Monday, March 24, 2014

ನೀಟ್ ಅಂಡ್ ಥಾಟ್- ಯಶವಂತ ಚಿತ್ತಾಲ

ಆಗಸ್ಟ್ ಮೂರು ಸಾವಿರದ ಒಂಬೈನೂರ ಇಪ್ಪತ್ತೆಂಟರಂದು ಹುಟ್ಟಿದ ಯಶವಂತ ಚಿತ್ತಾಲರೀಗ ಹಣ್ಣಾಗಿದ್ದಾರೆ, ಮಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತಾಲೂಕಿನ ಹನೇಹಳ್ಳಿಯ ಬಾಲ್ಯವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಲೇ ಇದ್ದಾರೆ. ಆಶ್ಚರ್ಯವೆಂದರೆ, ಚಿತ್ತಾಲರ ಮನೆ ಮಾತು ಕೊಂಕಣಿ. ಕುಮಟಾ, ಕಾರವಾರ, ಧಾರವಾಡ, ಮುಂಬೈ, ನ್ಯೂಜರ್ಸಿಗಳಲ್ಲಿ ಓದಿದ್ದು ಇಂಗ್ಲಿಷಿನಲ್ಲಿ. ಆದರೆ ಊರಿನ ನೆನಪು, ಬೀದಿಯಲ್ಲಿ ಆಡಿ ಬೆಳೆವಾಗ ಕಲಿತ ಕನ್ನಡ ಭಾಷೆ ಮೈ ಮನವನ್ನೆಲ್ಲ ಆವರಿಸಿದೆ. ಕತೆ, ಕಾದಂಬರಿಗಳಲ್ಲೆಲ್ಲ ತುಂಬಿಕೊಂಡಿದೆ. ಚಿಕ್ಕಂದಿನಲ್ಲಿ ಕಂಡುಂಡ ಸಾವು, ನೋವು, ನಲಿವು, ನಿರಾಸೆಗಳು ಈಗಲೂ ಬರವಣಿಗೆಯಲ್ಲಿ ಬೆಳಕು ಕಾಣುತ್ತಲೇ ಇವೆ.
ಚಿತ್ತಾಲರು ಚಿಕ್ಕವರಿದ್ದಾಗ ಚಿತ್ರಕಲೆಯ ಬಗ್ಗೆ ಬೆರಗುಗೊಂಡು, ಅದನ್ನೇ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಮುಂಬೈಗೆ ಹೋದವರು. ಆದರೆ ಅಲ್ಲಿ ಎಂ.ಎನ್.ರಾಯ್ರವರ ಪ್ರಭಾವಕ್ಕೊಳಗಾಗಿ ಸಾಹಿತ್ಯದ ಸೆಳೆತಕ್ಕೆ ಸಿಕ್ಕಿ ಬದುಕಿನ ದಿಕ್ಕನ್ನೇ ಬದಲಿಸಿಕೊಂಡರು. ವಿಜ್ಞಾನದ ವಿದ್ಯಾರ್ಥಿಯಾಗಿ, ತಂತ್ರಜ್ಞಾನದ ಪರಿಣಿತನಾಗಿ, ಪದವಿಯಲ್ಲಿ ಸುವರ್ಣ ಪದಕ ಪಡೆದು ಪ್ರತಿಷ್ಠಿತ ಕಂಪನಿಯಲ್ಲಿ ಅತ್ಯುನ್ನತ ಹುದ್ದೆಗೇರಿ ನೆಮ್ಮದಿಯ ಬದುಕನ್ನು ಬದುಕುತ್ತಿದ್ದರೂ, ಮನಸ್ಸು ಮಾತ್ರ ಸಾಹಿತ್ಯದ ಭಾವ ಪ್ರಪಂಚದಲ್ಲಿ ವಿಹರಿಸುತ್ತಿತ್ತು.
ಹನೇಹಳ್ಳಿ ಅವರ ಮಟ್ಟಿಗೆ ಅದೊಂದು ನೆಲದ ಹೆಸರಲ್ಲ, ಅವರ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾಗಿ ಜೀವಸೆಲೆಯಾದದ್ದು. ಹಾಗಾಗಿಯೇ ಅವರ ಕತೆ-ಕಾದಂಬರಿಗಳ ಪಾತ್ರಗಳಲ್ಲಿ ಹನೇನಳ್ಳಿ ಹಾಸುಹೊಕ್ಕಾಗಿದೆ. ಅವರು ಕಂಡ ಅಂದಿನ ಹನೇನಳ್ಳಿಯ ಭೂತವನ್ನು ವರ್ತಮಾನದೊಂದಿಗೆ ಥಳಕು ಹಾಕುತ್ತ, ಅದನ್ನು ಮಾನವನ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ ಪರಿವರ್ತಿಸುವಲ್ಲಿ ಚಿತ್ತಾಲರು ಯಶಸ್ವಿಯೂ ಆಗಿದ್ದಾರೆ.
