Monday, July 28, 2014

ಕನ್ನಡದ ಅಪ್ರತಿಮ ಕಲಾವಿದ ನರಸಿಂಹರಾಜು

ನರಸಿಂಹರಾಜು
ಬಾಬು ರಾಜೇಂದ್ರಪ್ರಸಾದ್ ವೆಂಕಟಗಿರಿಜಾರಮಣ ತಿಪಟೂರು ಎಂದು ರೈಲಿನ ಬೋಗಿಗೆ ಅಂಟಿಸಿರುವ ಪ್ರಯಾಣಿಕರ ಪಟ್ಟಿಯಲ್ಲಿ ಹೆಸರನ್ನು ಓದುವ, ತರಾತುರಿಯಲ್ಲಿ ಹದಿನೇಳು ಲಗೇಜುಗಳನ್ನಿಟ್ಟುಕೊಂಡು ರೈಲು ಹತ್ತುವ, ಲಗೇಜುಗಳು ಸರಿಯಾಗಿವೆಯೇ ಎಂದು ಲೆಕ್ಕಹಾಕಲು ಒದ್ದಾಡುವ, ಲೆಕ್ಕ ಹಾಕಿದ ಮೇಲೆ ಕೂಲಿ ಕೊಡಲು ಕೂಲಿಯ ಆಳಿನೊಂದಿಗೆ ಚೌಕಾಸಿಗೆ ಬೀಳುವ, ಎದುರಿದ್ದವರು ಹೇಳಿದ ಮೇಲೂ ಮೊದಲು ಕೊಟ್ಟ ರೂಪಾಯಿಯನ್ನೇ ಕೊಡಲು ಹೋಗುವ, ಕೂಲಿ ಹೊಡೆಯಲು ಕೈ ಎತ್ತಿದಾಗ ಬೆದರಿ ಮುಖ ಮುಚ್ಚಿಕೊಳ್ಳುವ ದೃಶ್ಯ- ೧೯೬೮ ರಲ್ಲಿ ತೆರೆ ಕಂಡಬೆಂಗಳೂರು ಮೈಲ್ಎಂಬ ಆಕ್ಷನ್ ಪ್ಲಸ್ ಸಸ್ಪೆನ್ಸ್ ಚಿತ್ರದ್ದು.
ಸಾಮಾನ್ಯವಾಗಿ ಚಿತ್ರದ ಆರಂಭಕ್ಕೆ ನಾಯಕನಟನ ಅದ್ದೂರಿ ಎಂಟ್ರಿ ಇರುತ್ತದೆ. ಅದೂ ವಿಭಿನ್ನ ಶೈಲಿಯಲ್ಲಿ. ಆದರೆ ಇಲ್ಲಿ, ಚಿತ್ರದಲ್ಲಿ ನರಸಿಂಹರಾಜು ಅವರದೇ ಚಿತ್ರದ ಮೊದಲ ದೃಶ್ಯ. ಚಿತ್ರದಲ್ಲಿ ನರಸಿಂಹರಾಜು ತಿಪಟೂರಿನ ಶ್ರೀಮಂತ ಕುಟುಂಬಕ್ಕೆ ಸೇರಿದ ಯುವಕ. ಐವರು ಅಣ್ಣತಮ್ಮಂದಿರ ಮುದ್ದಿನ ಒಬ್ಬನೇ ಮಗ- ಬಾಬು ರಾಜೇಂದ್ರಪ್ರಸಾದ್ ವೆಂಕಟಗಿರಿಜಾರಮಣ. ರೈಲಿಗೆ ಹತ್ತಿದಾಕ್ಷಣ ಎದುರಾಗುವ ನಗರದ ಆಧುನಿಕ ವೈಯಾರದ ಯುವತಿ. ಆಕೆಯೊಂದಿಗೆ ಸಲುಗೆಯಿಂದ ಮಾತನಾಡಬೇಕೆಂಬ ಆಸೆ ಜೊತೆಗೆ ಅಳುಕು. ಅಂತಹ ಸ್ಥಿತಿಯಲ್ಲಿಯೇ ಆಕೆಯೊಂದಿಗೆ ಮಾತಿಗಿಳಿದು, ಆಕೆ ಬೀಸುವ ಮೋಹದ ಬಲೆಗೆ ಬಿದ್ದು ಅನಾಯಾಸವಾಗಿ ಅನಾಹುತ ಆಹ್ವಾನಿಸಿಕೊಳ್ಳುವ, ಆತಂಕದಲ್ಲಿ ಒದ್ದಾಡುವ ಪಾತ್ರ. ಹಾಗೆ ಒದ್ದಾಡುತ್ತಲೇ ಚಿತ್ರದ ಬಹುಮುಖ್ಯ ತಿರುವಿಗೆ ಕಾರಣವಾಗುವ ಪಾತ್ರ. ಚಿತ್ರದ ಆರಂಭದ ದೃಶ್ಯದಲ್ಲಿಯೇ ನರಸಿಂಹರಾಜು, ತಮ್ಮ ಸಹಜಾಭಿನಯದಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸುತ್ತಾರೆ.
ಇಂತಹ ಒಂದಲ್ಲ, ನೂರಾರು ಚಿತ್ರಗಳಲ್ಲಿ, ಸಾವಿರಾರು ಪಾತ್ರಗಳಲ್ಲಿ ಸರಿಸುಮಾರು ೨೫ ವರ್ಷಗಳ ಕಾಲ ಕನ್ನಡಿಗರನ್ನು ರಂಜಿಸಿದ ನರಸಿಂಹರಾಜು, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ. ಇವರು ಮೂಲತಃ ತಿಪಟೂರಿನವರು, ಮಧ್ಯಮವರ್ಗಕ್ಕೆ ಸೇರಿದ ಬಡವರು. ಬಾಲ್ಯದಲ್ಲಿ ಮಕ್ಕಳು ಸಾಮಾನ್ಯವಾಗಿ ಅಕ್ಷರಾಭ್ಯಾಸ, ಕಲಿಕೆಗಾಗಿ ಶಾಲೆ ಸೇರುವುದು ಸಹಜ. ಆದರೆ ನರಸಿಂಹರಾಜು ತಮ್ಮ ನಾಲ್ಕನೇ ವಯಸ್ಸಿಗೆ ಸೇರಿದ್ದು ರಂಗಭೂಮಿಯನ್ನು. ಅದೇ ಅವರಿಗೆ ಆಟ-ಪಾಠ ಕಲಿಸಿತು. ಬದುಕನ್ನು ಬಣ್ಣಿಸಿತು. ಬಣ್ಣದ ಬದುಕಿನ ಬೆರಗಿಗೆ ಬಿದ್ದ ನರಸಿಂಹರಾಜು ರಂಗಭೂಮಿಯನ್ನು ಮೈ ಮನಗಳಲ್ಲಿ ಅರಗಿಸಿಕೊಂಡರು. ಅದರ ಸಮೃದ್ಧತೆ, ಸೊಗಡು, ಸೊಗಸನ್ನು ಅಭಿನಯದ ಮೂಲಕ ಅರಳಿಸಿದರು. ನಂತರ ಚಿತ್ರರಂಗಕ್ಕೆ ಧುಮುಕಿ, ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಲೇ ಕನ್ನಡ ಚಿತ್ರರಂಗದ ಬುಡ ಭದ್ರ ಮಾಡಿದರು. ಚಿತ್ರರಂಗವನ್ನು ಸದೃಢವಾಗಿ ಬೆಳೆಸಿದರು, ಬೆಳಗಿಸಿದರು. ಸಾಂಸ್ಕೃತಿಕ ರಂಗವನ್ನು ಶ್ರೀಮಂತಗೊಳಿಸಿದರು. ಮಹಾನುಭಾವರ ಪಾಲಿಗೆ ಸೇರಿಹೋದರು. ಅಳಿದ ಮೇಲೂ ಕನ್ನಡಿಗರ ಮನೆ-ಮನಗಳಲ್ಲಿ ಉಳಿದ, ಹೊಳೆದ ಅಪರೂಪದ ತಾರೆಯಾದರು
ಹುಟ್ಟಿದ್ದು ಬಡತನದಲ್ಲಿ, ಕಲಿತದ್ದು ಕಂಪನಿ ನಾಟಕದಲ್ಲಿ
ನರಸಿಂಹರಾಜುರವರ ತಾಯಿ ವೆಂಕಟಲಕ್ಷ್ಮಯ್ಯ, ತಂದೆ ರಾಮರಾಜು. ತಂದೆ ತಿಪಟೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಕೆಲಸದಲ್ಲಿದ್ದರು. ಊರಿನ ಕೋಟೆಯಲ್ಲಿ, ಚಿಕ್ಕ ಮನೆಯಲ್ಲಿ ವಾಸವಾಗಿದ್ದರು. ಇವರ ಪೂರ್ವಿಕರು ಮೂಲತಃ ತಿಪಟೂರಿನ ಹತ್ತಿರದ ಹಾಲ್ಕುರಿಕೆಯವರು. ರಾಮರಾಜು ಅವರ ಐವರು ಮಕ್ಕಳಲ್ಲಿ ನರಸಿಂಹರಾಜು ಎಲ್ಲರಿಗಿಂತ ಹಿರಿಯರು. ಬಾಲ್ಯದಲ್ಲಿಯೇ ಚುರುಕುಬುದ್ಧಿಯ ಚೂಟಿ ಹುಡುಗ ಎಂಬ ಹೆಸರು ಪಡೆದಿದ್ದ ನರಸಿಂಹರಾಜು ನಾಲ್ಕನೇ ವಯಸ್ಸಿನಲ್ಲಿ, ಸ್ಕೂಲಿಗೆ ಸೇರಿ ವಿದ್ಯಾಭ್ಯಾಸ ಶುರು ಮಾಡಬೇಕಾದ ಸಂದರ್ಭದಲ್ಲಿ, ಚಿಕ್ಕಪ್ಪ ಲಕ್ಷ್ಮೀಪತಿರಾಜು ಅವರ ಒತ್ತಾಯಕ್ಕೆ ಮಣಿದು ನಾಟಕದ ಕಂಪನಿ ಸೇರಿದರು.
ನರಸಿಂಹರಾಜು ಅವರ ಚಿಕ್ಕಪ್ಪ ಲಕ್ಷ್ಮೀಪತಿರಾಜು ಆಗ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾದ ಹೆಸರಾಂತ ನಟರಾಗಿದ್ದರು. ಅವರು ನಿರ್ವಹಿಸುತ್ತಿದ್ದ ಪಾತ್ರಗಳು ಜನಪ್ರಿಯತೆ ಗಳಿಸಿದ್ದವು. ಕಂಪನಿಯ ಮಾಲೀಕರೊಂದಿಗೆ ಉತ್ತಮ ಸಂಬಂಧವಿದ್ದ ಚಿಕ್ಕಪ್ಪ, ತಾವು ನಿರ್ವಹಿಸುವ ಪಾತ್ರಕ್ಕೆ ಪುತ್ರನ ಪಾತ್ರ ಮಾಡುವ ಬಾಲನಟನ ಅಗತ್ಯವನ್ನು ವಿವರಿಸಿ, ಒಬ್ಬ ಬಾಲನಟನನ್ನು ಕರೆತರುವುದಾಗಿ ತಿಳಿಸಿದರು. ಅದಕ್ಕೆ ನಾಟಕ ಕಂಪನಿಯ ಮಾಲೀಕರು ಒಪ್ಪಿದರು. ಆಗ ಲಕ್ಷ್ಮೀಪತಿರಾಜು ಅವರಿಗೆ ನೆನಪಾದದ್ದು ಚುರುಕು ಬುದ್ಧಿಯ ಅಣ್ಣನ ಮಗ ನರಸಿಂಹರಾಜು. ಅಣ್ಣ-ಅತ್ತಿಗೆಯನ್ನು ಕೇಳಿದರು. ವಯಸ್ಸಿಗೇ ನಾಟಕ ಕಂಪನಿಗೆ ಕಳುಹಿಸಲು ಯಾವ ತಂದೆ ತಾಯಿ ಒಪ್ಪುತ್ತಾರೆ? ಅದೂ ಸರ್ಕಾರಿ ನೌಕರಿಯಲ್ಲಿರುವವರು. ಅವರು ಒಪ್ಪದಿದ್ದಾಗ, ವಿದ್ಯಾವಂತನನ್ನಾಗಿ, ಜನಪ್ರಿಯ ನಟನನ್ನಾಗಿ ಮಾಡುವ ಜವಾಬ್ದಾರಿ ನನ್ನದು ಎಂಬ ಮಾತು ಕೊಟ್ಟು, ಮನವೊಲಿಸಿ ಬಾಲಕ ನರಸಿಂಹರಾಜುವನ್ನು ನಾಟಕದ ಕಂಪನಿಗೆ ಕರೆತಂದರು. ಅಷ್ಟೇ ಅಲ್ಲ, ಹೇಳಿದಂತೆ ಪುತ್ರನ ಪಾತ್ರ ಕೊಟ್ಟು ರಂಗಜಗತ್ತನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಹೆಜ್ಜೆ ಹಾಕಿದರು
ನಾಟಕದಲ್ಲಿ ಚಿಕ್ಕಪ್ಪ ಹಾಕುತ್ತಿದ್ದ ಪಾರ್ಟುಗಳನ್ನು, ಆಡುತ್ತಿದ್ದ ನಾಟಕಗಳನ್ನು ಬಾಲಕ ನರಸಿಂಹರಾಜು ಅಪಾರ ಆಸಕ್ತಿಯಿಂದ ಗಮನಿಸುತ್ತಿದ್ದರು. ನಾಟಕ ನೋಡುವಲ್ಲಿ ತನ್ಮಯತೆಯಿಂದ ತಲ್ಲೀನನಾಗುತ್ತಿದ್ದರು. ನೋಡಿದ್ದನ್ನು ಅಷ್ಟೇ ಆತ್ಮವಿಶ್ವಾಸದಿಂದ ಅನುಕರಣೆ ಮಾಡುತ್ತಿದ್ದರು. ಪುಟ್ಟ ಬಾಲಕನ ಬುದ್ಧಿಗೆ ಸಾಣೆ ಹಿಡಿಯುವಂತೆ ಚಿಕ್ಕಪ್ಪ ಲಕ್ಷ್ಮೀಪತಿರಾಜು, ಸಂಸ್ಕೃತ ಶ್ಲೋಕಗಳನ್ನು, ವೇದೋಪನಿಷತ್ತುಗಳನ್ನು, ಪುರಾಣದ ನೀತಿ ಕತೆಗಳನ್ನು ತಿಳಿಸಿಕೊಟ್ಟರು. ಬೆಳೆದಂತೆ ಬಾಲಕ ನರಸಿಂಹರಾಜು ಸಿ.ಬಿ. ಮಲ್ಲಪ್ಪನವರ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾದ ಭಾಗವಾದರು. ಬಾಲಕಲಾವಿದನಾಗಿ ರೂಪುಗೊಂಡರು. ಮುಖಕ್ಕೆ ಬಣ್ಣ ಹಚ್ಚಿದ ಬಾಲಕನಿಗೆ ನಟನೆಯೊಂದಿಗೆ ಓದಿನ, ಬದುಕಿನ ಪಾಠವೂ ಕರಗತವಾಯಿತು.
ರಂಗದ ಮೇಲೆ ಬಂದರೆ, ಜನ ನಗುತ್ತಿದ್ದರು
ಕಂಪನಿ ನಾಟಕದಲ್ಲಿ ಸಿಕ್ಕ ಪ್ರಹ್ಲಾದ, ಲೋಹಿತಾಶ್ವ, ಬಾಲಕೃಷ್ಣ, ಮಕರಂದ ಪಾತ್ರಗಳನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಿದ್ದ, ಕಲಿತ ನಂತರ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ರೀತಿಗೆ ನಾಟಕದ ಕಂಪನಿಯ ಮಾಲೀಕರಾದ ಮಲ್ಲಪ್ಪನವರು ಶಹಬ್ಬಾಶ್ ಗಿರಿ ಕೊಟ್ಟರು. ಅಷ್ಟೇ ಅಲ್ಲ, ನರಸಿಂಹರಾಜು ಅವರಿಗೆ ಕಂಪನಿಯ ನಾಟಕಗಳಲ್ಲಿ ಎಲ್ಲಾ ಥರದ ಪಾತ್ರಗಳನ್ನೂ ನೀಡಿ ಪ್ರೋತ್ಸಾಹಿಸಿದರು. ಹಾಸ್ಯಪಾತ್ರಕ್ಕೆ ಹೇಳಿ ಮಾಡಿಸಿದಂತಹ ಹುಬ್ಬಲ್ಲು, ಕಿಚಾಯಿಸುವ ಕಣ್ಣುಗಳು, ಕುಳ್ಳಗಿನ ಪೀಚು ಶರೀರವನ್ನು ಸಹಜವಾಗಿ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯಪಾತ್ರಗಳ ನಿರ್ವಹಣೆ ದೈವದತ್ತವಾಗಿಯೇ ದಕ್ಕಿತ್ತು. ರಂಗದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರ ನಗು ಮುಗಿಲು ಮುಟ್ಟುತ್ತಿತ್ತು.
ಮುಂದೆ ಬೆಳೆದಂತೆ, ತಮ್ಮ ಹದಿನಾರನೇ ವಯಸ್ಸಿನಲ್ಲಿಕರ್ನಾಟಕ ನಾಟಕ ಸಭಾಎಂಬ ಹೆಸರಿನ ಸ್ವಂತ ನಾಟಕದ ಕಂಪನಿ ತೆರೆದರು. ಮೊದ ಮೊದಲು ಗೋರಕುಂಬಾರ, ಹರಿಶ್ಚಂದ್ರ ಮುಂತಾದ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದವರು, ವಿಶ್ವಾಮಿತ್ರ, ರಾಮ, ರಾವಣ, ಭರತ, ಲಕ್ಷ್ಮಣರ ಪಾತ್ರಗಳನ್ನು ನಿರ್ವಹಿಸುತ್ತಿದ್ದವರು, ನಂತರ ಹಾಸ್ಯ ಪಾತ್ರಗಳತ್ತ ಮುಖ ಮಾಡಿದರು. ಅನುಭವದ ಕೊರತೆಯೋ, ಆರ್ಥಿಕ ಸಂಕಷ್ಟವೋ ನಾಟಕ ಕಂಪನಿಯ ನೊಗವನ್ನು ಎಳೆಯಲು ಶಕ್ತಿ ಸಾಲದೆ ಸ್ವಂತ ಕಂಪನಿಯನ್ನು ಮುಚ್ಚಿದರು. ಆಮೇಲೆ, ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಎಡತೊರೆ ಕಂಪನಿಯ ಆಹ್ವಾನವನ್ನು ಮನ್ನಿಸಿ, ಕಂಪನಿಯ ಭಾಗವಾದರು. ಅಲ್ಲಿ ಜನಪ್ರಿಯ ನಟನಾಗಿ ಹೊರಹೊಮ್ಮಿದರು. ಕಂಪನಿಯಬೇಡರ ಕಣ್ಣಪ್ಪನಾಟಕವಂತೂ ಸಾವಿರಾರು ಪ್ರದರ್ಶನಗಳನ್ನು ಕಂಡ ಜನಪ್ರಿಯ ನಾಟಕವಾಗಿತ್ತು. ಅದರಲ್ಲಿ ಕಾಶಿ ಪಾತ್ರ ನಿರ್ವಹಿಸುತ್ತಿದ್ದ ನರಸಿಂಹರಾಜು ಅವರ ಅಭಿನಯವಂತೂ ಕಲಾರಸಿಕರ ಮನದಲ್ಲಿ ಮನೆಮಾಡಿತು.
ಕಲಾವಿದರ ದುರದೃಷ್ಟವೋ ಏನೋ ಆರ್ಥಿಕವಾಗಿ ಸದೃಢವಾಗಿದ್ದ ಎಡತೊರೆ ಕಂಪನಿಯೂ ಸಂಕಷ್ಟಕ್ಕೆ ಸಿಲುಕಿ, ಕಲಾವಿದರನ್ನು ಸಾಕಲಾಗದೆ ಮುಚ್ಚಿಕೊಂಡಿತು. ಇದೇ ವೇಳೆಗೆ ಸರಿಯಾಗಿ ನರಸಿಂಹರಾಜುಗೆ ಶಾರದಮ್ಮನವರೊಂದಿಗೆ ಮದುವೆಯಾಗಿತ್ತು. ನರಸಿಂಹರಾಜು ಸಂಸಾರ ಬೀದಿಗೆ ಬಿದ್ದಿತ್ತು. ಆದರೆಬೇಡರ ಕಣ್ಣಪ್ಪನಾಟಕದ ಅರ್ಚಕನ ಪುತ್ರ ಕಾಶಿ ಪಾತ್ರ ಸೃಷ್ಟಿಸಿದ್ದ ಸಂಚಲನ ಗುಬ್ಬಿ ಕಂಪನಿಯ ವೀರಣ್ಣನವರ ಗಮನಕ್ಕೆ ಬಂದಿತ್ತು. ಪಾತ್ರದ ಜನಪ್ರಿಯತೆ ಮತ್ತು ಪಾತ್ರವನ್ನು ನಿರ್ವಹಿಸಿದ ನರಸಿಂಹರಾಜು ಅವರ ನಟನಾ ಕೌಶಲ್ಯಕ್ಕೆ ಬೆರಗಾಗಿದ್ದ ಗುಬ್ಬಿ ವೀರಣ್ಣನವರು, ತಮ್ಮ ಕಂಪನಿಗೆ ಬರುವಂತೆ ಆಹ್ವಾನಿಸಿದರು. ತಮ್ಮ ಕಂಪನಿಯ ಜನಪ್ರಿಯ ನಾಟಕಗಳಾದ ಸದಾರಮೆ, ಸಾಹುಕಾರ, ಅಡ್ಡದಾರಿ, ಧರ್ಮ ರತ್ನಾಕರ ನಾಟಕಗಳಲ್ಲಿ ಬಹುಮುಖ್ಯವಾದ ಪಾತ್ರಗಳನ್ನು ನೀಡಿ ಪ್ರೋತ್ಸಾಹಿಸಿದರು. ಅಲ್ಲದೆ ಲಕ್ಷ್ಮಿ ಎಂಬ ಸ್ತ್ರೀ ಪಾತ್ರ ಮಾಡಲು ಅನುವು ಮಾಡಿಕೊಟ್ಟರು. ಅವರ ನಟನೆಗೆ ಮನಸೋತು ಹಾಡಿ ಹೊಗಳಿದರು. ಹೀಗೆ ಎಲ್ಲಾ ರೀತಿ ಪಾತ್ರಗಳನ್ನು ಮಾಡುತ್ತಲೇ ಕರ್ನಾಟಕದ ಹೆಸರಾಂತ ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ, ಎಡತೊರೆಯ ಕಂಪನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತಾ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪನಿಯ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ ೨೭ ವರ್ಷಗಳನ್ನು ನರಸಿಂಹರಾಜು ಕಳೆದಿದ್ದರು. ಅಪಾರ ಅನುಭವವನ್ನು ಗಳಿಸಿದ್ದರು.

