Friday, November 27, 2009

ಇವರು ನಮ್ಮ ದೇವೇಗೌಡ


‘ಯಾರೆ ಅಧಿಕಾರಕ್ಕೆ ಬರಬೇಕಾದರೂ ಜೆಡಿಎಸ್‌ನ ಬೆಂಬಲ ಪಡೆಯಲೇಬೇಕು. ನಮ್ಮನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸಲಾಗುವುದಿಲ್ಲ...' ಇನ್ನು ಮುಂತಾಗಿ ಜೆಡಿಎಸ್‌ನ ದೇವೇಗೌಡರು ಗುಡುಗಿದ್ದಾರೆ. ಈ ಗುಡುಗು ಇವತ್ತಿಗೆ, ನಾಳೆಗೆ ಮತ್ತೊಂದು ಸಿಡಿಲು. ಚುನಾವಣೆ ಮುಗಿಯುವುದರೊಳಗೆ ಇಂತಹ ನೂರಾರು ಬಾಣ, ಬಿರುಸುಗಳು ಗೌಡರ ಬತ್ತಳಿಕೆಯಿಂದ ಹೊರಬರುತ್ತವೆ.

ಇವೆಲ್ಲ ಚುನಾವಣೆಗಷ್ಟೇ ಸೀಮಿತವಾದ ಹೇಳಿಕೆಗಳು. ಜಿಲ್ಲೆಗೆ, ಜನಕ್ಕೆ ತಕ್ಕಂತೆ ಈ ಹೇಳಿಕೆ ಬದಲಾಗುವುದುಂಟು. ಹೇಳಿದಷ್ಟೇ ಸಲೀಸಾಗಿ ಗೌಡರು ಮರೆಯುವುದೂ ಉಂಟು. ಮರೆಯದ ಮಾಧ್ಯಮಗಳು ಮಾತ್ರ ವಿಶೇಷ ಅರ್ಥ ಹುಡುಕುವುದುಂಟು.

ಜನಕ್ಕೆ ಇವುಗಳನ್ನೆಲ್ಲ ಸಹಿಸಿಕೊಳ್ಳುವ ಸಹನೆ ಇದೆ, ಅದಷ್ಟೇ ಅವರಿಗೂ ಬೇಕಾಗಿರುವುದು.

ದೇವೇಗೌಡರ ನಕ್ಷತ್ರವೇ ಚುನಾವಣಾ ನಕ್ಷತ್ರ. ಚುನಾವಣೆ ಎಂದಾಕ್ಷಣ ಅವರು ಎದ್ದುನಿಲ್ಲುತ್ತಾರೆ. ಮುದುಡಿದ್ದ ಮನಸ್ಸು ಅರಳುತ್ತದೆ. ಮೈಗೆ ಸಿಡಿಲಿನಂತಹ ಶಕ್ತಿ ಸಂಚಲನವಾಗುತ್ತದೆ. ವಯಸ್ಸು ಮರೆತುಹೋಗುತ್ತದೆ. ನರಗಳಲ್ಲಿ ಹರಿಯುತ್ತಿರುವ ರಕ್ತ ಹೇಮಾವತಿ ನದಿಯಾಗುತ್ತದೆ (ಈ ನದಿ ಇದ್ದಕ್ಕಿದ್ದಂತೆ ಉಕ್ಕಿ ಹರಿದು ಅನಾಹುತಗಳಿಗೆ ಕಾರಣವಾಗುವುದಕ್ಕೆ ಫೇಮಸ್ಸು). ಎದುರಾಳಿಗಳನ್ನು ಸದೆಬಡಿಯಲು, ಹೀಯಾಳಿಸಲು, ನೀರಿಳಿಸಲು ಉತ್ಸುಕರಾಗುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಾರೆ- ಚಕ್ರವೇ ನಾಚುವಂತೆ!

ಚುನಾವಣೆಯೇ ಅವರ ಆರೋಗ್ಯ. ತಮ್ಮ ಸುತ್ತ ಜನ ಗಿಜಿಗಿಡುವುದನ್ನು, ಕಾರ್ಯಕರ್ತರು ಕೈ ಕಾಲುಗಳಿಗೆ ಸಿಕ್ಕಿ, ಬಿದ್ದು, ಎದ್ದು, ಒದ್ದಾಡುವುದನ್ನು, ಒಂದರೆಗಳಿಗೆಯೂ ಪುರುಸೊತ್ತು ಕೊಡದಂತೆ ಜನ ಬಂದು ಪೀಡಿಸುವುದನ್ನು, ಒಲೈಸುವುದನ್ನು, ವಂದಿಸುವುದನ್ನು ದೇವೇಗೌಡರು ಬಯಸುತ್ತಾರೆ.

