Thursday, March 12, 2015

ಆ ದ್ಯಾವ್ರು ತಂದ ಆಸ್ತಿ- ಸಿದ್ದಲಿಂಗಯ್ಯ

ಸಿದ್ದಲಿಂಗಯ್ಯ
ಕನ್ನಡ ಚಿತ್ರರಂಗಕ್ಕೆ ಬಂಗಾರದಂತಹ ಚಿತ್ರಗಳನ್ನು ಕೊಟ್ಟ ಅಪ್ಪಟ ಕನ್ನಡದ ನಿರ್ದೇಶಕ ಸಿದ್ದಲಿಂಗಯ್ಯನವರು ಈಗ ನಮ್ಮೊಂದಿಗಿಲ್ಲ. ಆದರೆ ಅವರು ಸೃಷ್ಟಿಸಿದ ಹತ್ತಾರು ಪಾತ್ರಗಳು ನಮ್ಮೊಳಗೇ ಇವೆ. ಅವರು ರಚಿಸಿದ ನೂರಾರು ಸಂಭಾಷಣೆಗಳು ನಮ್ಮ ಕಿವಿಗಳಲ್ಲಿ ಗುಂಯ್‌ಗುಡುತ್ತಿವೆ. ಸಾಮಾಜಿಕ ಕಳಕಳಿಯ, ಸದಭಿರುಚಿಯ, ಸಂದೇಶ ಸಾರುವ ಸಾರ್ವಕಾಲಿಕ ಚಿತ್ರಗಳನ್ನು ಕೊಟ್ಟ ಸಿದ್ದಲಿಂಗಯ್ಯನವರು ಕನ್ನಡ ಚಿತ್ರರಸಿಕರ ಸ್ಮೃತಿಪಟಲದಿಂದ ದೂರವಾಗಲು ಸಾಧ್ಯವೇ ಇಲ್ಲ.
ತುಮಕೂರು ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ 1936 ರಲ್ಲಿ ಹುಟ್ಟಿದ ಸಿದ್ದಲಿಂಗಯ್ಯನವರು, ಕಡು ಕಷ್ಟದ ಬಡತನದಲ್ಲಿ ಬೆಳೆದವರು. ಸ್ವಾಭಿಮಾನದ ಸಂಕೋಚದ ಮುದ್ದೆಯಂತಿದ್ದ ಸಿದ್ದಲಿಂಗಯ್ಯನವರು ಹಳ್ಳಿಜನರ ಮಾದರಿಯಂತಿದ್ದರು. ನಡೆ ನುಡಿಯಲ್ಲಿ ಸರಳ ಸಜ್ಜನಿಕೆ ಎದ್ದು ಕಾಣುತ್ತಿತ್ತು. ಚಿಕ್ಕವರು ದೊಡ್ಡವರು ಎಂಬ ಭೇದಭಾವ ಅವರಲ್ಲಿರಲಿಲ್ಲ. ಬಂಗಾರದ ಮನುಷ್ಯನಂತಹ ಮಹೋನ್ನತ ಚಿತ್ರ ಕೊಟ್ಟರೂ, ಆ ಚಿತ್ರದಿಂದ ನಿರ್ಮಾಪಕರು ಅಪಾರ ಹಣ ಗಳಿಸಿದರೂ, ನಟರು ಸ್ಟಾರ್ ಗಳಾಗಿ ಮೆರೆದರೂ ಸಿದ್ದಲಿಂಗಯ್ಯನವರು ಮಾತ್ರ ತೊರೆಯಂತೆ ತಣ್ಣಗಿದ್ದವರು. ಹಳ್ಳಿಹೈದ ಮುತ್ತಣ್ಣನನ್ನು ಮಹಾನಗರದ ಮೇಯರ್‌ ನನ್ನಾಗಿ ರೂಪಿಸಿದರೂ, ಸಿದ್ದಲಿಂಗಯ್ಯನವರು ಮಾತ್ರ  ಕೊನೆಯವರೆಗೂ ಹಳ್ಳಿಮುಕ್ಕನಂತೆಯೇ ಇದ್ದವರು.
