Thursday, December 18, 2014

ಶತಮಾನೋತ್ಸವದ ಸಂಭ್ರಮದಲ್ಲಿ ಬಿ.ಕೆ. ಮರಿಯಪ್ಪ ವಸತಿ ನಿಲಯ

ಬಿ.ಕೆ. ಮರಿಯಪ್ಪನವರು ಮತ್ತವರ ಉಚಿತ ವಿದ್ಯಾರ್ಥಿ ನಿಲಯ
ಅದು ಸ್ವಾತಂತ್ರ್ಯಪೂರ್ವ ಕಾಲ, 1914. ಆಗ ವಿದ್ಯೆ ಎನ್ನುವುದು ಉಳ್ಳವರ ಸ್ವತ್ತಾಗಿತ್ತು, ಬಡವರಿಗೆ ಕೈಗೆಟುಕದ ಕುಸುಮವಾಗಿತ್ತು. ಅಂತಹ ದಿನಗಳಲ್ಲಿ ಬಡವರ ಬಗ್ಗೆ, ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಿ, ಅವರಿಗೆ ಉಚಿತ ವಿದ್ಯಾರ್ಥಿ ನಿಲಯವೊಂದನ್ನು ಸ್ಥಾಪಿಸಲು ಮುಂದಾದವರು ಸಾಮಾನ್ಯರಲ್ಲಿ ಸಾಮಾನ್ಯರಾದ ಬಿ.ಕೆ. ಮರಿಯಪ್ಪನವರು.
ಬೆಂಗಳೂರಿನ ಚಾಮರಾಜಪೇಟೆಯ ನಗರ್ತ ಲಿಂಗಾಯತ ಜಾತಿಗೆ ಸೇರಿದ, ವ್ಯಾಪಾರವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ, 35 ವರ್ಷ ವಯಸ್ಸಿನ ಬಿ.ಕೆ. ಮರಿಯಪ್ಪನವರು, ಆ ಕಾಲಕ್ಕೇ ಭಾರೀ ಮೊತ್ತ ಎನ್ನಬಹುದಾದ ತಮ್ಮ ಆಸ್ತಿಯನ್ನೆಲ್ಲ ಬಡ ಮಕ್ಕಳ ವಿದ್ಯಾರ್ಥಿ ನಿಲಯಕ್ಕಾಗಿ ಉದಾರವಾಗಿ ದಾನ ಮಾಡಿದರು. ಜಾತಿ ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಎಲ್ಲ ಜನಾಂಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟರು. ಇದರ ಫಲವಾಗಿ 1921ರ ಜುಲೈನಲ್ಲಿ 30 ವಿದ್ಯಾರ್ಥಿಗಳೊಂದಿಗೆ ಬಿ.ಕೆ. ಮರಿಯಪ್ಪ ವಿದ್ಯಾರ್ಥಿ ನಿಲಯ ವಿದ್ಯುಕ್ತವಾಗಿ ಕಾರ್ಯಾರಂಭಿಸಿತು.
ಈಗ ಆ ವಿದ್ಯಾರ್ಥಿ ನಿಲಯ ಶತಮಾನೋತ್ಸವದ ಸಂಭ್ರಮದಲ್ಲಿದೆ.   
