| ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಯನ್ನು ಮಾಡಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರವಂತೂ ಕ್ಷಣಕ್ಕೊಂದು ಕಂಪನಿ ಕಣ್ಮುಚ್ಚುವ ಸ್ಥಿತಿಗೆ ತಲುಪಿ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಎಲ್ಲಾ ಕಾಲದಲ್ಲೂ ಜನರ ನಂಬಿಕೆಗೆ ಪಾತ್ರವಾಗಿದ್ದ ಬ್ಯಾಂಕಿಂಗ್, ಇನ್ಶೂರೆನ್ಸ್ ಕ್ಷೇತ್ರಗಳು ಮೊಟ್ಟಮೊದಲ ಬಾರಿಗೆ ಪಲ್ಲಟಕ್ಕೊಳಕ್ಕಾಗಿ ಪತರಗುಡುತ್ತಿವೆ. ಇನ್ನು ಇದ್ದಕ್ಕಿದ್ದಂತೆ ಆಕಾಶಕ್ಕೆ ಏರಿದ್ದ ಷೇರ್ ಮಾರ್ಕೆಟ್, ರಿಯಲ್ ಎಸ್ಟೇಟ್ ವಲಯಗಳ ವ್ಯವಹಾರವಂತೂ ಏರಿದ್ದಷ್ಟೇ ವೇಗವಾಗಿ ಇಳಿದು, ಆ ವಲಯಗಳನ್ನು ಅವಲಂಬಿಸಿದ್ದ ಅಪಾರ ಜನರನ್ನು ಚಿಂತಾಕ್ರಾಂತರನ್ನಾಗಿ ಮಾಡಿಬಿಟ್ಟಿದೆ. ಆಶ್ಚರ್ಯಕರ ಸಂಗತಿ ಎಂದರೆ, ಇವೆಲ್ಲವನ್ನೂ ಸುದ್ದಿಯನ್ನಾಗಿ ಮಾಡಿ ಮಾರುತ್ತಿದ್ದ, ಅವುಗಳಿಂದ ಹರಿದು ಬರುತ್ತಿದ್ದ ಕೋಟ್ಯಂತರ ರೂಪಾಯಿಗಳ ಜಾಹಿರಾತನ್ನು ಅವಲಂಬಿಸಿಯೇ ಬದುಕುತ್ತಿದ್ದ, ಓದುಗರನ್ನು ಮರೆತು ಜಾಹಿರಾತೇ ಅಂತಿಮ ಎಂದು ನಿರ್ಧರಿಸಿದ್ದ ಸುದ್ದಿ ಮಾಧ್ಯಮ ಕ್ಷೇತ್ರ ಕೂಡ ಇವತ್ತು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕು ಒದ್ದಾಡುತ್ತಿದೆ. ಕಾರ್ಪೋರೇಟ್ ಕಂಪನಿಗಳಿಂದ ಜಾಹಿರಾತಿನ ಮೂಲಕ ಹರಿದು ಬರುತ್ತಿದ್ದ ಹಣ ನಿಂತಿದ್ದರಿಂದ ನಷ್ಟಕ್ಕೊಳಗಾಗಿ ನೆಲ ಹಿಡಿದು ಮಲಗುವಂತಾಗಿದೆ. ಇದು ವಿದೇಶಿ ಸುದ್ದಿ ಸಂಸ್ಥೆಗಳ ಸುದ್ದಿಯಾಯಿತು; ದೇಸಿ ಸುದ್ದಿ ಸಂಸ್ಥೆಗಳ ಕತೆ? ಅವುಗಳ ಮೇಲೆ ಬಿದ್ದ ಪರಿಣಾಮ, ಇವುಗಳ ಮೇಲೆ ಬೀಳದೇ ಇರುತ್ತದೆಯೇ? ಜಾಗತೀಕರಣಕ್ಕೆ ಭಾರತ ಬಾಗಿಲು ತೆರೆದ ತಕ್ಷಣ, ಮಾಧ್ಯಮ ಕ್ಷೇತ್ರ ಪರ-ವಿರೋಧಗಳ ಮಾತುಗಳನ್ನಾಡುತ್ತಲೇ ಮುಕ್ತ ಮಾರುಕಟ್ಟೆಯ ಮಂತ್ರದಂಡಕ್ಕೆ ತಲೆಬಾಗಿತು. ಅಭಿವೃದ್ಧಿ ಪತ್ರಿಕೋದ್ಯಮ ಹಲವರ ಆಸೆಗಳನ್ನು ಗರಿಗೆದರಿಸಿತು. ಅನಂತ ಸಾಧ್ಯತೆಗಳತ್ತ ಕೈಚಾಚಿತು. ಅದರ ಪರಿಣಾಮವಾಗಿ ‘ಹೌ ಟು ಸೆಲ್ ಮೈ ರೈಟಿಂಗ್ಸ್’ ಎಂಬ ತತ್ವ ಈಗ ಇಲ್ಲೂ ಚಾಲ್ತಿಯಲ್ಲಿದೆ. ಸಂಬಳಕ್ಕಾಗಿ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸಕ್ಕಿಂತ ಇದೇನು ಭಿನ್ನ ಎಂಬ ತರ್ಕ ತಾಂಡವವಾಡುತ್ತಿದೆ. ಎಲ್ಲ ಕೆಲಸವೂ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸವೇ. ಆದರೆ ಅಲ್ಲೂ, ಅಲ್ಪಸ್ವಲ್ಪವಾದರೂ ನೀತಿ-ನಿಯತ್ತು, ತತ್ವ-ಸಿದ್ಧಾಂತ, ದೇಶ-ಭಾಷೆ ಇರಬೇಕಲ್ಲವೇ? ಜನರಿಟ್ಟ ನಂಬಿಕೆಗೆ ದ್ರೋಹ ಬಗೆಯಬಾರದಲ್ಲವೆ? ಬದ್ಧತೆ ಎನ್ನುವುದು ಇವತ್ತು ಬರಿ ಮಾತಿನ ಬದನೆಕಾಯಿ ಆಗಿದೆ. ಅಭಿವೃದ್ಧಿ, ಹಣವೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಲವಾರು ಸುದ್ದಿ ಸಂಸ್ಥೆಗಳು ನಮ್ಮಲ್ಲೂ ಇವೆ. ಜಾಗತಿಕ ಆರ್ಥಿಕ ಹಿಂಜರಿತ, ವಿದೇಶಿ ಸುದ್ದಿ ಮಾಧ್ಯಮಗಳಿಗಷ್ಟೇ ಬಿಸಿ ಮುಟ್ಟಿಸಿಲ್ಲ, ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಇಲ್ಲಿನ ಸುದ್ದಿ ಸಂಸ್ಥೆಗಳಿಗೂ ನಷ್ಟದ ಕಷ್ಟ ಕೊಡುತ್ತಿದೆ. ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಎನ್ಡಿಟಿವಿ, ಅದನ್ನೇ ಅನುಕರಿಸುತ್ತಿರುವ ಸಿಎನ್ಎನ್ ಐಬಿಎನ್ ಸುದ್ದಿ ಸಂಸ್ಥೆಗಳು ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವುದಾಗಿ ಲೆಕ್ಕಪತ್ರ ಸಲ್ಲಿಸಿವೆ. ಇತ್ತೀಚೆಗೆ ಶುರುವಾದ, ಕನ್ನಡದ ಕಂಪನ್ನು ಸೂಸುವ ಕನ್ನಡದ ಏಕೈಕ ಟಿವಿ ಚಾನಲ್ ಒಟ್ಟಿಗೇ ೮೦ ನೌಕರರ ಪಟ್ಟಿ ತಯಾರಿಸಿ, ಕೆಲಸದಿಂದ ತೆಗೆಯಲು ಸಿದ್ಧವಾಗಿದೆ. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕಾ ಸಮೂಹ ಪತ್ರಕರ್ತರು ಮತ್ತು ಸಿಬ್ಬಂದಿಯ ಸಂಬಳದಲ್ಲಿ ಶೇಕಡಾ ೩೦ ಕಡಿತಗೊಳಿಸಲು ತೀರ್ಮಾನಿಸಿದ ಸುದ್ದಿ ಹೊರಬಿದ್ದಿದೆ. ಕನ್ನಡದ ಅಷ್ಟೂ ಚಾನೆಲ್ಗಳು ಖರ್ಚು ಕಡಿಮೆ ಮಾಡಲು ‘ನಿಷ್ಪ್ರಯೋಜಕರ ಪಟ್ಟಿ’ ತಯಾರಿಸಿಟ್ಟುಕೊಂಡು, ಕೆಲಸಗಾರರಲ್ಲಿ ದಿಗಿಲು ಹುಟ್ಟಿಸಿವೆಯಂತೆ. ಇತ್ತೀಚಿನ ದಿನಗಳಲ್ಲಿ ‘ಟೈಮ್ಸ್’ ರಿಯಲ್ ಎಸ್ಟೇಟ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಪುರವಣಿಗಳಲ್ಲಿ ಜಾಹಿರಾತುಗಳೇ ಇಲ್ಲದೆ, ಹಳೆಯ ಜಾಹಿರಾತುಗಳನ್ನೇ ಮತ್ತೆ ಮುದ್ರಿಸಿ, ಈಗಲೂ ಆ ಜಗತ್ತು ಹಾಗೆಯೇ ಇದೆ ಎಂಬ ಭ್ರಮೆ ಬಿತ್ತಿ, ಆ ಮೂಲಕ ಇತರರನ್ನು ಸೆಳೆಯುವ ಕೆಟ್ಟ ತಂತ್ರಕ್ಕೂ ಕೈ ಹಾಕಿದೆ. ಜಾಹಿರಾತು ದರವನ್ನೂ ಇಳಿಸಿದೆ. ಒಂದು ಜಾಹಿರಾತು ನೀಡಿದರೆ- ಒಂದಕ್ಕೆ ನಾಲ್ಕು (ಎಕಾನಾಮಿಕ್ ಟೈಮ್ಸ್, ಕನ್ನಡ ಟೈಮ್ಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ, ಬೆಂಗಳೂರು ಮಿರರ್) ಉಚಿತ ಎಂದು ಜಾಹಿರಾತು ನೀಡಿ ಜಾಹಿರಾತುದಾರರನ್ನೂ ಆಕರ್ಷಿಸುತ್ತಿದೆ. ಇಲ್ಲಿ ಟೈಮ್ಸ್ ಆಫ್ ಇಂಡಿಯಾವನ್ನೇ ಯಾಕೆ ಮುಖ್ಯವಾಗಿಟ್ಟುಕೊಂಡು ಇಷ್ಟೆಲ್ಲ ಹೇಳಲಾಗುತ್ತಿದೆ ಎಂದರೆ, ಟೈಮ್ಸ್ ಪತ್ರಿಕೆಯಿಂದ ಕರ್ನಾಟಕದ ಪತ್ರಿಕೋದ್ಯಮದಲ್ಲಾದ ಬದಲಾವಣೆಗಳು ಅಷ್ಟಿಷ್ಟಲ್ಲ. ಟೈಮ್ಸ್ನ ಮಾಲೀಕರು ಉತ್ತರದ ಮಾರ್ವಾಡಿಗಳು. ಪತ್ರಿಕೋದ್ಯಮವನ್ನು ಉದ್ಯಮವನ್ನಾಗಿ ನೋಡಿದವರು ಮತ್ತು ಅದನ್ನು ಅಭಿವೃದ್ಧಿಪಡಿಸಲು ಬೇಕಾದ ತಂತ್ರಗಳನ್ನು, ಗಿಲೀಟುಗಳನ್ನು ಜಾಣ್ಮೆಯಿಂದ ಜಾರಿಗೆ ತಂದವರು. ಸ್ಥಳೀಯ ಪತ್ರಕರ್ತರನ್ನು ಅನುಕೂಲಕ್ಕೆ ತಕ್ಕ ಅಸ್ತ್ರಗಳನ್ನಾಗಿ ಬಳಸಿದವರು. ಆದರೆ ಆ ಪತ್ರಿಕೆಯ ಒಲವು-ನಿಲುವುಗಳೇ ಬೇರೆ. ಉದ್ದೇಶ-ವ್ಯಾಪ್ತಿಗಳೇ ಬೇರೆ. ಅದರ ಸಹಜ ವ್ಯಾವಹಾರಿಕ ಬುದ್ಧಿಯಂತೆ ಅದು ಒತ್ತು ನೀಡಿದ್ದು ಕಾರ್ಪೋರೇಟ್ ಕಲ್ಚರ್ಗೆ. ಆ ಕಲ್ಚರ್ನ ಶ್ರೀಮಂತ ಜನ, ಆ ಕಲ್ಚರ್ನಲ್ಲಿ ಕಾಣಿಸಿಕೊಳ್ಳಲು ಹಾತೊರೆಯುವ ಮೇಲ್ಮಧ್ಯಮ ವರ್ಗ, ಅವರ ಪಾರ್ಟಿಗಳು, ತೆವಲುಗಳು, ಮೋಜುಗಳು- ಅದಕ್ಕೇ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿತು. ಅದಕ್ಕೆ ತಕ್ಕಂತೆ ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿ, ರಿಯಲ್ ಎಸ್ಟೇಟ್ ಸಿಟಿಯಾಗಿ ಜನರ ಕೈಯಲ್ಲಿ ಕಾಸು ಚೆಲ್ಲಾಡತೊಡಗಿದಾಗ, ಟೈಮ್ಸ್ ಎಲ್ಲರ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು. ಹಾಗಂತ ಟೈಮ್ಸ್ನಲ್ಲಿ ಬರೀ ಪೇಜ್ ತ್ರೀ ಕಲ್ಚರಷ್ಟೇ ಇರುತ್ತೆ ಎಂದಲ್ಲ, ಅಲ್ಲಿ ಸೀನಿಯರ್ ರೈಟರ್ಗಳ ಸೀರಿಯಸ್ಸಾದ ರೈಟಪ್ಗಳೂ ಪ್ರಕಟವಾಗುತ್ತವೆ. ಆಧ್ಯಾತ್ಮಿಕ, ಆರೋಗ್ಯದ ಚಿಂತನೆಗಳಿಗೂ ಜಾಗ ಕಲ್ಪಿಸಿಕೊಡಲಾಗುತ್ತದೆ. ಜಾತ್ಯತೀತ, ಪ್ರಗತಿಪರ, ವೈಚಾರಿಕ ನೀತಿ, ನಿಲುವುಗಳಿಗೂ ಪ್ರಾಶಸ್ತ್ಯವಿರುತ್ತದೆ. ವಿಜ್ಞಾನ-ವಿವೇಕಕ್ಕೂ ಅವಕಾಶವಿದೆ. ಬಡವರು, ಅಸಹಾಯಕರು, ಮಹಿಳೆಯರು, ರೋಗಿಗಳಿಗೆ ಕರಗುವ, ಮರುಗುವ ಮಾನವೀಯ ವರದಿಗಳೂ ಬರುತ್ತವೆ. ಆದರೆ ಇವೆಲ್ಲ ಎಷ್ಟು ಬೇಕೋ ಅಷ್ಟು ಮಾತ್ರ. ಇಷ್ಟೆಲ್ಲ ಕಾರಣಗಳಿಂದ ಟೈಮ್ಸ್ ಇವತ್ತು ನಂಬರ್ ಒನ್ ಪತ್ರಿಕೆಯಾಗಿ ರಾರಾಜಿಸುತ್ತಿದೆ. ಅತ್ಯಲ್ಪ ಕಾಲದಲ್ಲಿಯೇ ಅಷ್ಟೂ ವಲಯಗಳನ್ನು ಆಕ್ರಮಿಸಿಕೊಂಡು, ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರನಂತೆ ವಿಜೃಂಭಿಸುತ್ತಿದೆ. ಇದು ಸಹಜವಾಗಿಯೇ ದಿಢೀರ್ ದುಡ್ಡು ಮಾಡಲು ಹಾತೊರೆವ ಪತ್ರಿಕೆಗಳನ್ನು, ಬೇಲಿ ಮೇಲೆ ಕೂತ ಪತ್ರಕರ್ತರನ್ನು ಆಕರ್ಷಿಸಿದೆ. ಟೈಮ್ಸ್ ಅನ್ನು ಮಾಡೆಲ್ ಆಗಿ ಸ್ವೀಕರಿಸಿದ್ದಾಗಿದೆ. ಕೆಲವು ಪತ್ರಿಕೆಗಳು ಈಗಾಗಲೇ ಪತ್ರಕರ್ತರನ್ನೇ ಜಾಹಿರಾತು ತರುವ ಏಜೆಂಟರನ್ನಾಗಿ ಪರಿವರ್ತಿಸಿ, ೨೫% ಕಮಿಷನ್ನ ತುಪ್ಪವನ್ನು ಮೂಗಿಗೆ ಸವರಿವೆ. ಇನ್ನು ಕೆಲವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಾಯೋಜಿತ ಪುರವಣಿಗಳನ್ನು ಪ್ರಕಟಿಸುತ್ತ ವರದಿಗೂ ಜಾಹಿರಾತಿಗೂ ಇದ್ದ ಅಂತರವನ್ನೇ ಅಳಿಸಿಹಾಕಿವೆ. ಅಷ್ಟೇ ಅಲ್ಲ, ಪ್ರತಿ ಶಾಸಕನಿಂದಲೂ ಜಾಹಿರಾತು ತರುವಂತೆ ಬಲವಂತದ ಒತ್ತಾಯ, ಒತ್ತಡ ಹಾಕುತ್ತಿವೆ. ಪತ್ರಕರ್ತರ ಹಲ್ಲುಗಿಂಜುವಿಕೆ... ಕಾಸು ಕೊಟ್ಟರೆ ಮಾಧ್ಯಮಗಳನ್ನೂ ಖರೀದಿಸಬಹುದು ಎನ್ನುವಂತಹ ವಾತಾವರಣ ನಿರ್ಮಾಣ ಮಾಡುತ್ತಿದೆ. ಇದು ಅಧಿಕಾರವಿರುವ ಶಾಸಕನಲ್ಲಿ ಇನ್ನೆಂತಹ ಉಡಾಳತನಕ್ಕೆ ಕಾರಣವಾಗಬಹುದು, ಅಂತಹ ಶಾಸಕ ಜನರನ್ನು ಇನ್ನೆಂತಹ ಪರಿ ಸುಲಿಯಬಹುದು? ಅವರಿಗಿನ್ನೆಲ್ಲಿಯ ಭಯ-ಅಳುಕು-ಅಂಜಿಕೆ ಉಳಿದೀತು? ಇದು ಭವಿಷ್ಯತ್ತಿನ ಚಿಂತೆಯಲ್ಲ; ಇವತ್ತಿನ ದಿನಮಾನಗಳಲ್ಲಿ ಮಾಧ್ಯಮ ವಲಯದಲ್ಲಿ ನಡೆಯುತ್ತಿರುವ ಕತೆ. ಇಷ್ಟಾದರೂ ಪತ್ರಿಕೆಗಳು ಬಲವಾಗಿ ಬೇರುಬಿಟ್ಟು ಬೆಳೆದು ನಿಲ್ಲಲಾಗಿಲ್ಲ; ಆದರೆ ಕೆಲ ಪತ್ರಕರ್ತರಂತೂ ಪೊಗದಸ್ತಾಗಿ ಬೆಳೆದಿದ್ದಾರೆ! ಸುದ್ದಿ ಮಾಧ್ಯಮಗಳು ನಿಲ್ಲಬೇಕಾದ್ದು, ಗೆಲ್ಲಬೇಕಾದ್ದು, ಬೆಳೆಯಬೇಕಾದ್ದು ಜನರಿಂದ. ಹಾಗೆಯೇ ಜಾಹಿರಾತುಗಳು ಸುದ್ದಿ ಮಾಧ್ಯಮಗಳ ಬದುಕಿಗೆ ಬೇಕಾದ ಪ್ರಾಣವಾಯುವಾಗಬೇಕೆ ಹೊರತು; ಅದೇ ಮುಖ್ಯವಾಗಬಾರದು. ಜನ ಸುಮ್ಮನಿದ್ದಾರೆಂದು ಏನು ಬೇಕಾದರೂ ಮಾಡಬಹುದು; ಹಣವೊಂದಿದ್ದರೆ ಎಲ್ಲವನ್ನೂ ಗೆಲ್ಲಬಹುದು ಎಂಬ ಧೋರಣೆ ಮತ್ತು ಧಾರ್ಷ್ಟ್ಯವುಳ್ಳ ಸುದ್ದಿ ಮಾಧ್ಯಮದವರಿಗೆ ಹಾಗೂ ಆ ರೀತಿ ಯೋಚಿಸುವ ಎಲ್ಲರಿಗೂ ಇದು ಪಾಠವಾಗಬಹುದೆ? (ಡಿಸೆಂಬರ್ 2008- ಕೆಂಡಸಂಪಿಗೆ) | ||||
Monday, December 7, 2009
ಜಾಗತಿಕ ರಿಸೆಷನ್ ಗರ: ಸುದ್ದಿ ಮಾಧ್ಯಮಗಳೂ ಆಪತ್ತಿನಲ್ಲಿ
Friday, November 27, 2009
ಅಂವ ರಾವಣ; ಇಂವ ಬ್ರಾಹ್ಮಣ

ಅದು ಎಪ್ಪತ್ತರ ದಶಕ. ಕನ್ನಡ ಸಾರಸ್ವತ ಲೋಕ ಸಮೃದ್ಧಿಯಿಂದ ನಳನಳಿಸುತ್ತಿದ್ದ ಕಾಲ. ಕುವೆಂಪು, ಕಾರಂತ, ಬೇಂದ್ರೆ, ಪುತಿನ, ಮಾಸ್ತಿಗಳ ಮರೆಯಲ್ಲಿ, ಅಡಿಗರ ಸಾರಥ್ಯದಲ್ಲಿ ಹೊಸ ಪೀಳಿಗೆಯ ಬರಹಗಾರರು ಕನ್ನಡದ ಹೊಸ ಕಳೆಯಾಗಲು ಕಾತರಿಸುತ್ತಿದ್ದ ಕಾಲ.
