Friday, March 7, 2014

ಲಂಕೇಶ್ ಕಥಾಪ್ರಸಂಗ


ಥಟ್ ಅಂತ ಹೇಳೋದು ಲಂಕೇಶರ ಸ್ಟೈಲು. ಇದನ್ನು ಲಂಕೇಶರೊಂದಿಗೆ, ಅವರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅನೇಕ ಬಾರಿ ಕಂಡಿದ್ದೇನೆ. ಕಂಡಿದ್ದನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಲಂಕೇಶರು ಆಫೀಸಿನಲ್ಲಿ ಅಡ್ಡಾಡುವಾಗ, ವರದಿಗಾರರೊಂದಿಗೆ ಮೀಟಿಂಗ್ ಮಾಡುವಾಗ, ಸಮಾನ ಮನಸ್ಕರೊಂದಿಗೆ ಸಂವಾದ ನಡೆಸುವಾಗ, ಗೆಳೆಯರೊಂದಿಗೆ ಕುಡಿಯಲು ಕೂತಾಗ, ಯಾರೊಂದಿಗಾದರು ಜಗಳವಾಡುವಾಗ, ಏನೂ ಇಲ್ಲ ಎಂದರೆ ಸುಮ್ಮನೆ ಒಂದು ಪೋಲಿ ಜೋಕ್ ಸಿಡಿಸುವಾಗ- ಥಟ್ ಅಂತ ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಅದು ಆ ಗಳಿಗೆಗಷ್ಟೆ. ಅವರ ಸುತ್ತಲಿದ್ದವರು ಏನಂದ್ರು, ಅದೇನು ಅಂತ ಸುಮಾರು ಹೊತ್ತು ತಲೆ ಕೆಡಿಸಿಕೊಂಡ ಮೇಲೆ ಅರ್ಥವಾಗುತ್ತಿತ್ತು. ಅರ್ಥವಾದವರಿಗೆ ನಗುವೋ, ಸಿಟ್ಟೋ, ಅವಮಾನವೋ, ನಾಚಿಕೆಯೋ ಆಗಿ ಮುಖ ನೋಡಿದರೆ- ನಾನಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಅನ್ಯಮನಸ್ಕರಾಗಿಬಿಡುತ್ತಿದ್ದರು. ಥಟ್ ಅಂತ ಹೇಳಿದ ಆ ಪದ ಲೇವಡಿ, ವ್ಯಂಗ್ಯ, ಉಡಾಫೆ, ಕೀಟಲೆ, ಪುಲಕಗಳ ಪರಾಕಾಷ್ಠೆಯದ್ದಾಗಿರುತ್ತಿತ್ತು. ಅಂತಹ ಕೆಲವು ಝಲಕ್‌ಗಳು ಇಲ್ಲಿವೆ.
ಕವಿ ರಾಮಚಂದ್ರ ಶರ್ಮರು ಒಂದು ಸಲ, ಬಸವನಗುಡಿಯ ನ್ಯಾಷನಲ್ ಕಾಲೇಜ್‌ನಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತ, ‘ಕನ್ನಡ ಸಾಹಿತ್ಯ ಲೋಕದ ನಾಲ್ಕನೇ ನಕ್ಷತ್ರ ಡಿ.ಆರ್. ನಾಗರಾಜ್’ ಎಂದು ಘೋಷಿಸಿದರು.
ಅದು ಕನ್ನಡ ಸಾಹಿತ್ಯ ಲೋಕದಲ್ಲಿ ಅನಂತಮೂರ್ತಿ, ಲಂಕೇಶ್ ಮತ್ತು ತೇಜಸ್ವಿ ಎಂಬ ಮೂವರು ದಿಗ್ಗಜರು ನಕ್ಷತ್ರಗಳಂತೆ ಮಿಂಚುತ್ತಿದ್ದ ಕಾಲ. ಅವರಷ್ಟೇ ಪ್ರಖರ ಪ್ರತಿಭೆಯ, ಹೊಸ ವಿಚಾರಗಳ, ಚಿಂತನೆಗಚ್ಚುವ ಬರವಣಿಗೆ ಮತ್ತು ಭಾಷಣಗಳ ಮೂಲಕ ‘ಸ್ಟಾರ್’ ಆಗಿದ್ದ, ದೇಶ-ವಿದೇಶಗಳನ್ನು ಸುತ್ತಿ ‘ಸೆಮಿನಾರ್ ಹಕ್ಕಿ’ ಎನಿಸಿಕೊಂಡಿದ್ದ ಡಿಆರ್‌ರನ್ನು ಕುರಿತು ಶರ್ಮರು ಸಾಹಿತ್ಯಕ ಭಾಷೆಯಲ್ಲಿ ‘ನಾಲ್ಕನೇ ನಕ್ಷತ್ರ’ ಎಂದು ಕರೆದಿದ್ದರು. ಅದು ಸಭೆಯಲ್ಲಿದ್ದವರ ಹುಬ್ಬೇರಿಸಿತ್ತು, ಚಿಂತನೆಗೂ ಹಚ್ಚಿತ್ತು.
ಆ ಸಭೆ ಮುಗಿದ ನಂತರ, ನ್ಯಾಷನಲ್ ಕಾಲೇಜ್ ಹತ್ತಿರದಲ್ಲಿಯೇ ಇದ್ದ ‘ಲಂಕೇಶ್ ಪತ್ರಿಕೆ’ ಕಚೇರಿಯಲ್ಲಿ, ಎಂದಿನಂತೆ ಸಂಜೆಯ ‘ಸಮಾರಾಧನೆ’. ಅಲ್ಲಿ ಮತ್ತೆ ನಾಲ್ಕನೆ ನಕ್ಷತ್ರದ ಪ್ರಸ್ತಾಪ. ಗುಂಡಿನ ಮತ್ತಿನಲ್ಲಿ... ಬಿಸಿ ಬಿಸಿ ಚರ್ಚೆ. ಪರ-ವಿರೋಧ ಎಲ್ಲ. ಬಂದಿದ್ದವರಿಗೆಲ್ಲ ವ್ಹಿಸ್ಕಿ ಕೊಟ್ಟು, ಕಾವೇರಿದ ಮಾತಿಗೆ ಕಿವಿ-ಕಣ್ಣು ಕೊಟ್ಟು ಕೂತಿದ್ದ ಲಂಕೇಶರು, ಅವತ್ತು ಅಕ್ಷರಶಃ ವಿದ್ಯಾರ್ಥಿಯಾಗಿದ್ದರು.
ಇದಾದ ಕೆಲವೇ ತಿಂಗಳುಗಳಲ್ಲಿ ಡಿಆರ್ ಹೃದಯಾಘಾತಕ್ಕೊಳಗಾಗಿ ತೀರಿಕೊಂಡರು. ಡಿಆರ್ ದೇಹವನ್ನು ಅವರ ಪದ್ಮನಾಭನಗರದ ಮನೆಯಲ್ಲಿಡಲಾಗಿತ್ತು. ಡಿಆರ್ ದೇಹ ನೋಡಲು ಅಲ್ಲಿಗೆ ಲಂಕೇಶರು ಬಂದರು. ಮೊದಲೇ ಹೋಗಿದ್ದ ನಾನು, ಅವರನ್ನು ನೋಡಿ ಅವರ ಬಳಿ ಹೋದೆ. ಡಿಆರ್ ಶಿಷ್ಯರು, ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು... ಹೀಗೇ ಸಿಕ್ಕಾಪಟ್ಟೆ ಜನ. ಅಲ್ಲಲ್ಲೆ ಗುಂಪು, ಡಿಆರ್ ಬಗ್ಗೆಯೇ ಗುಣಗಾನ. ಮೇಸ್ಟ್ರು ಮಾತ್ರ ಮಾತಿಲ್ಲ. ಸ್ಟ್ಯಾಂಡ್ ಸ್ಟಿಲ್. ಅವರ ಆ ಗಂಭೀರತೆ ಕಂಡ ಅವರ ಕೆಲವು ಪರಿಚಿತರು ಲಂಕೇಶರ ಮೂಡ್ ಸರಿಯಿಲ್ಲವೆಂದು ತೀರ್ಮಾನಿಸಿ, ದೂರ ಸರಿದರು.
ಅವರ ಪಕ್ಕದಲ್ಲಿ ನಿಂತಿದ್ದ ನನ್ನತ್ತ ತಿರುಗಿದ ಲಂಕೇಶರು, ‘ಏನೋ ಇಷ್ಟೊಂದ್ ಜನ...?’ ಎಂದರು.
ಸೈಲೆಂಟಾಗಿದ್ದವರು ಮಾತನಾಡಿದರಲ್ಲ ಎಂದು ಹಗುರಾದರೂ, ಇಷ್ಟೊಂದ್ ಜನ ಅಂದಿದ್ದು ಯಾಕೋ ಒಂಥರಾ ಕೇಳಿಸಿತು. ಅಚ್ಚರಿಯೋ, ಅಸೂಯೆಯೋ... ಗೊತ್ತಾಗಲಿಲ್ಲ. ಸುಮ್ಮನೆ ಅವರ ಮುಖ ನೋಡಿದೆ.
ಕೈ ಕಟ್ಟಿ ನಿಂತಿದ್ದ ಅವರ ಮುಖದ ಹಣೆಯ ಮೇಲೆ ಸುಕ್ಕುಗಟ್ಟಿದ ನರಿಗೆಗಳು ಅವರ ಸೀರಿಯಸ್‌ಗೆ ಸ್ಟ್ರೆಂಥ್ ತುಂಬುತ್ತಿದ್ದವು. ಆ ಗಂಭೀರ ಮುಖಭಾವದಲ್ಲಿಯೇ, ‘ನಾನ್ ಸತ್ರೆ... ನಾಲ್ಕು ಜನ ಬರ್‌ಬಹುದು’ ಎಂದರು.
ಅದೊಂಥರಾ ಕೇಳಿಸಿದರೆ, ಇದೊಂಥರ ಕೇಳಿಸಿತು. ವ್ಯಂಗ್ಯವೋ, ಸ್ವವಿಮರ್ಶೆಯೋ ಗೊತ್ತಾಗಲಿಲ್ಲ. ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾದೆ. ಮತ್ತೆ ಲಂಕೇಶರೆ ಮುಂದುವರೆಸಿ, 
‘ಆ ನಾಲ್ಕು ಜನ ಯಾರು ಗೊತ್ತೇನೋ... ಇವನು ಸತ್ತವ್ನೋ ಇಲ್ವೋ ಅಂತ ಕನ್ಫರ್ಮ್ ಮಾಡ್ಕಳಕೆ ಬಂದೋರೆ ಆಗಿರ್ತರೆ...’ ಎಂದರು!
***
ಲಂಕೇಶರು ಶಿವಮೊಗ್ಗ ಕಡೆಯ ರೈತ ಕುಟುಂಬದಿಂದ ಬಂದವರು. ಆದರೆ ಅಧ್ಯಾಪಕ, ಚಿತ್ರನಿರ್ದೇಶಕ, ಸಂಪಾದಕರಾಗಿ, ಬೆಂಗಳೂರಿನ ನಗರವಾಸಿಗಳಾಗಿ ಬಹಳ ಕಾಲದಿಂದ ಭೂಮಿಯೊಂದಿಗಿನ ಸಂಬಂಧದಿಂದ ವಂಚಿತರಾಗಿದ್ದರು. ಆ ಬಗೆಗಿನ ಪಾಪಪ್ರಜ್ಞೆಗೋ, ಭೂಮಿ ಬಗೆಗಿನ ಅಪಾರ ಪ್ರೀತಿಗೋ ಅಥವಾ ಅದರಿಂದ ಸಿಗುವ ಸಮಾಧಾನಕ್ಕೋ ತಮ್ಮ ಕೊನೆಗಾಲದಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ಸ್ವಲ್ಪ ಭೂಮಿ ಖರೀದಿಸಿದರು. ಮಾವು, ತೆಂಗಿನಮರಗಳಿದ್ದ ತೋಟಕ್ಕೆ ಬೋರ್‌ವೆಲ್ ಕೊರೆಸಿ, ಹನಿ ನೀರಾವರಿ ಹರಿಸಿ, ಸಪೋಟ, ಬಾಳೆ ಹಾಕಿಸಿ ಹಸಿರಾಗಿಸಿದರು. ಹಸಿರಿನ ನಡುವೆ ಕೂತು ಕಾಲ ಕಳೆಯಲು ತೋಟಕ್ಕೆ ವಾರಕ್ಕೆ ಎರಡು ಸಲ ಹೋಗಿ ಬರಲಾರಂಭಿಸಿದರು.
ಹೀಗೆ ಹೋಗಿ ಬರುವಾಗ, ಲಂಕೇಶರು ಬನ್ನೇರುಘಟ್ಟದ ಮುಖ್ಯರಸ್ತೆಯಲ್ಲಿ (ಆಗ ಈಗಿನಂತೆ ಮಲ್ಟಿ ನ್ಯಾಷನಲ್ ಕಂಪನಿಗಳಾಗಲಿ, ಜನ-ಟ್ರಾಫಿಕ್ಕಾಗಲಿ ಇರಲಿಲ್ಲ. ರಸ್ತೆ ಕೂಡ ಸರಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳಿದ್ದವು. ಅವು ಕೂಡ ಪುಟ್ಟ ಪೆಟ್ಟಿಗೆ ಅಂಗಡಿಗಳು) ಒಂದು ಕಡೆ ಕಾರು ನಿಲ್ಲಿಸಿ, ಕಾಫಿ ಕುಡಿದು ಸಿಗರೇಟು ಸೇದಿ ಹೋಗುವುದು ಅಭ್ಯಾಸವಾಗಿತ್ತು. ಅದೊಂದು ಪುಟ್ಟ ಪೆಟ್ಟಿಗೆ ಅಂಗಡಿ. ಅಂಗಡಿಗೆ ಮಧ್ಯವಯಸ್ಕ ಹೆಂಗಸು ಯಜಮಾನಿ. ಆಕೆಗೆ ಲಂಕೇಶರು ಯಾರು ಏನು ಎನ್ನುವುದು ಗೊತ್ತಿಲ್ಲ. ಇವರೂ ಹೇಳಲಿಲ್ಲ. ಆದರೆ ಕಾರಿನಲ್ಲಿ ಬಂದು ನನ್ನ ಪೆಟ್ಟಿಗೆ ಅಂಗಡಿಯಲ್ಲಿ ಕಾಫಿ ಕುಡಿಯುವವರ ಬಗ್ಗೆ ಆಕೆಗೆ ಗೌರವವಿತ್ತು, ಹೆಮ್ಮೆ ಇತ್ತು.
ಒಂದು ದಿನ, ಲಂಕೇಶರ ಪರಿಚಯವಿದ್ದವರು ಆಕೆಯ ಎದುರೇ ಲಂಕೇಶರಿಗೆ ನಮಸ್ಕರಿಸಿದರು. ಲಂಕೇಶರೂ ನಮಸ್ಕರಿಸಿ ಕಾರು ಹತ್ತಿ ಸುಮ್ಮನೆ ಹೊರಟುಹೋದರು. ಆದರೆ ಆಕೆ ನಮಸ್ಕರಿಸಿದವರನ್ನು ಕೇಳಿ, ತಿಳಿದಿದ್ದಷ್ಟೇ ಅಲ್ಲ, ಮತ್ತೊಂದು ಸಲ ಲಂಕೇಶರು ಆ ಪೆಟ್ಟಿಗೆ ಅಂಗಡಿಗೆ ಹೋಗುವುದಕ್ಕೆ ಮುಂಚೆ ಅಲ್ಲಿ, ಕೆಲವು `ಲಂಕೇಶ್ ಪತ್ರಿಕೆ'ಯ ಸಂಚಿಕೆಗಳನ್ನು ಮಾರಾಟ ಮಾಡಲು ತೂಗು ಹಾಕಿದ್ದರು. ಅದನ್ನು ನೋಡಿದ ಲಂಕೇಶರಿಗೆ ಖುಷಿಯಾದರೂ ತೋರಿಸಿಕೊಳ್ಳದೆ, ಅದು ನಮ್ಮ ಪತ್ರಿಕೆ ಎಂದು ಹೇಳಿಕೊಳ್ಳದೆ ನಕ್ಕು ಸುಮ್ಮನಾಗಿದ್ದರು.
ಆಕೆಯ ಅದೃಷ್ಟವೋ ಏನೋ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತ್ತು. ಪೆಟ್ಟಿಗೆ ಅಂಗಡಿ, ನಂತರ ಪೇಪರ್ ಅಂಗಡಿಯಾಗಿ ಆಮೇಲೆ ಮತ್ತೊಂದು ಬದಿಗೆ ಮೀನು ಮಾರಾಟದ ಅಂಗಡಿಯನ್ನೂ ಹೊಸದಾಗಿ ಆರಂಭಿಸಿದ್ದರು.
ಕುತೂಹಲಕರ ಸಂಗತಿ ಎಂದರೆ, ಆ ಪುಟ್ಟ ಪೆಟ್ಟಿಗೆ ಅಂಗಡಿಗೆ, ಅದರಲ್ಲೂ ಮೀನಿನ ಅಂಗಡಿಗೆ ‘ಲಂಕೇಶ್ ಮೀನು ಮಾರಾಟದ ಅಂಗಡಿ’ ಎಂಬ ಪುಟ್ಟದೊಂದು ಬೋರ್ಡ್ ಬರೆಸಿ ಹಾಕಿದ್ದರು. ಆ ಬೋರ್ಡನ್ನು ಕಂಡವರೆ ಥ್ರಿಲ್ಲಾದ ಲಂಕೇಶರು, ಫೋಟೋ ತೆಗೆದುಕೊಂಡು ಬಂದು, ನಮ್ಮ ಗಿರಿಯನ್ನು ಕರೆದು, ‘ಇದನ್ನು ಪ್ರಿಂಟ್ ಹಾಕಿಸಿಕೊಂಡು ಬಾ’ ಎಂದರು. ಪ್ರಿಂಟ್ಸ್ ಬಂದಮೇಲೆ ನನ್ನನ್ನು ಕರೆದು, ಆ ಫೋಟೋಗಳಲ್ಲಿ ಒಂದನ್ನು ನನಗೆ ಕೊಟ್ಟು, ‘ಹೆಂಗೈತೋ’ ಎನ್ನುವಂತೆ ಹುಬ್ಬಾರಿಸಿದರು. ಅಷ್ಟೇ ಅಲ್ಲ, ಆ ವಾರದ ‘ಈ ಸಂಚಿಕೆ’ಯಲ್ಲಿ ಆ ಪೆಟ್ಟಿಗೆ ಅಂಗಡಿಯ ಹೆಂಗಸಿನ ಧೈರ್ಯ, ಸಾಹಸ ಮತ್ತು ಜಾಣ್ಮೆಯನ್ನು ಬಣ್ಣಿಸಿದ್ದರು. ಬಡ, ಅಸಹಾಯಕ ಹೆಣ್ಣುಮಕ್ಕಳು ಸ್ವಾವಲಂಬಿಗಳಾದರೆ ಬದುಕು ಎಷ್ಟು ನಿಸೂರ ಎನ್ನುವುದನ್ನು ಹೇಳಿದ್ದರು. ಆಕೆಯ ಅಂಗಡಿಯ ಫೋಟೋ ಕೊಟ್ಟು, ಅದರ ಬಗ್ಗೆ ಬರೆದ ಮೇಲೆ- ‘ಈ ಸಂಚಿಕೆ’ ಅಂಕಣದಲ್ಲಿ ಆಕೆಯ ಫೋಟೋ ಸಹಜವಾಗಿಯೇ ಪ್ರಕಟವಾಗಿತ್ತು. 