ಸಾರ್ಥಕ ಸಾಧನೆಯ ಹಾದಿಯನ್ನೊಮ್ಮೆ ಹಿಂತಿರುಗಿ ನೋಡುವುದಾದರೆ, ಹಳೆಯ ಬೆಂಗಳೂರಿನ ಕುರುಹುಗಳನ್ನು ಈಗಲೂ ಉಳಿಸಿಕೊಂಡಿರುವ ಚಾಮರಾಜಪೇಟೆಯ ಜನನಿಬಿಡ ವ್ಯಾಪಾರ ವಹಿವಾಟುಗಳ ನಡುವೆಯೇ ಪುಟ್ಟ ಕಟ್ಟಡದಲ್ಲಿ 1914 ರಲ್ಲಿ ಆರಂಭವಾದ ವಿದ್ಯಾರ್ಥಿ ನಿಲಯ ಇಂದು ಬೆಟ್ಟದಂತೆ ಬೆಳೆದು, ನೂರು ವರ್ಷಗಳ ಪುಣ್ಯಕಾರ್ಯದ ಹಾದಿಯಲ್ಲಿ ಸಾವಿರಾರು ಬಡ ಬುದ್ಧಿವಂತ ವಿದ್ಯಾರ್ಥಿಗಳ ಬದುಕನ್ನು ಬಂಗಾರವನ್ನಾಗಿಸಿದೆ. ಬಡಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಬಿ.ಕೆ.ಮರಿಯಪ್ಪನವರ ಈ ಹೃದಯವಂತಿಕೆಯನ್ನು, ಸ್ವಾರ್ಥರಹಿತ ಸೇವಾಕಾರ್ಯವನ್ನು ಸ್ಮರಿಸುವ ಕಾಲದಲ್ಲಿ ಅವರಿಲ್ಲ. ಆದರೆ ಅವರು ಬಿಟ್ಟುಹೋದ ವಿದ್ಯಾರ್ಥಿ ನಿಲಯವಿದೆ. ಅಲ್ಲಿಂದ ಕಲಿತ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಇವತ್ತು ಅವರೆಲ್ಲ ಸಮಾಜದ ಉನ್ನತ ಸ್ಥಾನಕ್ಕೇರಿ ವಿದ್ಯಾರ್ಥಿ ನಿಲಯಕ್ಕೆ ಕೀರ್ತಿ ತಂದಿದ್ದಾರೆ. ತಮ್ಮನ್ನು ಪೊರೆದ, ಪೋಷಿಸಿದ ವಿದ್ಯಾರ್ಥಿ ನಿಲಯವನ್ನು ಮರೆಯದೆ, ಮತ್ತದೇ ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನು ಮನ ಧನವನ್ನು ಧಾರೆ ಎರೆಯುತ್ತ ಮರಿಯಪ್ಪನವರ ಸಾಮಾಜಿಕ ಸೇವೆಯನ್ನು ಮುಂದುವರೆಸುತ್ತ ಅವರ ಕನಸನ್ನು ಸಾಕಾರಗೊಳಿಸಿದ್ದಾರೆ. ಮರಿಯಪ್ಪನವರನ್ನು ಜನಮಾನಸದಲ್ಲಿ ಜೀವಂತವಾಗಿಟ್ಟಿದ್ದಾರೆ.
ಒಂದು ಸಂಸ್ಥೆ, ಅದರಲ್ಲೂ ಶೈಕ್ಷಣಿಕ ರಂಗದಲ್ಲಿಯ ದತ್ತಿ ಸಂಘಟನೆಯೊಂದು ಯಶಸ್ವಿ ನೂರು ವರ್ಷಗಳನ್ನು ಪೂರೈಸುವುದು ಹುಡುಗಾಟಿಕೆಯ ವಿಷಯವಲ್ಲ. ಸರಕಾರದ ನೆರವು ಅಪೇಕ್ಷಿಸದೇ ವಿವಾದವೂ ಇಲ್ಲದೇ ಶತಮಾನ ಪೂರೈಸಿದೆ ಬಿ.ಕೆ. ಮರಿಯಪ್ಪ ವಸತಿಗೃಹದ ಸೇವಾಕಾರ್ಯ ಸಾಮಾನ್ಯದ್ದಲ್ಲ. ವ್ಯಾವಹಾರಿಕ ಜಗತ್ತಿನಿಂದ ಬಂದ ಮರಿಯಪ್ಪನವರು ಬಡಮಕ್ಕಳಿಗೆ ಮಾಡಿದ ಅನ್ನದಾನದ ಹಿಂದೆ ಮಾನವೀಯ ಮಿಡಿತವಿದೆ. ಪ್ರತಿಫಲಾಪೇಕ್ಷೆ ನಿರೀಕ್ಷಿಸದ ನಿಸ್ವಾರ್ಥ ಸೇವೆ ಇದೆ. ಇಲ್ಲಿಂದ ಕಲಿತು ಹೋದವರು ಸಮಾಜಕ್ಕೆ ನೀಡಿದ ಸೇವೆ ಸಾರ್ಥಕತೆ ಕಂಡಿದೆ, ಕಾಣುತ್ತಲಿದೆ.