70 ರ ದಶಕ, ಹಳ್ಳಿಯ ಯುವಕರು ವಿದ್ಯಾವಂತರಾಗಿ ಸರಕಾರಿ ನೌಕರಿ ಹಿಡಿಯುತ್ತಿದ್ದ ಕಾಲ. ಕೃಷಿ ಕಡೆಗಣಿಸಲ್ಪಡುತ್ತಿದ್ದ ಕಾಲ.  ಆ ಕಾಲಘಟ್ಟದಲ್ಲಿ ಸಿದ್ದಲಿಂಗಯ್ಯನವರು, ವಿದ್ಯಾವಂತ ಯುವಕನೊಬ್ಬ ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಹಳ್ಳಿಯ ಕೃಷಿ ಬದುಕಿಗಿಳಿಯುವ ಕತೆಯನ್ನುಳ್ಳ 'ಬಂಗಾರದ ಮನುಷ್ಯ' ಚಿತ್ರವನ್ನು ತೆರೆಗೆ ತಂದರು. ಆ ಚಿತ್ರದಲ್ಲಿ ಒಗ್ಗೂಡಿ ಬದುಕುವ, ಆತ್ಮವಿಶ್ವಾಸದಿಂದ ಪುಟಿದೇಳುವ ಗ್ರಾಮೀಣ ಬದುಕಿನ ಅನಾವರಣವಿತ್ತು. ಗಾಂಧಿಯ ಕನಸು ಮತ್ತು ಆದರ್ಶ ಆ ಕತೆಯಲ್ಲಿ ಕಂಡೂ ಕಾಣದಂತೆ ಅಡಗಿತ್ತು. ಆಶ್ಚರ್ಯವೆಂದರೆ, ಸಿದ್ದಲಿಂಗಯ್ಯನವರಿಗೇ ಗೊತ್ತಿರಲಿಲ್ಲ, ಆ ಚಿತ್ರ ಆ ಮಟ್ಟದ ಯಶಸ್ಸು ಗಳಿಸುತ್ತದೆಂದು. ಕುತೂಹಲಕರ ಸಂಗತಿ ಎಂದರೆ, 'ಬಂಗಾರದ ಮನುಷ್ಯ' ಚಿತ್ರ ನೋಡಿ ನಾಡಿನ ಹಲವಾರು ವಿದ್ಯಾವಂತ ಯುವಕರು ಹಳ್ಳಿಯತ್ತ ಹೆಜ್ಜೆ ಹಾಕಿದರು. ಕೃಷಿಯಲ್ಲಿ ತೊಡಗಿಕೊಂಡು ಯಶಸ್ವಿಯಾದರು. ಬದಲಾವಣೆಗೆ, ಸಾಮಾಜಿಕ ಕ್ರಾಂತಿಗೆ ಕಾರಣವಾದ ಚಿತ್ರವದು.
