ಝೋಹ್ರಾ ಸೆಹ್ಗಲ್ |
ಇಂತಹ ಅಪರೂಪದ ಅಭಿನೇತ್ರಿ, ಚಿತ್ರಜಗತ್ತಿನಲ್ಲಿ ಸುಮಾರು ಎಂಟು ದಶಕಗಳನ್ನು ದಾಟಿದ ಅತ್ಯಂತ ಹಿರಿಯ, ಖ್ಯಾತ ಕಲಾವಿದೆ ಝೋಹ್ರಾ ಸೆಹ್ಗಲ್, ತಮ್ಮ 102 ವರ್ಷಗಳ ಸುದೀರ್ಘ ಬದುಕಿಗೆ ವಿದಾಯ (ಜುಲೈ 10, 2014) ಹೇಳಿದ್ದಾರೆ.
ವಿದಾಯ ಹೇಳುವಾಗಲೂ ಕೂಡ ಅಷ್ಟೆ ದಿಟ್ಟವಾಗಿ, ಉಡಾಫೆಯಾಗಿ, ತಮಾಷೆಯಾಗಿ ಸಾವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಏಕೆಂದರೆ 100 ರ ಗಡಿ ದಾಟುವುದಕ್ಕೂ ಮುಂಚಿನಿಂದಲೇ ಅವರು, ಸಾವು ಎಂದಾದರೊಂದು ದಿನ ಬಂದೇ ಬರುತ್ತದೆ, ಬರಲಿ ಬಿಡಿ ಎಂದು ನಿರಾಳವಾಗಿದ್ದರು.
ಸಾವನ್ನು ಕುರಿತು ಅವರೊಂದು ಕಡೆ, ‘ನಾನು ಸಾವಿಗೆ ಸಿದ್ಧಳಾಗಿದ್ದೇನೆ. ಪ್ರತಿದಿನ ಮಲಗುವಾಗ ನಗುನಗುತ್ತಲೇ ಮಲಗುತ್ತೇನೆ. ಅಕಸ್ಮಾತ್ ನಿದ್ರೆಯಲ್ಲಿಯೇ ತೀರಿಕೊಂಡರೆ, ನನ್ನ ತುಟಿಗಳಲ್ಲಿ ನಗುವಿರಲಿ ಎಂದು’ ಎಂದಿದ್ದರು. ಇದು ಬದುಕನ್ನು ಬಂದಂತೆಯೇ ಸ್ವೀಕರಿಸಿ, ಅನುಭವಿಸಿ, ಅರಗಿಸಿಕೊಂಡ ಝೋಹ್ರಾ ಎಂಬ ತತ್ವಜ್ಞಾನಿಯ ಮಾತು.
ಇಂತಹ ಗಟ್ಟಿಗಿತ್ತಿ ಹುಟ್ಟಿದ್ದು ಏಪ್ರಿಲ್ 27, 1912 ರಲ್ಲಿ, ಉತ್ತರ ಪ್ರದೇಶದ ರಾಂಪುರದಲ್ಲಿ. ಸೆಹ್ಗಲ್ ಮೂಲತಃ ಪ್ರತಿಷ್ಠಿತ ಪಠಾಣ್ ಕುಟುಂಬಕ್ಕೆ ಸೇರಿದ ಸುನ್ನಿ ಮುಸ್ಲಿಮ್ ಪಂಗಡದವರು. ಇವರೊಂದಿಗೆ ಹುಟ್ಟಿದವರೆಲ್ಲ ಮನೆ ಬಿಟ್ಟು ಹೊರಬರಲು ಹಿಂಜರಿಯುತ್ತಿದ್ದರೆ, ಸೆಹ್ಗಲ್ ಮಾತ್ರ ಚಿಕ್ಕಂದಿನಿಂದಲೇ ತುಂಟ ಹುಡುಗನಂತೆ, ಗಂಡುಬೀರಿಯಂತೆ ಆಟ ಆಡುವುದಕ್ಕೆ, ಮರ ಹತ್ತುವುದಕ್ಕೆ ಹಾತೊರೆಯುತ್ತಿದ್ದರು. ತುಂಟತನ, ಕೀಟಲೆ, ವ್ಯಂಗ್ಯ, ಉಡಾಫೆ ಮೈಗಂಟಿದ ಗುಣಗಳಾಗಿದ್ದವು. ಸಮಕಾಲೀನ ಹುಡುಗ-ಹುಡುಗಿಯರು ರೆಬೆಲ್ ಸೆಹ್ಗಲ್ ಸಹವಾಸಕ್ಕೆ ಬರಲು ಹೆದರುತ್ತಿದ್ದರು. ಈ ಸ್ವಚ್ಛಂದ ಬದುಕನ್ನು ಬಯಸುವ ಗುಣದಿಂದಾಗಿಯೇ ಡೆಹರಾಡೂನ್‌ನಲ್ಲಿ ಜೊತೆಗಾರ ಉದಯ್‌ಶಂಕರ್ ನೃತ್ಯ ನೋಡಿ, ಪ್ರಭಾವಿತಳಾದ ಸೆಹ್ಗಲ್ ನೃತ್ಯಗಾತಿಯಾಗಬೇಕೆಂದು ಬಯಸಿದಳು. ಅದೇ ಆಕೆಯ ಬದುಕಿನ ಟರ್ನಿಂಗ್ ಪಾಯಿಂಟ್.
