Friday, November 27, 2009

ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ ನಮ್ಮ ಜೊತೆ ಇರಬೇಕಾಗಿತ್ತು

ಕನ್ನಡನಾಡು ಕಂಡ ಅಪರೂಪದ ರೈತನಾಯಕ, ತಣ್ಣಗಿನ ವ್ಯಂಗ್ಯದ ಜಾಗತಿಕ ಚಿಂತಕ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಇದ್ದಿದ್ದರೆ ಅವರಿಗೆ ಇವತ್ತಿಗೆ ಎಪ್ಪತ್ತಮೂರು ವರ್ಷಗಳಾಗುತ್ತಿತ್ತು. ‘ಅಯ್ಯೋ ಪ್ರೊಪೆಸರ್ ಈಗ ಇರಬೇಕಿತ್ತು’ ಎಂದು ನಮಗೆಲ್ಲ ಅನಿಸುತ್ತಿರುವ ಈ ಹೊತ್ತಲ್ಲಿ ಎಂಡಿಎನ್ ನೆನಪುಗಳನ್ನು ಕೆಂಡಸಂಪಿಗೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಬಸವರಾಜು.

‘ಹನ್ನೊಂದು ಗಂಟೆಗೆ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಪ್ರೆಸ್‌ಮೀಟ್ ಇದೆ ಪ್ರೆಸ್ ಕ್ಲಬ್‌ನಲ್ಲಿ ಬರ್ತಿಯಾ’ ಎಂದು ಫ್ರೆಂಡ್ ಫೋನ್ ಮಾಡಿದ.

ನಂಜುಂಡಸ್ವಾಮಿಯವರ ಬೆಂಕಿಯಂಥ ಭಾಷಣ, ಪ್ರತಿಭಟನೆ, ಹೋರಾಟ, ಚಳುವಳಿಗಳನ್ನು ಕಣ್ಣಾರೆ ಕಂಡಿದ್ದ, ನಮ್ಮ ಹಾಸನದ ಫೈವ್ ಮೆನ್ ಆರ್ಮಿ- ಆರ್.ಪಿ.ವೆಂಕಟೇಶಮೂರ್ತಿ, ಮಂಜುನಾಥ ದತ್ತ, ವಾಸು, ಪಾಂಡು, ಪೀಟರ್‌ಗಳ ಪರಾಕ್ರಮದಲ್ಲಿ ಪಾಲ್ಗೊಂಡು ಖುದ್ದು ಅನುಭವಿಸಿದ್ದ ನನಗೆ, ಇವತ್ತು ಪ್ರೊಫೆಸರ್ ಏನು ಮಾತನಾಡಬಹುದು ಎಂಬುದನ್ನು ಕೇಳುವ ಕುತೂಹಲವಿತ್ತು. ಅಥವಾ ಏನು ಮಾತನಾಡದಿದ್ದರೂ ಪರವಾಗಿಲ್ಲ, ತೀರಾ ಹತ್ತಿರದಿಂದ ನೋಡಿದಂಗಾಗುತ್ತಲ್ಲ ಅಂತ ಆಸೆಯೂ ಇತ್ತು. ಹಾಗಾಗಿ ಪ್ರೆಸ್‌ಮೀಟ್‌ಗೆ ಹೋದೆ.

ಹನ್ನೊಂದು ಗಂಟೆ ಅಂದ್ರೆ ಹನ್ನೊಂದು ಗಂಟೆ, ಶಾರ್ಪ್ ಆಗಿ ಶುರುವಾಯಿತು ಪ್ರೆಸ್‌ಮೀಟ್. ಕುರ್ಚಿಯಲ್ಲಿ ಕೂತ ಪ್ರೊಫೆಸರ್ ಟೈಮ್ ನೋಡಿಕೊಂಡು ಬಂದಿದ್ದ ಪತ್ರಕರ್ತರತ್ತ ಒಮ್ಮೆ ಕಣ್ಣಾಡಿಸಿದರು. ಪತ್ರಕರ್ತರು ಹೆಚ್ಚೇನೂ ಇರಲಿಲ್ಲ. ಅದರಲ್ಲೂ ಗೊತ್ತಿರುವವರು ಒಂದೈದಾರು ಜನರನ್ನು ಬಿಟ್ಟರೆ, ಮಿಕ್ಕೆಲ್ಲರೂ ಹೊಸಬರೆ. ಸ್ಥಿತಪ್ರಜ್ಞ ಪ್ರೊಫೆಸರ್ ನೇರವಾಗಿ ವಿಷಯಕ್ಕಿಳಿದು ವಿವರಿಸತೊಡಗಿದರು.