ಮಾಯಾಲೋಕಕ್ಕೆ ಪ್ರವೇಶ
ಅದೇ ಸಂದರ್ಭದಲ್ಲಿಬೇಡರಕಣ್ಣಪ್ಪನಾಟಕವನ್ನು ಚಲನಚಿತ್ರವನ್ನಾಗಿ ಬೆಳ್ಳಿತೆರೆಗೆ ತರುವ ಪ್ರಯತ್ನ ನಡೆಯುತ್ತಿತ್ತು. ಅಂದಿನ ದಿನಗಳಲ್ಲಿ ಮದರಾಸು ಚಲನಚಿತ್ರಗಳ ನಿರ್ಮಾಣದ ಕೇಂದ್ರವಾಗಿತ್ತು. ಎಚ್.ಎಲ್.ಎನ್. ಸಿಂಹ
ಬೇಡರ ಕಣ್ಣಪ್ಪಚಿತ್ರದ ನಿರ್ದೇಶಕರಾಗಿ ಆಯ್ಕೆಯಾದರು. ಗುಬ್ಬಿ ಕಂಪನಿಯಲ್ಲಿ ಜಿ.ವಿ. ಅಯ್ಯರ್, ಬಾಲಕೃಷ್ಣರ ಜೊತೆಗೆ ನಾಟಕದಲ್ಲಿ ಕಾಶಿ ಪಾತ್ರ ಮಾಡಿ ಜನಪ್ರಿಯತೆ ಗಳಿಸಿದ್ದ ನರಸಿಂಹರಾಜು ಅವರನ್ನೇ ಸಿನಿಮಾಕ್ಕೂ ಆಯ್ಕೆ ಮಾಡಿಕೊಳ್ಳಲಾಯಿತು. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿದ್ದ ರಾಜಕುಮಾರ್ ಅವರನ್ನು ನಾಯಕನಟನ ಪಾತ್ರಕ್ಕೆ ಆರಿಸಿಕೊಳ್ಳಲಾಯಿತು. ೧೯೫೪ ರಲ್ಲಿ ತೆರೆಕಂಡಬೇಡರಕಣ್ಣಪ್ಪಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತು. ಚಿತ್ರನಿರ್ಮಾಣಕ್ಕೆ ಧೈರ್ಯ ತುಂಬಿತು. ಇಲ್ಲಿಂದ ಪ್ರಾರಂಭಗೊಂಡ ನರಸಿಂಹರಾಜು ಅವರ ಚಿತ್ರಯಾನ, ಅವರು ಸಾಯುವ ಕಡೆ ದಿನದವರೆಗೂ ನಡೆದೇ ಇತ್ತು.
೧೯೫೪ ರಿಂದ ೧೯೭೯ ರವರೆಗಿನ ಅವಧಿಯಲ್ಲಿ ನರಸಿಂಹರಾಜು ಸುಮಾರು ೨೫೬ ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಭಿಜಾತ ಹಾಸ್ಯ ಪ್ರತಿಭೆಯನ್ನು ಕನ್ನಡಿಗರಿಗೆ ಉಣಬಡಿಸಿದ್ದರು, ಮಹಾನ್ ನಟನಾಗಿ ಮಾರ್ಪಾಡಾಗಿದ್ದರು. ೧೯೫೪ ರಿಂದ ೧೯೬೭ ರವರೆಗೆ, ೧೩ ವರ್ಷಗಳ ಅಂತರದಲ್ಲಿ ತಯಾರಾದ ಸುಮಾರು ೧೬೮ ಚಿತ್ರಗಳಲ್ಲಿ, ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನರಸಿಂಹರಾಜು ನಟಿಸಿದ್ದರು. ಚಿತ್ರಗಳೆಲ್ಲವೂ ಯಶಸ್ವಿಯಾಗಿದ್ದವು. ಕನ್ನಡ ಚಿತ್ರರಂಗದ ಕಪ್ಪು ಬಿಳುಪಿನ ಕಾಲವನ್ನು ನೆನೆದರೆ, ನರಸಿಂಹರಾಜು ಕಣ್ಮುಂದೆ ಕುಣಿಯುತ್ತಾರೆ. ಮೈ ಮನಗಳನ್ನು ಕುಣಿಸುತ್ತಾರೆ.
ಕುಣಿದರು, ಕುಣಿಸಿದರು
ಯಾರು ಯಾರು ನೀ ಯಾರು,
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಯಾರು ಬರರು
ಬಂದವರು ಬದುಕಲಾರ್ರು?”
-ಇದು ನರಸಿಂಹರಾಜು ಮತ್ತು ಎಂ.ಎನ್. ಲಕ್ಷ್ಮಿದೇವಿಯವರ ಜೋಡಿಗಾಗಿ ಕಣಗಾಲ್ ಪ್ರಭಾಕರಶಾಸ್ತ್ರಿಯವರು ರಚಿಸಿದ ಹಾಡು, ೧೯೫೭ ರಲ್ಲಿ ಬಿ.ಆರ್. ಪಂತುಲು ನಿರ್ಮಿಸಿ, ನಿರ್ದೇಶಿಸಿದರತ್ನಗಿರಿ ರಹಸ್ಯಚಿತ್ರದ್ದು. ಹಾಡೊಂದೇ ಅಲ್ಲ, ಇಂತಹ ನೂರಾರು ಹಾಡುಗಳಿಗೆ ಕುಣಿದಿದ್ದಾರೆ, ಪ್ರೇಕ್ಷಕರನ್ನು ಕುಣಿಸಿದ್ದಾರೆ. ಕಾಲದ ಕಪ್ಪು ಬಿಳುಪಿನ ಚಿತ್ರಗಳಲ್ಲಿ ನರಸಿಂಹರಾಜು ಅವರಿಗಾಗಿಯೇ ಹಾಡುಗಳು ರಚಿಸಲ್ಪಡುತ್ತಿದ್ದವು. ಅವರಿಗಾಗಿಯೇ ಹಾಸ್ಯದ ಟ್ರ್ಯಾಕ್ಗಳನ್ನು ವಿಶೇಷವಾಗಿ ರೂಪಿಸಲಾಗುತ್ತಿತ್ತು. ಕಾಲದ ಚಿತ್ರಗಳಲ್ಲಿ, ಚಿತ್ರಗಳ ಯಶಸ್ಸಿನಲ್ಲಿ ನರಸಿಂಹರಾಜು ಅವರ ಪಾಲು ಮಹತ್ವದ ಪಾತ್ರ ವಹಿಸಿತ್ತು. ಅದು ಗೊತ್ತಿದ್ದ ಪಂತುಲು, ಅವರ ಚಿತ್ರಗಳಲ್ಲಿ ನರಸಿಂಹರಾಜು ಶಾಶ್ವತ ನಗೆನಟರಾಗಿ ಇದ್ದೇ ಇರಬೇಕೆಂಬ ಅಲಿಖಿತ ಒಪ್ಪಂದವನ್ನು ಮಾಡಿಕೊಂಡಿದ್ದರು. ಹಾಗಾಗಿಯೇ ನರಸಿಂಹರಾಜು, ರಾಜಕುಮಾರ್ ಅವರೊಂದಿಗೆ ನಟಿಸಿದ ಚಿತ್ರಗಳು ಯಶಸ್ವಿ ಚಿತ್ರಗಳಾದವು, ಅವರ ಜೋಡಿ ಜನಪ್ರಿಯ ಜೋಡಿಯಾಗಿ ದಾಖಲೆ ಬರೆಯಿತು. ರಾಜಕುಮಾರ್ ಅಷ್ಟೇ ಅಲ್ಲ, ಉದಯಕುಮಾರ್, ಕಲ್ಯಾಣಕುಮಾರ್, ರಾಜೇಶ್, ಗಂಗಾಧರ್, ಉಮೇಶ್- ಎಲ್ಲರೊಂದಿಗೂ ನಟಿಸಿದ್ದಾರೆ. ಹಾಗೆಯೇ ಮುಂದುವರೆದು ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ನರಸಿಂಹರಾಜು ಅವರ ಚಿತ್ರಬದುಕಿನಲ್ಲಿ ೬೦ ದಶಕ ಸುವರ್ಣಯುಗವೆಂದೇ ಹೇಳಬೇಕು. ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಯಶಸ್ವಿ ಚಿತ್ರಗಳನ್ನು ನೀಡಿದ್ದು, ವೃತ್ತಿಬದುಕಿನ ಉತ್ತುಂಗ ತಲುಪಿದ್ದು ಆಗಲೇ.  
ಆಗಿನ ಕಾಲದಲ್ಲಿ, ಮದ್ರಾಸು ಚಿತ್ರ ತಯಾರಿಕೆಯ ಕೇಂದ್ರಸ್ಥಳವಾಗಿತ್ತು. ಕನ್ನಡ ಚಿತ್ರರಂಗ ದುಃಸ್ಥಿತಿಯಲ್ಲಿದ್ದಾಗ, ತಮಿಳು-ತೆಲುಗು ಚಿತ್ರಗಳ ಚಿತ್ರೀಕರಣವಾದ ನಂತರ, ಅದೇ ಸೆಟ್ ಗಳನ್ನು ಬಳಸಿಕೊಂಡು ರಾತ್ರಿ ವೇಳೆ ಚಿತ್ರೀಕರಣ ನಡೆಸಲಾಗುತ್ತಿತ್ತು. ಅಂತಹ ಸಮಯದಲ್ಲಿ ಕನ್ನಡದ ಕಲಾವಿದರಿಗೆ ಸಿಗುತ್ತಿದ್ದ ಸಂಭಾವನೆ ಬಹಳ ಕಡಿಮೆ ಮೊತ್ತವಾಗಿತ್ತು. ಆದರೆ ನರಸಿಂಹರಾಜು ವಿಷಯದಲ್ಲಿ ಅದು ಬೇರೆಯಾಗಿತ್ತು. ನರಸಿಂಹರಾಜು ಅವರಿಗೆ ಒಂದು ಚಿತ್ರಕ್ಕೆ ೫೦೦ ರೂಪಾಯಿಯಿಂದ ೧೫ ಸಾವಿರದವರೆಗೆ ಸಂಭಾವನೆ ಸಿಗುತ್ತಿತ್ತು. ಕೆಲವೊಂದು ಸಲ ನಾಯಕನಟನಿಗಿಂತ ಮೊದಲು ಹಾಸ್ಯನಟ ನರಸಿಂಹರಾಜು ಅವರನ್ನು ಬುಕ್ ಮಾಡಲಾಗುತ್ತಿತ್ತು. ಇಡೀ ಚಿತ್ರದ ಕತೆ, ಸಂಭಾಷಣೆಗೆ ಕೊಡುವಷ್ಟೇ ಆದ್ಯತೆಯನ್ನು ನರಸಿಂಹರಾಜು ಅವರಿಗೂ ಕೊಡಲಾಗುತ್ತಿತ್ತು. ನಾಯಕನಟ-ನಟಿಗೆ ಮೂರು ಹಾಡುಗಳಿದ್ದರೆ, ಹಾಸ್ಯನಟ ನರಸಿಂಹರಾಜುಗೂ ಮೂರು ಹಾಡುಗಳು ಕಡ್ಡಾಯವಾಗಿರುತ್ತಿದ್ದವು. ನರಸಿಂಹರಾಜು ಅವರಿಗೆ ಪಾಪಮ್ಮ, ಮೈನಾವತಿ, ರಮಾದೇವಿ, ಲಕ್ಷ್ಮಿದೇವಿ, ಕುಳ್ಳಿ ಜಯ ಅವರುಗಳು ಪರ್ಮನೆಂಟ್ ಜೋಡಿಯಾಗಿ ಚಿತ್ರದುದ್ದಕ್ಕೂ ಸಾಥ್ ನೀಡುತ್ತಿದ್ದರು. ಮತ್ತು ಜೋಡಿಗಳು ಜನಪ್ರಿಯ ಜೋಡಿಗಳಾಗಿ ಜನಮನದಲ್ಲಿ ಮನೆ ಮಾಡಿದ್ದವು. ಇನ್ನು ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಾದರೆ, ನರಸಿಂಹರಾಜು ಇಲ್ಲದ ಸಿನಿಮಾವನ್ನು ಆತ ವಿತರಕರು ಖರೀದಿಸಲು ಮುಂದೆ ಬರುತ್ತಿರಲಿಲ್ಲ. ಅದಕ್ಕಾಗಿ ಚಿತ್ರವೆಲ್ಲ ಮುಗಿದ ಮೇಲೆ ನರಸಿಂಹರಾಜು ಅವರನ್ನು ಹಾಕಿಕೊಂಡು ಪ್ರತ್ಯೇಕವಾಗಿ ಚಿತ್ರೀಕರಣ ಮಾಡಿ ಸೇರ್ಪಡೆಗೊಳಿಸಿದ ಉದಾಹರಣೆಗಳೂ ಉಂಟು.
ಇದು ಸಾಮಾನ್ಯ ಸಂಗತಿಯಲ್ಲ. ಒಬ್ಬ ಸಾಮಾನ್ಯ ಹಾಸ್ಯನಟನ ಅಸಾಮಾನ್ಯ ಸಾಧನೆ.  
