ಅದು ಎಪ್ಪತ್ತರ ದಶಕ. ಕನ್ನಡ ಸಾರಸ್ವತ ಲೋಕ ಸಮೃದ್ಧಿಯಿಂದ ನಳನಳಿಸುತ್ತಿದ್ದ ಕಾಲ. ಕುವೆಂಪು, ಕಾರಂತ, ಬೇಂದ್ರೆ, ಪುತಿನ, ಮಾಸ್ತಿಗಳ ಮರೆಯಲ್ಲಿ, ಅಡಿಗರ ಸಾರಥ್ಯದಲ್ಲಿ ಹೊಸ ಪೀಳಿಗೆಯ ಬರಹಗಾರರು ಕನ್ನಡದ ಹೊಸ ಕಳೆಯಾಗಲು ಕಾತರಿಸುತ್ತಿದ್ದ ಕಾಲ.
ಹೆಚ್ಚೂ ಕಡಿಮೆ ಸಮಕಾಲೀನ ಸಾಹಿತಿಗಳಾದ ಲಂಕೇಶ್, ನಿಸಾರ್ ಅಹಮದ್ ಮತ್ತು ಸುಮತೀಂದ್ರ ನಾಡಿಗ್- ಮೂವರು ಪೈಪೋಟಿಗೆ ಬಿದ್ದು ಬರೆಯುತ್ತಿದ್ದ, ಬದುಕುತ್ತಿದ್ದ, ಬೊಬ್ಬೆಯಾಕುತ್ತಿದ್ದ ಕಾಲವದು. ಒಬ್ಬರಿಗೊಬ್ಬರು ಎದುರಿಗೆ ಸಿಕ್ಕರೆ ಮುಗುಂ ಆಗುವ, ಬೆನ್ನು ತಿರುಗಿಸಿದರೆ ಸಾಕು ಗೇಲಿ ಮಾಡಿ ನಗಾಡುವ ಜಾತಿಯವರು. ಆ ಕಾಲದ ಮಹಿಮೆಯೋ ಏನೋ... ನಿಸಾರ್ ಅಹಮದ್‌ರ ನಿತ್ಯೋತ್ಸವ ಕವನ ಭಾರೀ ಪಾಪ್ಯುಲರ್ ಆಗಿತ್ತು. ಕವಿಮಿತ್ರರ ಪ್ರೋತ್ಸಾಹವೂ ದೊರಕಿತ್ತು. ಅಷ್ಟೇ ಅಲ್ಲ, ಆಕಾಶವಾಣಿಯಲ್ಲಿ ಆಗಾಗ ಅವರನ್ನು ಕರೆದು ಕವನ ವಾಚಿಸುವುದೂ ಇತ್ತು. ಒಂದು ಕವನಕ್ಕೆ ಎಪ್ಪತ್ತೈದು ರೂಪಾಯಿ ಸಂಭಾವನೆಯೂ ಸಿಗುತ್ತಿತ್ತು.
ಆ ಸಂಭಾವನೆ ಮತ್ತು ಮನ್ನಣೆ ಆವತ್ತಿನ ದಿನಕ್ಕೆ, ಅವರ ಬೆಳವಣಿಗೆಯ ರೀತಿ ನೀತಿಗೆ ಭಾರಿಯಾಗಿತ್ತು. ನಿಸಾರ್‌ಗೆ ಸಿಗುತ್ತಿದ್ದ ಈ ಅವಕಾಶ, ಹಣ ಇನ್ನಿಬ್ಬರಲ್ಲಿ- ನಾಡಿಗ್, ಲಂಕೇಶರಲ್ಲಿ- ಕೀಳರಿಮೆಯನ್ನೂ, ಹೊಟ್ಟೆಕಿಚ್ಚನ್ನೂ ಹುಟ್ಟುಹಾಕಿತ್ತು. ಕಾಕತಾಳೀಯವೋ ಏನೋ, ಮೂವರಿಗೂ ಗುರುಗಳಂತಿದ್ದ ಅಡಿಗರಿಗೆ, ನಿಸಾರ್ ಬಗ್ಗೆ ಕೊಂಚ ಹೆಚ್ಚಾಗಿಯೇ ಪ್ರೀತಿಯಿತ್ತು. ಇದು ಇನ್ನಿಬ್ಬರಲ್ಲಿ ಅಸಮಾಧಾನ ಉಂಟುಮಾಡಿತ್ತು. ಸಹಜವಾಗಿ ಅದು ಸಂಜೆಯ ಗುಂಡಿನ ಗಡಂಗಿನಲ್ಲಿ ಗುಟುರು ಹಾಕುತ್ತಿತ್ತು. ಒಳಗಿದ್ದ ಹುಳುಕೆಲ್ಲ ಆ ಹೊತ್ತಿನಲ್ಲಿ ಹೊರಬರುತ್ತಿತ್ತು.