ಕೂತಿದ್ದ ಪತ್ರಕರ್ತರ ನಡುವಿನಿಂದ ಒಂದು ದನಿ, ಇಂಗ್ಲಿಷ್‌ನಲ್ಲಿ, ‘ಮೊದಲು, ನಿಮ್ಮ ಪರಿಚಯ ಮಾಡಿಕೊಳ್ಳಿ... ಆನಂತರ ವಿಷಯ...’
ಪ್ರೊಫೆಸರ್ ಮುಖಭಾವ ಬದಲಾಗಲಿಲ್ಲ. ದನಿಯೂ ಜೋರಾಗಲಿಲ್ಲ. ತಣ್ಣಗೆ, ವ್ಯಂಗ್ಯಭರಿತ ಧಾಟಿಯಲ್ಲಿ, ‘ತಾವು ಯಾವ ಪತ್ರಿಕೆಯವರು...’
'ಟೈಮ್ಸ್ ಆಫ್ ಇಂಡಿಯಾ’
'ನಮ್ಮ ರೈತ್ರು ನಿಮ್ ಪತ್ರಿಕೇನಾ ಓದಲ್ಲ, ನೀವ್ ಹೊರ್‍ಗ್‌ಹೋಗ್‌ಬಹ್ದು...’

*****

ಒಂದು ದಿನ ಮೈಸೂರಿನ ನಮ್ಮ ಸ್ವಾಮಿ ಆನಂದ್ ಫೋನ್ ಮಾಡಿ, ‘ಧಣಿ, ಪ್ರೊಫೆಸರ್ ಚಾಮರಾಜನಗರಕ್ಕೆ ಬರ್ತಿದಾರೆ, ಹೋಗ್ಬುಟ್ಟು ಬಂದು ಫೋನ್ ಮಾಡ್ತಿನಿ...’ ಅಂದರು.

ಈ ನಮ್ಮ ಸ್ವಾಮಿ ಆನಂದ್ ಹುಂಬ, ಒರಟ. ಯಾರ ಬಗ್ಗೆ ಕಟುವಾಗಿ ಬರೆಯುತ್ತಾರೋ ಅವರನ್ನೇ ಎದುರಿಸುವ, ಅವರೊಂದಿಗೇ ವಾಗ್ವಾದಕ್ಕೆ ಬೀಳುವ ಅಪರೂಪದ ಆಸಾಮಿ. ಇದನ್ನು ಡಿ.ಟಿ.ಜಯಕುಮಾರ್ ಕೇಸಲ್ಲಿ ಕಣ್ಣಾರೆ ಕಂಡಿದ್ದ ನನಗೆ, ಪ್ರೊಫೆಸರ್ ಅಂದಾಕ್ಷಣ ಹೆದರಿಕೆ ಶುರುವಾಯಿತು. ‘ಅಲ್ಲಾ ಧಣಿ, ಮೊನ್ನೆ ತಾನೆ, 'ಔತಾರವಾಡುತ್ತಿರುವ ಪ್ರೊಫೆಸರ್’ ಅಂತ ಬರ್‍ದಿದೀಯ, ಈಗ ನೋಡಕ್ಕೋಗ್ತೀನಿ ಅಂತೀಯಲ್ಲ, ಜೋಪಾನ ಮಾರಾಯ...’ ಅಂದೆ.

ಅತ್ತ ಕಡೆಯಿಂದ ಭಯಂಕರ ನಗು... ಅಷ್ಟೆ.