ನರಸಿಂಹರಾಜು ನಟಿಸಿದ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದವು. ಆಯಾಯ ಕಾಲಘಟ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದವು. ಸಂದೇಶ ಸಾರುವ, ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ, ಅಭಿರುಚಿ, ಮನರಂಜನೆಯನ್ನು ಮುಖ್ಯವಾಗಿಟ್ಟುಕೊಂಡು ತಯಾರಿಸಿದ ಚಿತ್ರಗಳಾಗಿದ್ದವು. ಚಿತ್ರಗಳಲ್ಲಿ ನರಸಿಂಹರಾಜು ಅವರ ಶುದ್ಧ ಹಾಸ್ಯವಿರುತ್ತಿತ್ತು. ಮನೆ ಮಂದಿಯೆಲ್ಲ ಕೂತು ನೋಡುವಂತಹ ಚಿತ್ರಗಳಾಗಿದ್ದವು. ಅಂತಹ ಚಿತ್ರಗಳೆಂದರೆ ಸ್ಕೂಲ್ ಮಾಸ್ಟರ್, ಕಿತ್ತೂರು ಚೆನ್ನಮ್ಮ, ಲಗ್ನಪತ್ರಿಕೆ, ಸಂಧ್ಯಾರಾಗ, ರತ್ನಗಿರಿರಹಸ್ಯ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ್ಣ, ದೇವರು ಕೊಟ್ಟ ತಂಗಿ, ಗಂಗೆಗೌರಿ, ದುಡ್ಡೇ ದೊಡ್ಡಪ್ಪ, ಗಂಡೊಂದು ಹೆಣ್ಣಾರು, ಭೂಪತಿರಂಗ, ಭಾಗ್ಯದೇವತೆ, ಶ್ರೀಕೃಷ್ಣದೇವರಾಯ, ನ್ಯಾಯವೇ ದೇವರು, ಜೇಡರಬಲೆ, ಹಸಿರುತೋರಣ, ಬೇಡರಕಣ್ಣಪ್ಪ, ಸತ್ಯಹರಿಶ್ಚಂದ್ರ, ಗುಂಡಾಜೋಯಿಸ, ತೆನಾಲಿರಾಮ- ಹೆಸರು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಹೀಗೆ ಇನ್ನೂರೈವತ್ತಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳು, ಪಾತ್ರಗಳು ಚಿತ್ರ ರಸಿಕರ ಮನಗೆದ್ದಿವೆ. ತಾವು ನಟಿಸಿದ ಎಲ್ಲಾ ಚಿತ್ರಗಳಲ್ಲೂ ಆಯಾ ಪಾತ್ರಗಳಿಗೆ ಜೀವತುಂಬಿ ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ ನರಸಿಂಹರಾಜು ಎಂದಾಕ್ಷಣ ಕಿರುನಗೆಯೊಂದನ್ನು ಮೂಡಿಸುವ ನಗೆರಾಜರಾಗಿ ಅಜರಾಮರರಾಗಿದ್ದಾರೆ.
ಕನ್ನಡದ ಚಾಪ್ಲಿನ್
ಚಾರ್ಲಿ ಚಾಪ್ಲಿನ್ ವಿಶ್ವವನ್ನೇ ನಗಿಸಿದ ನಟ. ಕುಳ್ಳಗೆ, ತೆಳ್ಳಗಿದ್ದು ತನ್ನನ್ನೇ ತಾವು ಗೇಲಿ ಮಾಡಿಕೊಂಡು ಪ್ರೇಕ್ಷಕರನ್ನು ನಗಿಸುತ್ತಿದ್ದ. ಹೆಚ್ಚೂಕಡಿಮೆ ಹೀಗೆಯೇ ಇದ್ದ ನಮ್ಮ ಕನ್ನಡದ ನರಸಿಂಹರಾಜು ಕೂಡ ಅವರಂತೆಯೇ ಪ್ರೇಕ್ಷಕರನ್ನು ನಗಿಸಿದ್ದಾರೆ. ಚಾಪ್ಲಿನ್ ತನ್ನ ಐದನೇ ವರ್ಷಕ್ಕೆ ಬಣ್ಣ ಹಚ್ಚಿ ನಟಿಸಲು ಪ್ರಾರಂಭಿಸಿದರೆ, ನರಸಿಂಹರಾಜು ಕೂಡ ತಮ್ಮ ನಾಲ್ಕನೇ ವಯಸ್ಸಿಗೇ ಬಣ್ಣ ಹಚ್ಚಿ ರಂಗಭೂಮಿಯಲ್ಲಿ ನಟಿಸಲು ಶುರು ಮಾಡಿದ್ದರು. ಆತ ತನ್ನ ಹದಿಮೂರನೇ ವಯಸ್ಸಿನಲ್ಲಿ ಓದಿಗೆ ಗುಡ್ ಬೈ ಹೇಳಿದರೆ, ನರಸಿಂಹರಾಜು ಶಾಲೆಯ ಮೆಟ್ಟಿಲನ್ನೇ ಹತ್ತಲಿಲ್ಲ. ಚಾಪ್ಲಿನ್ ೬೭ ವರ್ಷಗಳ ಕಾಲ ನಟಿಸಿದರೆ, ನರಸಿಂಹರಾಜು ನಟಿಸಿದ್ದು, ನಗಿಸಿದ್ದು ಸುಮಾರು ಐವತ್ತು ವರ್ಷಗಳ ಕಾಲ. ಬದುಕಿದ್ದರೆ ಚಾಪ್ಲಿನ್ನನ್ನು ಮೀರಿಸುತ್ತಿದ್ದರೋ ಏನೋ.
ಹಾಸ್ಯನಟ ಚಾಪ್ಲಿನ್ ವಿಶ್ವವಿಖ್ಯಾತರಾದರೆ, ಹಾಸ್ಯನಟ ನರಸಿಂಹರಾಜು ಕನ್ನಡಿಗರ ಚಾಪ್ಲಿನ್ ಆಗಿ ಮೆರೆದರು. ಹಾಗೆಯೇ ಹಾಲಿವುಡ್ ನಲ್ಲಿ ಲಾರೆಲ್-ಹಾರ್ಡಿಯಂತೆ ಕನ್ನಡದಲ್ಲೂ ಬಾಲಣ್ಣ-ನರಸಿಂಹರಾಜು ಜೋಡಿ ಚಿತ್ರರಸಿಕರನ್ನು ಮೋಡಿ ಮಾಡಿತ್ತು. ನರಸಿಂಹರಾಜು ಅವರ ಅಭಿನಯವನ್ನು ಹಲವು ಭಾಷೆಯ ಹಾಸ್ಯನಟರು ಅನುಕರಣೆ ಮಾಡಲು ಪ್ರಯತ್ನಿಸಿ ಸೋತಿದ್ದುಂಟು. ಹಾಗೆಯೇ ತಮಿಳಿನ ತಾಯ್ ನಾಗೇಶ್, ತೆಲುಗಿನ ಪದ್ಮನಾಭ ಕೂಡ ಮದ್ರಾಸಿನಲ್ಲಿರುವಷ್ಟು ದಿನವೂ ನರಸಿಂಹರಾಜು ಅವರ ಮನೆಗೆ ಬಂದು, ಅವರಿಂದ ಅಭಿನಯದ ಮಟ್ಟುಗಳನ್ನು ಕೇಳಿ ಕಲಿಯುತ್ತಿದ್ದರು ಎಂದು ಪತ್ನಿ ಶಾರದಮ್ಮನವರು ನೆನಪಿಸಿಕೊಳ್ಳುವುದುಂಟು.
ಹಾಸ್ಯವೆಂದರೆ ಸಾಮಾನ್ಯವಲ್ಲ
ಮತ್ತೊಬ್ಬರನ್ನು ನಗಿಸುವ ಕ್ಲಿಷ್ಟವಾದ ಕಲೆ ಹಾಸ್ಯ. ವಿಶೇಷ ಪ್ರತಿಭೆಯುಳ್ಳ ನಟರು ಕನ್ನಡ ಚಿತ್ರರಂಗದಲ್ಲಿ ಕೆಲವರಲ್ಲಿ ಕೆಲವೇ ಜನ. ಅವರಲ್ಲಿ ನರಸಿಂಹರಾಜು ಅವರೂ ಒಬ್ಬರು ಮತ್ತು ಅಗ್ರಗಣ್ಯರು. ಹಾಗೆಯೇ ಹಾಸ್ಯವೂ ಕೂಡ. ಹಾಸ್ಯವನ್ನು ಮೂರು ಬಗೆಯಾಗಿ ವಿಂಗಡಿಸಬಹುದು. ಅಪಹಾಸ್ಯ, ತಿಳಿಹಾಸ್ಯ ಮತ್ತು ವಿಡಂಬನೆ.
ಅಪಹಾಸ್ಯದ ಸ್ವರೂಪ ಸಾಮಾನ್ಯವಾಗಿ ಅನ್ಯರನ್ನು ಅಣಕಿಸುವ, ಮತ್ತೊಬ್ಬರ ಅಂಗಹೀನತೆಯನ್ನೋ, ಇಲ್ಲ ಬುದ್ಧಿಮಾಂದ್ಯವನ್ನೋ ಬಳಸಿಕೊಂಡು ಸೃಷ್ಟಿಯಾಗುವಂಥಾದ್ದು. ತಿಳಿಹಾಸ್ಯವೆನ್ನುವುದು ಮನರಂಜನೆ, ಮನೋಲ್ಲಾಸಗಳ ಪ್ರಕ್ರಿಯೆ. ಇಲ್ಲಿ ವಿಚಾರ ಮುಖ್ಯವಲ್ಲ, ನಗುವಷ್ಟೇ. ನಕ್ಕು ಮನಸ್ಸನ್ನು ಹಗುರಾಗಿಸಿಕೊಳ್ಳುವುದಷ್ಟಕ್ಕೇ ಸೀಮಿತವಾದುದು.
ವಿಡಂಬನೆಯೇ ಹಾಸ್ಯದ ಅತ್ಯುತ್ತಮ ಹಾಗೂ ಅತ್ಯಗತ್ಯವಾದ ಪ್ರಾಕಾರ. ಇದು ಎಲ್ಲರೂ ಉಪಯೋಗಿಸುವ ಪ್ರಾಕಾರ. ಗಹನವಾದ, ಉಪಯುಕ್ತವಾದ ಮತ್ತು ವಿವೇಕಪೂರ್ಣ ವಿಚಾರಗಳನ್ನು ಪ್ರೇಕ್ಷಕರಿಗೆ ಕಿರಿಕಿರಿಯಾಗದ ರೀತಿಯಲ್ಲಿ ಮನರಂಜನೆಯ ಮೂಲಕ ದಾಟಿಸುವ ವಿಧಾನ. ಮನರಂಜನೆಗಾಗಿಯೇ ದುಡ್ಡು ತೆತ್ತು ಬರುವ ಪ್ರೇಕ್ಷಕರಿಗೆ ಬೋಧನೆಯ ಜೊತೆಗೆ ಬುದ್ಧಿಗೆ ಸಾಣೆ ಹಿಡಿಯುವ ಸಾಧನವಾಗಿಯೂ ಬಳಕೆಯಾಗಬೇಕೆಂಬುದೇ ಇದರ ಮುಖ್ಯ ಉದ್ದೇಶವಾಗಿರುತ್ತದೆ
ಇಂತಹ ಹಾಸ್ಯಕ್ಕೆ ನರಸಿಂಹರಾಜು ಅತ್ಯುತ್ತಮ ಉದಾಹರಣೆ ಎಂದು ಮಾಸ್ಟರ್ ಹಿರಣ್ಣಯ್ಯನವರು ಒಂದು ಕಡೆ ದಾಖಲಿಸಿರುವುದುಂಟು. ನರಸಿಂಹರಾಜು ಅವರಿಗೆ ರಂಗಭೂಮಿಯಲ್ಲಿ ಮತ್ತು ಚಲನಚಿತ್ರಗಳಲ್ಲಿ ಇಂಥದೇ ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದವು. ಉದಾಹರಣೆಗೆ ತೆನಾಲಿರಾಮ, ಬೀರ್ಬಲ್ ಪಾತ್ರಗಳನ್ನು ನೆನೆಯಬಹುದು. ಈಗಿನ ತಲೆಮಾರಿನ ಜನಕ್ಕೆ ತೆನಾಲಿರಾಮ ಹೇಗಿರಬಹುದು ಎಂಬ ಕಲ್ಪನೆ ಬಂದಾಗ ಕಣ್ಮುಂದೆ ನಿಲ್ಲುವ ವ್ಯಕ್ತಿ ಹುಟ್ಟು ವಿನೋದಗಾರ ನರಸಿಂಹರಾಜು ಎನ್ನುವುದರಲ್ಲಿ ಎರಡು ಮಾತಿಲ್ಲ
ಸಭ್ಯ ನಡವಳಿಕೆಯ, ಹಸನ್ಮುಖಿ ಹಾಸ್ಯ ಎಲ್ಲರಿಗೂ ಸಾಧ್ಯವಿಲ್ಲ. ಹಾಸ್ಯವೆಂದರೆ ಅಸಹ್ಯ ನಡವಳಿಕೆಯಲ್ಲ, ಹಾಸ್ಯ ಹೊರಹೊಮ್ಮಿಸಲು ಅಸಹ್ಯ ಮಾತುಗಳು ಬೇಕಿಲ್ಲ ಎಂದು ಸಾಬೀತುಪಡಿಸಿ ಸುಮಾರು ಐವತ್ತು ವರ್ಷಗಳ ಕಾಲ ಚಿತ್ರರಸಿಕರ ಮನ ಮನರಂಜಿಸಿದ ನರಸಿಂಹರಾಜು ಅವರ ನಗಿಸುವ ಕಲೆ ಇಂದಿನ ಹಾಗೂ ಮುಂದಿನ ಕಾಲಕ್ಕೂ ಮಾದರಿಯಾಗಿ ನಿಲ್ಲುವಂಥಾದ್ದು.
ಎಲ್ಲದರಲ್ಲೂ ಮೊದಲಿಗರು

