿತು. ಡಿಸ್ಪ್ಲೇ ಆದ ನಂಬರ್ ಪರಿಚಿತರದ್ದಲ್ಲ. ಯಾವುದೋ ಕಾಯಿನ್ ಬೂತ್ನಿಂದ ಬಂದದ್ದು. ಹಲೋ ಅಂದೆ, ಅತ್ತ ಕಡೆಯಿಂದ ಕ್ರಿಕೆಟ್ ಆಡಲು ಹೋಗಿದ್ದ ಮಗ, ‘ಅಪ್ಪ, ಅಮ್ಮನ ಸ್ಕೂಟಿ ಪಂಕ್ಚರ್ ಆಗಿದೆ, ಗಾಡಿ ವೈಎಂಸಿಎ ಗ್ರೌಂಡ್ ಹತ್ರ ಇದೆ, ಬಂದು ಪಂಕ್ಚರ್ ಹಾಕಿಸಿಕೊಡಬೇಕಂತೆ, ಅಮ್ಮನ ಮೊಬೈಲ್ನಲ್ಲಿ ಕರೆನ್ಸಿ ಇಲ್ಲ, ಅದಕ್ಕೆ ನಾನು ಕಾಯಿನ್ ಬೂತ್ನಿಂದ ಮಾಡ್ತಿದೀನಿ’ ಅಂತೇಳಿ ಫೋನಿಟ್ಟ. ತಕ್ಷಣ ವೈಎಂಸಿಎ ಸುತ್ತಮುತ್ತ ಇರಬಹುದಾದ ಪಂಕ್ಚರ್ ಹಾಕುವ ಅಂಗಡಿಗಳ ಬಗ್ಗೆ ಗಮನ ಹರಿಯಿತು. ಅಲ್ಲಿ-ಇಲ್ಲಿ ತಲೆಯಲ್ಲಿ ತೇಲಾಡಿತು. ಕೊನೆಗೆ ಹಡ್ಸನ್ ಸರ್ಕಲ್ ಬಳಿಯ ಒಕ್ಕಲಿಗರ ಸಂಘದ ಕಟ್ಟಡದ ಪಕ್ಕ ರಸ್ತೆ ಬದಿಯಲ್ಲಿದ್ದ ಒಂದು ಪಂಕ್ಚರ್ ಅಂಗಡಿ ಕಣ್ಣಿಗೆ ಬಿತ್ತು. ಅದರ ಮಾಲೀಕ- ಇಪ್ಪತ್ತೈದರ ಹರೆಯದ ಮುಸ್ಲಿಂ ಯುವಕ- ನನ್ನು ಕೇಳಿದಾಗ, ಆತ ಆ ಕ್ಷಣದಲ್ಲಿಯೇ ನನ್ನ ಬೈಕ್ ಹತ್ತಿದ, ಟೈರ್ ಬಿಚ್ಚಿಕೊಂಡು ಬಂದು ಚೆಕ್ ಮಾಡಿ, ‘ಟ್ಯೂಬ್ ಹೋಗಿದೆ, ಬೇರೆ ಹಾಕ್ಬೇಕು..’ ಅಂದ. ಸರಿ ಹಾಕಪ್ಪ ಅಂದೆ. ಆತ ಹಾಕಿ, ಅಲ್ಲೇ ಇದ್ದ ಚಿಕ್ಕ ಹುಡುಗನಿಗೆ, ‘ಏ ಆರೆ ಇದರ್, ಏ ಫಿಟ್ ಕರ್ಕು ಹಾ..’ ಅಂತೇಳಿ, ನನ್ನತ್ತ ತಿರುಗಿ, ‘ಅವನಿಗೊಂದು ಇಪ್ಪತ್ತು ರೂಪಾಯಿ ಕೊಟ್ಬುಡಿ ಸಾರ್...’ ಅಂದ.
