Monday, April 28, 2014

ಮತ್ತೆ ಕಾಣಸಿಗದ ಕನ್ನಡದ ಈ ಮಂದಹಾಸ

ರಾಜ್‌ಕುಮಾರ್‌
ಮೊನ್ನೆ 24ಕ್ಕೆ (ಹುಟ್ಟಿದ್ದು 24-4-1929) ಕನ್ನಡದ ರಾಜಕುಮಾರನಿಗೆ 85 ವರ್ಷಗಳು. ಕನ್ನಡಿಗರಿಗೆ ಇವತ್ತಿಗೂ ‘ತಮ್ಮವನೆಂಬುವ’ ಒಬ್ಬ ರಾಜನಿಲ್ಲ; ಇದ್ದರೆ ಅದು ಕನ್ನಡದ ಅಸ್ಮಿತೆಯನ್ನು ಹರಡಿದ ರಾಜಕುಮಾರನೊಬ್ಬನೇ. ಕನ್ನಡಿಗರ ಮೇಲೆ ರಾಜ್ ಬೀರಿರುವ ಪ್ರಭಾವ; ಆವರಿಸಿರುವ ಪರಿ ಅಂಕೆಗೂ, ಊಹೆಗೂ ಸಿಗಲಾರದ್ದು. ಕೆಲವು ವ್ಯಕ್ತ, ಇನ್ನು ಕೆಲವು ಅವ್ಯಕ್ತ.
ಹೀಗೆಂದ ಕೂಡಲೆ ನನ್ನ ಮನಸ್ಸು ನನ್ನೂರಿನ ನಲಿದಾಟದ ದಿನಗಳತ್ತ ಓಡುತ್ತದೆ. ನನ್ನೂರಿನ ಸಂತೆಮಾಳದ ಬಾಗಿಲಿಗೇ ಆತುಕೊಂಡಂತೆ ಒಂದು ಹೋಟೆಲ್- ಇಂದ್ರಾಭವನ್ ಅಂತಿತ್ತು. ಅದರ ಮಾಲೀಕರು ಶುಭ್ರ ಬಿಳಿ ಬಟ್ಟೆ ತೊಟ್ಟ ಶಿಸ್ತಿನ ವ್ಯಕ್ತಿ. ಆ ಹೋಟೆಲ್ ರುಚಿಗೆ, ಶಿಸ್ತುಬದ್ಧ ವ್ಯಾಪಾರಕ್ಕೆ ಹೇಳಿಮಾಡಿಸಿದಂತಿತ್ತು. ಅಂತಹ ಹೋಟೆಲ್‌ನಲ್ಲೊಬ್ಬ ಸಪ್ಲೈಯರ್ ಇದ್ದ- ಹೆಸರು ಮರೆತುಹೋಗಿದೆ ಕ್ಷಮಿಸಿ. ಅವನಿಗೆ ಆ ಕಾಲಕ್ಕೆ ಬರುತ್ತಿದ್ದ ಸಂಬಳ ತಿಂಗಳಿಗೆ 200 ರೂಪಾಯಿ ಇದ್ದಿರಬಹುದು. ಆತ ಅದಷ್ಟನ್ನೂ ರಾಜ್‌ಕುಮಾರ್‌ಗಾಗಿಯೇ ಮೀಸಲಿಟ್ಟಿದ್ದ. ಮೈ ಮನಗಳಲ್ಲಿ ರಾಜ್‌ರನ್ನು ತುಂಬಿಕೊಂಡಿದ್ದ; ರಾಜ್‌ಗೆ ಪ್ರಾಣ ಕೊಡಲೂ ಸಿದ್ಧನಿದ್ದ.
