ವಿವಾದ ಮತ್ತು ತಂತ್ರಗಾರಿಕೆಗೆ ಹೆಸರಾದ ಐವತ್ತರ ಹರೆಯದ ಅಮಿತ್ ಶಾರನ್ನು ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಬಳಿಕ ತೆರವಾದ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಜೆ.ಪಿ.ನಡ್ಡಾ, ಓಂ ಮಾಥುರ್ ಹಾಗೂ ಅಮಿತ್ ಶಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಪ್ತ ಅಮಿತ್ ಶಾ ಅವರ ಹೆಸರು ಮುಂಚೂಣಿಯಲ್ಲಿದ್ದರಿಂದ; ಬಿಜೆಪಿಯ ರಾಷ್ಟ್ರೀಯ ನಾಯಕರಾದ ಸುಷ್ಮಾ ಸ್ವರಾಜ್, ಎಲ್.ಕೆ. ಅಡ್ವಾಣಿಯಂತಹ ಸೌಮ್ಯ ಸ್ವಭಾವದವರೂ ಒಪ್ಪಿದ್ದರಿಂದ ಮತ್ತು ಇಂತಹ ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆರೆಸ್ಸೆಸ್ ನಾಯಕರು ಕೂಡ ಅಮಿತ್ ಶಾರ ಹೆಸರನ್ನೇ ಸೂಚಿಸಿದ್ದರಿಂದ, ಶಾ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಒಟ್ಟಿನಲ್ಲಿ ಒಂದು ಪಕ್ಷ ಕಟ್ಟುವಲ್ಲಿ, ಮುನ್ನಡೆಸುವಲ್ಲಿ ಬೇಕಾಗಿದ್ದ ಮಾನದಂಡಗಳಾದ ಹಿರಿತನ, ಅನುಭವ, ಯೋಗ್ಯತೆ, ಅರ್ಹತೆ, ನಾಯಕತ್ವ, ವಾಕ್ಚಾತುರ್ಯಗಳೆಂಬ ಗುಣಗಳು ಗೌಣವಾಗಿವೆ. ಆ ಜಾಗವನ್ನು ವಿವಾದ, ತಂತ್ರಗಾರಿಕೆ, ನಿರ್ವಹಣೆ, ನಿಭಾವಣೆ, ಭಂಡತನ, ಕಿಲಾಡಿತನಗಳು ಆಕ್ರಮಿಸಿಕೊಂಡಿವೆ. ಅದು ಅಮಿತ್ ಶಾ ಅವರ ಆಯ್ಕೆಯಲ್ಲಿ ಎದ್ದು ಕಾಣುತ್ತಿವೆ. ಇದು ಭಾರತದ ರಾಜಕಾರಣದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಒಬ್ಬ ವ್ಯಕ್ತಿ ಹೀಗೂ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬರಬಹುದು, ಒಂದು ರಾಷ್ಟ್ರೀಯ ಪಕ್ಷದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಬಹುದು ಎಂಬುದನ್ನು ಸಾಬೀತುಪಡಿಸಿದ ಕೀರ್ತಿ ಅಮಿತ್ ಶಾಗೆ ಸಲ್ಲಲೇಬೇಕು.
ಐವತ್ತರ ಹರೆಯದ ಅಮಿತ್ ಭಾಯಿ ಅನಿಲ್‌ಚಂದ್ರ ಶಾ ಹುಟ್ಟಿದ್ದು ಮುಂಬೈನ ಶ್ರೀಮಂತ ಜೈನ ಕುಟುಂಬದಲ್ಲಿ. ತಂದೆ ಅನಿಲ್ ಚಂದ್ ಶಾ ಪಿವಿಸಿ ಪೈಪ್ ವ್ಯಾಪಾರಸ್ಥ. ಯಶಸ್ವಿ ಉದ್ಯಮಪತಿ. ಇವರ ಮಗನಾದ ಅಮಿತ್ ಜೀವ ರಸಾಯನ ಶಾಸ್ತ್ರ ಪದವೀಧರರು. ಶೇರು ದಳ್ಳಾಳಿಯಾಗಿ, ಗುಜರಾತ್‌ನ ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದವರು.
