Friday, March 7, 2014

ಲಂಕೇಶ್ ಕಥಾಪ್ರಸಂಗ


ಥಟ್ ಅಂತ ಹೇಳೋದು ಲಂಕೇಶರ ಸ್ಟೈಲು. ಇದನ್ನು ಲಂಕೇಶರೊಂದಿಗೆ, ಅವರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅನೇಕ ಬಾರಿ ಕಂಡಿದ್ದೇನೆ. ಕಂಡಿದ್ದನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಲಂಕೇಶರು ಆಫೀಸಿನಲ್ಲಿ ಅಡ್ಡಾಡುವಾಗ, ವರದಿಗಾರರೊಂದಿಗೆ ಮೀಟಿಂಗ್ ಮಾಡುವಾಗ, ಸಮಾನ ಮನಸ್ಕರೊಂದಿಗೆ ಸಂವಾದ ನಡೆಸುವಾಗ, ಗೆಳೆಯರೊಂದಿಗೆ ಕುಡಿಯಲು ಕೂತಾಗ, ಯಾರೊಂದಿಗಾದರು ಜಗಳವಾಡುವಾಗ, ಏನೂ ಇಲ್ಲ ಎಂದರೆ ಸುಮ್ಮನೆ ಒಂದು ಪೋಲಿ ಜೋಕ್ ಸಿಡಿಸುವಾಗ- ಥಟ್ ಅಂತ ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಅದು ಆ ಗಳಿಗೆಗಷ್ಟೆ. ಅವರ ಸುತ್ತಲಿದ್ದವರು ಏನಂದ್ರು, ಅದೇನು ಅಂತ ಸುಮಾರು ಹೊತ್ತು ತಲೆ ಕೆಡಿಸಿಕೊಂಡ ಮೇಲೆ ಅರ್ಥವಾಗುತ್ತಿತ್ತು. ಅರ್ಥವಾದವರಿಗೆ ನಗುವೋ, ಸಿಟ್ಟೋ, ಅವಮಾನವೋ, ನಾಚಿಕೆಯೋ ಆಗಿ ಮುಖ ನೋಡಿದರೆ- ನಾನಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಅನ್ಯಮನಸ್ಕರಾಗಿಬಿಡುತ್ತಿದ್ದರು. ಥಟ್ ಅಂತ ಹೇಳಿದ ಆ ಪದ ಲೇವಡಿ, ವ್ಯಂಗ್ಯ, ಉಡಾಫೆ, ಕೀಟಲೆ, ಪುಲಕಗಳ ಪರಾಕಾಷ್ಠೆಯದ್ದಾಗಿರುತ್ತಿತ್ತು. ಅಂತಹ ಕೆಲವು ಝಲಕ್‌ಗಳು ಇಲ್ಲಿವೆ.
ಕವಿ ರಾಮಚಂದ್ರ ಶರ್ಮರು ಒಂದು ಸಲ, ಬಸವನಗುಡಿಯ ನ್ಯಾಷನಲ್ ಕಾಲೇಜ್‌ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತ, ‘ಕನ್ನಡ ಸಾಹಿತ್ಯ ಲೋಕದ ನಾಲ್ಕನೇ ನಕ್ಷತ್ರ ಡಿ.ಆರ್. ನಾಗರಾಜ್’ ಎಂದು ಘೋಷಿಸಿದರು.
ಅದು ಕನ್ನಡ ಸಾಹಿತ್ಯ ಲೋಕದಲ್ಲಿ ಅನಂತಮೂರ್ತಿ, ಲಂಕೇಶ್ ಮತ್ತು ತೇಜಸ್ವಿ ಎಂಬ ಮೂವರು ದಿಗ್ಗಜರು ನಕ್ಷತ್ರಗಳಂತೆ ಮಿಂಚುತ್ತಿದ್ದ ಕಾಲ. ಅವರಷ್ಟೇ ಪ್ರಖರ ಪ್ರತಿಭೆಯ, ಹೊಸ ವಿಚಾರಗಳ, ಚಿಂತನೆಗಚ್ಚುವ ಬರವಣಿಗೆ ಮತ್ತು ಭಾಷಣಗಳ ಮೂಲಕ ‘ಸ್ಟಾರ್’ ಆಗಿದ್ದ, ದೇಶ-ವಿದೇಶಗಳನ್ನು ಸುತ್ತಿ ‘ಸೆಮಿನಾರ್ ಹಕ್ಕಿ’ ಎನಿಸಿಕೊಂಡಿದ್ದ ಡಿಆರ್‌ರನ್ನು ಕುರಿತು ಶರ್ಮರು ಸಾಹಿತ್ಯಕ ಭಾಷೆಯಲ್ಲಿ ‘ನಾಲ್ಕನೇ ನಕ್ಷತ್ರ’ ಎಂದು ಕರೆದಿದ್ದರು. ಅದು ಸಭೆಯಲ್ಲಿದ್ದವರ ಹುಬ್ಬೇರಿಸಿತ್ತು, ಚಿಂತನೆಗೂ ಹಚ್ಚಿತ್ತು.