ಹೆಚ್ಚೂ ಕಡಿಮೆ ಸಮಕಾಲೀನ ಸಾಹಿತಿಗಳಾದ ಲಂಕೇಶ್, ನಿಸಾರ್ ಅಹಮದ್ ಮತ್ತು ಸುಮತೀಂದ್ರ ನಾಡಿಗ್- ಮೂವರು ಪೈಪೋಟಿಗೆ ಬಿದ್ದು ಬರೆಯುತ್ತಿದ್ದ, ಬದುಕುತ್ತಿದ್ದ, ಬೊಬ್ಬೆಯಾಕುತ್ತಿದ್ದ ಕಾಲವದು. ಒಬ್ಬರಿಗೊಬ್ಬರು ಎದುರಿಗೆ ಸಿಕ್ಕರೆ ಮುಗುಂ ಆಗುವ, ಬೆನ್ನು ತಿರುಗಿಸಿದರೆ ಸಾಕು ಗೇಲಿ ಮಾಡಿ ನಗಾಡುವ ಜಾತಿಯವರು. ಆ ಕಾಲದ ಮಹಿಮೆಯೋ ಏನೋ... ನಿಸಾರ್ ಅಹಮದ್ರ ನಿತ್ಯೋತ್ಸವ ಕವನ ಭಾರೀ ಪಾಪ್ಯುಲರ್ ಆಗಿತ್ತು. ಕವಿಮಿತ್ರರ ಪ್ರೋತ್ಸಾಹವೂ ದೊರಕಿತ್ತು. ಅಷ್ಟೇ ಅಲ್ಲ, ಆಕಾಶವಾಣಿಯಲ್ಲಿ ಆಗಾಗ ಅವರನ್ನು ಕರೆದು ಕವನ ವಾಚಿಸುವುದೂ ಇತ್ತು. ಒಂದು ಕವನಕ್ಕೆ ಎಪ್ಪತ್ತೈದು ರೂಪಾಯಿ ಸಂಭಾವನೆಯೂ ಸಿಗುತ್ತಿತ್ತು.
ಆ ಸಂಭಾವನೆ ಮತ್ತು ಮನ್ನಣೆ ಆವತ್ತಿನ ದಿನಕ್ಕೆ, ಅವರ ಬೆಳವಣಿಗೆಯ ರೀತಿ ನೀತಿಗೆ ಭಾರಿಯಾಗಿತ್ತು. ನಿಸಾರ್ಗೆ ಸಿಗುತ್ತಿದ್ದ ಈ ಅವಕಾಶ, ಹಣ ಇನ್ನಿಬ್ಬರಲ್ಲಿ- ನಾಡಿಗ್, ಲಂಕೇಶರಲ್ಲಿ- ಕೀಳರಿಮೆಯನ್ನೂ, ಹೊಟ್ಟೆಕಿಚ್ಚನ್ನೂ ಹುಟ್ಟುಹಾಕಿತ್ತು. ಕಾಕತಾಳೀಯವೋ ಏನೋ, ಮೂವರಿಗೂ ಗುರುಗಳಂತಿದ್ದ ಅಡಿಗರಿಗೆ, ನಿಸಾರ್ ಬಗ್ಗೆ ಕೊಂಚ ಹೆಚ್ಚಾಗಿಯೇ ಪ್ರೀತಿಯಿತ್ತು. ಇದು ಇನ್ನಿಬ್ಬರಲ್ಲಿ ಅಸಮಾಧಾನ ಉಂಟುಮಾಡಿತ್ತು. ಸಹಜವಾಗಿ ಅದು ಸಂಜೆಯ ಗುಂಡಿನ ಗಡಂಗಿನಲ್ಲಿ ಗುಟುರು ಹಾಕುತ್ತಿತ್ತು. ಒಳಗಿದ್ದ ಹುಳುಕೆಲ್ಲ ಆ ಹೊತ್ತಿನಲ್ಲಿ ಹೊರಬರುತ್ತಿತ್ತು.
‘ಅಡಿಗ್ರು ಗುಂಡ್ ಹಾಕ್ದಾಗ, ಕಾಸ್ಟಿಕ್, ನಿಸಾರ್ ಪೊಯೆಟ್ಟೇ ಅಲ್ಲ ಅಂತಾರೆ, ಈಗ ನೋಡು... ಥೂ ಥೂ ಥೂ ವೆರಿ ಬ್ಯಾಡ್...' ಎಂದು ಲಂಕೇಶರೆಂದರೆ,
‘ನಿಸಾರ್ ಕವನಗಳಿಗೆ ಆಕಾಶವಾಣಿ ಸ್ಕೋಪ್ ಕೊಡ್ತಿದೆ, ವಿಪರೀತ ಆಯ್ತು... ಅದಕ್ಕೆ ಏನ್ ಕಾರಣ ಗೊತ್ತಾ ‘ಆ' ಹೆಂಗ್ಸು...' ಎಂದರು ನಾಡಿಗರು. ಹೀಗೆ ಗುಂಡು ಯಾವ ಕಡೆಗೆ ಎಳೆಯುತ್ತೋ ಆ ಕಡೆಗೆಲ್ಲ ಮಾತೂ ವಾಲುತ್ತಿದ್ದವು.
ಅವರ ಮಾತಿಗೆ ಪೂರಕವಾಗಿ ಆಕಾಶವಾಣಿಯಲ್ಲಿದ್ದ ‘ಆ' ಹೆಂಗಸು, ನಿಸಾರರು ಆಕಾಶವಾಣಿಗೆ ಬಂದಾಗ, ಹೋದಾಗ ಹೂ ನಗೆ ನಕ್ಕು, ಕವನಗಳನ್ನು ಮೆಚ್ಚಿ ಮಾತನಾಡುತ್ತಿದ್ದುದುಂಟು. ಆದರೆ, ನಾಡಿಗರು ಆರೋಪಿಸಿದಂತಹ ಯಾವ ಆರೋಪಗಳೂ ಅವರಿಬ್ಬರ ನಡುವೆ ಇರಲಿಲ್ಲ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ನಾಡಿಗರು ಇದ್ದಕ್ಕಿದ್ದಂತೆ ಒಂದು ದಿನ ಆಕಾಶವಾಣಿಗೆ ಭೇಟಿ ಕೊಟ್ಟರು. ಅದೂ ಅನುಮಾನವಿದ್ದ ‘ಆ' ಹೆಂಗಸಿನ ಬಳಿಗೇ ಹೋದರು. ನೋಡಿದರೆ, ಅಲ್ಲಿ ಆಗಲೇ ನಿಸಾರರಿದ್ದಾರೆ. ಅವರಿಬ್ಬರ ಮುಖದಲ್ಲಿ ಮಂದಹಾಸವಿದೆ. ನಾಡಿಗರ ಅನುಮಾನಕ್ಕೆ ಪುಷ್ಟಿ ಸಿಕ್ಕಂತಾಯಿತು.
ನಾಡಿಗರು ಮುಖ ಗಂಟಿಕ್ಕಿಕೊಂಡು, ‘ನಾನೊಂದು ಕವನ ಬರೆದಿದ್ದೇನೆ... ಓದಬೇಕು, ಅವಕಾಶ ಕೊಡಿ' ಎಂದರು.
‘ಆ' ಹೆಂಗಸು, ‘ಸಾರ್ ಅದು ನನ್ನ ಮೇಲಾಧಿಕಾರಿಗಳಿಗೆ ಸಂಬಂಧಿಸಿದ್ದು... ಅಲ್ಲಿಂದ...' ಎಂದು ರಾಗ ಎಳೆದರು.
ಅಷ್ಟೆ, ನಾಡಿಗರು, ‘ಓಕೆ, ಅವಕಾಶ ಕೊಡದಿದ್ದರೆ ಪರವಾಗಿಲ್ಲ, ಕವನ ಓದ್ತೀನಿ ಕೇಳಿ...' ಎಂದು ‘ಆ' ಹೆಂಗಸಿನ ಹೆಸರನ್ನೇ ಬಳಸಿ ಬರೆದಿದ್ದ ಕವನವನ್ನು ಅವರಿಬ್ಬರಿಗೇ ವಾಚಿಸತೊಡಗಿದರು.
ಕವನದ ಎರಡು ಮೂರು ಸಾಲುಗಳನ್ನು ಕೇಳುತ್ತಿದ್ದಂತೆ, ಅವರಿಬ್ಬರಿಗೂ ಮುಜುಗರ. ಮುಖ ಬಾಡಿದವು. ನಿಸಾರ್ ಅಲ್ಲಿ ನಿಲ್ಲಲಾಗದೆ ಹೊರಗೆ ಹೋದರು. ‘ಆ' ಹೆಂಗಸು ಮುಖಮುಚ್ಚಿಕೊಂಡು ಕೂತವರು ಮೇಲೇಳಲಿಲ್ಲ. ಆದರೆ ನಾಡಿಗರು ಅಲ್ಲಿ ನಿಂತುಕೊಂಡೇ ಪೂರ್ತಿ ಪದ್ಯ ಓದಿದರು. ಹಾಗೆಯೇ ಇನ್ನಿಬ್ಬರು ಕವಿಮಿತ್ರರ ಕಿವಿಗೂ ಸುರಿದರು.
ಅತ್ತ ನಿಸಾರರು ಕವಿಮಿತ್ರರ ಕೀಟಲೆಯಿಂದ ಬೇಸತ್ತು ರೂಮು ಸೇರಿಕೊಂಡರು. ಆ ರೂಮು... ಗಾಂಧಿಬಜಾರ್ನ ಟ್ಯಾಗೂರ್ ಸರ್ಕಲ್ಲಿನಲ್ಲಿರುವ ಕೆನರಾ ಬ್ಯಾಂಕ್ ಪಕ್ಕದಲ್ಲಿದ್ದ ದೊಡ್ಡ ಮನೆಯ ಮಹಡಿಯ ಮೇಲಿತ್ತು. ಅದು ಆವತ್ತಿಗೆ ನಿಸಾರರ ಪದ್ಯದ ಕಾರ್ಖಾನೆಯೂ ಆಗಿತ್ತು. ದಿನವಿಡಿ ನಿಸಾರರು ಆ ರೂಮಿನಲ್ಲಿಯೇ ಕಳೆಯುತ್ತಿದ್ದರು. ಆ ರೂಮು ಪಾರ್ಥಸಾರಥಿ ಎಂಬ ನಿಸಾರ್ ಗೆಳೆಯರಿಗೆ ಸೇರಿತ್ತು. ನಿಸಾರ್ ಪದ್ಯ ಬರೆಯಲೆಂದೇ ಪಾರ್ಥಸಾರಥಿ ಆ ರೂಮನ್ನು ಅವರಿಗೆ ಉಚಿತವಾಗಿ ಕೊಟ್ಟಿದ್ದರು.
ಅಂದು ನಾಡಿಗರ ಪದ್ಯದಿಂದ ಶ್ಯಾನೆ ಬೇಜಾರಾಗಿದ್ದ ನಿಸಾರರು, ರೂಮಿನಲ್ಲಿ ಒಬ್ಬರೆ ಕೂತು ಬೀಡಿ ಸೇದುತ್ತಿದ್ದರು. ಅಂದೊಂಥರಾ ಕವಿಗಳು, ಕಲಾವಿದರ ಅಡ್ಡ ಆಗಿತ್ತು. ಅಲ್ಲಿಗೆ ನಿಸಾರ್-ನಾಡಿಗ್-ಲಂಕೇಶ್- ಮೂವರಿಗೂ ಪರಿಚಯವಿದ್ದ, ಮೂವರನ್ನೂ ಹತ್ತಿರದಿಂದ ಬಲ್ಲ ಟಿ.ಎಸ್.ರಂಗಾ ಹೋದರು.
ಹೋಗ್ತಿದ್ದಹಾಗೆ ನಿಸಾರರು, ‘ಏನಯ್ಯಾ ಇದು, ಅವನು ನೋಡದ್ರೆ ಕವಿನೇ ಅಲ್ಲ ಅಂತಾನೆ, ಇವುನ್ ನೋಡುದ್ರೆ ನನ್ನ ಮೇಲೆ ಕೆಟ್ ಕೆಟ್ಟದಾಗಿ ಕವನ ಬರ್ದು, ನನ್ನ ಮುಂದೇನೆ ಓದ್ತಾನೆ, ಅಂವ ರಾವಣ, ಇಂವ ಬ್ರಾಹ್ಮಣ... ಏನಯ್ಯಾ ಮಾಡೋದು...' ಎಂದು ನಿಟ್ಟುಸಿರುಬಿಟ್ಟರು.
