Saturday, March 15, 2014

ಬೀದಿಯಲಿ ಸಿಕ್ಕವನು ಬರಿಯ ಬಾಲಕನೋ, ನಗುವ ಬುದ್ಧನೋ?



ಮೊಬೈಲ್ ರಿಂಗಾಯಿತು. ಡಿಸ್ಪ್ಲೇ ಆದ ನಂಬರ್ ಪರಿಚಿತರದ್ದಲ್ಲ. ಯಾವುದೋ ಕಾಯಿನ್ ಬೂತ್ನಿಂದ ಬಂದದ್ದು. ಹಲೋ ಅಂದೆ, ಅತ್ತ ಕಡೆಯಿಂದ ಕ್ರಿಕೆಟ್ ಆಡಲು ಹೋಗಿದ್ದ ಮಗ, ‘ಅಪ್ಪ, ಅಮ್ಮನ ಸ್ಕೂಟಿ ಪಂಕ್ಚರ್ ಆಗಿದೆ, ಗಾಡಿ ವೈಎಂಸಿಎ ಗ್ರೌಂಡ್ ಹತ್ರ ಇದೆ, ಬಂದು ಪಂಕ್ಚರ್ ಹಾಕಿಸಿಕೊಡಬೇಕಂತೆ, ಅಮ್ಮನ ಮೊಬೈಲ್ನಲ್ಲಿ ಕರೆನ್ಸಿ ಇಲ್ಲ, ಅದಕ್ಕೆ ನಾನು ಕಾಯಿನ್ ಬೂತ್ನಿಂದ ಮಾಡ್ತಿದೀನಿಅಂತೇಳಿ ಫೋನಿಟ್ಟ. ತಕ್ಷಣ ವೈಎಂಸಿಎ ಸುತ್ತಮುತ್ತ ಇರಬಹುದಾದ ಪಂಕ್ಚರ್ ಹಾಕುವ ಅಂಗಡಿಗಳ ಬಗ್ಗೆ ಗಮನ ಹರಿಯಿತು. ಅಲ್ಲಿ-ಇಲ್ಲಿ ತಲೆಯಲ್ಲಿ ತೇಲಾಡಿತು. ಕೊನೆಗೆ ಹಡ್ಸನ್ ಸರ್ಕಲ್ ಬಳಿಯ ಒಕ್ಕಲಿಗರ ಸಂಘದ ಕಟ್ಟಡದ ಪಕ್ಕ ರಸ್ತೆ ಬದಿಯಲ್ಲಿದ್ದ ಒಂದು ಪಂಕ್ಚರ್ ಅಂಗಡಿ ಕಣ್ಣಿಗೆ ಬಿತ್ತು. ಅದರ ಮಾಲೀಕ- ಇಪ್ಪತ್ತೈದರ ಹರೆಯದ ಮುಸ್ಲಿಂ ಯುವಕ- ನನ್ನು ಕೇಳಿದಾಗ, ಆತ ಕ್ಷಣದಲ್ಲಿಯೇ ನನ್ನ ಬೈಕ್ ಹತ್ತಿದ, ಟೈರ್ ಬಿಚ್ಚಿಕೊಂಡು ಬಂದು ಚೆಕ್ ಮಾಡಿ, ‘ಟ್ಯೂಬ್ ಹೋಗಿದೆ, ಬೇರೆ ಹಾಕ್ಬೇಕು..’ ಅಂದ. ಸರಿ ಹಾಕಪ್ಪ ಅಂದೆ. ಆತ ಹಾಕಿ, ಅಲ್ಲೇ ಇದ್ದ ಚಿಕ್ಕ ಹುಡುಗನಿಗೆ, ‘ ಆರೆ ಇದರ್, ಫಿಟ್ ರ್ಕು ಹಾ..’ ಅಂತೇಳಿ, ನನ್ನತ್ತ ತಿರುಗಿ, ‘ಅವನಿಗೊಂದು ಇಪ್ಪತ್ತು ರೂಪಾಯಿ ಕೊಟ್ಬುಡಿ ಸಾರ್...’ ಅಂದ.
ಸರಿ ಅಂತ, ಹದಿನಾಲ್ಕರ ಟೀನೇಜ್ ಹುಡುಗ- ಬಿಳಿ ಟೀ ಶರ್ಟು, ಮೂಲಂಗಿ ಥರದ ಟೈಟ್ ಜೀನ್ಸ್ ಪ್ಯಾಂಟ್ ತೊಟ್ಟಿದ್ದವ- ನನ್ನು ನನ್ನ ಬೈಕ್ನಲ್ಲಿ ಕೂರಿಸಿಕೊಂಡು ಹೊರಟೆ. ಟ್ರಾಫಿಕ್ ಟೆನ್ಷನ್ ಕಳೆದು, ಕಬ್ಬನ್ ಪಾರ್ಕಿಗೆ ಎಂಟ್ರಿ ಆಗ್ತಿದ್ದಹಾಗೆ, ನನ್ನ ಹಳೆ ಚಾಳಿ- ಸ್ಕೂಲ್ಗೆ ಹೋಗುವ ಹುಡುಗರು ಕೈ ತೋರಿಸಿದ್ರೆ ಬಿಡೋದು, ಅವರ ಬಗ್ಗೆ ಉದ್ದಕ್ಕೂ ಅದೂ ಇದೂ ಕೇಳೋದು- ಛಾಲ್ತಿಗೆ ಬಂತು.
ಏನಪ್ಪ ನಿನ್ನೆಸ್ರು?’ ಅಂದೆ.
ಶಾಹಿದ್ ಸಾರ್...’
ಇದೇ ಕೆಲ್ಸಾನ ಅಥವಾ ಬೇರೆಯೇನಾದ್ರು...’
ಟೆಂಪೋದಲ್ಲಿ ಕ್ಲೀನರ್ ಆಗಿ ಕೆಲ್ಸ ಮಾಡ್ತೀನಿ, ಇವತ್ತು ನಮ್ಮ ಟೆಂಪೋ ಓನರ್ರು ಗಾಡಿ ನಿಲ್ಸಿ, ರೆಸ್ಟ್ ಅಂದ್ರು, ಅದಕ್ಕೆ ಇಲ್ಲೇ ಓಡಾಡಿಕೊಂಡಿದ್ದೆ... ಇವರು ಕರೆದ್ರು ಬಂದೆ ಸಾರ್...’ ಮುಸ್ಲಿಂ ಹುಡುಗರಂತೆ ಕನ್ನಡವನ್ನು ತೊದಲಿಸದೆ, ಕನ್ನಡದ ಹುಡುಗರು ಸ್ಪಷ್ಟವಾಗಿ ಮಾತನಾಡುವ ಹಾಗೆ ಮಾತನಾಡದೆ, ಅವೆರಡರ ನಡುವಿನ ನಡುಗನ್ನಡದ ಶೈಲಿಯಲ್ಲಿ ಹೇಳಿದ.
ನನಗೆ ಅವನು ಕ್ಲೀನರ್ ಕೆಲಸ ಅಂದಾಕ್ಷಣ, ‘ಸ್ಕೂಲ್ಗೆ ಹೋಗಲ್ವಾ...’ ಅಂದೆ.
ಇಲ್ಲ ಸಾರ್, ಸ್ಕೂಲು ಅಂದ್ರೆ ಏನು ಅಂತಾನೇ ಗೊತ್ತಿಲ್ಲ, ನನ್ ವಯಸ್ನ ಹುಡುಗ್ರು ಸ್ಕೂಲಿಗೆ ಹೋಗ್ತಿದ್ದಾಗ, ಒಂದಿನ ಸುಮ್ನೆ ಕೇಳ್ದೆ, ಸ್ಕೂಲ್ನಲ್ಲಿ ಏನ್ ಹೇಳ್ಕೊಡ್ತರೋ ಅಂತ, ಅವ್ನು ಪಾಠ, ಹಾಡು, ಆಟ ಆಡಸ್ತರೆ, ಊಟಾನೂ ಕೊಡ್ತರೆ ಕಣೋ ಅಂದ.. ನಾನು ಅಷ್ಟೇನಾ ಅಂದು ಹೋಗ್ಲಿಲ್ಲ ಸಾರ್...’
ನಿಮ್ಮಪ್ಪ ಅಮ್ಮನಾದ್ರೂ ಹೇಳಿ ಕಳಿಸಲಿಲ್ವಾ...?’
ನನ್ಗೆ ನಮ್ಮಪ್ಪಾಮ್ಮ ಯಾರೂಂತ್ಲೆ ಗೊತ್ತಿಲ್ಲ ಸಾರ್... ಯಾರ್ ಹೇಳ್ತರೆ?’
ಹೀಗಂದಾಕ್ಷಣ ನನಗೆ ನನ್ ಮಗ ನೆನಪಾದ. ಅವನ ಆಟ-ಪಾಠ, ಸವಲತ್ತು-ಸೌಕರ್ಯಗಳೆಲ್ಲ ಕಣ್ಮುಂದೆ ಬಂದು, ನನ್ನ ಮಗನಷ್ಟೇ ವಯಸ್ಸಿನ ಹುಡುಗನಭಾಗ್ಯಕಂಡು, ಒಂದು ಕ್ಷಣ ಮಾತೇ ಬರದ ಮೂಕನಾದೆ. ಆಗ ಅವನೇ...
ನಾನು ಚಿಕ್ ವಯಸ್ಸಿರುವಾಗ್ಲೆ ನಮ್ಮಮ್ಮ ಬಿಟ್ ಹೋಗ್ಬುಟ್ರಂತೆ, ಸಿಕ್ಕದೋರು ಎತ್ಕೊಂಡ್ ಹೋಗಿ ಸಾಕಿದಾರೆ, ಸದ್ಯಕ್ಕೆ ಅವರೇ ನಮ್ಮಪ್ಪಾಮ್ಮ...’
ಅದು ಹೇಗೆ ಗೊತ್ತಾಯಿತು ನಿನಗೆ?’
ಅದು ಗೊತ್ತಾಗ್ತಿರಲಿಲ್ಲ, ನಮ್ಮಪ್ಪಾಮ್ಮನೂ ಹೇಳಿಲ್ಲ, ಅವರೂ ನಮ್ ಮಗ ಅಂತಾನೇ ಸಾಕ್ತಿದಾರೆ... ಒಂದ್ ದಿನ ನನ್ ತಂಗಿನ ಎತ್ಕೊಂಡ್ ಆಟ ಆಡಸ್ತಿದ್ದೆ, ಕೈ ಜಾರಿ ಬೀಳಸ್ಬುಟ್ಟೆ, ಅವ್ಳು ಜೋರಾಗಿ ಅಳೋಕ್ ಶುರು ಮಾಡದ್ಲು. ಅಳ್ತಿರೋದ್ ನೋಡಿ ಓಡಿ ಬಂದ ನಮ್ಮಪ್ಪ, ತಲೆ ಮೇಲೆ ಒಂದು ಏಟ್ ಕೊಟ್ಟು, ಅವ್ಳಿಗೊಂದು ಮುತ್ತು ಕೊಟ್ಟು, ಎತ್ಕೊಂಡ್ರು... ಆಮೇಲೆಎಷ್ಟೇ ಆದ್ರು ನಮ್ ಮಕ್ಳು ನಮ್ ಮಕ್ಳೆ... ಮಕ್ಳನ್ನ ಯಾರ್ ಯಾರ್ ಕೈಗೋ ಯಾಕ್ ಕೊಡ್ತಿಯಾಅಂತ ನಮ್ಮಮ್ಮನಿಗೆ ಬೈಯ್ದ್ರು.. ನಮ್ಮಮ್ಮ ನಮ್ಮಪ್ಪನ ಮುಖ ನೋಡಿ ಏನೇನೋ ಸನ್ನೆ ಮಾಡಿದ್ರು ನಮ್ಮಪ್ಪ ಬೈಯ್ತಾನೆ ಇದ್ರು... ನನ್ಗೆ ಯಾಕೋ ಅನುಮಾನ ಶುರುವಾಯ್ತು... ಆಮೇಲೆ ನಾನು ನಂದೇ ವಯಸ್ನ ಪಕ್ಕದ್ಮನೆ ಹುಡುಗನ್ನ ಕೇಳ್ದೆ, ಅದಕ್ಕೆ ಅವನು ಹೂಂ ಕಣೋ, ನಮ್ಮಮ್ಮಾನು ಹೇಳ್ತಿದ್ರು... ನೀನು ಅವರ ಮಗ ಅಲ್ವಂತೆ, ಯಾರೋ ಬಿಟ್ಟೋಗಿದ್ರಂತೆ, ಎತ್ಕೊಂಡ್ ಬಂದು ಇವರು ಸಾಕ್ಕಂಡ್ರಂತೆ... ಅಂತ ಅಂದ.’
ಮತ್ತೆ ಈಗೆಲ್ಲಿದೀಯಾ?’
ಅಲ್ಲೆ, ಅವ್ರ ಮನೇನಲ್ಲೆ, ಅದು ಅವತ್ತಷ್ಟೇ ಸಾರ್, ಇವತ್ತಿಗೂ ಅವ್ರು ನನ್ನ ಮಗನ್ ಥರಾನೇ ನೋಡ್ಕೋತಿದಾರೆ, ಹಬ್ಬ ಬಂದ್ರೆ ಬಟ್ಟೆ ಕೊಡುಸ್ತರೆ, ನಿಮ್ಗೆ ಇನ್ನೊಂದ್ ಗೊತ್ತ ಸಾರ್, ಮೊನ್ನೆ ರಂಜಾನ್ ಹಬ್ಬ ಆಯ್ತಲ್ಲ... ಅವರೊಬ್ರೆ ಅಲ್ಲ, ನಮ್ ಬೀದಿನಲ್ಲಿ ಎಲ್ರೂ ನನ್ಗೆ ಬಟ್ಟೆ ಕೊಡಸಿದ್ರು... ಈಗ ಹಾಕ್ಕೊಂಡಿದಿನಲ್ಲ ಡ್ರೆಸ್ಸು... ಜೈನ್ ಸಂಘದೋರು ಕೊಟ್ಟಿದ್ದು, ನಾನೂ ಅಷ್ಟೆ ಸಾರ್, ಯಾರ್ ಕರದ್ರು ಇಲ್ಲ ಅನ್ನಲ್ಲ, ಯಾವ ಕೆಲ್ಸ ಕೊಟ್ರು ಮಾಡಲ್ಲ ಅನ್ನಲ್ಲ... ಸುಳ್ ಹೇಳಲ್ಲ, ಒಬ್ರಿಗೆ ಕೆಟ್ಟದ್ ಮಾಡಲ್ಲ, ದೇವ್ರು ನಂಗೆ ಕೈ ಬಿಟ್ಟಿಲ್ಲ ಸಾರ್...?’
ಅವನ ಮಾತು ಕೇಳಿ ನನಗ್ಯಾಕೋ ಮಾತೇ ಬರಲಿಲ್ಲ. ಸುಮ್ಮನಾಗಿಬಿಟ್ಟೆ.
ಅವನೇ ಮುಂದುವರೆಸಿ, ‘ನನ್ಗೇ ಗೊತ್ತಿಲ್ಲ ಸಾರ್, ನಾನ್ ಹಿಂದೂನೋ, ಮುಸ್ಲಿಮೋ ಅಂತ. ಆದ್ರೂ ಪ್ರತೀ ಶುಕ್ರವಾರ ದರ್ಗಾಕ್ಕೆ ಹೋಗ್ತೀನಿ, ಕಾಟನ್ಪೇಟೆ ಹತ್ರ ಇದಿಯಲ್ಲ, ದರ್ಗಾಗೆ, ಅವತ್ತು ನಮ್ ಟೆಂಪೋಗೆ ರಜ. ಸ್ನಾನ ಮಾಡ್ಕೊಂಡು, ಒಗದಿರೋ ಬಟ್ಟೆ ಹಾಕ್ಕೊಂಡು ಬೆಳಗ್ಗೆ ಒಂಭತ್ತು ಗಂಟೆಗೆ ಹೋದ್ರೆ ಹನ್ನೊಂದೂವರೆ ವರೆಗೆ ಅಲ್ಲಿರ್ತೀನಿ. ಆಮೇಲೆ, ಹಿಂಗೆ, ನಿಮ್ ಕೆಲ್ಸಕ್ಕೆ ಬರ್ಲಿಲ್ವಾ ಹಂಗೆ, ಅವರಿವರ ಅಂಗಡಿ ಹತ್ರ ಓಡಾಡಕ್ಕೊಂಡ್ ಇರ್ತೀನಿ, ಸಂಜೆಯಷ್ಟೊತ್ತಿಗೆ ಒಂದ್ ನೂರು ರೂಪಾಯ್ ಮಾಡ್ಕೊತೀನಿ...’
