ಪಕ್ಕದ
ಕೇರಳ ಹೇಳಿಕೇಳಿ ತೆಂಗಿನ ನಾಡು. ರಾಜ್ಯದ ಉದ್ದಕ್ಕೂ ಹೇರಳವಾಗಿರುವ ತೆಂಗಿನ ಬೆಳೆಯಿಂದ ಕೇರಳ ರಾಜ್ಯ
ಸರ್ಕಾರ ತೆಂಗು ಆಧಾರಿತ ಹತ್ತಾರು ಉತ್ಪನ್ನಗಳನ್ನು ತಯಾರಿಸುವತ್ತ ಗಮನ ಹರಿಸಿ, ಅಭಿವೃದ್ಧಿಪಡಿಸಿ
ಅದನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಪರಿವರ್ತಿಸಿದೆ. ದುರದೃಷ್ಟಕರ ಸಂಗತಿ ಎಂದರೆ ಅಲ್ಲಿನ ಯುವಕರು
ತೆಂಗನ್ನು ತೆಗೆದು ಪಕ್ಕಕ್ಕಿಟ್ಟು, ಗ್ರಾಮಗಳಿಂದ ನಗರಗಳಿಗೆ, ನಗರಗಳಿಂದ ಹೊರದೇಶಗಳಿಗೆ ಕೆಲಸಗಳನ್ನರಿಸಿ
ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಅಲ್ಲಿ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕೆಲಸಕ್ಕೆ ಬೇಕಾಗುವ ‘ಗಂಡು’
ಕೂಲಿಕಾರರೇ ಸಿಗದಂತಹ ಪರಿಸ್ಥಿತಿ ಏರ್ಪಟ್ಟಿದೆ. ಇದರಿಂದ ಚಿಂತೆಗೀಡಾದ ಕೇರಳ ಸರ್ಕಾರ, ತೆಂಗಿನ ಮರ
ಹತ್ತುವ, ಕಾಯಿ ಕೀಳುವ ಕೆಲಸಕ್ಕೆ ಮಹಿಳೆಯರನ್ನು ನೇಮಿಸಿಕೊಳ್ಳುವತ್ತ ಗಮನ ಹರಿಸಿದೆ. ಮತ್ತು ಆ ಬಗ್ಗೆ
ಮಹಿಳೆಯರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಚಾಲನೆ ನೀಡಿ, ಯಶಸ್ವಿಯಾಗಿದೆ.
ಈ ತರಬೇತಿಯಲ್ಲಿ
ಪಾಲ್ಗೊಂಡ ರೀನಾ ಎಂಬ ಮಹಿಳೆ ಈಗ ಮರದಿಂದ ಕಾಯಿ ಕೀಳುವ ಕೆಲಸದಲ್ಲಿ ನಿಪುಣತೆ ಸಾಧಿಸಿ, ತನ್ನಂತಹ ಮತ್ತೊಂದಿಷ್ಟು
ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಹಾಗೆಯೇ ಎಳನೀರ ಅಂಗಡಿಯೊಂದನ್ನಿಟ್ಟು ದಿನಕ್ಕೆ ಐನೂರರಿಂದ ಸಾವಿರದವರೆಗೆ
ಸಂಪಾದಿಸುತ್ತ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ರೀನಾ ಕತೆಯನ್ನು ಓದುತ್ತಿದ್ದಂತೆ ನನಗೆ