ಆ ಸಭೆ ಮುಗಿದ ನಂತರ, ನ್ಯಾಷನಲ್ ಕಾಲೇಜ್ ಹತ್ತಿರದಲ್ಲಿಯೇ ಇದ್ದ ‘ಲಂಕೇಶ್ ಪತ್ರಿಕೆ’ ಕಚೇರಿಯಲ್ಲಿ, ಎಂದಿನಂತೆ ಸಂಜೆಯ ‘ಸಮಾರಾಧನೆ’. ಅಲ್ಲಿ ಮತ್ತೆ ನಾಲ್ಕನೆ ನಕ್ಷತ್ರದ ಪ್ರಸ್ತಾಪ. ಗುಂಡಿನ ಮತ್ತಿನಲ್ಲಿ... ಬಿಸಿ ಬಿಸಿ ಚರ್ಚೆ. ಪರ-ವಿರೋಧ ಎಲ್ಲ. ಬಂದಿದ್ದವರಿಗೆಲ್ಲ ವ್ಹಿಸ್ಕಿ ಕೊಟ್ಟು, ಕಾವೇರಿದ ಮಾತಿಗೆ ಕಿವಿ-ಕಣ್ಣು ಕೊಟ್ಟು ಕೂತಿದ್ದ ಲಂಕೇಶರು, ಅವತ್ತು ಅಕ್ಷರಶಃ ವಿದ್ಯಾರ್ಥಿಯಾಗಿದ್ದರು.
ಇದಾದ ಕೆಲವೇ ತಿಂಗಳುಗಳಲ್ಲಿ ಡಿಆರ್ ಹೃದಯಾಘಾತಕ್ಕೊಳಗಾಗಿ ತೀರಿಕೊಂಡರು. ಡಿಆರ್ ದೇಹವನ್ನು ಅವರ ಪದ್ಮನಾಭನಗರದ ಮನೆಯಲ್ಲಿಡಲಾಗಿತ್ತು. ಡಿಆರ್ ದೇಹ ನೋಡಲು ಅಲ್ಲಿಗೆ ಲಂಕೇಶರು ಬಂದರು. ಮೊದಲೇ ಹೋಗಿದ್ದ ನಾನು, ಅವರನ್ನು ನೋಡಿ ಅವರ ಬಳಿ ಹೋದೆ. ಡಿಆರ್ ಶಿಷ್ಯರು, ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು... ಹೀಗೇ ಸಿಕ್ಕಾಪಟ್ಟೆ ಜನ. ಅಲ್ಲಲ್ಲೆ ಗುಂಪು, ಡಿಆರ್ ಬಗ್ಗೆಯೇ ಗುಣಗಾನ. ಮೇಸ್ಟ್ರು ಮಾತ್ರ ಮಾತಿಲ್ಲ. ಸ್ಟ್ಯಾಂಡ್ ಸ್ಟಿಲ್. ಅವರ ಆ ಗಂಭೀರತೆ ಕಂಡ ಅವರ ಕೆಲವು ಪರಿಚಿತರು ಲಂಕೇಶರ ಮೂಡ್ ಸರಿಯಿಲ್ಲವೆಂದು ತೀರ್ಮಾನಿಸಿ, ದೂರ ಸರಿದರು.
ಅವರ ಪಕ್ಕದಲ್ಲಿ ನಿಂತಿದ್ದ ನನ್ನತ್ತ ತಿರುಗಿದ ಲಂಕೇಶರು, ‘ಏನೋ ಇಷ್ಟೊಂದ್ ಜನ...?’ ಎಂದರು.
ಸೈಲೆಂಟಾಗಿದ್ದವರು ಮಾತನಾಡಿದರಲ್ಲ ಎಂದು ಹಗುರಾದರೂ, ಇಷ್ಟೊಂದ್ ಜನ ಅಂದಿದ್ದು ಯಾಕೋ ಒಂಥರಾ ಕೇಳಿಸಿತು. ಅಚ್ಚರಿಯೋ, ಅಸೂಯೆಯೋ... ಗೊತ್ತಾಗಲಿಲ್ಲ. ಸುಮ್ಮನೆ ಅವರ ಮುಖ ನೋಡಿದೆ.
ಕೈ ಕಟ್ಟಿ ನಿಂತಿದ್ದ ಅವರ ಮುಖದ ಹಣೆಯ ಮೇಲೆ ಸುಕ್ಕುಗಟ್ಟಿದ ನರಿಗೆಗಳು ಅವರ ಸೀರಿಯಸ್‌ಗೆ ಸ್ಟ್ರೆಂಥ್ ತುಂಬುತ್ತಿದ್ದವು. ಆ ಗಂಭೀರ ಮುಖಭಾವದಲ್ಲಿಯೇ, ‘ನಾನ್ ಸತ್ರೆ... ನಾಲ್ಕು ಜನ ಬರ್‌ಬಹುದು’ ಎಂದರು.