ನಾನ್ ಹಿಂದೂನೋ ಮುಸ್ಲಿಮೋ ಅಂತ ಯಾಕ್ ಹೇಳಿದನೋ ಗೊತ್ತಿಲ್ಲ. ನಾನೇನೂ ಅವನಿಗೆ ಕೇಳ್ಲಿಲ್ಲ, ಅವನಾಗೆ ಹೇಳ್ದ. ಅಥವಾ ಅವನಿಗೂ ಅನುಮಾನ ಕಾಡ್ತಿರಬಹುದು. ಮೂಡ್ನಿಂದ ಆತನನ್ನು ಹೊರಗೆಳೆಯಲು, ಇಷ್ಟು ವಯಸ್ಸಾದ್ರು ನನ್ನ ಬದುಕನ್ನೇ ನನಗೆ ನೇರ ಮಾಡಿಕೊಳ್ಳಲಾಗದಿದ್ದರೂ, ‘ಟೆಂಪೋ ಕ್ಲೀನರ್ಗೆ ಎಷ್ಟು ಕೊಡ್ತರಪ್ಪ, ಅದನ್ನೆ ಎಷ್ಟು ದಿನಾಂತ ಮಾಡ್ತೀಯಾಅಂದೆ.
ಟೆಂಪೋನಲ್ಲಿ ಒಳ್ಳೆ ದುಡ್ಡಿದೆ ಸಾರ್, ನಿಮಗ್ಗೊತ್ತಿಲ್ಲ. ಈಗಿರೋ ನಮ್ ಯಜಮಾನ್ರು ಇನ್ನ ಸ್ವಲ್ಪ ವರ್ಷ ಇರಬಹುದು, ಆಮೇಲೆ ಗಾಡಿ ನನ್ಗೇನೆ ಅಂತ ಹೇಳಿದಾರೆ ಸಾರ್, ಡ್ರೈವರ್ ಆಗ್ಬೇಕು, ಒಳ್ಳೆ ಡ್ರೈವರ್ ಆಗ್ಬೇಕು, ಎಲ್ಲ ಗಾಡೀನೂ ಓಡಸ್ಬೇಕು ಅಂತ ಆಸೆ ಸಾರ್, ನಿಮಗ್ಗೊತ್ತಿಲ್ಲ ಸಾರ್, ಮಾರ್ಕೆಟ್ನಿಂದ ಪೀಣ್ಯಾಗೆ ಒಂದ್ ಟ್ರಿಪ್ ಹೊಡುದ್ರೆ ಒಂದ್ ಸಾವ್ರೂಪಾಯಿ ಸಾರ್...’
ಇದ್ದಕ್ಕಿದ್ದಂತೆ ಸುಮ್ಮನಾಗಿ, ಆಮೇಲೆಯಾಕ್ಸಾರ್ ಇದ್ನೆಲ್ಲ ಕೇಳ್ತಿರದು?’ ಅಂದ.
ಏನಿಲ್ಲಪ್ಪ ಸುಮ್ನೆ ಕೇಳ್ದೆಅಂದು ಅವನು ಟೈರ್ ಫಿಟ್ ಮಾಡೋದನ್ನೇ ನೋಡ್ತಾ ಕೂತೆ. ‘ಅನ್ಮಾನ ಪಡಬೇಡಿ ಸಾರ್, ದೊಡ್ ದೊಡ್ ಗಾಡಿಗಳ್ನೆ ಬಿಚ್ಚಿದೀನಿ..’ ಫಿಟ್ ಮಾಡಿ ಆದಮೇಲೆ, ‘ಒಂದ್ಸಲ ಟ್ರಯಲ್ ನೋಡಿ ಸಾರ್, ಸರಿಗಿದಿಯಾಅಂದ. ಗಾಡಿ ಸರಿಯಾದ ಮೇಲೆ, ನಾನು ಅಲ್ಲೇ ಇದ್ದ ಫುಟ್ಪಾತ್ ಅಂಗಡಿಯ ಬಳಿ ಹೋಗಿ ಬಿಸ್ಕೆಟ್ಟು-ಟೀ ಕೊಡಿಸಿ, ಕೈಗೆ ಇಪ್ಪತ್ತು ರೂಪಾಯಿ ಕೊಟ್ಟೆ. ‘ಥ್ಯಾಂಕ್ಸ್ ಸಾರ್ಅಂದೋನು,
ದೇವ್ರನ್ನ ನಂಬೇಕು ಸಾರ್, ನನಗೊತ್ತಿರೋದು ಇಷ್ಟೆ- ಕಷ್ಟಪಟ್ಟ ಕೆಲ್ಸ ಮಾಡ್ತೀನಿ, ನಿಮ್ಮಂಥೋರು ದುಡ್ ಕೊಡ್ತೀರಾ, ಹೊಟ್ಟೆ ತುಂಬ ತಿಂತೀನಿ, ಕಣ್ತುಂಬ ನಿದ್ದೆ ಮಾಡ್ತೀನಿ, ಸಾಕಲ್ವಾ ಸಾರ್...’ ಅಂದ.
ಅವನಲ್ಲಿ ಅನಾಥಪ್ರಜ್ಞೆ ಕಾಡಿದ್ದಾಗಲಿ, ಸದ್ಯದ ಸ್ಥಿತಿ ಬಗ್ಗೆ ಕೊರಗಿದ್ದಾಗಲಿ, ಅಪ್ಪಾಮ್ಮ ಇಲ್ಲ ಅಂತ ದುಃಖವಾಗಲಿ ಕಾಣಲಿಲ್ಲ; ಬೇರೆಯವರಿಗಿರುವ ಸವಲತ್ತು-ಸೌಕರ್ಯ-ಸಂಪತ್ತಿನ ಬಗ್ಗೆ ಕರುಬಿದ್ದಾಗಲಿ, ಮರುಗಿದ್ದಾಗಲಿ ಕೂಡ ಇರಲಿಲ್ಲ. ಬದಲಿಗೆ ಮಾತಿನುದ್ದಕ್ಕೂ ನಗುಮುಖವೇ ಎದ್ದು ಕಾಣುತ್ತಿತ್ತು. ನಡತೆಯಲ್ಲಿ ಸಜ್ಜನಿಕೆ, ಬದುಕಿನ ಬಗ್ಗೆ ಪ್ರೀತಿ ಇತ್ತು. ಒಳ್ಳೆಯವರಿಗೆ ಕಾಲವಿದೆ ಎಂಬುದನ್ನು ಬಲವಾಗಿ ನಂಬಿದಂತಿತ್ತು.
ಬೀದಿಯಲ್ಲಿ ಅಚಾನಕ್ಕಾಗಿ ಸಿಕ್ಕ ಬಾಲಕನ ಬದುಕಿನ ಫಿಲಾಸಫಿ ಕೇಳಿ, ಇವನು ಬಾಲಕನೋ, ನಗುವ ಬುದ್ಧನೋ ಅನ್ನಿಸಲಿಕ್ಕೆ ಶುರುವಾಯಿತು.

Friday, March 7, 2014

ಲಂಕೇಶ್ ಕಥಾಪ್ರಸಂಗ


ಥಟ್ ಅಂತ ಹೇಳೋದು ಲಂಕೇಶರ ಸ್ಟೈಲು. ಇದನ್ನು ಲಂಕೇಶರೊಂದಿಗೆ, ಅವರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅನೇಕ ಬಾರಿ ಕಂಡಿದ್ದೇನೆ. ಕಂಡಿದ್ದನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಲಂಕೇಶರು ಆಫೀಸಿನಲ್ಲಿ ಅಡ್ಡಾಡುವಾಗ, ವರದಿಗಾರರೊಂದಿಗೆ ಮೀಟಿಂಗ್ ಮಾಡುವಾಗ, ಸಮಾನ ಮನಸ್ಕರೊಂದಿಗೆ ಸಂವಾದ ನಡೆಸುವಾಗ, ಗೆಳೆಯರೊಂದಿಗೆ ಕುಡಿಯಲು ಕೂತಾಗ, ಯಾರೊಂದಿಗಾದರು ಜಗಳವಾಡುವಾಗ, ಏನೂ ಇಲ್ಲ ಎಂದರೆ ಸುಮ್ಮನೆ ಒಂದು ಪೋಲಿ ಜೋಕ್ ಸಿಡಿಸುವಾಗ- ಥಟ್ ಅಂತ ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಅದು ಆ ಗಳಿಗೆಗಷ್ಟೆ. ಅವರ ಸುತ್ತಲಿದ್ದವರು ಏನಂದ್ರು, ಅದೇನು ಅಂತ ಸುಮಾರು ಹೊತ್ತು ತಲೆ ಕೆಡಿಸಿಕೊಂಡ ಮೇಲೆ ಅರ್ಥವಾಗುತ್ತಿತ್ತು. ಅರ್ಥವಾದವರಿಗೆ ನಗುವೋ, ಸಿಟ್ಟೋ, ಅವಮಾನವೋ, ನಾಚಿಕೆಯೋ ಆಗಿ ಮುಖ ನೋಡಿದರೆ- ನಾನಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಅನ್ಯಮನಸ್ಕರಾಗಿಬಿಡುತ್ತಿದ್ದರು. ಥಟ್ ಅಂತ ಹೇಳಿದ ಆ ಪದ ಲೇವಡಿ, ವ್ಯಂಗ್ಯ, ಉಡಾಫೆ, ಕೀಟಲೆ, ಪುಲಕಗಳ ಪರಾಕಾಷ್ಠೆಯದ್ದಾಗಿರುತ್ತಿತ್ತು. ಅಂತಹ ಕೆಲವು ಝಲಕ್‌ಗಳು ಇಲ್ಲಿವೆ.
ಕವಿ ರಾಮಚಂದ್ರ ಶರ್ಮರು ಒಂದು ಸಲ, ಬಸವನಗುಡಿಯ ನ್ಯಾಷನಲ್ ಕಾಲೇಜ್‌ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತ, ‘ಕನ್ನಡ ಸಾಹಿತ್ಯ ಲೋಕದ ನಾಲ್ಕನೇ ನಕ್ಷತ್ರ ಡಿ.ಆರ್. ನಾಗರಾಜ್’ ಎಂದು ಘೋಷಿಸಿದರು.
ಅದು ಕನ್ನಡ ಸಾಹಿತ್ಯ ಲೋಕದಲ್ಲಿ ಅನಂತಮೂರ್ತಿ, ಲಂಕೇಶ್ ಮತ್ತು ತೇಜಸ್ವಿ ಎಂಬ ಮೂವರು ದಿಗ್ಗಜರು ನಕ್ಷತ್ರಗಳಂತೆ ಮಿಂಚುತ್ತಿದ್ದ ಕಾಲ. ಅವರಷ್ಟೇ ಪ್ರಖರ ಪ್ರತಿಭೆಯ, ಹೊಸ ವಿಚಾರಗಳ, ಚಿಂತನೆಗಚ್ಚುವ ಬರವಣಿಗೆ ಮತ್ತು ಭಾಷಣಗಳ ಮೂಲಕ ‘ಸ್ಟಾರ್’ ಆಗಿದ್ದ, ದೇಶ-ವಿದೇಶಗಳನ್ನು ಸುತ್ತಿ ‘ಸೆಮಿನಾರ್ ಹಕ್ಕಿ’ ಎನಿಸಿಕೊಂಡಿದ್ದ ಡಿಆರ್‌ರನ್ನು ಕುರಿತು ಶರ್ಮರು ಸಾಹಿತ್ಯಕ ಭಾಷೆಯಲ್ಲಿ ‘ನಾಲ್ಕನೇ ನಕ್ಷತ್ರ’ ಎಂದು ಕರೆದಿದ್ದರು. ಅದು ಸಭೆಯಲ್ಲಿದ್ದವರ ಹುಬ್ಬೇರಿಸಿತ್ತು, ಚಿಂತನೆಗೂ ಹಚ್ಚಿತ್ತು.
ಆ ಸಭೆ ಮುಗಿದ ನಂತರ, ನ್ಯಾಷನಲ್ ಕಾಲೇಜ್ ಹತ್ತಿರದಲ್ಲಿಯೇ ಇದ್ದ ‘ಲಂಕೇಶ್ ಪತ್ರಿಕೆ’ ಕಚೇರಿಯಲ್ಲಿ, ಎಂದಿನಂತೆ ಸಂಜೆಯ ‘ಸಮಾರಾಧನೆ’. ಅಲ್ಲಿ ಮತ್ತೆ ನಾಲ್ಕನೆ ನಕ್ಷತ್ರದ ಪ್ರಸ್ತಾಪ. ಗುಂಡಿನ ಮತ್ತಿನಲ್ಲಿ... ಬಿಸಿ ಬಿಸಿ ಚರ್ಚೆ. ಪರ-ವಿರೋಧ ಎಲ್ಲ. ಬಂದಿದ್ದವರಿಗೆಲ್ಲ ವ್ಹಿಸ್ಕಿ ಕೊಟ್ಟು, ಕಾವೇರಿದ ಮಾತಿಗೆ ಕಿವಿ-ಕಣ್ಣು ಕೊಟ್ಟು ಕೂತಿದ್ದ ಲಂಕೇಶರು, ಅವತ್ತು ಅಕ್ಷರಶಃ ವಿದ್ಯಾರ್ಥಿಯಾಗಿದ್ದರು.
ಇದಾದ ಕೆಲವೇ ತಿಂಗಳುಗಳಲ್ಲಿ ಡಿಆರ್ ಹೃದಯಾಘಾತಕ್ಕೊಳಗಾಗಿ ತೀರಿಕೊಂಡರು. ಡಿಆರ್ ದೇಹವನ್ನು ಅವರ ಪದ್ಮನಾಭನಗರದ ಮನೆಯಲ್ಲಿಡಲಾಗಿತ್ತು. ಡಿಆರ್ ದೇಹ ನೋಡಲು ಅಲ್ಲಿಗೆ ಲಂಕೇಶರು ಬಂದರು. ಮೊದಲೇ ಹೋಗಿದ್ದ ನಾನು, ಅವರನ್ನು ನೋಡಿ ಅವರ ಬಳಿ ಹೋದೆ. ಡಿಆರ್ ಶಿಷ್ಯರು, ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು... ಹೀಗೇ ಸಿಕ್ಕಾಪಟ್ಟೆ ಜನ. ಅಲ್ಲಲ್ಲೆ ಗುಂಪು, ಡಿಆರ್ ಬಗ್ಗೆಯೇ ಗುಣಗಾನ. ಮೇಸ್ಟ್ರು ಮಾತ್ರ ಮಾತಿಲ್ಲ. ಸ್ಟ್ಯಾಂಡ್ ಸ್ಟಿಲ್. ಅವರ ಆ ಗಂಭೀರತೆ ಕಂಡ ಅವರ ಕೆಲವು ಪರಿಚಿತರು ಲಂಕೇಶರ ಮೂಡ್ ಸರಿಯಿಲ್ಲವೆಂದು ತೀರ್ಮಾನಿಸಿ, ದೂರ ಸರಿದರು.
ಅವರ ಪಕ್ಕದಲ್ಲಿ ನಿಂತಿದ್ದ ನನ್ನತ್ತ ತಿರುಗಿದ ಲಂಕೇಶರು, ‘ಏನೋ ಇಷ್ಟೊಂದ್ ಜನ...?’ ಎಂದರು.
ಸೈಲೆಂಟಾಗಿದ್ದವರು ಮಾತನಾಡಿದರಲ್ಲ ಎಂದು ಹಗುರಾದರೂ, ಇಷ್ಟೊಂದ್ ಜನ ಅಂದಿದ್ದು ಯಾಕೋ ಒಂಥರಾ ಕೇಳಿಸಿತು. ಅಚ್ಚರಿಯೋ, ಅಸೂಯೆಯೋ... ಗೊತ್ತಾಗಲಿಲ್ಲ. ಸುಮ್ಮನೆ ಅವರ ಮುಖ ನೋಡಿದೆ.
