Thursday, April 30, 2015

ಕಾಯಕದಲ್ಲಿ ಕೈಲಾಸ ಕಂಡ ರಾಮಣ್ಣ
ಬಿರು ಬಿಸಿಲು. ಬೈಕ್ಪಂಕ್ಚರ್ಆಗಿತ್ತು. ಒಂದೂವರೆ ಕ್ವಿಂಟಾಲಿನ ಬೈಕನ್ನು ಅರ್ಧ ಕಿಲೋಮೀಟರ್ದೂರ ದೂಡಿಕೊಂಡು ಪಂಕ್ಚರ್ಅಂಗಡಿಯ ಬಳಿ ಹೋಗುವಷ್ಟರಲ್ಲಿ ದೇಹ ಧರೆಗಿಳಿದುಹೋಗಿತ್ತು. ಬೆವರಿಗೆ ಬಟ್ಟೆ ಒದ್ದೆಯಾಗಿತ್ತು. ಕಣ್ಣು ಮಂಜಾಗಿತ್ತು. ಸೆಕೆ ಸಹನೆ ಕೆಡಿಸಿತ್ತು. 
ಆದರೂ ಹೆಣಭಾರದ ಬೈಕನ್ನು ದೂಡಿಕೊಂಡು ಪಂಕ್ಚರ್ಅಂಗಡಿ ಮುಂದೆ ನಿಂತೆ. ಬಂದು ನಿಂತವನನ್ನು ಕಿರುಗಣ್ಣಿನಿಂದ ನೋಡಿದ, ತೂತಾದ ಟ್ಯೂಬ್ಗೆ ತೇಪೆ ಹಾಕುವ ಕಾಯಕದಲ್ಲಿ ಕಳೆದುಹೋಗಿದ್ದ ರಾಮಣ್ಣ, ‘ಬನ್ನಿ ಬನ್ನಿಎಂದರು. ನನ್ನ ಸ್ಥಿತಿಯನ್ನೊಮ್ಮೆ ಧ್ಯಾನಿಸಿದಂತೆ ನೋಡಿ ಮುಸಿ ಮುಸಿ ನಗುತ್ತ, ‘ಬಿಸ್ಲು ಹೆಂಗೈತೆಎಂದರು
ಮಾತಿನಲ್ಲಿ ಕಿಚಾಯಿಸುವ ವ್ಯಂಗ್ಯವಿತ್ತು. ಅವರಿಗೆ ಆಟ ನನಗೆ ಸಂಕಟ. ಸುಮ್ಮನಾದೆ. ಸುಮ್ಮನಾಗಿದ್ದು ಕಂಡು, ‘ನಿಮಗೊಂದು ಮಾತು ಹೇಳ್ತೀನಿ, ತಪ್ಪುತಿಳಿಬೇಡಿ. ಬಿಸ್ಲೈತ್ತಲ್ಲ, ಇದಕ್ಕೆ ಮೈ ಕೊಡಬೇಕು. ಸುಡು ಅನ್ನಬೇಕು. ಭಂಡರಾಗಬೇಕು. ಓಡೋಯ್ತದೆ. ಮಳೆ ಗಾಳಿ ಬಿಸಿಲು ಹ್ಯಂಗ್ಬತ್ತವೆ ಹಂಗ್ತಗಬೇಕು, ಅವುಗಳ ಜೊತೆಗೇ ಬದುಕಬೇಕು, ಏನಂತಿರಾಎಂದರು.
ಅಲ್ಲಿಯವರೆಗೆ ಅವರ ಬಗ್ಗೆ ಅಸಡ್ಡೆಯಿಂದ ನಿಂತಿದ್ದವನಿಗೆ ಅವರ ಮಳೆ ಗಾಳಿ ಬಿಸಿಲು ಹೇಗೆ ಬರುತ್ತವೋ ಹಾಗೆಯೇ ತಗೋಬೇಕು ಎಂದಿದ್ದು ಮಿಂಚು ಹೊಡೆದಂತಾಯಿತು. ಯು.ಆರ್‌. ಅನಂತಮೂರ್ತಿಯವರು ಇತ್ತೀಚಿಗೆ ಬರೆದ, ‘ಪ್ರಕೃತಿಯನ್ನು ಕೆಣಕದೆ ಹೊಂದಿಕೊಂಡು ಬದುಕುವ ವಿನಯ ನಮ್ಮ ಪಿತೃಗಳಿಗೆ ಇತ್ತು. ಇವತ್ತು ಜಾಗತೀಕರಣದ ಸುಳಿಗೆ ಸಿಕ್ಕಿ ಎಲ್ಲೆಲ್ಲೂ ಸೆಕೆಯಾಗದ, ಚಳಿಯೂ ಇಲ್ಲದ ನಿಯಂತ್ರಿತ ಹವಾಕ್ಕೆ ಒಗ್ಗಿಕೊಂಡಿದ್ದೇವೆ, ವಿಶ್ವಸಂಚಾರಿಗಳಾಗಿ ತಾವು ಎಲ್ಲಿ ಯಾವ ಕಾಲದಲ್ಲಿ ಇದ್ದೇವೆಂಬುದನ್ನು ತಿಳಿಯದಂತಾಗಿದ್ದೇವೆಎನ್ನುವುದು ನೆನಪಾಯಿತು.
