Friday, November 27, 2009

ಲಂಕೇಶರೂ ಮತ್ತು ನಾರಿಯರೂ



ಸಮಯ ಸಿಕ್ಕಾಗಲೆಲ್ಲ ಲಂಕೇಶರು ಅವರ ಹತ್ತಾರು ಪ್ರೇಯಸಿಯರ ಬಗ್ಗೆ ಪತ್ರಿಕೆಯಲ್ಲಿ ಕೆಲವು ಸಲ ಪುಟ್ಟದಾಗಿ, ಹಲವು ಸಲ ಪುಟಗಟ್ಟಲೆ ಕತೆಯಾಗಿ ಬರೆದಿದ್ದಾರೆ. ಡಿಸೆಂಬರ್ ೩೧ರ ರಾತ್ರಿ, ತೋಟದ ಮನೆಯ ಪಾರ್ಟಿಯಲ್ಲಿ, ತಮ್ಮನ್ನು ರಾವಣನಿಗೆ ಹೋಲಿಸಿಕೊಂಡು, ‘ಇಲ್ಲಿ ಮಂಡೋದರಿಯೂ ಇದ್ದಾಳೆ, ಸೀತೆಯರೂ ಇದ್ದಾರೆ' ಎದುರೆದುರಿಗೇ ಹೇಳಿದ್ದು ಇದೆ. ಆಮೇಲೆ ‘ಹುಳಿಮಾವಿನಮರ' ಪುಸ್ತಕದಲ್ಲಿ ಎಷ್ಟು ಹೇಳಬೇಕೋ ಅಷ್ಟನ್ನು ಅಂದಗೆಡದಂತೆ ಅರುಹಿದ್ದೂ ಆಗಿದೆ. ಅಂದಮೇಲೆ, ಅವರ ಪ್ರೇಯಸಿಯರನ್ನು ಕುರಿತು ಹೇಳಲು ಇನ್ನೇನಿದೆ?

ಅಷ್ಟಕ್ಕೂ ಲಂಕೇಶರ ವಯಸ್ಸಿನಲ್ಲಿ ಅರ್ಧ ವಯಸ್ಸಿನವನು ನಾನು. ಆದರೆ, ಲಂಕೇಶರು ಎಂದೂ ಇವನು ಚಿಕ್ಕವನು, ಇವನ ಮುಂದೆ ಇದನ್ನು ಮಾತನಾಡಬಾರದು, ಇದನ್ನು ಮಾಡಬಾರದು ಎಂಬ ಬಿಗುಮಾನಕ್ಕೆ ಒಳಗಾದವರಲ್ಲ. ಅಥವಾ ಈ ಪುಟ್ಟ ಹುಡುಗರಿಗೆ ಇದೆಲ್ಲ ಗೊತ್ತಾದರೆ, ಅವರ ಮುಂದೆ ನಾನು ಚಿಕ್ಕವನಾಗಿ ಕಾಣುತ್ತೇನೆ, ಅವರು ನನ್ನನ್ನು ಕೀಳಾಗಿ ಕಾಣಬಹುದು ಎಂದು ಯೋಚಿಸಿದವರೂ ಅಲ್ಲ. ಅವರು ನಮಗರ್ಥವಾಗಿದ್ದರು, ನಾವು ಅವರಿಗರ್ಥವಾಗಿದ್ದೊ, ಅಷ್ಟೆ.