ಆತ ಬರುವ ಅಷ್ಟೂ ಸಂಬಳವನ್ನು ದಿನಪತ್ರಿಕೆಗಳು, ವಾರಪತ್ರಿಕೆಗಳು, ಕ್ಯಾಲೆಂಡರ್‌ಗಳು, ಸಿನಿಮಾ ಪುಸ್ತಕಗಳನ್ನು ಖರೀದಿಸಲು ವಿನಿಯೋಗಿಸುತ್ತಿದ್ದ. ಮತ್ತು ಬಿಡುವಿನ ವೇಳೆಯಲ್ಲಿ ರಾಜ್‌ಕುಮಾರ್ ಇರುವ ಭಾಗವನ್ನು ಅತ್ಯಂತ ಶ್ರದ್ಧೆಯಿಂದ ಕಟ್ ಮಾಡಿ, ಒಳಕೋಣೆಯಲ್ಲಿ, ಅವನು ಮಲಗುವ ಜಾಗದಲ್ಲಿ ಅಂಟಿಸುತ್ತಿದ್ದ. ಹೋಟೆಲ್ ಒಳಭಾಗ ಒಂದು ರೀತಿಯಲ್ಲಿ ತಾರಾಮಂಡಲದಂತಿತ್ತು.
ಒಂದು ದಿನ ಒಬ್ಬ ಸಪ್ಲೈಯರ್ ಈ ಅಭಿಮಾನಿಯನ್ನು ರೇಗಿಸಬೇಕೆಂದು, ಆತ ಕಟ್ ಮಾಡಿ ಅಂಟಿಸಿದ್ದ ರಾಜ್ ಕಟೌಟ್‌ಗೆ ತನ್ನ ಪೆನ್ನಿನಿಂದ ಮಾರ್ಕ್ ಮಾಡಿದ. ಅಷ್ಟೇ, ಅವನನ್ನು ಆತ ಹೇಗೆ ಹಣ್ಣುಗಾಯಿ ನೀರುಗಾಯಿ ಮಾಡಿದ್ದನೆಂದರೆ, ಮಾಲೀಕರು ಬಂದು ಬಿಡಿಸುವವರೆಗೂ ಬಿಟ್ಟಿರಲಿಲ್ಲ.
ಹೆಚ್ಚು ಮಾತನಾಡದ, ಮೌನಿಯಾದ, ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಆ ಸಪ್ಲೈಯರ್‌ಗೆ ಅಂದಿನಿಂದ ಯಾರೂ ತೊಂದರೆ ಕೊಡದಂತೆ ಮಾಲೀಕರೇ ಫತ್ವಾ ಹೊರಡಿಸಿಬಿಟ್ಟಿದ್ದರು. ಇದು ನಮ್ಮ ತಂಟೆಕೋರ ತಂಡಕ್ಕೆ ಆತನ ಸಹೋದ್ಯೋಗಿಗಳಿಂದ ಗೊತ್ತಾಯಿತು. ಒಂದು ದಿನ ಅವನ ಸ್ನೇಹ ಸಂಪಾದಿಸಿ, ಪುಸಲಾಯಿಸಿ, ಬಾಲಾಜಿ ಟೆಂಟಿಗೆ ಬಂದಿದ್ದ ‘ಜಗ ಮೆಚ್ಚಿದ ಮಗ’ ಚಿತ್ರಕ್ಕೆ ನಾವೇ ಟಿಕೆಟ್ ಹಾಕಿ ಕರೆದುಕೊಂಡು ಹೋದೆವು.
ಆ ಅಭಿಮಾನಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ನಾವು ಕಂಡಿದ್ದು- ರಾಜ್ ತೆರೆಯ ಮೇಲೆ ಅಭಿನಯಿಸುತ್ತಿದ್ದರೆ, ಈತ ಕೂತಲ್ಲಿಯೇ ಅದನ್ನೆಲ್ಲ ವ್ಯಕ್ತಪಡಿಸುತ್ತಿದ್ದ ಪರಿ ನಮ್ಮನ್ನು ದಿಗ್ಮೂಢರನ್ನಾಗಿಸಿತ್ತು. ಸೆಂಟಿಮೆಂಟ್ ಸೀನ್ ಬಂದಾಗ ಧಾರಾಕಾರವಾಗಿ ಅಳುವ, ಪ್ರಣಯದ ಸೀನ್‌ನಲ್ಲಿ ಮೈ ಮರೆತು ಕಣ್ಣು ಮುಚ್ಚಿಕೊಳ್ಳುವ, ಫೈಟಿಂಗ್ ಸೀನ್‌ನಲ್ಲಿ- ಇದಂತೂ ರೋಚಕ. ಕೂತಿದ್ದವನು ಎದ್ದು ನಿಂತೇಬಿಡುತ್ತಿದ್ದ. ದೇಹ ಅಕ್ಷರಶಃ ಕಬ್ಬಿಣ. ಈತನಿಂದ ಮಜಾ ತೆಗೆದುಕೊಳ್ಳಲಿಕ್ಕಾಗಿಯೇ ಕರೆದುಕೊಂಡುಬಂದಿದ್ದ ನಮ್ಮ ತಂಟೆಕೋರ ತಂಡದ ಸದಸ್ಯನೊಬ್ಬ, ಫೈಟಿಂಗ್ ಸೀನ್‌ನಲ್ಲಿ, ‘ಕೂತ್ಗಳಲೇ... ಕಂಡಿದಿನಿ...’ ಅಂದ. ಅಷ್ಟೇ, ತೆರೆಯ ಮೇಲಿಟ್ಟ ನೋಟವನ್ನು ಅಲುಗಾಡಿಸದೆ, ಆತನ ಕಡೆಗೆ ನೋಡದೆ, ಸೊಂಟದ ಮೇಲಿಟ್ಟ ಕೈನಿಂದ ಸುಮ್ಮನೆ ತಳ್ಳಿದ. ತಳ್ಳಿದ ರಭಸಕ್ಕೆ ಆತ ಅಷ್ಟು ದೂರ ಹೋಗಿ ಬಿದ್ದಿದ್ದ. ಕಬ್ಬಿಣದ ರುಚಿ ಉಂಡಿದ್ದ. ಅವತ್ತಿನಿಂದ ರಾಜ್ ಅಂದರೆ ಏನು ಎನ್ನುವುದು ಅರಿವಾಗತೊಡಗಿತ್ತು. ನಮಗೇ ಗೊತ್ತಿಲ್ಲದಂತೆ ಮನಸ್ಸು ರಾಜ್ ಪ್ರಭಾವಲಯ ಪ್ರವೇಶಿಸಿತ್ತು.

ಹಾಗೆ ಪ್ರಭಾವಿಸುವ ಗುಣ ರಾಜ್‌ರಲ್ಲಿತ್ತು. ಅವರು ನಿರ್ವಹಿಸಿದ ಪಾತ್ರಗಳಲ್ಲಿತ್ತು. ಆ ಪಾತ್ರಗಳು ನಮ್ಮವೇ ಎನ್ನುವಷ್ಟು ಆಪ್ತತೆಯಿತ್ತು. ಆ ಪಾತ್ರಗಳೇ ಅವರಾಗಿ ನಟಿಸುತ್ತಿದ್ದ ರೀತಿ ಕನ್ನಡಿಗರ ಮನ ಗೆದ್ದಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಬೆಳ್ಳಿತೆರೆಯ ಆಚೆಗೂ ಅವರ ವಿನಯವಂತಿಕೆ, ಸಜ್ಜನಿಕೆ, ಸೌಜನ್ಯಪೂರಿತ ನಡವಳಿಕೆ, ಬುದ್ಧಿವಂತಿಕೆ ಅವರನ್ನು ಮೇಲ್‌ಸ್ತರಕ್ಕೆ ಕೊಂಡೊಯ್ದಿತ್ತು. ಅದು ನಾಟಕೀಯತೆಯಲ್ಲ, ರೂಢಿಗತ ಬದುಕೇ ಆಗಿತ್ತು.
