Monday, December 7, 2009

ಜಾಗತಿಕ ರಿಸೆಷನ್ ಗರ: ಸುದ್ದಿ ಮಾಧ್ಯಮಗಳೂ ಆಪತ್ತಿನಲ್ಲಿ



ಜಾಗತಿಕ ಆರ್ಥಿಕ ಹಿಂಜರಿತ ಜಗತ್ತಿನ ಯಾವ ಯಾವ ದೇಶಗಳ, ಯಾವ ಯಾವ ವಲಯಗಳ ಮೇಲೆ, ಹೇಗೇಗೆ ಪರಿಣಾಮ ಬೀರಿದೆ ಎಂಬುದು ಕೇವಲ ಸುದ್ದಿಯಷ್ಟೆ ಅಲ್ಲ; ಆಗಿರುವ, ಆಗುತ್ತಿರುವ ಅನಾಹುತ ಅಂದಾಜಿಗೂ ಸಿಗದಷ್ಟು ಆಘಾತಕಾರಿಯಾದುದು.

ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಯನ್ನು ಮಾಡಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರವಂತೂ ಕ್ಷಣಕ್ಕೊಂದು ಕಂಪನಿ ಕಣ್ಮುಚ್ಚುವ ಸ್ಥಿತಿಗೆ ತಲುಪಿ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಎಲ್ಲಾ ಕಾಲದಲ್ಲೂ ಜನರ ನಂಬಿಕೆಗೆ ಪಾತ್ರವಾಗಿದ್ದ ಬ್ಯಾಂಕಿಂಗ್, ಇನ್ಶೂರೆನ್ಸ್ ಕ್ಷೇತ್ರಗಳು ಮೊಟ್ಟಮೊದಲ ಬಾರಿಗೆ ಪಲ್ಲಟಕ್ಕೊಳಕ್ಕಾಗಿ ಪತರಗುಡುತ್ತಿವೆ. ಇನ್ನು ಇದ್ದಕ್ಕಿದ್ದಂತೆ ಆಕಾಶಕ್ಕೆ ಏರಿದ್ದ ಷೇರ್ ಮಾರ್ಕೆಟ್, ರಿಯಲ್ ಎಸ್ಟೇಟ್ ವಲಯಗಳ ವ್ಯವಹಾರವಂತೂ ಏರಿದ್ದಷ್ಟೇ ವೇಗವಾಗಿ ಇಳಿದು, ಆ ವಲಯಗಳನ್ನು ಅವಲಂಬಿಸಿದ್ದ ಅಪಾರ ಜನರನ್ನು ಚಿಂತಾಕ್ರಾಂತರನ್ನಾಗಿ ಮಾಡಿಬಿಟ್ಟಿದೆ. ಆಶ್ಚರ್ಯಕರ ಸಂಗತಿ ಎಂದರೆ, ಇವೆಲ್ಲವನ್ನೂ ಸುದ್ದಿಯನ್ನಾಗಿ ಮಾಡಿ ಮಾರುತ್ತಿದ್ದ, ಅವುಗಳಿಂದ ಹರಿದು ಬರುತ್ತಿದ್ದ ಕೋಟ್ಯಂತರ ರೂಪಾಯಿಗಳ ಜಾಹಿರಾತನ್ನು ಅವಲಂಬಿಸಿಯೇ ಬದುಕುತ್ತಿದ್ದ, ಓದುಗರನ್ನು ಮರೆತು ಜಾಹಿರಾತೇ ಅಂತಿಮ ಎಂದು ನಿರ್ಧರಿಸಿದ್ದ ಸುದ್ದಿ ಮಾಧ್ಯಮ ಕ್ಷೇತ್ರ ಕೂಡ ಇವತ್ತು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕು ಒದ್ದಾಡುತ್ತಿದೆ. ಕಾರ್ಪೋರೇಟ್ ಕಂಪನಿಗಳಿಂದ ಜಾಹಿರಾತಿನ ಮೂಲಕ ಹರಿದು ಬರುತ್ತಿದ್ದ ಹಣ ನಿಂತಿದ್ದರಿಂದ ನಷ್ಟಕ್ಕೊಳಗಾಗಿ ನೆಲ ಹಿಡಿದು ಮಲಗುವಂತಾಗಿದೆ.

ವಿದೇಶಿ ಮೂಲದ, ಹಳೆಯ, ಅತಿ ಹೆಚ್ಚು ಪ್ರಸಾರ ಮತ್ತು ಪ್ರತಿಷ್ಠಿತ ಹೆಸರು ಪಡೆದಿರುವ ‘ದಿ ಡೈಲಿ ಟ್ರಿಬ್ಯೂನ್’ ಸುದ್ದಿ ಸಂಸ್ಥೆ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ತನ್ನ ಎಂಟು ಆವೃತ್ತಿಗಳನ್ನು ಮತ್ತು ಹನ್ನೆರೆಡು ಟಿವಿ ಚಾನಲ್‌ಗಳನ್ನು ಮುಚ್ಚಬೇಕಾಗಿರುವ ಸ್ಥಿತಿಯನ್ನು ಇವತ್ತು ತಾನೇ ಸುದ್ದಿಯಾಗಿ ಬಿತ್ತರಿಸುತ್ತಿದೆ. ಅಮೆರಿಕಾದ ಮೂರನೇ ಅತಿದೊಡ್ಡ ನ್ಯೂಸ್‌ಪೇಪರ್ ಸಂಸ್ಥೆ ಎನಿಸಿದ್ದ ಮ್ಯಾಕ್ ಕ್ಯಾಚಿ ೨,೧೦,೦೦೦ ಪ್ರಸಾರದ ತನ್ನ ಜನಪ್ರಿಯ ‘ದಿ ಮಿಯಾಮಿ ಹೆರಾಲ್ಡ್’ ಅನ್ನು ಮಾರಾಟಕ್ಕಿಟ್ಟಿದೆ. ದುರದೃಷ್ಟಕರ ಸಂಗತಿ ಎಂದರೆ, ಈ ಪತ್ರಿಕೆ ೧೯ ಪುಲಿಟ್ಜರ್ ಪ್ರಶಸ್ತಿ ಪಡೆದ ದಾಖಲೆ ಹೊಂದಿದೆ. ಹಾಗೆಯೇ ‘ದಿ ಲಾಸ್ ಏಂಜಲೀಸ್ ಟೈಮ್ಸ್,;’ ‘ಬಾಲ್ಟಿಮೋರ್ ಸನ್’ ಸುದ್ದಿ ಸಂಸ್ಥೆಗಳು ತಮಗೇ ತಾವೇ ದಿವಾಳಿ ಎದ್ದಿರುವುದಾಗಿ ಬ್ಯಾಂಕಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಘೋಷಿಸಿಕೊಂಡಿವೆ. ೧೫೦ ವರ್ಷಗಳಷ್ಟು ಹಳೆಯ ಪೇಪರ್ ಎಂಬ ಹೆಸರು ಪಡೆದಿರುವ ‘ರಾಕಿ ಮೌಂಟೆನ್ ನ್ಯೂಸ್’ ಮತ್ತು ‘ದಿ ಚಿಕಾಗೋ ಟ್ರಿಬ್ಯೂನ್’ ಪತ್ರಿಕಾ ಸಂಸ್ಥೆಗಳು ‘ಫಾರ್ ಸೇಲ್’ ಎಂದು ಬೋರ್ಡ್ ಹಾಕಿ ಆಗಲೇ ತಿಂಗಳಾಗುತ್ತಾ ಬಂದಿದೆ. ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಂತೂ ಮ್ಯಾನ್‌ಹಟನ್‌ನಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ೨೨೫ ಮಿಲಿಯನ್ ಡಾಲರ್ ಸಾಲಕ್ಕೆ ಅಡ ಇಡಲು ಮುಂದಾಗಿದೆ.

ಇದು ವಿದೇಶಿ ಸುದ್ದಿ ಸಂಸ್ಥೆಗಳ ಸುದ್ದಿಯಾಯಿತು; ದೇಸಿ ಸುದ್ದಿ ಸಂಸ್ಥೆಗಳ ಕತೆ? ಅವುಗಳ ಮೇಲೆ ಬಿದ್ದ ಪರಿಣಾಮ, ಇವುಗಳ ಮೇಲೆ ಬೀಳದೇ ಇರುತ್ತದೆಯೇ? ಜಾಗತೀಕರಣಕ್ಕೆ ಭಾರತ ಬಾಗಿಲು ತೆರೆದ ತಕ್ಷಣ, ಮಾಧ್ಯಮ ಕ್ಷೇತ್ರ ಪರ-ವಿರೋಧಗಳ ಮಾತುಗಳನ್ನಾಡುತ್ತಲೇ ಮುಕ್ತ ಮಾರುಕಟ್ಟೆಯ ಮಂತ್ರದಂಡಕ್ಕೆ ತಲೆಬಾಗಿತು. ಅಭಿವೃದ್ಧಿ ಪತ್ರಿಕೋದ್ಯಮ ಹಲವರ ಆಸೆಗಳನ್ನು ಗರಿಗೆದರಿಸಿತು. ಅನಂತ ಸಾಧ್ಯತೆಗಳತ್ತ ಕೈಚಾಚಿತು. ಅದರ ಪರಿಣಾಮವಾಗಿ ‘ಹೌ ಟು ಸೆಲ್ ಮೈ ರೈಟಿಂಗ್ಸ್’ ಎಂಬ ತತ್ವ ಈಗ ಇಲ್ಲೂ ಚಾಲ್ತಿಯಲ್ಲಿದೆ. ಸಂಬಳಕ್ಕಾಗಿ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸಕ್ಕಿಂತ ಇದೇನು ಭಿನ್ನ ಎಂಬ ತರ್ಕ ತಾಂಡವವಾಡುತ್ತಿದೆ.

ಎಲ್ಲ ಕೆಲಸವೂ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸವೇ. ಆದರೆ ಅಲ್ಲೂ, ಅಲ್ಪಸ್ವಲ್ಪವಾದರೂ ನೀತಿ-ನಿಯತ್ತು, ತತ್ವ-ಸಿದ್ಧಾಂತ, ದೇಶ-ಭಾಷೆ ಇರಬೇಕಲ್ಲವೇ? ಜನರಿಟ್ಟ ನಂಬಿಕೆಗೆ ದ್ರೋಹ ಬಗೆಯಬಾರದಲ್ಲವೆ? ಬದ್ಧತೆ ಎನ್ನುವುದು ಇವತ್ತು ಬರಿ ಮಾತಿನ ಬದನೆಕಾಯಿ ಆಗಿದೆ. ಅಭಿವೃದ್ಧಿ, ಹಣವೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಲವಾರು ಸುದ್ದಿ ಸಂಸ್ಥೆಗಳು ನಮ್ಮಲ್ಲೂ ಇವೆ. ಜಾಗತಿಕ ಆರ್ಥಿಕ ಹಿಂಜರಿತ, ವಿದೇಶಿ ಸುದ್ದಿ ಮಾಧ್ಯಮಗಳಿಗಷ್ಟೇ ಬಿಸಿ ಮುಟ್ಟಿಸಿಲ್ಲ, ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಇಲ್ಲಿನ ಸುದ್ದಿ ಸಂಸ್ಥೆಗಳಿಗೂ ನಷ್ಟದ ಕಷ್ಟ ಕೊಡುತ್ತಿದೆ. ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಎನ್‌ಡಿಟಿವಿ, ಅದನ್ನೇ ಅನುಕರಿಸುತ್ತಿರುವ ಸಿಎನ್‌ಎನ್ ಐಬಿಎನ್ ಸುದ್ದಿ ಸಂಸ್ಥೆಗಳು ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವುದಾಗಿ ಲೆಕ್ಕಪತ್ರ ಸಲ್ಲಿಸಿವೆ. ಇತ್ತೀಚೆಗೆ ಶುರುವಾದ, ಕನ್ನಡದ ಕಂಪನ್ನು ಸೂಸುವ ಕನ್ನಡದ ಏಕೈಕ ಟಿವಿ ಚಾನಲ್ ಒಟ್ಟಿಗೇ ೮೦ ನೌಕರರ ಪಟ್ಟಿ ತಯಾರಿಸಿ, ಕೆಲಸದಿಂದ ತೆಗೆಯಲು ಸಿದ್ಧವಾಗಿದೆ. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕಾ ಸಮೂಹ ಪತ್ರಕರ್ತರು ಮತ್ತು ಸಿಬ್ಬಂದಿಯ ಸಂಬಳದಲ್ಲಿ ಶೇಕಡಾ ೩೦ ಕಡಿತಗೊಳಿಸಲು ತೀರ್ಮಾನಿಸಿದ ಸುದ್ದಿ ಹೊರಬಿದ್ದಿದೆ. ಕನ್ನಡದ ಅಷ್ಟೂ ಚಾನೆಲ್‌ಗಳು ಖರ್ಚು ಕಡಿಮೆ ಮಾಡಲು ‘ನಿಷ್ಪ್ರಯೋಜಕರ ಪಟ್ಟಿ’ ತಯಾರಿಸಿಟ್ಟುಕೊಂಡು, ಕೆಲಸಗಾರರಲ್ಲಿ ದಿಗಿಲು ಹುಟ್ಟಿಸಿವೆಯಂತೆ.

ಜಾಹಿರಾತುಗಳ ಮೇಲೆ ಜೀವ ಇಟ್ಟುಕೊಂಡಿದ್ದ, ಅವುಗಳಿಂದ ದಿನಕ್ಕೆ ಕೋಟ್ಯಂತರ ರೂಪಾಯಿ ಸಂಪಾದಿಸುತ್ತ, ಆ ಸೊಕ್ಕಿನಲ್ಲಿ ಸಂಪಾದಕ ವಲಯವನ್ನು ನಿಕೃಷ್ಟವಾಗಿ ನೋಡುತ್ತಿದ್ದ, ಜಾಹಿರಾತು ಜಗತ್ತಿದ್ದರೆ ಓದುವ ವಲಯವೇ ಬೇಡ ಎಂದು ಶ್ರೀಸಾಮಾನ್ಯನನ್ನು ನಿರ್ಲಕ್ಷಿಸಿದ್ದ ‘ಟೈಮ್ಸ್ ಆಫ್ ಇಂಡಿಯಾ’ದಂತಹ ಪತ್ರಿಕೆಗಳು ಇವತ್ತು ಕಂಗಾಲಾಗಿವೆ. ಯಾಕೆಂದರೆ ಇಂತಹ ಪತ್ರಿಕೆಗಳು ಅವಲಂಬಿಸಿದ್ದು, ಅತೀ ಹೆಚ್ಚು ಪ್ರಚಾರ ನೀಡಿ ಉಬ್ಬಿಸಿದ್ದು ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್ ಮತ್ತು ಕಾರ್ಪೋರೇಟ್ ಜಗತ್ತನ್ನು. ಈ ಜಗತ್ತು ಇವತ್ತು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಸಿಕ್ಕು ಸದ್ದಡಗಿರುವಾಗ, ಅವುಗಳಿಂದ ಹರಿದು ಬರುತ್ತಿದ್ದ ಕೋಟ್ಯಂತರ ರೂಪಾಯಿಗಳ ಜಾಹಿರಾತು ನಿಂತಾಗ, ಇಂತಹ ಸುದ್ದಿ ಸಂಸ್ಥೆಗಳು ಕೂಡ ಕಂಗೆಟ್ಟು ಕೂರುವಂತಾಗಿದೆ. ಬೆಂಚ್, ಪಿಂಕ್ ಸ್ಲಿಪ್, ಕಾಸ್ಟ್ ಕಟಿಂಗ್ ಇಲ್ಲೂ ಚಾಲ್ತಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ‘ಟೈಮ್ಸ್’ ರಿಯಲ್ ಎಸ್ಟೇಟ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಪುರವಣಿಗಳಲ್ಲಿ ಜಾಹಿರಾತುಗಳೇ ಇಲ್ಲದೆ, ಹಳೆಯ ಜಾಹಿರಾತುಗಳನ್ನೇ ಮತ್ತೆ ಮುದ್ರಿಸಿ, ಈಗಲೂ ಆ ಜಗತ್ತು ಹಾಗೆಯೇ ಇದೆ ಎಂಬ ಭ್ರಮೆ ಬಿತ್ತಿ, ಆ ಮೂಲಕ ಇತರರನ್ನು ಸೆಳೆಯುವ ಕೆಟ್ಟ ತಂತ್ರಕ್ಕೂ ಕೈ ಹಾಕಿದೆ. ಜಾಹಿರಾತು ದರವನ್ನೂ ಇಳಿಸಿದೆ. ಒಂದು ಜಾಹಿರಾತು ನೀಡಿದರೆ- ಒಂದಕ್ಕೆ ನಾಲ್ಕು (ಎಕಾನಾಮಿಕ್ ಟೈಮ್ಸ್, ಕನ್ನಡ ಟೈಮ್ಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ, ಬೆಂಗಳೂರು ಮಿರರ್) ಉಚಿತ ಎಂದು ಜಾಹಿರಾತು ನೀಡಿ ಜಾಹಿರಾತುದಾರರನ್ನೂ ಆಕರ್ಷಿಸುತ್ತಿದೆ.

ಇಲ್ಲಿ ಟೈಮ್ಸ್ ಆಫ್ ಇಂಡಿಯಾವನ್ನೇ ಯಾಕೆ ಮುಖ್ಯವಾಗಿಟ್ಟುಕೊಂಡು ಇಷ್ಟೆಲ್ಲ ಹೇಳಲಾಗುತ್ತಿದೆ ಎಂದರೆ, ಟೈಮ್ಸ್ ಪತ್ರಿಕೆಯಿಂದ ಕರ್ನಾಟಕದ ಪತ್ರಿಕೋದ್ಯಮದಲ್ಲಾದ ಬದಲಾವಣೆಗಳು ಅಷ್ಟಿಷ್ಟಲ್ಲ. ಟೈಮ್ಸ್‌ನ ಮಾಲೀಕರು ಉತ್ತರದ ಮಾರ್ವಾಡಿಗಳು. ಪತ್ರಿಕೋದ್ಯಮವನ್ನು ಉದ್ಯಮವನ್ನಾಗಿ ನೋಡಿದವರು ಮತ್ತು ಅದನ್ನು ಅಭಿವೃದ್ಧಿಪಡಿಸಲು ಬೇಕಾದ ತಂತ್ರಗಳನ್ನು, ಗಿಲೀಟುಗಳನ್ನು ಜಾಣ್ಮೆಯಿಂದ ಜಾರಿಗೆ ತಂದವರು. ಸ್ಥಳೀಯ ಪತ್ರಕರ್ತರನ್ನು ಅನುಕೂಲಕ್ಕೆ ತಕ್ಕ ಅಸ್ತ್ರಗಳನ್ನಾಗಿ ಬಳಸಿದವರು. ಆದರೆ ಆ ಪತ್ರಿಕೆಯ ಒಲವು-ನಿಲುವುಗಳೇ ಬೇರೆ. ಉದ್ದೇಶ-ವ್ಯಾಪ್ತಿಗಳೇ ಬೇರೆ. ಅದರ ಸಹಜ ವ್ಯಾವಹಾರಿಕ ಬುದ್ಧಿಯಂತೆ ಅದು ಒತ್ತು ನೀಡಿದ್ದು ಕಾರ್ಪೋರೇಟ್ ಕಲ್ಚರ್‌ಗೆ. ಆ ಕಲ್ಚರ್‌ನ ಶ್ರೀಮಂತ ಜನ, ಆ ಕಲ್ಚರ್‌ನಲ್ಲಿ ಕಾಣಿಸಿಕೊಳ್ಳಲು ಹಾತೊರೆಯುವ ಮೇಲ್‌ಮಧ್ಯಮ ವರ್ಗ, ಅವರ ಪಾರ್ಟಿಗಳು, ತೆವಲುಗಳು, ಮೋಜುಗಳು- ಅದಕ್ಕೇ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿತು. ಅದಕ್ಕೆ ತಕ್ಕಂತೆ ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿ, ರಿಯಲ್ ಎಸ್ಟೇಟ್ ಸಿಟಿಯಾಗಿ ಜನರ ಕೈಯಲ್ಲಿ ಕಾಸು ಚೆಲ್ಲಾಡತೊಡಗಿದಾಗ, ಟೈಮ್ಸ್ ಎಲ್ಲರ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು.

ಹಾಗಂತ ಟೈಮ್ಸ್‌ನಲ್ಲಿ ಬರೀ ಪೇಜ್ ತ್ರೀ ಕಲ್ಚರಷ್ಟೇ ಇರುತ್ತೆ ಎಂದಲ್ಲ, ಅಲ್ಲಿ ಸೀನಿಯರ್ ರೈಟರ್‌ಗಳ ಸೀರಿಯಸ್ಸಾದ ರೈಟಪ್‌ಗಳೂ ಪ್ರಕಟವಾಗುತ್ತವೆ. ಆಧ್ಯಾತ್ಮಿಕ, ಆರೋಗ್ಯದ ಚಿಂತನೆಗಳಿಗೂ ಜಾಗ ಕಲ್ಪಿಸಿಕೊಡಲಾಗುತ್ತದೆ. ಜಾತ್ಯತೀತ, ಪ್ರಗತಿಪರ, ವೈಚಾರಿಕ ನೀತಿ, ನಿಲುವುಗಳಿಗೂ ಪ್ರಾಶಸ್ತ್ಯವಿರುತ್ತದೆ. ವಿಜ್ಞಾನ-ವಿವೇಕಕ್ಕೂ ಅವಕಾಶವಿದೆ. ಬಡವರು, ಅಸಹಾಯಕರು, ಮಹಿಳೆಯರು, ರೋಗಿಗಳಿಗೆ ಕರಗುವ, ಮರುಗುವ ಮಾನವೀಯ ವರದಿಗಳೂ ಬರುತ್ತವೆ. ಆದರೆ ಇವೆಲ್ಲ ಎಷ್ಟು ಬೇಕೋ ಅಷ್ಟು ಮಾತ್ರ.

ಇಷ್ಟೆಲ್ಲ ಕಾರಣಗಳಿಂದ ಟೈಮ್ಸ್ ಇವತ್ತು ನಂಬರ್ ಒನ್ ಪತ್ರಿಕೆಯಾಗಿ ರಾರಾಜಿಸುತ್ತಿದೆ. ಅತ್ಯಲ್ಪ ಕಾಲದಲ್ಲಿಯೇ ಅಷ್ಟೂ ವಲಯಗಳನ್ನು ಆಕ್ರಮಿಸಿಕೊಂಡು, ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರನಂತೆ ವಿಜೃಂಭಿಸುತ್ತಿದೆ. ಇದು ಸಹಜವಾಗಿಯೇ ದಿಢೀರ್ ದುಡ್ಡು ಮಾಡಲು ಹಾತೊರೆವ ಪತ್ರಿಕೆಗಳನ್ನು, ಬೇಲಿ ಮೇಲೆ ಕೂತ ಪತ್ರಕರ್ತರನ್ನು ಆಕರ್ಷಿಸಿದೆ. ಟೈಮ್ಸ್ ಅನ್ನು ಮಾಡೆಲ್ ಆಗಿ ಸ್ವೀಕರಿಸಿದ್ದಾಗಿದೆ.

ಕೆಲವು ಪತ್ರಿಕೆಗಳು ಈಗಾಗಲೇ ಪತ್ರಕರ್ತರನ್ನೇ ಜಾಹಿರಾತು ತರುವ ಏಜೆಂಟರನ್ನಾಗಿ ಪರಿವರ್ತಿಸಿ, ೨೫% ಕಮಿಷನ್‌ನ ತುಪ್ಪವನ್ನು ಮೂಗಿಗೆ ಸವರಿವೆ. ಇನ್ನು ಕೆಲವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಾಯೋಜಿತ ಪುರವಣಿಗಳನ್ನು ಪ್ರಕಟಿಸುತ್ತ ವರದಿಗೂ ಜಾಹಿರಾತಿಗೂ ಇದ್ದ ಅಂತರವನ್ನೇ ಅಳಿಸಿಹಾಕಿವೆ. ಅಷ್ಟೇ ಅಲ್ಲ, ಪ್ರತಿ ಶಾಸಕನಿಂದಲೂ ಜಾಹಿರಾತು ತರುವಂತೆ ಬಲವಂತದ ಒತ್ತಾಯ, ಒತ್ತಡ ಹಾಕುತ್ತಿವೆ. ಪತ್ರಕರ್ತರ ಹಲ್ಲುಗಿಂಜುವಿಕೆ... ಕಾಸು ಕೊಟ್ಟರೆ ಮಾಧ್ಯಮಗಳನ್ನೂ ಖರೀದಿಸಬಹುದು ಎನ್ನುವಂತಹ ವಾತಾವರಣ ನಿರ್ಮಾಣ ಮಾಡುತ್ತಿದೆ. ಇದು ಅಧಿಕಾರವಿರುವ ಶಾಸಕನಲ್ಲಿ ಇನ್ನೆಂತಹ ಉಡಾಳತನಕ್ಕೆ ಕಾರಣವಾಗಬಹುದು, ಅಂತಹ ಶಾಸಕ ಜನರನ್ನು ಇನ್ನೆಂತಹ ಪರಿ ಸುಲಿಯಬಹುದು? ಅವರಿಗಿನ್ನೆಲ್ಲಿಯ ಭಯ-ಅಳುಕು-ಅಂಜಿಕೆ ಉಳಿದೀತು?

ಇದು ಭವಿಷ್ಯತ್ತಿನ ಚಿಂತೆಯಲ್ಲ; ಇವತ್ತಿನ ದಿನಮಾನಗಳಲ್ಲಿ ಮಾಧ್ಯಮ ವಲಯದಲ್ಲಿ ನಡೆಯುತ್ತಿರುವ ಕತೆ. ಇಷ್ಟಾದರೂ ಪತ್ರಿಕೆಗಳು ಬಲವಾಗಿ ಬೇರುಬಿಟ್ಟು ಬೆಳೆದು ನಿಲ್ಲಲಾಗಿಲ್ಲ; ಆದರೆ ಕೆಲ ಪತ್ರಕರ್ತರಂತೂ ಪೊಗದಸ್ತಾಗಿ ಬೆಳೆದಿದ್ದಾರೆ!

ಕನ್ನಡದ ಜನಪ್ರಿಯ ಟಿವಿ ಕಾರ್ಯಕ್ರಮಆದರೆ... ಭಾರತೀಯ ಮನಸ್ಸು... ಇವತ್ತಿಗೂ ಸುದ್ದಿ ಮಾಧ್ಯಮಗಳನ್ನು ನಂಬುತ್ತದೆ. ಅವುಗಳಲ್ಲಿ ಬಿತ್ತರವಾದ, ಪ್ರಕಟವಾದ ಸುದ್ದಿಗಳನ್ನು ಸತ್ಯವೆಂದು ಭಾವಿಸುತ್ತದೆ. ಮಾಧ್ಯಮದ ಮಂದಿಗೆ ಮರ್ಯಾದೆ ನೀಡುತ್ತದೆ. ಆದರೆ, ಅವರು ಮಾತ್ರ ಓದುಗರನ್ನು ಕಡೆಗಣಿಸಿ, ಜನಹಿತವನ್ನು ನಿರ್ಲಕ್ಷಿಸಿ ಜಾಹಿರಾತಿನ ಜೊಲ್ಲಿಗೆ ಜೋತುಬಿದ್ದಿದ್ದಾರೆ. ಈಗ ಬದಲಾದ ಕಾಲಮಾನದಿಂದಾಗಿ, ಜಾಗತಿಕ ಆರ್ಥಿಕ ಹಿಂಜರಿತದ ದೆಸೆಯಿಂದಾಗಿ ದಿಕ್ಕೆಟ್ಟು ಕೂತಿದ್ದಾರೆ.

ಸುದ್ದಿ ಮಾಧ್ಯಮಗಳು ನಿಲ್ಲಬೇಕಾದ್ದು, ಗೆಲ್ಲಬೇಕಾದ್ದು, ಬೆಳೆಯಬೇಕಾದ್ದು ಜನರಿಂದ. ಹಾಗೆಯೇ ಜಾಹಿರಾತುಗಳು ಸುದ್ದಿ ಮಾಧ್ಯಮಗಳ ಬದುಕಿಗೆ ಬೇಕಾದ ಪ್ರಾಣವಾಯುವಾಗಬೇಕೆ ಹೊರತು; ಅದೇ ಮುಖ್ಯವಾಗಬಾರದು. ಜನ ಸುಮ್ಮನಿದ್ದಾರೆಂದು ಏನು ಬೇಕಾದರೂ ಮಾಡಬಹುದು; ಹಣವೊಂದಿದ್ದರೆ ಎಲ್ಲವನ್ನೂ ಗೆಲ್ಲಬಹುದು ಎಂಬ ಧೋರಣೆ ಮತ್ತು ಧಾರ್ಷ್ಟ್ಯವುಳ್ಳ ಸುದ್ದಿ ಮಾಧ್ಯಮದವರಿಗೆ ಹಾಗೂ ಆ ರೀತಿ ಯೋಚಿಸುವ ಎಲ್ಲರಿಗೂ ಇದು ಪಾಠವಾಗಬಹುದೆ?
(ಡಿಸೆಂಬರ್ 2008- ಕೆಂಡಸಂಪಿಗೆ)

Friday, November 27, 2009

ಅಂವ ರಾವಣ; ಇಂವ ಬ್ರಾಹ್ಮಣ


ಅದು ಎಪ್ಪತ್ತರ ದಶಕ. ಕನ್ನಡ ಸಾರಸ್ವತ ಲೋಕ ಸಮೃದ್ಧಿಯಿಂದ ನಳನಳಿಸುತ್ತಿದ್ದ ಕಾಲ. ಕುವೆಂಪು, ಕಾರಂತ, ಬೇಂದ್ರೆ, ಪುತಿನ, ಮಾಸ್ತಿಗಳ ಮರೆಯಲ್ಲಿ, ಅಡಿಗರ ಸಾರಥ್ಯದಲ್ಲಿ ಹೊಸ ಪೀಳಿಗೆಯ ಬರಹಗಾರರು ಕನ್ನಡದ ಹೊಸ ಕಳೆಯಾಗಲು ಕಾತರಿಸುತ್ತಿದ್ದ ಕಾಲ.