ಮತದಾರರು, ಮಾಧ್ಯಮದವರು, ವಿರೋಧಿ ನಾಯಕರು ಕೊನೆಗೆ ಯಾರೂ ಇಲ್ಲ ಎಂದರೆ ತನ್ನ ಕುಟುಂಬದವರು... ಹೀಗೆ ಯಾರಾದರೊಬ್ಬರು ಇವರಿಗೆ ತೊಂದರೆ ಕೊಡುತ್ತಿರಲೇಬೇಕು. ಕೀಟಲೆ ಕೊಡಬೇಕು, ಒಳಗಾಗಬೇಕು- ಇದೂ ಕೂಡ ಗೌಡರಿಗೆ ಇಷ್ಟವಾದದ್ದೆ.

ಈ ಚುನಾವಣೆಗೂ ದೇವೇಗೌಡರೇ ಸಾರಥಿ. ಇನ್ನೊಬ್ಬರು ಹೇಳುವವರೆಗೂ ಕಾಯದೆ ಅವರೇ ಬಂದು ಆ ಸ್ಥಾನವನ್ನು ಅಲಂಕರಿಸಿಬಿಟ್ಟಿದ್ದಾರೆ. ಅಕಸ್ಮಾತ್ ಕುಮಾರಸ್ವಾಮಿ ಏನಾದರೂ ಯುವಕ, ಮಾಜಿ ಮುಖ್ಯಮಂತ್ರಿ, ಶಾಸಕರಿಗೆ ಆಪ್ತ ಎಂದು ಫ್ರಂಟ್‌ಲೈನ್‌ಗೇನಾದರೂ ಬಂದಿದ್ದರೆ; ಬರಲು ಯೋಚಿಸಿದ್ದರೆ ಸಾಕಿತ್ತು, ಅದರ ಕತೆಯೇ ಬೇರೆಯಾಗುತ್ತಿತ್ತು.

ಗೌಡರು ದೇವರು, ದೆವ್ವ, ಮಾಟ, ಮಂತ್ರ, ಜ್ಯೋತಿಷ್ಯ, ಹಲ್ಲಿಶಕುನ, ಗಿಳಿಶಾಸ್ತ್ರ... ಯಾವುದನ್ನೂ ನಂಬುವುದಿಲ್ಲ. ಹೀಗೆಂದರೆ, ಬರೆದವನಿಗೆ ಬುದ್ಧಿ ಬಲಿತಿಲ್ಲ ಎಂದುಕೊಳ್ಳಬಹುದು. ಆದರೆ ಇದು ನಿಜ. ಯಾಕೆಂದರೆ ಇವಿಷ್ಟನ್ನೂ ಗೌಡರು ಸುಮಾರು ಐವತ್ತು ವರ್ಷಗಳಿಂದ ತಪ್ಪದೆ ಮಾಡಿಕೊಂಡು ಬಂದಿದ್ದಾರೆ- ಶ್ರದ್ಧೆಯಿಂದಲ್ಲ, ಸ್ವಾರ್ಥದಿಂದ. ಮಾಡುತ್ತಾ ಮಾಡುತ್ತಾ ಅವುಗಳ ಮರ್ಮವನ್ನೂ ಅರಿತಿದ್ದಾರೆ. ಪೂಜಾರಿಗೆ ದೇವರು ಗೊತ್ತಿರುವ ಹಾಗೆ, ಮಾಟಗಾರನಿಗೆ ಜನರ ಮೆಂಟಾಲಿಟಿ ತಿಳಿದಿರುವ ಹಾಗೆ ದೇವೇಗೌಡರಿಗೆ ಇವುಗಳ ಒಳಮರ್ಮ ಗೊತ್ತಾಗಿದೆ. ಬಹಿರಂಗವಾಗಿ ಇವೆಲ್ಲವನ್ನು ಮಾಡುವ ಗೌಡರು, ಅಂತರಂಗದಲ್ಲಿ ಅವರೆ ಅವೆಲ್ಲವೂ ಆಗಿರುತ್ತಾರೆ. ಎಲ್ಲದರ ಬಗ್ಗೆಯೂ ಅವರಿಗೆ ಒಂದು ರೀತಿಯ ತಿರಸ್ಕಾರವಿದೆ. ಆ ತಿರಸ್ಕಾರವನ್ನು ಬಹಿರಂಗಗೊಳಿಸಿದರೆ, ಜನ ಗೌಡರನ್ನು ಅನುಮಾನದಿಂದ ನೋಡುತ್ತಾರೆ. ಗೌಡರನ್ನು ಜನ ನಂಬಬೇಕು. ಜನರಿಗಾಗಿ ಗೌಡರು ಅವುಗಳನ್ನು ನಂಬುತ್ತಾರೆ.