ಪತ್ರಿಕೆ ಪ್ರಿಂಟಾಗಿ ಬಂದಮೇಲೆ, ಅದನ್ನು ತಿರುವಿ ಹಾಕುತ್ತಿದ್ದಾಗ ಈ ಸಂಚಿಕೆ ಮತ್ತು ಆ ಫೋಟೋ ನೋಡುವಾಗ ನನಗೆ ಯಾಕೋ ವೈಎನ್‌ಕೆ ನೆನಪಾದರು. ಲಂಕೇಶರಿಗೆ ವೈಎನ್‌ಕೆ ಬಗ್ಗೆ ಗೌರವವಿದ್ದರೂ, ‘ಛೇ ಛೇ’ ಅಂಕಣದಲ್ಲಿ ಮಾತ್ರ ವೈಎನ್‌ಕೆ ಆಗಾಗ ಲೇವಡಿಗೊಳಗಾಗುತ್ತಲೇ ಇದ್ದರು. ಮೀನಿನ ಫೋಟೋ ನೋಡಿ ವೈಎನ್‌ಕೆ ಏನು ಕಾಮೆಂಟ್ ಮಾಡಬಹುದೆಂದು ನನ್ನನ್ನು ಕೊರೆಯತೊಡಗಿತು. ಅದೇ ಸಮಯಕ್ಕೆ ಸರಿಯಾಗಿ ಲಂಕೇಶರು ಬಂದರು, ನಾನು ಈ ಸಂಚಿಕೆಯ ಪುಟವನ್ನೇ ನೋಡುತ್ತಾ ಕೂತಿದ್ದೆ. ಏನು ಎನ್ನುವಂತೆ ಕಣ್ಣಿನಲ್ಲೇ ಪ್ರಶ್ನಿಸಿದರು.
ನಾನು ‘ಲಂಕೇಶ್ ಮೀನು ಮಾರಾಟದ ಅಂಗಡಿ’ ಫೋಟೋವನ್ನು ತೋರಿಸುತ್ತಾ, ‘ಇದನ್ನು ವೈಎನ್‌ಕೆ ನೋಡಿದ್ರೆ ಏನನ್ನಬಹುದು ಸಾರ್’ ಎಂದೆ.
ಥಟ್ ಅಂತ ‘ಇನ್ನೇನಂತರೆ, ‘ಲಂಕೇಶ್... ಮೀನ್ ಫೆಲೋ’ ಅಂತ ನಗಾಡ್ತರೆ’ ಎಂದು ಹೇಳಿ ತಮ್ಮ ಕೋಣೆಯತ್ತ ಹೋಗಿಯೇಬಿಟ್ಟರು.
***
ಹೀಗೆ ಒಂದು ಜಾಲಿ ಟ್ರಿಪ್... ಲಂಕೇಶ್ ಮೇಸ್ಟ್ರು, ಅಗ್ರಹಾರ ಕೃಷ್ಣಮೂರ್ತಿಯವರು ಮತ್ತು ನಾನು ಕಾರಿನಲ್ಲಿ ಮೈಸೂರಿಗೆ ಹೋಗುತ್ತಿದ್ದೆವು. ಪ್ರಯಾಣದ ನಡುವೆ, ಎಲ್ಲಾದರು ಒಂದು ಕಡೆ ಕಾರನ್ನು ನಿಲ್ಲಿಸಿ ಎಳನೀರು ಅಥವಾ ಟೀ ಕುಡಿಯುವುದು, ಸಿಗರೇಟು ಸೇದುವುದು, ಕಲ್ಲಂಗಡಿ ಹಣ್ಣು ಕೊಳ್ಳುವುದು, ಹಲಸಿನ ಹಣ್ಣು ತಿನ್ನುವುದು (ಅದೂ ಮಹಿಳೆಯರು ಮಾರುತ್ತಿದ್ದರೆ ಅವರು ಕೇಳಿದಷ್ಟು ಹಣ ಕೊಡುವುದು) ಲಂಕೇಶರ ಖುಷಿಯ ಕ್ಷಣಗಳಲ್ಲೊಂದು. ಅದರಲ್ಲೂ ರಾಮನಗರ ಬಿಟ್ಟ ತಕ್ಷಣ ಸಿಗುವ ಮಲಯಾಳಿ ಕಾಕಾನ ಡಾಬಾದಲ್ಲಿ ಆಮ್ಲೆಟ್, ಟೀ- ಅವರ ಫೇವರಿಟ್ ಆಗಿತ್ತು.
ಹಾಗೆಯೇ ಒಂದು ಕಡೆ ಕಾರು ನಿಲ್ಲಿಸಿದ ಮೇಸ್ಟ್ರು, ‘ಏ ಬಸುರಾಜ, ಆ ಎಳ್ನೀರ್ ನೋಡೋ, ಚೆನ್ನಾಗಿದ್ರೆ ಕುಡಿಯನ...’ ಅಂದ್ರು.
ಕಾರ್ ನಿಲ್ಲಿಸಿದ ತಕ್ಷಣವೇ ಆ ಎಳನೀರು ಅಂಗಡಿಯ ಯಜಮಾನ ಕೊಚ್ಚೋದಕ್ಕೆ ರೆಡಿಯಾದ. ಮೇಸ್ಟ್ರು ಮಹತ್ವವಾದ ಜವಾಬ್ದಾರಿ ಹೊರಿಸಿದ್ದಾರೆಂಬ ಎಚ್ಚರಿಕೆಯಿಂದ ನಾನು, ತೆಂಗಿನ ತೋಟಗಳ ನನ್ನೂರಿನ ಅನುಭವದಿಂದ, ‘ಮೂರು ಕೆಂದಳ್ನೀರ್ ವಡ್ಯಪ್ಪ’ ಅಂದೆ. ಆತ ಇವ್ನೇನೋ ಎಳ್ನೀರ್ ಬಗ್ಗೆ ಒಸಿ ತಿಳಿಕಂಡಿರಂಗ್ ಕಾಣ್ತನೆ ಅಂತ ಮೊದಲು ತೆಗೆದುಕೊಂಡಿದ್ದನ್ನು ಬಿಟ್ಟು ಕೆಂದಳ್ನೀರ್ ಹೊಡೆದು ಕೊಟ್ಟ. ಮೇಸ್ಟ್ರು ಕುಡಿದು ‘ಚೆನ್ನಾಗಿದೆ ಕಣೋ...’ ಎಂದರು. ಎಷ್ಟು ಎಂದು ಕೇಳಿ ದುಡ್ಡು ಕೊಡಲು ಮುಂದಾದೆ. ಅಲ್ಲಿದ್ದ ಮೂವರಲ್ಲಿ ನಾನೇ ಚಿಕ್ಕವನು. ಚಿಕ್ಕವನು ಕೊಡ್ತಿದ್ದಾನಲ್ಲ ಅಂತ ಅಗ್ರಹಾರ ಕೃಷ್ಣಮೂರ್ತಿಯವರು, ‘ಏ ಬಸು ಇರಿ, ನಾನ್ಕೊಡ್ತಿನಿ...’ ಅಂದ್ರು.
ತಕ್ಷಣ ಲಂಕೇಶರು, ‘ಏ ಕೊಡ್ಲಿ ಬಿಡೋ, ಅವನ್ಯಾವತ್ತು ಇದ್ನೆಲ್ಲ ಕಲಿಯದು’ ಅಂದ್ರು. ಅಗ್ರಹಾರ ಎಳನೀರು ಕುಡಿಯುವುದರಲ್ಲಿ ಮಗ್ನರಾದರು.
ಅಗ್ರಹಾರರಿಗೆ ಕೊಡ್ಲಿ ಬಿಡೋ ಅಂದ ಲಂಕೇಶರು ತಕ್ಷಣ ನನ್ನತ್ತ ತಿರುಗಿ, ‘ತುಂಬಾ ಒಳ್ಳೆ ಪೊಯೆಟ್ಟು, ವರ್ಷಕ್ಕೊಂದು ಬರದ್ರೆ ನಮ್ ಪುಣ್ಯ, ಹಿಂಗೇ ನೀನು ಅದೂ ಇದೂ ಕುಡಸ್ಕೊಂಡ್ ಚೆನ್ನಾಗಿ ನೋಡ್ಕಂಡಿದ್ರೆ... ಅವ್ರಿಗೆ ಮೂಡ್ ಬಂದಾಗ್ ಬರಕೊಡ್ತರೆ...’ ಎಂದು ಅಗ್ರಹಾರರ ಮುಖ ನೋಡಿದರು.  
ಆಶ್ಚರ್ಯ ಅಂದ್ರೆ, ಅಗ್ರಹಾರ ಕೂಡ ಅವರಿಗೆ ಮೂಡ್ ಬಂದಾಗ, ಬಿಡುವು ಸಿಕ್ಕಾಗ ಬರೆದು ಕೊಟ್ಟಿದ್ದರು. ಅವರ ಬರವಣಿಗೆಯ ‘ಹಸಿವು, ಉತ್ಸಾಹ ಮತ್ತು ಅನಿವಾರ್ಯತೆ’ಯನ್ನು ಖುದ್ದಾಗಿ ಕಂಡಿದ್ದ ಮೇಸ್ಟ್ರು, ಬಹುವಚನ ಬಳಸಿ ಬೆಚ್ಚಿ ಬೀಳಿಸಿದ್ದರು.
ಲಂಕೇಶರನ್ನು ಬಹಳ ಹತ್ತಿರದಿಂದ ಕಂಡಿದ್ದ ಅಗ್ರಹಾರರು, ‘ನಾನು ಸ್ವಲ್ಪ ನಿಧಾನ, ನಿಜ, ಏನ್ ಬಸು, ದೀಪಾವಳಿ ವಿಶೇಷಾಂಕಕ್ಕೆ ಯಾವತ್ತಾದ್ರು ಪದ್ಯ ಕೊಡದೆ ತಪ್ಪಿಸ್ಕೊಂಡಿದೀನೇನ್ರಿ...?’ ಎಂದರು.
‘ನಾನೇಳಿದ್ದು ಅದೇ ಕಣಲೇ... ವರ್ಷಕ್ಕೊಂದು ಬರದ್ರೆ ನಮ್ ಪುಣ್ಯ ಅಂತ...’
ಲೇಖಕರು, ಬರಹಗಾರರನ್ನು ಹೇಗೆ ನೋಡ್ಕೋಬೇಕು, ಇಟ್ಕೋಬೇಕು ಅಂತ ನನಗೆ ಟಿಪ್ಸು, ಎದುರೆದುರೆ ಅಗ್ರಹಾರರಿಗೆ ಟಾಂಗ್!
***
ಪ್ರತಿದಿನ ಲಂಕೇಶರ ‘ಪತ್ರಿಕೆ’ ಕಚೇರಿಯಲ್ಲಿ ಪಾನಗೋಷ್ಟಿ ಇದ್ದೇ ಇರೋದು. ಲಂಕೇಶರ ದುಷ್ಟಕೂಟದ ಸದಸ್ಯರಲ್ಲಿ ಯಾರಾದರೊಬ್ಬರು ತಪ್ಪದೇ ಹಾಜರಾಗುತ್ತಿದ್ದರು. ಕೊನೆಗೆ ಯಾರೂ ಇಲ್ಲ ಎಂದರೆ ಪತ್ರಿಕೆಯ ವರದಿಗಾರರು. ಅವರೂ ಬೇಡವೆಂದರೆ ಅವರೊಬ್ಬರೆ... ಹೀಗೆ ಪ್ರತಿದಿನ ಸಂಜೆಯ ಸಮಾರಾದನೆ ಇರೋದು. ಲಂಕೇಶರು ಕುಡಿಯಲಿ, ಕುಡಿಯದೆ ಇರಲಿ, ತಿಂಗಳಿಗೆ ಇಂತಿಷ್ಟು ಹಣ ಎಂದು ಡ್ರಿಂಕ್ಸ್‌ಗೆ ಎತ್ತಿಡುತ್ತಿದ್ದರು.  
ಇದಲ್ಲದೆ ವರ್ಷಕ್ಕೆ ಮೂರು ಸಲ- ಡಿಸೆಂಬರ್ ೩೧ (ಹೊಸ ವರ್ಷ), ಮಾರ್ಚ್ ೮ (ಲಂಕೇಶರ ಬರ್ತ್‌ಡೇ), ಜುಲೈ ೬ (ಪತ್ರಿಕೆ ಹುಟ್ಟಿದ ಹಬ್ಬ)- ಭರ್ಜರಿ ಪಾರ್ಟಿ ಏರ್ಪಡಿಸಿ ಎಲ್ಲರನ್ನು ಕರೆದು ಕುಡಿಸಿ, ಕುಣಿಸಿ, ಖುಷಿಪಡಿಸುವುದು ಲಂಕೇಶರ ಪತ್ರಿಕೆಯ ಸಂಪ್ರದಾಯವೇ ಆಗಿಹೋಗಿತ್ತು.
ಹೀಗೆಯೇ ಒಂದು ಸಲ ಹೊಸ ವರ್ಷದ ಪಾರ್ಟಿ. ಯಾರ‍್ಯಾರನ್ನು ಕರೆಯಬಹುದೆಂದು ಪಟ್ಟಿ ಮಾಡಿ, ಅವರ ಮುಂದಿಟ್ಟೆ. ಆಮೇಲೆ ಏನನ್ನಿಸಿತೋ, ‘ನೀನೆ ನೋಡಿ ಕರೆಯೋ...’ ಎಂದರು.
ಸಾಮಾನ್ಯವಾಗಿ ಪತ್ರಿಕೆ ಮತ್ತು ಲಂಕೇಶರ ಸಂಪರ್ಕದಲ್ಲಿರುವ ಸಾಹಿತಿಗಳು, ಕಲಾವಿದರು, ಲೇಖಕರು, ಬರಹಗಾರರು, ವರದಿಗಾರರು, ಏಜಂಟರು, ರಾಜಕಾರಣಿಗಳು, ಅಭಿಮಾನಿಗಳು, ಹಿತೈಷಿಗಳು... ಹೀಗೆ ಎಲ್ಲರನ್ನೂ ಕರೆಯುತ್ತಿದ್ದೆವು. ಅದೇ ಅಂದಾಜಿನ ಮೇಲೆ ಆ ಸಲವೂ ಫೋನ್ ಮಾಡಿ ಹೇಳಿದೆವು. ಹತ್ತಾರು ಕ್ಷೇತ್ರಗಳ ನೂರಾರು ಜನ ಹೀಗೆ ಒಂದು ಕಡೆ ಕಲೆತು, ಕುಡಿದು, ಹರಟೆ ಹೊಡೆದು ಹೋಗುವುದು- ಆರೋಗ್ಯಕರ ವಾತಾವರಣಕ್ಕೆ, ಸಮೃದ್ಧ ಸಾಹಿತ್ಯ ಸೃಷ್ಟಿಗೆ, ವಿಚಾರ ಪ್ರಚೋದನೆಗೆ, ಅದಕ್ಕಿಂತ ಹೆಚ್ಚಾಗಿ ಲಂಕೇಶರ ಮನಸ್ಸಿಗೆ ಮುದ ನೀಡುವ ಸಂಗತಿಯಾಗಿತ್ತು. ಇದರಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ, ಲಂಕೇಶರ ದರ್ಬಾರೂ ಕಾಣುತ್ತಿರಲಿಲ್ಲ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎನ್ನುವುದು ಎದ್ದು ಕಾಣುತ್ತಿತ್ತು.
ಆ ವರ್ಷವೂ ಅಂಥಾದ್ದೆ ಪಾರ್ಟಿ, ನೆನಪಿನಲ್ಲಿ ಉಳಿಯುವಂತಿತ್ತು.
ಸಾಮಾನ್ಯವಾಗಿ ಪಾರ್ಟಿ ಆದ ಮಾರನೆ ದಿನ ಆಫೀಸಿಗೆ ಬಂದಾಗ, ನಿನ್ನೆ ರಾತ್ರಿ ಯಾರು ಹ್ಯೆಂಗೆಗೆಲ್ಲ ‘ಆಡಿದರು’ ಎಂಬುದರ ಬಗ್ಗೆಯೇ ಮಾತುಕತೆಯಿರುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಯಾರಾದರೂ ಅತಿಯಾಗಿ ‘ಆಡಿದರೆ’, ಅನಾಗರಿಕವಾಗಿ ವರ್ತಿಸಿದರೆ, ಅದು ಲಂಕೇಶರಿಗೆ ಕಿರಿಕಿರಿ ಉಂಟು ಮಾಡಿದರೆ, ಅವರ ಬಗ್ಗೆ ಮೇಸ್ಟ್ರು ಮುಲಾಜಿಲ್ಲದೆ, ‘ಏ ಅವುನ್ನ ಇನ್ನೊಂದ್ಸಲ ಕರೀಬ್ಯಾಡ, ಇಲ್ಗೂ ಕೂಡಬ್ಯಾಡ...’ ಅನ್ನುವುದೂ ಕಾಮನ್ ಆಗಿತ್ತು.
ಏನೂ ಇಲ್ಲ ಎಂದರೆ ಕೊನೆಗೆ, ‘ಏನ್ರೋ ಇದು, ಇಷ್ಟೊಂದು ಖರ್ಚ್ ಮಾಡಿದ್ದೀರಾ, ನಿಮ್ಗೇ ಬುಟ್ರೆ ನನ್ನ ಹರಾಜಾಕ್ಬುಡ್ತಿರಾ...’ ಎನ್ನುವ ಬೈಗುಳವಂತೂ ಇದ್ದೇ ಇರುತ್ತಿತ್ತು.
ಹೀಗೆ ಏನಾದರೊಂದು ಲಂಕೇಶರ ಕಡೆಯಿಂದ ಇರೋದು. ಅವತ್ತೂ ಹಾಗೆಯೇ ಮನೆಯಿಂದ ಬಂದವರು, ನನ್ನನ್ನು ನೋಡಿ, ‘ಏನೋ @#$%ನ್ನೆಲ್ಲ ಕರ‍್ದುಬುಟ್ಟಿದ್ದೆ’ ಎಂದು ರೂಮಿಗೆ ಹೋಗಿಬಿಟ್ಟರು. ಅವರು ಹೇಳಿದ ದಾಟಿ ವ್ಯಂಗ್ಯವಾಗಿತ್ತು. ಅವರು ಕೊಟ್ಟ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡು, ಹದ್ದುಮೀರಿ ಹೋಗಿದ್ದ ನನ್ನ ಅಹಂಕಾರಕ್ಕೆ ಮದ್ದರೆಯುವಂತಿತ್ತು.
ಆಶ್ಚರ್ಯವೆಂದರೆ, @#$% ಅವರು ಅವರ ಮೆಚ್ಚಿನ ಯುವ ಕತೆಗಾರ. ಅವರೊಂದಿಗೆ ಈ ಹೊತ್ತಿನ ಹೊಸ ಕತೆಗಾರರನ್ನು ಹೆಸರಿಸಿ, ಅವರನ್ನು ಕನ್ನಡದ ಪ್ರಾಮಿಸಿಂಗ್ ಕತೆಗಾರರು ಎಂದು ಬರೆದದ್ದೂ ಇದೆ. ಅಷ್ಟೇ ಅಲ್ಲ, ಅವರಿಗೆ ಫೋನ್ ಮಾಡಿ ಆಫೀಸಿಗೆ ಕರೆಸಿಕೊಂಡು ವ್ಹಿಸ್ಕಿ ಕೊಟ್ಟು, ಬುಕ್ಸ್ ಕೊಟ್ಟು, ಕತೆಗಳ ಬಗ್ಗೆ ಮಾತಾಡಿ ಕಳುಹಿಸಿದ್ದೂ ಇದೆ.
ಅಲ್ಲಿ ಮೈಸೂರಿಗೆ ಹೋಗ್ತಾ ಅಗ್ರಹಾರರಿಗೆ ಹಂಗೆ, ಇಲ್ಲಿ ಈ ಕತೆಗಾರರಿಗೆ ಹಿಂಗೆ!
ಹೀಗಿರುವಾಗ ನಾನು ಅವರನ್ನು ಪಾರ್ಟಿಗೆ ಕರೆದದ್ದು ಹೇಗೆ ತಪ್ಪಾಯಿತು ಎಂದು ಯೋಚಿಸುವುದಕ್ಕಿಂತ, ಲಂಕೇಶರ ಹತ್ತಾರು ಮುಖಗಳನ್ನ, ಶಕ್ತಿ ಮತ್ತು ಮಿತಿಯನ್ನ ಅರಿಯುವುದು, ಮತ್ತದನ್ನು ನಿಮ್ಮ ಮುಂದಿಡುವುದು ಸರಿ ಎನಿಸುತ್ತಿದೆ, ಲಂಕೇಶರಿಲ್ಲದ ಈ ಹೊತ್ತಿನಲ್ಲಿ.