ನಮ್ಮ ರಸ್ತೆಯ ಎಳನೀರು ಮಾರುವ ಮಂಗಮ್ಮನ ನೆನಪಾಯಿತು. ಮಾಸ್ತಿ ವೆಂಕೇಶ ಅಯ್ಯಂಗಾರರ ‘ಮೊಸರಿನ ಮಂಗಮ್ಮ’ನ
ಥರಾನೂ ಅನ್ನಿಸಿತು. ವಿದ್ಯಾಪೀಠ ಸರ್ಕಲ್‌ನಲ್ಲಿ, ರಸ್ತೆ ಬದಿಯಲ್ಲಿ ಎಳನೀರು ಮಾರುವ ಮಂಗಮ್ಮನ ಕೈಯಲ್ಲಿ
ಮಚ್ಚು ನೋಡಿದವರು, ಒಂದು ಕ್ಷಣ ಅವಾಕ್ಕಾಗದೆ ಇರಲಾರರು. ಯಾಕೆಂದರೆ, ಗಂಡಸರೆನ್ನಿಸಿಕೊಂಡವರ ಎಡಗೈನಲ್ಲಿ
ತಲೆಬುರುಡೆ ಗಾತ್ರದ ಎಳನೀರನ್ನು ಹಿಡಿದುಕೊಳ್ಳುವುದೇ ಕೊಂಚ ಕಷ್ಟದ ಕೆಲಸ. ಇನ್ನು ಅದನ್ನು ಮಹಿಳೆಯೊಬ್ಬಳು
ಹಿಡಿದುಕೊಂಡು ಬಲಗೈನಲ್ಲಿಡಿದ ಮಚ್ಚಿನಿಂದ ಮೂರೇ ಮೂರು ಏಟಿಗೆ, ಎಳನೀರಿನ ತಲೆ ತೆಗೆದು, ತುಳುಕುವ
ಎಳನೀರ ಬುರುಡೆಯನ್ನು ನಿಮ್ಮತ್ತ ನೀಡುವ ಮಂಗಮ್ಮನ ಶೈಲಿಗೆ ಎಂಥವರೂ ಒಂದು ಕ್ಷಣ ಬೆರಗಾಗದೇ ಇರಲಾರರು.
ಇಲ್ಲಿ
ಬೆರಗಾಗುವಂಥಾದ್ದು ಏನೂ ಇಲ್ಲ. ಯಾರೂ ಬೆಚ್ಚುವುದೂ ಇಲ್ಲ. ಆ ಕ್ಷಣಕ್ಕೆ ಮಂಗಮ್ಮನ ಎಳನೀರು ಹೊಡೆಯುವ
ವಿಧಾನಕ್ಕೆ ಬೆರಗಾದರೂ, ಬಾಯಿ ಬಿಡದೆ, ಸುಮ್ಮನೆ ಕುಡಿದು ಹೋಗುವವರೇ ಹೆಚ್ಚು. ಹಾಗೆಯೇ ಮರೆಯುವವರು
ಕೂಡ. ಆದರೆ ಅದೇ ಕೆಲಸವನ್ನು ನಾವು ಮಾಡಲು ಹೋದಾಗ ಮಂಗಮ್ಮನ ಎಳನೀರು ಹೊಡೆಯುವ ಕಷ್ಟದ ಅನುಭವ ಮತ್ತು
ಆಕೆಯ ವಿಶಿಷ್ಟ ಶೈಲಿಯ ಬಗ್ಗೆ ಅಭಿಮಾನ ಮೂಡದೆ ಇರದು. ಕಪ್ಪಗೆ ಗಟ್ಟಿಮುಟ್ಟಾಗಿರುವ ಮಂಗಮ್ಮನ ಊರು
ಬೆಂಗಳೂರಂತೂ ಅಲ್ಲ. ನಗರ ಜೀವನಕ್ಕೊಪ್ಪುವಂತೆ ಆಕೆ ಯಾವ ನಯ ನಾಜೂಕಿನ ಮಾತುಗಳನ್ನೂ ಆಡುವುದಿಲ್ಲ.
ಜಾಣತನವನ್ನೂ ಪ್ರದರ್ಶಿಸುವುದಿಲ್ಲ. ಎಲ್ಲ ನೇರಾ ನೇರ. ಒರಟು ಹೆಂಗಸಿನಂತೆ ಕಾಣುವ ಹಳ್ಳಿಯ ಮುಗ್ಧೆ.
