ಎಸ್ಸೆಂ ಕೃಷ್ಣರ ಕ್ಯಾಬಿನೆಟ್‌ನಲ್ಲಿ ಎಚ್.ಸಿ.ಶ್ರೀಕಂಠಯ್ಯನವರು ಕಂದಾಯ ಸಚಿವರಾಗಿದ್ದರು. ಅದೇ ಸಮಯದಲ್ಲಿ ಬೆಂಗಳೂರಿನ ಸುತ್ತಮುತ್ತಲ ಭೂಮಿಗೆ ಭಾರೀ ಬೆಲೆ ಬಂದಿತ್ತು. ಇದೇ ತಮ್ಮ ಕೊನೆ ಅವಧಿ ಎಂಬಂತೆ ಶ್ರೀಕಂಠಯ್ಯನವರು ಚೆನ್ನಾಗಿಯೇ ದುಡಿಯುತ್ತಿದ್ದರು. ನಾಡಿನ ಪತ್ರಿಕೆಗಳಲ್ಲಿ ಪ್ರತಿನಿತ್ಯ ಶ್ರೀಕಂಠಯ್ಯನವರ ಗುಣಗಾನ ನಡೆದಿತ್ತು. ಅದಾವುದಕ್ಕೂ ತಲೆಕೆಡಿಸಿಕೊಳ್ಳದ ಶ್ರೀಕಂಠಯ್ಯನವರು ಒಂದರೆಗಳಿಗೆಯೂ ವ್ಯರ್ಥ ಮಾಡದೆ ತಮ್ಮ ಕಾಯಕದಲ್ಲಿ ಮುಳುಗಿ ಹೋಗಿದ್ದರು. ಮತ ನೀಡಿದ ಮತದಾರರನ್ನು ಮರೆತಿದ್ದರು. ಊರು ಬಿಟ್ಟು ಬೆಂಗಳೂರಿನಲ್ಲಿ ಭದ್ರವಾಗಿ ಬೇರುಬಿಟ್ಟಿದ್ದರು.
ಹೀಗೆ ಊರಿನ ಜನಗಳ ಕೈಗೆ ಸಿಗದೆ, ಕಣ್ಣಿಗೆ ಬೀಳದೆ ಇದ್ದಾಗ ಒಂದು ದಿನ ಊರಿನಿಂದ ನಮ್ಮಪ್ಪ ಫೋನ್ ಮಾಡಿದರು. ‘ಲೋ ಮಗ, ಸೀಕಂಠಯ್ಯರು ಸಿಗ್ಲೆಯಿಲ್ಲ ಕಣೋ, ನೀನೆ ಒಂದೆಜ್ಜೆ ಹೋಗಿ, ಮದುವೆ ಕಾರ್ಡ್ ಕೊಟ್ಟು, ಹೇಳ್ಬುಟ್ಬಾರಪ್ಪ, ಇಲ್ದಿದ್ರೆ ತಪ್ತಿಳ್ಕತರಕಣೊ...' ಅಂದರು. ಎಂದೂ ವೈಯಕ್ತಿಕವಾಗಿ, ವೃತ್ತಿಸಂಬಂಧವಾಗಿ ಭೇಟಿಯಾಗದ, ಮಂತ್ರಿಯಾಗಿರುವ ಶ್ರೀಕಂಠಯ್ಯನವರನ್ನು ನೋಡುವುದು ಹೇಗೆ, ನನ್ನ ಬಗ್ಗೆ ಅವರಲ್ಲಿ ಎಂತಹ ಅಭಿಪ್ರಾಯವಿರಬಹುದು... ಹೀಗೆ ಯೋಚಿಸುತ್ತಲೇ ಶಿವಾನಂದ ಸರ್ಕಲ್ಲಿನ ಹತ್ತಿರದಲ್ಲಿರುವ ಮೂವರು ಮಂತ್ರಿಗಳ ಬಂಗಲೆಯಲ್ಲಿ ಒಂದಾದ ಶ್ರೀಕಂಠಯ್ಯನವರ ಮನೆ ಮುಂದೆ ನಿಂತೆ. ರಾತ್ರಿ ಎಂಟು ಗಂಟೆಯಾಗಿತ್ತು. ನನ್ನ ನೋಡುತ್ತಿದ್ದಂತೆ ಅವರ ಕಾರಿನ ಡ್ರೈವರ್ ಚಂದ್ರು ಮತ್ತು ಬಂಗಲೆಯಲ್ಲಿದ್ದ ಬಾಬು, ‘ಇದೇನು ಇಲ್ಲಿ' ಎನ್ನುವಂತೆ ಅನುಮಾನದಿಂದ ನೋಡಿದರು. ಪರಿಚಯವಿದ್ದುದರಿಂದ ‘ಗೌಡ್ರುನ್ನ ನೋಡಬೇಕಾಗಿತ್ತು' ಎಂದೆ. ಹೋಗಿ ಹೇಳಿಬಂದ ಬಾಬು, ‘ಮೇಲವ್ರೆ ಹೋಗಿ' ಅಂದರು.
