Friday, February 13, 2015

ಮೋದಿ ಸರಕಾರದಿಂದ ಭೂ ಕಾಯ್ದೆಗೆ ಸುಗ್ರೀವಾಜ್ಞೆ... ಈಗ ಪ್ರೊಫೆಸರ್ ಇರಬೇಕಾಗಿತ್ತು…!

ಕನ್ನಡನಾಡು ಕಂಡ ಪ್ರಖರ ಪ್ರಗತಿಪರ ಚಿಂತಕ, ರೈತ ನಾಯಕ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರು ಹುಟ್ಟಿದ್ದು ಫೆಬ್ರವರಿ 13, 1936 ರಂದು, ಇಹಲೋಕ ತ್ಯಜಿಸಿದ್ದು ಫೆಬ್ರವರಿ 3, 2004ರಲ್ಲಿ. ಕೇಂದ್ರದ ಮೋದಿ ನೇತೃತ್ವದ ಸರಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಗೆ ರಾಷ್ಟ್ರಾಧ್ಯಕ್ಷರ ಅಂಗೀಕಾರ ಪಡೆದಿದೆ. ರೈತರನ್ನು ಒಕ್ಕಲೆಬ್ಬಿಸುವ ಈ ಕರಾಳ ಕಾಯ್ದೆ ತರುತ್ತಿರುವ ಸಂದರ್ಭದಲ್ಲಿ ಪ್ರೊಫೆಸರ್ ಇದ್ದಿದ್ದರೆ…
ಕೇವಲ ಒಂಬತ್ತು ತಿಂಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ, ಆಡಳಿತದುದ್ದಕ್ಕೂ ಸುಗ್ರೀವಾಜ್ಞೆಗಳಲ್ಲೇ ಸುದ್ದಿಯಾಯಿತು. ಅದರಲ್ಲೂ ಅತ್ಯಂತ ಮುಖ್ಯವಾದದ್ದು, ಯುಪಿಎ ಸರಕಾರ 2013ರಲ್ಲಿ ಜಾರಿಗೆ ತಂದಿದ್ದ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ಹೊರಡಿಸಿರುವ ಸುಗ್ರೀವಾಜ್ಞೆ. ಇದಕ್ಕೆ ಡಿಸೆಂಬರ್ 31ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕಾರ ನೀಡಿದ್ದಾರೆ.
ಅಸಲಿಗೆ ಈ ಕಾಯ್ದೆ ಜಾರಿಗೆ ತರಲು ಯುಪಿಎ ಸರಕಾರ ಸುಮಾರು 7 ವರ್ಷಗಳ ಕಾಲ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚಿಸಿತ್ತು. ಕಾಯ್ದೆಯನ್ನು 2007 ಮತ್ತು 2009 ರಲ್ಲಿ ಎರಡು ಸಂಸದೀಯ ಸಮಿತಿಗಳಿಂದ ಪರಿಶೀಲಿಸಿ, ಸರ್ವಾನುಮತದಿಂದ ಜಾರಿಗೆ ತಂದಿತ್ತು. ಕುತೂಹಲಕರ ಸಂಗತಿ ಎಂದರೆ, ಇವೆರಡೂ ಸಮಿತಿಗಳಿಗೆ ಬಿಜೆಪಿಯ ಹಿರಿಯ ಮುಖಂಡರಾದ ಕಲ್ಯಾಣ್ ಸಿಂಗ್ ಮತ್ತು ಸುಮಿತ್ರಾ ಮಹಾಜನ್ ರನ್ನೇ ಅಧ್ಯಕ್ಷರನ್ನಾಗಿಸಿತ್ತು. ಇದರಲ್ಲಿ ಹಾಲಿ ಮೋದಿ ಸರಕಾರದಲ್ಲಿ ಹಿರಿಯ ಸಚಿವರಾಗಿರುವ ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಮಂಡಿಸಿದ್ದ ತಿದ್ದುಪಡಿಗಳನ್ನೂ ಅಳವಡಿಸಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ಎಲ್ಲ ಪಕ್ಷಗಳಿಗೂ ಈ ಕಾಯ್ದೆ ಒಪ್ಪಿತವಾಗಿತ್ತು.  
ಆದರೆ ನರೇಂದ್ರ ಮೋದಿ ಸರಕಾರ, ಸುಧಾರಣೆಯ ನೆಪವೊಡ್ಡಿ ಈ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯ ಮೂಲಕ ಕಾರ್ಯರೂಪಕ್ಕೆ ಮುಂದಾಗಿದೆ. ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಅತ್ಯಂತ ಮಹತ್ವದ ವಿಚಾರವಾಗಿದ್ದು ಬಗ್ಗೆ ಚುನಾಯಿತ ಜನಪ್ರತಿನಿಧಿಗಳಿಂದ ಕೂಡಿದ ಲೋಕಸಭೆ ಮತ್ತು ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರತಿಭಾವಂತರಿರುವ ರಾಜ್ಯಸಭೆಗಳಲ್ಲಿ ವಿವರವಾಗಿ ಚರ್ಚೆ ನಡೆಯಬೇಕಾಗಿತ್ತು. ಅದು ಪ್ರಜಾಪ್ರಭುತ್ವದ ರೀತಿ ನೀತಿಯಾಗಿತ್ತು. ಆದರೆ ಸಂಸತ್ತಿಗೂ ಬರದೆ, ಚರ್ಚೆಯೂ ಆಗದೆ ಈ ಸುಗ್ರೀವಾಜ್ಞೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.  
ಅಷ್ಟಕ್ಕೂ ಈ ಕಾಯ್ದೆಯಲ್ಲಿ ಏನಿದೆ ಎಂದು ನೋಡುವುದಾದರೆ, ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ 5 ವರ್ಷಗಳೊಳಗೆ ಕೈಗಾರಿಕೆಯನ್ನು ಸ್ಥಾಪಿಸದಿದ್ದರೆ ಭೂಮಿ ಮತ್ತೆ ಮೂಲ ಮಾಲಕನಿಗೆ ವಾಪಸ್ ನೀಡಬೇಕು ಎಂಬ ಅಂಶವನ್ನು ಮೋದಿ ಸರಕಾರ ಜಾರಿ ಮಾಡಿರುವ ಹೊಸ ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆ ಕೈಬಿಟ್ಟಿದೆ. ಇದು ಕೃಷಿ ಕ್ಷೇತ್ರ ಮತ್ತು ರೈತ ಸಮುದಾಯಕ್ಕೆ ಮಾಡುವ ಮಹಾ ದ್ರೋಹ.
ಸಿಎಜಿ ವರದಿ ಪ್ರಕಾರ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡಿದ್ದ ಒಟ್ಟಾರೆ ಭೂಮಿಯ ಪೈಕಿ ಶೇ. 38ರಷ್ಟು ಭೂಮಿ ಹಲವು ವರ್ಷಗಳಿಂದ ಯಾವುದೇ ರೀತಿ ಬಳಕೆಯಾಗದೆ ಹಾಗೇ ಉಳಿದಿದೆ. ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ನೆಪದಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಅಡವಿಟ್ಟು, ಕೆಲವು ಕಂಪನಿಗಳು ನೂರಾರು ಕೋಟಿ ರೂ. ಸಾಲ ಪಡೆದಿವೆಯೆಂದೂ ವರದಿ ಹೇಳಿದೆ. ಇಂತಹ ಅಕ್ರಮಗಳನ್ನು ತಡೆಯುವ ಸಲುವಾಗಿಯೇ ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ ಹೊಸ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದಿತ್ತು.
ಆದರೆ ಮೋದಿ ಸರಕಾರ ಅದಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಈ ಹೊಸ ಕಾಯ್ದೆಯ ಅಧಿನಿಯಮದನ್ವಯ ಭೂಮಿಯನ್ನು 5 ರೀತಿಯ ಅನುಕೂಲಕ್ಕಾಗಿ ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಅವುಗಳೆಂದರೆ ರಕ್ಷಣೆ, ಕೈಗಾರಿಕಾ ಕಾರಿಡಾರುಗಳು, ಗ್ರಾಮೀಣ ಮೂಲ ಸೌಕರ್ಯ, ಬಡವರಿಗೆ ವಸತಿ ಸೇರಿದಂತೆ ಕೈಗೆಟುಕುವ ದರದಲ್ಲಿ ವಸತಿ ಯೋಜನೆಗಳು ಮತ್ತು ಯಾವುದೇ ತರಹದ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ.
ಹೊಟ್ಟೆಬಾಕ ಗುತ್ತಿಗೆದಾರರು, ಅವಕಾಶವಾದಿ ಅಧಿಕಾರಿಗಳು ಮತ್ತು ಸ್ವಾರ್ಥ ರಾಜಕಾರಣಿಗಳ ಗುಂಪು ಈ ಯೋಜನೆಯ ಫಲಾನುಭವಿಗಳು. ಅದರಲ್ಲೂ ಕಾರ್ಪೊರೇಟ್ ವಲಯದ ಧಣಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳಿಗೆ ಅತಿ ಹೆಚ್ಚಿನ ಲಾಭದಾಯಕ ಎನ್ನುವುದರಲ್ಲಿ ಅನುಮಾನವಿಲ್ಲ. ಇವರ ಪಂಚತಾರಾ ಹೋಟೆಲ್ಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಐಷಾರಾಮಿ ರೆಸಾರ್ಟ್ ಗಳು, ಮೇಲ್ವರ್ಗದವರ ಭಾರೀ ಮಾಲ್ ಗಳು, ಪ್ರತಿಷ್ಠಿತ ಕಾಲೇಜುಗಳು ತಲೆ ಎತ್ತಲಿವೆ. ಹೀಗಾಗಿ ಕಾಯ್ದೆ ಬಡವರ ವಿರುದ್ಧ ಎಂಬುದಂತೂ ಸ್ಪಷ್ಟ. ಸುಗ್ರೀವಾಜ್ಞೆಯಿಂದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟಂತಾಗುತ್ತದೆ ಎಂದು ದೇಶದ ಎಲ್ಲ ವಿರೋಧ ಪಕ್ಷಗಳು ಒಕ್ಕೊರಲಿನಿಂದ ವಿರೋಧಿಸಿವೆ. ಬಿಜೆಪಿಯೇತರ ರಾಜ್ಯ ಸರಕಾರಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೂ ನರೇಂದ್ರ ಮೋದಿ ಸರಕಾರ ಎಲ್ಲರ ವಿರೋಧದ ನಡುವೆಯೂ ಕರಾಳ ಕಾಯ್ದೆಯನ್ನು ಕಾರ್ಯರೂಪಕ್ಕಿಳಿಸಲು, ಅನ್ನ ನೀಡುವ ಮಣ್ಣಿನ ಮಗನಿಗೆ ಮಣ್ಣು ಮುಕ್ಕಿಸಲು ಮುಂದಾಗಿದೆ.
ಈ ಕ್ಷಣದಲ್ಲಿ ನನಗೆ ನೆನಪಾದದ್ದು ನಮ್ಮ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು.  
ಎಂಬತ್ತರ ದಶಕದಲ್ಲಿ ರೈತ ಸಂಘ ಕಟ್ಟಿದ, ನಾಡಿನ ರೈತರ ರಟ್ಟೆಗೆ ಬುದ್ಧಿಗೆ ಬಲ ತುಂಬಿದ, ಸ್ವಾಭಿಮಾನದ ಪಾಠ ಹೇಳಿದ ಪ್ರೊಫೆಸರ್, ಕುಗ್ಗಿಹೋಗಿದ್ದ ರೈತನನ್ನು ಎದ್ದುನಿಲ್ಲಿಸಿ ಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿದ ಮಹಾನುಭಾವ. ತಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದ್ದು, ಸರಕಾರಿ ಅಧಿಕಾರಿಗಳ ಜಪ್ತಿಯ ವಿರುದ್ಧ ಮರು ಜಪ್ತಿ ಮಾಡುವಂತೆ ಪ್ರೇರೇಪಿಸಿದ್ದು, ಜನಸೇವೆಯ ಹೆಸರಲ್ಲಿ ದರ್ಬಾರು ನಡೆಸುತ್ತಿದ್ದ ಜನಪ್ರತಿನಿಧಿಗಳ ಚಳಿ ಬಿಡಿಸಿದ್ದು, ನಗುವ ಚಳವಳಿ, ಉಗಿವ ಚಳವಳಿಗಳಂತಹ ಪ್ರತಿ ಸಂದರ್ಭಕ್ಕೂ ಒಂದೊಂದು ವಿಶಿಷ್ಟ ಬಗೆಯ ಹೋರಾಟಗಳನ್ನು ಹುಟ್ಟುಹಾಕಿದ್ದು… ಒಂದಾ ಎರಡಾ. ನೂರಾರು ಚಳವಳಿಗಳ ಮೂಲಕ ರೈತರನ್ನು ಜಾಗೃತರನ್ನಾಗಿಸಿದರು. ರೈತ ಹೋರಾಟಕ್ಕೊಂದು ಹೊಸ ವ್ಯಾಖ್ಯಾನ ನೀಡಿ ಬೇಸಾಯದ ಬದುಕಿಗೆ ಬೆಲೆ ತಂದರು.
ಇದೆಲ್ಲಕ್ಕಿಂತಲೂ ಮುಖ್ಯವಾಗಿದ್ದು, ಪ್ರೊ. ನಂಜುಂಡಸ್ವಾಮಿಯವರು ಜಾಗತೀಕರಣ ತಂದೊಡ್ಡುವ ಅಪಾಯಗಳನ್ನು ಕುರಿತು ಹೇಳಿದ್ದು. ಅದು ದೇಶದ ಜನರ ಜೀವನದ ಮೇಲೆ ಬೀರುವ ಪರಿಣಾಮವನ್ನು ಕುರಿತು ಕರಾರುವಾಕ್ಕಾಗಿ ಕಂಡಿರಿಸಿದ್ದು. ಜಾಗತೀಕರಣದಿಂದ ವಿಶ್ವದ ಇತರ ದೇಶಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲಾಗಿರುವ ದುಷ್ಪರಿಣಾಮಗಳನ್ನು ಬಿಡಿಸಿಟ್ಟಿದ್ದು. ಜಾಗತಿಕ ಬುದ್ಧಿಜೀವಿ ವಲಯವೂ ಬೆಚ್ಚುವಂತೆ ವಿಚಾರ ಮಂಡಿಸಿದ್ದು.
ಇದರ ಜೊತೆಗೆ ಮಲ್ಟಿ ನ್ಯಾಷನಲ್ ಕಂಪನಿಗಳು, ವಿದೇಶಿ ಬಂಡವಾಳ ಮತ್ತು ವಿದೇಶಿ ವಸ್ತುಗಳ ಅವ್ಯಾಹತ ಆಮದುಗಳಿಂದ ನಮ್ಮ ದೇಶಿ ಕುಲಕಸುಬುಗಳಿಗೆ ಆಗುವ ಅಪಾಯವನ್ನು ತರ್ಕಬದ್ಧವಾಗಿ ವಿವರಿಸಿದ್ದು. ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಮತ್ತು ರೈತ ಸಮುದಾಯವನ್ನು ಕಾರ್ಪೊರೇಟ್ ದುರಾಕ್ರಮಣದಿಂದ ರಕ್ಷಿಸಲು ಮಾನ್ಸಾಂಟೋ, ಕೆಂಟಕಿ ಫ್ರೈಡ್ ಚಿಕನ್, ಗ್ಯಾಟ್, ಡಂಕೆಲ್ ಗಳ ವಿರುದ್ಧ ವಿಶಿಷ್ಟ ಬಗೆಯ ಹೋರಾಟಗಳನ್ನು ರೂಪಿಸಿ ರೈತರನ್ನು ಸಜ್ಜುಗೊಳಿಸಿದ್ದು. ಇಡೀ ರೈತ ಸಂಕುಲಕ್ಕೆ ಧೈರ್ಯ ತುಂಬಿದ್ದು.
ಇಂತಹ ಅಪರೂಪದ ಚಿಂತಕ, ಹೋರಾಟಗಾರ, ಸಂತ ಇವತ್ತಿಲ್ಲ. ಅಕಸ್ಮಾತ್ ಇದ್ದಿದ್ದರೆ ದೇಶದ ರೈತರನ್ನು ಸಂಘಟಿಸಿ ಸಂಸತ್ತಿಗೆ ಮುತ್ತಿಗೆ ಹಾಕುತ್ತಿದ್ದರು. ರೈತರು ಏನು ಎನ್ನುವುದನ್ನು; ಭೂಮಿಯ ಮಹತ್ವವನ್ನು ಮೋದಿಯ ಮರ್ಮಕ್ಕೆ ತಾಕುವಂತೆ ಮಾಡುತ್ತಿದ್ದರು. ಹಾಗೆಯೇ ಮನೆಹಾಳು ಕಾಯ್ದೆಯನ್ನು ಕೈಬಿಡುವಂತೆ ನೋಡಿಕೊಳ್ಳುತ್ತಿದ್ದರು.
ಪ್ರೊಫೆಸರ್ ನಂಜುಂಡಸ್ವಾಮಿಯವರೇ ಎಲ್ಲ ಕಾಲಕ್ಕೂ, ಎಲ್ಲದಕ್ಕೂ ಇರಬೇಕಾಗಿತ್ತು ಎಂಬುದು ಕೊಂಚ ದುರಭಿಮಾನವಾಗಬಹುದು. ಹಾಗೆಯೇ ಅದು ಹೊಸಬರು ಬರದಂತೆ, ಬೆಳೆಯದಂತೆಯೂ ಕಾಣಬಹುದು. ಹಾಗಾಗಿ ಅವರ ಮಾರ್ಗದಲ್ಲಿಯೇ ನಡೆಯುತ್ತಿರುವ ಸಮಾನ ಮನಸ್ಕರು, ಬಂಡವಾಳಶಾಹಿಯಿಂದಲೇ ಭಾರತ ಮುಂದಕ್ಕೆ ಬರಬೇಕೆ, ಭಾರತ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತ ರಾಷ್ಟ್ರವಾಗಿಬಿಡುತ್ತದೆಯೆ, ಇದರಿಂದ ಭಾರತದ ಕೃಷಿಗೆ ಕೈಗಾರಿಕೆ ಮತ್ತು ಜನತೆಗೆ ಒಳಿತಾಗುತ್ತದೆಯೆ ಎಂದು ಯೋಚಿಸಬೇಕಾದ ತುರ್ತಿದೆ.
ಹೀಗೆ ಯೋಚಿಸಿ ಕಾರ್ಯರೂಪಕ್ಕೆ ಇಳಿಯಬೇಕಾದ ಸಮಾಜಮುಖಿ ಚಿಂತಕರು, ಜನಪರ ನಿಲುವಿನ ವ್ಯಕ್ತಿಗಳು ಬೇಕಾದಷ್ಟು ಜನರಿದ್ದಾರೆ. ಇರುವ ಕಾರಣಕ್ಕೆ ಇರುವಿಕೆಯನ್ನು ಸಾಬೀತುಪಡಿಸುವುದಕ್ಕಾದರೂ, ಕಾಲಕಾಲಕ್ಕೆ ಎದುರಾಗುವ ಪ್ರಭುತ್ವದ ಸವಾಲುಗಳಿಗೆ ಉತ್ತರ ನೀಡಬೇಕಾಗಿದೆ. ಅದಕ್ಕೆ ಸಹಕಾರಿಯಾಗಿ ಪ್ರೊಫೆಸರ್ ಕಟ್ಟಿ ಬೆಳೆಸಿದ ರೈತ ಸಂಘದೊಂದಿಗೆ ಗುರುತಿಸಿಕೊಂಡವರು; ಹೋರಾಟ, ಚಳವಳಿ, ಮುಷ್ಕರ, ಧರಣಿಗಳಲ್ಲಿ ಅವರೊಂದಿಗೆ ಹೆಜ್ಜೆ ಹಾಕಿದವರು; ಬದಲಾವಣೆ ಬಯಸುವ ಹೊಸ ತಲೆಮಾರಿನವರಿದ್ದಾರೆ. ಇವರೆಲ್ಲರೂ ಸ್ವಲ್ಪ ಸ್ವಪ್ರತಿಷ್ಠೆ, ಸ್ವಹಿತಾಸಕ್ತಿ, ಸ್ವಾರ್ಥವನ್ನು ಬಿಟ್ಟು ಒಂದಾದರೆ, ಒಕ್ಕೊರಲಿನಿಂದ ಭೂ ಕಾಯ್ದೆಯನ್ನು ವಿರೋಧಿಸಿದರೆ, ಅದಕ್ಕೆ ಕರ್ನಾಟಕವೇ ಮುಖ್ಯ ಭೂಮಿಕೆಯಾದರೆ- ಪ್ರೊಫೆಸರ್ ಜೀವಂತ, ಎಂದೆಂದಿಗೂ.