ಯಾವುದೋ ಊರಿನಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿರುವ ಮಂಗಮ್ಮನದು ಪುಟ್ಟ ಸಂಸಾರ. ಗಂಡ, ಮನೆ, ಮಕ್ಕಳು
ಎಲ್ಲಾ ಉಂಟು. ಎಲ್ಲ ಹೆಂಗಸರು ಮಾಡುವ ದಿನನಿತ್ಯದ ಕೆಲಸಗಳನ್ನು ಮಂಗಮ್ಮನೂ ಮಾಡುವುದುಂಟು. ಮಕ್ಕಳಿಗೆ
ಮಾಡಿಟ್ಟು, ಅವರನ್ನು ಸ್ಕೂಲಿಗೆ ಕಳುಹಿಸಿಕೊಟ್ಟು, ಗಂಡನ ಎಳನೀರ ಅಂಗಡಿಯತ್ತ ಸೀದಾ ನಡೆದುಬಿಡುವ ಮಂಗಮ್ಮ,
ಗಂಡನ ವ್ಯಾಪಾರದಲ್ಲಿ ಸಹಕರಿಸುವ ನಿಜಾರ್ಥದ ಸಹಧರ್ಮಿಣಿ. ಎಳನೀರು ವ್ಯಾಪಾರದಲ್ಲಿ ಪಳಗಿರುವ ಮಂಗಮ್ಮ
ನಿಜಕ್ಕೂ ಧೈರ್ಯಸ್ಥೆ. ನೂರಾರು ಥರದ ಗಿರಾಕಿಗಳೊಂದಿಗೆ ವ್ಯವಹರಿಸುತ್ತ, ಬೆಂಗಳೂರಿನ ಬಿಸಿಲಿಗೆ ಬೆವತು
ಬಂದವರಿಗೆ ತಣ್ಣನೆ ಎಳನೀರು ಕುಡಿಸುತ್ತ ದಿನಕ್ಕೆ ಸಾವಿರಾರು ರೂಪಾಯಿಗಳ ವಹಿವಾಟು ನಡೆಸುವ ಮಂಗಮ್ಮ
ಯಾವ ಬಿಟಿ ಕ್ವೀನ್‌ಗೂ, ಸಾಫ್ಟ್ ವೇರ್ ಸಾಮ್ರಾಜ್ಞಿಗೂ ಕಡಿಮೆ ಇಲ್ಲ.
ಆದರೆ
ಆಕೆಯಲ್ಲಿ ಅಂಥ ಯಾವ ಅಹಂ ಕೂಡ ಇಲ್ಲ. ಪ್ರಚಾರಪ್ರಿಯೆಯಂತೂ ಅಲ್ಲವೇ ಅಲ್ಲ. ಮಾಧ್ಯಮಗಳು ಆಕೆಯನ್ನು
ಗುರುತಿಸಿ, ಹಾಡಿ ಹೊಗಳಿದ್ದೂ ಇಲ್ಲ. ಎಳನೀರು ಹೊಡೆಯುವುದು ತನ್ನ ದಿನನಿತ್ಯದ ಮನೆಗೆ ಕೆಲಸದಷ್ಟೇ
ಎಂದು ತಿಳಿದಿರುವ, ತನ್ನ ಗಂಡನಿಗೆ ನೆರವಾಗಬೇಕು ಎಂದಷ್ಟೇ ಗೊತ್ತಿರುವ ಮಂಗಮ್ಮನಿಗೆ ತನ್ನ ಕೆಲಸಕ್ಕೂ
ಒಂದು ವಿಶೇಷವಾದ ಮಹತ್ವವಿದೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದವರು. ಮಂಗಮ್ಮ ಎಳನೀರನ್ನು ಹೊಡೆಯುವುದರಲ್ಲಿ
ಎಷ್ಟರಮಟ್ಟಿಗೆ ಎಕ್ಸ್‌ಪರ್ಟ್ ಆಗಿದ್ದಾರೆಂದರೆ, ಮೂರೇಟಲ್ಲ, ಒಂದೇ ಏಟಿಗೆ ಎಳನೀರು ಹೊಡೆದು ಕೊಡಬಲ್ಲರು.
ಇದು ನುರಿತ ಎಳನೀರು ಹೊಡೆಯುವ ಗಂಡಸರಿಗೆ ಮಾತ್ರ ದಕ್ಕುವ ಮತ್ತು ಸಾಧ್ಯವಾಗುವ ವಿಧಾನ.
ಅದನ್ನವರು
ಅದೆಷ್ಟೋ ವರ್ಷಗಳಿಂದ ಎಳನೀರು ಹೊಡೆಯುತ್ತ ಹೊಡೆಯುತ್ತ ಕರಗತ ಮಾಡಿಕೊಂಡಿದ್ದಾರೆ. ಆ ಅನುಭವದ ಮೇಲೆ
ಲೀಲಾಜಾಲವಾಗಿ ಹೊಡೆದು ಕೊಡುತ್ತಾರೆ. ಹಾಗೆಯೇ ಎಳನೀರು ಮಾರುವುದರಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ.