ಸರಿ ಅಂತ, ಆ ಹದಿನಾಲ್ಕರ ಟೀನೇಜ್ ಹುಡುಗ- ಬಿಳಿ ಟೀ ಶರ್ಟು, ಮೂಲಂಗಿ ಥರದ ಟೈಟ್ ಜೀನ್ಸ್ ಪ್ಯಾಂಟ್ ತೊಟ್ಟಿದ್ದವ- ನನ್ನು ನನ್ನ ಬೈಕ್ನಲ್ಲಿ ಕೂರಿಸಿಕೊಂಡು ಹೊರಟೆ. ಟ್ರಾಫಿಕ್ ಟೆನ್ಷನ್ ಕಳೆದು, ಕಬ್ಬನ್ ಪಾರ್ಕಿಗೆ ಎಂಟ್ರಿ ಆಗ್ತಿದ್ದಹಾಗೆ, ನನ್ನ ಹಳೆ ಚಾಳಿ- ಸ್ಕೂಲ್ಗೆ ಹೋಗುವ ಹುಡುಗರು ಕೈ ತೋರಿಸಿದ್ರೆ ಬಿಡೋದು, ಅವರ ಬಗ್ಗೆ ಉದ್ದಕ್ಕೂ ಅದೂ ಇದೂ ಕೇಳೋದು- ಛಾಲ್ತಿಗೆ ಬಂತು.
‘ಏನಪ್ಪ ನಿನ್ನೆಸ್ರು?’ ಅಂದೆ.
‘ಶಾಹಿದ್ ಸಾರ್...’
‘ಇದೇ ಕೆಲ್ಸಾನ ಅಥವಾ ಬೇರೆಯೇನಾದ್ರು...’
‘ಟೆಂಪೋದಲ್ಲಿ ಕ್ಲೀನರ್ ಆಗಿ ಕೆಲ್ಸ ಮಾಡ್ತೀನಿ, ಇವತ್ತು ನಮ್ಮ ಟೆಂಪೋ ಓನರ್ರು ಗಾಡಿ ನಿಲ್ಸಿ, ರೆಸ್ಟ್ ಅಂದ್ರು, ಅದಕ್ಕೆ ಇಲ್ಲೇ ಓಡಾಡಿಕೊಂಡಿದ್ದೆ... ಇವರು ಕರೆದ್ರು ಬಂದೆ ಸಾರ್...’ ಮುಸ್ಲಿಂ ಹುಡುಗರಂತೆ ಕನ್ನಡವನ್ನು ತೊದಲಿಸದೆ, ಕನ್ನಡದ ಹುಡುಗರು ಸ್ಪಷ್ಟವಾಗಿ ಮಾತನಾಡುವ ಹಾಗೆ ಮಾತನಾಡದೆ, ಅವೆರಡರ ನಡುವಿನ ನಡುಗನ್ನಡದ ಶೈಲಿಯಲ್ಲಿ ಹೇಳಿದ.
ನನಗೆ ಅವನು ಕ್ಲೀನರ್ ಕೆಲಸ ಅಂದಾಕ್ಷಣ, ‘ಸ್ಕೂಲ್ಗೆ ಹೋಗಲ್ವಾ...’ ಅಂದೆ.
‘ಇಲ್ಲ ಸಾರ್, ಸ್ಕೂಲು ಅಂದ್ರೆ ಏನು ಅಂತಾನೇ ಗೊತ್ತಿಲ್ಲ, ನನ್ ವಯಸ್ನ ಹುಡುಗ್ರು ಸ್ಕೂಲಿಗೆ ಹೋಗ್ತಿದ್ದಾಗ, ಒಂದಿನ ಸುಮ್ನೆ ಕೇಳ್ದೆ, ಸ್ಕೂಲ್ನಲ್ಲಿ ಏನ್ ಹೇಳ್ಕೊಡ್ತರೋ ಅಂತ, ಅವ್ನು ಪಾಠ, ಹಾಡು, ಆಟ ಆಡಸ್ತರೆ, ಊಟಾನೂ ಕೊಡ್ತರೆ ಕಣೋ ಅಂದ.. ನಾನು ಅಷ್ಟೇನಾ ಅಂದು ಹೋಗ್ಲಿಲ್ಲ ಸಾರ್...’