Friday, January 2, 2015

ಮಹಾಮಾತೆ ಸಾವಿತ್ರಿಬಾಯಿ ಫುಲೆ

ಸಾವಿತ್ರಿಬಾಯಿ ಫುಲೆ
ವೈಚಾರಿಕ ಚಿಂತನೆ ಮತ್ತು ತ್ಯಾಗ ಮನೋಭಾವನೆಯಿಂದ ಭಾರತೀಯ ಸಮಾಜವನ್ನು ಸಮೃದ್ಧಗೊಳಿಸಿದ ಸಾವಿತ್ರಿಬಾಯಿ ಫುಲೆಯವರು ದೇಶ ಕಂಡ ಮಹಾನ್ ಮಹಿಳೆ. ತಳವರ್ಗದ ಅನಕ್ಷರಸ್ಥ ಸಾವಿತ್ರಿಬಾಯಿ ಅಕ್ಷರ ಕಲಿತರು, ಶಿಕ್ಷಣ ವಂಚಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಕರುಣಾಮಯಿಯಾದರು. ಸಮಸಮಾಜದ ಕನಸು ಕಂಡು ಮಹಿಳೆಯರ ಸಬಲೀಕರಣಕ್ಕಾಗಿ ತಮ್ಮ ಬದುಕನ್ನೆ ಮೀಸಲಿಟ್ಟರು.
ಇಂತಹ ಮಹಾನ್ ಚೇತನ ಸಾವಿತ್ರಿಬಾಯಿ ಫುಲೆಯವರು ಹುಟ್ಟಿದ್ದು ಜನವರಿ 3, 1831ರಂದು, ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ ಎಂಬ ಗ್ರಾಮದಲ್ಲಿ. ಆಗಿನ ಕಾಲದ ಸಂಪ್ರದಾಯದಂತೆ ಆಡುವ ವಯಸ್ಸಿನಲ್ಲಿಯೇ- ಒಂಬತ್ತನೇ ವಯಸ್ಸಿನಲ್ಲಿಯೇ ಬಾಲಕಿ ಸಾವಿತ್ರಿಬಾಯಿಯ ಮದುವೆ 13ನೇ ವಯಸ್ಸಿನ ಜ್ಯೋತಿಬಾ ಫುಲೆಯೊಂದಿಗೆ ನೆರವೇರಿತು. ಆಗ ಮಹಾರಾಷ್ಟ್ರದಲ್ಲಿ ಪೇಶ್ವೆಯವರ ಆಡಳಿತವಿತ್ತು. ಫುಲೆ ಕುಟುಂಬ ಪೇಶ್ವೆಯವರಿಂದ ಸ್ವಲ್ಪ ಜಮೀನನ್ನು ದಾನವಾಗಿ ಪಡೆದು, ಆ ಜಮೀನಿನಲ್ಲಿ ಹೂವಿನ ತೋಟ ಮಾಡಿ, ಹೂವಿನ (ಫೂಲ್) ವ್ಯಾಪಾರ ಮಾಡುತ್ತಿದ್ದರಿಂದ ಇವರಿಗೆ ಫುಲೆ ಹೆಸರು ಅಂಟಿಕೊಂಡಿತು. 
ಮದುವೆಯಾಗಿ ಬಂದ ಸಾವಿತ್ರಿಬಾಯಿಗೆ ಅಕ್ಷರ, ಪುಸ್ತಕ, ಶಾಲೆಯ ಪರಿಚಯವಿರಲಿಲ್ಲ. ಆದರೆ ವಿದ್ಯೆ ಕಲಿಯಬೇಕೆಂಬ ಆಸೆ ಇತ್ತು. ಇವರ ಆಸೆಗೆ ಒತ್ತಾಸೆಯಾಗಿ ನಿಂತವರು ಆ ಕಾಲಕ್ಕೇ ಪ್ರಗತಿಪರ ಚಿಂತನೆಯ ಪತಿ ಜ್ಯೋತಿಬಾ ಫುಲೆಯವರು. ಇವರ ಪ್ರೋತ್ಸಾಹ ಮತ್ತು ಪ್ರೇರಣೆಯಿಂದ ಶಿಕ್ಷಣ ಪಡೆದ ಸಾವಿತ್ರಿಯವರು, ಆಗಿನ ಕಾಲದಲ್ಲಿಯೇ, ಅಂದರೆ ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಮೊದಲ ಶಿಕ್ಷಕಿಯ ತರಬೇತಿ ಪಡೆದು 17 ನೇ ವಯಸ್ಸಿಗೆ ಶಿಕ್ಷಕಿಯಾದರು. ಮಹಿಳೆ ಸಬಲಳಾಗಬೇಕೆಂದರೆ ಅವಳಿಗೆ ಶಿಕ್ಷಣವೆಂಬುದು ಅಗತ್ಯ ಸಾಧನವೆಂಬುದನ್ನು ಅನುಭವದಿಂದ ಅರಿತರು. ಆ ನಂತರ ಅದನ್ನು ಜಾರಿಗೆ ತಂದರು. ಶೈಕ್ಷಣಿಕ ಕ್ಷೇತ್ರದಲ್ಲಿ ದಾಖಲೆ ಬರೆದು, ಇತಿಹಾಸವನ್ನೇ ನಿರ್ಮಿಸಿದರು.
ಜ್ಯೋತಿಬಾ ಫುಲೆಯವರ ಜನಪರ ಕೆಲಸಗಳ ಜೊತೆ ಜೊತೆಗೇ ಹೆಜ್ಜೆ ಹಾಕಿದ ಸಾವಿತ್ರಿಬಾಯಿಯವರಿಗೆ ಮಕ್ಕಳಿಲ್ಲ ಎಂಬ ಕೊರಗು ಕಾಡಲೇ ಇಲ್ಲ. ಅದರ ಬದಲಿಗೆ ಅವರು ಸಮಾಜ ಸುಧಾರಣೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ, 1948 ರಲ್ಲಿ ಬಿಡೇವಾಡದಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ನಿರ್ಲಕ್ಷಿತ ಬಾಲಕಿಯರಿಗಾಗಿ `ಫೀಮೇಲ್‍ ನೇಟಿವ್ ಸ್ಕೂಲ್' ಎಂಬ ಶಾಲೆ ಆರಂಭಿಸಿದರು. ಈ ಶಾಲೆ ಕೂಡ ಅವಕಾಶವಂಚಿತ ಹೆಣ್ಣುಮಕ್ಕಳಿಗಾಗಿ, ದಿಕ್ಕೆಟ್ಟ ಸ್ತ್ರೀಯರ ಸುಧಾರಣೆಗಾಗಿ.
ಭಾರತೀಯ ಸಮಾಜವನ್ನು ಹಿಂದಕ್ಕೂ ಹೋಗದೆ, ಮುಂದಕ್ಕೂ ಹೋಗದೆ ಹಿಡಿದಿಟ್ಟುಕೊಂಡಿರುವ ಪಟ್ಟಭದ್ರರಿಗೆ, ಸಂಪ್ರದಾಯಸ್ಥರಿಗೆ ಸಾವಿತ್ರಿ ಬಾಯಿಯವರ ಸಮಾಜ ಸೇವಾ ಕಾರ್ಯಗಳು ಸಹಿಸಲಸಾಧ್ಯವಾದ ಸಂಕಟವನ್ನುಂಟುಮಾಡಿದವು. ಅದರಲ್ಲೂ ಹೆಣ್ಣುಮಕ್ಕಳಿಗೆ ಅಕ್ಷರಾಭ್ಯಾಸ, ಶಾಲೆ ಎಂದಾಕ್ಷಣ ಅವರ ಮೇಲ್ಜಾತಿಯ ವಿಕೃತ ಮನಸ್ಸು ಜಾಗೃತವಾಯಿತು. ಅದರ ಫಲವಾಗಿ ಸಾವಿತ್ರಿಬಾಯಿಯವರಿಗೆ ಹತ್ತು ಹಲವು ಕಷ್ಟ ಕೋಟಲೆಗಳು ಎದುರಾದವು. ಹೆಣ್ಣುಮಕ್ಕಳು ಶಾಲೆ ಕಲಿಯುವುದೇ ಕಷ್ಟವಾಗಿದ್ದ ಸಮಯದಲ್ಲಿ, ಆರಂಭದಲ್ಲಿ ಕೇವಲ 9 ಬಾಲಕಿಯರಿಂದ ಶುರುವಾದ ಶಾಲೆಗಳಿಗೆ ಶಿಕ್ಷಕಿಯರೇ ಸಿಗದಂತಾಗುತ್ತದೆ. ಸಾವಿತ್ರಿಬಾಯಿಯವರೇ ಶಿಕ್ಷಕಿಯಾಗಿ, ಅದನ್ನೂ ನಿಭಾಯಿಸಲು ಯತ್ನಿಸಿದಾಗ, ಅವರು ಶಾಲೆಗೆ ಹೋಗಿಬರುವ ಹಾದಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸುವುದು ಶುರುವಾಯಿತು. ಕೊಳೆತ ಮೊಟ್ಟೆ, ಸಗಣಿಯಿಂದ ಹೊಡೆಯುವುದು ದಿನನಿತ್ಯದ ಕಾಯಕವಾಯಿತು.
ಎದೆಗುಂದದ ಸಾವಿತ್ರಿಬಾಯಿ ಅದಕ್ಕೂ ಒಂದು ಮಾರ್ಗ ಕಂಡುಕೊಂಡರು. ಶಾಲೆಗೆ ಹೋಗುವಾಗ ಚೀಲದಲ್ಲಿ ಸೀರೆ ಇಟ್ಟುಕೊಂಡು, ಹಳೆ ಸೀರೆ ಉಟ್ಟುಕೊಂಡು ಹೋಗುತ್ತಿದ್ದರು. ಶಾಲೆಗೆ ಹೋದ ನಂತರ ಸೀರೆ ಬದಲಾಯಿಸಿಕೊಂಡು ಶೋಷಿತ ಸಮುದಾಯದ ಹೆಣ್ಣು ಮಕ್ಕಳಿಗೆ ಪಾಠ ಪ್ರವಚನದ ಕೆಲಸ ಮುಗಿಸಿದ ನಂತರ ಮತ್ತೆ ಸೀರೆ ಬಿಚ್ಚಿ ಚೀಲದಲ್ಲಿಟ್ಟುಕೊಂಡು, ಕೊಳೆಯಾದ ಸೀರೆಯನ್ನುಟ್ಟು ಮನೆಗೆ ಹಿಂದಿರುಗುತ್ತಿದ್ದರು. ಇದನ್ನೂ ಸಹಿಸದ ಮೇಲ್ಜಾತಿ ಜನ ಸಾವಿತ್ರಿಬಾಯಿಯವರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಿದರು. ಇಂತಹ ಕಷ್ಟ ಕೋಟಲೆಗಳನ್ನು ಸಹಿಸಿದ, ಕಠಿಣ ಹಾದಿಯನ್ನು ಸವೆಸಿದ ಸಾವಿತ್ರಿಬಾಯಿ  ಶೋಷಿತ ಸಮುದಾಯದವರಿಗೆ ಶಿಕ್ಷಣ ನೀಡಿ ಆದರ್ಶಪ್ರಾಯರಾದರು.
ಹಲವಾರು ಕಡೆಗಳಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಶಾಲೆಗಳನ್ನು ಆರಂಭಿಸುತ್ತಾ, ಶಿಕ್ಷಣದ ಮಹತ್ವವನ್ನು ಸಾರುತ್ತಾ ಸಾಗಿದ ಫುಲೆ ದಂಪತಿಗಳ ಸಮಾಜಮುಖಿ ಶೈಕ್ಷಣಿಕ ಸೇವೆಯನ್ನು ಗುರುತಿಸಿದ ಬ್ರಿಟಿಷ್ ಸರಕಾರ 1852 ರಲ್ಲಿ, ಈ ದಂಪತಿಗಳ ಕಾರ್ಯವನ್ನು ಶ್ಲಾಘಿಸಿ, ಸನ್ಮಾನಿಸಿತು. ಇದರಿಂದ ಇನ್ನಷ್ಟು ಉತ್ತೇಜಿತರಾದ ಸಾವಿತ್ರಿಬಾಯಿಯವರು, ಶಿಕ್ಷಣದ ಜೊತೆಗೆ `ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಆರಂಭಿಸಿದರು. ದುಡಿಯುವ ಮಹಿಳೆಯರಿಗಾಗಿ `ಮಹಿಳಾ ಸೇವಾ ಮಂಡಳಿ’ಯನ್ನು ಆರಂಭಿಸಿದರು. ಜಾತಿ ತಾರತಮ್ಯವನ್ನು ಹೋಗಲಾಡಿಸಲು `ಎಳ್ಳು ಬೆಲ್ಲ ಹಂಚುವ ಕಾರ್ಯಕ್ರಮ’ ಎಂಬ ಎಲ್ಲರೂ ಒಂದಾಗಿ ಬೆರೆಯುವ ಕಾರ್ಯಕ್ರಮ ರೂಪಿಸಿದರು. ಅಷ್ಟೇ ಅಲ್ಲದೆ ಆಗಿನ ಅರ್ಥವಿಲ್ಲದ ಅನಿಷ್ಟ ಪದ್ಧತಿಗಳಾದ ಸತಿಸಹಗಮನ ಪದ್ಧತಿ, ವಿಧವೆಯರ ಕೇಶಮುಂಡನ, ದೇವದಾಸಿ ಪದ್ಧತಿ, ಅಸ್ಪೃಶ್ಯತೆ ಆಚರಣೆ ಮುಂತಾದವುಗಳನ್ನು ಸಮಾಜದಿಂದ ಶಾಶ್ವತವಾಗಿ ಉಚ್ಛಾಟಿಸಲು ದಂಪತಿಗಳಿಬ್ಬರೂ ಕಂಕಣಬದ್ದರಾಗಿ ಹಗಲಿರುಳು ದುಡಿದರು. ಧಾರ್ಮಿಕ ಮೌಢ್ಯಾಚರಣೆಯಿಂದ ಸಮಾಜವನ್ನು ಮುಕ್ತಗೊಳಿಸಿದರು. ಜನರನ್ನು ಜಾಗೃತರನ್ನಾಗಿಸಿದರು.
ನಂತರ ಸಾವಿತ್ರಿಬಾಯಿಯವರು 1963ರಲ್ಲಿ `ಬಾಲಹತ್ಯಾ ಪ್ರತಿಬಂಧಕ ಗೃಹ’ಗಳನ್ನು ಆರಂಭಿಸಿದರು. ಈ ಗೃಹಗಳ ಮೂಲ ಉದ್ದೇಶ, ಅನೈತಿಕವಾಗಿ ಹುಟ್ಟಿದ ಮಕ್ಕಳ ಪಾಲನೆ ಪೋಷಣೆಯಾಗಿತ್ತು. ಆಗಿನ ಕಾಲದಲ್ಲಿ, ಭಾರತೀಯ ಭವ್ಯ ಸಂಸ್ಕೃತಿಯಲ್ಲಿ ಗಂಡ ಸತ್ತ ಮಹಿಳೆಯರು ಮರು ಮದುವೆಯಾಗುವಂತಿರಲಿಲ್ಲ. ಗಂಡನ ಚಿತೆಯೊಂದಿಗೆ ಸುಟ್ಟುಬಿಡುವ ಸತಿ ಪದ್ಧತಿ ಜಾರಿಯಲ್ಲಿತ್ತು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳಿಗೆ ವಯಸ್ಸಾದ ಗಂಡಸರ ಜೊತೆಗಿನ ವಿವಾಹ ಮಾಮೂಲಾಗಿತ್ತು. ಗಂಡಸರು ಕಾಯಿಲೆಯಾಗಿ, ವಯಸ್ಸಾಗಿ ಬೇಗ ಸಾಯುತ್ತಿದ್ದರು. ಲೋಕವನ್ನೇ ನೋಡದ ಹದಿಹರೆಯದ ಹೆಣ್ಣುಮಕ್ಕಳು ವಿಧವೆಯರಾಗುತ್ತಿದ್ದರು.
ಅದರಲ್ಲೂ ಬ್ರಾಹ್ಮಣ ಜಾತಿಯಲ್ಲಿ ವಿಧವೆಯರಾದರೆ ತಲೆ ಬೋಳಿಸಿಕೊಂಡು, ಹಲವರಿಂದ ನಿಂದನೆಗೊಳಗಾಗಿ ಕಣ್ಣೀರಿನಲ್ಲಿ ಕಾಲ ದೂಡಬೇಕಾಗಿತ್ತು. ಅವರ ಕಷ್ಟಗಳು ಅಲ್ಲಿಗೇ ಮುಗಿಯುತ್ತಿರಲಿಲ್ಲ. ಅವರ ಹತ್ತಿರದ ಸಂಬಂಧಿಗಳ, ಕುಟುಂಬದ ಸದಸ್ಯರ ಲೈಂಗಿಕ ತೃಷೆಗೆ ಈ ಅಮಾಯಕ ವಿಧವೆಯರು ಬಲಿಯಾಗುತ್ತಿದ್ದರು. ಬಲಾತ್ಕಾರಕ್ಕೊಳಗಾಗುತ್ತಿದ್ದರು. ಆ ಸಂಬಂಧದಲ್ಲಿ ಹುಟ್ಟಿದ ಮಕ್ಕಳು ಮುಂದೆ ಸಮಸ್ಯೆಯಾದಾಗ, ಆ ಮಕ್ಕಳ ಅಪ್ಪನಾಗಲು ಯಾರೂ ಒಪ್ಪದಿದ್ದಾಗ, ಅನಾಥವಾದಾಗ, ಸಮಾಜಕ್ಕೆ ಹೆದರಿ ಮುಗ್ಧ ಮಕ್ಕಳನ್ನು ಕೊಲ್ಲಲಾಗುತ್ತಿತ್ತು. ಇಂತಹ ಮಕ್ಕಳಿಗಾಗಿಯೇ ಸಾವಿತ್ರಿಬಾಯಿಯವರು ಬಾಲಹತ್ಯಾ ಪ್ರತಿಬಂಧಕ ಗೃಹಗಳನ್ನು ಸ್ಥಾಪಿಸಿ, ಆ ಮಕ್ಕಳ ಲಾಲನೆ ಪಾಲನೆಗಿಳಿದರು. ಅಷ್ಟೇ ಅಲ್ಲ, ಸಮಾಜದ ತಿರಸ್ಕಾರಕ್ಕೊಳಗಾದ 35 ಜನ ಬ್ರಾಹ್ಮಣ ಸ್ತ್ರೀಯರ ಬಾಣಂತನವನ್ನೂ ಮಾಡಿದರು. ಇಂತಹ ಸಂಬಂಧದಲ್ಲಿ ಹುಟ್ಟಿ ಅನಾಥನಾದ ಒಂದು ಮಗುವನ್ನು ದತ್ತುಪುತ್ರನನ್ನಾಗಿ ಸ್ವೀಕರಿಸಿ, ಆತನಿಗೆ ವಿದ್ಯೆ ಬುದ್ಧಿ ಕಲಿಸಿ ವೈದ್ಯನನ್ನಾಗಿಸಿದರು.
ಸಮಾಜದಲ್ಲಿದ್ದ ಜಾತಿ ತಾರತಮ್ಯವನ್ನು ಹೋಗಲಾಡಿಸಲು, ಮೇಲು-ಕೀಳು ಎಂಬ ಅಸಮಾನತೆಯನ್ನು ಅಳಿಸಿ, ಸಮಸಮಾಜ ನಿರ್ಮಿಸಲು ಅಂತರಜಾತಿ ವಿವಾಹಗಳನ್ನು ಬೆಂಬಲಿಸಿದರು. ಮರಾಠಿ ಭಾಷೆಯ ಮೊದಲ ಕವಯಿತ್ರಿ ಸಾವಿತ್ರಿಬಾಯಿಯವರು ಮಹಿಳೆಯರಿಗಾಗಿಯೇ `ಗೃಹಿಣಿ’ ಎಂಬ ಪತ್ರಿಕೆ ಹೊರತಂದು ಮಹಿಳೆಯ ಸಬಲೀಕರಣಕ್ಕಾಗಿ ಶ್ರಮಿಸಿದರು. 1876 ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಬಂದಾಗ, ಬರಪೀಡಿತ ಬಡವರಿಗಾಗಿ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿ, ಅನ್ನ ಆಹಾರ ನೀಡಿ ಸತ್ಕರಿಸಿದರು. 1897 ರಲ್ಲಿ ಮಹಾಮಾರಿ ಪ್ಲೇಗ್ ರೋಗ ಬಂದೆರಗಿದಾಗ ಎರಡು ಸಾವಿರ ಮಕ್ಕಳಿಗೆ ಶುಶ್ರೂಷೆ ನೀಡಿ ಸಂತೈಸಿದರು. ಆ ಮಕ್ಕಳ ಪಾಲನೆ ಪೋಷಣೆಯಲ್ಲಿ ಸ್ವತಃ ಸಾವಿತ್ರಿಯವರಿಗೇ ಪ್ಲೇಗ್ ತಗುಲಿತು. ಕೊನೆಗೆ ಮಾರ್ಚ್‍ 10, 1897ರಂದು ಆ ಮಹಾಮಾರಿ ರೋಗಕ್ಕೆ ಬಲಿಯಾದರು.
ಸಾವಿತ್ರಿಬಾಯಿ ಫುಲೆಯವರು ಮೇಲ್ಜಾತಿಯಲ್ಲಿ ಜನಿಸಿದವರಲ್ಲ, ಶ್ರೀಮಂತ ಕುಟುಂಬದಿಂದ ಬಂದವರೂ ಅಲ್ಲ. ಆದರೂ ಶೋಷಿತ ಮಹಿಳೆಯರಿಗಾಗಿ, ಮಾನವೀಯ ಸಮಾಜ ನಿರ್ಮಾಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಮಹಿಳೆಯರಿಗೆ ಶಿಕ್ಷಣ ನೀಡಿದರೆ ಸಬಲೀಕರಣ ಸಾಧ್ಯ ಎನ್ನುವುದನ್ನು ಸ್ವಾನುಭವದಿಂದ ಅರಿತಿದ್ದ ಅವರು ಆ ಹಾದಿಯಲ್ಲಿ ಯಶಸ್ಸನ್ನೂ ಕಂಡರು. ಹಾಗಾಗಿಯೇ ಇವತ್ತಿಗೂ ಮಹಾರಾಷ್ಟ್ರದಲ್ಲಿ ಸಾವಿತ್ರಿಬಾಯಿ ಫುಲೆ ಎಂದರೆ ಕ್ರಾಂತಿಯ ಕಿಡಿ ಹೊತ್ತಿಸಿದ ಮಹಾಮಾತೆ ಎಂದು ನೆನೆಯುತ್ತಾರೆ.
ಇದೆಲ್ಲ ನಡೆದದ್ದು ಕೇವಲ 150 ವರ್ಷಗಳ ಹಿಂದೆ. ದೇವರು ಧರ್ಮದ ಮೌಢ್ಯಾಚರಣೆ ಹೆಚ್ಚಾಗಿದ್ದ ಸಂದರ್ಭದಲ್ಲಿ. ಪಕ್ಕದ ಮಹಾರಾಷ್ಟ್ರದಲ್ಲಿ. 
ನಿಸ್ವಾರ್ಥ ಸೇವೆ ಸಲ್ಲಿಸಿದ, ಸರಳವಾಗಿ ಬದುಕಿದ, ಸಾಮಾನ್ಯರಾಗಿದ್ದುಕೊಂಡೇ ಅಸಾಮಾನ್ಯ ಸಾಧನೆ ಮಾಡಿದ ಇಂತಹವರು ಇವತ್ತಿಗೆ ನಮ್ಮ ಮಾದರಿಗಳಾಗಬೇಕು. ಇವರ ಜೀವನಗಾಥೆ ಶಾಲಾ ಕಾಲೇಜುಗಳ ಪಠ್ಯವಾಗಬೇಕು. ಅದು ಹೊಸ ಪೀಳಿಗೆಗೆ ಪ್ರೇರಕಶಕ್ತಿಯಾಗಬೇಕು. ಆ ಮೂಲಕ ದೇಶದ ಅಭಿವೃದ್ಧಿಯಾಗಬೇಕು. 
ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಫುಲೆ

Thursday, December 25, 2014

ಹೊಸ ಅಲೆಯ ಹರಿಕಾರ ಕೆ. ಬಾಲಚಂದರ್‌

ಕೆ. ಬಾಲಚಂದರ್
ಎಪ್ಪತ್ತರ ದಶಕದಲ್ಲಿ ತಮಿಳು ಚಿತ್ರರಂಗದ ದಿಕ್ಕು ದೆಸೆಗಳನ್ನೇ ಬದಲಿಸಿದ ಹೊಸ ಅಲೆಯ ಹರಿಕಾರ, ಬಣ್ಣದ ಲೋಕದ ಮಾಂತ್ರಿಕ ಕೆ. ಬಾಲಚಂದರ್‌ ಇನ್ನಿಲ್ಲ. 84 ವರ್ಷಗಳ ಬಾಲಚಂದರ್‌ ಕಳೆದ 3ರಂದು ಅನಾರೋಗ್ಯದ ನೆಪದಲ್ಲಿ ಚನ್ನೈನ ಖಾಸಗಿ ಆಸ್ಪತ್ರೆ ಸೇರಿದವರು ಹಿಂತಿರುಗಿ ಬರಲಿಲ್ಲ. ಅಸಂಖ್ಯಾತ ಅಭಿಮಾನಿಗಳ ಹಾರೈಕೆಯೂ ಫಲ ಕೊಡಲಿಲ್ಲ. 
ಬಾಲಚಂದರ್‌ ಸಾವು ತುಂಬಲಾರದ ನಷ್ಟ ಎಂದರೆ ಅದು ತುಂಬಾ ಸರಳವಾದ ಮಾತಾಗುತ್ತದೆ, ಕ್ಲೀಷೆಯಾಗುತ್ತದೆ. ಅವರನ್ನು ಅವರ ಉತ್ಕೃಷ್ಟ ಚಿತ್ರಗಳ ಮಟ್ಟದಲ್ಲಿಟ್ಟು ಅಳೆಯಬೇಕು. ಅವರು ಕೊಟ್ಟ ಕೊಡುಗೆಯನ್ನೇ ಅಳತೆಗೋಲಾಗಿಟ್ಟುಕೊಂಡು ಪರಾಮರ್ಶಿಸಬೇಕು. ದಕ್ಷಿಣ ಭಾರತದ ಚಿತ್ರಗಳನ್ನು ‘ಮದ್ರಾಸಿ’ ಎಂದು ಹೀಗಳೆಯುತ್ತಿದ್ದ ಸಂದರ್ಭದಲ್ಲಿ, ದಕ್ಷಿಣದ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ಇಡೀ ಇಂಡಿಯಾದ ಜನ ಬೆಕ್ಕಸ ಬೆರಗಿನಿಂದ ನೋಡುವಂತೆ ಮಾಡಿದ, ದಕ್ಷಿಣದ ಚಿತ್ರಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಕಲ್ಪಿಸಿಕೊಟ್ಟ ಕಲಾತಪಸ್ವಿ.
ಇಂತಹ ಬಾಲಚಂದರ್‌ ಹುಟ್ಟಿದ್ದು ತಮಿಳುನಾಡಿನ ನನ್ನಿಲಂ ಎಂಬ ಪುಟ್ಟ ಹಳ್ಳಿಯಲ್ಲಿ, ಬಡ ಬ್ರಾಹ್ಮಣ ಕುಟುಂಬದಲ್ಲಿ. ಜುಲೈ 9, 1930ರಲ್ಲಿ ಜನಿಸಿದ ಬಾಲಚಂದರ್‌, ಚಲನಚಿತ್ರ ಲೋಕದ ಮಹಾನ್‌ ವ್ಯಕ್ತಿ ಎನಿಸಿಕೊಳ್ಳಲು ಸವೆಸಿದ ದಾರಿ ಸಾಮಾನ್ಯದ್ದಲ್ಲ. ಅರಗಿಸಿಕೊಂಡ ಅರಿವು ಅಷ್ಟಿಷ್ಟಲ್ಲ. 
ಓದಿದ್ದು ಬಿಎಸ್ಸಿ, ಮಾಡಿದ್ದು ಅಕೌಂಟೆಂಟ್‌ ಜನರಲ್‌ ಕಚೇರಿಯಲ್ಲಿ ಗುಮಾಸ್ತ ಮತ್ತು ಕೆಲವು ಕಾಲ ಶಿಕ್ಷಕನ ವೃತ್ತಿ. ಈ ಕೆಲಸಗಳ ಬಿಡುವಿನಲ್ಲಿ ರಂಗಭೂಮಿಯ ಸೆಳೆತಕ್ಕೆ ಒಳಗಾದ ಬಾಲಚಂದರ್‌, ಹವ್ಯಾಸಿ ನಾಟಕಕಾರರಾಗಿ ‘ಮೇಜರ್‌ ಚಂದ್ರಕಾಂತ್‌’, ‘ಸರ್ವರ್‌ ಸುಂದರಂ’, ‘ನಾನಾಲ್‌’ ಇನ್ನು ಮುಂತಾದ ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿದರು. ಇವರ ನಾಟಕ ರಚನೆ, ನಿರ್ದೇಶನ ಜನರನ್ನು ಮುಟ್ಟಿ ಮಾತನಾಡಿಸಿದವು, ಪತ್ರಿಕೆಗಳಿಂದ ಪ್ರಶಂಸೆಗೊಳಪಟ್ಟವು, ಜನಪ್ರಿಯತೆ ಗಳಿಸಿದವು.  
ರಂಗಭೂಮಿಯಲ್ಲಿ ಪಳಗಿದ ಕೈ ಎನ್ನಿಸಿಕೊಳ್ಳುತ್ತಿದ್ದಂತೆ, 1964 ರಲ್ಲಿ, ತಮಿಳುನಾಡಿನ ಅಂದಿನ ಕಾಲದ ಖ್ಯಾತ ನಟ ಎಂ.ಜಿ. ರಾಮಚಂದ್ರನ್ ಅವರ ‘ದೈವ ತಾಯ್‌’ ಎಂಬ ಚಿತ್ರಕ್ಕೆ ಸಂಭಾಷಣೆ ಬರೆಯುವ ಅವಕಾಶ ಹುಡುಕಿಕೊಂಡು ಬಂದಿತು.
ಇಲ್ಲಿಂದ ಮುಂದಿನದು ಇತಿಹಾಸ- ಇವರ ವೈಯಕ್ತಿಕ ಬದುಕಿನಲ್ಲೂ, ತಮಿಳುನಾಡಿನ ಚಿತ್ರೋದ್ಯಮದಲ್ಲೂ.
ಅಲ್ಲಿಯವರೆಗೆ ಎಂಜಿಆರ್‌ ಮತ್ತು ಶಿವಾಜಿ ಗಣೇಶನ್‌ರ ಒಂದೇ ರೀತಿಯ ಸ್ಟೀರಿಯೋಟೈಪ್‌ ನಟನೆ ಮತ್ತು ಸಂಭಾಷಣೆಗಳನ್ನು ನೋಡಿ ಬೇಸತ್ತಿದ್ದ ತಮಿಳು ಚಿತ್ರೀದ್ಯಮ ಹೊಸ ಕಳೆಗೆ ಕಾತರಿಸಿತ್ತು. ತಮಿಳು ಚಿತ್ರರಸಿಕರು ಹೊಸ ಮುಖಗಳಿಗಾಗಿ ಹಾತೊರೆಯುತ್ತಿದ್ದರು. ಸಹಜವಾಗಿಯೇ ಹೊಸತನದಿಂದ ಕೂಡಿದ್ದ, ತಮ್ಮದೇ ಆದ ವಿಭಿನ್ನ ಧಾಟಿಗೆ ಹೆಸರಾಗಿದ್ದ, ವಿಶಿಷ್ಟ ಅಭಿರುಚಿ ಹೊಂದಿದ್ದ ಬಾಲಚಂದರ್‌ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಕತೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತು ಮೊದಲಿಗೆ ತಮ್ಮದೇ ನಾಟಕಗಳನ್ನು ಸಿನಿಮಾಗಳಿಗೆ ಅಳವಡಿಸಿ, 1965 ರಲ್ಲಿ ‘ನೀರ್ಕುಮಿಜಿ’ ಎಂಬ ಚಿತ್ರ ಮಾಡಿ ಯಶಸ್ವಿಯಾದರು.
ಆನಂತರ ‘ಅರಂಗೇಟ್ರಂ’ ಎಂಬ ಚಿತ್ರ ಮಾಡಿದರು. ಈ ಚಿತ್ರ ತಮಿಳುನಾಡಿನಲ್ಲಲ್ಲ, ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಿತು. ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹುಡುಗಿಯೊಬ್ಬಳು ಮನೆಯ ನಿರ್ವಹಣೆಗೋಸ್ಕರ ವೇಶ್ಯಾವೃತ್ತಿಗಿಳಿಯುವ ಕಥಾಹಂದರವುಳ್ಳ, ಮಹಿಳೆಯನ್ನೇ ಮುಖ್ಯ ಭೂಮಿಕೆಯಲ್ಲಿಟ್ಟು ಚಿತ್ರಿಸಿದ ಅರಂಗೇಟ್ರಂ, ತಮಿಳು ಚಿತ್ರರಂಗದಲ್ಲಿ ಕ್ರಾಂತಿಯ ಅಲೆಗಳನ್ನೆಬ್ಬಿಸಿತು. ನಮ್ಮ ಸುತ್ತಲಿನ ಪಾತ್ರಗಳನ್ನೇ ಪರದೆ ಮೇಲೆ ತಂದು ಬೆಚ್ಚಿ ಬೀಳಿಸಿ, ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆಶ್ಚರ್ಯಕರ ಸಂಗತಿ ಎಂದರೆ, ಹಣ ಗಳಿಕೆಯಲ್ಲಿ ಯಶಸ್ವಿ ಚಿತ್ರವಾಗಿ ಪ್ರಶಸ್ತಿಯನ್ನೂ ಗಳಿಸಿತು.
ಅಲ್ಲಿಂದ ಮುಂದಕ್ಕೆ ಬಾಲಚಂದರ್‌ ಅಪೂರ್ವ ರಾಗಂಗಳ್‌, ಅವರ್ಗಳ್‌, ಮನ್ಮಥ ಲೀಲೈ, ವರುಮಯಿನ್‌ ನಿರುಂ ಸಿವಪ್ಪು, ಸಿಂಧು ಭೈರವಿ, ಮರೋಚರಿತ್ರ, ಏಕ್‌ ದುಜೆ ಕೆ ಲಿಯೆ, ಅವಳ್‌ ಒರು ತೊಡರ್‌ ಕಥೈ, ತೂಂಗಾದೆ ತಂಬಿ ತೂಂಗಾದೆ, ತಣ್ಣೀರ್‌ ತಣ್ಣೀರ್‌, ಅಚ್ಚಮಿಲ್ಲೆ ಅಚ್ಚಮಿಲ್ಲೆ, ರುದ್ರವೀಣಾ ಹೀಗೆ ಹಲವಾರು ಅತ್ಯದ್ಭುತ ಚಿತ್ರಗಳನ್ನು ನಿರ್ಮಿಸಿದರು.
ಸಿನಿಮಾ ಎಂದರೆ ಲಾರ್ಜರ್‌ ದ್ಯಾನ್‌ ಲೈಫ್‌ ಎಂಬ ಮಾತಿದೆ. ಆದರೆ ಬಾಲಚಂದರ್‌ ಅವರ ಚಿತ್ರಗಳು ಅದಲ್ಲ. ಮಧ್ಯಮವರ್ಗವನ್ನು, ನಮ್ಮ ನಡುವಿನ ಪಾತ್ರಗಳನ್ನು ಬೆಳ್ಳಿಪರದೆಗೆ ತಂದು ನಮ್ಮನ್ನೇ ಬೆಚ್ಚಿ ಬೀಳಿಸುವಂಥವು. ಕೌಟುಂಬಿಕ ಕತೆ ಹೇಳುತ್ತಲೇ ಸಾಮಾಜಿಕ ಪರಿವರ್ತನೆಗೆ ಪ್ರೇರೇಪಿಸುವಂಥವು. ಒಂದೊಂದು ಚಿತ್ರಗಳು ಒಂದೊಂದು ಲೋಕವನ್ನೇ ತೆರೆದಿಡುವ, ನೋಡುಗರ ನರನಾಡಿಗಳಿಗೆ ಇಳಿದು ಭಾವಕೋಶವನ್ನು ಅಲ್ಲಾಡಿಸುವ, ಬುದ್ಧಿಗೆ ಸಾಣೆ ಹಿಡಿಯುವ, ಭಾವಭಿತ್ತಿಯಲ್ಲಿ ಶಾಶ್ವತವಾಗಿ ನೆಲೆಯೂರುವ ಚಿತ್ರಗಳು. ಈ ಚಿತ್ರಗಳು ಅಲ್ಲಿಯವರೆಗಿದ್ದ ಸಿನಿಮಾ ನೋಡುವ ಸ್ಥಾಪಿತ ನೋಟವನ್ನು, ಗ್ರಹಿಸುವ ಕ್ರಮವನ್ನು ಬದಲಿಸಿದವು. 
ಸೂಕ್ಷ್ಮಸಂವೇದನೆಯ ಬಾಲಚಂದರ್‌ ಸ್ತ್ರೀಕೇಂದ್ರಿತ ಕತೆಗಳನ್ನು, ಸಾಮಾಜಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಚಿತ್ರ ಮಾಡಿ ಗೆದ್ದವರು. ಕಾಮ-ಪ್ರೇಮದ ಕತೆ ಹೇಳುತ್ತಲೇ ನೈತಿಕ-ಅನೈತಿಕ ಗೆರೆಯನ್ನು ತೆಳುಗೊಳಸಿ ಜಿಜ್ಞಾಸೆಗೊಳಪಡಿಸಿದವರು. ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳೆಂಬ ಸಿದ್ಧಸೂತ್ರವನ್ನು ಕಿತ್ತೆಸೆದು, ಜನರ ಮನಸ್ಸಿಗೆ ಮುಟ್ಟುವ ತಟ್ಟುವ ಚಿತ್ರಗಳಿಗೆ ನಾಂದಿ ಹಾಡಿದವರು. 
ಇವರ ಚಿತ್ರಗಳ ಮೂಲಕ ಪರಿಚಯವಾದ ನಟನಟಿಯರಾದ ಕಮಲ್‌ ಹಾಸನ್‌, ರಜನೀಕಾಂತ್‌, ಜಯಸುಧಾ, ಸರಿತಾ, ಗೀತಾ, ಸುಹಾಸಿನಿ, ಮಾಧವಿ, ಎಸ್‌.ಪಿ. ಬಾಲಸುಬ್ರಮಣ್ಯಂ, ವಿವೇಕ್‌, ಪ್ರಕಾಶ್‌ ರೈ, ರಮೇಶ್‌ ಅರವಿಂದ್‌ ಸ್ಟಾರ್‌ಗಳಾಗಿ ಮೆರೆದು, ಚಿತ್ರರಂಗವನ್ನೇ ಆಳಿದರು. ಅದರಲ್ಲೂ ಕಮಲ್‌ ಹಾಸನ್‌, ರಜನೀಕಾಂತ್‌, ಪ್ರಕಾಶ್‌ ರೈ ಎಲ್ಲಾ ಕಾಲಕ್ಕೂ ಎಲ್ಲರೂ ಇಷ್ಟಪಡುವ ನಟರಾಗಿ ಈಗಲೂ ಚಾಲ್ತಿಯಲ್ಲಿದ್ದಾರೆ. ಒಂದು ರೀತಿಯಲ್ಲಿ ಕೆಬಿ, ಹಲವಾರು ನಕ್ಷತ್ರಗಳನ್ನು ಸೃಷ್ಟಿಸಿ, ಮೆರೆಸಿ ತಾನು ಮಾತ್ರ ತಣ್ಣಗಿದ್ದ ಬಾಲ ಚಂದಿರ.
ಕಮಲ್‌ ಹಾಸನ್‌, ರಜನೀಕಾಂತ್‌, ಪ್ರಕಾಶ್‌ ರೈರಂತಹ ನಟರನ್ನು, ಆ ಕಲಾವಿದರ ಪ್ರತಿಭೆಯನ್ನು ಪರಿಚಯಿಸಿದ್ದನ್ನು ಯಾರಾದರೂ ಹೊಗಳಿದರೆ, ಬಾಲಚಂದರ್‌, ‘‘ಅವರು ನಿಜವಾದ ಪ್ರತಿಭಾವಂತರು, ನನಗೆ ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’’ ಎನ್ನುವ ಸರಳ ಸೌಮ್ಯ ಸಜ್ಜನ.
ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಬಾಲಚಂದರ್‌, ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂ, ಸುಂದರ ಸ್ವಪ್ನಗಳು, ಎರಡು ರೇಖೆಗಳು ಸೇರಿದಂತೆ ಐದು ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ ಮನಸ್ಸನ್ನೂ ಗೆದ್ದರು. ಕವಿತಾಲಯ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯಿಂದ ಹಲವಾರು ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ, ಮಣಿರತ್ನಂ, ಎ.ಆರ್‌. ರಹಮಾನ್‌ರನ್ನು ಸ್ಟಾರ್‌ಗಳನ್ನಾಗಿಸಿದರು. ಅಷ್ಟೇ ಅಲ್ಲ, ಮದ್ರಾಸಿ ಎಂದು ಮೂಗು ಮುರಿಯುತ್ತಿದ್ದ ಉತ್ತರದವರ ಮುಂದೆ ‘ಏಕ್‌ ದುಜೆ ಕೆ ಲಿಯೆ’ ಎಂಬ ಹದಿವಯದವರ ಹಸಿ ಹಸಿ ಪ್ರೇಮ ಚಿತ್ರ ಮಾಡಿ ಅಭೂತಪೂರ್ವ ಯಶಸ್ಸು ಕಂಡರು. ಆ ಮೂಲಕ ಕಮಲ್, ಮಾಧವಿ ಮತ್ತು ಎಸ್‌.ಪಿ. ಬಾಲಸುಬ್ರಮಣ್ಯಂರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದರು.
ಇವರ ಸಾಧನೆಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಫಾಲ್ಕೆ ಪ್ರಶಸ್ತಿ ಬಾಲಚಂದರ್‌ರನ್ನು ಹುಡುಕಿಕೊಂಡು ಬಂದಿತ್ತು. ತಮಿಳುನಾಡಿನ ಅತ್ಯುನ್ನತ ಪ್ರಶಸ್ತಿಯಾದ ಕಲೈಮಾಮಣಿ ಪ್ರಶಸ್ತಿಯ ಜೊತೆಗೆ ಒಂಬತ್ತು ರಾಷ್ಟ್ರೀಯ ಪ್ರಶಸ್ತಿಗಳು, ಲೆಕ್ಕವಿಲ್ಲದಷ್ಟು ಫಿಲಂಫೇರ್‌ ಪ್ರಶಸ್ತಿಗಳು ಅರಸಿ ಬಂದು, ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.
ಚಲನಚಿತ್ರ ನಿರ್ದೇಶನ, ನಿರ್ಮಾಣ, ಚಿತ್ರಸಾಹಿತ್ಯ, ಟಿವಿ ಧಾರಾವಾಹಿ ನಿರ್ಮಾಣ ಹೀಗೆ ವಿವಿಧ ಚಿತ್ರ ಮಾಧ್ಯಮ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಸುಮಾರು 45 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕೆ. ಬಾಲಚಂದರ್‌, ಭಾರತೀಯ ಚಿತ್ರೋದ್ಯಮ ಕಂಡ ಸೃಜನಶೀಲ ವ್ಯಕ್ತಿತ್ವದ, ವೈಚಾರಿಕ ಚಿಂತನೆಯ ಅಪರೂಪದ ಚಿತ್ರಜೀವಿ.
ಕಮಲ್, ಕೆಬಿ ಮತ್ತು ರಜನಿ