ಸೆಹ್ಗಲ್‌ರ ಆ ಹರೆಯದ ದಿನಗಳಲ್ಲಿ ಕಣ್ಣಿಗೆ ಕಂಡಿದ್ದನ್ನೆಲ್ಲ ನೋಡುವ, ಅನುಭವಿಸುವ ಆಸೆಯಿತ್ತು. ಹಾಗಾಗಿ ಕೇವಲ ಭಾರತವಷ್ಟೇ ಅಲ್ಲ, ಇರಾನ್, ಸಿರಿಯಾ, ಡಮಾಸ್ಕಸ್, ಈಜಿಪ್ಟ್ ಮತ್ತು ಯೂರೋಪ್ ದೇಶಗಳನ್ನು ತನ್ನ ನೆಚ್ಚಿನ ಚಿಕ್ಕಪ್ಪನೊಂದಿಗೆ ಕಾರ್, ದೋಣಿ ಮತ್ತು ಹಡಗಿನಲ್ಲಿ ಆ ಕಾಲಕ್ಕೇ ಸುತ್ತಾಡಿದ್ದರು. ಸುತ್ತಾಟ ಸಾಕಾದಾಗ ಒಂದಷ್ಟು ವಿದ್ಯಾಭ್ಯಾಸ. ಅದಾದ ಮೇಲೆ ನೃತ್ಯಗಾರ ಉದಯಶಂಕರ್ ತಂಡ ಸೇರಿ ಮತ್ತೆ ಸುತ್ತಾಟ ಶುರುವಿಟ್ಟುಕೊಂಡರು. ಜಪಾನ್, ಪಶ್ಚಿಮ ಏಷಿಯಾ, ಯೂರೋಪ್, ಅಮೆರಿಕಾಗಳನ್ನೆಲ್ಲ ಅಲೆದು, ಅಲೆದಾಟದಲ್ಲಿಯೇ ಸಂಗಾತಿಯನ್ನು ಸೆಲೆಕ್ಟ್ ಮಾಡಿಕೊಂಡರು. ಕಾಮೇಶ್ವರ್ ಸೆಹ್ಗಲ್, ತಮಗಿಂತ ಎಂಟು ವರ್ಷ ಚಿಕ್ಕವರು ಮತ್ತು ಹಿಂದೂ ಧರ್ಮಕ್ಕೆ ಸೇರಿದವರನ್ನು ಪ್ರೀತಿಸಿದರು. ಇವರಿಬ್ಬರ ಪ್ರೀತಿಗೆ ಧರ್ಮ ಅಡ್ಡ ಬರಲಿಲ್ಲ. ಯಾರು ಯಾರಿಗೂ ಧರ್ಮದ ಕಟ್ಟುಪಾಡುಗಳನ್ನು ಹೇರಲಿಲ್ಲ. ಅವರ ನಿರ್ಮಲ ಪ್ರೀತಿಯ ಮುಂದೆ ಯಾರ ವಿರೋಧವೂ ನಿಲ್ಲಲಿಲ್ಲ. ಕಾಮೇಶ್ವರ್ ತಾವಾಗಿಯೇ ಸ್ವಯಂಸ್ಫೂರ್ತಿಯಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು.
ಇದು ಸ್ವಾತಂತ್ರಾಪೂರ್ವದಲ್ಲಿ ನಡೆದ ಹಿಂದೂ-ಮುಸ್ಲಿಂ ಪ್ರೇಮಾಯಣ. ಅದು ಭಾರತ-ಪಾಕಿಸ್ತಾನ ವಿಭಜನೆಯ ಕಾಲ. ಕರುಳುಬಳ್ಳಿಯ ಸಂಬಂಧ ಕಡಿದುಕೊಳ್ಳಲು ಕತ್ತಿ ಮಸೆಯುತ್ತಿದ್ದ ಕಾಲ. ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ 1942 ರಲ್ಲಿ ಝೋಹ್ರಾ-ಕಾಮೇಶ್ವರ್ ಸರಳವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಬಂಡುಕೋರರಂತೆ ಕಂಡರು. ಕಾಲ ಸರಿದಂತೆ ಅವರೇ ಮಾದರಿಯಾದರು. ಒಂದು ಕಡೆ ಖ್ಯಾತ ಪತ್ರಕರ್ತ, ಲೇಖಕ ಖುಷವಂತ್ ಸಿಂಗ್, ಈ ಮದುವೆಗೆ ಜವಹರ್‌ಲಾಲ್ ನೆಹರೂ ಕೂಡ ಬಂದು ಹರಸಿ ಹೋದರೆಂದು ದಾಖಲಿಸಿರುವುದುಂಟು.
