ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಬಗ್ಗೆ ಇಟ್ಟಿರುವ ನಂಬಿಕೆ ಪರಂಪರಾಗತವಾದುದು. ಅದು ಅಷ್ಟು ಸುಲಭವಾಗಿ ಸಡಿಲವಾಗುವಂಥದ್ದಲ್ಲ. ಆ ಕಾರಣಕ್ಕಾಗಿಯೇ ಸುದ್ದಿ ಮಾಧ್ಯಮಗಳು ಉಳಿದಿರುವುದು ಮತ್ತು ಆ ಕ್ಷೇತ್ರ ಇನ್ನೂ ಹೆಚ್ಚೆಚ್ಚು ವಿಸ್ತಾರಗೊಳ್ಳುತ್ತಿರುವುದು. ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಮೇಲೆ ಇಟ್ಟಿರುವ ಆ ನಂಬಿಕೆ ಇವತ್ತಿನ ಜಾಗತೀಕರಣದ ಯುಗದಲ್ಲೂ ಹಾಗೇ ಇದೆ. ಆದರೆ ಸುದ್ದಿ ಮಾಧ್ಯಮಗಳು ಜನಸಾಮಾನ್ಯರ ನಂಬಿಕೆಗೆ ಬದ್ಧವಾಗಿವೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ನೈತಿಕತೆ, ಪ್ರಾಮಾಣಿಕತೆ ಮರೆಯಾಗುತ್ತಾ, ಮೌಲ್ಯಾಧಾರಿತ ಪತ್ರಿಕೋದ್ಯಮ ಪಕ್ಕಕ್ಕೆ ಸರಿಯುತ್ತ ಇರುವುದು. ಹೊಸ ತಲೆಮಾರಿನ ಬಹುಪಾಲು ಪತ್ರಕರ್ತರು ‘ಹೌ ಟು ಸೆಲ್ ಮೈ ರೈಟಿಂಗ್' ಎಂಬ ಗ್ಲೋಬಲ್ ತತ್ವಕ್ಕೆ ಕಟ್ಟುಬಿದ್ದವರು. ಪತ್ರಿಕೋದ್ಯಮವನ್ನು ಮಾರುಕಟ್ಟೆಯ ಸರಕಿನ ಮಟ್ಟಕ್ಕಿಳಿಸಿದವರು. ಇಲ್ಲಿ ತತ್ವ, ಬದ್ಧತೆಗಿಂತ ಮುಖ್ಯವಾಗಿ ಲಾಭಕೋರ ಮನಸ್ಸು ವಿಜೃಂಭಿಸುತ್ತಿದೆ. ಸ್ವಾರ್ಥಕ್ಕೆ ಮೌಲ್ಯ ಮಾರಾಟವಾಗುತ್ತಿದೆ.
ಹಾಗಾಗಿ ಮಾಧ್ಯಮಗಳೂ ಬದಲಾಗಿವೆ, ಜನರೂ ಬದಲಾಗುತ್ತಿದ್ದಾರೆ. ಬದಲಾದ ಸಂದರ್ಭಕ್ಕನುಗುಣವಾಗಿ ಜನ ಇಂದು ಸುದ್ದಿಮಾಧ್ಯಮಗಳನ್ನು ನಂಬುತ್ತಿಲ್ಲ; ನಂಬುವಂತಹ ಸುದ್ದಿಗಳನ್ನು ಅವರೂ ಕೊಡುತ್ತಿಲ್ಲ. ಆದರೂ ಜನ ಪೇಪರ್‌ಗಳನ್ನು ಓದುತ್ತಾರೆ, ಸುದ್ದಿವಾಹಿನಿಗಳನ್ನು ನೋಡುತ್ತಾರೆ. ಅಷ್ಟೇ ಬೇಗ ಮರೆಯುತ್ತಾರೆ. ಜನರ ಮರೆಯುವ ಗುಣ, ಕುಲಗೆಟ್ಟಿರುವ ವ್ಯವಸ್ಥೆ ಮತ್ತು ಇವತ್ತಿನ ಸುದ್ದಿ ಇವತ್ತಿಗೇ ಸಾಯುತ್ತಿರುವ ಸಂದರ್ಭ ಮಾಧ್ಯಮದ ಮಂದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಪತ್ರಕರ್ತರು ಯಾರ ಬಗ್ಗೆ ಏನನ್ನು ಬೇಕಾದರೂ ಬರೆಯಬಲ್ಲ ‘ಬುದ್ಧಿವಂತ'ರಾಗಿದ್ದಾರೆ. ಪತ್ರಿಕೋದ್ಯಮ ದಂದೆಯಾಗಿದೆ. ಮಾರುಕಟ್ಟೆಯಲ್ಲಿ ಪತ್ರಿಕೆಯೂ ಬಿಕರಿಯಾಗುತ್ತಿದೆ, ಪತ್ರಕರ್ತನೂ ಬಿಕರಿಯಾಗುತ್ತಿದ್ದಾನೆ.
