Thursday, December 25, 2014

ಹೊಸ ಅಲೆಯ ಹರಿಕಾರ ಕೆ. ಬಾಲಚಂದರ್‌

ಕೆ. ಬಾಲಚಂದರ್
ಎಪ್ಪತ್ತರ ದಶಕದಲ್ಲಿ ತಮಿಳು ಚಿತ್ರರಂಗದ ದಿಕ್ಕು ದೆಸೆಗಳನ್ನೇ ಬದಲಿಸಿದ ಹೊಸ ಅಲೆಯ ಹರಿಕಾರ, ಬಣ್ಣದ ಲೋಕದ ಮಾಂತ್ರಿಕ ಕೆ. ಬಾಲಚಂದರ್‌ ಇನ್ನಿಲ್ಲ. 84 ವರ್ಷಗಳ ಬಾಲಚಂದರ್‌ ಕಳೆದ 3ರಂದು ಅನಾರೋಗ್ಯದ ನೆಪದಲ್ಲಿ ಚನ್ನೈನ ಖಾಸಗಿ ಆಸ್ಪತ್ರೆ ಸೇರಿದವರು ಹಿಂತಿರುಗಿ ಬರಲಿಲ್ಲ. ಅಸಂಖ್ಯಾತ ಅಭಿಮಾನಿಗಳ ಹಾರೈಕೆಯೂ ಫಲ ಕೊಡಲಿಲ್ಲ. 
ಬಾಲಚಂದರ್‌ ಸಾವು ತುಂಬಲಾರದ ನಷ್ಟ ಎಂದರೆ ಅದು ತುಂಬಾ ಸರಳವಾದ ಮಾತಾಗುತ್ತದೆ, ಕ್ಲೀಷೆಯಾಗುತ್ತದೆ. ಅವರನ್ನು ಅವರ ಉತ್ಕೃಷ್ಟ ಚಿತ್ರಗಳ ಮಟ್ಟದಲ್ಲಿಟ್ಟು ಅಳೆಯಬೇಕು. ಅವರು ಕೊಟ್ಟ ಕೊಡುಗೆಯನ್ನೇ ಅಳತೆಗೋಲಾಗಿಟ್ಟುಕೊಂಡು ಪರಾಮರ್ಶಿಸಬೇಕು. ದಕ್ಷಿಣ ಭಾರತದ ಚಿತ್ರಗಳನ್ನು ‘ಮದ್ರಾಸಿ’ ಎಂದು ಹೀಗಳೆಯುತ್ತಿದ್ದ ಸಂದರ್ಭದಲ್ಲಿ, ದಕ್ಷಿಣದ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ಇಡೀ ಇಂಡಿಯಾದ ಜನ ಬೆಕ್ಕಸ ಬೆರಗಿನಿಂದ ನೋಡುವಂತೆ ಮಾಡಿದ, ದಕ್ಷಿಣದ ಚಿತ್ರಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಕಲ್ಪಿಸಿಕೊಟ್ಟ ಕಲಾತಪಸ್ವಿ.
ಇಂತಹ ಬಾಲಚಂದರ್‌ ಹುಟ್ಟಿದ್ದು ತಮಿಳುನಾಡಿನ ನನ್ನಿಲಂ ಎಂಬ ಪುಟ್ಟ ಹಳ್ಳಿಯಲ್ಲಿ, ಬಡ ಬ್ರಾಹ್ಮಣ ಕುಟುಂಬದಲ್ಲಿ. ಜುಲೈ 9, 1930ರಲ್ಲಿ ಜನಿಸಿದ ಬಾಲಚಂದರ್‌, ಚಲನಚಿತ್ರ ಲೋಕದ ಮಹಾನ್‌ ವ್ಯಕ್ತಿ ಎನಿಸಿಕೊಳ್ಳಲು ಸವೆಸಿದ ದಾರಿ ಸಾಮಾನ್ಯದ್ದಲ್ಲ. ಅರಗಿಸಿಕೊಂಡ ಅರಿವು ಅಷ್ಟಿಷ್ಟಲ್ಲ. 
