Thursday, November 5, 2015

ಮಾಯಾಕನ್ನಡಿಯಲ್ಲಿ ಕಂಡದ್ದು


ಕನ್ನಡ ಸಾಹಿತ್ಯ ಲೋಕಕ್ಕೆ ಫ್ರೆಂಚ್‌ನ ನವ್ಯಕವಿ ಚಾರ್ಲ್ಸ್ ಬೋದಿಲೇರ್‌ ಪರಿಚಯವಾಗಿದ್ದು 1974ರಲ್ಲಿ. ಪಿ. ಲಂಕೇಶರು ಆತನ ’ಪ್ಲ್ಯೊರ್‌ ದ್‌ ಮಾಲ್‌’ ಕೃತಿಯನ್ನು ಕನ್ನಡಕ್ಕೆ ’ಪಾಪದ ಹೂಗಳು’ ಎಂದು ಅನುವಾದಿಸುವ ಮೂಲಕ. ಹಾಗೆ ನೋಡಿದರೆ, 70ರ ದಶಕ ಹೊಸತನಕ್ಕೆ ಗರಿಗೆದರಿದ ಕಾಲ. ನವ್ಯ ಸಾಹಿತ್ಯದ ನವಚೈತನ್ಯದ ಕಾಲ. ಜಡ್ಡುಗಟ್ಟಿದ ಕನ್ನಡ ಸಾಹಿತ್ಯಕ್ಕೆ ಶಾಕ್‌ ಕೊಟ್ಟ ಕಾಲ.
ನವ್ಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಲಂಕೇಶರು ಸಹಜವಾಗಿಯೇ ಬೋದಿಲೇರ್‌ನ ಪ್ರಭಾವಕ್ಕೆ ಒಳಗಾಗಿ, ಮಾಲ್‌ ಕೃತಿಯನ್ನು ಕನ್ನಡಕ್ಕೆ ತಂದರು. ಕಾಟಾಚಾರಕ್ಕಾಗಿ ಕರೆತಂದಿದ್ದಲ್ಲ, ಬೋದಿಲೇರನ ಬನಿಯನ್ನು, ಭಾವವನ್ನು ಕನ್ನಡ ಭಾಷೆಗಿಳಿಸಿದ್ದರು. ಅದು ಆ ಕಾಲಕ್ಕೆ, ಕನ್ನಡ ಸಾಹಿತ್ಯಲೋಕಕ್ಕೆ ವಿಶಿಷ್ಟ ಒಗರನ್ನು ಕೊಟ್ಟ ಕೃತಿಯಾಗಿತ್ತು. ಆ ಕೃತಿ, ಸಾಹಿತಿಯನ್ನು ಹಾಗೂ ಆತನ ಸಾಹಿತ್ಯವನ್ನು ಪ್ರೀತಿಸದೆ ಅನುವಾದ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಕಂಡಿರಿಸಿತ್ತು. ಹಾಗೆಯೇ ಲಂಕೇಶರ ವಿಶಿಷ್ಟತೆ ಮತ್ತು ವಿಕ್ಷಿಪ್ತತೆಯನ್ನೂ ಹೊರಹಾಕಿತ್ತು.
’ಪಾಪದ ಹೂಗಳು’ ಮೊದಲ ಮುದ್ರಣ ಕಂಡಿದ್ದು 1974ರಲ್ಲಿ, ಮೈಸೂರಿನ ನೆಲಮನೆ ದೇವೇಗೌಡರ ನೆಲಮನೆ ಪ್ರಕಾಶನದಿಂದ. ಅದಾಗಿ ಸರಿ ಸುಮಾರು 20 ವರ್ಷಗಳ ನಂತರ, 1993ರಲ್ಲಿ ಪಾಪದ ಹೂಗಳು ಕೃತಿ, ಲಂಕೇಶರೇ ಪ್ರಾರಂಭಿಸಿದ ’ಪತ್ರಿಕೆ ಪ್ರಕಾಶನ’ದಿಂದ ನಾಲ್ಕನೆ ಮುದ್ರಣ ಕಂಡಿತ್ತು.
