Friday, November 27, 2009

ತೇಜಸ್ವಿ ಹುಟ್ಟುಹಬ್ಬ: ಇದೆಲ್ಲ ನೆನಪಾಯಿತು

ಒಂದು ದಿನ ಪತ್ರಿಕೆಯ ಆಫೀಸಲ್ಲಿ ಪೇಪರ್ ಓದುತ್ತಾ ಕೂತಿದ್ದೆ. ಬೆಳಗ್ಗೆ ಹನ್ನೊಂದು ಗಂಟೆಯ ಸಮಯ. ಬೇಸಿಗೆ ಕಾಲ. ಮನೆಯಿಂದ ಬರುವಾಗ ಇಸ್ತ್ರಿ ಮಾಡಿದ ಒಳ್ಳೆಯ ಪ್ಯಾಂಟು-ಶರ್ಟು ಹಾಕಿಕೊಂಡು ಬಂದಿದ್ದ ಲಂಕೇಶ್ ಮೇಷ್ಟ್ರು ಬಂದ ಗಳಿಗೆಯಲ್ಲಿಯೇ ಅದನ್ನು ಬಿಚ್ಚಾಕಿದ್ದರು. ಲೂಸ್ ಲೂಸಾದ ಟೀ ಶರ್ಟು, ದೊಗಳೆ ಚೆಡ್ಡಿ ಹಾಕಿಕೊಂಡರು. ಆ ಡ್ರೆಸ್‌ನಲ್ಲಿಯೇ ಹೊಟ್ಟೆ ನೀವಿಕೊಂಡು ರೂಮಿನಿಂದ ಹೊರಬಂದ ಮೇಸ್ಟ್ರು, ‘ಲೇ ಬಸುರಾಜ, ಆ ತೇಜಸ್ವಿಗೆ ಫೋನ್ ಮಾಡ್ಕೊಡೋ...’ ಎಂದರು. ಬಂದ ಕೆಲ್ಸ ಮುಗೀತು ಅಂತ ಅಷ್ಟೇ ಫಾಸ್ಟಾಗಿ ಅವರ ರೂಮಿಗೆ ಹೋದರು.

ಫೋನ್ ಎಂದರೆ ಮೇಷ್ಟ್ರಿಗೆ ಕಿರಿಕಿರಿ. ಅವರಾಗಿಯೇ ಡಯಲ್ ಮಾಡಿ ಮಾತನಾಡಿದ್ದನ್ನು, ಅದರಲ್ಲೂ ತುಂಬಾ ಹೊತ್ತು ಮಾತನಾಡಿದ್ದನ್ನು ನಾನು ನೋಡಿದ್ದಿಲ್ಲ. ಹೆಚ್ಚೆಂದರೆ ಮೂರು ನಿಮಿಷ. ಮಾತು ಕೂಡ ಅರ್ಧಂಬರ್ಧ. ಅಸಹನೆಯ ಮೂಟೆ. ಅದಕ್ಕೆ ತಕ್ಕಂತೆ ಕೈಗೆ ಕಾಲಿಗೆಂಬಂತೆ ಅವರ ಪೆಟ್ ಗಿರಿ ಇದ್ದೇ ಇದ್ರು. ಇಲ್ಲಾಂದ್ರೆ ಮ್ಯಾನೇಜರ್ ನಾಗರಾಜು ಅಥವಾ ನಾನು ಇರುತ್ತಿದ್ದವು. ಆಶ್ಚರ್ಯ ಅಂದ್ರೆ, ಕರ್ನಾಟಕದ ಇತಿಹಾಸ, ಚರಿತ್ರೆಯನ್ನೇ ಬದಲಿಸಿದ ‘ಪತ್ರಿಕೆ’ಗೆ ಇದ್ದದ್ದು ಅವತ್ತಿಗೆ ಒಂದೇ ಫೋನು- ಸಂಪಾದಕರಿಗೂ, ವರದಿಗಾರರಿಗೂ, ಕಚೇರಿ ಕೆಲಸಗಳಿಗೂ. ಅದು ನನ್ನ ಪಾಲಿಗೆ ಅದೃಷ್ಟವೇ ಅಗಿತ್ತು- ತೇಜಸ್ವಿಯೊಂದಿಗೆ ಮಾತನಾಡುವ ಸುಯೋಗ ತಾನೇ ತಾನಾಗಿ ಒದಗಿ ಬಂದಿತ್ತು.