ಅತಂತ್ರ ಬದುಕಿನ ಸ್ವತಂತ್ರ ಮಹಿಳೆ- ಎಳನೀರ ಮಂಗಮ್ಮ





ಪಕ್ಕದ ಕೇರಳ ಹೇಳಿಕೇಳಿ ತೆಂಗಿನ ನಾಡು. ರಾಜ್ಯದ ಉದ್ದಕ್ಕೂ ಹೇರಳವಾಗಿರುವ ತೆಂಗಿನ ಬೆಳೆಯಿಂದ ಕೇರಳ ರಾಜ್ಯ ಸರ್ಕಾರ ತೆಂಗು ಆಧಾರಿತ ಹತ್ತಾರು ಉತ್ಪನ್ನಗಳನ್ನು ತಯಾರಿಸುವತ್ತ ಗಮನ ಹರಿಸಿ, ಅಭಿವೃದ್ಧಿಪಡಿಸಿ ಅದನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಪರಿವರ್ತಿಸಿದೆ. ದುರದೃಷ್ಟಕರ ಸಂಗತಿ ಎಂದರೆ ಅಲ್ಲಿನ ಯುವಕರು ತೆಂಗನ್ನು ತೆಗೆದು ಪಕ್ಕಕ್ಕಿಟ್ಟು, ಗ್ರಾಮಗಳಿಂದ ನಗರಗಳಿಗೆ, ನಗರಗಳಿಂದ ಹೊರದೇಶಗಳಿಗೆ ಕೆಲಸಗಳನ್ನರಿಸಿ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಅಲ್ಲಿ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕೆಲಸಕ್ಕೆ ಬೇಕಾಗುವ ‘ಗಂಡು’ ಕೂಲಿಕಾರರೇ ಸಿಗದಂತಹ ಪರಿಸ್ಥಿತಿ ಏರ್ಪಟ್ಟಿದೆ. ಇದರಿಂದ ಚಿಂತೆಗೀಡಾದ ಕೇರಳ ಸರ್ಕಾರ, ತೆಂಗಿನ ಮರ ಹತ್ತುವ, ಕಾಯಿ ಕೀಳುವ ಕೆಲಸಕ್ಕೆ ಮಹಿಳೆಯರನ್ನು ನೇಮಿಸಿಕೊಳ್ಳುವತ್ತ ಗಮನ ಹರಿಸಿದೆ. ಮತ್ತು ಆ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಚಾಲನೆ ನೀಡಿ, ಯಶಸ್ವಿಯಾಗಿದೆ.
ಈ ತರಬೇತಿಯಲ್ಲಿ ಪಾಲ್ಗೊಂಡ ರೀನಾ ಎಂಬ ಮಹಿಳೆ ಈಗ ಮರದಿಂದ ಕಾಯಿ ಕೀಳುವ ಕೆಲಸದಲ್ಲಿ ನಿಪುಣತೆ ಸಾಧಿಸಿ, ತನ್ನಂತಹ ಮತ್ತೊಂದಿಷ್ಟು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಹಾಗೆಯೇ ಎಳನೀರ ಅಂಗಡಿಯೊಂದನ್ನಿಟ್ಟು ದಿನಕ್ಕೆ ಐನೂರರಿಂದ ಸಾವಿರದವರೆಗೆ ಸಂಪಾದಿಸುತ್ತ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ರೀನಾ ಕತೆಯನ್ನು ಓದುತ್ತಿದ್ದಂತೆ ನನಗೆ ನಮ್ಮ ರಸ್ತೆಯ ಎಳನೀರು ಮಾರುವ ಮಂಗಮ್ಮನ ನೆನಪಾಯಿತು. ಮಾಸ್ತಿ ವೆಂಕೇಶ ಅಯ್ಯಂಗಾರರ ‘ಮೊಸರಿನ ಮಂಗಮ್ಮ’ನ ಥರಾನೂ ಅನ್ನಿಸಿತು. ವಿದ್ಯಾಪೀಠ ಸರ್ಕಲ್‌ನಲ್ಲಿ, ರಸ್ತೆ ಬದಿಯಲ್ಲಿ ಎಳನೀರು ಮಾರುವ ಮಂಗಮ್ಮನ ಕೈಯಲ್ಲಿ ಮಚ್ಚು ನೋಡಿದವರು, ಒಂದು ಕ್ಷಣ ಅವಾಕ್ಕಾಗದೆ ಇರಲಾರರು. ಯಾಕೆಂದರೆ, ಗಂಡಸರೆನ್ನಿಸಿಕೊಂಡವರ ಎಡಗೈನಲ್ಲಿ ತಲೆಬುರುಡೆ ಗಾತ್ರದ ಎಳನೀರನ್ನು ಹಿಡಿದುಕೊಳ್ಳುವುದೇ ಕೊಂಚ ಕಷ್ಟದ ಕೆಲಸ. ಇನ್ನು ಅದನ್ನು ಮಹಿಳೆಯೊಬ್ಬಳು ಹಿಡಿದುಕೊಂಡು ಬಲಗೈನಲ್ಲಿಡಿದ ಮಚ್ಚಿನಿಂದ ಮೂರೇ ಮೂರು ಏಟಿಗೆ, ಎಳನೀರಿನ ತಲೆ ತೆಗೆದು, ತುಳುಕುವ ಎಳನೀರ ಬುರುಡೆಯನ್ನು ನಿಮ್ಮತ್ತ ನೀಡುವ ಮಂಗಮ್ಮನ ಶೈಲಿಗೆ ಎಂಥವರೂ ಒಂದು ಕ್ಷಣ ಬೆರಗಾಗದೇ ಇರಲಾರರು.
ಇಲ್ಲಿ ಬೆರಗಾಗುವಂಥಾದ್ದು ಏನೂ ಇಲ್ಲ. ಯಾರೂ ಬೆಚ್ಚುವುದೂ ಇಲ್ಲ. ಆ ಕ್ಷಣಕ್ಕೆ ಮಂಗಮ್ಮನ ಎಳನೀರು ಹೊಡೆಯುವ ವಿಧಾನಕ್ಕೆ ಬೆರಗಾದರೂ, ಬಾಯಿ ಬಿಡದೆ, ಸುಮ್ಮನೆ ಕುಡಿದು ಹೋಗುವವರೇ ಹೆಚ್ಚು. ಹಾಗೆಯೇ ಮರೆಯುವವರು ಕೂಡ. ಆದರೆ ಅದೇ ಕೆಲಸವನ್ನು ನಾವು ಮಾಡಲು ಹೋದಾಗ ಮಂಗಮ್ಮನ ಎಳನೀರು ಹೊಡೆಯುವ ಕಷ್ಟದ ಅನುಭವ ಮತ್ತು ಆಕೆಯ ವಿಶಿಷ್ಟ ಶೈಲಿಯ ಬಗ್ಗೆ ಅಭಿಮಾನ ಮೂಡದೆ ಇರದು. ಕಪ್ಪಗೆ ಗಟ್ಟಿಮುಟ್ಟಾಗಿರುವ ಮಂಗಮ್ಮನ ಊರು ಬೆಂಗಳೂರಂತೂ ಅಲ್ಲ. ನಗರ ಜೀವನಕ್ಕೊಪ್ಪುವಂತೆ ಆಕೆ ಯಾವ ನಯ ನಾಜೂಕಿನ ಮಾತುಗಳನ್ನೂ ಆಡುವುದಿಲ್ಲ. ಜಾಣತನವನ್ನೂ ಪ್ರದರ್ಶಿಸುವುದಿಲ್ಲ. ಎಲ್ಲ ನೇರಾ ನೇರ. ಒರಟು ಹೆಂಗಸಿನಂತೆ ಕಾಣುವ ಹಳ್ಳಿಯ ಮುಗ್ಧೆ. ಯಾವುದೋ ಊರಿನಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದಿರುವ ಮಂಗಮ್ಮನದು ಪುಟ್ಟ ಸಂಸಾರ. ಗಂಡ, ಮನೆ, ಮಕ್ಕಳು ಎಲ್ಲಾ ಉಂಟು. ಎಲ್ಲ ಹೆಂಗಸರು ಮಾಡುವ ದಿನನಿತ್ಯದ ಕೆಲಸಗಳನ್ನು ಮಂಗಮ್ಮನೂ ಮಾಡುವುದುಂಟು. ಮಕ್ಕಳಿಗೆ ಮಾಡಿಟ್ಟು, ಅವರನ್ನು ಸ್ಕೂಲಿಗೆ ಕಳುಹಿಸಿಕೊಟ್ಟು, ಗಂಡನ ಎಳನೀರ ಅಂಗಡಿಯತ್ತ ಸೀದಾ ನಡೆದುಬಿಡುವ ಮಂಗಮ್ಮ, ಗಂಡನ ವ್ಯಾಪಾರದಲ್ಲಿ ಸಹಕರಿಸುವ ನಿಜಾರ್ಥದ ಸಹಧರ್ಮಿಣಿ. ಎಳನೀರು ವ್ಯಾಪಾರದಲ್ಲಿ ಪಳಗಿರುವ ಮಂಗಮ್ಮ ನಿಜಕ್ಕೂ ಧೈರ್ಯಸ್ಥೆ. ನೂರಾರು ಥರದ ಗಿರಾಕಿಗಳೊಂದಿಗೆ ವ್ಯವಹರಿಸುತ್ತ, ಬೆಂಗಳೂರಿನ ಬಿಸಿಲಿಗೆ ಬೆವತು ಬಂದವರಿಗೆ ತಣ್ಣನೆ ಎಳನೀರು ಕುಡಿಸುತ್ತ ದಿನಕ್ಕೆ ಸಾವಿರಾರು ರೂಪಾಯಿಗಳ ವಹಿವಾಟು ನಡೆಸುವ ಮಂಗಮ್ಮ ಯಾವ ಬಿಟಿ ಕ್ವೀನ್‌ಗೂ, ಸಾಫ್ಟ್ ವೇರ್ ಸಾಮ್ರಾಜ್ಞಿಗೂ ಕಡಿಮೆ ಇಲ್ಲ.
ಆದರೆ ಆಕೆಯಲ್ಲಿ ಅಂಥ ಯಾವ ಅಹಂ ಕೂಡ ಇಲ್ಲ. ಪ್ರಚಾರಪ್ರಿಯೆಯಂತೂ ಅಲ್ಲವೇ ಅಲ್ಲ. ಮಾಧ್ಯಮಗಳು ಆಕೆಯನ್ನು ಗುರುತಿಸಿ, ಹಾಡಿ ಹೊಗಳಿದ್ದೂ ಇಲ್ಲ. ಎಳನೀರು ಹೊಡೆಯುವುದು ತನ್ನ ದಿನನಿತ್ಯದ ಮನೆಗೆ ಕೆಲಸದಷ್ಟೇ ಎಂದು ತಿಳಿದಿರುವ, ತನ್ನ ಗಂಡನಿಗೆ ನೆರವಾಗಬೇಕು ಎಂದಷ್ಟೇ ಗೊತ್ತಿರುವ ಮಂಗಮ್ಮನಿಗೆ ತನ್ನ ಕೆಲಸಕ್ಕೂ ಒಂದು ವಿಶೇಷವಾದ ಮಹತ್ವವಿದೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದವರು. ಮಂಗಮ್ಮ ಎಳನೀರನ್ನು ಹೊಡೆಯುವುದರಲ್ಲಿ ಎಷ್ಟರಮಟ್ಟಿಗೆ ಎಕ್ಸ್‌ಪರ್ಟ್ ಆಗಿದ್ದಾರೆಂದರೆ, ಮೂರೇಟಲ್ಲ, ಒಂದೇ ಏಟಿಗೆ ಎಳನೀರು ಹೊಡೆದು ಕೊಡಬಲ್ಲರು. ಇದು ನುರಿತ ಎಳನೀರು ಹೊಡೆಯುವ ಗಂಡಸರಿಗೆ ಮಾತ್ರ ದಕ್ಕುವ ಮತ್ತು ಸಾಧ್ಯವಾಗುವ ವಿಧಾನ.
ಅದನ್ನವರು ಅದೆಷ್ಟೋ ವರ್ಷಗಳಿಂದ ಎಳನೀರು ಹೊಡೆಯುತ್ತ ಹೊಡೆಯುತ್ತ ಕರಗತ ಮಾಡಿಕೊಂಡಿದ್ದಾರೆ. ಆ ಅನುಭವದ ಮೇಲೆ ಲೀಲಾಜಾಲವಾಗಿ ಹೊಡೆದು ಕೊಡುತ್ತಾರೆ. ಹಾಗೆಯೇ ಎಳನೀರು ಮಾರುವುದರಲ್ಲಿಯೇ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ಮಂಗಮ್ಮನ ಗಂಡ ಎಳನೀರು ತರಲು ಊರೂರು ಅಲೆದಾಡುತ್ತಿದ್ದರೆ, ಈಕೆ ಇಲ್ಲಿ ದಿನಕ್ಕೆ ಐನೂರರಿಂದ ಆರುನೂರು ಎಳನೀರು ಮಾರಾಟ ಮಾಡುತ್ತಿರುತ್ತಾರೆ.
ಈ ಬಗ್ಗೆ ಕೇಳಿದರೆ, ಥೇಟ್ ಹಳ್ಳಿಯ ಹೆಂಗಸಿನಂತೆ ನಾಚಿ ನೀರಾಗುವ ಮಂಗಮ್ಮ, ‘ಎಲ್ಲ ಕೆಲ್ಸದಂಗೆ ಇದೂ ಒಂದ್ ಕೆಲ್ಸ, ಅದರಲ್ಲೇನು ಪೆಷಲ್ಲು’ ಅನ್ನುತ್ತಾರೆ.
‘ಇದನ್ನು ಹೇಗೆ ಕಲಿತಿರಿ’ ಅಂದರೆ, ‘ಮದ್ಮದ್ಲು ಇದು ಗಂಡಸ್ರು ಕೆಲ್ಸ ನನಗ್ಯಾಕೆ ಅಂದ್ಕಂಡೇ ಇದ್ದೆ, ಆಮೇಲಾಮೇಲೆ ಅಂಗಡಿತಕ್ಕೆ ಬಂದು ಕೂತಿದ್ದಾಗ, ನಮ್ಮೆಜಮಾನ್ರು ಊಟಕ್ಕೋ, ಕೆಲ್ಸಕ್ಕೋ ಎಲ್ಲಾದ್ರು ಹೋಗಿದ್ದಾಗ, ಜನ ಬಂದ್ ಎಳನೀರು ಕೇಳೋರು. ಜನ ಬಂದ್ ಕೇಳ್ವಾಗ್ ಸುಮ್ನೆ ನಿಲ್ಲಕಾಯ್ತದ್ರ, ಮಚ್ ತಗಂಡೆ ಕೊಚ್ದೆ ಕೊಟ್ಟೆ, ಹಂಗೆ ರೂಢಿಯಾಯ್ತು...’ ಅಂದರು.
‘ದಿನಕ್ಕೆ ಎಷ್ಟು ಎಳನೀರು ಹೊಡಿತೀರಿ, ಎಷ್ಟು ವ್ಯಾಪಾರ ಮಾಡ್ತೀರಿ’ ಅನ್ನುವ ನನ್ನ ಪ್ರಶ್ನೆಗೆ, ಅನುಮಾನಿಸುತ್ತಲೇ, ‘ಅಯ್ಯೋ ಅದ್ಯಾಕ್ಬುಡಿ, ಎಷ್ಟೋ ಆಯ್ತದೆ..’ ಅಂದು ತೇಲಿಸಿಬಿಟ್ಟರು.
ಬೆಂಗಳೂರಿನಲ್ಲಿ ಇವತ್ತು ಎಳನೀರಿನ ವ್ಯಾಪಾರ ಜೋರಾಗಿದೆ. ಬಿಸಿಲಿನ ಝಳ ಏರಿದಂತೆ ಎಳನೀರಿನ ಬೇಡಿಕೆಯೂ ಏರುತ್ತಿದೆ. ಒಂದು ಅಂದಾಜಿನ ಪ್ರಕಾರ, ದಿನವೊಂದಕ್ಕೆ ಬೆಂಗಳೂರಿಗೆ ನಾಲ್ಕರಿಂದ ಐದು ಲಕ್ಷ ಎಳನೀರಿನ ಬೇಡಿಕೆ ಇದೆಯಂತೆ. ಮಂಗಮ್ಮನಂತಹ ವ್ಯಾಪಾರಸ್ಥರೇ ದಿನಕ್ಕೆ ಐನೂರರಿಂದ ಆರುನೂರು ಎಳನೀರು ಬುರುಡೆಗಳನ್ನು ಹೊಡೆದುರುಳಿಸುತ್ತಾರೆ. ಭಾನುವಾರ ಅದು ಒಂದು ಸಾವಿರದ ಗಡಿಯನ್ನೂ ದಾಟುತ್ತದೆ.

ಹಾಗೆ ನೋಡಿದರೆ ಈ ನಮ್ಮ ಮಂಗಮ್ಮನಿಗೆ ಸ್ವಂತಕ್ಕೊಂದು ಅಂಗಡಿ ಮಳಿಗೆಯೂ ಇಲ್ಲ. ತನ್ನ ಎಳನೀರು ಸಂಗ್ರಹಿಸಿಡಲು ವ್ಯವಸ್ಥಿತವಾದ ಉಗ್ರಾಣವೂ ಇಲ್ಲ. ಭದ್ರತೆಯಂತೂ ಕೇಳುವ ಹಾಗೇ ಇಲ್ಲ. ಇಷ್ಟಾದರೂ ರಸ್ತೆ ಬದಿಯನ್ನೇ ತನ್ನ ಮಳಿಗೆಯನ್ನಾಗಿಸಿಕೊಂಡಿರುವ ಮಂಗಮ್ಮ, ದಿನದ ವ್ಯಾಪಾರ ಮುಗಿಯುತ್ತಿದ್ದಂತೆ ಅದಕ್ಕೊಂದು ಗೋಣಿ ತಾಟು ಮುಚ್ಚಿ, ಪಕ್ಕದ ತಂತಿಬೇಲಿಗೆ ಬಿಗಿಯಾಗಿ ಕಟ್ಟಿ, ನಿರಾಳವಾಗಿ ಮನೆಯತ್ತ ನಡೆದುಬಿಡುತ್ತಾರೆ. ಜನರ ಮೇಲಿಟ್ಟ ನಂಬಿಕೆಯೇ ಲಾಕರ್ ಮತ್ತು ವಿಶ್ವಾಸವೇ ಬಿಗಿ ಬಂದೋಬಸ್ತ್. ಮಳೆ, ಚಳಿ, ಗಾಳಿಯ ಜೊತೆಗೆ ಬೆಂಗಳೂರಿಗೇ ಬೆವರಿಳಿಸುತ್ತಿರುವ ಟ್ರಾಫಿಕ್‌ನಂತಹ ಹಿಂಸೆಯ ನಡುವೆ ಆಗಾಗ ದಿಢೀರೆಂದು ಎದುರಾಗುವ ವಸೂಲಿವೀರರು, ಪೊಲೀಸರನ್ನೂ ಸಂಬಾಳಿಸಬೇಕಾದಂತಹ ಪರಿಸ್ಥಿತಿ.

ಇಂತಹ ಅಭದ್ರ ಅಸ್ಥಿರ ಸ್ಥಿತಿಯಲ್ಲಿಯೇ ಅದೆಷ್ಟೋ ವರ್ಷಗಳಿಂದ ವ್ಯಾಪಾರ ಮಾಡಿಕೊಂಡೆ ಬದುಕು ಸಾಗಿಸುತ್ತಿರುವ ಮಂಗಮ್ಮ ನಿಜಕ್ಕೂ ಧೈರ್ಯಸ್ಥೆ. ಬದುಕಿನ ಅತಂತ್ರ ಸ್ಥಿತಿಯನ್ನೇ ಸ್ವತಂತ್ರ ಬದುಕಿನ ಬುನಾದಿಯನ್ನಾಗಿಸಿಕೊಂಡ ದಿಟ್ಟೆ. ಕೊಚ್ಚುವ ಕೆಲಸದಲ್ಲೇ ಖುಷಿ ಕಂಡುಕೊಂಡ, ಬರುವ ಅಷ್ಟು ಇಷ್ಟು ಹಣದಲ್ಲೇ ಆತ್ಮವಿಶ್ವಾಸ ಆತುಕೊಂಡ ಮಂಗಮ್ಮ; ನಾಡಿನ ಮಹಿಳೆಯರಿಗೆ ಸಂಕೇತ, ಮಾದರಿ ಎಂದು ಅಂದುಕೊಳ್ಳದ, ಆ ಪದಗಳ ಅರ್ಥಗಳೂ ಗೊತ್ತಿಲ್ಲದ... ಸಹಜ ಸರಳ ಸಾಮಾನ್ಯ ಮಹಿಳೆ.