ಓದಿದ್ದು ಬಿಎಸ್ಸಿ, ಮಾಡಿದ್ದು ಅಕೌಂಟೆಂಟ್‌ ಜನರಲ್‌ ಕಚೇರಿಯಲ್ಲಿ ಗುಮಾಸ್ತ ಮತ್ತು ಕೆಲವು ಕಾಲ ಶಿಕ್ಷಕನ ವೃತ್ತಿ. ಈ ಕೆಲಸಗಳ ಬಿಡುವಿನಲ್ಲಿ ರಂಗಭೂಮಿಯ ಸೆಳೆತಕ್ಕೆ ಒಳಗಾದ ಬಾಲಚಂದರ್‌, ಹವ್ಯಾಸಿ ನಾಟಕಕಾರರಾಗಿ ‘ಮೇಜರ್‌ ಚಂದ್ರಕಾಂತ್‌’, ‘ಸರ್ವರ್‌ ಸುಂದರಂ’, ‘ನಾನಾಲ್‌’ ಇನ್ನು ಮುಂತಾದ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದರು. ಇವರ ನಾಟಕ ರಚನೆ, ನಿರ್ದೇಶನ ಜನರನ್ನು ಮುಟ್ಟಿ ಮಾತನಾಡಿಸಿದವು, ಪತ್ರಿಕೆಗಳಿಂದ ಪ್ರಶಂಸೆಗೊಳಪಟ್ಟವು, ಜನಪ್ರಿಯತೆ ಗಳಿಸಿದವು.  
ರಂಗಭೂಮಿಯಲ್ಲಿ ಪಳಗಿದ ಕೈ ಎನ್ನಿಸಿಕೊಳ್ಳುತ್ತಿದ್ದಂತೆ, 1964 ರಲ್ಲಿ, ತಮಿಳುನಾಡಿನ ಅಂದಿನ ಕಾಲದ ಖ್ಯಾತ ನಟ ಎಂ.ಜಿ. ರಾಮಚಂದ್ರನ್ ಅವರ ‘ದೈವ ತಾಯ್‌’ ಎಂಬ ಚಿತ್ರಕ್ಕೆ ಸಂಭಾಷಣೆ ಬರೆಯುವ ಅವಕಾಶ ಹುಡುಕಿಕೊಂಡು ಬಂದಿತು.
ಇಲ್ಲಿಂದ ಮುಂದಿನದು ಇತಿಹಾಸ- ಇವರ ವೈಯಕ್ತಿಕ ಬದುಕಿನಲ್ಲೂ, ತಮಿಳುನಾಡಿನ ಚಿತ್ರೋದ್ಯಮದಲ್ಲೂ.
ಅಲ್ಲಿಯವರೆಗೆ ಎಂಜಿಆರ್‌ ಮತ್ತು ಶಿವಾಜಿ ಗಣೇಶನ್‌ರ ಒಂದೇ ರೀತಿಯ ಸ್ಟೀರಿಯೋಟೈಪ್‌ ನಟನೆ ಮತ್ತು ಸಂಭಾಷಣೆಗಳನ್ನು ನೋಡಿ ಬೇಸತ್ತಿದ್ದ ತಮಿಳು ಚಿತ್ರೀದ್ಯಮ ಹೊಸ ಕಳೆಗೆ ಕಾತರಿಸಿತ್ತು. ತಮಿಳು ಚಿತ್ರರಸಿಕರು ಹೊಸ ಮುಖಗಳಿಗಾಗಿ ಹಾತೊರೆಯುತ್ತಿದ್ದರು. ಸಹಜವಾಗಿಯೇ ಹೊಸತನದಿಂದ ಕೂಡಿದ್ದ, ತಮ್ಮದೇ ಆದ ವಿಭಿನ್ನ ಧಾಟಿಗೆ ಹೆಸರಾಗಿದ್ದ, ವಿಶಿಷ್ಟ ಅಭಿರುಚಿ ಹೊಂದಿದ್ದ ಬಾಲಚಂದರ್‌ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಕತೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತು ಮೊದಲಿಗೆ ತಮ್ಮದೇ ನಾಟಕಗಳನ್ನು ಸಿನಿಮಾಗಳಿಗೆ ಅಳವಡಿಸಿ, 1965 ರಲ್ಲಿ ‘ನೀರ್ಕುಮಿಜಿ’ ಎಂಬ ಚಿತ್ರ ಮಾಡಿ ಯಶಸ್ವಿಯಾದರು.