ಒಂದು ಮಂಗಳವಾರ, ಪತ್ರಿಕೆ ಮಾರುಕಟ್ಟೆಗೆ ಬಂದಿದೆ, ಕೆಲಸವಿಲ್ಲ. ಆದರೂ ಆಫೀಸಿಗೆ ಹೋಗದಿದ್ದರೆ ಜೀವವೇ ಹೋಗುತ್ತೇನೋ ಎಂಬಂತೆ, ಹೋಗಿ ಪೇಪರ್ ಓದುತ್ತಾ ಕೂತೆ. ಜೊತೆಗೆ ನಮ್ಮ ಪ್ರೀತಿಯ ಗಿರಿಯ ಕಾಫಿಯೂ ಇತ್ತು. ಮೇಷ್ಟ್ರು ಬಂದ್ರು, ನನ್ನತ್ತ ನೋಡಿ ರೂಮಿಗೆ ಹೋದರು. ಹತ್ತೇ ಹತ್ತು ನಿಮಿಷಗಳಲ್ಲಿ ಒಂದು ಫೋನ್ ಬಂತು, ಗಿರಿ ಮುಖ ನೋಡಿದೆ, ಆತ ಮೇಷ್ಟ್ರಿಗೆ ಅನ್ನುವಂತೆ ಸನ್ನೆ ಮಾಡಿ ಅವರಿಗೆ ಕನೆಕ್ಟ್ ಮಾಡಿದ. ಅವರು ಮಾತಾಡಿ, ಫೋನಿಟ್ಟು, ಹೊಟ್ಟೆ ಮೇಲೆ ಕೈಯಾಡಿಸುತ್ತ ನಾನು ಕುಳಿತಿದ್ದಲ್ಲಿಗೆ ಬಂದರು. ಮುಖದಲ್ಲಿ ಕೀಟಲೆ ಕುಣಿಯುತ್ತಿತ್ತು. ಮಾತಿಲ್ಲ. ನನ್ನ ನೋಡಿ ಪೊದೆಯಂತಹ ಹುಬ್ಬುಗಳನ್ನು ಪ್ರಶ್ನಾರ್ಥಕ ಚಿಹ್ನೆಗಳಂತೆ ಹಾರಿಸುತ್ತ, ಅದೇ ಪ್ರಶ್ನೆ ಎಂದು ಅರ್ಥ ಮಾಡಿಕೊಳ್ಳುವಂತೆ, ನಾನೇ ಏನು ಎಂದು ಕೇಳುವಂತೆ ಪ್ರೇರೇಪಿಸತೊಡಗಿದರು.

ಅಷ್ಟು ವರ್ಷಗಳ ಒಡನಾಟದಿಂದಾಗಿ ನನಗೂ ಅವರ ಜೊತೆ ಮಾತು-ಕತೆ ಸರಾಗವಾಗಿತ್ತು. ಅವರೂ ನನಗೆ ಮುಚ್ಚಿಟ್ಟು ಮಾಡುವುದೇನೂ ಇಲ್ಲ ಎಂಬ ಹಂತಕ್ಕೆ ಬಂದಿದ್ದರು. ಹಾಗಾಗಿ ನಾನು, ‘ಯಾರ್ ಸಾರ್' ಅಂದೆ. ಮತ್ತೆ ಮಾತಿಲ್ಲ. ತುಟಿಯನ್ನು ಬಿಗಿಯಾಗಿ ಬಂದ್ ಮಾಡಿಕೊಂಡು, ಭುಜ ಕುಣಿಸಿದರು. (ಹಾಲಿವುಡ್ ಸಿನಿಮಾಗಳಲ್ಲಿನ ನಟರಂತೆ!)
ಮತ್ತೆ ನಾನೇ, ‘ಯಾರ್ ಸಾರ್, ಏನಂತೆ' ಅಂದೆ.
ಮುಖದಲ್ಲಿ ತಿಳಿನಗೆಯಿತ್ತು, ‘ಅವುಳ್ ಬತ್ತಳಂತೆ, ಏನ್ಮಾಡದೋ...' ಅಂದರು.
ಸಮಯ ಸಂದರ್ಭದ ಅರಿವಾಗಿ, ‘ಸರಿ, ಹಾಗಾದ್ರೆ ನಾನ್ ಬರ್ತಿನಿ' ಅಂದು ಎದ್ದುಹೋದೆ. ತಲೆಯಲ್ಲಿ ಮೇಷ್ಟ್ರು ಅಂದ ‘ಏನ್ಮಾಡದೋ...' ಕೊರೆಯುತ್ತಲೇ ಇತ್ತು. ಅಷ್ಟಕ್ಕೂ ಅವರ ಪ್ರೇಯಸಿ, ಅದು ಅವರ ಕಷ್ಟ, ನನಗ್ಯಾಕೆ ಎಂದು ಬೀದಿಗೆ ಬಿದ್ದಾಕ್ಷಣ ಮನಸ್ಸು ಬೀದಿಯ ಚಿತ್ರಗಳಲ್ಲಿ ಚೆಲ್ಲಾಡಿಕೊಂಡಿತು. ಎಲ್ಲಿಗೆ ಹೋಗಲಿ, ಒಂದು ರೌಂಡ್ ಹಾಕಿ, ಒಂದೂವರೆಗೆ ಮತ್ತೆ ಆಫೀಸಿಗೇ ಬಂದೆ. ಮೇಷ್ಟ್ರು ಕೊಂಚ ಮಂಕಾಗಿದ್ದರು. ಬೆಳಗ್ಗೆ ನನ್ನ ರೇಗಿಸಿದ್ದು ನೆನಪಾಗಿ, ಅವರನ್ನೂ ರೇಗಿಸಬೇಕೆಂಬ ಆಸೆಯಾಗಿ, ‘ಏನ್ಮಾಡದ್ರಿ ಸಾರ್...' ಅಂದೆ.
ದೇಹ ಮತ್ತು ದನಿ ಕುಗ್ಗಿತ್ತು. ಇವನು ಯಾಕೆ ಹೀಗೆ ಕೇಳ್ತಿದಾನೆ ಎಂಬುದನ್ನೂ ಯೋಚಿಸದೆ, ‘ಏನ್ಮಾಡ್ತರೊ...' ಅಂದು ಅಂಗೈಗಳನ್ನು ಚೆಲ್ಲಿ, ‘ಏನು ಮಾಡಕ್ಕಾಗಲ್ಲ, ಮುಗೀತೆಲ್ಲ, ಬರಿ ಮಾತಾಡಿ, ಬರ್‍ದು, ಚಟ ತೀರಿಸ್ಕಬೇಕಷ್ಟೆ...' ಅಂದರು.