‘ನಿಮ್ಮಪ್ಪ ಅಮ್ಮನಾದ್ರೂ ಹೇಳಿ ಕಳಿಸಲಿಲ್ವಾ...?’
‘ನನ್ಗೆ ನಮ್ಮಪ್ಪಾಮ್ಮ ಯಾರೂಂತ್ಲೆ ಗೊತ್ತಿಲ್ಲ ಸಾರ್... ಯಾರ್ ಹೇಳ್ತರೆ?’
ಹೀಗಂದಾಕ್ಷಣ ನನಗೆ ನನ್ ಮಗ ನೆನಪಾದ. ಅವನ ಆಟ-ಪಾಠ, ಸವಲತ್ತು-ಸೌಕರ್ಯಗಳೆಲ್ಲ ಕಣ್ಮುಂದೆ ಬಂದು, ನನ್ನ ಮಗನಷ್ಟೇ ವಯಸ್ಸಿನ ಈ ಹುಡುಗನ ‘ಭಾಗ್ಯ’ ಕಂಡು, ಒಂದು ಕ್ಷಣ ಮಾತೇ ಬರದ ಮೂಕನಾದೆ. ಆಗ ಅವನೇ...
‘ನಾನು ಚಿಕ್ ವಯಸ್ಸಿರುವಾಗ್ಲೆ ನಮ್ಮಮ್ಮ ಬಿಟ್ ಹೋಗ್ಬುಟ್ರಂತೆ, ಸಿಕ್ಕದೋರು ಎತ್ಕೊಂಡ್ ಹೋಗಿ ಸಾಕಿದಾರೆ, ಸದ್ಯಕ್ಕೆ ಅವರೇ ನಮ್ಮಪ್ಪಾಮ್ಮ...’
‘ಅದು ಹೇಗೆ ಗೊತ್ತಾಯಿತು ನಿನಗೆ?’
‘ಅದು ಗೊತ್ತಾಗ್ತಿರಲಿಲ್ಲ, ನಮ್ಮಪ್ಪಾಮ್ಮನೂ ಹೇಳಿಲ್ಲ, ಅವರೂ ನಮ್ ಮಗ ಅಂತಾನೇ ಸಾಕ್ತಿದಾರೆ... ಒಂದ್ ದಿನ ನನ್ ತಂಗಿನ ಎತ್ಕೊಂಡ್ ಆಟ ಆಡಸ್ತಿದ್ದೆ, ಕೈ ಜಾರಿ ಬೀಳಸ್ಬುಟ್ಟೆ, ಅವ್ಳು ಜೋರಾಗಿ ಅಳೋಕ್ ಶುರು ಮಾಡದ್ಲು. ಅಳ್ತಿರೋದ್ ನೋಡಿ ಓಡಿ ಬಂದ ನಮ್ಮಪ್ಪ, ತಲೆ ಮೇಲೆ ಒಂದು ಏಟ್ ಕೊಟ್ಟು, ಅವ್ಳಿಗೊಂದು ಮುತ್ತು ಕೊಟ್ಟು, ಎತ್ಕೊಂಡ್ರು... ಆಮೇಲೆ ‘ಎಷ್ಟೇ ಆದ್ರು ನಮ್ ಮಕ್ಳು ನಮ್ ಮಕ್ಳೆ... ಮಕ್ಳನ್ನ ಯಾರ್ ಯಾರ್ ಕೈಗೋ ಯಾಕ್ ಕೊಡ್ತಿಯಾ’ ಅಂತ ನಮ್ಮಮ್ಮನಿಗೆ ಬೈಯ್ದ್ರು.. ನಮ್ಮಮ್ಮ ನಮ್ಮಪ್ಪನ ಮುಖ ನೋಡಿ ಏನೇನೋ ಸನ್ನೆ ಮಾಡಿದ್ರು ನಮ್ಮಪ್ಪ ಬೈಯ್ತಾನೆ ಇದ್ರು... ನನ್ಗೆ ಯಾಕೋ ಅನುಮಾನ ಶುರುವಾಯ್ತು... ಆಮೇಲೆ ನಾನು ನಂದೇ ವಯಸ್ನ ಪಕ್ಕದ್ಮನೆ ಹುಡುಗನ್ನ ಕೇಳ್ದೆ, ಅದಕ್ಕೆ ಅವನು ಹೂಂ ಕಣೋ, ನಮ್ಮಮ್ಮಾನು ಹೇಳ್ತಿದ್ರು... ನೀನು ಅವರ ಮಗ ಅಲ್ವಂತೆ, ಯಾರೋ ಬಿಟ್ಟೋಗಿದ್ರಂತೆ, ಎತ್ಕೊಂಡ್ ಬಂದು ಇವರು ಸಾಕ್ಕಂಡ್ರಂತೆ... ಅಂತ ಅಂದ.’