ಆ ಕಾರಣಕ್ಕಾಗಿಯೇ ಮಹದಾನಿ ಮರಿಯಪ್ಪನವರೆಂದೇ ಜನಜನಿತರಾಗಿರುವ ಇವರ ವಿದ್ಯಾರ್ಥಿ ನಿಲಯದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬಂದ, ಎಲ್ಲ ಜಾತಿಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಉಚಿತ ಊಟ, ವಸತಿಯ ಜೊತೆಗೆ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಷ್ಟೇ ಅಲ್ಲ, ಆಂಧ್ರ, ತಮಿಳುನಾಡಿನ ವಿದ್ಯಾರ್ಥಿಗಳೂ ಇದ್ದು ಅವರವರ ಆರ್ಥಿಕ ಸ್ಥಿತಿ ಹಾಗೂ ಪಡೆದ ಅಂಕಗಳ ಆಧಾರದ ಮೇಲೆ ಅರ್ಹರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಿಜವಾದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದೇ ಇದರ ಉದ್ದೇಶವಾಗಿದೆ.
ಇಲ್ಲಿಗೆ ಭೌತಿಕವಾಗಿ ಬಡವರಾಗಿ ಬಂದವರು ಬೌದ್ಧಿಕವಾಗಿ ಶ್ರೀಮಂತರಾಗಿ ಸಮೃದ್ಧರಾಗಿ ಹೋದವರು ಲೆಕ್ಕವಿಲ್ಲದಷ್ಟು. ಅವರಲ್ಲಿ ಬಹಳ ಮುಖ್ಯರಾದವರು ಗಾಂಧಿವಾದಿ ಎಚ್. ನರಸಿಂಹಯ್ಯನವರು. ಇವರು ಮರಿಯಪ್ಪನವರ ವಿದ್ಯಾರ್ಥಿ ನಿಲಯದ ಮೊದಲ ಬ್ಯಾಚಿನ ವಿದ್ಯಾರ್ಥಿ. ಕಡು ಬಡತನದಲ್ಲಿ ಹುಟ್ಟಿದ ನರಸಿಂಹಯ್ಯನವರು ವಿದ್ಯಾಭ್ಯಾಸಕ್ಕಾಗಿ ಗೌರಿಬಿದನೂರಿನಿಂದ ಬೆಂಗಳೂರಿಗೆ ಬರಿಗಾಲಲ್ಲಿ ಕಾಲ್ನಡಿಗೆಯಲ್ಲಿ ಬಂದಿದ್ದರಂತೆ. ಇಲ್ಲಿ ಕಲಿತು ದೊಡ್ಡವರಾದ ನರಸಿಂಹಯ್ಯನವರು ಮುಂದೆ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ಲಕ್ಷಾಂತರ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಬದುಕಿದ್ದಷ್ಟು ದಿನವೂ ಸರಳ ಸಜ್ಜನಿಕೆಗೆ ಹೆಸರಾಗಿ, ತಾವು ಕಲಿತ ವಸತಿಗೃಹಕ್ಕೆ ಕೀರ್ತಿ ತಂದರು.
ಇದೇ ವಸತಿಗೃಹದ ಮತ್ತೊಬ್ಬ ವಿದ್ಯಾರ್ಥಿ, 88 ವರ್ಷದ ಎನ್. ಪುಟ್ಟರುದ್ರರು ಕೆಇಬಿ ನಿವೃತ್ತ ಅಧೀಕ್ಷಕ ಎಂಜಿನಿಯರ್. ನಿವೃತ್ತ ಜೀವನವನ್ನು ಹಾಯಾಗಿ ಕಳೆದು ಹಾಳು ಮಾಡಬಾರದೆಂದು ಈ ವಯಸ್ಸಿನಲ್ಲೂ ಹಾಸ್ಟೆಲ್‌ನ ವ್ಯವಸ್ಥಾಪಕ ಟ್ರಸ್ಟಿ ಆಗಿ, ಇಡೀ ವಸತಿಗೃಹದ ಉಸ್ತುವಾರಿ ಹೊತ್ತುಕೊಂಡು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲದೆ ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ವೈ.ಜಿ. ಕೃಷ್ಣಮೂರ್ತಿ, ರಾಜಸ್ತಾನ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಅಡಿವೆಪ್ಪ, ಮಾಜಿ ಮಂತ್ರಿಗಳಾದ ಟಿ. ಸಿದ್ದಲಿಂಗಯ್ಯ, ಯುನೆಸ್ಕೊದಲ್ಲಿ ಕಾರ್ಯನಿರ್ವಹಿಸಿದ ಟಿ.ಆರ್. ರಾಮಯ್ಯ ಸೇರಿದಂತೆ ಹಲವು ಖ್ಯಾತನಾಮರು ಮರಿಯಪ್ಪ ಹಾಸ್ಟೆಲ್‌ನ ಹಳೆಯ ವಿದ್ಯಾರ್ಥಿಗಳು.