ನರಸಿಂಹರಾಜು ಎಲ್ಲದರಲ್ಲೂ ಮೊದಲಿಗರು. ದೂರದ ತಮಿಳುನಾಡಿನ ಮದ್ರಾಸಿನಲ್ಲಿ ನೆಲೆ ನಿಲ್ಲುವುದೇ ಕಷ್ಟವಾಗಿದ್ದ ದಿನಗಳಲ್ಲಿ ಮೊದಲಿಗೆ ಮನೆ ಮಾಡಿದ್ದು, ಕಾಲಕ್ಕೆ ಐಷಾರಾಮಿ ಜೀವನದ ಸಂಕೇತವೆಂದೇ ಭಾವಿಸಿದ್ದ ಕಾರ್ ಖರೀದಿಸಿದ್ದು, ಮನೆಯಲ್ಲಿ ಫೋನ್ ಸೌಲಭ್ಯವಿದ್ದದ್ದು, ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಹಾಸ್ಯ ನಟ ಎಂದು ಹೆಸರಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ನೂರು ಚಿತ್ರಗಳ ಗಡಿ ದಾಟಿದ್ದು, ಕನ್ನಡದ ಕಲಾವಿದರ ಪೈಕಿ ಮೊದಲು ತೆರಿಗೆ ಕಟ್ಟಿದ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ತಮ್ಮ ವಾರಿಗೆಯ ನಟರ ಪೈಕಿ ಮೊದಲು ಮಗಳ ಮದುವೆ ಮಾಡಿದ್ದು, ಹಾಗೆಯೇ ಅವರ ವಾರಿಗೆಯವರು ಇನ್ನೂ ಗಟ್ಟಿಮುಟ್ಟಾಗಿದ್ದ ಕಾಲದಲ್ಲಿಯೇ ಎಲ್ಲರಿಗಿಂತ ಮುಂಚೆ ಇಹಲೋಕ ತ್ಯಜಿಸಿದ್ದು- ಎಲ್ಲದರಲ್ಲೂ ಮೊದಲಿಗರಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿಹೋಗಿದ್ದಾರೆ.
(ನರಸಿಂಹರಾಜು ಹುಟ್ಟಿದ್ದು ಜುಲೈ 24,1923, ಇಹಲೋಕ ತ್ಯಜಿಸಿದ್ದು ಜುಲೈ 21,1979)