ಆ ಸಂದರ್ಭದಲ್ಲಿ ಲಂಕೇಶರು ನಾಲ್ಕನೆ ಮುದ್ರಣಕ್ಕೆ ಮುನ್ನುಡಿ ಬರೆದು ನನ್ನ ಕೈಗಿಟ್ಟು, ’ನೆಲಮನೆ ದೇವೇಗೌಡನದೊಂದು ಮಳೆ ಜೋಡಿಸುವ ಪ್ರಿಂಟಿಂಗ್‌ ಪ್ರೆಸ್‌ ಇತ್ತು. ನಮಗೆ ಅವನು, ಅವನಿಗೆ ನಾವು ಅನ್ನುವ ದಿನಗಳವು. ಒಂದು ದಿನ ಬೋದಿಲೇರ್‌ನ ’ಮಾಲ್‌’ ಪುಸ್ತಕದ ಕೆಲವು ಪುಟಗಳನ್ನು ಅನುವಾದ ಮಾಡಿ, ನೆಲಮನೆ ದೇವೇಗೌಡನಿಗೆ ಕೊಟ್ಟಿದ್ದಲ್ಲ.. ತೋರಿಸಿ, ಐದುನೂರು ರೂಪಾಯಿ ಅಡ್ವಾನ್ಸ್ ಪಡೆದಿದ್ದೆ...’ ಎಂದು ಸುಮ್ಮನಾದರು. ಸ್ಪಲ್ಪ ಹೊತ್ತು ಬಿಟ್ಟು, ’ಕುಡಿಯಲಿಕ್ಕೆ ಕಾಸಿಲ್ಲದೆ...’ ಎಂದು ನಗಾಡಿದರು.
’ಪಾಪದ ಹೂಗಳು’ ಪುಸ್ತಕದಲ್ಲಿದ್ದ ’ಸದಾ ಕುಡಿದಿರು... ಏನನ್ನಾದರೂ; ವೈನ್‌, ಕಾವ್ಯ, ಋಜುತ್ವ...’ಕ್ಕೆ ನನಗೆ ಉತ್ತರ ಸಿಕ್ಕಿತ್ತು. ಲಂಕೇಶರಲ್ಲಿ ಕಾವ್ಯ ಕಟ್ಟುವ ಕಸುಬುದಾರಿಕೆ ಇತ್ತು, ಕುಡಿಯುವ ಚಟವಿತ್ತು, ಇದ್ದದ್ದನ್ನು ಇದ್ದಂಗೆ ಹೇಳುವ ದಾಢಸಿ ಗುಣವೂ ಇತ್ತು. ಬೋದಿಲೇರನ ಕಾಮ ಮತ್ತು ಖಿನ್ನತೆ, ಹತಾಶೆ ಮತ್ತು ಆಕ್ರೋಶ ಲಂಕೇಶರಲ್ಲೂ ಕಾಣತೊಡಗಿತ್ತು.
ಕೇವಲ 46 ವರ್ಷಗಳಷ್ಟೇ ಬದುಕಿದ್ದ ಬೋದಿಲೇರ್‌, ಇದ್ದಷ್ಟು ದಿನವೂ ಸಂಘರ್ಷಕ್ಕೆ ಒಡ್ಡಿಕೊಂಡು ಬದುಕಿದ್ದ. ಆ ಕಾಲಕ್ಕೇ ವಿಕ್ಷಿಪ್ತವೆನ್ನಿಸಿದ ತನ್ನ ಬರಹಗಳಿಂದ ಸಮಕಾಲೀನ ಸಮಾಜದ ನೈತಿಕ ಪ್ರಜ್ಞೆಗೆ ಸವಾಲಾಗಿದ್ದ. ನಶ್ವರ ವಸ್ತುಗಳನ್ನು ನಿರ್ಲಕ್ಷಿಸುತ್ತಲೇ ನಿಸರ್ಗವನ್ನು ಆಸಕ್ತಿಯಿಂದ ಅವಲೋಕಿಸುತ್ತಿದ್ದ. ಜಡಗೊಂಡ ಓದುಗರನ್ನು ತನ್ನ ಅನುಭವದಿಂದ ಬೆಚ್ಚಿ ಬೀಳಿಸದೆ ಇರುವ ಲೇಖಕ ಲೇಖಕನೇ ಅಲ್ಲ; ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೇ ಕಾಲಕ್ಕೆ ಎರಡು ಮುಖಗಳು ಗೋಚರಿಸುತ್ತವೆ- ಒಂದು ದೇವರು, ಮತ್ತೊಂದು ದೆವ್ವ ಎಂದಿದ್ದ.