ಮೂಡಿಗೆರೆಯ ಎಸ್ಟಿಡಿ ಕೋಡ್ ನಂಬರ್ ನೋಡಿ ಫೋನ್ ಮಾಡಿದೆ. ತೇಜಸ್ವಿಯವರೇ ಎತ್ತಿಕೊಂಡರು. ನಾನು ಇತ್ತ ಕಡೆಯಿಂದ ಯಾರೆಂದು ಹೇಳಿದಾಗ, ‘ಏನೋ, ಏನ್ಸಾಮಾಚಾರ...’ ಅಂದು ನಾನು ಮಾತನಾಡ್ಲಿಕ್ಕೂ ಬಿಡದೆ, ‘ಅಲ್ಲೋ ನಿಮ್ದು ಯಾವ್ದೊ ಸಾಫ್ಟವೇರು, ನನ್ ಕಂಪ್ಯೂಟರ್ ಕೈ ಕೊಟ್ಟು, ಒಳ್ಳೆ ಕೆಲ್ಸ ಕೊಡ್ತು ಮಾರಾಯ...’ ಮಧ್ಯೆ ನಾನೇ ಬಾಯಾಕಿ, ‘ಸಾರ್ ಮೇಷ್ಟ್ರು ಮಾತಾಡ್ತರಂತೆ...’ ಎಂದೆ. ‘ಹೂಂ ಸರಿ, ಆಮೇಲೆ ಮಾಡು ನಿನ್ನತ್ರ ಒಂಚೂರು ಕೆಲ್ಸಿದೆ...’ ಎಂದರು.

ಎಕ್ಸ್‌ಚೇಂಜ್ ಬಟನ್ ಒತ್ತಿದ್ದೂ ಅಲ್ಲದೆ, ಮೇಷ್ಟ್ರಿಗೆ ಹೋಗಿ ಹೇಳ್ದೆ, ಅವರು ಸಿದ್ಧರಾಗಿದ್ದಂತೆ ಕಂಡರು. ‘ಹಲೋ, ನಾನು ಲಂಕೇಶ್...’ ಅತ್ತ ಕಡೆಯಿಂದ ಏನು ಬಂತೋ ಗೊತ್ತಾಗಲಿಲ್ಲ. ‘...ಕುವೆಂಪು ಬಗ್ಗೆ ಬರೀತೀನಿ ಅಂದಿದ್ರಲ್ಲ, ಏನಾಯ್ತು, ಶುರು ಮಾಡನ ಕಳ್ಸಿ...’ ಮತ್ತೆ ಬ್ರೇಕ್. ಇವರೇ, ‘ಮುಂದಿನವಾರನ, ಲವ್‌ಲಿ, ದಟ್ಸ್ ಗುಡ್...’ ಅಂದು ಫೋನ್ ಇಟ್ಟರು. ನಾನು ಬಾಗಿಲಲ್ಲೆ ನಿಂತಿದ್ದನ್ನು ನೋಡಿ, ‘ಮುಂದಿನವಾರದಿಂದ ಕುವೆಂಪು ಬಗ್ಗೆ ಬರೀತರಂತೆ ಕಣೋ...’ ಅಂದು ಮುಖದ ಮೇಲೆ ಕೃತಕ ನಗೆ ತಂದುಕೊಂಡು, ಆ ನಗೆಯನ್ನೇ ನೀನಿನ್ನು ಹೋಗಬಹುದು ಎಂಬ ಸಿಗ್ನಲ್‌ಗೆ ಬಳಸಿಕೊಂಡವರಂತೆ ನೋಡಿದರು. ನನಗೆ ಅದಾವುದೂ ಗಮನಕ್ಕೆ ಬರದೆ ತಲೆ ತುಂಬಾ ತೇಜಸ್ವಿ ತುಂಬಿಕೊಂಡಿದ್ದರು.