Monday, January 4, 2010

ಲಂಕೇಶರ `ಪಾಂಚಾಲಿ'ಯೊಂದಿಗೆ


`ಮೇಸ್ಟ್ರನ್ನ ಹಿಂದಕ್ಕೂರಿಸ್ಕಂಡ್ ಒಸಿ ಸುತ್ತಿದೀನ ಬಸುರಾಜು... ಹೋಗ್ದೆ ಇರ ಜಾಗ್ವೇ ಇಲ್ಲ, ನಂದೋ ಲಡಾಸ್ ಸ್ಕೂಟ್ರು, ನಾನಾಗ ಅಂತಾ ದಪ್ಕಿರಲಿಲ್ಲ, ಮೇಸ್ಟ್ರು ಜೋರಾಗಿದ್ರು, ಒಳ್ಳೆ ಎದ್ದಾಳು, ಇಬ್ರು ಸೇರದ್ರೆ ಏನಾಗನ ಅದು, ಎಳೀವಳ್ದು ನಾವ್ ಬುಡ್ತಿಲ್ಲ... ಪೆಟ್ರೋಲ್ಗೂ ಕಾಸಿಲ್ಲ, ನಮ್ ಪೆಟ್ರೋಲ್ಗುವೆ... ಅಂತಾದ್ರಲ್ಲಿ ಮೇಸ್ಟ್ರು ಹುಚ್ಚತ್ತಿಸ್ಕಂಡವ್ರೆ, ಲೇ ಗೌಡ, ನಂಗೊತ್ತಿಲ್ಲ ಸ್ಪೆಷಲ್ ಇಷ್ಯೂ ತರ್ಬೇಕು ಕಣಲೇ ಅಂತರೆ...'
`ಪಾಂಚಾಲಿ ಹೆಂಗ್ಬಂತು ಗೌಡ್ರೆ...' ಎಂದು ನೆಲಮನೆ ಪ್ರಕಾಶನದ ದೇವೇಗೌಡ್ರನ್ನ- ಅವರು ಸಾಯುವುದಕ್ಕೆ ಮುಂಚಿನ ಆರೇಳು ತಿಂಗಳಿನಲ್ಲಿ, ಹೀಗೆ ಸಂಜೆಯ `ಕೂತು ಮಾತಾಡುವ' ತಂಪು ಹೊತ್ತಿನಲ್ಲಿ ಕೇಳಿದಾಗ, ಪಾಂಚಾಲಿ ಹುಟ್ಟಿದ್ದು, ಮೇಸ್ಟ್ರು ತಲೆಕೆಡಿಸಿಕೊಂಡಿದ್ದು, ಕಾಸಿಗಾಗಿ ಪರದಾಡಿದ್ದು, ಹೊಸ ತಲೆಮಾರಿನ ಲೇಖಕ/ಲೇಖಕಿಯರನ್ನು ಪಟ್ಟಿ ಮಾಡಿದ್ದು, ಮಾಡುವಾಗ ಎದುರಾದ ಸಮಸ್ಯೆಗಳು, ಅನಗತ್ಯ ವಾದ-ವಿವಾದಗಳು, ಮನಸ್ತಾಪಗಳು, ಜಗಳಗಳು... ಹೀಗೆ ಎಲ್ಲವನ್ನೂ ಸ್ವಾರಸ್ಯಕರವಾಗಿ ಬಿಚ್ಚಿಡತೊಡಗಿದರು.
ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ'ಗಲ್ಲ; `ಪಾಂಚಾಲಿ' ಎಂಬ ವಿಶೇಷ ಸಂಚಿಕೆಗೆ. 1974ರಲ್ಲಿ ಹೊರಬಂದ ಇದು `ಪ್ರಜಾವಾಣಿ' ದೀಪಾವಳಿ ವಿಶೇಷಾಂಕವನ್ನು ಹೋಲುವ ಆಕಾರ ಮತ್ತು ಸೈಜ್ನಲ್ಲಿತ್ತು. ಇದು ಕೂಡ `ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ' ಎಂಬ ಹಣೆಪಟ್ಟಿ ಹಚ್ಚಿಕೊಂಡಿತ್ತು. ಆ ಕಾಲಕ್ಕೇ ನವ್ಯ, ವೈಚಾರಿಕ, ಪ್ರಗತಿಪರ ಆಲೋಚನೆಗಳ ಸಿಡಿಗುಂಡುಗಳಂತಹ ಲೇಖಕರಿದ್ದ, ಚಿಂತನೆಗಚ್ಚುವ ಬರಹಗಳಿಂದ ಕೂಡಿದ, ಈ ಕಾಲಕ್ಕೂ ವಿಶಿಷ್ಟವಾದ ಅಪರೂಪದ ಅದ್ಭುತ ಸಂಚಿಕೆ.
ಲಂಕೇಶರ ಒಡನಾಟಕ್ಕೆ ಬಿದ್ದಾಗಿನಿಂದಲೂ, ಅವರಿಗೆ ಸಂಬಂಧಪಟ್ಟ ಹತ್ತಾರು ವಿಷಯಗಳನ್ನು ಅರಿಯುವ, ಅರಗಿಸಿಕೊಳ್ಳುವ, ಅದರಲ್ಲೇ ಏನೋ ಒಂದು ಖುಷಿ ಕಾಣುವ ನನಗೆ, ಅವರಿಗೆ ಹತ್ತಿರವಾದಂತೆಲ್ಲ ಅರ್ಥವಾಗದವರಂತೆಯೇ ಕಾಣುತ್ತಿದ್ದರು. ಆ ವ್ಯಕ್ತಿತ್ವವೇ ಅಂಥಾದ್ದು- ವಿಸ್ಮಯ, ವಿಚಿತ್ರ. ಎಪ್ಪತ್ತರ ದಶಕದಲ್ಲಿ ಲಂಕೇಶರು ಸಂಪಾದಿಸಿದ್ದ `ಪಾಂಚಾಲಿ'ಯ ಬಗೆಗಿನ ಬೆರಗು ಕೂಡ ಅಂಥಾದ್ದೇ ಒಂದಾಗಿ ಬುದ್ಧಿಗೆಡಿಸಿತ್ತು. ಏನಾದರೂ ಮಾಡಿ ಅದನ್ನೊಂದು ಸಲ ನೋಡಬೇಕು, ಓದಬೇಕು ಎಂದು ನೇರವಾಗಿ ಹೋಗಿ ಲಂಕೇಶರನ್ನೇ ಕೇಳಿದ್ದೆ. ಅದಕ್ಕವರು ಎಂದಿನ ತಮ್ಮ ಉಡಾಫೆಯಿಂದ, `ಅದ್ನೆಲ್ಲ ಯಾರಿಡ್ತರಲೇ...' ಎಂದು ಒಂದೇ ಸಾಲಿನ ಉತ್ತರದಲ್ಲೇ ಎಲ್ಲವನ್ನೂ ಹೇಳಿ ಸುಮ್ಮನಾಗಿಸಿದ್ದರು.
ಅವರಿದ್ದದ್ದೇ ಹಾಗೆ- ನಿರ್ಲಕ್ಷಿಸುವ ಮೂಲಕ ಕುತೂಹಲ ಕೆರಳಿಸುವುದು. ನಿರಾಕರಿಸುವ ಮೂಲಕ ನಿರೀಕ್ಷೆಯ ಬೀಜ ಬಿತ್ತುವುದು. ಹಳೆಯದನ್ನು ಕಂಡರೆ ಕಣ್ಣರಳಿಸುವುದು, ಅಷ್ಟೇ ಬೇಗ ಖಿನ್ನರಾಗುವುದು. ಇದನ್ನು ಅವರ ನಡವಳಿಕೆಗಳಿಂದ ಖುದ್ದಾಗಿ ಕಂಡಿದ್ದೆ. ಪತ್ರಿಕೆಯಲ್ಲಿ, ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ ಅವರ ಕೆಲ ಅಭಿಮಾನಿಗಳು ಅವರಿಗೆ ಸಂಬಂಧಿಸಿದ ಅಪರೂಪದ ಹಳೆಯ ವಸ್ತುಗಳನ್ನು ತಂದು ಕೊಡುತ್ತಿದ್ದರು. ಅವರ ಕೆಲವೇ ಕೆಲವು ಸ್ನೇಹಿತರು ಆಗಾಗ ಬಂದು ಮರೆತುಹೋದ ವಿಷಯಗಳನ್ನು ಜ್ಞಾಪಿಸುತ್ತಿದ್ದರು. ಅದನ್ನೆಲ್ಲ ಬಹಳ ಸಂಭ್ರಮದಿಂದಲೇ ಸವಿಯುತ್ತಿದ್ದರು.
ಒಂದು ಸಲ ಹೀಗೆಯೇ, ಯಾರೋ ಅವರ ಅಭಿಮಾನಿಯೊಬ್ಬರು, ಅವರ ಒಂದು ಹಳೆಯ ಫೋಟೋವನ್ನು- ಸುಮಾರು ವರ್ಷಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ್ದದ್ದನ್ನು- ಪೋಸ್ಟ್ ಮುಖಾಂತರ ಕಳುಹಿಸಿಕೊಟ್ಟಿದ್ದರು. ಅದು ಸುಮಾರು ಎಪ್ಪತ್ತರ ದಶಕದ್ದು, ಬ್ಲ್ಯಾಕ್ ಅಂಡ್ ವೈಟ್ ಕಾಲದ್ದು. ತುಂಬಾ ಚೆನ್ನಾಗಿತ್ತು. ಮೇಸ್ಟ್ರು ಹ್ಯಾಂಡ್ಸಮ್ಮಾಗಿದ್ದರು. ಆ ಫೋಟೋ ನಮ್ಮ ಪಾಲಿಗೆ ನಿಧಿ. ಮೇಸ್ಟ್ರಿಗೆ ತೆಗೆದುಕೊಂಡು ಹೋಗಿ ಕೊಟ್ಟೆ, ನೋಡಿದರು, ಮಾತಿಲ್ಲ, ಮುಖದಲ್ಲಿ ಯಾವ ಭಾವನೇನೂ ಇಲ್ಲ. ತಕ್ಷಣ ಹರಿದು ಕಸದಬುಟ್ಟಿಗೆ ಹಾಕಿದರು. `ಜೀವವಿರುವ ನಾನೇ ಇರುವಾಗ, ಜೀವವಿಲ್ಲದ ಫೋಟೋ ಯಾಕೆ' ಎಂಬ ಭಾವ. ಸೇಡ್, ಬೋದಿಲೇರ್, ಕಾಮು, ಕಾಫ್ಕಾ ಎಲ್ಲ ಲಂಕೇಶರಲ್ಲಿಯೇ. ಒಂದೇ ಗಳಿಗೆಯಲ್ಲಿಯೇ. ಅಲ್ಲಿ ನಿಲ್ಲಲಿಕ್ಕೇ ಹೆದರಿಕೆಯಾಯಿತು.
ಈತನ್ಮಧ್ಯೆ ಒಂದ್ಸಲ ಊರಿಗೆ ಹೋಗಿದ್ದೆ, ಅದು 1992. ನಮ್ಮ ಮನೆ ಶಿಫ್ಟ್ ಮಾಡ್ತಿದ್ದರು. ಹಳೆಮನೆಯಿಂದ ಹೊಸಮನೆಗೆ ಸಾಮಾನು ಸಾಗಿಸುತ್ತಿದ್ದರು. ಅದರಲ್ಲಿ ಪುಸ್ತಕಗಳ ಒಂದು ದೊಡ್ಡ ಗಂಟೂ ಇತ್ತು. ಅದನ್ನು ನಮ್ಮಣ್ಣ ಕೆದಕುತ್ತ, ಅವನ ಮೈಸೂರಿನ ಮಹಾರಾಜ ಕಾಲೇಜಿನ ನೆನಪಿನ ಬುತ್ತಿಯನ್ನು ಬಿಚ್ಚಿಕೊಂಡಿದ್ದ. `ಬಸ್ವಾ, ಇದ್ ನೋಡಿದ್ದಾ ನೀನು...' ಎಂದು ರಾಗ ಎಳೆದ. ನೋಡಿದ್ರೆ ಪಾಂಚಾಲಿ!
ಗಂಟಿನಲ್ಲಿ ಇದ್ದದ್ದಕ್ಕೋ ಏನೋ ಹಳದೀ ಬಣ್ಣಕ್ಕೆ ತಿರುಗಿತ್ತು, ಜಿರಲೆಗಳ ಜಬರಾಟದಿಂದ ಕವರ್ ಪೇಜ್ ತೂತ್ ತೂತಾಗಿತ್ತು, ಕೈಗೆತ್ತಿಕೊಂಡರೆ ಗಮ್ಮಂತ ವಾಸನೆ ಬತರ್ಿತ್ತು. 1974ರಲ್ಲಿ ಪ್ರಕಟವಾಗಿದ್ದು, ಸುಮ್ಮನೆ ಲೆಕ್ಕ ಹಾಕಿದೆ... ಅವತ್ತಿಗೆ ಪಾಂಚಾಲಿಗೆ ಹದಿನೆಂಟು ವರ್ಷವಾಗಿತ್ತು, ಹರೆಯದ ಹುಡುಗಿಯ ಬೆವರಿನ ವಾಸನೆ ಮೂಗಿಗಡರುತ್ತಿತ್ತು! ಅಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅಣ್ಣನನ್ನು ಅಲ್ಲೇ ಬಿಟ್ಟು ಪಾಂಚಾಲಿಯನ್ನು ಎತ್ತಿಕೊಂಡು ಓಡಿದೆ. ಯಾರೂ ಇಲ್ಲದ ಜಾಗ ನೋಡಿ ಪಾಂಚಾಲಿಯ ನಿರಿಗೆಗಳಂಥ ಪುಟಗಳನ್ನು ನಿಧಾನವಾಗಿ ಬಿಚ್ಚತೊಡಗಿದೆ.

ಪುಟ ತಿರುವಿದಂತೆಲ್ಲ ಪುಟಿದೇಳುತ್ತಿದ್ದ ಉತ್ಸಾಹ... ಕಣ್ಣಿಗೆ ಬಿದ್ದಳು ನೀಲು-
`ಹಾಲು ಹಿಂಡುವ ಹರಯದ
ಅವಳ ಬೆರಳಲ್ಲಿ
ಆಕಳ ಮೊಲೆಯ
ಪುಲಕ'
ನೀಲು ಜೊತೆಗೆ ಹಾದಿಮನಿ, ಎಂಎಸ್ ಮೂತರ್ಿ ಬರೆಯುತ್ತಿದ್ದಂಥದೇ ಚಿತ್ರ. ಅಂದ್ರೆ ನೀಲು ಹುಟ್ಟಿದ್ದು 1974ರಲ್ಲಿ. ಪಾಂಚಾಲಿ ಹೊಟ್ಟೆಯಲ್ಲಿ. ಅರೆ, ಅವತ್ತಿಗೆ ಪಾಂಚಾಲಿಗೂ ಹದಿನೆಂಟು, ನೀಲೂಗೆ ಹದಿನೆಂಟು!
ಹಾಗೇ ನೋಡ್ತಾ ಹೋದೆ, ಮೇಸ್ಟ್ರ ಹಸ್ತಾಕ್ಷರವೂ ಇದೆ. ಕುವೆಂಪು ಅವರನ್ನು ಸಂದಶರ್ಿಸಲು, ಅವರಿಗೆ ಮೊದಲೇ ಕೆಲವು ಪ್ರಶ್ನೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೈ ಬರಹವನ್ನೇ ನೆಗಟಿವ್ ಮಾಡಿಸಿ ಯಥಾವತ್ ಪ್ರಕಟಿಸಿದ್ದಾರೆ. ಮೇಸ್ಟ್ರ ಅಕ್ಷರಗಳು- ದಪ್ಪ, ಇದ್ದಕ್ಕಿದ್ದಂತೆ ಸಣ್ಣ, ಮತ್ತೆಲ್ಲೋ ಬಾಣ ಹಾಕಿ ಅತಿ ಸಣ್ಣಗೆ ಕೊರೆದಿದ್ದಾರೆ. ಕುವೆಂಪು ಆ ಪ್ರಶ್ನೆಗಳಿಗೆಲ್ಲ ವಿವರವಾಗಿ ಉತ್ತರಿಸಿದ್ದಾರೆ. ಒಂದೊಂದು ಪ್ರಶ್ನೆಯೂ ಎದೆಗೇ ನೇರವಾಗಿ ಬಾಣ ಬಿಟ್ಟಂತೆ. ಉತ್ತರವೂ ಅಷ್ಟೇ- ಯಾವ ಅನುಮಾನಕ್ಕೂ ಆಸ್ಪದವೀಯದಂತೆ. ಆ ಸಂದರ್ಶನ ಆ ಸಂಚಿಕೆಯ ವಿಶೇಷ. ಇಬ್ಬರು ದಿಗ್ಗಜರ ನಡುವಿನ ಅಪರೂಪದ, ಕನ್ನಡ ಸಾಹಿತ್ಯಲೋಕದಲ್ಲಿ ಮಹತ್ವದ ಸ್ಥಾನ ಪಡೆದ ಸಂದರ್ಶನಗಳಲ್ಲೊಂದು ಎಂಬುದು ನನ್ನ ಗ್ರಹಿಕೆ.
ಇದರಷ್ಟೇ ಮುಖ್ಯವಾದ `ಪಾಂಚಾಲಿ'ಯ ಮತ್ತೊಂದು ಅಂಶವೆಂದರೆ, ಕನರ್ಾಟಕದ ಪ್ರತಿಭಾವಂತ ತರುಣ ಜನಾಂಗ- ಲೇಖಕರು, ಚಿತ್ರಕಾರರು, ವೈದ್ಯರು, ಅಧ್ಯಾಪಕರು, ಇತ್ಯಾದಿ ಎಂದು ನಲವತ್ತೇಳು ಜನರನ್ನು ಗುರುತಿಸಿರುವುದು. ಅವರ ಚಿತ್ರಗಳನ್ನು ಹಾಕಿ, ಒಂದು ಪುಟ್ಟ ಪ್ಯಾರಾದಲ್ಲಿ ಅವರ ಪರಿಚಯವನ್ನೂ ನೀಡಿರುವುದು. ಅದರಲ್ಲಿ ದೇವನೂರ ಮಹಾದೇವರಿಂದ ಹಿಡಿದು ಎಚ್.ಎನ್.ನಂಜೇಗೌಡರವರೆಗೆ, ಪ್ರೊಫೆಸರ್ ನಂಜುಂಡಸ್ವಾಮಿಯವರಿಂದ ಹಿಡಿದು ಕೆ.ವಿ.ತಿರುಮಲೇಶ್ರವರೆಗೆ, ಎಚ್.ಎಲ್.ಕೇಶವಮೂತರ್ಿಯವರಿಂದ ಹಿಡಿದು ಗಿರೀಶ್ ಕಾನರ್ಾಡರವರೆಗೆ, ಭಾರ್ಗವಿ ನಾರಾಯಣ್ರಿಂದ ಹಿಡಿದು ಚಂದ್ರಶೇಖರ ಕಂಬಾರರವರೆಗೆ... ಕನರ್ಾಟಕ ಕಂಡ ಅತಿರಥ ಮಹಾರಥರೆಲ್ಲ ಅಲ್ಲಿದ್ದಾರೆ. ಅಂದಿನ ಕಪ್ಪು-ಬಿಳುಪಿನ ಮಸಕು ಮಸಕಾದ ಫೋಟೋಗಳು. ಕೆಲವು ಹೆಬ್ಬರಳ ಗಾತ್ರವಾದರೆ, ಇನ್ನು ಕೆಲವು ಸ್ಟಾಂಪ್ ಸೈಜ್, ಎಲ್ಲೋ ಒಂದೆರಡು ಮಾತ್ರ ದೊಡ್ಡವು. ಇವತ್ತು ಅವರೆಲ್ಲ ಏನೇನೋ ಆಗಿಹೋಗಿದ್ದಾರೆ. ಕೆಲವರು ಇದ್ದಾರೆ, ಇನ್ನು ಕೆಲವರು ಇಹಲೋಕ ತ್ಯಜಿಸಿದ್ದಾರೆ.
ಹಾಗೇ ಪುಟ ತಿರುವಿದರೆ, ಒಂದು ಪೇಜಿನಲ್ಲಿ ಒಂದು ಕವನ ಮತ್ತು ಪುಟ್ಟ ಬರಹವಿದೆ. ಕವನ ದೇವನೂರ ಮಹಾದೇವರದು, ಲೇಖನ ಶ್ರೀಧರ ಕಲಿವೀರರದು. ಇವರಿಬ್ಬರ ಬರಹಕ್ಕೆ ಹೆಡ್ಡಿಂಗು- ಇಬ್ಬರು `ಹೊಲೆಯ' ಬುದ್ಧಿಜೀವಿಗಳ ರಕ್ತಸಂವೇದನೆಯ ಮಾತುಗಳು. ಆಮೇಲೆ ಎರಡೇ ಸಾಲಿನ ಇಂಟ್ರೋ- `ಇವರಿಬ್ಬರು ಹೊಲೆಯರು. ಹೊಲೆಯರಾಗಿರುವುದರ ನೋವು, ಹಿಂಸೆ, ನರಕ ಮತ್ತು ವಿಚಿತ್ರ ಕನಸು ಇವರಿಗೆ ಗೊತ್ತು' ಎಂದು ಬರೆಯಲಾಗಿದೆ. ಇದು ಇವತ್ತಿಗೂ ಯಾವ ಪತ್ರಿಕೆಯಲ್ಲೂ ಕಾಣದ್ದು- ಅವತ್ತಿಗೇ ಲಂಕೇಶರು ಕಂಡಿರಿಸಿದ್ದು.