Tuesday, July 22, 2014

ಸದನದ ಸಾಕ್ಷಿಪ್ರಜ್ಞೆ ರಮೇಶ್‌ಕುಮಾರ್‌

ಕೆ.ಆರ್‌. ರಮೇಶ್‌ಕುಮಾರ್‌
‘‘ಅತ್ಯಾಚಾರ ಪ್ರಕರಣದಿಂದ ತುಂಬಾ ನೋವಾಗಿದೆ. ನಮ್ಮ ಮನೆಯ ಮಗಳಿಗೆ ಹೀಗಾಗಿದ್ದರೆ ಆಘಾತ ಹೇಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳಿ. ಇದರಲ್ಲಿ ರಾಜಕೀಯ ಬೇಡ. ಎಲ್ಲ ಸರಕಾರದಲ್ಲೂ ಪೊಲೀಸ್‌ ವರ್ಗಾವಣೆ ಎಂಬುದು ಕಾಸ್ಟ್ ಅಂಡ್‌ ಕ್ಯಾಷ್ ಆಧರಿಸುತ್ತದೆ. ರಾಜ್ಯ ಉಳಿಯಬೇಕು, ಮಾನ ಮರ್ಯಾದೆಯಿಂದ ನಮ್ಮ ಹೆಣ್ಣುಮಕಕ್ಳು, ನಾವೆಲ್ಲ ಬದುಕಬೇಕು ಎಂದಾದರೆ ಅಲ್ಲಿ ಎಲ್ಲೀ ಎನ್‌ಕೌಂಟರ್‌ ಮಾಡೋ ಬದಲು, ಇಲ್ಲಿ ಎನ್‌ಕೌಂಟರ್‌ ಮಾಡ್ರಿ. ಅದು ನಾಳೆಯಿಂದಲೇ ಶುರುವಾಗಲಿ...’’
ಹೀಗೆಂದವರು 64 ವರ್ಷದ ಕೆ.ಆರ್‌. ರಮೇಶ್‌ಕುಮಾರ್‌, ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕರು.
ಫ್ರೇಸರ್‌ ಟೌನ್‌ನಲ್ಲಿ ನಡೆದ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಸದನದಲ್ಲಿ ಯಥಾಪ್ರಕಾರದ ಸಮಿತಿ ರಚನೆ, ತನಿಖೆ, ವರದಿ, ಕಾನೂನು ಕ್ರಮ, ಕಠಿಣ ಶಿಕ್ಷೆಗಳ ಒಣಮಾತಿನ ಸಮರ ನಡೆಯುತ್ತಿದ್ದಾಗ ಎದ್ದು ನಿಂತ ರಮೇಶ್‌ಕುಮಾರ್‌, ಗುಂಡು ಹೊಡೆದಂತೆ ಮಾತನಾಡಿದ್ದರು. ಅವರ ನಿಷ್ಠುರ ಮಾತಿಗೆ ಆಡಳಿತ ಪಕ್ಷದವರು ಬೆಚ್ಚಿ ಬಿದ್ದಿದ್ದರು, ವಿರೋಧ ಪಕ್ಷದವರು ನಾಚಿ ತಲೆ ತಗ್ಗಿಸಿದ್ದರು. ಸದನವೆಂಬ ನ್ಯಾಯದೇಗುಲದಲ್ಲಿ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ನಿರ್ವಹಿಸಬೇಕಾದ ಪಾತ್ರವನ್ನು ತಮ್ಮ ಖಡಕ್‌ ಮಾತು ಮತ್ತು ನಿಷ್ಪಕ್ಷಪಾತ ನಿಲುವುಗಳ ಮೂಲಕ ಮನದಟ್ಟು ಮಾಡಿಸಿದ್ದರು, ಮಾದರಿಯಾಗಿದ್ದರು.
ರಮೇಶ್‌ಕುಮಾರ್‌ ಇರುವುದೇ ಹಾಗೆ. ಆಡಳಿತ ಪಕ್ಷದೊಳಗಿದ್ದೇ ಪ್ರತಿಪಕ್ಷದಂತೆ ಕೆಲಸ ಮಾಡುವ ಮೌಲ್ಯಾಧಾರಿತ ರಾಜಕಾರಣಿ. ಪ್ರಜಾಪ್ರಭುತ್ವದ ಆಶಯಗಳನ್ನು ಪಾಲಿಸಿ ಪೋಷಿಸುವ; ತತ್ವ, ಸಿದ್ಧಾಂತಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡುವ ರಾಜಕೀಯ ತಜ್ಞ.
ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಾಡಿನ ಜನರಲ್ಲಿ ಆತಂಕ, ಹತಾಶಭಾವನೆ ಮೂಡಿ ಎಂತಹ ಆಕ್ರೋಶ ವ್ಯಕ್ತವಾಗುತ್ತಿದೆಯೋ ಅದನ್ನೇ ಸದನದಲ್ಲಿ ರಮೇಶ್‌ಕುಮಾರ್‌ ವ್ಯಕ್ತಪಡಿಸಿದ್ದಾರೆ. ಅಂದರೆ ನಾಡಿನ ಜನರ ಒಡಲಾಳದ ಉರಿ ರಮೇಶ್‌ಕುಮಾರ್‌ ಬಾಯಲ್ಲಿ ಬಂದಿದೆ. ರಮೇಶ್‌ಕುಮಾರ್‌ ನಮ್ಮೆಲ್ಲರ ಸಾಕ್ಷಿಪ್ರಜ್ಞೆಯಂತೆ ವರ್ತಿಸಿ ಈ ನಾಡಿನ ಘನತೆ, ಗೌರವಗಳನ್ನು ಕಾಪಾಡಿದ್ದಾರೆ, ಕಾಪಾಡುತ್ತಿದ್ದಾರೆ.
ಸದನದಲ್ಲಿ ಅವರು ಪ್ರಸ್ತಾಪಿಸಿದ ಮತ್ತೊಂದು ಮಹತ್ವದ ವಿಷಯವೆಂದರೆ, ಪೊಲೀಸ್‌ ವರ್ಗಾವಣೆಯಲ್ಲಿ ನಡೆಯುವ ಕ್ಯಾಷ್‌ ಅಂಡ್‌ ಕಾಸ್ಟ್. ಪ್ರತಿಯೊಬ್ಬ ಶಾಸಕನು ಚುನಾಯಿತನಾದ ನಂತರ ಮಾಡುವ ಮೊದಲ ಕೆಲಸ, ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣೆಗೆ ತನಗೆ ಬೇಕಾದ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿಕೊಳ್ಳುವುದು. ಇಲ್ಲಿ ಕೆಲವು ಕಡೆ ಜಾತಿ, ಹಲವು ಕಡೆ ಹಣ ಕೆಲಸ ಮಾಡುತ್ತದೆ. ಹಣ ಕೊಟ್ಟ ಅಧಿಕಾರಿ ಅಂದಾದುಂದಿ ಕೆಲಸಗಳಲ್ಲಿ ಮುಳುಗೇಳುತ್ತಾನೆ. ಜಾತಿಯ ವಶೀಲಿಬಾಜಿಯಿಂದ ಬಂದ ಅಧಿಕಾರಿ ಶಾಸಕನ ಅಡಿಯಾಳಾಗುತ್ತಾನೆ. ಎರಡೂ ಸಂದರ್ಭಗಳಲ್ಲಿ ಸಾಮಾನ್ಯ ಜನ ನಲುಗಿಹೋಗುತ್ತಾರೆ. ಈ ಅನೈತಿಕ ಸಂಬಂಧಕ್ಕೆ ಕಡಿವಾಣ ಬೀಳಬೇಕು ಎನ್ನುವುದು ರಮೇಶ್‌ಕುಮಾರ್‌ ಅವರ ದಿಟ್ಟ ನಿಲುವು. ಇದು ಇವತ್ತಿನ ಸಂದರ್ಭದಲ್ಲಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೆ ಗೊತ್ತಿದ್ದರೂ, ಕಹಿಸತ್ಯವನ್ನು ಹೇಳಲು ಹಿಂಜರಿಯದವರು, ಹೇಳಿ ನಿಷ್ಠುರವಾಗುವವರು ಈ ರಮೇಶ್‌ಕುಮಾರ್‌.
ಇಂತಹ ರಮೇಶ್‌ಕುಮಾರ್‌ ಸಂಸದೀಯ ವ್ಯವಹಾರಗಳ ಬಗ್ಗೆ, ಶಾಸಕರ ಹಕ್ಕು ಬಾಧ್ಯತೆಗಳ ಬಗ್ಗೆ, ಕಾನೂನು ರೀತಿ-ನೀತಿಗಳ ಬಗ್ಗೆ ಕರಾರುವಾಕ್ಕಾಗಿ ಮಾತನಾಡಬಲ್ಲ ಮುತ್ಸದ್ದಿ. ಈ ಮುಂಗಾರು ಅಧಿವೇಶನ ಶುರುವಾದ ದಿನದಿಂದ ಇಲ್ಲಿಯವರೆಗೆ, ರಾಜ್ಯದ ಜನತೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಪರಿಹಾರೋಪಾಯಗಳ ಬಗ್ಗೆ ತರ್ಕಬದ್ಧವಾಗಿ ಚರ್ಚಿಸಿದ್ದಾರೆ. ತಮ್ಮನ್ನು ತಾವೇ ಆತ್ಮವಿಮರ್ಶೆಗೆ ಒಡ್ಡಿಕೊಂಡಿದ್ದಾರೆ. ಅಂತಹ ಕೆಲವು ಖಡಕ್‌ ಮಾತುಗಳು ಇಲ್ಲಿವೆ ನೋಡಿ...
‘ಚುನಾವಣಾ ಸುಧಾರಣೆಯ ಬಗ್ಗೆ ಯಾವುದೇ ಕಾಯಿದೆ ಬೇಕಿಲ್ಲ. ಅಧಿಕಾರದಲ್ಲಿರುವ ಎಲ್ಲರಿಗೂ ಈಗಿರುವ ವ್ಯವಸ್ಥೆಯೇ ಬೇಕಾಗಿದೆ’
‘ಭ್ರಷ್ಟಾಚಾರ ಮಾಡಿ ಕೋಟ್ಯಂತರ ಹಣ ಲೂಟಿ ಮಾಡಿ ತಾರಾ ಹೋಟೆಲ್‌ಗಳಲ್ಲಿ ವೈಭವದ ಮದುವೆಗಳನ್ನು ಮಾಡುತ್ತಾರೆ. ಅಂಥ ಆಡಂಬರದ ಮದುವೆಗಳಿಗೆ ಹೋಗುವುದಿಲ್ಲ ಎಂದು ಸದನದ ಎಲ್ಲ ಶಾಸಕರು ತೀರ್ಮಾನ ತೆಗೆದುಕೊಳ್ಳಬೇಕು’
‘ವಿಜಯಾನಂದ ಕಾಶಪ್ಪನವರ್‌ ನಡವಳಿಕೆ ಗೌರವ ತರುವಂಥದ್ದಲ್ಲ. ಇಲ್ಲಿರುವ ಬಹುತೇಕರು ಇಂತಹದನ್ನೇ ಮಾಡಿದ್ದಾರೆ. ಸಿಕ್ಕಿಹಾಕಿಕೊಂಡಿಲ್ಲ ಅಷ್ಟೆ. ಆ ಅವಿವೇಕಿಗೆ ಗೊತ್ತಾಗಿಲ್ಲ, ಸಿಕ್ಕಿಹಾಕಿಕೊಂಡಿದ್ದಾನೆ’
‘ಅಕ್ರಮ ಮರಳು ದಂಧೆಯಲ್ಲಿ ರಾಜಕಾರಣಿಗಳು ಮತ್ತವರ ಮಕ್ಕಳು ಇರಬಹುದು. ನಮಗೆ ಗೊತ್ತಿಲ್ಲದೆ ನಮ್ಮ ಮಕ್ಕಳು ಅಂತಹ ಕೆಲಸ ಮಾಡುತ್ತಿದ್ದರೆ ಹಾಗೆ ಮಾಡಬೇಡ ಎಂದು ಬುದ್ಧಿ ಹೇಳಬೇಕಾಗುತ್ತದೆ’
‘ನಾನು ಮೊದಲ ಚುನಾವಣೆ ಎದುರಿಸಿದಾಗ ಕೇವಲ ಮೂವತ್ತೈದು ಸಾವಿರ ಹಣ ಖರ್ಚು ಮಾಡಿದ್ದೆ. ಆದರೆ ಈಗ 3.5 ಕೋಟಿ ಖರ್ಚು ಮಾಡುವ ಪರಿಸ್ಥಿತಿ ಬಂದಿದೆ.’
ಹೀಗೆ ನೇರವಾಗಿ, ನಿಷ್ಠುರವಾಗಿ ಮಾತಾಡಿ ತಮ್ಮನ್ನು ತಾವು ಆತ್ಮವಿಮರ್ಶೆಗೊಳಪಡಿಸಿಕೊಳ್ಳುತ್ತಲೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಶಾಸಕರು ಮತ್ತು ಮಂತ್ರಿಗಳಿಗೆ ಮುಜುಗರವನ್ನುಂಟುಮಾಡಿದ್ದಾರೆ. ಹಾಗೆಯೇ ಸದನ ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಂಡ ಮುತ್ಸದ್ದಿಯಾಗಿದ್ದಾರೆ.
ಇಂತಹ ರಮೇಶ್‌ಕುಮರ್‌ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು 1978 ರಲ್ಲಿ. ಆಗಿನ್ನು ಅವರಿಗೆ 25 ವರ್ಷಗಳು. ಬಿಸಿರಕ್ತದ ಯುವ ನ್ಯಾಯವಾದಿಯನ್ನು ರಾಜಕೀಯಕ್ಕೆ ಕರೆತಂದವರು ಹಿಂದುಳಿದವರ ಆಶಾಕಿರಣ ಎಂದೇ ಹೆಸರಾದ ದೇವರಾಜ ಅರಸು. ಅರಸು ಅವರ ತತ್ವನಿಷ್ಠ ರಾಜಕಾರಣವನ್ನು ಬಹಳ ಹತ್ತಿರದಿಂದ ಕಂಡ ರಮೇಶ್‌ಕುಮಾರ್‌, ಆ ಕಾಲಕ್ಕೇ ಅರಸು ಗರಡಿಯ ಪುಟ್ಟ ಪೈಲ್ವಾನ. 1978 ರ ಮೊದಲ ಚುನಾವಣೆಯಲ್ಲಿಯೇ ಶಾಸಕರಾಗಿ ಆಯ್ಕೆಯಾದ ರಮೇಶ್‌ಕುಮಾರ್‌ ಅವರಿಗೆ, ಹಿರಿಯ ಮಾನವಂತ ರಾಜಕಾರಣಿ ಕೆ.ಎಚ್‌. ರಂಗನಾಥ್‌, ರಾಜಕೀಯವಾಗಿ ಭಾಷೆ, ನಡತೆಯನ್ನು ತಿದ್ದಿತೀಡಿ ಬೆಳೆಸಿದರು. ಆ ನಂತರ ಬಸವಲಿಂಗಪ್ಪ ಮತ್ತು ಕೆ.ಎಚ್‌. ಪಾಟೀಲರ ಮಾರ್ಗದರ್ಶನವೂ ದೊರಕಿತು.
1978 ರಿಂದ 2013 ರವರೆಗೆ, 35 ವರ್ಷಗಳ ಕಾಲ ರಾಜಕಾರಣ ಮಾಡಿರುವ ರಮೇಶ್‌ಕುಮಾರ್‌ ಐದು ಬಾರಿ ಶಾಸಕರಾಗಿ ಗೆದ್ದಿದ್ದಾರೆ. ನಾಲ್ಕು ಸಲ ಸೋತಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಒಂದೊಂದು ಪಕ್ಷದಿಂದ, ಭಿನ್ನ ಗುರುತಿನ ಮೇಲೆ ಚುನಾವಣೆಯನ್ನು ಎದುರಿಸಿದ್ದಾರೆ. ಬ್ರಾಹ್ಮಣರಾಗಿ ಹುಟ್ಟಿದರೂ, ಜಾತಿಯನ್ನ್ನು ಮರೆತು, ಎಲ್ಲ ಜಾತಿ ಜನಾಂಗಗಳ ಜನರಿಗೂ ಹತ್ತಿರವಾಗಿದ್ದಾರೆ. ಹಾಗಂತ ರಮೇಶ್‌ಕುಮಾರ್‌ ಸತ್ಯ ಹರಿಶ್ಚಂದ್ರರೇನಲ್ಲ. ಆದರೆ ಸಹಿಸಬಲ್ಲ ಸೈಜಿನ ಅವಘಡಗಳನ್ನು ಮಾಡಿ, ಅದಕ್ಕೂ ಸಮರ್ಥನೀಯ ಕಾರಣಗಳನ್ನು ಕೊಟ್ಟು ಮನಗೆಲ್ಲಬಲ್ಲ ಆಸಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅರಸು ಅವರ ರಾಜಕೀಯ ಗರಡಿಯಲ್ಲಿ ಪಳಗಿದ ರಮೇಶ್‌ಕುಮಾರ್‌ರಿಗೆ, ಕೆ.ಎಚ್‌.ರಂಗನಾಥ್‌, ಬಿ.ಬಸವಲಿಂಗಪ್ಪ, ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡ, ಜೆ.ಎಚ್‌. ಪಟೇಲ್‌ರಂತಹ ಮಹಾನ್‌ ನಾಯಕರೊಂದಿಗೆ ಒಡನಾಡಿದ ಅಪಾರ ಅನುಭವವಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ರಮೇಶ್‌ಕುಮಾರ್‌ ಇಲ್ಲಿಯವರೆಗೆ ಐದು ಬಾರಿ ಗೆದ್ದು ಶಾಸಕರಾಗಿದ್ದರೂ, 1994 ರಲ್ಲಿ ವಿಧಾನಸಭೆಯ ಸ್ಪೀಕರ್‌ ಆದದ್ದನ್ನು ಬಿಟ್ಟರೆ, ಮಂತ್ರಿಯಾಗುವ ಯೋಗ ಬಂದಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ‘ನನ್ನನ್ನು ರಾಜಕೀಯಕ್ಕೆ ಕರೆತಂದವರು, ದಾರಿ ತೋರಿದವರು, ಬೆಳೆಸಿದವರು ಮಹಾನ್‌ ಮಾನವತಾವಾದಿಗಳು. ಅವರ ಆಶಯಕ್ಕೆ ತಕ್ಕಂತೆ ಬದುಕುತ್ತಿದ್ದೇನೆ. ಅವಕಾಶಗಳು ಹುಡುಕಿಕೊಂಡು ಬರಬೇಕೇ ಹೊರತು, ನಾನಾಗಿ ಹೋಗಿ ನಡುಬಗ್ಗಿಸಿ ನಿಲ್ಲುವ, ಕೇಳುವ ಜಾಯಮಾನ ನನ್ನದಲ್ಲ. ಮಂತ್ರಿ ಸ್ಥಾನವಿಲ್ಲದೆಯೂ ಜನರ ಕೆಲಸಗಳನ್ನು ಮಾಡಬಹುದು. ಅದರಲ್ಲಿಯೇ ನನಗೆ ನೆಮ್ಮದಿ ಇದೆ’’ ಎನ್ನುತ್ತಾರೆ.
ರಾಜಕಾರಣ, ರಾಜಕಾರಣಿಗಳೆಂದರೇ ಹೇವರಿಕೆ ಹುಟ್ಟುವ ಇವತ್ತಿನ ದಿನಗಳಲ್ಲಿ ಜನಪರವಾಗಿರುವ ರಮೇಶ್‌ಕುಮಾರ್‌ರಂತಹ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾದರೆ, ಭವಿಷ್ಯದ ರಾಜಕಾರಣಕ್ಕೊಂದು ಬೆಲೆ ಮತ್ತು ನೆಲೆ.
ರಮೇಶ್‌ಕುಮಾರ್‌