Thursday, December 18, 2014

ಶತಮಾನೋತ್ಸವದ ಸಂಭ್ರಮದಲ್ಲಿ ಬಿ.ಕೆ. ಮರಿಯಪ್ಪ ವಸತಿ ನಿಲಯ

ಬಿ.ಕೆ. ಮರಿಯಪ್ಪನವರು ಮತ್ತವರ ಉಚಿತ ವಿದ್ಯಾರ್ಥಿ ನಿಲಯ
ಅದು ಸ್ವಾತಂತ್ರ್ಯಪೂರ್ವ ಕಾಲ, 1914. ಆಗ ವಿದ್ಯೆ ಎನ್ನುವುದು ಉಳ್ಳವರ ಸ್ವತ್ತಾಗಿತ್ತು, ಬಡವರಿಗೆ ಕೈಗೆಟುಕದ ಕುಸುಮವಾಗಿತ್ತು. ಅಂತಹ ದಿನಗಳಲ್ಲಿ ಬಡವರ ಬಗ್ಗೆ, ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಿ, ಅವರಿಗೆ ಉಚಿತ ವಿದ್ಯಾರ್ಥಿ ನಿಲಯವೊಂದನ್ನು ಸ್ಥಾಪಿಸಲು ಮುಂದಾದವರು ಸಾಮಾನ್ಯರಲ್ಲಿ ಸಾಮಾನ್ಯರಾದ ಬಿ.ಕೆ. ಮರಿಯಪ್ಪನವರು.
ಬೆಂಗಳೂರಿನ ಚಾಮರಾಜಪೇಟೆಯ ನಗರ್ತ ಲಿಂಗಾಯತ ಜಾತಿಗೆ ಸೇರಿದ, ವ್ಯಾಪಾರವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ, 35 ವರ್ಷ ವಯಸ್ಸಿನ ಬಿ.ಕೆ. ಮರಿಯಪ್ಪನವರು, ಆ ಕಾಲಕ್ಕೇ ಭಾರೀ ಮೊತ್ತ ಎನ್ನಬಹುದಾದ ತಮ್ಮ ಆಸ್ತಿಯನ್ನೆಲ್ಲ ಬಡ ಮಕ್ಕಳ ವಿದ್ಯಾರ್ಥಿ ನಿಲಯಕ್ಕಾಗಿ ಉದಾರವಾಗಿ ದಾನ ಮಾಡಿದರು. ಜಾತಿ ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಎಲ್ಲ ಜನಾಂಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟರು. ಇದರ ಫಲವಾಗಿ 1921ರ ಜುಲೈನಲ್ಲಿ 30 ವಿದ್ಯಾರ್ಥಿಗಳೊಂದಿಗೆ ಬಿ.ಕೆ. ಮರಿಯಪ್ಪ ವಿದ್ಯಾರ್ಥಿ ನಿಲಯ ವಿದ್ಯುಕ್ತವಾಗಿ ಕಾರ್ಯಾರಂಭಿಸಿತು.
ಈಗ ಆ ವಿದ್ಯಾರ್ಥಿ ನಿಲಯ ಶತಮಾನೋತ್ಸವದ ಸಂಭ್ರಮದಲ್ಲಿದೆ.   
ಸಾರ್ಥಕ ಸಾಧನೆಯ ಹಾದಿಯನ್ನೊಮ್ಮೆ ಹಿಂತಿರುಗಿ ನೋಡುವುದಾದರೆ, ಹಳೆಯ ಬೆಂಗಳೂರಿನ ಕುರುಹುಗಳನ್ನು ಈಗಲೂ ಉಳಿಸಿಕೊಂಡಿರುವ ಚಾಮರಾಜಪೇಟೆಯ ಜನನಿಬಿಡ ವ್ಯಾಪಾರ ವಹಿವಾಟುಗಳ ನಡುವೆಯೇ ಪುಟ್ಟ ಕಟ್ಟಡದಲ್ಲಿ 1914 ರಲ್ಲಿ ಆರಂಭವಾದ ವಿದ್ಯಾರ್ಥಿ ನಿಲಯ ಇಂದು ಬೆಟ್ಟದಂತೆ ಬೆಳೆದು, ನೂರು ವರ್ಷಗಳ ಪುಣ್ಯಕಾರ್ಯದ ಹಾದಿಯಲ್ಲಿ ಸಾವಿರಾರು ಬಡ ಬುದ್ಧಿವಂತ ವಿದ್ಯಾರ್ಥಿಗಳ ಬದುಕನ್ನು ಬಂಗಾರವನ್ನಾಗಿಸಿದೆ. ಬಡಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಬಿ.ಕೆ.ಮರಿಯಪ್ಪನವರ ಈ ಹೃದಯವಂತಿಕೆಯನ್ನು, ಸ್ವಾರ್ಥರಹಿತ ಸೇವಾಕಾರ್ಯವನ್ನು ಸ್ಮರಿಸುವ ಕಾಲದಲ್ಲಿ ಅವರಿಲ್ಲ. ಆದರೆ ಅವರು ಬಿಟ್ಟುಹೋದ ವಿದ್ಯಾರ್ಥಿ ನಿಲಯವಿದೆ. ಅಲ್ಲಿಂದ ಕಲಿತ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಇವತ್ತು ಅವರೆಲ್ಲ ಸಮಾಜದ ಉನ್ನತ ಸ್ಥಾನಕ್ಕೇರಿ ವಿದ್ಯಾರ್ಥಿ ನಿಲಯಕ್ಕೆ ಕೀರ್ತಿ ತಂದಿದ್ದಾರೆ. ತಮ್ಮನ್ನು ಪೊರೆದ, ಪೋಷಿಸಿದ ವಿದ್ಯಾರ್ಥಿ ನಿಲಯವನ್ನು ಮರೆಯದೆ, ಮತ್ತದೇ ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನು ಮನ ಧನವನ್ನು ಧಾರೆ ಎರೆಯುತ್ತ ಮರಿಯಪ್ಪನವರ ಸಾಮಾಜಿಕ ಸೇವೆಯನ್ನು ಮುಂದುವರೆಸುತ್ತ ಅವರ ಕನಸನ್ನು ಸಾಕಾರಗೊಳಿಸಿದ್ದಾರೆ. ಮರಿಯಪ್ಪನವರನ್ನು ಜನಮಾನಸದಲ್ಲಿ ಜೀವಂತವಾಗಿಟ್ಟಿದ್ದಾರೆ.
ಒಂದು ಸಂಸ್ಥೆ, ಅದರಲ್ಲೂ ಶೈಕ್ಷಣಿಕ ರಂಗದಲ್ಲಿಯ ದತ್ತಿ ಸಂಘಟನೆಯೊಂದು ಯಶಸ್ವಿ ನೂರು ವರ್ಷಗಳನ್ನು ಪೂರೈಸುವುದು ಹುಡುಗಾಟಿಕೆಯ ವಿಷಯವಲ್ಲ. ಸರಕಾರದ ನೆರವು ಅಪೇಕ್ಷಿಸದೇ ವಿವಾದವೂ ಇಲ್ಲದೇ ಶತಮಾನ ಪೂರೈಸಿದೆ ಬಿ.ಕೆ. ಮರಿಯಪ್ಪ ವಸತಿಗೃಹದ ಸೇವಾಕಾರ್ಯ ಸಾಮಾನ್ಯದ್ದಲ್ಲ. ವ್ಯಾವಹಾರಿಕ ಜಗತ್ತಿನಿಂದ ಬಂದ ಮರಿಯಪ್ಪನವರು ಬಡಮಕ್ಕಳಿಗೆ ಮಾಡಿದ ಅನ್ನದಾನದ ಹಿಂದೆ ಮಾನವೀಯ ಮಿಡಿತವಿದೆ. ಪ್ರತಿಫಲಾಪೇಕ್ಷೆ ನಿರೀಕ್ಷಿಸದ ನಿಸ್ವಾರ್ಥ ಸೇವೆ ಇದೆ. ಇಲ್ಲಿಂದ ಕಲಿತು ಹೋದವರು ಸಮಾಜಕ್ಕೆ ನೀಡಿದ ಸೇವೆ ಸಾರ್ಥಕತೆ ಕಂಡಿದೆ, ಕಾಣುತ್ತಲಿದೆ.
ಆ ಕಾರಣಕ್ಕಾಗಿಯೇ ಮಹದಾನಿ ಮರಿಯಪ್ಪನವರೆಂದೇ ಜನಜನಿತರಾಗಿರುವ ಇವರ ವಿದ್ಯಾರ್ಥಿ ನಿಲಯದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಬಂದ, ಎಲ್ಲ ಜಾತಿಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಉಚಿತ ಊಟ, ವಸತಿಯ ಜೊತೆಗೆ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಷ್ಟೇ ಅಲ್ಲ, ಆಂಧ್ರ, ತಮಿಳುನಾಡಿನ ವಿದ್ಯಾರ್ಥಿಗಳೂ ಇದ್ದು ಅವರವರ ಆರ್ಥಿಕ ಸ್ಥಿತಿ ಹಾಗೂ ಪಡೆದ ಅಂಕಗಳ ಆಧಾರದ ಮೇಲೆ ಅರ್ಹರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಿಜವಾದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದೇ ಇದರ ಉದ್ದೇಶವಾಗಿದೆ.
ಇಲ್ಲಿಗೆ ಭೌತಿಕವಾಗಿ ಬಡವರಾಗಿ ಬಂದವರು ಬೌದ್ಧಿಕವಾಗಿ ಶ್ರೀಮಂತರಾಗಿ ಸಮೃದ್ಧರಾಗಿ ಹೋದವರು ಲೆಕ್ಕವಿಲ್ಲದಷ್ಟು. ಅವರಲ್ಲಿ ಬಹಳ ಮುಖ್ಯರಾದವರು ಗಾಂಧಿವಾದಿ ಎಚ್. ನರಸಿಂಹಯ್ಯನವರು. ಇವರು ಮರಿಯಪ್ಪನವರ ವಿದ್ಯಾರ್ಥಿ ನಿಲಯದ ಮೊದಲ ಬ್ಯಾಚಿನ ವಿದ್ಯಾರ್ಥಿ. ಕಡು ಬಡತನದಲ್ಲಿ ಹುಟ್ಟಿದ ನರಸಿಂಹಯ್ಯನವರು ವಿದ್ಯಾಭ್ಯಾಸಕ್ಕಾಗಿ ಗೌರಿಬಿದನೂರಿನಿಂದ ಬೆಂಗಳೂರಿಗೆ ಬರಿಗಾಲಲ್ಲಿ ಕಾಲ್ನಡಿಗೆಯಲ್ಲಿ ಬಂದಿದ್ದರಂತೆ. ಇಲ್ಲಿ ಕಲಿತು ದೊಡ್ಡವರಾದ ನರಸಿಂಹಯ್ಯನವರು ಮುಂದೆ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ಲಕ್ಷಾಂತರ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಬದುಕಿದ್ದಷ್ಟು ದಿನವೂ ಸರಳ ಸಜ್ಜನಿಕೆಗೆ ಹೆಸರಾಗಿ, ತಾವು ಕಲಿತ ವಸತಿಗೃಹಕ್ಕೆ ಕೀರ್ತಿ ತಂದರು.
ಇದೇ ವಸತಿಗೃಹದ ಮತ್ತೊಬ್ಬ ವಿದ್ಯಾರ್ಥಿ, 88 ವರ್ಷದ ಎನ್. ಪುಟ್ಟರುದ್ರರು ಕೆಇಬಿ ನಿವೃತ್ತ ಅಧೀಕ್ಷಕ ಎಂಜಿನಿಯರ್. ನಿವೃತ್ತ ಜೀವನವನ್ನು ಹಾಯಾಗಿ ಕಳೆದು ಹಾಳು ಮಾಡಬಾರದೆಂದು ಈ ವಯಸ್ಸಿನಲ್ಲೂ ಹಾಸ್ಟೆಲ್‌ನ ವ್ಯವಸ್ಥಾಪಕ ಟ್ರಸ್ಟಿ ಆಗಿ, ಇಡೀ ವಸತಿಗೃಹದ ಉಸ್ತುವಾರಿ ಹೊತ್ತುಕೊಂಡು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲದೆ ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ವೈ.ಜಿ. ಕೃಷ್ಣಮೂರ್ತಿ, ರಾಜಸ್ತಾನ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಅಡಿವೆಪ್ಪ, ಮಾಜಿ ಮಂತ್ರಿಗಳಾದ ಟಿ. ಸಿದ್ದಲಿಂಗಯ್ಯ, ಯುನೆಸ್ಕೊದಲ್ಲಿ ಕಾರ್ಯನಿರ್ವಹಿಸಿದ ಟಿ.ಆರ್. ರಾಮಯ್ಯ ಸೇರಿದಂತೆ ಹಲವು ಖ್ಯಾತನಾಮರು ಮರಿಯಪ್ಪ ಹಾಸ್ಟೆಲ್‌ನ ಹಳೆಯ ವಿದ್ಯಾರ್ಥಿಗಳು.
‘ನಮ್ಮಲ್ಲಿ ಓದಿದವರಲ್ಲಿ ಬಹುತೇಕರು ಡಾಕ್ಟರ್ ಇಲ್ಲವೆ ಎಂಜಿನಿಯರ್‌ಗಳಾಗಿದ್ದು ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳ ಪೈಕಿ ಒಬ್ಬರು ಐಎಎಸ್ ಅಧಿಕಾರಿಯೂ ಆಗಿದ್ದಾರೆ’ ಎನ್ನುವ ಎನ್. ಪುಟ್ಟರುದ್ರರು, ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ 1946 ರಲ್ಲಿ ಸಂಘ ರಚಿಸಿಕೊಂಡಿದ್ದು, ಅವರೆಲ್ಲ ನಿಯಮಿತವಾಗಿ ವಸತಿಗೃಹಕ್ಕೆ ಬಂದುಹೋಗುವುದು, ವಾರ್ಷಿಕೋತ್ಸವದಂದು ಎಲ್ಲರೂ ಒಟ್ಟಾಗಿ ಕಲೆಯುವುದು, ಎಲ್ಲವನ್ನೂ ಅತಿ ಉತ್ಸಾಹದಿಂದ ಬಣ್ಣಿಸುತ್ತಾರೆ. ಹಾಗೆಯೇ ವಿದ್ಯಾರ್ಥಿನಿಲಯದ ಮತ್ತೊಬ್ಬ ಹಳೆಯ ವಿದ್ಯಾರ್ಥಿ ಕೆ. ದಿನೇಶರ ಕೊಡುಗೆಯನ್ನು ಬಾಯ್ತುಂಬ ಹಾಡಿ ಹೊಗಳುತ್ತಾರೆ.
ಹಳೆಯ ವಿದ್ಯಾರ್ಥಿಗಳ ಪೈಕಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಕೆ. ದಿನೇಶ್, ತಾವು ಕಲಿತ ವಸತಿಗೃಹದ ಋಣ ತೀರಿಸಲು, ಸುಮಾರು ಒಂದು ಕೋಟಿ ರೂಪಾಯಿಗಳನ್ನು ವಿದ್ಯಾರ್ಥಿನಿಲಯಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಇದರಿಂದ ಮರಿಯಪ್ಪನವರ ವಿದ್ಯಾರ್ಥಿನಿಲಯ ಅಲ್ಲಿಯವರೆಗೆ ಬರೀ ಗಂಡು ಮಕ್ಕಳ ವಿದ್ಯಾಭ್ಯಾಸ, ವಸತಿ, ಊಟಕ್ಕೆ ನೆರವಾಗುತ್ತಿದ್ದುದು, ಈ ಬೃಹತ್ ಮೊತ್ತದ ದೇಣಿಗೆಯಿಂದ ವಿದ್ಯಾರ್ಥಿನಿಯರ ವಸತಿಗೃಹ ನಿರ್ಮಾಣದತ್ತ ಗಮನ ಹರಿಸುವಂತಾಯಿತು. ಈ ಬಗ್ಗೆ ಮಾತನಾಡಿದ ವಸತಿನಿಲಯದ ಹಳೆಯ ವಿದ್ಯಾರ್ಥಿಗಳು ಮತ್ತು ಈಗ ಟ್ರಸ್ಟಿಗಳಲ್ಲೊಬ್ಬರಾದ ರಾಜಶೇಖರ್, ‘ವಿದ್ಯಾರ್ಥಿನಿಯರಿಗಾಗಿ ವಸತಿನಿಲಯ ಆರಂಭಿಸಬೇಕೆಂದುಕೊಂಡಾಗ ಅದಕ್ಕೆ ದಿನೇಶ್ ಹಣಕಾಸಿನ ನೆರವು ನೀಡಿದರು. ಮೊದಲಿಗೆ ಬಾಡಿಗೆ ಕಟ್ಟಡದಲ್ಲಿ 10 ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಟ್ಟೆವು. ಆ ನಂತರ ನಮ್ಮದೇ ಸ್ವಂತ ಕಟ್ಟಡ ಕಟ್ಟಿದೆವು. ಅದೀಗ 45 ವಿದ್ಯಾರ್ಥಿನಿಯರನ್ನು ಒಳಗೊಂಡ ಬಹುದೊಡ್ಡ ವಸತಿಗೃಹವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ’ ಎನ್ನುತ್ತಾರೆ.
ಹಾಗೆಯೇ ಶತಮಾನೋತ್ಸವ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲು ಮಕ್ಕಳಿಂದ, ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ವೃದ್ಧರಿಗೆ ಸಾಮಾಜಿಕ ಭದ್ರತೆ ಒದಗಿಸುವ, ವೃದ್ಧಾಶ್ರಮ ಸ್ಥಾಪಿಸುವುದು ಸಂಸ್ಥೆಯ ಮಹದಾಸೆಯಾಗಿತ್ತು. ಇದರ ಸೇವಾಕಾರ್ಯಕ್ಕೆ ಒತ್ತಾಸೆಯಾಗಿ ನಿಂತವರು ಇದೇ ವಿದ್ಯಾರ್ಥಿನಿಲಯದ ಹಳೆಯ ವಿದ್ಯಾರ್ಥಿ ಡಾ. ರಾಮಯ್ಯ. ಇವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ಜಾಲ ಎಂಬಲ್ಲಿ ಸುಮಾರು ಅರ್ಧ ಎಕರೆ ಜಮೀನನ್ನು ವೃದ್ಧಾಶ್ರಮಕ್ಕಾಗಿ ಉದಾರವಾಗಿ ನೀಡಿದ್ದಾರೆ. ‘ಇದೇ ಜಾಗದಲ್ಲಿ ಎರಡು ಕೋಟಿ ವೆಚ್ಚದಲ್ಲಿ 20 ವೃದ್ಧರಿಗೆ ವೃದ್ಧಾಶ್ರಮ ಆರಂಭಿಸುವ ಉದ್ದೇಶ ಹೊಂದಲಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ, ಆರು ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ’ ಎನ್ನುತ್ತಾರೆ ರಾಜಶೇಖರ್.
ಮುಂದುವರೆದು, ‘ಇಲ್ಲಿಯವರೆಗೆ ಸುಮಾರು ಎರಡು ಸಾವಿರ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಈ ವಸತಿನಿಲಯದ ಅನುಕೂಲ ಪಡೆದವರಿದ್ದಾರೆ. ಇವರಲ್ಲಿ 700ರಿಂದ 800 ಜನ ಈಗಲೂ ಈ ವಿದ್ಯಾರ್ಥಿನಿಲಯದ ಸಂಪರ್ಕದಲ್ಲಿದ್ದಾರೆ. ಮಿಕ್ಕ ಒಂದು ಸಾವಿರದಷ್ಟು ಎಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ತಿಳಿಯದು. ಇಲ್ಲಿ ಪದವಿ, ಸ್ನಾತಕೋತ್ತರ, ಎಂಬಿಎ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ನಮಗೆ ರೂಮುಗಳ ಮಿತಿ ಇರುವುದರಿಂದ ವರ್ಷಕ್ಕೆ 75 ಹುಡುಗರು, 45 ಹುಡುಗಿಯರನ್ನಷ್ಟೇ ತೆಗೆದುಕೊಳ್ಳುತ್ತೇವೆ. ಅದರಲ್ಲೂ ತೀರಾ ಬಡ ವಿದ್ಯಾರ್ಥಿ ಎಂದು ಕಂಡುಬಂದರೆ, ಅವರಿಗೆ ಫೀ ಕೂಡ ನಮ್ಮ ವಸತಿನಿಲಯದಿಂದಲೇ ಭರಿಸುತ್ತೇವೆ. ಕೆಲ ಬ್ರೈಟ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡ ಕೊಡಮಾಡುತ್ತೇವೆ. ನನ್ನ ಪ್ರಕಾರ ಮರಿಯಪ್ಪನವರು ಸ್ವಾತಂತ್ರ್ಯಪೂರ್ವದ ಜಾತ್ಯತೀತ ಮನಸ್ಸುಳ್ಳ, ಅದನ್ನು ಕಾರ್ಯರೂಪಕ್ಕೆ ತಂದ ಬಹಳ ಅಪರೂಪದ ವ್ಯಕ್ತಿ. ಬೆಂಗಳೂರಿನಲ್ಲಿ ಆಯಾಯ ಜಾತಿ ಜನರ ಉಚಿತ ವಸತಿ ನಿಲಯಗಳುಂಟು. ಆದರೆ ಎಲ್ಲ ಜಾತಿಯ ಬಡವರಿಗೆ ಇರುವುದು ಇದೊಂದೇ ಹಾಸ್ಟೆಲ್’ ಎಂದು ಮರಿಯಪ್ಪನವರ ಗುಣಗಾನಕ್ಕೆ ಇಳಿಯುತ್ತಾರೆ ರಾಜಶೇಖರ್.
ಹಣ ಗಳಿಸುವ ಹಾದಿಗೆ ಬಿದ್ದು ಆಸ್ತಿ ವೃದ್ಧಿಸುವುದೇ ಮಹದುದ್ದೇಶವೆನ್ನುವ ವ್ಯಾಪಾರಸ್ಥರು ಸಾಮಾನ್ಯವಾಗಿ ಸಾಮಾಜಿಕ ಸಮಸ್ಯೆಗಳತ್ತ ಗಮನ ಹರಿಸುವುದು ಕಡಿಮೆ. ಅದರಲ್ಲೂ ಬಡವರು, ಅಸಹಾಯಕರು, ಶೋಷಿತರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಕಳಕಳಿ ಮತ್ತು ಪ್ರೀತಿಯನ್ನಿಟ್ಟುಕೊಳ್ಳುವುದು ಇನ್ನೂ ವಿರಳ. ಆದರೆ ಚಾಮರಾಜಪೇಟೆಯ ವ್ಯಾಪಾರಿ ಬಿ.ಕೆ. ಮರಿಯಪ್ಪನವರು ಇದಕ್ಕೆ ಅಪವಾದ. ಮದುವೆಯಾಗಿ ಮಡದಿಯನ್ನು ಕಳೆದುಕೊಂಡಿದ್ದ, ಮಕ್ಕಳಿಲ್ಲದ ಮರಿಯಪ್ಪನವರು 8.3.1914 ರಂದು ತಮ್ಮ ಸಮಸ್ತ ಆಸ್ತಿಯನ್ನು ವಿದ್ಯಾರ್ಥಿ ನಿಲಯಕ್ಕಾಗಿ ವಿಲ್ ಮಾಡಿದರು. ಕುತೂಹಲಕರ ಸಂಗತಿ ಎಂದರೆ ಆ ವಿಲ್ ಮಾಡಿ ನಾಲ್ಕೇ ದಿನಕ್ಕೆ, 12.3.1914 ರಂದು ಮರಿಯಪ್ಪನವರು ಇಹಲೋಕ ತ್ಯಜಿಸಿದ್ದರು.
ಸಾವನ್ನು ಮೊದಲೇ ಗ್ರಹಿಸಿದ, ಸತ್ತ ನಂತರವೂ ಜನರ ಮನದಲ್ಲಿ ಬದುಕಿದ, ನೂರು ವರ್ಷಗಳ ನಂತರವೂ ಸ್ಮರಣಿಕೆಯ ವ್ಯಕ್ತಿಯಾದ ಮರಿಯಪ್ಪನವರು ನೂರ್ಕಾಲ ನೆನಪಿನಲ್ಲುಳಿಯುವ ಕೆಲಸವನ್ನೇ ಮಾಡಿಹೋದರು. ತಮ್ಮನ್ನು ಸಾಕಿದ ಸಲಹಿದ ಸಮಾಜಕ್ಕೆ ಋಣ ತೀರಿಸಿದರು. ಮರಿಯಪ್ಪನವರ ಸಾಮಾಜಿಕ ಕಳಕಳಿ, ಕಾಳಜಿ, ಬಡವರ ಬಗೆಗಿನ ಪ್ರೀತಿ ಮತ್ತೊಂದಿಷ್ಟು ಜನರಿಗೆ ಮಾದರಿಯಾಗಲಿ. ಇಂತಹವರ ಸಂತತಿ ಇನ್ನಷ್ಟು ಹೆಚ್ಚಾಗಲಿ. ಒಳ್ಳೆಯವರು ಇನ್ನೂ ಇದ್ದಾರೆ ಎಂಬುದು ಮತ್ತೆ ಮತ್ತೆ ಸಾಬೀತಾಗಲಿ.