ಅಷ್ಟು ದೊಡ್ಡ ಬಂಗಲೆ ಆ ಇಬ್ಬರು ಹುಡುಗರು ಮತ್ತು ಶ್ರೀಕಂಠಯ್ಯನವರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ‘ಯಾರನ್ನೂ ಬಿಡಬೇಡ' ಎಂದು ಮೊದಲೆ ಹೇಳಿದ್ದ ಶ್ರೀಕಂಠಯ್ಯನವರು, ಅಕಸ್ಮಾತಾಗಿ ‘ಕಳ್ಸು' ಎಂದಿದ್ದರು. ಹೋಗಿ ಕೂತೆ. ಸ್ವಲ್ಪ ಹೊತ್ತಿಗೆ ಹೆಗಲ ಮೇಲೆ ಟವಲ್ ಹಾಕಿಕೊಂಡು ಬಂದ ಅಯ್ಯ-ಅಣ್ಣಯ್ಯ-ಶ್ರೀಕಂಠಯ್ಯ, ‘ಹೂಂ, ನಂಗ್ ಟೈಮಿಲ್ಲ, ಜಲ್ದಿ ಹೇಳು ಏನು' ಅಂದರು. ನನ್ನ ತಂಗಿಯ ಮದುವೆ ಕಾರ್ಡಿಗೆ ಅವರ ಹೆಸರು ಬರೆದು, ನಮ್ಮಪ್ಪನ ಹೆಸರು ಹೇಳಿ, ಕಾರ್ಡನ್ನು ಕೈಗೆ ಕೊಡುತ್ತ, ‘ಮರೀದೆ ಬರಬೇಕಂತೆ' ಅಂದೆ. ‘ಓ ತಿಮ್ಮಪ್ಪನ ಮಗನಾ... ಯಾವತ್ತೈತೋ... ಅವತ್ತಾಗದಿಲ್ವಲೋ... ನಿನ್ನಸ್ರೇನು' ಅಂದರು. ಹೆಸರೇಳಿದೆ.
‘ಓಹೋ, ನೀನೆ ಏನಪ್ಪ ಬಸುರಾಜ, ರಾಜ ಬಸುರಾಜ... ಬರ್‍ದೆ... ಬರ್‍ದೆ... ಬರ್‍ದಪ್ಪ. ಆ ಲ್ಯಂಕೇಸ್ಗು ಬುದ್ಧಿಲ್ಲ, ನೀನೂ ಬುಡ್ಲಿಲ್ಲ, ನಾನ್ ಯಾರೋ ಅಂತಿದ್ದೆ... ನೀನೆಯಾ' ಅಂದರು.
‘ಬರ್‍ದು ಬೇಜಾರು ಮಾಡ್‌ದ್ನಾ ಗೌಡ್ರೆ...'‘ಬೇಜಾರೇನು ಬಾರೋ, ನಾನ್ ಮಾಡದ್ ಬುಟ್ನಾ, ನೀನ್ ಬರೆಯದ್ ಬುಟ್ಟಾ... ಹೂಂ, ನನ್ಗೀಗ ಟೈಮಿಲ್ಲ, ತಗಳ ಹೊತ್ತಾಯ್ತು, ನೀನೇನಾರ ತಗತಿಯ...' ಅಂದರು.‘ತಗತಿನಿ, ಆದ್ರೆ ಇವತ್ತು ಬ್ಯಾಡ, ಗಾಡಿ, ಪೊಲೀಸ್ನೋರು, ನೀವ್ ತಗಳಿ, ಸ್ವಲ್ಪ ಹೊತ್ತು ಕೂತ್ಕತಿನಿ...' ಅಂದೆ.