ತೇಜಸ್ವಿಅದು ಹಾಗೆಯೇ ಅಲ್ಲವೆ... ಲಂಕೇಶ್-ತೇಜಸ್ವಿ ಎರಡೂ ಬೆಟ್ಟಗಳೇ. ಲಂಕೇಶರ ಬಳಿ ಇದ್ದಾಗ ಇಲ್ಲದಿದ್ದ ಬೆಟ್ಟದ ಬಗ್ಗೆಯೇ ಬೆರಗು. ಕೈಗೆ ಸಿಗದಿದ್ದುದರ ಬಗ್ಗೆಯೇ ಕನವರಿಕೆ, ಕಾತರ. ಅದೇ ಗುಂಗಿನಲ್ಲಿ ಹೋಗಿ ಮತ್ತೆ ತೇಜಸ್ವಿಗೆ ಫೋನ್ ಮಾಡಿದೆ. ‘ಮತ್ತೇನೋ...’ ಎಂದರು.

‘ಏನಿಲ್ಲ ಸಾರ್... ನೀವೆ ಏನೋ ಹೇಳಿದ್ರಲ್ಲ ಕಂಪ್ಯೂಟ್ರುದು, ಮಾತಾಡ್ಬೇಕು ಅಂತ...’

‘ಓ ಅದಾ, ಅದನ್ನೇ ಹೇಳ್ಬೇಕಂತಿದ್ದು, ಮೊನ್ನೆ ಅಣ್ಣನ ಬಗ್ಗೆ ಬರೆಯಕ್ಕೆ ಶುರು ಮಾಡ್ದೆ, ಅದ್ಯಾವುದೋ ಕೆಪಿ ರಾವ್ ಸಾಫ್ಟ್‌ವೇರು, ಏ ಚೆನ್ನಾಗಿದೆ ಕಣೋ ಅದು, ಶುರು ಮಾಡಿ ಸ್ಟೋರ್ ಮಾಡಿ ತೋಟದ ಕಡೆ ಹೋಗಿಬಂದು, ಬರೆಯಕ್ಕೂತ್ರೆ... ಕೈ ಕೊಡ್ತು ನೋಡು, ಏನೇನ್ ಮಾಡುದ್ರು ಆಗಲಿಲ್ಲಪಾ, ಥೂತ್ತೇರಿ ಅಂತೇಳಿ ತಗದು ಮೂಲೆಗೆ ಇಟ್ಟಿದಿನಿ, ಯಾರಾದ್ರು ರಿಪೇರಿ ಮಾಡೋರಿದ್ರೆ ಕಳ್ಸಕಾಗ್ತದೇನೋ...’ ಅಂದರು.

ಅವರು ಬಳಸುತ್ತಿದ್ದ ಕನ್ನಡ ಸಾಫ್ಟ್‌ವೇರ್ ಕೆಪಿ ರಾವ್. ನಮ್ಮದು ಆಕೃತಿ. ಒಂದಕ್ಕೊಂದು ಹೊಂದಾಣಿಕೆಯಿಲ್ಲ. ಆದ್ರೆ ಕಂಪ್ಯೂಟರ್ ರಿಪೇರಿ, ಸರ್ವೀಸು ಅಂತೆಲ್ಲ ಒಂಚೂರು ಗೊತ್ತಿತ್ತು. ಸಮಸ್ಯೆ ಅಂದ್ರೆ, ಬೆಂಗಳೂರಿಂದ ಮೂಡಿಗೆರೆಗೆ ಯಾರು ಹೋಗ್ತರೆ? ಇದನ್ನೆಲ್ಲ ಯೋಚಿಸಿ, ‘ಸಾರ್ ನೀವು ನಿಮಗೆ ಸಾಫ್ಟ್‌ವೇರ್ ಸಪ್ಲೈ ಮಾಡಿದವರನ್ನೇ ಕರೆದು ರಿಪೇರಿ ಮಾಡ್ಸದೊಳ್ಳೇದು...’ ಅಂದೆ.