‘ಅಡಿಗ್ರು ಗುಂಡ್ ಹಾಕ್ದಾಗ, ಕಾಸ್ಟಿಕ್, ನಿಸಾರ್ ಪೊಯೆಟ್ಟೇ ಅಲ್ಲ ಅಂತಾರೆ, ಈಗ ನೋಡು... ಥೂ ಥೂ ಥೂ ವೆರಿ ಬ್ಯಾಡ್...' ಎಂದು ಲಂಕೇಶರೆಂದರೆ,
‘ನಿಸಾರ್ ಕವನಗಳಿಗೆ ಆಕಾಶವಾಣಿ ಸ್ಕೋಪ್ ಕೊಡ್ತಿದೆ, ವಿಪರೀತ ಆಯ್ತು... ಅದಕ್ಕೆ ಏನ್ ಕಾರಣ ಗೊತ್ತಾ ‘ಆ' ಹೆಂಗ್ಸು...' ಎಂದರು ನಾಡಿಗರು. ಹೀಗೆ ಗುಂಡು ಯಾವ ಕಡೆಗೆ ಎಳೆಯುತ್ತೋ ಆ ಕಡೆಗೆಲ್ಲ ಮಾತೂ ವಾಲುತ್ತಿದ್ದವು.
ಅವರ ಮಾತಿಗೆ ಪೂರಕವಾಗಿ ಆಕಾಶವಾಣಿಯಲ್ಲಿದ್ದ ‘ಆ' ಹೆಂಗಸು, ನಿಸಾರರು ಆಕಾಶವಾಣಿಗೆ ಬಂದಾಗ, ಹೋದಾಗ ಹೂ ನಗೆ ನಕ್ಕು, ಕವನಗಳನ್ನು ಮೆಚ್ಚಿ ಮಾತನಾಡುತ್ತಿದ್ದುದುಂಟು. ಆದರೆ, ನಾಡಿಗರು ಆರೋಪಿಸಿದಂತಹ ಯಾವ ಆರೋಪಗಳೂ ಅವರಿಬ್ಬರ ನಡುವೆ ಇರಲಿಲ್ಲ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ನಾಡಿಗರು ಇದ್ದಕ್ಕಿದ್ದಂತೆ ಒಂದು ದಿನ ಆಕಾಶವಾಣಿಗೆ ಭೇಟಿ ಕೊಟ್ಟರು. ಅದೂ ಅನುಮಾನವಿದ್ದ ‘ಆ' ಹೆಂಗಸಿನ ಬಳಿಗೇ ಹೋದರು. ನೋಡಿದರೆ, ಅಲ್ಲಿ ಆಗಲೇ ನಿಸಾರರಿದ್ದಾರೆ. ಅವರಿಬ್ಬರ ಮುಖದಲ್ಲಿ ಮಂದಹಾಸವಿದೆ. ನಾಡಿಗರ ಅನುಮಾನಕ್ಕೆ ಪುಷ್ಟಿ ಸಿಕ್ಕಂತಾಯಿತು.
ನಾಡಿಗರು ಮುಖ ಗಂಟಿಕ್ಕಿಕೊಂಡು, ‘ನಾನೊಂದು ಕವನ ಬರೆದಿದ್ದೇನೆ... ಓದಬೇಕು, ಅವಕಾಶ ಕೊಡಿ' ಎಂದರು.
‘ಆ' ಹೆಂಗಸು, ‘ಸಾರ್ ಅದು ನನ್ನ ಮೇಲಾಧಿಕಾರಿಗಳಿಗೆ ಸಂಬಂಧಿಸಿದ್ದು... ಅಲ್ಲಿಂದ...' ಎಂದು ರಾಗ ಎಳೆದರು.
ಅಷ್ಟೆ, ನಾಡಿಗರು, ‘ಓಕೆ, ಅವಕಾಶ ಕೊಡದಿದ್ದರೆ ಪರವಾಗಿಲ್ಲ, ಕವನ ಓದ್ತೀನಿ ಕೇಳಿ...' ಎಂದು ‘ಆ' ಹೆಂಗಸಿನ ಹೆಸರನ್ನೇ ಬಳಸಿ ಬರೆದಿದ್ದ ಕವನವನ್ನು ಅವರಿಬ್ಬರಿಗೇ ವಾಚಿಸತೊಡಗಿದರು.