ಸಂಜೆ ಕೆಲಸವನ್ನೆಲ್ಲ ಮುಗಿಸಿ, ಪತ್ರಿಕೆಯ ಕಚೇರಿಯಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಕೂತಿದ್ದಾಗ ಸ್ವಾಮಿ ಆನಂದ್‌ರಿಂದ ಫೋನ್...
‘ಧಣಿ, ಹೋಗ್ದೆಯಿದ್ದಿದ್ರೆ ಭಾರೀ ಲಾಸ್ ಆಗೋಗದು. ಎಂಥ ಎಕ್ಸ್‌ಪೀರಿಯನ್ಸ್ ಅಂತಿರ...’ ಜೋರು ನಗು...
'ಏನ್ ಸಿಟ್ಟು, ಏನ್ ವ್ಯಂಗ್ಯ... ಮೇಷ್ಟ್ರನ್ನಂತೂ ಚಿಂದಿ ಉಡಾಯಿಸ್ಬ್ಬುಟ್ರು...’
'ಏ, ಏನಾಯ್ತು ಹೇಳು ಮಾರಾಯ...’
'ಒಂದ್ ಕಟ್ಟೆ ಮೇಲೆ ಕೂತಿದ್ರು, ಹೋದೆ, ನಮಸ್ಕಾರ ಸಾರ್, ನನ್ನೆಸ್ರು ಸ್ವಾಮಿ ಆನಂದ್ ಅಂತ, ಲಂಕೇಶ್ ಪತ್ರಿಕೆ ರಿಪೋರ್ಟರ್ ಅಂದೆ, ನಮಸ್ಕಾರ ಅಂದ್ರು, ಬ್ಯಾಗಲ್ಲಿ ನಮ್ಮ ಲೇಟೆಸ್ಟ್ ಇಷ್ಯೂ ಇತ್ತು ಕೊಟ್ಟೆ. ಕವರ್ ಪೇಜ್ ನೋಡಿ, 'ಓ ಇದು ಇನ್ನೂ ಬರ್ತಾಯಿದಿಯ...’ ಅಂದ್ರು. ಪತ್ರಿಕೆ ತೆಗದು ಪಕ್ಕಕ್ಕೆ ಇಟ್ರು... ಶುರುವಾಯ್ತಪ್ಪ...
'ಹ್ಯೆಂಗಿದಾನೆ ಗಾಂಧಿಬಜಾರ್‌ನ ಗಾಂಧಿ?’
'ಚೆನ್ನಾಗಿದಾರೆ ಸಾರ್...’
ಪ್ರೊಫೆಸರ್ ಕಣ್ಣು ಪಕ್ಕದಲ್ಲಿದ್ದ ಪತ್ರಿಕೆ ಕಡೆ ಹೊರಳಿತು, ಸುಕ್ಕಾಗಿದ್ದ ಮುಂಗೈ ಪತ್ರಿಕೆಯನ್ನು ತೋರಿಸುತ್ತ, ‘ಎಲ್ಲಿದಾನೆ, ಸತ್ತೋಗಿದಾನೆ’ ಅಂದ್ರು.

'ಅಪಾ, ಅಪಾ, ಅಪಾ ಏನ್ ವ್ಯಂಗ್ಯ ಅಂತಿರಾ... ನಾನ್ ಏನ್ ಹೇಳ್ಬೆಕೋ ಗೊತ್ತಾಗ್ದೆ... ಬರೀ ನಗದೇ ಆಯ್ತು ಧಣಿ...’ ಅಂದು ಫೋನ್ ಇಟ್ಟರು.

ಲಂಕೇಶರೊಟ್ಟಿಗೆ ಎಂಡಿಎನ್ಮಾರನೆ ದಿನ ಹತ್ತು ಗಂಟೆಗೆ ಮೇಷ್ಟ್ರು ಬಂದು, ಪೇಪರ್‌ಗಳನ್ನೆಲ್ಲ ಓದಿ, ಕಾಫಿ ಕುಡಿದು ಕೂತಿದ್ರು. ನಾನು ಹೋಗಿ, ‘ಸಾರ್, ಸ್ವಾಮಿ ಆನಂದ್ ಪ್ರೊಫೆಸರ್‍ನ ನೋಡಿದ್ರಂತೆ, ಪತ್ರಿಕೆ ಕೊಟ್ರಂತೆ, ಅವರು ಹಿಂಗಂದ್ರಂತೆ ಸಾರ್...’ ಅಂದೆ.
‘ಲವ್‌ಲಿ ಫೆಲೋ... ಒಸಿ ಕಾಟ ಕೊಟ್ಟಿದಿವೇನಯ್ಯ, ಸರಿಯಾಗಿದೆ ಬಿಡು...’ ಅಂದ್ರು.