ಟ್ಯೂಬಿನ ತೂತು ಮುಚ್ಚಿ ಗಾಳಿ ಹಾಕುವ ರಾಮಣ್ಣ ಸಂತನಂತೆ ಕಾಣತೊಡಗಿದರು. ಕಾಯಕ ಜೀವಿಯ ಜೀವನಾನುಭವ ಅನಂತಮೂರ್ತಿಯವರ ಓದು ವಿದ್ವತ್ತಿಗಿಂತ ಮಿಗಿಲಾದುದು ಎನ್ನಿಸತೊಡಗಿತು.
ಇಂತಹ ರಾಮಣ್ಣ ಹುಟ್ಟಿದ್ದು ಬೆಳಗಾವಿಯಲ್ಲಿ, ಬೆಳೆದದ್ದು ಗದಗಿನಲ್ಲಿ. ಅಪ್ಪನಿಗೆ ರೈಲ್ವೆಯಲ್ಲಿ ಕೆಲಸ. ಅಮ್ಮನಿಗೆ ಮನೆ ಕೆಲಸ. ಮನೆ ತುಂಬ ಮಕ್ಕಳು. ಯಾವ ಮಗು ಏನು ಓದುತ್ತಿದೆ, ಏನು ಮಾಡುತ್ತಿದೆ ಎಂದು ತಿಳಿಯಲು ಪೋಷಕರಿಗೆ ಪುರುಸೊತ್ತಿಲ್ಲ. ಇದು ಬಾಲಕ ರಾಮಣ್ಣನಿಗೆ ಅನುಕೂಲವಾಯಿತು. ಸ್ಕೂಲಿಗೆ ಹೋಗುವ ವಯಸ್ಸಿನಲ್ಲಿಯೇ ರಾಮಣ್ಣ ಸಿನಿಮಾ ಹುಚ್ಚಿಗೆ ಬಿದ್ದು, ವಿಷ್ಣುವರ್ಧನ್ಅಭಿಮಾನಿಯಾದರು. ವಿಷ್ಣು ಕಾಣಬೇಕೆಂಬ ಬಯಕೆಯಿಂದ ಬೆಂಗಳೂರಿಗೆ ಬಂದೇ ಬಿಟ್ಟರು.
ಬೆಂಗಳೂರಿಗೇನೋ ಬಂದಾಯಿತು. ಮಾಡಲು ಕೆಲಸವಿಲ್ಲ, ತಮ್ಮವರೆಂಬ ಜನವೂ ಇಲ್ಲ. ಅಲ್ಲಿ ಇಲ್ಲಿ ನೋಡಿ, ಕಾಲ ಕಳೆದು ಹೊಟ್ಟೆ ಚುರುಗುಡತೊಡಗಿದಾಗ, ಅಂತಿಮ ಆಯ್ಕೆಯಾದ ಹೋಟೆಲ್ ಕ್ಲೀನರ್ಆದರು. ಹೊಟ್ಟೆ ತುಂಬಿತು. ತಟ್ಟೆ ಲೋಟ ತೊಳೆಯುತ್ತಲೇ ಬೆಂಗಳೂರಿನ ಆಳ ಅಗಲಗಳನ್ನು ಅರಿಯುತ್ತಾ ಹೋದರು. ಚಿತ್ರನಟರು, ಚಿತ್ರೀಕರಣ ನಡೆಯುವ ತಾಣಗಳನ್ನು ಅವರಿವರಿಂದ ತಿಳಿದುಕೊಂಡರು.