ಅದೊಂಥರಾ ಕೇಳಿಸಿದರೆ, ಇದೊಂಥರ ಕೇಳಿಸಿತು. ವ್ಯಂಗ್ಯವೋ, ಸ್ವವಿಮರ್ಶೆಯೋ ಗೊತ್ತಾಗಲಿಲ್ಲ. ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದೆ. ಮತ್ತೆ ಲಂಕೇಶರೆ ಮುಂದುವರೆಸಿ, 
‘ಆ ನಾಲ್ಕು ಜನ ಯಾರು ಗೊತ್ತೇನೋ... ಇವನು ಸತ್ತವ್ನೋ ಇಲ್ವೋ ಅಂತ ಕನ್ಫರ್ಮ್ ಮಾಡ್ಕಳಕೆ ಬಂದೋರೆ ಆಗಿರ್ತರೆ...’ ಎಂದರು!
***
ಲಂಕೇಶರು ಶಿವಮೊಗ್ಗ ಕಡೆಯ ರೈತ ಕುಟುಂಬದಿಂದ ಬಂದವರು. ಆದರೆ ಅಧ್ಯಾಪಕ, ಚಿತ್ರನಿರ್ದೇಶಕ, ಸಂಪಾದಕರಾಗಿ, ಬೆಂಗಳೂರಿನ ನಗರವಾಸಿಗಳಾಗಿ ಬಹಳ ಕಾಲದಿಂದ ಭೂಮಿಯೊಂದಿಗಿನ ಸಂಬಂಧದಿಂದ ವಂಚಿತರಾಗಿದ್ದರು. ಆ ಬಗೆಗಿನ ಪಾಪಪ್ರಜ್ಞೆಗೋ, ಭೂಮಿ ಬಗೆಗಿನ ಅಪಾರ ಪ್ರೀತಿಗೋ ಅಥವಾ ಅದರಿಂದ ಸಿಗುವ ಸಮಾಧಾನಕ್ಕೋ ತಮ್ಮ ಕೊನೆಗಾಲದಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ಸ್ವಲ್ಪ ಭೂಮಿ ಖರೀದಿಸಿದರು. ಮಾವು, ತೆಂಗಿನಮರಗಳಿದ್ದ ತೋಟಕ್ಕೆ ಬೋರ್‌ವೆಲ್ ಕೊರೆಸಿ, ಹನಿ ನೀರಾವರಿ ಹರಿಸಿ, ಸಪೋಟ, ಬಾಳೆ ಹಾಕಿಸಿ ಹಸಿರಾಗಿಸಿದರು. ಹಸಿರಿನ ನಡುವೆ ಕೂತು ಕಾಲ ಕಳೆಯಲು ತೋಟಕ್ಕೆ ವಾರಕ್ಕೆ ಎರಡು ಸಲ ಹೋಗಿ ಬರಲಾರಂಭಿಸಿದರು.
ಹೀಗೆ ಹೋಗಿ ಬರುವಾಗ, ಲಂಕೇಶರು ಬನ್ನೇರುಘಟ್ಟದ ಮುಖ್ಯರಸ್ತೆಯಲ್ಲಿ (ಆಗ ಈಗಿನಂತೆ ಮಲ್ಟಿ ನ್ಯಾಷನಲ್ ಕಂಪನಿಗಳಾಗಲಿ, ಜನ-ಟ್ರಾಫಿಕ್ಕಾಗಲಿ ಇರಲಿಲ್ಲ. ರಸ್ತೆ ಕೂಡ ಸರಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳಿದ್ದವು. ಅವು ಕೂಡ ಪುಟ್ಟ ಪೆಟ್ಟಿಗೆ ಅಂಗಡಿಗಳು) ಒಂದು ಕಡೆ ಕಾರು ನಿಲ್ಲಿಸಿ, ಕಾಫಿ ಕುಡಿದು ಸಿಗರೇಟು ಸೇದಿ ಹೋಗುವುದು ಅಭ್ಯಾಸವಾಗಿತ್ತು. ಅದೊಂದು ಪುಟ್ಟ ಪೆಟ್ಟಿಗೆ ಅಂಗಡಿ. ಅಂಗಡಿಗೆ ಮಧ್ಯವಯಸ್ಕ ಹೆಂಗಸು ಯಜಮಾನಿ. ಆಕೆಗೆ ಲಂಕೇಶರು ಯಾರು ಏನು ಎನ್ನುವುದು ಗೊತ್ತಿಲ್ಲ. ಇವರೂ ಹೇಳಲಿಲ್ಲ. ಆದರೆ ಕಾರಿನಲ್ಲಿ ಬಂದು ನನ್ನ ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ ಕುಡಿಯುವವರ ಬಗ್ಗೆ ಆಕೆಗೆ ಗೌರವವಿತ್ತು, ಹೆಮ್ಮೆ ಇತ್ತು.