ಹೆಚ್ಚೂ ಕಡಿಮೆ ಸಮಕಾಲೀನ ಸಾಹಿತಿಗಳಾದ ಲಂಕೇಶ್, ನಿಸಾರ್ ಅಹಮದ್ ಮತ್ತು ಸುಮತೀಂದ್ರ ನಾಡಿಗ್- ಮೂವರು ಪೈಪೋಟಿಗೆ ಬಿದ್ದು ಬರೆಯುತ್ತಿದ್ದ, ಬದುಕುತ್ತಿದ್ದ, ಬೊಬ್ಬೆಯಾಕುತ್ತಿದ್ದ ಕಾಲವದು. ಒಬ್ಬರಿಗೊಬ್ಬರು ಎದುರಿಗೆ ಸಿಕ್ಕರೆ ಮುಗುಂ ಆಗುವ, ಬೆನ್ನು ತಿರುಗಿಸಿದರೆ ಸಾಕು ಗೇಲಿ ಮಾಡಿ ನಗಾಡುವ ಜಾತಿಯವರು. ಆ ಕಾಲದ ಮಹಿಮೆಯೋ ಏನೋ... ನಿಸಾರ್ ಅಹಮದ್‌ರ ನಿತ್ಯೋತ್ಸವ ಕವನ ಭಾರೀ ಪಾಪ್ಯುಲರ್ ಆಗಿತ್ತು. ಕವಿಮಿತ್ರರ ಪ್ರೋತ್ಸಾಹವೂ ದೊರಕಿತ್ತು. ಅಷ್ಟೇ ಅಲ್ಲ, ಆಕಾಶವಾಣಿಯಲ್ಲಿ ಆಗಾಗ ಅವರನ್ನು ಕರೆದು ಕವನ ವಾಚಿಸುವುದೂ ಇತ್ತು. ಒಂದು ಕವನಕ್ಕೆ ಎಪ್ಪತ್ತೈದು ರೂಪಾಯಿ ಸಂಭಾವನೆಯೂ ಸಿಗುತ್ತಿತ್ತು.

ಆ ಸಂಭಾವನೆ ಮತ್ತು ಮನ್ನಣೆ ಆವತ್ತಿನ ದಿನಕ್ಕೆ, ಅವರ ಬೆಳವಣಿಗೆಯ ರೀತಿ ನೀತಿಗೆ ಭಾರಿಯಾಗಿತ್ತು. ನಿಸಾರ್‌ಗೆ ಸಿಗುತ್ತಿದ್ದ ಈ ಅವಕಾಶ, ಹಣ ಇನ್ನಿಬ್ಬರಲ್ಲಿ- ನಾಡಿಗ್, ಲಂಕೇಶರಲ್ಲಿ- ಕೀಳರಿಮೆಯನ್ನೂ, ಹೊಟ್ಟೆಕಿಚ್ಚನ್ನೂ ಹುಟ್ಟುಹಾಕಿತ್ತು. ಕಾಕತಾಳೀಯವೋ ಏನೋ, ಮೂವರಿಗೂ ಗುರುಗಳಂತಿದ್ದ ಅಡಿಗರಿಗೆ, ನಿಸಾರ್ ಬಗ್ಗೆ ಕೊಂಚ ಹೆಚ್ಚಾಗಿಯೇ ಪ್ರೀತಿಯಿತ್ತು. ಇದು ಇನ್ನಿಬ್ಬರಲ್ಲಿ ಅಸಮಾಧಾನ ಉಂಟುಮಾಡಿತ್ತು. ಸಹಜವಾಗಿ ಅದು ಸಂಜೆಯ ಗುಂಡಿನ ಗಡಂಗಿನಲ್ಲಿ ಗುಟುರು ಹಾಕುತ್ತಿತ್ತು. ಒಳಗಿದ್ದ ಹುಳುಕೆಲ್ಲ ಆ ಹೊತ್ತಿನಲ್ಲಿ ಹೊರಬರುತ್ತಿತ್ತು.

‘ಅಡಿಗ್ರು ಗುಂಡ್ ಹಾಕ್ದಾಗ, ಕಾಸ್ಟಿಕ್, ನಿಸಾರ್ ಪೊಯೆಟ್ಟೇ ಅಲ್ಲ ಅಂತಾರೆ, ಈಗ ನೋಡು... ಥೂ ಥೂ ಥೂ ವೆರಿ ಬ್ಯಾಡ್...' ಎಂದು ಲಂಕೇಶರೆಂದರೆ,
‘ನಿಸಾರ್ ಕವನಗಳಿಗೆ ಆಕಾಶವಾಣಿ ಸ್ಕೋಪ್ ಕೊಡ್ತಿದೆ, ವಿಪರೀತ ಆಯ್ತು... ಅದಕ್ಕೆ ಏನ್ ಕಾರಣ ಗೊತ್ತಾ ‘ಆ' ಹೆಂಗ್ಸು...' ಎಂದರು ನಾಡಿಗರು. ಹೀಗೆ ಗುಂಡು ಯಾವ ಕಡೆಗೆ ಎಳೆಯುತ್ತೋ ಆ ಕಡೆಗೆಲ್ಲ ಮಾತೂ ವಾಲುತ್ತಿದ್ದವು.

ಸುಮತೀಂದ್ರ ನಾಡಿಗ್ಅವರ ಮಾತಿಗೆ ಪೂರಕವಾಗಿ ಆಕಾಶವಾಣಿಯಲ್ಲಿದ್ದ ‘ಆ' ಹೆಂಗಸು, ನಿಸಾರರು ಆಕಾಶವಾಣಿಗೆ ಬಂದಾಗ, ಹೋದಾಗ ಹೂ ನಗೆ ನಕ್ಕು, ಕವನಗಳನ್ನು ಮೆಚ್ಚಿ ಮಾತನಾಡುತ್ತಿದ್ದುದುಂಟು. ಆದರೆ, ನಾಡಿಗರು ಆರೋಪಿಸಿದಂತಹ ಯಾವ ಆರೋಪಗಳೂ ಅವರಿಬ್ಬರ ನಡುವೆ ಇರಲಿಲ್ಲ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ನಾಡಿಗರು ಇದ್ದಕ್ಕಿದ್ದಂತೆ ಒಂದು ದಿನ ಆಕಾಶವಾಣಿಗೆ ಭೇಟಿ ಕೊಟ್ಟರು. ಅದೂ ಅನುಮಾನವಿದ್ದ ‘ಆ' ಹೆಂಗಸಿನ ಬಳಿಗೇ ಹೋದರು. ನೋಡಿದರೆ, ಅಲ್ಲಿ ಆಗಲೇ ನಿಸಾರರಿದ್ದಾರೆ. ಅವರಿಬ್ಬರ ಮುಖದಲ್ಲಿ ಮಂದಹಾಸವಿದೆ. ನಾಡಿಗರ ಅನುಮಾನಕ್ಕೆ ಪುಷ್ಟಿ ಸಿಕ್ಕಂತಾಯಿತು.

ನಾಡಿಗರು ಮುಖ ಗಂಟಿಕ್ಕಿಕೊಂಡು, ‘ನಾನೊಂದು ಕವನ ಬರೆದಿದ್ದೇನೆ... ಓದಬೇಕು, ಅವಕಾಶ ಕೊಡಿ' ಎಂದರು.
‘ಆ' ಹೆಂಗಸು, ‘ಸಾರ್ ಅದು ನನ್ನ ಮೇಲಾಧಿಕಾರಿಗಳಿಗೆ ಸಂಬಂಧಿಸಿದ್ದು... ಅಲ್ಲಿಂದ...' ಎಂದು ರಾಗ ಎಳೆದರು.
ಅಷ್ಟೆ, ನಾಡಿಗರು, ‘ಓಕೆ, ಅವಕಾಶ ಕೊಡದಿದ್ದರೆ ಪರವಾಗಿಲ್ಲ, ಕವನ ಓದ್ತೀನಿ ಕೇಳಿ...' ಎಂದು ‘ಆ' ಹೆಂಗಸಿನ ಹೆಸರನ್ನೇ ಬಳಸಿ ಬರೆದಿದ್ದ ಕವನವನ್ನು ಅವರಿಬ್ಬರಿಗೇ ವಾಚಿಸತೊಡಗಿದರು.

ಕವನದ ಎರಡು ಮೂರು ಸಾಲುಗಳನ್ನು ಕೇಳುತ್ತಿದ್ದಂತೆ, ಅವರಿಬ್ಬರಿಗೂ ಮುಜುಗರ. ಮುಖ ಬಾಡಿದವು. ನಿಸಾರ್ ಅಲ್ಲಿ ನಿಲ್ಲಲಾಗದೆ ಹೊರಗೆ ಹೋದರು. ‘ಆ' ಹೆಂಗಸು ಮುಖಮುಚ್ಚಿಕೊಂಡು ಕೂತವರು ಮೇಲೇಳಲಿಲ್ಲ. ಆದರೆ ನಾಡಿಗರು ಅಲ್ಲಿ ನಿಂತುಕೊಂಡೇ ಪೂರ್ತಿ ಪದ್ಯ ಓದಿದರು. ಹಾಗೆಯೇ ಇನ್ನಿಬ್ಬರು ಕವಿಮಿತ್ರರ ಕಿವಿಗೂ ಸುರಿದರು.

ಅತ್ತ ನಿಸಾರರು ಕವಿಮಿತ್ರರ ಕೀಟಲೆಯಿಂದ ಬೇಸತ್ತು ರೂಮು ಸೇರಿಕೊಂಡರು. ಆ ರೂಮು... ಗಾಂಧಿಬಜಾರ್‌ನ ಟ್ಯಾಗೂರ್ ಸರ್ಕಲ್ಲಿನಲ್ಲಿರುವ ಕೆನರಾ ಬ್ಯಾಂಕ್ ಪಕ್ಕದಲ್ಲಿದ್ದ ದೊಡ್ಡ ಮನೆಯ ಮಹಡಿಯ ಮೇಲಿತ್ತು. ಅದು ಆವತ್ತಿಗೆ ನಿಸಾರರ ಪದ್ಯದ ಕಾರ್ಖಾನೆಯೂ ಆಗಿತ್ತು. ದಿನವಿಡಿ ನಿಸಾರರು ಆ ರೂಮಿನಲ್ಲಿಯೇ ಕಳೆಯುತ್ತಿದ್ದರು. ಆ ರೂಮು ಪಾರ್ಥಸಾರಥಿ ಎಂಬ ನಿಸಾರ್ ಗೆಳೆಯರಿಗೆ ಸೇರಿತ್ತು. ನಿಸಾರ್ ಪದ್ಯ ಬರೆಯಲೆಂದೇ ಪಾರ್ಥಸಾರಥಿ ಆ ರೂಮನ್ನು ಅವರಿಗೆ ಉಚಿತವಾಗಿ ಕೊಟ್ಟಿದ್ದರು.

ಲಂಕೇಶ್ಅಂದು ನಾಡಿಗರ ಪದ್ಯದಿಂದ ಶ್ಯಾನೆ ಬೇಜಾರಾಗಿದ್ದ ನಿಸಾರರು, ರೂಮಿನಲ್ಲಿ ಒಬ್ಬರೆ ಕೂತು ಬೀಡಿ ಸೇದುತ್ತಿದ್ದರು. ಅಂದೊಂಥರಾ ಕವಿಗಳು, ಕಲಾವಿದರ ಅಡ್ಡ ಆಗಿತ್ತು. ಅಲ್ಲಿಗೆ ನಿಸಾರ್-ನಾಡಿಗ್-ಲಂಕೇಶ್- ಮೂವರಿಗೂ ಪರಿಚಯವಿದ್ದ, ಮೂವರನ್ನೂ ಹತ್ತಿರದಿಂದ ಬಲ್ಲ ಟಿ.ಎಸ್.ರಂಗಾ ಹೋದರು.

ಹೋಗ್ತಿದ್ದಹಾಗೆ ನಿಸಾರರು, ‘ಏನಯ್ಯಾ ಇದು, ಅವನು ನೋಡದ್ರೆ ಕವಿನೇ ಅಲ್ಲ ಅಂತಾನೆ, ಇವುನ್ ನೋಡುದ್ರೆ ನನ್ನ ಮೇಲೆ ಕೆಟ್ ಕೆಟ್ಟದಾಗಿ ಕವನ ಬರ್ದು, ನನ್ನ ಮುಂದೇನೆ ಓದ್ತಾನೆ, ಅಂವ ರಾವಣ, ಇಂವ ಬ್ರಾಹ್ಮಣ... ಏನಯ್ಯಾ ಮಾಡೋದು...' ಎಂದು ನಿಟ್ಟುಸಿರುಬಿಟ್ಟರು.

(ಡಿಸೆಂಬರ್ 9, 2008)

ಚುನಾವಣೆಯ ಸಮಯದಲ್ಲಿ ಲಂಕೇಶರ ಖದರು


ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಬಗ್ಗೆ ಇಟ್ಟಿರುವ ನಂಬಿಕೆ ಪರಂಪರಾಗತವಾದುದು. ಅದು ಅಷ್ಟು ಸುಲಭವಾಗಿ ಸಡಿಲವಾಗುವಂಥದ್ದಲ್ಲ. ಆ ಕಾರಣಕ್ಕಾಗಿಯೇ ಸುದ್ದಿ ಮಾಧ್ಯಮಗಳು ಉಳಿದಿರುವುದು ಮತ್ತು ಆ ಕ್ಷೇತ್ರ ಇನ್ನೂ ಹೆಚ್ಚೆಚ್ಚು ವಿಸ್ತಾರಗೊಳ್ಳುತ್ತಿರುವುದು. ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಮೇಲೆ ಇಟ್ಟಿರುವ ಆ ನಂಬಿಕೆ ಇವತ್ತಿನ ಜಾಗತೀಕರಣದ ಯುಗದಲ್ಲೂ ಹಾಗೇ ಇದೆ. ಆದರೆ ಸುದ್ದಿ ಮಾಧ್ಯಮಗಳು ಜನಸಾಮಾನ್ಯರ ನಂಬಿಕೆಗೆ ಬದ್ಧವಾಗಿವೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ನೈತಿಕತೆ, ಪ್ರಾಮಾಣಿಕತೆ ಮರೆಯಾಗುತ್ತಾ, ಮೌಲ್ಯಾಧಾರಿತ ಪತ್ರಿಕೋದ್ಯಮ ಪಕ್ಕಕ್ಕೆ ಸರಿಯುತ್ತ ಇರುವುದು. ಹೊಸ ತಲೆಮಾರಿನ ಬಹುಪಾಲು ಪತ್ರಕರ್ತರು ‘ಹೌ ಟು ಸೆಲ್ ಮೈ ರೈಟಿಂಗ್' ಎಂಬ ಗ್ಲೋಬಲ್ ತತ್ವಕ್ಕೆ ಕಟ್ಟುಬಿದ್ದವರು. ಪತ್ರಿಕೋದ್ಯಮವನ್ನು ಮಾರುಕಟ್ಟೆಯ ಸರಕಿನ ಮಟ್ಟಕ್ಕಿಳಿಸಿದವರು. ಇಲ್ಲಿ ತತ್ವ, ಬದ್ಧತೆಗಿಂತ ಮುಖ್ಯವಾಗಿ ಲಾಭಕೋರ ಮನಸ್ಸು ವಿಜೃಂಭಿಸುತ್ತಿದೆ. ಸ್ವಾರ್ಥಕ್ಕೆ ಮೌಲ್ಯ ಮಾರಾಟವಾಗುತ್ತಿದೆ.

ಹಾಗಾಗಿ ಮಾಧ್ಯಮಗಳೂ ಬದಲಾಗಿವೆ, ಜನರೂ ಬದಲಾಗುತ್ತಿದ್ದಾರೆ. ಬದಲಾದ ಸಂದರ್ಭಕ್ಕನುಗುಣವಾಗಿ ಜನ ಇಂದು ಸುದ್ದಿಮಾಧ್ಯಮಗಳನ್ನು ನಂಬುತ್ತಿಲ್ಲ; ನಂಬುವಂತಹ ಸುದ್ದಿಗಳನ್ನು ಅವರೂ ಕೊಡುತ್ತಿಲ್ಲ. ಆದರೂ ಜನ ಪೇಪರ್‌ಗಳನ್ನು ಓದುತ್ತಾರೆ, ಸುದ್ದಿವಾಹಿನಿಗಳನ್ನು ನೋಡುತ್ತಾರೆ. ಅಷ್ಟೇ ಬೇಗ ಮರೆಯುತ್ತಾರೆ. ಜನರ ಮರೆಯುವ ಗುಣ, ಕುಲಗೆಟ್ಟಿರುವ ವ್ಯವಸ್ಥೆ ಮತ್ತು ಇವತ್ತಿನ ಸುದ್ದಿ ಇವತ್ತಿಗೇ ಸಾಯುತ್ತಿರುವ ಸಂದರ್ಭ ಮಾಧ್ಯಮದ ಮಂದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಪತ್ರಕರ್ತರು ಯಾರ ಬಗ್ಗೆ ಏನನ್ನು ಬೇಕಾದರೂ ಬರೆಯಬಲ್ಲ ‘ಬುದ್ಧಿವಂತ'ರಾಗಿದ್ದಾರೆ. ಪತ್ರಿಕೋದ್ಯಮ ದಂದೆಯಾಗಿದೆ. ಮಾರುಕಟ್ಟೆಯಲ್ಲಿ ಪತ್ರಿಕೆಯೂ ಬಿಕರಿಯಾಗುತ್ತಿದೆ, ಪತ್ರಕರ್ತನೂ ಬಿಕರಿಯಾಗುತ್ತಿದ್ದಾನೆ.

ಇದು ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಅದೇಕೋ ಇದೇ ಸಂದರ್ಭದಲ್ಲಿ ಎಲೆಕ್ಷನ್ ಎಂದಾಕ್ಷಣ ಅಲರ್ಟ್ ಆಗುತ್ತಿದ್ದ ಲಂಕೇಶರೂ ನೆನಪಾಗುತ್ತಿದ್ದಾರೆ...
ಚುನಾವಣೆಯ ಸಂದರ್ಭದಲ್ಲಿ ಲಂಕೇಶರು ಈ ದೇಶದ ಆಗುಹೋಗುಗಳನ್ನು ನಿರ್ಧರಿಸುವ ಮಹತ್ತರ ಹೊಣೆಗಾರಿಕೆ ತಮ್ಮ ಭುಜದ ಮೇಲೆ ಬಿದ್ದಿದೆಯೇನೋ ಎನ್ನುವಂತೆ ಭ್ರಮಿಸುತ್ತಿದ್ದರು. ತಮ್ಮ ಚಿಲ್ಲರೆ ಚಟುವಟಿಕೆಗಳನ್ನು ಪಕ್ಕಕ್ಕಿಟ್ಟು ಯುದ್ಧಕ್ಕೆ ಸಜ್ಜಾಗಿ ನಿಂತ ಯೋಧನಂತೆ ಚಡಪಡಿಸುತ್ತಿದ್ದರು. ತಮ್ಮ ಸುತ್ತ, ಬಳಸಿ ಬಿಸಾಕಿದ ಬ್ಯಾಟರಿಯಂತೆ ಬಿದ್ದಿರುತ್ತಿದ್ದ ವರದಿಗಾರರ ಬುಡಕ್ಕೆ ಬಿಸಿ ತಾಗಿಸಿ ಚಾರ್ಜ್ ಮಾಡುತ್ತಿದ್ದರು. ನೂರು ಕ್ಯಾಂಡಲ್ ಬಲ್ಬ್ ಥರ ಟ್ವೆಂಟಿಫೋರ್ ಅವರ್ಸು ಉರಿಯುತ್ತಿರಬೇಕು...

ಜನರ ಧ್ವನಿಯಾದ, ಜನರನ್ನು ಜಾಗೃತರನ್ನಾಗಿಸಿದ, ಜನಾಭಿಪ್ರಾಯವನ್ನು ರೂಪಿಸಿದ, ಸರ್ಕಾರಗಳನ್ನು ಬದಲಿಸಿದ ಕೀರ್ತಿ ಲಂಕೇಶರ ಪತ್ರಿಕೆಗೆ ಸಲ್ಲಲೇಬೇಕು. ಕೀರ್ತಿಶನಿ ಲಂಕೇಶರ ಹೆಗಲೇರಿದ್ದು, ಇಳಿದಿದ್ದು- ಎಲ್ಲಾ ಓದುಗರಿಂದಲೇ. ಲಂಕೇಶರ ಶಕ್ತಿ ಓದುಗರೆ. ಅವರು ಹೆದರುತ್ತಿದ್ದುದೂ ಓದುಗರಿಗೇ. ಯಾಕೆಂದರೆ ಪತ್ರಿಕೆಯ ಪ್ರಸಾರದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ಕಂಡಿದ್ದರು. ಅವೆರಡೂ ಮೇಸ್ಟ್ರಿಗೆ ಪಾಠ ಕಲಿಸಿದ್ದವು.

ಚುನಾವಣಾ ಸಮಯದಲ್ಲಿ ಲಂಕೇಶರಿಗೆ ಹೊಸ ಹುರುಪು ಮೈ ಮನಗಳನ್ನು ಆವರಿಸಿಕೊಳ್ಳುತ್ತಿತ್ತು. ಅದಕ್ಕೆ ಕಾರಣ, ಜವಾಬ್ದಾರಿ ಜಾಸ್ತಿಯಾಗುತ್ತಿದ್ದುದು ಮತ್ತು ಪತ್ರಿಕೆಯ ಸರ್ಕ್ಯುಲೇಷನ್ ಹೆಚ್ಚಾಗುತ್ತಿದ್ದುದು. ಆ ಸಂದರ್ಭದಲ್ಲಿ ಪತ್ರಿಕೆಯ ಕಚೇರಿ ಸಾಹಿತಿಗಳು, ಕಲಾವಿದರು ಮತ್ತು ವರದಿಗಾರರಿಂದ ಗಿಜಿಗುಡುತ್ತಿತ್ತು. ಪ್ರತಿದಿನ ‘ಕೂತು ಮಾತನಾಡುವ' ಸೆಷನ್‌ಗಳು ಇದ್ದೇ ಇರುತ್ತಿದ್ದವು. ಆರಂಭದಲ್ಲಿ ಬೌದ್ಧಿಕ ಕಸರತ್ತಿನ ತರ್ಕಬದ್ಧ ಚರ್ಚೆ, ಮತ್ತೇರುತ್ತಿದ್ದಂತೆ ಅಭ್ಯರ್ಥಿಗಳನ್ನು ಅಮಲಿನಲ್ಲಿಯೇ ಸೋಲಿಸುವ-ಗೆಲ್ಲಿಸುವ ಹುಂಬತನ, ಕೊನೆಗೆ ಚಿಲ್ಲರೆ ಜಗಳದಲ್ಲಿ ಪರ್ಯವಸಾನ... ಇದು ಮಾಮೂಲಾಗಿತ್ತು. ಆದರೆ ಈ ಜಗಳಗಳು ಕೂಡ ವರದಿಗಾರರ ವೃತ್ತಿ ಬದುಕಿಗೆ ಸಾಣೆಯಂತೆ ಸಹಕಾರಿಯಾಗುತ್ತಿದ್ದುದು ‘ಪತ್ರಿಕೆ'ಯ ವೈಶಿಷ್ಟ್ಯ.

ಚುನಾವಣಾ ಕಾಲದಲ್ಲಿ ಲಂಕೇಶರು ಬೆಂಗಳೂರಿನ ಮುಖ್ಯ ವರದಿಗಾರರ ಜೊತೆಗೆ ಜಿಲ್ಲಾ ವರದಿಗಾರರನ್ನು ಕರೆದು ಮೀಟಿಂಗ್ ಮಾಡುತ್ತಿದ್ದರು. ಆ ಜಿಲ್ಲೆಗಳ ರಾಜಕೀಯ ವಿದ್ಯಮಾನ, ಪಕ್ಷಗಳು, ಅಭ್ಯರ್ಥಿಗಳು, ಜಾತಿ ಲೆಕ್ಕಾಚಾರ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದರು. ಆ ಮಾತುಕತೆಯಲ್ಲಿಯೇ ವರದಿಗಾರರು ತೆಗೆದುಕೊಳ್ಳಬೇಕಾದ ಪರ-ವಿರೋಧರ ನಿಲುವು ಸ್ಪಷ್ಟವಾಗುತ್ತಿತ್ತು. ಈ ಪರ-ವಿರೋಧ ಅಂದರೆ ಏನು? ಲಂಕೇಶರು ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಅಭ್ಯರ್ಥಿಗಳ ಪರ-ವಿರೋಧವಿದ್ದು, ಬಿಜೆಪಿಯನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಅದನ್ನು ಅಧಿಕಾರದ ಹತ್ತಿರಕ್ಕೂ ತರಬಾರದೆಂಬುದು ಅವರ ನಿಲುವಾಗಿತ್ತು. ವರದಿಗಾರರ ವರದಿಗಳಲ್ಲಿ ಅದು ಪ್ರತಿಫಲಿಸುತ್ತಿತ್ತು. ರಾಜಕಾರಣಿಗಳಲ್ಲಿ ಒಳ್ಳೆಯವರು-ಕೆಟ್ಟವರು ಅಂದರೆ ಯಾರು, ಅದನ್ನು ಅಳೆಯುವ ಮಾನದಂಡವಾದರೂ ಏನು ಎಂದು ವರದಿಗಾರರು ತಲೆಕೆಡಿಸಿಕೊಂಡರೆ, ಲಂಕೇಶರು,

‘ಎಲೆಕ್ಷನ್‌ಗೆ ನಿಂತಿರೋರೆಲ್ರೂ ಕಳ್ಳರು, ಸುಳ್ಳರೆ, ಹಾಗಂತ ಬರದ್ರೆ ನಾವ್ ಅನ್‌ಪಾಪುಲರ್ ಆಗ್ತಿವಿ, ಸಿನಿಕರ ಸಾಲಿಗೆ ಸೇರ್‍ತ್ತೀವಿ, ಅದು ನಮ್ಮ ರೀಡರ್‍ಸ್‌ಗೆ ದಾರಿ ತಪ್ಸಿ, ಮೋಸ ಮಾಡ್ದಂಗಾಗ್ತದೆ. ಇದು ಡೆಮಾಕ್ರಸಿ, ಮತದಾರರು ಯಾರ್‍ನಾದ್ರು ಒಬ್ಬನನ್ನು ಆರಿಸಲೇಬೇಕು, ನಾವು ನಿಂತಿರೋರಲ್ಲಿ ಯಾವನು ಕಡಿಮೆ ಕಳ್ಳ ಅಂತ ನೋಡಿ ಅವನನ್ನು ಬೆಂಬಲಿಸಬೇಕು, ಇವ್ನು ಇದ್ದುದರಲ್ಲಿ ಯೋಗ್ಯ ಅಂತ ಹೇಳ್ಬೇಕು' ಎನ್ನುತ್ತಿದ್ದರು.

ಹಾಗೆಯೇ ಚುನಾವಣಾ ಸಮೀಕ್ಷೆಗಳನ್ನು ಮಾಡುವಾಗ ವರದಿಗಾರ ಹೇಗಿರಬೇಕು ಎಂಬುದನ್ನೂ ಹೇಳುತ್ತಿದ್ದರು. ಕ್ಷೇತ್ರದ ಸರ್ವೇ ಮಾಡುವ ವರದಿಗಾರರಿಗೆ ಪ್ರಯಾಣ ಭತ್ಯೆ, ಜೊತೆಗೆ ಕುಡಿತದ ಭತ್ಯೆಯೂ ಇರುತ್ತಿತ್ತು. ಇತರ ಜಿಲ್ಲೆಗಳಿಗೆ ಕಾರು ಮಾಡಿ ಕಳುಹಿಸಿದಾಗಲೂ ಕುಡಿತಕ್ಕೆ ಎಕ್ಸ್‌ಟ್ರಾ ಎಂದು ಕೊಡುತ್ತಿದ್ದರು. ನಾವೇನಾದ್ರು ಪ್ರಶ್ನಾರ್ಥಕವಾಗಿ ಅವರ ಮುಖ ನೋಡಿದರೆ, ‘ನೀನ್ ಕುಡಿತಿಯ ಅಂತ ಗೊತ್ತು. ಈ ಎಲೆಕ್ಷನ್ ಟೈಮಲ್ಲಿ ನಿನ್ಗೆ ಕುಡಿಸಕ್ಕಂತನೆ ಜನ ಇರ್ತಾರೆ ಅಂತ್ಲೂ ಗೊತ್ತು, ನೀನು ಹೆಚ್ಗೆ ಅಂದ್ರೆ ಎಷ್ಟು ಕುಡೀಬಹುದು, ನೂರಿನ್ನೂರೂಪಾಯ್ದು, ಅದಕ್ಕೆ ನಿನ್ನ ರಿಪೋರ್ಟ್ ಮಾರ್‍ಕೊಂಡು, ನಮ್ ರೀಡರ್‍ಸ್‌ಗೆ ಮೋಸ ಮಾಡದ್ ನಂಗಿಷ್ಟಿವಿಲ್ಲ, ಓದುಗರು ಕೊಟ್ಟಿರೋ ದುಡ್ಡಲ್ಲಿ ಕುಡ್ದು ವಸ್ತುನಿಷ್ಠ ವರದಿ ಬರಿ...' ಎನ್ನುತ್ತಿದ್ದರು. ರೂಢಿಗತ ಸುದ್ದಿ ಮಾಧ್ಯಮಗಳಿಗೂ ಲಂಕೇಶರಿಗೂ ಇದ್ದ ಫರಕ್ಕು ಇಷ್ಟೆ.

(ಜುಲೈ 30, 2008)

ಎಲ್ಲಾ ಕಡೆಯೂ ನಾನು `ಸಿದ್ಧ'ಲಿಂಗಯ್ಯ


ಬೆಂಕಿಯಲ್ಲಿ ಬೆಂದ ಬಡವರಿಗೆ, ಒಡಲಾಳದ ಉರಿಗೆ ನಲುಗಿಹೋದ ಅಸಹಾಯಕರಿಗೆ ದನಿಯಾದವರು ಸಿದ್ಧಲಿಂಗಯ್ಯ. ಅವರ ನೋವಿಗೆ ಮಿಡಿದವರು ಸಿದ್ಧಲಿಂಗಯ್ಯ. ಅವರ ಬದುಕನ್ನೇ ಬರಹಕ್ಕೆ ಇಳಿಸಿದವರು ಸಿದ್ಧಲಿಂಗಯ್ಯ. ಕುಗ್ಗಿ ಕಾಲಕಸವಾದವರ ಬದುಕಿಗೊಂದು ಆಶಾಕಿರಣವಾದವರು ಸಿದ್ಧಲಿಂಗಯ್ಯ. ವ್ಯವಸ್ಥೆಗೆ ವಿರುದ್ಧವಾಗಿ ಸಿಡಿದೆದ್ದು ನಿಂತವರು ಸಿದ್ಧಲಿಂಗಯ್ಯ. ಕನ್ನಡ ಸಾಹಿತ್ಯಕ್ಕೆ ಬಂಡಾಯದ ಬಿಸಿ ಮುಟ್ಟಿಸಿದವರು ಸಿದ್ಧಲಿಂಗಯ್ಯ. ಬಂಡೆಗಲ್ಲುಗಳೂ ಬಾಯ್ಬಿಡುವಂತೆ ಮಾಡಿದವರು ಸಿದ್ಧಲಿಂಗಯ್ಯ. ಕವನಗಳು ಸಾವಿರಾರು ನದಿಗಳಾಗಿ ಕ್ರಾಂತಿಗೀತೆಗಳ ರೂಪದಲ್ಲಿ ನಾಡಿನ ತುಂಬಾ ಹರಿದಾಡುವಂತಾಗಿದ್ದು ಸಿದ್ಧಲಿಂಗಯ್ಯನವರಿಂದ....

ಎಷ್ಟೆಲ್ಲ ಸಾಧನೆ, ಸಾರ್ಥಕ, ಸಂತೃಪ್ತಭಾವ ಒಬ್ಬ ವ್ಯಕ್ತಿಯ ಒಂದಷ್ಟು ಕವನಗಳಿಂದ!?