ಇಂತಹ ಬೋದಿಲೇರ್‌ನನ್ನು ಕನ್ನಡಕ್ಕಿಳಿಸಿದ ಲಂಕೇಶರು, ಇದು ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ. ಅವನ ನರಕ ನೋಡಿಯಾದರೂ ನಮ್ಮ ಓದುಗರು ಎಚ್ಚರಗೊಳ್ಳಲಿ ಎಂಬುದು ನನ್ನಾಸೆ ಎಂದು ’ಪಾಪದ ಹೂವುಗಳ’ನ್ನು ಅನುವಾದಿಸಿದ್ದರು. ಫ್ರೆಂಚಿನ ಪಾಪದ ಹೂಗಳನ್ನು ಲಂಕೇಶರು ಕನ್ನಡಕ್ಕೆ ಕರೆತಂದ 40 ವರ್ಷಗಳ ನಂತರ, ಬೋದಿಲೇರ್‌ನ ಗದ್ಯರೂಪದ ಐವತ್ತು ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೆ ಕರೆತಂದಿದ್ದಾರೆ, ಲಂಕೇಶರ ಆಪ್ತ ಬಳಗದವರಲ್ಲೊಬ್ಬರಾದ ಹೊಸ ತಲೆಮಾರಿನ ವಿಶಿಷ್ಟ ಬರಹಗಾರ ಎಸ್‌.ಎಫ್‌. ಯೋಗಪ್ಪನವರ್‌.
’ಮಾಯಾಕನ್ನಡಿ’ ಎಂಬ ಈ ಕೃತಿಯಲ್ಲಿ ಐವತ್ತು ಗಪದ್ಯಗಳಿವೆ. ಇವು ಬೋದಿಲೇರ್‌ನ ಮಾನವೀಯ ಸಂವೇದನೆಯ ಕೊನೆಯ ಕಾವ್ಯಧ್ವನಿ ಎನ್ನುವಂತೆ, ಕಾಲವನ್ನು ಜಯಿಸಿ ಹೊರಬಂದಂತೆ, ತೀವ್ರವಾಗಿ ಅನುಭವಿಸಿ ಅರಗಿಸಿಕೊಂಡಂತೆ, ಪ್ರತಿಯೊಂದು ಕವಿತೆಯೂ ಓದುಗನನ್ನು ಮುಟ್ಟಿ ಮಾತನಾಡಿಸುವಂತಿದೆ. ಅದಕ್ಕೆ ಕಾರಣ ಯೋಗಪ್ಪನವರ ಸಮರ್ಥ ಕನ್ನಡೀಕರಣ, ಅನುವಾದದಲ್ಲಿ ಕುದುರಿದ ಕುಸುರಿತನ. ಅದು ಪ್ರತಿ ಪುಟದಲ್ಲೂ ಕಾಣುತ್ತದೆ.
ನಿಮ್ಮ ಚಿತ್ತ ಕೆಡಿಸುವ ಅಂತಹ ಕೆಲವು ಕಥನಗಳೆಂದರೆ...
"ಎಂಥ ಪೋಲಿ ಆತ್ಮ ನನ್ನದು, ಜಗತ್ತಿನ ತುಂಬೆಲ್ಲಾ ತಿರುಗಾಡಿ, ನನ್ನ ಮಗ್ಗುಲಲ್ಲಿರುವುದನ್ನೇ ನೋಡಲಿಲ್ಲ.’’
"ಅಯ್ಯೋ, ನಮ್ಮಂಥ ಅನಿಷ್ಟ ಮುದುಕಿಯರಿಗೆ ಮುಗ್ಧ ಮಗುವನ್ನು ಕೂಡ ಖುಷಿಪಡಿಸುವ ಕಾಲ ಮುಗಿದುಹೋಯಿತು. ಸದ್ಯ ನಾವು ಕೈಗೂಸುಗಳನ್ನು ಎತ್ತಿ ಆಡಿಸಬೇಕೆಂದರೂ ಅವುಗಳಲ್ಲಿ ನಾವು ಭಯ ಹುಟ್ಟಿಸುತ್ತೇವೆ, ಬೆದರುಬೊಂಬೆಗಳಂತೆ."