******

ಲಂಕೇಶರು ಸಾಯುವವರೆಗೂ ನಂಜುಂಡಸ್ವಾಮಿಯವರನ್ನು ನೋಡುವುದಾಗಲಿ, ಅವರ ಜೊತೆ ಒಡನಾಡುವುದಾಗಲಿ ಆಗಲೇಯಿಲ್ಲ. ಸತ್ತ ನಂತರ, ಪತ್ರಿಕೆ ಬಿಟ್ಟು ‘ಅಗ್ನಿ’ ಸೇರಿದ ಮೇಲೆ, ನಿಧಾನಕ್ಕೆ ಪ್ರೊಫೆಸರ್ ಜೊತೆ ಸಂಪರ್ಕ ಬೆಳೆಯಿತು. ಆ ಸಂಪರ್ಕವೂ ಆಗಾಗ, ಸಂದರ್ಭಕ್ಕೆ ತಕ್ಕಹಾಗೆ, ಅಷ್ಟೆ. ತೇಜಸ್ವಿಯವರು ಜಾಗತೀಕರಣದ ಬಗ್ಗೆ 'ಅಗ್ನಿ’ಯಲ್ಲಿ ಲೇಖನ ಬರೆದರು. ಅದನ್ನು ನೋಡಿ ಉರಿದುಹೋದ ಪ್ರೊಫೆಸರ್, ‘ಬುದ್ಧಿಜೀವಿಗಳಿಗೊಂದು ಪತ್ರ’ ಎಂಬ ಲೇಖನಮಾಲೆಯನ್ನೇ ಬರೆದರು. ಆ ಲೇಖನದಲ್ಲಿ ತೇಜಸ್ವಿಯವರನ್ನು ಲೇವಡಿ ಮಾಡಿದ್ದರು. ಆ ಲೇವಡಿ ಸಕಾರಣವಾಗಿತ್ತು. ಮತ್ತು ಕನ್ನಡದ ಬಹುತೇಕರೇನು, ಎಲ್ಲರೂ ಜಾಗತೀಕರಣವನ್ನು ಸಂಪೂರ್ಣವಾಗಿ ಅರಿತಿರಲಿಲ್ಲ. ಅಥೆಂಟಿಕ್ ಆಗಿ ಮಾತನಾಡುವಷ್ಟು ಓದಿಕೊಂಡಿರಲಿಲ್ಲ. ಇದು ಸಹಜವಾಗಿಯೇ ಪ್ರೊಫೆಸರ್‌ಗೆ ಸಿಟ್ಟು ತರಿಸಿತ್ತು. ಆ ಸಿಟ್ಟಿನಲ್ಲಿಯೇ ಕಟುವಾಗಿ ಲೇಖನ ಬರೆದು, ‘ಇದಕ್ಕೆ ನಿಮ್ಮ ಸಾಹಿತಿಗಳಿಂದ ವಿರೋಧ ಬರಬಹುದು. ಅದಕ್ಕೂ ಉತ್ತರಿಸುತ್ತೇನೆ; ಎಂದು ಹೇಳಿ ಕೊಟ್ಟಿದ್ದರು. ಆದರೆ, ಪ್ರೊಫೆಸರ್ ಛಡಿಏಟಿಗೆ ಬೆಚ್ಚಿದ ಕನ್ನಡದ ಸಾಹಿತ್ಯಲೋಕ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಪ್ರೊಫೆಸರ್ ಕೂಡ ಮತ್ತೆ ಬರೆಯಲಿಲ್ಲ.