ಒಂದು ದಿನ, ಲಂಕೇಶರ ಪರಿಚಯವಿದ್ದವರು ಆಕೆಯ ಎದುರೇ ಲಂಕೇಶರಿಗೆ ನಮಸ್ಕರಿಸಿದರು. ಲಂಕೇಶರೂ ನಮಸ್ಕರಿಸಿ ಕಾರು ಹತ್ತಿ ಸುಮ್ಮನೆ ಹೊರಟುಹೋದರು. ಆದರೆ ಆಕೆ ನಮಸ್ಕರಿಸಿದವರನ್ನು ಕೇಳಿ, ತಿಳಿದಿದ್ದಷ್ಟೇ ಅಲ್ಲ, ಮತ್ತೊಂದು ಸಲ ಲಂಕೇಶರು ಆ ಪೆಟ್ಟಿಗೆ ಅಂಗಡಿಗೆ ಹೋಗುವುದಕ್ಕೆ ಮುಂಚೆ ಅಲ್ಲಿ, ಕೆಲವು `ಲಂಕೇಶ್ ಪತ್ರಿಕೆ'ಯ ಸಂಚಿಕೆಗಳನ್ನು ಮಾರಾಟ ಮಾಡಲು ತೂಗು ಹಾಕಿದ್ದರು. ಅದನ್ನು ನೋಡಿದ ಲಂಕೇಶರಿಗೆ ಖುಷಿಯಾದರೂ ತೋರಿಸಿಕೊಳ್ಳದೆ, ಅದು ನಮ್ಮ ಪತ್ರಿಕೆ ಎಂದು ಹೇಳಿಕೊಳ್ಳದೆ ನಕ್ಕು ಸುಮ್ಮನಾಗಿದ್ದರು.
ಆಕೆಯ ಅದೃಷ್ಟವೋ ಏನೋ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತ್ತು. ಪೆಟ್ಟಿಗೆ ಅಂಗಡಿ, ನಂತರ ಪೇಪರ್ ಅಂಗಡಿಯಾಗಿ ಆಮೇಲೆ ಮತ್ತೊಂದು ಬದಿಗೆ ಮೀನು ಮಾರಾಟದ ಅಂಗಡಿಯನ್ನೂ ಹೊಸದಾಗಿ ಆರಂಭಿಸಿದ್ದರು.
ಕುತೂಹಲಕರ ಸಂಗತಿ ಎಂದರೆ, ಆ ಪುಟ್ಟ ಪೆಟ್ಟಿಗೆ ಅಂಗಡಿಗೆ, ಅದರಲ್ಲೂ ಮೀನಿನ ಅಂಗಡಿಗೆ ‘ಲಂಕೇಶ್ ಮೀನು ಮಾರಾಟದ ಅಂಗಡಿ’ ಎಂಬ ಪುಟ್ಟದೊಂದು ಬೋರ್ಡ್ ಬರೆಸಿ ಹಾಕಿದ್ದರು. ಆ ಬೋರ್ಡನ್ನು ಕಂಡವರೆ ಥ್ರಿಲ್ಲಾದ ಲಂಕೇಶರು, ಫೋಟೋ ತೆಗೆದುಕೊಂಡು ಬಂದು, ನಮ್ಮ ಗಿರಿಯನ್ನು ಕರೆದು, ‘ಇದನ್ನು ಪ್ರಿಂಟ್ ಹಾಕಿಸಿಕೊಂಡು ಬಾ’ ಎಂದರು. ಪ್ರಿಂಟ್ಸ್ ಬಂದಮೇಲೆ ನನ್ನನ್ನು ಕರೆದು, ಆ ಫೋಟೋಗಳಲ್ಲಿ ಒಂದನ್ನು ನನಗೆ ಕೊಟ್ಟು, ‘ಹೆಂಗೈತೋ’ ಎನ್ನುವಂತೆ ಹುಬ್ಬಾರಿಸಿದರು. ಅಷ್ಟೇ ಅಲ್ಲ, ಆ ವಾರದ ‘ಈ ಸಂಚಿಕೆ’ಯಲ್ಲಿ ಆ ಪೆಟ್ಟಿಗೆ ಅಂಗಡಿಯ ಹೆಂಗಸಿನ ಧೈರ್ಯ, ಸಾಹಸ ಮತ್ತು ಜಾಣ್ಮೆಯನ್ನು ಬಣ್ಣಿಸಿದ್ದರು. ಬಡ, ಅಸಹಾಯಕ ಹೆಣ್ಣುಮಕ್ಕಳು ಸ್ವಾವಲಂಬಿಗಳಾದರೆ ಬದುಕು ಎಷ್ಟು ನಿಸೂರ ಎನ್ನುವುದನ್ನು ಹೇಳಿದ್ದರು. ಆಕೆಯ ಅಂಗಡಿಯ ಫೋಟೋ ಕೊಟ್ಟು, ಅದರ ಬಗ್ಗೆ ಬರೆದ ಮೇಲೆ- ‘ಈ ಸಂಚಿಕೆ’ ಅಂಕಣದಲ್ಲಿ ಆಕೆಯ ಫೋಟೋ ಸಹಜವಾಗಿಯೇ ಪ್ರಕಟವಾಗಿತ್ತು. 