Saturday, July 12, 2014

ಚಿತ್ರಜಗತ್ತಿನ ಹಿರಿಯಜ್ಜಿ, ಗಟ್ಟಿಗಿತ್ತಿ ಝೋಹ್ರಾ ಸೆಹ್ಗಲ್

ಝೋಹ್ರಾ ಸೆಹ್ಗಲ್
2007 ರಲ್ಲಿ ತೆರೆಕಂಡ ಹಿಂದಿಯ ‘ಚೀನೀ ಕಂ’ ಚಿತ್ರದಲ್ಲಿ 64 ವರ್ಷದ ಅವಿವಾಹಿತ ಮಗ(ಅಮಿತಾಭ್ ಬಚ್ಚನ್)ನಿಗೆ 85 ವರ್ಷದ ಅಮ್ಮನಾಗಿರುವ ಝೋಹ್ರಾ ಸೆಹ್ಗಲ್, ತಮ್ಮ ನಿಜ ಬದುಕಿನಲ್ಲಿ ಬದುಕುತ್ತಿರುವ ಘಾಟಿ ಮುದುಕಿಯ ಪಾತ್ರವನ್ನೇ ಮಾಡಿದ್ದಾರೆ. ಆ ಪಾತ್ರ ಅವರ ನಿಜಬದುಕಿನದೇ ಆದ್ದರಿಂದಲೋ ಏನೋ ಅವರಲ್ಲಿ ನಟಿಸಿರಲಿಲ್ಲ, ಜೀವಿಸಿದ್ದರು. ಅದು ಸಿನಿಪ್ರಿಯರೆಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಮಗನೂ ಹಠವಾದಿ, ಅಮ್ಮನೂ ಅಷ್ಟೇ ಘಾಟಿ. ಅವರಿಬ್ಬರ ಜುಗಲ್‌ಬಂದಿಯನ್ನು ನೋಡಿದ ಪ್ರೇಕ್ಷಕರಂತೂ ಫುಲ್ ಖುಷ್.
ಇಂತಹ ಅಪರೂಪದ ಅಭಿನೇತ್ರಿ, ಚಿತ್ರಜಗತ್ತಿನಲ್ಲಿ ಸುಮಾರು ಎಂಟು ದಶಕಗಳನ್ನು ದಾಟಿದ ಅತ್ಯಂತ ಹಿರಿಯ, ಖ್ಯಾತ ಕಲಾವಿದೆ ಝೋಹ್ರಾ ಸೆಹ್ಗಲ್, ತಮ್ಮ 102 ವರ್ಷಗಳ ಸುದೀರ್ಘ ಬದುಕಿಗೆ ವಿದಾಯ (ಜುಲೈ 10, 2014) ಹೇಳಿದ್ದಾರೆ.
ವಿದಾಯ ಹೇಳುವಾಗಲೂ ಕೂಡ ಅಷ್ಟೆ ದಿಟ್ಟವಾಗಿ, ಉಡಾಫೆಯಾಗಿ, ತಮಾಷೆಯಾಗಿ ಸಾವನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಏಕೆಂದರೆ 100 ರ ಗಡಿ ದಾಟುವುದಕ್ಕೂ ಮುಂಚಿನಿಂದಲೇ ಅವರು, ಸಾವು ಎಂದಾದರೊಂದು ದಿನ ಬಂದೇ ಬರುತ್ತದೆ, ಬರಲಿ ಬಿಡಿ ಎಂದು ನಿರಾಳವಾಗಿದ್ದರು.
ಸಾವನ್ನು ಕುರಿತು ಅವರೊಂದು ಕಡೆ, ‘ನಾನು ಸಾವಿಗೆ ಸಿದ್ಧಳಾಗಿದ್ದೇನೆ. ಪ್ರತಿದಿನ ಮಲಗುವಾಗ ನಗುನಗುತ್ತಲೇ ಮಲಗುತ್ತೇನೆ. ಅಕಸ್ಮಾತ್ ನಿದ್ರೆಯಲ್ಲಿಯೇ ತೀರಿಕೊಂಡರೆ, ನನ್ನ ತುಟಿಗಳಲ್ಲಿ ನಗುವಿರಲಿ ಎಂದು’ ಎಂದಿದ್ದರು. ಇದು ಬದುಕನ್ನು ಬಂದಂತೆಯೇ ಸ್ವೀಕರಿಸಿ, ಅನುಭವಿಸಿ, ಅರಗಿಸಿಕೊಂಡ ಝೋಹ್ರಾ ಎಂಬ ತತ್ವಜ್ಞಾನಿಯ ಮಾತು.
ಇಂತಹ ಗಟ್ಟಿಗಿತ್ತಿ ಹುಟ್ಟಿದ್ದು ಏಪ್ರಿಲ್ 27, 1912 ರಲ್ಲಿ, ಉತ್ತರ ಪ್ರದೇಶದ ರಾಂಪುರದಲ್ಲಿ. ಸೆಹ್ಗಲ್ ಮೂಲತಃ ಪ್ರತಿಷ್ಠಿತ ಪಠಾಣ್ ಕುಟುಂಬಕ್ಕೆ ಸೇರಿದ ಸುನ್ನಿ ಮುಸ್ಲಿಮ್ ಪಂಗಡದವರು. ಇವರೊಂದಿಗೆ ಹುಟ್ಟಿದವರೆಲ್ಲ ಮನೆ ಬಿಟ್ಟು ಹೊರಬರಲು ಹಿಂಜರಿಯುತ್ತಿದ್ದರೆ, ಸೆಹ್ಗಲ್ ಮಾತ್ರ ಚಿಕ್ಕಂದಿನಿಂದಲೇ ತುಂಟ ಹುಡುಗನಂತೆ, ಗಂಡುಬೀರಿಯಂತೆ ಆಟ ಆಡುವುದಕ್ಕೆ, ಮರ ಹತ್ತುವುದಕ್ಕೆ ಹಾತೊರೆಯುತ್ತಿದ್ದರು. ತುಂಟತನ, ಕೀಟಲೆ, ವ್ಯಂಗ್ಯ, ಉಡಾಫೆ ಮೈಗಂಟಿದ ಗುಣಗಳಾಗಿದ್ದವು. ಸಮಕಾಲೀನ ಹುಡುಗ-ಹುಡುಗಿಯರು ರೆಬೆಲ್ ಸೆಹ್ಗಲ್ ಸಹವಾಸಕ್ಕೆ ಬರಲು ಹೆದರುತ್ತಿದ್ದರು. ಈ ಸ್ವಚ್ಛಂದ ಬದುಕನ್ನು ಬಯಸುವ ಗುಣದಿಂದಾಗಿಯೇ ಡೆಹರಾಡೂನ್‌ನಲ್ಲಿ ಜೊತೆಗಾರ ಉದಯ್‌ಶಂಕರ್‌ ನೃತ್ಯ ನೋಡಿ, ಪ್ರಭಾವಿತಳಾದ ಸೆಹ್ಗಲ್ ನೃತ್ಯಗಾತಿಯಾಗಬೇಕೆಂದು ಬಯಸಿದಳು. ಅದೇ ಆಕೆಯ ಬದುಕಿನ ಟರ್ನಿಂಗ್ ಪಾಯಿಂಟ್.
ಸೆಹ್ಗಲ್‌ರ ಆ ಹರೆಯದ ದಿನಗಳಲ್ಲಿ ಕಣ್ಣಿಗೆ ಕಂಡಿದ್ದನ್ನೆಲ್ಲ ನೋಡುವ, ಅನುಭವಿಸುವ ಆಸೆಯಿತ್ತು. ಹಾಗಾಗಿ ಕೇವಲ ಭಾರತವಷ್ಟೇ ಅಲ್ಲ, ಇರಾನ್, ಸಿರಿಯಾ, ಡಮಾಸ್ಕಸ್, ಈಜಿಪ್ಟ್ ಮತ್ತು ಯೂರೋಪ್ ದೇಶಗಳನ್ನು ತನ್ನ ನೆಚ್ಚಿನ ಚಿಕ್ಕಪ್ಪನೊಂದಿಗೆ ಕಾರ್, ದೋಣಿ ಮತ್ತು ಹಡಗಿನಲ್ಲಿ ಆ ಕಾಲಕ್ಕೇ ಸುತ್ತಾಡಿದ್ದರು. ಸುತ್ತಾಟ ಸಾಕಾದಾಗ ಒಂದಷ್ಟು ವಿದ್ಯಾಭ್ಯಾಸ. ಅದಾದ ಮೇಲೆ ನೃತ್ಯಗಾರ ಉದಯಶಂಕರ್ ತಂಡ ಸೇರಿ ಮತ್ತೆ ಸುತ್ತಾಟ ಶುರುವಿಟ್ಟುಕೊಂಡರು. ಜಪಾನ್, ಪಶ್ಚಿಮ ಏಷಿಯಾ, ಯೂರೋಪ್, ಅಮೆರಿಕಾಗಳನ್ನೆಲ್ಲ ಅಲೆದು, ಅಲೆದಾಟದಲ್ಲಿಯೇ ಸಂಗಾತಿಯನ್ನು ಸೆಲೆಕ್ಟ್ ಮಾಡಿಕೊಂಡರು. ಕಾಮೇಶ್ವರ್ ಸೆಹ್ಗಲ್, ತಮಗಿಂತ ಎಂಟು ವರ್ಷ ಚಿಕ್ಕವರು ಮತ್ತು ಹಿಂದೂ ಧರ್ಮಕ್ಕೆ ಸೇರಿದವರನ್ನು ಪ್ರೀತಿಸಿದರು. ಇವರಿಬ್ಬರ ಪ್ರೀತಿಗೆ ಧರ್ಮ ಅಡ್ಡ ಬರಲಿಲ್ಲ. ಯಾರು ಯಾರಿಗೂ ಧರ್ಮದ ಕಟ್ಟುಪಾಡುಗಳನ್ನು ಹೇರಲಿಲ್ಲ. ಅವರ ನಿರ್ಮಲ ಪ್ರೀತಿಯ ಮುಂದೆ ಯಾರ ವಿರೋಧವೂ ನಿಲ್ಲಲಿಲ್ಲ. ಕಾಮೇಶ್ವರ್ ತಾವಾಗಿಯೇ ಸ್ವಯಂಸ್ಫೂರ್ತಿಯಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು.
ಇದು ಸ್ವಾತಂತ್ರಾಪೂರ್ವದಲ್ಲಿ ನಡೆದ ಹಿಂದೂ-ಮುಸ್ಲಿಂ ಪ್ರೇಮಾಯಣ. ಅದು ಭಾರತ-ಪಾಕಿಸ್ತಾನ ವಿಭಜನೆಯ ಕಾಲ. ಕರುಳುಬಳ್ಳಿಯ ಸಂಬಂಧ ಕಡಿದುಕೊಳ್ಳಲು ಕತ್ತಿ ಮಸೆಯುತ್ತಿದ್ದ ಕಾಲ. ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ 1942 ರಲ್ಲಿ ಝೋಹ್ರಾ-ಕಾಮೇಶ್ವರ್ ಸರಳವಾಗಿ ಮದುವೆಯಾಗುವ ಮೂಲಕ ಸಮಾಜಕ್ಕೆ ಬಂಡುಕೋರರಂತೆ ಕಂಡರು. ಕಾಲ ಸರಿದಂತೆ ಅವರೇ ಮಾದರಿಯಾದರು. ಒಂದು ಕಡೆ ಖ್ಯಾತ ಪತ್ರಕರ್ತ, ಲೇಖಕ ಖುಷವಂತ್ ಸಿಂಗ್, ಈ ಮದುವೆಗೆ ಜವಹರ್‌ಲಾಲ್ ನೆಹರೂ ಕೂಡ ಬಂದು ಹರಸಿ ಹೋದರೆಂದು ದಾಖಲಿಸಿರುವುದುಂಟು.
ಮದುವೆಯಾದ ನಂತರ ಇಬ್ಬರೂ ಉದಯಶಂಕರ್ ಅವರ ನೃತ್ಯ ತಂಡ ಸೇರಿಕೊಂಡರು. ಅವರ ಅದೃಷ್ಟಕ್ಕೆ ಅದು ಮುಚ್ಚಿಕೊಂಡಿತು. ಅಲ್ಲಿಂದ ಲಾಹೋರ್‌ಗೆ ತೆರಳಿ, ಅಲ್ಲಿ ಅವರದೇ ಆದ ಒಂದು ನೃತ್ಯ ಶಾಲೆಯನ್ನು ತೆರೆದರು. ಮನೆಯ ಹೊರಗೆ ಹಿಂದೂ-ಮುಸ್ಲಿಂ ಕೋಮುಗಲಭೆ, ಮನೆಯೊಳಗೆ ಹಿಂದೂ-ಮುಸ್ಲಿಂ ಸಾಮರಸ್ಯದ ಬದುಕು. ಇಂತಹ ಸಂದಿಗ್ಧ ಸಂದರ್ಭವದು. ತಮ್ಮ ಮಧುಚಂದ್ರದ ದಿನಗಳನ್ನು ಮೈಮರೆತು ಕಳೆಯಲಾಗದ ಮನಸ್ಥಿತಿಯಲ್ಲಿಯೇ ಲಾಹೋರ್ ತೊರೆದು ಮುಂಬೈಗೆ ಬಂದರು.
ಮುಂಬೈನಲ್ಲಿ ಝೋಹ್ರಾ ಸೆಹ್ಗಲ್ ಪೃಥ್ವಿರಾಜ್ ಕಪೂರ್ ಅವರ ನಾಟಕ ತಂಡ ಸೇರಿ, ನೃತ್ಯಗಾತಿಯಾದರು. ನೃತ್ಯ ಮತ್ತು ನಟನೆಯಲ್ಲಿ 14 ವರ್ಷಗಳನ್ನು ಕಳೆದರು. ಇದರ ನಡುವೆಯೇ ಎರಡು ಮಕ್ಕಳ ತಾಯಿಯೂ ಆದರು. ಆ ಮಕ್ಕಳು ತಂದೆ-ತಾಯಿಯ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ, ಎರಡೂ ಧರ್ಮಗಳನ್ನು ಪಾಲಿಸಿದರು. ಮನೆಯೇ ಮಿನಿ ಭಾರತವಾಯಿತು.
ಇವೆಲ್ಲವುಗಳ ನಡುವೆಯೇ ಸೆಹ್ಗಲ್ ರಂಗ ತಾಲೀಮುಗಳಲ್ಲಿ ಮುಳುಗಿದರು. ಖುಷವಂತ್ ಸಿಂಗ್ ಒಂದು ಕಡೆ ಬರೆಯುತ್ತಾ, ಸೆಹ್ಗಲ್‌ರ ಮೊದಲ ಆಯ್ಕೆ ಜೈಲುಗಳ ಖೈದಿಗಳಿಗೆ ನಾಟಕಗಳ ಬಗ್ಗೆ ಮನವರಿಕೆ ಮಾಡಿಕೊಡುವುದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿತ್ತು ಎಂದಿದ್ದಾರೆ.
ನಟನೆ, ಮನೆ, ಮಕ್ಕಳು, ಆಸಕ್ತಿ, ಅಭಿರುಚಿಗಳನ್ನೊಳಗೊಂಡ ಬದುಕು ಸಾಗುತ್ತಿರುವಾಗಲೇ ಕಾಮೇಶ್ವರ್ ಆತ್ಮಹತ್ಯೆ ಮಾಡಿಕೊಂಡರು. ಝೋಹ್ರಾ ಸೆಹ್ಗಲ್ ಬದುಕು ಮತ್ತೊಮ್ಮೆ ಬಿರುಗಾಳಿಗೆ ಸಿಕ್ಕಿತು. ಮುಂಬೈ ತೊರೆದು ದೆಹಲಿಯತ್ತ ಮುಖ ಮಾಡಿದರು. ಅಲ್ಲಿಂದ ಲಂಡನ್‌ಗೆ ತೆರಳಿದರು. ನೃತ್ಯಗಾತಿಯಾಗಿ ಅವಕಾಶಗಳು ಸಿಗದಿದ್ದಾಗ ನಟನೆಗೆ ಜಾರಿದರು. ಕೆಲವು ಜಾಹೀರಾತುಗಳಲ್ಲಿ ನಟಿಸಿದರು. ಆ ನಂತರ ಮರ್ಚೆಂಟ್ ಐವರಿ ಮತ್ತು ಆರ್ಥರ್ ರ್ಯಾಂಕ್ ಬ್ಯಾನರ್ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರಕಿತು.  
ಅಲ್ಲಿಂದ ಮುಂದಕ್ಕೆ ಝೋಹ್ರಾ ಸೆಹ್ಗಲ್ ನಟನಾ ಬದುಕಿನಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಬ್ರಿಟಿಷ್, ಬಾಲಿವುಡ್ ಚಿತ್ರಚಗತ್ತಿನಲ್ಲಿ ಅಸಂಖ್ಯಾತ ಹಿಂದಿ-ಇಂಗ್ಲಿಷ್ ಚಿತ್ರಗಳಲ್ಲಿ ಹಾಗೂ ಟಿವಿ ಧಾರಾವಾಹಿಗಳಲ್ಲಿ ನಟಿಸಿದರು. ಪ್ರರಿಪೂರ್ಣ ಕಲಾವಿದೆಯಾಗಿ ಹೊರಹೊಮ್ಮಿದರು. ಈಕೆಯ ಕೆಲವು ಜನಪ್ರಿಯ ಚಿತ್ರಗಳೆಂದರೆ, ಸಂಜಯ್ ಲೀಲಾ ಬನ್ಸಾಲಿಯ ಸಾವರಿಯಾ, ಹಮ್ ದಿಲ್‌ದೇ ಚುಕೇ ಸನಮ್, ಚೀನೀ ಕಂ, ದಿಲ್ ಸೇ, ವೀರ್ ಜರಾ, ಬೆಂಡ್ ಇಟ್ ಲೈಕ್ ಬೆಕಂ ಇನ್ನೂ ಮುಂತಾದವು.
ಸೆಹ್ಗಲ್ ವೃತ್ತಿಬದುಕು ಸುಮಾರು ಎಂಟು ದಶಕಗಳನ್ನು ದಾಟಿದೆ. ಪೃಥ್ವಿರಾಜ್ ಕಪೂರ್‌ರಿಂದ ಹಿಡಿದು ರಣಬೀರ್ ಕಪೂರ್‌ವರೆಗಿನ ನಾಲ್ಕು ತಲೆಮಾರುಗಳ ಜೊತೆಗಿನ ಬಣ್ಣದ ಬದುಕನ್ನು ಬೆರೆಸಿದೆ. ದೇಶ-ವಿದೇಶಗಳ ಚಿತ್ರಜಗತ್ತಿನ ಅಪೂರ್ವ ಅನುಭವವನ್ನು ನೀಡಿದೆ. ಬಹುಭಾಷೆಯ ಜನಸಂಸ್ಕೃತಿಯನ್ನು ಅರಗಿಸಿಕೊಂಡಿದೆ. ಇದು ಅಂತಿಂಥ ದಾಖಲೆಯಲ್ಲ. ಈ ದಾಖಲೆಯನ್ನು ಸರಿಗಟ್ಟಲು ಸದ್ಯಕ್ಕೆ ಯಾರಿಂದಲೂ ಸಾಧ್ಯವಿಲ್ಲ.  
ಇಂತಹ ಅಪರೂಪದ ಕಲಾವಿದೆ ಝೋಹ್ರಾಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ, ಕಾಳಿದಾಸ ಸಮ್ಮಾನ್ ಪ್ರಶಸ್ತಿಗಳು ಹುಡುಕಿಕೊಂಡು ಬಂದು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.
ಬಹುಮುಖ ಪ್ರತಿಭೆಯ, ಜೀವನೋತ್ಸಾಹದ ಚಿಲುಮೆಯ, ನೋವು-ನಗುವನ್ನು ಕಂಡುಂಡ ಗಟ್ಟಿಗಿತ್ತಿ ಸೆಹ್ಗಲ್ ಸಾವು, ಆಕೆ ಬಯಸಿದಂತೆಯೇ ಬಂದಿದೆ, ನೆನಪುಗಳನ್ನು ಬಿಟ್ಟುಹೋಗಿದೆ.