ಕೈ ಕಟ್ಟಿ ನಿಂತಿದ್ದ ಅವರ ಮುಖದ ಹಣೆಯ ಮೇಲೆ ಸುಕ್ಕುಗಟ್ಟಿದ ನರಿಗೆಗಳು ಅವರ ಸೀರಿಯಸ್‌ಗೆ ಸ್ಟ್ರೆಂಥ್ ತುಂಬುತ್ತಿದ್ದವು. ಆ ಗಂಭೀರ ಮುಖಭಾವದಲ್ಲಿಯೇ, ‘ನಾನ್ ಸತ್ರೆ... ನಾಲ್ಕು ಜನ ಬರ್‌ಬಹುದು’ ಎಂದರು.
ಅದೊಂಥರಾ ಕೇಳಿಸಿದರೆ, ಇದೊಂಥರ ಕೇಳಿಸಿತು. ವ್ಯಂಗ್ಯವೋ, ಸ್ವವಿಮರ್ಶೆಯೋ ಗೊತ್ತಾಗಲಿಲ್ಲ. ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದೆ. ಮತ್ತೆ ಲಂಕೇಶರೆ ಮುಂದುವರೆಸಿ, 
‘ಆ ನಾಲ್ಕು ಜನ ಯಾರು ಗೊತ್ತೇನೋ... ಇವನು ಸತ್ತವ್ನೋ ಇಲ್ವೋ ಅಂತ ಕನ್ಫರ್ಮ್ ಮಾಡ್ಕಳಕೆ ಬಂದೋರೆ ಆಗಿರ್ತರೆ...’ ಎಂದರು!
***
ಲಂಕೇಶರು ಶಿವಮೊಗ್ಗ ಕಡೆಯ ರೈತ ಕುಟುಂಬದಿಂದ ಬಂದವರು. ಆದರೆ ಅಧ್ಯಾಪಕ, ಚಿತ್ರನಿರ್ದೇಶಕ, ಸಂಪಾದಕರಾಗಿ, ಬೆಂಗಳೂರಿನ ನಗರವಾಸಿಗಳಾಗಿ ಬಹಳ ಕಾಲದಿಂದ ಭೂಮಿಯೊಂದಿಗಿನ ಸಂಬಂಧದಿಂದ ವಂಚಿತರಾಗಿದ್ದರು. ಆ ಬಗೆಗಿನ ಪಾಪಪ್ರಜ್ಞೆಗೋ, ಭೂಮಿ ಬಗೆಗಿನ ಅಪಾರ ಪ್ರೀತಿಗೋ ಅಥವಾ ಅದರಿಂದ ಸಿಗುವ ಸಮಾಧಾನಕ್ಕೋ ತಮ್ಮ ಕೊನೆಗಾಲದಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ಸ್ವಲ್ಪ ಭೂಮಿ ಖರೀದಿಸಿದರು. ಮಾವು, ತೆಂಗಿನಮರಗಳಿದ್ದ ತೋಟಕ್ಕೆ ಬೋರ್‌ವೆಲ್ ಕೊರೆಸಿ, ಹನಿ ನೀರಾವರಿ ಹರಿಸಿ, ಸಪೋಟ, ಬಾಳೆ ಹಾಕಿಸಿ ಹಸಿರಾಗಿಸಿದರು. ಹಸಿರಿನ ನಡುವೆ ಕೂತು ಕಾಲ ಕಳೆಯಲು ತೋಟಕ್ಕೆ ವಾರಕ್ಕೆ ಎರಡು ಸಲ ಹೋಗಿ ಬರಲಾರಂಭಿಸಿದರು.
ಹೀಗೆ ಹೋಗಿ ಬರುವಾಗ, ಲಂಕೇಶರು ಬನ್ನೇರುಘಟ್ಟದ ಮುಖ್ಯರಸ್ತೆಯಲ್ಲಿ (ಆಗ ಈಗಿನಂತೆ ಮಲ್ಟಿ ನ್ಯಾಷನಲ್ ಕಂಪನಿಗಳಾಗಲಿ, ಜನ-ಟ್ರಾಫಿಕ್ಕಾಗಲಿ ಇರಲಿಲ್ಲ. ರಸ್ತೆ ಕೂಡ ಸರಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳಿದ್ದವು. ಅವು ಕೂಡ ಪುಟ್ಟ ಪೆಟ್ಟಿಗೆ ಅಂಗಡಿಗಳು) ಒಂದು ಕಡೆ ಕಾರು ನಿಲ್ಲಿಸಿ, ಕಾಫಿ ಕುಡಿದು ಸಿಗರೇಟು ಸೇದಿ ಹೋಗುವುದು ಅಭ್ಯಾಸವಾಗಿತ್ತು. ಅದೊಂದು ಪುಟ್ಟ ಪೆಟ್ಟಿಗೆ ಅಂಗಡಿ. ಅಂಗಡಿಗೆ ಮಧ್ಯವಯಸ್ಕ ಹೆಂಗಸು ಯಜಮಾನಿ. ಆಕೆಗೆ ಲಂಕೇಶರು ಯಾರು ಏನು ಎನ್ನುವುದು ಗೊತ್ತಿಲ್ಲ. ಇವರೂ ಹೇಳಲಿಲ್ಲ. ಆದರೆ ಕಾರಿನಲ್ಲಿ ಬಂದು ನನ್ನ ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ ಕುಡಿಯುವವರ ಬಗ್ಗೆ ಆಕೆಗೆ ಗೌರವವಿತ್ತು, ಹೆಮ್ಮೆ ಇತ್ತು.
ಒಂದು ದಿನ, ಲಂಕೇಶರ ಪರಿಚಯವಿದ್ದವರು ಆಕೆಯ ಎದುರೇ ಲಂಕೇಶರಿಗೆ ನಮಸ್ಕರಿಸಿದರು. ಲಂಕೇಶರೂ ನಮಸ್ಕರಿಸಿ ಕಾರು ಹತ್ತಿ ಸುಮ್ಮನೆ ಹೊರಟುಹೋದರು. ಆದರೆ ಆಕೆ ನಮಸ್ಕರಿಸಿದವರನ್ನು ಕೇಳಿ, ತಿಳಿದಿದ್ದಷ್ಟೇ ಅಲ್ಲ, ಮತ್ತೊಂದು ಸಲ ಲಂಕೇಶರು ಆ ಪೆಟ್ಟಿಗೆ ಅಂಗಡಿಗೆ ಹೋಗುವುದಕ್ಕೆ ಮುಂಚೆ ಅಲ್ಲಿ, ಕೆಲವು `ಲಂಕೇಶ್ ಪತ್ರಿಕೆ'ಯ ಸಂಚಿಕೆಗಳನ್ನು ಮಾರಾಟ ಮಾಡಲು ತೂಗು ಹಾಕಿದ್ದರು. ಅದನ್ನು ನೋಡಿದ ಲಂಕೇಶರಿಗೆ ಖುಷಿಯಾದರೂ ತೋರಿಸಿಕೊಳ್ಳದೆ, ಅದು ನಮ್ಮ ಪತ್ರಿಕೆ ಎಂದು ಹೇಳಿಕೊಳ್ಳದೆ ನಕ್ಕು ಸುಮ್ಮನಾಗಿದ್ದರು.
ಆಕೆಯ ಅದೃಷ್ಟವೋ ಏನೋ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತ್ತು. ಪೆಟ್ಟಿಗೆ ಅಂಗಡಿ, ನಂತರ ಪೇಪರ್ ಅಂಗಡಿಯಾಗಿ ಆಮೇಲೆ ಮತ್ತೊಂದು ಬದಿಗೆ ಮೀನು ಮಾರಾಟದ ಅಂಗಡಿಯನ್ನೂ ಹೊಸದಾಗಿ ಆರಂಭಿಸಿದ್ದರು.
ಕುತೂಹಲಕರ ಸಂಗತಿ ಎಂದರೆ, ಆ ಪುಟ್ಟ ಪೆಟ್ಟಿಗೆ ಅಂಗಡಿಗೆ, ಅದರಲ್ಲೂ ಮೀನಿನ ಅಂಗಡಿಗೆ ‘ಲಂಕೇಶ್ ಮೀನು ಮಾರಾಟದ ಅಂಗಡಿ’ ಎಂಬ ಪುಟ್ಟದೊಂದು ಬೋರ್ಡ್ ಬರೆಸಿ ಹಾಕಿದ್ದರು. ಆ ಬೋರ್ಡನ್ನು ಕಂಡವರೆ ಥ್ರಿಲ್ಲಾದ ಲಂಕೇಶರು, ಫೋಟೋ ತೆಗೆದುಕೊಂಡು ಬಂದು, ನಮ್ಮ ಗಿರಿಯನ್ನು ಕರೆದು, ‘ಇದನ್ನು ಪ್ರಿಂಟ್ ಹಾಕಿಸಿಕೊಂಡು ಬಾ’ ಎಂದರು. ಪ್ರಿಂಟ್ಸ್ ಬಂದಮೇಲೆ ನನ್ನನ್ನು ಕರೆದು, ಆ ಫೋಟೋಗಳಲ್ಲಿ ಒಂದನ್ನು ನನಗೆ ಕೊಟ್ಟು, ‘ಹೆಂಗೈತೋ’ ಎನ್ನುವಂತೆ ಹುಬ್ಬಾರಿಸಿದರು. ಅಷ್ಟೇ ಅಲ್ಲ, ಆ ವಾರದ ‘ಈ ಸಂಚಿಕೆ’ಯಲ್ಲಿ ಆ ಪೆಟ್ಟಿಗೆ ಅಂಗಡಿಯ ಹೆಂಗಸಿನ ಧೈರ್ಯ, ಸಾಹಸ ಮತ್ತು ಜಾಣ್ಮೆಯನ್ನು ಬಣ್ಣಿಸಿದ್ದರು. ಬಡ, ಅಸಹಾಯಕ ಹೆಣ್ಣುಮಕ್ಕಳು ಸ್ವಾವಲಂಬಿಗಳಾದರೆ ಬದುಕು ಎಷ್ಟು ನಿಸೂರ ಎನ್ನುವುದನ್ನು ಹೇಳಿದ್ದರು. ಆಕೆಯ ಅಂಗಡಿಯ ಫೋಟೋ ಕೊಟ್ಟು, ಅದರ ಬಗ್ಗೆ ಬರೆದ ಮೇಲೆ- ‘ಈ ಸಂಚಿಕೆ’ ಅಂಕಣದಲ್ಲಿ ಆಕೆಯ ಫೋಟೋ ಸಹಜವಾಗಿಯೇ ಪ್ರಕಟವಾಗಿತ್ತು. 
ಪತ್ರಿಕೆ ಪ್ರಿಂಟಾಗಿ ಬಂದಮೇಲೆ, ಅದನ್ನು ತಿರುವಿ ಹಾಕುತ್ತಿದ್ದಾಗ ಈ ಸಂಚಿಕೆ ಮತ್ತು ಆ ಫೋಟೋ ನೋಡುವಾಗ ನನಗೆ ಯಾಕೋ ವೈಎನ್‌ಕೆ ನೆನಪಾದರು. ಲಂಕೇಶರಿಗೆ ವೈಎನ್‌ಕೆ ಬಗ್ಗೆ ಗೌರವವಿದ್ದರೂ, ‘ಛೇ ಛೇ’ ಅಂಕಣದಲ್ಲಿ ಮಾತ್ರ ವೈಎನ್‌ಕೆ ಆಗಾಗ ಲೇವಡಿಗೊಳಗಾಗುತ್ತಲೇ ಇದ್ದರು. ಮೀನಿನ ಫೋಟೋ ನೋಡಿ ವೈಎನ್‌ಕೆ ಏನು ಕಾಮೆಂಟ್ ಮಾಡಬಹುದೆಂದು ನನ್ನನ್ನು ಕೊರೆಯತೊಡಗಿತು. ಅದೇ ಸಮಯಕ್ಕೆ ಸರಿಯಾಗಿ ಲಂಕೇಶರು ಬಂದರು, ನಾನು ಈ ಸಂಚಿಕೆಯ ಪುಟವನ್ನೇ ನೋಡುತ್ತಾ ಕೂತಿದ್ದೆ. ಏನು ಎನ್ನುವಂತೆ ಕಣ್ಣಿನಲ್ಲೇ ಪ್ರಶ್ನಿಸಿದರು.
ನಾನು ‘ಲಂಕೇಶ್ ಮೀನು ಮಾರಾಟದ ಅಂಗಡಿ’ ಫೋಟೋವನ್ನು ತೋರಿಸುತ್ತಾ, ‘ಇದನ್ನು ವೈಎನ್‌ಕೆ ನೋಡಿದ್ರೆ ಏನನ್ನಬಹುದು ಸಾರ್’ ಎಂದೆ.
ಥಟ್ ಅಂತ ‘ಇನ್ನೇನಂತರೆ, ‘ಲಂಕೇಶ್... ಮೀನ್ ಫೆಲೋ’ ಅಂತ ನಗಾಡ್ತರೆ’ ಎಂದು ಹೇಳಿ ತಮ್ಮ ಕೋಣೆಯತ್ತ ಹೋಗಿಯೇಬಿಟ್ಟರು.
***
ಹೀಗೆ ಒಂದು ಜಾಲಿ ಟ್ರಿಪ್... ಲಂಕೇಶ್ ಮೇಸ್ಟ್ರು, ಅಗ್ರಹಾರ ಕೃಷ್ಣಮೂರ್ತಿಯವರು ಮತ್ತು ನಾನು ಕಾರಿನಲ್ಲಿ ಮೈಸೂರಿಗೆ ಹೋಗುತ್ತಿದ್ದೆವು. ಪ್ರಯಾಣದ ನಡುವೆ, ಎಲ್ಲಾದರು ಒಂದು ಕಡೆ ಕಾರನ್ನು ನಿಲ್ಲಿಸಿ ಎಳನೀರು ಅಥವಾ ಟೀ ಕುಡಿಯುವುದು, ಸಿಗರೇಟು ಸೇದುವುದು, ಕಲ್ಲಂಗಡಿ ಹಣ್ಣು ಕೊಳ್ಳುವುದು, ಹಲಸಿನ ಹಣ್ಣು ತಿನ್ನುವುದು (ಅದೂ ಮಹಿಳೆಯರು ಮಾರುತ್ತಿದ್ದರೆ ಅವರು ಕೇಳಿದಷ್ಟು ಹಣ ಕೊಡುವುದು) ಲಂಕೇಶರ ಖುಷಿಯ ಕ್ಷಣಗಳಲ್ಲೊಂದು. ಅದರಲ್ಲೂ ರಾಮನಗರ ಬಿಟ್ಟ ತಕ್ಷಣ ಸಿಗುವ ಮಲಯಾಳಿ ಕಾಕಾನ ಡಾಬಾದಲ್ಲಿ ಆಮ್ಲೆಟ್, ಟೀ- ಅವರ ಫೇವರಿಟ್ ಆಗಿತ್ತು.
ಹಾಗೆಯೇ ಒಂದು ಕಡೆ ಕಾರು ನಿಲ್ಲಿಸಿದ ಮೇಸ್ಟ್ರು, ‘ಏ ಬಸುರಾಜ, ಆ ಎಳ್ನೀರ್ ನೋಡೋ, ಚೆನ್ನಾಗಿದ್ರೆ ಕುಡಿಯನ...’ ಅಂದ್ರು.