******

ಪ್ರೊಫೆಸರ್ ಆರೋಗ್ಯ ಕೆಟ್ಟಿತ್ತು. ಓಡಾಡುವುದು ಕಡಿಮೆಯಾಗಿತ್ತು. ಅದೇ ಸಮಯಕ್ಕೆ ನಾವು ಒಂದಷ್ಟು ಜನ ಸೇರಿ ಗ್ರಾಮೀಣ ಕೃಪಾಂಕದ ಬಗ್ಗೆ ಒಂದು ಸಂವಾದ ಕಾರ್ಯಕ್ರಮವನ್ನು ರೂಪಿಸಿದ್ದೆವು, ಗಾಂಧಿಭವನದಲ್ಲಿ. ಆ ಕಾರ್ಯಕ್ರಮಕ್ಕೆ ನಂಜುಂಡಸ್ವಾಮಿಯವರನ್ನು ಕರೆದಾಗ, 'ಬರ್ತಿನಿ, ಬರ್ತಿನಿ...’ ಎಂದಷ್ಟೇ ಹೇಳಿದ್ದರು.
ಹೇಳಿದ ಸಮಯಕ್ಕೆ ಸರಿಯಾಗಿ ಪ್ರೊಫೆಸರ್ ಬಂದರು. ಕಾರ್ಯಕ್ರಮವಿನ್ನೂ ಶುರುವಾಗಿರಲಿಲ್ಲ. ಅವರ ಜೊತೆ ಕೀರಂ ನಿಂತು ಮಾತನಾಡುತ್ತಿದ್ದರು. ನನ್ನ ತಲೆಯಲ್ಲಿ ಪ್ರೊಫೆಸರ್ ಆರೋಗ್ಯದ ಹುಳ ಕೊರೆಯುತ್ತಿತ್ತು. ಅದೇ ಮೂಡ್‌ನಲ್ಲಿ 'ನಮಸ್ಕಾರ ಸಾರ್, ಹೇಗಿದಿರ?’ ಅಂದೆ. ಅದೇ ತಣ್ಣಗಿನ ವ್ಯಂಗ್ಯ... ‘ನನಗೇನಾಗಿದೆ, ನಾನ್ ಚೆನ್ನಾಗಿದಿನಿ, ನನ್ನ ಸುತ್ತ ಕೆಟ್ಟೋಗಿದೆ...’ ಮತ್ತೆ ಮುಂದಕ್ಕೆ ಮಾತಿಲ್ಲ.

ಆ ನಂತರ ಪ್ರೊಫೆಸರ್ ಗ್ರಾಮೀಣ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ನೆರವಾಗುವ ಗ್ರಾಮೀಣ ಕೃಪಾಂಕದ ಬಗ್ಗೆ ಮಾತನಾಡುತ್ತ, ‘ನಮ್ಮ ಹಳ್ಳಿ ಜನ ಹ್ಯಂಗ್ ಬದುಕ್ತಾಯಿದಾರೆ ಅನ್ನೋದು ಕುರ್ಚಿ ಮೇಲೆ ಕೂತವರಿಗೆ ಕಾಣದಿಲ್ಲ. ಅಂಥಾ ಕಷ್ಟದಲ್ಲೂ ಓದೋ ಮಕ್ಕಳಿಗೆ ‘ಗ್ರಾಮೀಣ ಗೌರವಾಂಕ’ ನೀಡಬೇಕೆ ಹೊರತು ಗ್ರಾಮೀಣ ಕೃಪಾಂಕವನ್ನಲ್ಲ...’ ಎಂದು ಕೃಪಾಂಕ-ಗೌರವಾಂಕಗಳ ನಡುವಿನ ವ್ಯತ್ಯಾಸವನ್ನು ಬಿಡಿಸಿಟ್ಟು, ಅಲ್ಲಿದ್ದವರ ಅರಿವಿನ ವ್ಯಾಪ್ತಿಯನ್ನೇ ವಿಸ್ತರಿಸಿದ್ದರು.

