Monday, April 7, 2014

ಬಿಸಿಲು ಕೋಲಿನ ಮಾಂತ್ರಿಕ ವಿ.ಕೆ. ಮೂರ್ತಿ

ವಿ.ಕೆ. ಮೂರ್ತಿ
ಸರಿಸುಮಾರು ಎರಡು ತಿಂಗಳ ಹಿಂದೆ, ಹಿಂದಿ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ನಿರ್ಮಾಪಕ ಗುರುದತ್ ಗುಂಗಿ ಹುಳದಂತೆ ಕಾಡತೊಡಗಿದ್ದರು. ಅವರ ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಂ, ಕಾಗಜ್ ಕೇ ಫೂಲ್... ಇನ್ನು ಮುಂತಾದ ಚಿತ್ರಗಳನ್ನು ಮತ್ತೆ ನೋಡಬೇಕೆನಿಸಿತು. ಹುಡುಕಿ ತಂದಿಟ್ಟುಕೊಂಡು ನೋಡಲು ಕೂತೆ. ಆ ಕಾಲಕ್ಕೇ ಮೊಟ್ಟ ಮೊದಲ ಬಾರಿಗೆ ಸಿನಿಮಾಸ್ಕೋಪ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕಾಗಜ್ ಕೇ ಫೂಲ್’ ಚಿತವನ್ನು ನೋಡಿ ಮುಗಿಸುವಷ್ಟರಲ್ಲಿ ಮನಸ್ಸು ‘ವಕ್ತ್ ನೇ ಕಿಯಾ...’ ಹಾಡಿನಲ್ಲಿ ನೆಲೆ ನಿಂತಿತ್ತು. ಆ ಹಾಡಿನ ಉದ್ದಕ್ಕೂ ಬಂದುಹೋಗುವ ಕ್ಯಾಮರಾಮನ್ ವಿ.ಕೆ. ಮೂರ್ತಿಯವರ ಅದ್ಭುತ ಸೃಷ್ಟಿಯಾದ ಬಿಸಿಲು ಕೋಲು ಇನ್ನಿಲ್ಲದಂತೆ ಕಾಡತೊಡಗಿತು. ಗುರುದತ್‌ರ ಖಾಸಾ ದೋಸ್ತ್ ಆಗಿದ್ದ, ಅವರ ಚಿತ್ರಗಳ ಖಾಯಂ ಕ್ಯಾಮರಾಮನ್ ಆಗಿದ್ದ ಕನ್ನಡಿಗ ವಿ.ಕೆ. ಮೂರ್ತಿಯವರನ್ನು ನೋಡಬೇಕೆನಿಸಿತು. ಬೆಂಗಳೂರಿನಲ್ಲಿಯೇ ನೆಲೆಸಿದ್ದರಿಂದ ಅದು ಇನ್ನಷ್ಟು ಹೆಚ್ಚಾಗಿ ಕಾಡತೊಡಗಿತು.  
ವಿ.ಕೆ. ಮೂರ್ತಿ ಅಂದಾಕ್ಷಣ ನೆನಪಾಗಿದ್ದು ಉಮಾ ರಾವ್. ಮೂರ್ತಿಯವರನ್ನು ಮೊದಲು ಸಂದರ್ಶಿಸಿದ, ಲೋಕಕ್ಕೆ ಪರಿಚಯಿಸಿದ, ಅವರ ಬಗ್ಗೆ 2005 ರಲ್ಲಿ ‘ಬಿಸಿಲು ಕೋಲು’ ಎಂಬ ಪುಸ್ತಕ ಬರೆದು ಖ್ಯಾತಿ ಗಳಿಸಿದ  ಉಮಾ ರಾವ್, ಅವರಿಗೇ ಗೊತ್ತಿಲ್ಲದಂತೆ ಮೂರ್ತಿಯವರ ಬಗ್ಗೆ ಪೇಟೆಂಟ್ ಪಡೆದುಕೊಂಡವರು.