‘ಲೇ ಮೂರ್ಖ, ಅದು ನನಗ್ಗೊತ್ತಿಲ್ವೇನೊ... ಈಗ ಏನ್ಮಾಡ್ಬೇಕೇಳೊ...’ ಅಂದವರು ಅದನ್ನು ಅಲ್ಲಿಗೇ ಬಿಟ್ಟು, ‘ಈಗ ಅಣ್ಣನ ಬಗ್ಗೆ ಬರೀತಿದ್ದೀನಿ, ಇರೋ ಫೋಟೋಗಳನ್ನು ಸ್ಕ್ಯಾನ್ ಮಾಡಿ ಸ್ಕೆಚ್ ಥರ ಕಾಣೋಹಂಗೆ ಮಾಡಿದ್ದೀನಿ...’ ತಕ್ಷಣ ಮಾತನ್ನು ಅರ್ಧಕ್ಕೇ ನಿಲ್ಲಿಸಿ, ಟೋನ್ ಬದಲಿಸಿ, ಏನನ್ನೋ ಜ್ಞಾಪಿಸಿಕೊಂಡವರಂತೆ, ‘ಆ ಕುದುರೆ ಹುಳಕ್ಕೆ ಮಾಡ್ದಂಗೇನಾದ್ರು ಮಾಡ್ದೆ... ಅಲ್ಲಿಗೇ ಬಂದು ಹಲ್ಲು ಉದುರ್‌ಸ್ತೀನಿ...’ ಅಂದರು.

ದನಿ ಗಡುಸಾಗಿದ್ದು ಕಂಡು ಕೊಂಚ ಗಲಿಬಿಲಿಯಾಯಿತು. ಆದರೂ ಸಾವರಿಸಿಕೊಂಡು, ‘ಸಾರ್ ಅದು ಕಡ್ಡಿಯಂಗಿತ್ತು, ಏನು ಅಂತ ಗೊತ್ತಾಯ್ತನೇ ಇರ‍್ಲಿಲ್ಲ...’ ಅಂದೆ.

ತೇಜಸ್ವಿ ಬಳಸುತ್ತಿದ್ದ ಜೀಪು‘ಇಲ್ಯಾವ ಕಡ್ಡಿನೂ ಇರಲ್ಲ, ತಿಳೀತಾ, ಸ್ಕ್ಯಾನ್ ಮಾಡಿದ್ದನ್ನೇ ಟ್ರೇಸಿಂಗ್ ತಗದು ಕಳಸ್ತಿನಿ, ಚಿತ್ರಗಳು ಅಂಟಸ್ದಷ್ಟೇ ಕೆಲ್ಸ... ಅದೂ ಕಷ್ಟವೇ, ದಡ್ಡ ಶಿಖಾಮಣಿಗಳು...’ ಎಂದು ‘ನಿಮ್ ಮೇಸ್ಟ್ರು ಫಾಸ್ಟಾಗಿದಾರೆ, ಮುಂದಿನ ವಾರದಿಂದಲೇ ಶುರು ಮಾಡನ...’ ಎಂದರು.

ನನಗೆ ಖುಷಿಯಾಗಿ, ‘ಬೆಂಗಳೂರು ಕಡೆ ಯಾವಾಗ ಬರ್ತಿರಾ ಸಾರ್...’ ಎಂದು ಮಾತು ಮುಂದುವರೆಸಲು ನೋಡಿದೆ.
‘ಬೆಂಗಳೂರಿಗಾ... ಥೂ ಥೂಥು, ಬದುಕದುಂಟೇ ಮಾರಾಯ, ಅದ್ಯಂಗಿದೀರೋ ನೀವು...’
‘ಏನ್ ಸಾರ್ ಹಂಗಂದ್ರೆ...’
‘ಪುಣ್ಯವಂತ್ರು ಕಣ್ರೋ ನೀವು... ಬೆಂಗಳೂರಲ್ಲಿ ಬದುಕ್ತಿರೋರೆಲ್ಲ ಪುಣ್ಯವಂತ್ರು...’
ಮಾತು ಏನ್ ಒಂಥರಾ ವ್ಯಂಗ್ಯವಾಗಿದೆಯಲ್ಲ ಎಂದು, ‘ಅದ್ಯಂಗ್ ಸಾರ್ ಪುಣ್ಯವಂತ್ರು’ ಎಂದೆ.
‘ಅಲ್ಲಾ ಕಣೋ, ಅಲ್ಯಾರಾದ್ರು ಮನುಷ್ರು ಇರಕಾಯ್ತದೇನೋ, ನರಕ... ನರಕ... ನಿಮಗ್ಯಾರ‍್ಗೂ ಇನ್ನೊಂದು ನರ‍್ಕ ಇಲ್ವೇ ಇಲ್ಲ, ಸ್ಟ್ರೈಟ್ ಸ್ವರ್ಗಕ್ಕೊಂಟೋಯ್ತಿರ ಕಣ್ರೋ...’ ಎಂದು ಜೋರಾಗಿ ನಗಾಡಿದರು. ನಗುತ್ತಲೇ ಮಾತು ಮುಗಿಸಿ ಫೋನ್ ಇಟ್ಟರು.