ಕಾರ್ ನಿಲ್ಲಿಸಿದ ತಕ್ಷಣವೇ ಆ ಎಳನೀರು ಅಂಗಡಿಯ ಯಜಮಾನ ಕೊಚ್ಚೋದಕ್ಕೆ ರೆಡಿಯಾದ. ಮೇಸ್ಟ್ರು ಮಹತ್ವವಾದ ಜವಾಬ್ದಾರಿ ಹೊರಿಸಿದ್ದಾರೆಂಬ ಎಚ್ಚರಿಕೆಯಿಂದ ನಾನು, ತೆಂಗಿನ ತೋಟಗಳ ನನ್ನೂರಿನ ಅನುಭವದಿಂದ, ‘ಮೂರು ಕೆಂದಳ್ನೀರ್ ವಡ್ಯಪ್ಪ’ ಅಂದೆ. ಆತ ಇವ್ನೇನೋ ಎಳ್ನೀರ್ ಬಗ್ಗೆ ಒಸಿ ತಿಳಿಕಂಡಿರಂಗ್ ಕಾಣ್ತನೆ ಅಂತ ಮೊದಲು ತೆಗೆದುಕೊಂಡಿದ್ದನ್ನು ಬಿಟ್ಟು ಕೆಂದಳ್ನೀರ್ ಹೊಡೆದು ಕೊಟ್ಟ. ಮೇಸ್ಟ್ರು ಕುಡಿದು ‘ಚೆನ್ನಾಗಿದೆ ಕಣೋ...’ ಎಂದರು. ಎಷ್ಟು ಎಂದು ಕೇಳಿ ದುಡ್ಡು ಕೊಡಲು ಮುಂದಾದೆ. ಅಲ್ಲಿದ್ದ ಮೂವರಲ್ಲಿ ನಾನೇ ಚಿಕ್ಕವನು. ಚಿಕ್ಕವನು ಕೊಡ್ತಿದ್ದಾನಲ್ಲ ಅಂತ ಅಗ್ರಹಾರ ಕೃಷ್ಣಮೂರ್ತಿಯವರು, ‘ಏ ಬಸು ಇರಿ, ನಾನ್ಕೊಡ್ತಿನಿ...’ ಅಂದ್ರು.
ತಕ್ಷಣ ಲಂಕೇಶರು, ‘ಏ ಕೊಡ್ಲಿ ಬಿಡೋ, ಅವನ್ಯಾವತ್ತು ಇದ್ನೆಲ್ಲ ಕಲಿಯದು’ ಅಂದ್ರು. ಅಗ್ರಹಾರ ಎಳನೀರು ಕುಡಿಯುವುದರಲ್ಲಿ ಮಗ್ನರಾದರು.
ಅಗ್ರಹಾರರಿಗೆ ಕೊಡ್ಲಿ ಬಿಡೋ ಅಂದ ಲಂಕೇಶರು ತಕ್ಷಣ ನನ್ನತ್ತ ತಿರುಗಿ, ‘ತುಂಬಾ ಒಳ್ಳೆ ಪೊಯೆಟ್ಟು, ವರ್ಷಕ್ಕೊಂದು ಬರದ್ರೆ ನಮ್ ಪುಣ್ಯ, ಹಿಂಗೇ ನೀನು ಅದೂ ಇದೂ ಕುಡಸ್ಕೊಂಡ್ ಚೆನ್ನಾಗಿ ನೋಡ್ಕಂಡಿದ್ರೆ... ಅವ್ರಿಗೆ ಮೂಡ್ ಬಂದಾಗ್ ಬರಕೊಡ್ತರೆ...’ ಎಂದು ಅಗ್ರಹಾರರ ಮುಖ ನೋಡಿದರು.  
ಆಶ್ಚರ್ಯ ಅಂದ್ರೆ, ಅಗ್ರಹಾರ ಕೂಡ ಅವರಿಗೆ ಮೂಡ್ ಬಂದಾಗ, ಬಿಡುವು ಸಿಕ್ಕಾಗ ಬರೆದು ಕೊಟ್ಟಿದ್ದರು. ಅವರ ಬರವಣಿಗೆಯ ‘ಹಸಿವು, ಉತ್ಸಾಹ ಮತ್ತು ಅನಿವಾರ್ಯತೆ’ಯನ್ನು ಖುದ್ದಾಗಿ ಕಂಡಿದ್ದ ಮೇಸ್ಟ್ರು, ಬಹುವಚನ ಬಳಸಿ ಬೆಚ್ಚಿ ಬೀಳಿಸಿದ್ದರು.
ಲಂಕೇಶರನ್ನು ಬಹಳ ಹತ್ತಿರದಿಂದ ಕಂಡಿದ್ದ ಅಗ್ರಹಾರರು, ‘ನಾನು ಸ್ವಲ್ಪ ನಿಧಾನ, ನಿಜ, ಏನ್ ಬಸು, ದೀಪಾವಳಿ ವಿಶೇಷಾಂಕಕ್ಕೆ ಯಾವತ್ತಾದ್ರು ಪದ್ಯ ಕೊಡದೆ ತಪ್ಪಿಸ್ಕೊಂಡಿದೀನೇನ್ರಿ...?’ ಎಂದರು.
‘ನಾನೇಳಿದ್ದು ಅದೇ ಕಣಲೇ... ವರ್ಷಕ್ಕೊಂದು ಬರದ್ರೆ ನಮ್ ಪುಣ್ಯ ಅಂತ...’
ಲೇಖಕರು, ಬರಹಗಾರರನ್ನು ಹೇಗೆ ನೋಡ್ಕೋಬೇಕು, ಇಟ್ಕೋಬೇಕು ಅಂತ ನನಗೆ ಟಿಪ್ಸು, ಎದುರೆದುರೆ ಅಗ್ರಹಾರರಿಗೆ ಟಾಂಗ್!
***
ಪ್ರತಿದಿನ ಲಂಕೇಶರ ‘ಪತ್ರಿಕೆ’ ಕಚೇರಿಯಲ್ಲಿ ಪಾನಗೋಷ್ಟಿ ಇದ್ದೇ ಇರೋದು. ಲಂಕೇಶರ ದುಷ್ಟಕೂಟದ ಸದಸ್ಯರಲ್ಲಿ ಯಾರಾದರೊಬ್ಬರು ತಪ್ಪದೇ ಹಾಜರಾಗುತ್ತಿದ್ದರು. ಕೊನೆಗೆ ಯಾರೂ ಇಲ್ಲ ಎಂದರೆ ಪತ್ರಿಕೆಯ ವರದಿಗಾರರು. ಅವರೂ ಬೇಡವೆಂದರೆ ಅವರೊಬ್ಬರೆ... ಹೀಗೆ ಪ್ರತಿದಿನ ಸಂಜೆಯ ಸಮಾರಾದನೆ ಇರೋದು. ಲಂಕೇಶರು ಕುಡಿಯಲಿ, ಕುಡಿಯದೆ ಇರಲಿ, ತಿಂಗಳಿಗೆ ಇಂತಿಷ್ಟು ಹಣ ಎಂದು ಡ್ರಿಂಕ್ಸ್‌ಗೆ ಎತ್ತಿಡುತ್ತಿದ್ದರು.  
ಇದಲ್ಲದೆ ವರ್ಷಕ್ಕೆ ಮೂರು ಸಲ- ಡಿಸೆಂಬರ್ ೩೧ (ಹೊಸ ವರ್ಷ), ಮಾರ್ಚ್ ೮ (ಲಂಕೇಶರ ಬರ್ತ್‌ಡೇ), ಜುಲೈ ೬ (ಪತ್ರಿಕೆ ಹುಟ್ಟಿದ ಹಬ್ಬ)- ಭರ್ಜರಿ ಪಾರ್ಟಿ ಏರ್ಪಡಿಸಿ ಎಲ್ಲರನ್ನು ಕರೆದು ಕುಡಿಸಿ, ಕುಣಿಸಿ, ಖುಷಿಪಡಿಸುವುದು ಲಂಕೇಶರ ಪತ್ರಿಕೆಯ ಸಂಪ್ರದಾಯವೇ ಆಗಿಹೋಗಿತ್ತು.
ಹೀಗೆಯೇ ಒಂದು ಸಲ ಹೊಸ ವರ್ಷದ ಪಾರ್ಟಿ. ಯಾರ‍್ಯಾರನ್ನು ಕರೆಯಬಹುದೆಂದು ಪಟ್ಟಿ ಮಾಡಿ, ಅವರ ಮುಂದಿಟ್ಟೆ. ಆಮೇಲೆ ಏನನ್ನಿಸಿತೋ, ‘ನೀನೆ ನೋಡಿ ಕರೆಯೋ...’ ಎಂದರು.
ಸಾಮಾನ್ಯವಾಗಿ ಪತ್ರಿಕೆ ಮತ್ತು ಲಂಕೇಶರ ಸಂಪರ್ಕದಲ್ಲಿರುವ ಸಾಹಿತಿಗಳು, ಕಲಾವಿದರು, ಲೇಖಕರು, ಬರಹಗಾರರು, ವರದಿಗಾರರು, ಏಜಂಟರು, ರಾಜಕಾರಣಿಗಳು, ಅಭಿಮಾನಿಗಳು, ಹಿತೈಷಿಗಳು... ಹೀಗೆ ಎಲ್ಲರನ್ನೂ ಕರೆಯುತ್ತಿದ್ದೆವು. ಅದೇ ಅಂದಾಜಿನ ಮೇಲೆ ಆ ಸಲವೂ ಫೋನ್ ಮಾಡಿ ಹೇಳಿದೆವು. ಹತ್ತಾರು ಕ್ಷೇತ್ರಗಳ ನೂರಾರು ಜನ ಹೀಗೆ ಒಂದು ಕಡೆ ಕಲೆತು, ಕುಡಿದು, ಹರಟೆ ಹೊಡೆದು ಹೋಗುವುದು- ಆರೋಗ್ಯಕರ ವಾತಾವರಣಕ್ಕೆ, ಸಮೃದ್ಧ ಸಾಹಿತ್ಯ ಸೃಷ್ಟಿಗೆ, ವಿಚಾರ ಪ್ರಚೋದನೆಗೆ, ಅದಕ್ಕಿಂತ ಹೆಚ್ಚಾಗಿ ಲಂಕೇಶರ ಮನಸ್ಸಿಗೆ ಮುದ ನೀಡುವ ಸಂಗತಿಯಾಗಿತ್ತು. ಇದರಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ, ಲಂಕೇಶರ ದರ್ಬಾರೂ ಕಾಣುತ್ತಿರಲಿಲ್ಲ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವುದು ಎದ್ದು ಕಾಣುತ್ತಿತ್ತು.
ಆ ವರ್ಷವೂ ಅಂಥಾದ್ದೆ ಪಾರ್ಟಿ, ನೆನಪಿನಲ್ಲಿ ಉಳಿಯುವಂತಿತ್ತು.
ಸಾಮಾನ್ಯವಾಗಿ ಪಾರ್ಟಿ ಆದ ಮಾರನೆ ದಿನ ಆಫೀಸಿಗೆ ಬಂದಾಗ, ನಿನ್ನೆ ರಾತ್ರಿ ಯಾರು ಹ್ಯೆಂಗೆಗೆಲ್ಲ ‘ಆಡಿದರು’ ಎಂಬುದರ ಬಗ್ಗೆಯೇ ಮಾತುಕತೆಯಿರುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಯಾರಾದರೂ ಅತಿಯಾಗಿ ‘ಆಡಿದರೆ’, ಅನಾಗರಿಕವಾಗಿ ವರ್ತಿಸಿದರೆ, ಅದು ಲಂಕೇಶರಿಗೆ ಕಿರಿಕಿರಿ ಉಂಟು ಮಾಡಿದರೆ, ಅವರ ಬಗ್ಗೆ ಮೇಸ್ಟ್ರು ಮುಲಾಜಿಲ್ಲದೆ, ‘ಏ ಅವುನ್ನ ಇನ್ನೊಂದ್ಸಲ ಕರೀಬ್ಯಾಡ, ಇಲ್ಗೂ ಕೂಡಬ್ಯಾಡ...’ ಅನ್ನುವುದೂ ಕಾಮನ್ ಆಗಿತ್ತು.
ಏನೂ ಇಲ್ಲ ಎಂದರೆ ಕೊನೆಗೆ, ‘ಏನ್ರೋ ಇದು, ಇಷ್ಟೊಂದು ಖರ್ಚ್ ಮಾಡಿದ್ದೀರಾ, ನಿಮ್ಗೇ ಬುಟ್ರೆ ನನ್ನ ಹರಾಜಾಕ್ಬುಡ್ತಿರಾ...’ ಎನ್ನುವ ಬೈಗುಳವಂತೂ ಇದ್ದೇ ಇರುತ್ತಿತ್ತು.
ಹೀಗೆ ಏನಾದರೊಂದು ಲಂಕೇಶರ ಕಡೆಯಿಂದ ಇರೋದು. ಅವತ್ತೂ ಹಾಗೆಯೇ ಮನೆಯಿಂದ ಬಂದವರು, ನನ್ನನ್ನು ನೋಡಿ, ‘ಏನೋ @#$%ನ್ನೆಲ್ಲ ಕರ‍್ದುಬುಟ್ಟಿದ್ದೆ’ ಎಂದು ರೂಮಿಗೆ ಹೋಗಿಬಿಟ್ಟರು. ಅವರು ಹೇಳಿದ ದಾಟಿ ವ್ಯಂಗ್ಯವಾಗಿತ್ತು. ಅವರು ಕೊಟ್ಟ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡು, ಹದ್ದುಮೀರಿ ಹೋಗಿದ್ದ ನನ್ನ ಅಹಂಕಾರಕ್ಕೆ ಮದ್ದರೆಯುವಂತಿತ್ತು.
ಆಶ್ಚರ್ಯವೆಂದರೆ, @#$% ಅವರು ಅವರ ಮೆಚ್ಚಿನ ಯುವ ಕತೆಗಾರ. ಅವರೊಂದಿಗೆ ಈ ಹೊತ್ತಿನ ಹೊಸ ಕತೆಗಾರರನ್ನು ಹೆಸರಿಸಿ, ಅವರನ್ನು ಕನ್ನಡದ ಪ್ರಾಮಿಸಿಂಗ್ ಕತೆಗಾರರು ಎಂದು ಬರೆದದ್ದೂ ಇದೆ. ಅಷ್ಟೇ ಅಲ್ಲ, ಅವರಿಗೆ ಫೋನ್ ಮಾಡಿ ಆಫೀಸಿಗೆ ಕರೆಸಿಕೊಂಡು ವ್ಹಿಸ್ಕಿ ಕೊಟ್ಟು, ಬುಕ್ಸ್ ಕೊಟ್ಟು, ಕತೆಗಳ ಬಗ್ಗೆ ಮಾತಾಡಿ ಕಳುಹಿಸಿದ್ದೂ ಇದೆ.
ಅಲ್ಲಿ ಮೈಸೂರಿಗೆ ಹೋಗ್ತಾ ಅಗ್ರಹಾರರಿಗೆ ಹಂಗೆ, ಇಲ್ಲಿ ಈ ಕತೆಗಾರರಿಗೆ ಹಿಂಗೆ!
ಹೀಗಿರುವಾಗ ನಾನು ಅವರನ್ನು ಪಾರ್ಟಿಗೆ ಕರೆದದ್ದು ಹೇಗೆ ತಪ್ಪಾಯಿತು ಎಂದು ಯೋಚಿಸುವುದಕ್ಕಿಂತ, ಲಂಕೇಶರ ಹತ್ತಾರು ಮುಖಗಳನ್ನ, ಶಕ್ತಿ ಮತ್ತು ಮಿತಿಯನ್ನ ಅರಿಯುವುದು, ಮತ್ತದನ್ನು ನಿಮ್ಮ ಮುಂದಿಡುವುದು ಸರಿ ಎನಿಸುತ್ತಿದೆ, ಲಂಕೇಶರಿಲ್ಲದ ಈ ಹೊತ್ತಿನಲ್ಲಿ.