ಹಾಗೆಯೇ ಸಿದ್ಧಲಿಂಗಯ್ಯನವರು ಕೂಡ- ಕವಿಯಾದರು- ದಲಿತ ಕವಿಯಾದರು- ಬಂಡಾಯಗಾರರಾದರು. ದಿನ ಬೆಳಗಾಗುವುದರಲ್ಲಿ ಕನ್ನಡ ಸಾಹಿತ್ಯಲೋಕದ ಮಿನುಗುತಾರೆಯಾದರು. ಕವನಗಳು ಕ್ರಾಂತಿ ಕಹಳೆ ಮೊಳಗಿಸಿದವು, ಶಿಷ್ಟ ಸಾಹಿತ್ಯಕ್ಕೆ ಉತ್ಕೃಷ್ಟತೆಯನ್ನು ತಂದುಕೊಟ್ಟವು. ಸಿದ್ಧಲಿಂಗಯ್ಯನವರು ಸಾವಿರಾರು ಯುವ ಕವಿಗಳಿಗೆ ಮಾದರಿಯಾದರು. ಜನಪ್ರಿಯ ವ್ಯಕ್ತಿಯಾದರು. ಹೋದಲೆಲ್ಲ ಸನ್ಮಾನ, ಊರೂರಲ್ಲಿ ಮೆರವಣಿಗೆ.

ದಿನಗಳುರುಳಿದಂತೆ, ಕಾಲಚಕ್ರ ತಿರುಗಿದಂತೆ, ವಯಸ್ಸಾದಂತೆ, ಕರಿ ಕುರುಚಲು ಗಡ್ಡ ಬಿಳಿಯಾದಂತೆ ಸಿದ್ದಲಿಂಗಯ್ಯನವರೂ ಬದಲಾದರು. ಅಧಿಕಾರಿಗಳು ಮತ್ತು ಅಧಿಕಾರಸ್ಥರಿಗೆ ಹತ್ತಿರವಾದರು. ಉಳ್ಳವರ ಒಡ್ಡೋಲಗದಲ್ಲಿ ಓಲಾಡತೊಡಗಿದರು. ಅಧಿಕಾರ ಅರಸಿ ಅಂಗಳಕ್ಕೇ ಬಂತು. ಯಾವುದರ ವಿರುದ್ಧ ಹೋರಾಡಿದ್ದರೋ ಅದರ ಅವಿಭಾಜ್ಯ ಅಂಗವೇ ಆಗಿಹೋದರು. ಯಾರ ವಿರುದ್ಧ ಸಿಡಿದೆದ್ದಿದ್ದರೋ ಅವರ ಕಹಳೆ ಕೊಂಬಾದರು. ಅವರೇ ವ್ಯವಸ್ಥೆಯಾದರು. ಅವ್ಯವಸ್ಥೆಗೆ ಮಾದರಿಯಾದರು. ಬಿಳಿ ಗಡ್ಡ ಕಪ್ಪಗಾಯಿತು. ಮಸಿ ಎಲ್ಲವನ್ನೂ ನುಂಗಿತು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ದಲಿತರೆಂದರೆ ಪ್ರೀತಿ. ದಲಿತರ ಪ್ರತಿನಿಧಿಯಂತಿದ್ದ ಸಿದ್ದಲಿಂಗಯ್ಯನವರನ್ನು ಎಂಎಲ್‌ಸಿ ಮಾಡಿದರೆ ದಲಿತೋದ್ಧಾರವಾಗುತ್ತದೆ ಎಂದು ಭ್ರಮಿಸಿದ್ದ ಹೆಗಡೆ, ಕವಿಗೆ ಕುರ್ಚಿಯ ರುಚಿ ಹತ್ತಿಸಿದರು. ಕುರ್ಚಿ ಮೇಲೆ ಕೂತ ಕ್ಷಣದಿಂದಲೇ ಸಿದ್ದಲಿಂಗಯ್ಯ ದಲಿತರನ್ನು ಮರೆತರು. ಬಂಡಾಯಕ್ಕೆ ಬೆಂಕಿ ಹಾಕಿ ಬೂದಿ ಮಾಡಿದರು. ತಮ್ಮ ಹಳೆಯ ಕ್ರಾಂತಿಗೀತೆಗಳನ್ನು ಇಂದಿನ ವ್ಯವಸ್ಥೆಗೆ ಒಗ್ಗುವಂತೆ ತಿದ್ದಿ ಮರು ಮುದ್ರಿಸಿದರು. ಮಠ ಮಾನ್ಯಗಳಿಗೆ ಹೊಕ್ಕಿ ಮಠಾಧೀಶರ ಕಾಲಿಗೆ ಬಿದ್ದರು. ಪಕ್ಷಾತೀತ ವ್ಯಕ್ತಿಯಾದರು, ಪಕ್ಕಾ ರಾಜಕಾರಣಿಯಾದರು, ಅಜಾತಶತ್ರುವಾದರು. ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ, ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯ ಯಡಿಯೂರಪ್ಪ- ಉದ್ದಕ್ಕೂ ಅಧಿಕಾರಸ್ಥರನ್ನು ಓಲೈಸಿಕೊಂಡೇ ಬಂದರು. ಅಧಿಕಾರವನ್ನು ನಿರಂತರವಾಗಿ ಅನುಭವಿಸುತ್ತಲೇ ಬಂದರು.

ಎಲ್ಲಾ ಕಾಲಕ್ಕೂ, ಎಲ್ಲಾ ಕಡೆಯೂ, ಎಲ್ಲೆಲ್ಲಿಯೂ ಸಿದ್ಧ-ಲಿಂಗಯ್ಯನಾದರು.

ಓದಿ, ಬೆಳೆದು ಬಂದ ಪರಿಶ್ರಮಕ್ಕೆ ಸಿಕ್ಕಿದ್ದು ಬೆಂಗಳೂರು ಯೂಸಿವರ್ಸಿಟಿಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥನ ಸ್ಥಾನ. ಅಲ್ಲಿದ್ದಷ್ಟು ದಿನವೂ ಪಾಠ ಮಾಡದೆ ದಾಖಲೆ ಬರೆದುಹೋದರು.
ನೋವುಂಡ ಜನರ ಪ್ರತಿನಿಧಿಯಾಗಿ, ಕವಿಯಾಗಿ, ಜನಪ್ರಿಯ ವ್ಯಕ್ತಿಯಾಗಿದ್ದಕ್ಕೆ ಸಿಕ್ಕಿದ್ದು ಎಂಎಲ್‌ಸಿ (ಎರಡು ಟರ್ಮ್), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ. ಅಧಿಕಾರದ ಕುರ್ಚಿಯಲ್ಲಿ ಕೂತಷ್ಟು ದಿನವೂ ದಲಿತರನ್ನು ನೆನೆಯದೆ, ಕನ್ನಡವನ್ನು ಕಟ್ಟಿ ಬೆಳೆಸದೆ ಸ್ವಾರ್ಥಿಯಾದರು.

ಇಂತಹ ವ್ಯಕ್ತಿಗೆ ಮತ್ತೆ ಈಗ, ಸಂಘ ಪರಿವಾರದ ಸತ್ರದಲ್ಲಿ ಸನ್ಮಾನ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ!?

(ಜೂನ್ 12, 2008 ರಂದು ಪ್ರಕಟ)

ಅಯ್ಯರ ಅಯ್ಯ ನಮ್ಮ ಹಿರೀಸಾವೆ ಅಣ್ಣಯ್ಯ

ಎಸ್ಸೆಂ ಕೃಷ್ಣರ ಕ್ಯಾಬಿನೆಟ್‌ನಲ್ಲಿ ಎಚ್.ಸಿ.ಶ್ರೀಕಂಠಯ್ಯನವರು ಕಂದಾಯ ಸಚಿವರಾಗಿದ್ದರು. ಅದೇ ಸಮಯದಲ್ಲಿ ಬೆಂಗಳೂರಿನ ಸುತ್ತಮುತ್ತಲ ಭೂಮಿಗೆ ಭಾರೀ ಬೆಲೆ ಬಂದಿತ್ತು. ಇದೇ ತಮ್ಮ ಕೊನೆ ಅವಧಿ ಎಂಬಂತೆ ಶ್ರೀಕಂಠಯ್ಯನವರು ಚೆನ್ನಾಗಿಯೇ ದುಡಿಯುತ್ತಿದ್ದರು. ನಾಡಿನ ಪತ್ರಿಕೆಗಳಲ್ಲಿ ಪ್ರತಿನಿತ್ಯ ಶ್ರೀಕಂಠಯ್ಯನವರ ಗುಣಗಾನ ನಡೆದಿತ್ತು. ಅದಾವುದಕ್ಕೂ ತಲೆಕೆಡಿಸಿಕೊಳ್ಳದ ಶ್ರೀಕಂಠಯ್ಯನವರು ಒಂದರೆಗಳಿಗೆಯೂ ವ್ಯರ್ಥ ಮಾಡದೆ ತಮ್ಮ ಕಾಯಕದಲ್ಲಿ ಮುಳುಗಿ ಹೋಗಿದ್ದರು. ಮತ ನೀಡಿದ ಮತದಾರರನ್ನು ಮರೆತಿದ್ದರು. ಊರು ಬಿಟ್ಟು ಬೆಂಗಳೂರಿನಲ್ಲಿ ಭದ್ರವಾಗಿ ಬೇರುಬಿಟ್ಟಿದ್ದರು.

ಹೀಗೆ ಊರಿನ ಜನಗಳ ಕೈಗೆ ಸಿಗದೆ, ಕಣ್ಣಿಗೆ ಬೀಳದೆ ಇದ್ದಾಗ ಒಂದು ದಿನ ಊರಿನಿಂದ ನಮ್ಮಪ್ಪ ಫೋನ್ ಮಾಡಿದರು. ‘ಲೋ ಮಗ, ಸೀಕಂಠಯ್ಯರು ಸಿಗ್ಲೆಯಿಲ್ಲ ಕಣೋ, ನೀನೆ ಒಂದೆಜ್ಜೆ ಹೋಗಿ, ಮದುವೆ ಕಾರ್ಡ್ ಕೊಟ್ಟು, ಹೇಳ್ಬುಟ್ಬಾರಪ್ಪ, ಇಲ್ದಿದ್ರೆ ತಪ್ತಿಳ್ಕತರಕಣೊ...' ಅಂದರು. ಎಂದೂ ವೈಯಕ್ತಿಕವಾಗಿ, ವೃತ್ತಿಸಂಬಂಧವಾಗಿ ಭೇಟಿಯಾಗದ, ಮಂತ್ರಿಯಾಗಿರುವ ಶ್ರೀಕಂಠಯ್ಯನವರನ್ನು ನೋಡುವುದು ಹೇಗೆ, ನನ್ನ ಬಗ್ಗೆ ಅವರಲ್ಲಿ ಎಂತಹ ಅಭಿಪ್ರಾಯವಿರಬಹುದು... ಹೀಗೆ ಯೋಚಿಸುತ್ತಲೇ ಶಿವಾನಂದ ಸರ್ಕಲ್ಲಿನ ಹತ್ತಿರದಲ್ಲಿರುವ ಮೂವರು ಮಂತ್ರಿಗಳ ಬಂಗಲೆಯಲ್ಲಿ ಒಂದಾದ ಶ್ರೀಕಂಠಯ್ಯನವರ ಮನೆ ಮುಂದೆ ನಿಂತೆ. ರಾತ್ರಿ ಎಂಟು ಗಂಟೆಯಾಗಿತ್ತು. ನನ್ನ ನೋಡುತ್ತಿದ್ದಂತೆ ಅವರ ಕಾರಿನ ಡ್ರೈವರ್ ಚಂದ್ರು ಮತ್ತು ಬಂಗಲೆಯಲ್ಲಿದ್ದ ಬಾಬು, ‘ಇದೇನು ಇಲ್ಲಿ' ಎನ್ನುವಂತೆ ಅನುಮಾನದಿಂದ ನೋಡಿದರು. ಪರಿಚಯವಿದ್ದುದರಿಂದ ‘ಗೌಡ್ರುನ್ನ ನೋಡಬೇಕಾಗಿತ್ತು' ಎಂದೆ. ಹೋಗಿ ಹೇಳಿಬಂದ ಬಾಬು, ‘ಮೇಲವ್ರೆ ಹೋಗಿ' ಅಂದರು.
ಅಷ್ಟು ದೊಡ್ಡ ಬಂಗಲೆ ಆ ಇಬ್ಬರು ಹುಡುಗರು ಮತ್ತು ಶ್ರೀಕಂಠಯ್ಯನವರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ‘ಯಾರನ್ನೂ ಬಿಡಬೇಡ' ಎಂದು ಮೊದಲೆ ಹೇಳಿದ್ದ ಶ್ರೀಕಂಠಯ್ಯನವರು, ಅಕಸ್ಮಾತಾಗಿ ‘ಕಳ್ಸು' ಎಂದಿದ್ದರು. ಹೋಗಿ ಕೂತೆ. ಸ್ವಲ್ಪ ಹೊತ್ತಿಗೆ ಹೆಗಲ ಮೇಲೆ ಟವಲ್ ಹಾಕಿಕೊಂಡು ಬಂದ ಅಯ್ಯ-ಅಣ್ಣಯ್ಯ-ಶ್ರೀಕಂಠಯ್ಯ, ‘ಹೂಂ, ನಂಗ್ ಟೈಮಿಲ್ಲ, ಜಲ್ದಿ ಹೇಳು ಏನು' ಅಂದರು. ನನ್ನ ತಂಗಿಯ ಮದುವೆ ಕಾರ್ಡಿಗೆ ಅವರ ಹೆಸರು ಬರೆದು, ನಮ್ಮಪ್ಪನ ಹೆಸರು ಹೇಳಿ, ಕಾರ್ಡನ್ನು ಕೈಗೆ ಕೊಡುತ್ತ, ‘ಮರೀದೆ ಬರಬೇಕಂತೆ' ಅಂದೆ. ‘ಓ ತಿಮ್ಮಪ್ಪನ ಮಗನಾ... ಯಾವತ್ತೈತೋ... ಅವತ್ತಾಗದಿಲ್ವಲೋ... ನಿನ್ನಸ್ರೇನು' ಅಂದರು. ಹೆಸರೇಳಿದೆ.

‘ಓಹೋ, ನೀನೆ ಏನಪ್ಪ ಬಸುರಾಜ, ರಾಜ ಬಸುರಾಜ... ಬರ್‍ದೆ... ಬರ್‍ದೆ... ಬರ್‍ದಪ್ಪ. ಆ ಲ್ಯಂಕೇಸ್ಗು ಬುದ್ಧಿಲ್ಲ, ನೀನೂ ಬುಡ್ಲಿಲ್ಲ, ನಾನ್ ಯಾರೋ ಅಂತಿದ್ದೆ... ನೀನೆಯಾ' ಅಂದರು.
‘ಬರ್‍ದು ಬೇಜಾರು ಮಾಡ್‌ದ್ನಾ ಗೌಡ್ರೆ...'‘ಬೇಜಾರೇನು ಬಾರೋ, ನಾನ್ ಮಾಡದ್ ಬುಟ್ನಾ, ನೀನ್ ಬರೆಯದ್ ಬುಟ್ಟಾ... ಹೂಂ, ನನ್ಗೀಗ ಟೈಮಿಲ್ಲ, ತಗಳ ಹೊತ್ತಾಯ್ತು, ನೀನೇನಾರ ತಗತಿಯ...' ಅಂದರು.‘ತಗತಿನಿ, ಆದ್ರೆ ಇವತ್ತು ಬ್ಯಾಡ, ಗಾಡಿ, ಪೊಲೀಸ್ನೋರು, ನೀವ್ ತಗಳಿ, ಸ್ವಲ್ಪ ಹೊತ್ತು ಕೂತ್ಕತಿನಿ...' ಅಂದೆ.

ಅವರ ಕುಡಿಯುವ ಉತ್ಸಾಹ, ಆ ವಯಸ್ಸಿನಲ್ಲಿಯೂ ಅದಕ್ಕೆ ಸ್ಪಂದಿಸುತ್ತಿದ್ದ ಅವರ ದೇಹ, ಎಲ್ಲವನ್ನೂ ಮರೆತು ಅದಕ್ಕಾಗಿ ವಿನಿಯೋಗಿಸುತ್ತಿದ್ದ ಆ ಪ್ರೈಮ್ ಟೈಮ್, ಒಬ್ಬರೆ ಕೂತು ಆಸ್ವಾದಿಸುತ್ತಿದ್ದ ರೀತಿ... ಒಂದೆರೆಡು ಪೆಗ್ ಇಳಿಯುತ್ತಿದ್ದಂತೆ ಸಡಿಲವಾದರು. ಅದೂ ಇದೂ ಮಾತಾಡಿದರು. ಮಧ್ಯೆ ಗೌಡ್ರಿಗೆ ಬುದ್ಧಿಲ್ಲ ಅಂತ ಬಯ್ದರು.ಚಿಕ್ಕಂದಿನಿಂದಲೂ ಅವರ ಸ್ಕಾಚ್ ವ್ಹಿಸ್ಕಿ, ನಾಟಿಕೋಳಿ ಬಾಡು ಮತ್ತು ಇತ್ಯಾದಿಗಳ ವರ್ಣರಂಜಿತ ಕತೆಗಳನ್ನು ಕೇಳಿ ತಿಳಿದಿದ್ದೆ. ಊರಿನ ಐಬಿಯಲ್ಲಿ ಇವರಿಗಾಗಿ ಯಾವಾಗಲು ರಿಸರ್ವ್ ಆಗಿರುತ್ತಿದ್ದ ರೂಮಿನ ಸುತ್ತ ಸುಳಿದಾಡಿ ಅಯ್ಯನವರ ಐಭೋಗವನ್ನು ಕಣ್ಣಾರೆ ಕಂಡಿದ್ದೆ. ಅವರ ಸುತ್ತಮುತ್ತಲಿನವರಿಂದ ಕೇಳಿದ್ದನ್ನು ಕತೆ ಕಟ್ಟಿ ಬರೆದಿದ್ದೆ. ಅವರೆ ಸಿಕ್ಕಾಗ ಮಿಸ್ ಮಾಡಿಕೊಳ್ಳುವುದು ಬೇಡವೆಂದು,
‘ಈಗ್ಲು ಮದ್ಲಂಗೆ ನಡಸ್ತಿರ ಗೌಡ್ರೆ...' ಅಂದೆ.
‘ಹೋಗ್ ಹೋಗೊ ಹುಚ್ಚಪ್ಪ, ರಕ್ತ್ ರಕ್ತ ಬತ್ತದೆ, ಅವೆಲ್ಲ ಮುಗೀತ್ಕಣೊ...' ಅಂದರು. ಮನಸ್ಸಿನಲ್ಲಿ ಒಂಚೂರೂ ಕಲ್ಮಶವಿಲ್ಲ. ಇವನ ಮುಂದೆ ಇದೆಲ್ಲ ಯಾಕೆ ಎನ್ನುವ ಬಿಗುಮಾನವೂ ಇಲ್ಲ. ಹೆದರಿಕೆಯಂತೂ ಇಲ್ಲವೇ ಇಲ್ಲ. ಹೀಗೇ ಮಾತು ಸಾಗಿತ್ತು, ನಡುವೆ ಫೋನ್ ಬಂತು. ನಾನಿದ್ದೇನೆಂಬ ಪರಿವೆಯೂ ಇಲ್ಲದೆ ‘ವ್ಯವಹಾರದ' ಮಾತಿನಲ್ಲಿ ಮಗ್ನರಾದರು. ನನ್ನ ಟ್ರ್ಯಾಕ್ ಕಟ್ ಆಯ್ತಲ್ಲ ಎಂದು ಫೋನ್ ಮಾಡಿದವರನ್ನು ಬಯ್ದುಕೊಂಡು, ಹಾಗೇ ನಮಸ್ಕರಿಸಿ ಎದ್ದು ಹೊರಟೆ.

ದಾರಿಯುದ್ದಕ್ಕೂ ಹಾಸನ ಜಿಲ್ಲೆಯ ರಾಜಕಾರಣಿಗಳು ತಲೆ ತುಂಬಿಕೊಂಡರು. ದೇವೇಗೌಡ-ಪುಟ್ಟಸ್ವಾಮಿಗೌಡ-ಶ್ರೀಕಂಠಯ್ಯನವರ ಬಗ್ಗೆ ಯೋಚಿಸುತ್ತಿದ್ದಂತೆ ಅವರ ಮೇಲೆ ಪ್ರೀತಿ ಉಕ್ಕಿ ಹರಿಯತೊಡಗಿತು. ಅವರ ಮೇಲೆ ಅಷ್ಟೆಲ್ಲ ಕೆಟ್ಟದಾಗಿ ಬರೆದು, ಏನೆಲ್ಲ ಕಷ್ಟ ಕೊಟ್ಟರೂ ಒಂಚೂರೂ ಕೋಪವಿಲ್ಲವಲ್ಲ. ಇದೇ ಜಾಗದಲ್ಲಿ ದೇವೇಗೌಡ ಅಥವಾ ಪುಟ್ಟಸ್ವಾಮಿಗೌಡ ಇದ್ದಿದ್ದರೆ ನನ್ನ ಕತೆ ಏನಾಗುತ್ತಿತ್ತು ಅಂತೆಲ್ಲ ನೆನೆದು ಬೆವರತೊಡಗಿದೆ.

ನನ್ನೂರು ಚನ್ನರಾಯಪಟ್ಟಣ. ಮನೆ ಮೇಗಲಕೇರಿಯಲ್ಲಿ. ಕೂಗಳತೆಯ ದೂರದಲ್ಲಿ ಶ್ರೀಕಂಠಯ್ಯನವರ ಮನೆ. ನಮ್ಮಪ್ಪ ಅವರ ಅಭಿಮಾನಿ. ಅವರ ಪಕ್ಷದ ಒಂದು ಕಾಲದ ಕಾರ್ಯಕರ್ತ. ನಾನೋದಿದ್ದು ಅವರ ಒಡೆತನವಿರುವ, ಆದಿಚುಂಚನಗಿರಿ ಹೆಸರಿರುವ ಕಾಲೇಜಿನಲ್ಲಿ. ಆ ಕಾಲೇಜಿನಲ್ಲಿ ಅಯ್ಯನವರು ನಡೆಸುತ್ತಿದ್ದ ವ್ಯವಹಾರಗಳನ್ನು ಕಣ್ಣಾರೆ ಕಂಡಿದ್ದೆ, ಅದನ್ನೆ ‘ಲಂಕೇಶ್ ಪತ್ರಿಕೆ'ಗೆ ವರದಿ ಮಾಡಿದ್ದೆ. ಇಪ್ಪತ್ತು ಪುಟಗಳಲ್ಲಿ ಅದೂ ಒಂದು ಪುಟವಾಗಿ, ಬಂದ ವಾರಕ್ಕಷ್ಟೆ ಸೀಮಿತವಾಗಿ ಮರೆತುಹೋಗಿತ್ತು. ಅದರಿಂದ ಅಯ್ಯನವರಿಗೆ ತೊಂದರೆಯೇನೂ ಆಗಿರಲಿಲ್ಲ.

ತೊಂದರೆ ಆಗಿದ್ದು ಯಾವಾಗ ಎಂದರೆ, ಆ ವರದಿಯ ಬಗ್ಗೆ ದೇವೇಗೌಡರು ವಿಶೇಷ ಆಸಕ್ತಿ ವಹಿಸಿದಾಗ. ಆಗ ಹಾಸನ ಜಿಲ್ಲೆ ರಾಜಕಾರಣ ಎಂದರೆ ಗೌಡ್ರ ಗದ್ಲವಾಗಿತ್ತು. ಒಕ್ಕಲಿಗರ ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ಮತ್ತು ಜಿಲ್ಲೆಯ ಹಿಡಿತಕ್ಕಾಗಿ ದೇವೇಗೌಡ ಮತ್ತು ಶ್ರೀಕಂಠಯ್ಯನವರ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿತ್ತು. ಚುನಾವಣೆ ಬಂತೆಂದರೆ ಹೊಡೆದಾಟ, ದೊಂಬಿ, ಕೊಲೆಗಳು ಕಾಮನ್ ಆಗುತ್ತಿದ್ದವು.

ಇಂತಹ ಸಮಯದಲ್ಲಿ ದೇವೇಗೌಡರು ಒಂದು ದಿನ ಫೋನ್ ಮಾಡಿ, ‘ಗುರುಗಳೆ ನಿಮ್ಮ ಜೊತೆ ಸ್ವಲ್ಪ ಮಾತ್ನಾಡೊದಿತ್ತಲ್ಲ' ಅಂದರು. ಅವರ ಮಗ, ಮೊಮ್ಮಗನ ವಯಸ್ಸು ನನಗೆ. ಗುರುಗಳೆ ಅಂದಿದ್ದು ಶಾಕ್ ಆಗಿ, ಸದಾಶಿವನಗರದ ಮನೆಗೆ ಹೋದರೆ, ‘ಚುಂಚನಗಿರಿ ಕಾಲೇಜ್ ಬಗ್ಗೆ ವರದಿ... ಅದರ ಡೀಟೈಲ್ಸ್ ಬೇಕಿತ್ತಲ್ಲ' ಅಂದರು. ನನ್ನ ಬಳಿ ಇದ್ದ ದಾಖಲೆಗಳು ಮತ್ತು ವರದಿ ಬಂದಿದ್ದ ಪತ್ರಿಕೆ ಎಲ್ಲ ಕೊಟ್ಟೆ. ‘ನಿಮ್ಮಂಥೋರಿರೋದ್ರಿಂದಲೆ ದೇಶ ಅಷ್ಟೋ ಇಷ್ಟೋ ಉಳಿದಿರೋದು...' ಅಂದರು. ನಾನು ಆಕಾಶದಲ್ಲಿ ತೇಲತೊಡಗಿದೆ.

ನಂತರದ ದಿನಗಳಲ್ಲಿ ದೇವೇಗೌಡರು ಪಟ್ಟು ಬಿಡದೆ ಅದನ್ನು ಅಸೆಂಬ್ಲಿಯಲ್ಲಿ ರೈಸ್ ಮಾಡಿ ಸಿಓಡಿ ತನಿಖೆಯಾಗುವಂತೆ ನೋಡಿಕೊಂಡರು. ಸಿಓಡಿ ಅಧಿಕಾರಿಗಳು ಚನ್ನರಾಯಪಟ್ಟಣದ ಕಾಲೇಜಿಗೆ ಬಂದು ಶ್ರೀಕಂಠಯ್ಯನವರನ್ನು ತನಿಖೆಗೊಳಪಡಿಸಿದರು. ತನಿಖೆಯಲ್ಲಿ ಆರೋಪಗಳು ಸಾಬೀತಾದಾಗ ದೇವೇಗೌಡರು ಗೆದ್ದಿದ್ದರು, ಅಧಿಕಾರದಲ್ಲಿದ್ದ ಶ್ರೀಕಂಠಯ್ಯನವರು ಕಂಗಾಲಾಗಿದ್ದರು.

ಹಾಸನ ಜಿಲ್ಲೆಯ ಮಟ್ಟಕ್ಕೆ ಅಂದಿಗೆ ದೇವೇಗೌಡರೊಂದಿಗೆ ಅಷ್ಟೇ ದ್ವೇಷ, ಸೇಡಿನ ರಾಜಕಾರಣಕ್ಕೆ ಬಿದ್ದು ಸೆಣಸಾಡುತ್ತಿದ್ದ ಮತ್ತೊಬ್ಬ ಒಕ್ಕಲಿಗ ನಾಯಕ ಪುಟ್ಟಸ್ವಾಮಿಗೌಡರಿದ್ದರು. ತನಿಖೆಗೊಳಗಾಗಿ ಕಂಗಾಲಾಗಿದ್ದ ಶ್ರೀಕಂಠಯ್ಯನವರು ಪುಟ್ಟಸ್ವಾಮಿಗೌಡರ ನೆಂಟಸ್ತನ ಬೆಳೆಸಿ ಬೀಗರಾದರು. ಒಂದಾಗಿ ದೇವೇಗೌಡರನ್ನು ಎದುರಿಸಲು ಸಿದ್ಧರಾದರು. ಅದೇ ಸಮಯಕ್ಕೆ ಸರಿಯಾಗಿ ೧೯೯೪ರ ಚುನಾವಣೆ. ಲಂಕೇಶರು ದೇವೇಗೌಡರ ಪರವಾಗಿದ್ದರು. ‘ದೇವೇಗೌಡ- ಮುಖ್ಯಮಂತ್ರಿ, ಅಮುಖ್ಯಮಂತ್ರಿ' ಎಂದು ಮುಖಪುಟದ ಸುದ್ದಿ ಮಾಡಿ, ದೇವೇಗೌಡರನ್ನು ಈ ಕ್ಷಣದಲ್ಲಿ ನಾವೇಕೆ ಬೆಂಬಲಿಸಬೇಕು ಎಂದು ಸಮರ್ಥನೀಯ ಕಾರಣಗಳನ್ನಿಟ್ಟು ಬರೆದಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು, ಜನತಾದಳ ಗೆದ್ದು ದೇವೇಗೌಡರು ಮುಖ್ಯಮಂತ್ರಿಯಾದರು.

ಆದರೆ ಶ್ರೀಕಂಠಯ್ಯನವರ ಮೇಲಿನ ಸಿಓಡಿ ತನಿಖೆಯ ವರದಿ ಮಾತ್ರ ಹೊರಬರಲಿಲ್ಲ. ಆ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಫೈಲನ್ನು ಶ್ರೀಕಂಠಯ್ಯನವರ ಮುಂದಿಟ್ಟ ಮುಖ್ಯಮಂತ್ರಿ ದೇವೇಗೌಡರು ಬದ್ಧದ್ವೇಷಿ ಪುಟ್ಟಸ್ವಾಮಿಗೌಡರನ್ನು ಬಗ್ಗುಬಡಿಯಲು ಬೀಗ ಶ್ರೀಕಂಠಯ್ಯನವರನ್ನೇ ಬಳಸಿಕೊಂಡರು. ಅದರಲ್ಲಿ ಅವರು ಯಶಸ್ವಿಯೂ ಆದರು. ಅಲ್ಲಿಂದ ಅಯ್ಯನವರು ದೇವೇಗೌಡರ ವಿರುದ್ಧ ಕಿಡಿಕಾರುವುದನ್ನು ಬಿಟ್ಟು ತಣ್ಣಗಾದರು. ಇವರಿಬ್ಬರ ಅಂಡರ್‌ಸ್ಟ್ಯಾಂಡಿಂಗ್ ನೋಡಿ ಪುಟ್ಟಸ್ವಾಮಿಗೌಡರು ಉರಿದು ಕೆಂಡವಾದರು. ಶ್ರೀಕಂಠಯ್ಯನವರ ಮೇಲಿನ ಸಿಓಡಿ ತನಿಖೆಯ ಫೈಲ್ ಧೂಳಿಡಿಯಿತು.