ಅವರ ಕುಡಿಯುವ ಉತ್ಸಾಹ, ಆ ವಯಸ್ಸಿನಲ್ಲಿಯೂ ಅದಕ್ಕೆ ಸ್ಪಂದಿಸುತ್ತಿದ್ದ ಅವರ ದೇಹ, ಎಲ್ಲವನ್ನೂ ಮರೆತು ಅದಕ್ಕಾಗಿ ವಿನಿಯೋಗಿಸುತ್ತಿದ್ದ ಆ ಪ್ರೈಮ್ ಟೈಮ್, ಒಬ್ಬರೆ ಕೂತು ಆಸ್ವಾದಿಸುತ್ತಿದ್ದ ರೀತಿ... ಒಂದೆರೆಡು ಪೆಗ್ ಇಳಿಯುತ್ತಿದ್ದಂತೆ ಸಡಿಲವಾದರು. ಅದೂ ಇದೂ ಮಾತಾಡಿದರು. ಮಧ್ಯೆ ಗೌಡ್ರಿಗೆ ಬುದ್ಧಿಲ್ಲ ಅಂತ ಬಯ್ದರು.ಚಿಕ್ಕಂದಿನಿಂದಲೂ ಅವರ ಸ್ಕಾಚ್ ವ್ಹಿಸ್ಕಿ, ನಾಟಿಕೋಳಿ ಬಾಡು ಮತ್ತು ಇತ್ಯಾದಿಗಳ ವರ್ಣರಂಜಿತ ಕತೆಗಳನ್ನು ಕೇಳಿ ತಿಳಿದಿದ್ದೆ. ಊರಿನ ಐಬಿಯಲ್ಲಿ ಇವರಿಗಾಗಿ ಯಾವಾಗಲು ರಿಸರ್ವ್ ಆಗಿರುತ್ತಿದ್ದ ರೂಮಿನ ಸುತ್ತ ಸುಳಿದಾಡಿ ಅಯ್ಯನವರ ಐಭೋಗವನ್ನು ಕಣ್ಣಾರೆ ಕಂಡಿದ್ದೆ. ಅವರ ಸುತ್ತಮುತ್ತಲಿನವರಿಂದ ಕೇಳಿದ್ದನ್ನು ಕತೆ ಕಟ್ಟಿ ಬರೆದಿದ್ದೆ. ಅವರೆ ಸಿಕ್ಕಾಗ ಮಿಸ್ ಮಾಡಿಕೊಳ್ಳುವುದು ಬೇಡವೆಂದು,
‘ಈಗ್ಲು ಮದ್ಲಂಗೆ ನಡಸ್ತಿರ ಗೌಡ್ರೆ...' ಅಂದೆ.
‘ಹೋಗ್ ಹೋಗೊ ಹುಚ್ಚಪ್ಪ, ರಕ್ತ್ ರಕ್ತ ಬತ್ತದೆ, ಅವೆಲ್ಲ ಮುಗೀತ್ಕಣೊ...' ಅಂದರು. ಮನಸ್ಸಿನಲ್ಲಿ ಒಂಚೂರೂ ಕಲ್ಮಶವಿಲ್ಲ. ಇವನ ಮುಂದೆ ಇದೆಲ್ಲ ಯಾಕೆ ಎನ್ನುವ ಬಿಗುಮಾನವೂ ಇಲ್ಲ. ಹೆದರಿಕೆಯಂತೂ ಇಲ್ಲವೇ ಇಲ್ಲ. ಹೀಗೇ ಮಾತು ಸಾಗಿತ್ತು, ನಡುವೆ ಫೋನ್ ಬಂತು. ನಾನಿದ್ದೇನೆಂಬ ಪರಿವೆಯೂ ಇಲ್ಲದೆ ‘ವ್ಯವಹಾರದ' ಮಾತಿನಲ್ಲಿ ಮಗ್ನರಾದರು. ನನ್ನ ಟ್ರ್ಯಾಕ್ ಕಟ್ ಆಯ್ತಲ್ಲ ಎಂದು ಫೋನ್ ಮಾಡಿದವರನ್ನು ಬಯ್ದುಕೊಂಡು, ಹಾಗೇ ನಮಸ್ಕರಿಸಿ ಎದ್ದು ಹೊರಟೆ.