ಅತಂತ್ರ ಬದುಕಿನ ಸ್ವತಂತ್ರ ಮಹಿಳೆ- ಎಳನೀರ ಮಂಗಮ್ಮ





ಪಕ್ಕದ ಕೇರಳ ಹೇಳಿಕೇಳಿ ತೆಂಗಿನ ನಾಡು. ರಾಜ್ಯದ ಉದ್ದಕ್ಕೂ ಹೇರಳವಾಗಿರುವ ತೆಂಗಿನ ಬೆಳೆಯಿಂದ ಕೇರಳ ರಾಜ್ಯ ಸರ್ಕಾರ ತೆಂಗು ಆಧಾರಿತ ಹತ್ತಾರು ಉತ್ಪನ್ನಗಳನ್ನು ತಯಾರಿಸುವತ್ತ ಗಮನ ಹರಿಸಿ, ಅಭಿವೃದ್ಧಿಪಡಿಸಿ ಅದನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಪರಿವರ್ತಿಸಿದೆ. ದುರದೃಷ್ಟಕರ ಸಂಗತಿ ಎಂದರೆ ಅಲ್ಲಿನ ಯುವಕರು ತೆಂಗನ್ನು ತೆಗೆದು ಪಕ್ಕಕ್ಕಿಟ್ಟು, ಗ್ರಾಮಗಳಿಂದ ನಗರಗಳಿಗೆ, ನಗರಗಳಿಂದ ಹೊರದೇಶಗಳಿಗೆ ಕೆಲಸಗಳನ್ನರಿಸಿ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಅಲ್ಲಿ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕೆಲಸಕ್ಕೆ ಬೇಕಾಗುವ ‘ಗಂಡು’ ಕೂಲಿಕಾರರೇ ಸಿಗದಂತಹ ಪರಿಸ್ಥಿತಿ ಏರ್ಪಟ್ಟಿದೆ. ಇದರಿಂದ ಚಿಂತೆಗೀಡಾದ ಕೇರಳ ಸರ್ಕಾರ, ತೆಂಗಿನ ಮರ ಹತ್ತುವ, ಕಾಯಿ ಕೀಳುವ ಕೆಲಸಕ್ಕೆ ಮಹಿಳೆಯರನ್ನು ನೇಮಿಸಿಕೊಳ್ಳುವತ್ತ ಗಮನ ಹರಿಸಿದೆ. ಮತ್ತು ಆ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಚಾಲನೆ ನೀಡಿ, ಯಶಸ್ವಿಯಾಗಿದೆ.
ಈ ತರಬೇತಿಯಲ್ಲಿ ಪಾಲ್ಗೊಂಡ ರೀನಾ ಎಂಬ ಮಹಿಳೆ ಈಗ ಮರದಿಂದ ಕಾಯಿ ಕೀಳುವ ಕೆಲಸದಲ್ಲಿ ನಿಪುಣತೆ ಸಾಧಿಸಿ, ತನ್ನಂತಹ ಮತ್ತೊಂದಿಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಹಾಗೆಯೇ ಎಳನೀರ ಅಂಗಡಿಯೊಂದನ್ನಿಟ್ಟು ದಿನಕ್ಕೆ ಐನೂರರಿಂದ ಸಾವಿರದವರೆಗೆ ಸಂಪಾದಿಸುತ್ತ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ರೀನಾ ಕತೆಯನ್ನು ಓದುತ್ತಿದ್ದಂತೆ ನನಗೆ ನಮ್ಮ ರಸ್ತೆಯ ಎಳನೀರು ಮಾರುವ ಮಂಗಮ್ಮನ ನೆನಪಾಯಿತು. ಮಾಸ್ತಿ ವೆಂಕೇಶ ಅಯ್ಯಂಗಾರರ ‘ಮೊಸರಿನ ಮಂಗಮ್ಮ’ನ ಥರಾನೂ ಅನ್ನಿಸಿತು. ವಿದ್ಯಾಪೀಠ ಸರ್ಕಲ್‌ನಲ್ಲಿ, ರಸ್ತೆ ಬದಿಯಲ್ಲಿ ಎಳನೀರು ಮಾರುವ ಮಂಗಮ್ಮನ ಕೈಯಲ್ಲಿ ಮಚ್ಚು ನೋಡಿದವರು, ಒಂದು ಕ್ಷಣ ಅವಾಕ್ಕಾಗದೆ ಇರಲಾರರು. ಯಾಕೆಂದರೆ, ಗಂಡಸರೆನ್ನಿಸಿಕೊಂಡವರ ಎಡಗೈನಲ್ಲಿ ತಲೆಬುರುಡೆ ಗಾತ್ರದ ಎಳನೀರನ್ನು ಹಿಡಿದುಕೊಳ್ಳುವುದೇ ಕೊಂಚ ಕಷ್ಟದ ಕೆಲಸ. ಇನ್ನು ಅದನ್ನು ಮಹಿಳೆಯೊಬ್ಬಳು ಹಿಡಿದುಕೊಂಡು ಬಲಗೈನಲ್ಲಿಡಿದ ಮಚ್ಚಿನಿಂದ ಮೂರೇ ಮೂರು ಏಟಿಗೆ, ಎಳನೀರಿನ ತಲೆ ತೆಗೆದು, ತುಳುಕುವ ಎಳನೀರ ಬುರುಡೆಯನ್ನು ನಿಮ್ಮತ್ತ ನೀಡುವ ಮಂಗಮ್ಮನ ಶೈಲಿಗೆ ಎಂಥವರೂ ಒಂದು ಕ್ಷಣ ಬೆರಗಾಗದೇ ಇರಲಾರರು.
ಇಲ್ಲಿ ಬೆರಗಾಗುವಂಥಾದ್ದು ಏನೂ ಇಲ್ಲ. ಯಾರೂ ಬೆಚ್ಚುವುದೂ ಇಲ್ಲ. ಆ ಕ್ಷಣಕ್ಕೆ ಮಂಗಮ್ಮನ ಎಳನೀರು ಹೊಡೆಯುವ ವಿಧಾನಕ್ಕೆ ಬೆರಗಾದರೂ, ಬಾಯಿ ಬಿಡದೆ, ಸುಮ್ಮನೆ ಕುಡಿದು ಹೋಗುವವರೇ ಹೆಚ್ಚು. ಹಾಗೆಯೇ ಮರೆಯುವವರು ಕೂಡ. ಆದರೆ ಅದೇ ಕೆಲಸವನ್ನು ನಾವು ಮಾಡಲು ಹೋದಾಗ ಮಂಗಮ್ಮನ ಎಳನೀರು ಹೊಡೆಯುವ ಕಷ್ಟದ ಅನುಭವ ಮತ್ತು ಆಕೆಯ ವಿಶಿಷ್ಟ ಶೈಲಿಯ ಬಗ್ಗೆ ಅಭಿಮಾನ ಮೂಡದೆ ಇರದು. ಕಪ್ಪಗೆ ಗಟ್ಟಿಮುಟ್ಟಾಗಿರುವ ಮಂಗಮ್ಮನ ಊರು ಬೆಂಗಳೂರಂತೂ ಅಲ್ಲ. ನಗರ ಜೀವನಕ್ಕೊಪ್ಪುವಂತೆ ಆಕೆ ಯಾವ ನಯ ನಾಜೂಕಿನ ಮಾತುಗಳನ್ನೂ ಆಡುವುದಿಲ್ಲ. ಜಾಣತನವನ್ನೂ ಪ್ರದರ್ಶಿಸುವುದಿಲ್ಲ. ಎಲ್ಲ ನೇರಾ ನೇರ. ಒರಟು ಹೆಂಗಸಿನಂತೆ ಕಾಣುವ ಹಳ್ಳಿಯ ಮುಗ್ಧೆ. ಯಾವುದೋ ಊರಿನಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿರುವ ಮಂಗಮ್ಮನದು ಪುಟ್ಟ ಸಂಸಾರ. ಗಂಡ, ಮನೆ, ಮಕ್ಕಳು ಎಲ್ಲಾ ಉಂಟು. ಎಲ್ಲ ಹೆಂಗಸರು ಮಾಡುವ ದಿನನಿತ್ಯದ ಕೆಲಸಗಳನ್ನು ಮಂಗಮ್ಮನೂ ಮಾಡುವುದುಂಟು. ಮಕ್ಕಳಿಗೆ ಮಾಡಿಟ್ಟು, ಅವರನ್ನು ಸ್ಕೂಲಿಗೆ ಕಳುಹಿಸಿಕೊಟ್ಟು, ಗಂಡನ ಎಳನೀರ ಅಂಗಡಿಯತ್ತ ಸೀದಾ ನಡೆದುಬಿಡುವ ಮಂಗಮ್ಮ, ಗಂಡನ ವ್ಯಾಪಾರದಲ್ಲಿ ಸಹಕರಿಸುವ ನಿಜಾರ್ಥದ ಸಹಧರ್ಮಿಣಿ. ಎಳನೀರು ವ್ಯಾಪಾರದಲ್ಲಿ ಪಳಗಿರುವ ಮಂಗಮ್ಮ ನಿಜಕ್ಕೂ ಧೈರ್ಯಸ್ಥೆ. ನೂರಾರು ಥರದ ಗಿರಾಕಿಗಳೊಂದಿಗೆ ವ್ಯವಹರಿಸುತ್ತ, ಬೆಂಗಳೂರಿನ ಬಿಸಿಲಿಗೆ ಬೆವತು ಬಂದವರಿಗೆ ತಣ್ಣನೆ ಎಳನೀರು ಕುಡಿಸುತ್ತ ದಿನಕ್ಕೆ ಸಾವಿರಾರು ರೂಪಾಯಿಗಳ ವಹಿವಾಟು ನಡೆಸುವ ಮಂಗಮ್ಮ ಯಾವ ಬಿಟಿ ಕ್ವೀನ್‌ಗೂ, ಸಾಫ್ಟ್ ವೇರ್ ಸಾಮ್ರಾಜ್ಞಿಗೂ ಕಡಿಮೆ ಇಲ್ಲ.
ಆದರೆ ಆಕೆಯಲ್ಲಿ ಅಂಥ ಯಾವ ಅಹಂ ಕೂಡ ಇಲ್ಲ. ಪ್ರಚಾರಪ್ರಿಯೆಯಂತೂ ಅಲ್ಲವೇ ಅಲ್ಲ. ಮಾಧ್ಯಮಗಳು ಆಕೆಯನ್ನು ಗುರುತಿಸಿ, ಹಾಡಿ ಹೊಗಳಿದ್ದೂ ಇಲ್ಲ. ಎಳನೀರು ಹೊಡೆಯುವುದು ತನ್ನ ದಿನನಿತ್ಯದ ಮನೆಗೆ ಕೆಲಸದಷ್ಟೇ ಎಂದು ತಿಳಿದಿರುವ, ತನ್ನ ಗಂಡನಿಗೆ ನೆರವಾಗಬೇಕು ಎಂದಷ್ಟೇ ಗೊತ್ತಿರುವ ಮಂಗಮ್ಮನಿಗೆ ತನ್ನ ಕೆಲಸಕ್ಕೂ ಒಂದು ವಿಶೇಷವಾದ ಮಹತ್ವವಿದೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದವರು. ಮಂಗಮ್ಮ ಎಳನೀರನ್ನು ಹೊಡೆಯುವುದರಲ್ಲಿ ಎಷ್ಟರಮಟ್ಟಿಗೆ ಎಕ್ಸ್‌ಪರ್ಟ್ ಆಗಿದ್ದಾರೆಂದರೆ, ಮೂರೇಟಲ್ಲ, ಒಂದೇ ಏಟಿಗೆ ಎಳನೀರು ಹೊಡೆದು ಕೊಡಬಲ್ಲರು. ಇದು ನುರಿತ ಎಳನೀರು ಹೊಡೆಯುವ ಗಂಡಸರಿಗೆ ಮಾತ್ರ ದಕ್ಕುವ ಮತ್ತು ಸಾಧ್ಯವಾಗುವ ವಿಧಾನ.
ಅದನ್ನವರು ಅದೆಷ್ಟೋ ವರ್ಷಗಳಿಂದ ಎಳನೀರು ಹೊಡೆಯುತ್ತ ಹೊಡೆಯುತ್ತ ಕರಗತ ಮಾಡಿಕೊಂಡಿದ್ದಾರೆ. ಆ ಅನುಭವದ ಮೇಲೆ ಲೀಲಾಜಾಲವಾಗಿ ಹೊಡೆದು ಕೊಡುತ್ತಾರೆ. ಹಾಗೆಯೇ ಎಳನೀರು ಮಾರುವುದರಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ಮಂಗಮ್ಮನ ಗಂಡ ಎಳನೀರು ತರಲು ಊರೂರು ಅಲೆದಾಡುತ್ತಿದ್ದರೆ, ಈಕೆ ಇಲ್ಲಿ ದಿನಕ್ಕೆ ಐನೂರರಿಂದ ಆರುನೂರು ಎಳನೀರು ಮಾರಾಟ ಮಾಡುತ್ತಿರುತ್ತಾರೆ.
ಈ ಬಗ್ಗೆ ಕೇಳಿದರೆ, ಥೇಟ್ ಹಳ್ಳಿಯ ಹೆಂಗಸಿನಂತೆ ನಾಚಿ ನೀರಾಗುವ ಮಂಗಮ್ಮ, ‘ಎಲ್ಲ ಕೆಲ್ಸದಂಗೆ ಇದೂ ಒಂದ್ ಕೆಲ್ಸ, ಅದರಲ್ಲೇನು ಪೆಷಲ್ಲು’ ಅನ್ನುತ್ತಾರೆ.
‘ಇದನ್ನು ಹೇಗೆ ಕಲಿತಿರಿ’ ಅಂದರೆ, ‘ಮದ್ಮದ್ಲು ಇದು ಗಂಡಸ್ರು ಕೆಲ್ಸ ನನಗ್ಯಾಕೆ ಅಂದ್ಕಂಡೇ ಇದ್ದೆ, ಆಮೇಲಾಮೇಲೆ ಅಂಗಡಿತಕ್ಕೆ ಬಂದು ಕೂತಿದ್ದಾಗ, ನಮ್ಮೆಜಮಾನ್ರು ಊಟಕ್ಕೋ, ಕೆಲ್ಸಕ್ಕೋ ಎಲ್ಲಾದ್ರು ಹೋಗಿದ್ದಾಗ, ಜನ ಬಂದ್ ಎಳನೀರು ಕೇಳೋರು. ಜನ ಬಂದ್ ಕೇಳ್ವಾಗ್ ಸುಮ್ನೆ ನಿಲ್ಲಕಾಯ್ತದ್ರ, ಮಚ್ ತಗಂಡೆ ಕೊಚ್ದೆ ಕೊಟ್ಟೆ, ಹಂಗೆ ರೂಢಿಯಾಯ್ತು...’ ಅಂದರು.
‘ದಿನಕ್ಕೆ ಎಷ್ಟು ಎಳನೀರು ಹೊಡಿತೀರಿ, ಎಷ್ಟು ವ್ಯಾಪಾರ ಮಾಡ್ತೀರಿ’ ಅನ್ನುವ ನನ್ನ ಪ್ರಶ್ನೆಗೆ, ಅನುಮಾನಿಸುತ್ತಲೇ, ‘ಅಯ್ಯೋ ಅದ್ಯಾಕ್ಬುಡಿ, ಎಷ್ಟೋ ಆಯ್ತದೆ..’ ಅಂದು ತೇಲಿಸಿಬಿಟ್ಟರು.
ಬೆಂಗಳೂರಿನಲ್ಲಿ ಇವತ್ತು ಎಳನೀರಿನ ವ್ಯಾಪಾರ ಜೋರಾಗಿದೆ. ಬಿಸಿಲಿನ ಝಳ ಏರಿದಂತೆ ಎಳನೀರಿನ ಬೇಡಿಕೆಯೂ ಏರುತ್ತಿದೆ. ಒಂದು ಅಂದಾಜಿನ ಪ್ರಕಾರ, ದಿನವೊಂದಕ್ಕೆ ಬೆಂಗಳೂರಿಗೆ ನಾಲ್ಕರಿಂದ ಐದು ಲಕ್ಷ ಎಳನೀರಿನ ಬೇಡಿಕೆ ಇದೆಯಂತೆ. ಮಂಗಮ್ಮನಂತಹ ವ್ಯಾಪಾರಸ್ಥರೇ ದಿನಕ್ಕೆ ಐನೂರರಿಂದ ಆರುನೂರು ಎಳನೀರು ಬುರುಡೆಗಳನ್ನು ಹೊಡೆದುರುಳಿಸುತ್ತಾರೆ. ಭಾನುವಾರ ಅದು ಒಂದು ಸಾವಿರದ ಗಡಿಯನ್ನೂ ದಾಟುತ್ತದೆ.