‘ಮತ್ತೆ ಈಗೆಲ್ಲಿದೀಯಾ?’
‘ಅಲ್ಲೆ, ಅವ್ರ ಮನೇನಲ್ಲೆ, ಅದು ಅವತ್ತಷ್ಟೇ ಸಾರ್, ಇವತ್ತಿಗೂ ಅವ್ರು ನನ್ನ ಮಗನ್ ಥರಾನೇ ನೋಡ್ಕೋತಿದಾರೆ, ಹಬ್ಬ ಬಂದ್ರೆ ಬಟ್ಟೆ ಕೊಡುಸ್ತರೆ, ನಿಮ್ಗೆ ಇನ್ನೊಂದ್ ಗೊತ್ತ ಸಾರ್, ಮೊನ್ನೆ ರಂಜಾನ್ ಹಬ್ಬ ಆಯ್ತಲ್ಲ... ಅವರೊಬ್ರೆ ಅಲ್ಲ, ನಮ್ ಬೀದಿನಲ್ಲಿ ಎಲ್ರೂ ನನ್ಗೆ ಬಟ್ಟೆ ಕೊಡಸಿದ್ರು... ಈಗ ಹಾಕ್ಕೊಂಡಿದಿನಲ್ಲ ಈ ಡ್ರೆಸ್ಸು... ಜೈನ್ ಸಂಘದೋರು ಕೊಟ್ಟಿದ್ದು, ನಾನೂ ಅಷ್ಟೆ ಸಾರ್, ಯಾರ್ ಕರದ್ರು ಇಲ್ಲ ಅನ್ನಲ್ಲ, ಯಾವ ಕೆಲ್ಸ ಕೊಟ್ರು ಮಾಡಲ್ಲ ಅನ್ನಲ್ಲ... ಸುಳ್ ಹೇಳಲ್ಲ, ಒಬ್ರಿಗೆ ಕೆಟ್ಟದ್ ಮಾಡಲ್ಲ, ದೇವ್ರು ನಂಗೆ ಕೈ ಬಿಟ್ಟಿಲ್ಲ ಸಾರ್...?’
ಅವನ ಮಾತು ಕೇಳಿ ನನಗ್ಯಾಕೋ ಮಾತೇ ಬರಲಿಲ್ಲ. ಸುಮ್ಮನಾಗಿಬಿಟ್ಟೆ.