ಆನಂತರ ‘ಅರಂಗೇಟ್ರಂ’ ಎಂಬ ಚಿತ್ರ ಮಾಡಿದರು. ಈ ಚಿತ್ರ ತಮಿಳುನಾಡಿನಲ್ಲಲ್ಲ, ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಿತು. ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹುಡುಗಿಯೊಬ್ಬಳು ಮನೆಯ ನಿರ್ವಹಣೆಗೋಸ್ಕರ ವೇಶ್ಯಾವೃತ್ತಿಗಿಳಿಯುವ ಕಥಾಹಂದರವುಳ್ಳ, ಮಹಿಳೆಯನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ಚಿತ್ರಿಸಿದ ಅರಂಗೇಟ್ರಂ, ತಮಿಳು ಚಿತ್ರರಂಗದಲ್ಲಿ ಕ್ರಾಂತಿಯ ಅಲೆಗಳನ್ನೆಬ್ಬಿಸಿತು. ನಮ್ಮ ಸುತ್ತಲಿನ ಪಾತ್ರಗಳನ್ನೇ ಪರದೆ ಮೇಲೆ ತಂದು ಬೆಚ್ಚಿ ಬೀಳಿಸಿ, ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆಶ್ಚರ್ಯಕರ ಸಂಗತಿ ಎಂದರೆ, ಹಣ ಗಳಿಕೆಯಲ್ಲಿ ಯಶಸ್ವಿ ಚಿತ್ರವಾಗಿ ಪ್ರಶಸ್ತಿಯನ್ನೂ ಗಳಿಸಿತು.
ಅಲ್ಲಿಂದ ಮುಂದಕ್ಕೆ ಬಾಲಚಂದರ್‌ ಅಪೂರ್ವ ರಾಗಂಗಳ್‌, ಅವರ್ಗಳ್‌, ಮನ್ಮಥ ಲೀಲೈ, ವರುಮಯಿನ್‌ ನಿರುಂ ಸಿವಪ್ಪು, ಸಿಂಧು ಭೈರವಿ, ಮರೋಚರಿತ್ರ, ಏಕ್‌ ದುಜೆ ಕೆ ಲಿಯೆ, ಅವಳ್‌ ಒರು ತೊಡರ್‌ ಕಥೈ, ತೂಂಗಾದೆ ತಂಬಿ ತೂಂಗಾದೆ, ತಣ್ಣೀರ್‌ ತಣ್ಣೀರ್‌, ಅಚ್ಚಮಿಲ್ಲೆ ಅಚ್ಚಮಿಲ್ಲೆ, ರುದ್ರವೀಣಾ ಹೀಗೆ ಹಲವಾರು ಅತ್ಯದ್ಭುತ ಚಿತ್ರಗಳನ್ನು ನಿರ್ಮಿಸಿದರು.