ಆ ಫೈಲ್‌ಗೆ ಮತ್ತೆ ಜೀವ ಬಂದದ್ದು ೧೯೯೯ರ ಚುನಾವಣಾ ಸಮಯದಲ್ಲಿ. ಒಂದು ದಿನ ಇದ್ದಕ್ಕಿದ್ದಂತೆ ಪುಟ್ಟಸ್ವಾಮಿಗೌಡರ ಫೋನ್, ‘ಅಣ್ಣಾ, ಹತ್ತೂವರೆಗೆ ಲಕ್ಕೆಡ್ ಹೌಸ್ಸಲ್ಲಿ ಸಿಗಬೇಕಲ್ಲಣ್ಣ' ಅಂದರು. ದೇವೇಗೌಡರು ಸಿಎಂ, ಪಿಎಂ ಆದಾಗ ಪುಟ್ಟಸ್ವಾಮಿಗೌಡರೊಂದಿಗೆ ನಿಕಟವಾಗಿದ್ದು ದೇವೇಗೌಡರ ವಿರುದ್ಧ ಸಾಕಷ್ಟು ವರದಿ ಮಾಡಿದ್ದರಿಂದ, ಕರೆದಾಕ್ಷಣ ಇಲ್ಲ ಎನ್ನಲಾಗದೆ ಬರ್ತೀನಿ ಎಂದು ಹೋದೆ. ಒಂದು ಕಾಫಿ ಕುಡಿಸಿ, ‘ಶ್ರೀಕಂಠಯ್ಯನೋರ ಸಿಓಡಿ ಫೈಲ್ ಬಗ್ಗೆ ಡೀಟೈಲ್ಸ್ ಬೇಕಿತ್ತಲ್ಲಣ್ಣ...' ಅಂದರು.

ದೇವೇಗೌಡರು ಯಾವ ತಂತ್ರವನ್ನು ಪ್ರಯೋಗಕ್ಕೊಡ್ಡಿ ಗೆದ್ದಿದ್ದರೋ ಅದೇ ತಂತ್ರಕ್ಕೆ ಪುಟ್ಟಸ್ವಾಮಿಗೌಡರೂ ಕೈ ಹಾಕಿದ್ದರು. ಫೈಲ್ ಇಟ್ಟುಕೊಂಡು ಬೀಗರನ್ನು ಬ್ಲ್ಯಾಕ್‌ಮೇಲ್ ಮಾಡಲು ಹವಣಿಸುತ್ತಿದ್ದರು. ಅದೇ ಸಮಯದಲ್ಲಿ ಅಧಿಕಾರದಲ್ಲಿದ್ದ ಜನತಾದಳ ಒಳಜಗಳ, ಕಿತ್ತಾಟಗಳಿಂದ ಕೆಟ್ಟ ಹೆಸರು ಸಂಪಾದಿಸಿತ್ತು. ಕಾಂಗ್ರೆಸ್ ಪರ ಅಲೆ ಇತ್ತು. ಆದರೆ ಪುಟ್ಟಸ್ವಾಮಿಗೌಡರ ಅದೃಷ್ಟ ಕೈ ಕೊಟ್ಟಿತ್ತು. ಹೈಕಮಾಂಡ್ ಅವರನ್ನು ಲೋಕಸಭೆಗೆ ದಬ್ಬಿತ್ತು. ಶ್ರೀಕಂಠಯ್ಯನವರು ಗೆದ್ದು ಮಂತ್ರಿಯಾಗಿದ್ದರು. ಮಹಾನುಭಾವರಾದ ಪುಟ್ಟಸ್ವಾಮಿಗೌಡರು, ಅಯ್ಯನವರು ಸಚಿವರಾಗಿದ್ದಷ್ಟು ದಿನವೂ ಕಿರುಕುಳ ಕೊಟ್ಟರು. ಫೈಲ್ ಇಟ್ಟುಕೊಂಡು ಅವರಿಂದ ಅಪಾರ ಅನುಕೂಲಗಳನ್ನೂ ಪಡೆದರು.

ಆದರೆ ಸಿಓಡಿ ತನಿಖೆಯ ವರದಿಯ ಫೈಲನ್ನು ಬಹಿರಂಗಗೊಳಿಸಲಿಲ್ಲ. ಶ್ರೀಕಂಠಯ್ಯನವರಿಗೆ ಶಿಕ್ಷೆಯೂ ಆಗಲಿಲ್ಲ. ಈಗ ಇದೇ ಶ್ರೀಕಂಠಯ್ಯನವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಶ್ರವಣಬೆಳಗೊಳ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ವಯಸ್ಸಾದವರಿಗೆ, ಸೋತವರಿಗೆ ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ವರಿಷ್ಠ ಮಂಡಳಿ ನಿರ್ಣಯಿಸಿದ್ದರೂ, ಎಂಬತ್ಮೂರು ವರ್ಷಗಳ ಶ್ರೀಕಂಠಯ್ಯನವರಿಗೆ ಟಿಕೆಟ್ ಸಿಕ್ಕಿದೆ.

ಹಾಸನದ ಮಣ್ಣಿನ ಗುಣವೋ ಇಲ್ಲ ಅಯ್ಯನವರ ನವಚೈತನ್ಯಕ್ಕೆ ಕಾರಣವಾಗಿರುವ ವಿನಾಕಾರಣಗಳ ಸ್ಫೂರ್ತಿಯೋ .. ಅಯ್ಯ ಈಗಲೂ ಬಿಸಿರಕ್ತದ ತರುಣರು?!

(ಏಪ್ರಿಲ್ 28, 2008 ರಂದು ಪ್ರಕಟ)

ಇವರು ನಮ್ಮ ದೇವೇಗೌಡ


‘ಯಾರೆ ಅಧಿಕಾರಕ್ಕೆ ಬರಬೇಕಾದರೂ ಜೆಡಿಎಸ್‌ನ ಬೆಂಬಲ ಪಡೆಯಲೇಬೇಕು. ನಮ್ಮನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸಲಾಗುವುದಿಲ್ಲ...' ಇನ್ನು ಮುಂತಾಗಿ ಜೆಡಿಎಸ್‌ನ ದೇವೇಗೌಡರು ಗುಡುಗಿದ್ದಾರೆ. ಈ ಗುಡುಗು ಇವತ್ತಿಗೆ, ನಾಳೆಗೆ ಮತ್ತೊಂದು ಸಿಡಿಲು. ಚುನಾವಣೆ ಮುಗಿಯುವುದರೊಳಗೆ ಇಂತಹ ನೂರಾರು ಬಾಣ, ಬಿರುಸುಗಳು ಗೌಡರ ಬತ್ತಳಿಕೆಯಿಂದ ಹೊರಬರುತ್ತವೆ.

ಇವೆಲ್ಲ ಚುನಾವಣೆಗಷ್ಟೇ ಸೀಮಿತವಾದ ಹೇಳಿಕೆಗಳು. ಜಿಲ್ಲೆಗೆ, ಜನಕ್ಕೆ ತಕ್ಕಂತೆ ಈ ಹೇಳಿಕೆ ಬದಲಾಗುವುದುಂಟು. ಹೇಳಿದಷ್ಟೇ ಸಲೀಸಾಗಿ ಗೌಡರು ಮರೆಯುವುದೂ ಉಂಟು. ಮರೆಯದ ಮಾಧ್ಯಮಗಳು ಮಾತ್ರ ವಿಶೇಷ ಅರ್ಥ ಹುಡುಕುವುದುಂಟು.

ಜನಕ್ಕೆ ಇವುಗಳನ್ನೆಲ್ಲ ಸಹಿಸಿಕೊಳ್ಳುವ ಸಹನೆ ಇದೆ, ಅದಷ್ಟೇ ಅವರಿಗೂ ಬೇಕಾಗಿರುವುದು.

ದೇವೇಗೌಡರ ನಕ್ಷತ್ರವೇ ಚುನಾವಣಾ ನಕ್ಷತ್ರ. ಚುನಾವಣೆ ಎಂದಾಕ್ಷಣ ಅವರು ಎದ್ದುನಿಲ್ಲುತ್ತಾರೆ. ಮುದುಡಿದ್ದ ಮನಸ್ಸು ಅರಳುತ್ತದೆ. ಮೈಗೆ ಸಿಡಿಲಿನಂತಹ ಶಕ್ತಿ ಸಂಚಲನವಾಗುತ್ತದೆ. ವಯಸ್ಸು ಮರೆತುಹೋಗುತ್ತದೆ. ನರಗಳಲ್ಲಿ ಹರಿಯುತ್ತಿರುವ ರಕ್ತ ಹೇಮಾವತಿ ನದಿಯಾಗುತ್ತದೆ (ಈ ನದಿ ಇದ್ದಕ್ಕಿದ್ದಂತೆ ಉಕ್ಕಿ ಹರಿದು ಅನಾಹುತಗಳಿಗೆ ಕಾರಣವಾಗುವುದಕ್ಕೆ ಫೇಮಸ್ಸು). ಎದುರಾಳಿಗಳನ್ನು ಸದೆಬಡಿಯಲು, ಹೀಯಾಳಿಸಲು, ನೀರಿಳಿಸಲು ಉತ್ಸುಕರಾಗುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ- ಚಕ್ರವೇ ನಾಚುವಂತೆ!

ಚುನಾವಣೆಯೇ ಅವರ ಆರೋಗ್ಯ. ತಮ್ಮ ಸುತ್ತ ಜನ ಗಿಜಿಗಿಡುವುದನ್ನು, ಕಾರ್ಯಕರ್ತರು ಕೈ ಕಾಲುಗಳಿಗೆ ಸಿಕ್ಕಿ, ಬಿದ್ದು, ಎದ್ದು, ಒದ್ದಾಡುವುದನ್ನು, ಒಂದರೆಗಳಿಗೆಯೂ ಪುರುಸೊತ್ತು ಕೊಡದಂತೆ ಜನ ಬಂದು ಪೀಡಿಸುವುದನ್ನು, ಒಲೈಸುವುದನ್ನು, ವಂದಿಸುವುದನ್ನು ದೇವೇಗೌಡರು ಬಯಸುತ್ತಾರೆ.

ಮತದಾರರು, ಮಾಧ್ಯಮದವರು, ವಿರೋಧಿ ನಾಯಕರು ಕೊನೆಗೆ ಯಾರೂ ಇಲ್ಲ ಎಂದರೆ ತನ್ನ ಕುಟುಂಬದವರು... ಹೀಗೆ ಯಾರಾದರೊಬ್ಬರು ಇವರಿಗೆ ತೊಂದರೆ ಕೊಡುತ್ತಿರಲೇಬೇಕು. ಕೀಟಲೆ ಕೊಡಬೇಕು, ಒಳಗಾಗಬೇಕು- ಇದೂ ಕೂಡ ಗೌಡರಿಗೆ ಇಷ್ಟವಾದದ್ದೆ.

ಈ ಚುನಾವಣೆಗೂ ದೇವೇಗೌಡರೇ ಸಾರಥಿ. ಇನ್ನೊಬ್ಬರು ಹೇಳುವವರೆಗೂ ಕಾಯದೆ ಅವರೇ ಬಂದು ಆ ಸ್ಥಾನವನ್ನು ಅಲಂಕರಿಸಿಬಿಟ್ಟಿದ್ದಾರೆ. ಅಕಸ್ಮಾತ್ ಕುಮಾರಸ್ವಾಮಿ ಏನಾದರೂ ಯುವಕ, ಮಾಜಿ ಮುಖ್ಯಮಂತ್ರಿ, ಶಾಸಕರಿಗೆ ಆಪ್ತ ಎಂದು ಫ್ರಂಟ್‌ಲೈನ್‌ಗೇನಾದರೂ ಬಂದಿದ್ದರೆ; ಬರಲು ಯೋಚಿಸಿದ್ದರೆ ಸಾಕಿತ್ತು, ಅದರ ಕತೆಯೇ ಬೇರೆಯಾಗುತ್ತಿತ್ತು.

ಗೌಡರು ದೇವರು, ದೆವ್ವ, ಮಾಟ, ಮಂತ್ರ, ಜ್ಯೋತಿಷ್ಯ, ಹಲ್ಲಿಶಕುನ, ಗಿಳಿಶಾಸ್ತ್ರ... ಯಾವುದನ್ನೂ ನಂಬುವುದಿಲ್ಲ. ಹೀಗೆಂದರೆ, ಬರೆದವನಿಗೆ ಬುದ್ಧಿ ಬಲಿತಿಲ್ಲ ಎಂದುಕೊಳ್ಳಬಹುದು. ಆದರೆ ಇದು ನಿಜ. ಯಾಕೆಂದರೆ ಇವಿಷ್ಟನ್ನೂ ಗೌಡರು ಸುಮಾರು ಐವತ್ತು ವರ್ಷಗಳಿಂದ ತಪ್ಪದೆ ಮಾಡಿಕೊಂಡು ಬಂದಿದ್ದಾರೆ- ಶ್ರದ್ಧೆಯಿಂದಲ್ಲ, ಸ್ವಾರ್ಥದಿಂದ. ಮಾಡುತ್ತಾ ಮಾಡುತ್ತಾ ಅವುಗಳ ಮರ್ಮವನ್ನೂ ಅರಿತಿದ್ದಾರೆ. ಪೂಜಾರಿಗೆ ದೇವರು ಗೊತ್ತಿರುವ ಹಾಗೆ, ಮಾಟಗಾರನಿಗೆ ಜನರ ಮೆಂಟಾಲಿಟಿ ತಿಳಿದಿರುವ ಹಾಗೆ ದೇವೇಗೌಡರಿಗೆ ಇವುಗಳ ಒಳಮರ್ಮ ಗೊತ್ತಾಗಿದೆ. ಬಹಿರಂಗವಾಗಿ ಇವೆಲ್ಲವನ್ನು ಮಾಡುವ ಗೌಡರು, ಅಂತರಂಗದಲ್ಲಿ ಅವರೆ ಅವೆಲ್ಲವೂ ಆಗಿರುತ್ತಾರೆ. ಎಲ್ಲದರ ಬಗ್ಗೆಯೂ ಅವರಿಗೆ ಒಂದು ರೀತಿಯ ತಿರಸ್ಕಾರವಿದೆ. ಆ ತಿರಸ್ಕಾರವನ್ನು ಬಹಿರಂಗಗೊಳಿಸಿದರೆ, ಜನ ಗೌಡರನ್ನು ಅನುಮಾನದಿಂದ ನೋಡುತ್ತಾರೆ. ಗೌಡರನ್ನು ಜನ ನಂಬಬೇಕು. ಜನರಿಗಾಗಿ ಗೌಡರು ಅವುಗಳನ್ನು ನಂಬುತ್ತಾರೆ.

ಗೌಡರು ಬಂಡೆಗಲ್ಲಿನಂಥ ಆಸಾಮಿ. ಆರೋಪಗಳಿಗೆ ಹೆದರದ, ಸೋಲುಗಳಿಗೆ ಕುಂದದ, ಅವಮಾನಕ್ಕೆ ಅಂಜದ ಗಂಡು. ಅಂತಾರಾಷ್ಟ್ರೀಯ ಸಮಸ್ಯೆ ಸಾಲ್ವ್ ಮಾಡುವ ಸಮರ್ಥ. ಅಳುಕಿಲ್ಲದೆ ಇಂಗ್ಲಿಷ್, ಹಿಂದಿ ಮಾತನಾಡಬಲ್ಲ ಹರದನಹಳ್ಳಿಯ ಹಳ್ಳಿಗ. ಆದರೆ ಪತ್ನಿ ಚೆನ್ನಮ್ಮನವರ ಪಾಲಿನ ಅಮ್ಮಾವ್ರ ಗಂಡ. ರೇವಣ್ಣನ ಕೈಗೆ ಹೆದರುವ, ಬಾಯಿಗೆ ಬೆದರುವ ಬೆರ್ಚಪ್ಪ. ಇಡೀ ಕುಟುಂಬ ಗೌಡರನ್ನು ಬೆಟ್ಟದಂತೆ ನೋಡುತ್ತದೆ. ಭಯ, ಭಕ್ತಿ, ಗೌರವದಿಂದ ಕಾಣುತ್ತದೆ. ಇದು ರೇವಣ್ಣನ ವಿಷಯದಲ್ಲಿ ವೈಸ್ ವರ್ಸಾ.

ಖಾದಿ ಜುಬ್ಬ, ಪಂಚೆ, ಟವಲ್ ಬಿಟ್ಟರೆ ಬೇರೊಂದು ಬಟ್ಟೆ ತೊಡದ ಬಡವ. ಸೊಪ್ಪು ಸಾರು, ಮುದ್ದೆ ತಿನ್ನುವ ಸರಳ. ರೈತ ಕುಟುಂಬದಿಂದ ಬಂದ ಮಣ್ಣಿನ ಮಗ. ಮಣ್ಣಿ(ರಿಯಲ್ ಎಸ್ಟೇಟ್, ಗಣಿ)ನಿಂದಲೆ ಮಕ್ಕಳು ಅಂಬಾನಿ, ಮಿತ್ತಲ್ ಮಟ್ಟಕ್ಕೇರಿದ್ದನ್ನು ಕಂಡು ಕರುಬುವ ತಂದೆ. ಕುಟುಂಬದೊಳಗಿನ ಹಣ-ಅಧಿಕಾರ ಹಂಚಿಕೆ ಅಂದಾಕ್ಷಣ ಮಾಯವಾಗುವ ಮನುಷ್ಯ.

ತಾನು ಐವತ್ತು ವರ್ಷಗಳ ಕಾಲ ರಾಜಕೀಯ ಮಾಡಿದರೂ ಸಿಎಂ ಆಗಲಿಕ್ಕೆ ಏನೆಲ್ಲ ಶ್ರಮ ಸುರಿದೆ, ಮಗ ಚಿಟಿಕೆ ಹೊಡೆಯುವುದರೊಳಗೆ ದಕ್ಕಿಸಿಕೊಂಡ, ಕೋಟಿಗಳನ್ನು ಹುರುಳಿಕಾಳಿನ ಸಮಕ್ಕೆ ತಂದ. ಮಗನ ಬೆಳವಣಿಗೆ ಕಂಡು ಖುಷಿಯೂ ಇದೆ, ಹೊಟ್ಟೆಯುರಿಯೂ ಇದೆ.

ಇಂಥ ದೇವೇಗೌಡ ಕರ್ನಾಟಕದಲ್ಲಿ ಹುಟ್ಟಿದ್ದಾರೆ. ನಮ್ಮ ನಿಮ್ಮೆಲ್ಲ ಕಣ್ಣಮುಂದೆಯೇ ಓಡಾಡಿಕೊಂಡಿದ್ದಾರೆ. ಈ ಲಿವಿಂಗ್ ಲೆಜೆಂಡ್ ದೇವೇಗೌಡರು ರಾಜಕಾರಣದ ಯೂನಿವರ್ಸಿಟಿ ಇದ್ದಂತೆ. ಭವಿಷ್ಯದಲ್ಲಿ ಯಾರೆ ರಾಜಕೀಯ ರಂಗಕ್ಕೆ ಬರಬೇಕೆಂದರೂ ಕಡ್ಡಾಯವಾಗಿ ದೇವೇಗೌಡರನ್ನು ಅಧ್ಯಯನದ ವಸ್ತುವಾಗಿ ಸ್ವೀಕರಿಸಬೇಕು. ಇದು ಈ ಕ್ಷಣದಲ್ಲಿ ಅತಿ ಎನ್ನಿಸಬಹುದು, ಆದರೂ ಸತ್ಯ.

(ಏಪ್ರಿಲ್ 10, 2008ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

ಲಂಕೇಶರ ಬಗ್ಗೆ ಲಂಕೇಶರಷ್ಟೇ ಬರೆಯಬಲ್ಲರು

ಲಂಕೇಶರ ಬಗ್ಗೆ ಲಂಕೇಶರಷ್ಟೇ ಕರಾರುವಾಕ್ಕಾಗಿ ಬರೆಯಬಲ್ಲರು. ಇಪ್ಪತ್ತು ವರ್ಷಗಳ ಕಾಲ ‘ಲಂಕೇಶ್ ಪತ್ರಿಕೆ’ ಆ ಕೆಲಸವನ್ನು ಅವರಿಂದ ಮಾಡಿಸಿದೆ. ಆತ್ಮಕಥನ ‘ಹುಳಿಮಾವಿನಮರ’ ಇನ್ನಷ್ಟು ಬಿಚ್ಚಿಟ್ಟಿದೆ. ಆದರೂ, ‘ಲಂಕೇಶ್ ಅಂದ್ರೆ ಇಷ್ಟೇನಾ, ಸಾಲದು, ಇನ್ನೂ ಬೇಕು’ ಎನ್ನುವ ಬೇಡಿಕೆಗೇನೂ ಬರವಿಲ್ಲ. ಲಂಕೇಶರ ವ್ಯಕ್ತಿತ್ವವೇ ಅಂಥಾದ್ದು; ಯಾರ ಕೈಗೂ ಸಿಗದ್ದು. ಆ ಸಿಗದ್ದು ಎಂಬ ಕಾರಣಕ್ಕೇ ಕುತೂಹಲ, ಇನ್ನೂ ಬೇಕೆಂಬ ಬಯಕೆ.

ಕಳೆದ ವರ್ಷ ತೇಜಸ್ವಿಯವರ ಮೇಲಿನ ವಿಚಾರ ಸಂಕಿರಣದಲ್ಲಿ ಎನ್.ಎಸ್.ಶಂಕರ್, ಲಂಕೇಶರ ‘ಹುಳಿಮಾವಿನ ಮರ’ ಪುಸ್ತಕ ಬಂದಾಗ ಓದಿ ಫೆಂಟಾಸ್ಟಿಕ್ ಅಂದಿದ್ದೆ. ಆದರೆ ಈಗ ಅದನ್ನು ಓದಿದರೆ, ನನಗೆ ಅದು ‘ನವ್ಯ ಆತ್ಮಕಥನ’ದಂತೆ ಕಾಣುತ್ತಿದೆ. ಅಲ್ಲಿರುವುದು ಪೂರ್ಣ ಸತ್ಯ ಅಲ್ಲ ಅನ್ನಿಸುತ್ತಿದೆ...’ ಎಂದರು.

ಲಂಕೇಶರ ಬಗ್ಗೆ ಲಂಕೇಶರು ಬರೆದದ್ದು ಸಾಲದು ಮತ್ತು ಅಷ್ಟು ಸರಿಯಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯವೂ ಇದೆ. ಅಂದಮೇಲೆ ಅವರ ಜೊತೆ ಇದ್ದ ನನ್ನಂತಹವರು ಕಟ್ಟಿಕೊಡುವ ಚಿತ್ರಣ ಎಷ್ಟರಮಟ್ಟಿಗೆ ಸರಿ ಮತ್ತು ಸತ್ಯ ಎಂಬ ಪ್ರಶ್ನೆ ಬರೆಯಬೇಕೆಂದು ಕೂತಾಗಲೆಲ್ಲ ಕಾಡುತ್ತದೆ. ಹಾಗಾಗಿ ನನ್ನ ತಿಳುವಳಿಕೆಗೆ, ಗ್ರಹಿಕೆಗೆ ದಕ್ಕಿದಷ್ಟನ್ನು ಕೆಲವು ಘಟನೆಗಳ ಮೂಲಕ ಲಂಕೇಶರನ್ನು ಲಂಕೇಶರನ್ನಾಗಿಯೇ ಕಂಡಿರಿಸಲು ಪ್ರಯತ್ನಿಸುತ್ತೇನೆ. ಇಲ್ಲೂ ಸಿಗಲಿಲ್ಲ, ಸಾಲಲಿಲ್ಲ ಅಂದರೆ... ಆ ಲಂಕೇಶರನ್ನೇ ಕೇಳಿ.

ಲಂಕೇಶರಿಗೆ ಡಯಾಬಿಟೀಸ್ ಇತ್ತು. ಬರಹ ಬಲ್ಲವರಾದ್ದರಿಂದ, ಪತ್ರಿಕೆಯಿದ್ದುದರಿಂದ ಆಗಾಗ ಡಯಾಬಿಟೀಸ್ ಬಗ್ಗೆ ಬರೆಯುತ್ತಿದ್ದರು. ಅದು ಒಂದು ರೀತಿಯಲ್ಲಿ ಓದುಗರ ಅನುಕಂಪಕ್ಕೆ ಕಾರಣವಾಗುತ್ತಿತ್ತು. ಆದರೆ ಅದು ಲಂಕೇಶರಿಗೆ ರೇಜಿಗೆ ಹುಟ್ಟಿಸುತ್ತಿತ್ತು. ಅಂತಹ ಪತ್ರಗಳನ್ನು ನೋಡಿದಾಗ, ಫೋನ್ ಕಾಲ್‌ಗಳು ಬಂದಾಗ ಸಿಡಿಸಿಡಿ ಅನ್ನೋರು. ಮುಖ ಊದಿಸಿಕೊಂಡಿದ್ದು ಅವರ ಬೇಸರಕ್ಕೆ ಅವರೇ ಮದ್ದು ಅರೆದುಕೊಳ್ಳುತ್ತಿದ್ದರು.

ಇದೇ ಸಮಯದಲ್ಲಿ ‘ಪತ್ರಿಕೆ’ಗೆ ಮುಂಬೈನಿಂದ ಬರೆಯುತ್ತಿದ್ದ ಉಮಾರಾವ್ ಅವರು, ಮೇಸ್ಟ್ರಿಗೆ ಡಯಾಬಿಟೀಸ್ ಇದೆ ಅಂತ ಗೊತ್ತಾಗಿ ಆಗತಾನೇ ಬಂದಿದ್ದ, ಹೊರದೇಶದಲ್ಲಷ್ಟೇ ಸಿಗುತ್ತಿದ್ದ ಡಯಾಬಿಟೀಸ್ ಚೆಕ್ ಮಾಡುವ ಪುಟ್ಟ ಯಂತ್ರವೊಂದನ್ನು ತಂದು ಕೊಟ್ಟರು. ಅವರು ಬಂದುಹೋದ ಮೇಲೆ, ಆ ಮೆಷಿನ್ ಮ್ಯಾನ್ಯುಯಲ್ ಪೂರ್ತಿ ಓದಿದ ಮೇಸ್ಟ್ರು ಕಾರ್ಯರೂಪಕ್ಕೆ ಇಳಿದೇಬಿಟ್ಟರು. ಅವರ ರೂಮಿನಿಂದ ಪಟ್ ಪಟ್ ಅಂತ ಶಬ್ದ ಬರೋಕೆ ಶುರುವಾಯ್ತು. ಕುತೂಹಲಗೊಂಡ ನಾನು ಅಳುಕುತ್ತಲೇ ರೂಮಿಗೆ ಹೋದ್ರೆ, ಮುಖದಲ್ಲೇನೋ ಧಿಮಾಕು, ದಟ್ಟ ಹುಬ್ಬುಗಳು ನನ್ನನ್ನು ಪ್ರಶ್ನಿಸುವಂತೆ, ಅಣಕಿಸುವಂತೆ ಕುಣಿಯುತ್ತಿವೆ.

‘ಕೈ ಕೊಡು, ಹಿಂಗಿಡಿಯೋ... ಹಿಂಗೆ ಕಣಲೇ...’ ಅಂದು ಪಟ್ ಅಂತ ಚುಚ್ಚಿ, ರಕ್ತ ಬರಿಸಿ, ಆ ಪುಟ್ಟ ಯಂತ್ರಕ್ಕಾಕಿ, ಅದು ತೋರಿಸಿದ ಡಿಜಿಟಲ್ ರಿಸಲ್ಟ್ ನೋಡಿ, ‘ಏನಿಲ್ಲ ಹೋಗು...’ ಅಂದ್ರು. ಎಲ್ಲಾ ಒಂದ್ ನಿಮಿಷದಲ್ಲಿ. ಆಫೀಸ್‌ನಲ್ಲಿ ಇದ್ದವರಿಗೆ, ಹೊರಗಿನಿಂದ ಬಂದವರಿಗೆ ಎಲ್ರಿಗೂ ಡಯಾಬಿಟೀಸ್ ಚೆಕಪ್; ನಿಂತ ನಿಲುವಿನಲ್ಲಿಯೇ ರಿಸಲ್ಟ್. ಮೇಸ್ಟ್ರಿಗೆ ಶುಗರ್ ಇದೆ ಅಂತ ಗೊತ್ತಾದಮೇಲೆ, ಬಂದವರೆಲ್ಲ ಒಂದೊಂದು ಔಷಧಿ ಹೇಳೋರೆ. ಯಾರೋ ಒಬ್ಬರು ‘ಒಣನೇರಳೆ ಬೀಜದ ಪುಡಿ ಇದ್ಯಲ್ಲ ಸಾರ್, ಒಳ್ಳೆ ದೇಸೀ ರಾಮಬಾಣ... ’ಅಂದರು.
‘ಹೌದಾ, ಹ್ಯೆಂಗೆ, ಎಲ್ಲಿ ಸಿಗುತ್ತೆ?’
‘ಗ್ರಂಧಿಗೆ ಅಂಗಡೀಲಿ ಸಿಗುತ್ತೆ, ತಂದ್ಕೊಂಡ್ತಿನಿ ಬಿಡಿ ಸಾರ್, ಸಡನ್ನಂತ ಇಳಿದೋಯ್ತದೆ’ ಅಂದ್ರು.
ಏನ್ ಇಳಿತದೋ ಅಂತ ಆತಂಕದಿಂದ ಮೇಸ್ಟ್ರು ಹೇಳಿದವರ ಮುಖ ನೋಡಿದರು!

‘ಲೇ, ಗಿರಿ ಬಾರಲೇ ಇಲ್ಲಿ, ಆ ಗ್ರಂಧಿಗೆ ಅಂಗಡಿಗೋಗ್ಬಾ...’ ಅಂದು ಒಣನೇರಳೆ ಬೀಜದ ಪುಡಿ ಎಂದು ಒಂದು ಚೀಟಿಯಲ್ಲಿ ಬರೆದು ಕೊಟ್ಟರು. ಬೇಕಾಗಿದ್ದು ಐದತ್ತು ಗ್ರಾಮು, ನಮ್ಮ ಗಿರಿ ತಂದಿದ್ದು ೨೫೦ ಗ್ರಾಮು. ಶುರುವಾಯ್ತು ಮತ್ತೆ... ಬಂದವರಿಗೆಲ್ಲ ಚೆಕಪ್, ಬೀಜದ ಪುಡಿ ವಿತರಣೆ. ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು ಏನೂ ಗೊತ್ತಿಲ್ಲ. ಆ ಸಮಯದಲ್ಲಿ ಮೇಸ್ಟ್ರ ದೇಹ ತುಂಬಾನೇ ಜಂಕ್ಲಾಗಿತ್ತು. ಹಿಂದುಮುಂದು ನೋಡದೆ ತಿಂದ್ರು, ಭೇದಿಯಾಯ್ತು. ಕೂರಕ್ಕಾಗ್ತಿಲ್ಲ, ಮಲಗಲಿಕ್ಕಾಗ್ತಿಲ್ಲ, ಪಂಚೆಯೆಲ್ಲ ಒದ್ದೆ... ತಿನ್ನಿ ಅಂತ ಹೇಳಿದೋರಿಗೆ ಅವತ್ತೆಲ್ಲ ಬೈದ್ರು. ಸಿಡಿಸಿಡಿ ಅಂದ್ಕೊಂಡೇ ಇದ್ರು.