Wednesday, July 9, 2014

`ಅಗ್ರಗಣ್ಯ' ಅಮಿತ್ ಶಾ


ವಿವಾದ ಮತ್ತು ತಂತ್ರಗಾರಿಕೆಗೆ ಹೆಸರಾದ ಐವತ್ತರ ಹರೆಯದ ಅಮಿತ್ ಶಾರನ್ನು ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಬಳಿಕ ತೆರವಾದ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಜೆ.ಪಿ.ನಡ್ಡಾ, ಓಂ ಮಾಥುರ್ ಹಾಗೂ ಅಮಿತ್ ಶಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಪ್ತ ಅಮಿತ್ ಶಾ ಅವರ ಹೆಸರು ಮುಂಚೂಣಿಯಲ್ಲಿದ್ದರಿಂದ; ಬಿಜೆಪಿಯ ರಾಷ್ಟ್ರೀಯ ನಾಯಕರಾದ ಸುಷ್ಮಾ ಸ್ವರಾಜ್, ಎಲ್.ಕೆ. ಅಡ್ವಾಣಿಯಂತಹ ಸೌಮ್ಯ ಸ್ವಭಾವದವರೂ ಒಪ್ಪಿದ್ದರಿಂದ ಮತ್ತು ಇಂತಹ ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆರೆಸ್ಸೆಸ್ ನಾಯಕರು ಕೂಡ ಅಮಿತ್ ಶಾರ ಹೆಸರನ್ನೇ ಸೂಚಿಸಿದ್ದರಿಂದ, ಶಾ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಒಟ್ಟಿನಲ್ಲಿ ಒಂದು ಪಕ್ಷ ಕಟ್ಟುವಲ್ಲಿ, ಮುನ್ನಡೆಸುವಲ್ಲಿ ಬೇಕಾಗಿದ್ದ ಮಾನದಂಡಗಳಾದ ಹಿರಿತನ, ಅನುಭವ, ಯೋಗ್ಯತೆ, ಅರ್ಹತೆ, ನಾಯಕತ್ವ, ವಾಕ್ಚಾತುರ್ಯಗಳೆಂಬ ಗುಣಗಳು ಗೌಣವಾಗಿವೆ. ಆ ಜಾಗವನ್ನು ವಿವಾದ, ತಂತ್ರಗಾರಿಕೆ, ನಿರ್ವಹಣೆ, ನಿಭಾವಣೆ, ಭಂಡತನ, ಕಿಲಾಡಿತನಗಳು ಆಕ್ರಮಿಸಿಕೊಂಡಿವೆ. ಅದು ಅಮಿತ್ ಶಾ ಅವರ ಆಯ್ಕೆಯಲ್ಲಿ ಎದ್ದು ಕಾಣುತ್ತಿವೆ. ಇದು ಭಾರತದ ರಾಜಕಾರಣದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಒಬ್ಬ ವ್ಯಕ್ತಿ ಹೀಗೂ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬರಬಹುದು, ಒಂದು ರಾಷ್ಟ್ರೀಯ ಪಕ್ಷದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಬಹುದು ಎಂಬುದನ್ನು ಸಾಬೀತುಪಡಿಸಿದ ಕೀರ್ತಿ ಅಮಿತ್ ಶಾಗೆ ಸಲ್ಲಲೇಬೇಕು.
ಐವತ್ತರ ಹರೆಯದ ಅಮಿತ್ ಭಾಯಿ ಅನಿಲ್‌ಚಂದ್ರ ಶಾ ಹುಟ್ಟಿದ್ದು ಮುಂಬೈನ ಶ್ರೀಮಂತ ಜೈನ ಕುಟುಂಬದಲ್ಲಿ. ತಂದೆ ಅನಿಲ್ ಚಂದ್ ಶಾ ಪಿವಿಸಿ ಪೈಪ್ ವ್ಯಾಪಾರಸ್ಥ. ಯಶಸ್ವಿ ಉದ್ಯಮಪತಿ. ಇವರ ಮಗನಾದ ಅಮಿತ್ ಜೀವ ರಸಾಯನ ಶಾಸ್ತ್ರ ಪದವೀಧರರು. ಶೇರು ದಳ್ಳಾಳಿಯಾಗಿ, ಗುಜರಾತ್‌ನ ಹಣಕಾಸು ಸಂಸ್ಥೆಯ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿದವರು.
ಚಿಕ್ಕಂದಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದೊಂದಿಗೆ ಗುರುತಿಸಿಕೊಂಡಿದ್ದ ಅಮಿತ್ ಶಾ ಸ್ವಯಂಸೇವಕರಾಗಿದ್ದರು. ಕಾಲೇಜು ದಿನಗಳಲ್ಲಿ ಎಬಿವಿಪಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. 1982ರಲ್ಲಿ ಮೊದಲ ಬಾರಿಗೆ ಮೋದಿಯನ್ನು ಭೇಟಿ ಮಾಡಿದ್ದು ಕೂಡ ಆರೆಸ್ಸೆಸ್ ಅಂಗಳದಲ್ಲಿಯೇ. ಆ ಸಂದರ್ಭದಲ್ಲಿ ಮೋದಿ ಆರೆಸ್ಸೆಸ್‌ನ ಪ್ರಚಾರಕರಾಗಿ ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದರು. ಆಗಿನಿಂದಲೇ ನರೇಂದ್ರ ಮೋದಿಯವರ ಸಂಪರ್ಕಕ್ಕೆ ಬಂದು, 1986ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. 1997 ರಲ್ಲಿ ಸರ್ಖೇಜ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ, ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡ ಅಮಿತ್ ಶಾ ಸತತವಾಗಿ ನಾಲ್ಕು ಬಾರಿ ಗೆದ್ದು ದಾಖಲೆ ನಿರ್ಮಿಸಿದರು.
ಆದರೆ ಇವರ ರಾಜಕೀಯ ಬದುಕಿನ ಭವ್ಯ ಭವಿಷ್ಯ ರೂಪುಗೊಂಡಿದ್ದು, ಅದು ಇಡೀ ದೇಶಕ್ಕೆ ಮತ್ತು ಪ್ರಪಂಚಕ್ಕೆ ಪರಿಚಯವಾಗಿದ್ದು 2002 ರ ಗುಜರಾತ್ ನರಮೇಧದಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ 10 ಖಾತೆಗಳನ್ನು ನಿರ್ವಹಿಸುವ ಸಚಿವನನ್ನಾಗಿ ಮಾಡಲಾಯಿತು. ಗೃಹಮಂತ್ರಿ ಅಮಿತ್ ಶಾ 2002 ರಲ್ಲಿ ನಡೆದ ಗುಜರಾತ್ ನರಮೇಧದಲ್ಲಿ ಅದರಲ್ಲೂ ಸೋಹ್ರಾಬುದ್ದೀನ್, ಇಶ್ರತ್ ಜಹಾನ್, ಹರೇನ್ ಪಾಂಡ್ಯರ ನಕಲಿ ಎನ್‌ಕೌಂಟರ್ ಪ್ರಕರಣ ಹಾಗೂ ರಾಜ್ಯ ಪೊಲೀಸರಿಗೆ ಆದೇಶ ನೀಡಿ ಹಲವಾರು ಜನರನ್ನು ಕೊಲ್ಲಿಸಲು ಕಾರಣರಾದರೆಂಬ ಆಪಾದನೆಗೆ ಗುರಿಯಾಗಬೇಕಾಯಿತು. ಹಲವಾರು ಕೇಸುಗಳು ಮೈ ಮೆತ್ತಿಕೊಂಡವು. ಅಷ್ಟೇ ಅಲ್ಲ ಸಿಬಿಐ ತನಿಖೆ ಕೈಗೆತ್ತಿಕೊಂಡು ಅಮಿತ್ ಶಾರನ್ನು ಮುಖ್ಯ ಆರೋಪಿಯನ್ನಾಗಿಸಿ ಜುಲೈ 25, 2010ರಂದು ಬಂಧಿಸಿ, ಮೂರು ತಿಂಗಳ ಕಾಲ ಜೈಲಿಗೂ ಅಟ್ಟಿತ್ತು.
2010ರಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಗುಜರಾತ್ ಬಿಟ್ಟ ಅಮಿತ್ ಶಾ ಮತ್ತೆ ಮರಳಿದ್ದು 2012ರಲ್ಲಿ, ಗುಜರಾತ್ ಹೈಕೋರ್ಟ್ ಜಾಮೀನು ನೀಡಿದ ಮೇಲೆ. 2012ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲ್ಲುವ ಮೂಲಕ ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸಿಬಿಟ್ಟರು. ಇಲ್ಲಿಂದ ಅಮಿತ್ ಶಾರ ಹೊಸ ರಾಜಕಾರಣ, ಅಂದರೆ ಈ ದೇಶದ ಜನತೆ ಇಲ್ಲಿಯವರೆಗೆ ಕಂಡ, ಕೇಳಿದ ರಾಜಕಾರಣಕ್ಕಿಂತ ಭಿನ್ನವಾದ ಕುಟಿಲ ತಂತ್ರಗಾರಿಕೆಯ ರಾಜಕಾರಣ ಚಾಲ್ತಿಗೆ ಬಂತು.
ಹೊಸ ರಾಜಕಾರಣದ ಮುಂದಾಳತ್ವವನ್ನು ನರೇಂದ್ರ ಮೋದಿ ವಹಿಸಿಕೊಂಡರೆ, ಅವರ ಹಿಂದಿನ ಚಾಲಕ ಶಕ್ತಿಯಾಗಿ ಅಮಿತ್ ಶಾ ನಿಯೋಜಿತಗೊಂಡರು. ಆಕರ್ಷಕ ವಾಗ್ಮಿಯಲ್ಲದ ಶಾ, ತಂತ್ರಗಳನ್ನು ಹೆಣೆಯುವುದರಲ್ಲಿ ನುರಿತ ಕಲಾವಿದರು. ಅಡ್ವಾಣಿ, ವಾಜಪೇಯಿಯವರ ಕಾಲದ ಚುನಾವಣಾ ಪ್ರಚಾರವನ್ನು ಯಶಸ್ವಿಯಾಗಿ ನಿರ್ವಹಿಸಿದ ಶಾ, ನರೇಂದ್ರಮೋದಿಯವರ ಸಂದರ್ಭದಲ್ಲಿ ಬಿಜೆಪಿ ಪಕ್ಷವನ್ನು ಮೇರುಸ್ಥಾನಕ್ಕೆ ಕೊಂಡೊಯ್ದರು. ಮೋದಿಯವರನ್ನು ಬನಾರಸ್‌ನಿಂದ ಸ್ಪರ್ಧಿಸಲು ಅಣಿ ಮಾಡಿ, ಅನಾದಿಕಾಲದಿಂದ ಹಿಂದೂಗಳ ಪವಿತ್ರ ಕ್ಷೇತ್ರವಾದ ಕಾಶಿಯಲ್ಲಿ ಗಂಗಾರತಿಯ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಧರ್ಮಾಧಾರಿತ ರಾಜಕಾರಣವನ್ನು ಚಾಲ್ತಿಗೆ ತಂದರು.  
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಮತ್ತು ಶಾ- ಇವರಿಬ್ಬರು ಬಹಳ ಮಹತ್ವದ ಪಾತ್ರ ವಹಿಸಿದರು. ಬಿಜೆಪಿಯ ಹಿರಿಯ ನಾಯಕರನ್ನೇ ಮೂಲೆಗುಂಪು ಮಾಡಿದರು. ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂದರು. ಅದನ್ನೇ ಅಲೆಯಾಗಿ ಪರಿವರ್ತಿಸಿದರು. ಅದಕ್ಕೆ ಸುದ್ದಿಮಾಧ್ಯಮಗಳನ್ನು ಬಳಸಿಕೊಂಡರು. ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞರ ಸಹಕಾರದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಮಂಕುಬೂದಿ ಎರಚಿದರು. ಶ್ರೀಮಂತ ಉದ್ಯಮಪತಿಗಳಿಂದ ಹಣ ಹರಿಸಿ ಚುನಾವಣಾ ರೀತಿ-ನೀತಿಯನ್ನೇ ಬುಡಮೇಲು ಮಾಡಿದರು.
ಅದರಲ್ಲೂ ದೇಶದ ರಾಜಕಾರಣದ ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿ ಇರುವ, ಅಧಿಕ ಲೋಕಸಭಾ ಸಂಖ್ಯಾಬಲ ಹೊಂದಿರುವ ಉತ್ತರ ಪ್ರದೇಶದ ಉಸ್ತುವಾರಿಯನ್ನು ಮೋದಿ, ಅಮಿತ್ ಶಾ ಹೆಗಲಿಗೆ ಹಾಕಿದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದರೂ, ವಿರೋಧ ಪಕ್ಷದ ಸ್ಥಾನದಲ್ಲಿ ಬಿಎಸ್ಪಿಯ ಮಾಯಾವತಿ ಮತ್ತು ಕಾಂಗ್ರೆಸ್ ಪಕ್ಷಗಳಿದ್ದರೂ, ಅವುಗಳ ನಡುವೆಯೇ ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಚಾಣಕ್ಯನೆನಿಸಿಕೊಂಡಿದ್ದ ಅಮಿತ್ ಶಾ, ಉತ್ತರ ಪ್ರದೇಶದಲ್ಲಿ ಕೋಮುಗಲಭೆ ಮತ್ತು ಅರಾಜಕತೆ ಸೃಷ್ಟಿಸಿ ನಿರೀಕ್ಷೆಗೂ ಮೀರಿ, 80 ಲೋಕಸಭಾ ಸೀಟಿನಲ್ಲಿ ಬಿಜೆಪಿ ಪಕ್ಷ 71 ಸ್ಥಾನಗಳನ್ನು ಗಳಿಸುವ ಮೂಲಕ ದೇಶದ ರಾಜಕಾರಣದ ದಿಕ್ಕು ದೆಸೆಯನ್ನೇ ಬದಲಿಸಿಬಿಟ್ಟರು.
ಅಧಿಕಾರದಿಂದ ಹತ್ತು ವರ್ಷಗಳ ಕಾಲ ದೂರವೇ ಉಳಿದಿದ್ದ ಬಿಜೆಪಿ, ಮೋದಿ ಪ್ರಧಾನಿಯಾಗಿದ್ದು, ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಿದ್ದು  ಅಮಿತ್ ಶಾರಿಂದ ಎಂದು ಹಾಡಿ ಹೊಗಳಿತು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಗೆ ಪಕ್ಷದ ಉಸ್ತುವಾರಿ ವಹಿಸಿಕೊಟ್ಟು, ಅಧ್ಯಕ್ಷ ಪಟ್ಟ ಕಟ್ಟುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿತು.  ಮುಂಬರುವ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಪಕ್ಷ ಶಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಈಗ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗುಜರಾತ್ ನರಮೇದಕ್ಕೆ ಕಾರಣರಾದ ವ್ಯಕ್ತಿಯೇ ಈ ದೇಶದ ಪ್ರಧಾನಮಂತ್ರಿಯಾಗಿ ವಿಜೃಂಭಿಸುತ್ತಿರುವಾಗ, ಮೋದಿಯ ಮೂಗಿನ ಕೆಳಗೆ ಕೆಲಸ ಮಾಡಿದ ವ್ಯಕ್ತಿ ಆ ಪಕ್ಷದ ಅಧ್ಯಕ್ಷನಾಗುವುದು ಅಂತಹ ಸೋಜಿಗದ ಸಂಗತಿಯೇನಲ್ಲ.
ಒಟ್ಟಿನಲ್ಲಿ ಗುಜರಾತ್ ರಾಜ್ಯಕ್ಕೆ ಸೀಮಿತವಾಗಿದ್ದ ನರಮೇದ, ತಂತ್ರಗಾರಿಕೆ ಮತ್ತು ವಿವಾದ ಇನ್ನು ಮುಂದೆ ರಾಷ್ಟ್ರವ್ಯಾಪಿಯಾಗಲಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ನಡೆದದ್ದು ಇಡೀ ದೇಶದಲ್ಲಿ ನಡೆಯುವ ಸೂಚನೆ ಕಾಣುತ್ತಿದೆ.