‘ಮೇಡಂ, ಮೂರ್ತಿಯವರನ್ನು ನೋಡಬೇಕಲ್ಲ, ಭೇಟಿ ಮಾಡುವುದು ಹೇಗೆ?’ ಫೋನ್ ಮಾಡಿ ಕೇಳಿದೆ.
‘ಇನ್‌ಫ್ಯಾಕ್ಟ್... ನಾನೂ ನೋಡಿ ತುಂಬಾ ದಿನಾನೇ ಆಯ್ತು ಬಸುರಾಜ್, ಫೋನ್ ಮಾಡಿ ಕನ್‌ಫರ್ಮ್ ಮಾಡಿಕೊಂಡು ನಿಮಗೆ ತಿಳಿಸುತ್ತೇನೆ’ ಎಂದವರು, ಸ್ವಲ್ಪ ಹೊತ್ತಿನ ನಂತರ, ‘ಬಸುರಾಜ್, ನಾಳೆ ಸಂಜೆ ನಾಲ್ಕೂವರೆಗೆ ಫ್ರೀಯಾಗಿರ್ತಾರಂತೆ, ನಾನೂ ಬರ್ತೇನೆ, ಬನ್ನಿ ಹೋಗಿಬರೋಣ’ ಎಂದರು.
ಉಮಾ ರಾವ್‌ಗಿಂತ ಮುಂಚೆಯೇ ಅವರ ಬೆಂಗಳೂರಿನ ಶಂಕರಪುರಂನಲ್ಲಿರುವ ‘ಪಂಡಿತ್ ಹೌಸ್’ ತಲುಪಿದ ನಾನು, ಮನೆ ಮುಂದಿನ ವರಾಂಡದಲ್ಲಿ ಕುರ್ಚಿ ಹಾಕಿಕೊಂಡು ಒಬ್ಬರೇ ಕೂತಿದ್ದ ಮೂರ್ತಿಯವರನ್ನು ನೋಡಿ ನಮಸ್ಕರಿಸಿದೆ. ಉಮಾ ರಾವ್ ಮೊದಲೇ ತಿಳಿಸಿದ್ದರಿಂದ, ‘ಉಮಾ ಬಂದ್ರಾ, ಬನ್ನಿ, ಇಫ್ ಯೂ ಡೋಂಟ್ ಮೈಂಡ್.. ಒಳಗಿನಿಂದ ಒಂದು ಕುರ್ಚಿ ತಂದು  ಕೂತ್ಕೊಳಿ’ ಎಂದರು.
ಮೂರ್ತಿಯವರಿದ್ದದ್ದೆ ಸಣ್ಣಗೆ. ಈಗ ಇನ್ನಷ್ಟು ವಯಸ್ಸಾಗಿ ಕೃಶಗೊಂಡಿದ್ದರು, ಮಗುವಿನಂತಾಗಿದ್ದರು. ಆದರೆ ಮುಖದಲ್ಲಿ ಲವಲವಿಕೆಯಿತ್ತು. ಆರೋಗ್ಯವಾಗಿದ್ದರು. ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡಿದ್ದರು. ಅವರ ಪಕ್ಕಕ್ಕೆ ಕುರ್ಚಿ ಹಾಕಿಕೊಂಡು ಕೂತು ಪರಿಚಯ ಹೇಳಿಕೊಂಡೆ. ಮೂರ್ತಿಯವರು, ‘ನಿಮಗೆ ಗುರುದತ್ ಗೊತ್ತಾ?’ ಎಂದರು. ಗುರುದತ್, ಅವರ ಚಿತ್ರಗಳು, ಮೂರ್ತಿಯವರ ವಕ್ತ್ ನೇ ಕಿಯಾ ಹಾಡಿನ ಅದ್ಭುತ ಲೈಟಿಂಗ್... ಎಲ್ಲವನ್ನು ಹೇಳಿದ ಮೇಲೆ, ‘ಪರವಾಗಿಲ್ಲ, ಸಿನಿಮಾ ಬಗ್ಗೆ ಸ್ವಲ್ಪ ತಿಳಕೊಂಡಿದ್ದೀರಾ’ ಎಂದರು.