  




Saturday, November 8, 2014

ಕಲರ್‌ಫುಲ್ ಕಸ್ತೂರಿ ನಿವಾಸ

‘ಕಸ್ತೂರಿ ನಿವಾಸ’ ಚಿತ್ರದಲ್ಲಿ ರಾಜ್
ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಎಂದಾಕ್ಷಣ ರಂಗುರಂಗಿನ ಜಗತ್ತು ಕಣ್ಮುಂದೆ ಕುಣಿಯುತ್ತದೆ. ಕಪ್ಪುಬಿಳುಪಿನ ಚಿತ್ರಗಳ ಕಾಲವೂ ಒಂದಿತ್ತು ಎನ್ನುವುದನ್ನು ಮರೆ ಮಾಚಿಸುವಷ್ಟರಮಟ್ಟಿಗೆ ಇವತ್ತು ಬೆಳ್ಳಿಪರದೆಯನ್ನು ಬಣ್ಣ ತುಂಬಿಕೊಂಡಿದೆ. ಇಂತಹ ಬಣ್ಣದ ಬೆರಗಿನ ಕಾಲದಲ್ಲಿಯೇ ಹಾಲಿವುಡ್‌ ಚಿತ್ರಲೋಕ ಕಪ್ಪುಬಿಳುಪಿನ ಕಾಲಕ್ಕೆ ಜಾರಿತ್ತು. 1927ರ ಕಾಲಘಟ್ಟದ ಚಿತ್ರರಂಗದ ಜನಪ್ರಿಯ ನಾಯಕನಟನ ದುರಂತ ಕಥಾನಕವನ್ನೇ ವಸ್ತುವನ್ನಾಗಿಸಿಕೊಂಡು, 2011 ರಲ್ಲಿ ‘ದಿ ಆರ್ಟಿಸ್ಟ್’ ಎಂಬ ಚಿತ್ರವನ್ನು, ಅದೂ ಆ ಕಾಲದ ಅಪ್ಪಟ ಕಪ್ಪುಬಿಳುಪಿನಲ್ಲಿಯೇ ನಿರ್ಮಿಸಿತ್ತು. ಆ ಮೂಲಕ ಚಿತ್ರರಸಿಕರನ್ನು ಮತ್ತೆ ಆ ಕಾಲಕ್ಕೆ ಕರೆದೊಯ್ದಿತ್ತು. ಚಕಿತಗೊಳಿಸುವ ಕಪ್ಪುಬಿಳುಪಿನ ಚೆಲುವನ್ನು ಆಸ್ವಾದಿಸಲು ಅವಕಾಶ ಮಾಡಿಕೊಟ್ಟಿತ್ತು.
ಹೊಸ ಪ್ರಯೋಗಕ್ಕೆ ಸದಾ ತೆರೆದುಕೊಳ್ಳುವ ಹಾಲಿವುಡ್‌ ಚಿತ್ರರಂಗ ಈ ಕಾಲದಲ್ಲಿ ನಿಂತು ಆ ಕಾಲವನ್ನು ಧ್ಯಾನಿಸಿತ್ತು, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನೂ ದಕ್ಕಿಸಿಕೊಂಡಿತ್ತು. ಆದರೆ, ಇಲ್ಲಿ, ಕನ್ನಡ ಚಿತ್ರರಂಗದಲ್ಲಿ ಅದು ತಿರುಗು ಮುರುಗಾಗಿದೆ. ಕಪ್ಪುಬಿಳುಪಿನ ಕಾಲದ ಚಿತ್ರವನ್ನು ಬಣ್ಣಕ್ಕೆ ಪರಿವರ್ತಿಸುವ ಪ್ರಯತ್ನ ಕನ್ನಡದಲ್ಲಾಗುತ್ತಿದೆ. ಹಾಗಂತ ಇಲ್ಲಿ ಹೊಸ ಚಿತ್ರ ನಿರ್ಮಾಣವಲ್ಲ, ಹಳೆಯ ಅಪರೂಪದ ಕಪ್ಪುಬಿಳುಪಿನ ಚಿತ್ರಕ್ಕೆ ವರ್ಣ ಸ್ಪರ್ಶ ನೀಡುವ ಕೆಲಸ ನಡೆದಿದೆ.
ಕಪ್ಪುಬಿಳುಪಿನಲ್ಲಿ ತಯಾರಾದ ರಾಜ್‌ಕುಮಾರ್‌ ಅಭಿನಯದ ‘ಸತ್ಯ ಹರಿಶ್ಚಂದ್ರ’ ಸಿನಿಮಾವನ್ನು ಕನ್ನಡಿಗರು ಕಣ್ತುಂಬಿಕೊಂಡಿದ್ದಾಗಿದೆ. ಈಗ ‘ಕಸ್ತೂರಿ ನಿವಾಸ’ ಚಿತ್ರದ ಸರದಿ. 1971ರಲ್ಲಿ ತೆರೆಕಂಡ ರಾಜ್‌ ಜಯಂತಿ, ಆರತಿ, ಅಶ್ವಥ್‌ ಅಭಿನಯದ ಈ ಚಿತ್ರ, 43 ವರ್ಷಗಳ ನಂತರ ಬಣ್ಣದಲ್ಲಿ ಬಿಡುಗಡೆಯಾಗಿದೆ.
‘ಕಸ್ತೂರಿ ನಿವಾಸ’ ಚಿತ್ರವು ಬೆಂಕಿಪೊಟ್ಟಣ (ಡವ್‌ ಬ್ರ್ಯಾಂಡ್ ಮ್ಯಾಚ್ ಬಾಕ್ಸ್) ಉದ್ಯಮಿಯ ದುರಂತ ಪ್ರೇಮದ ಕಥಾವಸ್ತುವನ್ನು ಒಳಗೊಂಡ, ದೊರೈ-ಭಗವಾನ್‌ ಜೋಡಿಯ ಸಮರ್ಥ ನಿರ್ದೇಶನದ, ರಾಜ್‌ ಅವರ ಅಮೋಘ ಅಭಿನಯದ ಅದ್ಭುತ ಚಿತ್ರ.
ಕಸ್ತೂರಿ ನಿವಾಸದ ಸಂಕ್ಷಿಪ್ತ ಕಥೆ ಹೀಗಿದೆ... ಚಿತ್ರದ ಕಥಾನಾಯಕ ರವಿ ಅಮೆರಿಕಾದಲ್ಲಿ ಬಿಜಿನೆಸ್‌ ಕೋರ್ಸ್‌ ಮುಗಿಸಿ ಸ್ವದೇಶಕ್ಕೆ ಹಿಂತಿರುಗುತ್ತಾನೆ. ಡವ್‌ ಬ್ರ್ಯಾಂಡ್ ಮ್ಯಾಚ್ ಬಾಕ್ಸ್ ಫ್ಯಾಕ್ಟರಿ ಸ್ಥಾಪಿಸುತ್ತಾನೆ. ತನಗರಿವಿಲ್ಲದೆ ತನ್ನ ಕಾರ್ಯದರ್ಶಿ ಲೀಲಾಳ (ಜಯಂತಿ) ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಆದರೆ ಆಕೆ ಕಾರಣಾಂತರಗಳಿಂದ ರವಿಯ ಮಿತ್ರ ಚಂದ್ರುನನ್ನು ವರಿಸುತ್ತಾಳೆ. ರವಿ ಸಹ ಬೇರೊಬ್ಬರನ್ನು ವಿವಾಹವಾಗಿ, ಅಪಘಾತವೊಂದರಲ್ಲಿ ಹೆಂಡತಿ, ಮಗಳನ್ನು ಕಳೆದುಕೊಂಡಿರುತ್ತಾನೆ. ಈ ನಡುವೆ ಅವರ ಬೆಂಕಿಪೊಟ್ಟಣ ಕಾರ್ಖಾನೆ ನಷ್ಟಕ್ಕೆ ಸಿಲುಕುತ್ತದೆ. ಇದಕ್ಕೆ ಚಂದ್ರು ಸಹ ಪರೋಕ್ಷವಾಗಿ ಸಹಕರಿಸುತ್ತಾನೆ. ಇಂತಹ ಒಂದು ಸಂದಿಗ್ಧ ಸಮಯದಲ್ಲಿ ಲೀಲಾ ಮತ್ತೊಮ್ಮೆ ರವಿ ಬದುಕಿನಲ್ಲಿ ಬರುತ್ತಾಳೆ. ಲೀಲಾಳ ಮಗಳನ್ನು ರವಿ ಬಹಳ ಹಚ್ಚಿಕೊಳ್ಳುತ್ತಾನೆ. ಏರಿಳಿತಗಳಲ್ಲಿ ಸಾಗುವ ರವಿಯ ಬದುಕು ಕೊನೆಗೆ ಏನಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.
ಈ ಚಿತ್ರದ ಕತೆಯ ಕತೆಯೇ ಕುತೂಹಲಕರವಾಗಿದೆ. ಅಂದಿನ ತಮಿಳು ಸೂಪರ್‌ ಸ್ಟಾರ್ ಶಿವಾಜಿ ಗಣೇಶನ್‌ರನ್ನು ಮನಸ್ಸಿನಲ್ಲಿಟ್ಟುಕೊಂಡು ಬಾಲಸುಬ್ರಹ್ಮಣ್ಯಂ ಒಂದು ಕಥೆ ರಚಿಸಿದ್ದರು. ಆ ಕಥೆಗೆ ಕಸ್ತೂರಿ ನಿವಾಸಂ ಎಂದು ಹೆಸರಿಟ್ಟಿದ್ದರು. ಈ ಕಥೆಯ ಹಕ್ಕನ್ನು  ನೂರ್‌ ಸಾಬ್‌ ಖರೀದಿಸಿ, ಶಿವಾಜಿ ಗಣೇಶನ್‌ರನ್ನು ಕೇಳಿದಾಗ, ದುರಂತ ನಾಯಕನ ಈ ಕಥೆಯನ್ನು ತಮಿಳುನಾಡು ಜನತೆ ಸ್ವೀಕರಿಸುವುದು ಕಷ್ಟವೆಂದು ಭಾವಿಸಿ ನಿರಾಕರಿಸಿದರು. ಆ ನಂತರ ಆ ಕತೆ ಚಿತ್ರಸಾಹಿತಿ ಚಿ. ಉದಯಶಂಕರ್‌ ಮತ್ತು ರಾಜ್‌ ಸೋದರ ವರದರಾಜ್‌ ಅವರ ಕಿವಿಗೆ ಬಿದ್ದು, ದೊರೈ-ಭಗವಾನ್‌ರೊಂದಿಗೆ ಪ್ರಸ್ತಾಪವಾಗಿ, ರಾಜ್‌ ನಟಿಸಲು ಒಪ್ಪುವುದಾದರೆ ತಾವು ಚಿತ್ರ ಮಾಡಲು ಸಿದ್ಧ ಎನ್ನುವಲ್ಲಿಗೆ ಬಂದು ನಿಂತಿತು. ರಾಜ್‌ ಕಥೆ ಕೇಳಿ, ಇದು ಶಿವಾಜಿ ಗಣೇಶನ್‌ರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಮೊದಲಿಗೆ ಹಿಂಜರಿದವರು, ಆ ನಂತರ ವರದರಾಜ್‌ರ ಒತ್ತಡಕ್ಕೆ ಮಣಿದು, ನಟಿಸಲು ಒಪ್ಪಿದರು. ತಮಿಳಿನ ಕಸ್ತೂರಿ ನಿವಾಸಂ ಕನ್ನಡದ ‘ಕಸ್ತೂರಿ ನಿವಾಸ’ವಾಯಿತು. ಕನ್ನಡ ಚಿತ್ರರಂಗದಲ್ಲಿ ಎಂದೆಂದೂ ಮರೆಯದ ಮಹೋನ್ನತ ಚಿತ್ರವಾಗಿ ಅಜರಾಮರವಾಗಿ ಉಳಿಯಿತು.
ಆಶ್ಚರ್ಯವೆಂದರೆ, ಕಸ್ತೂರಿ ನಿವಾಸ ಕನ್ನಡದಲ್ಲಿ ಸೂಪರ್‌ ಹಿಟ್‌ ಚಿತ್ರವೆನ್ನಿಸಿಕೊಂಡ ಮೇಲೆ ಶಿವಾಜಿ ಗಣೇಶನ್‌ರಿಗೆ ಜ್ಞಾನೋದಯವಾಯಿತು. ತಮಿಳಿಗೆ ಹಕ್ಕು ಖರೀದಿಸಿ, ‘ಅವನ್‌ದಾನ್‌ ಮನಿದನ್‌’ ಚಿತ್ರ ಮಾಡಿ ಯಶಸ್ವಿಯೂ ಆದರು. ಆನಂತರ ಅದು ಹಿಂದಿಯಲ್ಲಿ, ಸಂಜೀವ್‌ಕುಮಾರ್‌ ನಾಯಕನಟನಾಗಿ ‘ಶಾಗಿರ್ದ್‌’ ಆಗಿ, ಕನ್ನಡದ ಕಸ್ತೂರಿ ಅಲ್ಲಿಯೂ ಪಸರಿಸಿತು.
‘ಕಸ್ತೂರಿ ನಿವಾಸ’ ಚಿತ್ರ ಎಷ್ಟು ಜನಪ್ರಿಯವೋ, ಅದರ ಹಾಡುಗಳಿಗೂ ಅಷ್ಟೇ ಜನಪ್ರಿಯ. ಜಿ.ಕೆ. ವೆಂಕಟೇಶ್‌ ಸಂಗೀತ ನಿರ್ದೇಶನದಲ್ಲಿ, ಚಿ. ಉದಯಶಂಕರ್‌, ಆರ್‌.ಎನ್‌. ಜಯಗೋಪಾಲ್, ವಿಜಯ ನಾರಸಿಂಹ ಅವರ ಸಾಹಿತ್ಯದಲ್ಲಿ, ಪಿ.ಬಿ. ಶ್ರೀನಿವಾಸ್‌, ಪಿ. ಸುಶೀಲಾರವರ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದ ‘ಆಡಿಸಿ ನೋಡು ಬೀಳಿಸಿ ನೋಡು...’, ‘ನೀ ಬಂದು ನಿಂತಾಗ...’, ‘ಎಲ್ಲೇ ಇರು ಹೇಗೇ ಇರು...’, ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ...’, ‘ಆಡೋಣ ನೀನು ನಾನು...’ ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ.
ಆ ಕಾಲದ ಚಿತ್ರರಸಿಕರನ್ನು ಮೋಡಿ ಮಾಡಿದ್ದ ಈ ಚಿತ್ರದಲ್ಲಿ ರಾಜಕುಮಾರ್‌, ಜಯಂತಿ, ಅಶ್ವತ್ಥ್ ಅಭಿನಯಿಸಿದ್ದಲ್ಲ, ಜೀವಿಸಿದ್ದರು. ಅನುಪಮ್ ಮೂವೀಸ್‌ ಲಾಂಛನದಡಿಯಲ್ಲಿ ತಯಾರಾದ ಚಿತ್ರಕ್ಕೆ ದೊರೈ-ಭಗವಾನ್‌ ಜೋಡಿ ತಮ್ಮ ಬುದ್ಧಿಯನ್ನೆಲ್ಲ ಬಸಿದು, ಆ ಕಾಲಕ್ಕೇ ಹೊಸದೆನ್ನಿಸುವ ರೀತಿಯಲ್ಲಿ ಚಿತ್ರವನ್ನು ನಿರೂಪಿಸಿ ಮಹಾನ್‌ ಕಲಾಕೃತಿಯನ್ನಾಗಿಸಿತ್ತು. ಕತೆ, ನಿರೂಪಣೆ, ಅಭಿನಯ, ಸಂಗೀತ, ಹಾಡುಗಳಿಂದ ಚಿತ್ರ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಕನ್ನಡ ಚಿತ್ರೀದ್ಯಮದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದು ದಾಖಲೆ ನಿರ್ಮಿಸಿತ್ತು. ಅದರಲ್ಲೂ ಡಾ.ರಾಜ್‌ ಅಭಿನಯ ಕನ್ನಡಿಗರ ಕಣ್ಣಲ್ಲಿ ನೀರು ತರಿಸಿತ್ತು.
ಇಂತಹ ಅಪರೂಪದ ಕಸ್ತೂರಿ ನಿವಾಸ ಎಂಬ ಕಪ್ಪುಬಿಳುಪಿನ ಚಿತ್ರವನ್ನು ಬಣ್ಣಕ್ಕೆ ಬದಲಿಸಿ ಬಿಡುಗಡೆ ಮಾಡುತ್ತಿರುವವರು ಕೆ.ಸಿ.ಎನ್‌ ಮೋಹನ್‌. ಈ ಕುರಿತು ಮಾತನಾಡುತ್ತ, ‘ನನ್ನ ತಂದೆ, ನಿರ್ಮಾಪಕರಾದ ಕೆ.ಸಿ.ಎನ್‌. ಗೌಡರಿಗೆ ಕಸ್ತೂರಿ ನಿವಾಸ ಸೇರಿದಂತೆ ಕೆಲವು ಕ್ಲಾಸಿಕ್ ಕನ್ನಡ ಸಿನಿಮಾಗಳನ್ನು ಕಲರ್‌ನಲ್ಲಿ ನೋಡಬೇಕೆಂಬ ಆಸೆ ಇತ್ತು. ಅವರ ಆಸೆಯಂತೆ ಚಿತ್ರವನ್ನು ವರ್ಣದಲ್ಲಿ ಸಿದ್ಧ ಮಾಡಿದ್ದೇವೆ. ಯಾವುದಾವುದೋ ಕಾರಣಕ್ಕೆ ತಡವಾಗಿ, ನಾವು ಅಂದುಕೊಂಡ ದಿನಗಳಲ್ಲಾಗದೆ ಈಗ ಬಿಡುಗಡೆ ಮಾಡುತ್ತಿದ್ದೇವೆ. ಸತ್ಯ ಹರಿಶ್ಚಂದ್ರ ಸಿನಿಮಾ ಕಲರ್‌ನಲ್ಲಿ ಬಂದಾಗ ಕನ್ನಡಿಗರು ಖುಷಿ ಪಟ್ಟಿದ್ದರು. ಈ ಚಿತ್ರವನ್ನೂ ಹಾಗೆಯೇ ಮೆಚ್ಚಿಕೊಳ್ಳುತ್ತಾರೆ’ ಎನ್ನುತ್ತಾರೆ.
ಮುಂದುವರೆದು, ‘ಇದು ಒರಿಜಿನಲ್‌ ಚಿತ್ರದ ಕಾರ್ಬನ್‌ ಕಾಪಿ ಅಲ್ಲ. ಹಾಡುಗಳು ಚಿತ್ರದ ಪ್ರಮುಖ ಹೈಲೈಟ್‌. ಹಾಡುಗಳು ಹಾಗೂ ಸಂಭಾಷಣೆಗೆ ಡಿಟಿಎಸ್‌ ಅಳವಡಿಸಲಾಗಿದ್ದು ಪ್ರೇಕ್ಷಕರಿಗೆ ಸಮೃದ್ಧ ಅನುಭವ ನೀಡಲಿದೆ’ ಎನ್ನುವುದನ್ನು ಮರೆಯಲಿಲ್ಲ.
ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಕಪ್ಪುಬಿಳುಪಿನ ಚಿತ್ರವನ್ನು ಕಲರ್‌ ಮಾಡುವುದು ಸುಲಭವೆನ್ನಿಸಬಹುದು. ಆದರೆ ಅದು ಅಷ್ಟು ಸುಲಭವಲ್ಲ. ಪ್ರತಿ ಫ್ರೇಮಿಗೂ ಬಣ್ಣ ತುಂಬಿ, ಜೀವ ಕೊಟ್ಟು ಕುಣಿಸಬೇಕಾಗುತ್ತದೆ. ಹೊಸ ಸಿನಿಮಾವೊಂದನ್ನು ನಿರ್ಮಾಣ ಮಾಡಿದಷ್ಟೇ ಕೋಟ್ಯಂತರ ರೂ.ಗಳ ಖರ್ಚು ತಗಲುತ್ತದೆ. ಆ ಖರ್ಚನ್ನೂ ಲೆಕ್ಕಿಸದೆ, ಅದರಿಂದ ಬರುವ ಲಾಭವನ್ನೂ ಗುಣಿಸದೆ ಕೆಸಿಎನ್‌ ಗೌಡರ ಆಸೆಯನ್ನು ಕಾರ್ಯರೂಪಕ್ಕಿಳಿಸಿರುವ ಅವರ ಮಕ್ಕಳ ಚಿತ್ರಪ್ರೀತಿ ನಿಜಕ್ಕೂ ಶ್ಲಾಘನೀಯ.
ಆದರೆ ಸದ್ಯದ ಪ್ರಶ್ನೆ ಎಂದರೆ, 70ರ ದಶಕದ ಚಿತ್ರಪ್ರೇಮಿಗಳ ಅಭಿರುಚಿಯೇ ಬೇರೆ ಮತ್ತು 2014ರ ವೇಗೋತ್ಕರ್ಷಗಳ ಈ ಹೊಸಗಾಲದ ವೀಕ್ಷಕರ ಬೇಡಿಕೆಯೇ ಬೇರೆ. ಆಶ್ಚರ್ಯವೆಂದರೆ, ಎರಡೂ ಬಗೆಯ ಪ್ರೇಕ್ಷಕರಿಗೆ ‘ಕಸ್ತೂರಿ ನಿವಾಸ’ ಚಿತ್ರದಲ್ಲೊಂದು ಸಂದೇಶವಿದೆ. ಮನುಷ್ಯನ ಆಸೆಗೆ, ಅಹಂಕಾರಕ್ಕೆ, ನಂಬಿಕೆಗೆ, ನಿಷ್ಠೆಗೆ, ಪ್ರತಿಷ್ಠೆಗೆ ಚಿತ್ರದಲ್ಲಿ ಮದ್ದಿದೆ. ಹಾಗಾಗಿ ಮನುಷ್ಯರು ನೋಡಬೇಕಾದ ಚಿತ್ರ.
‘ಕಸ್ತೂರಿ ನಿವಾಸ’ ಚಿತ್ರದಲ್ಲಿ ರಾಜ್