ಕವನದ ಎರಡು ಮೂರು ಸಾಲುಗಳನ್ನು ಕೇಳುತ್ತಿದ್ದಂತೆ, ಅವರಿಬ್ಬರಿಗೂ ಮುಜುಗರ. ಮುಖ ಬಾಡಿದವು. ನಿಸಾರ್ ಅಲ್ಲಿ ನಿಲ್ಲಲಾಗದೆ ಹೊರಗೆ ಹೋದರು. ‘ಆ' ಹೆಂಗಸು ಮುಖಮುಚ್ಚಿಕೊಂಡು ಕೂತವರು ಮೇಲೇಳಲಿಲ್ಲ. ಆದರೆ ನಾಡಿಗರು ಅಲ್ಲಿ ನಿಂತುಕೊಂಡೇ ಪೂರ್ತಿ ಪದ್ಯ ಓದಿದರು. ಹಾಗೆಯೇ ಇನ್ನಿಬ್ಬರು ಕವಿಮಿತ್ರರ ಕಿವಿಗೂ ಸುರಿದರು.
ಅತ್ತ ನಿಸಾರರು ಕವಿಮಿತ್ರರ ಕೀಟಲೆಯಿಂದ ಬೇಸತ್ತು ರೂಮು ಸೇರಿಕೊಂಡರು. ಆ ರೂಮು... ಗಾಂಧಿಬಜಾರ್‌ನ ಟ್ಯಾಗೂರ್ ಸರ್ಕಲ್ಲಿನಲ್ಲಿರುವ ಕೆನರಾ ಬ್ಯಾಂಕ್ ಪಕ್ಕದಲ್ಲಿದ್ದ ದೊಡ್ಡ ಮನೆಯ ಮಹಡಿಯ ಮೇಲಿತ್ತು. ಅದು ಆವತ್ತಿಗೆ ನಿಸಾರರ ಪದ್ಯದ ಕಾರ್ಖಾನೆಯೂ ಆಗಿತ್ತು. ದಿನವಿಡಿ ನಿಸಾರರು ಆ ರೂಮಿನಲ್ಲಿಯೇ ಕಳೆಯುತ್ತಿದ್ದರು. ಆ ರೂಮು ಪಾರ್ಥಸಾರಥಿ ಎಂಬ ನಿಸಾರ್ ಗೆಳೆಯರಿಗೆ ಸೇರಿತ್ತು. ನಿಸಾರ್ ಪದ್ಯ ಬರೆಯಲೆಂದೇ ಪಾರ್ಥಸಾರಥಿ ಆ ರೂಮನ್ನು ಅವರಿಗೆ ಉಚಿತವಾಗಿ ಕೊಟ್ಟಿದ್ದರು.
ಅಂದು ನಾಡಿಗರ ಪದ್ಯದಿಂದ ಶ್ಯಾನೆ ಬೇಜಾರಾಗಿದ್ದ ನಿಸಾರರು, ರೂಮಿನಲ್ಲಿ ಒಬ್ಬರೆ ಕೂತು ಬೀಡಿ ಸೇದುತ್ತಿದ್ದರು. ಅಂದೊಂಥರಾ ಕವಿಗಳು, ಕಲಾವಿದರ ಅಡ್ಡ ಆಗಿತ್ತು. ಅಲ್ಲಿಗೆ ನಿಸಾರ್-ನಾಡಿಗ್-ಲಂಕೇಶ್- ಮೂವರಿಗೂ ಪರಿಚಯವಿದ್ದ, ಮೂವರನ್ನೂ ಹತ್ತಿರದಿಂದ ಬಲ್ಲ ಟಿ.ಎಸ್.ರಂಗಾ ಹೋದರು.
ಹೋಗ್ತಿದ್ದಹಾಗೆ ನಿಸಾರರು, ‘ಏನಯ್ಯಾ ಇದು, ಅವನು ನೋಡದ್ರೆ ಕವಿನೇ ಅಲ್ಲ ಅಂತಾನೆ, ಇವುನ್ ನೋಡುದ್ರೆ ನನ್ನ ಮೇಲೆ ಕೆಟ್ ಕೆಟ್ಟದಾಗಿ ಕವನ ಬರ್ದು, ನನ್ನ ಮುಂದೇನೆ ಓದ್ತಾನೆ, ಅಂವ ರಾವಣ, ಇಂವ ಬ್ರಾಹ್ಮಣ... ಏನಯ್ಯಾ ಮಾಡೋದು...' ಎಂದು ನಿಟ್ಟುಸಿರುಬಿಟ್ಟರು.
(ಡಿಸೆಂಬರ್ 9, 2008)
No comments:
Post a Comment