ಉಮಾರಾವ್ ತಂದುಕೊಟ್ಟದ್ದು ಮಾಡರ್ನ್ ಡಿಜಿಟಲ್ ಮೆಷಿನ್, ಅದು ಅನುಕೂಲವಾಗಿದ್ದು ಡಯಾಬಿಟೀಸ್ ಡೇಟಾಕ್ಕೆ. ಮೇಸ್ಟ್ರಿಗೆ ಭಾರೀ ಬಾಯ್ಚಪಲ; ಯಾವುದನ್ನೂ ಕಂಟ್ರೋಲ್ ಮಾಡ್ತಿರಲಿಲ್ಲ. ಹೋಳಿಗೆ ಅಂದ್ರೆ ತುಂಬಾ ಇಷ್ಟ, ತುಪ್ಪ ಸುರಿದುಕೊಂಡು, ಮುಖಮೂತಿನೆಲ್ಲ ಮಾಡಿಕೊಂಡು ಚಿಕ್ಕಮಕ್ಕಳಂತೆ ತಿನ್ನೋರು. ಮಾವಿನಹಣ್ಣಿನ ಬುಟ್ಟಿಯನ್ನೇ ರೂಮಿನಲ್ಲಿಟ್ಟುಕೊಂಡಿದ್ದರು. ಇಷ್ಟವಾದ, ರುಚಿಕಟ್ಟಾದ ತಿಂಡಿಗಳನ್ನು ತಿನ್ನೋದು, ತಿಂದಾದ ಮೇಲೆ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳೋದು. ಯಾವುದನ್ನು ತಿನ್ನಬಾರದು ಅಂತ ಡಾಕ್ಟ್ರು ಹೇಳಿದ್ರೋ ಅವೆಲ್ಲವನ್ನು ತಿನ್ನುತ್ತಾ, ಚೆಕ್ ಮಾಡಿಕೊಳ್ಳುತ್ತಾ, ಯಾವ್ಯಾವುದನ್ನು ತಿಂದರೆ ಶುಗರ್ ಲೆವೆಲ್ ಎಷ್ಟೆಷ್ಟು ಏರುತ್ತೆ ಅಂತೆಲ್ಲ ಬರೆದಿಟ್ಟುಕೊಳ್ಳತೊಡಗಿದರು. ಆ ಮೆಷಿನ್ ಬಂದಿದ್ದೆ ತಡ ಅವರ ರೂಮು ಪ್ರಯೋಗಶಾಲೆಯಾಯ್ತು, ಅವರ ಕೈಗೆ ಸಿಕ್ಕವರು ಪ್ರಯೋಗಪಶುಗಳಾದರು. ಯಾರೂ ಸಿಗದಿದ್ದಾಗ ಅವರೇ...

ನನಗ್ಯಾಕೋ ಅತಿಯಾಯ್ತು ಅನ್ನಿಸಿತು. ಸುಮ್ಮನೆ ಹೋಗಿ ನಿಂತೆ. ‘ಪ್ರಯೋಗಶೀಲ’ ಲಂಕೇಶ್... ಹ್ಯಂಗೆ ಎಂದು ಭುಜ ಕುಣಿಸಿದರು. ಅವರ ಮಾತು ಅವರನ್ನೇ ಗೇಲಿ ಮಾಡಿಕೊಳ್ಳುವಂತಿತ್ತು.
‘ಹಂಗೆಲ್ಲ ತಿನ್ನಬಾರ್‍ದು ಸಾರ್, ಹೆಚ್ಚುಕಡಿಮೆ ಆದ್ರೆ...’ ಅಂದೆ.

ಗೇಲಿ, ವ್ಯಂಗ್ಯಗಳಿಂದ ಮುಖದ ಮೇಲೆ ಕುಣಿಯುತ್ತಿದ್ದ ನಗು ಮರೆಯಾಗಿ, ಸೀರಿಯಸ್ಸಾದರು. ನನ್ನ ಮುಖ ನೋಡಿ, ‘ನೀನು ಡಾಕ್ಟ್ರ?’ ಅಂದ್ರು.
ಸುಮ್ನೆ ನಿಂತಿದ್ದೆ, ‘ನೀನ್ ಡಾಕ್ಟ್ರೇನೋ’ ಅಂದ್ರು. ದನಿ ಸ್ವಲ್ಪ ಗಡುಸಾಗಿತ್ತು.
ಏನು ಹೇಳಬೇಕೋ ಗೊತ್ತಾಗಲಿಲ್ಲ, ಭಯ ಆಯ್ತು, ಯಾಕಾದ್ರು ಹೇಳುದ್ನೋ ಅನ್ನಿಸಿ ಸುಮ್ಮನೆ ನಿಂತೆ.
‘ನೀನ್ ಪೇಷಂಟಾ?’
ಸುಮ್ನೆ ನಿಂತೇ ಇದ್ದೆ...
‘ಡಾಕ್ಟ್ರೂ ಅಲ್ಲ, ಪೇಷಂಟೂ ಅಲ್ಲ, ಅಂದ್ಮೇಲೆ ತಿಕ ಮುಚ್ಕೊಂಡ್ ಇರು...’

ಪೇಷಂಟಾಗಿ ಕಷ್ಟನೂ ಗೊತ್ತಿಲ್ಲ, ಡಾಕ್ಟ್ರಾಗಿ ಪರಿಹಾರ ಮಾಡೋದು ತಿಳಿದಿಲ್ಲ, ಸುಮ್ನೆ ಮಾತಾಡದ್ರಿಂದ ಏನು ಪ್ರಯೋಜನವಿಲ್ಲ, ಅನ್ನುವುದು ಅವರ ಕಾಮನ್‌ಸೆನ್ಸ್.

*****

ವಾರಕ್ಕೆರೆಡು-ಮೂರು ಸಲ ಪತ್ರಿಕೆಯ ಕಚೇರಿಯಲ್ಲಿಯೇ ರಾಮಚಂದ್ರ ಶರ್ಮ, ಮೈಸೂರು ಮಠ್, ಶೂದ್ರ ಶ್ರೀನಿವಾಸ್, ಬಸವರಾಜ ಅರಸು, ಡಾ.ಶ್ರೀನಿವಾಸಗೌಡ, ಪ್ರಸನ್ನ, ಪ್ರಕಾಶ್ ಬೆಳವಾಡಿ, ಸತ್ಯ, ಮುಕುಂದ್ರಾಜ್ ಜೊತೆಗೆ ಲಂಕೇಶರು ಇಸ್ಪೀಟು ಆಡೋರು. ಅಪರೂಪಕ್ಕೊಮ್ಮೆ ಗೌರಿ, ಚಿದಾನಂದ ರಾಜಘಟ್ಟ ಕೂಡ ಬರೋರು. ಆಟದ ನಂತರ ಪಾನಕೂಟ. ಅಲ್ಲಿಗೆ ಆವತ್ತಿನ ದಿನ ಅರ್ಥಪೂರ್ಣ.

ಅದೇ ಸಮಯದಲ್ಲಿ ಮೇಸ್ಟ್ರ ಆರೋಗ್ಯ ಕೆಡಲಿಕ್ಕೆ ಶುರುವಾಗಿ ಸಿಗರೇಟ್, ಕುಡಿತ ಬಿಟ್ಟಿದ್ದರು. ಆದರೆ ಇಸ್ಪೀಟು, ರೇಸು ಹಾಗೇ ಇದ್ದವು. ಮೇಸ್ಟ್ರ ಆರೋಗ್ಯವನ್ನು ಹತ್ತಿರದಿಂದ ಗಮನಿಸುತ್ತಿದ್ದ, ಲಂಕೇಶರ ಆಪ್ತ ಬಳಗದವರೂ ಆಗಿದ್ದ ಡಾ. ಗೌಡರು, ತಮ್ಮ ಕೈ ಕೆಳಗೆ ಕೆಲಸ ಮಾಡುತ್ತಿದ್ದ, ಕಿಮ್ಸ್‌ನಲ್ಲಿ ಪೆಥಾಲಜಿ ಸಬ್ಜೆಕ್ಟ್ ಟೀಚ್ ಮಾಡುತ್ತಿದ್ದ ಡಾ.ವೆಂಕಟೇಶ್ ಎಂಬುವವರನ್ನು ಮೇಸ್ಟ್ರ ಹೆಲ್ತ್ ಚೆಕಪ್‌ಗೆ ನೇಮಿಸಿದರು.

ಈ ಡಾಕ್ಟರ್ ವೆಂಕಟೇಶ್ ಅವರಿಗೆ ಲಂಕೇಶರನ್ನು ಕಂಡರೆ ತುಂಬಾನೆ ಪ್ರೀತಿ; ಅದಕ್ಕಿಂತಲೂ ಹೆಚ್ಚಾಗಿ ಭಯ. ಜೊತೆಗೆ ಬಾಸ್ ಶ್ರೀನಿವಾಸಗೌಡರ ಹುಕುಂ ಬೇರೆ. ಪ್ರತಿದಿನ ಸಂಜೆ ಪತ್ರಿಕೆಯ ಕಚೇರಿಗೆ ಬಂದು ನಮ್ಮನ್ನೆಲ್ಲ ನಗಿಸಿ, ಕಾಫಿ ಕುಡಿಸಿ ಲವಲವಿಕೆಯಿಂದಿರುತ್ತಿದ್ದ ಡಾ.ವೆಂಕಟೇಶ್, ಮೇಸ್ಟ್ರ ರೂಮಿಗೆ ಹೋಗಬೇಕೆನ್ನುವಾಗ, ಸಿಂಹನ ಗುಹೆಗೆ ಹೋಗುತ್ತಿರುವ ಕುರಿಯಂತಾಗಿಬಿಡುತ್ತಿದ್ದರು. ಅವರು ಕಣ್ಣುಬಿಟ್ಟು ನೋಡಿದರೆ ಸಾಕು ಬೆವೆತುಹೋಗೋರು. ಆದರೆ ಲಂಕೇಶರು ಮಾತ್ರ ಅವರನ್ನು ಗೌರವದಿಂದ ಕಾಣುತ್ತಿದ್ದರು ಮತ್ತು ಅವರು ಹೇಳಿದಂತೆ ಕೇಳುತ್ತಿದ್ದರು. ಮೇಸ್ಟ್ರು ಹೋಗಿ ಮಲಗುವುದು, ಅವರು ಬಂದು ತೋಳಿಗೆ ಬ್ಲಡ್ ಪ್ರೆಷರ್ ಪಟ್ಟಿ ಸುತ್ತುವುದು, ರೀಡಿಂಗ್ ಬರೆದುಕೊಳ್ಳುವುದು, ಮಾತ್ರೆ, ಔಷಧಿ ಯಾವುದನ್ನು ಯಾವಾಗ ತೆಗೆದುಕೊಳ್ಳಬೇಕು ಎಂದೆಲ್ಲ ಹೇಳೋರು... ಎಲ್ಲಾ ನಾರ್ಮಲ್ಲಾಗಿಯೇ- ಪೇಷಂಟು-ಡಾಕ್ಟರ್ ಹೇಗಿರಬೇಕೋ ಹಾಗೆಯೇ.

ಆದರೆ, ಡಾಕ್ಟರ್ ಅತ್ತ ಹೋಗುತ್ತಿದ್ದಂತೆ ಇತ್ತ ಅವರು ಅವರೇ. ಇಷ್ಟ ಬಂದಂತೆ, ಮನಸ್ಸಿಗೆ ತೋಚಿದಂತೆ ಉಣ್ಣೋದು, ತಿನ್ನೋದು, ತಿರುಗೋದು ಎಲ್ಲಾ ನಾರ್ಮಲ್ಲಾಗಿಯೇ- ಪೇಷಂಟೂ ಇಲ್ಲ, ಡಾಕ್ಟ್ರೂ ಇಲ್ಲ.

ಲಂಕೇಶರು ಇರುವುದೇ ಹಾಗೆ ಎಂದು ಗೊತ್ತಿದ್ದ ನನಗೆ ಇದೇನು ಹೊಸದು ಅನ್ನಿಸಲಿಲ್ಲ. ಹಾಗಂತ ಸುಮ್ಮನಿರುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ನನಗೆ ತೋಚಿದ್ದನ್ನು ಹೇಳುತ್ತಿದ್ದೆ, ಅವರೂ ಅಷ್ಟೇ ಕೇಳಿಸಿಕೊಳ್ಳುತ್ತಿದ್ದರು... ಶ್ರೀನಿವಾಸಗೌಡ್ರು ಹೇಳಿರುವುದರಿಂದ ಡಾಕ್ಟ್ರು ಚೆಕಪ್‌ಗೆ ಬಂದುಹೋಗುತ್ತಿದ್ದರೂ ಲಂಕೇಶರು ಮಾತ್ರ, ‘ಏ, ಬಸುರಾಜ ಅವರಿಗೆ ತಿಂಗಳಿಗೆ ಇಷ್ಟು ದುಡ್ಡು ಅಂತ ಫಿಕ್ಸ್ ಮಾಡೋ... ಫ್ರೀಯಾಗೆಲ್ಲ ಬೇಡ’ ಅನ್ನೋರು. ‘ಪಾಪ ಏನೋ ಓದ್ಕಂಡಿರ್ತರ್ ಕಣೋ, ನೊಬೆಲ್ ಪ್ರೊಫೆಷನ್... ವೆರಿ ಹಂಬಲ್ ಫೆಲೋ, ಸ್ವಲ್ಪ ಜಾಸ್ತಿನೆ ಕೊಡು... ಸ್ವಲ್ಪ pause ಕೊಟ್ಟು, ‘ಅವುನ್ ಚೆಕ್ ಮಾಡದು, ನಾನ್ ಮಾಡಿಸ್ಕಳದು- ಎಲ್ಲ ನಾನ್ಸೆನ್ಸ್ ಕಣಲೆ. ಅಷ್ಟಕ್ಕೂ ಅವುನ್ಗೇನ್ ಗೊತ್ತಾಯ್ತದೆ, ನನ್ ಬಾಡಿ ನನಗ್ಗೊತ್ತು... ಇವರು ಹೇಳ್ದಂಗೆಲ್ಲ ಕೇಳಿದ್ರೆ, ಮುಗೀತು ನಮ್ ಕತೆ, ನಮ್ಮವ್ವ ಡಾಕ್ಟ್ರನ್ನೇ ನೋಡ್ಲಿಲ್ಲ, ಬದುಕಿರಲಿಲ್ವ? ದುಡೈತಲ್ಲ... ಭಾರೀ ವರ್ಸ್ಟು, ಮನುಷ್ಯನಿಗೆ ದುಡ್ಡು ಬಂತು ಅಂದ್ರೆ ಸಾವು ಬಂತು ಅಂತ ಅರ್ಥ... 'ಎಂದು ಕತ್ತು ಬಗ್ಗಿಸಿದರು.
ಒಂದೇ ಒಂದು ಕ್ಷಣ ಏನನ್ನಿಸಿತೋ ಅಥವಾ ನಾನೇನ್ ಯೋಚಿಸ್ತಿದೀನೋ ಎಂದು ಊಹಿಸಿದರೋ, ‘ನಾನೇನ್ ಸಾಯಲ್ಲ, ಸಾಯೋವಸ್ಟ್ ದುಡ್ಡಲ್ಲೈತೋ ನಮ್ಮತ್ರ.... ಅವರ ಜೊತೆಗೆ ನನ್ನನ್ನು ಸೇರಿಸಿಕೊಂಡುಬಿಟ್ಟರು! '

******

ಶುಗರ್ ಜಾಸ್ತಿಯಾಗಿ ಒಂದು ಕಣ್ಣು ತೊಂದರೆ ಕೊಡ್ತಾಯಿತ್ತು. ಯಾರೋ ಚೆನ್ನೈನ ಶಂಕರ್ ನೇತ್ರಾಲಯ ಚೆನ್ನಾಗಿದೆ, ಅಲ್ಲಿ ಎಕ್ಸ್‌ಪರ್ಟ್ ಡಾಕ್ಟರ್‌ಗಳಿದ್ದಾರೆ, ಅಲ್ಲಿಗೆ ಹೋಗಿ ಆಪರೇಷನ್ ಮಾಡಿಸಿಕೊಳ್ಳಿ ಎಂದು ಹೇಳಿದರು. ಆದರೆ ಆಫೀಸ್ ಬಿಟ್ಟು ಹೋಗಬೇಕಲ್ಲ ಜೀವ. ಹಲವಾರು ವರ್ಷಗಳ ಕಾಲ ಪಟ್ಟಾಗಿ ಕೂತು ಕೆಲಸ ಮಾಡಿದ್ದರು. ಪತ್ರಿಕೆಯೇ ಅವರ ಜೀವವಾಗಿತ್ತು. ಅದರಿಂದ ಬರುತ್ತಿದ್ದ ಹಣ ಮತ್ತು ಖ್ಯಾತಿ ಅವರಿಗೆ ಚೈತನ್ಯ, ಹುಮ್ಮಸ್ಸು ನೀಡುತ್ತಿದ್ದವು. ಆದರೆ ವಯಸ್ಸು, ದೇಹ ಕೇಳಬೇಕಲ್ಲ? ಕಣ್ಣಿನ ತೊಂದರೆ ಜಾಸ್ತಿಯಾಯ್ತು. ಚೆನ್ನೈಗೆ ಹೋಗುವುದೆಂದು ನಿರ್ಧರಿಸಿದರು. ಜೊತೆಗಿರಲು ಮೈಸೂರಿನಿಂದ ಪ್ರೊ.ಕೆ. ರಾಮದಾಸ್‌ರನ್ನು ಕರೆಸಿಕೊಂಡರು.

ಹೋಗಲಿಕ್ಕೆ ಮನಸ್ಸಿಲ್ಲ, ಹೋಗದೆ ಇರಲಿಕ್ಕೂ ಆಗ್ತಿಲ್ಲ. ಸಿಂಹಾಸನ, ಸಾಮ್ರಾಜ್ಯ ಬಿಟ್ಟುಹೋಗುತ್ತಿರುವೆನೇನೋ ಎಂಬ ತಳಮಳ, ಹೇಳಿಕೊಳ್ಳಲಿಕ್ಕಾಗದ ಕಸಿವಿಸಿ. ಅಂತೂ ಹೊರಟ್ರು. ಹೋಗಿ ಒಂದೇ ದಿನಕ್ಕೆ ಚೆನ್ನೈನಿಂದ ಪತ್ರ, ‘ಈವಾರ ಟೀಕೆ-ಟಿಪ್ಪಣಿ ಆಗಲ್ಲ ಅಂತ ಕಾಣುತ್ತೆ, ಏನ್ ಮಾಡ್ತಿಯೋ ನೋಡು, ಎಲ್ರೂ ಕೂತು ಯೋಚಿಸಿ ಪತ್ರಿಕೆಯನ್ನು ರೂಪಿಸಿ, ಇನ್ಯಾವಾಗ ಕಲಿಯೋದು ನೀವೆಲ್ಲ...’

ಆ ವಾರ ನಮ್ಮ ದ್ವಾರಕಾನಾಥ್ ಒಂದು ಸ್ಕೂಪ್ ರಿಪೋರ್ಟ್ ಮಾಡಿದ್ದರು- ವೀರಪ್ಪನ್ ಕೂದಲೆಳೆಯ ಅಂತರದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ವರದಿ. ಜೊತೆಗೆ ಅಪರೂಪದ ಫೋಟೋಗಳಿದ್ದವು. ಅದನ್ನು ಸೆಂಟರ್‌ಸ್ಪ್ರೆಡ್‌ಗೆ ಹಾಕಿದ್ದೋ, ಇನ್ನೂ ಎಲ್ಲೂ ಬಂದಿರಲಿಲ್ಲ. ಮೇಸ್ಟ್ರೇ ಮೇನ್- ಅವರಿಲ್ಲ ಅಂದರೆ ಹೇಗೆ? ಎಲ್ಲಾ ಕಾಲಕ್ಕೂ ಸಲ್ಲುವಂತಹ ಟೀಕೆಟಿಪ್ಪಣಿಯೊಂದನ್ನು ಹುಡುಕಿ ಹಾಕಿದೋ. ಇತರ ವರದಿಗಳೂ ಚೆನ್ನಾಗಿದ್ದವು. ಒಟ್ಟಾರೆ ಇಷ್ಯೂನೇ ನಮಗೆ ಖುಷಿ ಕೊಟ್ಟಿತ್ತು. ಲಂಕೇಶರಿಲ್ಲದ ಕೊರತೆ ಎಲ್ಲೂ ಕಾಣ್ತಿರಲಿಲ್ಲ.

ಅಂತೂ ಲಂಕೇಶರಿಲ್ಲದೆ ‘ಲಂಕೇಶ್ ’ಪತ್ರಿಕೆ ಮಾರುಕಟ್ಟೆಗೆ ಬಂದಿತ್ತು. ಮಂಗಳವಾರ ಬೆಳಗ್ಗೆ ಹತ್ತೂವರೆ ಮೇಷ್ಟ್ರು ಕಣ್ಣಿಗೆ ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ನಿಧಾನವಾಗಿ ಮೆಟ್ಟಿಲು ಹತ್ತಿ ಬರುತ್ತಿದ್ದರು. ಹಿಂದೆ ರಾಮದಾಸ್ ಇದ್ದರು. ಆ ಸ್ಥಿತಿಯಲ್ಲಿ ಅವರನ್ನು ನೋಡಿದಾಗ, ಕರುಳು ಚುರ್ರೆಂದಿತು. ಸುಮ್ಮನೆ ಹೋಗಿ ನನ್ನ ಜಾಗದಲ್ಲಿ ಕೂತುಬಿಟ್ಟೆ. ಮೇಸ್ಟ್ರು ಬಂದವರೆ ರೂಮಿಗೆ ಹೋದರು. ಹಿಂದಿದ್ದ ರಾಮದಾಸ್ ನನ್ನ ನೋಡಿ, ‘ಬಸುರಾಜ್ ಹೇಗಿದ್ದೀರಿ...’ ಎಂದು ಕೇಳಿ ಅವರನ್ನು ಫಾಲೋ ಮಾಡಿದರು.

ಇದೀಗತಾನೆ ಬಂದಿದ್ದಾರೆ, ಟೇಬಲ್ ಮೇಲೆ ಪತ್ರಿಕೆ ಇದೆ, ನೋಡಲಿ, ನಿಧಾನಕ್ಕೆ ಹೋದರಾಯಿತು ಎಂದು ನಾನು, ಅವರ ಆ ಸ್ಥಿತಿ ನೆನೆಸ್ಕೊಂಡು ಖಿನ್ನನಾಗಿ ಕೂತಿದ್ದೆ.

ಅರ್ಧಗಂಟೆಯಾಗಿರಬಹುದು, ಹೋಗಿ ಅವರ ಮುಂದೆ ನಿಂತೆ. ನನ್ನ ಮುಖ ನೋಡದೆ, ರಾಮದಾಸ್‌ರನ್ನು ನೋಡಿಕೊಂಡು, ‘ನೋಡಿ... ಬಂದು ಎಷ್ಟೊತ್ತಾಯ್ತು... ಸೂಳೆಮಕ್ಕಳು ನಾನ್ ಸಾಯದ್ನೆ ಕಾಯ್ತಿದಾರೆ... ಲೋಫರ್ಸ್...’ ಇದ್ದಕ್ಕಿದ್ದಂತೆ ಸ್ಫೋಟಿಸಿಬಿಟ್ಟರು.

ಆ ಕ್ಷಣ ಏನನ್ನಿಸಿತೋ, ಅವರ ಮಾತು ಮುಗಿಯುವ ಮೊದಲೇ, ‘ಎಷ್ಟ್ ಕರೆಕ್ಟಾಗಿ ಗೆಸ್ ಮಾಡಿದಿರ ಸಾರ್, ಬರ್ತಿನಿ...’ ಎಂದು ಒಂದರೆಗಳಿಗೆಯೂ ನಿಲ್ಲದೆ ದಡದಡ ಅಂತ ಮೆಟ್ಟಿಲಿಳಿದು ಹೋಗಿಯೇಬಿಟ್ಟೆ. ನನ್ನಷ್ಟೇ ವೇಗವಾಗಿ ರಾಮದಾಸ್ ಕೂಡ, ‘ಏ ಬಸುರಾಜ್, ಬಸುರಾಜ್, ಹಂಗಲ್ಲ ಕಣ್ರಿ ಅದು...’ ಅಂತ ಕೂಗುತ್ತಾ ಓಡಿಬಂದರು. ನಾನು ಅವರ ಮಾತನ್ನೂ ಕೇಳದೆ, ‘ಇಲ್ಲಾ ಸಾರ್, ಅವರು ಯೋಚ್ನೆ ಮಾಡಿರೋದು ಸರಿಯಾಗಿದೆ...’ ಅಂದು ಬೈಕ್ ಹತ್ತಿ ಹೋಗಿಯೇಬಿಟ್ಟೆ.

ಲಂಕೇಶರಿಗೆ, ನಾನಿಲ್ಲದೆ ನಮ್ಮ ಹುಡುಗರು ಪತ್ರಿಕೆಯನ್ನು ತರಬೇಕು ಎಂಬ ಆಸೆಯೂ ಇತ್ತು; ನಾನಿಲ್ದೆ ತಂದೆಬಿಟ್ರಲ್ಲ, ನನ್ನನ್ನೇ ನಗಣ್ಯ ಮಾಡಿದ್ರಲ್ಲ ಎಂಬ ಸಹಿಸಲಾರದ ಸಂಕಟವೂ ಇತ್ತು. ಒಂದೇ ಸಮಯದಲ್ಲಿ ಎರಡೆರೆಡಲ್ಲ ಹೆಸರಿಗೆ ತಕ್ಕಂತೆಯೇ ಹತ್ತಾರು ವ್ಯಕ್ತಿತ್ವ. ಅದನ್ನು ಅಕ್ಷರಗಳಲ್ಲಿ ಅಡಗಿಸಿಡುವುದು ಕಷ್ಟವೇ...
(ಮಾರ್ಚ್ 8, 2009ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ ನಮ್ಮ ಜೊತೆ ಇರಬೇಕಾಗಿತ್ತು

ಕನ್ನಡನಾಡು ಕಂಡ ಅಪರೂಪದ ರೈತನಾಯಕ, ತಣ್ಣಗಿನ ವ್ಯಂಗ್ಯದ ಜಾಗತಿಕ ಚಿಂತಕ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಇದ್ದಿದ್ದರೆ ಅವರಿಗೆ ಇವತ್ತಿಗೆ ಎಪ್ಪತ್ತಮೂರು ವರ್ಷಗಳಾಗುತ್ತಿತ್ತು. ‘ಅಯ್ಯೋ ಪ್ರೊಪೆಸರ್ ಈಗ ಇರಬೇಕಿತ್ತು’ ಎಂದು ನಮಗೆಲ್ಲ ಅನಿಸುತ್ತಿರುವ ಈ ಹೊತ್ತಲ್ಲಿ ಎಂಡಿಎನ್ ನೆನಪುಗಳನ್ನು ಕೆಂಡಸಂಪಿಗೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಬಸವರಾಜು.

‘ಹನ್ನೊಂದು ಗಂಟೆಗೆ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಪ್ರೆಸ್‌ಮೀಟ್ ಇದೆ ಪ್ರೆಸ್ ಕ್ಲಬ್‌ನಲ್ಲಿ ಬರ್ತಿಯಾ’ ಎಂದು ಫ್ರೆಂಡ್ ಫೋನ್ ಮಾಡಿದ.

ನಂಜುಂಡಸ್ವಾಮಿಯವರ ಬೆಂಕಿಯಂಥ ಭಾಷಣ, ಪ್ರತಿಭಟನೆ, ಹೋರಾಟ, ಚಳುವಳಿಗಳನ್ನು ಕಣ್ಣಾರೆ ಕಂಡಿದ್ದ, ನಮ್ಮ ಹಾಸನದ ಫೈವ್ ಮೆನ್ ಆರ್ಮಿ- ಆರ್.ಪಿ.ವೆಂಕಟೇಶಮೂರ್ತಿ, ಮಂಜುನಾಥ ದತ್ತ, ವಾಸು, ಪಾಂಡು, ಪೀಟರ್‌ಗಳ ಪರಾಕ್ರಮದಲ್ಲಿ ಪಾಲ್ಗೊಂಡು ಖುದ್ದು ಅನುಭವಿಸಿದ್ದ ನನಗೆ, ಇವತ್ತು ಪ್ರೊಫೆಸರ್ ಏನು ಮಾತನಾಡಬಹುದು ಎಂಬುದನ್ನು ಕೇಳುವ ಕುತೂಹಲವಿತ್ತು. ಅಥವಾ ಏನು ಮಾತನಾಡದಿದ್ದರೂ ಪರವಾಗಿಲ್ಲ, ತೀರಾ ಹತ್ತಿರದಿಂದ ನೋಡಿದಂಗಾಗುತ್ತಲ್ಲ ಅಂತ ಆಸೆಯೂ ಇತ್ತು. ಹಾಗಾಗಿ ಪ್ರೆಸ್‌ಮೀಟ್‌ಗೆ ಹೋದೆ.

ಹನ್ನೊಂದು ಗಂಟೆ ಅಂದ್ರೆ ಹನ್ನೊಂದು ಗಂಟೆ, ಶಾರ್ಪ್ ಆಗಿ ಶುರುವಾಯಿತು ಪ್ರೆಸ್‌ಮೀಟ್. ಕುರ್ಚಿಯಲ್ಲಿ ಕೂತ ಪ್ರೊಫೆಸರ್ ಟೈಮ್ ನೋಡಿಕೊಂಡು ಬಂದಿದ್ದ ಪತ್ರಕರ್ತರತ್ತ ಒಮ್ಮೆ ಕಣ್ಣಾಡಿಸಿದರು. ಪತ್ರಕರ್ತರು ಹೆಚ್ಚೇನೂ ಇರಲಿಲ್ಲ. ಅದರಲ್ಲೂ ಗೊತ್ತಿರುವವರು ಒಂದೈದಾರು ಜನರನ್ನು ಬಿಟ್ಟರೆ, ಮಿಕ್ಕೆಲ್ಲರೂ ಹೊಸಬರೆ. ಸ್ಥಿತಪ್ರಜ್ಞ ಪ್ರೊಫೆಸರ್ ನೇರವಾಗಿ ವಿಷಯಕ್ಕಿಳಿದು ವಿವರಿಸತೊಡಗಿದರು.

ಕೂತಿದ್ದ ಪತ್ರಕರ್ತರ ನಡುವಿನಿಂದ ಒಂದು ದನಿ, ಇಂಗ್ಲಿಷ್‌ನಲ್ಲಿ, ‘ಮೊದಲು, ನಿಮ್ಮ ಪರಿಚಯ ಮಾಡಿಕೊಳ್ಳಿ... ಆನಂತರ ವಿಷಯ...’
ಪ್ರೊಫೆಸರ್ ಮುಖಭಾವ ಬದಲಾಗಲಿಲ್ಲ. ದನಿಯೂ ಜೋರಾಗಲಿಲ್ಲ. ತಣ್ಣಗೆ, ವ್ಯಂಗ್ಯಭರಿತ ಧಾಟಿಯಲ್ಲಿ, ‘ತಾವು ಯಾವ ಪತ್ರಿಕೆಯವರು...’
'ಟೈಮ್ಸ್ ಆಫ್ ಇಂಡಿಯಾ’
'ನಮ್ಮ ರೈತ್ರು ನಿಮ್ ಪತ್ರಿಕೇನಾ ಓದಲ್ಲ, ನೀವ್ ಹೊರ್‍ಗ್‌ಹೋಗ್‌ಬಹ್ದು...’

