Tuesday, July 22, 2014

ಸದನದ ಸಾಕ್ಷಿಪ್ರಜ್ಞೆ ರಮೇಶ್‌ಕುಮಾರ್‌

ಕೆ.ಆರ್‌. ರಮೇಶ್‌ಕುಮಾರ್‌
‘‘ಅತ್ಯಾಚಾರ ಪ್ರಕರಣದಿಂದ ತುಂಬಾ ನೋವಾಗಿದೆ. ನಮ್ಮ ಮನೆಯ ಮಗಳಿಗೆ ಹೀಗಾಗಿದ್ದರೆ ಆಘಾತ ಹೇಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳಿ. ಇದರಲ್ಲಿ ರಾಜಕೀಯ ಬೇಡ. ಎಲ್ಲ ಸರಕಾರದಲ್ಲೂ ಪೊಲೀಸ್‌ ವರ್ಗಾವಣೆ ಎಂಬುದು ಕಾಸ್ಟ್ ಅಂಡ್‌ ಕ್ಯಾಷ್ ಆಧರಿಸುತ್ತದೆ. ರಾಜ್ಯ ಉಳಿಯಬೇಕು, ಮಾನ ಮರ್ಯಾದೆಯಿಂದ ನಮ್ಮ ಹೆಣ್ಣುಮಕಕ್ಳು, ನಾವೆಲ್ಲ ಬದುಕಬೇಕು ಎಂದಾದರೆ ಅಲ್ಲಿ ಎಲ್ಲೀ ಎನ್‌ಕೌಂಟರ್‌ ಮಾಡೋ ಬದಲು, ಇಲ್ಲಿ ಎನ್‌ಕೌಂಟರ್‌ ಮಾಡ್ರಿ. ಅದು ನಾಳೆಯಿಂದಲೇ ಶುರುವಾಗಲಿ...’’
ಹೀಗೆಂದವರು 64 ವರ್ಷದ ಕೆ.ಆರ್‌. ರಮೇಶ್‌ಕುಮಾರ್‌, ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕರು.
ಫ್ರೇಸರ್‌ ಟೌನ್‌ನಲ್ಲಿ ನಡೆದ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಸದನದಲ್ಲಿ ಯಥಾಪ್ರಕಾರದ ಸಮಿತಿ ರಚನೆ, ತನಿಖೆ, ವರದಿ, ಕಾನೂನು ಕ್ರಮ, ಕಠಿಣ ಶಿಕ್ಷೆಗಳ ಒಣಮಾತಿನ ಸಮರ ನಡೆಯುತ್ತಿದ್ದಾಗ ಎದ್ದು ನಿಂತ ರಮೇಶ್‌ಕುಮಾರ್‌, ಗುಂಡು ಹೊಡೆದಂತೆ ಮಾತನಾಡಿದ್ದರು. ಅವರ ನಿಷ್ಠುರ ಮಾತಿಗೆ ಆಡಳಿತ ಪಕ್ಷದವರು ಬೆಚ್ಚಿ ಬಿದ್ದಿದ್ದರು, ವಿರೋಧ ಪಕ್ಷದವರು ನಾಚಿ ತಲೆ ತಗ್ಗಿಸಿದ್ದರು. ಸದನವೆಂಬ ನ್ಯಾಯದೇಗುಲದಲ್ಲಿ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ನಿರ್ವಹಿಸಬೇಕಾದ ಪಾತ್ರವನ್ನು ತಮ್ಮ ಖಡಕ್‌ ಮಾತು ಮತ್ತು ನಿಷ್ಪಕ್ಷಪಾತ ನಿಲುವುಗಳ ಮೂಲಕ ಮನದಟ್ಟು ಮಾಡಿಸಿದ್ದರು, ಮಾದರಿಯಾಗಿದ್ದರು.