Thursday, September 4, 2014

ಅರಿವನ್ನು ಹಂಚಿದ ಅನಕ್ಷರಸ್ಥ- ಮೆಹಬೂಬ್‌ ಪಾಷ

ಮೆಹಬೂಬ್‌ ಪಾಷ
ಸಂಜೆ ಏಳರ ಸಮಯ. ಮಳೆ ಮತ್ತು ಕತ್ತಲು ಬೆಂಗಳೂರನ್ನು ಕವುಚಿಕೊಳ್ಳಲು ಕಾತರಿಸುತ್ತಿದ್ದವು. ಅಂತಹ ಹೊತ್ತಿನಲ್ಲಿ  ಎನ್‌. ನರಸಿಂಹಯ್ಯನವರ ಪತ್ತೇದಾರಿ ಪುಸ್ತಕಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದೆ. ಹಳೇ ಪತ್ತೇದಾರಿ ಪುಸ್ತಕಗಳು ಬೆಂಗಳೂರಿನ ಕಾಟನ್‌ ಪೇಟೆ, ಅವಿನ್ಯೂ ರೋಡ್‌, ಬಳೇಪೇಟೆ ಗಲ್ಲಿಗಳು ಖಾತರಿಯಾಗಿ ಸಿಗುವ ಜಾಗಗಳು. ಅಚಾನಕ್ಕಾಗಿ ಬೆಂಗಳೂರಿನ ಬಳೇಪೇಟೆ ಸರ್ಕಲ್ಲಿಗೆ ಅಂಟಿಕೊಂಡಂತಿರುವ ಕಿಲಾರಿ ರಸ್ತೆಯ ಕಾರ್ನರ್‌ನಲ್ಲೊಂದು ಹಳೆ ಪುಸ್ತಕದ ಅಂಗಡಿ ಕಣ್ಣಿಗೆ ಬಿತ್ತು.
ಅಂಗಡಿ ಅಂದರೆ ಅದು ಅಂಗಡಿಯಲ್ಲ, ಅದಕ್ಕೊಂದು ನಿರ್ದಿಷ್ಟ ಜಾಗವೇ ಇಲ್ಲ. ಅಂಗಡಿಯ ಮಾಲೀಕನಿಗೆ ಕೂರಲು ಒಂದು ಕುರ್ಚಿಯಿರಲಿ, ನಿಲ್ಲಲು ನಿಸೂರಾದ ಜಾಗವೂ ಇಲ್ಲ. ಪಕ್ಕದ ಸುಸಜ್ಜಿತ ಟಿಪ್‌ ಟಾಪ್‌ ಲೆದರ್‌ ಬ್ಯಾಗ್ ಅಂಗಡಿ ಮಳಿಗೆಯ ಹೊರಗೋಡೆಗೆ ಒಂದು ಸ್ಲ್ಯಾಟೆಡ್ ಆ್ಯಂಗಲ್‌ ಫಿಟ್‌ ಮಾಡಿ, ಅದರೊಳಗೆ ಹಳೆಯ ಪುಸ್ತಕಗಳನ್ನು ಜೋಡಿಸಿಡಲಾಗಿತ್ತು.
ಇಂಗ್ಲಿಷ್‌, ಹಿಂದಿ, ಕನ್ನಡ, ತಮಿಳು, ತೆಲುಗು... ಹೀಗೆ ಎಲ್ಲಾ ಭಾಷೆಗಳ, ಎಲ್ಲೂ ಸಿಗದ  ಹಳೆಯ, ಹರಿದ ಸಾವಿರಾರು ಪುಸ್ತಕಗಳು, ಕವರ್‌ಪೇಜ್‌ ಕಳೆದುಕೊಂಡ ನೂರಾರು ಮ್ಯಾಗಜಿನ್‌ಗಳು ಅಲ್ಲಿದ್ದವು. ಸ್ವಲ್ಪ ಕತ್ತೆತ್ತಿ ನೋಡಿದರೆ, ಮಿಣುಕಾಡುವ ಬಲ್ಬು ಹಳೆಯ ಪುಸ್ತಕಗಳಿಗೆ ಬೆಳಕು ಬೀರುತ್ತಿತ್ತು. ಆ ಒಂದು ಅಡಿ ಅಗಲ ಅಳತೆಯ ಸ್ಲ್ಯಾಟೆಡ್ ಆ್ಯಂಗಲ್‌ಗೆ ರೋಲಿಂಗ್‌ ಶೆಟ್ಟರ್ಸು, ಅದಕ್ಕೊಂದು ಬೀಗ ಎಲ್ಲವೂ ಇತ್ತು. ಆ ಸ್ಲ್ಯಾಟೆಡ್ ಆ್ಯಂಗಲ್‌ನ  ಮೇಲೆ ಗೋಡೆಯಲ್ಲಿ ‘ಅಮೀನಾ ಬಿ ಬುಕ್‌ ಸ್ಟಾಲ್’ ಅಂತ ಬೋರ್ಡ್‌ ಕೂಡ ಇತ್ತು.
ಹೇಳಿ ಕೇಳಿ ಅದು ಬಳೇಪೇಟೆ. ಕಿಷ್ಕಿಂಧೆಯಂತಹ ಜಾಗ. ಆ ಅಂಗಡಿಯೋ ಬೀದಿಯಲ್ಲಿಯೇ ಇದೆ. ಅಂಗಡಿಯ ಮುಂದೆ ಗುಂಡಿ, ಹೊಂಡಗಳು. ಅದರೊಳಗೆ ಮಳೆ ನೀರೋ ಅಥವಾ ಮನುಷ್ಯರ ನೀರೋ ತುಂಬಿ ಹರಿಯುತ್ತಿದೆ. ಅವುಗಳನ್ನೆಲ್ಲ ದಾಟಿಕೊಂಡು ಆ ಅಂಗಡಿಯ ಬಳಿ ಹೋದೆ. ಕುರುಚಲು ಗಡ್ಡ ಬಿಟ್ಟುಕೊಂಡು, ಶರ್ಟಿನ ತೋಳನ್ನು, ಮಂಡಿವರೆಗೆ ಪ್ಯಾಂಟನ್ನು ಮಡಚಿಕೊಂಡು ನಡುಗುತ್ತಾ ನಿಂತಿದ್ದ ವ್ಯಕ್ತಿ ಕಸಿವಿಸಿಯ ಮುಖಭಾವದಲ್ಲಿ ‘ಏನು’ ಎನ್ನುವಂತೆ ಪ್ರಶ್ನಾರ್ಥಕವಾಗಿ ನೋಡಿದರು. ಅವರಿದ್ದ ಸ್ಥಿತಿ ನೋಡಿ, ಇವರು ಈ ಹಳೆ ಅಂಗಡಿಯನ್ನು ನೋಡಿಕೊಳ್ಳುವ ಕೆಲಸಗಾರನಿರಬೇಕು ಎಂದು ಭಾವಿಸಿ, ಮಾತನಾಡಿಸುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದೆ.
ಆಗ ಅವರೇ ‘ಏನ್‌ ಬೇಕಣ್ಣ’ ಎಂದರು.
ಅವರ ಮಾತಿನಲ್ಲಿಯೇ ಅವರು ಮುಸ್ಲಿಂ ಎಂಬುದು ಗೊತ್ತಾಯಿತು. ಮಂಡಿಯವರೆಗೂ ಮಡಿಚಿದ್ದ ಪ್ಯಾಂಟು ಅದನ್ನು ಖಾತ್ರಿಪಡಿಸಿತ್ತು. ನನಗಿಂತ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಿದ್ದವರು ‘ಅಣ್ಣ’ ಅಂದಾಕ್ಷಣ ಕೊಂಚ ಕಸಿವಿಸಿಯಾಯಿತು, ತಗ್ಗಿದ ದನಿಯಲ್ಲಿ ‘ಪತ್ತೇದಾರಿ ಪುಸ್ತಕಗಳು ಬೇಕಾಗಿತ್ತು’ ಎಂದೆ.
‘ಅಣ್ಣಾ... ಇದಾವೆ, ಬೆಳಗ್ಗೆ ಬಂದ್ರೆ ಕೊಡ್ತೀನಿ’ ಒಂಥರಾ ದಯನೀಯ ದನಿಯಲ್ಲಿ ಬೇಡಿಕೊಂಡರು.
‘ಪತ್ತೇದಾರಿ ಎನ್‌. ನರಸಿಂಹಯ್ಯನವರ ಪುಸ್ತಕಗಳಿವೆಯಾ?’ ಎಂದೆ.
‘ಹುಡುಕ್ಬೇಕು, ಈಗ ನೋಡಿ ಹೆಂಗಿದೀನಿ, ಬೆಳಗ್ಗೆ ಕೊಡ್ತೀನಿ ಬಾರಣ್ಣ’ ಅಂದರು. ಆ ದನಿಯಲ್ಲಿ ಗಿರಾಕಿಯನ್ನು ಮತ್ತೆ ಬರುವಂತೆ ಕರೆಯುವ ಕೋರಿಕೆಯಿತ್ತು.
ಸಿಗುತ್ತೆ ಅನ್ನುವುದು ಗ್ಯಾರಂಟಿ ಆಗುತ್ತಿದ್ದಂತೆ, ಅವರ ವ್ಯಾಪಾರ-ವ್ಯವಹಾರ, ಸ್ಥಿತಿ-ಗತಿ ತಿಳಿಯುವ ಕುತೂಹಲದಿಂದ ಹೆಸರು, ಹಿನ್ನೆಲೆ ಬಗ್ಗೆ ವಿಚಾರಿಸತೊಡಗಿದೆ. ಮಳೆಗೆ ಮೇಲ್ಛಾವಣಿಯಾಗಲಿ, ಚಳಿಗೆ ಸ್ವೆಟರ್‌, ಜರ್ಕೀನ್‌ ಆಗಲಿ ಹಾಕಿಕೊಳ್ಳದೆ, ನೆನೆಯುತ್ತ, ನಡುಗುತ್ತ ರೇಜಿಗೆ ಮುಖಭಾವ ಹೊದ್ದು ನಿಂತಿದ್ದವರು,
‘ಅಣ್ಣ, ನನ್ನ ಹೆಸರು ಮೆಹಬೂಬ್‌ ಪಾಷ, ನಲವತ್ತೆಂಟ್‌ ವರ್ಷ, ನಾಳೆ ಬನ್ನಿ, ನೋಡನ?’ ಎಂದು ಮಾತು ತುಂಡರಿಸಿ, ಮಳೆಗೆ ಶಾಪ ಹಾಕುತ್ತ, ಪುಸ್ತಕಗಳನ್ನು ಎತ್ತಿಡುತ್ತ ಅಂಗಡಿ ಬಾಗಿಲು ಹಾಕುವುದಕ್ಕೆ ಸಿದ್ಧ ಮಾಡಿಕೊಳ್ಳತೊಡಗಿದರು. ಅವರ ಸ್ಥಿತಿ ನೋಡಿ ಮಾತು ಮುಂದುವರೆಸುವ ಮನಸ್ಸಾಗದೆ ಬಂದುಬಿಟ್ಟೆ.
ಮಾರನೆ ದಿನ, ನರಸಿಂಹಯ್ಯನವರ ಪತ್ತೇದಾರಿ ಪುಸ್ತಕಗಳನ್ನು ಹುಡುಕಿಕೊಂಡು ಬೇರೆ ಕಡೆ ಹೋಗಿದ್ದರಿಂದ, ಅಲ್ಲಿ ಸಿಕ್ಕಿದ್ದರಿಂದ ಮೆಹಬೂಬ್‌ ಪಾಷಾರ ಅಂಗಡಿ ಮರೆತೇಹೋಯಿತು.
ಮತ್ತೊಂದು ಸಲ ಬಳೇಪೇಟೆಗೆ ಹೋಗಬೇಕಾಗಿ ಬಂದಾಗ, ಹತ್ತಿರದಲ್ಲಿಯೇ ಇದ್ದ ಹಳೆ ಪುಸ್ತಕಗಳ ಅಂಗಡಿ ಮಾಲೀಕ ಮೆಹಬೂಬ್‌ ಪಾಷ ನೆನಪಾದರು. ಅಂಗಡಿ ಮುಂದೆ ಹೋಗಿ ನಿಂತೆ, ನೋಡುತ್ತಿದ್ದ ಹಾಗೆ, ‘ಅವತ್ತು ಕೇಳಿಕೊಂಡು ಹೋದೋರು ಬರ್ಲೇ ಇಲ್ಲ, ಆ ಕಡೆ  ಇಟ್ಟಿದೀನಲ್ಲ, ಅವೆಲ್ಲ ಪತ್ತೇದಾರಿ ಕಾದಂಬ್ರಿಗಳೆ, ನೋಡಿ’ ಎಂದರು.
ಅವರು ನನ್ನ ನೋಡಿದ್ದು ಒಂದೇ ಸಲ, ಆದರೂ ನನಗಾಗಿ ಕಾದಿದ್ದು, ಪುಸ್ತಕಗಳನ್ನು ಎತ್ತಿಟ್ಟಿದ್ದರು. ಆ ಕ್ಷಣಕ್ಕೆ ಅವರಲ್ಲಿ ವ್ಯವಹಾರಕ್ಕಿಂತ, ‘ನನ್ನ ಅಂಗಡೀಲಿ ಸಿಕ್ಕತ್ತೆ ಅಂತ ಹುಡುಕಿಕೊಂಡು ಬಂದಿದ್ದೀರ, ಕೊಡದೆ ಹೋದ್ರೆ ತಪ್ಪಾಗುತ್ತೆ’ ಎಂಬ ಭಾವವಿತ್ತು. ಅವರಲ್ಲಿದ್ದ ಪುಸ್ತಕ ಪ್ರೀತಿ ಎದ್ದು ಕಾಣುತ್ತಿತ್ತು.
ಅವರ ಮಾತನ್ನು ಅರ್ಧಕ್ಕೇ ತಡೆದು, ‘ನೋಡಿ ಇಲ್ಲಿ, ಎಷ್ಟು ಟೈಟ್ಲು ಬೇಕು?’ ಎಂದು ಎಚ್‌. ನರಸಿಂಹಯ್ಯನವರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನಕ್ಕೆ ಬಳಸಿದ್ದ ಫೋಟೋ ತೋರಿಸಿದೆ. ನರಸಿಂಹಯ್ಯನವರ ಮಗ ರವೀಂದ್ರರನ್ನು ಹುಡುಕಿಕೊಂಡು ಹೋಗಿ, ಅವರಲ್ಲಿದ್ದ ಪುಸ್ತಕಗಳನ್ನೆಲ್ಲ ಒಪ್ಪವಾಗಿ ಜೋಡಿಸಿಟ್ಟು ತೆಗೆದ ಫೋಟೋ ಅದಾಗಿತ್ತು.
ನರಸಿಂಹಯ್ಯನವರ ಫೋಟೋ, ಅವರ ಪುಸ್ತಕಗಳ ಕವರ್‌ ಪೇಜ್‌ ಚಿತ್ರಗಳನ್ನು ನೋಡುತ್ತಿದ್ದಂತೆ, ಮೆಹಬೂಬ್‌ ಜಮಾನಕ್ಕೆ ಜಾರಿದರು. ಮುಖ ಹೂವಿನಂತೆ ಅರಳಿತು, ‘ಚಿನ್ನ.. ಚಿನ್ನ.. ಅಣ್ಣ’ ಎಂದು ಒಂದೊಂದೇ ಕವರ್‌ ಪೇಜ್‌ಗಳನ್ನು ಕಣ್ತುಂಬಿಕೊಳ್ಳುತ್ತಿದ್ದವರು ಒಮ್ಮೆಲೆ ಖಿನ್ನರಾಗಿ, ‘ಹೋಯ್ತು, ಆ ಕಾಲ ಎಲ್ಲಾ ಹೋಯ್ತು ಅಣ್ಣ’ ಅಂದರು.
ಅವರು ಇದ್ದಕ್ಕಿದ್ದಂತೆ ಖುಷಿಯಾಗಿದ್ದು, ಖಿನ್ನರಾಗಿದ್ದು ನನಗೆ ಕುತೂಹಲ ಕೆರಳಿಸಿತು.
‘ಯಾಕೆ, ಏನಾಯ್ತು?’ ಅಂದೆ. ಅವರಿಗೆ ನಾನು ಪತ್ರಕರ್ತ ಅನ್ನುವುದು ಖಾತ್ರಿಯಾಗಿತ್ತು. ಮಾತಾಡಲಿಕ್ಕೆ ಕೊಂಚ ಹಿಂಜರಿಯತೊಡಗಿದರು. ‘ಅಯ್ಯೋ ಅದೆಲ್ಲ ಯಾಕೆ ಬಿಡಣ್ಣ’ ಅಂದರು. ನಡುವೆ ಬಂದ ಗಿರಾಕಿ ಅಟೆಂಡ್‌ ಮಾಡಿ, ಪುಸ್ತಕ ಕೊಟ್ಟು ಕಳುಹಿಸಿದರು. ನಂತರ ಪೋಟೋ ಇದ್ದ ಪತ್ರಿಕೆಯನ್ನು ಕೈಗೆತ್ತಿಕೊಂಡು ನರಸಿಂಹಯ್ಯನವರ ಫೋಟೋಗೆ ಒಂದು ಫ್ಲೈಯಿಂಗ್‌ ಕಿಸ್‌ ಕೊಟ್ಟ ಮೆಹಬೂಬ್‌, ‘ಹ್ಯಂಗ್‌ ಹೋಗ್ತಿತ್ತು ಗೊತ್ತಾ ಅಣ್ಣ, ಒಂದೊಂದ್‌ ಟೈಟ್ಲು ಒಂದೇ ದಿನಕ್ಕೆ ನೂರು ಇನ್ನೂರ್‌ ಮಾರಿದೀನಿ, ರಾಜ ರಾಜ ಥರ ಇದ್ದೇ ಆಗ, ನನ್‌ ಮನೆ ನಡ್ಸಿದ್ದೇ ಇವ್ರಣ್ಣ?’ ಎಂದರು.
ಎಲ್ಲಿಯ ಮೆಹಬೂಬ್‌ ಎಲ್ಲಿಯ ನರಸಿಂಹಯ್ಯ? ಯೋಚನೆ ತಲೆಯಲ್ಲಿ ತೇಲಿಹೋಯಿತು. ‘ಎಷ್ಟು ವರ್ಷಗಳ ಹಿಂದೆ ಅದು?’ ಅಂದೆ.
‘ಮೂವತ್ತು ವರ್ಷ... ಹೆಚ್ಚೂಕಡಿಮೆ ನಲವತ್ತು ವರ್ಷದಿಂದ ಇಲ್ಲಿರೋದು, ಚೆಡ್ಡಿ ಹಾಕೊಳ್ತಿದ್ದ ಕಾಲದಿಂದಾನೂ ಇಲ್ಲೇ. ನಾನು ಚಿಕ್ಕವನಾಗಿದ್ದಾಗ ನಮ್‌ ಫಾದರ್‌ ಹೋಗ್ಬಿಟ್ರು. ನಾನು ಇಸ್ಕೂಲ್ ಗಿಸ್ಕೂಲ್ ಕಲ್ತವನಲ್ಲ, ಸೈನ್‌ ಮಾಡೋಕು ಬರಲ್ಲ, ಎಂಟು ವರ್ಷದವನಿದ್ದಾಗ ಈ ಗಲ್ಲಿಗೆ ಬಿದ್ದೆ. ಯಾವ ಕೆಲಸ ಮಾಡಿಲ್ಲ ಹೇಳಿ?’ ಎಂದು ತಂದೆಯಿಲ್ಲದ ತಬ್ಬಲಿತನದ ಬಾಲ್ಯಕಾಲವನ್ನು ಮತ್ತು ಬವಣೆಯ ಬದುಕನ್ನು ಬಿಚ್ಚಿಡತೊಡಗಿದರು.