ಚಿಕ್ಕಂದಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದೊಂದಿಗೆ ಗುರುತಿಸಿಕೊಂಡಿದ್ದ ಅಮಿತ್ ಶಾ ಸ್ವಯಂಸೇವಕರಾಗಿದ್ದರು. ಕಾಲೇಜು ದಿನಗಳಲ್ಲಿ ಎಬಿವಿಪಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. 1982ರಲ್ಲಿ ಮೊದಲ ಬಾರಿಗೆ ಮೋದಿಯನ್ನು ಭೇಟಿ ಮಾಡಿದ್ದು ಕೂಡ ಆರೆಸ್ಸೆಸ್ ಅಂಗಳದಲ್ಲಿಯೇ. ಆ ಸಂದರ್ಭದಲ್ಲಿ ಮೋದಿ ಆರೆಸ್ಸೆಸ್‌ನ ಪ್ರಚಾರಕರಾಗಿ ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದರು. ಆಗಿನಿಂದಲೇ ನರೇಂದ್ರ ಮೋದಿಯವರ ಸಂಪರ್ಕಕ್ಕೆ ಬಂದು, 1986ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. 1997 ರಲ್ಲಿ ಸರ್ಖೇಜ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ, ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡ ಅಮಿತ್ ಶಾ ಸತತವಾಗಿ ನಾಲ್ಕು ಬಾರಿ ಗೆದ್ದು ದಾಖಲೆ ನಿರ್ಮಿಸಿದರು.
ಆದರೆ ಇವರ ರಾಜಕೀಯ ಬದುಕಿನ ಭವ್ಯ ಭವಿಷ್ಯ ರೂಪುಗೊಂಡಿದ್ದು, ಅದು ಇಡೀ ದೇಶಕ್ಕೆ ಮತ್ತು ಪ್ರಪಂಚಕ್ಕೆ ಪರಿಚಯವಾಗಿದ್ದು 2002 ರ ಗುಜರಾತ್ ನರಮೇಧದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ 10 ಖಾತೆಗಳನ್ನು ನಿರ್ವಹಿಸುವ ಸಚಿವನನ್ನಾಗಿ ಮಾಡಲಾಯಿತು. ಗೃಹಮಂತ್ರಿ ಅಮಿತ್ ಶಾ 2002 ರಲ್ಲಿ ನಡೆದ ಗುಜರಾತ್ ನರಮೇಧದಲ್ಲಿ ಅದರಲ್ಲೂ ಸೋಹ್ರಾಬುದ್ದೀನ್, ಇಶ್ರತ್ ಜಹಾನ್, ಹರೇನ್ ಪಾಂಡ್ಯರ ನಕಲಿ ಎನ್‌ಕೌಂಟರ್ ಪ್ರಕರಣ ಹಾಗೂ ರಾಜ್ಯ ಪೊಲೀಸರಿಗೆ ಆದೇಶ ನೀಡಿ ಹಲವಾರು ಜನರನ್ನು ಕೊಲ್ಲಿಸಲು ಕಾರಣರಾದರೆಂಬ ಆಪಾದನೆಗೆ ಗುರಿಯಾಗಬೇಕಾಯಿತು. ಹಲವಾರು ಕೇಸುಗಳು ಮೈ ಮೆತ್ತಿಕೊಂಡವು. ಅಷ್ಟೇ ಅಲ್ಲ ಸಿಬಿಐ ತನಿಖೆ ಕೈಗೆತ್ತಿಕೊಂಡು ಅಮಿತ್ ಶಾರನ್ನು ಮುಖ್ಯ ಆರೋಪಿಯನ್ನಾಗಿಸಿ ಜುಲೈ 25, 2010ರಂದು ಬಂಧಿಸಿ, ಮೂರು ತಿಂಗಳ ಕಾಲ ಜೈಲಿಗೂ ಅಟ್ಟಿತ್ತು.