ಮದುವೆಯಾದ ನಂತರ ಇಬ್ಬರೂ ಉದಯಶಂಕರ್ ಅವರ ನೃತ್ಯ ತಂಡ ಸೇರಿಕೊಂಡರು. ಅವರ ಅದೃಷ್ಟಕ್ಕೆ ಅದು ಮುಚ್ಚಿಕೊಂಡಿತು. ಅಲ್ಲಿಂದ ಲಾಹೋರ್‌ಗೆ ತೆರಳಿ, ಅಲ್ಲಿ ಅವರದೇ ಆದ ಒಂದು ನೃತ್ಯ ಶಾಲೆಯನ್ನು ತೆರೆದರು. ಮನೆಯ ಹೊರಗೆ ಹಿಂದೂ-ಮುಸ್ಲಿಂ ಕೋಮುಗಲಭೆ, ಮನೆಯೊಳಗೆ ಹಿಂದೂ-ಮುಸ್ಲಿಂ ಸಾಮರಸ್ಯದ ಬದುಕು. ಇಂತಹ ಸಂದಿಗ್ಧ ಸಂದರ್ಭವದು. ತಮ್ಮ ಮಧುಚಂದ್ರದ ದಿನಗಳನ್ನು ಮೈಮರೆತು ಕಳೆಯಲಾಗದ ಮನಸ್ಥಿತಿಯಲ್ಲಿಯೇ ಲಾಹೋರ್ ತೊರೆದು ಮುಂಬೈಗೆ ಬಂದರು.
ಮುಂಬೈನಲ್ಲಿ ಝೋಹ್ರಾ ಸೆಹ್ಗಲ್ ಪೃಥ್ವಿರಾಜ್ ಕಪೂರ್ ಅವರ ನಾಟಕ ತಂಡ ಸೇರಿ, ನೃತ್ಯಗಾತಿಯಾದರು. ನೃತ್ಯ ಮತ್ತು ನಟನೆಯಲ್ಲಿ 14 ವರ್ಷಗಳನ್ನು ಕಳೆದರು. ಇದರ ನಡುವೆಯೇ ಎರಡು ಮಕ್ಕಳ ತಾಯಿಯೂ ಆದರು. ಆ ಮಕ್ಕಳು ತಂದೆ-ತಾಯಿಯ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ, ಎರಡೂ ಧರ್ಮಗಳನ್ನು ಪಾಲಿಸಿದರು. ಮನೆಯೇ ಮಿನಿ ಭಾರತವಾಯಿತು.
ಇವೆಲ್ಲವುಗಳ ನಡುವೆಯೇ ಸೆಹ್ಗಲ್ ರಂಗ ತಾಲೀಮುಗಳಲ್ಲಿ ಮುಳುಗಿದರು. ಖುಷವಂತ್ ಸಿಂಗ್ ಒಂದು ಕಡೆ ಬರೆಯುತ್ತಾ, ಸೆಹ್ಗಲ್‌ರ ಮೊದಲ ಆಯ್ಕೆ ಜೈಲುಗಳ ಖೈದಿಗಳಿಗೆ ನಾಟಕಗಳ ಬಗ್ಗೆ ಮನವರಿಕೆ ಮಾಡಿಕೊಡುವುದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿತ್ತು ಎಂದಿದ್ದಾರೆ.