ಇದು ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಅದೇಕೋ ಇದೇ ಸಂದರ್ಭದಲ್ಲಿ ಎಲೆಕ್ಷನ್ ಎಂದಾಕ್ಷಣ ಅಲರ್ಟ್ ಆಗುತ್ತಿದ್ದ ಲಂಕೇಶರೂ ನೆನಪಾಗುತ್ತಿದ್ದಾರೆ...
ಚುನಾವಣೆಯ ಸಂದರ್ಭದಲ್ಲಿ ಲಂಕೇಶರು ಈ ದೇಶದ ಆಗುಹೋಗುಗಳನ್ನು ನಿರ್ಧರಿಸುವ ಮಹತ್ತರ ಹೊಣೆಗಾರಿಕೆ ತಮ್ಮ ಭುಜದ ಮೇಲೆ ಬಿದ್ದಿದೆಯೇನೋ ಎನ್ನುವಂತೆ ಭ್ರಮಿಸುತ್ತಿದ್ದರು. ತಮ್ಮ ಚಿಲ್ಲರೆ ಚಟುವಟಿಕೆಗಳನ್ನು ಪಕ್ಕಕ್ಕಿಟ್ಟು ಯುದ್ಧಕ್ಕೆ ಸಜ್ಜಾಗಿ ನಿಂತ ಯೋಧನಂತೆ ಚಡಪಡಿಸುತ್ತಿದ್ದರು. ತಮ್ಮ ಸುತ್ತ, ಬಳಸಿ ಬಿಸಾಕಿದ ಬ್ಯಾಟರಿಯಂತೆ ಬಿದ್ದಿರುತ್ತಿದ್ದ ವರದಿಗಾರರ ಬುಡಕ್ಕೆ ಬಿಸಿ ತಾಗಿಸಿ ಚಾರ್ಜ್ ಮಾಡುತ್ತಿದ್ದರು. ನೂರು ಕ್ಯಾಂಡಲ್ ಬಲ್ಬ್ ಥರ ಟ್ವೆಂಟಿಫೋರ್ ಅವರ್ಸು ಉರಿಯುತ್ತಿರಬೇಕು...
ಜನರ ಧ್ವನಿಯಾದ, ಜನರನ್ನು ಜಾಗೃತರನ್ನಾಗಿಸಿದ, ಜನಾಭಿಪ್ರಾಯವನ್ನು ರೂಪಿಸಿದ, ಸರ್ಕಾರಗಳನ್ನು ಬದಲಿಸಿದ ಕೀರ್ತಿ ಲಂಕೇಶರ ಪತ್ರಿಕೆಗೆ ಸಲ್ಲಲೇಬೇಕು. ಕೀರ್ತಿಶನಿ ಲಂಕೇಶರ ಹೆಗಲೇರಿದ್ದು, ಇಳಿದಿದ್ದು- ಎಲ್ಲಾ ಓದುಗರಿಂದಲೇ. ಲಂಕೇಶರ ಶಕ್ತಿ ಓದುಗರೆ. ಅವರು ಹೆದರುತ್ತಿದ್ದುದೂ ಓದುಗರಿಗೇ. ಯಾಕೆಂದರೆ ಪತ್ರಿಕೆಯ ಪ್ರಸಾರದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ಕಂಡಿದ್ದರು. ಅವೆರಡೂ ಮೇಸ್ಟ್ರಿಗೆ ಪಾಠ ಕಲಿಸಿದ್ದವು.