*****

ಒಂದು ದಿನ ಮೈಸೂರಿನ ನಮ್ಮ ಸ್ವಾಮಿ ಆನಂದ್ ಫೋನ್ ಮಾಡಿ, ‘ಧಣಿ, ಪ್ರೊಫೆಸರ್ ಚಾಮರಾಜನಗರಕ್ಕೆ ಬರ್ತಿದಾರೆ, ಹೋಗ್ಬುಟ್ಟು ಬಂದು ಫೋನ್ ಮಾಡ್ತಿನಿ...’ ಅಂದರು.

ಈ ನಮ್ಮ ಸ್ವಾಮಿ ಆನಂದ್ ಹುಂಬ, ಒರಟ. ಯಾರ ಬಗ್ಗೆ ಕಟುವಾಗಿ ಬರೆಯುತ್ತಾರೋ ಅವರನ್ನೇ ಎದುರಿಸುವ, ಅವರೊಂದಿಗೇ ವಾಗ್ವಾದಕ್ಕೆ ಬೀಳುವ ಅಪರೂಪದ ಆಸಾಮಿ. ಇದನ್ನು ಡಿ.ಟಿ.ಜಯಕುಮಾರ್ ಕೇಸಲ್ಲಿ ಕಣ್ಣಾರೆ ಕಂಡಿದ್ದ ನನಗೆ, ಪ್ರೊಫೆಸರ್ ಅಂದಾಕ್ಷಣ ಹೆದರಿಕೆ ಶುರುವಾಯಿತು. ‘ಅಲ್ಲಾ ಧಣಿ, ಮೊನ್ನೆ ತಾನೆ, 'ಔತಾರವಾಡುತ್ತಿರುವ ಪ್ರೊಫೆಸರ್’ ಅಂತ ಬರ್‍ದಿದೀಯ, ಈಗ ನೋಡಕ್ಕೋಗ್ತೀನಿ ಅಂತೀಯಲ್ಲ, ಜೋಪಾನ ಮಾರಾಯ...’ ಅಂದೆ.

ಅತ್ತ ಕಡೆಯಿಂದ ಭಯಂಕರ ನಗು... ಅಷ್ಟೆ.

ಸಂಜೆ ಕೆಲಸವನ್ನೆಲ್ಲ ಮುಗಿಸಿ, ಪತ್ರಿಕೆಯ ಕಚೇರಿಯಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಕೂತಿದ್ದಾಗ ಸ್ವಾಮಿ ಆನಂದ್‌ರಿಂದ ಫೋನ್...
‘ಧಣಿ, ಹೋಗ್ದೆಯಿದ್ದಿದ್ರೆ ಭಾರೀ ಲಾಸ್ ಆಗೋಗದು. ಎಂಥ ಎಕ್ಸ್‌ಪೀರಿಯನ್ಸ್ ಅಂತಿರ...’ ಜೋರು ನಗು...
'ಏನ್ ಸಿಟ್ಟು, ಏನ್ ವ್ಯಂಗ್ಯ... ಮೇಷ್ಟ್ರನ್ನಂತೂ ಚಿಂದಿ ಉಡಾಯಿಸ್ಬ್ಬುಟ್ರು...’
'ಏ, ಏನಾಯ್ತು ಹೇಳು ಮಾರಾಯ...’
'ಒಂದ್ ಕಟ್ಟೆ ಮೇಲೆ ಕೂತಿದ್ರು, ಹೋದೆ, ನಮಸ್ಕಾರ ಸಾರ್, ನನ್ನೆಸ್ರು ಸ್ವಾಮಿ ಆನಂದ್ ಅಂತ, ಲಂಕೇಶ್ ಪತ್ರಿಕೆ ರಿಪೋರ್ಟರ್ ಅಂದೆ, ನಮಸ್ಕಾರ ಅಂದ್ರು, ಬ್ಯಾಗಲ್ಲಿ ನಮ್ಮ ಲೇಟೆಸ್ಟ್ ಇಷ್ಯೂ ಇತ್ತು ಕೊಟ್ಟೆ. ಕವರ್ ಪೇಜ್ ನೋಡಿ, 'ಓ ಇದು ಇನ್ನೂ ಬರ್ತಾಯಿದಿಯ...’ ಅಂದ್ರು. ಪತ್ರಿಕೆ ತೆಗದು ಪಕ್ಕಕ್ಕೆ ಇಟ್ರು... ಶುರುವಾಯ್ತಪ್ಪ...
'ಹ್ಯೆಂಗಿದಾನೆ ಗಾಂಧಿಬಜಾರ್‌ನ ಗಾಂಧಿ?’
'ಚೆನ್ನಾಗಿದಾರೆ ಸಾರ್...’
ಪ್ರೊಫೆಸರ್ ಕಣ್ಣು ಪಕ್ಕದಲ್ಲಿದ್ದ ಪತ್ರಿಕೆ ಕಡೆ ಹೊರಳಿತು, ಸುಕ್ಕಾಗಿದ್ದ ಮುಂಗೈ ಪತ್ರಿಕೆಯನ್ನು ತೋರಿಸುತ್ತ, ‘ಎಲ್ಲಿದಾನೆ, ಸತ್ತೋಗಿದಾನೆ’ ಅಂದ್ರು.

'ಅಪಾ, ಅಪಾ, ಅಪಾ ಏನ್ ವ್ಯಂಗ್ಯ ಅಂತಿರಾ... ನಾನ್ ಏನ್ ಹೇಳ್ಬೆಕೋ ಗೊತ್ತಾಗ್ದೆ... ಬರೀ ನಗದೇ ಆಯ್ತು ಧಣಿ...’ ಅಂದು ಫೋನ್ ಇಟ್ಟರು.

ಲಂಕೇಶರೊಟ್ಟಿಗೆ ಎಂಡಿಎನ್ಮಾರನೆ ದಿನ ಹತ್ತು ಗಂಟೆಗೆ ಮೇಷ್ಟ್ರು ಬಂದು, ಪೇಪರ್‌ಗಳನ್ನೆಲ್ಲ ಓದಿ, ಕಾಫಿ ಕುಡಿದು ಕೂತಿದ್ರು. ನಾನು ಹೋಗಿ, ‘ಸಾರ್, ಸ್ವಾಮಿ ಆನಂದ್ ಪ್ರೊಫೆಸರ್‍ನ ನೋಡಿದ್ರಂತೆ, ಪತ್ರಿಕೆ ಕೊಟ್ರಂತೆ, ಅವರು ಹಿಂಗಂದ್ರಂತೆ ಸಾರ್...’ ಅಂದೆ.
‘ಲವ್‌ಲಿ ಫೆಲೋ... ಒಸಿ ಕಾಟ ಕೊಟ್ಟಿದಿವೇನಯ್ಯ, ಸರಿಯಾಗಿದೆ ಬಿಡು...’ ಅಂದ್ರು.

******

ಲಂಕೇಶರು ಸಾಯುವವರೆಗೂ ನಂಜುಂಡಸ್ವಾಮಿಯವರನ್ನು ನೋಡುವುದಾಗಲಿ, ಅವರ ಜೊತೆ ಒಡನಾಡುವುದಾಗಲಿ ಆಗಲೇಯಿಲ್ಲ. ಸತ್ತ ನಂತರ, ಪತ್ರಿಕೆ ಬಿಟ್ಟು ‘ಅಗ್ನಿ’ ಸೇರಿದ ಮೇಲೆ, ನಿಧಾನಕ್ಕೆ ಪ್ರೊಫೆಸರ್ ಜೊತೆ ಸಂಪರ್ಕ ಬೆಳೆಯಿತು. ಆ ಸಂಪರ್ಕವೂ ಆಗಾಗ, ಸಂದರ್ಭಕ್ಕೆ ತಕ್ಕಹಾಗೆ, ಅಷ್ಟೆ. ತೇಜಸ್ವಿಯವರು ಜಾಗತೀಕರಣದ ಬಗ್ಗೆ 'ಅಗ್ನಿ’ಯಲ್ಲಿ ಲೇಖನ ಬರೆದರು. ಅದನ್ನು ನೋಡಿ ಉರಿದುಹೋದ ಪ್ರೊಫೆಸರ್, ‘ಬುದ್ಧಿಜೀವಿಗಳಿಗೊಂದು ಪತ್ರ’ ಎಂಬ ಲೇಖನಮಾಲೆಯನ್ನೇ ಬರೆದರು. ಆ ಲೇಖನದಲ್ಲಿ ತೇಜಸ್ವಿಯವರನ್ನು ಲೇವಡಿ ಮಾಡಿದ್ದರು. ಆ ಲೇವಡಿ ಸಕಾರಣವಾಗಿತ್ತು. ಮತ್ತು ಕನ್ನಡದ ಬಹುತೇಕರೇನು, ಎಲ್ಲರೂ ಜಾಗತೀಕರಣವನ್ನು ಸಂಪೂರ್ಣವಾಗಿ ಅರಿತಿರಲಿಲ್ಲ. ಅಥೆಂಟಿಕ್ ಆಗಿ ಮಾತನಾಡುವಷ್ಟು ಓದಿಕೊಂಡಿರಲಿಲ್ಲ. ಇದು ಸಹಜವಾಗಿಯೇ ಪ್ರೊಫೆಸರ್‌ಗೆ ಸಿಟ್ಟು ತರಿಸಿತ್ತು. ಆ ಸಿಟ್ಟಿನಲ್ಲಿಯೇ ಕಟುವಾಗಿ ಲೇಖನ ಬರೆದು, ‘ಇದಕ್ಕೆ ನಿಮ್ಮ ಸಾಹಿತಿಗಳಿಂದ ವಿರೋಧ ಬರಬಹುದು. ಅದಕ್ಕೂ ಉತ್ತರಿಸುತ್ತೇನೆ; ಎಂದು ಹೇಳಿ ಕೊಟ್ಟಿದ್ದರು. ಆದರೆ, ಪ್ರೊಫೆಸರ್ ಛಡಿಏಟಿಗೆ ಬೆಚ್ಚಿದ ಕನ್ನಡದ ಸಾಹಿತ್ಯಲೋಕ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಪ್ರೊಫೆಸರ್ ಕೂಡ ಮತ್ತೆ ಬರೆಯಲಿಲ್ಲ.

******

ಪ್ರೊಫೆಸರ್ ಆರೋಗ್ಯ ಕೆಟ್ಟಿತ್ತು. ಓಡಾಡುವುದು ಕಡಿಮೆಯಾಗಿತ್ತು. ಅದೇ ಸಮಯಕ್ಕೆ ನಾವು ಒಂದಷ್ಟು ಜನ ಸೇರಿ ಗ್ರಾಮೀಣ ಕೃಪಾಂಕದ ಬಗ್ಗೆ ಒಂದು ಸಂವಾದ ಕಾರ್ಯಕ್ರಮವನ್ನು ರೂಪಿಸಿದ್ದೆವು, ಗಾಂಧಿಭವನದಲ್ಲಿ. ಆ ಕಾರ್ಯಕ್ರಮಕ್ಕೆ ನಂಜುಂಡಸ್ವಾಮಿಯವರನ್ನು ಕರೆದಾಗ, 'ಬರ್ತಿನಿ, ಬರ್ತಿನಿ...’ ಎಂದಷ್ಟೇ ಹೇಳಿದ್ದರು.
ಹೇಳಿದ ಸಮಯಕ್ಕೆ ಸರಿಯಾಗಿ ಪ್ರೊಫೆಸರ್ ಬಂದರು. ಕಾರ್ಯಕ್ರಮವಿನ್ನೂ ಶುರುವಾಗಿರಲಿಲ್ಲ. ಅವರ ಜೊತೆ ಕೀರಂ ನಿಂತು ಮಾತನಾಡುತ್ತಿದ್ದರು. ನನ್ನ ತಲೆಯಲ್ಲಿ ಪ್ರೊಫೆಸರ್ ಆರೋಗ್ಯದ ಹುಳ ಕೊರೆಯುತ್ತಿತ್ತು. ಅದೇ ಮೂಡ್‌ನಲ್ಲಿ 'ನಮಸ್ಕಾರ ಸಾರ್, ಹೇಗಿದಿರ?’ ಅಂದೆ. ಅದೇ ತಣ್ಣಗಿನ ವ್ಯಂಗ್ಯ... ‘ನನಗೇನಾಗಿದೆ, ನಾನ್ ಚೆನ್ನಾಗಿದಿನಿ, ನನ್ನ ಸುತ್ತ ಕೆಟ್ಟೋಗಿದೆ...’ ಮತ್ತೆ ಮುಂದಕ್ಕೆ ಮಾತಿಲ್ಲ.

ಆ ನಂತರ ಪ್ರೊಫೆಸರ್ ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ನೆರವಾಗುವ ಗ್ರಾಮೀಣ ಕೃಪಾಂಕದ ಬಗ್ಗೆ ಮಾತನಾಡುತ್ತ, ‘ನಮ್ಮ ಹಳ್ಳಿ ಜನ ಹ್ಯಂಗ್ ಬದುಕ್ತಾಯಿದಾರೆ ಅನ್ನೋದು ಕುರ್ಚಿ ಮೇಲೆ ಕೂತವರಿಗೆ ಕಾಣದಿಲ್ಲ. ಅಂಥಾ ಕಷ್ಟದಲ್ಲೂ ಓದೋ ಮಕ್ಕಳಿಗೆ ‘ಗ್ರಾಮೀಣ ಗೌರವಾಂಕ’ ನೀಡಬೇಕೆ ಹೊರತು ಗ್ರಾಮೀಣ ಕೃಪಾಂಕವನ್ನಲ್ಲ...’ ಎಂದು ಕೃಪಾಂಕ-ಗೌರವಾಂಕಗಳ ನಡುವಿನ ವ್ಯತ್ಯಾಸವನ್ನು ಬಿಡಿಸಿಟ್ಟು, ಅಲ್ಲಿದ್ದವರ ಅರಿವಿನ ವ್ಯಾಪ್ತಿಯನ್ನೇ ವಿಸ್ತರಿಸಿದ್ದರು.

*****

ಒಂದಿನ ರೈತನಾಯಕ ಕೋಡಿಹಳ್ಳಿ ಚಂದ್ರಶೇಖರ್ ಬಂದು, ‘ಬಸುರಾಜ್, ರೈತ್ರು ಬಾಂಬೆಗೆ ಹೋಗ್ತಾವ್ರೆ, ಅಲ್ಲಿಗೆ ಎಲ್ಲಾ ಕಡಿಂದನೂ ಬತ್ತರೆ, ನಮ್ ರೈತ್ರುಗೆ ನಾವು ಒಂದ್ ಬ್ಯಾಡ್ಜ್ ಮಾಡ್ಕೊಡಬೇಕಲ್ಲ...’ ಅಂದ್ರು. ನಾನು ಆ ಕಾರ್ಯಕ್ರಮದ ವಿವರ ಪಡೆದು ಬ್ಯಾಡ್ಜ್ ರೂಪಿಸಿದೆ. ಪ್ರಿಂಟಾಗಿ ಸಿದ್ಧವಿದ್ದ ಮೂರು ಸಾವಿರ ಬ್ಯಾಡ್ಜ್‌ಗಳನ್ನು ಕೊಡಲು ಕೇಳಿದಾಗ, ಚಂದ್ರಶೇಖರ್, 'ಇಲ್ಲಿಗೇ ಬಂದ್ಬುಡಿ ಅಂದ್ರು.’
‘ಇಲ್ಗೆ ಅಂದ್ರೆ ಎಲ್ಗೆ...’ ಅಂದೆ.
‘ಪ್ರೊಫೆಸರ್ ಕಿದ್ವಾಯಿ ಆಸ್ಪತ್ರೆಯ ಸ್ಪೆಷಲ್ ರೂಮ್‌ನಲ್ಲವ್ರೆ, ಅವರ್‍ನೂ ನೋಡದಂಗಾಯ್ತದೆ, ಬನ್ನಿ...’ ಅಂದ್ರು.

ಕಿದ್ವಾಯಿಗೆ ಹೋದೆ. ಹಾಸಿಗೆಯ ಮೇಲೆ ಪ್ರೊಫೆಸರ್ ಮಲಗಿದ್ದರು. ನೋಡಿ ನಮಸ್ಕಾರ ಮಾಡಿದೆ. ಗುರುತು ಹಿಡಿದರೋ, ಇಲ್ಲವೋ ತಿಳಿಯಲಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಇದ್ದೋರು, ‘ರೈತ್ರು ಬಾಂಬೆಗೋಯ್ತಾವ್ರೆ, ಅವ್ರಿಗೆ ಬ್ಯಾಡ್ಜ್ ಬೇಕಲ್ವ...’ ಅಂದು ಪ್ರಿಂಟಾಗಿದ್ದ ಬ್ಯಾಡ್ಜ್‌ಗಳನ್ನು ಅವರ ಮುಂದಿಡಿದರು.

ಅದನ್ನು ನೋಡುತ್ತಿದ್ದ ಹಾಗೆ ಅವರ ಕತ್ತು, ಕೋಳಿ ಕತ್ತಿನ ಥರ ಅತ್ತಿಂದಿತ್ತ ಅಲ್ಲಾಡತೊಡಗಿತು. ‘ಉಹೂ, ಭ್ರಷ್ಟಾಚಾರ ನಡೆಯುತ್ತೆ, ಸೈನ್ ಇಲ್ದೆಯಿದ್ರೆ ದುರುಪಯೋಗ ಆಗುತ್ತೆ... ಇದನ್ನು ಕ್ಯಾನ್ಸಲ್ ಮಾಡಿ...’ ಅಂದು, ಅದುರುತ್ತಿದ್ದ ಬೆರಳುಗಳ ಮಧ್ಯಕ್ಕೆ ಪೆನ್ನನ್ನು ಸಿಕ್ಕಿಸಿಕೊಂಡು, ಒಂದು ತುಂಡು ಪೇಪರ್ ಮೇಲೆ ತಮ್ಮ ಸಹಿಯನ್ನು ಹಾಕಿ ನನಗೆ ನೀಡಿದರು.

ಇಂಥ ಹೊತ್ತಿನಲ್ಲೂ ಈ ಪರಿಯ ಎಚ್ಚರವೇ ಎಂದು ನನಗೆ ನಾನೆ ಚಿಂತಿಸುತ್ತ ನಕ್ಕು ಸುಮ್ಮನಾದೆ. ಬಹುಶಃ ಅದು ಅವರ ಕೊನೆ ಸಹಿ ಇರಬಹುದು. ಅದು ಈಗಲೂ ನನ್ನ ಬಳಿಯಿದೆ.

*****

ಲಂಕೇಶರಿಗೆ ರೈತಸಂಘ, ನಂಜುಂಡಸ್ವಾಮಿಯವರ ಬಗ್ಗೆ ಕೊಂಚ ಅನುಮಾನ, ಅಸಮಾಧಾನವಿತ್ತು. ಅದನ್ನವರು ತಾತ್ವಿಕ ಕಾರಣಗಳನ್ನಿಟ್ಟು ‘ಟೀಕೆ-ಟಿಪ್ಪಣಿ’ಯಲ್ಲಿ ಸಮರ್ಥವಾಗಿ ಮಂಡಿಸಿದ್ದರು. ಲಂಕೇಶರ ಸಹವಾಸಕ್ಕೆ ಬಿದ್ದ ನನಗೆ, ಲಂಕೇಶರು ಮಾಡಿದ್ದೆಲ್ಲ ಸರಿ ಎಂಬ ಹುಂಬ ನಂಬಿಕೆಯಿತ್ತು. ಆದರೆ, ಇಬ್ಬರ ನಡುವೆ ಇದ್ದಿರಬಹುದಾದ ಬೌದ್ಧಿಕ ಜಿದ್ದಾಜಿದ್ದಿನ ಅಂದಾಜಿರಲಿಲ್ಲ. ಅದನ್ನು ಗ್ರಹಿಸುವಷ್ಟು ಬುದ್ಧಿವಂತನೂ ನಾನಾಗಿರಲಿಲ್ಲ. ಇಬ್ಬರೂ ಕನ್ನಡನಾಡು ಕಂಡ ಮಹಾನ್ ಚಿಂತಕರು. ಆ 'ಮಹಾನ್’ ಎಂಬುದೇ ಇಬ್ಬರನ್ನೂ ಎರಡು ಧ್ರುವಗಳನ್ನಾಗಿಸಿತ್ತು; ದ್ವೀಪವನ್ನಾಗಿಸಿತ್ತು. ವ್ಯಕ್ತಿತ್ವಹರಣ, ಹೊಟ್ಟೆಕಿಚ್ಚು ಇಬ್ಬರಲ್ಲೂ ಇತ್ತು. ವ್ಯಂಗ್ಯವಂತೂ ಪರಾಕಾಷ್ಠೆ ಮುಟ್ಟಿತ್ತು.

ಒಂದಂತೂ ಸತ್ಯ... ಲಂಕೇಶರ ಪ್ರಭಾವಕ್ಕೊಳಗಾಗಿ ಪ್ರೊಫೆಸರ್ ಬಗ್ಗೆ ನಾನು ಪೂರ್ವಗ್ರಹಪೀಡಿತನಾಗಿದ್ದೆ. ಲಂಕೇಶರ ಮೇಲಿಟ್ಟ ಹುಂಬ ನಂಬಿಕೆ ಮತ್ತು ಪ್ರೀತಿ ನನ್ನನ್ನು ದಾರಿತಪ್ಪಿಸಿತ್ತು. ಈಗ ಇಬ್ಬರಿಬ್ಬರೂ ಇಲ್ಲದ ಸಮಯದಲ್ಲಿ ಈ ನನ್ನ ತಪ್ಪು ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಕಂಡಿದ್ದು, ಕೇಳಿದ್ದೇ ಸತ್ಯವಲ್ಲ; ಸುಳ್ಳೂ ಅಲ್ಲ.

ಸತ್ಯ-ಸುಳ್ಳುಗಳ ನಡುವೆ, ಬುದ್ಧನ ಮಧ್ಯಮಮಾರ್ಗದಂತೆ ಮತ್ತೇನೋ ಇರಬಹುದಲ್ಲವೆ?

(ಫೆಬ್ರವರಿ 13, 2009ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

ತೇಜಸ್ವಿ ಹುಟ್ಟುಹಬ್ಬ: ಇದೆಲ್ಲ ನೆನಪಾಯಿತು

ಒಂದು ದಿನ ಪತ್ರಿಕೆಯ ಆಫೀಸಲ್ಲಿ ಪೇಪರ್ ಓದುತ್ತಾ ಕೂತಿದ್ದೆ. ಬೆಳಗ್ಗೆ ಹನ್ನೊಂದು ಗಂಟೆಯ ಸಮಯ. ಬೇಸಿಗೆ ಕಾಲ. ಮನೆಯಿಂದ ಬರುವಾಗ ಇಸ್ತ್ರಿ ಮಾಡಿದ ಒಳ್ಳೆಯ ಪ್ಯಾಂಟು-ಶರ್ಟು ಹಾಕಿಕೊಂಡು ಬಂದಿದ್ದ ಲಂಕೇಶ್ ಮೇಷ್ಟ್ರು ಬಂದ ಗಳಿಗೆಯಲ್ಲಿಯೇ ಅದನ್ನು ಬಿಚ್ಚಾಕಿದ್ದರು. ಲೂಸ್ ಲೂಸಾದ ಟೀ ಶರ್ಟು, ದೊಗಳೆ ಚೆಡ್ಡಿ ಹಾಕಿಕೊಂಡರು. ಆ ಡ್ರೆಸ್‌ನಲ್ಲಿಯೇ ಹೊಟ್ಟೆ ನೀವಿಕೊಂಡು ರೂಮಿನಿಂದ ಹೊರಬಂದ ಮೇಸ್ಟ್ರು, ‘ಲೇ ಬಸುರಾಜ, ಆ ತೇಜಸ್ವಿಗೆ ಫೋನ್ ಮಾಡ್ಕೊಡೋ...’ ಎಂದರು. ಬಂದ ಕೆಲ್ಸ ಮುಗೀತು ಅಂತ ಅಷ್ಟೇ ಫಾಸ್ಟಾಗಿ ಅವರ ರೂಮಿಗೆ ಹೋದರು.

ಫೋನ್ ಎಂದರೆ ಮೇಷ್ಟ್ರಿಗೆ ಕಿರಿಕಿರಿ. ಅವರಾಗಿಯೇ ಡಯಲ್ ಮಾಡಿ ಮಾತನಾಡಿದ್ದನ್ನು, ಅದರಲ್ಲೂ ತುಂಬಾ ಹೊತ್ತು ಮಾತನಾಡಿದ್ದನ್ನು ನಾನು ನೋಡಿದ್ದಿಲ್ಲ. ಹೆಚ್ಚೆಂದರೆ ಮೂರು ನಿಮಿಷ. ಮಾತು ಕೂಡ ಅರ್ಧಂಬರ್ಧ. ಅಸಹನೆಯ ಮೂಟೆ. ಅದಕ್ಕೆ ತಕ್ಕಂತೆ ಕೈಗೆ ಕಾಲಿಗೆಂಬಂತೆ ಅವರ ಪೆಟ್ ಗಿರಿ ಇದ್ದೇ ಇದ್ರು. ಇಲ್ಲಾಂದ್ರೆ ಮ್ಯಾನೇಜರ್ ನಾಗರಾಜು ಅಥವಾ ನಾನು ಇರುತ್ತಿದ್ದವು. ಆಶ್ಚರ್ಯ ಅಂದ್ರೆ, ಕರ್ನಾಟಕದ ಇತಿಹಾಸ, ಚರಿತ್ರೆಯನ್ನೇ ಬದಲಿಸಿದ ‘ಪತ್ರಿಕೆ’ಗೆ ಇದ್ದದ್ದು ಅವತ್ತಿಗೆ ಒಂದೇ ಫೋನು- ಸಂಪಾದಕರಿಗೂ, ವರದಿಗಾರರಿಗೂ, ಕಚೇರಿ ಕೆಲಸಗಳಿಗೂ. ಅದು ನನ್ನ ಪಾಲಿಗೆ ಅದೃಷ್ಟವೇ ಅಗಿತ್ತು- ತೇಜಸ್ವಿಯೊಂದಿಗೆ ಮಾತನಾಡುವ ಸುಯೋಗ ತಾನೇ ತಾನಾಗಿ ಒದಗಿ ಬಂದಿತ್ತು.

ಮೂಡಿಗೆರೆಯ ಎಸ್ಟಿಡಿ ಕೋಡ್ ನಂಬರ್ ನೋಡಿ ಫೋನ್ ಮಾಡಿದೆ. ತೇಜಸ್ವಿಯವರೇ ಎತ್ತಿಕೊಂಡರು. ನಾನು ಇತ್ತ ಕಡೆಯಿಂದ ಯಾರೆಂದು ಹೇಳಿದಾಗ, ‘ಏನೋ, ಏನ್ಸಾಮಾಚಾರ...’ ಅಂದು ನಾನು ಮಾತನಾಡ್ಲಿಕ್ಕೂ ಬಿಡದೆ, ‘ಅಲ್ಲೋ ನಿಮ್ದು ಯಾವ್ದೊ ಸಾಫ್ಟವೇರು, ನನ್ ಕಂಪ್ಯೂಟರ್ ಕೈ ಕೊಟ್ಟು, ಒಳ್ಳೆ ಕೆಲ್ಸ ಕೊಡ್ತು ಮಾರಾಯ...’ ಮಧ್ಯೆ ನಾನೇ ಬಾಯಾಕಿ, ‘ಸಾರ್ ಮೇಷ್ಟ್ರು ಮಾತಾಡ್ತರಂತೆ...’ ಎಂದೆ. ‘ಹೂಂ ಸರಿ, ಆಮೇಲೆ ಮಾಡು ನಿನ್ನತ್ರ ಒಂಚೂರು ಕೆಲ್ಸಿದೆ...’ ಎಂದರು.

ಎಕ್ಸ್‌ಚೇಂಜ್ ಬಟನ್ ಒತ್ತಿದ್ದೂ ಅಲ್ಲದೆ, ಮೇಷ್ಟ್ರಿಗೆ ಹೋಗಿ ಹೇಳ್ದೆ, ಅವರು ಸಿದ್ಧರಾಗಿದ್ದಂತೆ ಕಂಡರು. ‘ಹಲೋ, ನಾನು ಲಂಕೇಶ್...’ ಅತ್ತ ಕಡೆಯಿಂದ ಏನು ಬಂತೋ ಗೊತ್ತಾಗಲಿಲ್ಲ. ‘...ಕುವೆಂಪು ಬಗ್ಗೆ ಬರೀತೀನಿ ಅಂದಿದ್ರಲ್ಲ, ಏನಾಯ್ತು, ಶುರು ಮಾಡನ ಕಳ್ಸಿ...’ ಮತ್ತೆ ಬ್ರೇಕ್. ಇವರೇ, ‘ಮುಂದಿನವಾರನ, ಲವ್‌ಲಿ, ದಟ್ಸ್ ಗುಡ್...’ ಅಂದು ಫೋನ್ ಇಟ್ಟರು. ನಾನು ಬಾಗಿಲಲ್ಲೆ ನಿಂತಿದ್ದನ್ನು ನೋಡಿ, ‘ಮುಂದಿನವಾರದಿಂದ ಕುವೆಂಪು ಬಗ್ಗೆ ಬರೀತರಂತೆ ಕಣೋ...’ ಅಂದು ಮುಖದ ಮೇಲೆ ಕೃತಕ ನಗೆ ತಂದುಕೊಂಡು, ಆ ನಗೆಯನ್ನೇ ನೀನಿನ್ನು ಹೋಗಬಹುದು ಎಂಬ ಸಿಗ್ನಲ್‌ಗೆ ಬಳಸಿಕೊಂಡವರಂತೆ ನೋಡಿದರು. ನನಗೆ ಅದಾವುದೂ ಗಮನಕ್ಕೆ ಬರದೆ ತಲೆ ತುಂಬಾ ತೇಜಸ್ವಿ ತುಂಬಿಕೊಂಡಿದ್ದರು.

ತೇಜಸ್ವಿಅದು ಹಾಗೆಯೇ ಅಲ್ಲವೆ... ಲಂಕೇಶ್-ತೇಜಸ್ವಿ ಎರಡೂ ಬೆಟ್ಟಗಳೇ. ಲಂಕೇಶರ ಬಳಿ ಇದ್ದಾಗ ಇಲ್ಲದಿದ್ದ ಬೆಟ್ಟದ ಬಗ್ಗೆಯೇ ಬೆರಗು. ಕೈಗೆ ಸಿಗದಿದ್ದುದರ ಬಗ್ಗೆಯೇ ಕನವರಿಕೆ, ಕಾತರ. ಅದೇ ಗುಂಗಿನಲ್ಲಿ ಹೋಗಿ ಮತ್ತೆ ತೇಜಸ್ವಿಗೆ ಫೋನ್ ಮಾಡಿದೆ. ‘ಮತ್ತೇನೋ...’ ಎಂದರು.