*****

ಒಂದಿನ ರೈತನಾಯಕ ಕೋಡಿಹಳ್ಳಿ ಚಂದ್ರಶೇಖರ್ ಬಂದು, ‘ಬಸುರಾಜ್, ರೈತ್ರು ಬಾಂಬೆಗೆ ಹೋಗ್ತಾವ್ರೆ, ಅಲ್ಲಿಗೆ ಎಲ್ಲಾ ಕಡಿಂದನೂ ಬತ್ತರೆ, ನಮ್ ರೈತ್ರುಗೆ ನಾವು ಒಂದ್ ಬ್ಯಾಡ್ಜ್ ಮಾಡ್ಕೊಡಬೇಕಲ್ಲ...’ ಅಂದ್ರು. ನಾನು ಆ ಕಾರ್ಯಕ್ರಮದ ವಿವರ ಪಡೆದು ಬ್ಯಾಡ್ಜ್ ರೂಪಿಸಿದೆ. ಪ್ರಿಂಟಾಗಿ ಸಿದ್ಧವಿದ್ದ ಮೂರು ಸಾವಿರ ಬ್ಯಾಡ್ಜ್‌ಗಳನ್ನು ಕೊಡಲು ಕೇಳಿದಾಗ, ಚಂದ್ರಶೇಖರ್, 'ಇಲ್ಲಿಗೇ ಬಂದ್ಬುಡಿ ಅಂದ್ರು.’
‘ಇಲ್ಗೆ ಅಂದ್ರೆ ಎಲ್ಗೆ...’ ಅಂದೆ.
‘ಪ್ರೊಫೆಸರ್ ಕಿದ್ವಾಯಿ ಆಸ್ಪತ್ರೆಯ ಸ್ಪೆಷಲ್ ರೂಮ್‌ನಲ್ಲವ್ರೆ, ಅವರ್‍ನೂ ನೋಡದಂಗಾಯ್ತದೆ, ಬನ್ನಿ...’ ಅಂದ್ರು.

ಕಿದ್ವಾಯಿಗೆ ಹೋದೆ. ಹಾಸಿಗೆಯ ಮೇಲೆ ಪ್ರೊಫೆಸರ್ ಮಲಗಿದ್ದರು. ನೋಡಿ ನಮಸ್ಕಾರ ಮಾಡಿದೆ. ಗುರುತು ಹಿಡಿದರೋ, ಇಲ್ಲವೋ ತಿಳಿಯಲಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಇದ್ದೋರು, ‘ರೈತ್ರು ಬಾಂಬೆಗೋಯ್ತಾವ್ರೆ, ಅವ್ರಿಗೆ ಬ್ಯಾಡ್ಜ್ ಬೇಕಲ್ವ...’ ಅಂದು ಪ್ರಿಂಟಾಗಿದ್ದ ಬ್ಯಾಡ್ಜ್‌ಗಳನ್ನು ಅವರ ಮುಂದಿಡಿದರು.

ಅದನ್ನು ನೋಡುತ್ತಿದ್ದ ಹಾಗೆ ಅವರ ಕತ್ತು, ಕೋಳಿ ಕತ್ತಿನ ಥರ ಅತ್ತಿಂದಿತ್ತ ಅಲ್ಲಾಡತೊಡಗಿತು. ‘ಉಹೂ, ಭ್ರಷ್ಟಾಚಾರ ನಡೆಯುತ್ತೆ, ಸೈನ್ ಇಲ್ದೆಯಿದ್ರೆ ದುರುಪಯೋಗ ಆಗುತ್ತೆ... ಇದನ್ನು ಕ್ಯಾನ್ಸಲ್ ಮಾಡಿ...’ ಅಂದು, ಅದುರುತ್ತಿದ್ದ ಬೆರಳುಗಳ ಮಧ್ಯಕ್ಕೆ ಪೆನ್ನನ್ನು ಸಿಕ್ಕಿಸಿಕೊಂಡು, ಒಂದು ತುಂಡು ಪೇಪರ್ ಮೇಲೆ ತಮ್ಮ ಸಹಿಯನ್ನು ಹಾಕಿ ನನಗೆ ನೀಡಿದರು.