(ಡಿಸೆಂಬರ್ 9, 2008)
ಚುನಾವಣೆಯ ಸಮಯದಲ್ಲಿ ಲಂಕೇಶರ ಖದರು
ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಬಗ್ಗೆ ಇಟ್ಟಿರುವ ನಂಬಿಕೆ ಪರಂಪರಾಗತವಾದುದು. ಅದು ಅಷ್ಟು ಸುಲಭವಾಗಿ ಸಡಿಲವಾಗುವಂಥದ್ದಲ್ಲ. ಆ ಕಾರಣಕ್ಕಾಗಿಯೇ ಸುದ್ದಿ ಮಾಧ್ಯಮಗಳು ಉಳಿದಿರುವುದು ಮತ್ತು ಆ ಕ್ಷೇತ್ರ ಇನ್ನೂ ಹೆಚ್ಚೆಚ್ಚು ವಿಸ್ತಾರಗೊಳ್ಳುತ್ತಿರುವುದು. ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಮೇಲೆ ಇಟ್ಟಿರುವ ಆ ನಂಬಿಕೆ ಇವತ್ತಿನ ಜಾಗತೀಕರಣದ ಯುಗದಲ್ಲೂ ಹಾಗೇ ಇದೆ. ಆದರೆ ಸುದ್ದಿ ಮಾಧ್ಯಮಗಳು ಜನಸಾಮಾನ್ಯರ ನಂಬಿಕೆಗೆ ಬದ್ಧವಾಗಿವೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ನೈತಿಕತೆ, ಪ್ರಾಮಾಣಿಕತೆ ಮರೆಯಾಗುತ್ತಾ, ಮೌಲ್ಯಾಧಾರಿತ ಪತ್ರಿಕೋದ್ಯಮ ಪಕ್ಕಕ್ಕೆ ಸರಿಯುತ್ತ ಇರುವುದು. ಹೊಸ ತಲೆಮಾರಿನ ಬಹುಪಾಲು ಪತ್ರಕರ್ತರು ‘ಹೌ ಟು ಸೆಲ್ ಮೈ ರೈಟಿಂಗ್' ಎಂಬ ಗ್ಲೋಬಲ್ ತತ್ವಕ್ಕೆ ಕಟ್ಟುಬಿದ್ದವರು. ಪತ್ರಿಕೋದ್ಯಮವನ್ನು ಮಾರುಕಟ್ಟೆಯ ಸರಕಿನ ಮಟ್ಟಕ್ಕಿಳಿಸಿದವರು. ಇಲ್ಲಿ ತತ್ವ, ಬದ್ಧತೆಗಿಂತ ಮುಖ್ಯವಾಗಿ ಲಾಭಕೋರ ಮನಸ್ಸು ವಿಜೃಂಭಿಸುತ್ತಿದೆ. ಸ್ವಾರ್ಥಕ್ಕೆ ಮೌಲ್ಯ ಮಾರಾಟವಾಗುತ್ತಿದೆ.
ಹಾಗಾಗಿ ಮಾಧ್ಯಮಗಳೂ ಬದಲಾಗಿವೆ, ಜನರೂ ಬದಲಾಗುತ್ತಿದ್ದಾರೆ. ಬದಲಾದ ಸಂದರ್ಭಕ್ಕನುಗುಣವಾಗಿ ಜನ ಇಂದು ಸುದ್ದಿಮಾಧ್ಯಮಗಳನ್ನು ನಂಬುತ್ತಿಲ್ಲ; ನಂಬುವಂತಹ ಸುದ್ದಿಗಳನ್ನು ಅವರೂ ಕೊಡುತ್ತಿಲ್ಲ. ಆದರೂ ಜನ ಪೇಪರ್ಗಳನ್ನು ಓದುತ್ತಾರೆ, ಸುದ್ದಿವಾಹಿನಿಗಳನ್ನು ನೋಡುತ್ತಾರೆ. ಅಷ್ಟೇ ಬೇಗ ಮರೆಯುತ್ತಾರೆ. ಜನರ ಮರೆಯುವ ಗುಣ, ಕುಲಗೆಟ್ಟಿರುವ ವ್ಯವಸ್ಥೆ ಮತ್ತು ಇವತ್ತಿನ ಸುದ್ದಿ ಇವತ್ತಿಗೇ ಸಾಯುತ್ತಿರುವ ಸಂದರ್ಭ ಮಾಧ್ಯಮದ ಮಂದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಪತ್ರಕರ್ತರು ಯಾರ ಬಗ್ಗೆ ಏನನ್ನು ಬೇಕಾದರೂ ಬರೆಯಬಲ್ಲ ‘ಬುದ್ಧಿವಂತ'ರಾಗಿದ್ದಾರೆ. ಪತ್ರಿಕೋದ್ಯಮ ದಂದೆಯಾಗಿದೆ. ಮಾರುಕಟ್ಟೆಯಲ್ಲಿ ಪತ್ರಿಕೆಯೂ ಬಿಕರಿಯಾಗುತ್ತಿದೆ, ಪತ್ರಕರ್ತನೂ ಬಿಕರಿಯಾಗುತ್ತಿದ್ದಾನೆ.
ಇದು ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಅದೇಕೋ ಇದೇ ಸಂದರ್ಭದಲ್ಲಿ ಎಲೆಕ್ಷನ್ ಎಂದಾಕ್ಷಣ ಅಲರ್ಟ್ ಆಗುತ್ತಿದ್ದ ಲಂಕೇಶರೂ ನೆನಪಾಗುತ್ತಿದ್ದಾರೆ...
ಚುನಾವಣೆಯ ಸಂದರ್ಭದಲ್ಲಿ ಲಂಕೇಶರು ಈ ದೇಶದ ಆಗುಹೋಗುಗಳನ್ನು ನಿರ್ಧರಿಸುವ ಮಹತ್ತರ ಹೊಣೆಗಾರಿಕೆ ತಮ್ಮ ಭುಜದ ಮೇಲೆ ಬಿದ್ದಿದೆಯೇನೋ ಎನ್ನುವಂತೆ ಭ್ರಮಿಸುತ್ತಿದ್ದರು. ತಮ್ಮ ಚಿಲ್ಲರೆ ಚಟುವಟಿಕೆಗಳನ್ನು ಪಕ್ಕಕ್ಕಿಟ್ಟು ಯುದ್ಧಕ್ಕೆ ಸಜ್ಜಾಗಿ ನಿಂತ ಯೋಧನಂತೆ ಚಡಪಡಿಸುತ್ತಿದ್ದರು. ತಮ್ಮ ಸುತ್ತ, ಬಳಸಿ ಬಿಸಾಕಿದ ಬ್ಯಾಟರಿಯಂತೆ ಬಿದ್ದಿರುತ್ತಿದ್ದ ವರದಿಗಾರರ ಬುಡಕ್ಕೆ ಬಿಸಿ ತಾಗಿಸಿ ಚಾರ್ಜ್ ಮಾಡುತ್ತಿದ್ದರು. ನೂರು ಕ್ಯಾಂಡಲ್ ಬಲ್ಬ್ ಥರ ಟ್ವೆಂಟಿಫೋರ್ ಅವರ್ಸು ಉರಿಯುತ್ತಿರಬೇಕು...
ಜನರ ಧ್ವನಿಯಾದ, ಜನರನ್ನು ಜಾಗೃತರನ್ನಾಗಿಸಿದ, ಜನಾಭಿಪ್ರಾಯವನ್ನು ರೂಪಿಸಿದ, ಸರ್ಕಾರಗಳನ್ನು ಬದಲಿಸಿದ ಕೀರ್ತಿ ಲಂಕೇಶರ ಪತ್ರಿಕೆಗೆ ಸಲ್ಲಲೇಬೇಕು. ಕೀರ್ತಿಶನಿ ಲಂಕೇಶರ ಹೆಗಲೇರಿದ್ದು, ಇಳಿದಿದ್ದು- ಎಲ್ಲಾ ಓದುಗರಿಂದಲೇ. ಲಂಕೇಶರ ಶಕ್ತಿ ಓದುಗರೆ. ಅವರು ಹೆದರುತ್ತಿದ್ದುದೂ ಓದುಗರಿಗೇ. ಯಾಕೆಂದರೆ ಪತ್ರಿಕೆಯ ಪ್ರಸಾರದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ಕಂಡಿದ್ದರು. ಅವೆರಡೂ ಮೇಸ್ಟ್ರಿಗೆ ಪಾಠ ಕಲಿಸಿದ್ದವು.
ಚುನಾವಣಾ ಸಮಯದಲ್ಲಿ ಲಂಕೇಶರಿಗೆ ಹೊಸ ಹುರುಪು ಮೈ ಮನಗಳನ್ನು ಆವರಿಸಿಕೊಳ್ಳುತ್ತಿತ್ತು. ಅದಕ್ಕೆ ಕಾರಣ, ಜವಾಬ್ದಾರಿ ಜಾಸ್ತಿಯಾಗುತ್ತಿದ್ದುದು ಮತ್ತು ಪತ್ರಿಕೆಯ ಸರ್ಕ್ಯುಲೇಷನ್ ಹೆಚ್ಚಾಗುತ್ತಿದ್ದುದು. ಆ ಸಂದರ್ಭದಲ್ಲಿ ಪತ್ರಿಕೆಯ ಕಚೇರಿ ಸಾಹಿತಿಗಳು, ಕಲಾವಿದರು ಮತ್ತು ವರದಿಗಾರರಿಂದ ಗಿಜಿಗುಡುತ್ತಿತ್ತು. ಪ್ರತಿದಿನ ‘ಕೂತು ಮಾತನಾಡುವ' ಸೆಷನ್ಗಳು ಇದ್ದೇ ಇರುತ್ತಿದ್ದವು. ಆರಂಭದಲ್ಲಿ ಬೌದ್ಧಿಕ ಕಸರತ್ತಿನ ತರ್ಕಬದ್ಧ ಚರ್ಚೆ, ಮತ್ತೇರುತ್ತಿದ್ದಂತೆ ಅಭ್ಯರ್ಥಿಗಳನ್ನು ಅಮಲಿನಲ್ಲಿಯೇ ಸೋಲಿಸುವ-ಗೆಲ್ಲಿಸುವ ಹುಂಬತನ, ಕೊನೆಗೆ ಚಿಲ್ಲರೆ ಜಗಳದಲ್ಲಿ ಪರ್ಯವಸಾನ... ಇದು ಮಾಮೂಲಾಗಿತ್ತು. ಆದರೆ ಈ ಜಗಳಗಳು ಕೂಡ ವರದಿಗಾರರ ವೃತ್ತಿ ಬದುಕಿಗೆ ಸಾಣೆಯಂತೆ ಸಹಕಾರಿಯಾಗುತ್ತಿದ್ದುದು ‘ಪತ್ರಿಕೆ'ಯ ವೈಶಿಷ್ಟ್ಯ.
ಚುನಾವಣಾ ಕಾಲದಲ್ಲಿ ಲಂಕೇಶರು ಬೆಂಗಳೂರಿನ ಮುಖ್ಯ ವರದಿಗಾರರ ಜೊತೆಗೆ ಜಿಲ್ಲಾ ವರದಿಗಾರರನ್ನು ಕರೆದು ಮೀಟಿಂಗ್ ಮಾಡುತ್ತಿದ್ದರು. ಆ ಜಿಲ್ಲೆಗಳ ರಾಜಕೀಯ ವಿದ್ಯಮಾನ, ಪಕ್ಷಗಳು, ಅಭ್ಯರ್ಥಿಗಳು, ಜಾತಿ ಲೆಕ್ಕಾಚಾರ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದರು. ಆ ಮಾತುಕತೆಯಲ್ಲಿಯೇ ವರದಿಗಾರರು ತೆಗೆದುಕೊಳ್ಳಬೇಕಾದ ಪರ-ವಿರೋಧರ ನಿಲುವು ಸ್ಪಷ್ಟವಾಗುತ್ತಿತ್ತು. ಈ ಪರ-ವಿರೋಧ ಅಂದರೆ ಏನು? ಲಂಕೇಶರು ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಅಭ್ಯರ್ಥಿಗಳ ಪರ-ವಿರೋಧವಿದ್ದು, ಬಿಜೆಪಿಯನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಅದನ್ನು ಅಧಿಕಾರದ ಹತ್ತಿರಕ್ಕೂ ತರಬಾರದೆಂಬುದು ಅವರ ನಿಲುವಾಗಿತ್ತು. ವರದಿಗಾರರ ವರದಿಗಳಲ್ಲಿ ಅದು ಪ್ರತಿಫಲಿಸುತ್ತಿತ್ತು. ರಾಜಕಾರಣಿಗಳಲ್ಲಿ ಒಳ್ಳೆಯವರು-ಕೆಟ್ಟವರು ಅಂದರೆ ಯಾರು, ಅದನ್ನು ಅಳೆಯುವ ಮಾನದಂಡವಾದರೂ ಏನು ಎಂದು ವರದಿಗಾರರು ತಲೆಕೆಡಿಸಿಕೊಂಡರೆ, ಲಂಕೇಶರು,
‘ಎಲೆಕ್ಷನ್ಗೆ ನಿಂತಿರೋರೆಲ್ರೂ ಕಳ್ಳರು, ಸುಳ್ಳರೆ, ಹಾಗಂತ ಬರದ್ರೆ ನಾವ್ ಅನ್ಪಾಪುಲರ್ ಆಗ್ತಿವಿ, ಸಿನಿಕರ ಸಾಲಿಗೆ ಸೇರ್ತ್ತೀವಿ, ಅದು ನಮ್ಮ ರೀಡರ್ಸ್ಗೆ ದಾರಿ ತಪ್ಸಿ, ಮೋಸ ಮಾಡ್ದಂಗಾಗ್ತದೆ. ಇದು ಡೆಮಾಕ್ರಸಿ, ಮತದಾರರು ಯಾರ್ನಾದ್ರು ಒಬ್ಬನನ್ನು ಆರಿಸಲೇಬೇಕು, ನಾವು ನಿಂತಿರೋರಲ್ಲಿ ಯಾವನು ಕಡಿಮೆ ಕಳ್ಳ ಅಂತ ನೋಡಿ ಅವನನ್ನು ಬೆಂಬಲಿಸಬೇಕು, ಇವ್ನು ಇದ್ದುದರಲ್ಲಿ ಯೋಗ್ಯ ಅಂತ ಹೇಳ್ಬೇಕು' ಎನ್ನುತ್ತಿದ್ದರು.
ಹಾಗೆಯೇ ಚುನಾವಣಾ ಸಮೀಕ್ಷೆಗಳನ್ನು ಮಾಡುವಾಗ ವರದಿಗಾರ ಹೇಗಿರಬೇಕು ಎಂಬುದನ್ನೂ ಹೇಳುತ್ತಿದ್ದರು. ಕ್ಷೇತ್ರದ ಸರ್ವೇ ಮಾಡುವ ವರದಿಗಾರರಿಗೆ ಪ್ರಯಾಣ ಭತ್ಯೆ, ಜೊತೆಗೆ ಕುಡಿತದ ಭತ್ಯೆಯೂ ಇರುತ್ತಿತ್ತು. ಇತರ ಜಿಲ್ಲೆಗಳಿಗೆ ಕಾರು ಮಾಡಿ ಕಳುಹಿಸಿದಾಗಲೂ ಕುಡಿತಕ್ಕೆ ಎಕ್ಸ್ಟ್ರಾ ಎಂದು ಕೊಡುತ್ತಿದ್ದರು. ನಾವೇನಾದ್ರು ಪ್ರಶ್ನಾರ್ಥಕವಾಗಿ ಅವರ ಮುಖ ನೋಡಿದರೆ, ‘ನೀನ್ ಕುಡಿತಿಯ ಅಂತ ಗೊತ್ತು. ಈ ಎಲೆಕ್ಷನ್ ಟೈಮಲ್ಲಿ ನಿನ್ಗೆ ಕುಡಿಸಕ್ಕಂತನೆ ಜನ ಇರ್ತಾರೆ ಅಂತ್ಲೂ ಗೊತ್ತು, ನೀನು ಹೆಚ್ಗೆ ಅಂದ್ರೆ ಎಷ್ಟು ಕುಡೀಬಹುದು, ನೂರಿನ್ನೂರೂಪಾಯ್ದು, ಅದಕ್ಕೆ ನಿನ್ನ ರಿಪೋರ್ಟ್ ಮಾರ್ಕೊಂಡು, ನಮ್ ರೀಡರ್ಸ್ಗೆ ಮೋಸ ಮಾಡದ್ ನಂಗಿಷ್ಟಿವಿಲ್ಲ, ಓದುಗರು ಕೊಟ್ಟಿರೋ ದುಡ್ಡಲ್ಲಿ ಕುಡ್ದು ವಸ್ತುನಿಷ್ಠ ವರದಿ ಬರಿ...' ಎನ್ನುತ್ತಿದ್ದರು. ರೂಢಿಗತ ಸುದ್ದಿ ಮಾಧ್ಯಮಗಳಿಗೂ ಲಂಕೇಶರಿಗೂ ಇದ್ದ ಫರಕ್ಕು ಇಷ್ಟೆ.
(ಜುಲೈ 30, 2008)
ಎಲ್ಲಾ ಕಡೆಯೂ ನಾನು `ಸಿದ್ಧ'ಲಿಂಗಯ್ಯ
ಬೆಂಕಿಯಲ್ಲಿ ಬೆಂದ ಬಡವರಿಗೆ, ಒಡಲಾಳದ ಉರಿಗೆ ನಲುಗಿಹೋದ ಅಸಹಾಯಕರಿಗೆ ದನಿಯಾದವರು ಸಿದ್ಧಲಿಂಗಯ್ಯ. ಅವರ ನೋವಿಗೆ ಮಿಡಿದವರು ಸಿದ್ಧಲಿಂಗಯ್ಯ. ಅವರ ಬದುಕನ್ನೇ ಬರಹಕ್ಕೆ ಇಳಿಸಿದವರು ಸಿದ್ಧಲಿಂಗಯ್ಯ. ಕುಗ್ಗಿ ಕಾಲಕಸವಾದವರ ಬದುಕಿಗೊಂದು ಆಶಾಕಿರಣವಾದವರು ಸಿದ್ಧಲಿಂಗಯ್ಯ. ವ್ಯವಸ್ಥೆಗೆ ವಿರುದ್ಧವಾಗಿ ಸಿಡಿದೆದ್ದು ನಿಂತವರು ಸಿದ್ಧಲಿಂಗಯ್ಯ. ಕನ್ನಡ ಸಾಹಿತ್ಯಕ್ಕೆ ಬಂಡಾಯದ ಬಿಸಿ ಮುಟ್ಟಿಸಿದವರು ಸಿದ್ಧಲಿಂಗಯ್ಯ. ಬಂಡೆಗಲ್ಲುಗಳೂ ಬಾಯ್ಬಿಡುವಂತೆ ಮಾಡಿದವರು ಸಿದ್ಧಲಿಂಗಯ್ಯ. ಕವನಗಳು ಸಾವಿರಾರು ನದಿಗಳಾಗಿ ಕ್ರಾಂತಿಗೀತೆಗಳ ರೂಪದಲ್ಲಿ ನಾಡಿನ ತುಂಬಾ ಹರಿದಾಡುವಂತಾಗಿದ್ದು ಸಿದ್ಧಲಿಂಗಯ್ಯನವರಿಂದ....
ಎಷ್ಟೆಲ್ಲ ಸಾಧನೆ, ಸಾರ್ಥಕ, ಸಂತೃಪ್ತಭಾವ ಒಬ್ಬ ವ್ಯಕ್ತಿಯ ಒಂದಷ್ಟು ಕವನಗಳಿಂದ!?
ಹಾಗೆಯೇ ಸಿದ್ಧಲಿಂಗಯ್ಯನವರು ಕೂಡ- ಕವಿಯಾದರು- ದಲಿತ ಕವಿಯಾದರು- ಬಂಡಾಯಗಾರರಾದರು. ದಿನ ಬೆಳಗಾಗುವುದರಲ್ಲಿ ಕನ್ನಡ ಸಾಹಿತ್ಯಲೋಕದ ಮಿನುಗುತಾರೆಯಾದರು. ಕವನಗಳು ಕ್ರಾಂತಿ ಕಹಳೆ ಮೊಳಗಿಸಿದವು, ಶಿಷ್ಟ ಸಾಹಿತ್ಯಕ್ಕೆ ಉತ್ಕೃಷ್ಟತೆಯನ್ನು ತಂದುಕೊಟ್ಟವು. ಸಿದ್ಧಲಿಂಗಯ್ಯನವರು ಸಾವಿರಾರು ಯುವ ಕವಿಗಳಿಗೆ ಮಾದರಿಯಾದರು. ಜನಪ್ರಿಯ ವ್ಯಕ್ತಿಯಾದರು. ಹೋದಲೆಲ್ಲ ಸನ್ಮಾನ, ಊರೂರಲ್ಲಿ ಮೆರವಣಿಗೆ.
ದಿನಗಳುರುಳಿದಂತೆ, ಕಾಲಚಕ್ರ ತಿರುಗಿದಂತೆ, ವಯಸ್ಸಾದಂತೆ, ಕರಿ ಕುರುಚಲು ಗಡ್ಡ ಬಿಳಿಯಾದಂತೆ ಸಿದ್ದಲಿಂಗಯ್ಯನವರೂ ಬದಲಾದರು. ಅಧಿಕಾರಿಗಳು ಮತ್ತು ಅಧಿಕಾರಸ್ಥರಿಗೆ ಹತ್ತಿರವಾದರು. ಉಳ್ಳವರ ಒಡ್ಡೋಲಗದಲ್ಲಿ ಓಲಾಡತೊಡಗಿದರು. ಅಧಿಕಾರ ಅರಸಿ ಅಂಗಳಕ್ಕೇ ಬಂತು. ಯಾವುದರ ವಿರುದ್ಧ ಹೋರಾಡಿದ್ದರೋ ಅದರ ಅವಿಭಾಜ್ಯ ಅಂಗವೇ ಆಗಿಹೋದರು. ಯಾರ ವಿರುದ್ಧ ಸಿಡಿದೆದ್ದಿದ್ದರೋ ಅವರ ಕಹಳೆ ಕೊಂಬಾದರು. ಅವರೇ ವ್ಯವಸ್ಥೆಯಾದರು. ಅವ್ಯವಸ್ಥೆಗೆ ಮಾದರಿಯಾದರು. ಬಿಳಿ ಗಡ್ಡ ಕಪ್ಪಗಾಯಿತು. ಮಸಿ ಎಲ್ಲವನ್ನೂ ನುಂಗಿತು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ದಲಿತರೆಂದರೆ ಪ್ರೀತಿ. ದಲಿತರ ಪ್ರತಿನಿಧಿಯಂತಿದ್ದ ಸಿದ್ದಲಿಂಗಯ್ಯನವರನ್ನು ಎಂಎಲ್ಸಿ ಮಾಡಿದರೆ ದಲಿತೋದ್ಧಾರವಾಗುತ್ತದೆ ಎಂದು ಭ್ರಮಿಸಿದ್ದ ಹೆಗಡೆ, ಕವಿಗೆ ಕುರ್ಚಿಯ ರುಚಿ ಹತ್ತಿಸಿದರು. ಕುರ್ಚಿ ಮೇಲೆ ಕೂತ ಕ್ಷಣದಿಂದಲೇ ಸಿದ್ದಲಿಂಗಯ್ಯ ದಲಿತರನ್ನು ಮರೆತರು. ಬಂಡಾಯಕ್ಕೆ ಬೆಂಕಿ ಹಾಕಿ ಬೂದಿ ಮಾಡಿದರು. ತಮ್ಮ ಹಳೆಯ ಕ್ರಾಂತಿಗೀತೆಗಳನ್ನು ಇಂದಿನ ವ್ಯವಸ್ಥೆಗೆ ಒಗ್ಗುವಂತೆ ತಿದ್ದಿ ಮರು ಮುದ್ರಿಸಿದರು. ಮಠ ಮಾನ್ಯಗಳಿಗೆ ಹೊಕ್ಕಿ ಮಠಾಧೀಶರ ಕಾಲಿಗೆ ಬಿದ್ದರು. ಪಕ್ಷಾತೀತ ವ್ಯಕ್ತಿಯಾದರು, ಪಕ್ಕಾ ರಾಜಕಾರಣಿಯಾದರು, ಅಜಾತಶತ್ರುವಾದರು. ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ, ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯ ಯಡಿಯೂರಪ್ಪ- ಉದ್ದಕ್ಕೂ ಅಧಿಕಾರಸ್ಥರನ್ನು ಓಲೈಸಿಕೊಂಡೇ ಬಂದರು. ಅಧಿಕಾರವನ್ನು ನಿರಂತರವಾಗಿ ಅನುಭವಿಸುತ್ತಲೇ ಬಂದರು.
ಎಲ್ಲಾ ಕಾಲಕ್ಕೂ, ಎಲ್ಲಾ ಕಡೆಯೂ, ಎಲ್ಲೆಲ್ಲಿಯೂ ಸಿದ್ಧ-ಲಿಂಗಯ್ಯನಾದರು.
ಓದಿ, ಬೆಳೆದು ಬಂದ ಪರಿಶ್ರಮಕ್ಕೆ ಸಿಕ್ಕಿದ್ದು ಬೆಂಗಳೂರು ಯೂಸಿವರ್ಸಿಟಿಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥನ ಸ್ಥಾನ. ಅಲ್ಲಿದ್ದಷ್ಟು ದಿನವೂ ಪಾಠ ಮಾಡದೆ ದಾಖಲೆ ಬರೆದುಹೋದರು.
ನೋವುಂಡ ಜನರ ಪ್ರತಿನಿಧಿಯಾಗಿ, ಕವಿಯಾಗಿ, ಜನಪ್ರಿಯ ವ್ಯಕ್ತಿಯಾಗಿದ್ದಕ್ಕೆ ಸಿಕ್ಕಿದ್ದು ಎಂಎಲ್ಸಿ (ಎರಡು ಟರ್ಮ್), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ. ಅಧಿಕಾರದ ಕುರ್ಚಿಯಲ್ಲಿ ಕೂತಷ್ಟು ದಿನವೂ ದಲಿತರನ್ನು ನೆನೆಯದೆ, ಕನ್ನಡವನ್ನು ಕಟ್ಟಿ ಬೆಳೆಸದೆ ಸ್ವಾರ್ಥಿಯಾದರು.
ಇಂತಹ ವ್ಯಕ್ತಿಗೆ ಮತ್ತೆ ಈಗ, ಸಂಘ ಪರಿವಾರದ ಸತ್ರದಲ್ಲಿ ಸನ್ಮಾನ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ!?
(ಜೂನ್ 12, 2008 ರಂದು ಪ್ರಕಟ)
ಅಯ್ಯರ ಅಯ್ಯ ನಮ್ಮ ಹಿರೀಸಾವೆ ಅಣ್ಣಯ್ಯ
ಎಸ್ಸೆಂ ಕೃಷ್ಣರ ಕ್ಯಾಬಿನೆಟ್ನಲ್ಲಿ ಎಚ್.ಸಿ.ಶ್ರೀಕಂಠಯ್ಯನವರು ಕಂದಾಯ ಸಚಿವರಾಗಿದ್ದರು. ಅದೇ ಸಮಯದಲ್ಲಿ ಬೆಂಗಳೂರಿನ ಸುತ್ತಮುತ್ತಲ ಭೂಮಿಗೆ ಭಾರೀ ಬೆಲೆ ಬಂದಿತ್ತು. ಇದೇ ತಮ್ಮ ಕೊನೆ ಅವಧಿ ಎಂಬಂತೆ ಶ್ರೀಕಂಠಯ್ಯನವರು ಚೆನ್ನಾಗಿಯೇ ದುಡಿಯುತ್ತಿದ್ದರು. ನಾಡಿನ ಪತ್ರಿಕೆಗಳಲ್ಲಿ ಪ್ರತಿನಿತ್ಯ ಶ್ರೀಕಂಠಯ್ಯನವರ ಗುಣಗಾನ ನಡೆದಿತ್ತು. ಅದಾವುದಕ್ಕೂ ತಲೆಕೆಡಿಸಿಕೊಳ್ಳದ ಶ್ರೀಕಂಠಯ್ಯನವರು ಒಂದರೆಗಳಿಗೆಯೂ ವ್ಯರ್ಥ ಮಾಡದೆ ತಮ್ಮ ಕಾಯಕದಲ್ಲಿ ಮುಳುಗಿ ಹೋಗಿದ್ದರು. ಮತ ನೀಡಿದ ಮತದಾರರನ್ನು ಮರೆತಿದ್ದರು. ಊರು ಬಿಟ್ಟು ಬೆಂಗಳೂರಿನಲ್ಲಿ ಭದ್ರವಾಗಿ ಬೇರುಬಿಟ್ಟಿದ್ದರು.
ಹೀಗೆ ಊರಿನ ಜನಗಳ ಕೈಗೆ ಸಿಗದೆ, ಕಣ್ಣಿಗೆ ಬೀಳದೆ ಇದ್ದಾಗ ಒಂದು ದಿನ ಊರಿನಿಂದ ನಮ್ಮಪ್ಪ ಫೋನ್ ಮಾಡಿದರು. ‘ಲೋ ಮಗ, ಸೀಕಂಠಯ್ಯರು ಸಿಗ್ಲೆಯಿಲ್ಲ ಕಣೋ, ನೀನೆ ಒಂದೆಜ್ಜೆ ಹೋಗಿ, ಮದುವೆ ಕಾರ್ಡ್ ಕೊಟ್ಟು, ಹೇಳ್ಬುಟ್ಬಾರಪ್ಪ, ಇಲ್ದಿದ್ರೆ ತಪ್ತಿಳ್ಕತರಕಣೊ...' ಅಂದರು. ಎಂದೂ ವೈಯಕ್ತಿಕವಾಗಿ, ವೃತ್ತಿಸಂಬಂಧವಾಗಿ ಭೇಟಿಯಾಗದ, ಮಂತ್ರಿಯಾಗಿರುವ ಶ್ರೀಕಂಠಯ್ಯನವರನ್ನು ನೋಡುವುದು ಹೇಗೆ, ನನ್ನ ಬಗ್ಗೆ ಅವರಲ್ಲಿ ಎಂತಹ ಅಭಿಪ್ರಾಯವಿರಬಹುದು... ಹೀಗೆ ಯೋಚಿಸುತ್ತಲೇ ಶಿವಾನಂದ ಸರ್ಕಲ್ಲಿನ ಹತ್ತಿರದಲ್ಲಿರುವ ಮೂವರು ಮಂತ್ರಿಗಳ ಬಂಗಲೆಯಲ್ಲಿ ಒಂದಾದ ಶ್ರೀಕಂಠಯ್ಯನವರ ಮನೆ ಮುಂದೆ ನಿಂತೆ. ರಾತ್ರಿ ಎಂಟು ಗಂಟೆಯಾಗಿತ್ತು. ನನ್ನ ನೋಡುತ್ತಿದ್ದಂತೆ ಅವರ ಕಾರಿನ ಡ್ರೈವರ್ ಚಂದ್ರು ಮತ್ತು ಬಂಗಲೆಯಲ್ಲಿದ್ದ ಬಾಬು, ‘ಇದೇನು ಇಲ್ಲಿ' ಎನ್ನುವಂತೆ ಅನುಮಾನದಿಂದ ನೋಡಿದರು. ಪರಿಚಯವಿದ್ದುದರಿಂದ ‘ಗೌಡ್ರುನ್ನ ನೋಡಬೇಕಾಗಿತ್ತು' ಎಂದೆ. ಹೋಗಿ ಹೇಳಿಬಂದ ಬಾಬು, ‘ಮೇಲವ್ರೆ ಹೋಗಿ' ಅಂದರು.
ಅಷ್ಟು ದೊಡ್ಡ ಬಂಗಲೆ ಆ ಇಬ್ಬರು ಹುಡುಗರು ಮತ್ತು ಶ್ರೀಕಂಠಯ್ಯನವರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ‘ಯಾರನ್ನೂ ಬಿಡಬೇಡ' ಎಂದು ಮೊದಲೆ ಹೇಳಿದ್ದ ಶ್ರೀಕಂಠಯ್ಯನವರು, ಅಕಸ್ಮಾತಾಗಿ ‘ಕಳ್ಸು' ಎಂದಿದ್ದರು. ಹೋಗಿ ಕೂತೆ. ಸ್ವಲ್ಪ ಹೊತ್ತಿಗೆ ಹೆಗಲ ಮೇಲೆ ಟವಲ್ ಹಾಕಿಕೊಂಡು ಬಂದ ಅಯ್ಯ-ಅಣ್ಣಯ್ಯ-ಶ್ರೀಕಂಠಯ್ಯ, ‘ಹೂಂ, ನಂಗ್ ಟೈಮಿಲ್ಲ, ಜಲ್ದಿ ಹೇಳು ಏನು' ಅಂದರು. ನನ್ನ ತಂಗಿಯ ಮದುವೆ ಕಾರ್ಡಿಗೆ ಅವರ ಹೆಸರು ಬರೆದು, ನಮ್ಮಪ್ಪನ ಹೆಸರು ಹೇಳಿ, ಕಾರ್ಡನ್ನು ಕೈಗೆ ಕೊಡುತ್ತ, ‘ಮರೀದೆ ಬರಬೇಕಂತೆ' ಅಂದೆ. ‘ಓ ತಿಮ್ಮಪ್ಪನ ಮಗನಾ... ಯಾವತ್ತೈತೋ... ಅವತ್ತಾಗದಿಲ್ವಲೋ... ನಿನ್ನಸ್ರೇನು' ಅಂದರು. ಹೆಸರೇಳಿದೆ.
‘ಓಹೋ, ನೀನೆ ಏನಪ್ಪ ಬಸುರಾಜ, ರಾಜ ಬಸುರಾಜ... ಬರ್ದೆ... ಬರ್ದೆ... ಬರ್ದಪ್ಪ. ಆ ಲ್ಯಂಕೇಸ್ಗು ಬುದ್ಧಿಲ್ಲ, ನೀನೂ ಬುಡ್ಲಿಲ್ಲ, ನಾನ್ ಯಾರೋ ಅಂತಿದ್ದೆ... ನೀನೆಯಾ' ಅಂದರು.
‘ಬರ್ದು ಬೇಜಾರು ಮಾಡ್ದ್ನಾ ಗೌಡ್ರೆ...'‘ಬೇಜಾರೇನು ಬಾರೋ, ನಾನ್ ಮಾಡದ್ ಬುಟ್ನಾ, ನೀನ್ ಬರೆಯದ್ ಬುಟ್ಟಾ... ಹೂಂ, ನನ್ಗೀಗ ಟೈಮಿಲ್ಲ, ತಗಳ ಹೊತ್ತಾಯ್ತು, ನೀನೇನಾರ ತಗತಿಯ...' ಅಂದರು.‘ತಗತಿನಿ, ಆದ್ರೆ ಇವತ್ತು ಬ್ಯಾಡ, ಗಾಡಿ, ಪೊಲೀಸ್ನೋರು, ನೀವ್ ತಗಳಿ, ಸ್ವಲ್ಪ ಹೊತ್ತು ಕೂತ್ಕತಿನಿ...' ಅಂದೆ.