ಚುನಾವಣಾ ಸಮಯದಲ್ಲಿ ಲಂಕೇಶರಿಗೆ ಹೊಸ ಹುರುಪು ಮೈ ಮನಗಳನ್ನು ಆವರಿಸಿಕೊಳ್ಳುತ್ತಿತ್ತು. ಅದಕ್ಕೆ ಕಾರಣ, ಜವಾಬ್ದಾರಿ ಜಾಸ್ತಿಯಾಗುತ್ತಿದ್ದುದು ಮತ್ತು ಪತ್ರಿಕೆಯ ಸರ್ಕ್ಯುಲೇಷನ್ ಹೆಚ್ಚಾಗುತ್ತಿದ್ದುದು. ಆ ಸಂದರ್ಭದಲ್ಲಿ ಪತ್ರಿಕೆಯ ಕಚೇರಿ ಸಾಹಿತಿಗಳು, ಕಲಾವಿದರು ಮತ್ತು ವರದಿಗಾರರಿಂದ ಗಿಜಿಗುಡುತ್ತಿತ್ತು. ಪ್ರತಿದಿನ ‘ಕೂತು ಮಾತನಾಡುವ' ಸೆಷನ್‌ಗಳು ಇದ್ದೇ ಇರುತ್ತಿದ್ದವು. ಆರಂಭದಲ್ಲಿ ಬೌದ್ಧಿಕ ಕಸರತ್ತಿನ ತರ್ಕಬದ್ಧ ಚರ್ಚೆ, ಮತ್ತೇರುತ್ತಿದ್ದಂತೆ ಅಭ್ಯರ್ಥಿಗಳನ್ನು ಅಮಲಿನಲ್ಲಿಯೇ ಸೋಲಿಸುವ-ಗೆಲ್ಲಿಸುವ ಹುಂಬತನ, ಕೊನೆಗೆ ಚಿಲ್ಲರೆ ಜಗಳದಲ್ಲಿ ಪರ್ಯವಸಾನ... ಇದು ಮಾಮೂಲಾಗಿತ್ತು. ಆದರೆ ಈ ಜಗಳಗಳು ಕೂಡ ವರದಿಗಾರರ ವೃತ್ತಿ ಬದುಕಿಗೆ ಸಾಣೆಯಂತೆ ಸಹಕಾರಿಯಾಗುತ್ತಿದ್ದುದು ‘ಪತ್ರಿಕೆ'ಯ ವೈಶಿಷ್ಟ್ಯ.
ಚುನಾವಣಾ ಕಾಲದಲ್ಲಿ ಲಂಕೇಶರು ಬೆಂಗಳೂರಿನ ಮುಖ್ಯ ವರದಿಗಾರರ ಜೊತೆಗೆ ಜಿಲ್ಲಾ ವರದಿಗಾರರನ್ನು ಕರೆದು ಮೀಟಿಂಗ್ ಮಾಡುತ್ತಿದ್ದರು. ಆ ಜಿಲ್ಲೆಗಳ ರಾಜಕೀಯ ವಿದ್ಯಮಾನ, ಪಕ್ಷಗಳು, ಅಭ್ಯರ್ಥಿಗಳು, ಜಾತಿ ಲೆಕ್ಕಾಚಾರ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದರು. ಆ ಮಾತುಕತೆಯಲ್ಲಿಯೇ ವರದಿಗಾರರು ತೆಗೆದುಕೊಳ್ಳಬೇಕಾದ ಪರ-ವಿರೋಧರ ನಿಲುವು ಸ್ಪಷ್ಟವಾಗುತ್ತಿತ್ತು. ಈ ಪರ-ವಿರೋಧ ಅಂದರೆ ಏನು? ಲಂಕೇಶರು ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಅಭ್ಯರ್ಥಿಗಳ ಪರ-ವಿರೋಧವಿದ್ದು, ಬಿಜೆಪಿಯನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಅದನ್ನು ಅಧಿಕಾರದ ಹತ್ತಿರಕ್ಕೂ ತರಬಾರದೆಂಬುದು ಅವರ ನಿಲುವಾಗಿತ್ತು. ವರದಿಗಾರರ ವರದಿಗಳಲ್ಲಿ ಅದು ಪ್ರತಿಫಲಿಸುತ್ತಿತ್ತು. ರಾಜಕಾರಣಿಗಳಲ್ಲಿ ಒಳ್ಳೆಯವರು-ಕೆಟ್ಟವರು ಅಂದರೆ ಯಾರು, ಅದನ್ನು ಅಳೆಯುವ ಮಾನದಂಡವಾದರೂ ಏನು ಎಂದು ವರದಿಗಾರರು ತಲೆಕೆಡಿಸಿಕೊಂಡರೆ, ಲಂಕೇಶರು,
‘ಎಲೆಕ್ಷನ್‌ಗೆ ನಿಂತಿರೋರೆಲ್ರೂ ಕಳ್ಳರು, ಸುಳ್ಳರೆ, ಹಾಗಂತ ಬರದ್ರೆ ನಾವ್ ಅನ್‌ಪಾಪುಲರ್ ಆಗ್ತಿವಿ, ಸಿನಿಕರ ಸಾಲಿಗೆ ಸೇರ್‍ತ್ತೀವಿ, ಅದು ನಮ್ಮ ರೀಡರ್‍ಸ್‌ಗೆ ದಾರಿ ತಪ್ಸಿ, ಮೋಸ ಮಾಡ್ದಂಗಾಗ್ತದೆ. ಇದು ಡೆಮಾಕ್ರಸಿ, ಮತದಾರರು ಯಾರ್‍ನಾದ್ರು ಒಬ್ಬನನ್ನು ಆರಿಸಲೇಬೇಕು, ನಾವು ನಿಂತಿರೋರಲ್ಲಿ ಯಾವನು ಕಡಿಮೆ ಕಳ್ಳ ಅಂತ ನೋಡಿ ಅವನನ್ನು ಬೆಂಬಲಿಸಬೇಕು, ಇವ್ನು ಇದ್ದುದರಲ್ಲಿ ಯೋಗ್ಯ ಅಂತ ಹೇಳ್ಬೇಕು' ಎನ್ನುತ್ತಿದ್ದರು.
ಹಾಗೆಯೇ ಚುನಾವಣಾ ಸಮೀಕ್ಷೆಗಳನ್ನು ಮಾಡುವಾಗ ವರದಿಗಾರ ಹೇಗಿರಬೇಕು ಎಂಬುದನ್ನೂ ಹೇಳುತ್ತಿದ್ದರು. ಕ್ಷೇತ್ರದ ಸರ್ವೇ ಮಾಡುವ ವರದಿಗಾರರಿಗೆ ಪ್ರಯಾಣ ಭತ್ಯೆ, ಜೊತೆಗೆ ಕುಡಿತದ ಭತ್ಯೆಯೂ ಇರುತ್ತಿತ್ತು. ಇತರ ಜಿಲ್ಲೆಗಳಿಗೆ ಕಾರು ಮಾಡಿ ಕಳುಹಿಸಿದಾಗಲೂ ಕುಡಿತಕ್ಕೆ ಎಕ್ಸ್‌ಟ್ರಾ ಎಂದು ಕೊಡುತ್ತಿದ್ದರು. ನಾವೇನಾದ್ರು ಪ್ರಶ್ನಾರ್ಥಕವಾಗಿ ಅವರ ಮುಖ ನೋಡಿದರೆ, ‘ನೀನ್ ಕುಡಿತಿಯ ಅಂತ ಗೊತ್ತು. ಈ ಎಲೆಕ್ಷನ್ ಟೈಮಲ್ಲಿ ನಿನ್ಗೆ ಕುಡಿಸಕ್ಕಂತನೆ ಜನ ಇರ್ತಾರೆ ಅಂತ್ಲೂ ಗೊತ್ತು, ನೀನು ಹೆಚ್ಗೆ ಅಂದ್ರೆ ಎಷ್ಟು ಕುಡೀಬಹುದು, ನೂರಿನ್ನೂರೂಪಾಯ್ದು, ಅದಕ್ಕೆ ನಿನ್ನ ರಿಪೋರ್ಟ್ ಮಾರ್‍ಕೊಂಡು, ನಮ್ ರೀಡರ್‍ಸ್‌ಗೆ ಮೋಸ ಮಾಡದ್ ನಂಗಿಷ್ಟಿವಿಲ್ಲ, ಓದುಗರು ಕೊಟ್ಟಿರೋ ದುಡ್ಡಲ್ಲಿ ಕುಡ್ದು ವಸ್ತುನಿಷ್ಠ ವರದಿ ಬರಿ...' ಎನ್ನುತ್ತಿದ್ದರು. ರೂಢಿಗತ ಸುದ್ದಿ ಮಾಧ್ಯಮಗಳಿಗೂ ಲಂಕೇಶರಿಗೂ ಇದ್ದ ಫರಕ್ಕು ಇಷ್ಟೆ.
(ಜುಲೈ 30, 2008)
ಸಕಾಲಿಕ ನೆನಪು
ReplyDeleteಪ್ರೀತಿಯ ಬಸುರಾಜು ಅವರಿಗೆ,
Deleteಈ ಲೇಖನ ಓದುತಿದ್ದರೆ ನನ್ನ ಹದಿನೇಳು ವರ್ಷಗಳ ಪತ್ರಿಕೋದ್ಯಮದ "ಉದ್ಯೋಗ" ಮತ್ತು ನಾವು ಲಂಕೇಶ್ ಪತ್ರಿಕೆಯಿಂದ ಓದಿ ಕಲಿತದ್ದಕ್ಕೆ ಹೋಲಿಸಿದರೆ, ಹೋಲಿಸಲಿಕ್ಕೆ ಸಾದ್ಯವೇ ಇಲ್ಲ ಬಿಡಿ. ನಾವು ಯಾವ ದುಸ್ಥಿತಿಯನ್ನು ತಲುಪಿದ್ದೇವೆ ಎಂಬ ಅರಿವಾಗುತ್ತದೆ. ಈಗ ಯಲ್ಲವನ್ನು, ಎಲ್ಲರೂ ಮಾರಿಕೊಳ್ಳುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಇದೆಲ್ಲದರ ಬಗ್ಗೆ ಸುಧೀರ್ಘವಾಗಿ ಬರೆಯಬೇಕಿದೆ.
ಲಂಕೇಶ್ ಪತ್ರಿಕೆಯನ್ನು ಚುನಾವಣೆಯ ಈ ಸಂದರ್ಭದಲ್ಲಿ ನೆನಸಿಕೊಂಡದ್ದಕ್ಕೆ ಧನ್ಯವಾದಗಳು.
'ಇದು ಡೆಮಾಕ್ರಸಿ, ಮತದಾರರು ಯಾರ್‍ನಾದ್ರು ಒಬ್ಬನನ್ನು ಆರಿಸಲೇಬೇಕು, ನಾವು ನಿಂತಿರೋರಲ್ಲಿ ಯಾವನು ಕಡಿಮೆ ಕಳ್ಳ ಅಂತ ನೋಡಿ ಅವನನ್ನು ಬೆಂಬಲಿಸಬೇಕು, ಇವ್ನು ಇದ್ದುದರಲ್ಲಿ ಯೋಗ್ಯ ಅಂತ ಹೇಳ್ಬೇಕು' ಎನ್ನುತ್ತಿದ್ದರು.' ಸತ್ಯವಾದ ಮಾತು ಈ ವಾಕ್ಯಕ್ಕೆ ಲಂಕೇಶವರಿಗೆ ( Five Stars )
ReplyDelete