ಪತ್ರಿಕೆ ಪ್ರಿಂಟಾಗಿ ಬಂದಮೇಲೆ, ಅದನ್ನು ತಿರುವಿ ಹಾಕುತ್ತಿದ್ದಾಗ ಈ ಸಂಚಿಕೆ ಮತ್ತು ಆ ಫೋಟೋ ನೋಡುವಾಗ ನನಗೆ ಯಾಕೋ ವೈಎನ್‌ಕೆ ನೆನಪಾದರು. ಲಂಕೇಶರಿಗೆ ವೈಎನ್‌ಕೆ ಬಗ್ಗೆ ಗೌರವವಿದ್ದರೂ, ‘ಛೇ ಛೇ’ ಅಂಕಣದಲ್ಲಿ ಮಾತ್ರ ವೈಎನ್‌ಕೆ ಆಗಾಗ ಲೇವಡಿಗೊಳಗಾಗುತ್ತಲೇ ಇದ್ದರು. ಮೀನಿನ ಫೋಟೋ ನೋಡಿ ವೈಎನ್‌ಕೆ ಏನು ಕಾಮೆಂಟ್ ಮಾಡಬಹುದೆಂದು ನನ್ನನ್ನು ಕೊರೆಯತೊಡಗಿತು. ಅದೇ ಸಮಯಕ್ಕೆ ಸರಿಯಾಗಿ ಲಂಕೇಶರು ಬಂದರು, ನಾನು ಈ ಸಂಚಿಕೆಯ ಪುಟವನ್ನೇ ನೋಡುತ್ತಾ ಕೂತಿದ್ದೆ. ಏನು ಎನ್ನುವಂತೆ ಕಣ್ಣಿನಲ್ಲೇ ಪ್ರಶ್ನಿಸಿದರು.
ನಾನು ‘ಲಂಕೇಶ್ ಮೀನು ಮಾರಾಟದ ಅಂಗಡಿ’ ಫೋಟೋವನ್ನು ತೋರಿಸುತ್ತಾ, ‘ಇದನ್ನು ವೈಎನ್‌ಕೆ ನೋಡಿದ್ರೆ ಏನನ್ನಬಹುದು ಸಾರ್’ ಎಂದೆ.
ಥಟ್ ಅಂತ ‘ಇನ್ನೇನಂತರೆ, ‘ಲಂಕೇಶ್... ಮೀನ್ ಫೆಲೋ’ ಅಂತ ನಗಾಡ್ತರೆ’ ಎಂದು ಹೇಳಿ ತಮ್ಮ ಕೋಣೆಯತ್ತ ಹೋಗಿಯೇಬಿಟ್ಟರು.
***
ಹೀಗೆ ಒಂದು ಜಾಲಿ ಟ್ರಿಪ್... ಲಂಕೇಶ್ ಮೇಸ್ಟ್ರು, ಅಗ್ರಹಾರ ಕೃಷ್ಣಮೂರ್ತಿಯವರು ಮತ್ತು ನಾನು ಕಾರಿನಲ್ಲಿ ಮೈಸೂರಿಗೆ ಹೋಗುತ್ತಿದ್ದೆವು. ಪ್ರಯಾಣದ ನಡುವೆ, ಎಲ್ಲಾದರು ಒಂದು ಕಡೆ ಕಾರನ್ನು ನಿಲ್ಲಿಸಿ ಎಳನೀರು ಅಥವಾ ಟೀ ಕುಡಿಯುವುದು, ಸಿಗರೇಟು ಸೇದುವುದು, ಕಲ್ಲಂಗಡಿ ಹಣ್ಣು ಕೊಳ್ಳುವುದು, ಹಲಸಿನ ಹಣ್ಣು ತಿನ್ನುವುದು (ಅದೂ ಮಹಿಳೆಯರು ಮಾರುತ್ತಿದ್ದರೆ ಅವರು ಕೇಳಿದಷ್ಟು ಹಣ ಕೊಡುವುದು) ಲಂಕೇಶರ ಖುಷಿಯ ಕ್ಷಣಗಳಲ್ಲೊಂದು. ಅದರಲ್ಲೂ ರಾಮನಗರ ಬಿಟ್ಟ ತಕ್ಷಣ ಸಿಗುವ ಮಲಯಾಳಿ ಕಾಕಾನ ಡಾಬಾದಲ್ಲಿ ಆಮ್ಲೆಟ್, ಟೀ- ಅವರ ಫೇವರಿಟ್ ಆಗಿತ್ತು.
ಹಾಗೆಯೇ ಒಂದು ಕಡೆ ಕಾರು ನಿಲ್ಲಿಸಿದ ಮೇಸ್ಟ್ರು, ‘ಏ ಬಸುರಾಜ, ಆ ಎಳ್ನೀರ್ ನೋಡೋ, ಚೆನ್ನಾಗಿದ್ರೆ ಕುಡಿಯನ...’ ಅಂದ್ರು.
ಕಾರ್ ನಿಲ್ಲಿಸಿದ ತಕ್ಷಣವೇ ಆ ಎಳನೀರು ಅಂಗಡಿಯ ಯಜಮಾನ ಕೊಚ್ಚೋದಕ್ಕೆ ರೆಡಿಯಾದ. ಮೇಸ್ಟ್ರು ಮಹತ್ವವಾದ ಜವಾಬ್ದಾರಿ ಹೊರಿಸಿದ್ದಾರೆಂಬ ಎಚ್ಚರಿಕೆಯಿಂದ ನಾನು, ತೆಂಗಿನ ತೋಟಗಳ ನನ್ನೂರಿನ ಅನುಭವದಿಂದ, ‘ಮೂರು ಕೆಂದಳ್ನೀರ್ ವಡ್ಯಪ್ಪ’ ಅಂದೆ. ಆತ ಇವ್ನೇನೋ ಎಳ್ನೀರ್ ಬಗ್ಗೆ ಒಸಿ ತಿಳಿಕಂಡಿರಂಗ್ ಕಾಣ್ತನೆ ಅಂತ ಮೊದಲು ತೆಗೆದುಕೊಂಡಿದ್ದನ್ನು ಬಿಟ್ಟು ಕೆಂದಳ್ನೀರ್ ಹೊಡೆದು ಕೊಟ್ಟ. ಮೇಸ್ಟ್ರು ಕುಡಿದು ‘ಚೆನ್ನಾಗಿದೆ ಕಣೋ...’ ಎಂದರು. ಎಷ್ಟು ಎಂದು ಕೇಳಿ ದುಡ್ಡು ಕೊಡಲು ಮುಂದಾದೆ. ಅಲ್ಲಿದ್ದ ಮೂವರಲ್ಲಿ ನಾನೇ ಚಿಕ್ಕವನು. ಚಿಕ್ಕವನು ಕೊಡ್ತಿದ್ದಾನಲ್ಲ ಅಂತ ಅಗ್ರಹಾರ ಕೃಷ್ಣಮೂರ್ತಿಯವರು, ‘ಏ ಬಸು ಇರಿ, ನಾನ್ಕೊಡ್ತಿನಿ...’ ಅಂದ್ರು.
ತಕ್ಷಣ ಲಂಕೇಶರು, ‘ಏ ಕೊಡ್ಲಿ ಬಿಡೋ, ಅವನ್ಯಾವತ್ತು ಇದ್ನೆಲ್ಲ ಕಲಿಯದು’ ಅಂದ್ರು. ಅಗ್ರಹಾರ ಎಳನೀರು ಕುಡಿಯುವುದರಲ್ಲಿ ಮಗ್ನರಾದರು.
ಅಗ್ರಹಾರರಿಗೆ ಕೊಡ್ಲಿ ಬಿಡೋ ಅಂದ ಲಂಕೇಶರು ತಕ್ಷಣ ನನ್ನತ್ತ ತಿರುಗಿ, ‘ತುಂಬಾ ಒಳ್ಳೆ ಪೊಯೆಟ್ಟು, ವರ್ಷಕ್ಕೊಂದು ಬರದ್ರೆ ನಮ್ ಪುಣ್ಯ, ಹಿಂಗೇ ನೀನು ಅದೂ ಇದೂ ಕುಡಸ್ಕೊಂಡ್ ಚೆನ್ನಾಗಿ ನೋಡ್ಕಂಡಿದ್ರೆ... ಅವ್ರಿಗೆ ಮೂಡ್ ಬಂದಾಗ್ ಬರಕೊಡ್ತರೆ...’ ಎಂದು ಅಗ್ರಹಾರರ ಮುಖ ನೋಡಿದರು.  
ಆಶ್ಚರ್ಯ ಅಂದ್ರೆ, ಅಗ್ರಹಾರ ಕೂಡ ಅವರಿಗೆ ಮೂಡ್ ಬಂದಾಗ, ಬಿಡುವು ಸಿಕ್ಕಾಗ ಬರೆದು ಕೊಟ್ಟಿದ್ದರು. ಅವರ ಬರವಣಿಗೆಯ ‘ಹಸಿವು, ಉತ್ಸಾಹ ಮತ್ತು ಅನಿವಾರ್ಯತೆ’ಯನ್ನು ಖುದ್ದಾಗಿ ಕಂಡಿದ್ದ ಮೇಸ್ಟ್ರು, ಬಹುವಚನ ಬಳಸಿ ಬೆಚ್ಚಿ ಬೀಳಿಸಿದ್ದರು.
ಲಂಕೇಶರನ್ನು ಬಹಳ ಹತ್ತಿರದಿಂದ ಕಂಡಿದ್ದ ಅಗ್ರಹಾರರು, ‘ನಾನು ಸ್ವಲ್ಪ ನಿಧಾನ, ನಿಜ, ಏನ್ ಬಸು, ದೀಪಾವಳಿ ವಿಶೇಷಾಂಕಕ್ಕೆ ಯಾವತ್ತಾದ್ರು ಪದ್ಯ ಕೊಡದೆ ತಪ್ಪಿಸ್ಕೊಂಡಿದೀನೇನ್ರಿ...?’ ಎಂದರು.
‘ನಾನೇಳಿದ್ದು ಅದೇ ಕಣಲೇ... ವರ್ಷಕ್ಕೊಂದು ಬರದ್ರೆ ನಮ್ ಪುಣ್ಯ ಅಂತ...’
ಲೇಖಕರು, ಬರಹಗಾರರನ್ನು ಹೇಗೆ ನೋಡ್ಕೋಬೇಕು, ಇಟ್ಕೋಬೇಕು ಅಂತ ನನಗೆ ಟಿಪ್ಸು, ಎದುರೆದುರೆ ಅಗ್ರಹಾರರಿಗೆ ಟಾಂಗ್!