‘ಏನಿಲ್ಲ ಸಾರ್... ನೀವೆ ಏನೋ ಹೇಳಿದ್ರಲ್ಲ ಕಂಪ್ಯೂಟ್ರುದು, ಮಾತಾಡ್ಬೇಕು ಅಂತ...’

‘ಓ ಅದಾ, ಅದನ್ನೇ ಹೇಳ್ಬೇಕಂತಿದ್ದು, ಮೊನ್ನೆ ಅಣ್ಣನ ಬಗ್ಗೆ ಬರೆಯಕ್ಕೆ ಶುರು ಮಾಡ್ದೆ, ಅದ್ಯಾವುದೋ ಕೆಪಿ ರಾವ್ ಸಾಫ್ಟ್‌ವೇರು, ಏ ಚೆನ್ನಾಗಿದೆ ಕಣೋ ಅದು, ಶುರು ಮಾಡಿ ಸ್ಟೋರ್ ಮಾಡಿ ತೋಟದ ಕಡೆ ಹೋಗಿಬಂದು, ಬರೆಯಕ್ಕೂತ್ರೆ... ಕೈ ಕೊಡ್ತು ನೋಡು, ಏನೇನ್ ಮಾಡುದ್ರು ಆಗಲಿಲ್ಲಪಾ, ಥೂತ್ತೇರಿ ಅಂತೇಳಿ ತಗದು ಮೂಲೆಗೆ ಇಟ್ಟಿದಿನಿ, ಯಾರಾದ್ರು ರಿಪೇರಿ ಮಾಡೋರಿದ್ರೆ ಕಳ್ಸಕಾಗ್ತದೇನೋ...’ ಅಂದರು.

ಅವರು ಬಳಸುತ್ತಿದ್ದ ಕನ್ನಡ ಸಾಫ್ಟ್‌ವೇರ್ ಕೆಪಿ ರಾವ್. ನಮ್ಮದು ಆಕೃತಿ. ಒಂದಕ್ಕೊಂದು ಹೊಂದಾಣಿಕೆಯಿಲ್ಲ. ಆದ್ರೆ ಕಂಪ್ಯೂಟರ್ ರಿಪೇರಿ, ಸರ್ವೀಸು ಅಂತೆಲ್ಲ ಒಂಚೂರು ಗೊತ್ತಿತ್ತು. ಸಮಸ್ಯೆ ಅಂದ್ರೆ, ಬೆಂಗಳೂರಿಂದ ಮೂಡಿಗೆರೆಗೆ ಯಾರು ಹೋಗ್ತರೆ? ಇದನ್ನೆಲ್ಲ ಯೋಚಿಸಿ, ‘ಸಾರ್ ನೀವು ನಿಮಗೆ ಸಾಫ್ಟ್‌ವೇರ್ ಸಪ್ಲೈ ಮಾಡಿದವರನ್ನೇ ಕರೆದು ರಿಪೇರಿ ಮಾಡ್ಸದೊಳ್ಳೇದು...’ ಅಂದೆ.

‘ಲೇ ಮೂರ್ಖ, ಅದು ನನಗ್ಗೊತ್ತಿಲ್ವೇನೊ... ಈಗ ಏನ್ಮಾಡ್ಬೇಕೇಳೊ...’ ಅಂದವರು ಅದನ್ನು ಅಲ್ಲಿಗೇ ಬಿಟ್ಟು, ‘ಈಗ ಅಣ್ಣನ ಬಗ್ಗೆ ಬರೀತಿದ್ದೀನಿ, ಇರೋ ಫೋಟೋಗಳನ್ನು ಸ್ಕ್ಯಾನ್ ಮಾಡಿ ಸ್ಕೆಚ್ ಥರ ಕಾಣೋಹಂಗೆ ಮಾಡಿದ್ದೀನಿ...’ ತಕ್ಷಣ ಮಾತನ್ನು ಅರ್ಧಕ್ಕೇ ನಿಲ್ಲಿಸಿ, ಟೋನ್ ಬದಲಿಸಿ, ಏನನ್ನೋ ಜ್ಞಾಪಿಸಿಕೊಂಡವರಂತೆ, ‘ಆ ಕುದುರೆ ಹುಳಕ್ಕೆ ಮಾಡ್ದಂಗೇನಾದ್ರು ಮಾಡ್ದೆ... ಅಲ್ಲಿಗೇ ಬಂದು ಹಲ್ಲು ಉದುರ್‌ಸ್ತೀನಿ...’ ಅಂದರು.

ದನಿ ಗಡುಸಾಗಿದ್ದು ಕಂಡು ಕೊಂಚ ಗಲಿಬಿಲಿಯಾಯಿತು. ಆದರೂ ಸಾವರಿಸಿಕೊಂಡು, ‘ಸಾರ್ ಅದು ಕಡ್ಡಿಯಂಗಿತ್ತು, ಏನು ಅಂತ ಗೊತ್ತಾಯ್ತನೇ ಇರ‍್ಲಿಲ್ಲ...’ ಅಂದೆ.

ತೇಜಸ್ವಿ ಬಳಸುತ್ತಿದ್ದ ಜೀಪು‘ಇಲ್ಯಾವ ಕಡ್ಡಿನೂ ಇರಲ್ಲ, ತಿಳೀತಾ, ಸ್ಕ್ಯಾನ್ ಮಾಡಿದ್ದನ್ನೇ ಟ್ರೇಸಿಂಗ್ ತಗದು ಕಳಸ್ತಿನಿ, ಚಿತ್ರಗಳು ಅಂಟಸ್ದಷ್ಟೇ ಕೆಲ್ಸ... ಅದೂ ಕಷ್ಟವೇ, ದಡ್ಡ ಶಿಖಾಮಣಿಗಳು...’ ಎಂದು ‘ನಿಮ್ ಮೇಸ್ಟ್ರು ಫಾಸ್ಟಾಗಿದಾರೆ, ಮುಂದಿನ ವಾರದಿಂದಲೇ ಶುರು ಮಾಡನ...’ ಎಂದರು.

ನನಗೆ ಖುಷಿಯಾಗಿ, ‘ಬೆಂಗಳೂರು ಕಡೆ ಯಾವಾಗ ಬರ್ತಿರಾ ಸಾರ್...’ ಎಂದು ಮಾತು ಮುಂದುವರೆಸಲು ನೋಡಿದೆ.
‘ಬೆಂಗಳೂರಿಗಾ... ಥೂ ಥೂಥು, ಬದುಕದುಂಟೇ ಮಾರಾಯ, ಅದ್ಯಂಗಿದೀರೋ ನೀವು...’
‘ಏನ್ ಸಾರ್ ಹಂಗಂದ್ರೆ...’
‘ಪುಣ್ಯವಂತ್ರು ಕಣ್ರೋ ನೀವು... ಬೆಂಗಳೂರಲ್ಲಿ ಬದುಕ್ತಿರೋರೆಲ್ಲ ಪುಣ್ಯವಂತ್ರು...’
ಮಾತು ಏನ್ ಒಂಥರಾ ವ್ಯಂಗ್ಯವಾಗಿದೆಯಲ್ಲ ಎಂದು, ‘ಅದ್ಯಂಗ್ ಸಾರ್ ಪುಣ್ಯವಂತ್ರು’ ಎಂದೆ.
‘ಅಲ್ಲಾ ಕಣೋ, ಅಲ್ಯಾರಾದ್ರು ಮನುಷ್ರು ಇರಕಾಯ್ತದೇನೋ, ನರಕ... ನರಕ... ನಿಮಗ್ಯಾರ‍್ಗೂ ಇನ್ನೊಂದು ನರ‍್ಕ ಇಲ್ವೇ ಇಲ್ಲ, ಸ್ಟ್ರೈಟ್ ಸ್ವರ್ಗಕ್ಕೊಂಟೋಯ್ತಿರ ಕಣ್ರೋ...’ ಎಂದು ಜೋರಾಗಿ ನಗಾಡಿದರು. ನಗುತ್ತಲೇ ಮಾತು ಮುಗಿಸಿ ಫೋನ್ ಇಟ್ಟರು.

ಮುಂದಿನ ವಾರದಿಂದ ತೇಜಸ್ವಿಯವರ ‘ಅಣ್ಣನ ನೆನಪು’ ಕಾಲಂ ಶುರುವಾಯಿತು. ಜನಮನ್ನಣೆಯನ್ನೂ ಪಡೆಯಿತು. ಪತ್ರಿಕೆಯ ಪ್ರಸಾರವೂ ಹೆಚ್ಚಾಯಿತು. ಮೇಷ್ಟ್ರಿಗೂ ಖುಷಿಯಾಯಿತು. ಆದರೆ ಅದ್ಯಾಕೋ ‘ಅಣ್ಣನ ನೆನಪು’ ಮೇಷ್ಟ್ರಲ್ಲಿ ಅಂತಹ ಕುತೂಹಲ ಕೆರಳಿಸಲಿಲ್ಲ. ಅಥವಾ ಅವರ ನಿರೀಕ್ಷೆಗೆ ತಕ್ಕಂತಿರಲಿಲ್ಲ ಅನ್ನುವುದು ಸರಿಯೇನೋ. ತೇಜಸ್ವಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಬಗ್ಗೆ ಬೇರೆಯದೆ ಆದ ಬರವಣಿಗೆಯನ್ನು ಅವರು ನಿರೀಕ್ಷಿಸಿದ್ದರೇನೋ. ಅಂತೂ ಪ್ರತೀವಾರ ಆ ಕಾಲಂ ಓದಿದ ನಂತರ ನಸನಸ ಅನ್ನೋರು. ಇದು ಇನ್ನಷ್ಟು ನಿಚ್ಚಳವಾಗಿ ನನಗೆ ಕಂಡಿದ್ದು- ಅಣ್ಣನ ನೆನಪು ಪುಸ್ತಕ ಬಂದಾಗ, ಮೇಸ್ಟ್ರು ಅದರ ವಿಮರ್ಶೆ ಮಾಡಿದಾಗ.

ಮಗಳು ಸುಸ್ಮಿತಾ ಜೊತೆ ತೇಜಸ್ವಿ ದಂಪತಿತೇಜಸ್ವಿಯವರೂ ಕೂಡ, ಅದೇಕೋ ಅಣ್ಣನ ನೆನಪನ್ನು ಪೂರ್ಣಗೊಳಿಸಲಿಲ್ಲ. ಅಥವಾ ನೆನಪಾಗಿದ್ದಷ್ಟನ್ನು ದಾಖಲಿಸಿ ಸುಮ್ಮನಾದರೋ ಏನೋ. ಇತ್ತ ಕಾಲಂ ಮುಗಿಯುತ್ತಿದ್ದಂತೆಯೇ ಅವರ ಪುಸ್ತಕ ಪ್ರಕಾಶನದಿಂದ ಪುಸ್ತಕವನ್ನು ಹೊರತಂದೇ ಬಿಟ್ಟರು. ಬಂದ ಒಂದೇ ವಾರಕ್ಕೆ ಮೇಷ್ಟ್ರೇ ವಿಮರ್ಶೆ ಮಾಡಿದರು. ಅವರ ಮ್ಯಾನುಸ್ಕ್ರಿಪ್ಟು- ಮೋಡಿ ಅಕ್ಷರ. ಅದರಲ್ಲೂ ವಿಷಯ ಸಂಕೀರ್ಣವಾಗಿದ್ದರೆ ಮುಗೀತು. ಬರೆದದ್ದು ಗೊತ್ತಾಗ್ತಿರಲಿಲ್ಲ. ಆದರೆ ಅದನ್ನೂ ಮಾಡುವ ಮಟ್ಟಕ್ಕೆ ನಾನು ಪಳಗಿದ್ದೆ. ಕಂಪೋಸ್ ಮಾಡಿಕೊಂಡೋಗಿ ಫಸ್ಟ್ ಪ್ರೂಫ್ ಕೊಟ್ಟೆ. ಸುಮ್ಮನೆ ನನ್ನ ಮುಖ ನೋಡಿ, ‘ಹೆಂಗಿದೆಯೋ?’ ಅಂದ್ರು. ನಾನು ಏನನ್ನೂ ಮಾತಾಡಲಿಲ್ಲ. ‘ಓ, ತೇಜಸ್ವಿ ಫ್ಯಾನ್ ನೀನು...’ ಎಂದು ವಿಚಿತ್ರ ಮುಖಭಾವದಲ್ಲಿ ಕಿರುನಗೆ ನಕ್ಕರು. ನಗುವಿನಲ್ಲೂ ವ್ಯಂಗ್ಯವಿರುತ್ತೆ ಎಂದು ನನಗೆ ಗೊತ್ತಾಗಿದ್ದೇ ಅವತ್ತು.

ತೇಜಸ್ವಿಯವರೊಂದಿಗೆ ಮಾತನಾಡಬೇಕೆಂಬ ಮನಸ್ಸಿದ್ದರೂ ಮೇಷ್ಟ್ರ ವಿಮರ್ಶೆ ನನ್ನನ್ನು ಕಟ್ಟಿಹಾಕಿತ್ತು. ಮಾತು ನಿಂತುಹೋಗಿತ್ತು. ಅವರೂ ಅಷ್ಟೇ, ಮಾತಿನ ಅಗತ್ಯವಿಲ್ಲವೆನ್ನುವಂತೆ ಸುಮ್ಮನಾದರು. ಎಷ್ಟೋ ದಿನಗಳಾದ ಮೇಲೆ ಮತ್ತೆ ಮಾತು. ಅದೂ ಇದೂ ಮಾತಾಡಿದ ಮೇಲೆ, ‘ಅಲ್ಲಾ ಕಣೋ, ಅಣ್ಣನ ನೆನಪನ್ನು ಬರ‍್ಸದೋರೂ ಅವ್ರೆ... ಥೂ ಬಿಡು, ಅದರ ಬಗ್ಗೆ ಮಾತಾಡ್ಬಾರ‍್ದು ಅಂದ್ಕೊಂಡ್ರು ಬಂದ್‌ಬುಡ್ತು, ಬಿಡು...’ ಎಂದು ಸುಮ್ಮನಾದರು.

ಇಬ್ಬರ ನಡುವೆ ನಾನು- ಇದು ನನಗೆ ಬಯಸದೇ ಬಂದ ಭಾಗ್ಯ. ಅವರ ವಯಸ್ಸಿಗೆ, ವಿದ್ವತ್ತಿಗೆ, ಬುದ್ಧಿಗೆ, ಪ್ರತಿಭೆಗೆ, ಜನಪ್ರಿಯತೆಗೆ ಹೋಲಿಸಿಕೊಂಡರೆ ಗುಲಗಂಜಿ ಗಾತ್ರ ಕೂಡ ತೂಗದವ. ಆದರೂ ಅವರು ತೋರಿದ ಪ್ರೀತಿ, ತಿದ್ದಿದ ರೀತಿ ಮರೆಯಲಾಗದ್ದು. ಒಂದಂತೂ ಸತ್ಯ- ಇಂತಹ ಹಲವಾರು ಸಂಗತಿಗಳಿಗೆ, ಘಟನೆಗಳಿಗೆ ಅನಿವಾರ್ಯವಾಗಿ ಭಾಗಿಯಾಗುವಂತೆ ಮಾಡಿದ್ದು ಪತ್ರಿಕೆ. ಇವತ್ತು ತೇಜಸ್ವಿಯವರ ಹುಟ್ಟುಹಬ್ಬ ಎಂದಾಕ್ಷಣ ನೆನಪಾಗಿದ್ದು ಕೂಡ ಪತ್ರಿಕೆಯ ಆ ದಿನಗಳೇ.

(ಸೆಪ್ಟೆಂಬರ್ 8, 2009ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

ತೇಜಸ್ವಿ ತೇಲಿಹೋಗಿ ಇಂದು ಎರಡು ವರ್ಷ

ಎರಡು ವರ್ಷ- ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ಅವರು ‘ಇಲ್ಲ’ ಎನ್ನುವುದನ್ನು ನಂಬಲಿಕ್ಕೂ ಆಗುತ್ತಿಲ್ಲ. ಅವರಿದ್ದದ್ದೇ ಹಾಗೆ- ಸದ್ದಿಲ್ಲದೆ, ಸುದ್ದಿಯಾಗದೇ. ತಮ್ಮ ಪಾಡಿಗೆ ತಾವು ಗಿಡಗಂಟೆಕುಂಟೆಗಳ ನಡುವೆ. ಎರಡು ವರ್ಷಗಳ ಹಿಂದೆ, ಇದೇ ಏಪ್ರಿಲ್ ಐದರಂದು ದೂರದ ಮಲೆನಾಡಿನ ಮಡಿಲಿನಲ್ಲಿರುವ ಮೂಡಿಗೆರೆಯಿಂದ ಎದ್ದುಬಂದ ‘ತೇಜಸ್ವಿ ಇನ್ನಿಲ್ಲ’ ಎಂಬ ಸುದ್ದಿ ಕನ್ನಡಿಗರನ್ನು ಕ್ಷಣ ಖಿನ್ನತೆಗೆ ದೂಡಿತ್ತು. ಮೂಡಿಗೆರೆಯ ಮೂಲೆಯಲ್ಲಿ, ಮೂಡಿಗೆರೆಯ ಜನಕ್ಕೇ ಗೊತ್ತಿಲ್ಲದಂತೆ ಬದುಕುತ್ತಿದ್ದ ಬಿರಿಯಾನಿ ಕರಿಯಪ್ಪನನ್ನು ಕರ್ನಾಟಕಕ್ಕೇ ಪರಿಚಯಿಸಿದ ತೇಜಸ್ವಿ, ಕಾಕತಾಳೀಯವೆಂಬಂತೆ, ತಮ್ಮ ಕೊನೆಯ ಊಟಕ್ಕೆ ಆಯ್ಕೆ ಮಾಡಿಕೊಂಡದ್ದೂ ಕೂಡ ಬಿರಿಯಾನಿಯನ್ನೇ. ತೇಜಸ್ವಿಯವರ ವಿಶೇಷವಿದ್ದದ್ದೇ ಕರಿಯಪ್ಪನಂತಹ ಕ್ಯಾರೆಕ್ಟರ್‌ಗಳನ್ನು ಕಂಡಿರಿಸುವಲ್ಲಿ. ಕರ್ನಾಟಕಕ್ಕೆ ಪರಿಚಯಿಸುವಲ್ಲಿ.

ತೇಜಸ್ವಿಯವರ ವ್ಯಕ್ತಿತ್ವವೇ ಅಂಥಾದ್ದು. ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕುತ್ತಲೇ ತಮ್ಮ ಸೃಜನಶೀಲ ಪ್ರತಿಭೆಯನ್ನು ಹತ್ತು ಹಲವು ಕ್ಷೇತ್ರಗಳಲ್ಲಿ ಹರಿಯಬಿಟ್ಟವರು. ಉಡಾಫೆಯ ವ್ಯಕ್ತಿಯಂತೆ ಕಾಣುತ್ತಿದ್ದರೂ ತಮ್ಮ ಗಂಭೀರ ಸಂಸ್ಕೃತಿ ಚಿಂತನೆಗಳಿಂದ ಕನ್ನಡಿಗರ ಮನದಲ್ಲಿ ಛಾಪು ಒತ್ತಿದವರು. ಕೃಷಿ, ಕಾಡು, ಕಣಿವೆಗಳಲ್ಲಿ ಕಂಡುಂಡ ಅನುಭವದ್ರವ್ಯವನ್ನು ಬರಹಕ್ಕೆ ತಂದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು. ಸಮಾಜವಾದಿ ಹೋರಾಟ, ರೈತ ಸಂಘಟನೆ, ಪ್ರಗತಿಪರ ನೋಟ, ವೈಜ್ಞಾನಿಕ ವಿಶ್ಲೇಷಣೆಗಳನ್ನು ಸರಳ ಕನ್ನಡಕ್ಕಿಳಿಸಿ ಕನ್ನಡದ ಓದುಗ ವಲಯವನ್ನು ವಿಸ್ತರಿಸಿದವರು.

ಇಂತಹ ಸಂಸ್ಕೃತಿಕೇಂದ್ರಿತ ಲೇಖಕ ಈ ಕ್ಷಣದಲ್ಲಿ ಯಾಕೆ ನೆನಪಾದರೆಂದರೆ, ನಾನೂ ಕೂಡ ಅವರು ಕಂಡಿರಿಸಿದ ಕರಿಯಪ್ಪನಂತಹ ಕ್ಯಾರೆಕ್ಟರ್‌ಗಳಲ್ಲಿ ಒಬ್ಬನಾದ್ದರಿಂದ. ನಾನು ಅವರ ಬರಹಕ್ಕೆ ವಸ್ತುವಾಗಲಿಲ್ಲ, ವಶವಾದೆ. ಚನ್ನರಾಯಪಟ್ಟಣದಂತಹ ಪುಟ್ಟ ಊರಲ್ಲಿ ತೇಜಸ್ವಿಯವರ ಬರಹಗಳಿದ್ದ ‘ಪತ್ರಿಕೆ’ ಮಾರುತ್ತಾ, ಅವರು ಬರೆದದ್ದನ್ನು ಬೆರಗಿನಿಂದ ಓದುತ್ತಾ, ಕುವೆಂಪುರವರ ಮಗ ತೇಜಸ್ವಿಯನ್ನು ಬೆಟ್ಟದಂತೆ ಭಾವಿಸಿದವನು. ಮುಂದೊಂದು ದಿನ ಆ ಬೆಟ್ಟದೊಂದಿಗೆ ಬೆರೆಯುತ್ತೇನೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ. ಅದು ಕೈಗೂಡಲು ಕಾರಣ ಲಂಕೇಶರು ಮತ್ತವರ ಪತ್ರಿಕೆ.

ಲಂಕೇಶ್ ಪತ್ರಿಕೆಯ ಬಳಗದಲ್ಲಿ ತೇಜಸ್ವಿಯವರಿಗೆ, ಅವರ ಸಮಕಾಲೀನರಾದ ಲಂಕೇಶರು, ಶ್ರೀನಿವಾಸಗೌಡ್ರು, ರಾಮದಾಸ್, ಶ್ರೀರಾಮ್, ಎಚ್ಚೆಲ್ಕೆ ಸ್ನೇಹಿತರಾದರೆ, ಪತ್ರಿಕೆಯನ್ನು ರೂಪಿಸುತ್ತಿದ್ದ ಸಂಪಾದಕೀಯ ಬಳಗದಲ್ಲಿ ಸತ್ಯಮೂರ್ತಿ ಆನಂದೂರು ಅವರನ್ನು ಕಂಡರೆ ಹೆಚ್ಚು ಇಷ್ಟ. ಸತ್ಯಮೂರ್ತಿಯವರ ಸಂಕೋಚ ಸ್ವಭಾವ, ವಸ್ತುನಿಷ್ಠ ಬರವಣಿಗೆ, ಪ್ರಾಮಾಣಿಕತೆ, ಪತ್ರಿಕೆಯನ್ನು ಪ್ರಾಣದಂತೆ ಪ್ರೀತಿಸುತ್ತಿದ್ದ ಪರಿ ತೇಜಸ್ವಿಯವರಿಗೆ ಇಷ್ಟವಾಗಿರಬಹುದು. ಮಲೆನಾಡಿನವರು ಎಂಬ ಕಾರಣಕ್ಕೆ ಅದು ಇನ್ನಷ್ಟು ಇಂಟಿಮೆಸಿಗೆ ಕಾರಣವಾಗಿರಲೂಬಹುದು. ಅಂತೂ ಸತ್ಯಮೂರ್ತಿಯವರೊಂದಿಗೆ ತೇಜಸ್ವಿಯವರಿಗೆ ನಿಕಟ ಸಂಪರ್ಕವಿತ್ತು. ಸತ್ಯಮೂರ್ತಿಯೂ ಅಷ್ಟೆ, ತೇಜಸ್ವಿಯವರನ್ನು ಬಹಳವಾಗಿ ಮೆಚ್ಚುತ್ತಿದ್ದರು.

ಆ ಸಂದರ್ಭವೇ ಅಂತಹ ಒಂದು ಸಹಮನಸ್ಕ ಗುಂಪಿನ ಸೃಷ್ಟಿಗೆ ಕಾರಣವಾಗಿತ್ತು. ಲಂಕೇಶರ ಪ್ರಚಂಡ ಪ್ರತಿಭೆಯ ಅನಾವರಣ, ಅದಕ್ಕೆ ಪತ್ರಿಕೆಯ ಬಳಗದ ಅತ್ಯುತ್ಸಾಹದ ಹುಮ್ಮಸ್ಸು, ಪ್ರಜ್ಞಾವಂತ ಓದುಗ ವಲಯದ ಬೆಂಬಲ, ಪರಾಕಾಷ್ಠೆ ತಲುಪಿದ್ದ ಪತ್ರಿಕೆಯ ಪ್ರಸಾರ... ಒಂದು ರೀತಿಯಲ್ಲಿ ಕೃಷ್ಣದೇವರಾಯನ ಕಾಲದ ಸುವರ್ಣಯುಗ.

ಸುವರ್ಣಯುಗಕ್ಕೂ ಒಂದು ಕಾಲಘಟ್ಟವಿರುವಂತೆ, ಯಾವುದೋ ಕ್ಷುಲ್ಲಕ ಕಾರಣಕ್ಕೆ ಇದ್ದಕ್ಕಿದ್ದಂತೆ ಸತ್ಯಮೂರ್ತಿ ಪತ್ರಿಕೆ ಬಿಟ್ಟರು. ಗುಬ್ಬಿ, ಪಂಜು, ಕಂಪೋಸಿಟರ್‌ಗಳು ಅವರನ್ನು ಹಿಂಬಾಲಿಸಿದರು. ಪತ್ರಿಕೆ ಎಂದರೆ ಸತ್ಯ-ಗುಬ್ಬಿ ಎಂಬಂತಿದ್ದ, ಜೀವಚೈತನ್ಯದಂತೆ ಕಂಗೊಳಿಸುತ್ತಿದ್ದ ಕಚೇರಿ ಇದ್ದಕ್ಕಿದ್ದಂತೆ ಖಾಲಿ. ಬಿಕೋ ಎನ್ನತೊಡಗಿತು. ಅನುಮಾನಗಳು, ಅಪನಂಬಿಕೆಗಳು ವಿಜೃಂಭಿಸಿದವು. ಮನಸುಗಳು ಮುರಿದುಬಿದ್ದವು. ಇಂತಹ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದ, ಲಂಕೇಶರನ್ನು ಕಂಡರಾಗದ ಕೆಲವರು ಪರಿಸ್ಥಿತಿಯ ಲಾಭ ಪಡೆದರು. ಸಾರ್ವಜನಿಕ ವಲಯದಲ್ಲಿ ಲಂಕೇಶರು ಸರ್ವಾಧಿಕಾರಿಯಂತೆ ಕಾಣತೊಡಗಿದರು. ಲಂಕೇಶರಿಂದ, ಪತ್ರಿಕೆಯಿಂದ ಮೊದಲೇ ದೂರವಿದ್ದ ತೇಜಸ್ವಿಯವರು, ಕೆಲಸಗಾರರ ನಿರ್ಗಮನದಿಂದಾಗಿ ಇನ್ನಷ್ಟು ದೂರವಾದರು. ದೂರವಾದರು ಎನ್ನುವುದಕ್ಕಿಂತ ಸೈಲೆಂಟಾದರು ಎಂದರೆ ಸೂಕ್ತವೇನೋ. ಆದರೆ, ‘ಪತ್ರಿಕೆಗೆ’ ಬರೆಯುವುದನ್ನು ಮುಂದುವರೆಸಿದರು. ಹಾಗೆಯೇ ಬೆಂಗಳೂರಿಗೆ ಬಂದಾಗ ಪತ್ರಿಕೆಯ ಕಚೇರಿಗೆ ಬಂದು, ಅಪರೂಪಕ್ಕೆ ಒಂದು ಗ್ಲಾಸ್ ಬಿಯರ್ ಕುಡಿದು ಹರಟೆ ಹೊಡೆದು ಹೋಗುತ್ತಿದ್ದುದೂ ಉಂಟು.

ಲಂಕೇಶ್ ಮತ್ತು ತೇಜಸ್ವಿ- ಇಬ್ಬರೂ ಒಳ್ಳೆಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಲಂಕೇಶರು ಪತ್ರಿಕೆ ಮಾಡಿದಾಗ ಬರೆದಿದ್ದಾರೆ. ಪ್ರಗತಿರಂಗ ಮಾಡಿದಾಗ ಅವರ ಜೊತೆ ಊರೂರು ಅಲೆದು, ಸಭೆಗಳಿಗೆ ಸೇರುತ್ತಿದ್ದ ಮೂರು ಮತ್ತೊಂದು ಜನಕ್ಕೆ ಭಾಷಣ ಮಾಡಿದ್ದಾರೆ. ಹಾಗೆಯೇ ತೇಜಸ್ವಿಯವರು ಬರೆದದ್ದೆಲ್ಲವನ್ನೂ ಲಂಕೇಶರು ಪ್ರಕಟಿಸಿದ್ದಾರೆ. ಬರೆದದ್ದೆಲ್ಲವನ್ನೂ ಅಂತ ಯಾಕೆ ಇಲ್ಲಿ ಒತ್ತಿ ಹೇಳುತ್ತಿದ್ದೇನೆಂದರೆ, ತೇಜಸ್ವಿಯವರು ಕೆಲವು ಸಲ ಅತಿ ಅನ್ನಿಸುವಷ್ಟು ಕಾಫಿ ಬೆಳೆಯ ಬಗ್ಗೆ, ಬೆಳೆಗಾರರ ತೊಂದರೆಗಳ ಬಗ್ಗೆ ಬರೆಯುತ್ತಿದ್ದರು. ಅದನ್ನು ನೋಡಿ ಲಂಕೇಶರು, ‘ಜಾಸ್ತಿ ಆಯ್ತು, ಇರಲಿ ಹಾಕು...’ ಎನ್ನುತ್ತಿದ್ದರು.