ಹಾಗೆ ನೋಡಿದರೆ ಈ ನಮ್ಮ ಮಂಗಮ್ಮನಿಗೆ ಸ್ವಂತಕ್ಕೊಂದು ಅಂಗಡಿ ಮಳಿಗೆಯೂ ಇಲ್ಲ. ತನ್ನ ಎಳನೀರು ಸಂಗ್ರಹಿಸಿಡಲು ವ್ಯವಸ್ಥಿತವಾದ ಉಗ್ರಾಣವೂ ಇಲ್ಲ. ಭದ್ರತೆಯಂತೂ ಕೇಳುವ ಹಾಗೇ ಇಲ್ಲ. ಇಷ್ಟಾದರೂ ರಸ್ತೆ ಬದಿಯನ್ನೇ ತನ್ನ ಮಳಿಗೆಯನ್ನಾಗಿಸಿಕೊಂಡಿರುವ ಮಂಗಮ್ಮ, ದಿನದ ವ್ಯಾಪಾರ ಮುಗಿಯುತ್ತಿದ್ದಂತೆ ಅದಕ್ಕೊಂದು ಗೋಣಿ ತಾಟು ಮುಚ್ಚಿ, ಪಕ್ಕದ ತಂತಿಬೇಲಿಗೆ ಬಿಗಿಯಾಗಿ ಕಟ್ಟಿ, ನಿರಾಳವಾಗಿ ಮನೆಯತ್ತ ನಡೆದುಬಿಡುತ್ತಾರೆ. ಜನರ ಮೇಲಿಟ್ಟ ನಂಬಿಕೆಯೇ ಲಾಕರ್ ಮತ್ತು ವಿಶ್ವಾಸವೇ ಬಿಗಿ ಬಂದೋಬಸ್ತ್. ಮಳೆ, ಚಳಿ, ಗಾಳಿಯ ಜೊತೆಗೆ ಬೆಂಗಳೂರಿಗೇ ಬೆವರಿಳಿಸುತ್ತಿರುವ ಟ್ರಾಫಿಕ್‌ನಂತಹ ಹಿಂಸೆಯ ನಡುವೆ ಆಗಾಗ ದಿಢೀರೆಂದು ಎದುರಾಗುವ ವಸೂಲಿವೀರರು, ಪೊಲೀಸರನ್ನೂ ಸಂಬಾಳಿಸಬೇಕಾದಂತಹ ಪರಿಸ್ಥಿತಿ.

ಇಂತಹ ಅಭದ್ರ ಅಸ್ಥಿರ ಸ್ಥಿತಿಯಲ್ಲಿಯೇ ಅದೆಷ್ಟೋ ವರ್ಷಗಳಿಂದ ವ್ಯಾಪಾರ ಮಾಡಿಕೊಂಡೆ ಬದುಕು ಸಾಗಿಸುತ್ತಿರುವ ಮಂಗಮ್ಮ ನಿಜಕ್ಕೂ ಧೈರ್ಯಸ್ಥೆ. ಬದುಕಿನ ಅತಂತ್ರ ಸ್ಥಿತಿಯನ್ನೇ ಸ್ವತಂತ್ರ ಬದುಕಿನ ಬುನಾದಿಯನ್ನಾಗಿಸಿಕೊಂಡ ದಿಟ್ಟೆ. ಕೊಚ್ಚುವ ಕೆಲಸದಲ್ಲೇ ಖುಷಿ ಕಂಡುಕೊಂಡ, ಬರುವ ಅಷ್ಟು ಇಷ್ಟು ಹಣದಲ್ಲೇ ಆತ್ಮವಿಶ್ವಾಸ ಆತುಕೊಂಡ ಮಂಗಮ್ಮ; ನಾಡಿನ ಮಹಿಳೆಯರಿಗೆ ಸಂಕೇತ, ಮಾದರಿ ಎಂದು ಅಂದುಕೊಳ್ಳದ, ಆ ಪದಗಳ ಅರ್ಥಗಳೂ ಗೊತ್ತಿಲ್ಲದ... ಸಹಜ ಸರಳ ಸಾಮಾನ್ಯ ಮಹಿಳೆ.




Monday, January 4, 2010

ಲಂಕೇಶರ `ಪಾಂಚಾಲಿ'ಯೊಂದಿಗೆ


`ಮೇಸ್ಟ್ರನ್ನ ಹಿಂದಕ್ಕೂರಿಸ್ಕಂಡ್ ಒಸಿ ಸುತ್ತಿದೀನ ಬಸುರಾಜು... ಹೋಗ್ದೆ ಇರ ಜಾಗ್ವೇ ಇಲ್ಲ, ನಂದೋ ಲಡಾಸ್ ಸ್ಕೂಟ್ರು, ನಾನಾಗ ಅಂತಾ ದಪ್ಕಿರಲಿಲ್ಲ, ಮೇಸ್ಟ್ರು ಜೋರಾಗಿದ್ರು, ಒಳ್ಳೆ ಎದ್ದಾಳು, ಇಬ್ರು ಸೇರದ್ರೆ ಏನಾಗನ ಅದು, ಎಳೀವಳ್ದು ನಾವ್ ಬುಡ್ತಿಲ್ಲ... ಪೆಟ್ರೋಲ್ಗೂ ಕಾಸಿಲ್ಲ, ನಮ್ ಪೆಟ್ರೋಲ್ಗುವೆ... ಅಂತಾದ್ರಲ್ಲಿ ಮೇಸ್ಟ್ರು ಹುಚ್ಚತ್ತಿಸ್ಕಂಡವ್ರೆ, ಲೇ ಗೌಡ, ನಂಗೊತ್ತಿಲ್ಲ ಸ್ಪೆಷಲ್ ಇಷ್ಯೂ ತರ್ಬೇಕು ಕಣಲೇ ಅಂತರೆ...'
`ಪಾಂಚಾಲಿ ಹೆಂಗ್ಬಂತು ಗೌಡ್ರೆ...' ಎಂದು ನೆಲಮನೆ ಪ್ರಕಾಶನದ ದೇವೇಗೌಡ್ರನ್ನ- ಅವರು ಸಾಯುವುದಕ್ಕೆ ಮುಂಚಿನ ಆರೇಳು ತಿಂಗಳಿನಲ್ಲಿ, ಹೀಗೆ ಸಂಜೆಯ `ಕೂತು ಮಾತಾಡುವ' ತಂಪು ಹೊತ್ತಿನಲ್ಲಿ ಕೇಳಿದಾಗ, ಪಾಂಚಾಲಿ ಹುಟ್ಟಿದ್ದು, ಮೇಸ್ಟ್ರು ತಲೆಕೆಡಿಸಿಕೊಂಡಿದ್ದು, ಕಾಸಿಗಾಗಿ ಪರದಾಡಿದ್ದು, ಹೊಸ ತಲೆಮಾರಿನ ಲೇಖಕ/ಲೇಖಕಿಯರನ್ನು ಪಟ್ಟಿ ಮಾಡಿದ್ದು, ಮಾಡುವಾಗ ಎದುರಾದ ಸಮಸ್ಯೆಗಳು, ಅನಗತ್ಯ ವಾದ-ವಿವಾದಗಳು, ಮನಸ್ತಾಪಗಳು, ಜಗಳಗಳು... ಹೀಗೆ ಎಲ್ಲವನ್ನೂ ಸ್ವಾರಸ್ಯಕರವಾಗಿ ಬಿಚ್ಚಿಡತೊಡಗಿದರು.
ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ'ಗಲ್ಲ; `ಪಾಂಚಾಲಿ' ಎಂಬ ವಿಶೇಷ ಸಂಚಿಕೆಗೆ. 1974ರಲ್ಲಿ ಹೊರಬಂದ ಇದು `ಪ್ರಜಾವಾಣಿ' ದೀಪಾವಳಿ ವಿಶೇಷಾಂಕವನ್ನು ಹೋಲುವ ಆಕಾರ ಮತ್ತು ಸೈಜ್ನಲ್ಲಿತ್ತು. ಇದು ಕೂಡ `ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ' ಎಂಬ ಹಣೆಪಟ್ಟಿ ಹಚ್ಚಿಕೊಂಡಿತ್ತು. ಆ ಕಾಲಕ್ಕೇ ನವ್ಯ, ವೈಚಾರಿಕ, ಪ್ರಗತಿಪರ ಆಲೋಚನೆಗಳ ಸಿಡಿಗುಂಡುಗಳಂತಹ ಲೇಖಕರಿದ್ದ, ಚಿಂತನೆಗಚ್ಚುವ ಬರಹಗಳಿಂದ ಕೂಡಿದ, ಈ ಕಾಲಕ್ಕೂ ವಿಶಿಷ್ಟವಾದ ಅಪರೂಪದ ಅದ್ಭುತ ಸಂಚಿಕೆ.
ಲಂಕೇಶರ ಒಡನಾಟಕ್ಕೆ ಬಿದ್ದಾಗಿನಿಂದಲೂ, ಅವರಿಗೆ ಸಂಬಂಧಪಟ್ಟ ಹತ್ತಾರು ವಿಷಯಗಳನ್ನು ಅರಿಯುವ, ಅರಗಿಸಿಕೊಳ್ಳುವ, ಅದರಲ್ಲೇ ಏನೋ ಒಂದು ಖುಷಿ ಕಾಣುವ ನನಗೆ, ಅವರಿಗೆ ಹತ್ತಿರವಾದಂತೆಲ್ಲ ಅರ್ಥವಾಗದವರಂತೆಯೇ ಕಾಣುತ್ತಿದ್ದರು. ಆ ವ್ಯಕ್ತಿತ್ವವೇ ಅಂಥಾದ್ದು- ವಿಸ್ಮಯ, ವಿಚಿತ್ರ. ಎಪ್ಪತ್ತರ ದಶಕದಲ್ಲಿ ಲಂಕೇಶರು ಸಂಪಾದಿಸಿದ್ದ `ಪಾಂಚಾಲಿ'ಯ ಬಗೆಗಿನ ಬೆರಗು ಕೂಡ ಅಂಥಾದ್ದೇ ಒಂದಾಗಿ ಬುದ್ಧಿಗೆಡಿಸಿತ್ತು. ಏನಾದರೂ ಮಾಡಿ ಅದನ್ನೊಂದು ಸಲ ನೋಡಬೇಕು, ಓದಬೇಕು ಎಂದು ನೇರವಾಗಿ ಹೋಗಿ ಲಂಕೇಶರನ್ನೇ ಕೇಳಿದ್ದೆ. ಅದಕ್ಕವರು ಎಂದಿನ ತಮ್ಮ ಉಡಾಫೆಯಿಂದ, `ಅದ್ನೆಲ್ಲ ಯಾರಿಡ್ತರಲೇ...' ಎಂದು ಒಂದೇ ಸಾಲಿನ ಉತ್ತರದಲ್ಲೇ ಎಲ್ಲವನ್ನೂ ಹೇಳಿ ಸುಮ್ಮನಾಗಿಸಿದ್ದರು.
ಅವರಿದ್ದದ್ದೇ ಹಾಗೆ- ನಿರ್ಲಕ್ಷಿಸುವ ಮೂಲಕ ಕುತೂಹಲ ಕೆರಳಿಸುವುದು. ನಿರಾಕರಿಸುವ ಮೂಲಕ ನಿರೀಕ್ಷೆಯ ಬೀಜ ಬಿತ್ತುವುದು. ಹಳೆಯದನ್ನು ಕಂಡರೆ ಕಣ್ಣರಳಿಸುವುದು, ಅಷ್ಟೇ ಬೇಗ ಖಿನ್ನರಾಗುವುದು. ಇದನ್ನು ಅವರ ನಡವಳಿಕೆಗಳಿಂದ ಖುದ್ದಾಗಿ ಕಂಡಿದ್ದೆ. ಪತ್ರಿಕೆಯಲ್ಲಿ, ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ ಅವರ ಕೆಲ ಅಭಿಮಾನಿಗಳು ಅವರಿಗೆ ಸಂಬಂಧಿಸಿದ ಅಪರೂಪದ ಹಳೆಯ ವಸ್ತುಗಳನ್ನು ತಂದು ಕೊಡುತ್ತಿದ್ದರು. ಅವರ ಕೆಲವೇ ಕೆಲವು ಸ್ನೇಹಿತರು ಆಗಾಗ ಬಂದು ಮರೆತುಹೋದ ವಿಷಯಗಳನ್ನು ಜ್ಞಾಪಿಸುತ್ತಿದ್ದರು. ಅದನ್ನೆಲ್ಲ ಬಹಳ ಸಂಭ್ರಮದಿಂದಲೇ ಸವಿಯುತ್ತಿದ್ದರು.
ಒಂದು ಸಲ ಹೀಗೆಯೇ, ಯಾರೋ ಅವರ ಅಭಿಮಾನಿಯೊಬ್ಬರು, ಅವರ ಒಂದು ಹಳೆಯ ಫೋಟೋವನ್ನು- ಸುಮಾರು ವರ್ಷಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ್ದದ್ದನ್ನು- ಪೋಸ್ಟ್ ಮುಖಾಂತರ ಕಳುಹಿಸಿಕೊಟ್ಟಿದ್ದರು. ಅದು ಸುಮಾರು ಎಪ್ಪತ್ತರ ದಶಕದ್ದು, ಬ್ಲ್ಯಾಕ್ ಅಂಡ್ ವೈಟ್ ಕಾಲದ್ದು. ತುಂಬಾ ಚೆನ್ನಾಗಿತ್ತು. ಮೇಸ್ಟ್ರು ಹ್ಯಾಂಡ್ಸಮ್ಮಾಗಿದ್ದರು. ಆ ಫೋಟೋ ನಮ್ಮ ಪಾಲಿಗೆ ನಿಧಿ. ಮೇಸ್ಟ್ರಿಗೆ ತೆಗೆದುಕೊಂಡು ಹೋಗಿ ಕೊಟ್ಟೆ, ನೋಡಿದರು, ಮಾತಿಲ್ಲ, ಮುಖದಲ್ಲಿ ಯಾವ ಭಾವನೇನೂ ಇಲ್ಲ. ತಕ್ಷಣ ಹರಿದು ಕಸದಬುಟ್ಟಿಗೆ ಹಾಕಿದರು. `ಜೀವವಿರುವ ನಾನೇ ಇರುವಾಗ, ಜೀವವಿಲ್ಲದ ಫೋಟೋ ಯಾಕೆ' ಎಂಬ ಭಾವ. ಸೇಡ್, ಬೋದಿಲೇರ್, ಕಾಮು, ಕಾಫ್ಕಾ ಎಲ್ಲ ಲಂಕೇಶರಲ್ಲಿಯೇ. ಒಂದೇ ಗಳಿಗೆಯಲ್ಲಿಯೇ. ಅಲ್ಲಿ ನಿಲ್ಲಲಿಕ್ಕೇ ಹೆದರಿಕೆಯಾಯಿತು.
ಈತನ್ಮಧ್ಯೆ ಒಂದ್ಸಲ ಊರಿಗೆ ಹೋಗಿದ್ದೆ, ಅದು 1992. ನಮ್ಮ ಮನೆ ಶಿಫ್ಟ್ ಮಾಡ್ತಿದ್ದರು. ಹಳೆಮನೆಯಿಂದ ಹೊಸಮನೆಗೆ ಸಾಮಾನು ಸಾಗಿಸುತ್ತಿದ್ದರು. ಅದರಲ್ಲಿ ಪುಸ್ತಕಗಳ ಒಂದು ದೊಡ್ಡ ಗಂಟೂ ಇತ್ತು. ಅದನ್ನು ನಮ್ಮಣ್ಣ ಕೆದಕುತ್ತ, ಅವನ ಮೈಸೂರಿನ ಮಹಾರಾಜ ಕಾಲೇಜಿನ ನೆನಪಿನ ಬುತ್ತಿಯನ್ನು ಬಿಚ್ಚಿಕೊಂಡಿದ್ದ. `ಬಸ್ವಾ, ಇದ್ ನೋಡಿದ್ದಾ ನೀನು...' ಎಂದು ರಾಗ ಎಳೆದ. ನೋಡಿದ್ರೆ ಪಾಂಚಾಲಿ!