ದಾರಿಯುದ್ದಕ್ಕೂ ಹಾಸನ ಜಿಲ್ಲೆಯ ರಾಜಕಾರಣಿಗಳು ತಲೆ ತುಂಬಿಕೊಂಡರು. ದೇವೇಗೌಡ-ಪುಟ್ಟಸ್ವಾಮಿಗೌಡ-ಶ್ರೀಕಂಠಯ್ಯನವರ ಬಗ್ಗೆ ಯೋಚಿಸುತ್ತಿದ್ದಂತೆ ಅವರ ಮೇಲೆ ಪ್ರೀತಿ ಉಕ್ಕಿ ಹರಿಯತೊಡಗಿತು. ಅವರ ಮೇಲೆ ಅಷ್ಟೆಲ್ಲ ಕೆಟ್ಟದಾಗಿ ಬರೆದು, ಏನೆಲ್ಲ ಕಷ್ಟ ಕೊಟ್ಟರೂ ಒಂಚೂರೂ ಕೋಪವಿಲ್ಲವಲ್ಲ. ಇದೇ ಜಾಗದಲ್ಲಿ ದೇವೇಗೌಡ ಅಥವಾ ಪುಟ್ಟಸ್ವಾಮಿಗೌಡ ಇದ್ದಿದ್ದರೆ ನನ್ನ ಕತೆ ಏನಾಗುತ್ತಿತ್ತು ಅಂತೆಲ್ಲ ನೆನೆದು ಬೆವರತೊಡಗಿದೆ.
ನನ್ನೂರು ಚನ್ನರಾಯಪಟ್ಟಣ. ಮನೆ ಮೇಗಲಕೇರಿಯಲ್ಲಿ. ಕೂಗಳತೆಯ ದೂರದಲ್ಲಿ ಶ್ರೀಕಂಠಯ್ಯನವರ ಮನೆ. ನಮ್ಮಪ್ಪ ಅವರ ಅಭಿಮಾನಿ. ಅವರ ಪಕ್ಷದ ಒಂದು ಕಾಲದ ಕಾರ್ಯಕರ್ತ. ನಾನೋದಿದ್ದು ಅವರ ಒಡೆತನವಿರುವ, ಆದಿಚುಂಚನಗಿರಿ ಹೆಸರಿರುವ ಕಾಲೇಜಿನಲ್ಲಿ. ಆ ಕಾಲೇಜಿನಲ್ಲಿ ಅಯ್ಯನವರು ನಡೆಸುತ್ತಿದ್ದ ವ್ಯವಹಾರಗಳನ್ನು ಕಣ್ಣಾರೆ ಕಂಡಿದ್ದೆ, ಅದನ್ನೆ ‘ಲಂಕೇಶ್ ಪತ್ರಿಕೆ'ಗೆ ವರದಿ ಮಾಡಿದ್ದೆ. ಇಪ್ಪತ್ತು ಪುಟಗಳಲ್ಲಿ ಅದೂ ಒಂದು ಪುಟವಾಗಿ, ಬಂದ ವಾರಕ್ಕಷ್ಟೆ ಸೀಮಿತವಾಗಿ ಮರೆತುಹೋಗಿತ್ತು. ಅದರಿಂದ ಅಯ್ಯನವರಿಗೆ ತೊಂದರೆಯೇನೂ ಆಗಿರಲಿಲ್ಲ.
ತೊಂದರೆ ಆಗಿದ್ದು ಯಾವಾಗ ಎಂದರೆ, ಆ ವರದಿಯ ಬಗ್ಗೆ ದೇವೇಗೌಡರು ವಿಶೇಷ ಆಸಕ್ತಿ ವಹಿಸಿದಾಗ. ಆಗ ಹಾಸನ ಜಿಲ್ಲೆ ರಾಜಕಾರಣ ಎಂದರೆ ಗೌಡ್ರ ಗದ್ಲವಾಗಿತ್ತು. ಒಕ್ಕಲಿಗರ ನಾಯಕತ್ವಕ್ಕಾಗಿ, ಅಧಿಕಾರಕ್ಕಾಗಿ ಮತ್ತು ಜಿಲ್ಲೆಯ ಹಿಡಿತಕ್ಕಾಗಿ ದೇವೇಗೌಡ ಮತ್ತು ಶ್ರೀಕಂಠಯ್ಯನವರ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿತ್ತು. ಚುನಾವಣೆ ಬಂತೆಂದರೆ ಹೊಡೆದಾಟ, ದೊಂಬಿ, ಕೊಲೆಗಳು ಕಾಮನ್ ಆಗುತ್ತಿದ್ದವು.