ಮುಂದುವರೆದು, ‘ಸಾರ್, ವಕ್ತ್ ನೇ ಕಿಯಾ ಹಾಡಿನ ಲೈಟಿಂಗ್ ಮಾಡಿದ್ದು ಹೇಗೆ?’ ಎಂದೆ.
‘ಅದೊಂದು ದೊಡ್ಡ ಕತೆ. ಕಾಗಜ್ ಕೇ ಫೂಲ್ ಚಿತ್ರದ ಶೂಟಿಂಗ್ ನಡೀತಿತ್ತು. ಅದೊಂದು ಹಳೇ ಸ್ಟುಡಿಯೋ. ಒಂದು ದಿನ ಮಧ್ಯಾಹ್ನ ಊಟದ ಬಿಡುವಿನಲ್ಲಿ ಎಲ್ಲರೂ ಕೂತು ಹರಟುತ್ತಿದ್ದೆವು. ನನ್ನ ಪಕ್ಕದಲ್ಲಿ ಕೂತಿದ್ದ ಚಿತ್ರದ ನಟ, ನಿರ್ದೇಶಕ ಗುರುದತ್, ಹೆಂಚಿನ ಸಂದಿನಿಂದ ಸೂರ್ಯನ ಕಿರಣಗಳು ನಾವು ಕೂತಿದ್ದ ಜಾಗಕ್ಕೆ ಬೀಳುತ್ತಿದ್ದುದನ್ನು ತೋರಿಸಿ, ‘ನನಗೆ  ಈ ರೀತಿ ಲೈಟಿಂಗ್ ಬೇಕು, ಏನ್ಮಾಡ್ತಿರೋ ಗೊತ್ತಿಲ್ಲ’ ಎಂದು ಹೇಳಿ, ಎದ್ದು ಹೋಗಿಯೇಬಿಟ್ಟ. ಗುರು ಏನೋ ಹೇಳಿದ, ಮಾಡುವುದು ಹೇಗೆ. ಮಾಡಬೇಕೆಂದರೆ ಸೂರ್ಯನ ಬೆಳಕಿರಬೇಕು. ಸೂರ್ಯನನ್ನು ಒಂದೇ ಕಡೆ ನಿಲ್ಲಿಸಲಾಗುತ್ತದೆಯೇ, ಆ ಲೈಟು ಒಂದೇ ರೀತಿ ಇರುತ್ತದಾ? ಹಾಗೆ ಕೂತು ಯೋಚಿಸುತ್ತಿರುವಾಗ, ಸೆಟ್ ಹುಡುಗನೊಬ್ಬ ನಿಲುವುಗನ್ನಡಿಯೊಂದನ್ನು ಹಿಡಿದುಕೊಂಡು ಹೋಗುತ್ತಿದ್ದ. ಆ ಕನ್ನಡಿ ಮೇಲೆ ಬಿದ್ದ ಸೂರ್ಯನ ಬೆಳಕು ಮತ್ತೊಂದು ಬದಿಗೆ ಪ್ರತಿಪಲನಗೊಂಡು ಆ ಜಾಗವನ್ನು ಬೆಳಗಿತು. ನನಗೆ ತಕ್ಷಣ ಏನೋ ಹೊಳೆಯಿತು. ಅದನ್ನು ಕಾರ್ಯರೂಪಕ್ಕೆ ತಂದೆ. ಅದೇ ವಕ್ತ್ ನೇ ಕಿಯಾ ಹಾಡಿನ ಬಿಸಿಲು ಕೋಲು. ಚಿತ್ರ ಬಿಡುಗಡೆಯಾದ ಮೇಲೆ ಇಡೀ ಹಿಂದಿ ಚಿತ್ರರಂಗವೇ ಅದನ್ನು ಹಾಡಿ ಹೊಗಳಿತು. ಮಾಧ್ಯಮಗಳು ನನ್ನನ್ನು ಮೊಟ್ಟ ಮೊದಲ ಬಾರಿಗೆ ಹುಡುಕಿಕೊಂಡು ಬಂದವು. ದೇಶ ವಿದೇಶಗಳಲ್ಲೂ ಅದು ಚರ್ಚೆಯ ವಿಷಯವಾಯಿತು. ಅದು ಅಷ್ಟು ಜನಪ್ರಿಯವಾಗುತ್ತದೆ ಎಂದು ನನಗೇ ಅನ್ನಿಸಿರಲಿಲ್ಲ.’ ಎಂದು ಮಾತು ಮುಗಿಸುವ ಹೊತ್ತಿಗೆ ಸರಿಯಾಗಿ ಉಮಾ ಮತ್ತವರ ಪತಿ ರಾವ್ ಬಂದರು.