ಗಂಟಿನಲ್ಲಿ ಇದ್ದದ್ದಕ್ಕೋ ಏನೋ ಹಳದೀ ಬಣ್ಣಕ್ಕೆ ತಿರುಗಿತ್ತು, ಜಿರಲೆಗಳ ಜಬರಾಟದಿಂದ ಕವರ್ ಪೇಜ್ ತೂತ್ ತೂತಾಗಿತ್ತು, ಕೈಗೆತ್ತಿಕೊಂಡರೆ ಗಮ್ಮಂತ ವಾಸನೆ ಬತರ್ಿತ್ತು. 1974ರಲ್ಲಿ ಪ್ರಕಟವಾಗಿದ್ದು, ಸುಮ್ಮನೆ ಲೆಕ್ಕ ಹಾಕಿದೆ... ಅವತ್ತಿಗೆ ಪಾಂಚಾಲಿಗೆ ಹದಿನೆಂಟು ವರ್ಷವಾಗಿತ್ತು, ಹರೆಯದ ಹುಡುಗಿಯ ಬೆವರಿನ ವಾಸನೆ ಮೂಗಿಗಡರುತ್ತಿತ್ತು! ಅಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅಣ್ಣನನ್ನು ಅಲ್ಲೇ ಬಿಟ್ಟು ಪಾಂಚಾಲಿಯನ್ನು ಎತ್ತಿಕೊಂಡು ಓಡಿದೆ. ಯಾರೂ ಇಲ್ಲದ ಜಾಗ ನೋಡಿ ಪಾಂಚಾಲಿಯ ನಿರಿಗೆಗಳಂಥ ಪುಟಗಳನ್ನು ನಿಧಾನವಾಗಿ ಬಿಚ್ಚತೊಡಗಿದೆ.

ಪುಟ ತಿರುವಿದಂತೆಲ್ಲ ಪುಟಿದೇಳುತ್ತಿದ್ದ ಉತ್ಸಾಹ... ಕಣ್ಣಿಗೆ ಬಿದ್ದಳು ನೀಲು-
`ಹಾಲು ಹಿಂಡುವ ಹರಯದ
ಅವಳ ಬೆರಳಲ್ಲಿ
ಆಕಳ ಮೊಲೆಯ
ಪುಲಕ'
ನೀಲು ಜೊತೆಗೆ ಹಾದಿಮನಿ, ಎಂಎಸ್ ಮೂತರ್ಿ ಬರೆಯುತ್ತಿದ್ದಂಥದೇ ಚಿತ್ರ. ಅಂದ್ರೆ ನೀಲು ಹುಟ್ಟಿದ್ದು 1974ರಲ್ಲಿ. ಪಾಂಚಾಲಿ ಹೊಟ್ಟೆಯಲ್ಲಿ. ಅರೆ, ಅವತ್ತಿಗೆ ಪಾಂಚಾಲಿಗೂ ಹದಿನೆಂಟು, ನೀಲೂಗೆ ಹದಿನೆಂಟು!
ಹಾಗೇ ನೋಡ್ತಾ ಹೋದೆ, ಮೇಸ್ಟ್ರ ಹಸ್ತಾಕ್ಷರವೂ ಇದೆ. ಕುವೆಂಪು ಅವರನ್ನು ಸಂದಶರ್ಿಸಲು, ಅವರಿಗೆ ಮೊದಲೇ ಕೆಲವು ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೈ ಬರಹವನ್ನೇ ನೆಗಟಿವ್ ಮಾಡಿಸಿ ಯಥಾವತ್ ಪ್ರಕಟಿಸಿದ್ದಾರೆ. ಮೇಸ್ಟ್ರ ಅಕ್ಷರಗಳು- ದಪ್ಪ, ಇದ್ದಕ್ಕಿದ್ದಂತೆ ಸಣ್ಣ, ಮತ್ತೆಲ್ಲೋ ಬಾಣ ಹಾಕಿ ಅತಿ ಸಣ್ಣಗೆ ಕೊರೆದಿದ್ದಾರೆ. ಕುವೆಂಪು ಆ ಪ್ರಶ್ನೆಗಳಿಗೆಲ್ಲ ವಿವರವಾಗಿ ಉತ್ತರಿಸಿದ್ದಾರೆ. ಒಂದೊಂದು ಪ್ರಶ್ನೆಯೂ ಎದೆಗೇ ನೇರವಾಗಿ ಬಾಣ ಬಿಟ್ಟಂತೆ. ಉತ್ತರವೂ ಅಷ್ಟೇ- ಯಾವ ಅನುಮಾನಕ್ಕೂ ಆಸ್ಪದವೀಯದಂತೆ. ಆ ಸಂದರ್ಶನ ಆ ಸಂಚಿಕೆಯ ವಿಶೇಷ. ಇಬ್ಬರು ದಿಗ್ಗಜರ ನಡುವಿನ ಅಪರೂಪದ, ಕನ್ನಡ ಸಾಹಿತ್ಯಲೋಕದಲ್ಲಿ ಮಹತ್ವದ ಸ್ಥಾನ ಪಡೆದ ಸಂದರ್ಶನಗಳಲ್ಲೊಂದು ಎಂಬುದು ನನ್ನ ಗ್ರಹಿಕೆ.
ಇದರಷ್ಟೇ ಮುಖ್ಯವಾದ `ಪಾಂಚಾಲಿ'ಯ ಮತ್ತೊಂದು ಅಂಶವೆಂದರೆ, ಕನರ್ಾಟಕದ ಪ್ರತಿಭಾವಂತ ತರುಣ ಜನಾಂಗ- ಲೇಖಕರು, ಚಿತ್ರಕಾರರು, ವೈದ್ಯರು, ಅಧ್ಯಾಪಕರು, ಇತ್ಯಾದಿ ಎಂದು ನಲವತ್ತೇಳು ಜನರನ್ನು ಗುರುತಿಸಿರುವುದು. ಅವರ ಚಿತ್ರಗಳನ್ನು ಹಾಕಿ, ಒಂದು ಪುಟ್ಟ ಪ್ಯಾರಾದಲ್ಲಿ ಅವರ ಪರಿಚಯವನ್ನೂ ನೀಡಿರುವುದು. ಅದರಲ್ಲಿ ದೇವನೂರ ಮಹಾದೇವರಿಂದ ಹಿಡಿದು ಎಚ್.ಎನ್.ನಂಜೇಗೌಡರವರೆಗೆ, ಪ್ರೊಫೆಸರ್ ನಂಜುಂಡಸ್ವಾಮಿಯವರಿಂದ ಹಿಡಿದು ಕೆ.ವಿ.ತಿರುಮಲೇಶ್ರವರೆಗೆ, ಎಚ್.ಎಲ್.ಕೇಶವಮೂತರ್ಿಯವರಿಂದ ಹಿಡಿದು ಗಿರೀಶ್ ಕಾನರ್ಾಡರವರೆಗೆ, ಭಾರ್ಗವಿ ನಾರಾಯಣ್ರಿಂದ ಹಿಡಿದು ಚಂದ್ರಶೇಖರ ಕಂಬಾರರವರೆಗೆ... ಕನರ್ಾಟಕ ಕಂಡ ಅತಿರಥ ಮಹಾರಥರೆಲ್ಲ ಅಲ್ಲಿದ್ದಾರೆ. ಅಂದಿನ ಕಪ್ಪು-ಬಿಳುಪಿನ ಮಸಕು ಮಸಕಾದ ಫೋಟೋಗಳು. ಕೆಲವು ಹೆಬ್ಬರಳ ಗಾತ್ರವಾದರೆ, ಇನ್ನು ಕೆಲವು ಸ್ಟಾಂಪ್ ಸೈಜ್, ಎಲ್ಲೋ ಒಂದೆರಡು ಮಾತ್ರ ದೊಡ್ಡವು. ಇವತ್ತು ಅವರೆಲ್ಲ ಏನೇನೋ ಆಗಿಹೋಗಿದ್ದಾರೆ. ಕೆಲವರು ಇದ್ದಾರೆ, ಇನ್ನು ಕೆಲವರು ಇಹಲೋಕ ತ್ಯಜಿಸಿದ್ದಾರೆ.
ಹಾಗೇ ಪುಟ ತಿರುವಿದರೆ, ಒಂದು ಪೇಜಿನಲ್ಲಿ ಒಂದು ಕವನ ಮತ್ತು ಪುಟ್ಟ ಬರಹವಿದೆ. ಕವನ ದೇವನೂರ ಮಹಾದೇವರದು, ಲೇಖನ ಶ್ರೀಧರ ಕಲಿವೀರರದು. ಇವರಿಬ್ಬರ ಬರಹಕ್ಕೆ ಹೆಡ್ಡಿಂಗು- ಇಬ್ಬರು `ಹೊಲೆಯ' ಬುದ್ಧಿಜೀವಿಗಳ ರಕ್ತಸಂವೇದನೆಯ ಮಾತುಗಳು. ಆಮೇಲೆ ಎರಡೇ ಸಾಲಿನ ಇಂಟ್ರೋ- `ಇವರಿಬ್ಬರು ಹೊಲೆಯರು. ಹೊಲೆಯರಾಗಿರುವುದರ ನೋವು, ಹಿಂಸೆ, ನರಕ ಮತ್ತು ವಿಚಿತ್ರ ಕನಸು ಇವರಿಗೆ ಗೊತ್ತು' ಎಂದು ಬರೆಯಲಾಗಿದೆ. ಇದು ಇವತ್ತಿಗೂ ಯಾವ ಪತ್ರಿಕೆಯಲ್ಲೂ ಕಾಣದ್ದು- ಅವತ್ತಿಗೇ ಲಂಕೇಶರು ಕಂಡಿರಿಸಿದ್ದು.

ಶ್ರೀಕೃಷ್ಣ ಆಲನಹಳ್ಳಿಯವರ `ಪರಸಂಗದ ಗೆಂಡೆತಿಮ್ಮ' ಕಾದಂಬರಿ ಮೊಟ್ಟ ಮೊದಲ ಬಾರಿಗೆ ಬೆಳಕು ಕಂಡಿದ್ದೇ `ಪಾಂಚಾಲಿ'ಯಲ್ಲಿ. ಆನಂತರ ಅದು ಚಲನಚಿತ್ರವಾಗಿದ್ದು, ಚಿತ್ರರಸಿಕರ ಮನ ಗೆದ್ದಿದ್ದು, ಸಿನಿಲೋಕದಲ್ಲಿ ಸದ್ದು ಮಾಡಿದ್ದು. ಆಲನಹಳ್ಳಿಯವರ `ಗೆಂಡೆತಿಮ್ಮ' ಗಂಭೀರ ವಸ್ತುವುಳ್ಳ ಉತ್ಕೃಷ್ಟ ಕಾದಂಬರಿ. ಕಥಾನಾಯಕ ಗೆಂಡೆತಿಮ್ಮ ಫ್ಯಾಷನ್ ವಸ್ತುಗಳನ್ನು ಮಾರಾಟ ಮಾಡುವ ಅನ್ಫ್ಯಾಷನಬಲ್ ಮನುಷ್ಯ. ಆತ ತನಗೆ ಗೊತ್ತಿಲ್ಲದಂತೆಯೇ ತನ್ನ ಸಾಮಾನುಗಳನ್ನು ಮಾರಾಟ ಮಾಡುವ ಮೂಲಕ ಹಳ್ಳಿಗಳಲ್ಲಿ ಬದಲಾವಣೆಗಳನ್ನು, ದುರಂತವನ್ನು ಬಿತ್ತುತ್ತಾನೆ. ಗೆಂಡೆತಿಮ್ಮನ ಕಥಾವಸ್ತು- ಫ್ಯಾಷನ್ ವಸ್ತುಗಳು ಹಳ್ಳಿ ಪ್ರವೇಶಿಸುವಂಥಾದ್ದು, ಒಂದು ರೀತಿಯಲ್ಲಿ ಭವಿಷ್ಯ ಭಾರತದ್ದು. ಅಂದರೆ 1974ರಲ್ಲಿಯೇ ಶ್ರೀಕೃಷ್ಣ ಆಲನಹಳ್ಳಿಯವರು ಜಾಗತೀಕರಣವನ್ನು ಗ್ರಹಿಸಿದ್ದರು. `ಸಿನಿಮಾ ಮತ್ತು ಜಾಗತೀಕರಣ' ಎಂಬ ವಿಷಯದ ಬಗ್ಗೆ ಯಾರಾದರು ಗಂಭೀರವಾದ ಸಂವಾದ ಏರ್ಪಡಿಸಿದರೆ- ಅದರಲ್ಲಿ ಮುಖ್ಯವಾಗಿ ಚಚರ್ೆಗೆತ್ತಿಕೊಳ್ಳಲೇಬೇಕಾದ ಚಿತ್ರವಾಗಿ `ಗೆಂಡೆತಿಮ್ಮ' ಅಗ್ರಪಂಕ್ತಿಯಲ್ಲಿದ್ದರೆ ಆಶ್ಚರ್ಯವಿಲ್ಲ. ಹಳ್ಳಿಗಳಿಗೆ ಪೆಟ್ಟಿಕೋಟ್, ಬ್ರಾ, ಗಮಂದೆಣ್ಣೆ ಪ್ರವೇಶ ಪಡೆಯುವ ಮೂಲಕ ಹಳ್ಳಿಯಲ್ಲಾಗುವ ಬದಲಾವಣೆಗಳನ್ನು ಆಲನಹಳ್ಳಿ ಅಂದೇ ಚಿತ್ರಿಸಿದ್ದರು.
ಬೆಸಗರಹಳ್ಳಿ ರಾಮಣ್ಣ, ಶಾಂತಿನಾಥ ದೇಸಾಯಿ, ವೀಣಾ, ಸೀತಾ, ಗೀತಾ ಕುಲಕಣರ್ಿ, ಸಿದ್ಧಲಿಂಗ ಪಟ್ಟಣಶೆಟ್ಟರ ಕತೆಗಳು, ಚೆನ್ನವೀರ ಕಣವಿ, ಲಂಕೇಶ್, ಚದುರಂಗರ ಕವಿತೆಗಳು, ಚಂಪಾರ ಜಗದಂಬೆ- ಇಂದಿರಾಗಾಂಧಿಯನ್ನು ದುಗರ್ಿಯನ್ನಾಗಿ ಚಿತ್ರಿಸಿದ ನಾಟಕ, ಚಿದಾನಂದಮೂತರ್ಿ, ಜಿಎಸ್ಸೆಸ್, ನಿಸಾರ್ ಅಹಮದ್, ಸಿದ್ಧಲಿಂಗಯ್ಯ, ತೇಜಸ್ವಿ, ಎಚ್ಚೆಲ್ಕೆ, ಪ್ರೊ.ಎಂಡಿಎನ್ರ ಲೇಖನಗಳು... ಯಾವ ಪ್ರತಿಷ್ಠಿತ ಪ್ರತಿಕೆಯೂ- ತನ್ನ ಓದುಗ ವಲಯ, ತಾನು ಕಟ್ಟಿಕೊಂಡ ಸಕ್ಯರ್ುಲೇಷನ್ ಸಾಮ್ರಾಜ್ಯ ಮತ್ತು ತಾನು ಗಳಿಸಿಕೊಂಡ ಸಾಹಿತ್ಯಕ, ಸಾಂಸ್ಕೃತಿಕ ಸ್ಥಾನಮಾನಗಳ ಆಧಾರದ ಮೇಲೆ- ರೂಪಿಸಲಾಗದಿದ್ದ ಸಂಚಿಕೆಯನ್ನು ಮೇಸ್ಟ್ರು, ಸರಿಯಾಗಿ ಕೂರಲು ಒಂದು ಕಚೇರಿ ಕೂಡ ಇಲ್ಲದ ಸ್ಥಿತಿಯಲ್ಲಿ ಕೆಲವೇ ಕೆಲವು ಗೆಳೆಯರೊಳಗೂಡಿ ರೂಪಿಸಿದ್ದರು. ಒಂದು ರೀತಿಯಲ್ಲಿ ಅದು ಶೂನ್ಯ ಸಂಪಾದನೆ. ಮತ್ತೊಂದು ರೀತಿಯಲ್ಲಿ ಲಂಕೇಶರ ದೈತ್ಯ ಪ್ರತಿಭೆಯ ಅನಾವರಣ.
ಪೊಗದಸ್ತಾಗಿರುವ ಪಾಂಚಾಲಿಯಲ್ಲಿ ಭವಿಷ್ಯದ ಊರ್ವಶಿ ಎಂದು ವನಮಾಲಾ ವಿಶ್ವನಾಥ್ರನ್ನು, ಪ್ರತಿಭಾವಂತ ನರ್ತಕಿ ಎಂದು ಉಮಾ ಎಂಬ ಭರತನಾಟ್ಯ ಕಲಾವಿದೆಯನ್ನು ಪರಿಚಯಿಸುವ ಲೇಖನಗಳೂ ಇವೆ. ಆಶ್ಚರ್ಯವೆಂದರೆ, ಈ ಲೇಖನಗಳನ್ನು ಬರೆದವರು ನೀಲು!