ಇಂತಹ ಸಮಯದಲ್ಲಿ ದೇವೇಗೌಡರು ಒಂದು ದಿನ ಫೋನ್ ಮಾಡಿ, ‘ಗುರುಗಳೆ ನಿಮ್ಮ ಜೊತೆ ಸ್ವಲ್ಪ ಮಾತ್ನಾಡೊದಿತ್ತಲ್ಲ' ಅಂದರು. ಅವರ ಮಗ, ಮೊಮ್ಮಗನ ವಯಸ್ಸು ನನಗೆ. ಗುರುಗಳೆ ಅಂದಿದ್ದು ಶಾಕ್ ಆಗಿ, ಸದಾಶಿವನಗರದ ಮನೆಗೆ ಹೋದರೆ, ‘ಚುಂಚನಗಿರಿ ಕಾಲೇಜ್ ಬಗ್ಗೆ ವರದಿ... ಅದರ ಡೀಟೈಲ್ಸ್ ಬೇಕಿತ್ತಲ್ಲ' ಅಂದರು. ನನ್ನ ಬಳಿ ಇದ್ದ ದಾಖಲೆಗಳು ಮತ್ತು ವರದಿ ಬಂದಿದ್ದ ಪತ್ರಿಕೆ ಎಲ್ಲ ಕೊಟ್ಟೆ. ‘ನಿಮ್ಮಂಥೋರಿರೋದ್ರಿಂದಲೆ ದೇಶ ಅಷ್ಟೋ ಇಷ್ಟೋ ಉಳಿದಿರೋದು...' ಅಂದರು. ನಾನು ಆಕಾಶದಲ್ಲಿ ತೇಲತೊಡಗಿದೆ.
ನಂತರದ ದಿನಗಳಲ್ಲಿ ದೇವೇಗೌಡರು ಪಟ್ಟು ಬಿಡದೆ ಅದನ್ನು ಅಸೆಂಬ್ಲಿಯಲ್ಲಿ ರೈಸ್ ಮಾಡಿ ಸಿಓಡಿ ತನಿಖೆಯಾಗುವಂತೆ ನೋಡಿಕೊಂಡರು. ಸಿಓಡಿ ಅಧಿಕಾರಿಗಳು ಚನ್ನರಾಯಪಟ್ಟಣದ ಕಾಲೇಜಿಗೆ ಬಂದು ಶ್ರೀಕಂಠಯ್ಯನವರನ್ನು ತನಿಖೆಗೊಳಪಡಿಸಿದರು. ತನಿಖೆಯಲ್ಲಿ ಆರೋಪಗಳು ಸಾಬೀತಾದಾಗ ದೇವೇಗೌಡರು ಗೆದ್ದಿದ್ದರು, ಅಧಿಕಾರದಲ್ಲಿದ್ದ ಶ್ರೀಕಂಠಯ್ಯನವರು ಕಂಗಾಲಾಗಿದ್ದರು.
ಹಾಸನ ಜಿಲ್ಲೆಯ ಮಟ್ಟಕ್ಕೆ ಅಂದಿಗೆ ದೇವೇಗೌಡರೊಂದಿಗೆ ಅಷ್ಟೇ ದ್ವೇಷ, ಸೇಡಿನ ರಾಜಕಾರಣಕ್ಕೆ ಬಿದ್ದು ಸೆಣಸಾಡುತ್ತಿದ್ದ ಮತ್ತೊಬ್ಬ ಒಕ್ಕಲಿಗ ನಾಯಕ ಪುಟ್ಟಸ್ವಾಮಿಗೌಡರಿದ್ದರು. ತನಿಖೆಗೊಳಗಾಗಿ ಕಂಗಾಲಾಗಿದ್ದ ಶ್ರೀಕಂಠಯ್ಯನವರು ಪುಟ್ಟಸ್ವಾಮಿಗೌಡರ ನೆಂಟಸ್ತನ ಬೆಳೆಸಿ ಬೀಗರಾದರು. ಒಂದಾಗಿ ದೇವೇಗೌಡರನ್ನು ಎದುರಿಸಲು ಸಿದ್ಧರಾದರು. ಅದೇ ಸಮಯಕ್ಕೆ ಸರಿಯಾಗಿ ೧೯೯೪ರ ಚುನಾವಣೆ. ಲಂಕೇಶರು ದೇವೇಗೌಡರ ಪರವಾಗಿದ್ದರು. ‘ದೇವೇಗೌಡ- ಮುಖ್ಯಮಂತ್ರಿ, ಅಮುಖ್ಯಮಂತ್ರಿ' ಎಂದು ಮುಖಪುಟದ ಸುದ್ದಿ ಮಾಡಿ, ದೇವೇಗೌಡರನ್ನು ಈ ಕ್ಷಣದಲ್ಲಿ ನಾವೇಕೆ ಬೆಂಬಲಿಸಬೇಕು ಎಂದು ಸಮರ್ಥನೀಯ ಕಾರಣಗಳನ್ನಿಟ್ಟು ಬರೆದಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು, ಜನತಾದಳ ಗೆದ್ದು ದೇವೇಗೌಡರು ಮುಖ್ಯಮಂತ್ರಿಯಾದರು.
ಆದರೆ ಶ್ರೀಕಂಠಯ್ಯನವರ ಮೇಲಿನ ಸಿಓಡಿ ತನಿಖೆಯ ವರದಿ ಮಾತ್ರ ಹೊರಬರಲಿಲ್ಲ. ಆ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಫೈಲನ್ನು ಶ್ರೀಕಂಠಯ್ಯನವರ ಮುಂದಿಟ್ಟ ಮುಖ್ಯಮಂತ್ರಿ ದೇವೇಗೌಡರು ಬದ್ಧದ್ವೇಷಿ ಪುಟ್ಟಸ್ವಾಮಿಗೌಡರನ್ನು ಬಗ್ಗುಬಡಿಯಲು ಬೀಗ ಶ್ರೀಕಂಠಯ್ಯನವರನ್ನೇ ಬಳಸಿಕೊಂಡರು. ಅದರಲ್ಲಿ ಅವರು ಯಶಸ್ವಿಯೂ ಆದರು. ಅಲ್ಲಿಂದ ಅಯ್ಯನವರು ದೇವೇಗೌಡರ ವಿರುದ್ಧ ಕಿಡಿಕಾರುವುದನ್ನು ಬಿಟ್ಟು ತಣ್ಣಗಾದರು. ಇವರಿಬ್ಬರ ಅಂಡರ್‌ಸ್ಟ್ಯಾಂಡಿಂಗ್ ನೋಡಿ ಪುಟ್ಟಸ್ವಾಮಿಗೌಡರು ಉರಿದು ಕೆಂಡವಾದರು. ಶ್ರೀಕಂಠಯ್ಯನವರ ಮೇಲಿನ ಸಿಓಡಿ ತನಿಖೆಯ ಫೈಲ್ ಧೂಳಿಡಿಯಿತು.
ಆ ಫೈಲ್‌ಗೆ ಮತ್ತೆ ಜೀವ ಬಂದದ್ದು ೧೯೯೯ರ ಚುನಾವಣಾ ಸಮಯದಲ್ಲಿ. ಒಂದು ದಿನ ಇದ್ದಕ್ಕಿದ್ದಂತೆ ಪುಟ್ಟಸ್ವಾಮಿಗೌಡರ ಫೋನ್, ‘ಅಣ್ಣಾ, ಹತ್ತೂವರೆಗೆ ಲಕ್ಕೆಡ್ ಹೌಸ್ಸಲ್ಲಿ ಸಿಗಬೇಕಲ್ಲಣ್ಣ' ಅಂದರು. ದೇವೇಗೌಡರು ಸಿಎಂ, ಪಿಎಂ ಆದಾಗ ಪುಟ್ಟಸ್ವಾಮಿಗೌಡರೊಂದಿಗೆ ನಿಕಟವಾಗಿದ್ದು ದೇವೇಗೌಡರ ವಿರುದ್ಧ ಸಾಕಷ್ಟು ವರದಿ ಮಾಡಿದ್ದರಿಂದ, ಕರೆದಾಕ್ಷಣ ಇಲ್ಲ ಎನ್ನಲಾಗದೆ ಬರ್ತೀನಿ ಎಂದು ಹೋದೆ. ಒಂದು ಕಾಫಿ ಕುಡಿಸಿ, ‘ಶ್ರೀಕಂಠಯ್ಯನೋರ ಸಿಓಡಿ ಫೈಲ್ ಬಗ್ಗೆ ಡೀಟೈಲ್ಸ್ ಬೇಕಿತ್ತಲ್ಲಣ್ಣ...' ಅಂದರು.