ಅವರು ಬರ್ತಿದ್ದಹಾಗೆ, ‘ಉಮಾ ಹೇಗಿದಿರಾ, ನಿಮ್ಮನ್ನೆಲ್ಲ ನೋಡಿ ಎಷ್ಟು ದಿನ ಆಗಿಹೋಯಿತು, ಬನ್ನಿ ಬನ್ನಿ’ ಎಂದು ಸುಮಾರು ಹೊತ್ತು ಅವರೊಂದಿಗೆ ಕೂತು ಮಾತನಾಡಿದರು. ಆತ್ಮೀಯರನ್ನು ನೋಡಿ  ಖುಷಿಗೊಂಡು ಬಜ್ಜಿ, ಕಾಫಿ ತರಿಸಿಕೊಟ್ಟರು.
ಅಲ್ಲೂ ಅಷ್ಟೇ, ‘ಉಮಾ ನೋಡಲ್ಲಿ, ಎಷ್ಟು ಚೆನ್ನಾಗಿದೆ ಈವನಿಂಗ್ ಲೈಟ್’ ಎಂದು ಎದುರುಗಡೆ ಬಿಲ್ಡಿಂಗ್ ಮೇಲೆ ಬಿದ್ದ ಸಂಜೆ ಸೂರ್ಯನ ಬೆಳಕಿನ ಬಗ್ಗೆ ಪುಟ್ಟ ಬಾಲಕನಂತೆ ಬೆರಗಿನಿಂದ ಮಾತನಾಡತೊಡಗಿದರು. ತಕ್ಷಣ ಉಮಾ ರಾವ್ ತಮ್ಮ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿದು, ಮೂರ್ತಿಯವರಿಗೆ ತೋರಿಸಿದರು.


‘ಏನಪ್ಪಾ ಇದು, ಮಾಡರ್ನ್ ಟೆಕ್ನಾಲಜಿಯಲ್ಲಿ ಏನೇನೆಲ್ಲ ಬಂದುಬಿಟ್ಟಿದೆ’ ಎಂದ ಮೂರ್ತಿಯವರು ತಮ್ಮ ಗತಕಾಲದ ಶೂಟಿಂಗನ್ನು ನೆನಪಿಗೆ ತಂದುಕೊಂಡರು. ‘ಈಗ ಕ್ಲಿಕ್ ಮಾಡಿದ ತಕ್ಷಣ ಫೋಟೋ ನೋಡಬಹುದು. ಅದು ಸರಿ ಇಲ್ಲಾಂದ್ರೆ ಮತ್ತೊಂದು ತೆಗೀಬಹುದು. ನಮ್ಮ ಕಾಲದ್ದು ಕಣ್ಣಾಮುಚ್ಚಾಲೆಯಾಟ. ಒಂದು ಫ್ರೇಮ್ ಹೀಗಿರಬೇಕು ಅಂದುಕೊಂಡು, ಲೈಟಿಂಗ್ ಮಾಡಿ, ಆರ್ಟಿಸ್ಟ್ ನಿಲ್ಲಿಸಿ ಶೂಟ್ ಮಾಡಿದರೆ, ಅದರ ರಿಸಲ್ಟ್ ನೋಡಬೇಕಾದರೆ ಕಡಿಮೆ ಎಂದರೂ ಹದಿನೈದು ದಿನಗಳಾಗುತ್ತಿತ್ತು. ನೆಗಟಿವ್ ರೋಲು ತೊಳೆಸಬೇಕು. ಫಿಲ್ಮ್ ಪ್ರಿಂಟಾಗಿ ಬಂದ ಮೇಲೆ ಎಡಿಟಿಂಗ್ ಟೇಬಲ್ ಮೇಲೆ ನೋಡಬೇಕು. ಅದು ಸರಿ ಬರಲಿಲ್ಲ ಎಂದರೆ ಮತ್ತದೇ ಪ್ರೋಸಸ್, ಡಬಲ್ ಖರ್ಚು... ಅದಕ್ಕೂ ಇದಕ್ಕೂ ಅಜಗಜಾಂತರ’ ಎಂದು ಅತ್ಯಾಧುನಿಕ ವ್ಯವಸ್ಥೆ  ಮತ್ತು ಕ್ಯಾಮರಾಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ವಿ.ಕೆ.ಮೂರ್ತಿಯವರು ಹುಟ್ಟಿದ್ದು ಮೈಸೂರಿನಲ್ಲಿ, ನವೆಂಬರ್ 23, 1923 ರಂದು. ಬಡತನದಲ್ಲಿಯೇ ಬೆಳೆದ ಮೂರ್ತಿಯವರು ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಛಾಯಾಗ್ರಹಣ ವಿಭಾಗದ ಮೊದಲ ತಂಡದ ವಿದ್ಯಾರ್ಥಿಗಳಲ್ಲಿ  ಒಬ್ಬರಾಗಿದ್ದರು. ಕಲಿತ ನಂತರ ಮುಂಬೈಗೆ ತೆರಳಿ, ರಂಗಭೂಮಿಯಲ್ಲಿ ತೊಡಗಿಕೊಂಡರು. ಆ ನಂತರ ಚಿತ್ರಜಗತ್ತಿಗೆ ಕಾಲಿಟ್ಟು ಕಾಗಜ್ ಕೇ ಫೂಲ್, ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ್, ಲವ್ ಇನ್ ಟೋಕಿಯೋ, ಜಿದ್ದಿ, ಬಾಜಿಯಂತಹ ಹಲವಾರು ಸೂಪರ್ ಹಿಟ್ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದು ಇತಿಹಾಸದ ಪುಟಗಳಲ್ಲಿ ದಾಖಲಾಗಿಹೋದರು. ಹಾಗೆಯೇ ತಮ್ಮ ಇಳಿವಯಸ್ಸಿನಲ್ಲಿ, 1986 ರಲ್ಲಿ ಗೋವಿಂದ್ ನಿಹಲಾನಿಯವರ ‘ತಮಸ್’, 1988 ರಲ್ಲಿ ಶ್ಯಾಂ ಬೆನಗಲ್‌ರ ‘ಡಿಸ್ಕವರಿ ಆಫ್ ಇಂಡಿಯಾ’ ಎಂಬ ಟಿವಿ ಧಾರಾವಾಹಿಗಳಿಗೆ ಹಾಗೂ 1992 ರಲ್ಲಿ ‘ಹೂವು ಹಣ್ಣು’ ಎಂಬ ಕನ್ನಡ ಚಿತ್ರಕ್ಕೆ  ಕ್ಯಾಮರಾ ಹಿಡಿದು, ಕತ್ತಲು ಬೆಳಕಿನಾಟದ ಮೇಲಿನ ತಮ್ಮ ಪ್ರೀತಿಯನ್ನು ಜೀವಂತವಿರಿಸಿಕೊಂಡಿದ್ದರು.  