"ಆಕೆ ನಡೆದುಹೋಗುತ್ತಿದ್ದರೆ ಆಕೆಯ ತುಂಬಿದ ನಿತಂಬಗಳ ಮೇಲಿನ ತೆಳ್ಳಗಿನ ನಡು ಸಹಜವಾಗಿ ಬಳಕುತ್ತಿತ್ತು. ಆಕೆಯ ಗುಲಾಬಿ ವರ್ಣದ ರೇಷ್ಮೆಯ ಹೊರಉಡುಪು, ಆಕೆಯ ಮೈಬಣ್ಣಕ್ಕೆ ವಿಭಿನ್ನವಾದ ಉತ್ಕೃಷ್ಟ ವ್ಯತ್ಯಾಸವಾಗಿತ್ತು. ಆಕೆಯ ಬೆನ್ನ ಹಿಂದಿನ ಇಳಿಜಾರು ನಿಡಿದಾದ ನಡುವನ್ನು ಅಪ್ಪಿ ಹಿಡಿದಿತ್ತು. ಆಕೆಯ ನೆಟ್ಟಗಿನ ಮೊಲೆಗಳು ಮೊನಚಾಗಿ ಚುಚ್ಚುತ್ತಿದ್ದವು.’’
"ಇದು ಕುಡಿಯುವ ಸಮಯ. ನೀನು ಕಾಲದ ಗುಲಾಮನಾಗಿ ಹುತಾತ್ಮನಾಗುವ ಬದಲು ಏನನ್ನಾದರೂ ಕುಡಿ. ಆದರೆ ಕುಡಿ ಯಾವ ಅಡೆತಡೆಯಿಲ್ಲದೇ ಕುಡಿ, ಮದಿರೆಯನ್ನು, ಕಾವ್ಯವನ್ನು, ಸಜ್ಜನಿಕೆಯನ್ನು. ನೀನು ಆಯ್ಕೆ ಮಾಡಿಕೊಂಡಂತೆ ಏನನ್ನಾದರೂ ಕುಡಿ.’’
"ನಾನೊಬ್ಬ ಕವಿ, ಆದರೆ ನೀನು ತಿಳಿದಂತೆ ನಾನು ಅಷ್ಟು ಅವಿವೇಕಿಯಲ್ಲ, ಮತ್ತು ನಿನ್ನ ಈ ಅಮೂಲ್ಯ ಗೋಳುಗಳನ್ನು ಹೆಚ್ಚು ಮಾಡುತ್ತ ನನ್ನನ್ನು ಆಯಾಸಗೊಳಿಸಿದರೆ ನೀನು ಸರಿಪಡಿಸಲಸಾಧ್ಯವಾದ ಹೆಂಡತಿಯೆಂದು ತಿಳಿದು ಕಿಟಕಿಯಿಂದ ಖಾಲಿ ಬಾಟಲಿ ಎಸೆದಂತೆ ಎಸೆದುಬಿಡುವೆ.’’
ನಿರಾಕರಿಸುತ್ತಲೇ, ನಿಖರತೆ ತೋರುವ; ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಲೇ, ಬದುಕುವ ಆಶೆ ಚಿಗುರಿಸುವ; ಯಾತನೆ ಅನುಭವಿಸುತ್ತಲೇ, ಸುಖದ ಬುನಾದಿಯ ಬುಡಕ್ಕಿಳಿಯುವ; ಒಂದರೊಳಗೊಂದು ಕರಗುವ, ಕಾಣುವ, ಪ್ರತಿದಿನದ ಅಸಂಖ್ಯಾತ ಅಸ್ಖಲಿತ ಆಕೃತಿಗಳನ್ನು ನಮಗೇ ತೋರುವ ಮಾಯಾಕನ್ನಡಿ.