ಅವರ ಕುಡಿಯುವ ಉತ್ಸಾಹ, ಆ ವಯಸ್ಸಿನಲ್ಲಿಯೂ ಅದಕ್ಕೆ ಸ್ಪಂದಿಸುತ್ತಿದ್ದ ಅವರ ದೇಹ, ಎಲ್ಲವನ್ನೂ ಮರೆತು ಅದಕ್ಕಾಗಿ ವಿನಿಯೋಗಿಸುತ್ತಿದ್ದ ಆ ಪ್ರೈಮ್ ಟೈಮ್, ಒಬ್ಬರೆ ಕೂತು ಆಸ್ವಾದಿಸುತ್ತಿದ್ದ ರೀತಿ... ಒಂದೆರೆಡು ಪೆಗ್ ಇಳಿಯುತ್ತಿದ್ದಂತೆ ಸಡಿಲವಾದರು. ಅದೂ ಇದೂ ಮಾತಾಡಿದರು. ಮಧ್ಯೆ ಗೌಡ್ರಿಗೆ ಬುದ್ಧಿಲ್ಲ ಅಂತ ಬಯ್ದರು.ಚಿಕ್ಕಂದಿನಿಂದಲೂ ಅವರ ಸ್ಕಾಚ್ ವ್ಹಿಸ್ಕಿ, ನಾಟಿಕೋಳಿ ಬಾಡು ಮತ್ತು ಇತ್ಯಾದಿಗಳ ವರ್ಣರಂಜಿತ ಕತೆಗಳನ್ನು ಕೇಳಿ ತಿಳಿದಿದ್ದೆ. ಊರಿನ ಐಬಿಯಲ್ಲಿ ಇವರಿಗಾಗಿ ಯಾವಾಗಲು ರಿಸರ್ವ್ ಆಗಿರುತ್ತಿದ್ದ ರೂಮಿನ ಸುತ್ತ ಸುಳಿದಾಡಿ ಅಯ್ಯನವರ ಐಭೋಗವನ್ನು ಕಣ್ಣಾರೆ ಕಂಡಿದ್ದೆ. ಅವರ ಸುತ್ತಮುತ್ತಲಿನವರಿಂದ ಕೇಳಿದ್ದನ್ನು ಕತೆ ಕಟ್ಟಿ ಬರೆದಿದ್ದೆ. ಅವರೆ ಸಿಕ್ಕಾಗ ಮಿಸ್ ಮಾಡಿಕೊಳ್ಳುವುದು ಬೇಡವೆಂದು,
‘ಈಗ್ಲು ಮದ್ಲಂಗೆ ನಡಸ್ತಿರ ಗೌಡ್ರೆ...' ಅಂದೆ.
‘ಹೋಗ್ ಹೋಗೊ ಹುಚ್ಚಪ್ಪ, ರಕ್ತ್ ರಕ್ತ ಬತ್ತದೆ, ಅವೆಲ್ಲ ಮುಗೀತ್ಕಣೊ...' ಅಂದರು. ಮನಸ್ಸಿನಲ್ಲಿ ಒಂಚೂರೂ ಕಲ್ಮಶವಿಲ್ಲ. ಇವನ ಮುಂದೆ ಇದೆಲ್ಲ ಯಾಕೆ ಎನ್ನುವ ಬಿಗುಮಾನವೂ ಇಲ್ಲ. ಹೆದರಿಕೆಯಂತೂ ಇಲ್ಲವೇ ಇಲ್ಲ. ಹೀಗೇ ಮಾತು ಸಾಗಿತ್ತು, ನಡುವೆ ಫೋನ್ ಬಂತು. ನಾನಿದ್ದೇನೆಂಬ ಪರಿವೆಯೂ ಇಲ್ಲದೆ ‘ವ್ಯವಹಾರದ' ಮಾತಿನಲ್ಲಿ ಮಗ್ನರಾದರು. ನನ್ನ ಟ್ರ್ಯಾಕ್ ಕಟ್ ಆಯ್ತಲ್ಲ ಎಂದು ಫೋನ್ ಮಾಡಿದವರನ್ನು ಬಯ್ದುಕೊಂಡು, ಹಾಗೇ ನಮಸ್ಕರಿಸಿ ಎದ್ದು ಹೊರಟೆ.
ದಾರಿಯುದ್ದಕ್ಕೂ ಹಾಸನ ಜಿಲ್ಲೆಯ ರಾಜಕಾರಣಿಗಳು ತಲೆ ತುಂಬಿಕೊಂಡರು. ದೇವೇಗೌಡ-ಪುಟ್ಟಸ್ವಾಮಿಗೌಡ-ಶ್ರೀಕಂಠಯ್ಯನವರ ಬಗ್ಗೆ ಯೋಚಿಸುತ್ತಿದ್ದಂತೆ ಅವರ ಮೇಲೆ ಪ್ರೀತಿ ಉಕ್ಕಿ ಹರಿಯತೊಡಗಿತು. ಅವರ ಮೇಲೆ ಅಷ್ಟೆಲ್ಲ ಕೆಟ್ಟದಾಗಿ ಬರೆದು, ಏನೆಲ್ಲ ಕಷ್ಟ ಕೊಟ್ಟರೂ ಒಂಚೂರೂ ಕೋಪವಿಲ್ಲವಲ್ಲ. ಇದೇ ಜಾಗದಲ್ಲಿ ದೇವೇಗೌಡ ಅಥವಾ ಪುಟ್ಟಸ್ವಾಮಿಗೌಡ ಇದ್ದಿದ್ದರೆ ನನ್ನ ಕತೆ ಏನಾಗುತ್ತಿತ್ತು ಅಂತೆಲ್ಲ ನೆನೆದು ಬೆವರತೊಡಗಿದೆ.
ನನ್ನೂರು ಚನ್ನರಾಯಪಟ್ಟಣ. ಮನೆ ಮೇಗಲಕೇರಿಯಲ್ಲಿ. ಕೂಗಳತೆಯ ದೂರದಲ್ಲಿ ಶ್ರೀಕಂಠಯ್ಯನವರ ಮನೆ. ನಮ್ಮಪ್ಪ ಅವರ ಅಭಿಮಾನಿ. ಅವರ ಪಕ್ಷದ ಒಂದು ಕಾಲದ ಕಾರ್ಯಕರ್ತ. ನಾನೋದಿದ್ದು ಅವರ ಒಡೆತನವಿರುವ, ಆದಿಚುಂಚನಗಿರಿ ಹೆಸರಿರುವ ಕಾಲೇಜಿನಲ್ಲಿ. ಆ ಕಾಲೇಜಿನಲ್ಲಿ ಅಯ್ಯನವರು ನಡೆಸುತ್ತಿದ್ದ ವ್ಯವಹಾರಗಳನ್ನು ಕಣ್ಣಾರೆ ಕಂಡಿದ್ದೆ, ಅದನ್ನೆ ‘ಲಂಕೇಶ್ ಪತ್ರಿಕೆ'ಗೆ ವರದಿ ಮಾಡಿದ್ದೆ. ಇಪ್ಪತ್ತು ಪುಟಗಳಲ್ಲಿ ಅದೂ ಒಂದು ಪುಟವಾಗಿ, ಬಂದ ವಾರಕ್ಕಷ್ಟೆ ಸೀಮಿತವಾಗಿ ಮರೆತುಹೋಗಿತ್ತು. ಅದರಿಂದ ಅಯ್ಯನವರಿಗೆ ತೊಂದರೆಯೇನೂ ಆಗಿರಲಿಲ್ಲ.
ತೊಂದರೆ ಆಗಿದ್ದು ಯಾವಾಗ ಎಂದರೆ, ಆ ವರದಿಯ ಬಗ್ಗೆ ದೇವೇಗೌಡರು ವಿಶೇಷ ಆಸಕ್ತಿ ವಹಿಸಿದಾಗ. ಆಗ ಹಾಸನ ಜಿಲ್ಲೆ ರಾಜಕಾರಣ ಎಂದರೆ ಗೌಡ್ರ ಗದ್ಲವಾಗಿತ್ತು. ಒಕ್ಕಲಿಗರ ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ಮತ್ತು ಜಿಲ್ಲೆಯ ಹಿಡಿತಕ್ಕಾಗಿ ದೇವೇಗೌಡ ಮತ್ತು ಶ್ರೀಕಂಠಯ್ಯನವರ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿತ್ತು. ಚುನಾವಣೆ ಬಂತೆಂದರೆ ಹೊಡೆದಾಟ, ದೊಂಬಿ, ಕೊಲೆಗಳು ಕಾಮನ್ ಆಗುತ್ತಿದ್ದವು.
ಇಂತಹ ಸಮಯದಲ್ಲಿ ದೇವೇಗೌಡರು ಒಂದು ದಿನ ಫೋನ್ ಮಾಡಿ, ‘ಗುರುಗಳೆ ನಿಮ್ಮ ಜೊತೆ ಸ್ವಲ್ಪ ಮಾತ್ನಾಡೊದಿತ್ತಲ್ಲ' ಅಂದರು. ಅವರ ಮಗ, ಮೊಮ್ಮಗನ ವಯಸ್ಸು ನನಗೆ. ಗುರುಗಳೆ ಅಂದಿದ್ದು ಶಾಕ್ ಆಗಿ, ಸದಾಶಿವನಗರದ ಮನೆಗೆ ಹೋದರೆ, ‘ಚುಂಚನಗಿರಿ ಕಾಲೇಜ್ ಬಗ್ಗೆ ವರದಿ... ಅದರ ಡೀಟೈಲ್ಸ್ ಬೇಕಿತ್ತಲ್ಲ' ಅಂದರು. ನನ್ನ ಬಳಿ ಇದ್ದ ದಾಖಲೆಗಳು ಮತ್ತು ವರದಿ ಬಂದಿದ್ದ ಪತ್ರಿಕೆ ಎಲ್ಲ ಕೊಟ್ಟೆ. ‘ನಿಮ್ಮಂಥೋರಿರೋದ್ರಿಂದಲೆ ದೇಶ ಅಷ್ಟೋ ಇಷ್ಟೋ ಉಳಿದಿರೋದು...' ಅಂದರು. ನಾನು ಆಕಾಶದಲ್ಲಿ ತೇಲತೊಡಗಿದೆ.
ನಂತರದ ದಿನಗಳಲ್ಲಿ ದೇವೇಗೌಡರು ಪಟ್ಟು ಬಿಡದೆ ಅದನ್ನು ಅಸೆಂಬ್ಲಿಯಲ್ಲಿ ರೈಸ್ ಮಾಡಿ ಸಿಓಡಿ ತನಿಖೆಯಾಗುವಂತೆ ನೋಡಿಕೊಂಡರು. ಸಿಓಡಿ ಅಧಿಕಾರಿಗಳು ಚನ್ನರಾಯಪಟ್ಟಣದ ಕಾಲೇಜಿಗೆ ಬಂದು ಶ್ರೀಕಂಠಯ್ಯನವರನ್ನು ತನಿಖೆಗೊಳಪಡಿಸಿದರು. ತನಿಖೆಯಲ್ಲಿ ಆರೋಪಗಳು ಸಾಬೀತಾದಾಗ ದೇವೇಗೌಡರು ಗೆದ್ದಿದ್ದರು, ಅಧಿಕಾರದಲ್ಲಿದ್ದ ಶ್ರೀಕಂಠಯ್ಯನವರು ಕಂಗಾಲಾಗಿದ್ದರು.
ಹಾಸನ ಜಿಲ್ಲೆಯ ಮಟ್ಟಕ್ಕೆ ಅಂದಿಗೆ ದೇವೇಗೌಡರೊಂದಿಗೆ ಅಷ್ಟೇ ದ್ವೇಷ, ಸೇಡಿನ ರಾಜಕಾರಣಕ್ಕೆ ಬಿದ್ದು ಸೆಣಸಾಡುತ್ತಿದ್ದ ಮತ್ತೊಬ್ಬ ಒಕ್ಕಲಿಗ ನಾಯಕ ಪುಟ್ಟಸ್ವಾಮಿಗೌಡರಿದ್ದರು. ತನಿಖೆಗೊಳಗಾಗಿ ಕಂಗಾಲಾಗಿದ್ದ ಶ್ರೀಕಂಠಯ್ಯನವರು ಪುಟ್ಟಸ್ವಾಮಿಗೌಡರ ನೆಂಟಸ್ತನ ಬೆಳೆಸಿ ಬೀಗರಾದರು. ಒಂದಾಗಿ ದೇವೇಗೌಡರನ್ನು ಎದುರಿಸಲು ಸಿದ್ಧರಾದರು. ಅದೇ ಸಮಯಕ್ಕೆ ಸರಿಯಾಗಿ ೧೯೯೪ರ ಚುನಾವಣೆ. ಲಂಕೇಶರು ದೇವೇಗೌಡರ ಪರವಾಗಿದ್ದರು. ‘ದೇವೇಗೌಡ- ಮುಖ್ಯಮಂತ್ರಿ, ಅಮುಖ್ಯಮಂತ್ರಿ' ಎಂದು ಮುಖಪುಟದ ಸುದ್ದಿ ಮಾಡಿ, ದೇವೇಗೌಡರನ್ನು ಈ ಕ್ಷಣದಲ್ಲಿ ನಾವೇಕೆ ಬೆಂಬಲಿಸಬೇಕು ಎಂದು ಸಮರ್ಥನೀಯ ಕಾರಣಗಳನ್ನಿಟ್ಟು ಬರೆದಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು, ಜನತಾದಳ ಗೆದ್ದು ದೇವೇಗೌಡರು ಮುಖ್ಯಮಂತ್ರಿಯಾದರು.
ಆದರೆ ಶ್ರೀಕಂಠಯ್ಯನವರ ಮೇಲಿನ ಸಿಓಡಿ ತನಿಖೆಯ ವರದಿ ಮಾತ್ರ ಹೊರಬರಲಿಲ್ಲ. ಆ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಫೈಲನ್ನು ಶ್ರೀಕಂಠಯ್ಯನವರ ಮುಂದಿಟ್ಟ ಮುಖ್ಯಮಂತ್ರಿ ದೇವೇಗೌಡರು ಬದ್ಧದ್ವೇಷಿ ಪುಟ್ಟಸ್ವಾಮಿಗೌಡರನ್ನು ಬಗ್ಗುಬಡಿಯಲು ಬೀಗ ಶ್ರೀಕಂಠಯ್ಯನವರನ್ನೇ ಬಳಸಿಕೊಂಡರು. ಅದರಲ್ಲಿ ಅವರು ಯಶಸ್ವಿಯೂ ಆದರು. ಅಲ್ಲಿಂದ ಅಯ್ಯನವರು ದೇವೇಗೌಡರ ವಿರುದ್ಧ ಕಿಡಿಕಾರುವುದನ್ನು ಬಿಟ್ಟು ತಣ್ಣಗಾದರು. ಇವರಿಬ್ಬರ ಅಂಡರ್ಸ್ಟ್ಯಾಂಡಿಂಗ್ ನೋಡಿ ಪುಟ್ಟಸ್ವಾಮಿಗೌಡರು ಉರಿದು ಕೆಂಡವಾದರು. ಶ್ರೀಕಂಠಯ್ಯನವರ ಮೇಲಿನ ಸಿಓಡಿ ತನಿಖೆಯ ಫೈಲ್ ಧೂಳಿಡಿಯಿತು.
ಆ ಫೈಲ್ಗೆ ಮತ್ತೆ ಜೀವ ಬಂದದ್ದು ೧೯೯೯ರ ಚುನಾವಣಾ ಸಮಯದಲ್ಲಿ. ಒಂದು ದಿನ ಇದ್ದಕ್ಕಿದ್ದಂತೆ ಪುಟ್ಟಸ್ವಾಮಿಗೌಡರ ಫೋನ್, ‘ಅಣ್ಣಾ, ಹತ್ತೂವರೆಗೆ ಲಕ್ಕೆಡ್ ಹೌಸ್ಸಲ್ಲಿ ಸಿಗಬೇಕಲ್ಲಣ್ಣ' ಅಂದರು. ದೇವೇಗೌಡರು ಸಿಎಂ, ಪಿಎಂ ಆದಾಗ ಪುಟ್ಟಸ್ವಾಮಿಗೌಡರೊಂದಿಗೆ ನಿಕಟವಾಗಿದ್ದು ದೇವೇಗೌಡರ ವಿರುದ್ಧ ಸಾಕಷ್ಟು ವರದಿ ಮಾಡಿದ್ದರಿಂದ, ಕರೆದಾಕ್ಷಣ ಇಲ್ಲ ಎನ್ನಲಾಗದೆ ಬರ್ತೀನಿ ಎಂದು ಹೋದೆ. ಒಂದು ಕಾಫಿ ಕುಡಿಸಿ, ‘ಶ್ರೀಕಂಠಯ್ಯನೋರ ಸಿಓಡಿ ಫೈಲ್ ಬಗ್ಗೆ ಡೀಟೈಲ್ಸ್ ಬೇಕಿತ್ತಲ್ಲಣ್ಣ...' ಅಂದರು.