ಇದ್ದಕ್ಕಿದ್ದಂತೆ ಒಂದು ದಿನ, ಚಿತ್ರೀಕರಣ ನಡೆಯುವ ಜಾಗ ಹುಡುಕಿ ಹೋಗಿ ವಿಷ್ಣು ಮುಂದೆ ನಿಂತು, ನಿಮ್ಮ ಅಭಿಮಾನಿ ಎಂದರು. ಹುಡುಗನ ಅಭಿಮಾನ ಕಂಡ ವಿಷ್ಣು, ಬಳಿಗೆ ಕರೆದು ಕೂರಿಸಿಕೊಂಡು, ಹಿನ್ನೆಲೆ ಕೇಳಿದರು. ‘ಮನೆಗೆ ಹಿರಿಯ ಮಗ ಅಂತೀಯಾ, ಮನೆ ಬಿಟ್ಟು ಬಂದರೆ ಅಲ್ಲಿ ಏನಾಗಿದೆ ಎಂಬ ಅರಿವಿದೆಯಾ, ಕೈ ಕೆಲಸ ಕಲಿ, ಮನೆಯವರಿಗೆ ನೆರವಾಗು, ಬದುಕು ರೂಪಿಸಿಕೊ. ಹೊಟ್ಟೆ ತುಂಬಿದ ಮೇಲೆ ನಾವೆಲ್ಲ ಇದ್ದೇ ಇರುತ್ತೇವೆಎಂದರು. ಆಗ ರಾಮಣ್ಣನಿಗೆ ಜ್ಞಾನೋದಯವಾಯಿತು.
ಅಂದೇ ಹೋಟೆಲ್ ಕೆಲಸ ಬಿಟ್ಟು ಕಲಾಸಿಪಾಳ್ಯಂನ ಹಳೆ ಟೈರುಗಳನ್ನು ಮಾರುವ ಪಂಕ್ಚರ್ಹಾಕುವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಹುಡುಗನ ಕೆಲಸದ ಬಗೆಗಿನ ಶ್ರದ್ಧೆ, ಅತಿಉತ್ಸಾಹ ಕಂಡ ಮುಸ್ಲಿಂ ಮಾಲಕರು, ತಾವು ಕಲಿತದ್ದನ್ನೆಲ್ಲ ಹೇಳಿಕೊಟ್ಟರು. ‘ನಾನು ಅವರಿಂದ ಕಲಿತದ್ದು ಅಪಾರ. ಜೀವನ ಅಂದರೆ ಏನು ಎನ್ನುವುದು ಅವರ ಒಡನಾಟದಲ್ಲಿ ಕರುಳಿಗೆ ಇಳಿಯಿತು. ಅವರಷ್ಟು ಶ್ರಮಜೀವಿಗಳು ಜಗತ್ತಿನಲ್ಲೇ ಇಲ್ಲವೇನೋ ಎನ್ನುವಷ್ಟು, ಮಳೆ ಚಳಿ ಗಾಳಿ ನೋಡದೆ ಕೆಲಸದಲ್ಲಿ ಮುಳುಗೇಳುತ್ತಿದ್ದರು. ಅವರೇ ನನ್ನ ಇವತ್ತಿನ ಕೆಲಸಕ್ಕೆ ಸ್ಫೂರ್ತಿಎನ್ನುವ ರಾಮಣ್ಣ ಕಳೆದ ನಲವತ್ತು ವರ್ಷಗಳಿಂದ ಧಣಿವಿಗೇ ಧಣಿವಾಗುವಂತೆ ಕೆಲಸ ಮಾಡುತ್ತಲೇ ಇದ್ದಾರೆ.