ಶ್ರೀಕೃಷ್ಣ ಆಲನಹಳ್ಳಿಯವರ `ಪರಸಂಗದ ಗೆಂಡೆತಿಮ್ಮ' ಕಾದಂಬರಿ ಮೊಟ್ಟ ಮೊದಲ ಬಾರಿಗೆ ಬೆಳಕು ಕಂಡಿದ್ದೇ `ಪಾಂಚಾಲಿ'ಯಲ್ಲಿ. ಆನಂತರ ಅದು ಚಲನಚಿತ್ರವಾಗಿದ್ದು, ಚಿತ್ರರಸಿಕರ ಮನ ಗೆದ್ದಿದ್ದು, ಸಿನಿಲೋಕದಲ್ಲಿ ಸದ್ದು ಮಾಡಿದ್ದು. ಆಲನಹಳ್ಳಿಯವರ `ಗೆಂಡೆತಿಮ್ಮ' ಗಂಭೀರ ವಸ್ತುವುಳ್ಳ ಉತ್ಕೃಷ್ಟ ಕಾದಂಬರಿ. ಕಥಾನಾಯಕ ಗೆಂಡೆತಿಮ್ಮ ಫ್ಯಾಷನ್ ವಸ್ತುಗಳನ್ನು ಮಾರಾಟ ಮಾಡುವ ಅನ್ಫ್ಯಾಷನಬಲ್ ಮನುಷ್ಯ. ಆತ ತನಗೆ ಗೊತ್ತಿಲ್ಲದಂತೆಯೇ ತನ್ನ ಸಾಮಾನುಗಳನ್ನು ಮಾರಾಟ ಮಾಡುವ ಮೂಲಕ ಹಳ್ಳಿಗಳಲ್ಲಿ ಬದಲಾವಣೆಗಳನ್ನು, ದುರಂತವನ್ನು ಬಿತ್ತುತ್ತಾನೆ. ಗೆಂಡೆತಿಮ್ಮನ ಕಥಾವಸ್ತು- ಫ್ಯಾಷನ್ ವಸ್ತುಗಳು ಹಳ್ಳಿ ಪ್ರವೇಶಿಸುವಂಥಾದ್ದು, ಒಂದು ರೀತಿಯಲ್ಲಿ ಭವಿಷ್ಯ ಭಾರತದ್ದು. ಅಂದರೆ 1974ರಲ್ಲಿಯೇ ಶ್ರೀಕೃಷ್ಣ ಆಲನಹಳ್ಳಿಯವರು ಜಾಗತೀಕರಣವನ್ನು ಗ್ರಹಿಸಿದ್ದರು. `ಸಿನಿಮಾ ಮತ್ತು ಜಾಗತೀಕರಣ' ಎಂಬ ವಿಷಯದ ಬಗ್ಗೆ ಯಾರಾದರು ಗಂಭೀರವಾದ ಸಂವಾದ ಏರ್ಪಡಿಸಿದರೆ- ಅದರಲ್ಲಿ ಮುಖ್ಯವಾಗಿ ಚಚರ್ೆಗೆತ್ತಿಕೊಳ್ಳಲೇಬೇಕಾದ ಚಿತ್ರವಾಗಿ `ಗೆಂಡೆತಿಮ್ಮ' ಅಗ್ರಪಂಕ್ತಿಯಲ್ಲಿದ್ದರೆ ಆಶ್ಚರ್ಯವಿಲ್ಲ. ಹಳ್ಳಿಗಳಿಗೆ ಪೆಟ್ಟಿಕೋಟ್, ಬ್ರಾ, ಗಮಂದೆಣ್ಣೆ ಪ್ರವೇಶ ಪಡೆಯುವ ಮೂಲಕ ಹಳ್ಳಿಯಲ್ಲಾಗುವ ಬದಲಾವಣೆಗಳನ್ನು ಆಲನಹಳ್ಳಿ ಅಂದೇ ಚಿತ್ರಿಸಿದ್ದರು.
ಬೆಸಗರಹಳ್ಳಿ ರಾಮಣ್ಣ, ಶಾಂತಿನಾಥ ದೇಸಾಯಿ, ವೀಣಾ, ಸೀತಾ, ಗೀತಾ ಕುಲಕಣರ್ಿ, ಸಿದ್ಧಲಿಂಗ ಪಟ್ಟಣಶೆಟ್ಟರ ಕತೆಗಳು, ಚೆನ್ನವೀರ ಕಣವಿ, ಲಂಕೇಶ್, ಚದುರಂಗರ ಕವಿತೆಗಳು, ಚಂಪಾರ ಜಗದಂಬೆ- ಇಂದಿರಾಗಾಂಧಿಯನ್ನು ದುಗರ್ಿಯನ್ನಾಗಿ ಚಿತ್ರಿಸಿದ ನಾಟಕ, ಚಿದಾನಂದಮೂತರ್ಿ, ಜಿಎಸ್ಸೆಸ್, ನಿಸಾರ್ ಅಹಮದ್, ಸಿದ್ಧಲಿಂಗಯ್ಯ, ತೇಜಸ್ವಿ, ಎಚ್ಚೆಲ್ಕೆ, ಪ್ರೊ.ಎಂಡಿಎನ್ರ ಲೇಖನಗಳು... ಯಾವ ಪ್ರತಿಷ್ಠಿತ ಪ್ರತಿಕೆಯೂ- ತನ್ನ ಓದುಗ ವಲಯ, ತಾನು ಕಟ್ಟಿಕೊಂಡ ಸಕ್ಯರ್ುಲೇಷನ್ ಸಾಮ್ರಾಜ್ಯ ಮತ್ತು ತಾನು ಗಳಿಸಿಕೊಂಡ ಸಾಹಿತ್ಯಕ, ಸಾಂಸ್ಕೃತಿಕ ಸ್ಥಾನಮಾನಗಳ ಆಧಾರದ ಮೇಲೆ- ರೂಪಿಸಲಾಗದಿದ್ದ ಸಂಚಿಕೆಯನ್ನು ಮೇಸ್ಟ್ರು, ಸರಿಯಾಗಿ ಕೂರಲು ಒಂದು ಕಚೇರಿ ಕೂಡ ಇಲ್ಲದ ಸ್ಥಿತಿಯಲ್ಲಿ ಕೆಲವೇ ಕೆಲವು ಗೆಳೆಯರೊಳಗೂಡಿ ರೂಪಿಸಿದ್ದರು. ಒಂದು ರೀತಿಯಲ್ಲಿ ಅದು ಶೂನ್ಯ ಸಂಪಾದನೆ. ಮತ್ತೊಂದು ರೀತಿಯಲ್ಲಿ ಲಂಕೇಶರ ದೈತ್ಯ ಪ್ರತಿಭೆಯ ಅನಾವರಣ.
ಪೊಗದಸ್ತಾಗಿರುವ ಪಾಂಚಾಲಿಯಲ್ಲಿ ಭವಿಷ್ಯದ ಊರ್ವಶಿ ಎಂದು ವನಮಾಲಾ ವಿಶ್ವನಾಥ್ರನ್ನು, ಪ್ರತಿಭಾವಂತ ನರ್ತಕಿ ಎಂದು ಉಮಾ ಎಂಬ ಭರತನಾಟ್ಯ ಕಲಾವಿದೆಯನ್ನು ಪರಿಚಯಿಸುವ ಲೇಖನಗಳೂ ಇವೆ. ಆಶ್ಚರ್ಯವೆಂದರೆ, ಈ ಲೇಖನಗಳನ್ನು ಬರೆದವರು ನೀಲು!
ಇಷ್ಟೆಲ್ಲ ಇದ್ದ ಪಾಂಚಾಲಿಯೊಂದಿಗೆ ಅದೆಷ್ಟು ರಾತ್ರಿಗಳನ್ನು ಕಳೆದಿದ್ದೆನೋ? ಹೀಗೇ ನಡೆದಿತ್ತು ಪಾಂಚಾಲಿಯೊಂದಿಗೆ ನನ್ನ ಸಂಸಾರ! ಇದರ ನಡುವೆಯೇ ಪಾಂಚಾಲಿಯನ್ನು ಮೇಸ್ಟ್ರಿಗೆ ತೋರಿಸುವ ಆಸೆಯೂ ಗರಿಗೆದರತೊಡಗಿತು. ಹಾಗೆಯೇ ಪಾಂಚಾಲಿ ನನ್ನವಳು ಎಂದರೆ? ಇಟ್ಟುಕೊಂಡರೆ ಓಕೆ, ಇದಕ್ಕೂ ಆ ಫೋಟೋಗಾದ ಗತಿಯಾದರೆ? ಈ ಅನುಮಾನ, ಹೆದರಿಕೆಗಳೆಲ್ಲ ನನ್ನೊಳಗೇ ಥಳಕು ಹಾಕಿಕೊಂಡು, ಅವರಿಗೆ ತೋರಿಸುವ ಧೈರ್ಯವೇ ಬರಲಿಲ್ಲ. ಆದರೆ ಪಾಂಚಾಲಿಯ ನೀಲು ಮಾತ್ರ ತಲೆಕೆಡಿಸುತ್ತಲೇ ಇತ್ತು. ಆ ಚಿತ್ರ-ಬರಹ ಬೇರೆ ಥರಾನೇ ಕಾಣಿಸುತ್ತಿತ್ತು. ಮೇಸ್ಟ್ರಿಗೆ ಗೊತ್ತಿಲ್ಲದಂತೆ ಪತ್ರಿಕೆಯಲ್ಲಿ ಪ್ರಕಟಿಸಿಬಿಡುವ ಕೆಟ್ಟ ಧೈರ್ಯವನ್ನೂ ಕೊಡುತ್ತಿತ್ತು.
ಪತ್ರಿಕೆಯಲ್ಲಿ ಸಾಮಾನ್ಯವಾಗಿ ಒಂದು ವಾರಕ್ಕೆ ಮೂರು ನಾಲ್ಕು ನೀಲುಗಳನ್ನು ಹಾಕುತ್ತಿದ್ದೆವು. ಪತ್ರಿಕೆಯ ಪೇಜ್ ಡಿಸೈನ್ ಮಾಡುತ್ತಿರುವಾಗ ಒಂದು ಕಡೆ ಜಾಗ ಉಳಿದರೆ, ಅಲ್ಲಿ ನೀಲು ಹಾಕುತ್ತಿದ್ದೆವು. ಜಾಗ ಚಿಕ್ಕದಿದ್ದರೆ ಬರೀ ನೀಲು, ದೊಡ್ಡದಾಗಿದ್ದರೆ ಚಿತ್ರಸಹಿತ. ಇದನ್ನು ಮುಂಚೆಯೇ ಯೋಚಿಸಿ, ಮೇಸ್ಟ್ರಿಂದ ನೀಲುಗಳನ್ನು ಬರೆಸಿಟ್ಟುಕೊಂಡಿದ್ದರೆ, ಅದಕ್ಕೆ ತಕ್ಕಂತೆ ಕಲಾವಿದರಿಂದ ಚಿತ್ರ ಬರೆಸಿ, ಅದನ್ನು ಪಾಸಿಟಿವ್ ಮಾಡಿಸಿ, ಚಿತ್ರ ಮತ್ತು ನೀಲು- ಎರಡನ್ನೂ ಒಂದು ಬಾಕ್ಸ್ ಮಾಡುವುದು ಒಂದು ರೂಢಿಯಾಗಿತ್ತು.
ಲಂಕೇಶರಿಂದ ನೀಲು ಬರೆಸುವುದು... ಆ ನೀಲು ಸೃಷ್ಟಿಯೇ ಸೋಜಿಗದ್ದು. ಮೇಸ್ಟ್ರೇನೋ ನಿಂತ ನಿಲುವಿನಲ್ಲಿಯೇ ಬರೆದುಕೊಡುತ್ತಿದ್ದರು. ಆದರೆ ಆ ನೀಲು ಬರೆಯಲು ಆರ್ಡನರಿ ಪೆನ್ ಆಗುತ್ತಿರಲಿಲ್ಲ. ಅದಕ್ಕಾಗಿ ಪೇಸ್ಟಪ್ ರಾಜಗೋಪಾಲ್ರಿಂದ ರೋಟ್ರಿಂಗ್ ಪೆನ್ನು, ಕಂಪ್ಯೂಟರ್ ಸೆಕ್ಷನ್ನಲ್ಲಿ ಬಳಸುವ ಟ್ರೇಸಿಂಗ್ (ಇದಕ್ಕೂ ಮೊದಲು ಬಟರ್ ಶೀಟ್ ಇತ್ತು) ಪೇಪರ್ ಎರಡನ್ನೂ ತೆಗೆದುಕೊಂಡು ಹೋಗಿ ಮೇಸ್ಟ್ರ ಟೇಬಲ್ ಮೇಲಿಟ್ಟರೆ, ಅವರಿಗೆ ಸಮಯ ಸಿಕ್ಕಾಗ, ಮೂಡ್ ಬಂದಾಗ ಬರೆದು ಕೊಡುತ್ತಿದ್ದರು. ಅಷ್ಟರೊಳಗೆ ಆ ಟ್ರೇಸಿಂಗ್ ಪೇಪರ್ಗಳು ನೀರು-ಕಾಫಿ-ವ್ಹಿಸ್ಕಿ ಕುಡಿದು ಕೂತಿರುತ್ತಿದ್ದವು. ಮೆತ್ತಗಾದರೆ ಅವುಗಳನ್ನು ಬಳಸಲು ಬರುತ್ತಿರಲಿಲ್ಲ. ಮತ್ತೆ ಕೊಟ್ಟು, ಅಲ್ಲೆ ನಿಂತು ಬರೆಸಿಕೊಳ್ಳಬೇಕಾಗಿತ್ತು. ಆಗೆಲ್ಲ ಅವರಿಂದ, `ನಿಂದೊಳ್ಳೆ ಕಾಟ ಕಣಲೇ...' ಎಂಬ ಬೈಗಳ ಇದ್ದೇ ಇತ್ತು.
ಹೀಗೆ... ಒಂದು ವಾರ ಮೇಸ್ಟ್ರು ಬರೆದುಕೊಟ್ಟ ನೀಲು ಖಾಲಿಯಾಗಿದ್ದವು. ಪಾಂಚಾಲಿಯ ನೀಲುಗಳು ಪ್ರಚೋದಿಸುತ್ತಿದ್ದವು. ಪಾಂಚಾಲಿಯಲ್ಲಿದ್ದ ಒಂದು ನೀಲುವನ್ನು- ಚಿತ್ರಸಹಿತ ಪತ್ರಿಕೆಯಲ್ಲಿ, ಮೇಸ್ಟ್ರ ಅನುಮತಿಯಿಲ್ಲದೆ, ಪಾಂಚಾಲಿಯಿಂದ ಎಂಬ ಅಡಿಟಿಪ್ಪಣಿ ಕೂಡ ಇಲ್ಲದೆ ಮರು ಮುದ್ರಿಸಿದೆ. ಪತ್ರಿಕೆ ಪ್ರಿಂಟಾಗಿ ಬಂದ ದಿನ ನನ್ನ ತಳಮಳ ನನಗೇ ಗೊತ್ತು. ಮೇಸ್ಟ್ರು ಬಂದ್ರು, ಪತ್ರಿಕೆಯ ಪುಟಗಳನ್ನು ತಿರುವಿಹಾಕುತ್ತಿದ್ದಾರೆ, ನಾನು ಹೊರಗೆ ಯಾವಾಗ ಕರೀತಾರೋ ಏನ್ ಅಂತಾರೋ ಇವತ್ತು ಏನ್ ಕಾದಿದೆಯೋ ಎಂದು ಒದ್ದಾಡುತ್ತಿದ್ದೇನೆ.
ಆಶ್ಚರ್ಯ ಅಂದ್ರೆ, ರೂಮಿನಿಂದ ಹೊರಗೆ ಬಂದವರೆ, `ಎಲ್ಲಿತ್ತಲೇ, ಎಲ್ಲೋ ಹುಡುಕ್ಬುಟ್ಟಿದಿಯಾ...' ಎಂದರು. ಅವರ ನೀಲು ಅವರಿಗೇ ಚಕಿತಗೊಳಿಸಿದ್ದಳು. ಹೊಸ ಹುಡುಗಿ ಸಿಕ್ಕಷ್ಟೇ ಖುಷಿಯಲ್ಲಿದ್ದರು. ನನ್ನ ಆತಂಕವೆಲ್ಲ ಕರಗಿ ಕೂಲಾಗಿ, `ಊರಲ್ಲಿತ್ತು ಸಾರ್, ನಮ್ಮಣ್ಣನತ್ರಿತ್ತು ತಗಂಬಂದೆ...' ಅಂದೆ.
`ನಾನೇ ನೋಡಿಲ್ವಲೋ, ಕೊಡಿಲ್ಲಿ...' ಎಂದರು. ಯಾರ್ಯಾರದೋ ಕಣ್ತಪ್ಪಿಸಿ ಕಾಪಾಡಿಕೊಂಡು ಬಂದಿದ್ದ ಪಾಂಚಾಲಿಯನ್ನು ಕೈಗೆ ಕೊಡುತ್ತ ಅವರ ಮುಖ ನೋಡಿದೆ. ನನ್ನ ತಲೆತುಂಬಾ ಆ ಫೋಟೋಗಾದ ಗತಿ ತುಂಬಿತ್ತು. ಅವರು, `ನಿನ್ನ ಪಾಂಚಾಲಿಗೇನೂ ಮಾಡಲ್ಲ, ಕೊಡೋ...' ಎಂದು ಅವತ್ತಿನ ರಜಾ ದಿನವನ್ನು ಅವಳೊಂದಿಗೆ ಕಳೆದರು. ಅವರೇ ಮಾಡಿದ ಅವರ ಪಾಂಚಾಲಿಯ ಬಗ್ಗೆ ಹದಿನೆಂಟು ವರ್ಷಗಳ ನಂತರ ಏನನ್ನಬಹುದೆನ್ನುವ ಕುತೂಹಲ, ಕಾತರವಿತ್ತು. ಅದಕ್ಕೆ ತಕ್ಕಂತೆ ಅವರ ಮನಸ್ಸು ಕೂಡ ಆವತ್ತಿನ ಕ್ಷಣಗಳನ್ನು ಮೆಲುಕು ಹಾಕುತ್ತಿತ್ತು. ಹಾಗಾಗಿ ಮಾರನೆ ದಿನ ಹೋಗಿ ಅವರ ಮುಂದೆ ನಿಂತೆ.
ಇವನು ಇದಕ್ಕೇ ಬಂದಿದ್ದಾನೆಂಬುದನ್ನು ಗ್ರಹಿಸಿ, `ಪರವಾಗಿಲ್ಲ ಕಣೋ, ಚೆನ್ನಾಗಿದೆ. ಆ ಟೈಮೇ ಹಂಗಿತ್ತು... ಸಂಥಿಂಗ್ ನ್ಯೂ ಅಂಡ್ ಡಿಫರೆಂಟ್... ಜೊತೆಗೆ ಅನ್ನಿಸಿದ್ದನ್ನ ಹೇಳುವ ಧೈರ್ಯ, ಹೇಳುವಾಗ ಬಳಸಬೇಕಾದ ಬುದ್ಧಿವಂತಿಕೆ ಎರಡೂ ಮುಖ್ಯ. ಇದರಲ್ಲಿ ಬರ್ದಿರೋ ಎಲ್ರಲ್ಲೂ ಅದಿದೆ, ಅದ್ಕೆ ಇದು ಚೆನ್ನಾಗಿದೆ...' ಎಂದವರೆ ಅಷ್ಟೇ ತುಂಟತನದಿಂದ, ಪಾಂಚಾಲಿಯನ್ನೇ ನನಗೆ ಧಾರೆ ಎರೆದು ಕೊಟ್ಟಂತೆ, `ತಗೋ, ಮಜಾ ಮಾಡೋಗು' ಎಂದರು.
ಅಷ್ಟೊತ್ತಿಗಾಗಲೇ ಪಾಂಚಾಲಿಗಾಗಿ ನನ್ನಂತೆಯೇ ಹುಡುಕಾಡುತ್ತಿದ್ದ ಅಗ್ರಹಾರ ಕೃಷ್ಣಮೂರ್ತಿಯವರಿಗೆ `ಪಾಂಚಾಲಿ' ನನ್ನ ಹತ್ತಿರ ಇರುವುದು ತಿಳಿದು, `ಬಸು, ನನಗೊಂದು ಝೆರಾಕ್ಸ್ ಕಾಪಿ ಬೇಕಲ್ಲ...' ಅಂದರು. ಆಮೇಲೆ ನಟರಾಜ್ ಹುಳಿಯಾರ್, ಎಸ್.ಎಸ್.ಶಂಕರ್... ಹೀಗೆ ಕೇಳಿದವರೆಲ್ಲರಿಗೂ ಕೊಟ್ಟಿದ್ದಾಯಿತು. ಹಾಗೆಯೇ ಅದರಲ್ಲಿರುವ ಅಷ್ಟೂ ನೀಲುಗಳನ್ನು ಮತ್ತೆ ಮತ್ತೆ ಪತ್ರಿಕೆಯಲ್ಲಿ ಪ್ರಕಟಿಸಿದ್ದೂ ಆಯಿತು.
ಲಂಕೇಶರ ಪಾಂಚಾಲಿ ಬಗ್ಗೆ ಲಂಕೇಶರೇ ಹೀಗಂದ ಮೇಲೆ, ಅದರ ಬಗ್ಗೆ ಇದ್ದ ಕುತೂಹಲ ಇನ್ನಷ್ಟು ಇಮ್ಮಡಿಗೊಂಡು ಮತ್ತೆ ಮತ್ತೆ ಓದತೊಡಗಿದೆ. ಹೊಸ ತಲೆಮಾರಿನ ಕಲಾವಿದರ ಬಗ್ಗೆ ತೇಜಸ್ವಿ, ದಲಿತರ ಬಗ್ಗೆ ಪ್ರೊಫೆಸರ್ ನಂಜುಂಡಸ್ವಾಮಿ, ಜೆಪಿ-ಬಸವಲಿಂಗಪ್ಪನವರ ಬಗ್ಗೆ ಲಂಕೇಶ್, ಬೂಸಾ ಪ್ರಕರಣದ ಬಗ್ಗೆ ಸಿದ್ಧಲಿಂಗಯ್ಯ... ಅಂದಿನ ತುರ್ತಿಗೆ ತಕ್ಕಂತೆ ಎಲ್ಲರೂ ಒಂದು ಮನಸ್ಸಿನಂತೆ ಸ್ಪಂದಿಸಿರುವುದು ಎದ್ದು ಕಾಣತೊಡಗಿತು. ನಾಡನ್ನು ಒಂದು ಚಳುವಳಿಗೆ ಸಿದ್ಧಗೊಳಿಸಿದಂತಿತ್ತು.
ಕರ್ನಾಟಕದ ಸಾಹಿತ್ಯಕ, ಸಾಂಸ್ಕೃತಿಕ ಜಗತ್ತನ್ನು ಸಮೃದ್ಧಗೊಳಿಸಿದ ಆ ಕ್ರಿಯಾಶೀಲ ಮನಸ್ಸುಗಳು ಇವತ್ತು, ಪಾಂಚಾಲಿ ಹೊರಬಂದ ಮೂವತ್ತೈದು ವರ್ಷಗಳ ನಂತರ, ಒಬ್ಬೊಬ್ಬರು ಒಂದೊಂದು ಬಾವಿಯಾಗಿದ್ದಾರೆ. ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿದ್ದಾರೆ. ಕಾಲ-ಬುದ್ಧಿ-ಬದುಕು ಅವರನ್ನು ಬದಲಾಯಿಸಿತೆ ಅಥವಾ ಬಲಿ ತೆಗೆದುಕೊಂಡಿತೆ?

Monday, December 7, 2009

ಜಾಗತಿಕ ರಿಸೆಷನ್ ಗರ: ಸುದ್ದಿ ಮಾಧ್ಯಮಗಳೂ ಆಪತ್ತಿನಲ್ಲಿ



ಜಾಗತಿಕ ಆರ್ಥಿಕ ಹಿಂಜರಿತ ಜಗತ್ತಿನ ಯಾವ ಯಾವ ದೇಶಗಳ, ಯಾವ ಯಾವ ವಲಯಗಳ ಮೇಲೆ, ಹೇಗೇಗೆ ಪರಿಣಾಮ ಬೀರಿದೆ ಎಂಬುದು ಕೇವಲ ಸುದ್ದಿಯಷ್ಟೆ ಅಲ್ಲ; ಆಗಿರುವ, ಆಗುತ್ತಿರುವ ಅನಾಹುತ ಅಂದಾಜಿಗೂ ಸಿಗದಷ್ಟು ಆಘಾತಕಾರಿಯಾದುದು.

ಇತ್ತೀಚಿನ ವರ್ಷಗಳಲ್ಲಿ ಕ್ರಾಂತಿಯನ್ನು ಮಾಡಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರವಂತೂ ಕ್ಷಣಕ್ಕೊಂದು ಕಂಪನಿ ಕಣ್ಮುಚ್ಚುವ ಸ್ಥಿತಿಗೆ ತಲುಪಿ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಎಲ್ಲಾ ಕಾಲದಲ್ಲೂ ಜನರ ನಂಬಿಕೆಗೆ ಪಾತ್ರವಾಗಿದ್ದ ಬ್ಯಾಂಕಿಂಗ್, ಇನ್ಶೂರೆನ್ಸ್ ಕ್ಷೇತ್ರಗಳು ಮೊಟ್ಟಮೊದಲ ಬಾರಿಗೆ ಪಲ್ಲಟಕ್ಕೊಳಕ್ಕಾಗಿ ಪತರಗುಡುತ್ತಿವೆ. ಇನ್ನು ಇದ್ದಕ್ಕಿದ್ದಂತೆ ಆಕಾಶಕ್ಕೆ ಏರಿದ್ದ ಷೇರ್ ಮಾರ್ಕೆಟ್, ರಿಯಲ್ ಎಸ್ಟೇಟ್ ವಲಯಗಳ ವ್ಯವಹಾರವಂತೂ ಏರಿದ್ದಷ್ಟೇ ವೇಗವಾಗಿ ಇಳಿದು, ಆ ವಲಯಗಳನ್ನು ಅವಲಂಬಿಸಿದ್ದ ಅಪಾರ ಜನರನ್ನು ಚಿಂತಾಕ್ರಾಂತರನ್ನಾಗಿ ಮಾಡಿಬಿಟ್ಟಿದೆ. ಆಶ್ಚರ್ಯಕರ ಸಂಗತಿ ಎಂದರೆ, ಇವೆಲ್ಲವನ್ನೂ ಸುದ್ದಿಯನ್ನಾಗಿ ಮಾಡಿ ಮಾರುತ್ತಿದ್ದ, ಅವುಗಳಿಂದ ಹರಿದು ಬರುತ್ತಿದ್ದ ಕೋಟ್ಯಂತರ ರೂಪಾಯಿಗಳ ಜಾಹಿರಾತನ್ನು ಅವಲಂಬಿಸಿಯೇ ಬದುಕುತ್ತಿದ್ದ, ಓದುಗರನ್ನು ಮರೆತು ಜಾಹಿರಾತೇ ಅಂತಿಮ ಎಂದು ನಿರ್ಧರಿಸಿದ್ದ ಸುದ್ದಿ ಮಾಧ್ಯಮ ಕ್ಷೇತ್ರ ಕೂಡ ಇವತ್ತು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕು ಒದ್ದಾಡುತ್ತಿದೆ. ಕಾರ್ಪೋರೇಟ್ ಕಂಪನಿಗಳಿಂದ ಜಾಹಿರಾತಿನ ಮೂಲಕ ಹರಿದು ಬರುತ್ತಿದ್ದ ಹಣ ನಿಂತಿದ್ದರಿಂದ ನಷ್ಟಕ್ಕೊಳಗಾಗಿ ನೆಲ ಹಿಡಿದು ಮಲಗುವಂತಾಗಿದೆ.