ರಮೇಶ್‌ಕುಮಾರ್‌ ಇರುವುದೇ ಹಾಗೆ. ಆಡಳಿತ ಪಕ್ಷದೊಳಗಿದ್ದೇ ಪ್ರತಿಪಕ್ಷದಂತೆ ಕೆಲಸ ಮಾಡುವ ಮೌಲ್ಯಾಧಾರಿತ ರಾಜಕಾರಣಿ. ಪ್ರಜಾಪ್ರಭುತ್ವದ ಆಶಯಗಳನ್ನು ಪಾಲಿಸಿ ಪೋಷಿಸುವ; ತತ್ವ, ಸಿದ್ಧಾಂತಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡುವ ರಾಜಕೀಯ ತಜ್ಞ.
ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಾಡಿನ ಜನರಲ್ಲಿ ಆತಂಕ, ಹತಾಶಭಾವನೆ ಮೂಡಿ ಎಂತಹ ಆಕ್ರೋಶ ವ್ಯಕ್ತವಾಗುತ್ತಿದೆಯೋ ಅದನ್ನೇ ಸದನದಲ್ಲಿ ರಮೇಶ್‌ಕುಮಾರ್‌ ವ್ಯಕ್ತಪಡಿಸಿದ್ದಾರೆ. ಅಂದರೆ ನಾಡಿನ ಜನರ ಒಡಲಾಳದ ಉರಿ ರಮೇಶ್‌ಕುಮಾರ್‌ ಬಾಯಲ್ಲಿ ಬಂದಿದೆ. ರಮೇಶ್‌ಕುಮಾರ್‌ ನಮ್ಮೆಲ್ಲರ ಸಾಕ್ಷಿಪ್ರಜ್ಞೆಯಂತೆ ವರ್ತಿಸಿ ಈ ನಾಡಿನ ಘನತೆ, ಗೌರವಗಳನ್ನು ಕಾಪಾಡಿದ್ದಾರೆ, ಕಾಪಾಡುತ್ತಿದ್ದಾರೆ.
ಸದನದಲ್ಲಿ ಅವರು ಪ್ರಸ್ತಾಪಿಸಿದ ಮತ್ತೊಂದು ಮಹತ್ವದ ವಿಷಯವೆಂದರೆ, ಪೊಲೀಸ್‌ ವರ್ಗಾವಣೆಯಲ್ಲಿ ನಡೆಯುವ ಕ್ಯಾಷ್‌ ಅಂಡ್‌ ಕಾಸ್ಟ್. ಪ್ರತಿಯೊಬ್ಬ ಶಾಸಕನು ಚುನಾಯಿತನಾದ ನಂತರ ಮಾಡುವ ಮೊದಲ ಕೆಲಸ, ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಗೆ ತನಗೆ ಬೇಕಾದ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿಕೊಳ್ಳುವುದು. ಇಲ್ಲಿ ಕೆಲವು ಕಡೆ ಜಾತಿ, ಹಲವು ಕಡೆ ಹಣ ಕೆಲಸ ಮಾಡುತ್ತದೆ. ಹಣ ಕೊಟ್ಟ ಅಧಿಕಾರಿ ಅಂದಾದುಂದಿ ಕೆಲಸಗಳಲ್ಲಿ ಮುಳುಗೇಳುತ್ತಾನೆ. ಜಾತಿಯ ವಶೀಲಿಬಾಜಿಯಿಂದ ಬಂದ ಅಧಿಕಾರಿ ಶಾಸಕನ ಅಡಿಯಾಳಾಗುತ್ತಾನೆ. ಎರಡೂ ಸಂದರ್ಭಗಳಲ್ಲಿ ಸಾಮಾನ್ಯ ಜನ ನಲುಗಿಹೋಗುತ್ತಾರೆ. ಈ ಅನೈತಿಕ ಸಂಬಂಧಕ್ಕೆ ಕಡಿವಾಣ ಬೀಳಬೇಕು ಎನ್ನುವುದು ರಮೇಶ್‌ಕುಮಾರ್‌ ಅವರ ದಿಟ್ಟ ನಿಲುವು. ಇದು ಇವತ್ತಿನ ಸಂದರ್ಭದಲ್ಲಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೆ ಗೊತ್ತಿದ್ದರೂ, ಕಹಿಸತ್ಯವನ್ನು ಹೇಳಲು ಹಿಂಜರಿಯದವರು, ಹೇಳಿ ನಿಷ್ಠುರವಾಗುವವರು ಈ ರಮೇಶ್‌ಕುಮಾರ್‌.