ಅಸಾಧಾರಣ ಪ್ರತಿಭೆಯ ಮೂರ್ತಿಯವರ ಕ್ಯಾಮರಾ ಕಣ್ಣಲ್ಲಿ ಮಧುಬಾಲ, ವಹೀದಾ ರೆಹಮಾನ್‌ರಂತಹ ನಟಿಯರು ನಕ್ಷತ್ರಗಳಾಗಿ ಮಿಂಚಿದರು, ಮೆರೆದರು. ಹಿಂದಿ ಚಿತ್ರರಂಗವನ್ನು ದಶಕಗಟ್ಟಲೆ ಆಳಿದರು. ಛಾಯಾಗ್ರಹಣ ಕ್ಷೇತ್ರಕ್ಕೆ ಘನತೆ, ಜನಪ್ರಿಯತೆ ಮತ್ತು ಮನ್ನಣೆ ತಂದ ಮೂರ್ತಿಯವರು, ‘ಮೂರ್ತಿ ಮಾಡೆಲ್’ ಎಂಬ ಹೊಸ ಮಾರ್ಗವನ್ನೇ ಹುಟ್ಟುಹಾಕಿದರು. ಹಿಂದಿ ಚಿತ್ರರಂಗದ ಮಹಾನ್ ಕಲಾಕಾರ ಗುರುದತ್, ಮೂರ್ತಿಯವರ ಒಡನಾಡಿಯಾಗಿದ್ದರೂ, ಲೋಕವೇ ಕೊಂಡಾಡುವ ಸಾಧನೆ ಮಾಡಿದ್ದರೂ, ನನಗೂ ಅದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ತಣ್ಣಗಿದ್ದವರು. ಮೂರ್ತಿ ಮೂಲತಃ ಮೆದು ಮಾತಿನ ಸಾಧು ಸ್ವಭಾವದ ಸರಳ ಸಜ್ಜನರು. ಇಡೀ ಹಿಂದಿ ಚಿತ್ರರಂಗವೇ ಇವರನ್ನು ಅಪಾರ ಪ್ರೀತಿ ಮತ್ತು ಗೌರವದಿಂದ ಕಾಣುತ್ತಿತ್ತು. ಅದರ ದ್ಯೋತಕವೆಂಬಂತೆ 2005 ರಲ್ಲಿ ಉಮಾ ರಾವ್ ಬರೆದ ‘ಬಿಸಿಲು ಕೋಲು’ ಪುಸ್ತಕ ಬಿಡುಗಡೆ ಸಮಾರಂಭದಂದು ಹಿಂದಿ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಗೋವಿಂದ್ ನಿಹಲಾನಿ (ಮೂರ್ತಿಯವರ ಆಪ್ತ ಶಿಷ್ಯ) ಮೂರ್ತಿಯವರ ಮೇಲೊಂದು ಶಾರ್ಟ್ ಫಿಲಂ ತಯಾರಿಸಿ, ಪ್ರದರ್ಶಿಸಿದ್ದರು. ನಿರ್ದೇಶಕ, ನಿರ್ಮಾಪಕ ಶ್ಯಾಂ ಬೆನಗಲ್‌ರು  ಮುಖ್ಯ ಅತಿಥಿಗಳಾಗಿ ಆ ಸಮಾರಂಭಕ್ಕೆ ಬಂದು ಮೂರ್ತಿಯವರಿಗೆ ಗೌರವಾರ್ಪಣೆ ಸಲ್ಲಿಸಿದ್ದರು.
ಭಾರತೀಯ ಚಿತ್ರರಂಗದಲ್ಲಿ ಅಪರೂಪ ಮತ್ತು ಅನನ್ಯ ಸಾಧನೆ ಮಾಡಿದ, ಅಪ್ಪಟ ಕನ್ನಡಿಗ ಮೂರ್ತಿಯವರಿಗೆ ಕಾಗಜ್ ಕೇ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್ ಚಿತ್ರಗಳಿಗೆ, ಪ್ರಥಮ ಬಾರಿಗೆ ಛಾಯಾಗ್ರಹಣ ಕ್ಷೇತ್ರಕ್ಕೆ ಫಿಲಂಫೇರ್ ಪ್ರಶಸ್ತಿ ದೊರಕಿದೆ. ಐಐಎಫ್‌ಎ ಸಂಸ್ಥೆ ಕೊಡಮಾಡುವ ಜೀವಮಾನದ ಸಾಧನೆ ಪ್ರಶಸ್ತಿಯ ಜೊತೆಗೆ ಹಿಂದಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಸಂದಿದೆ.