ಈ ಮಾಯಾಕನ್ನಡಿಯ ಬರಹಗಳನ್ನು ಓದುತ್ತಿದ್ದಂತೆ ನನಗನ್ನಿಸಿದ್ದು, ಇವತ್ತಿನ ಹೊಸ ತಲೆಮಾರಿನ ಬರಹಗಾರರು ಬಹಳ ಉತ್ಸಾಹದಿಂದ ಬರೆಯುತ್ತಿದ್ದಾರೆ. ಆದರೆ ಅವರಾರೂ ನವ್ಯ, ನವೋದಯ, ಬಂಡಾಯಗಳೆಂಬ ಯಾವ ಗುಂಪಿಗೂ ಸೇರದವರು. ಎಡಪಂಥೀಯ, ಬಲಪಂಥೀಯ ಎಂಬ ಪಂಥಕ್ಕೂ ಕಟ್ಟಿಹಾಕಿಕೊಳ್ಳದವರು. ಗಾಂಧಿ, ಮಾರ್ಕ್ಸ್, ಲೋಹಿಯಾಗಳ ವಾದಕ್ಕೂ ಒಗ್ಗದವರು. ಅಂದರೆ ಇವುಗಳಿಂದ ಹೊರತಾದವರು ಎಂದಲ್ಲ, ಇವುಗಳೊಳಗೇ ಇದ್ದೂ ಇಲ್ಲದಂತಿರುವವರು. ಯಾರು ಏನನ್ನು ಬೇಕಾದರೂ ಬರೆದೂ ಬೇರೆಯೇ ಆದವರು. ಇಂತಹ ಬರಹಗಾರರಿಗೆ ಬೋದಿಲೇರ್‌ ಖಂಡಿತ ಇಷ್ಟವಾಗುತ್ತಾನೆ. ಅವರ ಕನಸು, ಕನವರಿಕೆ, ಕಲ್ಪನೆಗಳಿಗೆ ಈ ಮಾಯಾಕನ್ನಡಿ ಚಿಮ್ಮು ಹಲಗೆಯಾಗುವುದರಲ್ಲಿ, ಭಿತ್ತಿಯೊಳಗಿನ ಭಾವಕ್ಕೆ ಬರಹರೂಪ ದಕ್ಕುವುದರಲ್ಲಿ ಅನುಮಾನವಿಲ್ಲ. ಆ ಕಾರಣಕ್ಕಾಗಿಯಾದರೂ ಹೊಸಗಾಲದ ಬರಹಗಾರರು ಈ ಪುಸ್ತಕವನ್ನೊಮ್ಮೆ ಓದುವುದೊಳಿತು.
ಇನ್ನು ಈ ಪುಸ್ತಕವನ್ನು ಕೈಗೆತ್ತಿಕೊಂಡರೆ ಅದರ ಅಚ್ಚುಕಟ್ಟುತನಕ್ಕೆ ಮಾರುಹೋಗದೆ ಇರಲಾಗದು. ಪುಸ್ತಕವನ್ನು ಪಲ್ಲವ ಪ್ರಕಾಶನ ಪ್ರೀತಿಯಿಂದಲೇ ಪ್ರಕಟಿಸಿದೆ. ಆ ಪ್ರೀತಿ ಪುಟವಿನ್ಯಾಸದಲ್ಲಿ, ಮುದ್ರಣದ ಅಚ್ಚುಕಟ್ಟುತನದಲ್ಲಿ ಎದ್ದು ಕಾಣುತ್ತದೆ. ಹಾಗೆಯೇ ಪುಟವಿನ್ಯಾಸಕ್ಕೆ ಬಳಸಿಕೊಂಡಿರುವ ಕಲಾವಿದ ಹಾದಿಮನಿಯವರ ರೇಖಾಚಿತ್ರಗಳು- ಬೋದಿಲೇರನನ್ನು ಬೊಗಸೆಯಲ್ಲಿ ಕುಡಿದು ಗೆರೆಗಿಳಿಸಿದಂತಿವೆ, ಪುಟ ವಿನ್ಯಾಸದ ಅಂದಕ್ಕೆ ಮೆರಗು ತಂದಿವೆ. ಅಂತೆಯೇ ಬರಹಕ್ಕೆ ಬಳಸಿರುವ ಈ ಚಿತ್ರಗಳೇ ಓದುಗನ ಕಲ್ಪನೆಯನ್ನೂ ಕೊಂದಿವೆ, ಇರಲಿ.
ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಬಂದಿರುವ ಅನುವಾದಗಳಲ್ಲಿ ಈ ಪುಸ್ತಕ ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ಆ ಕಾರಣಕಾಗಿ ಬಹಳ ಕಾಲ ಓದುಗನ ಮನಸ್ಸಿನಲ್ಲಿ ಉಳಿಯುತ್ತದೆ.

ಮಾಯಾಕನ್ನಡಿ
ಐವತ್ತು ಗದ್ಯ ಕವಿತೆಗಳು
ಮೂಲ: ಬೋದಿಲೇರ್‌ (ಲೇ ಸ್ಪ್ಲೀನ್‌ ಡಿ ಪ್ಯಾರಿಸ್‌)
ಕನ್ನಡಕ್ಕೆ: ಎಸ್‌.ಎಫ್‌. ಯೋಗಪ್ಪನವರ್‌
ಪ್ರಕಾಶನ: ಪಲ್ಲವ ಪ್ರಕಾಶನ
ಚನ್ನಪಟ್ಟಣ ಪೋಸ್ಟ್, ಬಳ್ಳಾರಿ-583 113
ಪುಟ: 156, ಬೆಲೆ: 200

No comments:

Post a Comment