ನಟನೆ, ಮನೆ, ಮಕ್ಕಳು, ಆಸಕ್ತಿ, ಅಭಿರುಚಿಗಳನ್ನೊಳಗೊಂಡ ಬದುಕು ಸಾಗುತ್ತಿರುವಾಗಲೇ ಕಾಮೇಶ್ವರ್ ಆತ್ಮಹತ್ಯೆ ಮಾಡಿಕೊಂಡರು. ಝೋಹ್ರಾ ಸೆಹ್ಗಲ್ ಬದುಕು ಮತ್ತೊಮ್ಮೆ ಬಿರುಗಾಳಿಗೆ ಸಿಕ್ಕಿತು. ಮುಂಬೈ ತೊರೆದು ದೆಹಲಿಯತ್ತ ಮುಖ ಮಾಡಿದರು. ಅಲ್ಲಿಂದ ಲಂಡನ್‌ಗೆ ತೆರಳಿದರು. ನೃತ್ಯಗಾತಿಯಾಗಿ ಅವಕಾಶಗಳು ಸಿಗದಿದ್ದಾಗ ನಟನೆಗೆ ಜಾರಿದರು. ಕೆಲವು ಜಾಹೀರಾತುಗಳಲ್ಲಿ ನಟಿಸಿದರು. ಆ ನಂತರ ಮರ್ಚೆಂಟ್ ಐವರಿ ಮತ್ತು ಆರ್ಥರ್ ರ್ಯಾಂಕ್ ಬ್ಯಾನರ್ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿತು.
ಅಲ್ಲಿಂದ ಮುಂದಕ್ಕೆ ಝೋಹ್ರಾ ಸೆಹ್ಗಲ್ ನಟನಾ ಬದುಕಿನಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಬ್ರಿಟಿಷ್, ಬಾಲಿವುಡ್ ಚಿತ್ರಚಗತ್ತಿನಲ್ಲಿ ಅಸಂಖ್ಯಾತ ಹಿಂದಿ-ಇಂಗ್ಲಿಷ್ ಚಿತ್ರಗಳಲ್ಲಿ ಹಾಗೂ ಟಿವಿ ಧಾರಾವಾಹಿಗಳಲ್ಲಿ ನಟಿಸಿದರು. ಪ್ರರಿಪೂರ್ಣ ಕಲಾವಿದೆಯಾಗಿ ಹೊರಹೊಮ್ಮಿದರು. ಈಕೆಯ ಕೆಲವು ಜನಪ್ರಿಯ ಚಿತ್ರಗಳೆಂದರೆ, ಸಂಜಯ್ ಲೀಲಾ ಬನ್ಸಾಲಿಯ ಸಾವರಿಯಾ, ಹಮ್ ದಿಲ್‌ದೇ ಚುಕೇ ಸನಮ್, ಚೀನೀ ಕಂ, ದಿಲ್ ಸೇ, ವೀರ್ ಜರಾ, ಬೆಂಡ್ ಇಟ್ ಲೈಕ್ ಬೆಕಂ ಇನ್ನೂ ಮುಂತಾದವು.
ಸೆಹ್ಗಲ್ ವೃತ್ತಿಬದುಕು ಸುಮಾರು ಎಂಟು ದಶಕಗಳನ್ನು ದಾಟಿದೆ. ಪೃಥ್ವಿರಾಜ್ ಕಪೂರ್‌ರಿಂದ ಹಿಡಿದು ರಣಬೀರ್ ಕಪೂರ್‌ವರೆಗಿನ ನಾಲ್ಕು ತಲೆಮಾರುಗಳ ಜೊತೆಗಿನ ಬಣ್ಣದ ಬದುಕನ್ನು ಬೆರೆಸಿದೆ. ದೇಶ-ವಿದೇಶಗಳ ಚಿತ್ರಜಗತ್ತಿನ ಅಪೂರ್ವ ಅನುಭವವನ್ನು ನೀಡಿದೆ. ಬಹುಭಾಷೆಯ ಜನಸಂಸ್ಕೃತಿಯನ್ನು ಅರಗಿಸಿಕೊಂಡಿದೆ. ಇದು ಅಂತಿಂಥ ದಾಖಲೆಯಲ್ಲ. ಈ ದಾಖಲೆಯನ್ನು ಸರಿಗಟ್ಟಲು ಸದ್ಯಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಇಂತಹ ಅಪರೂಪದ ಕಲಾವಿದೆ ಝೋಹ್ರಾಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ, ಕಾಳಿದಾಸ ಸಮ್ಮಾನ್ ಪ್ರಶಸ್ತಿಗಳು ಹುಡುಕಿಕೊಂಡು ಬಂದು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.
ಬಹುಮುಖ ಪ್ರತಿಭೆಯ, ಜೀವನೋತ್ಸಾಹದ ಚಿಲುಮೆಯ, ನೋವು-ನಗುವನ್ನು ಕಂಡುಂಡ ಗಟ್ಟಿಗಿತ್ತಿ ಸೆಹ್ಗಲ್ ಸಾವು, ಆಕೆ ಬಯಸಿದಂತೆಯೇ ಬಂದಿದೆ, ನೆನಪುಗಳನ್ನು ಬಿಟ್ಟುಹೋಗಿದೆ.
No comments:
Post a Comment