ಇಂತಹ ಮೂರ್ತಿ ಈಗಿಲ್ಲ, ಆದರೆ ಅವರ ಬಿಸಿಲು ಕೋಲು ಅಜರಾಮರ. ಕತ್ತಲೆ ಬೆಳಕಿನಾಟದ ಚಿತ್ರಗಳು ನಿರಂತರ. ಮೂರ್ತಿ ಕೂಡ.

4 comments:

  1. ಒಳ್ಳೆಯ ಬರಹ. ಇಷ್ಟವಾಯಿತು.

    ReplyDelete
  2. ಪ್ರಿಯ ಬಸು
    ವಿ.ಕೆ.ಮೂರ್ತಿ ಅವರ ನಿಧನನಂತರ ಻ಅವರ ಅಂತಿಮ ಸಂಸ್ಕಾರದ ಬಗ್ಗೆ ಸರ್ಕಾರ ಮತ್ತು ಚಿತ್ರರಂಗ ತೋರಿದ ಧೋರಣೆ ಕಂಡುಖೇದವಾಯಿತು.ನಿಮ್ಮ ಲೇಖನ ೋದಿದ ಮೇಲೆ ಅವರ ಛಾಯಾಗ್ರಹಣವಿದ್ದ ಪ್ಯಾಸಾ, ಕಾಗಜ್‍ ಕೆ ಫೂಲ್ ಮತ್ತು ಸಾಹಿಬ್ ಬೀಬಿ ಔರ್ ಗುಳಾಂ ಚಿತ್ದದ ಕೆಲವು ಹಾಡುಗಳನ್ನು ನೋಡಿದೆ. ಪ್ಯಾಸಾ ಚಿತ್ದ ಯೇ ಮಹಲೋನ್ ಎ ತಕ್ದೀರ್ ತಾಜೋಂಕೆ ದುನಿಯಾ, ಜಿನ್ಹೇ ನಾಜ್ ಹೈ ಹಿಂದ್ ಪರ್ವೋ ಕಹಾಂ... ಮತ್ತು ಆಜ್ ಸಜನ್ .. ಮೇ ಅಂಗ್ ಲಗಾದೋ. ಕಾಗಜ್ ಕೆ ಫೂಲ್‍ ನ ವಕ್ತ್‍ ನೆ ಕಿಯಾ... ಹಾಗೂ ಸಾಹಿಬ್ ಬೀಬೀ... ಚಿತ್ರದ ಸಾಖಿಯ ಾಜ್ ಮುಜ್ಹೆ ನೀಂದ್ ನಹೀ ... ಮತ್ತು ನಜಾವೋನ್ ಸಯ್ಯಾ ಹಾಡಿನ ದೃಶ್ಯಗಳು ಎಂಥ ಻ದ್ಭುತ ಕಲಾಕಾರನಿಂದ ಸೃಷ್ಟಿಯಾಗಿವೆ ಎನಿಸಿತು. ಒಂದು ವಿಷಯ ಗೊತ್ತೇ? ಸಾಖಿಯ ಾಜ್ ಮುಝೆ ಹಾಡಿನ ಸಹ ನ್ಋತ್ಯಗಾರರು ಅಷ್ಟೇನೂ ಸುಂದರಿಯರ಻ಗಿರದ ಕಾರಣಕ್ಕೆ ಪ್ರಧಾನ ನೃತ್ಯಗಾರ್ತಿಯ ಸುತ್ತ ಻ವರು ನೆಳಿನಂತೆ ಸುತ್ತುವ ರೀತಿಯಲ್ಲಿ ಅವರ ಮುಖ ಕಾಣದಂತೆ ಇಡೀ ದೇಹವೇ ಅಪಸರೆಯರ ಮಸೀ ಚಿತ್ರದಂತೆ ನೆರಳು ಬೆಳಕು ಸಂಯೋಜಿಸಿದ ಾ ಬೆಳಕಿನ ಬೇಟೆಗಾರ ಸೃಷ್ಟಿಸಿದ ಬೆಡಗಿಗೆ ನಾನು ಬೆರಗಾಗಿ ಹೋದೆ