‘ನಮ್ಮಲ್ಲಿ ಓದಿದವರಲ್ಲಿ ಬಹುತೇಕರು ಡಾಕ್ಟರ್ ಇಲ್ಲವೆ ಎಂಜಿನಿಯರ್‌ಗಳಾಗಿದ್ದು ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳ ಪೈಕಿ ಒಬ್ಬರು ಐಎಎಸ್ ಅಧಿಕಾರಿಯೂ ಆಗಿದ್ದಾರೆ’ ಎನ್ನುವ ಎನ್. ಪುಟ್ಟರುದ್ರರು, ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ 1946 ರಲ್ಲಿ ಸಂಘ ರಚಿಸಿಕೊಂಡಿದ್ದು, ಅವರೆಲ್ಲ ನಿಯಮಿತವಾಗಿ ವಸತಿಗೃಹಕ್ಕೆ ಬಂದುಹೋಗುವುದು, ವಾರ್ಷಿಕೋತ್ಸವದಂದು ಎಲ್ಲರೂ ಒಟ್ಟಾಗಿ ಕಲೆಯುವುದು, ಎಲ್ಲವನ್ನೂ ಅತಿ ಉತ್ಸಾಹದಿಂದ ಬಣ್ಣಿಸುತ್ತಾರೆ. ಹಾಗೆಯೇ ವಿದ್ಯಾರ್ಥಿನಿಲಯದ ಮತ್ತೊಬ್ಬ ಹಳೆಯ ವಿದ್ಯಾರ್ಥಿ ಕೆ. ದಿನೇಶರ ಕೊಡುಗೆಯನ್ನು ಬಾಯ್ತುಂಬ ಹಾಡಿ ಹೊಗಳುತ್ತಾರೆ.
ಹಳೆಯ ವಿದ್ಯಾರ್ಥಿಗಳ ಪೈಕಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಕೆ. ದಿನೇಶ್, ತಾವು ಕಲಿತ ವಸತಿಗೃಹದ ಋಣ ತೀರಿಸಲು, ಸುಮಾರು ಒಂದು ಕೋಟಿ ರೂಪಾಯಿಗಳನ್ನು ವಿದ್ಯಾರ್ಥಿನಿಲಯಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಇದರಿಂದ ಮರಿಯಪ್ಪನವರ ವಿದ್ಯಾರ್ಥಿನಿಲಯ ಅಲ್ಲಿಯವರೆಗೆ ಬರೀ ಗಂಡು ಮಕ್ಕಳ ವಿದ್ಯಾಭ್ಯಾಸ, ವಸತಿ, ಊಟಕ್ಕೆ ನೆರವಾಗುತ್ತಿದ್ದುದು, ಈ ಬೃಹತ್ ಮೊತ್ತದ ದೇಣಿಗೆಯಿಂದ ವಿದ್ಯಾರ್ಥಿನಿಯರ ವಸತಿಗೃಹ ನಿರ್ಮಾಣದತ್ತ ಗಮನ ಹರಿಸುವಂತಾಯಿತು. ಈ ಬಗ್ಗೆ ಮಾತನಾಡಿದ ವಸತಿನಿಲಯದ ಹಳೆಯ ವಿದ್ಯಾರ್ಥಿಗಳು ಮತ್ತು ಈಗ ಟ್ರಸ್ಟಿಗಳಲ್ಲೊಬ್ಬರಾದ ರಾಜಶೇಖರ್, ‘ವಿದ್ಯಾರ್ಥಿನಿಯರಿಗಾಗಿ ವಸತಿನಿಲಯ ಆರಂಭಿಸಬೇಕೆಂದುಕೊಂಡಾಗ ಅದಕ್ಕೆ ದಿನೇಶ್ ಹಣಕಾಸಿನ ನೆರವು ನೀಡಿದರು. ಮೊದಲಿಗೆ ಬಾಡಿಗೆ ಕಟ್ಟಡದಲ್ಲಿ 10 ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಟ್ಟೆವು. ಆ ನಂತರ ನಮ್ಮದೇ ಸ್ವಂತ ಕಟ್ಟಡ ಕಟ್ಟಿದೆವು. ಅದೀಗ 45 ವಿದ್ಯಾರ್ಥಿನಿಯರನ್ನು ಒಳಗೊಂಡ ಬಹುದೊಡ್ಡ ವಸತಿಗೃಹವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ’ ಎನ್ನುತ್ತಾರೆ.