ಅವನೇ ಮುಂದುವರೆಸಿ, ‘ನನ್ಗೇ ಗೊತ್ತಿಲ್ಲ ಸಾರ್, ನಾನ್ ಹಿಂದೂನೋ, ಮುಸ್ಲಿಮೋ ಅಂತ. ಆದ್ರೂ ಪ್ರತೀ ಶುಕ್ರವಾರ ದರ್ಗಾಕ್ಕೆ ಹೋಗ್ತೀನಿ, ಕಾಟನ್ಪೇಟೆ ಹತ್ರ ಇದಿಯಲ್ಲ, ಆ ದರ್ಗಾಗೆ, ಅವತ್ತು ನಮ್ ಟೆಂಪೋಗೆ ರಜ. ಸ್ನಾನ ಮಾಡ್ಕೊಂಡು, ಒಗದಿರೋ ಬಟ್ಟೆ ಹಾಕ್ಕೊಂಡು ಬೆಳಗ್ಗೆ ಒಂಭತ್ತು ಗಂಟೆಗೆ ಹೋದ್ರೆ ಹನ್ನೊಂದೂವರೆ ವರೆಗೆ ಅಲ್ಲಿರ್ತೀನಿ. ಆಮೇಲೆ, ಹಿಂಗೆ, ನಿಮ್ ಕೆಲ್ಸಕ್ಕೆ ಬರ್ಲಿಲ್ವಾ ಹಂಗೆ, ಅವರಿವರ ಅಂಗಡಿ ಹತ್ರ ಓಡಾಡಕ್ಕೊಂಡ್ ಇರ್ತೀನಿ, ಸಂಜೆಯಷ್ಟೊತ್ತಿಗೆ ಒಂದ್ ನೂರು ರೂಪಾಯ್ ಮಾಡ್ಕೊತೀನಿ...’
ನಾನ್ ಹಿಂದೂನೋ ಮುಸ್ಲಿಮೋ ಅಂತ ಯಾಕ್ ಹೇಳಿದನೋ ಗೊತ್ತಿಲ್ಲ. ನಾನೇನೂ ಅವನಿಗೆ ಕೇಳ್ಲಿಲ್ಲ, ಅವನಾಗೆ ಹೇಳ್ದ. ಅಥವಾ ಅವನಿಗೂ ಆ ಅನುಮಾನ ಕಾಡ್ತಿರಬಹುದು. ಆ ಮೂಡ್ನಿಂದ ಆತನನ್ನು ಹೊರಗೆಳೆಯಲು, ಇಷ್ಟು ವಯಸ್ಸಾದ್ರು ನನ್ನ ಬದುಕನ್ನೇ ನನಗೆ ನೇರ ಮಾಡಿಕೊಳ್ಳಲಾಗದಿದ್ದರೂ, ‘ಟೆಂಪೋ ಕ್ಲೀನರ್ಗೆ ಎಷ್ಟು ಕೊಡ್ತರಪ್ಪ, ಅದನ್ನೆ ಎಷ್ಟು ದಿನಾಂತ ಮಾಡ್ತೀಯಾ’ ಅಂದೆ.
‘ಟೆಂಪೋನಲ್ಲಿ ಒಳ್ಳೆ ದುಡ್ಡಿದೆ ಸಾರ್, ನಿಮಗ್ಗೊತ್ತಿಲ್ಲ. ಈಗಿರೋ ನಮ್ ಯಜಮಾನ್ರು ಇನ್ನ ಸ್ವಲ್ಪ ವರ್ಷ ಇರಬಹುದು, ಆಮೇಲೆ ಆ ಗಾಡಿ ನನ್ಗೇನೆ ಅಂತ ಹೇಳಿದಾರೆ ಸಾರ್, ಡ್ರೈವರ್ ಆಗ್ಬೇಕು, ಒಳ್ಳೆ ಡ್ರೈವರ್ ಆಗ್ಬೇಕು, ಎಲ್ಲ ಗಾಡೀನೂ ಓಡಸ್ಬೇಕು ಅಂತ ಆಸೆ ಸಾರ್, ನಿಮಗ್ಗೊತ್ತಿಲ್ಲ ಸಾರ್, ಮಾರ್ಕೆಟ್ನಿಂದ ಪೀಣ್ಯಾಗೆ ಒಂದ್ ಟ್ರಿಪ್ ಹೊಡುದ್ರೆ ಒಂದ್ ಸಾವ್ರೂಪಾಯಿ ಸಾರ್...’