ಚಿತ್ತಾಲರು ಒಂದು ಕಡೆ, ‘ನಾನು ಸಾಹಿತ್ಯಲೋಕಕ್ಕೆ ಬರಲು ಪ್ರೇರಣೆ ಅಣ್ಣ ಗಂಗಾಧರ ಚಿತ್ತಾಲ, ಶಾಂತಿನಾಥ ದೇಸಾಯಿ ಮತ್ತು ಗೌರೀಶ ಕಾಯ್ಕಿಣಿಯವರೆ. ಅವರ ಪ್ರಭಾವ ನನ್ನ ಮೇಲೆ ಬಹಳವಿದೆಎಂದಿದ್ದಾರೆ. ಹಾಗೆ ನೋಡಿದರೆಬೊಮ್ಮಿಯ ಹುಲ್ಲು ಹೊರೆಚಿತ್ತಾಲರ ಮೊದಲ ಕತೆ. ದಿನಕರ ದೇಸಾಯಿಯವರು ಸಂಪಾದಿಸುತ್ತಿದ್ದಜನಸೇವಕಪತ್ರಿಕೆಯಲ್ಲಿ ಪ್ರಕಟವಾದ ಕತೆ ಅವರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸಿತು. ಅಲ್ಲಿಂದ ಒಂದಾದ ಮೇಲೊಂದರಂತೆ, ಏಳು ಕಥಾ ಸಂಕಲನಗಳನ್ನು, ಐದು ಕಾದಂಬರಿಗಳನ್ನು, ಪ್ರಬಂಧ ಸಾಹಿತ್ಯವನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡುತ್ತಲೇ ಬಂದವರು. ಬರೆದು ಬೇಸರಗೊಂಡಾಗ ಕವಿತೆಯ ಬಂಧವಿರುವ, ಕಾವ್ಯದ ಗಂಧವಿಲ್ಲದಲಬಸಾಗಳನ್ನೂ ಬರೆದು ಮನಸ್ಸಿಗೆ, ಬರವಣಿಗೆಗೆ ಹೊಸ ಚೈತನ್ಯವನ್ನು ತಮಗೆ ತಾವೇ ತಂದುಕೊಂಡವರು.
ಸಣ್ಣಕತೆಗೆ, ಕನ್ನಡ ಗದ್ಯಕ್ಕೆ ಹೊಸ ಆಯಾಮ ತಂದುಕೊಟ್ಟ ಚಿತ್ತಾಲರು ಕನ್ನಡದ ಶ್ರೇಷ್ಠ ಕತೆಗಾರರಲ್ಲೊಬ್ಬರು. ವಿಮರ್ಶಕ ಜಿ.ಎಸ್. ಆಮೂರರ ಪ್ರಕಾರಶಿಕಾರಿಕಾದಂಬರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲೊಂದು. ಕನ್ನಡನಾಡಿನಿಂದ ದೂರವಿದ್ದು, ಸೆಮಿನಾರು-ಪ್ರಶಸ್ತಿ-ಪ್ರಚಾರಗಳಿಂದ ದೂರವೇ ಉಳಿದು, ದೂರದ ಮುಂಬೈನಲ್ಲಿ ಕಡಲಿನಂತೆ ಆಗಾಗ ಬರವಣಿಗೆಯ ಮೂಲಕ ಭೋರ್ಗರೆದವರು. ಕನ್ನಡ ಕಥಾಲೋಕವನ್ನು ವಿಸ್ತರಿಸಿದವರು. ಕನ್ನಡ ಓದುಗ ವಲಯಕ್ಕೆ ನಿರಂತರವಾಗಿ ಬರವಣಿಗೆಯ ಭೋಜನವನ್ನು ಬಡಿಸುತ್ತಲೇ ಬಂದವರು. ತಾವಾಯಿತು ತಮ್ಮ ಶಿಸ್ತುಬದ್ಧ ಬದುಕು ಮತ್ತು ಸಾಹಿತ್ಯ ಕೃಷಿಯಾಯಿತು ಎಂದು ತಣ್ಣಗಿರುವವರು. ಬೆಂಗಳೂರಿನ ಸಾಹಿತಿಗಳ ಗುಂಪುಗಳಿಂದ ಬಹಳ ದೂರವೇ ಉಳಿದವರು.