ಹಾಗೆಯೇ ಶತಮಾನೋತ್ಸವ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲು ಮಕ್ಕಳಿಂದ, ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ವೃದ್ಧರಿಗೆ ಸಾಮಾಜಿಕ ಭದ್ರತೆ ಒದಗಿಸುವ, ವೃದ್ಧಾಶ್ರಮ ಸ್ಥಾಪಿಸುವುದು ಸಂಸ್ಥೆಯ ಮಹದಾಸೆಯಾಗಿತ್ತು. ಇದರ ಸೇವಾಕಾರ್ಯಕ್ಕೆ ಒತ್ತಾಸೆಯಾಗಿ ನಿಂತವರು ಇದೇ ವಿದ್ಯಾರ್ಥಿನಿಲಯದ ಹಳೆಯ ವಿದ್ಯಾರ್ಥಿ ಡಾ. ರಾಮಯ್ಯ. ಇವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ಜಾಲ ಎಂಬಲ್ಲಿ ಸುಮಾರು ಅರ್ಧ ಎಕರೆ ಜಮೀನನ್ನು ವೃದ್ಧಾಶ್ರಮಕ್ಕಾಗಿ ಉದಾರವಾಗಿ ನೀಡಿದ್ದಾರೆ. ‘ಇದೇ ಜಾಗದಲ್ಲಿ ಎರಡು ಕೋಟಿ ವೆಚ್ಚದಲ್ಲಿ 20 ವೃದ್ಧರಿಗೆ ವೃದ್ಧಾಶ್ರಮ ಆರಂಭಿಸುವ ಉದ್ದೇಶ ಹೊಂದಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ, ಆರು ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ರಾಜಶೇಖರ್.
ಮುಂದುವರೆದು, ‘ಇಲ್ಲಿಯವರೆಗೆ ಸುಮಾರು ಎರಡು ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಈ ವಸತಿನಿಲಯದ ಅನುಕೂಲ ಪಡೆದವರಿದ್ದಾರೆ. ಇವರಲ್ಲಿ 700ರಿಂದ 800 ಜನ ಈಗಲೂ ಈ ವಿದ್ಯಾರ್ಥಿನಿಲಯದ ಸಂಪರ್ಕದಲ್ಲಿದ್ದಾರೆ. ಮಿಕ್ಕ ಒಂದು ಸಾವಿರದಷ್ಟು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ತಿಳಿಯದು. ಇಲ್ಲಿ ಪದವಿ, ಸ್ನಾತಕೋತ್ತರ, ಎಂಬಿಎ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ನಮಗೆ ರೂಮುಗಳ ಮಿತಿ ಇರುವುದರಿಂದ ವರ್ಷಕ್ಕೆ 75 ಹುಡುಗರು, 45 ಹುಡುಗಿಯರನ್ನಷ್ಟೇ ತೆಗೆದುಕೊಳ್ಳುತ್ತೇವೆ. ಅದರಲ್ಲೂ ತೀರಾ ಬಡ ವಿದ್ಯಾರ್ಥಿ ಎಂದು ಕಂಡುಬಂದರೆ, ಅವರಿಗೆ ಫೀ ಕೂಡ ನಮ್ಮ ವಸತಿನಿಲಯದಿಂದಲೇ ಭರಿಸುತ್ತೇವೆ. ಕೆಲ ಬ್ರೈಟ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಕೊಡಮಾಡುತ್ತೇವೆ. ನನ್ನ ಪ್ರಕಾರ ಮರಿಯಪ್ಪನವರು ಸ್ವಾತಂತ್ರ್ಯಪೂರ್ವದ ಜಾತ್ಯತೀತ ಮನಸ್ಸುಳ್ಳ, ಅದನ್ನು ಕಾರ್ಯರೂಪಕ್ಕೆ ತಂದ ಬಹಳ ಅಪರೂಪದ ವ್ಯಕ್ತಿ. ಬೆಂಗಳೂರಿನಲ್ಲಿ ಆಯಾಯ ಜಾತಿ ಜನರ ಉಚಿತ ವಸತಿ ನಿಲಯಗಳುಂಟು. ಆದರೆ ಎಲ್ಲ ಜಾತಿಯ ಬಡವರಿಗೆ ಇರುವುದು ಇದೊಂದೇ ಹಾಸ್ಟೆಲ್’ ಎಂದು ಮರಿಯಪ್ಪನವರ ಗುಣಗಾನಕ್ಕೆ ಇಳಿಯುತ್ತಾರೆ ರಾಜಶೇಖರ್.