ನಾನು ಕತ್ತರಿಗುಪ್ಪೆ ಏರಿಯಾಕ್ಕೆ ಬಂದಾಗ, ಇಲ್ಲಿ ಏನೂ ಇರಲಿಲ್ಲ. ನನ್ನ ಹತ್ರಾನೂ ಏನೂ ಇರಲಿಲ್ಲ. ಇದ್ದ ಗೋಣಿಚೀಲ ಬಿಚ್ಚಿ ಅದರ ಮೇಲೆ ಒಂದು ಸ್ಪ್ಯಾನರ್‌, ಕಟಿಂಗ್ಪ್ಲೇಯರ್ರು, ಸ್ಕ್ರೂ ಡ್ರೈವರ್ಹಾಕಿ ಪಕ್ಕದ ಹುಲ್ಲು ಹಾಸಿನ ಮೇಲೆ ಕೂತೆ. ಅವತ್ತು ನನ್ನ ಬಳಿ ಕಲಾಸಿಪಾಳ್ಯದ ಗುರು ಕಲಿಸಿದ ಕೆಲಸ ಬಿಟ್ರೆ ಇನ್ನೇನೂ ಇರಲಿಲ್ಲ. ಇವತ್ತು ಕತ್ತರಿಗುಪ್ಪೆ ಮೇನ್ರೋಡಿನಲ್ಲಿ ಭವಾನಿ ಸೈಕಲ್ ಮಾರ್ಟ್ಎಂಬ ಅಂಗಡಿ ಇದೆ. ಚನ್ನಸಂದ್ರದಲ್ಲಿ ಮನೆ ಕಟ್ಟಿಸಿದ್ದೀನಿ. ಮಗ ಬಿಕಾಂ ಓದಿ, ಕೆಲಸಕ್ಕೆ ಹೋಗ್ತಿದಾನೆ. ಮಗಳ ಮದುವೆ ಮಾಡಿದ್ದೇನೆ. ಅವತ್ತು ಬೆಂಗಳೂರಿಗೆ ಬಂದಾಗ ಮಗನನ್ನು ಹುಡುಕದೆ ಬಿಟ್ಟ ಅಪ್ಪಅಮ್ಮ ಬಂಧು ಬಾಂಧವರೆಲ್ಲ ಈಗ ನನ್ನ ಹುಡುಕಿಕೊಂಡು ನಾನಿರುವಲ್ಲಿಗೇ ಬಂದಿದ್ದಾರೆ. ಅವರಿಗೂ ಒಂದೊಂದು ದಾರಿ ತೋರಿಸಿದ್ದೇನೆ. ಎಲ್ಲ ಕೆಲಸದಿಂದಲೇ. ಕೆಲಸ ಮಾಡಬೇಕು ಸಾರ್‌, ಯಾವನು ಸೋಮಾರಿಯಾಗ್ತನೋ ಅವನು ಹಾಳಾಗ್ತನೆ, ಹಾಳಾಗದಷ್ಟೇ ಅಲ್ಲ ನರಕ ನೋಡ್ತನೆಎಂದರು. 
ಬೀದಿಯಲ್ಲಿ ಬಿಸಿಲಲ್ಲಿ ಕೂತಿದ್ದರೂ, ಮುಖದ ಮೇಲೆ ಬೆವರು ಸುರಿಯುತ್ತಿದ್ದರೂ ರಾಮಣ್ಣ ಮಾತ್ರ ಸದಾ ನಗುವ ಆಸಾಮಿ. ವಾಹನಗಳ ಟೈರ್ಬಿಚ್ಚುವ ಶ್ರಮದ ಕೆಲಸ ಮಾಡುತ್ತಿದ್ದರೂ ಸ್ವಲ್ಪವೂ ಸುಸ್ತಾಗದ, ಸಹನೆ ಕಳೆದುಕೊಳ್ಳದ ವ್ಯಕ್ತಿ. ಅಷ್ಟೇ ಅಲ್ಲ, ಬಂದ ಗಿರಾಕಿಗಳೊಂದಿಗೆ ಮಾತನಾಡುತ್ತಲೇ ಕೆಲಸ ಮಾಡಿ ಮುಗಿಸುವ ನಿಪುಣ ಕಸುಬುದಾರ. ಕೆಲಸವನ್ನು ಕೆಲಸ ಎಂದು ಭಾವಿಸದೆ, ಅದಕ್ಕಾಗಿ ನಾನು ನನಗಾಗಿ ಅದು ಎಂದು ಅರಿತು, ಅದರೊಂದಿಗೆ ಬೆರೆತವರು. 
ಕೆಂಪಗೆ ಕುಳ್ಳಗಿರುವ ರಾಮಣ್ಣನವರು ಕಳೆದ ನಲವತ್ತು ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ. ನಲವತ್ತು ವರ್ಷಗಳಲ್ಲಿ ಇವರನ್ನು ಟಿಪ್ಟಾಪ್ಡ್ರೆಸ್ಇರಲಿ, ಒಂದು ನೀಟಾದ ಶರ್ಟ್‌ ಪ್ಯಾಂಟಿನಲ್ಲೂ ಕಂಡವರಿಲ್ಲ. ಮನೆಯಿಂದ ಬರುವಾಗ ಮತ್ತು ಹೋಗುವಾಗಲಷ್ಟೇ ಶರ್ಟು-ಪ್ಯಾಂಟು ತೊಡುವ ರಾಮಣ್ಣರನ್ನು, ಸದಾ ಕೊಳಕಾದ ಬನಿಯನ್‌-ಪ್ಯಾಂಟ್ಬಿಟ್ಟು ಬೇರೊಂದು ಡ್ರೆಸ್ನಲ್ಲಿ ಯಾರೂ ನೋಡಿದ್ದಿಲ್ಲ.