2010ರಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗುಜರಾತ್ ಬಿಟ್ಟ ಅಮಿತ್ ಶಾ ಮತ್ತೆ ಮರಳಿದ್ದು 2012ರಲ್ಲಿ, ಗುಜರಾತ್ ಹೈಕೋರ್ಟ್ ಜಾಮೀನು ನೀಡಿದ ಮೇಲೆ. 2012ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲ್ಲುವ ಮೂಲಕ ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸಿಬಿಟ್ಟರು. ಇಲ್ಲಿಂದ ಅಮಿತ್ ಶಾರ ಹೊಸ ರಾಜಕಾರಣ, ಅಂದರೆ ಈ ದೇಶದ ಜನತೆ ಇಲ್ಲಿಯವರೆಗೆ ಕಂಡ, ಕೇಳಿದ ರಾಜಕಾರಣಕ್ಕಿಂತ ಭಿನ್ನವಾದ ಕುಟಿಲ ತಂತ್ರಗಾರಿಕೆಯ ರಾಜಕಾರಣ ಚಾಲ್ತಿಗೆ ಬಂತು.
ಹೊಸ ರಾಜಕಾರಣದ ಮುಂದಾಳತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡರೆ, ಅವರ ಹಿಂದಿನ ಚಾಲಕ ಶಕ್ತಿಯಾಗಿ ಅಮಿತ್ ಶಾ ನಿಯೋಜಿತಗೊಂಡರು. ಆಕರ್ಷಕ ವಾಗ್ಮಿಯಲ್ಲದ ಶಾ, ತಂತ್ರಗಳನ್ನು ಹೆಣೆಯುವುದರಲ್ಲಿ ನುರಿತ ಕಲಾವಿದರು. ಅಡ್ವಾಣಿ, ವಾಜಪೇಯಿಯವರ ಕಾಲದ ಚುನಾವಣಾ ಪ್ರಚಾರವನ್ನು ಯಶಸ್ವಿಯಾಗಿ ನಿರ್ವಹಿಸಿದ ಶಾ, ನರೇಂದ್ರಮೋದಿಯವರ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಮೇರುಸ್ಥಾನಕ್ಕೆ ಕೊಂಡೊಯ್ದರು. ಮೋದಿಯವರನ್ನು ಬನಾರಸ್‌ನಿಂದ ಸ್ಪರ್ಧಿಸಲು ಅಣಿ ಮಾಡಿ, ಅನಾದಿಕಾಲದಿಂದ ಹಿಂದೂಗಳ ಪವಿತ್ರ ಕ್ಷೇತ್ರವಾದ ಕಾಶಿಯಲ್ಲಿ ಗಂಗಾರತಿಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಧರ್ಮಾಧಾರಿತ ರಾಜಕಾರಣವನ್ನು ಚಾಲ್ತಿಗೆ ತಂದರು.
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಮತ್ತು ಶಾ- ಇವರಿಬ್ಬರು ಬಹಳ ಮಹತ್ವದ ಪಾತ್ರ ವಹಿಸಿದರು. ಬಿಜೆಪಿಯ ಹಿರಿಯ ನಾಯಕರನ್ನೇ ಮೂಲೆಗುಂಪು ಮಾಡಿದರು. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂದರು. ಅದನ್ನೇ ಅಲೆಯಾಗಿ ಪರಿವರ್ತಿಸಿದರು. ಅದಕ್ಕೆ ಸುದ್ದಿಮಾಧ್ಯಮಗಳನ್ನು ಬಳಸಿಕೊಂಡರು. ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞರ ಸಹಕಾರದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಮಂಕುಬೂದಿ ಎರಚಿದರು. ಶ್ರೀಮಂತ ಉದ್ಯಮಪತಿಗಳಿಂದ ಹಣ ಹರಿಸಿ ಚುನಾವಣಾ ರೀತಿ-ನೀತಿಯನ್ನೇ ಬುಡಮೇಲು ಮಾಡಿದರು.