ಎರಡು ವರ್ಷಗಳ ಹಿಂದೆ 'ಬಂಗಾರದ ಮನುಷ್ಯ' ಚಿತ್ರದಿಂದ ಪ್ರಭಾವಿತರಾಗಿ ಯಶಸ್ವಿ ಕೃಷಿಕರಾದವರ ಬಗ್ಗೆ ವಿಚಾರಿಸಲು, ಆ ಬಗ್ಗೆ ಲೇಖನ ಸಿದ್ಧಪಡಿಸಲು ಸಿದ್ದಲಿಂಗಯ್ಯನವರನ್ನು ಭೇಟಿ ಮಾಡಿದ್ದೆ. ಆ ಸಮಯದಲ್ಲಿ ನನ್ನೊಂದಿಗಿದ್ದ ಗೆಳೆಯ ರಮೇಶ್‌ ಹುಣಸೂರು, ಸಿದ್ದಲಿಂಗಯ್ಯನವರ ಸರಳ ವ್ಯಕ್ತಿತ್ವಕ್ಕೆ ಮಾರುಹೋಗಿ, ಅವರ ಕಾಲು ಮುಟ್ಟಿ ನಮಸ್ಕರಿಸಲು ಬಗ್ಗಿದರು. ಆ ತಕ್ಷಣವೇ ಹಿಂದೆ ಸರಿದ ಸಿದ್ದಲಿಂಗಯ್ಯನವರು, 'ಯಾರು ಯಾರಿಗೂ ತಲೆ ಬಾಗಬಾರದು' ಎಂದರು. ಆ ಮಾತು ಖಡಕ್ಕಾಗಿತ್ತು. ಸ್ವಾಭಿಮಾನದ ಪಾಠ ಹೇಳುತ್ತಿತ್ತು. ಅವರ ಬದುಕನ್ನು ಬಿಂಬಿಸುತ್ತಿತ್ತು. ಆ ನಂತರ ಸಮಾಧಾನದಿಂದ, ನಿಮ್ಮ ಮಾತಿನಲ್ಲಿ ವಿನಯವಿರಲಿ. ಯಾರೂ ಹೆಚ್ಚಲ್ಲ ಇಲ್ಲಿ. ಎಲ್ಲರಿಂದಲೂ ಕಲಿಯುವುದಿದೆ ಎಂದು ತತ್ವಜ್ಞಾನಿಯಂತೆ ಮಾತಾಡಿ, ಆತ್ಮೀಯರಾದರು.
ಬಂಗಾರದ ಮನುಷ್ಯ ಚಿತ್ರದತ್ತ ವಿಷಯಾಂತರಿಸಿದಾಗ 70 ರ ದಶಕಕ್ಕೆ ಜಾರಿದರು. ಆ ಚಿತ್ರ ಓಡಿದ್ದು, ಹಣ ಗಳಿಸಿದ್ದು, ಹೆಸರು ತಂದಿದ್ದು ಎಲ್ಲವನ್ನೂ ವಿಸ್ತೃತವಾಗಿ ಹಂಚಿಕೊಂಡರು. ಕೋಲಾರ ಮತ್ತು ಶಿವಮೊಗ್ಗದಲ್ಲಿ ಚಿತ್ರ ನೋಡಿ ಪ್ರಭಾವಿತರಾದ ವಿದ್ಯಾವಂತ ಯುವಕರು ಯಶಸ್ವಿ ಕೃಷಿಕರಾದ ಕತೆಯನ್ನು ಬಾಯ್ತುಂಬ ಬಣ್ಣಿಸಿದರು. ಅದು ನನ್ನಿಂದ ಆದದ್ದಲ್ಲ, ಕನ್ನಡ ನಾಡಿನ ಜನ ಮಾಡಿಸಿದ್ದು ಎಂದರು. ಅವರ ಮಾತಿನುದ್ದಕ್ಕೂ ಸರಳ ಸಜ್ಜನಿಕೆ ಎದ್ದು ಕಾಣುತ್ತಿತ್ತು. ಅಬ್ಬರ, ಸದ್ದು, ನಖರ, ಅನಗತ್ಯ ಅಹಂ ಸುಳಿಯಲಿಲ್ಲ.