ದೇವೇಗೌಡರು ಯಾವ ತಂತ್ರವನ್ನು ಪ್ರಯೋಗಕ್ಕೊಡ್ಡಿ ಗೆದ್ದಿದ್ದರೋ ಅದೇ ತಂತ್ರಕ್ಕೆ ಪುಟ್ಟಸ್ವಾಮಿಗೌಡರೂ ಕೈ ಹಾಕಿದ್ದರು. ಫೈಲ್ ಇಟ್ಟುಕೊಂಡು ಬೀಗರನ್ನು ಬ್ಲ್ಯಾಕ್ಮೇಲ್ ಮಾಡಲು ಹವಣಿಸುತ್ತಿದ್ದರು. ಅದೇ ಸಮಯದಲ್ಲಿ ಅಧಿಕಾರದಲ್ಲಿದ್ದ ಜನತಾದಳ ಒಳಜಗಳ, ಕಿತ್ತಾಟಗಳಿಂದ ಕೆಟ್ಟ ಹೆಸರು ಸಂಪಾದಿಸಿತ್ತು. ಕಾಂಗ್ರೆಸ್ ಪರ ಅಲೆ ಇತ್ತು. ಆದರೆ ಪುಟ್ಟಸ್ವಾಮಿಗೌಡರ ಅದೃಷ್ಟ ಕೈ ಕೊಟ್ಟಿತ್ತು. ಹೈಕಮಾಂಡ್ ಅವರನ್ನು ಲೋಕಸಭೆಗೆ ದಬ್ಬಿತ್ತು. ಶ್ರೀಕಂಠಯ್ಯನವರು ಗೆದ್ದು ಮಂತ್ರಿಯಾಗಿದ್ದರು. ಮಹಾನುಭಾವರಾದ ಪುಟ್ಟಸ್ವಾಮಿಗೌಡರು, ಅಯ್ಯನವರು ಸಚಿವರಾಗಿದ್ದಷ್ಟು ದಿನವೂ ಕಿರುಕುಳ ಕೊಟ್ಟರು. ಫೈಲ್ ಇಟ್ಟುಕೊಂಡು ಅವರಿಂದ ಅಪಾರ ಅನುಕೂಲಗಳನ್ನೂ ಪಡೆದರು.
ಆದರೆ ಸಿಓಡಿ ತನಿಖೆಯ ವರದಿಯ ಫೈಲನ್ನು ಬಹಿರಂಗಗೊಳಿಸಲಿಲ್ಲ. ಶ್ರೀಕಂಠಯ್ಯನವರಿಗೆ ಶಿಕ್ಷೆಯೂ ಆಗಲಿಲ್ಲ. ಈಗ ಇದೇ ಶ್ರೀಕಂಠಯ್ಯನವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಶ್ರವಣಬೆಳಗೊಳ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ವಯಸ್ಸಾದವರಿಗೆ, ಸೋತವರಿಗೆ ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ವರಿಷ್ಠ ಮಂಡಳಿ ನಿರ್ಣಯಿಸಿದ್ದರೂ, ಎಂಬತ್ಮೂರು ವರ್ಷಗಳ ಶ್ರೀಕಂಠಯ್ಯನವರಿಗೆ ಟಿಕೆಟ್ ಸಿಕ್ಕಿದೆ.
ಹಾಸನದ ಮಣ್ಣಿನ ಗುಣವೋ ಇಲ್ಲ ಅಯ್ಯನವರ ನವಚೈತನ್ಯಕ್ಕೆ ಕಾರಣವಾಗಿರುವ ವಿನಾಕಾರಣಗಳ ಸ್ಫೂರ್ತಿಯೋ .. ಅಯ್ಯ ಈಗಲೂ ಬಿಸಿರಕ್ತದ ತರುಣರು?!
(ಏಪ್ರಿಲ್ 28, 2008 ರಂದು ಪ್ರಕಟ)
ಇವರು ನಮ್ಮ ದೇವೇಗೌಡ

‘ಯಾರೆ ಅಧಿಕಾರಕ್ಕೆ ಬರಬೇಕಾದರೂ ಜೆಡಿಎಸ್ನ ಬೆಂಬಲ ಪಡೆಯಲೇಬೇಕು. ನಮ್ಮನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸಲಾಗುವುದಿಲ್ಲ...' ಇನ್ನು ಮುಂತಾಗಿ ಜೆಡಿಎಸ್ನ ದೇವೇಗೌಡರು ಗುಡುಗಿದ್ದಾರೆ. ಈ ಗುಡುಗು ಇವತ್ತಿಗೆ, ನಾಳೆಗೆ ಮತ್ತೊಂದು ಸಿಡಿಲು. ಚುನಾವಣೆ ಮುಗಿಯುವುದರೊಳಗೆ ಇಂತಹ ನೂರಾರು ಬಾಣ, ಬಿರುಸುಗಳು ಗೌಡರ ಬತ್ತಳಿಕೆಯಿಂದ ಹೊರಬರುತ್ತವೆ.
ಇವೆಲ್ಲ ಚುನಾವಣೆಗಷ್ಟೇ ಸೀಮಿತವಾದ ಹೇಳಿಕೆಗಳು. ಜಿಲ್ಲೆಗೆ, ಜನಕ್ಕೆ ತಕ್ಕಂತೆ ಈ ಹೇಳಿಕೆ ಬದಲಾಗುವುದುಂಟು. ಹೇಳಿದಷ್ಟೇ ಸಲೀಸಾಗಿ ಗೌಡರು ಮರೆಯುವುದೂ ಉಂಟು. ಮರೆಯದ ಮಾಧ್ಯಮಗಳು ಮಾತ್ರ ವಿಶೇಷ ಅರ್ಥ ಹುಡುಕುವುದುಂಟು.
ಜನಕ್ಕೆ ಇವುಗಳನ್ನೆಲ್ಲ ಸಹಿಸಿಕೊಳ್ಳುವ ಸಹನೆ ಇದೆ, ಅದಷ್ಟೇ ಅವರಿಗೂ ಬೇಕಾಗಿರುವುದು.
ದೇವೇಗೌಡರ ನಕ್ಷತ್ರವೇ ಚುನಾವಣಾ ನಕ್ಷತ್ರ. ಚುನಾವಣೆ ಎಂದಾಕ್ಷಣ ಅವರು ಎದ್ದುನಿಲ್ಲುತ್ತಾರೆ. ಮುದುಡಿದ್ದ ಮನಸ್ಸು ಅರಳುತ್ತದೆ. ಮೈಗೆ ಸಿಡಿಲಿನಂತಹ ಶಕ್ತಿ ಸಂಚಲನವಾಗುತ್ತದೆ. ವಯಸ್ಸು ಮರೆತುಹೋಗುತ್ತದೆ. ನರಗಳಲ್ಲಿ ಹರಿಯುತ್ತಿರುವ ರಕ್ತ ಹೇಮಾವತಿ ನದಿಯಾಗುತ್ತದೆ (ಈ ನದಿ ಇದ್ದಕ್ಕಿದ್ದಂತೆ ಉಕ್ಕಿ ಹರಿದು ಅನಾಹುತಗಳಿಗೆ ಕಾರಣವಾಗುವುದಕ್ಕೆ ಫೇಮಸ್ಸು). ಎದುರಾಳಿಗಳನ್ನು ಸದೆಬಡಿಯಲು, ಹೀಯಾಳಿಸಲು, ನೀರಿಳಿಸಲು ಉತ್ಸುಕರಾಗುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ- ಚಕ್ರವೇ ನಾಚುವಂತೆ!
ಚುನಾವಣೆಯೇ ಅವರ ಆರೋಗ್ಯ. ತಮ್ಮ ಸುತ್ತ ಜನ ಗಿಜಿಗಿಡುವುದನ್ನು, ಕಾರ್ಯಕರ್ತರು ಕೈ ಕಾಲುಗಳಿಗೆ ಸಿಕ್ಕಿ, ಬಿದ್ದು, ಎದ್ದು, ಒದ್ದಾಡುವುದನ್ನು, ಒಂದರೆಗಳಿಗೆಯೂ ಪುರುಸೊತ್ತು ಕೊಡದಂತೆ ಜನ ಬಂದು ಪೀಡಿಸುವುದನ್ನು, ಒಲೈಸುವುದನ್ನು, ವಂದಿಸುವುದನ್ನು ದೇವೇಗೌಡರು ಬಯಸುತ್ತಾರೆ.
ಮತದಾರರು, ಮಾಧ್ಯಮದವರು, ವಿರೋಧಿ ನಾಯಕರು ಕೊನೆಗೆ ಯಾರೂ ಇಲ್ಲ ಎಂದರೆ ತನ್ನ ಕುಟುಂಬದವರು... ಹೀಗೆ ಯಾರಾದರೊಬ್ಬರು ಇವರಿಗೆ ತೊಂದರೆ ಕೊಡುತ್ತಿರಲೇಬೇಕು. ಕೀಟಲೆ ಕೊಡಬೇಕು, ಒಳಗಾಗಬೇಕು- ಇದೂ ಕೂಡ ಗೌಡರಿಗೆ ಇಷ್ಟವಾದದ್ದೆ.
ಈ ಚುನಾವಣೆಗೂ ದೇವೇಗೌಡರೇ ಸಾರಥಿ. ಇನ್ನೊಬ್ಬರು ಹೇಳುವವರೆಗೂ ಕಾಯದೆ ಅವರೇ ಬಂದು ಆ ಸ್ಥಾನವನ್ನು ಅಲಂಕರಿಸಿಬಿಟ್ಟಿದ್ದಾರೆ. ಅಕಸ್ಮಾತ್ ಕುಮಾರಸ್ವಾಮಿ ಏನಾದರೂ ಯುವಕ, ಮಾಜಿ ಮುಖ್ಯಮಂತ್ರಿ, ಶಾಸಕರಿಗೆ ಆಪ್ತ ಎಂದು ಫ್ರಂಟ್ಲೈನ್ಗೇನಾದರೂ ಬಂದಿದ್ದರೆ; ಬರಲು ಯೋಚಿಸಿದ್ದರೆ ಸಾಕಿತ್ತು, ಅದರ ಕತೆಯೇ ಬೇರೆಯಾಗುತ್ತಿತ್ತು.
ಗೌಡರು ದೇವರು, ದೆವ್ವ, ಮಾಟ, ಮಂತ್ರ, ಜ್ಯೋತಿಷ್ಯ, ಹಲ್ಲಿಶಕುನ, ಗಿಳಿಶಾಸ್ತ್ರ... ಯಾವುದನ್ನೂ ನಂಬುವುದಿಲ್ಲ. ಹೀಗೆಂದರೆ, ಬರೆದವನಿಗೆ ಬುದ್ಧಿ ಬಲಿತಿಲ್ಲ ಎಂದುಕೊಳ್ಳಬಹುದು. ಆದರೆ ಇದು ನಿಜ. ಯಾಕೆಂದರೆ ಇವಿಷ್ಟನ್ನೂ ಗೌಡರು ಸುಮಾರು ಐವತ್ತು ವರ್ಷಗಳಿಂದ ತಪ್ಪದೆ ಮಾಡಿಕೊಂಡು ಬಂದಿದ್ದಾರೆ- ಶ್ರದ್ಧೆಯಿಂದಲ್ಲ, ಸ್ವಾರ್ಥದಿಂದ. ಮಾಡುತ್ತಾ ಮಾಡುತ್ತಾ ಅವುಗಳ ಮರ್ಮವನ್ನೂ ಅರಿತಿದ್ದಾರೆ. ಪೂಜಾರಿಗೆ ದೇವರು ಗೊತ್ತಿರುವ ಹಾಗೆ, ಮಾಟಗಾರನಿಗೆ ಜನರ ಮೆಂಟಾಲಿಟಿ ತಿಳಿದಿರುವ ಹಾಗೆ ದೇವೇಗೌಡರಿಗೆ ಇವುಗಳ ಒಳಮರ್ಮ ಗೊತ್ತಾಗಿದೆ. ಬಹಿರಂಗವಾಗಿ ಇವೆಲ್ಲವನ್ನು ಮಾಡುವ ಗೌಡರು, ಅಂತರಂಗದಲ್ಲಿ ಅವರೆ ಅವೆಲ್ಲವೂ ಆಗಿರುತ್ತಾರೆ. ಎಲ್ಲದರ ಬಗ್ಗೆಯೂ ಅವರಿಗೆ ಒಂದು ರೀತಿಯ ತಿರಸ್ಕಾರವಿದೆ. ಆ ತಿರಸ್ಕಾರವನ್ನು ಬಹಿರಂಗಗೊಳಿಸಿದರೆ, ಜನ ಗೌಡರನ್ನು ಅನುಮಾನದಿಂದ ನೋಡುತ್ತಾರೆ. ಗೌಡರನ್ನು ಜನ ನಂಬಬೇಕು. ಜನರಿಗಾಗಿ ಗೌಡರು ಅವುಗಳನ್ನು ನಂಬುತ್ತಾರೆ.
ಗೌಡರು ಬಂಡೆಗಲ್ಲಿನಂಥ ಆಸಾಮಿ. ಆರೋಪಗಳಿಗೆ ಹೆದರದ, ಸೋಲುಗಳಿಗೆ ಕುಂದದ, ಅವಮಾನಕ್ಕೆ ಅಂಜದ ಗಂಡು. ಅಂತಾರಾಷ್ಟ್ರೀಯ ಸಮಸ್ಯೆ ಸಾಲ್ವ್ ಮಾಡುವ ಸಮರ್ಥ. ಅಳುಕಿಲ್ಲದೆ ಇಂಗ್ಲಿಷ್, ಹಿಂದಿ ಮಾತನಾಡಬಲ್ಲ ಹರದನಹಳ್ಳಿಯ ಹಳ್ಳಿಗ. ಆದರೆ ಪತ್ನಿ ಚೆನ್ನಮ್ಮನವರ ಪಾಲಿನ ಅಮ್ಮಾವ್ರ ಗಂಡ. ರೇವಣ್ಣನ ಕೈಗೆ ಹೆದರುವ, ಬಾಯಿಗೆ ಬೆದರುವ ಬೆರ್ಚಪ್ಪ. ಇಡೀ ಕುಟುಂಬ ಗೌಡರನ್ನು ಬೆಟ್ಟದಂತೆ ನೋಡುತ್ತದೆ. ಭಯ, ಭಕ್ತಿ, ಗೌರವದಿಂದ ಕಾಣುತ್ತದೆ. ಇದು ರೇವಣ್ಣನ ವಿಷಯದಲ್ಲಿ ವೈಸ್ ವರ್ಸಾ.
ಖಾದಿ ಜುಬ್ಬ, ಪಂಚೆ, ಟವಲ್ ಬಿಟ್ಟರೆ ಬೇರೊಂದು ಬಟ್ಟೆ ತೊಡದ ಬಡವ. ಸೊಪ್ಪು ಸಾರು, ಮುದ್ದೆ ತಿನ್ನುವ ಸರಳ. ರೈತ ಕುಟುಂಬದಿಂದ ಬಂದ ಮಣ್ಣಿನ ಮಗ. ಮಣ್ಣಿ(ರಿಯಲ್ ಎಸ್ಟೇಟ್, ಗಣಿ)ನಿಂದಲೆ ಮಕ್ಕಳು ಅಂಬಾನಿ, ಮಿತ್ತಲ್ ಮಟ್ಟಕ್ಕೇರಿದ್ದನ್ನು ಕಂಡು ಕರುಬುವ ತಂದೆ. ಕುಟುಂಬದೊಳಗಿನ ಹಣ-ಅಧಿಕಾರ ಹಂಚಿಕೆ ಅಂದಾಕ್ಷಣ ಮಾಯವಾಗುವ ಮನುಷ್ಯ.
ತಾನು ಐವತ್ತು ವರ್ಷಗಳ ಕಾಲ ರಾಜಕೀಯ ಮಾಡಿದರೂ ಸಿಎಂ ಆಗಲಿಕ್ಕೆ ಏನೆಲ್ಲ ಶ್ರಮ ಸುರಿದೆ, ಮಗ ಚಿಟಿಕೆ ಹೊಡೆಯುವುದರೊಳಗೆ ದಕ್ಕಿಸಿಕೊಂಡ, ಕೋಟಿಗಳನ್ನು ಹುರುಳಿಕಾಳಿನ ಸಮಕ್ಕೆ ತಂದ. ಮಗನ ಬೆಳವಣಿಗೆ ಕಂಡು ಖುಷಿಯೂ ಇದೆ, ಹೊಟ್ಟೆಯುರಿಯೂ ಇದೆ.
ಇಂಥ ದೇವೇಗೌಡ ಕರ್ನಾಟಕದಲ್ಲಿ ಹುಟ್ಟಿದ್ದಾರೆ. ನಮ್ಮ ನಿಮ್ಮೆಲ್ಲ ಕಣ್ಣಮುಂದೆಯೇ ಓಡಾಡಿಕೊಂಡಿದ್ದಾರೆ. ಈ ಲಿವಿಂಗ್ ಲೆಜೆಂಡ್ ದೇವೇಗೌಡರು ರಾಜಕಾರಣದ ಯೂನಿವರ್ಸಿಟಿ ಇದ್ದಂತೆ. ಭವಿಷ್ಯದಲ್ಲಿ ಯಾರೆ ರಾಜಕೀಯ ರಂಗಕ್ಕೆ ಬರಬೇಕೆಂದರೂ ಕಡ್ಡಾಯವಾಗಿ ದೇವೇಗೌಡರನ್ನು ಅಧ್ಯಯನದ ವಸ್ತುವಾಗಿ ಸ್ವೀಕರಿಸಬೇಕು. ಇದು ಈ ಕ್ಷಣದಲ್ಲಿ ಅತಿ ಎನ್ನಿಸಬಹುದು, ಆದರೂ ಸತ್ಯ.