ಚಿತ್ತಾಲರ ಕಥೆ ಕಟ್ಟುವ ಕಲೆಯೇ ಅದ್ಭುತವಾದುದು. ಮನುಷ್ಯ ಸೂಕ್ಷ್ಮಗಳನ್ನು ಅರಿಯುವ, ಮನದೊಳಗಿನ ತುಮುಲಗಳನ್ನು ಅಕ್ಷರಕ್ಕಿಳಿಸುವ, ಧ್ಯಾನಿಸುವ ಚಿತ್ತಾಲರ ಕಥನ ತಂತ್ರದ ಅದ್ಭುತವಿರುವುದೇ ಅವರ ವಸ್ತುವಿನ ಆಯ್ಕೆಯಲ್ಲಿ. ದೂರದ ಊರುಗಳಿಗೆ ಪ್ರಯಾಣಿಸುವಾಗ, ಕಾರ್ಪೊರೇಟ್ ಜಗತ್ತಿನ ಸಂದರ್ಭವನ್ನು ಗ್ರಹಿಸಿ ಬರೆದಶಿಕಾರಿ ವಸ್ತು ಇದಕ್ಕೊಂದು ಉತ್ತಮ ಉದಾಹರಣೆ. ಕಥನ ಕಲೆಯ ಬಗ್ಗೆ ಒಲವಿರುವ, ತಿಳಿಯಬೇಕೆಂಬ ತವಕವಿರುವ ಹೊಸ ತಲೆಮಾರಿನ ಬರಹಗಾರರು ಬಿಡದೆ ಓದಬೇಕಾದ ಲೇಖಕ ಚಿತ್ತಾಲರು.
೫೦ ರ್ಷಗಳ ಕಾಲ ಬರವಣಿಗೆಯ ಕೃಷಿ ಮಾಡಿರುವ ಚಿತ್ತಾಲರಿಗೆ ಸಲ್ಲಬೇಕಾದ ಪ್ರತಿಷ್ಠಿತ ಪ್ರಶಸ್ತಿಗಳೆಲ್ಲ ಸಂದಿವೆ. ಅವರಶಿಕಾರಿಕಾದಂಬರಿ ಮರಾಠಿಗೆ ಅನುವಾದಗೊಂಡಿದೆ. ಅವರ ಆಯ್ದ ಕತೆಗಳನ್ನು ಪದ್ಮಾ ಶರ್ಮ ಮತ್ತು ರಾಮಚಂದ್ರ ಶರ್ಮರು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಅವರ ಜನಪ್ರಿಯ ಕಥಾ ಸಂಕಲನಕತೆಯಾದಳು ಹುಡುಗಿಕೊಂಕಣಿ, ತೆಲುಗು, ತಮಿಳಿಗೆ ಅನುವಾದಗೊಂಡಿದೆ.
ನಾವು ಮನುಷ್ಯರಾಗಿ ಹುಟ್ಟಿದವರಲ್ಲ, ಮನುಷ್ಯರಾಗಲು ಹುಟ್ಟಿದವರು ಎನ್ನುವ ಪ್ರಜ್ಞೆ ಇದ್ದವರಿಗೆ ಸಾಹಿತ್ಯ ಬಹಳಷ್ಟನ್ನು ಕೊಡಬಲ್ಲದುಎನ್ನುವ ಯಶವಂತ ಚಿತ್ತಾಲರು ಕನ್ನಡಕ್ಕೆ ಸಾಕಷ್ಟು ಕೊಟ್ಟಿದ್ದಾರೆ, ಕನ್ನಡದಿಂದ ಮನುಷ್ಯರಾಗಿದ್ದಾರೆ. ತುಂಬು ಜೀವನವನ್ನು ತುಂಬಿದ ಕೊಡದಂತೆ ಅನುಭವಿಸಿದ್ದಾರೆ. ಇಂತಹ ಅಪರೂಪದ ಅಪ್ಪಟ ಪ್ರತಿಭಾವಂತ ಚಿತ್ತಾಲರು ಇರಲಿ ಇನ್ನಷ್ಟು ದಿನ ನಮ್ಮ ನಡುವೆ...