ದೇವೇಗೌಡರು ಯಾವ ತಂತ್ರವನ್ನು ಪ್ರಯೋಗಕ್ಕೊಡ್ಡಿ ಗೆದ್ದಿದ್ದರೋ ಅದೇ ತಂತ್ರಕ್ಕೆ ಪುಟ್ಟಸ್ವಾಮಿಗೌಡರೂ ಕೈ ಹಾಕಿದ್ದರು. ಫೈಲ್ ಇಟ್ಟುಕೊಂಡು ಬೀಗರನ್ನು ಬ್ಲ್ಯಾಕ್‌ಮೇಲ್ ಮಾಡಲು ಹವಣಿಸುತ್ತಿದ್ದರು. ಅದೇ ಸಮಯದಲ್ಲಿ ಅಧಿಕಾರದಲ್ಲಿದ್ದ ಜನತಾದಳ ಒಳಜಗಳ, ಕಿತ್ತಾಟಗಳಿಂದ ಕೆಟ್ಟ ಹೆಸರು ಸಂಪಾದಿಸಿತ್ತು. ಕಾಂಗ್ರೆಸ್ ಪರ ಅಲೆ ಇತ್ತು. ಆದರೆ ಪುಟ್ಟಸ್ವಾಮಿಗೌಡರ ಅದೃಷ್ಟ ಕೈ ಕೊಟ್ಟಿತ್ತು. ಹೈಕಮಾಂಡ್ ಅವರನ್ನು ಲೋಕಸಭೆಗೆ ದಬ್ಬಿತ್ತು. ಶ್ರೀಕಂಠಯ್ಯನವರು ಗೆದ್ದು ಮಂತ್ರಿಯಾಗಿದ್ದರು. ಮಹಾನುಭಾವರಾದ ಪುಟ್ಟಸ್ವಾಮಿಗೌಡರು, ಅಯ್ಯನವರು ಸಚಿವರಾಗಿದ್ದಷ್ಟು ದಿನವೂ ಕಿರುಕುಳ ಕೊಟ್ಟರು. ಫೈಲ್ ಇಟ್ಟುಕೊಂಡು ಅವರಿಂದ ಅಪಾರ ಅನುಕೂಲಗಳನ್ನೂ ಪಡೆದರು.
ಆದರೆ ಸಿಓಡಿ ತನಿಖೆಯ ವರದಿಯ ಫೈಲನ್ನು ಬಹಿರಂಗಗೊಳಿಸಲಿಲ್ಲ. ಶ್ರೀಕಂಠಯ್ಯನವರಿಗೆ ಶಿಕ್ಷೆಯೂ ಆಗಲಿಲ್ಲ. ಈಗ ಇದೇ ಶ್ರೀಕಂಠಯ್ಯನವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಶ್ರವಣಬೆಳಗೊಳ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ವಯಸ್ಸಾದವರಿಗೆ, ಸೋತವರಿಗೆ ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ವರಿಷ್ಠ ಮಂಡಳಿ ನಿರ್ಣಯಿಸಿದ್ದರೂ, ಎಂಬತ್ಮೂರು ವರ್ಷಗಳ ಶ್ರೀಕಂಠಯ್ಯನವರಿಗೆ ಟಿಕೆಟ್ ಸಿಕ್ಕಿದೆ.
ಹಾಸನದ ಮಣ್ಣಿನ ಗುಣವೋ ಇಲ್ಲ ಅಯ್ಯನವರ ನವಚೈತನ್ಯಕ್ಕೆ ಕಾರಣವಾಗಿರುವ ವಿನಾಕಾರಣಗಳ ಸ್ಫೂರ್ತಿಯೋ .. ಅಯ್ಯ ಈಗಲೂ ಬಿಸಿರಕ್ತದ ತರುಣರು?!
(ಏಪ್ರಿಲ್ 28, 2008 ರಂದು ಪ್ರಕಟ)