Thursday, June 12, 2014

‘ಶಕ್ತಿವಂತ’ ಸಿದ್ದಣ್ಣ

 ಚಿತ್ರ: ಗುಜ್ಜಾರ್
ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಒಂದು ವರ್ಷ ಪೂರೈಸಿದ ನಂತರ ‘ಶಕ್ತಿವಂತ’ರಾಗಿದ್ದಾರೆ. ಕುಸ್ತಿ ಪೈಲ್ವಾನರಂತೆ ಕಾಣುತ್ತಿದ್ದಾರೆ. ಅಡ್ಡ ಬಂದವರನ್ನು ಅಹಿಂದ ಶೈಲಿಯಲ್ಲಿಯೇ ಮಟ್ಟ ಹಾಕುತ್ತಿದ್ದಾರೆ.
ಸಿದ್ದರಾಮಯ್ಯನವರ ಈ ‘ಅಹಿಂದ ಶೈಲಿ’ಗೆ ಲೋಕಸಭಾ ಚುನಾವಣೆಯ ಮೋದಿ ಅಲೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲು, ಮುಖ್ಯಮಂತ್ರಿ ಆಕಾಂಕ್ಷಿಯ ರೇಸ್‌ನಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದು ಕೂಡ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಶಕ್ತಿ ತುಂಬಿದೆ.
ಇದರ ಲಾಭ ಪಡೆದ ಸಿದ್ದರಾಮಯ್ಯನವರು, ಡಾ. ಜಿ. ಪರಮೇಶ್ವರ್ ಅವರನ್ನು ರಾಜ್ಯಸಭೆಗೆ ಬಡ್ತಿ ನೀಡಲು ನೋಡಿದರು. ಹೈಕಮಾಂಡ್ ಒಪ್ಪದಿದ್ದಾಗ ಗೆಳೆಯ ಸಿ.ಎಂ. ಇಬ್ರಾಹಿಂ, ಮೈಸೂರಿನ ರಿಯಲ್ ಎಸ್ಟೇಟ್ ಕುಳ ಚನ್ನಾರೆಡ್ಡಿಯವರ ಹೆಸರನ್ನು ರಾಜ್ಯಸಭೆಗೆ ತೇಲಿಬಿಟ್ಟರು ಎಂಬುದು ಸುದ್ದಿಯಾಯಿತು. ಇದನ್ನು ಸಿದ್ದರಾಮಯ್ಯನವರು  ಗಾಳಿ ಸುದ್ದಿ ಎಂದು ಸಿಟ್ಟಾದರು. ಆದರೆ ವಿಧಾನ ಪರಿಷತ್ತಿಗೆ ತಮ್ಮದೇ ಜಾತಿಯ, ತಮ್ಮ ಹಿಂದೆ ಮುಂದೆ ಓಡಾಡುವ ಎಚ್.ಎಂ. ರೇವಣ್ಣರನ್ನು ಎಂಎಲ್ಸಿಯಾಗುವಂತೆ ನೋಡಿಕೊಂಡಿದ್ದರ ಬಗ್ಗೆ ವೌನ ವಹಿಸಿದರು. ನಾಲ್ವರು ಪರಿಷತ್ ಸದಸ್ಯರಲ್ಲಿ ಒಕ್ಕಲಿಗ, ಲಿಂಗಾಯತ ಜಾತಿಯ ಜನರಿಲ್ಲದಂತೆ ನೋಡಿಕೊಳ್ಳುವ ಮೂಲಕ ಸಿದ್ದರಾಮಯ್ಯನವರು ಮೇಲುಗೈ ಸಾಧಿಸಿದರು.
ಅಷ್ಟೇ ಅಲ್ಲ, ಕಾಂಗ್ರೆಸ್ಸಿನ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿಸುವ ಬಗ್ಗೆ ‘ಹೈಕಮಾಂಡ್ ಆಯ್ಕೆಯೇ ಅಂತಿಮ’ ಅಂತ ಉದ್ದಕ್ಕೂ ಹೇಳಿಕೊಂಡು ಬಂದವರು, ಕಡೆ ಗಳಿಗೆಯಲ್ಲಾದ ಕ್ಷಿಪ್ರ ಕಾರ್ಯಾಚರಣೆಗೂ ‘ಹೈಕಮಾಂಡ್ ಆಯ್ಕೆಯೇ ಅಂತಿಮ’ ಅಂದು ಸುಮ್ಮನಾಗಿಬಿಟ್ಟರು. ಆ ಮೂಲಕ, ಹಿರಿಯ ಒಕ್ಕಲಿಗ ನಾಯಕನನ್ನು ಹಿಂದಕ್ಕೆ ಸರಿಸಿ, ಮಾತು ಕೇಳುವ ಕಿರಿಯ ಗೌಡನಿಗೆ ಸ್ಥಾನ ನೀಡಿ, ಚಾಣಾಕ್ಷತನ ಮೆರೆದರು. ತಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಕೃಷ್ಣರ ‘ಋಣ’ ತೀರಿಸಿದರು!
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ, ಮೊದಲಿನಿಂದಲೂ ಎಸ್.ಎಂ. ಕೃಷ್ಣರನ್ನು ಕಂಡರಾಗದು. ಈಗ ಕೃಷ್ಣರಿಗೆ ರಾಜ್ಯಸಭಾ ಟಿಕೆಟ್ ತಪ್ಪಿರುವ ಹೊತ್ತಿನಲ್ಲಿ, ದೇವೇಗೌಡರು ದೆಹಲಿಯಲ್ಲಿ ಸಿದ್ದರಾಮಯ್ಯನವರ ಕೈ ಕುಲುಕಿದ್ದಾರೆ. ಕೈ ಕುಲುಕಾಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲವಾದರೂ, ಮೂಲ ಕಾಂಗ್ರೆಸ್ಸಿಗರಿಗೆ ಮತ್ತು ಕೃಷ್ಣರ ಹಿಂಬಾಲಕರಿಗೆ ಇದು ಇರುಸು ಮುರುಸುಂಟು ಮಾಡಿದೆ.
ಇವೆಲ್ಲವುಗಳ ಒಟ್ಟು ಮೊತ್ತ ಬಂಡಾಯದ ರೂಪದಲ್ಲಿ ಕೆಂಪಯ್ಯನವರ ನೇಮಕಾತಿ ವಿಚಾರದಲ್ಲಿ ಸ್ಫೋಟಗೊಂಡಿದೆ.
ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯನವರನ್ನು ಮುಖ್ಯಮಂತ್ರಿಗಳ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲು, ಸಂಪುಟದರ್ಜೆಯ ಸ್ಥಾನಮಾನ ನೀಡಲು ಮುಂದಾಗಿರುವ ಸಿದ್ದರಾಮಯ್ಯನವರ ಕ್ರಮದ ವಿರುದ್ಧ ಕೆಲ ಬೆಂಗಳೂರು ನಗರ ಸಚಿವರು ಮತ್ತು 15 ಕ್ಕೂ ಹೆಚ್ಚು ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್‌ರಿಗೆ ಪತ್ರ ಬರೆಯುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಂಪಯ್ಯ ಕುರುಬ ಜಾತಿಗೆ ಸೇರಿದವರು. ನಕಲಿ ಜಾತಿಪತ್ರ ನೀಡಿಕೆ ಮತ್ತು ಲೋಕಾಯುಕ್ತ ತನಿಖೆಗೆ ಒಳಗಾಗಿದ್ದವರು. ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಗುರುತರ ಆರೋಪ ಹೊತ್ತವರು. ಇಂಥವರಿಗೆ ಸಂಪುಟದರ್ಜೆಯ ಸ್ಥಾನಮಾನ ನೀಡುವುದು ಅನಗತ್ಯ ಖರ್ಚಿಗೆ, ಸ್ವಜನಪಕ್ಷಪಾತಕ್ಕೆ ಮತ್ತು ಆ ಮೂಲಕ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುವುದಿಲ್ಲವೇ ಎನ್ನುವ ವಿಚಾರವನ್ನು ಈಗ ಹೈಕಮಾಂಡಿನ ಗಮನಕ್ಕೆ ತಂದಿದ್ದಾರೆ. ‘ಶಕ್ತಿವಂತ’ ಸಿದ್ದಣ್ಣ ಕೊಂಚ ಕೋಪಗೊಂಡಿದ್ದಾರೆ!