ಇದ್ದಕ್ಕಿದ್ದಂತೆ ಸುಮ್ಮನಾಗಿ, ಆಮೇಲೆ ‘ಯಾಕ್ಸಾರ್ ಇದ್ನೆಲ್ಲ ಕೇಳ್ತಿರದು?’ ಅಂದ.
‘ಏನಿಲ್ಲಪ್ಪ ಸುಮ್ನೆ ಕೇಳ್ದೆ’ ಅಂದು ಅವನು ಟೈರ್ ಫಿಟ್ ಮಾಡೋದನ್ನೇ ನೋಡ್ತಾ ಕೂತೆ. ‘ಅನ್ಮಾನ ಪಡಬೇಡಿ ಸಾರ್, ದೊಡ್ ದೊಡ್ ಗಾಡಿಗಳ್ನೆ ಬಿಚ್ಚಿದೀನಿ..’ ಫಿಟ್ ಮಾಡಿ ಆದಮೇಲೆ, ‘ಒಂದ್ಸಲ ಟ್ರಯಲ್ ನೋಡಿ ಸಾರ್, ಸರಿಗಿದಿಯಾ’ ಅಂದ. ಗಾಡಿ ಸರಿಯಾದ ಮೇಲೆ, ನಾನು ಅಲ್ಲೇ ಇದ್ದ ಫುಟ್ಪಾತ್ ಅಂಗಡಿಯ ಬಳಿ ಹೋಗಿ ಬಿಸ್ಕೆಟ್ಟು-ಟೀ ಕೊಡಿಸಿ, ಕೈಗೆ ಇಪ್ಪತ್ತು ರೂಪಾಯಿ ಕೊಟ್ಟೆ. ‘ಥ್ಯಾಂಕ್ಸ್ ಸಾರ್’ ಅಂದೋನು,
‘ದೇವ್ರನ್ನ ನಂಬೇಕು ಸಾರ್, ನನಗೊತ್ತಿರೋದು ಇಷ್ಟೆ- ಕಷ್ಟಪಟ್ಟ ಕೆಲ್ಸ ಮಾಡ್ತೀನಿ, ನಿಮ್ಮಂಥೋರು ದುಡ್ ಕೊಡ್ತೀರಾ, ಹೊಟ್ಟೆ ತುಂಬ ತಿಂತೀನಿ, ಕಣ್ತುಂಬ ನಿದ್ದೆ ಮಾಡ್ತೀನಿ, ಸಾಕಲ್ವಾ ಸಾರ್...’ ಅಂದ.
ಅವನಲ್ಲಿ ಅನಾಥಪ್ರಜ್ಞೆ ಕಾಡಿದ್ದಾಗಲಿ, ಸದ್ಯದ ಸ್ಥಿತಿ ಬಗ್ಗೆ ಕೊರಗಿದ್ದಾಗಲಿ, ಅಪ್ಪಾಮ್ಮ ಇಲ್ಲ ಅಂತ ದುಃಖವಾಗಲಿ ಕಾಣಲಿಲ್ಲ; ಬೇರೆಯವರಿಗಿರುವ ಸವಲತ್ತು-ಸೌಕರ್ಯ-ಸಂಪತ್ತಿನ ಬಗ್ಗೆ ಕರುಬಿದ್ದಾಗಲಿ, ಮರುಗಿದ್ದಾಗಲಿ ಕೂಡ ಇರಲಿಲ್ಲ. ಬದಲಿಗೆ ಮಾತಿನುದ್ದಕ್ಕೂ ನಗುಮುಖವೇ ಎದ್ದು ಕಾಣುತ್ತಿತ್ತು. ನಡತೆಯಲ್ಲಿ ಸಜ್ಜನಿಕೆ, ಬದುಕಿನ ಬಗ್ಗೆ ಪ್ರೀತಿ ಇತ್ತು. ಒಳ್ಳೆಯವರಿಗೆ ಕಾಲವಿದೆ ಎಂಬುದನ್ನು ಬಲವಾಗಿ ನಂಬಿದಂತಿತ್ತು.
ಬೀದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಈ ಬಾಲಕನ ಬದುಕಿನ ಫಿಲಾಸಫಿ ಕೇಳಿ, ಇವನು ಬಾಲಕನೋ, ನಗುವ ಬುದ್ಧನೋ ಅನ್ನಿಸಲಿಕ್ಕೆ ಶುರುವಾಯಿತು.
ಪ್ರಿಯ ಬಸವರಾಜ್,
ReplyDeleteಇದನ್ನ ಓದಿ ಇಡೀ ದಿನ ಏನೂ ಮಡಲಾರದವನಾಗಿದ್ದೆ. ಆ ಬಾಲಕ ನನ್ನ ತಲೆಯಲ್ಲಿ ದೊಡ್ಡ ಬೀದಿ ಹಾಗೆ ಬೆಳಿತಾ ಇದಾನೆ. ಇದನ್ನ ಬರೆದು ನೀವು ನನ್ನ ಐಡೆಂಟಿಟಿ ಬಗ್ಗೆ ಇನ್ನೊಮ್ಮೆ ತೀರ್ವವಾಗಿ ಯೋಚಿಸುವಂತಾಗಿದೆ.
ಪ್ರಿಯ ಬಸವರಾಜ್,
ReplyDeleteಇದನ್ನ ಓದಿ ಇಡೀ ದಿನ ಏನೂ ಮಡಲಾರದವನಾಗಿದ್ದೆ. ಆ ಬಾಲಕ ನನ್ನ ತಲೆಯಲ್ಲಿ ದೊಡ್ಡ ಬೀದಿ ಹಾಗೆ ಬೆಳಿತಾ ಇದಾನೆ. ಇದನ್ನ ಬರೆದು ನೀವು ನನ್ನ ಐಡೆಂಟಿಟಿ ಬಗ್ಗೆ ಇನ್ನೊಮ್ಮೆ ತೀರ್ವವಾಗಿ ಯೋಚಿಸುವಂತೆ ಮಾಡಿದ್ದೀರಿ.
This comment has been removed by the author.
ReplyDeleteಶಾಲೆ , ಕಾಲೇಜುಗಳು ಕಲಿಸಲಾಗದ್ದನು, ಜೀವನ ಎಂತಹ ಪಾಠ ಕಲಿಸಿದೆ ಈ ಹುಡುಗನಿಗೆ !
ReplyDeleteಬಸು...ಜೀವನದಲ್ಲಿ ನಿನಗೇ ಯಾಕೆ ಇಂತಹವರು ಸಿಗುತ್ತಿರುತ್ತಾರೆ? ಎಂದು ಸಾವಿರ ಬಾರಿ ನನ್ನಲ್ಲೇ ಪ್ರಶ್ನೆ ಕೇಳಿಕೊಂಡಿದ್ದೇನೆ....ಆತನೊಳಗೆ ನಿನಗೆ ಬುದ್ಧ ಕಂಡರೆ ನನಗೆ ನಿನ್ನೋಳಗೆ ಒಬ್ಬ ಬುದ್ಧ ಕಾಣಿಸುತ್ತಿದ್ದಾನೆ. ಪ್ರತಿಯೊಬ್ಬರನ್ನು ಕಂಡಾಗಲೂ ವಿಚಿತ್ರವಾಗಿ ಜ್ನಾನೋದಯವಾಗುವ ನಿನ್ನನ್ನು ಮತ್ತು ನಿನ್ನಂತಹ ಲೇಖಕರನ್ನು ನಾನು " ಬುದ್ದ" ಎಂದೇ ಕರೆಯುತ್ತೇನೆ.
ReplyDelete