ಇಂತಹ ರಮೇಶ್‌ಕುಮಾರ್‌ ಸಂಸದೀಯ ವ್ಯವಹಾರಗಳ ಬಗ್ಗೆ, ಶಾಸಕರ ಹಕ್ಕು ಬಾಧ್ಯತೆಗಳ ಬಗ್ಗೆ, ಕಾನೂನು ರೀತಿ-ನೀತಿಗಳ ಬಗ್ಗೆ ಕರಾರುವಾಕ್ಕಾಗಿ ಮಾತನಾಡಬಲ್ಲ ಮುತ್ಸದ್ದಿ. ಈ ಮುಂಗಾರು ಅಧಿವೇಶನ ಶುರುವಾದ ದಿನದಿಂದ ಇಲ್ಲಿಯವರೆಗೆ, ರಾಜ್ಯದ ಜನತೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಪರಿಹಾರೋಪಾಯಗಳ ಬಗ್ಗೆ ತರ್ಕಬದ್ಧವಾಗಿ ಚರ್ಚಿಸಿದ್ದಾರೆ. ತಮ್ಮನ್ನು ತಾವೇ ಆತ್ಮವಿಮರ್ಶೆಗೆ ಒಡ್ಡಿಕೊಂಡಿದ್ದಾರೆ. ಅಂತಹ ಕೆಲವು ಖಡಕ್‌ ಮಾತುಗಳು ಇಲ್ಲಿವೆ ನೋಡಿ...
‘ಚುನಾವಣಾ ಸುಧಾರಣೆಯ ಬಗ್ಗೆ ಯಾವುದೇ ಕಾಯಿದೆ ಬೇಕಿಲ್ಲ. ಅಧಿಕಾರದಲ್ಲಿರುವ ಎಲ್ಲರಿಗೂ ಈಗಿರುವ ವ್ಯವಸ್ಥೆಯೇ ಬೇಕಾಗಿದೆ’
‘ಭ್ರಷ್ಟಾಚಾರ ಮಾಡಿ ಕೋಟ್ಯಂತರ ಹಣ ಲೂಟಿ ಮಾಡಿ ತಾರಾ ಹೋಟೆಲ್‌ಗಳಲ್ಲಿ ವೈಭವದ ಮದುವೆಗಳನ್ನು ಮಾಡುತ್ತಾರೆ. ಅಂಥ ಆಡಂಬರದ ಮದುವೆಗಳಿಗೆ ಹೋಗುವುದಿಲ್ಲ ಎಂದು ಸದನದ ಎಲ್ಲ ಶಾಸಕರು ತೀರ್ಮಾನ ತೆಗೆದುಕೊಳ್ಳಬೇಕು’
‘ವಿಜಯಾನಂದ ಕಾಶಪ್ಪನವರ್‌ ನಡವಳಿಕೆ ಗೌರವ ತರುವಂಥದ್ದಲ್ಲ. ಇಲ್ಲಿರುವ ಬಹುತೇಕರು ಇಂತಹದನ್ನೇ ಮಾಡಿದ್ದಾರೆ. ಸಿಕ್ಕಿಹಾಕಿಕೊಂಡಿಲ್ಲ ಅಷ್ಟೆ. ಆ ಅವಿವೇಕಿಗೆ ಗೊತ್ತಾಗಿಲ್ಲ, ಸಿಕ್ಕಿಹಾಕಿಕೊಂಡಿದ್ದಾನೆ’
‘ಅಕ್ರಮ ಮರಳು ದಂಧೆಯಲ್ಲಿ ರಾಜಕಾರಣಿಗಳು ಮತ್ತವರ ಮಕ್ಕಳು ಇರಬಹುದು. ನಮಗೆ ಗೊತ್ತಿಲ್ಲದೆ ನಮ್ಮ ಮಕ್ಕಳು ಅಂತಹ ಕೆಲಸ ಮಾಡುತ್ತಿದ್ದರೆ ಹಾಗೆ ಮಾಡಬೇಡ ಎಂದು ಬುದ್ಧಿ ಹೇಳಬೇಕಾಗುತ್ತದೆ’
‘ನಾನು ಮೊದಲ ಚುನಾವಣೆ ಎದುರಿಸಿದಾಗ ಕೇವಲ ಮೂವತ್ತೈದು ಸಾವಿರ ಹಣ ಖರ್ಚು ಮಾಡಿದ್ದೆ. ಆದರೆ ಈಗ 3.5 ಕೋಟಿ ಖರ್ಚು ಮಾಡುವ ಪರಿಸ್ಥಿತಿ ಬಂದಿದೆ.’