ಅವರಲ್ಲೊಂದು ವಿಶೇಷ ಗುಣವಿತ್ತು. ಸರಳವಾಗಿ ಬಿಳಿ ಪಂಚೆ, ಶರಟಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಯಾರಾದರೂ ಎದುರಾದರೆ, ಅದರಲ್ಲೂ ಮಹಿಳೆಯರು ಎದುರುಗೊಂಡರೆ, ಒಡಲಾಳದಿಂದ ಹೊಮ್ಮಿದ ಪೂಜ್ಯ ಭಾವನೆಯಿಂದ ಕೈ ಮುಗಿಯುತ್ತಿದ್ದರು. ಎದುರಿಗಿದ್ದವರು ಪರಿಚಿತರೋ, ಅವರು ಇವರನ್ನು ಗುರುತು ಹಿಡಿದಿದ್ದರೋ ಇಲ್ಲವೋ ಯಾವುದನ್ನೂ ರಾಜ್ ಗಮನಿಸುತ್ತಿರಲಿಲ್ಲ. ಆದರೆ ಕೈ ಮುಗಿಸಿಕೊಂಡವರು ಆಮೇಲೆ, ಕಳೆದುಹೋದ ಗಳಿಗೆಗಾಗಿ ಪರಿತಪಿಸುವಂತೆ, ತಮ್ಮ ಬದುಕಿನುದ್ದಕ್ಕೂ ಸ್ಮರಿಸಿಕೊಳ್ಳುತ್ತಿದ್ದರು. 
ರಾಜ್ ಚಿತ್ರರಂಗ ಪ್ರವೇಶಿಸಿದ್ದೇ ನಾಯಕನಟನಾಗಿ, ಮೊಟ್ಟ ಮೊದಲ ಚಿತ್ರದಲ್ಲಿಯೇ ರಾಜಕುಮಾರನಾಗಿ. ಎಚ್‌ಎಲ್‌ಎನ್ ಸಿಂಹರವರು ತಮ್ಮ ನಿರ್ದೇಶನದ ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ನಾಯಕನನ್ನು ಹುಡುಕುತ್ತಿದ್ದಾಗ ಸಿಕ್ಕ ಮುತ್ತುರಾಜ್‌ಗೆ ರಾಜಕುಮಾರ್ ಎಂದು ಹೆಸರಿಟ್ಟರು, ನಾಯಕನಟನನ್ನಾಗಿಸಿ ರಂಗಕ್ಕಿಳಿಸಿದರು. ಬೇಡರ ಕಣ್ಣಪ್ಪ ಚಿತ್ರದ ಪಾತ್ರ ರಾಜ್‌ರ ಅಭಿನಯ ಸಾಮರ್ಥ್ಯಕ್ಕೆ ಸವಾಲಿನಂತಿತ್ತು. ನವರಸಗಳನ್ನು ಅಭಿವ್ಯಕ್ತಿಸುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಕಲಾವಿದರಾಗಬೇಕೆನ್ನುವವರಿಗೆ ಇವತ್ತಿಗೂ ಆ ಪಾತ್ರ ಅಧ್ಯಯನಯೋಗ್ಯ.  