ಬಡತನದ ಬೇಗೆಯಿಂದ ಬಿಡಿಸಿಕೊಳ್ಳಲು ಹಳ್ಳಿಯಿಂದ ಓಡಿಹೋದ ಸಿದ್ದಲಿಂಗಯ್ಯ ಮೈಸೂರಿನ ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್‌ ಬಾಯ್‌ ಆಗಿ ಕೆಲಸಕ್ಕೆ ಸೇರಿದರು. ಆ ನಂತರ ಮದ್ರಾಸಿಗೆ ಹೋಗಿ ವಿಠಲಾಚಾರ್ಯರ ಶಿಷ್ಯರಾದರು. ಊಟ-ವಸತಿಗೆ ಸ್ಟುಡಿಯೋಗಳನ್ನೇ ಆಶ್ರಯಿಸಿದರು. ಬೆಳ್ಳಿತೆರೆಯ ಬೆರಗಿನ ಲೋಕವನ್ನು ಬಹಳ ಹತ್ತಿರದಿಂದ ಬೆರಗುಗಣ್ಣಿನಿಂದ ನೋಡುತ್ತಾ, ಕರುಳಿಗೆ ಇಳಿಸಿಕೊಳ್ಳುತ್ತಾ ಹಂತ ಹಂತವಾಗಿ ಬೆಳೆದರು. ಸಹನಿರ್ದೇಶಕರಾಗಿ, ಚಿತ್ರಕಥೆ-ಸಂಭಾಷಣೆಕಾರರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದರು. ಇವರ ಬಂಗಾರದಂತಹ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದವು. ಹಾಗೆಯೇ ನಿರ್ದೇಶನ ಕಲಿಯುವ ಯುವ ಪೀಳಿಗೆಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟವು.
1969 ರಲ್ಲಿ ತೆರೆ ಕಂಡ ಮೇಯರ್‌ ಮುತ್ತಣ್ಣ ಸಿದ್ದಲಿಂಗಯ್ಯನವರ ಮೊದಲ ನಿರ್ದೇಶನದ ಚಿತ್ರ. ಆ ನಂತರ ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು, ಬಂಗಾರದ ಮನುಷ್ಯ, ದೂರದ ಬೆಟ್ಟ, ಬೂತಯ್ಯನ ಮಗ ಅಯ್ಯು, ಹೇಮಾವತಿ, ಭೂಲೋಕದಲ್ಲಿ ಯಮರಾಜ, ಕೂಡಿ ಬಾಳಿದರೆ ಸ್ವರ್ಗ ಸುಖ, ಬಾರೆ ನನ್ನ ಮುದ್ದಿನ ರಾಣಿ, ಪ್ರೇಮ ಪರ್ವ, ಪರಾಜಿತ, ಅಜೇಯ ಸೇರಿದಂತೆ 23 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಕೌಟುಂಬಿಕ, ಸಾಮಾಜಿಕ, ಹಾಸ್ಯ, ದುರಂತ, ಪತ್ತೇದಾರಿ, ಪ್ರೀತಿ-ಪ್ರೇಮ ಮುಂತಾದ ವಿಭಿನ್ನ ಬಗೆಯ ಚಿತ್ರಗಳಿವೆ. ಆದರೂ ಸಿದ್ದಲಿಂಗಯ್ಯನವರು ನಿಲ್ಲುವುದು, ನೆನಪಿನಲ್ಲುಳಿಯುವುದು ಗ್ರಾಮೀಣ ಬದುಕನ್ನು ಬಗೆದಿಟ್ಟ ಬಗೆಯಲ್ಲಿ. ಆ ಬದುಕನ್ನು ಬೆಳ್ಳಿತೆರೆಗೆ ತಂದ ರೀತಿಯಲ್ಲಿ.