(ಏಪ್ರಿಲ್ 10, 2008ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)
ಲಂಕೇಶರ ಬಗ್ಗೆ ಲಂಕೇಶರಷ್ಟೇ ಬರೆಯಬಲ್ಲರು
ಕಳೆದ ವರ್ಷ ತೇಜಸ್ವಿಯವರ ಮೇಲಿನ ವಿಚಾರ ಸಂಕಿರಣದಲ್ಲಿ ಎನ್.ಎಸ್.ಶಂಕರ್, ಲಂಕೇಶರ ‘ಹುಳಿಮಾವಿನ ಮರ’ ಪುಸ್ತಕ ಬಂದಾಗ ಓದಿ ಫೆಂಟಾಸ್ಟಿಕ್ ಅಂದಿದ್ದೆ. ಆದರೆ ಈಗ ಅದನ್ನು ಓದಿದರೆ, ನನಗೆ ಅದು ‘ನವ್ಯ ಆತ್ಮಕಥನ’ದಂತೆ ಕಾಣುತ್ತಿದೆ. ಅಲ್ಲಿರುವುದು ಪೂರ್ಣ ಸತ್ಯ ಅಲ್ಲ ಅನ್ನಿಸುತ್ತಿದೆ...’ ಎಂದರು.
ಲಂಕೇಶರ ಬಗ್ಗೆ ಲಂಕೇಶರು ಬರೆದದ್ದು ಸಾಲದು ಮತ್ತು ಅಷ್ಟು ಸರಿಯಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯವೂ ಇದೆ. ಅಂದಮೇಲೆ ಅವರ ಜೊತೆ ಇದ್ದ ನನ್ನಂತಹವರು ಕಟ್ಟಿಕೊಡುವ ಚಿತ್ರಣ ಎಷ್ಟರಮಟ್ಟಿಗೆ ಸರಿ ಮತ್ತು ಸತ್ಯ ಎಂಬ ಪ್ರಶ್ನೆ ಬರೆಯಬೇಕೆಂದು ಕೂತಾಗಲೆಲ್ಲ ಕಾಡುತ್ತದೆ. ಹಾಗಾಗಿ ನನ್ನ ತಿಳುವಳಿಕೆಗೆ, ಗ್ರಹಿಕೆಗೆ ದಕ್ಕಿದಷ್ಟನ್ನು ಕೆಲವು ಘಟನೆಗಳ ಮೂಲಕ ಲಂಕೇಶರನ್ನು ಲಂಕೇಶರನ್ನಾಗಿಯೇ ಕಂಡಿರಿಸಲು ಪ್ರಯತ್ನಿಸುತ್ತೇನೆ. ಇಲ್ಲೂ ಸಿಗಲಿಲ್ಲ, ಸಾಲಲಿಲ್ಲ ಅಂದರೆ... ಆ ಲಂಕೇಶರನ್ನೇ ಕೇಳಿ.
ಲಂಕೇಶರಿಗೆ ಡಯಾಬಿಟೀಸ್ ಇತ್ತು. ಬರಹ ಬಲ್ಲವರಾದ್ದರಿಂದ, ಪತ್ರಿಕೆಯಿದ್ದುದರಿಂದ ಆಗಾಗ ಡಯಾಬಿಟೀಸ್ ಬಗ್ಗೆ ಬರೆಯುತ್ತಿದ್ದರು. ಅದು ಒಂದು ರೀತಿಯಲ್ಲಿ ಓದುಗರ ಅನುಕಂಪಕ್ಕೆ ಕಾರಣವಾಗುತ್ತಿತ್ತು. ಆದರೆ ಅದು ಲಂಕೇಶರಿಗೆ ರೇಜಿಗೆ ಹುಟ್ಟಿಸುತ್ತಿತ್ತು. ಅಂತಹ ಪತ್ರಗಳನ್ನು ನೋಡಿದಾಗ, ಫೋನ್ ಕಾಲ್ಗಳು ಬಂದಾಗ ಸಿಡಿಸಿಡಿ ಅನ್ನೋರು. ಮುಖ ಊದಿಸಿಕೊಂಡಿದ್ದು ಅವರ ಬೇಸರಕ್ಕೆ ಅವರೇ ಮದ್ದು ಅರೆದುಕೊಳ್ಳುತ್ತಿದ್ದರು.
ಇದೇ ಸಮಯದಲ್ಲಿ ‘ಪತ್ರಿಕೆ’ಗೆ ಮುಂಬೈನಿಂದ ಬರೆಯುತ್ತಿದ್ದ ಉಮಾರಾವ್ ಅವರು, ಮೇಸ್ಟ್ರಿಗೆ ಡಯಾಬಿಟೀಸ್ ಇದೆ ಅಂತ ಗೊತ್ತಾಗಿ ಆಗತಾನೇ ಬಂದಿದ್ದ, ಹೊರದೇಶದಲ್ಲಷ್ಟೇ ಸಿಗುತ್ತಿದ್ದ ಡಯಾಬಿಟೀಸ್ ಚೆಕ್ ಮಾಡುವ ಪುಟ್ಟ ಯಂತ್ರವೊಂದನ್ನು ತಂದು ಕೊಟ್ಟರು. ಅವರು ಬಂದುಹೋದ ಮೇಲೆ, ಆ ಮೆಷಿನ್ ಮ್ಯಾನ್ಯುಯಲ್ ಪೂರ್ತಿ ಓದಿದ ಮೇಸ್ಟ್ರು ಕಾರ್ಯರೂಪಕ್ಕೆ ಇಳಿದೇಬಿಟ್ಟರು. ಅವರ ರೂಮಿನಿಂದ ಪಟ್ ಪಟ್ ಅಂತ ಶಬ್ದ ಬರೋಕೆ ಶುರುವಾಯ್ತು. ಕುತೂಹಲಗೊಂಡ ನಾನು ಅಳುಕುತ್ತಲೇ ರೂಮಿಗೆ ಹೋದ್ರೆ, ಮುಖದಲ್ಲೇನೋ ಧಿಮಾಕು, ದಟ್ಟ ಹುಬ್ಬುಗಳು ನನ್ನನ್ನು ಪ್ರಶ್ನಿಸುವಂತೆ, ಅಣಕಿಸುವಂತೆ ಕುಣಿಯುತ್ತಿವೆ.
‘ಕೈ ಕೊಡು, ಹಿಂಗಿಡಿಯೋ... ಹಿಂಗೆ ಕಣಲೇ...’ ಅಂದು ಪಟ್ ಅಂತ ಚುಚ್ಚಿ, ರಕ್ತ ಬರಿಸಿ, ಆ ಪುಟ್ಟ ಯಂತ್ರಕ್ಕಾಕಿ, ಅದು ತೋರಿಸಿದ ಡಿಜಿಟಲ್ ರಿಸಲ್ಟ್ ನೋಡಿ, ‘ಏನಿಲ್ಲ ಹೋಗು...’ ಅಂದ್ರು. ಎಲ್ಲಾ ಒಂದ್ ನಿಮಿಷದಲ್ಲಿ. ಆಫೀಸ್ನಲ್ಲಿ ಇದ್ದವರಿಗೆ, ಹೊರಗಿನಿಂದ ಬಂದವರಿಗೆ ಎಲ್ರಿಗೂ ಡಯಾಬಿಟೀಸ್ ಚೆಕಪ್; ನಿಂತ ನಿಲುವಿನಲ್ಲಿಯೇ ರಿಸಲ್ಟ್. ಮೇಸ್ಟ್ರಿಗೆ ಶುಗರ್ ಇದೆ ಅಂತ ಗೊತ್ತಾದಮೇಲೆ, ಬಂದವರೆಲ್ಲ ಒಂದೊಂದು ಔಷಧಿ ಹೇಳೋರೆ. ಯಾರೋ ಒಬ್ಬರು ‘ಒಣನೇರಳೆ ಬೀಜದ ಪುಡಿ ಇದ್ಯಲ್ಲ ಸಾರ್, ಒಳ್ಳೆ ದೇಸೀ ರಾಮಬಾಣ... ’ಅಂದರು.
‘ಹೌದಾ, ಹ್ಯೆಂಗೆ, ಎಲ್ಲಿ ಸಿಗುತ್ತೆ?’
‘ಗ್ರಂಧಿಗೆ ಅಂಗಡೀಲಿ ಸಿಗುತ್ತೆ, ತಂದ್ಕೊಂಡ್ತಿನಿ ಬಿಡಿ ಸಾರ್, ಸಡನ್ನಂತ ಇಳಿದೋಯ್ತದೆ’ ಅಂದ್ರು.
ಏನ್ ಇಳಿತದೋ ಅಂತ ಆತಂಕದಿಂದ ಮೇಸ್ಟ್ರು ಹೇಳಿದವರ ಮುಖ ನೋಡಿದರು!
‘ಲೇ, ಗಿರಿ ಬಾರಲೇ ಇಲ್ಲಿ, ಆ ಗ್ರಂಧಿಗೆ ಅಂಗಡಿಗೋಗ್ಬಾ...’ ಅಂದು ಒಣನೇರಳೆ ಬೀಜದ ಪುಡಿ ಎಂದು ಒಂದು ಚೀಟಿಯಲ್ಲಿ ಬರೆದು ಕೊಟ್ಟರು. ಬೇಕಾಗಿದ್ದು ಐದತ್ತು ಗ್ರಾಮು, ನಮ್ಮ ಗಿರಿ ತಂದಿದ್ದು ೨೫೦ ಗ್ರಾಮು. ಶುರುವಾಯ್ತು ಮತ್ತೆ... ಬಂದವರಿಗೆಲ್ಲ ಚೆಕಪ್, ಬೀಜದ ಪುಡಿ ವಿತರಣೆ. ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು ಏನೂ ಗೊತ್ತಿಲ್ಲ. ಆ ಸಮಯದಲ್ಲಿ ಮೇಸ್ಟ್ರ ದೇಹ ತುಂಬಾನೇ ಜಂಕ್ಲಾಗಿತ್ತು. ಹಿಂದುಮುಂದು ನೋಡದೆ ತಿಂದ್ರು, ಭೇದಿಯಾಯ್ತು. ಕೂರಕ್ಕಾಗ್ತಿಲ್ಲ, ಮಲಗಲಿಕ್ಕಾಗ್ತಿಲ್ಲ, ಪಂಚೆಯೆಲ್ಲ ಒದ್ದೆ... ತಿನ್ನಿ ಅಂತ ಹೇಳಿದೋರಿಗೆ ಅವತ್ತೆಲ್ಲ ಬೈದ್ರು. ಸಿಡಿಸಿಡಿ ಅಂದ್ಕೊಂಡೇ ಇದ್ರು.
ಉಮಾರಾವ್ ತಂದುಕೊಟ್ಟದ್ದು ಮಾಡರ್ನ್ ಡಿಜಿಟಲ್ ಮೆಷಿನ್, ಅದು ಅನುಕೂಲವಾಗಿದ್ದು ಡಯಾಬಿಟೀಸ್ ಡೇಟಾಕ್ಕೆ. ಮೇಸ್ಟ್ರಿಗೆ ಭಾರೀ ಬಾಯ್ಚಪಲ; ಯಾವುದನ್ನೂ ಕಂಟ್ರೋಲ್ ಮಾಡ್ತಿರಲಿಲ್ಲ. ಹೋಳಿಗೆ ಅಂದ್ರೆ ತುಂಬಾ ಇಷ್ಟ, ತುಪ್ಪ ಸುರಿದುಕೊಂಡು, ಮುಖಮೂತಿನೆಲ್ಲ ಮಾಡಿಕೊಂಡು ಚಿಕ್ಕಮಕ್ಕಳಂತೆ ತಿನ್ನೋರು. ಮಾವಿನಹಣ್ಣಿನ ಬುಟ್ಟಿಯನ್ನೇ ರೂಮಿನಲ್ಲಿಟ್ಟುಕೊಂಡಿದ್ದರು. ಇಷ್ಟವಾದ, ರುಚಿಕಟ್ಟಾದ ತಿಂಡಿಗಳನ್ನು ತಿನ್ನೋದು, ತಿಂದಾದ ಮೇಲೆ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳೋದು. ಯಾವುದನ್ನು ತಿನ್ನಬಾರದು ಅಂತ ಡಾಕ್ಟ್ರು ಹೇಳಿದ್ರೋ ಅವೆಲ್ಲವನ್ನು ತಿನ್ನುತ್ತಾ, ಚೆಕ್ ಮಾಡಿಕೊಳ್ಳುತ್ತಾ, ಯಾವ್ಯಾವುದನ್ನು ತಿಂದರೆ ಶುಗರ್ ಲೆವೆಲ್ ಎಷ್ಟೆಷ್ಟು ಏರುತ್ತೆ ಅಂತೆಲ್ಲ ಬರೆದಿಟ್ಟುಕೊಳ್ಳತೊಡಗಿದರು. ಆ ಮೆಷಿನ್ ಬಂದಿದ್ದೆ ತಡ ಅವರ ರೂಮು ಪ್ರಯೋಗಶಾಲೆಯಾಯ್ತು, ಅವರ ಕೈಗೆ ಸಿಕ್ಕವರು ಪ್ರಯೋಗಪಶುಗಳಾದರು. ಯಾರೂ ಸಿಗದಿದ್ದಾಗ ಅವರೇ...
ನನಗ್ಯಾಕೋ ಅತಿಯಾಯ್ತು ಅನ್ನಿಸಿತು. ಸುಮ್ಮನೆ ಹೋಗಿ ನಿಂತೆ. ‘ಪ್ರಯೋಗಶೀಲ’ ಲಂಕೇಶ್... ಹ್ಯಂಗೆ ಎಂದು ಭುಜ ಕುಣಿಸಿದರು. ಅವರ ಮಾತು ಅವರನ್ನೇ ಗೇಲಿ ಮಾಡಿಕೊಳ್ಳುವಂತಿತ್ತು.
‘ಹಂಗೆಲ್ಲ ತಿನ್ನಬಾರ್ದು ಸಾರ್, ಹೆಚ್ಚುಕಡಿಮೆ ಆದ್ರೆ...’ ಅಂದೆ.
ಗೇಲಿ, ವ್ಯಂಗ್ಯಗಳಿಂದ ಮುಖದ ಮೇಲೆ ಕುಣಿಯುತ್ತಿದ್ದ ನಗು ಮರೆಯಾಗಿ, ಸೀರಿಯಸ್ಸಾದರು. ನನ್ನ ಮುಖ ನೋಡಿ, ‘ನೀನು ಡಾಕ್ಟ್ರ?’ ಅಂದ್ರು.
ಸುಮ್ನೆ ನಿಂತಿದ್ದೆ, ‘ನೀನ್ ಡಾಕ್ಟ್ರೇನೋ’ ಅಂದ್ರು. ದನಿ ಸ್ವಲ್ಪ ಗಡುಸಾಗಿತ್ತು.
ಏನು ಹೇಳಬೇಕೋ ಗೊತ್ತಾಗಲಿಲ್ಲ, ಭಯ ಆಯ್ತು, ಯಾಕಾದ್ರು ಹೇಳುದ್ನೋ ಅನ್ನಿಸಿ ಸುಮ್ಮನೆ ನಿಂತೆ.
‘ನೀನ್ ಪೇಷಂಟಾ?’
ಸುಮ್ನೆ ನಿಂತೇ ಇದ್ದೆ...
‘ಡಾಕ್ಟ್ರೂ ಅಲ್ಲ, ಪೇಷಂಟೂ ಅಲ್ಲ, ಅಂದ್ಮೇಲೆ ತಿಕ ಮುಚ್ಕೊಂಡ್ ಇರು...’
ಪೇಷಂಟಾಗಿ ಕಷ್ಟನೂ ಗೊತ್ತಿಲ್ಲ, ಡಾಕ್ಟ್ರಾಗಿ ಪರಿಹಾರ ಮಾಡೋದು ತಿಳಿದಿಲ್ಲ, ಸುಮ್ನೆ ಮಾತಾಡದ್ರಿಂದ ಏನು ಪ್ರಯೋಜನವಿಲ್ಲ, ಅನ್ನುವುದು ಅವರ ಕಾಮನ್ಸೆನ್ಸ್.
*****
ವಾರಕ್ಕೆರೆಡು-ಮೂರು ಸಲ ಪತ್ರಿಕೆಯ ಕಚೇರಿಯಲ್ಲಿಯೇ ರಾಮಚಂದ್ರ ಶರ್ಮ, ಮೈಸೂರು ಮಠ್, ಶೂದ್ರ ಶ್ರೀನಿವಾಸ್, ಬಸವರಾಜ ಅರಸು, ಡಾ.ಶ್ರೀನಿವಾಸಗೌಡ, ಪ್ರಸನ್ನ, ಪ್ರಕಾಶ್ ಬೆಳವಾಡಿ, ಸತ್ಯ, ಮುಕುಂದ್ರಾಜ್ ಜೊತೆಗೆ ಲಂಕೇಶರು ಇಸ್ಪೀಟು ಆಡೋರು. ಅಪರೂಪಕ್ಕೊಮ್ಮೆ ಗೌರಿ, ಚಿದಾನಂದ ರಾಜಘಟ್ಟ ಕೂಡ ಬರೋರು. ಆಟದ ನಂತರ ಪಾನಕೂಟ. ಅಲ್ಲಿಗೆ ಆವತ್ತಿನ ದಿನ ಅರ್ಥಪೂರ್ಣ.