ವಿದೇಶಿ ಮೂಲದ, ಹಳೆಯ, ಅತಿ ಹೆಚ್ಚು ಪ್ರಸಾರ ಮತ್ತು ಪ್ರತಿಷ್ಠಿತ ಹೆಸರು ಪಡೆದಿರುವ ‘ದಿ ಡೈಲಿ ಟ್ರಿಬ್ಯೂನ್’ ಸುದ್ದಿ ಸಂಸ್ಥೆ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ ತನ್ನ ಎಂಟು ಆವೃತ್ತಿಗಳನ್ನು ಮತ್ತು ಹನ್ನೆರೆಡು ಟಿವಿ ಚಾನಲ್‌ಗಳನ್ನು ಮುಚ್ಚಬೇಕಾಗಿರುವ ಸ್ಥಿತಿಯನ್ನು ಇವತ್ತು ತಾನೇ ಸುದ್ದಿಯಾಗಿ ಬಿತ್ತರಿಸುತ್ತಿದೆ. ಅಮೆರಿಕಾದ ಮೂರನೇ ಅತಿದೊಡ್ಡ ನ್ಯೂಸ್‌ಪೇಪರ್ ಸಂಸ್ಥೆ ಎನಿಸಿದ್ದ ಮ್ಯಾಕ್ ಕ್ಯಾಚಿ ೨,೧೦,೦೦೦ ಪ್ರಸಾರದ ತನ್ನ ಜನಪ್ರಿಯ ‘ದಿ ಮಿಯಾಮಿ ಹೆರಾಲ್ಡ್’ ಅನ್ನು ಮಾರಾಟಕ್ಕಿಟ್ಟಿದೆ. ದುರದೃಷ್ಟಕರ ಸಂಗತಿ ಎಂದರೆ, ಈ ಪತ್ರಿಕೆ ೧೯ ಪುಲಿಟ್ಜರ್ ಪ್ರಶಸ್ತಿ ಪಡೆದ ದಾಖಲೆ ಹೊಂದಿದೆ. ಹಾಗೆಯೇ ‘ದಿ ಲಾಸ್ ಏಂಜಲೀಸ್ ಟೈಮ್ಸ್,;’ ‘ಬಾಲ್ಟಿಮೋರ್ ಸನ್’ ಸುದ್ದಿ ಸಂಸ್ಥೆಗಳು ತಮಗೇ ತಾವೇ ದಿವಾಳಿ ಎದ್ದಿರುವುದಾಗಿ ಬ್ಯಾಂಕಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಘೋಷಿಸಿಕೊಂಡಿವೆ. ೧೫೦ ವರ್ಷಗಳಷ್ಟು ಹಳೆಯ ಪೇಪರ್ ಎಂಬ ಹೆಸರು ಪಡೆದಿರುವ ‘ರಾಕಿ ಮೌಂಟೆನ್ ನ್ಯೂಸ್’ ಮತ್ತು ‘ದಿ ಚಿಕಾಗೋ ಟ್ರಿಬ್ಯೂನ್’ ಪತ್ರಿಕಾ ಸಂಸ್ಥೆಗಳು ‘ಫಾರ್ ಸೇಲ್’ ಎಂದು ಬೋರ್ಡ್ ಹಾಕಿ ಆಗಲೇ ತಿಂಗಳಾಗುತ್ತಾ ಬಂದಿದೆ. ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಂತೂ ಮ್ಯಾನ್‌ಹಟನ್‌ನಲ್ಲಿರುವ ತನ್ನ ಕೇಂದ್ರ ಕಚೇರಿಯನ್ನು ೨೨೫ ಮಿಲಿಯನ್ ಡಾಲರ್ ಸಾಲಕ್ಕೆ ಅಡ ಇಡಲು ಮುಂದಾಗಿದೆ.

ಇದು ವಿದೇಶಿ ಸುದ್ದಿ ಸಂಸ್ಥೆಗಳ ಸುದ್ದಿಯಾಯಿತು; ದೇಸಿ ಸುದ್ದಿ ಸಂಸ್ಥೆಗಳ ಕತೆ? ಅವುಗಳ ಮೇಲೆ ಬಿದ್ದ ಪರಿಣಾಮ, ಇವುಗಳ ಮೇಲೆ ಬೀಳದೇ ಇರುತ್ತದೆಯೇ? ಜಾಗತೀಕರಣಕ್ಕೆ ಭಾರತ ಬಾಗಿಲು ತೆರೆದ ತಕ್ಷಣ, ಮಾಧ್ಯಮ ಕ್ಷೇತ್ರ ಪರ-ವಿರೋಧಗಳ ಮಾತುಗಳನ್ನಾಡುತ್ತಲೇ ಮುಕ್ತ ಮಾರುಕಟ್ಟೆಯ ಮಂತ್ರದಂಡಕ್ಕೆ ತಲೆಬಾಗಿತು. ಅಭಿವೃದ್ಧಿ ಪತ್ರಿಕೋದ್ಯಮ ಹಲವರ ಆಸೆಗಳನ್ನು ಗರಿಗೆದರಿಸಿತು. ಅನಂತ ಸಾಧ್ಯತೆಗಳತ್ತ ಕೈಚಾಚಿತು. ಅದರ ಪರಿಣಾಮವಾಗಿ ‘ಹೌ ಟು ಸೆಲ್ ಮೈ ರೈಟಿಂಗ್ಸ್’ ಎಂಬ ತತ್ವ ಈಗ ಇಲ್ಲೂ ಚಾಲ್ತಿಯಲ್ಲಿದೆ. ಸಂಬಳಕ್ಕಾಗಿ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸಕ್ಕಿಂತ ಇದೇನು ಭಿನ್ನ ಎಂಬ ತರ್ಕ ತಾಂಡವವಾಡುತ್ತಿದೆ.

ಎಲ್ಲ ಕೆಲಸವೂ ಬುದ್ಧಿ ಒತ್ತೆಯಿಟ್ಟು ಮಾಡುವ ಕೆಲಸವೇ. ಆದರೆ ಅಲ್ಲೂ, ಅಲ್ಪಸ್ವಲ್ಪವಾದರೂ ನೀತಿ-ನಿಯತ್ತು, ತತ್ವ-ಸಿದ್ಧಾಂತ, ದೇಶ-ಭಾಷೆ ಇರಬೇಕಲ್ಲವೇ? ಜನರಿಟ್ಟ ನಂಬಿಕೆಗೆ ದ್ರೋಹ ಬಗೆಯಬಾರದಲ್ಲವೆ? ಬದ್ಧತೆ ಎನ್ನುವುದು ಇವತ್ತು ಬರಿ ಮಾತಿನ ಬದನೆಕಾಯಿ ಆಗಿದೆ. ಅಭಿವೃದ್ಧಿ, ಹಣವೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಲವಾರು ಸುದ್ದಿ ಸಂಸ್ಥೆಗಳು ನಮ್ಮಲ್ಲೂ ಇವೆ. ಜಾಗತಿಕ ಆರ್ಥಿಕ ಹಿಂಜರಿತ, ವಿದೇಶಿ ಸುದ್ದಿ ಮಾಧ್ಯಮಗಳಿಗಷ್ಟೇ ಬಿಸಿ ಮುಟ್ಟಿಸಿಲ್ಲ, ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಇಲ್ಲಿನ ಸುದ್ದಿ ಸಂಸ್ಥೆಗಳಿಗೂ ನಷ್ಟದ ಕಷ್ಟ ಕೊಡುತ್ತಿದೆ. ದೃಶ್ಯಮಾಧ್ಯಮ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಎನ್‌ಡಿಟಿವಿ, ಅದನ್ನೇ ಅನುಕರಿಸುತ್ತಿರುವ ಸಿಎನ್‌ಎನ್ ಐಬಿಎನ್ ಸುದ್ದಿ ಸಂಸ್ಥೆಗಳು ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವುದಾಗಿ ಲೆಕ್ಕಪತ್ರ ಸಲ್ಲಿಸಿವೆ. ಇತ್ತೀಚೆಗೆ ಶುರುವಾದ, ಕನ್ನಡದ ಕಂಪನ್ನು ಸೂಸುವ ಕನ್ನಡದ ಏಕೈಕ ಟಿವಿ ಚಾನಲ್ ಒಟ್ಟಿಗೇ ೮೦ ನೌಕರರ ಪಟ್ಟಿ ತಯಾರಿಸಿ, ಕೆಲಸದಿಂದ ತೆಗೆಯಲು ಸಿದ್ಧವಾಗಿದೆ. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕಾ ಸಮೂಹ ಪತ್ರಕರ್ತರು ಮತ್ತು ಸಿಬ್ಬಂದಿಯ ಸಂಬಳದಲ್ಲಿ ಶೇಕಡಾ ೩೦ ಕಡಿತಗೊಳಿಸಲು ತೀರ್ಮಾನಿಸಿದ ಸುದ್ದಿ ಹೊರಬಿದ್ದಿದೆ. ಕನ್ನಡದ ಅಷ್ಟೂ ಚಾನೆಲ್‌ಗಳು ಖರ್ಚು ಕಡಿಮೆ ಮಾಡಲು ‘ನಿಷ್ಪ್ರಯೋಜಕರ ಪಟ್ಟಿ’ ತಯಾರಿಸಿಟ್ಟುಕೊಂಡು, ಕೆಲಸಗಾರರಲ್ಲಿ ದಿಗಿಲು ಹುಟ್ಟಿಸಿವೆಯಂತೆ.

ಜಾಹಿರಾತುಗಳ ಮೇಲೆ ಜೀವ ಇಟ್ಟುಕೊಂಡಿದ್ದ, ಅವುಗಳಿಂದ ದಿನಕ್ಕೆ ಕೋಟ್ಯಂತರ ರೂಪಾಯಿ ಸಂಪಾದಿಸುತ್ತ, ಆ ಸೊಕ್ಕಿನಲ್ಲಿ ಸಂಪಾದಕ ವಲಯವನ್ನು ನಿಕೃಷ್ಟವಾಗಿ ನೋಡುತ್ತಿದ್ದ, ಜಾಹಿರಾತು ಜಗತ್ತಿದ್ದರೆ ಓದುವ ವಲಯವೇ ಬೇಡ ಎಂದು ಶ್ರೀಸಾಮಾನ್ಯನನ್ನು ನಿರ್ಲಕ್ಷಿಸಿದ್ದ ‘ಟೈಮ್ಸ್ ಆಫ್ ಇಂಡಿಯಾ’ದಂತಹ ಪತ್ರಿಕೆಗಳು ಇವತ್ತು ಕಂಗಾಲಾಗಿವೆ. ಯಾಕೆಂದರೆ ಇಂತಹ ಪತ್ರಿಕೆಗಳು ಅವಲಂಬಿಸಿದ್ದು, ಅತೀ ಹೆಚ್ಚು ಪ್ರಚಾರ ನೀಡಿ ಉಬ್ಬಿಸಿದ್ದು ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್ ಮತ್ತು ಕಾರ್ಪೋರೇಟ್ ಜಗತ್ತನ್ನು. ಈ ಜಗತ್ತು ಇವತ್ತು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಸಿಕ್ಕು ಸದ್ದಡಗಿರುವಾಗ, ಅವುಗಳಿಂದ ಹರಿದು ಬರುತ್ತಿದ್ದ ಕೋಟ್ಯಂತರ ರೂಪಾಯಿಗಳ ಜಾಹಿರಾತು ನಿಂತಾಗ, ಇಂತಹ ಸುದ್ದಿ ಸಂಸ್ಥೆಗಳು ಕೂಡ ಕಂಗೆಟ್ಟು ಕೂರುವಂತಾಗಿದೆ. ಬೆಂಚ್, ಪಿಂಕ್ ಸ್ಲಿಪ್, ಕಾಸ್ಟ್ ಕಟಿಂಗ್ ಇಲ್ಲೂ ಚಾಲ್ತಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ‘ಟೈಮ್ಸ್’ ರಿಯಲ್ ಎಸ್ಟೇಟ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಪುರವಣಿಗಳಲ್ಲಿ ಜಾಹಿರಾತುಗಳೇ ಇಲ್ಲದೆ, ಹಳೆಯ ಜಾಹಿರಾತುಗಳನ್ನೇ ಮತ್ತೆ ಮುದ್ರಿಸಿ, ಈಗಲೂ ಆ ಜಗತ್ತು ಹಾಗೆಯೇ ಇದೆ ಎಂಬ ಭ್ರಮೆ ಬಿತ್ತಿ, ಆ ಮೂಲಕ ಇತರರನ್ನು ಸೆಳೆಯುವ ಕೆಟ್ಟ ತಂತ್ರಕ್ಕೂ ಕೈ ಹಾಕಿದೆ. ಜಾಹಿರಾತು ದರವನ್ನೂ ಇಳಿಸಿದೆ. ಒಂದು ಜಾಹಿರಾತು ನೀಡಿದರೆ- ಒಂದಕ್ಕೆ ನಾಲ್ಕು (ಎಕಾನಾಮಿಕ್ ಟೈಮ್ಸ್, ಕನ್ನಡ ಟೈಮ್ಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ, ಬೆಂಗಳೂರು ಮಿರರ್) ಉಚಿತ ಎಂದು ಜಾಹಿರಾತು ನೀಡಿ ಜಾಹಿರಾತುದಾರರನ್ನೂ ಆಕರ್ಷಿಸುತ್ತಿದೆ.

ಇಲ್ಲಿ ಟೈಮ್ಸ್ ಆಫ್ ಇಂಡಿಯಾವನ್ನೇ ಯಾಕೆ ಮುಖ್ಯವಾಗಿಟ್ಟುಕೊಂಡು ಇಷ್ಟೆಲ್ಲ ಹೇಳಲಾಗುತ್ತಿದೆ ಎಂದರೆ, ಟೈಮ್ಸ್ ಪತ್ರಿಕೆಯಿಂದ ಕರ್ನಾಟಕದ ಪತ್ರಿಕೋದ್ಯಮದಲ್ಲಾದ ಬದಲಾವಣೆಗಳು ಅಷ್ಟಿಷ್ಟಲ್ಲ. ಟೈಮ್ಸ್‌ನ ಮಾಲೀಕರು ಉತ್ತರದ ಮಾರ್ವಾಡಿಗಳು. ಪತ್ರಿಕೋದ್ಯಮವನ್ನು ಉದ್ಯಮವನ್ನಾಗಿ ನೋಡಿದವರು ಮತ್ತು ಅದನ್ನು ಅಭಿವೃದ್ಧಿಪಡಿಸಲು ಬೇಕಾದ ತಂತ್ರಗಳನ್ನು, ಗಿಲೀಟುಗಳನ್ನು ಜಾಣ್ಮೆಯಿಂದ ಜಾರಿಗೆ ತಂದವರು. ಸ್ಥಳೀಯ ಪತ್ರಕರ್ತರನ್ನು ಅನುಕೂಲಕ್ಕೆ ತಕ್ಕ ಅಸ್ತ್ರಗಳನ್ನಾಗಿ ಬಳಸಿದವರು. ಆದರೆ ಆ ಪತ್ರಿಕೆಯ ಒಲವು-ನಿಲುವುಗಳೇ ಬೇರೆ. ಉದ್ದೇಶ-ವ್ಯಾಪ್ತಿಗಳೇ ಬೇರೆ. ಅದರ ಸಹಜ ವ್ಯಾವಹಾರಿಕ ಬುದ್ಧಿಯಂತೆ ಅದು ಒತ್ತು ನೀಡಿದ್ದು ಕಾರ್ಪೋರೇಟ್ ಕಲ್ಚರ್‌ಗೆ. ಆ ಕಲ್ಚರ್‌ನ ಶ್ರೀಮಂತ ಜನ, ಆ ಕಲ್ಚರ್‌ನಲ್ಲಿ ಕಾಣಿಸಿಕೊಳ್ಳಲು ಹಾತೊರೆಯುವ ಮೇಲ್‌ಮಧ್ಯಮ ವರ್ಗ, ಅವರ ಪಾರ್ಟಿಗಳು, ತೆವಲುಗಳು, ಮೋಜುಗಳು- ಅದಕ್ಕೇ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿತು. ಅದಕ್ಕೆ ತಕ್ಕಂತೆ ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿ, ರಿಯಲ್ ಎಸ್ಟೇಟ್ ಸಿಟಿಯಾಗಿ ಜನರ ಕೈಯಲ್ಲಿ ಕಾಸು ಚೆಲ್ಲಾಡತೊಡಗಿದಾಗ, ಟೈಮ್ಸ್ ಎಲ್ಲರ ಅಚ್ಚುಮೆಚ್ಚಿನ ಪತ್ರಿಕೆಯಾಗಿತ್ತು.

ಹಾಗಂತ ಟೈಮ್ಸ್‌ನಲ್ಲಿ ಬರೀ ಪೇಜ್ ತ್ರೀ ಕಲ್ಚರಷ್ಟೇ ಇರುತ್ತೆ ಎಂದಲ್ಲ, ಅಲ್ಲಿ ಸೀನಿಯರ್ ರೈಟರ್‌ಗಳ ಸೀರಿಯಸ್ಸಾದ ರೈಟಪ್‌ಗಳೂ ಪ್ರಕಟವಾಗುತ್ತವೆ. ಆಧ್ಯಾತ್ಮಿಕ, ಆರೋಗ್ಯದ ಚಿಂತನೆಗಳಿಗೂ ಜಾಗ ಕಲ್ಪಿಸಿಕೊಡಲಾಗುತ್ತದೆ. ಜಾತ್ಯತೀತ, ಪ್ರಗತಿಪರ, ವೈಚಾರಿಕ ನೀತಿ, ನಿಲುವುಗಳಿಗೂ ಪ್ರಾಶಸ್ತ್ಯವಿರುತ್ತದೆ. ವಿಜ್ಞಾನ-ವಿವೇಕಕ್ಕೂ ಅವಕಾಶವಿದೆ. ಬಡವರು, ಅಸಹಾಯಕರು, ಮಹಿಳೆಯರು, ರೋಗಿಗಳಿಗೆ ಕರಗುವ, ಮರುಗುವ ಮಾನವೀಯ ವರದಿಗಳೂ ಬರುತ್ತವೆ. ಆದರೆ ಇವೆಲ್ಲ ಎಷ್ಟು ಬೇಕೋ ಅಷ್ಟು ಮಾತ್ರ.

ಇಷ್ಟೆಲ್ಲ ಕಾರಣಗಳಿಂದ ಟೈಮ್ಸ್ ಇವತ್ತು ನಂಬರ್ ಒನ್ ಪತ್ರಿಕೆಯಾಗಿ ರಾರಾಜಿಸುತ್ತಿದೆ. ಅತ್ಯಲ್ಪ ಕಾಲದಲ್ಲಿಯೇ ಅಷ್ಟೂ ವಲಯಗಳನ್ನು ಆಕ್ರಮಿಸಿಕೊಂಡು, ಅಭಿವೃದ್ಧಿ ಪತ್ರಿಕೋದ್ಯಮದ ಹರಿಕಾರನಂತೆ ವಿಜೃಂಭಿಸುತ್ತಿದೆ. ಇದು ಸಹಜವಾಗಿಯೇ ದಿಢೀರ್ ದುಡ್ಡು ಮಾಡಲು ಹಾತೊರೆವ ಪತ್ರಿಕೆಗಳನ್ನು, ಬೇಲಿ ಮೇಲೆ ಕೂತ ಪತ್ರಕರ್ತರನ್ನು ಆಕರ್ಷಿಸಿದೆ. ಟೈಮ್ಸ್ ಅನ್ನು ಮಾಡೆಲ್ ಆಗಿ ಸ್ವೀಕರಿಸಿದ್ದಾಗಿದೆ.

ಕೆಲವು ಪತ್ರಿಕೆಗಳು ಈಗಾಗಲೇ ಪತ್ರಕರ್ತರನ್ನೇ ಜಾಹಿರಾತು ತರುವ ಏಜೆಂಟರನ್ನಾಗಿ ಪರಿವರ್ತಿಸಿ, ೨೫% ಕಮಿಷನ್‌ನ ತುಪ್ಪವನ್ನು ಮೂಗಿಗೆ ಸವರಿವೆ. ಇನ್ನು ಕೆಲವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಾಯೋಜಿತ ಪುರವಣಿಗಳನ್ನು ಪ್ರಕಟಿಸುತ್ತ ವರದಿಗೂ ಜಾಹಿರಾತಿಗೂ ಇದ್ದ ಅಂತರವನ್ನೇ ಅಳಿಸಿಹಾಕಿವೆ. ಅಷ್ಟೇ ಅಲ್ಲ, ಪ್ರತಿ ಶಾಸಕನಿಂದಲೂ ಜಾಹಿರಾತು ತರುವಂತೆ ಬಲವಂತದ ಒತ್ತಾಯ, ಒತ್ತಡ ಹಾಕುತ್ತಿವೆ. ಪತ್ರಕರ್ತರ ಹಲ್ಲುಗಿಂಜುವಿಕೆ... ಕಾಸು ಕೊಟ್ಟರೆ ಮಾಧ್ಯಮಗಳನ್ನೂ ಖರೀದಿಸಬಹುದು ಎನ್ನುವಂತಹ ವಾತಾವರಣ ನಿರ್ಮಾಣ ಮಾಡುತ್ತಿದೆ. ಇದು ಅಧಿಕಾರವಿರುವ ಶಾಸಕನಲ್ಲಿ ಇನ್ನೆಂತಹ ಉಡಾಳತನಕ್ಕೆ ಕಾರಣವಾಗಬಹುದು, ಅಂತಹ ಶಾಸಕ ಜನರನ್ನು ಇನ್ನೆಂತಹ ಪರಿ ಸುಲಿಯಬಹುದು? ಅವರಿಗಿನ್ನೆಲ್ಲಿಯ ಭಯ-ಅಳುಕು-ಅಂಜಿಕೆ ಉಳಿದೀತು?

ಇದು ಭವಿಷ್ಯತ್ತಿನ ಚಿಂತೆಯಲ್ಲ; ಇವತ್ತಿನ ದಿನಮಾನಗಳಲ್ಲಿ ಮಾಧ್ಯಮ ವಲಯದಲ್ಲಿ ನಡೆಯುತ್ತಿರುವ ಕತೆ. ಇಷ್ಟಾದರೂ ಪತ್ರಿಕೆಗಳು ಬಲವಾಗಿ ಬೇರುಬಿಟ್ಟು ಬೆಳೆದು ನಿಲ್ಲಲಾಗಿಲ್ಲ; ಆದರೆ ಕೆಲ ಪತ್ರಕರ್ತರಂತೂ ಪೊಗದಸ್ತಾಗಿ ಬೆಳೆದಿದ್ದಾರೆ!