ಮುಂದಿನ ವಾರದಿಂದ ತೇಜಸ್ವಿಯವರ ‘ಅಣ್ಣನ ನೆನಪು’ ಕಾಲಂ ಶುರುವಾಯಿತು. ಜನಮನ್ನಣೆಯನ್ನೂ ಪಡೆಯಿತು. ಪತ್ರಿಕೆಯ ಪ್ರಸಾರವೂ ಹೆಚ್ಚಾಯಿತು. ಮೇಷ್ಟ್ರಿಗೂ ಖುಷಿಯಾಯಿತು. ಆದರೆ ಅದ್ಯಾಕೋ ‘ಅಣ್ಣನ ನೆನಪು’ ಮೇಷ್ಟ್ರಲ್ಲಿ ಅಂತಹ ಕುತೂಹಲ ಕೆರಳಿಸಲಿಲ್ಲ. ಅಥವಾ ಅವರ ನಿರೀಕ್ಷೆಗೆ ತಕ್ಕಂತಿರಲಿಲ್ಲ ಅನ್ನುವುದು ಸರಿಯೇನೋ. ತೇಜಸ್ವಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಬಗ್ಗೆ ಬೇರೆಯದೆ ಆದ ಬರವಣಿಗೆಯನ್ನು ಅವರು ನಿರೀಕ್ಷಿಸಿದ್ದರೇನೋ. ಅಂತೂ ಪ್ರತೀವಾರ ಆ ಕಾಲಂ ಓದಿದ ನಂತರ ನಸನಸ ಅನ್ನೋರು. ಇದು ಇನ್ನಷ್ಟು ನಿಚ್ಚಳವಾಗಿ ನನಗೆ ಕಂಡಿದ್ದು- ಅಣ್ಣನ ನೆನಪು ಪುಸ್ತಕ ಬಂದಾಗ, ಮೇಸ್ಟ್ರು ಅದರ ವಿಮರ್ಶೆ ಮಾಡಿದಾಗ.

ಮಗಳು ಸುಸ್ಮಿತಾ ಜೊತೆ ತೇಜಸ್ವಿ ದಂಪತಿತೇಜಸ್ವಿಯವರೂ ಕೂಡ, ಅದೇಕೋ ಅಣ್ಣನ ನೆನಪನ್ನು ಪೂರ್ಣಗೊಳಿಸಲಿಲ್ಲ. ಅಥವಾ ನೆನಪಾಗಿದ್ದಷ್ಟನ್ನು ದಾಖಲಿಸಿ ಸುಮ್ಮನಾದರೋ ಏನೋ. ಇತ್ತ ಕಾಲಂ ಮುಗಿಯುತ್ತಿದ್ದಂತೆಯೇ ಅವರ ಪುಸ್ತಕ ಪ್ರಕಾಶನದಿಂದ ಪುಸ್ತಕವನ್ನು ಹೊರತಂದೇ ಬಿಟ್ಟರು. ಬಂದ ಒಂದೇ ವಾರಕ್ಕೆ ಮೇಷ್ಟ್ರೇ ವಿಮರ್ಶೆ ಮಾಡಿದರು. ಅವರ ಮ್ಯಾನುಸ್ಕ್ರಿಪ್ಟು- ಮೋಡಿ ಅಕ್ಷರ. ಅದರಲ್ಲೂ ವಿಷಯ ಸಂಕೀರ್ಣವಾಗಿದ್ದರೆ ಮುಗೀತು. ಬರೆದದ್ದು ಗೊತ್ತಾಗ್ತಿರಲಿಲ್ಲ. ಆದರೆ ಅದನ್ನೂ ಮಾಡುವ ಮಟ್ಟಕ್ಕೆ ನಾನು ಪಳಗಿದ್ದೆ. ಕಂಪೋಸ್ ಮಾಡಿಕೊಂಡೋಗಿ ಫಸ್ಟ್ ಪ್ರೂಫ್ ಕೊಟ್ಟೆ. ಸುಮ್ಮನೆ ನನ್ನ ಮುಖ ನೋಡಿ, ‘ಹೆಂಗಿದೆಯೋ?’ ಅಂದ್ರು. ನಾನು ಏನನ್ನೂ ಮಾತಾಡಲಿಲ್ಲ. ‘ಓ, ತೇಜಸ್ವಿ ಫ್ಯಾನ್ ನೀನು...’ ಎಂದು ವಿಚಿತ್ರ ಮುಖಭಾವದಲ್ಲಿ ಕಿರುನಗೆ ನಕ್ಕರು. ನಗುವಿನಲ್ಲೂ ವ್ಯಂಗ್ಯವಿರುತ್ತೆ ಎಂದು ನನಗೆ ಗೊತ್ತಾಗಿದ್ದೇ ಅವತ್ತು.