ಅಂದಿನಿಂದ ಇಂದಿನವರೆಗೆ, ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಸಮಾಜದ ಎಲ್ಲ ಸ್ತರದ ಪಾತ್ರಗಳನ್ನೂ ನಿರ್ವಹಿಸಿ, ಮುಂದಿನ ಪೀಳಿಗೆಗೆ ಮಾದರಿಯಾಗಿ ನಿಂತ ಸಾರ್ವಕಾಲಿಕ ನಾಯಕ. ಬೇಡರ ಕಣ್ಣಪ್ಪನ ರಾಜಸುಲೋಚನರಿಂದ ಹಿಡಿದು ಹಾವಿನ ಹೆಡೆಯ ಸುಲಕ್ಷಣ ರವರೆಗೆ, ಸುಮಾರು ನಲವತ್ಮೂರು ನಾಯಕಿಯರೊಂದಿಗೆ ಕುಣಿದು ಕುಪ್ಪಳಿಸಿದ ಇತಿಹಾಸಪುರುಷ. ದಶಕಗಟ್ಟಲೆ ಸ್ಟಾರ್ ಹಾದಿ ಸವೆಸಿ, ಕನ್ನಡಿಗರ ಮನದಲ್ಲಿ ರಾಜನಾಗಿ, ನಿಜನಾಯಕನಾಗಿ, ದಂತಕತೆಯಾಗಿ ಅಚ್ಚಳಿಯದೆ ಉಳಿದು, ಕನ್ನಡವೆಂದರೆ ರಾಜ್ ಎನ್ನುವಂತಾಗಿದ್ದೇ ಒಂದು ಅದ್ಭುತ ಕಥಾನಕ.
ರಾಜ್ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರಲ್ಲ, ಶಾಲೆಗೆ ಹೋದವರಲ್ಲ, ಓದು-ಬರಹ ಕಲಿತವರಲ್ಲ. ಬದುಕಿನಲ್ಲಿ ಕಂಡುಂಡ ಅನುಭವಗಳನ್ನೇ ಪಠ್ಯವನ್ನಾಗಿಸಿಕೊಂಡವರು. ನಾನು ಎಲ್ಲರಿಗಿಂತ ಚಿಕ್ಕವನು, ಕಲಿಯುವುದು ಇನ್ನೂ ಇದೆ ಎಂಬ ಸಜ್ಜನಿಕೆಯನ್ನು ಕಡೆಯವರೆಗೂ ಕಾಪಾಡಿಕೊಂಡು ಬಂದವರು. ಕೋಟಿಗಟ್ಟಲೆ ವ್ಯವಹಾರದ ಕನ್ನಡ ಚಿತ್ರೋದ್ಯಮದ ಹಣೆಬರಹವನ್ನೇ ಬದಲಿಸಿದವರು. ಕನ್ನಡ ಚಿತ್ರರಂಗದ ಅಂಬರದಲ್ಲಿ ಧ್ರುವತಾರೆಯಂತೆ ಬೆಳಗಿದವರು.
ಸಹಜವಾಗಿಯೇ ರಾಜ್‌ಗೆ ನಾಡಿನಾದ್ಯಂತ ಅಭಿಮಾನಿಗಳಿದ್ದರು. ರಾಜ್ ತಮ್ಮ ಅಭಿಮಾನಿಗಳನ್ನು ದೇವರಿಗೆ ಹೋಲಿಸುತ್ತಿದ್ದರು. ಸಾಮಾನ್ಯ ಅಭಿಮಾನಿ ಮತ್ತು ರಾಜ್ ನಡುವೆ ಇಂತಹ ಒಂದು ಭಾವನಾತ್ಮಕ ಸಂಬಂಧ ಅಂತರಗಂಗೆಯಂತೆ ಹರಿಯುತ್ತಲೇ ಇತ್ತು. ಕೊನೆ ಕೊನೆಗೆ ಅಭಿಮಾನಿಗಳಿಗಾಗಿ, ಇಮೇಜಿಗಾಗಿ ಚಿತ್ರಗಳನ್ನು ಮಾಡುವತ್ತ ಗಮನ ಹರಿಸಿ, ವೃತ್ತಿಬದುಕಿನಲ್ಲಿ ಏರಿಳಿತಗಳನ್ನೂ ಅನುಭವಿಸಿದರು. ಅದೇ ಸಮಯಕ್ಕೆ ಸರಿಯಾಗಿ ರಾಜ್ ಸುತ್ತ ಇದ್ದ ಕೆಲ ಸ್ವಾರ್ಥಿಗಳು, ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಅಭಿಮಾನಿ ಸಂಘವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು. ಆ ನಂತರ ಆ ಸಂಘ ರಾಜ್‌ರ ಹಿಡಿತಕ್ಕೆ ಸಿಗದಿದ್ದುದು, ಇತರೆ ಸಂಘ ಸಂಸ್ಥೆಗಳಂತೆ ಹಾದಿ ತಪ್ಪಿದ್ದು, ಕೆಟ್ಟ ಹೆಸರು ತಂದಿದ್ದು, ರಾಜ್ ಮೌನ ವಹಿಸಿದ್ದು... ಸುದ್ದಿ ಮಾಧ್ಯಮಗಳಿಗೆ ಸುಗ್ರಾಸ ಭೋಜನವನ್ನೊದಗಿಸಿತು.