ಮಂಗಮ್ಮನ ಗಂಡ ಎಳನೀರು ತರಲು ಊರೂರು ಅಲೆದಾಡುತ್ತಿದ್ದರೆ, ಈಕೆ ಇಲ್ಲಿ ದಿನಕ್ಕೆ ಐನೂರರಿಂದ ಆರುನೂರು
ಎಳನೀರು ಮಾರಾಟ ಮಾಡುತ್ತಿರುತ್ತಾರೆ.
ಈ ಬಗ್ಗೆ
ಕೇಳಿದರೆ, ಥೇಟ್ ಹಳ್ಳಿಯ ಹೆಂಗಸಿನಂತೆ ನಾಚಿ ನೀರಾಗುವ ಮಂಗಮ್ಮ, ‘ಎಲ್ಲ ಕೆಲ್ಸದಂಗೆ ಇದೂ ಒಂದ್ ಕೆಲ್ಸ,
ಅದರಲ್ಲೇನು ಪೆಷಲ್ಲು’ ಅನ್ನುತ್ತಾರೆ.
‘ಇದನ್ನು
ಹೇಗೆ ಕಲಿತಿರಿ’ ಅಂದರೆ, ‘ಮದ್ಮದ್ಲು ಇದು ಗಂಡಸ್ರು ಕೆಲ್ಸ ನನಗ್ಯಾಕೆ ಅಂದ್ಕಂಡೇ ಇದ್ದೆ, ಆಮೇಲಾಮೇಲೆ
ಅಂಗಡಿತಕ್ಕೆ ಬಂದು ಕೂತಿದ್ದಾಗ, ನಮ್ಮೆಜಮಾನ್ರು ಊಟಕ್ಕೋ, ಕೆಲ್ಸಕ್ಕೋ ಎಲ್ಲಾದ್ರು ಹೋಗಿದ್ದಾಗ, ಜನ
ಬಂದ್ ಎಳನೀರು ಕೇಳೋರು. ಜನ ಬಂದ್ ಕೇಳ್ವಾಗ್ ಸುಮ್ನೆ ನಿಲ್ಲಕಾಯ್ತದ್ರ, ಮಚ್ ತಗಂಡೆ ಕೊಚ್ದೆ ಕೊಟ್ಟೆ,
ಹಂಗೆ ರೂಢಿಯಾಯ್ತು...’ ಅಂದರು.
‘ದಿನಕ್ಕೆ
ಎಷ್ಟು ಎಳನೀರು ಹೊಡಿತೀರಿ, ಎಷ್ಟು ವ್ಯಾಪಾರ ಮಾಡ್ತೀರಿ’ ಅನ್ನುವ ನನ್ನ ಪ್ರಶ್ನೆಗೆ, ಅನುಮಾನಿಸುತ್ತಲೇ,
‘ಅಯ್ಯೋ ಅದ್ಯಾಕ್ಬುಡಿ, ಎಷ್ಟೋ ಆಯ್ತದೆ..’ ಅಂದು ತೇಲಿಸಿಬಿಟ್ಟರು.
ಬೆಂಗಳೂರಿನಲ್ಲಿ
ಇವತ್ತು ಎಳನೀರಿನ ವ್ಯಾಪಾರ ಜೋರಾಗಿದೆ. ಬಿಸಿಲಿನ ಝಳ ಏರಿದಂತೆ ಎಳನೀರಿನ ಬೇಡಿಕೆಯೂ ಏರುತ್ತಿದೆ.
ಒಂದು ಅಂದಾಜಿನ ಪ್ರಕಾರ, ದಿನವೊಂದಕ್ಕೆ ಬೆಂಗಳೂರಿಗೆ ನಾಲ್ಕರಿಂದ ಐದು ಲಕ್ಷ ಎಳನೀರಿನ ಬೇಡಿಕೆ ಇದೆಯಂತೆ.
ಮಂಗಮ್ಮನಂತಹ ವ್ಯಾಪಾರಸ್ಥರೇ ದಿನಕ್ಕೆ ಐನೂರರಿಂದ ಆರುನೂರು ಎಳನೀರು ಬುರುಡೆಗಳನ್ನು ಹೊಡೆದುರುಳಿಸುತ್ತಾರೆ.