***
ಪ್ರತಿದಿನ ಲಂಕೇಶರ ‘ಪತ್ರಿಕೆ’ ಕಚೇರಿಯಲ್ಲಿ ಪಾನಗೋಷ್ಟಿ ಇದ್ದೇ ಇರೋದು. ಲಂಕೇಶರ ದುಷ್ಟಕೂಟದ ಸದಸ್ಯರಲ್ಲಿ ಯಾರಾದರೊಬ್ಬರು ತಪ್ಪದೇ ಹಾಜರಾಗುತ್ತಿದ್ದರು. ಕೊನೆಗೆ ಯಾರೂ ಇಲ್ಲ ಎಂದರೆ ಪತ್ರಿಕೆಯ ವರದಿಗಾರರು. ಅವರೂ ಬೇಡವೆಂದರೆ ಅವರೊಬ್ಬರೆ... ಹೀಗೆ ಪ್ರತಿದಿನ ಸಂಜೆಯ ಸಮಾರಾದನೆ ಇರೋದು. ಲಂಕೇಶರು ಕುಡಿಯಲಿ, ಕುಡಿಯದೆ ಇರಲಿ, ತಿಂಗಳಿಗೆ ಇಂತಿಷ್ಟು ಹಣ ಎಂದು ಡ್ರಿಂಕ್ಸ್‌ಗೆ ಎತ್ತಿಡುತ್ತಿದ್ದರು.  
ಇದಲ್ಲದೆ ವರ್ಷಕ್ಕೆ ಮೂರು ಸಲ- ಡಿಸೆಂಬರ್ ೩೧ (ಹೊಸ ವರ್ಷ), ಮಾರ್ಚ್ ೮ (ಲಂಕೇಶರ ಬರ್ತ್‌ಡೇ), ಜುಲೈ ೬ (ಪತ್ರಿಕೆ ಹುಟ್ಟಿದ ಹಬ್ಬ)- ಭರ್ಜರಿ ಪಾರ್ಟಿ ಏರ್ಪಡಿಸಿ ಎಲ್ಲರನ್ನು ಕರೆದು ಕುಡಿಸಿ, ಕುಣಿಸಿ, ಖುಷಿಪಡಿಸುವುದು ಲಂಕೇಶರ ಪತ್ರಿಕೆಯ ಸಂಪ್ರದಾಯವೇ ಆಗಿಹೋಗಿತ್ತು.
ಹೀಗೆಯೇ ಒಂದು ಸಲ ಹೊಸ ವರ್ಷದ ಪಾರ್ಟಿ. ಯಾರ‍್ಯಾರನ್ನು ಕರೆಯಬಹುದೆಂದು ಪಟ್ಟಿ ಮಾಡಿ, ಅವರ ಮುಂದಿಟ್ಟೆ. ಆಮೇಲೆ ಏನನ್ನಿಸಿತೋ, ‘ನೀನೆ ನೋಡಿ ಕರೆಯೋ...’ ಎಂದರು.
ಸಾಮಾನ್ಯವಾಗಿ ಪತ್ರಿಕೆ ಮತ್ತು ಲಂಕೇಶರ ಸಂಪರ್ಕದಲ್ಲಿರುವ ಸಾಹಿತಿಗಳು, ಕಲಾವಿದರು, ಲೇಖಕರು, ಬರಹಗಾರರು, ವರದಿಗಾರರು, ಏಜಂಟರು, ರಾಜಕಾರಣಿಗಳು, ಅಭಿಮಾನಿಗಳು, ಹಿತೈಷಿಗಳು... ಹೀಗೆ ಎಲ್ಲರನ್ನೂ ಕರೆಯುತ್ತಿದ್ದೆವು. ಅದೇ ಅಂದಾಜಿನ ಮೇಲೆ ಆ ಸಲವೂ ಫೋನ್ ಮಾಡಿ ಹೇಳಿದೆವು. ಹತ್ತಾರು ಕ್ಷೇತ್ರಗಳ ನೂರಾರು ಜನ ಹೀಗೆ ಒಂದು ಕಡೆ ಕಲೆತು, ಕುಡಿದು, ಹರಟೆ ಹೊಡೆದು ಹೋಗುವುದು- ಆರೋಗ್ಯಕರ ವಾತಾವರಣಕ್ಕೆ, ಸಮೃದ್ಧ ಸಾಹಿತ್ಯ ಸೃಷ್ಟಿಗೆ, ವಿಚಾರ ಪ್ರಚೋದನೆಗೆ, ಅದಕ್ಕಿಂತ ಹೆಚ್ಚಾಗಿ ಲಂಕೇಶರ ಮನಸ್ಸಿಗೆ ಮುದ ನೀಡುವ ಸಂಗತಿಯಾಗಿತ್ತು. ಇದರಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ, ಲಂಕೇಶರ ದರ್ಬಾರೂ ಕಾಣುತ್ತಿರಲಿಲ್ಲ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವುದು ಎದ್ದು ಕಾಣುತ್ತಿತ್ತು.
ಆ ವರ್ಷವೂ ಅಂಥಾದ್ದೆ ಪಾರ್ಟಿ, ನೆನಪಿನಲ್ಲಿ ಉಳಿಯುವಂತಿತ್ತು.