ಹಾಗೆ ನೋಡಿದರೆ, ಇವರ ವಾರಗೆಯವರಾದ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ಚಿತ್ರಗಳು ಒಂದು ಮಾದರಿಯಾದರೆ, ಸಿದ್ದಲಿಂಗಯ್ಯನವರದು ಇನ್ನೊಂದು ಮಾದರಿ. ಇಬ್ಬರ ಚಿತ್ರಗಳೂ ಕನ್ನಡ ಚಿತ್ರರಂಗವನ್ನು ಪೊರೆದಿವೆ, ಪೋಷಿಸಿವೆ, ಪೊಗದಸ್ತಾಗಿ ಬೆಳೆಯಲು ಸಹಕರಿಸಿವೆ. ದುರದೃಷ್ಟಕರ ಸಂಗತಿ ಎಂದರೆ ಪುಟ್ಟಣ್ಣರಿಗೆ ಸಿಕ್ಕ ಮಣೆ, ಮನ್ನಣೆ ಸಿದ್ದಲಿಂಗಯ್ಯನವರಿಗೆ ಸಿಗಲಿಲ್ಲ. ಪ್ರಚಾರ, ಪ್ರಶಸ್ತಿ, ಪುರಸಾರಗಳೂ ಹುಡುಕಿಕೊಂಡು ಬರಲಿಲ್ಲ. ಈ ಬಗ್ಗೆ ಸಿದ್ದಲಿಂಗಯ್ಯನವರಿಗೆ ಕೊರಗಿದ್ದರೂ, ನಾನು ಪಡೆದುಕೊಂಡು ಬಂದದ್ದು ಇಷ್ಟೆ ಅಂತ ಕಾಣುತ್ತೆ ಎಂದು ಸಂತನಂತೆ ಸುಮ್ಮನಾಗಿಬಿಡುತ್ತಿದ್ದರು. ಇದು ಅವರ ದೊಡ್ಡ ಗುಣ.
ಇಂತಹ ಅಪರೂಪದ ಚಿತ್ರಜೀವಿಯನ್ನು ಕನ್ನಡ ಚಿತ್ರರಂಗ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಆರೋಪವಿತ್ತು. ಇದರ ಜೊತೆಗೆ ತಮ್ಮ ಪುತ್ರ ಮುರಳಿಯವರ ಅಕಾಲಿಕ ಮರಣ ಅವರನ್ನು ಇನ್ನಷ್ಟು ಕುಗ್ಗಿಸಿತ್ತು.  ಮಧುಮೇಹ, ಕಿಡ್ನಿ ವೈಫಲ್ಯ ದೇಹವನ್ನು ದಣಿಸಿತ್ತು. ಯಾರಿಗೂ ತಲೆ ಬಾಗದ ಸಿದ್ದಲಿಂಗಯ್ಯನವರ ಸ್ವಾಭಿಮಾನಿ ಗುಣವೇ ಅದಕ್ಕೆಲ್ಲ ಅಡ್ಡಿಯಾಯಿತು ಎಂದರೂ, ಅವರ ಪ್ರತಿಭೆಗೆ, ಶ್ರದ್ಧೆಗೆ, ನಿಷ್ಠೆಗೆ ಸಲ್ಲಲೇಬೇಕಾದ ನ್ಯಾಯ ಸಲ್ಲಲಿಲ್ಲವೆಂಬ ಕೊರಗು ಹಾಗೆಯೇ ಉಳಿದಿದೆ.
ಆರೋಪ, ಕೊರಗುಗಳ ನಡುವೆಯೇ ಚಿತ್ರಜೀವಿ ರಂಗಸ್ವಾಮಿ ಹೇಳುವಂತೆ, 'ಬಂಗಾರದ ಮನುಷ್ಯ ಮತ್ತು ಬೂತಯ್ಯನ ಮಗ ಅಯ್ಯು ಚಿತ್ರಗಳು ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿದ್ದಂತೆ. ಆ ಎರಡು ಕಣ್ಣುಗಳನ್ನು ಕೊಟ್ಟ ಪುಣ್ಯಾತ್ಮನ ಆತ್ಮ ತಣ್ಣಗಿರಲಿ' ಎಂದಿರುವುದು ಅವರ ಮೇಲಿಟ್ಟಿರುವ ಪ್ರೀತಿಯನ್ನು, ಗೌರವವನ್ನು ಸಾರುತ್ತಿದೆ.
ಇಂತಹ ಸಿದ್ದಲಿಂಗಯ್ಯ ಆ ದ್ಯಾವ್ರು ತಂದ ಕನ್ನಡದ ಆಸ್ತಿ.


No comments:

Post a Comment