ತೇಜಸ್ವಿಯವರೊಂದಿಗೆ ಮಾತನಾಡಬೇಕೆಂಬ ಮನಸ್ಸಿದ್ದರೂ ಮೇಷ್ಟ್ರ ವಿಮರ್ಶೆ ನನ್ನನ್ನು ಕಟ್ಟಿಹಾಕಿತ್ತು. ಮಾತು ನಿಂತುಹೋಗಿತ್ತು. ಅವರೂ ಅಷ್ಟೇ, ಮಾತಿನ ಅಗತ್ಯವಿಲ್ಲವೆನ್ನುವಂತೆ ಸುಮ್ಮನಾದರು. ಎಷ್ಟೋ ದಿನಗಳಾದ ಮೇಲೆ ಮತ್ತೆ ಮಾತು. ಅದೂ ಇದೂ ಮಾತಾಡಿದ ಮೇಲೆ, ‘ಅಲ್ಲಾ ಕಣೋ, ಅಣ್ಣನ ನೆನಪನ್ನು ಬರ‍್ಸದೋರೂ ಅವ್ರೆ... ಥೂ ಬಿಡು, ಅದರ ಬಗ್ಗೆ ಮಾತಾಡ್ಬಾರ‍್ದು ಅಂದ್ಕೊಂಡ್ರು ಬಂದ್‌ಬುಡ್ತು, ಬಿಡು...’ ಎಂದು ಸುಮ್ಮನಾದರು.

ಇಬ್ಬರ ನಡುವೆ ನಾನು- ಇದು ನನಗೆ ಬಯಸದೇ ಬಂದ ಭಾಗ್ಯ. ಅವರ ವಯಸ್ಸಿಗೆ, ವಿದ್ವತ್ತಿಗೆ, ಬುದ್ಧಿಗೆ, ಪ್ರತಿಭೆಗೆ, ಜನಪ್ರಿಯತೆಗೆ ಹೋಲಿಸಿಕೊಂಡರೆ ಗುಲಗಂಜಿ ಗಾತ್ರ ಕೂಡ ತೂಗದವ. ಆದರೂ ಅವರು ತೋರಿದ ಪ್ರೀತಿ, ತಿದ್ದಿದ ರೀತಿ ಮರೆಯಲಾಗದ್ದು. ಒಂದಂತೂ ಸತ್ಯ- ಇಂತಹ ಹಲವಾರು ಸಂಗತಿಗಳಿಗೆ, ಘಟನೆಗಳಿಗೆ ಅನಿವಾರ್ಯವಾಗಿ ಭಾಗಿಯಾಗುವಂತೆ ಮಾಡಿದ್ದು ಪತ್ರಿಕೆ. ಇವತ್ತು ತೇಜಸ್ವಿಯವರ ಹುಟ್ಟುಹಬ್ಬ ಎಂದಾಕ್ಷಣ ನೆನಪಾಗಿದ್ದು ಕೂಡ ಪತ್ರಿಕೆಯ ಆ ದಿನಗಳೇ.

(ಸೆಪ್ಟೆಂಬರ್ 8, 2009ರಂದು ಕೆಂಡಸಂಪಿಗೆಯಲ್ಲಿ ಪ್ರಕಟ)

No comments:

Post a Comment