ಇಂಥ ಹೊತ್ತಿನಲ್ಲೂ ಈ ಪರಿಯ ಎಚ್ಚರವೇ ಎಂದು ನನಗೆ ನಾನೆ ಚಿಂತಿಸುತ್ತ ನಕ್ಕು ಸುಮ್ಮನಾದೆ. ಬಹುಶಃ ಅದು ಅವರ ಕೊನೆ ಸಹಿ ಇರಬಹುದು. ಅದು ಈಗಲೂ ನನ್ನ ಬಳಿಯಿದೆ.

*****

ಲಂಕೇಶರಿಗೆ ರೈತಸಂಘ, ನಂಜುಂಡಸ್ವಾಮಿಯವರ ಬಗ್ಗೆ ಕೊಂಚ ಅನುಮಾನ, ಅಸಮಾಧಾನವಿತ್ತು. ಅದನ್ನವರು ತಾತ್ವಿಕ ಕಾರಣಗಳನ್ನಿಟ್ಟು ‘ಟೀಕೆ-ಟಿಪ್ಪಣಿ’ಯಲ್ಲಿ ಸಮರ್ಥವಾಗಿ ಮಂಡಿಸಿದ್ದರು. ಲಂಕೇಶರ ಸಹವಾಸಕ್ಕೆ ಬಿದ್ದ ನನಗೆ, ಲಂಕೇಶರು ಮಾಡಿದ್ದೆಲ್ಲ ಸರಿ ಎಂಬ ಹುಂಬ ನಂಬಿಕೆಯಿತ್ತು. ಆದರೆ, ಇಬ್ಬರ ನಡುವೆ ಇದ್ದಿರಬಹುದಾದ ಬೌದ್ಧಿಕ ಜಿದ್ದಾಜಿದ್ದಿನ ಅಂದಾಜಿರಲಿಲ್ಲ. ಅದನ್ನು ಗ್ರಹಿಸುವಷ್ಟು ಬುದ್ಧಿವಂತನೂ ನಾನಾಗಿರಲಿಲ್ಲ. ಇಬ್ಬರೂ ಕನ್ನಡನಾಡು ಕಂಡ ಮಹಾನ್ ಚಿಂತಕರು. ಆ 'ಮಹಾನ್’ ಎಂಬುದೇ ಇಬ್ಬರನ್ನೂ ಎರಡು ಧ್ರುವಗಳನ್ನಾಗಿಸಿತ್ತು; ದ್ವೀಪವನ್ನಾಗಿಸಿತ್ತು. ವ್ಯಕ್ತಿತ್ವಹರಣ, ಹೊಟ್ಟೆಕಿಚ್ಚು ಇಬ್ಬರಲ್ಲೂ ಇತ್ತು. ವ್ಯಂಗ್ಯವಂತೂ ಪರಾಕಾಷ್ಠೆ ಮುಟ್ಟಿತ್ತು.

ಒಂದಂತೂ ಸತ್ಯ... ಲಂಕೇಶರ ಪ್ರಭಾವಕ್ಕೊಳಗಾಗಿ ಪ್ರೊಫೆಸರ್ ಬಗ್ಗೆ ನಾನು ಪೂರ್ವಗ್ರಹಪೀಡಿತನಾಗಿದ್ದೆ. ಲಂಕೇಶರ ಮೇಲಿಟ್ಟ ಹುಂಬ ನಂಬಿಕೆ ಮತ್ತು ಪ್ರೀತಿ ನನ್ನನ್ನು ದಾರಿತಪ್ಪಿಸಿತ್ತು. ಈಗ ಇಬ್ಬರಿಬ್ಬರೂ ಇಲ್ಲದ ಸಮಯದಲ್ಲಿ ಈ ನನ್ನ ತಪ್ಪು ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಕಂಡಿದ್ದು, ಕೇಳಿದ್ದೇ ಸತ್ಯವಲ್ಲ; ಸುಳ್ಳೂ ಅಲ್ಲ.

ಸತ್ಯ-ಸುಳ್ಳುಗಳ ನಡುವೆ, ಬುದ್ಧನ ಮಧ್ಯಮಮಾರ್ಗದಂತೆ ಮತ್ತೇನೋ ಇರಬಹುದಲ್ಲವೆ?

(ಫೆಬ್ರವರಿ 13, 2009ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

No comments:

Post a Comment