***
ಮೇಲಿನ ಬರೆಹವನ್ನು ನಾನುವಿಕ್ರಾಂತ ಕರ್ನಾಟಕವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದಾಗ ಬರೆದದ್ದು. ೨೦೦೯ ರಲ್ಲಿ. ‘ಪರಿಚಯಎಂಬ ಕಾಲಂನಡಿ ವಾರಕ್ಕೊಬ್ಬ ಸಾಹಿತಿಯ ಬಗ್ಗೆ ಪುಟ್ಟ ಪರಿಚಯ ಮತ್ತು ಒಂದು ಪೇಜಿನ ದೊಡ್ಡ ಫೋಟೋ ಪ್ರಕಟಿಸುತ್ತಿದ್ದೆವು. ಅದು ಪ್ರಕಟವಾದ ಮೇಲೆ, ವಿಕ್ರಾಂತ ಕರ್ನಾಟಕದ ಸಂಚಿಕೆಯನ್ನು ಅವರಿಗೆ ಕಳುಹಿಸಿಕೊಡಬೇಕೆನ್ನಿಸಿತು. ಚಿತ್ತಾಲರನ್ನು ಬಹಳ ಹತ್ತಿರದಿಂದ ಬಲ್ಲವರು ಮತ್ತು ಬೆಂಗಳೂರಿಗೆ ಬಂದ ನಂತರವೂ ಅವರ ಸಂಪರ್ಕವನ್ನಿಟ್ಟುಕೊಂಡವರು ನಮ್ಮುಮಾ ರಾವ್ ಮತ್ತು ಜಯಂತ್ ಕಾಯ್ಕಿಣಿಯವರು. ಉಮಾ ರಾವ್ಗೆ ಫೋನ್ ಮಾಡಿ ವಿಳಾಸ ಪಡೆದು ಎರಡು ಸಂಚಿಕೆಗಳನ್ನು ಪೋಸ್ಟ್ ಮಾಡಿದೆ. ಮರೆತೆ. 
ಒಂದು ದಿನ ಪತ್ರಿಕೆಯ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಮೊಬೈಲ್ ರಿಂಗಾಯಿತು. ‘ಬಸುರಾಜು ಅವರಹೌದು ಅಂದೆ
ನಾನು ಯಾರು ಅಂತ ಗೊತ್ತಾಯಿತಾ?’ ಎಂದರು. ನೆನಪಿನಾಳಕ್ಕೆ ಇಳಿಯುವುದಕ್ಕೆ ಸಮಯವಿರಲಿಲ್ಲ. ನಂಬರ್ ಕೂಡ ಗಮನಿಸಿರಲಿಲ್ಲ. ಹಾಗಾಗಿ ಇಲ್ಲ, ಕ್ಷಮಿಸಿ ಎಂದೆ
`ನಾನಪ್ಪ ಚಿತ್ತಾಲ, ಮುಂಬೈನಿಂದಎಂದರು. ನನಗೆ ಮಾತೇ ನಿಂತುಹೋಯಿತು. ನನ್ನ ಕಿವಿಯನ್ನು ನಾನೇ ನಂಬದಾದೆ
ಅವರೇ ಮುಂದುವರೆಸಿ, ‘ನೀನು ಕಳುಹಿಸಿಕೊಟ್ಟ ವಿಕ್ರಾಂತ ಕರ್ನಾಟಕ ಬಂತು. ಪತ್ರಿಕೆ ಚೆನ್ನಾಗಿದೆಯಪ್ಪ. ನನ್ನ ಬಗ್ಗೆ ಚೆನ್ನಾಗಿ ಬರೆದಿದ್ದೀರಾ ಥ್ಯಾಂಕ್ಸ್ಎಂದರು. ಅವರು ಅಷ್ಟೆಲ್ಲ ಮಾತನಾಡಿದರೂ ನಾನು ಸುಮ್ಮನೇ ಇದ್ದೆ.  
ಅವರೆ, ‘ನನಗೆ ನಿಮ್ಮ ಬರವಣಿಗೆ ಇಷ್ಟವಾಯ್ತು. ಆದರೆ ಇಷ್ಟು ದಿನ ಯಾಕೆ ತಡವಾಯಿತು?’ ಎಂದರು. ಅದಕ್ಕೂ ನಾನು ಮಾತಾಡಲಿಲ್ಲ. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದರಲ್ಲಷ್ಟೇ ಒಂಥರದ ಹೇಳಿಕೊಳ್ಳಲಾಗದ ಖುಷಿ ಇತ್ತು
ಸರಿ, ಸಿಗೋಣಎಂದು ಫೋನ್ ಇಟ್ಟರು.
ಯಾವತ್ತೂ, ಯಾವುದನ್ನೂ ಟಿಪ್ಪಣಿ ಮಾಡಿಡದ ನಾನು ಅವತ್ತು ಹೋಗಿ ಡೈರಿಯಲ್ಲಿ ದಿನಾಂಕ (೩೧..೨೦೦೯) ಮತ್ತು ಸಂಭಾಷಣೆಯನ್ನು ರಫ್ ಆಗಿ ಬರೆದಿಟ್ಟೆ.
ಅವರಿಲ್ಲದ ಹೊತ್ತಿನಲ್ಲಿ ಅದನ್ನು ನೋಡುತ್ತ, ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ...

No comments:

Post a Comment