ಸಾಮಾನ್ಯವಾಗಿ ಪಾರ್ಟಿ ಆದ ಮಾರನೆ ದಿನ ಆಫೀಸಿಗೆ ಬಂದಾಗ, ನಿನ್ನೆ ರಾತ್ರಿ ಯಾರು ಹ್ಯೆಂಗೆಗೆಲ್ಲ ‘ಆಡಿದರು’ ಎಂಬುದರ ಬಗ್ಗೆಯೇ ಮಾತುಕತೆಯಿರುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಯಾರಾದರೂ ಅತಿಯಾಗಿ ‘ಆಡಿದರೆ’, ಅನಾಗರಿಕವಾಗಿ ವರ್ತಿಸಿದರೆ, ಅದು ಲಂಕೇಶರಿಗೆ ಕಿರಿಕಿರಿ ಉಂಟು ಮಾಡಿದರೆ, ಅವರ ಬಗ್ಗೆ ಮೇಸ್ಟ್ರು ಮುಲಾಜಿಲ್ಲದೆ, ‘ಏ ಅವುನ್ನ ಇನ್ನೊಂದ್ಸಲ ಕರೀಬ್ಯಾಡ, ಇಲ್ಗೂ ಕೂಡಬ್ಯಾಡ...’ ಅನ್ನುವುದೂ ಕಾಮನ್ ಆಗಿತ್ತು.
ಏನೂ ಇಲ್ಲ ಎಂದರೆ ಕೊನೆಗೆ, ‘ಏನ್ರೋ ಇದು, ಇಷ್ಟೊಂದು ಖರ್ಚ್ ಮಾಡಿದ್ದೀರಾ, ನಿಮ್ಗೇ ಬುಟ್ರೆ ನನ್ನ ಹರಾಜಾಕ್ಬುಡ್ತಿರಾ...’ ಎನ್ನುವ ಬೈಗುಳವಂತೂ ಇದ್ದೇ ಇರುತ್ತಿತ್ತು.
ಹೀಗೆ ಏನಾದರೊಂದು ಲಂಕೇಶರ ಕಡೆಯಿಂದ ಇರೋದು. ಅವತ್ತೂ ಹಾಗೆಯೇ ಮನೆಯಿಂದ ಬಂದವರು, ನನ್ನನ್ನು ನೋಡಿ, ‘ಏನೋ @#$%ನ್ನೆಲ್ಲ ಕರ‍್ದುಬುಟ್ಟಿದ್ದೆ’ ಎಂದು ರೂಮಿಗೆ ಹೋಗಿಬಿಟ್ಟರು. ಅವರು ಹೇಳಿದ ದಾಟಿ ವ್ಯಂಗ್ಯವಾಗಿತ್ತು. ಅವರು ಕೊಟ್ಟ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡು, ಹದ್ದುಮೀರಿ ಹೋಗಿದ್ದ ನನ್ನ ಅಹಂಕಾರಕ್ಕೆ ಮದ್ದರೆಯುವಂತಿತ್ತು.
ಆಶ್ಚರ್ಯವೆಂದರೆ, @#$% ಅವರು ಅವರ ಮೆಚ್ಚಿನ ಯುವ ಕತೆಗಾರ. ಅವರೊಂದಿಗೆ ಈ ಹೊತ್ತಿನ ಹೊಸ ಕತೆಗಾರರನ್ನು ಹೆಸರಿಸಿ, ಅವರನ್ನು ಕನ್ನಡದ ಪ್ರಾಮಿಸಿಂಗ್ ಕತೆಗಾರರು ಎಂದು ಬರೆದದ್ದೂ ಇದೆ. ಅಷ್ಟೇ ಅಲ್ಲ, ಅವರಿಗೆ ಫೋನ್ ಮಾಡಿ ಆಫೀಸಿಗೆ ಕರೆಸಿಕೊಂಡು ವ್ಹಿಸ್ಕಿ ಕೊಟ್ಟು, ಬುಕ್ಸ್ ಕೊಟ್ಟು, ಕತೆಗಳ ಬಗ್ಗೆ ಮಾತಾಡಿ ಕಳುಹಿಸಿದ್ದೂ ಇದೆ.
ಅಲ್ಲಿ ಮೈಸೂರಿಗೆ ಹೋಗ್ತಾ ಅಗ್ರಹಾರರಿಗೆ ಹಂಗೆ, ಇಲ್ಲಿ ಈ ಕತೆಗಾರರಿಗೆ ಹಿಂಗೆ!
ಹೀಗಿರುವಾಗ ನಾನು ಅವರನ್ನು ಪಾರ್ಟಿಗೆ ಕರೆದದ್ದು ಹೇಗೆ ತಪ್ಪಾಯಿತು ಎಂದು ಯೋಚಿಸುವುದಕ್ಕಿಂತ, ಲಂಕೇಶರ ಹತ್ತಾರು ಮುಖಗಳನ್ನ, ಶಕ್ತಿ ಮತ್ತು ಮಿತಿಯನ್ನ ಅರಿಯುವುದು, ಮತ್ತದನ್ನು ನಿಮ್ಮ ಮುಂದಿಡುವುದು ಸರಿ ಎನಿಸುತ್ತಿದೆ, ಲಂಕೇಶರಿಲ್ಲದ ಈ ಹೊತ್ತಿನಲ್ಲಿ.

No comments:

Post a Comment