ಇಷ್ಟೆಲ್ಲ ಇದ್ದ ಪಾಂಚಾಲಿಯೊಂದಿಗೆ ಅದೆಷ್ಟು ರಾತ್ರಿಗಳನ್ನು ಕಳೆದಿದ್ದೆನೋ? ಹೀಗೇ ನಡೆದಿತ್ತು ಪಾಂಚಾಲಿಯೊಂದಿಗೆ ನನ್ನ ಸಂಸಾರ! ಇದರ ನಡುವೆಯೇ ಪಾಂಚಾಲಿಯನ್ನು ಮೇಸ್ಟ್ರಿಗೆ ತೋರಿಸುವ ಆಸೆಯೂ ಗರಿಗೆದರತೊಡಗಿತು. ಹಾಗೆಯೇ ಪಾಂಚಾಲಿ ನನ್ನವಳು ಎಂದರೆ? ಇಟ್ಟುಕೊಂಡರೆ ಓಕೆ, ಇದಕ್ಕೂ ಆ ಫೋಟೋಗಾದ ಗತಿಯಾದರೆ? ಈ ಅನುಮಾನ, ಹೆದರಿಕೆಗಳೆಲ್ಲ ನನ್ನೊಳಗೇ ಥಳಕು ಹಾಕಿಕೊಂಡು, ಅವರಿಗೆ ತೋರಿಸುವ ಧೈರ್ಯವೇ ಬರಲಿಲ್ಲ. ಆದರೆ ಪಾಂಚಾಲಿಯ ನೀಲು ಮಾತ್ರ ತಲೆಕೆಡಿಸುತ್ತಲೇ ಇತ್ತು. ಆ ಚಿತ್ರ-ಬರಹ ಬೇರೆ ಥರಾನೇ ಕಾಣಿಸುತ್ತಿತ್ತು. ಮೇಸ್ಟ್ರಿಗೆ ಗೊತ್ತಿಲ್ಲದಂತೆ ಪತ್ರಿಕೆಯಲ್ಲಿ ಪ್ರಕಟಿಸಿಬಿಡುವ ಕೆಟ್ಟ ಧೈರ್ಯವನ್ನೂ ಕೊಡುತ್ತಿತ್ತು.
ಪತ್ರಿಕೆಯಲ್ಲಿ ಸಾಮಾನ್ಯವಾಗಿ ಒಂದು ವಾರಕ್ಕೆ ಮೂರು ನಾಲ್ಕು ನೀಲುಗಳನ್ನು ಹಾಕುತ್ತಿದ್ದೆವು. ಪತ್ರಿಕೆಯ ಪೇಜ್ ಡಿಸೈನ್ ಮಾಡುತ್ತಿರುವಾಗ ಒಂದು ಕಡೆ ಜಾಗ ಉಳಿದರೆ, ಅಲ್ಲಿ ನೀಲು ಹಾಕುತ್ತಿದ್ದೆವು. ಜಾಗ ಚಿಕ್ಕದಿದ್ದರೆ ಬರೀ ನೀಲು, ದೊಡ್ಡದಾಗಿದ್ದರೆ ಚಿತ್ರಸಹಿತ. ಇದನ್ನು ಮುಂಚೆಯೇ ಯೋಚಿಸಿ, ಮೇಸ್ಟ್ರಿಂದ ನೀಲುಗಳನ್ನು ಬರೆಸಿಟ್ಟುಕೊಂಡಿದ್ದರೆ, ಅದಕ್ಕೆ ತಕ್ಕಂತೆ ಕಲಾವಿದರಿಂದ ಚಿತ್ರ ಬರೆಸಿ, ಅದನ್ನು ಪಾಸಿಟಿವ್ ಮಾಡಿಸಿ, ಚಿತ್ರ ಮತ್ತು ನೀಲು- ಎರಡನ್ನೂ ಒಂದು ಬಾಕ್ಸ್ ಮಾಡುವುದು ಒಂದು ರೂಢಿಯಾಗಿತ್ತು.
ಲಂಕೇಶರಿಂದ ನೀಲು ಬರೆಸುವುದು... ಆ ನೀಲು ಸೃಷ್ಟಿಯೇ ಸೋಜಿಗದ್ದು. ಮೇಸ್ಟ್ರೇನೋ ನಿಂತ ನಿಲುವಿನಲ್ಲಿಯೇ ಬರೆದುಕೊಡುತ್ತಿದ್ದರು. ಆದರೆ ಆ ನೀಲು ಬರೆಯಲು ಆರ್ಡನರಿ ಪೆನ್ ಆಗುತ್ತಿರಲಿಲ್ಲ. ಅದಕ್ಕಾಗಿ ಪೇಸ್ಟಪ್ ರಾಜಗೋಪಾಲ್ರಿಂದ ರೋಟ್ರಿಂಗ್ ಪೆನ್ನು, ಕಂಪ್ಯೂಟರ್ ಸೆಕ್ಷನ್ನಲ್ಲಿ ಬಳಸುವ ಟ್ರೇಸಿಂಗ್ (ಇದಕ್ಕೂ ಮೊದಲು ಬಟರ್ ಶೀಟ್ ಇತ್ತು) ಪೇಪರ್ ಎರಡನ್ನೂ ತೆಗೆದುಕೊಂಡು ಹೋಗಿ ಮೇಸ್ಟ್ರ ಟೇಬಲ್ ಮೇಲಿಟ್ಟರೆ, ಅವರಿಗೆ ಸಮಯ ಸಿಕ್ಕಾಗ, ಮೂಡ್ ಬಂದಾಗ ಬರೆದು ಕೊಡುತ್ತಿದ್ದರು. ಅಷ್ಟರೊಳಗೆ ಆ ಟ್ರೇಸಿಂಗ್ ಪೇಪರ್ಗಳು ನೀರು-ಕಾಫಿ-ವ್ಹಿಸ್ಕಿ ಕುಡಿದು ಕೂತಿರುತ್ತಿದ್ದವು. ಮೆತ್ತಗಾದರೆ ಅವುಗಳನ್ನು ಬಳಸಲು ಬರುತ್ತಿರಲಿಲ್ಲ. ಮತ್ತೆ ಕೊಟ್ಟು, ಅಲ್ಲೆ ನಿಂತು ಬರೆಸಿಕೊಳ್ಳಬೇಕಾಗಿತ್ತು. ಆಗೆಲ್ಲ ಅವರಿಂದ, `ನಿಂದೊಳ್ಳೆ ಕಾಟ ಕಣಲೇ...' ಎಂಬ ಬೈಗಳ ಇದ್ದೇ ಇತ್ತು.
ಹೀಗೆ... ಒಂದು ವಾರ ಮೇಸ್ಟ್ರು ಬರೆದುಕೊಟ್ಟ ನೀಲು ಖಾಲಿಯಾಗಿದ್ದವು. ಪಾಂಚಾಲಿಯ ನೀಲುಗಳು ಪ್ರಚೋದಿಸುತ್ತಿದ್ದವು. ಪಾಂಚಾಲಿಯಲ್ಲಿದ್ದ ಒಂದು ನೀಲುವನ್ನು- ಚಿತ್ರಸಹಿತ ಪತ್ರಿಕೆಯಲ್ಲಿ, ಮೇಸ್ಟ್ರ ಅನುಮತಿಯಿಲ್ಲದೆ, ಪಾಂಚಾಲಿಯಿಂದ ಎಂಬ ಅಡಿಟಿಪ್ಪಣಿ ಕೂಡ ಇಲ್ಲದೆ ಮರು ಮುದ್ರಿಸಿದೆ. ಪತ್ರಿಕೆ ಪ್ರಿಂಟಾಗಿ ಬಂದ ದಿನ ನನ್ನ ತಳಮಳ ನನಗೇ ಗೊತ್ತು. ಮೇಸ್ಟ್ರು ಬಂದ್ರು, ಪತ್ರಿಕೆಯ ಪುಟಗಳನ್ನು ತಿರುವಿಹಾಕುತ್ತಿದ್ದಾರೆ, ನಾನು ಹೊರಗೆ ಯಾವಾಗ ಕರೀತಾರೋ ಏನ್ ಅಂತಾರೋ ಇವತ್ತು ಏನ್ ಕಾದಿದೆಯೋ ಎಂದು ಒದ್ದಾಡುತ್ತಿದ್ದೇನೆ.
ಆಶ್ಚರ್ಯ ಅಂದ್ರೆ, ರೂಮಿನಿಂದ ಹೊರಗೆ ಬಂದವರೆ, `ಎಲ್ಲಿತ್ತಲೇ, ಎಲ್ಲೋ ಹುಡುಕ್ಬುಟ್ಟಿದಿಯಾ...' ಎಂದರು. ಅವರ ನೀಲು ಅವರಿಗೇ ಚಕಿತಗೊಳಿಸಿದ್ದಳು. ಹೊಸ ಹುಡುಗಿ ಸಿಕ್ಕಷ್ಟೇ ಖುಷಿಯಲ್ಲಿದ್ದರು. ನನ್ನ ಆತಂಕವೆಲ್ಲ ಕರಗಿ ಕೂಲಾಗಿ, `ಊರಲ್ಲಿತ್ತು ಸಾರ್, ನಮ್ಮಣ್ಣನತ್ರಿತ್ತು ತಗಂಬಂದೆ...' ಅಂದೆ.
`ನಾನೇ ನೋಡಿಲ್ವಲೋ, ಕೊಡಿಲ್ಲಿ...' ಎಂದರು. ಯಾರ್ಯಾರದೋ ಕಣ್ತಪ್ಪಿಸಿ ಕಾಪಾಡಿಕೊಂಡು ಬಂದಿದ್ದ ಪಾಂಚಾಲಿಯನ್ನು ಕೈಗೆ ಕೊಡುತ್ತ ಅವರ ಮುಖ ನೋಡಿದೆ. ನನ್ನ ತಲೆತುಂಬಾ ಆ ಫೋಟೋಗಾದ ಗತಿ ತುಂಬಿತ್ತು. ಅವರು, `ನಿನ್ನ ಪಾಂಚಾಲಿಗೇನೂ ಮಾಡಲ್ಲ, ಕೊಡೋ...' ಎಂದು ಅವತ್ತಿನ ರಜಾ ದಿನವನ್ನು ಅವಳೊಂದಿಗೆ ಕಳೆದರು. ಅವರೇ ಮಾಡಿದ ಅವರ ಪಾಂಚಾಲಿಯ ಬಗ್ಗೆ ಹದಿನೆಂಟು ವರ್ಷಗಳ ನಂತರ ಏನನ್ನಬಹುದೆನ್ನುವ ಕುತೂಹಲ, ಕಾತರವಿತ್ತು. ಅದಕ್ಕೆ ತಕ್ಕಂತೆ ಅವರ ಮನಸ್ಸು ಕೂಡ ಆವತ್ತಿನ ಕ್ಷಣಗಳನ್ನು ಮೆಲುಕು ಹಾಕುತ್ತಿತ್ತು. ಹಾಗಾಗಿ ಮಾರನೆ ದಿನ ಹೋಗಿ ಅವರ ಮುಂದೆ ನಿಂತೆ.
ಇವನು ಇದಕ್ಕೇ ಬಂದಿದ್ದಾನೆಂಬುದನ್ನು ಗ್ರಹಿಸಿ, `ಪರವಾಗಿಲ್ಲ ಕಣೋ, ಚೆನ್ನಾಗಿದೆ. ಆ ಟೈಮೇ ಹಂಗಿತ್ತು... ಸಂಥಿಂಗ್ ನ್ಯೂ ಅಂಡ್ ಡಿಫರೆಂಟ್... ಜೊತೆಗೆ ಅನ್ನಿಸಿದ್ದನ್ನ ಹೇಳುವ ಧೈರ್ಯ, ಹೇಳುವಾಗ ಬಳಸಬೇಕಾದ ಬುದ್ಧಿವಂತಿಕೆ ಎರಡೂ ಮುಖ್ಯ. ಇದರಲ್ಲಿ ಬರ್ದಿರೋ ಎಲ್ರಲ್ಲೂ ಅದಿದೆ, ಅದ್ಕೆ ಇದು ಚೆನ್ನಾಗಿದೆ...' ಎಂದವರೆ ಅಷ್ಟೇ ತುಂಟತನದಿಂದ, ಪಾಂಚಾಲಿಯನ್ನೇ ನನಗೆ ಧಾರೆ ಎರೆದು ಕೊಟ್ಟಂತೆ, `ತಗೋ, ಮಜಾ ಮಾಡೋಗು' ಎಂದರು.
ಅಷ್ಟೊತ್ತಿಗಾಗಲೇ ಪಾಂಚಾಲಿಗಾಗಿ ನನ್ನಂತೆಯೇ ಹುಡುಕಾಡುತ್ತಿದ್ದ ಅಗ್ರಹಾರ ಕೃಷ್ಣಮೂರ್ತಿಯವರಿಗೆ `ಪಾಂಚಾಲಿ' ನನ್ನ ಹತ್ತಿರ ಇರುವುದು ತಿಳಿದು, `ಬಸು, ನನಗೊಂದು ಝೆರಾಕ್ಸ್ ಕಾಪಿ ಬೇಕಲ್ಲ...' ಅಂದರು. ಆಮೇಲೆ ನಟರಾಜ್ ಹುಳಿಯಾರ್, ಎಸ್.ಎಸ್.ಶಂಕರ್... ಹೀಗೆ ಕೇಳಿದವರೆಲ್ಲರಿಗೂ ಕೊಟ್ಟಿದ್ದಾಯಿತು. ಹಾಗೆಯೇ ಅದರಲ್ಲಿರುವ ಅಷ್ಟೂ ನೀಲುಗಳನ್ನು ಮತ್ತೆ ಮತ್ತೆ ಪತ್ರಿಕೆಯಲ್ಲಿ ಪ್ರಕಟಿಸಿದ್ದೂ ಆಯಿತು.
ಲಂಕೇಶರ ಪಾಂಚಾಲಿ ಬಗ್ಗೆ ಲಂಕೇಶರೇ ಹೀಗಂದ ಮೇಲೆ, ಅದರ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಇಮ್ಮಡಿಗೊಂಡು ಮತ್ತೆ ಮತ್ತೆ ಓದತೊಡಗಿದೆ. ಹೊಸ ತಲೆಮಾರಿನ ಕಲಾವಿದರ ಬಗ್ಗೆ ತೇಜಸ್ವಿ, ದಲಿತರ ಬಗ್ಗೆ ಪ್ರೊಫೆಸರ್ ನಂಜುಂಡಸ್ವಾಮಿ, ಜೆಪಿ-ಬಸವಲಿಂಗಪ್ಪನವರ ಬಗ್ಗೆ ಲಂಕೇಶ್, ಬೂಸಾ ಪ್ರಕರಣದ ಬಗ್ಗೆ ಸಿದ್ಧಲಿಂಗಯ್ಯ... ಅಂದಿನ ತುರ್ತಿಗೆ ತಕ್ಕಂತೆ ಎಲ್ಲರೂ ಒಂದು ಮನಸ್ಸಿನಂತೆ ಸ್ಪಂದಿಸಿರುವುದು ಎದ್ದು ಕಾಣತೊಡಗಿತು. ನಾಡನ್ನು ಒಂದು ಚಳುವಳಿಗೆ ಸಿದ್ಧಗೊಳಿಸಿದಂತಿತ್ತು.
ಕರ್ನಾಟಕದ ಸಾಹಿತ್ಯಕ, ಸಾಂಸ್ಕೃತಿಕ ಜಗತ್ತನ್ನು ಸಮೃದ್ಧಗೊಳಿಸಿದ ಆ ಕ್ರಿಯಾಶೀಲ ಮನಸ್ಸುಗಳು ಇವತ್ತು, ಪಾಂಚಾಲಿ ಹೊರಬಂದ ಮೂವತ್ತೈದು ವರ್ಷಗಳ ನಂತರ, ಒಬ್ಬೊಬ್ಬರು ಒಂದೊಂದು ಬಾವಿಯಾಗಿದ್ದಾರೆ. ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿದ್ದಾರೆ. ಕಾಲ-ಬುದ್ಧಿ-ಬದುಕು ಅವರನ್ನು ಬದಲಾಯಿಸಿತೆ ಅಥವಾ ಬಲಿ ತೆಗೆದುಕೊಂಡಿತೆ?