ಮೊನ್ನೆ ಮನೆಯಿಂದ ಬರ್ತಾ ಐದು ಶರ್ಟ್ತಂದು ಗಾರೆ ಕೆಲಸದವರಿಗೆ ಕೊಟ್ಟೆ. ನಾನು ಹಾಕದಿಲ್ಲ, ಯಾರು ಹಾಕ್ತರೋ ಅವರಿಗೆ ಕೊಟ್ರೆ ಅವರಿಗೂ ಖುಷಿಯಾಗ್ತದೆ, ನಮಗೂ ನಿರಾಳ, ಏನಂತೀರಾ?’ ಎಂದರು.
ಇಂತಹ ರಾಮಣ್ಣರಿಗೆ ಈಗ 54 ವರ್ಷ. ತಮ್ಮ ಸರಳ, ಸಜ್ಜನಿಕೆಯಿಂದಾಗಿಯೇ ಕತ್ತರಿಗುಪ್ಪೆ ಜನರ ಅಚ್ಚುಮೆಚ್ಚಿನವರು. ಪುಟ್ಟ ಮಕ್ಕಳ ಸೈಕಲ್ಲಿಗೆ ಗಾಳಿ ತುಂಬಿಸುವ, ಸಣ್ಣಪುಟ್ಟ ರಿಪೇರಿ ಮಾಡುವ ಅಕ್ಕರೆಯ ಅಂಕಲ್. ಕೆಲಸ ಕೆಲಸ ಕೆಲಸ ಎಂದು ಸದಾ ಅದರಲ್ಲಿಯೇ ಅದ್ದಿಕೊಂಡಿರುವ ರಾಮಣ್ಣ, ಕೆಲಸದ ನಡುವೆ ಬಿಡುವು ಎಂದಾಗ ದಿನಪತ್ರಿಕೆ ಓದುತ್ತಾರೆ. ವಿಷ್ಣು ಸಿನಿಮಾಗಳ ಬಗ್ಗೆ ಮಾತನಾಡುತ್ತಾರೆ.
ಏನೋ ನೆನಪಾದವರಂತೆ, ‘ನೋಡಿ, ನಿಮಗೆ ಹೇಳೋದನ್ನೇ ಮರೆತಿದ್ದೆ, ನಾನು ವಿಷ್ಣು ಅಭಿಮಾನಿ, ಅವರನ್ನು ನೋಡಲು ಗದಗದಿಂದ ಬೆಂಗಳೂರಿಗೆ ಬಂದೆ. ಇವತ್ತು ನನ್ನ ಮನೆ ಇರುವ ಚನ್ನಸಂದ್ರದ ರಸ್ತೆಯಲ್ಲಿಯೇ ವಿಷ್ಣು ಸಮಾಧಿ ಇದೆ. ಅವತ್ತು ನಾನು ಅವರನ್ನು ಹುಡುಕಿಕೊಂಡು ಬಂದೆ, ಇವತ್ತು ಅವರು ನಾನಿರುವಲ್ಲಿಗೇ ಬಂದು ಮಲಗಿದ್ದಾರೆಎನ್ನುವ ರಾಮಣ್ಣರಿಗೆ ಮಾರ್ಕ್ಸ್ ಸಿದ್ಧಾಂತವಾಗಲಿ, ಕಮ್ಯುನಿಸ್ಟರ ಕ್ರಾಂತಿಯಾಗಲಿ, ಮೇ ಡೇಯ ಮಹತ್ವವಾಗಲಿ ಗೊತ್ತಿಲ್ಲ. ಮನುಷ್ಯನಾಗಿ ಹುಟ್ಟಿದ್ದೇನೆ ದುಡಿದು ತಿನ್ನಬೇಕು, ಕೈಲಾದದ್ದನ್ನು ನಾಲ್ಕು ಜನಕ್ಕೆ ಮಾಡಬೇಕು, ಮಣ್ಣಲ್ಲಿ ಮಣ್ಣಾಗಿ ಹೋಗಬೇಕು ಎಂಬ ತತ್ವಕ್ಕಂಟಿದ ಕಾಯಕಜೀವಿ ಅವರು.

No comments:

Post a Comment