‘ವಲ್ಡ್ ನಲ್ಲಿ ನನ್ನಂಗೆ ಯಾರೂ ಕಷ್ಟ ಬಿದ್ದಿಲ್ಲ ಬುಡಣ್ಣ’ ಅಂದರು. ವಲ್ಡ್ ಅಂದರೆ ಜಗತ್ತು. ಅರ್ಥವಾಗಬೇಕಾದರೆ ಸ್ವಲ್ಪಸಮಯ ಹಿಡಿಯಿತು. ಚಿಕ್ಕಂದಿನಲ್ಲಿ ಕೈಗೆ ಸಿಕ್ಕಿದ ಕೂಲಿ ಕೆಲಸ ಮಾಡಿ, ಸಂಜೆಯ ಹೊತ್ತಿಗೆ ಜೇಬಿನಲ್ಲಿ ಚಿಲ್ಲರೆ ದುಡ್ಡು ಇದ್ದರೆ ಮನೆ, ಇಲ್ಲದಿದ್ದರೆ ಇಲ್ಲೇ ಯಾವುದಾದರೂ ಅಂಗಡಿ ಮುಂದೆ ಕಾರ್ಟೂನ್‌ ಬಾಕ್ಸ್ ಹಾಸಿಕೊಂಡು, ಅದನ್ನೇ ಹೊದ್ದುಕೊಂಡು ಮಲಗೋದು. ಅರ್ಧರಾತ್ರಿಯಲ್ಲಿ ಪೊಲೀಸ್ನೋರ ಕಾಟ, ಬೆತ್ತದ ರುಚಿ.
‘ಡಿಸೆಂಬರ್‌ ಚಳಿ ಗೊತ್ತಲ್ಲ... ನಡುಗುತ್ತ ಮಲಗಿದ್ದಾಗ ಪೊಲೀಸ್ನೋರು ಬಂದು ಬಾರಸೋರು. ಮೈ ಬಿಸಿಯಾಗೋದು. ಅದೂ ಒಂಥರಾ ಒಳ್ಳೇದೆ.. ಬೆಳಗ್ಗೆವರೆಗೆ ಚಳಿ ಕಾಣ್ತಿರಲಿಲ್ಲ. ಲಾಠಿ ಏಟೇ ಸ್ವೆಟರ್‌ ಥರ’ ಎಂದು ನಗಾಡತೊಡಗಿದರು.
‘ಹಾಗಿದ್ದವರು, ಇಂಥ ಅಂಗಡಿ ಮಾಡಿದ್ದು ಹೇಗೆ?’ ಎಂದೆ.
‘ಅಯ್ಯೋ ಅದು ಇನ್ನೊಂದು ದೊಡ್‌ ಸ್ಟೋರಿ. ಇವತ್ತಿಗೆ ಮುಗಿಯದಲ್ಲ. ಭಿಕಾರಿ ನನ್ಮಗನಿಗೆ ಬಳೇಪೇಟೆ ಗಲ್ಲಿನಲ್ಲಿ ಅಂಗಡಿ ಅಂದರೆ ಯಾರೂ ನಂಬಲ್ಲ ಅಣ್ಣ... ಕೂಲಿ ನಾಲಿ ಮಾಡ್ತಿದ್ನಲ್ಲ, ಅದರ ಜೊತೆಗೇನೆ ಸಂತೋಷ್‌, ನರ್ತಕಿ ಥೇಟರ್‌ ಮುಂದೆ ಬನೀನು ಮಾರಾಟ ಮಾಡ್ತಿದ್ದೆ, ಸ್ವಲ್ಪ ಸ್ವಲ್ಪ ಕಾಸು ಕೂಡಿಸಿಕೊಂಡು ಒಂದೊಂದೇ ಜೋಡಿಸಿಕೊಂಡು, ಈ ಗಲ್ಲಿನಲ್ಲಿ ಅಂಗಡಿ ಶುರು ಮಾಡದೆ. ಇವತ್ತು ಇಷ್ಟು ದೊಡ್ಡ ಅಂಗಡಿ ಆಗಿದೆ’ ಎಂದು ಗೋಡೆ ಕಡೆ ಒಂದು ಗತ್ತಿನ ನೋಟ ಬೀರಿದರು. ಆ ಗೋಡೆಯೇ ಅವರ ಪಾಲಿಗೆ ಭಾರೀ ಮಳಿಗೆ.
‘ಈ ಅಂಗಡಿಗೆ ದಿನಕ್ಕೆ ನೂರು ರೂಪಾಯಿ ಬಾಡಿಗೆ. ಅದಿದೆಯಲ್ಲ, ಆ ಗೂಡು, ಅದು ಕಾರ್ಪೊರೇಷನ್‌ದು, ಅದಕ್ಕೆ ದಿನಕ್ಕೆ ಐವತ್ತು ರೂಪಾಯ್‌ ಬಾಡಿಗೆ. ಎರಡೂ ಸೇರಿ ತಿಂಗಳಿಗೆ ನಾಲ್ಕೂವರೆ ಸಾವ್ರ ಬಾಡಿಗೆ ಕಟ್ಟಿ, ಮಿಕ್ಕದ್ದರಲ್ಲಿ ನಾನು ನನ್ನ ಸಂಸಾರ ಬದುಕ್ಬೇಕು ಅಣ್ಣ. ಇಲ್ಲೇ ಕಾಟನ್‌ ಪೇಟೆ ಮೂರನೇ ಕ್ರಾಸ್ ನಲ್ಲಿರುವ ತವಕ್ಕಲ್ ಮಸ್ತಾನ್ ದರ್ಗಾ ಹತ್ರ ಮನೆ, ಎರಡು ಮಕಕ್ಳಿವೆ, ಓದ್ತಾಯಿದಾರೆ. ಶೀಟ್‌ ಮನೆ, ಮೂರ್‌ ಸಾವ್ರ ಬಾಡಿಗೆ..  ಅದರ್ದು ಇದರಿಂದ್ಲೇ ನಡೀಬೇಕು...
‘ಇವತ್ತು ಈ ಅಂಗಡಿ ಉಳಸ್ಕೋಬೇಕು ಅಂತಂದ್ರೆ ಏನೆಲ್ಲಾ ಕಷ್ಟಪಟ್ಟಿದೀನಿ ಗೊತ್ತಾ ಸಾರ್‌? ಒಂದ್‌ ಸಲ ಕಾರ್ಪೋರೇಷನ್ನೋರು ಲಾರಿ ತಂದು ನನ್ನ ಪುಸ್ತಕಾನೆಲ್ಲ ತುಂಬಿಕೊಂಡು ಹೋಗುಬುಟ್ರು... ಅವರ ಕಾಲಿಡಕಂಡೆ, ಕೈ ಮುಗಿದೆ, ಬೀದಿಲಿ ಬಿದ್ದು ಗೋಳಾಡುಬುಟ್ಟೆ... ಯಾರು ಕೇಳತರೆ ಬಡವರ ಗೋಳು. ಒಳ್ಳೇರ್‌ಗೆ ಕಾಲ ಇಲ್ಲ, ಆದರೆ ಪರಮಾತ್ಮನ ಹತ್ರ ಐತೆ, ಜನರತ್ರ ಇಲ್ಲ...
‘ಎಷ್ಟೋ ವರ್ಷಗಳಿಂದ ಕೂಲಿ ನಾಲಿ ಮಾಡಿ ಜೋಡಿಸಿದ ಅಂಗಡೀನಾ ಒಂದೇ ಕ್ಷಣದಲ್ಲಿ ಇಲ್ಲ ಅನ್ನಿಸಬುಟ್ರು...
ಏನೋ ನೆನಪು ಮಾಡಿಕೊಂಡಂತೆ...
`ವಿಜಯ ಸಾಸನೂರ್‌ ಹೆಸ್ರು ಕೇಳಿದೀರ.. ಒಳ್ಳೊಳ್ಳೆ ಪುಸ್ತಕ ಬರೆದವ್ರೆ. ದೇವ್ರು ಅಣ್ಣ ಅವ್ರು, ಅವ್ರು ನನ್‌ ಬುಕ್‌ಸ್ಟಾಲ್ಗೆ ಆಗಾಗ ಬರೋರು, ಆಗ ಪರಿಚಯ ಆಗಿತ್ತು. ಅವರತ್ರ ಹೋದೆ, ಆಗವರು ದೊಡ್ಡ ಪೊಲೀಸ್ ಆಫೀಸರ್ ಆಗಿದ್ರು, ಅವರು ಕಾರ್ಪೋರೇಷನ್ನೋರಿಗೆ ಹೇಳಿ, ನನ್ನ ಮೇಲೆ ಕೈ ಹಾಕ್ದಂಗೆ ಆಯ್ತು ಅಣ್ಣ...
‘ಕಾರ್ಪೋರೇಷನ್ದು ಏನೋ ಆಯ್ತು, ಪೊಲೀಸ್ನೋರದು ಶುರುವಾಯ್ತು, ದಿನಾ ಕಾಟ ಕೊಡೋರು, ಹೊಡೆಯೋರು, ಒಳಕ್ಕಾಗ್ತೀನಿ ಅನ್ನೋರು, ಅಂಗಡಿ ಎತ್ತು ಅನ್ನೋರು. ಅದೇನ್‌ ಕಷ್ಟ ಬಿದ್ದಿದೀನೋ, ಆ ದೇವರ್ಗೇ ಗೊತ್ತು. ನನ್ನ ಅದೃಷ್ಟಕ್ಕೆ ಈಗ ಅದೂ ಇಲ್ಲ. ಸದ್ಯಕ್ಕೆ ಯಾವ ಕಾಟವೂ ಇಲ್ಲ, ಆದ್ರೆ ವ್ಯಾಪಾರಾನೆ ಇಲ್ಲ.
‘ನಾನು ಈ ಪುಸ್ತಕದಂಗಡಿ ಶುರು ಮಾಡ್ದಾಗ ಚಂದಮಾಮ 75 ಪೈಸೆ ಇತ್ತು. ಫ್ಯಾಂಟಮ್ ಕಾಮಿಕ್ಸ್ ಒಂದು ರೂಪಾಯಿ. ರನ್‌ ಅಂಡ್‌ ಮಾರ್ಟಿನ್‌ ಡಿಕ್ಷನರಿ- ಒಳ್ಳೆ ಟ್ರೈನ್ ಥರ ಹೋಗದು. ಎಷ್ಟು ಐದು ರೂಪಾಯಿ...’  ಎಂದು ಹುಬ್ಬು ಹಾರಿಸಿದರು.
‘ಈಗ ಟಿವಿ ಬಂದು ಎಲ್ಲ ಹೋಯ್ತಣ್ಣ, ವ್ಯಾಪಾರಾನೇ ಇಲ್ಲ. ಪುಸ್ತಕ ಓದೋರು ಹೋದ್ರು... ಒಳ್ಳೆ ವ್ಯಾಪಾರ ಅಂತ ನೋಡಿ ಐದು ವರ್ಷ ಆಯ್ತು. ದಿನಕ್ಕೆ ಐನೂರು ಆಗದು ಕಷ್ಟ ಐತೆ. ಚಿಕ್ಕಂದಿನಿಂದ ಇದೇ ಕೆಲ್ಸ ಮಾಡಕೊಂಡ್ ಬಂದಿದೀನಿ, ಬಿಡಕ್ಕಾಗ್ತಿಲ್ಲ, ಬೇರೇದು ಗೊತ್ತಿಲ್ಲ. ಮದುವೆ, ಹಬ್ಬ, ಸತ್ರೆ, ಕೆಟ್ರೆ, ಮಳೆ ಹಿಡಕೊಂಡ್ರೆ, ಹೆಲ್ತ್ ಕೈ ಕೊಟ್ರೆ ಬಾಗಲ್ ಹಾಕ್ಬೇಕು, ಒಬ್ನೆ ಕಷ್ಟ, ಹ್ಯೆಂಗೋ ನಡೀತಿದೆ?
‘ನನ್‌ ಮಕ್ಳಿಗೆ ನನ್‌ ಲೈನ್‌ ಬೇಡ ಅಣ್ಣ, ಈ ಮಳೆ ಗಾಳಿ ಬಿಸಿಲ್ನಲ್ಲಿ ಯಾರ್‌ ಸಾಯ್ತರೆ, ಚೆನ್ನಾಗಿ ಓದಿ, ಏನಾದ್ರು ಒಳ್ಳೆ ಕೆಲ್ಸಕ್ಕೆ ಹೋಗ್ಲಿ, ಕಂಪ್ಯೂಟರ್‌ ಗಿಂಪ್ಯೂಟರ್‌ ಏನಾದ್ರು ಮಾಡ್ಲಿ, ಅದಕ್ಕೆ ಅವ್ರಿಗೆ ಒಳ್ಳೆ ಸ್ಕೂಲ್ ನಲ್ಲಿ ಓದಿಸ್ತಿದೀನಿ, ನನ್ಗೇ ಇದು ಕೊನೆ ಆಗ್ಲಿ, ಸಾಕಾಗಿ ಹೋಗಿದೆ...’
ನಲವತ್ತು ವರ್ಷಗಳ ಕಾಲ ನಿರಂತರವಾಗಿ ಒಂದೇ ಜಾಗದಲ್ಲಿ ನಿಂತು, ಒಂದೇ ವ್ಯಾಪಾರ ಮಾಡಿದರೂ, ಅವರ ಆರ್ಥಿಕ ಸ್ಥಿತಿಯೇನೂ ಬದಲಾಗಿರಲಿಲ್ಲ. ಕೊನೆಪಕ್ಷ ನೆಮ್ಮದಿಯಾದರೂ ಸಿಕ್ಕಿದೆಯಾ ಎಂದರೆ, ಸಂಸಾರ ಸಾಗುತ್ತಿದೆ, ಅಷ್ಟಕ್ಕೇ ಸಂತೃಪ್ತ. ಆ ಮೂಡಿನಿಂದ ಅವರನ್ನು ಹೊರ ತರಲು ‘ಯಾವ ಪುಸ್ತಕ ಈಗ ಜಾಸ್ತಿ ಹೋಗ್ತಿದೆ?’ ಎಂದೆ.
‘ಚೇತನ್‌ ಭಗತ್‌, ಅದು ಬಿಟ್ರೆ ರವಿ ಬೆಳಗೆರೆ, ಯಂಡಮೂರಿ, ಪಾಲ್‌ ಕ್ಹೋಲೋ, ರಾಬರ್ಟ್‌ ಲಡ್ಲುಮ್‌, ಚೇಸ್‌, ಸಿಡ್ನಿ ಸೆಲ್ಡಾನ್, ಅಲಿಸ್ಟರ್‌ ಮ್ಯಾಕ್ಲೀನ್, ಹ್ಯಾರಿ ಪಾಟರ್‌, ಪಿಜಿ ವುಡೋಸ್‌...  ಪುಸ್ತಕದ ಲೋಕಕ್ಕೆ ಬರಬ್ಯಾಡ, ಬೇರೆ ಕೇಳಬ್ಯಾಡ.’ ಖಡಕ್‌ ಮಾತಿಗೆ, ನನ್ನ ಮಾತೇ ನಿಂತುಹೋಯಿತು.
ಇಂಗ್ಲಿಷ್‌, ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಿ, ಉರ್ದು... ಇವಿಷ್ಟೂ ಭಾಷೆಗಳ, ಸುಮಾರು ನಲವತ್ತು ವರ್ಷಗಳಿಂದ ಇಲ್ಲಿಯವರೆಗೆ, ಹಿಂದೆ ಬರೆದಿರುವ, ಈಗ ಬರೆಯುತ್ತಿರುವ, ಜನಪ್ರಿಯರಾಗಿರುವ, ಕಡ್ಲೇಪುರಿಯಂತೆ ಖರ್ಚಾಗುವ, ಖರ್ಚೇ ಆಗದೆ ಕೊಳೆಯುವ... ಇಡೀ ಜಗತ್ತಿನ ಅಷ್ಟೂ ಲೇಖಕರ ಹೆಸರುಗಳು, ಸಾವಿರಾರು ಕೃತಿಗಳ ಟೈಟಲ್‌ಗಳು, ಲೆಕ್ಕಕ್ಕಿಡಲಾಗದಷ್ಟು ಮ್ಯಾಗಜಿನ್ ಗಳು ಮೆಹಬೂಬ್‌ ಪಾಷಾರ ನಾಲಗೆಯ ಮೇಲಿವೆ. ತಲೆ ತುಂಬಿಕೊಂಡಿವೆ. ಜೀವಂತ ಲೈಬ್ರರಿಯೇ ಅವರಾಗಿದ್ದಾರೆ. ಬರಹಲೋಕವನ್ನೇ ಬದುಕಾಗಿಸಿಕೊಂಡಿದ್ದಾರೆ. ಆದರೆ, ತಮ್ಮ ಬದುಕನ್ನು ಆ ಪುಸ್ತಕದಂಗಡಿಯಲ್ಲಿಯೇ ಕಳೆದರೂ ಮೆಹಬೂಬ್‌ರ ಬದುಕಿನ ಬವಣೆ ಮಾತ್ರ ನೀಗಿಲ್ಲ. ಕುಟುಂಬದ ಸ್ಥಿತಿಯೂ ಸುಧಾರಿಸಿಲ್ಲ. ನೆಮ್ಮದಿಯನ್ನಂತೂ ಕಂಡೇ ಇಲ್ಲ. ಪ್ರತಿನಿತ್ಯವೂ ಹೋರಾಟ. ಅದೇ ಜಂಜಾಟ.
ಆ ಕ್ಷಣಕ್ಕೆ, ನನಗೆ ಯಾಕೋ ಎರಡನೇ ಕ್ಲಾಸ್ ಓದಿ ಐನೂರೈವತ್ತು ಕನ್ನಡ ಪತ್ತೇದಾರಿ ಕಾದಂಬರಿಗಳನ್ನು ಬರೆದ ಎನ್‌. ನರಸಿಂಹಯ್ಯನವರು ನೆನಪಾದರು. ನರಸಿಂಹಯ್ಯ ಮತ್ತು ಮೆಹಬೂಬ್‌ ಪಾಷ ಇಬ್ಬರೂ ಬಡವರು, ಹೆಚ್ಚಿಗೆ ಓದದ ಅನಕ್ಷರಸ್ಥರು, ಸ್ವಾವಲಂಬಿ ಬದುಕಿನ ಶ್ರಮಜೀವಿಗಳು. ಹೊಟ್ಟೆಪಾಡಿಗಾಗಿ ಒಬ್ಬರು ಪುಸ್ತಕ ಬರೆದರು, ಇನ್ನೊಬ್ಬರು ಪುಸ್ತಕ ಮಾರಿದರು.
ಇಬ್ಬರೂ ಅವರಿಗೇ ಗೊತ್ತಿಲ್ಲದಂತೆ ಪುಸ್ತಕ ಸಂಸ್ಕೃತಿಯನ್ನು ಪೊರೆದು ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ್ದಾರೆ. ಅಕ್ಷರಸ್ಥರ ಓದಿನ ಹಸಿವನ್ನು ಇಂಗಿಸಿದ್ದಾರೆ, ಅರಿವಿನ ಲೋಕವನ್ನು ವಿಸ್ತರಿಸಿದ್ದಾರೆ. ಹಾಗೆಯೇ ಮರೆಯಲ್ಲಿದ್ದು ಮರೆತುಹೋಗುವ ಮನುಷ್ಯರ ಸಾಲಿಗೂ ಸೇರಿಹೋಗಿದ್ದಾರೆ.