ಕನ್ನಡದ ಜನಪ್ರಿಯ ಟಿವಿ ಕಾರ್ಯಕ್ರಮಆದರೆ... ಭಾರತೀಯ ಮನಸ್ಸು... ಇವತ್ತಿಗೂ ಸುದ್ದಿ ಮಾಧ್ಯಮಗಳನ್ನು ನಂಬುತ್ತದೆ. ಅವುಗಳಲ್ಲಿ ಬಿತ್ತರವಾದ, ಪ್ರಕಟವಾದ ಸುದ್ದಿಗಳನ್ನು ಸತ್ಯವೆಂದು ಭಾವಿಸುತ್ತದೆ. ಮಾಧ್ಯಮದ ಮಂದಿಗೆ ಮರ್ಯಾದೆ ನೀಡುತ್ತದೆ. ಆದರೆ, ಅವರು ಮಾತ್ರ ಓದುಗರನ್ನು ಕಡೆಗಣಿಸಿ, ಜನಹಿತವನ್ನು ನಿರ್ಲಕ್ಷಿಸಿ ಜಾಹಿರಾತಿನ ಜೊಲ್ಲಿಗೆ ಜೋತುಬಿದ್ದಿದ್ದಾರೆ. ಈಗ ಬದಲಾದ ಕಾಲಮಾನದಿಂದಾಗಿ, ಜಾಗತಿಕ ಆರ್ಥಿಕ ಹಿಂಜರಿತದ ದೆಸೆಯಿಂದಾಗಿ ದಿಕ್ಕೆಟ್ಟು ಕೂತಿದ್ದಾರೆ.

ಸುದ್ದಿ ಮಾಧ್ಯಮಗಳು ನಿಲ್ಲಬೇಕಾದ್ದು, ಗೆಲ್ಲಬೇಕಾದ್ದು, ಬೆಳೆಯಬೇಕಾದ್ದು ಜನರಿಂದ. ಹಾಗೆಯೇ ಜಾಹಿರಾತುಗಳು ಸುದ್ದಿ ಮಾಧ್ಯಮಗಳ ಬದುಕಿಗೆ ಬೇಕಾದ ಪ್ರಾಣವಾಯುವಾಗಬೇಕೆ ಹೊರತು; ಅದೇ ಮುಖ್ಯವಾಗಬಾರದು. ಜನ ಸುಮ್ಮನಿದ್ದಾರೆಂದು ಏನು ಬೇಕಾದರೂ ಮಾಡಬಹುದು; ಹಣವೊಂದಿದ್ದರೆ ಎಲ್ಲವನ್ನೂ ಗೆಲ್ಲಬಹುದು ಎಂಬ ಧೋರಣೆ ಮತ್ತು ಧಾರ್ಷ್ಟ್ಯವುಳ್ಳ ಸುದ್ದಿ ಮಾಧ್ಯಮದವರಿಗೆ ಹಾಗೂ ಆ ರೀತಿ ಯೋಚಿಸುವ ಎಲ್ಲರಿಗೂ ಇದು ಪಾಠವಾಗಬಹುದೆ?
(ಡಿಸೆಂಬರ್ 2008- ಕೆಂಡಸಂಪಿಗೆ)

Friday, November 27, 2009

ಅಂವ ರಾವಣ; ಇಂವ ಬ್ರಾಹ್ಮಣ


ಅದು ಎಪ್ಪತ್ತರ ದಶಕ. ಕನ್ನಡ ಸಾರಸ್ವತ ಲೋಕ ಸಮೃದ್ಧಿಯಿಂದ ನಳನಳಿಸುತ್ತಿದ್ದ ಕಾಲ. ಕುವೆಂಪು, ಕಾರಂತ, ಬೇಂದ್ರೆ, ಪುತಿನ, ಮಾಸ್ತಿಗಳ ಮರೆಯಲ್ಲಿ, ಅಡಿಗರ ಸಾರಥ್ಯದಲ್ಲಿ ಹೊಸ ಪೀಳಿಗೆಯ ಬರಹಗಾರರು ಕನ್ನಡದ ಹೊಸ ಕಳೆಯಾಗಲು ಕಾತರಿಸುತ್ತಿದ್ದ ಕಾಲ.

ಹೆಚ್ಚೂ ಕಡಿಮೆ ಸಮಕಾಲೀನ ಸಾಹಿತಿಗಳಾದ ಲಂಕೇಶ್, ನಿಸಾರ್ ಅಹಮದ್ ಮತ್ತು ಸುಮತೀಂದ್ರ ನಾಡಿಗ್- ಮೂವರು ಪೈಪೋಟಿಗೆ ಬಿದ್ದು ಬರೆಯುತ್ತಿದ್ದ, ಬದುಕುತ್ತಿದ್ದ, ಬೊಬ್ಬೆಯಾಕುತ್ತಿದ್ದ ಕಾಲವದು. ಒಬ್ಬರಿಗೊಬ್ಬರು ಎದುರಿಗೆ ಸಿಕ್ಕರೆ ಮುಗುಂ ಆಗುವ, ಬೆನ್ನು ತಿರುಗಿಸಿದರೆ ಸಾಕು ಗೇಲಿ ಮಾಡಿ ನಗಾಡುವ ಜಾತಿಯವರು. ಆ ಕಾಲದ ಮಹಿಮೆಯೋ ಏನೋ... ನಿಸಾರ್ ಅಹಮದ್‌ರ ನಿತ್ಯೋತ್ಸವ ಕವನ ಭಾರೀ ಪಾಪ್ಯುಲರ್ ಆಗಿತ್ತು. ಕವಿಮಿತ್ರರ ಪ್ರೋತ್ಸಾಹವೂ ದೊರಕಿತ್ತು. ಅಷ್ಟೇ ಅಲ್ಲ, ಆಕಾಶವಾಣಿಯಲ್ಲಿ ಆಗಾಗ ಅವರನ್ನು ಕರೆದು ಕವನ ವಾಚಿಸುವುದೂ ಇತ್ತು. ಒಂದು ಕವನಕ್ಕೆ ಎಪ್ಪತ್ತೈದು ರೂಪಾಯಿ ಸಂಭಾವನೆಯೂ ಸಿಗುತ್ತಿತ್ತು.

ಆ ಸಂಭಾವನೆ ಮತ್ತು ಮನ್ನಣೆ ಆವತ್ತಿನ ದಿನಕ್ಕೆ, ಅವರ ಬೆಳವಣಿಗೆಯ ರೀತಿ ನೀತಿಗೆ ಭಾರಿಯಾಗಿತ್ತು. ನಿಸಾರ್‌ಗೆ ಸಿಗುತ್ತಿದ್ದ ಈ ಅವಕಾಶ, ಹಣ ಇನ್ನಿಬ್ಬರಲ್ಲಿ- ನಾಡಿಗ್, ಲಂಕೇಶರಲ್ಲಿ- ಕೀಳರಿಮೆಯನ್ನೂ, ಹೊಟ್ಟೆಕಿಚ್ಚನ್ನೂ ಹುಟ್ಟುಹಾಕಿತ್ತು. ಕಾಕತಾಳೀಯವೋ ಏನೋ, ಮೂವರಿಗೂ ಗುರುಗಳಂತಿದ್ದ ಅಡಿಗರಿಗೆ, ನಿಸಾರ್ ಬಗ್ಗೆ ಕೊಂಚ ಹೆಚ್ಚಾಗಿಯೇ ಪ್ರೀತಿಯಿತ್ತು. ಇದು ಇನ್ನಿಬ್ಬರಲ್ಲಿ ಅಸಮಾಧಾನ ಉಂಟುಮಾಡಿತ್ತು. ಸಹಜವಾಗಿ ಅದು ಸಂಜೆಯ ಗುಂಡಿನ ಗಡಂಗಿನಲ್ಲಿ ಗುಟುರು ಹಾಕುತ್ತಿತ್ತು. ಒಳಗಿದ್ದ ಹುಳುಕೆಲ್ಲ ಆ ಹೊತ್ತಿನಲ್ಲಿ ಹೊರಬರುತ್ತಿತ್ತು.

‘ಅಡಿಗ್ರು ಗುಂಡ್ ಹಾಕ್ದಾಗ, ಕಾಸ್ಟಿಕ್, ನಿಸಾರ್ ಪೊಯೆಟ್ಟೇ ಅಲ್ಲ ಅಂತಾರೆ, ಈಗ ನೋಡು... ಥೂ ಥೂ ಥೂ ವೆರಿ ಬ್ಯಾಡ್...' ಎಂದು ಲಂಕೇಶರೆಂದರೆ,
‘ನಿಸಾರ್ ಕವನಗಳಿಗೆ ಆಕಾಶವಾಣಿ ಸ್ಕೋಪ್ ಕೊಡ್ತಿದೆ, ವಿಪರೀತ ಆಯ್ತು... ಅದಕ್ಕೆ ಏನ್ ಕಾರಣ ಗೊತ್ತಾ ‘ಆ' ಹೆಂಗ್ಸು...' ಎಂದರು ನಾಡಿಗರು. ಹೀಗೆ ಗುಂಡು ಯಾವ ಕಡೆಗೆ ಎಳೆಯುತ್ತೋ ಆ ಕಡೆಗೆಲ್ಲ ಮಾತೂ ವಾಲುತ್ತಿದ್ದವು.

ಸುಮತೀಂದ್ರ ನಾಡಿಗ್ಅವರ ಮಾತಿಗೆ ಪೂರಕವಾಗಿ ಆಕಾಶವಾಣಿಯಲ್ಲಿದ್ದ ‘ಆ' ಹೆಂಗಸು, ನಿಸಾರರು ಆಕಾಶವಾಣಿಗೆ ಬಂದಾಗ, ಹೋದಾಗ ಹೂ ನಗೆ ನಕ್ಕು, ಕವನಗಳನ್ನು ಮೆಚ್ಚಿ ಮಾತನಾಡುತ್ತಿದ್ದುದುಂಟು. ಆದರೆ, ನಾಡಿಗರು ಆರೋಪಿಸಿದಂತಹ ಯಾವ ಆರೋಪಗಳೂ ಅವರಿಬ್ಬರ ನಡುವೆ ಇರಲಿಲ್ಲ. ಇದು ಇಷ್ಟಕ್ಕೇ ನಿಲ್ಲಲಿಲ್ಲ. ನಾಡಿಗರು ಇದ್ದಕ್ಕಿದ್ದಂತೆ ಒಂದು ದಿನ ಆಕಾಶವಾಣಿಗೆ ಭೇಟಿ ಕೊಟ್ಟರು. ಅದೂ ಅನುಮಾನವಿದ್ದ ‘ಆ' ಹೆಂಗಸಿನ ಬಳಿಗೇ ಹೋದರು. ನೋಡಿದರೆ, ಅಲ್ಲಿ ಆಗಲೇ ನಿಸಾರರಿದ್ದಾರೆ. ಅವರಿಬ್ಬರ ಮುಖದಲ್ಲಿ ಮಂದಹಾಸವಿದೆ. ನಾಡಿಗರ ಅನುಮಾನಕ್ಕೆ ಪುಷ್ಟಿ ಸಿಕ್ಕಂತಾಯಿತು.

ನಾಡಿಗರು ಮುಖ ಗಂಟಿಕ್ಕಿಕೊಂಡು, ‘ನಾನೊಂದು ಕವನ ಬರೆದಿದ್ದೇನೆ... ಓದಬೇಕು, ಅವಕಾಶ ಕೊಡಿ' ಎಂದರು.
‘ಆ' ಹೆಂಗಸು, ‘ಸಾರ್ ಅದು ನನ್ನ ಮೇಲಾಧಿಕಾರಿಗಳಿಗೆ ಸಂಬಂಧಿಸಿದ್ದು... ಅಲ್ಲಿಂದ...' ಎಂದು ರಾಗ ಎಳೆದರು.
ಅಷ್ಟೆ, ನಾಡಿಗರು, ‘ಓಕೆ, ಅವಕಾಶ ಕೊಡದಿದ್ದರೆ ಪರವಾಗಿಲ್ಲ, ಕವನ ಓದ್ತೀನಿ ಕೇಳಿ...' ಎಂದು ‘ಆ' ಹೆಂಗಸಿನ ಹೆಸರನ್ನೇ ಬಳಸಿ ಬರೆದಿದ್ದ ಕವನವನ್ನು ಅವರಿಬ್ಬರಿಗೇ ವಾಚಿಸತೊಡಗಿದರು.

ಕವನದ ಎರಡು ಮೂರು ಸಾಲುಗಳನ್ನು ಕೇಳುತ್ತಿದ್ದಂತೆ, ಅವರಿಬ್ಬರಿಗೂ ಮುಜುಗರ. ಮುಖ ಬಾಡಿದವು. ನಿಸಾರ್ ಅಲ್ಲಿ ನಿಲ್ಲಲಾಗದೆ ಹೊರಗೆ ಹೋದರು. ‘ಆ' ಹೆಂಗಸು ಮುಖಮುಚ್ಚಿಕೊಂಡು ಕೂತವರು ಮೇಲೇಳಲಿಲ್ಲ. ಆದರೆ ನಾಡಿಗರು ಅಲ್ಲಿ ನಿಂತುಕೊಂಡೇ ಪೂರ್ತಿ ಪದ್ಯ ಓದಿದರು. ಹಾಗೆಯೇ ಇನ್ನಿಬ್ಬರು ಕವಿಮಿತ್ರರ ಕಿವಿಗೂ ಸುರಿದರು.

ಅತ್ತ ನಿಸಾರರು ಕವಿಮಿತ್ರರ ಕೀಟಲೆಯಿಂದ ಬೇಸತ್ತು ರೂಮು ಸೇರಿಕೊಂಡರು. ಆ ರೂಮು... ಗಾಂಧಿಬಜಾರ್‌ನ ಟ್ಯಾಗೂರ್ ಸರ್ಕಲ್ಲಿನಲ್ಲಿರುವ ಕೆನರಾ ಬ್ಯಾಂಕ್ ಪಕ್ಕದಲ್ಲಿದ್ದ ದೊಡ್ಡ ಮನೆಯ ಮಹಡಿಯ ಮೇಲಿತ್ತು. ಅದು ಆವತ್ತಿಗೆ ನಿಸಾರರ ಪದ್ಯದ ಕಾರ್ಖಾನೆಯೂ ಆಗಿತ್ತು. ದಿನವಿಡಿ ನಿಸಾರರು ಆ ರೂಮಿನಲ್ಲಿಯೇ ಕಳೆಯುತ್ತಿದ್ದರು. ಆ ರೂಮು ಪಾರ್ಥಸಾರಥಿ ಎಂಬ ನಿಸಾರ್ ಗೆಳೆಯರಿಗೆ ಸೇರಿತ್ತು. ನಿಸಾರ್ ಪದ್ಯ ಬರೆಯಲೆಂದೇ ಪಾರ್ಥಸಾರಥಿ ಆ ರೂಮನ್ನು ಅವರಿಗೆ ಉಚಿತವಾಗಿ ಕೊಟ್ಟಿದ್ದರು.

ಲಂಕೇಶ್ಅಂದು ನಾಡಿಗರ ಪದ್ಯದಿಂದ ಶ್ಯಾನೆ ಬೇಜಾರಾಗಿದ್ದ ನಿಸಾರರು, ರೂಮಿನಲ್ಲಿ ಒಬ್ಬರೆ ಕೂತು ಬೀಡಿ ಸೇದುತ್ತಿದ್ದರು. ಅಂದೊಂಥರಾ ಕವಿಗಳು, ಕಲಾವಿದರ ಅಡ್ಡ ಆಗಿತ್ತು. ಅಲ್ಲಿಗೆ ನಿಸಾರ್-ನಾಡಿಗ್-ಲಂಕೇಶ್- ಮೂವರಿಗೂ ಪರಿಚಯವಿದ್ದ, ಮೂವರನ್ನೂ ಹತ್ತಿರದಿಂದ ಬಲ್ಲ ಟಿ.ಎಸ್.ರಂಗಾ ಹೋದರು.

ಹೋಗ್ತಿದ್ದಹಾಗೆ ನಿಸಾರರು, ‘ಏನಯ್ಯಾ ಇದು, ಅವನು ನೋಡದ್ರೆ ಕವಿನೇ ಅಲ್ಲ ಅಂತಾನೆ, ಇವುನ್ ನೋಡುದ್ರೆ ನನ್ನ ಮೇಲೆ ಕೆಟ್ ಕೆಟ್ಟದಾಗಿ ಕವನ ಬರ್ದು, ನನ್ನ ಮುಂದೇನೆ ಓದ್ತಾನೆ, ಅಂವ ರಾವಣ, ಇಂವ ಬ್ರಾಹ್ಮಣ... ಏನಯ್ಯಾ ಮಾಡೋದು...' ಎಂದು ನಿಟ್ಟುಸಿರುಬಿಟ್ಟರು.

(ಡಿಸೆಂಬರ್ 9, 2008)

ಚುನಾವಣೆಯ ಸಮಯದಲ್ಲಿ ಲಂಕೇಶರ ಖದರು


ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಬಗ್ಗೆ ಇಟ್ಟಿರುವ ನಂಬಿಕೆ ಪರಂಪರಾಗತವಾದುದು. ಅದು ಅಷ್ಟು ಸುಲಭವಾಗಿ ಸಡಿಲವಾಗುವಂಥದ್ದಲ್ಲ. ಆ ಕಾರಣಕ್ಕಾಗಿಯೇ ಸುದ್ದಿ ಮಾಧ್ಯಮಗಳು ಉಳಿದಿರುವುದು ಮತ್ತು ಆ ಕ್ಷೇತ್ರ ಇನ್ನೂ ಹೆಚ್ಚೆಚ್ಚು ವಿಸ್ತಾರಗೊಳ್ಳುತ್ತಿರುವುದು. ಜನಸಾಮಾನ್ಯರು ಸುದ್ದಿ ಮಾಧ್ಯಮಗಳ ಮೇಲೆ ಇಟ್ಟಿರುವ ಆ ನಂಬಿಕೆ ಇವತ್ತಿನ ಜಾಗತೀಕರಣದ ಯುಗದಲ್ಲೂ ಹಾಗೇ ಇದೆ. ಆದರೆ ಸುದ್ದಿ ಮಾಧ್ಯಮಗಳು ಜನಸಾಮಾನ್ಯರ ನಂಬಿಕೆಗೆ ಬದ್ಧವಾಗಿವೆಯೇ? ಈ ಪ್ರಶ್ನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ನೈತಿಕತೆ, ಪ್ರಾಮಾಣಿಕತೆ ಮರೆಯಾಗುತ್ತಾ, ಮೌಲ್ಯಾಧಾರಿತ ಪತ್ರಿಕೋದ್ಯಮ ಪಕ್ಕಕ್ಕೆ ಸರಿಯುತ್ತ ಇರುವುದು. ಹೊಸ ತಲೆಮಾರಿನ ಬಹುಪಾಲು ಪತ್ರಕರ್ತರು ‘ಹೌ ಟು ಸೆಲ್ ಮೈ ರೈಟಿಂಗ್' ಎಂಬ ಗ್ಲೋಬಲ್ ತತ್ವಕ್ಕೆ ಕಟ್ಟುಬಿದ್ದವರು. ಪತ್ರಿಕೋದ್ಯಮವನ್ನು ಮಾರುಕಟ್ಟೆಯ ಸರಕಿನ ಮಟ್ಟಕ್ಕಿಳಿಸಿದವರು. ಇಲ್ಲಿ ತತ್ವ, ಬದ್ಧತೆಗಿಂತ ಮುಖ್ಯವಾಗಿ ಲಾಭಕೋರ ಮನಸ್ಸು ವಿಜೃಂಭಿಸುತ್ತಿದೆ. ಸ್ವಾರ್ಥಕ್ಕೆ ಮೌಲ್ಯ ಮಾರಾಟವಾಗುತ್ತಿದೆ.

ಹಾಗಾಗಿ ಮಾಧ್ಯಮಗಳೂ ಬದಲಾಗಿವೆ, ಜನರೂ ಬದಲಾಗುತ್ತಿದ್ದಾರೆ. ಬದಲಾದ ಸಂದರ್ಭಕ್ಕನುಗುಣವಾಗಿ ಜನ ಇಂದು ಸುದ್ದಿಮಾಧ್ಯಮಗಳನ್ನು ನಂಬುತ್ತಿಲ್ಲ; ನಂಬುವಂತಹ ಸುದ್ದಿಗಳನ್ನು ಅವರೂ ಕೊಡುತ್ತಿಲ್ಲ. ಆದರೂ ಜನ ಪೇಪರ್‌ಗಳನ್ನು ಓದುತ್ತಾರೆ, ಸುದ್ದಿವಾಹಿನಿಗಳನ್ನು ನೋಡುತ್ತಾರೆ. ಅಷ್ಟೇ ಬೇಗ ಮರೆಯುತ್ತಾರೆ. ಜನರ ಮರೆಯುವ ಗುಣ, ಕುಲಗೆಟ್ಟಿರುವ ವ್ಯವಸ್ಥೆ ಮತ್ತು ಇವತ್ತಿನ ಸುದ್ದಿ ಇವತ್ತಿಗೇ ಸಾಯುತ್ತಿರುವ ಸಂದರ್ಭ ಮಾಧ್ಯಮದ ಮಂದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಪತ್ರಕರ್ತರು ಯಾರ ಬಗ್ಗೆ ಏನನ್ನು ಬೇಕಾದರೂ ಬರೆಯಬಲ್ಲ ‘ಬುದ್ಧಿವಂತ'ರಾಗಿದ್ದಾರೆ. ಪತ್ರಿಕೋದ್ಯಮ ದಂದೆಯಾಗಿದೆ. ಮಾರುಕಟ್ಟೆಯಲ್ಲಿ ಪತ್ರಿಕೆಯೂ ಬಿಕರಿಯಾಗುತ್ತಿದೆ, ಪತ್ರಕರ್ತನೂ ಬಿಕರಿಯಾಗುತ್ತಿದ್ದಾನೆ.