ಗೌಡರು ಬಂಡೆಗಲ್ಲಿನಂಥ ಆಸಾಮಿ. ಆರೋಪಗಳಿಗೆ ಹೆದರದ, ಸೋಲುಗಳಿಗೆ ಕುಂದದ, ಅವಮಾನಕ್ಕೆ ಅಂಜದ ಗಂಡು. ಅಂತಾರಾಷ್ಟ್ರೀಯ ಸಮಸ್ಯೆ ಸಾಲ್ವ್ ಮಾಡುವ ಸಮರ್ಥ. ಅಳುಕಿಲ್ಲದೆ ಇಂಗ್ಲಿಷ್, ಹಿಂದಿ ಮಾತನಾಡಬಲ್ಲ ಹರದನಹಳ್ಳಿಯ ಹಳ್ಳಿಗ. ಆದರೆ ಪತ್ನಿ ಚೆನ್ನಮ್ಮನವರ ಪಾಲಿನ ಅಮ್ಮಾವ್ರ ಗಂಡ. ರೇವಣ್ಣನ ಕೈಗೆ ಹೆದರುವ, ಬಾಯಿಗೆ ಬೆದರುವ ಬೆರ್ಚಪ್ಪ. ಇಡೀ ಕುಟುಂಬ ಗೌಡರನ್ನು ಬೆಟ್ಟದಂತೆ ನೋಡುತ್ತದೆ. ಭಯ, ಭಕ್ತಿ, ಗೌರವದಿಂದ ಕಾಣುತ್ತದೆ. ಇದು ರೇವಣ್ಣನ ವಿಷಯದಲ್ಲಿ ವೈಸ್ ವರ್ಸಾ.

ಖಾದಿ ಜುಬ್ಬ, ಪಂಚೆ, ಟವಲ್ ಬಿಟ್ಟರೆ ಬೇರೊಂದು ಬಟ್ಟೆ ತೊಡದ ಬಡವ. ಸೊಪ್ಪು ಸಾರು, ಮುದ್ದೆ ತಿನ್ನುವ ಸರಳ. ರೈತ ಕುಟುಂಬದಿಂದ ಬಂದ ಮಣ್ಣಿನ ಮಗ. ಮಣ್ಣಿ(ರಿಯಲ್ ಎಸ್ಟೇಟ್, ಗಣಿ)ನಿಂದಲೆ ಮಕ್ಕಳು ಅಂಬಾನಿ, ಮಿತ್ತಲ್ ಮಟ್ಟಕ್ಕೇರಿದ್ದನ್ನು ಕಂಡು ಕರುಬುವ ತಂದೆ. ಕುಟುಂಬದೊಳಗಿನ ಹಣ-ಅಧಿಕಾರ ಹಂಚಿಕೆ ಅಂದಾಕ್ಷಣ ಮಾಯವಾಗುವ ಮನುಷ್ಯ.

ತಾನು ಐವತ್ತು ವರ್ಷಗಳ ಕಾಲ ರಾಜಕೀಯ ಮಾಡಿದರೂ ಸಿಎಂ ಆಗಲಿಕ್ಕೆ ಏನೆಲ್ಲ ಶ್ರಮ ಸುರಿದೆ, ಮಗ ಚಿಟಿಕೆ ಹೊಡೆಯುವುದರೊಳಗೆ ದಕ್ಕಿಸಿಕೊಂಡ, ಕೋಟಿಗಳನ್ನು ಹುರುಳಿಕಾಳಿನ ಸಮಕ್ಕೆ ತಂದ. ಮಗನ ಬೆಳವಣಿಗೆ ಕಂಡು ಖುಷಿಯೂ ಇದೆ, ಹೊಟ್ಟೆಯುರಿಯೂ ಇದೆ.

ಇಂಥ ದೇವೇಗೌಡ ಕರ್ನಾಟಕದಲ್ಲಿ ಹುಟ್ಟಿದ್ದಾರೆ. ನಮ್ಮ ನಿಮ್ಮೆಲ್ಲ ಕಣ್ಣಮುಂದೆಯೇ ಓಡಾಡಿಕೊಂಡಿದ್ದಾರೆ. ಈ ಲಿವಿಂಗ್ ಲೆಜೆಂಡ್ ದೇವೇಗೌಡರು ರಾಜಕಾರಣದ ಯೂನಿವರ್ಸಿಟಿ ಇದ್ದಂತೆ. ಭವಿಷ್ಯದಲ್ಲಿ ಯಾರೆ ರಾಜಕೀಯ ರಂಗಕ್ಕೆ ಬರಬೇಕೆಂದರೂ ಕಡ್ಡಾಯವಾಗಿ ದೇವೇಗೌಡರನ್ನು ಅಧ್ಯಯನದ ವಸ್ತುವಾಗಿ ಸ್ವೀಕರಿಸಬೇಕು. ಇದು ಈ ಕ್ಷಣದಲ್ಲಿ ಅತಿ ಎನ್ನಿಸಬಹುದು, ಆದರೂ ಸತ್ಯ.

(ಏಪ್ರಿಲ್ 10, 2008ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

No comments:

Post a Comment