ತೇಜಸ್ವಿ, ರಾಜೇಶ್ವರಿ, ಕಿವಿಹಾಗೆಯೇ ಪತ್ರಿಕೆಯ ಕಚೇರಿಯೊಳಗಡೆ ನಡೆಯುವ ಕೆಲವು ಬದಲಾವಣೆಗಳಿಗೂ ತೇಜಸ್ವಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಇಬ್ಬರೂ ತಮ್ಮೆಲ್ಲ ವೈಯಕ್ತಿಕ ರಾಗ-ದ್ವೇಷಗಳನ್ನು ಬದಿಗೊತ್ತಿ ಓದುಗರಿಗಾಗಿ ಬರೆಯುತ್ತಿದ್ದರು ಎನ್ನುವುದು ನನ್ನ ಗ್ರಹಿಕೆ. ಈ ಸಮಯದಲ್ಲಿಯೇ ಅವರೊಂದಿಗೆ ಫೋನು, ಪತ್ರಗಳ ಒಡನಾಟ ಗರಿಗೆದರಿತು. ಅದಕ್ಕೆಲ್ಲ ಸೇತುವೆಯಂತೆ ಪತ್ರಿಕೆಯೂ ಇತ್ತು. ಒಂದು ಸಲ ತೇಜಸ್ವಿ ಯಾವುದೋ ಒಂದು ಕುದುರೆಹುಳುವಿನಂತಹ ಕೀಟದ ಬಗ್ಗೆ ಬರೆದಿದ್ದರು. ಬರೆದು ಪೋಸ್ಟ್ ಮಾಡಿದ ಮೇಲೆ ಒಂದು ಫೋನ್,

‘ಏನಯ್ಯಾ, ಬಂತೇನಯ್ಯಾ... ಆ ಆರ್ಟಿಕಲ್‌ಗೆ ಚಿತ್ರ ಹಾಕ್ಬೇಕ್ ಕಣೋ, ಅದನ್ನ ನಾನು ಟ್ರೇಸಿಂಗ್ ಪೇಪರ್ ಮೇಲೆ ಪ್ರಿಂಟ್ ತೆಗೆದು ಕಳ್ಸಿದೀನಿ, ಮತ್ತೇನೂ ಪಾಸಿಟಿವ್ ಮಾಡ್ಸಕೋಗಬೇಡಿ, ಪೇಜ್ ಲೇಔಟ್‌ನಲ್ಲಿ ಜಾಗ ಬಿಟ್ಟು ಅಲ್ಲಿಗೆ ಅಂಟಿಸಿದ್ರಾಯ್ತು...’ ಹೀಗೆ ಪ್ರತಿಯೊಂದನ್ನೂ ಹೇಳುತ್ತಿದ್ದರು.

ತೇಜಸ್ವಿ ಟ್ರೇಸಿಂಗ್ ಪೇಪರ್‌ನಲ್ಲಿ ಕಳುಹಿಸಿದ್ದ ಚಿತ್ರ ಹಾರಿಜಾಂಟಲ್-ವರ್ಟಿಕಲ್... ಯಾವ ಕಡೆಯಿಂದ ನೋಡಿದರೂ ತಲೆಬುಡ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಆ ಕೀಟದ ಇಡೀ ದೇಹ ಕಡ್ಡಿಯಂತಿದ್ದು ತಲೆ ಮತ್ತು ಬುಡ ಮಾತ್ರ ಎರಡು ಗುಂಡುಗಳನ್ನು ಹೊಂದಿತ್ತು. ಒಂದು ಅಂದಾಜಿನ ಮೇಲೆ ಅಂಟಿಸಿದ್ದೆ.

ಪತ್ರಿಕೆ ಬಂತು, ಹಾಗೆಯೇ ಮೂಡಿಗೆರೆಯಿಂದ ನನಗೊಂದು ಪತ್ರವೂ... ಆ ಪತ್ರ ಹೇಗಿತ್ತೆಂದರೆ... ಲಂಕೇಶರೊಂದಿಗಿನ ಅಸಮಾಧಾನವನ್ನು, ಸತ್ಯಮೂರ್ತಿ ಬಿಟ್ಟ ಸಿಟ್ಟನ್ನು, ನನ್ನಂತಹ ಅಡ್ಡಕಸುಬಿಗಳ ಕೈಯಿಂದಾದ ಅನಾಹುತವನ್ನು, ಅಂತಹ ಪತ್ರಿಕೆಗೆ ಅವರು ಬರೆಯಬೇಕಾಗಿ ಬಂದಿರುವ ದುಸ್ಥಿತಿಯನ್ನು- ಒಟ್ಟಿಗೇ ಹೇಳಿದಂತಿತ್ತು. ಅದು ನನಗೆ ನಿಜಕ್ಕೂ ಪಾಠವಾಗಿತ್ತು. ಸ್ಥಾನದ ಜವಾಬ್ದಾರಿಯ ಬಗ್ಗೆ ತಿಳಿಹೇಳುತ್ತಲೇ ಮರ್ಮಕ್ಕೆ ತಾಕುವಂತಿತ್ತು. ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸಿತ್ತು. ಆದರೆ ಅದಷ್ಟೆ, ಲಂಕೇಶರಿಗೂ ಆ ಬಗ್ಗೆ ತಿಳಿಸಲಿಲ್ಲ.

ನಾನೇ ಧೈರ್ಯ ಮಾಡಿ ಫೋನ್ ಮಾಡಿದೆ, ‘ಅಲ್ಲಾ ಕಣೋ... ಒಂದ್ ಚಿತ್ರ ಅಂದಾಜ್ ಮಾಡಕ್ಬರಲ್ಲ ಅಂದ್ರೆ... ಏನೇಳದೋ... ಇನ್ನೊಂದ್ಸಲ ಅಂತ ತಪ್ಪು ಮಾಡಿದ್ಯೋ... ಅಲ್ಲಿಗೇ ಬಂದ್ ಕಾಲ್ ಮುರಿತಿನಿ...’ ಎಂದು ಧಮ್‌ಕಿ ಹಾಕಿದ್ದರು. ಆ ಸಿಟ್ಟೂ ಅಷ್ಟೇ, ಆ ಕ್ಷಣಕ್ಕೆ. ಮತ್ತದೇ ಆತ್ಮೀಯತೆ.

ತೇಜಸ್ವಿಯವರಿಗೆ ಕಂಪ್ಯೂಟರ್ ಬಳಕೆ ಚೆನ್ನಾಗಿ ತಿಳಿದಿತ್ತು. ಕನ್ನಡಕ್ಕೆ ಕನ್ನಡದ್ದೇ ಆದ ಒಂದು ಫಾಂಟ್ ಪ್ಯಾಕೇಜ್ ಇಲ್ವಲ್ಲ ಎಂಬ ಬಗ್ಗೆ ಭಾರೀ ಕೊರಗಿತ್ತು. ಆ ಬಗ್ಗೆ ತುಂಬುಕಾಳಜಿಯಿಂದ ಮಾತನಾಡುತ್ತಿದ್ದರು. ಅವರ ಕಂಪ್ಯೂಟರ್ ಕೈ ಕೊಟ್ಟಾಗ, ಅವರು ಕಳುಹಿಸಿದ್ದು ನಮಗೆ ಸಿಕ್ಕದೆ ಫೋನ್ ಮಾಡಿ ತೊಂದರೆ ಕೊಡುವಾಗ, ಕಂಪ್ಯೂಟರ್ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಿದೆ.

‘ನೋಡೋ ಬೇರೆ ಭಾಷೆಯ ಜನ ಆಗಲೇ ಅವರ ಭಾಷೆಯ ಯೂನಿಫಾರ್ಮ್ ಫಾಂಟ್ ಕ್ರಿಯೇಟ್ ಮಾಡಿ, ಎಲ್ಲರೂ ಒಂದೇ ಕೀಬೋರ್ಡ್ ಬಳಸುವಂತಹ ಪ್ಯಾಕೇಜ್ ಮಾಡ್ಕೊಂಡಿದ್ದಾರೆ. ಇಲ್ಲಿ ನಿಂದೇ ಬೇರೆ, ನಂದೇ ಬೇರೆ, ಒಂದಕ್ಕೊಂದು ಸಂಬಂಧಾನೆ ಇಲ್ಲ. ನೋಡಿದ್ರೆ, ಇನ್ಫೋಸಿಸ್, ವಿಪ್ರೋಗಳಂತಹ ಘಟಾನುಘಟಿಗಳೇ ಕರ್ನಾಟಕದಲ್ಲವ್ರೆ. ಆದರೆ ಅವರ್‍ಯಾರೂ ಕನ್ನಡ ಭಾಷೆ, ಅದಕ್ಕೊಂದು ಪ್ಯಾಕೇಜ್ ಬೇಕು ಅಂತ ಯೋಚಿಸ್ತಾನೇ ಇಲ್ವಲ್ಲೋ... ಕೇಳೋರು ಯಾರು ಇಲ್ಲ. ಛೇ, ಎಂಥ ದರಿದ್ರ ದೇಶನಯ್ಯ ಇದು, ಆ ಕಂಬಾರ್ರು ಏನ್ ಮಾಡ್ತಿದಾರೋ, ಇಸ್ಮಾಯಿಲ್ ಏನೋ ಹೇಳಿದ್ದ, ಓಡಾಡ್ತಿದೀನಿ ಅಂತ... ಏ ನೀವೂ ಅಷ್ಟೇ, ಕತ್ತೆಗಳು, ಅದೇನ್ ಮೆಟೀರಿಯಲ್ ಸಿಕ್ಕುತ್ತೋ ಅದನ್ನು ತಗೋಂಡೋಗಿ ಕಂಬಾರ್ರಿಗೆ ಕೊಟ್ಟು ಹೌಸಲ್ಲಿ ಚರ್ಚೆಯಾಗುವಂತೆ ಮಾಡ್ರಯ್ಯ...’ ಹೀಗೆ ಸಮಯ ಸಿಕ್ಕಾಗಲೆಲ್ಲ ಹೇಳೋರು. ಇವತ್ತು ಕನ್ನಡ ತಂತ್ರಾಂಶ ನುಡಿ ಏನಾದ್ರು ಈ ಮಟ್ಟಕ್ಕೆ ಎಲ್ಲರಿಗೂ ಉಚಿತವಾಗಿ ಸಿಕ್ತಾಯಿದೆ ಅಂದ್ರೆ, ಅದರ ಹಿಂದೆ ತೇಜಸ್ವಿಯವರ ಶ್ರಮವೂ ಸ್ವಲ್ಪ ಇದೆ ಅಂತಾನೇ ಅರ್ಥ.

ನಾನು ಅವರಿಗೆ ಯಾವಾಗ ಫೋನ್ ಮಾಡಿದರೂ ಅಥವಾ ಅವರೇ ಮಾಡಿದರೂ, ಮಾತಿನ ಕೊನೆಯಲ್ಲಿ, ‘ಏಯ್, ಆ ಸತ್ಯಮೂರ್ತಿ ಏನ್ಮಾಡ್ತಿದಾನೋ, ನಿನಗೇನಾದ್ರು ಸಿಗ್ತನೇನೋ, ನಿಮ್ದೆಲ್ಲ ಒಂದೇ ಕಡೆಯಂತಲ್ಲೋ ಮನೆ, ಫೋನ್ ಮಾಡಕ್ಕೇಳೋ...’ ಎನ್ನುವ ಒಂದು ಮಾತು ಇದ್ದೇ ಇರುತ್ತಿತ್ತು. ಸತ್ಯಮೂರ್ತಿ ಬಗ್ಗೆ ಅದೇನೋ ಅವ್ಯಕ್ತ ಪ್ರೀತಿ. ಆ ಬೆಂಗಳೂರು ಅವನಂಥವನಿಗಲ್ಲ ಅನ್ನುವ ಆತಂಕ ಅವರ ಪ್ರತಿ ಮಾತಿನಲ್ಲೂ ಧ್ವನಿಸುತ್ತಿತ್ತು. ಅದು ಎಲ್ಲಿಯವರೆಗೆಂದರೆ, ಅವರು ಸಾಯಲಿಕ್ಕೆ ನಾಲ್ಕು ತಿಂಗಳು ಇರುವಾಗ, ಡಿಸೆಂಬರ್ ೨೦೦೬ರಲ್ಲಿ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಅವರ ಮಗಳ ಮನೆಯಲ್ಲಿ ಸಿಕ್ಕ ಕೊನೆಯ ಭೇಟಿಯಲ್ಲೂ...

ಇದನ್ನೆಲ್ಲ ನೋಡಿದ್ದ ನಾನು, ಸತ್ಯಮೂರ್ತಿಗೆ, ‘ಏನ್ ಧಣಿ ನಿಮ್ ಕಂಡ್ರೆ ಅಷ್ಟೊಂದ್ ಪ್ರೀತಿ ತೇಜಸ್ವಿಗೆ...’ ಅಂತಂದ್ರೆ ಸಾಕು... ಸತ್ಯಮೂರ್ತಿಯೂ ಅಷ್ಟೇ... ಮಾಯಾಲೋಕದೊಳಕ್ಕೆ ಮುಳುಗಿಬಿಡುತ್ತಿದ್ದರು, ಮೂಡಿಗೆರೆಗೇ ಹೋಗಿಬಿಡುತ್ತಿದ್ದರು. ಆ ಬಹುಮುಖ ವ್ಯಕ್ತಿತ್ವದೊಂದಿಗಿನ ಒಡನಾಟವನ್ನು ವಿವರಿಸುತ್ತ ಹಗುರಾಗುತ್ತಿದ್ದರು. ಅಂತಹದ್ದೊಂದು ಘಟನೆ ಇಲ್ಲಿದೆ... ಸತ್ಯಮೂರ್ತಿ ಬಾಯಲ್ಲಿಯೇ ಕೇಳಿ...

‘ಒಂದ್ ಸಲ ಏನಾಯ್ತು ಅಂದ್ರೆ... ಲಂಕೇಶ್ ಪತ್ರಿಕೆ ಬಿಟ್ಟಿದ್ದೆ, ಈ ವಾರ ಮಾಡಿ ಕೈ ಸುಟ್ಟುಕೊಂಡಿದ್ದೆ, ಮೂಡಿಗೆರೆಗೆ ಹೋಗಿ ಅವರ ಮುಂದೆ ನಿಂತೆ.
‘ಕೆಲ್ಸಿಲ್ಲ ಕಾರ್ಯಿಲ್ಲ ಅಂದ್ಮೇಲೆ ಆ ಬೆಂಗಳೂರಲ್ಲಿ ಬದುಕಾಯ್ತದೇನೋ, ಊರಲ್ಲೆ ಗೇಯಕ್ಕಾಗದಿಲ್ವ...’ ಅಂದ್ರು.

ಅದಕ್ಕೆ ನಾನು ‘ಹಂಗೇನಿಲ್ಲ, ಟಿವಿ ಸೀರಿಯಲ್‌ಗೆ ಡೈಲಾಗ್ ಬರೀತಿದೀನಿ’ ಅಂದೆ.
ಅದಕ್ಕವರು, ‘ಎಷ್ಟು ಕೊಡ್ತರೆ’ ಅಂದ್ರು.
ನಾನು ‘ಒಂದು ಎಪಿಸೋಡ್‌ಗೆ ಏಳುನೂರು ಐವತ್ರುಪಾಯಿ ಕೊಡ್ತರೆ’ ಅಂದೆ... ಥಟ್ ಅಂತ ಏನ್ನೋ ಜ್ಞಾಪಿಸಿಕೊಂಡವರಂತೆ,
‘ಹರಿವಾಣ ನೋಡಿದಿಯೇನೋ...’ ಅಂದ್ರು. ನಾನು ಒಂದು ಕ್ಷಣ ತಲೆಬಿಸಿಯಾಗಿ ಯೋಚಿಸುತ್ತಾ ನಿಂತೆ,
‘ಹರಿವಾಣ ಕಣೋ, ನಮ್ಮಲ್ಲೆಲ್ಲೋ ಅಟ್ಟದ ಮೇಲೆ ಬಿದ್ದಿರಬೇಕು ತಕ್ಕೊಡ್ತಿನಿರು, ತಗಂಡು ಹುಣಸೇಹಣ್ಣಾಕಿ ಚೆನ್ನಾಗಿ ಉಜ್ಜಬೇಕು, ಹ್ಯಂಗ್ ಉಜ್ಜಬೇಕಂದ್ರೆ ಫಳ ಫಳ ಹೊಳಿಬೇಕು, ಮುಖ ಕಾಣ್ಬೇಕು... ಹಂಗ್ ಉಜ್ಜಬೇಕು...

ಮತ್ತೂ ತಲೆಕೆಟ್ಟೋಯಿತು. ಒಂದಕ್ಕೊಂದ್ ಸಂಬಂಧಾನೆ ಇಲ್ಲದಂಗ್ ಮಾತಾಡ್ತರಲ್ಲ ಅನ್ನಿಸಿತು.

‘ಯಾವುದೋ ಒಂದ್ ಬಾರ್ ಮುಂದೆನೊ, ಹೋಟೆಲ್ ಪಕ್ಕದಲ್ಲೊ ಬಣ್ಣದ್ ಛತ್ರಿ ಬಿಚ್ಚಿ ಹರಿವಾಣ ಇಟ್ಕಂಡು ನಿಂತ್ಕಂಡೆ ಅನ್ನು... ದಿನಕ್ಕೆ ಐನೂರು ಬೀಡಾ ಹೋಗ್ಲೇಳೋ... ಒಂದಕ್ಕೆ ಎರಡ್ರೂಪಾಯಿ ಸಿಕ್ಕಿದ್ರು... ಒಂದ್ ಸಾವ್ರಾಯ್ತು... ಮುಠ್ಠಾಳ ಹದ್ನೈದು ಪುಟ ಬರ್‍ದು ಏಳ್ನೂರ್ರುಪಾಯಿ ಈಸ್ಕತನಂತೆ... ಹೋಗ್ ಹೋಗೋ...

ಕಡಲ ತೆರೆಗಳ ಮುಂದೆ ತೇಜಸ್ವಿ‘ಅಂದ್ರೆ, ಬೀಡಾ ಮಾರು ಅಂತೇಳ್ತಿದೀರಾ...’
‘ಯಾಕೆ ಬರ್‍ದೆ ಬದುಕ್ಬೇಕು ಅಂತೇನಾದ್ರು ಹೇಳಿಕೊಂಡು ಹುಟ್ಟಿದ್ದೀಯಾ...’
‘......’
‘ಈ ಜೀತಕ್ಕಿಂತ ಅದೇ ಎಷ್ಟೋ ವಾಸಿ, ಯೋಚ್ನೆ ಮಾಡೇಳು, ಅಟ್ಟದ ಮೇಲೈತೆ ಹುಡಿಕ್ಕೊಡ್ತಿನಿ...’

ಇಂತಹ ಹಲವಾರು ಘಟನೆಗಳು ತೇಜಸ್ವಿಯವರ ಒಡನಾಟದಲ್ಲಿ ಹಲವರ ಅನುಭವಕ್ಕೆ ಬಂದಿರಬಹುದು. ಅಂತಹ ಅನುಭವಗಳನ್ನೇ ತೇಜಸ್ವಿಯವರು ತಮ್ಮ ಸೃಜನಶೀಲ ಕುಲುಮೆಗೆ ಹಾಕಿ ಕುದಿಸಿ, ಅದರಿಂದ ಬಂದ ಅನುಭವದ್ರವ್ಯವನ್ನು ಕನ್ನಡಿಗರಿಗೆ ಕೊಡುತ್ತಿದ್ದರು. ಕೊಡುತ್ತಲೇ ಹೊಸ ದಿಗಂತದ ನೆಲೆಯನ್ನು ವಿಸ್ತರಿಸಿದರು. ಇಂತಹ ತೇಜಸ್ವಿ ಈಗಲೂ ಇದ್ದಾರೆ- ಮಲೆನಾಡಿನ ಕಾಡು ಕಣಿವೆಗಳಲ್ಲಿ, ಬಿರಿಯಾನಿ ಕರಿಯಪ್ಪನಲ್ಲಿ, ಮೂಡಿಗೆರೆಯ ಮಂದಣ್ಣನಲ್ಲಿ, ಬದಲಾವಣೆ ಬಯಸುವ ಮನಸ್ಸುಗಳಲ್ಲಿ, ಕನ್ನಡಿಗರ ಮನದಲ್ಲಿ... ಇಂದಿಗೂ ಎಂದೆಂದಿಗೂ.
(ಏಪ್ರಿಲ್ 4, 2009ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

ಲಂಕೇಶರೂ ಮತ್ತು ನಾರಿಯರೂ



ಸಮಯ ಸಿಕ್ಕಾಗಲೆಲ್ಲ ಲಂಕೇಶರು ಅವರ ಹತ್ತಾರು ಪ್ರೇಯಸಿಯರ ಬಗ್ಗೆ ಪತ್ರಿಕೆಯಲ್ಲಿ ಕೆಲವು ಸಲ ಪುಟ್ಟದಾಗಿ, ಹಲವು ಸಲ ಪುಟಗಟ್ಟಲೆ ಕತೆಯಾಗಿ ಬರೆದಿದ್ದಾರೆ. ಡಿಸೆಂಬರ್ ೩೧ರ ರಾತ್ರಿ, ತೋಟದ ಮನೆಯ ಪಾರ್ಟಿಯಲ್ಲಿ, ತಮ್ಮನ್ನು ರಾವಣನಿಗೆ ಹೋಲಿಸಿಕೊಂಡು, ‘ಇಲ್ಲಿ ಮಂಡೋದರಿಯೂ ಇದ್ದಾಳೆ, ಸೀತೆಯರೂ ಇದ್ದಾರೆ' ಎದುರೆದುರಿಗೇ ಹೇಳಿದ್ದು ಇದೆ. ಆಮೇಲೆ ‘ಹುಳಿಮಾವಿನಮರ' ಪುಸ್ತಕದಲ್ಲಿ ಎಷ್ಟು ಹೇಳಬೇಕೋ ಅಷ್ಟನ್ನು ಅಂದಗೆಡದಂತೆ ಅರುಹಿದ್ದೂ ಆಗಿದೆ. ಅಂದಮೇಲೆ, ಅವರ ಪ್ರೇಯಸಿಯರನ್ನು ಕುರಿತು ಹೇಳಲು ಇನ್ನೇನಿದೆ?

ಅಷ್ಟಕ್ಕೂ ಲಂಕೇಶರ ವಯಸ್ಸಿನಲ್ಲಿ ಅರ್ಧ ವಯಸ್ಸಿನವನು ನಾನು. ಆದರೆ, ಲಂಕೇಶರು ಎಂದೂ ಇವನು ಚಿಕ್ಕವನು, ಇವನ ಮುಂದೆ ಇದನ್ನು ಮಾತನಾಡಬಾರದು, ಇದನ್ನು ಮಾಡಬಾರದು ಎಂಬ ಬಿಗುಮಾನಕ್ಕೆ ಒಳಗಾದವರಲ್ಲ. ಅಥವಾ ಈ ಪುಟ್ಟ ಹುಡುಗರಿಗೆ ಇದೆಲ್ಲ ಗೊತ್ತಾದರೆ, ಅವರ ಮುಂದೆ ನಾನು ಚಿಕ್ಕವನಾಗಿ ಕಾಣುತ್ತೇನೆ, ಅವರು ನನ್ನನ್ನು ಕೀಳಾಗಿ ಕಾಣಬಹುದು ಎಂದು ಯೋಚಿಸಿದವರೂ ಅಲ್ಲ. ಅವರು ನಮಗರ್ಥವಾಗಿದ್ದರು, ನಾವು ಅವರಿಗರ್ಥವಾಗಿದ್ದೊ, ಅಷ್ಟೆ.

ಒಂದು ಮಂಗಳವಾರ, ಪತ್ರಿಕೆ ಮಾರುಕಟ್ಟೆಗೆ ಬಂದಿದೆ, ಕೆಲಸವಿಲ್ಲ. ಆದರೂ ಆಫೀಸಿಗೆ ಹೋಗದಿದ್ದರೆ ಜೀವವೇ ಹೋಗುತ್ತೇನೋ ಎಂಬಂತೆ, ಹೋಗಿ ಪೇಪರ್ ಓದುತ್ತಾ ಕೂತೆ. ಜೊತೆಗೆ ನಮ್ಮ ಪ್ರೀತಿಯ ಗಿರಿಯ ಕಾಫಿಯೂ ಇತ್ತು. ಮೇಷ್ಟ್ರು ಬಂದ್ರು, ನನ್ನತ್ತ ನೋಡಿ ರೂಮಿಗೆ ಹೋದರು. ಹತ್ತೇ ಹತ್ತು ನಿಮಿಷಗಳಲ್ಲಿ ಒಂದು ಫೋನ್ ಬಂತು, ಗಿರಿ ಮುಖ ನೋಡಿದೆ, ಆತ ಮೇಷ್ಟ್ರಿಗೆ ಅನ್ನುವಂತೆ ಸನ್ನೆ ಮಾಡಿ ಅವರಿಗೆ ಕನೆಕ್ಟ್ ಮಾಡಿದ. ಅವರು ಮಾತಾಡಿ, ಫೋನಿಟ್ಟು, ಹೊಟ್ಟೆ ಮೇಲೆ ಕೈಯಾಡಿಸುತ್ತ ನಾನು ಕುಳಿತಿದ್ದಲ್ಲಿಗೆ ಬಂದರು. ಮುಖದಲ್ಲಿ ಕೀಟಲೆ ಕುಣಿಯುತ್ತಿತ್ತು. ಮಾತಿಲ್ಲ. ನನ್ನ ನೋಡಿ ಪೊದೆಯಂತಹ ಹುಬ್ಬುಗಳನ್ನು ಪ್ರಶ್ನಾರ್ಥಕ ಚಿಹ್ನೆಗಳಂತೆ ಹಾರಿಸುತ್ತ, ಅದೇ ಪ್ರಶ್ನೆ ಎಂದು ಅರ್ಥ ಮಾಡಿಕೊಳ್ಳುವಂತೆ, ನಾನೇ ಏನು ಎಂದು ಕೇಳುವಂತೆ ಪ್ರೇರೇಪಿಸತೊಡಗಿದರು.

ಅಷ್ಟು ವರ್ಷಗಳ ಒಡನಾಟದಿಂದಾಗಿ ನನಗೂ ಅವರ ಜೊತೆ ಮಾತು-ಕತೆ ಸರಾಗವಾಗಿತ್ತು. ಅವರೂ ನನಗೆ ಮುಚ್ಚಿಟ್ಟು ಮಾಡುವುದೇನೂ ಇಲ್ಲ ಎಂಬ ಹಂತಕ್ಕೆ ಬಂದಿದ್ದರು. ಹಾಗಾಗಿ ನಾನು, ‘ಯಾರ್ ಸಾರ್' ಅಂದೆ. ಮತ್ತೆ ಮಾತಿಲ್ಲ. ತುಟಿಯನ್ನು ಬಿಗಿಯಾಗಿ ಬಂದ್ ಮಾಡಿಕೊಂಡು, ಭುಜ ಕುಣಿಸಿದರು. (ಹಾಲಿವುಡ್ ಸಿನಿಮಾಗಳಲ್ಲಿನ ನಟರಂತೆ!)
ಮತ್ತೆ ನಾನೇ, ‘ಯಾರ್ ಸಾರ್, ಏನಂತೆ' ಅಂದೆ.
ಮುಖದಲ್ಲಿ ತಿಳಿನಗೆಯಿತ್ತು, ‘ಅವುಳ್ ಬತ್ತಳಂತೆ, ಏನ್ಮಾಡದೋ...' ಅಂದರು.
ಸಮಯ ಸಂದರ್ಭದ ಅರಿವಾಗಿ, ‘ಸರಿ, ಹಾಗಾದ್ರೆ ನಾನ್ ಬರ್ತಿನಿ' ಅಂದು ಎದ್ದುಹೋದೆ. ತಲೆಯಲ್ಲಿ ಮೇಷ್ಟ್ರು ಅಂದ ‘ಏನ್ಮಾಡದೋ...' ಕೊರೆಯುತ್ತಲೇ ಇತ್ತು. ಅಷ್ಟಕ್ಕೂ ಅವರ ಪ್ರೇಯಸಿ, ಅದು ಅವರ ಕಷ್ಟ, ನನಗ್ಯಾಕೆ ಎಂದು ಬೀದಿಗೆ ಬಿದ್ದಾಕ್ಷಣ ಮನಸ್ಸು ಬೀದಿಯ ಚಿತ್ರಗಳಲ್ಲಿ ಚೆಲ್ಲಾಡಿಕೊಂಡಿತು. ಎಲ್ಲಿಗೆ ಹೋಗಲಿ, ಒಂದು ರೌಂಡ್ ಹಾಕಿ, ಒಂದೂವರೆಗೆ ಮತ್ತೆ ಆಫೀಸಿಗೇ ಬಂದೆ. ಮೇಷ್ಟ್ರು ಕೊಂಚ ಮಂಕಾಗಿದ್ದರು. ಬೆಳಗ್ಗೆ ನನ್ನ ರೇಗಿಸಿದ್ದು ನೆನಪಾಗಿ, ಅವರನ್ನೂ ರೇಗಿಸಬೇಕೆಂಬ ಆಸೆಯಾಗಿ, ‘ಏನ್ಮಾಡದ್ರಿ ಸಾರ್...' ಅಂದೆ.
ದೇಹ ಮತ್ತು ದನಿ ಕುಗ್ಗಿತ್ತು. ಇವನು ಯಾಕೆ ಹೀಗೆ ಕೇಳ್ತಿದಾನೆ ಎಂಬುದನ್ನೂ ಯೋಚಿಸದೆ, ‘ಏನ್ಮಾಡ್ತರೊ...' ಅಂದು ಅಂಗೈಗಳನ್ನು ಚೆಲ್ಲಿ, ‘ಏನು ಮಾಡಕ್ಕಾಗಲ್ಲ, ಮುಗೀತೆಲ್ಲ, ಬರಿ ಮಾತಾಡಿ, ಬರ್‍ದು, ಚಟ ತೀರಿಸ್ಕಬೇಕಷ್ಟೆ...' ಅಂದರು.

ಕೇಳಬಾರದಾಗಿತ್ತು ಅಂತ ನನ್ನ ಬಗ್ಗೆ ನನಗೇ ಪಿಚ್ಚೆನ್ನಿಸಿತು. ಬಂದುಹೋದ ಅವರ ಪ್ರೇಯಸಿಯ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು. ಸುಮ್ಮನೆ ನಿಂತೆ. ಬಾ ಅಂದು, ಗಿರಿಗೆ ಕಾಫಿ ತರಲಿಕ್ಕೆ ಹೇಳಿದರು. ಹೆಣ್ಣು-ಗಂಡಿನ ಸಂಬಂಧಗಳು, ವಯಸ್ಸು-ಮನಸ್ಸುಗಳ ಭೋರ್ಗರೆತ, ಜನಪ್ರಿಯತೆ, ಭಂಡ ಧೈರ್ಯ, ಪುಕ್ಕಲುತನ, ಪಲಾಯನಗಳ ಬಗೆಗೆ ಒಂದು ಗಂಟೆಯ ಪಾಠ ಮಾಡಿದರು. ನಂತರ, ‘ಈ ಹೆಂಗಸ್ರು ಸಿಕ್ಕಾಪಟ್ಟೆ ಕಾಂಪ್ಲೆಕ್ಸ್ ಕಣಯ್ಯ, ಯಾವಾಗ ಇಷ್ಟ ಪಡ್ತರೊ, ಯಾವಾಗ ಕಷ್ಟ ಕೊಡ್ತರೋ ಗೊತ್ತಾಗಲ್ಲ...' ಅಂದರು. ನನಗೆ ಅವರ ಆ ಇಷ್ಟದಲ್ಲಿ ಧೈರ್ಯವೂ, ಕಷ್ಟದಲ್ಲಿ ಪಲಾಯನವೂ ಕಾಣತೊಡಗಿತು. ವಯಸ್ಸಿಗೆ ಮೀರಿದ್ದು, ಅರಗಿಸಿಕೊಳ್ಳಲಾಗದ್ದು ಲಂಕೇಶರಿಂದ ದಕ್ಕಿತ್ತು.


ಮಂಗಳವಾರ, 18 ಮಾರ್ಚ್ 2008ರಲ್ಲಿ ಕೆಂಡಸಂಪಿಗೆಯಲ್ಲಿ ಪ್ರಕಟವಾದದ್ದು.