ಅದೇ ಸಮಯದಲ್ಲಿ ಮೇಸ್ಟ್ರ ಆರೋಗ್ಯ ಕೆಡಲಿಕ್ಕೆ ಶುರುವಾಗಿ ಸಿಗರೇಟ್, ಕುಡಿತ ಬಿಟ್ಟಿದ್ದರು. ಆದರೆ ಇಸ್ಪೀಟು, ರೇಸು ಹಾಗೇ ಇದ್ದವು. ಮೇಸ್ಟ್ರ ಆರೋಗ್ಯವನ್ನು ಹತ್ತಿರದಿಂದ ಗಮನಿಸುತ್ತಿದ್ದ, ಲಂಕೇಶರ ಆಪ್ತ ಬಳಗದವರೂ ಆಗಿದ್ದ ಡಾ. ಗೌಡರು, ತಮ್ಮ ಕೈ ಕೆಳಗೆ ಕೆಲಸ ಮಾಡುತ್ತಿದ್ದ, ಕಿಮ್ಸ್ನಲ್ಲಿ ಪೆಥಾಲಜಿ ಸಬ್ಜೆಕ್ಟ್ ಟೀಚ್ ಮಾಡುತ್ತಿದ್ದ ಡಾ.ವೆಂಕಟೇಶ್ ಎಂಬುವವರನ್ನು ಮೇಸ್ಟ್ರ ಹೆಲ್ತ್ ಚೆಕಪ್ಗೆ ನೇಮಿಸಿದರು.
ಈ ಡಾಕ್ಟರ್ ವೆಂಕಟೇಶ್ ಅವರಿಗೆ ಲಂಕೇಶರನ್ನು ಕಂಡರೆ ತುಂಬಾನೆ ಪ್ರೀತಿ; ಅದಕ್ಕಿಂತಲೂ ಹೆಚ್ಚಾಗಿ ಭಯ. ಜೊತೆಗೆ ಬಾಸ್ ಶ್ರೀನಿವಾಸಗೌಡರ ಹುಕುಂ ಬೇರೆ. ಪ್ರತಿದಿನ ಸಂಜೆ ಪತ್ರಿಕೆಯ ಕಚೇರಿಗೆ ಬಂದು ನಮ್ಮನ್ನೆಲ್ಲ ನಗಿಸಿ, ಕಾಫಿ ಕುಡಿಸಿ ಲವಲವಿಕೆಯಿಂದಿರುತ್ತಿದ್ದ ಡಾ.ವೆಂಕಟೇಶ್, ಮೇಸ್ಟ್ರ ರೂಮಿಗೆ ಹೋಗಬೇಕೆನ್ನುವಾಗ, ಸಿಂಹನ ಗುಹೆಗೆ ಹೋಗುತ್ತಿರುವ ಕುರಿಯಂತಾಗಿಬಿಡುತ್ತಿದ್ದರು. ಅವರು ಕಣ್ಣುಬಿಟ್ಟು ನೋಡಿದರೆ ಸಾಕು ಬೆವೆತುಹೋಗೋರು. ಆದರೆ ಲಂಕೇಶರು ಮಾತ್ರ ಅವರನ್ನು ಗೌರವದಿಂದ ಕಾಣುತ್ತಿದ್ದರು ಮತ್ತು ಅವರು ಹೇಳಿದಂತೆ ಕೇಳುತ್ತಿದ್ದರು. ಮೇಸ್ಟ್ರು ಹೋಗಿ ಮಲಗುವುದು, ಅವರು ಬಂದು ತೋಳಿಗೆ ಬ್ಲಡ್ ಪ್ರೆಷರ್ ಪಟ್ಟಿ ಸುತ್ತುವುದು, ರೀಡಿಂಗ್ ಬರೆದುಕೊಳ್ಳುವುದು, ಮಾತ್ರೆ, ಔಷಧಿ ಯಾವುದನ್ನು ಯಾವಾಗ ತೆಗೆದುಕೊಳ್ಳಬೇಕು ಎಂದೆಲ್ಲ ಹೇಳೋರು... ಎಲ್ಲಾ ನಾರ್ಮಲ್ಲಾಗಿಯೇ- ಪೇಷಂಟು-ಡಾಕ್ಟರ್ ಹೇಗಿರಬೇಕೋ ಹಾಗೆಯೇ.
ಲಂಕೇಶರು ಇರುವುದೇ ಹಾಗೆ ಎಂದು ಗೊತ್ತಿದ್ದ ನನಗೆ ಇದೇನು ಹೊಸದು ಅನ್ನಿಸಲಿಲ್ಲ. ಹಾಗಂತ ಸುಮ್ಮನಿರುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ನನಗೆ ತೋಚಿದ್ದನ್ನು ಹೇಳುತ್ತಿದ್ದೆ, ಅವರೂ ಅಷ್ಟೇ ಕೇಳಿಸಿಕೊಳ್ಳುತ್ತಿದ್ದರು... ಶ್ರೀನಿವಾಸಗೌಡ್ರು ಹೇಳಿರುವುದರಿಂದ ಡಾಕ್ಟ್ರು ಚೆಕಪ್ಗೆ ಬಂದುಹೋಗುತ್ತಿದ್ದರೂ ಲಂಕೇಶರು ಮಾತ್ರ, ‘ಏ, ಬಸುರಾಜ ಅವರಿಗೆ ತಿಂಗಳಿಗೆ ಇಷ್ಟು ದುಡ್ಡು ಅಂತ ಫಿಕ್ಸ್ ಮಾಡೋ... ಫ್ರೀಯಾಗೆಲ್ಲ ಬೇಡ’ ಅನ್ನೋರು. ‘ಪಾಪ ಏನೋ ಓದ್ಕಂಡಿರ್ತರ್ ಕಣೋ, ನೊಬೆಲ್ ಪ್ರೊಫೆಷನ್... ವೆರಿ ಹಂಬಲ್ ಫೆಲೋ, ಸ್ವಲ್ಪ ಜಾಸ್ತಿನೆ ಕೊಡು... ಸ್ವಲ್ಪ pause ಕೊಟ್ಟು, ‘ಅವುನ್ ಚೆಕ್ ಮಾಡದು, ನಾನ್ ಮಾಡಿಸ್ಕಳದು- ಎಲ್ಲ ನಾನ್ಸೆನ್ಸ್ ಕಣಲೆ. ಅಷ್ಟಕ್ಕೂ ಅವುನ್ಗೇನ್ ಗೊತ್ತಾಯ್ತದೆ, ನನ್ ಬಾಡಿ ನನಗ್ಗೊತ್ತು... ಇವರು ಹೇಳ್ದಂಗೆಲ್ಲ ಕೇಳಿದ್ರೆ, ಮುಗೀತು ನಮ್ ಕತೆ, ನಮ್ಮವ್ವ ಡಾಕ್ಟ್ರನ್ನೇ ನೋಡ್ಲಿಲ್ಲ, ಬದುಕಿರಲಿಲ್ವ? ದುಡೈತಲ್ಲ... ಭಾರೀ ವರ್ಸ್ಟು, ಮನುಷ್ಯನಿಗೆ ದುಡ್ಡು ಬಂತು ಅಂದ್ರೆ ಸಾವು ಬಂತು ಅಂತ ಅರ್ಥ... 'ಎಂದು ಕತ್ತು ಬಗ್ಗಿಸಿದರು.
ಒಂದೇ ಒಂದು ಕ್ಷಣ ಏನನ್ನಿಸಿತೋ ಅಥವಾ ನಾನೇನ್ ಯೋಚಿಸ್ತಿದೀನೋ ಎಂದು ಊಹಿಸಿದರೋ, ‘ನಾನೇನ್ ಸಾಯಲ್ಲ, ಸಾಯೋವಸ್ಟ್ ದುಡ್ಡಲ್ಲೈತೋ ನಮ್ಮತ್ರ.... ಅವರ ಜೊತೆಗೆ ನನ್ನನ್ನು ಸೇರಿಸಿಕೊಂಡುಬಿಟ್ಟರು! '
******
ಶುಗರ್ ಜಾಸ್ತಿಯಾಗಿ ಒಂದು ಕಣ್ಣು ತೊಂದರೆ ಕೊಡ್ತಾಯಿತ್ತು. ಯಾರೋ ಚೆನ್ನೈನ ಶಂಕರ್ ನೇತ್ರಾಲಯ ಚೆನ್ನಾಗಿದೆ, ಅಲ್ಲಿ ಎಕ್ಸ್ಪರ್ಟ್ ಡಾಕ್ಟರ್ಗಳಿದ್ದಾರೆ, ಅಲ್ಲಿಗೆ ಹೋಗಿ ಆಪರೇಷನ್ ಮಾಡಿಸಿಕೊಳ್ಳಿ ಎಂದು ಹೇಳಿದರು. ಆದರೆ ಆಫೀಸ್ ಬಿಟ್ಟು ಹೋಗಬೇಕಲ್ಲ ಜೀವ. ಹಲವಾರು ವರ್ಷಗಳ ಕಾಲ ಪಟ್ಟಾಗಿ ಕೂತು ಕೆಲಸ ಮಾಡಿದ್ದರು. ಪತ್ರಿಕೆಯೇ ಅವರ ಜೀವವಾಗಿತ್ತು. ಅದರಿಂದ ಬರುತ್ತಿದ್ದ ಹಣ ಮತ್ತು ಖ್ಯಾತಿ ಅವರಿಗೆ ಚೈತನ್ಯ, ಹುಮ್ಮಸ್ಸು ನೀಡುತ್ತಿದ್ದವು. ಆದರೆ ವಯಸ್ಸು, ದೇಹ ಕೇಳಬೇಕಲ್ಲ? ಕಣ್ಣಿನ ತೊಂದರೆ ಜಾಸ್ತಿಯಾಯ್ತು. ಚೆನ್ನೈಗೆ ಹೋಗುವುದೆಂದು ನಿರ್ಧರಿಸಿದರು. ಜೊತೆಗಿರಲು ಮೈಸೂರಿನಿಂದ ಪ್ರೊ.ಕೆ. ರಾಮದಾಸ್ರನ್ನು ಕರೆಸಿಕೊಂಡರು.
ಹೋಗಲಿಕ್ಕೆ ಮನಸ್ಸಿಲ್ಲ, ಹೋಗದೆ ಇರಲಿಕ್ಕೂ ಆಗ್ತಿಲ್ಲ. ಸಿಂಹಾಸನ, ಸಾಮ್ರಾಜ್ಯ ಬಿಟ್ಟುಹೋಗುತ್ತಿರುವೆನೇನೋ ಎಂಬ ತಳಮಳ, ಹೇಳಿಕೊಳ್ಳಲಿಕ್ಕಾಗದ ಕಸಿವಿಸಿ. ಅಂತೂ ಹೊರಟ್ರು. ಹೋಗಿ ಒಂದೇ ದಿನಕ್ಕೆ ಚೆನ್ನೈನಿಂದ ಪತ್ರ, ‘ಈವಾರ ಟೀಕೆ-ಟಿಪ್ಪಣಿ ಆಗಲ್ಲ ಅಂತ ಕಾಣುತ್ತೆ, ಏನ್ ಮಾಡ್ತಿಯೋ ನೋಡು, ಎಲ್ರೂ ಕೂತು ಯೋಚಿಸಿ ಪತ್ರಿಕೆಯನ್ನು ರೂಪಿಸಿ, ಇನ್ಯಾವಾಗ ಕಲಿಯೋದು ನೀವೆಲ್ಲ...’
ಆ ವಾರ ನಮ್ಮ ದ್ವಾರಕಾನಾಥ್ ಒಂದು ಸ್ಕೂಪ್ ರಿಪೋರ್ಟ್ ಮಾಡಿದ್ದರು- ವೀರಪ್ಪನ್ ಕೂದಲೆಳೆಯ ಅಂತರದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ವರದಿ. ಜೊತೆಗೆ ಅಪರೂಪದ ಫೋಟೋಗಳಿದ್ದವು. ಅದನ್ನು ಸೆಂಟರ್ಸ್ಪ್ರೆಡ್ಗೆ ಹಾಕಿದ್ದೋ, ಇನ್ನೂ ಎಲ್ಲೂ ಬಂದಿರಲಿಲ್ಲ. ಮೇಸ್ಟ್ರೇ ಮೇನ್- ಅವರಿಲ್ಲ ಅಂದರೆ ಹೇಗೆ? ಎಲ್ಲಾ ಕಾಲಕ್ಕೂ ಸಲ್ಲುವಂತಹ ಟೀಕೆಟಿಪ್ಪಣಿಯೊಂದನ್ನು ಹುಡುಕಿ ಹಾಕಿದೋ. ಇತರ ವರದಿಗಳೂ ಚೆನ್ನಾಗಿದ್ದವು. ಒಟ್ಟಾರೆ ಇಷ್ಯೂನೇ ನಮಗೆ ಖುಷಿ ಕೊಟ್ಟಿತ್ತು. ಲಂಕೇಶರಿಲ್ಲದ ಕೊರತೆ ಎಲ್ಲೂ ಕಾಣ್ತಿರಲಿಲ್ಲ.
ಅಂತೂ ಲಂಕೇಶರಿಲ್ಲದೆ ‘ಲಂಕೇಶ್ ’ಪತ್ರಿಕೆ ಮಾರುಕಟ್ಟೆಗೆ ಬಂದಿತ್ತು. ಮಂಗಳವಾರ ಬೆಳಗ್ಗೆ ಹತ್ತೂವರೆ ಮೇಷ್ಟ್ರು ಕಣ್ಣಿಗೆ ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ನಿಧಾನವಾಗಿ ಮೆಟ್ಟಿಲು ಹತ್ತಿ ಬರುತ್ತಿದ್ದರು. ಹಿಂದೆ ರಾಮದಾಸ್ ಇದ್ದರು. ಆ ಸ್ಥಿತಿಯಲ್ಲಿ ಅವರನ್ನು ನೋಡಿದಾಗ, ಕರುಳು ಚುರ್ರೆಂದಿತು. ಸುಮ್ಮನೆ ಹೋಗಿ ನನ್ನ ಜಾಗದಲ್ಲಿ ಕೂತುಬಿಟ್ಟೆ. ಮೇಸ್ಟ್ರು ಬಂದವರೆ ರೂಮಿಗೆ ಹೋದರು. ಹಿಂದಿದ್ದ ರಾಮದಾಸ್ ನನ್ನ ನೋಡಿ, ‘ಬಸುರಾಜ್ ಹೇಗಿದ್ದೀರಿ...’ ಎಂದು ಕೇಳಿ ಅವರನ್ನು ಫಾಲೋ ಮಾಡಿದರು.
ಇದೀಗತಾನೆ ಬಂದಿದ್ದಾರೆ, ಟೇಬಲ್ ಮೇಲೆ ಪತ್ರಿಕೆ ಇದೆ, ನೋಡಲಿ, ನಿಧಾನಕ್ಕೆ ಹೋದರಾಯಿತು ಎಂದು ನಾನು, ಅವರ ಆ ಸ್ಥಿತಿ ನೆನೆಸ್ಕೊಂಡು ಖಿನ್ನನಾಗಿ ಕೂತಿದ್ದೆ.
ಆ ಕ್ಷಣ ಏನನ್ನಿಸಿತೋ, ಅವರ ಮಾತು ಮುಗಿಯುವ ಮೊದಲೇ, ‘ಎಷ್ಟ್ ಕರೆಕ್ಟಾಗಿ ಗೆಸ್ ಮಾಡಿದಿರ ಸಾರ್, ಬರ್ತಿನಿ...’ ಎಂದು ಒಂದರೆಗಳಿಗೆಯೂ ನಿಲ್ಲದೆ ದಡದಡ ಅಂತ ಮೆಟ್ಟಿಲಿಳಿದು ಹೋಗಿಯೇಬಿಟ್ಟೆ. ನನ್ನಷ್ಟೇ ವೇಗವಾಗಿ ರಾಮದಾಸ್ ಕೂಡ, ‘ಏ ಬಸುರಾಜ್, ಬಸುರಾಜ್, ಹಂಗಲ್ಲ ಕಣ್ರಿ ಅದು...’ ಅಂತ ಕೂಗುತ್ತಾ ಓಡಿಬಂದರು. ನಾನು ಅವರ ಮಾತನ್ನೂ ಕೇಳದೆ, ‘ಇಲ್ಲಾ ಸಾರ್, ಅವರು ಯೋಚ್ನೆ ಮಾಡಿರೋದು ಸರಿಯಾಗಿದೆ...’ ಅಂದು ಬೈಕ್ ಹತ್ತಿ ಹೋಗಿಯೇಬಿಟ್ಟೆ.
ಲಂಕೇಶರಿಗೆ, ನಾನಿಲ್ಲದೆ ನಮ್ಮ ಹುಡುಗರು ಪತ್ರಿಕೆಯನ್ನು ತರಬೇಕು ಎಂಬ ಆಸೆಯೂ ಇತ್ತು; ನಾನಿಲ್ದೆ ತಂದೆಬಿಟ್ರಲ್ಲ, ನನ್ನನ್ನೇ ನಗಣ್ಯ ಮಾಡಿದ್ರಲ್ಲ ಎಂಬ ಸಹಿಸಲಾರದ ಸಂಕಟವೂ ಇತ್ತು. ಒಂದೇ ಸಮಯದಲ್ಲಿ ಎರಡೆರೆಡಲ್ಲ ಹೆಸರಿಗೆ ತಕ್ಕಂತೆಯೇ ಹತ್ತಾರು ವ್ಯಕ್ತಿತ್ವ. ಅದನ್ನು ಅಕ್ಷರಗಳಲ್ಲಿ ಅಡಗಿಸಿಡುವುದು ಕಷ್ಟವೇ...
(ಮಾರ್ಚ್ 8, 2009ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)