ಸಿನಿಮಾ ಎಂದರೆ ಲಾರ್ಜರ್‌ ದ್ಯಾನ್‌ ಲೈಫ್‌ ಎಂಬ ಮಾತಿದೆ. ಆದರೆ ಬಾಲಚಂದರ್‌ ಅವರ ಚಿತ್ರಗಳು ಅದಲ್ಲ. ಮಧ್ಯಮವರ್ಗವನ್ನು, ನಮ್ಮ ನಡುವಿನ ಪಾತ್ರಗಳನ್ನು ಬೆಳ್ಳಿಪರದೆಗೆ ತಂದು ನಮ್ಮನ್ನೇ ಬೆಚ್ಚಿ ಬೀಳಿಸುವಂಥವು. ಕೌಟುಂಬಿಕ ಕತೆ ಹೇಳುತ್ತಲೇ ಸಾಮಾಜಿಕ ಪರಿವರ್ತನೆಗೆ ಪ್ರೇರೇಪಿಸುವಂಥವು. ಒಂದೊಂದು ಚಿತ್ರಗಳು ಒಂದೊಂದು ಲೋಕವನ್ನೇ ತೆರೆದಿಡುವ, ನೋಡುಗರ ನರನಾಡಿಗಳಿಗೆ ಇಳಿದು ಭಾವಕೋಶವನ್ನು ಅಲ್ಲಾಡಿಸುವ, ಬುದ್ಧಿಗೆ ಸಾಣೆ ಹಿಡಿಯುವ, ಭಾವಭಿತ್ತಿಯಲ್ಲಿ ಶಾಶ್ವತವಾಗಿ ನೆಲೆಯೂರುವ ಚಿತ್ರಗಳು. ಈ ಚಿತ್ರಗಳು ಅಲ್ಲಿಯವರೆಗಿದ್ದ ಸಿನಿಮಾ ನೋಡುವ ಸ್ಥಾಪಿತ ನೋಟವನ್ನು, ಗ್ರಹಿಸುವ ಕ್ರಮವನ್ನು ಬದಲಿಸಿದವು. 
ಸೂಕ್ಷ್ಮಸಂವೇದನೆಯ ಬಾಲಚಂದರ್‌ ಸ್ತ್ರೀಕೇಂದ್ರಿತ ಕತೆಗಳನ್ನು, ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಚಿತ್ರ ಮಾಡಿ ಗೆದ್ದವರು. ಕಾಮ-ಪ್ರೇಮದ ಕತೆ ಹೇಳುತ್ತಲೇ ನೈತಿಕ-ಅನೈತಿಕ ಗೆರೆಯನ್ನು ತೆಳುಗೊಳಸಿ ಜಿಜ್ಞಾಸೆಗೊಳಪಡಿಸಿದವರು. ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳೆಂಬ ಸಿದ್ಧಸೂತ್ರವನ್ನು ಕಿತ್ತೆಸೆದು, ಜನರ ಮನಸ್ಸಿಗೆ ಮುಟ್ಟುವ ತಟ್ಟುವ ಚಿತ್ರಗಳಿಗೆ ನಾಂದಿ ಹಾಡಿದವರು. 
ಇವರ ಚಿತ್ರಗಳ ಮೂಲಕ ಪರಿಚಯವಾದ ನಟನಟಿಯರಾದ ಕಮಲ್‌ ಹಾಸನ್‌, ರಜನೀಕಾಂತ್‌, ಜಯಸುಧಾ, ಸರಿತಾ, ಗೀತಾ, ಸುಹಾಸಿನಿ, ಮಾಧವಿ, ಎಸ್‌.ಪಿ. ಬಾಲಸುಬ್ರಮಣ್ಯಂ, ವಿವೇಕ್‌, ಪ್ರಕಾಶ್‌ ರೈ, ರಮೇಶ್‌ ಅರವಿಂದ್‌ ಸ್ಟಾರ್‌ಗಳಾಗಿ ಮೆರೆದು, ಚಿತ್ರರಂಗವನ್ನೇ ಆಳಿದರು. ಅದರಲ್ಲೂ ಕಮಲ್‌ ಹಾಸನ್‌, ರಜನೀಕಾಂತ್‌, ಪ್ರಕಾಶ್‌ ರೈ ಎಲ್ಲಾ ಕಾಲಕ್ಕೂ ಎಲ್ಲರೂ ಇಷ್ಟಪಡುವ ನಟರಾಗಿ ಈಗಲೂ ಚಾಲ್ತಿಯಲ್ಲಿದ್ದಾರೆ. ಒಂದು ರೀತಿಯಲ್ಲಿ ಕೆಬಿ, ಹಲವಾರು ನಕ್ಷತ್ರಗಳನ್ನು ಸೃಷ್ಟಿಸಿ, ಮೆರೆಸಿ ತಾನು ಮಾತ್ರ ತಣ್ಣಗಿದ್ದ ಬಾಲ ಚಂದಿರ.