ಭಾನುವಾರ ಅದು ಒಂದು ಸಾವಿರದ ಗಡಿಯನ್ನೂ ದಾಟುತ್ತದೆ.
ಹಾಗೆ
ನೋಡಿದರೆ ಈ ನಮ್ಮ ಮಂಗಮ್ಮನಿಗೆ ಸ್ವಂತಕ್ಕೊಂದು ಅಂಗಡಿ ಮಳಿಗೆಯೂ ಇಲ್ಲ. ತನ್ನ ಎಳನೀರು ಸಂಗ್ರಹಿಸಿಡಲು
ವ್ಯವಸ್ಥಿತವಾದ ಉಗ್ರಾಣವೂ ಇಲ್ಲ. ಭದ್ರತೆಯಂತೂ ಕೇಳುವ ಹಾಗೇ ಇಲ್ಲ. ಇಷ್ಟಾದರೂ ರಸ್ತೆ ಬದಿಯನ್ನೇ
ತನ್ನ ಮಳಿಗೆಯನ್ನಾಗಿಸಿಕೊಂಡಿರುವ ಮಂಗಮ್ಮ, ದಿನದ ವ್ಯಾಪಾರ ಮುಗಿಯುತ್ತಿದ್ದಂತೆ ಅದಕ್ಕೊಂದು ಗೋಣಿ
ತಾಟು ಮುಚ್ಚಿ, ಪಕ್ಕದ ತಂತಿಬೇಲಿಗೆ ಬಿಗಿಯಾಗಿ ಕಟ್ಟಿ, ನಿರಾಳವಾಗಿ ಮನೆಯತ್ತ ನಡೆದುಬಿಡುತ್ತಾರೆ.
ಜನರ ಮೇಲಿಟ್ಟ ನಂಬಿಕೆಯೇ ಲಾಕರ್ ಮತ್ತು ವಿಶ್ವಾಸವೇ ಬಿಗಿ ಬಂದೋಬಸ್ತ್. ಮಳೆ, ಚಳಿ, ಗಾಳಿಯ ಜೊತೆಗೆ
ಬೆಂಗಳೂರಿಗೇ ಬೆವರಿಳಿಸುತ್ತಿರುವ ಟ್ರಾಫಿಕ್‌ನಂತಹ ಹಿಂಸೆಯ ನಡುವೆ ಆಗಾಗ ದಿಢೀರೆಂದು ಎದುರಾಗುವ ವಸೂಲಿವೀರರು,
ಪೊಲೀಸರನ್ನೂ ಸಂಬಾಳಿಸಬೇಕಾದಂತಹ ಪರಿಸ್ಥಿತಿ.
ಇಂತಹ ಅಭದ್ರ ಅಸ್ಥಿರ ಸ್ಥಿತಿಯಲ್ಲಿಯೇ
ಅದೆಷ್ಟೋ ವರ್ಷಗಳಿಂದ ವ್ಯಾಪಾರ ಮಾಡಿಕೊಂಡೆ ಬದುಕು ಸಾಗಿಸುತ್ತಿರುವ ಮಂಗಮ್ಮ ನಿಜಕ್ಕೂ ಧೈರ್ಯಸ್ಥೆ.
ಬದುಕಿನ ಅತಂತ್ರ ಸ್ಥಿತಿಯನ್ನೇ ಸ್ವತಂತ್ರ ಬದುಕಿನ ಬುನಾದಿಯನ್ನಾಗಿಸಿಕೊಂಡ ದಿಟ್ಟೆ. ಕೊಚ್ಚುವ ಕೆಲಸದಲ್ಲೇ
ಖುಷಿ ಕಂಡುಕೊಂಡ, ಬರುವ ಅಷ್ಟು ಇಷ್ಟು ಹಣದಲ್ಲೇ ಆತ್ಮವಿಶ್ವಾಸ ಆತುಕೊಂಡ ಮಂಗಮ್ಮ; ನಾಡಿನ ಮಹಿಳೆಯರಿಗೆ
ಸಂಕೇತ, ಮಾದರಿ ಎಂದು ಅಂದುಕೊಳ್ಳದ, ಆ ಪದಗಳ ಅರ್ಥಗಳೂ ಗೊತ್ತಿಲ್ಲದ... ಸಹಜ ಸರಳ ಸಾಮಾನ್ಯ ಮಹಿಳೆ.
No comments:
Post a Comment