ಕೇಳಬಾರದಾಗಿತ್ತು ಅಂತ ನನ್ನ ಬಗ್ಗೆ ನನಗೇ ಪಿಚ್ಚೆನ್ನಿಸಿತು. ಬಂದುಹೋದ ಅವರ ಪ್ರೇಯಸಿಯ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು. ಸುಮ್ಮನೆ ನಿಂತೆ. ಬಾ ಅಂದು, ಗಿರಿಗೆ ಕಾಫಿ ತರಲಿಕ್ಕೆ ಹೇಳಿದರು. ಹೆಣ್ಣು-ಗಂಡಿನ ಸಂಬಂಧಗಳು, ವಯಸ್ಸು-ಮನಸ್ಸುಗಳ ಭೋರ್ಗರೆತ, ಜನಪ್ರಿಯತೆ, ಭಂಡ ಧೈರ್ಯ, ಪುಕ್ಕಲುತನ, ಪಲಾಯನಗಳ ಬಗೆಗೆ ಒಂದು ಗಂಟೆಯ ಪಾಠ ಮಾಡಿದರು. ನಂತರ, ‘ಈ ಹೆಂಗಸ್ರು ಸಿಕ್ಕಾಪಟ್ಟೆ ಕಾಂಪ್ಲೆಕ್ಸ್ ಕಣಯ್ಯ, ಯಾವಾಗ ಇಷ್ಟ ಪಡ್ತರೊ, ಯಾವಾಗ ಕಷ್ಟ ಕೊಡ್ತರೋ ಗೊತ್ತಾಗಲ್ಲ...' ಅಂದರು. ನನಗೆ ಅವರ ಆ ಇಷ್ಟದಲ್ಲಿ ಧೈರ್ಯವೂ, ಕಷ್ಟದಲ್ಲಿ ಪಲಾಯನವೂ ಕಾಣತೊಡಗಿತು. ವಯಸ್ಸಿಗೆ ಮೀರಿದ್ದು, ಅರಗಿಸಿಕೊಳ್ಳಲಾಗದ್ದು ಲಂಕೇಶರಿಂದ ದಕ್ಕಿತ್ತು.


ಮಂಗಳವಾರ, 18 ಮಾರ್ಚ್ 2008ರಲ್ಲಿ ಕೆಂಡಸಂಪಿಗೆಯಲ್ಲಿ ಪ್ರಕಟವಾದದ್ದು.

No comments:

Post a Comment