ಹೀಗೆ ನೇರವಾಗಿ, ನಿಷ್ಠುರವಾಗಿ ಮಾತಾಡಿ ತಮ್ಮನ್ನು ತಾವು ಆತ್ಮವಿಮರ್ಶೆಗೊಳಪಡಿಸಿಕೊಳ್ಳುತ್ತಲೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಶಾಸಕರು ಮತ್ತು ಮಂತ್ರಿಗಳಿಗೆ ಮುಜುಗರವನ್ನುಂಟುಮಾಡಿದ್ದಾರೆ. ಹಾಗೆಯೇ ಸದನ ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಂಡ ಮುತ್ಸದ್ದಿಯಾಗಿದ್ದಾರೆ.
ಇಂತಹ ರಮೇಶ್‌ಕುಮರ್‌ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು 1978 ರಲ್ಲಿ. ಆಗಿನ್ನು ಅವರಿಗೆ 25 ವರ್ಷಗಳು. ಬಿಸಿರಕ್ತದ ಯುವ ನ್ಯಾಯವಾದಿಯನ್ನು ರಾಜಕೀಯಕ್ಕೆ ಕರೆತಂದವರು ಹಿಂದುಳಿದವರ ಆಶಾಕಿರಣ ಎಂದೇ ಹೆಸರಾದ ದೇವರಾಜ ಅರಸು. ಅರಸು ಅವರ ತತ್ವನಿಷ್ಠ ರಾಜಕಾರಣವನ್ನು ಬಹಳ ಹತ್ತಿರದಿಂದ ಕಂಡ ರಮೇಶ್‌ಕುಮಾರ್‌, ಆ ಕಾಲಕ್ಕೇ ಅರಸು ಗರಡಿಯ ಪುಟ್ಟ ಪೈಲ್ವಾನ. 1978 ರ ಮೊದಲ ಚುನಾವಣೆಯಲ್ಲಿಯೇ ಶಾಸಕರಾಗಿ ಆಯ್ಕೆಯಾದ ರಮೇಶ್‌ಕುಮಾರ್‌ ಅವರಿಗೆ, ಹಿರಿಯ ಮಾನವಂತ ರಾಜಕಾರಣಿ ಕೆ.ಎಚ್‌. ರಂಗನಾಥ್‌, ರಾಜಕೀಯವಾಗಿ ಭಾಷೆ, ನಡತೆಯನ್ನು ತಿದ್ದಿತೀಡಿ ಬೆಳೆಸಿದರು. ಆ ನಂತರ ಬಸವಲಿಂಗಪ್ಪ ಮತ್ತು ಕೆ.ಎಚ್‌. ಪಾಟೀಲರ ಮಾರ್ಗದರ್ಶನವೂ ದೊರಕಿತು.