    ReplyDelete
  3. ಪ್ರಿಯ ಬಸು
    ವಿ.ಕೆ.ಮೂರ್ತಿ ಅವರ ನಿಧನನಂತರ ಻ಅವರ ಅಂತಿಮ ಸಂಸ್ಕಾರದ ಬಗ್ಗೆ ಸರ್ಕಾರ ಮತ್ತು ಚಿತ್ರರಂಗ ತೋರಿದ ಧೋರಣೆ ಕಂಡುಖೇದವಾಯಿತು.ನಿಮ್ಮ ಲೇಖನ ೋದಿದ ಮೇಲೆ ಅವರ ಛಾಯಾಗ್ರಹಣವಿದ್ದ ಪ್ಯಾಸಾ, ಕಾಗಜ್‍ ಕೆ ಫೂಲ್ ಮತ್ತು ಸಾಹಿಬ್ ಬೀಬಿ ಔರ್ ಗುಳಾಂ ಚಿತ್ದದ ಕೆಲವು ಹಾಡುಗಳನ್ನು ನೋಡಿದೆ. ಪ್ಯಾಸಾ ಚಿತ್ದ ಯೇ ಮಹಲೋನ್ ಎ ತಕ್ದೀರ್ ತಾಜೋಂಕೆ ದುನಿಯಾ, ಜಿನ್ಹೇ ನಾಜ್ ಹೈ ಹಿಂದ್ ಪರ್ವೋ ಕಹಾಂ... ಮತ್ತು ಆಜ್ ಸಜನ್ .. ಮೇ ಅಂಗ್ ಲಗಾದೋ. ಕಾಗಜ್ ಕೆ ಫೂಲ್‍ ನ ವಕ್ತ್‍ ನೆ ಕಿಯಾ... ಹಾಗೂ ಸಾಹಿಬ್ ಬೀಬೀ... ಚಿತ್ರದ ಸಾಖಿಯ ಾಜ್ ಮುಜ್ಹೆ ನೀಂದ್ ನಹೀ ... ಮತ್ತು ನಜಾವೋನ್ ಸಯ್ಯಾ ಹಾಡಿನ ದೃಶ್ಯಗಳು ಎಂಥ ಻ದ್ಭುತ ಕಲಾಕಾರನಿಂದ ಸೃಷ್ಟಿಯಾಗಿವೆ ಎನಿಸಿತು. ಒಂದು ವಿಷಯ ಗೊತ್ತೇ? ಸಾಖಿಯ ಾಜ್ ಮುಝೆ ಹಾಡಿನ ಸಹ ನ್ಋತ್ಯಗಾರರು ಅಷ್ಟೇನೂ ಸುಂದರಿಯರ಻ಗಿರದ ಕಾರಣಕ್ಕೆ ಪ್ರಧಾನ ನೃತ್ಯಗಾರ್ತಿಯ ಸುತ್ತ ಻ವರು ನೆಳಿನಂತೆ ಸುತ್ತುವ ರೀತಿಯಲ್ಲಿ ಅವರ ಮುಖ ಕಾಣದಂತೆ ಇಡೀ ದೇಹವೇ ಅಪಸರೆಯರ ಮಸೀ ಚಿತ್ರದಂತೆ ನೆರಳು ಬೆಳಕು ಸಂಯೋಜಿಸಿದ ಾ ಬೆಳಕಿನ ಬೇಟೆಗಾರ ಸೃಷ್ಟಿಸಿದ ಬೆಡಗಿಗೆ ನಾನು ಬೆರಗಾಗಿ ಹೋದೆ- ಕೆ ಪುಟ್ಟಸ್ವಾಮಿ

    ReplyDelete
  4. ವಿ.ಕೆ. ಮೂರ್ತಿಯವರ ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಇಷ್ಟವಾಯಿತು...

    ReplyDelete