ಕಮಲ್‌ ಹಾಸನ್‌, ರಜನೀಕಾಂತ್‌, ಪ್ರಕಾಶ್‌ ರೈರಂತಹ ನಟರನ್ನು, ಆ ಕಲಾವಿದರ ಪ್ರತಿಭೆಯನ್ನು ಪರಿಚಯಿಸಿದ್ದನ್ನು ಯಾರಾದರೂ ಹೊಗಳಿದರೆ, ಬಾಲಚಂದರ್‌, ‘‘ಅವರು ನಿಜವಾದ ಪ್ರತಿಭಾವಂತರು, ನನಗೆ ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’’ ಎನ್ನುವ ಸರಳ ಸೌಮ್ಯ ಸಜ್ಜನ.
ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಬಾಲಚಂದರ್‌, ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂ, ಸುಂದರ ಸ್ವಪ್ನಗಳು, ಎರಡು ರೇಖೆಗಳು ಸೇರಿದಂತೆ ಐದು ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ ಮನಸ್ಸನ್ನೂ ಗೆದ್ದರು. ಕವಿತಾಲಯ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಿಂದ ಹಲವಾರು ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ, ಮಣಿರತ್ನಂ, ಎ.ಆರ್‌. ರಹಮಾನ್‌ರನ್ನು ಸ್ಟಾರ್‌ಗಳನ್ನಾಗಿಸಿದರು. ಅಷ್ಟೇ ಅಲ್ಲ, ಮದ್ರಾಸಿ ಎಂದು ಮೂಗು ಮುರಿಯುತ್ತಿದ್ದ ಉತ್ತರದವರ ಮುಂದೆ ‘ಏಕ್‌ ದುಜೆ ಕೆ ಲಿಯೆ’ ಎಂಬ ಹದಿವಯದವರ ಹಸಿ ಹಸಿ ಪ್ರೇಮ ಚಿತ್ರ ಮಾಡಿ ಅಭೂತಪೂರ್ವ ಯಶಸ್ಸು ಕಂಡರು. ಆ ಮೂಲಕ ಕಮಲ್, ಮಾಧವಿ ಮತ್ತು ಎಸ್‌.ಪಿ. ಬಾಲಸುಬ್ರಮಣ್ಯಂರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದರು.
ಇವರ ಸಾಧನೆಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಫಾಲ್ಕೆ ಪ್ರಶಸ್ತಿ ಬಾಲಚಂದರ್‌ರನ್ನು ಹುಡುಕಿಕೊಂಡು ಬಂದಿತ್ತು. ತಮಿಳುನಾಡಿನ ಅತ್ಯುನ್ನತ ಪ್ರಶಸ್ತಿಯಾದ ಕಲೈಮಾಮಣಿ ಪ್ರಶಸ್ತಿಯ ಜೊತೆಗೆ ಒಂಬತ್ತು ರಾಷ್ಟ್ರೀಯ ಪ್ರಶಸ್ತಿಗಳು, ಲೆಕ್ಕವಿಲ್ಲದಷ್ಟು ಫಿಲಂಫೇರ್‌ ಪ್ರಶಸ್ತಿಗಳು ಅರಸಿ ಬಂದು, ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.
ಚಲನಚಿತ್ರ ನಿರ್ದೇಶನ, ನಿರ್ಮಾಣ, ಚಿತ್ರಸಾಹಿತ್ಯ, ಟಿವಿ ಧಾರಾವಾಹಿ ನಿರ್ಮಾಣ ಹೀಗೆ ವಿವಿಧ ಚಿತ್ರ ಮಾಧ್ಯಮ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಸುಮಾರು 45 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕೆ. ಬಾಲಚಂದರ್‌, ಭಾರತೀಯ ಚಿತ್ರೋದ್ಯಮ ಕಂಡ ಸೃಜನಶೀಲ ವ್ಯಕ್ತಿತ್ವದ, ವೈಚಾರಿಕ ಚಿಂತನೆಯ ಅಪರೂಪದ ಚಿತ್ರಜೀವಿ.
ಕಮಲ್, ಕೆಬಿ ಮತ್ತು ರಜನಿ



No comments:

Post a Comment