ಮೆಹಬೂಬ್‌ ಪಾಷ


Thursday, August 14, 2014

ಜನಪದ ಕೋಗಿಲೆ ದರೋಜಿ ಈರಮ್ಮ


ಎಲೆ ಅಡಿಕೆ ಜಿಗಿತದಿಂದ ಬಂದ ಗಂಟಲು ಬೇನೆಗೆ ತುತ್ತಾಗಿದ್ದ, ಕಳೆದ ಹತ್ತು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಜನಪದ ಕಥನ ಕಾವ್ಯಗಳ ಅಪ್ರತಿಮ ಗಾಯಕಿ ಬುರ್ರಕಥಾ ದರೋಜಿ ಈರಮ್ಮ (83), ಮಂಗಳವಾರ (12.8.14) ಮಧ್ಯಾಹ್ನ12.30 ರ ಸುಮಾರಿನಲ್ಲಿ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ದರೋಜಿ ಎಂಬ ಪುಟ್ಟ ಗ್ರಾಮದ ಈರಮ್ಮ, ಅಲೆಮಾರಿ ಸಮುದಾಯದಲ್ಲಿ ಹುಟ್ಟಿದ ಅಪರೂಪದ ಅಪ್ರತಿಮ ಕಲಾವಿದೆ. ತಳ ಸಮುದಾಯದಲ್ಲಿ ಹುಟ್ಟಿದ, ಕಡು ಕಷ್ಟದಲ್ಲಿ ಬೆಳೆದ, ಅಕ್ಷರಲೋಕವನ್ನೇ ಪ್ರವೇಶಿಸದ ಈರಮ್ಮ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಳಿಲ್ಲದೆ ಜಾನಪದ ಕಾವ್ಯ ಸಂಪತ್ತನ್ನು ಕರುಳಿಗಿಳಿಸಿಕೊಂಡು ಉಳಿಸಿ ಬೆಳಸಿದ ಮಹಾನ್‌ ಪ್ರತಿಭಾವಂತೆ.
ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ ಬಹಳ ಜನಪ್ರಿಯವಾಗಿದ್ದ ತೆಲುಗು-ಕನ್ನಡ ಕಥನ ಕಾವ್ಯಗಳನ್ನು ಹಾಡುಗಾರಿಕೆಯ ಮೂಲಕ ಜನರ ಎದೆಗೆ ದಾಟಿಸುತ್ತಿದ್ದ, ಆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದ ಈರಮ್ಮ, ಜನಪದ ಕ್ಷೇತ್ರಕ್ಕೆ ಬುರ್ರಕಥಾ ಪ್ರಕಾರವನ್ನು ಕೊಡುಗೆಯಾಗಿ ಕೊಟ್ಟ ವಿಶಿಷ್ಟ ಕಥನಗಾರ್ತಿ.  
ಸಾಮಾನ್ಯವಾಗಿ ಹೈದರಾಬಾದ್‌-ಕರ್ನಾಟಕದ ಜನರಾಡುವ ಭಾಷೆ ಉರ್ದು, ಇಲ್ಲವೇ ಕನ್ನಡ. ಆದರೆ ದರೋಜಿ ಈರಮ್ಮ ತೆಲುಗು ಮತ್ತು ಕನ್ನಡದಲ್ಲಿ, ತೆಲುಗಿನ ಜನಪ್ರಿಯ ಕಥನ ಕಾವ್ಯಗಳಾದ ‘ಬಾಲ ನಾಗಮ್ಮ’, ‘ನ್ಯಾಸಿ ಚಿನ್ನಮ್ಮ’, ‘ಎಲ್ಲಮ್ಮನ ಕತೆ’, ‘ಗಂಗಿ ಗೌರಿ’, ‘ಕುಮಾರ ರಾಮ’, ‘ಕೃಷ್ಣಗೊಲ್ಲ’, ‘ಬಬ್ಬುಲಿ ನಾಗಿರೆಡ್ಡಿ’, ‘ಆದೋನಿ ಲಕ್ಷ್ಮಮ್ಮ', ‘ಬಲಿ ಚಕ್ರವರ್ತಿ’, ‘ಮಾರವಾಡಿ ಸೇಠಿ’, ‘ಜೈಸಿಂಗ್‌ ರಾಜ’ ಮತ್ತು ‘ಮಹಮ್ಮದ್‌ ಖಾನ್‌ ಕಾವ್ಯ’ ... ಹೀಗೆ ಸುಮಾರು ಹನ್ನೊಂದು ಮಹಾಕಾವ್ಯಗಳನ್ನು ಹಾಡುತ್ತಿದ್ದರು. ಪ್ರತಿ ಸಾಲೂ ಈಕೆಗೆ ಬಾಯಿಪಾಠವಾಗಿತ್ತು. ಜನಪದ ಸಂಸ್ಕೃತಿ ಸಾರುವ ಸುಮಾರು ಏಳು ಸಾವಿರ ಪುಟಗಳು, ಎರಡು ಲಕ್ಷ ಸಾಲುಗಳು ದರೋಜಿ ಈರಮ್ಮ ಅವರ ನಾಲಗೆಯ ತುದಿಯಲ್ಲಿ ನಲಿದಾಡುತ್ತಿದ್ದವು.
ಜನಪದ ಕಲೆ, ಸಾಹಿತ್ಯ ಬೆಳವಣಿಗೆಗೆ ಅಕ್ಷರ ಜ್ಞಾನಕಿಂತ ಮೌಖಿಕ ಪರಂಪರೆಯ ಜ್ಞಾನಶಕ್ತಿಯೇ ಮುಖ್ಯ ಎನ್ನುವುದನ್ನು ದರೋಜಿ ಈರಮ್ಮ ಸಾರಿದ್ದರು, ಸಾಬೀತುಪಡಿಸಿದ್ದರು. ನಡೆದಾಡುವ ಜನಪದ ಜಗತ್ತೇ ಅವರಾಗಿದ್ದರು.
ಈರಮ್ಮನವರಿಗೆ ವಯಸ್ಸಾಗಿತ್ತು, ದೇಹ ದಣಿದಿತ್ತು. ಆದರೆ ಹಾಡುವ ಕೋಗಿಲೆಯ ಮನಸ್ಸು ಮಾತ್ರ ಚಿರಯೌವನದಿಂದ ಪುಟಿದೇಳುತ್ತಿತ್ತು. ಸುಮ್ಮನೆ ಕೂರುವ ಜಾಯಮಾನ ಅವರದಲ್ಲವಾಗಿತ್ತು. ತಮ್ಮ ಒಡಲಲ್ಲಿ ಅಡಗಿರುವ ಅಗಾಧ ಜನಪದ ಸಂಪತ್ತನ್ನು ಮುಂದಿನ ಪೀಳಿಗೆಗೂ ಹಂಚುವ ಅವಸರ ಅವರಲ್ಲಿತ್ತು. ಆ ಕಾರಣದಿಂದಾಗಿಯೇ ತಮ್ಮ ಹಳ್ಳಿಯ ಮನೆಯಲ್ಲಿ ಹಳ್ಳಿಯ ಮಕ್ಕಳಿಗಾಗಿಯೇ ಜನಪದ ಹಾಡು, ಕಲೆಯ ಕುರಿತು ಪ್ರಾಯೋಗಿಕ ಪಾಠಶಾಲೆ ಆರಂಭಿಸಿದ್ದರು. ತಮಗೆ ಒಲಿದಿದ್ದ ಹಾಡುಗಾರಿಕೆಯನ್ನು ಹಂಚುತ್ತಿದ್ದರು. ಅದನ್ನು ಮುಗ್ಧ ಮಕ್ಕಳಲ್ಲಿ ಕಾಣುವ ಮೂಲಕ ಆನಂದ ಅನುಭವಿಸುತ್ತಿದ್ದರು.
ಯಾರಾದರೂ, ಈ ವಯಸ್ಸಿನಲ್ಲಿ ಇದೆಲ್ಲ ಯಾಕಜ್ಜಿ ಎಂದು ಪ್ರಶ್ನಿಸಿದರೆ, ‘‘ಅಜ್ಜಿ ನೀ ಹಾಡೋದನ್ನ ಇಂದಿನ ಪೀಳಿಗೆಗೆ ಕಲಿಸಬೇಕು ಅಂತ ದೊಡ್ಡ ದೊಡ್ಡ ಸಭೆ, ಸಮಾರಂಭದಲ್ಲಿ ಎಲ್ಲರೂ ಹೇಳ್ತಾರಪ್ಪ. ಅದಕ್ಕ ನಾ ದಿನಾ ಸಂಜಿ ಮುಂದ ಬುರ್ರಕಥಾ ಹಾಡಿ ತೋರ್ಸಿತೀನಿ. ತಂಬೂರಿ, ಡಿಮ್ಕಿ, ಗಗ್ಗರಿ ಬಾರಿಸುವುದನ್ನು ಹಳ್ಳಿ ಮಕಕ್ಳಿಗೆ ಕಲಿಸಿಕೊಡ್ತೀನಿ. ಎಂಟು ವರ್ಷಗಳಿಂದ ಪುಕ್ಕಟೆಯಾಗಿ ಪಾಠ ಹೇಳುತ್ತ, ಅದರಲ್ಲೇ ಖುಷಿ ಕಾಣಾಕ ಹತ್ತೀನಿ. ನನ್ನಂಗ ಚಲೋ ಹಾಡೋರನ್ನ ಕಣ್ಣಾರೆ ನೋಡಬೇಕು ಅಂಬ ಆಸೆ ನಂದು. ಇಳಿ ವಯಸ್ಸಿನಾಗೂ ಹಾಡಾಕ ನನಗ ಯಾವ ತೊಂದ್ರಿ ಇಲ್ಲ’’ ಎಂದು ಬೊಚ್ಚು ಬಾಯಿ ತುಂಬ ನಗುತ್ತಿದ್ದರು.
ಇಂತಹ ದರೋಜಿ ಈರಮ್ಮನವರ ಹಳ್ಳಿಯ ಸಂಗೀತ ಪಾಠಶಾಲೆಯಲ್ಲಿ ಸದ್ಯ ಹದಿನೈದು ಮಕ್ಕಳು ಈರಮ್ಮನವರ ಜನಪದ ಹಾಡಿನ ಮೋಡಿಗೆ ಒಳಗಾಗಿ, ಜನಪದ ಜಗತ್ತನ್ನು ತಮ್ಮ ಅಂತರಂಗಕ್ಕೆ ಇಳಿಸಿಕೊಳ್ಳುತ್ತಿದ್ದಾರೆ.
ಜನಪದ ಕಲಾವಿದೆ ದರೋಜಿ ಈರಮ್ಮ ಹಾಡಿದ ಕಾವ್ಯಗಳಲ್ಲಿ ಅರ್ಧದಷ್ಟು ಭಾಗವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಸಂಗ್ರಹಿಸಿ, ಪುಸ್ತಕರೂಪದಲ್ಲಿ ಪ್ರಕಟಿಸಿದೆ. ಉಳಿದ ಅರ್ಧಭಾಗವನ್ನು ಸಂಗ್ರಹಿಸಲಾಗುತ್ತಿದೆ.
ಅಜ್ಜಿಯ ಅರವತ್ತು ವರ್ಷಗಳ ಅವಿಶ್ರಾಂತ ಹಾಡುಗಾರಿಕೆಗೆ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ದಕ್ಕಿವೆ. ಅಜ್ಜಿಯ ಅಗಾಧ ಪ್ರೌಢಿಮೆ ಕಂಡು 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, 2003ರಲ್ಲಿ ಅಂಬೇಡ್ಕರ್ ಪ್ರಶಸ್ತಿ ಹಾಗೂ ಜನಪದಶ್ರೀ ಪ್ರಶಸ್ತಿ ಲಭಿಸಿವೆ. ಹಂಪಿ ಕನ್ನಡ ವಿವಿ ದರೋಜಿ ಈರಮ್ಮ ಅವರ ಜನಪದ ಕಲೆಗೆ 1999ರಲ್ಲಿ ‘ನಾಡೋಜ’ ಕಿರೀಟ ತೊಡಿಸಿದೆ. ರಾಜ್ಯ ಸೇರಿ ನೆರೆಯ ಆಂಧ್ರಪ್ರದೇಶದ ನಾನಾ ಸಂಘ ಸಂಸ್ಥೆಗಳು ಅವರನ್ನು ಹುಡುಕಿಕೊಂಡು ಬಂದು ಗೌರವಿಸಿವೆ.
ಆದರೆ ಅಜ್ಜಿಗೆ ಮುಂದಿನ ಪೀಳಿಗೆಗೂ ಜನಪದ ಕಲೆ ಜೀವಂತವಾಗಿರಬೇಕು ಎಂಬ ಉತ್ಕಟ ಇಚ್ಛೆಯೇ ಹೊರತು, ಆ ಯಾವ ಪ್ರಶಸ್ತಿ, ಪುರಸ್ಕಾರಗಳ ಹಂಗಿಲ್ಲ. ಹಳ್ಳಿಯ ಮಕ್ಕಳಿಗಾಗಿ ಸಂಗೀತ ಪಾಠಶಾಲೆ ಆರಂಭಿಸಿರುವ ಈರಮ್ಮ, ಕೇಂದ್ರ ಸರಕಾರ ಕೊಡುವ ಕಲಾವಿದರ ಮಾಸಾಶನವನ್ನೆಲ್ಲ ಅದಕ್ಕೇ ವಿನಿಯೋಗಿಸುವ ಉದಾರಿ. ಇಂತಹ ಮಹಾನ್‌ ಕಲಾವಿದೆಯನ್ನು ಕಳೆದುಕೊಂಡು ಜನಪದ ಜಗತ್ತು, ನಾಡು ನಿಜಕ್ಕೂ ಬಡಪಾಯಿ.