ಅದರಲ್ಲೂ ದೇಶದ ರಾಜಕಾರಣದ ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿ ಇರುವ, ಅಧಿಕ ಲೋಕಸಭಾ ಸಂಖ್ಯಾಬಲ ಹೊಂದಿರುವ ಉತ್ತರ ಪ್ರದೇಶದ ಉಸ್ತುವಾರಿಯನ್ನು ಮೋದಿ, ಅಮಿತ್ ಶಾ ಹೆಗಲಿಗೆ ಹಾಕಿದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದರೂ, ವಿರೋಧ ಪಕ್ಷದ ಸ್ಥಾನದಲ್ಲಿ ಬಿಎಸ್ಪಿಯ ಮಾಯಾವತಿ ಮತ್ತು ಕಾಂಗ್ರೆಸ್ ಪಕ್ಷಗಳಿದ್ದರೂ, ಅವುಗಳ ನಡುವೆಯೇ ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಚಾಣಕ್ಯನೆನಿಸಿಕೊಂಡಿದ್ದ ಅಮಿತ್ ಶಾ, ಉತ್ತರ ಪ್ರದೇಶದಲ್ಲಿ ಕೋಮುಗಲಭೆ ಮತ್ತು ಅರಾಜಕತೆ ಸೃಷ್ಟಿಸಿ ನಿರೀಕ್ಷೆಗೂ ಮೀರಿ, 80 ಲೋಕಸಭಾ ಸೀಟಿನಲ್ಲಿ ಬಿಜೆಪಿ ಪಕ್ಷ 71 ಸ್ಥಾನಗಳನ್ನು ಗಳಿಸುವ ಮೂಲಕ ದೇಶದ ರಾಜಕಾರಣದ ದಿಕ್ಕು ದೆಸೆಯನ್ನೇ ಬದಲಿಸಿಬಿಟ್ಟರು.
ಅಧಿಕಾರದಿಂದ ಹತ್ತು ವರ್ಷಗಳ ಕಾಲ ದೂರವೇ ಉಳಿದಿದ್ದ ಬಿಜೆಪಿ, ಮೋದಿ ಪ್ರಧಾನಿಯಾಗಿದ್ದು, ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಅಮಿತ್ ಶಾರಿಂದ ಎಂದು ಹಾಡಿ ಹೊಗಳಿತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಗೆ ಪಕ್ಷದ ಉಸ್ತುವಾರಿ ವಹಿಸಿಕೊಟ್ಟು, ಅಧ್ಯಕ್ಷ ಪಟ್ಟ ಕಟ್ಟುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿತು. ಮುಂಬರುವ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಪಕ್ಷ ಶಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಈಗ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗುಜರಾತ್ ನರಮೇದಕ್ಕೆ ಕಾರಣರಾದ ವ್ಯಕ್ತಿಯೇ ಈ ದೇಶದ ಪ್ರಧಾನಮಂತ್ರಿಯಾಗಿ ವಿಜೃಂಭಿಸುತ್ತಿರುವಾಗ, ಮೋದಿಯ ಮೂಗಿನ ಕೆಳಗೆ ಕೆಲಸ ಮಾಡಿದ ವ್ಯಕ್ತಿ ಆ ಪಕ್ಷದ ಅಧ್ಯಕ್ಷನಾಗುವುದು ಅಂತಹ ಸೋಜಿಗದ ಸಂಗತಿಯೇನಲ್ಲ.
ಒಟ್ಟಿನಲ್ಲಿ ಗುಜರಾತ್ ರಾಜ್ಯಕ್ಕೆ ಸೀಮಿತವಾಗಿದ್ದ ನರಮೇದ, ತಂತ್ರಗಾರಿಕೆ ಮತ್ತು ವಿವಾದ ಇನ್ನು ಮುಂದೆ ರಾಷ್ಟ್ರವ್ಯಾಪಿಯಾಗಲಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ನಡೆದದ್ದು ಇಡೀ ದೇಶದಲ್ಲಿ ನಡೆಯುವ ಸೂಚನೆ ಕಾಣುತ್ತಿದೆ.
No comments:
Post a Comment