ನಟನೆಯಿಂದ ಪ್ರೇಕ್ಷಕರ ಮನಗೆದ್ದ, ಕನ್ನಡಪರ ಹೋರಾಟದಿಂದ ಬುದ್ಧಿಜೀವಿಗಳ ಪ್ರಶಂಸೆಗೆ ಪಾತ್ರರಾದ ರಾಜ್, ತಮಗೆ ಅನಗತ್ಯವಾಗಿ ಅಂಟಿಕೊಂಡ ಅಪವಾದಗಳಿಗೆ ಉತ್ತರ ಕೊಟ್ಟಿದ್ದು ನಟನೆಯಿಂದಲೂ ಅಲ್ಲ, ಹೋರಾಟದಿಂದಲೂ ಅಲ್ಲ; ಸಹಜ ಮೌನದಿಂದ. ಅಂತಹ ಚೇತನ ಇವತ್ತು ಕನ್ನಡದ ಸಂಕೇತ. ನಮ್ಮ ನಡುವೆಯೇ ಇದ್ದು ಇಲ್ಲದಾದ ನಕ್ಷತ್ರ.

1 comment:

  1. ಬಸು ಸರ್,
    ನಿಜವಾಗಿಯೂ ರಾಜ್ ರವರು ಒಂದು ಧ್ರುವ ತಾರೆಯೇ ಹೌದು. ಡಾ. ರಾಜ್ ಅವರ ಬಗ್ಗೆ ಬರೆದ ಈ ಬರಹ ನಿಜಕ್ಕೂ ಪ್ರಶಂಸನೀಯ. ನಿಮ್ಮ ತಂಡದ ತಂಟೆಕೋರರ ಬಗ್ಗೆ ಹೇಳಿದ್ದೀರಾ ಆ ಗುಂಪಿನಲ್ಲಿ ನೀವು ಒಬ್ಬ ಸದಸ್ಯರಾಗಿದ್ರಾ? ರಾಜ್ ಕುಮಾರ್ ಅವರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು... ರಾಜ್ ಅವರ ಕೆಲವು ಚಿತ್ರವನ್ನು ಮಾತ್ರ ಚಿತ್ರಮಂದಿರದಲ್ಲಿ ನಾನು ನೋಡಿರುವುದು. ಅದರಲ್ಲಿಯೂ ಶಬ್ದವೇದಿ ಚಿತ್ರವನ್ನು ನೋಡಲು ನಾನು ಮನೆಯವರೊಂದಿಗೆ ಜಗಳವಾಡಿಕೊಂಡು ನೋಡಿದ ಚಿತ್ರ. ರಂಗಭೂಮಿ, ಚಲನಚಿತ್ರ ರಂಗದಲ್ಲಿ ಇರುವವರು ಮತ್ತು ಇಲ್ಲದವರ ಬಗ್ಗೆ ಇನ್ನಷ್ಟು ಬರಹ ಮೂಡಿ ಬರಲಿ ಎಂದು ಆಶಿಸುತ್ತೇನೆ.
    ದ್ರುವ್ ಎಸ್. ನಾರಾಯಣ್.

    ReplyDelete