ಇದು ಚುನಾವಣೆಯ ಸಂದರ್ಭದಲ್ಲಿ ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಅದೇಕೋ ಇದೇ ಸಂದರ್ಭದಲ್ಲಿ ಎಲೆಕ್ಷನ್ ಎಂದಾಕ್ಷಣ ಅಲರ್ಟ್ ಆಗುತ್ತಿದ್ದ ಲಂಕೇಶರೂ ನೆನಪಾಗುತ್ತಿದ್ದಾರೆ...
ಚುನಾವಣೆಯ ಸಂದರ್ಭದಲ್ಲಿ ಲಂಕೇಶರು ಈ ದೇಶದ ಆಗುಹೋಗುಗಳನ್ನು ನಿರ್ಧರಿಸುವ ಮಹತ್ತರ ಹೊಣೆಗಾರಿಕೆ ತಮ್ಮ ಭುಜದ ಮೇಲೆ ಬಿದ್ದಿದೆಯೇನೋ ಎನ್ನುವಂತೆ ಭ್ರಮಿಸುತ್ತಿದ್ದರು. ತಮ್ಮ ಚಿಲ್ಲರೆ ಚಟುವಟಿಕೆಗಳನ್ನು ಪಕ್ಕಕ್ಕಿಟ್ಟು ಯುದ್ಧಕ್ಕೆ ಸಜ್ಜಾಗಿ ನಿಂತ ಯೋಧನಂತೆ ಚಡಪಡಿಸುತ್ತಿದ್ದರು. ತಮ್ಮ ಸುತ್ತ, ಬಳಸಿ ಬಿಸಾಕಿದ ಬ್ಯಾಟರಿಯಂತೆ ಬಿದ್ದಿರುತ್ತಿದ್ದ ವರದಿಗಾರರ ಬುಡಕ್ಕೆ ಬಿಸಿ ತಾಗಿಸಿ ಚಾರ್ಜ್ ಮಾಡುತ್ತಿದ್ದರು. ನೂರು ಕ್ಯಾಂಡಲ್ ಬಲ್ಬ್ ಥರ ಟ್ವೆಂಟಿಫೋರ್ ಅವರ್ಸು ಉರಿಯುತ್ತಿರಬೇಕು...

ಜನರ ಧ್ವನಿಯಾದ, ಜನರನ್ನು ಜಾಗೃತರನ್ನಾಗಿಸಿದ, ಜನಾಭಿಪ್ರಾಯವನ್ನು ರೂಪಿಸಿದ, ಸರ್ಕಾರಗಳನ್ನು ಬದಲಿಸಿದ ಕೀರ್ತಿ ಲಂಕೇಶರ ಪತ್ರಿಕೆಗೆ ಸಲ್ಲಲೇಬೇಕು. ಕೀರ್ತಿಶನಿ ಲಂಕೇಶರ ಹೆಗಲೇರಿದ್ದು, ಇಳಿದಿದ್ದು- ಎಲ್ಲಾ ಓದುಗರಿಂದಲೇ. ಲಂಕೇಶರ ಶಕ್ತಿ ಓದುಗರೆ. ಅವರು ಹೆದರುತ್ತಿದ್ದುದೂ ಓದುಗರಿಗೇ. ಯಾಕೆಂದರೆ ಪತ್ರಿಕೆಯ ಪ್ರಸಾರದಲ್ಲಿ ಅತಿವೃಷ್ಟಿ-ಅನಾವೃಷ್ಟಿ ಎರಡನ್ನೂ ಕಂಡಿದ್ದರು. ಅವೆರಡೂ ಮೇಸ್ಟ್ರಿಗೆ ಪಾಠ ಕಲಿಸಿದ್ದವು.

ಚುನಾವಣಾ ಸಮಯದಲ್ಲಿ ಲಂಕೇಶರಿಗೆ ಹೊಸ ಹುರುಪು ಮೈ ಮನಗಳನ್ನು ಆವರಿಸಿಕೊಳ್ಳುತ್ತಿತ್ತು. ಅದಕ್ಕೆ ಕಾರಣ, ಜವಾಬ್ದಾರಿ ಜಾಸ್ತಿಯಾಗುತ್ತಿದ್ದುದು ಮತ್ತು ಪತ್ರಿಕೆಯ ಸರ್ಕ್ಯುಲೇಷನ್ ಹೆಚ್ಚಾಗುತ್ತಿದ್ದುದು. ಆ ಸಂದರ್ಭದಲ್ಲಿ ಪತ್ರಿಕೆಯ ಕಚೇರಿ ಸಾಹಿತಿಗಳು, ಕಲಾವಿದರು ಮತ್ತು ವರದಿಗಾರರಿಂದ ಗಿಜಿಗುಡುತ್ತಿತ್ತು. ಪ್ರತಿದಿನ ‘ಕೂತು ಮಾತನಾಡುವ' ಸೆಷನ್‌ಗಳು ಇದ್ದೇ ಇರುತ್ತಿದ್ದವು. ಆರಂಭದಲ್ಲಿ ಬೌದ್ಧಿಕ ಕಸರತ್ತಿನ ತರ್ಕಬದ್ಧ ಚರ್ಚೆ, ಮತ್ತೇರುತ್ತಿದ್ದಂತೆ ಅಭ್ಯರ್ಥಿಗಳನ್ನು ಅಮಲಿನಲ್ಲಿಯೇ ಸೋಲಿಸುವ-ಗೆಲ್ಲಿಸುವ ಹುಂಬತನ, ಕೊನೆಗೆ ಚಿಲ್ಲರೆ ಜಗಳದಲ್ಲಿ ಪರ್ಯವಸಾನ... ಇದು ಮಾಮೂಲಾಗಿತ್ತು. ಆದರೆ ಈ ಜಗಳಗಳು ಕೂಡ ವರದಿಗಾರರ ವೃತ್ತಿ ಬದುಕಿಗೆ ಸಾಣೆಯಂತೆ ಸಹಕಾರಿಯಾಗುತ್ತಿದ್ದುದು ‘ಪತ್ರಿಕೆ'ಯ ವೈಶಿಷ್ಟ್ಯ.

ಚುನಾವಣಾ ಕಾಲದಲ್ಲಿ ಲಂಕೇಶರು ಬೆಂಗಳೂರಿನ ಮುಖ್ಯ ವರದಿಗಾರರ ಜೊತೆಗೆ ಜಿಲ್ಲಾ ವರದಿಗಾರರನ್ನು ಕರೆದು ಮೀಟಿಂಗ್ ಮಾಡುತ್ತಿದ್ದರು. ಆ ಜಿಲ್ಲೆಗಳ ರಾಜಕೀಯ ವಿದ್ಯಮಾನ, ಪಕ್ಷಗಳು, ಅಭ್ಯರ್ಥಿಗಳು, ಜಾತಿ ಲೆಕ್ಕಾಚಾರ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದರು. ಆ ಮಾತುಕತೆಯಲ್ಲಿಯೇ ವರದಿಗಾರರು ತೆಗೆದುಕೊಳ್ಳಬೇಕಾದ ಪರ-ವಿರೋಧರ ನಿಲುವು ಸ್ಪಷ್ಟವಾಗುತ್ತಿತ್ತು. ಈ ಪರ-ವಿರೋಧ ಅಂದರೆ ಏನು? ಲಂಕೇಶರು ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳ ಅಭ್ಯರ್ಥಿಗಳ ಪರ-ವಿರೋಧವಿದ್ದು, ಬಿಜೆಪಿಯನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಅದನ್ನು ಅಧಿಕಾರದ ಹತ್ತಿರಕ್ಕೂ ತರಬಾರದೆಂಬುದು ಅವರ ನಿಲುವಾಗಿತ್ತು. ವರದಿಗಾರರ ವರದಿಗಳಲ್ಲಿ ಅದು ಪ್ರತಿಫಲಿಸುತ್ತಿತ್ತು. ರಾಜಕಾರಣಿಗಳಲ್ಲಿ ಒಳ್ಳೆಯವರು-ಕೆಟ್ಟವರು ಅಂದರೆ ಯಾರು, ಅದನ್ನು ಅಳೆಯುವ ಮಾನದಂಡವಾದರೂ ಏನು ಎಂದು ವರದಿಗಾರರು ತಲೆಕೆಡಿಸಿಕೊಂಡರೆ, ಲಂಕೇಶರು,

‘ಎಲೆಕ್ಷನ್‌ಗೆ ನಿಂತಿರೋರೆಲ್ರೂ ಕಳ್ಳರು, ಸುಳ್ಳರೆ, ಹಾಗಂತ ಬರದ್ರೆ ನಾವ್ ಅನ್‌ಪಾಪುಲರ್ ಆಗ್ತಿವಿ, ಸಿನಿಕರ ಸಾಲಿಗೆ ಸೇರ್‍ತ್ತೀವಿ, ಅದು ನಮ್ಮ ರೀಡರ್‍ಸ್‌ಗೆ ದಾರಿ ತಪ್ಸಿ, ಮೋಸ ಮಾಡ್ದಂಗಾಗ್ತದೆ. ಇದು ಡೆಮಾಕ್ರಸಿ, ಮತದಾರರು ಯಾರ್‍ನಾದ್ರು ಒಬ್ಬನನ್ನು ಆರಿಸಲೇಬೇಕು, ನಾವು ನಿಂತಿರೋರಲ್ಲಿ ಯಾವನು ಕಡಿಮೆ ಕಳ್ಳ ಅಂತ ನೋಡಿ ಅವನನ್ನು ಬೆಂಬಲಿಸಬೇಕು, ಇವ್ನು ಇದ್ದುದರಲ್ಲಿ ಯೋಗ್ಯ ಅಂತ ಹೇಳ್ಬೇಕು' ಎನ್ನುತ್ತಿದ್ದರು.

ಹಾಗೆಯೇ ಚುನಾವಣಾ ಸಮೀಕ್ಷೆಗಳನ್ನು ಮಾಡುವಾಗ ವರದಿಗಾರ ಹೇಗಿರಬೇಕು ಎಂಬುದನ್ನೂ ಹೇಳುತ್ತಿದ್ದರು. ಕ್ಷೇತ್ರದ ಸರ್ವೇ ಮಾಡುವ ವರದಿಗಾರರಿಗೆ ಪ್ರಯಾಣ ಭತ್ಯೆ, ಜೊತೆಗೆ ಕುಡಿತದ ಭತ್ಯೆಯೂ ಇರುತ್ತಿತ್ತು. ಇತರ ಜಿಲ್ಲೆಗಳಿಗೆ ಕಾರು ಮಾಡಿ ಕಳುಹಿಸಿದಾಗಲೂ ಕುಡಿತಕ್ಕೆ ಎಕ್ಸ್‌ಟ್ರಾ ಎಂದು ಕೊಡುತ್ತಿದ್ದರು. ನಾವೇನಾದ್ರು ಪ್ರಶ್ನಾರ್ಥಕವಾಗಿ ಅವರ ಮುಖ ನೋಡಿದರೆ, ‘ನೀನ್ ಕುಡಿತಿಯ ಅಂತ ಗೊತ್ತು. ಈ ಎಲೆಕ್ಷನ್ ಟೈಮಲ್ಲಿ ನಿನ್ಗೆ ಕುಡಿಸಕ್ಕಂತನೆ ಜನ ಇರ್ತಾರೆ ಅಂತ್ಲೂ ಗೊತ್ತು, ನೀನು ಹೆಚ್ಗೆ ಅಂದ್ರೆ ಎಷ್ಟು ಕುಡೀಬಹುದು, ನೂರಿನ್ನೂರೂಪಾಯ್ದು, ಅದಕ್ಕೆ ನಿನ್ನ ರಿಪೋರ್ಟ್ ಮಾರ್‍ಕೊಂಡು, ನಮ್ ರೀಡರ್‍ಸ್‌ಗೆ ಮೋಸ ಮಾಡದ್ ನಂಗಿಷ್ಟಿವಿಲ್ಲ, ಓದುಗರು ಕೊಟ್ಟಿರೋ ದುಡ್ಡಲ್ಲಿ ಕುಡ್ದು ವಸ್ತುನಿಷ್ಠ ವರದಿ ಬರಿ...' ಎನ್ನುತ್ತಿದ್ದರು. ರೂಢಿಗತ ಸುದ್ದಿ ಮಾಧ್ಯಮಗಳಿಗೂ ಲಂಕೇಶರಿಗೂ ಇದ್ದ ಫರಕ್ಕು ಇಷ್ಟೆ.

(ಜುಲೈ 30, 2008)

ಎಲ್ಲಾ ಕಡೆಯೂ ನಾನು `ಸಿದ್ಧ'ಲಿಂಗಯ್ಯ


ಬೆಂಕಿಯಲ್ಲಿ ಬೆಂದ ಬಡವರಿಗೆ, ಒಡಲಾಳದ ಉರಿಗೆ ನಲುಗಿಹೋದ ಅಸಹಾಯಕರಿಗೆ ದನಿಯಾದವರು ಸಿದ್ಧಲಿಂಗಯ್ಯ. ಅವರ ನೋವಿಗೆ ಮಿಡಿದವರು ಸಿದ್ಧಲಿಂಗಯ್ಯ. ಅವರ ಬದುಕನ್ನೇ ಬರಹಕ್ಕೆ ಇಳಿಸಿದವರು ಸಿದ್ಧಲಿಂಗಯ್ಯ. ಕುಗ್ಗಿ ಕಾಲಕಸವಾದವರ ಬದುಕಿಗೊಂದು ಆಶಾಕಿರಣವಾದವರು ಸಿದ್ಧಲಿಂಗಯ್ಯ. ವ್ಯವಸ್ಥೆಗೆ ವಿರುದ್ಧವಾಗಿ ಸಿಡಿದೆದ್ದು ನಿಂತವರು ಸಿದ್ಧಲಿಂಗಯ್ಯ. ಕನ್ನಡ ಸಾಹಿತ್ಯಕ್ಕೆ ಬಂಡಾಯದ ಬಿಸಿ ಮುಟ್ಟಿಸಿದವರು ಸಿದ್ಧಲಿಂಗಯ್ಯ. ಬಂಡೆಗಲ್ಲುಗಳೂ ಬಾಯ್ಬಿಡುವಂತೆ ಮಾಡಿದವರು ಸಿದ್ಧಲಿಂಗಯ್ಯ. ಕವನಗಳು ಸಾವಿರಾರು ನದಿಗಳಾಗಿ ಕ್ರಾಂತಿಗೀತೆಗಳ ರೂಪದಲ್ಲಿ ನಾಡಿನ ತುಂಬಾ ಹರಿದಾಡುವಂತಾಗಿದ್ದು ಸಿದ್ಧಲಿಂಗಯ್ಯನವರಿಂದ....

ಎಷ್ಟೆಲ್ಲ ಸಾಧನೆ, ಸಾರ್ಥಕ, ಸಂತೃಪ್ತಭಾವ ಒಬ್ಬ ವ್ಯಕ್ತಿಯ ಒಂದಷ್ಟು ಕವನಗಳಿಂದ!?

ಹಾಗೆಯೇ ಸಿದ್ಧಲಿಂಗಯ್ಯನವರು ಕೂಡ- ಕವಿಯಾದರು- ದಲಿತ ಕವಿಯಾದರು- ಬಂಡಾಯಗಾರರಾದರು. ದಿನ ಬೆಳಗಾಗುವುದರಲ್ಲಿ ಕನ್ನಡ ಸಾಹಿತ್ಯಲೋಕದ ಮಿನುಗುತಾರೆಯಾದರು. ಕವನಗಳು ಕ್ರಾಂತಿ ಕಹಳೆ ಮೊಳಗಿಸಿದವು, ಶಿಷ್ಟ ಸಾಹಿತ್ಯಕ್ಕೆ ಉತ್ಕೃಷ್ಟತೆಯನ್ನು ತಂದುಕೊಟ್ಟವು. ಸಿದ್ಧಲಿಂಗಯ್ಯನವರು ಸಾವಿರಾರು ಯುವ ಕವಿಗಳಿಗೆ ಮಾದರಿಯಾದರು. ಜನಪ್ರಿಯ ವ್ಯಕ್ತಿಯಾದರು. ಹೋದಲೆಲ್ಲ ಸನ್ಮಾನ, ಊರೂರಲ್ಲಿ ಮೆರವಣಿಗೆ.

ದಿನಗಳುರುಳಿದಂತೆ, ಕಾಲಚಕ್ರ ತಿರುಗಿದಂತೆ, ವಯಸ್ಸಾದಂತೆ, ಕರಿ ಕುರುಚಲು ಗಡ್ಡ ಬಿಳಿಯಾದಂತೆ ಸಿದ್ದಲಿಂಗಯ್ಯನವರೂ ಬದಲಾದರು. ಅಧಿಕಾರಿಗಳು ಮತ್ತು ಅಧಿಕಾರಸ್ಥರಿಗೆ ಹತ್ತಿರವಾದರು. ಉಳ್ಳವರ ಒಡ್ಡೋಲಗದಲ್ಲಿ ಓಲಾಡತೊಡಗಿದರು. ಅಧಿಕಾರ ಅರಸಿ ಅಂಗಳಕ್ಕೇ ಬಂತು. ಯಾವುದರ ವಿರುದ್ಧ ಹೋರಾಡಿದ್ದರೋ ಅದರ ಅವಿಭಾಜ್ಯ ಅಂಗವೇ ಆಗಿಹೋದರು. ಯಾರ ವಿರುದ್ಧ ಸಿಡಿದೆದ್ದಿದ್ದರೋ ಅವರ ಕಹಳೆ ಕೊಂಬಾದರು. ಅವರೇ ವ್ಯವಸ್ಥೆಯಾದರು. ಅವ್ಯವಸ್ಥೆಗೆ ಮಾದರಿಯಾದರು. ಬಿಳಿ ಗಡ್ಡ ಕಪ್ಪಗಾಯಿತು. ಮಸಿ ಎಲ್ಲವನ್ನೂ ನುಂಗಿತು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ದಲಿತರೆಂದರೆ ಪ್ರೀತಿ. ದಲಿತರ ಪ್ರತಿನಿಧಿಯಂತಿದ್ದ ಸಿದ್ದಲಿಂಗಯ್ಯನವರನ್ನು ಎಂಎಲ್‌ಸಿ ಮಾಡಿದರೆ ದಲಿತೋದ್ಧಾರವಾಗುತ್ತದೆ ಎಂದು ಭ್ರಮಿಸಿದ್ದ ಹೆಗಡೆ, ಕವಿಗೆ ಕುರ್ಚಿಯ ರುಚಿ ಹತ್ತಿಸಿದರು. ಕುರ್ಚಿ ಮೇಲೆ ಕೂತ ಕ್ಷಣದಿಂದಲೇ ಸಿದ್ದಲಿಂಗಯ್ಯ ದಲಿತರನ್ನು ಮರೆತರು. ಬಂಡಾಯಕ್ಕೆ ಬೆಂಕಿ ಹಾಕಿ ಬೂದಿ ಮಾಡಿದರು. ತಮ್ಮ ಹಳೆಯ ಕ್ರಾಂತಿಗೀತೆಗಳನ್ನು ಇಂದಿನ ವ್ಯವಸ್ಥೆಗೆ ಒಗ್ಗುವಂತೆ ತಿದ್ದಿ ಮರು ಮುದ್ರಿಸಿದರು. ಮಠ ಮಾನ್ಯಗಳಿಗೆ ಹೊಕ್ಕಿ ಮಠಾಧೀಶರ ಕಾಲಿಗೆ ಬಿದ್ದರು. ಪಕ್ಷಾತೀತ ವ್ಯಕ್ತಿಯಾದರು, ಪಕ್ಕಾ ರಾಜಕಾರಣಿಯಾದರು, ಅಜಾತಶತ್ರುವಾದರು. ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ, ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯ ಯಡಿಯೂರಪ್ಪ- ಉದ್ದಕ್ಕೂ ಅಧಿಕಾರಸ್ಥರನ್ನು ಓಲೈಸಿಕೊಂಡೇ ಬಂದರು. ಅಧಿಕಾರವನ್ನು ನಿರಂತರವಾಗಿ ಅನುಭವಿಸುತ್ತಲೇ ಬಂದರು.

ಎಲ್ಲಾ ಕಾಲಕ್ಕೂ, ಎಲ್ಲಾ ಕಡೆಯೂ, ಎಲ್ಲೆಲ್ಲಿಯೂ ಸಿದ್ಧ-ಲಿಂಗಯ್ಯನಾದರು.

ಓದಿ, ಬೆಳೆದು ಬಂದ ಪರಿಶ್ರಮಕ್ಕೆ ಸಿಕ್ಕಿದ್ದು ಬೆಂಗಳೂರು ಯೂಸಿವರ್ಸಿಟಿಯ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥನ ಸ್ಥಾನ. ಅಲ್ಲಿದ್ದಷ್ಟು ದಿನವೂ ಪಾಠ ಮಾಡದೆ ದಾಖಲೆ ಬರೆದುಹೋದರು.
ನೋವುಂಡ ಜನರ ಪ್ರತಿನಿಧಿಯಾಗಿ, ಕವಿಯಾಗಿ, ಜನಪ್ರಿಯ ವ್ಯಕ್ತಿಯಾಗಿದ್ದಕ್ಕೆ ಸಿಕ್ಕಿದ್ದು ಎಂಎಲ್‌ಸಿ (ಎರಡು ಟರ್ಮ್), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ. ಅಧಿಕಾರದ ಕುರ್ಚಿಯಲ್ಲಿ ಕೂತಷ್ಟು ದಿನವೂ ದಲಿತರನ್ನು ನೆನೆಯದೆ, ಕನ್ನಡವನ್ನು ಕಟ್ಟಿ ಬೆಳೆಸದೆ ಸ್ವಾರ್ಥಿಯಾದರು.

ಇಂತಹ ವ್ಯಕ್ತಿಗೆ ಮತ್ತೆ ಈಗ, ಸಂಘ ಪರಿವಾರದ ಸತ್ರದಲ್ಲಿ ಸನ್ಮಾನ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನ!?

(ಜೂನ್ 12, 2008 ರಂದು ಪ್ರಕಟ)