1978 ರಿಂದ 2013 ರವರೆಗೆ, 35 ವರ್ಷಗಳ ಕಾಲ ರಾಜಕಾರಣ ಮಾಡಿರುವ ರಮೇಶ್‌ಕುಮಾರ್‌ ಐದು ಬಾರಿ ಶಾಸಕರಾಗಿ ಗೆದ್ದಿದ್ದಾರೆ. ನಾಲ್ಕು ಸಲ ಸೋತಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಒಂದೊಂದು ಪಕ್ಷದಿಂದ, ಭಿನ್ನ ಗುರುತಿನ ಮೇಲೆ ಚುನಾವಣೆಯನ್ನು ಎದುರಿಸಿದ್ದಾರೆ. ಬ್ರಾಹ್ಮಣರಾಗಿ ಹುಟ್ಟಿದರೂ, ಜಾತಿಯನ್ನ್ನು ಮರೆತು, ಎಲ್ಲ ಜಾತಿ ಜನಾಂಗಗಳ ಜನರಿಗೂ ಹತ್ತಿರವಾಗಿದ್ದಾರೆ. ಹಾಗಂತ ರಮೇಶ್‌ಕುಮಾರ್‌ ಸತ್ಯ ಹರಿಶ್ಚಂದ್ರರೇನಲ್ಲ. ಆದರೆ ಸಹಿಸಬಲ್ಲ ಸೈಜಿನ ಅವಘಡಗಳನ್ನು ಮಾಡಿ, ಅದಕ್ಕೂ ಸಮರ್ಥನೀಯ ಕಾರಣಗಳನ್ನು ಕೊಟ್ಟು ಮನಗೆಲ್ಲಬಲ್ಲ ಆಸಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅರಸು ಅವರ ರಾಜಕೀಯ ಗರಡಿಯಲ್ಲಿ ಪಳಗಿದ ರಮೇಶ್‌ಕುಮಾರ್‌ರಿಗೆ, ಕೆ.ಎಚ್‌.ರಂಗನಾಥ್‌, ಬಿ.ಬಸವಲಿಂಗಪ್ಪ, ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡ, ಜೆ.ಎಚ್‌. ಪಟೇಲ್‌ರಂತಹ ಮಹಾನ್‌ ನಾಯಕರೊಂದಿಗೆ ಒಡನಾಡಿದ ಅಪಾರ ಅನುಭವವಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ರಮೇಶ್‌ಕುಮಾರ್‌ ಇಲ್ಲಿಯವರೆಗೆ ಐದು ಬಾರಿ ಗೆದ್ದು ಶಾಸಕರಾಗಿದ್ದರೂ, 1994 ರಲ್ಲಿ ವಿಧಾನಸಭೆಯ ಸ್ಪೀಕರ್‌ ಆದದ್ದನ್ನು ಬಿಟ್ಟರೆ, ಮಂತ್ರಿಯಾಗುವ ಯೋಗ ಬಂದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ‘ನನ್ನನ್ನು ರಾಜಕೀಯಕ್ಕೆ ಕರೆತಂದವರು, ದಾರಿ ತೋರಿದವರು, ಬೆಳೆಸಿದವರು ಮಹಾನ್‌ ಮಾನವತಾವಾದಿಗಳು. ಅವರ ಆಶಯಕ್ಕೆ ತಕ್ಕಂತೆ ಬದುಕುತ್ತಿದ್ದೇನೆ. ಅವಕಾಶಗಳು ಹುಡುಕಿಕೊಂಡು ಬರಬೇಕೇ ಹೊರತು, ನಾನಾಗಿ ಹೋಗಿ ನಡುಬಗ್ಗಿಸಿ ನಿಲ್ಲುವ, ಕೇಳುವ ಜಾಯಮಾನ ನನ್ನದಲ್ಲ. ಮಂತ್ರಿ ಸ್ಥಾನವಿಲ್ಲದೆಯೂ ಜನರ ಕೆಲಸಗಳನ್ನು ಮಾಡಬಹುದು. ಅದರಲ್ಲಿಯೇ ನನಗೆ ನೆಮ್ಮದಿ ಇದೆ’’ ಎನ್ನುತ್ತಾರೆ.
ರಾಜಕಾರಣ, ರಾಜಕಾರಣಿಗಳೆಂದರೇ ಹೇವರಿಕೆ ಹುಟ್ಟುವ ಇವತ್ತಿನ ದಿನಗಳಲ್ಲಿ ಜನಪರವಾಗಿರುವ ರಮೇಶ್‌ಕುಮಾರ್‌ರಂತಹ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾದರೆ, ಭವಿಷ್ಯದ ರಾಜಕಾರಣಕ್ಕೊಂದು ಬೆಲೆ ಮತ್ತು ನೆಲೆ.
ರಮೇಶ್‌ಕುಮಾರ್‌

No comments:

Post a Comment