ಹಣ ಗಳಿಸುವ ಹಾದಿಗೆ ಬಿದ್ದು ಆಸ್ತಿ ವೃದ್ಧಿಸುವುದೇ ಮಹದುದ್ದೇಶವೆನ್ನುವ ವ್ಯಾಪಾರಸ್ಥರು ಸಾಮಾನ್ಯವಾಗಿ ಸಾಮಾಜಿಕ ಸಮಸ್ಯೆಗಳತ್ತ ಗಮನ ಹರಿಸುವುದು ಕಡಿಮೆ. ಅದರಲ್ಲೂ ಬಡವರು, ಅಸಹಾಯಕರು, ಶೋಷಿತರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಕಳಕಳಿ ಮತ್ತು ಪ್ರೀತಿಯನ್ನಿಟ್ಟುಕೊಳ್ಳುವುದು ಇನ್ನೂ ವಿರಳ. ಆದರೆ ಚಾಮರಾಜಪೇಟೆಯ ವ್ಯಾಪಾರಿ ಬಿ.ಕೆ. ಮರಿಯಪ್ಪನವರು ಇದಕ್ಕೆ ಅಪವಾದ. ಮದುವೆಯಾಗಿ ಮಡದಿಯನ್ನು ಕಳೆದುಕೊಂಡಿದ್ದ, ಮಕ್ಕಳಿಲ್ಲದ ಮರಿಯಪ್ಪನವರು 8.3.1914 ರಂದು ತಮ್ಮ ಸಮಸ್ತ ಆಸ್ತಿಯನ್ನು ವಿದ್ಯಾರ್ಥಿ ನಿಲಯಕ್ಕಾಗಿ ವಿಲ್ ಮಾಡಿದರು. ಕುತೂಹಲಕರ ಸಂಗತಿ ಎಂದರೆ ಆ ವಿಲ್ ಮಾಡಿ ನಾಲ್ಕೇ ದಿನಕ್ಕೆ, 12.3.1914 ರಂದು ಮರಿಯಪ್ಪನವರು ಇಹಲೋಕ ತ್ಯಜಿಸಿದ್ದರು.
ಸಾವನ್ನು ಮೊದಲೇ ಗ್ರಹಿಸಿದ, ಸತ್ತ ನಂತರವೂ ಜನರ ಮನದಲ್ಲಿ ಬದುಕಿದ, ನೂರು ವರ್ಷಗಳ ನಂತರವೂ ಸ್ಮರಣಿಕೆಯ ವ್ಯಕ್ತಿಯಾದ ಮರಿಯಪ್ಪನವರು ನೂರ್ಕಾಲ ನೆನಪಿನಲ್ಲುಳಿಯುವ ಕೆಲಸವನ್ನೇ ಮಾಡಿಹೋದರು. ತಮ್ಮನ್ನು ಸಾಕಿದ ಸಲಹಿದ ಸಮಾಜಕ್ಕೆ ಋಣ ತೀರಿಸಿದರು. ಮರಿಯಪ್ಪನವರ ಸಾಮಾಜಿಕ ಕಳಕಳಿ, ಕಾಳಜಿ, ಬಡವರ ಬಗೆಗಿನ ಪ್ರೀತಿ ಮತ್ತೊಂದಿಷ್ಟು ಜನರಿಗೆ ಮಾದರಿಯಾಗಲಿ. ಇಂತಹವರ ಸಂತತಿ ಇನ್ನಷ್ಟು ಹೆಚ್ಚಾಗಲಿ. ಒಳ್ಳೆಯವರು ಇನ್ನೂ ಇದ್ದಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗಲಿ.

  




1 comment:

  1. The contribution of Sri B K Mariyappa is an example for today's generation. "All those who used this facility should come together and expand the facilities to give him a tribute."

    ReplyDelete